೩೦-೧೨-೧೯೩೩ ರಂದು ಬಳ್ಳಾರಿಯಲ್ಲಿ ಜನಿಸಿದ ವೆಂಕಟೇಶಾಚಾರ್ ಅವರ ಸಂಗೀತ ಗುರುಗಳು ಚೆನ್ನೈನ ಸೇಂಟ್‌ ಮೇರಿ ಸಂಗೀತ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ತಂದೆ ಮುಂಡರಗಿ ರಾಘವೇಂದ್ರಾಚಾರ್ ಮತ್ತು ಅಣ್ಣ ಎಂ. ನರಸಿಂಹಮೂರ್ತಿ. ಹಾರ್ಮೋನಿಯಂ, ಖಂಜರಿ, ಮೃದಂಗ ವಾದನಗಳಲ್ಲೂ ಪರಿಶ್ರಮ ಹೊಂದಿರುವ ಇವರು ಮೊದಲಿಗೆ ತಮ್ಮ ಸಹೋದರ ಎಂ. ಶೇಷಗಿರಿ ಆಚಾರ್ ರೊಂದಿಗೆ ಯುಗಳ ಗಾಯನ ನೀಡುತ್ತಿದ್ದರು. ಶ್ರೀ ಶೇಷಗಿರಿಯವರ ನಿಧನಾನಂತರ ತನಿಯಾಗಿ ಕಛೇರಿಗಳನ್ನು ನೀಡುತ್ತಿದ್ದಾರೆ. ಮೈಸೂರು ಆಕಾಶವಾಣಿಯ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ದಕ್ಷಿಣ ಭಾರತದ ಹಲವಾರು ಸಂಸ್ಥೆ-ಸಂಘಗಳ ಆಶ್ರಯದಲ್ಲೂ, ಮುಂಬಯಿ ಕರ್ನಾಟಕ ಸಂಘದ ಆಶ್ರಯದಲ್ಲೂ ನಾನಾ ಕಛೇರಿಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ಉತ್ತಮ ಗುರುವಾಗಿ ಹಲವಾರು ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ಇವರ ಕಾರ್ಯಕ್ರಮಗಳು ಆಕಾಶವಾಣಿ ದೂರದರ್ಶನಗಳಿಂದಲೂ ಶ್ರೋತೃಗಳನ್ನು ರಂಜಿಸುತ್ತಿರುತ್ತವೆ.

ಅಪರೂಪದ ರಾಗಗಳಲ್ಲಿ ಕ್ಲಿಷ್ಟ ತಾಳಗಳಲ್ಲಿ ಪ್ರದರ್ಶನಾತ್ಮಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಮೈಸೂರಿನ ಜೆ.ಎ.ಸ್‌.ಎಸ್‌. ಸಭಾ ‘ಸಂಗೀತ ವಿದ್ಯಾನಿಧಿ’. ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ದತ್ತಪೀಠ ‘ಆಸ್ಥಾನ ವಿದ್ವಾನ್‌’, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಎಂದು ಗೌರವಿಸಿರುವ ಶ್ರೀಯುತರು ಇತರ ಸಂಸ್ಥೆಗಳಿಂದಲೂ ಸನ್ಮಾನಿತರಾಗಿದ್ದು ಪ್ರಸ್ತುತ ತಮ್ಮ ಸಮಯವನ್ನೆಲ್ಲಾ ಶಿಷ್ಯರಿಗಾಗಿ ವಿನಿಯೋಗಿಸುತ್ತ ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ.