ಸಂಡೂರು ನಗರವು ಬಳ್ಳಾರಿಯಿಂದ ನೈರುತ್ಯದಲ್ಲಿ ೪೮ ಕಿ.ಮೀ. ಹಾಗೂ ಬೆಂಗಳೂರಿನಿಂದ ವಾಯುವ್ಯ ದಿಕ್ಕಿನಲ್ಲಿ ೩೫೪ ಕಿ.ಮೀ. ದೂರದಲ್ಲಿದೆ. ಇದು ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕ್ರಿ.ಶ. ೧೭೨೮ ರಿಂದ ೧೯೫೬ರ ವರೆಗೆ ಘೋರ್ಪಡೆ ವಂಶದವರು ಸಂಡೂರು ರಾಜ್ಯವನ್ನು ಆಳಿದರು.[1] ಘೋರ್ಪಡೆ ವಂಶದವರ ಆಳ್ವಿಕೆ ಅವಧಿಯಲ್ಲಿ ಸಂಡೂರು ೨೦ ಹಳ್ಳಿಗಳ ೧೧,೦೦೦ ಜನಸಂಖ್ಯೆಯ ೧೬೦ ಚದುರ ಕಿ.ಮೀ. ಭೂವಿಸ್ತಾರದ ಒಂದು ಸ್ವತಂತ್ರ ಪುಟ್ಟ ರಾಜ್ಯವಾಗಿತ್ತು ಕರ್ನಾಟಕ ಏಕೀಕರಣದ ಕಾಲಕ್ಕೆ ೧೯೫೬ರಲ್ಲಿ ಈ ರಾಜ್ಯ ಮೈಸೂರು ರಾಜ್ಯಕ್ಕೆ ಸೇರಿ, ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕು ರೂಪುಗೊಂಡಿತು. ಇತಿಹಾಸ ಪೂರ್ವ ಕಾಲ ಹಾಗೂ ಪುರಾಣಗಳ ಕಾಲದಿಂದ ಸಂಡೂರು ತನ್ನದೇ ಆದ ಸಾಂಸ್ಕೃತಿಕ ಇತಿಹಾಸ ಪರಂಪರೆಯನ್ನು ಹೊಂದಿದೆಯಲ್ಲದೆ ವಿಶೇಷ ಭೌಗೋಳಿಕ ಖನಿಜ ಸಂಪತ್ತು ಪ್ರಾಕೃತಿಕ ಸೌಂದರ್ಯ ಇತಕರ ಹವಾಗುಣವನ್ನು ಹೊಂದಿ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಅಳವಡಿಸಿಕೊಂಡಿದೆ.

ಪುರಾಣಗಳ ಕಾಲದಲ್ಲಿ ಈ ಪಟ್ಟಣವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿದೆ. ಸ್ಕಂದಪುರಾಣದಲ್ಲಿ ಈ ಪಟ್ಟಣವನ್ನು ಸ್ಕಂತಪುರವೆಂದು ವರ್ಣಿಸಲಾಗಿದೆ. ಇಲ್ಲಿ ಸ್ಕಂದ ಅಥವಾ ಕುಮಾರಸ್ವಾಮಿ ವಾಸವಾಗಿದ್ದರಿಂದ ಸ್ಕಂದಪುರವೆಂದು ಕರೆಯಲಾಗಿದೆ. ಕೃತ ಯುಗದಲ್ಲಿ ದೇವಗಿರಿ ಎಂದೂ, ತ್ರೇತಾಯುಗದಲ್ಲಿ ಸುವರ್ಣಗಿರಿ ಎಂದೂ, ದ್ವಾಪರಯುಗದಲ್ಲಿ ದಿವ್ಯಾಚಲ ಎಂದೂ, ಕಲಿಯುಗದಲ್ಲಿ ಲೋಹಗಿರಿ ಎಂದೂ ಪೌರಾಣಿಕ ಪುರಾವೆಗಳಿವೆ. ಸಂಡೂರು ಪ್ರದೇಶದ ಕ್ಷೇತ್ರಗಳಿಗೆ ತನ್ನದೇ ಆದ ಪೌರಾಣಿಕ ಹಿನ್ನೆಲೆಗಳಿವೆ. ಇಲ್ಲಿನ ಕುಮಾರಸ್ವಾಮಿ ಬೆಟ್ಟದಲ್ಲಿನ ಕ್ರಿ.ಶ. ೧೨೦೬ರ ಹೊಯ್ಸಳ ಎರಡನೆಯ ವೀರಬಲ್ಲಾಳನ ಶಿಲಾಶಾಸನದಲ್ಲಿ ಮೊಟ್ಟಮೊದಲು ಸಂಡೂರು ಎಂಬ ಉಲ್ಲೇಖವಿರುವುದು ಕಂಡುಬರುತ್ತದೆ.[2] ನಂತರದ ವಿಜಯನಗರದ ಅನೇಕ ಶಾಸನಗಳಲ್ಲಿ ಸಂಡೂರು ಸ್ಥಳನಾಮದ ಉಲ್ಲೇಖಗಳು ಕಾಣಬರುತ್ತವೆ. ಇದರಿಂದ ಕ್ರಿ.ಶ. ೧೨೦೬ ಕ್ಕಿಂತ ಹಿಂದಿನಿಂದಲೇ ಸಂಡೂರು ಹೆಸರಿನ ಪಟ್ಟಣ ಇತ್ತೆಂದು ತಿಳಿದುಬರುತ್ತದೆ.

ಸಂಡೂರು ಅಥವಾ ಸಂಡೂರು ಸ್ಥಳನಾಮ ಶಬ್ದದ ಮೂಲರೂಪ ಭೂಗೋಳ ಶಾಸ್ತ್ರಜ್ಞ ಮೆಕಾಲೆ ಹೇಳುವಂತೆ ಈ ಪಟ್ಟಣ ಪರ್ವತಗಳ ಸಂದಿಯಲ್ಲಿ ಇರುವುದರಿಂದ ಸಂದಿಯಲ್ಲಿ ಇರುವ ಊರು ಸಂದು ಊರು ಸಂದೂರು. ಸಂಡೂರು, ಸ್ವಂಡೂರು, ಸೊಂಡೂರು ಎಂದು ತಲತಲಾಂತರಗಳ ಜನಾಂಗಗಳ ಬಾಯಲ್ಲಿ ಶಬ್ದ ಸವೆದು ಈಗ ಸಂಡೂರು ಎಂದು ಪ್ರಚಲಿತದಲ್ಲಿದೆ. ಇತಿಹಾಸ ಪೂರ್ವಕಾಲದಲ್ಲಿ ಸಂಡೂರು ಸುತ್ತಮುತ್ತ ಆದಿಮಾನವನ ನಿವಾಸ ಇದ್ದಿರಬಹುದೆಂದು ಊಹಿಸಲಾಗಿದೆ. ಇಲ್ಲಿಯ ಸಿಡೇಗಲ್ಲು, ವಿಭತಿಗುಡ್ಡ, ತೋರಣಗಲ್ಲುಗಳು ಕಬ್ಬಿಣಯುಗದ ತಾಣಗಳಾಗಿವೆ. ಮೌರ್ಯ ಮತ್ತು ಶಾತವಾಹನರ ಆಡಳಿತಕ್ಕೆ ಸಂಡೂರು ಒಳಪಟ್ಟಿತ್ತು. ದೇವಗಿರಿ, ಚೋರನೂರು, ಅಗ್ರಹಾರ, ಕೂಡ್ಲಿಗಿ, ಹಾಳು ದೇವಲಾಪುರ, ಕೊಟ್ಟೂರು, ಹೆಗ್ಗಡಾಳು, ಶಿವಪುರ, ಹಂಪಿ, ಕುರುಗೋಡು, ಎಮ್ಮಿಗನೂರು, ಕಂಪ್ಲಿ, ಕುಡಿತಿನಿ, ಬಳ್ಳಾರಿ, ಅಶೋಕ ಸಿದ್ಧಾಪುರ, ಮೊಳಕಾಲ್ಮೂರು, ಹಿರೇಹಡಗಲಿ ಮುಂತಾದ ಗ್ರಾಮಗಳಲ್ಲಿ ಶಾತವಾಹನರ ಕಾಲದ ಅವಶೇಷಗಳು ದೊರೆಯುತ್ತವೆ. ಸಂಡೂರು ಸಹ ಶಾತವಾಹನರ ಕಾಲದಲ್ಲಿ ಒಳನಾಡಿನ ಮುಖ್ಯ ಕೇಂದ್ರವಾಗಿತ್ತು. ಬನವಾಸಿ ಕದಂಬರ ಕಾಲದಲ್ಲಿ ಕುಮಾರಸ್ವಾಮಿ ಬೆಟ್ಟದಲ್ಲಿ ಕೆಲ ದೇವಾಲಯಗಳನ್ನು ನಿರ್ಮಿಸಲಾಗಿದೆ. ಮತ್ತು ಕೆಲವು ಮೂರ್ತಿ ಶಿಲ್ಪಾವಶೇಷಗಳು ಇಲ್ಲಿ ಕಂಡುಬರುವುದರಿಂದ ಬನವಾಸಿ ಕದಂಬರ ಸಾಮಂತರಾದ ಉಚ್ಚಂಗಿ ನೊಳಂಬರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿರಬಹುದಾಗಿದೆ.

ಕುಮಾರಸ್ವಾಮಿ ಬೆಟ್ಟದಲ್ಲಿರುವ ಪಾರ್ವತಿ ದೇವಾಲಯವು ಬಾದಾಮಿ ಚಾಲುಕ್ಯರ ಶೈಲಿಯ ವಾಸ್ತುಶಿಲ್ಪ ವಿಮಾನ ಶೈಲಿಯಲ್ಲಿದೆ. ಇದನ್ನು ಬಾದಾಮಿ ಚಾಲುಕ್ಯರ ಕೊನೆಯ ಕಾಲದಲ್ಲಿ ಕಟ್ಟಿರಬಹುದಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿಯೇ ಪ್ರಾಚೀನವಾದ ಸುಂದರ ವಾಸ್ತು ಶಿಲ್ಪವುಳ್ಳ ದೇವಾಲಯ ಇದಾಗಿದೆ.

ರಾಷ್ಟ್ರಕೂಟರು ಈ ಪ್ರದೇಶದ ಮೇಲೆ ವಿಶೇಷ ಗಮನಹರಿಸಿ ಇಲ್ಲಿನ ಪಾರ್ವತಿ ದೇವಸ್ಥಾನಕ್ಕೆ ಹಾಗೂ ಪಕ್ಕದ ಕುಮಾರಸ್ವಾಮಿ ದೇವಾಲಯಗಳಿಗೆ ಹಳ್ಳಿಯೊಂದನ್ನು ದತ್ತಿ ಬಿಟ್ಟು ಹಾಗೂ ದೇವ ಕಾರ್ಯಗಳಿಗೆ ದತ್ತಿ ದಾನಗಳನ್ನು ನೀಡಿದರೆಂದು ಶಾಸನಗಳಿಂದ ತಿಳಿದುಬರುತ್ತದೆ.[3] ಇದರಿಂದ ರಾಷ್ಟ್ರಕೂಟರು ಈ ಪ್ರದೇಶವನ್ನು ಆಳಿದುದಲ್ಲದೆ ಧರ್ಮಕಾರ್ಯಗಳಿಗೆ ಸಾಹಿತ್ಯ ಕಲೆಗೆ ವಿಶೇಷ ಗಮನ ಕೊಟ್ಟಿದ್ದಾರೆ.

ಕಲ್ಯಾಣ ಚಾಳುಕ್ಯರ ಸಾಮಂತರಾದ ಪಾಂಡ್ಯರು ಮಹಾಮಂಡಳೇಶ್ವರರಾಗಿ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಿಂದ ಆಳುತ್ತಿದ್ದರು. ಈ ರಾಜ್ಯ ನೊಳಂಬವಾಡಿ ೩೨೦೦೦ ದಲ್ಲಿ ಸೇರಿಸಲಾಗಿತ್ತು. ತುಂಗಭದ್ರ ನದಿಯ ಉತ್ತರಕ್ಕೆ ಕುರುಗೋಡು ಸಿಂಧರು ಆಡಳಿತ ಮಾಡುತ್ತಿದರು. ಇವರ ಕಾಲದಲ್ಲಿ ಕುಮಾರಸ್ವಾಮಿ ದೇವಾಲಯವನ್ನು ವೇಸರ ಶೈಲಿಯಲ್ಲಿ ಕಟ್ಟಲಾಗಿದೆ. ಕ್ರಿ.ಶ. ೧೦೪೭ರ ಕಲ್ಯಾಣ ಚಾಳುಕ್ಯರ ನಾರಿಹಳ್ಳ ತಾರಾನಗರ ಶಾಸನದಲ್ಲಿ ಚಾಲುಕ್ಯರ ವಂಶಾವಳಿ ಇರುವುದೂ ಕಂಡುಬರುತ್ತದೆ.

ರಾಷ್ಟ್ರಕೂಟರ ಕೃಷ್ಣನ ಕಾಲದಲ್ಲಿ ಹಾಗೂ ಪಾರ್ವತಿ ದೇವಸ್ಥಾನಗಳಿಗೆ ದಾನದತ್ತಿಗಳು ಕಾಲಾಂತರದಲ್ಲಿ ನಿಂತುಹೋಗಿದ್ದ ವಿಷಯವನ್ನು ಹೊಯ್ಸಳರ ೧೨೦೬ರ ಶಾಸನವೊಂದು ಸೂಚಿಸುತ್ತದೆ. ಸಂಡೂರು ಸಮೀಪದ ತಾಳೂರಿನಲ್ಲಿ ಎರಡನೇ ಬೀರಬಲ್ಲಾಳನ ಇನ್ನೊಂದು ಕ್ರಿ.ಶ. ೧೨೧೮ರ ಶಾಸನವು ಇವನ ಆಡಳಿತಾಧಿಕಾರಿ ಬೊಮ್ಮಗಾವುಂಡನು ಈಶ್ವರ ದೇವಾಲಯವನ್ನು ಕಟ್ಟಿಸಿ ದಾನದತ್ತಿಗಳನ್ನು ಬಿಟ್ಟಂತೆ ಉಲ್ಲೇಖಿಸುತ್ತದೆ.[4] ರಾಮಘಡದಲ್ಲಿಯೂ ಕ್ರಿ.ಶ. ೧೩೨೩ರ ಶಾಸನವೊಂದು ಬಲ್ಲಾಳರಾಯನು ವೀರಕಂಪಿಲರಾಯನ ಮೇಲೆ ದಂಡೆತ್ತಿ ಬಂದಾಗ ಯುದ್ಧರಂಗದಲ್ಲಿ ಬಲಿಚಬೋವನು ಹೋರಾಡಿ ಸತ್ತ ವಿಷಯವಿದೆ. ಪ್ರಾಯಶಃ ಹೊಸಮಲೈಯಲ್ಲಿ ಇಷ್ಟೋತ್ತಿಗಾಗಲೇ ಕೋಟೆ ನಿರ್ಮಾಣವಾಗಿದ್ದಿರಬೇಕು.

ವಿಜಯನಗರ ಕಾಲದಲ್ಲಿ ಸಂಡೂರು ಪ್ರಮುಖ ಪಾತ್ರವಹಿಸಿತ್ತು. ಸಂಡೂರು ತಾಲ್ಲೂಕಿನ ಸುಬ್ಬರಾಯನ ಹಳ್ಳಿ ಬಳಿಯ ನವಿಲು ತೀರ್ಥದಲ್ಲಿ ವಿಜಯನಗರದ ಬುಕ್ಕರಾಯನಿಗೆ ಸಂಬಂಧಿಸಿದ ೨ ಶಾಸನಗಳು ಕಂಡುಬರುತ್ತವೆ. ಸಂಡೂರು ಪಟ್ಟಣದ ಮಧ್ಯದಲ್ಲಿ ತಾರಕೇಶ್ವರ ದೇವಸ್ಥಾನದ ಸಮೀಪದಲ್ಲಿ ಹೊಸಮಲೈದುರ್ಗದ ರಾಮನ ಗುಡಿಯ ಮುಂದೆ ಮತ್ತು ಕುರೆಕುಪ್ಪೆಯ ಈಶ್ವರ ದೇವಾಲಯದಲ್ಲಿ ಕೃಷ್ಣದೇವರಾಯನ ಕಾಲದ ಶಾಸನಗಳು ಕಂಡುಬಂದಿವೆ.[5] ಚಿಕ್ಕಕೆರೆಯಾಗಿನ ಹಳ್ಳಿಯ ಕೆರೆಕಟ್ಟೆಯ ಬಳಿಯಲ್ಲಿ ವಿಜಯನಗರದ ಅಚ್ಯುತದೇವರಾಯನ ಶಾಸನವೊಂದು ೧೬ ಕೆರೆಗಳನ್ನು ಬಯಕಾರ ರಾಮಪ್ಪ ನಿರ್ಮಿಸಿದಂತೆ ತಿಳಿಸುತ್ತದೆ.[6] ಹೀಗೆ ಈ ಸಂಡೂರು ಪ್ರದೇಶವೂ ಶಾತವಾಹನರಿಂದ ವಿಜಯನಗರದ ಅರಸರವರೆಗಿನ ಆಡಳಿತಾವಧಿಯಲ್ಲಿ ಪ್ರಮುಖ ಪಾತ್ರವಹಿಸಿರುವುದು ಸ್ಪಷ್ಟವಾಗುತ್ತದೆ.

ಕ್ರಿ.ಶ. ೧೫೬೫ ತಾಳೀಕೋಟೆ ಯುದ್ಧದ ನಂತರ ವಿಜಯನಗರ ಪತನವಾಯಿತು. ಆಗ ಸೇನಾನಿಗಳ ಸಾಮಂತರು ಬೇರೆ ಬೇರೆ ಭಾಗಗಳನ್ನು ಸ್ವತಂತ್ರವಾಗಿ ಆಳಲು ಪ್ರಾರಂಭಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಪ್ರದೇಶದಲ್ಲಿ ಹಂಡೆ ಪಾಳೆಯಗಾರರು, ಹರಪನಹಳ್ಳಿ ಹಡಗಲಿ ಭಾಗದಲ್ಲಿ ಹರಪನಹಳ್ಳಿ ಪಾಳೇಗಾರರು, ಗುಡೆಕೋಟೆ ಚೋರನೂರು ಭಾಗವನ್ನು, ಗುಡೇಕೋಟೆ ಪಾಳೆಯಗಾರರು, ಕೂಡ್ಲಿಗಿ, ಉಜ್ಜನಿ, ಸಂಡೂರುಗಳನ್ನು ಜರಿಮಲೆ ಪಾಳೆಯಗಾರರು ಆಳುತ್ತಿದ್ದರು. ಸಂಡೂರು ಜರಿಮಲೆ ಪಾಳೆಯಗಾರರ ಆಡಳಿತಕ್ಕೆ ಸೇರಿತ್ತು. ಜರಿಮಲೆ ಪಾಳೆಯಗಾರರು ಕೂಡ್ಲಿಗಿ ತಾಲ್ಲೂಕು ಜರಿಮಲೆಯಿಂದ ಆಡಳಿತ ಮಾಡುತ್ತಿದ್ದರು. ಕ್ರಿ.ಶ. ೧೬೫೬ ರಿಂದ ವಿಜಾಪುರ ಸುಲ್ತಾನರೊಡನೆ ಮತ್ತು ಮರಾಠರೊಡನೆ ಹೋರಾಡುತ್ತಾ ಆಡಳಿತ ಮಾಡಿದರು. ಕ್ರಿ.ಶ. ೧೬೭೮ರಲ್ಲಿ ಬಳ್ಳಾರಿ ಸುತ್ತಮುತ್ತ ಪ್ರದೇಶ ವಿಜಾಪುರ ಸುಲ್ತಾನನಿಂದ ಶಿವಾಜಿ ವಶಪಡಿಸಿಕೊಂಡ. ಮರಾಠ ಬೋಸ್ಲೆ ಮನೆತನದ ದಯಾದಿಗಳಾದ ಘೋರ್ಪಡೆಯವರು ಕ್ರಿ.ಶ. ೧೭೨೮ರಲ್ಲಿ ಜರಿಮಲೆ ಪಾಳೆಯಗಾರರಿಂದ ಸಂಡೂರನ್ನು ವಶಪಡಿಸಿಕೊಂಡು ಸಂಡೂರಿನಿಂದ ಆಡಳಿತ ಪ್ರಾರಂಭಿಸಿದರು. ಕ್ರಿ.ಶ. ೧೭೯೦ರಲ್ಲಿ ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು. ಕ್ರಿ.ಶ. ೧೭೨೮ರಲ್ಲಿ ಮುರಾರಿರಾವ್ ಘೋರ್ಪಡೆ ಅಧಿಕಾರಕ್ಕೆ ಬಂದನು. ಇವನ ಆಡಳಿತ ಕಾಲದಲ್ಲಿ ಕ್ರಿ.ಶ. ೧೭೭೬ರಲ್ಲಿ ಹೈದರನು ಸಂಡೂರನ್ನು ಮುತ್ತಿ ವಶಪಡಿಸಿಕೊಂಡು ಆಗ ಹೈದರನು ಕೃಷ್ಣಾನಗರದಲ್ಲಿ ಕೋಟೆಯೊಂದನ್ನು ಕಟ್ಟಿಸಲು ಪ್ರಾರಂಭಿಸಿದ. ಈ ಕೋಟೆಯನ್ನು ಟಿಪ್ಪು ಪೂರ್ಣಗೊಳಿಸಿದಂತೆ ಕಂಡುಬರುತ್ತದೆ.[7] ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ ಈ ಸಂಡೂರು ಪ್ರದೇಶದಲ್ಲಿ ಅನೇಕ ಕೋಟೆ ಕೊತ್ತಳಗಳು ನಿರ್ಮಾಣವಾದವು. ಅಂಥವುಗಳಲ್ಲಿ ದರೋಜಿ, ಹೊಸಮಲೆದುರ್ಗ ಮತ್ತು ಕೃಷ್ಣನಗರ ಮುಖ್ಯವಾಗಿವೆ. ಅವುಗಳ ವಿಸ್ತೃತ ರೂಪವನ್ನು ಮುಂದೆ ನೀಡಲಾಗಿದೆ.

ಕೃಷ್ಣಾನಗರ

ಕೃಷ್ಣಾನಗರ ಸಂಡೂರಿಗೆ ಹೊಂದಿಕೊಂಡಿದೆ. ಸಂಡೂರಿನಿಂದ ಬಳ್ಳಾರಿಗೆ ಹೋಗುವ ಮಾರ್ಗದಲ್ಲಿ ಈ ಗ್ರಾಮವಿದೆ. ಇದರ ಆಗ್ನೇಯಕ್ಕೆ ದೋಣಿಮಲೈ ಎನ್.ಎಂ.ಡಿಸಿ. ಇದೆ. ಇಲ್ಲಿ ಖನಿಜಸಂಪತ್ತು ಹೇರಳವಾಗಿ ದೊರೆಯುತ್ತಿದೆ. ಇಲ್ಲಿಂದ ಪ್ರತಿದಿನ ಸಾವಿರಾರು ಟನ್ನುಗಳಷ್ಟು ಕಬ್ಬಿಣದ ಅದಿರು ವಿದೇಶಗಳಿಗೆ ರಫ್ತಾಗುತ್ತದೆ. ಈ ಗ್ರಾಮದ ದಕ್ಷಿಣಕ್ಕೆ ಬರುವುದೇ ಕುಮಾರಸ್ವಾಮಿಯ ಬೆಟ್ಟ. ಇದು ಸಮುದ್ರ ಮಟ್ಟದಿಂದ ೨೪೦೦ ಅಡಿ ಎತ್ತರವಾಗಿದೆ. ಇಲ್ಲಿ ದಟ್ಟವಾದ ಕಾಡು ಆವರಿಸಿದೆ. ಕೃಷ್ಣಾನಗರದ ಪಶ್ಚಿಮಕ್ಕೆ ೧೮ನೇ ಶತಮಾನದಲ್ಲಿ ನಿರ್ಮಾಣವಾದ ದಟ್ಟವಾದ ಕಾಡಿನ ಮಧ್ಯ ದೌಲತ್ ಬಾದ್ ಇದೆ. ಇದರ ಪೂರ್ವಕ್ಕೆ ಇರುವುದೇ ಕೃಷ್ಣಾನಗರ.

ಹೈದರನು ಕ್ರಿ.ಶ. ೧೭೬೭-೬೯ರಲ್ಲಿ ನಡೆದ ಮೊದಲ ಆಂಗ್ಲೋ ಮೈಸೂರು ಯುದ್ಧ ನಂತರ ಕ್ರಿ.ಶ. ೧೭೬೯ ರಲ್ಲಿ ಹೈದರನು ಬ್ರಿಟಿಷರ ಪ್ರದೇಶಗಳನ್ನು ಗೆದ್ದುಕೊಳ್ಳುತ್ತಾ ಮದ್ರಾಸಿನವರೆಗೆ ರಾಜ್ಯವನ್ನು ವಿಸ್ತರಿಸಿದನು.[8] ಕ್ರಿ.ಶ. ೧೭೭೧ರಲ್ಲಿ ಮರಾಠರು ಹೈದರಾಲಿಯ ಮೇಲೆ ಯುದ್ಧ ಮಾಡಿದನು. ಆಗ ಹೈದರಾಲಿಯು ಕಪ್ಪಕಾಣಿಕೆ ಕೊಡುವ ಮೂಲಕ ರಾಜಿಮಾಡಿಕೊಂಡಿದ್ದನು. ಅದರಂತೆ ತುಂಗಭದ್ರೆಯ ಉತ್ತರಕ್ಕೆ ತಾನು ಗೆದ್ದಿದ್ದ ಪ್ರದೇಶಗಳನ್ನು ಬಿಟ್ಟುಕೊಡಲು ಒಪ್ಪಿದನು. ಆದರೆ ಮಾಧವರಾವ್ ಪೇಶ್ವೆ ಮರಣ ಹೊಂದಿದ ನಂತರ ಮರಾಠರಲ್ಲಿ ಅರಾಜಕತೆಯುಂಟಾಯಿತು. ಈ ಸಮಯವನ್ನು ಸಾಧಿಸಿ ಹೈದರನು ಸವಣೂರು, ಕಡಪ, ಕರ್ನೂಲ ಮತ್ತು ಸಂಡೂರನ್ನು ಗೆದ್ದುಕೊಂಡನು. ಮುಂದೆ ಕ್ರಿ.ಶ. ೧೭೮೦ರ ವರೆಗೆ ಇಂಗ್ಲೀಷರು ತಟಸ್ಥರಾಗಿದ್ದರು ರಾಜ್ಯದಲ್ಲಿ ಶಾಂತಿ ನೆಲೆಸಿತ್ತು ಈ ಸಮಯದಲ್ಲಿ ಅಂದರೆ ಕ್ರಿ.ಶ. ೧೭೭೬ರಲ್ಲಿ ಕೃಷ್ಣಾನಗರದ ಕೋಟೆ ನಿರ್ಮಾಣದ ಕಾರ್ಯವನ್ನು ಆರಂಭಿಸಿದ.[9] ಕ್ರಿ.ಶ. ೧೭೭೯ರಲ್ಲಿ ಚಿತ್ರದುರ್ಗದ ಮದಕರಿನಾಯಕನನ್ನು ಸೋಲಿಸಿ ಚಿತ್ರದುರ್ಗವನ್ನು ಮೈಸೂರಿಗೆ ಸೇರಿಸಿಕೊಂಡನು.[10] ಹೀಗೆ ಈ ದಂಡಯಾತ್ರೆಗಳಿಂದ ಉತ್ತರದಲ್ಲಿ ಧಾರವಾಡ ಮತ್ತು ಬಳ್ಳಾರಿಗಳವರೆಗೂ ಮೈಸೂರು ರಾಜ್ಯ ವಿಸ್ತರಿಸಲ್ಪಟ್ಟಿತ್ತು. ಗೆದ್ದ ರಾಜ್ಯಗಳ ಸಂರಕ್ಷಣೆಗಾಗಿ ಅಪಾರ ಮದ್ದುಗುಂಡುಗಳನ್ನು ಸಂಗ್ರಹಿಸಿದ. ಇವುಗಳನ್ನು ಇಡುವುದಕ್ಕಾಗಿಯೇ ಕೃಷ್ಣಾನಗರ ಕೋಟೆಯಲ್ಲಿ ಪ್ರತ್ಯೇಕವಾದ ಐದು ಮದ್ದುಗುಂಡಿನ ಉಗ್ರಾಣಗಳನ್ನು ನಿರ್ಮಿಸಿದ್ದಾನೆ. ಹೀಗೆ ಕ್ರಿ.ಶ. ೧೭೮೦ರಿಂದ ಎರಡನೇ ಆಂಗ್ಲೋ ಮೈಸೂರು ಯುದ್ಧ ಆರಂಭವಾದ್ದರಿಂದ ಈ ಕೋಟೆ ಕಟ್ಟಡದ ಕಾರ್ಯ ನಿಲ್ಲಿಸಿರಬೇಕು. ಎರಡನೇ ಆಂಗ್ಲೋ ಮೈಸೂರು ಯುದ್ಧದ ಮಧ್ಯದಲ್ಲಿಯೇ ಹೈದರನು ತೀರಿಹೋದನು.[11]

ಹೈದರನು ಕೃಷ್ಣಾನದಿ ದಕ್ಷಿಣಕ್ಕಿದ್ದ ಮರಾಠರ ಪ್ರದೇಶಗಳನ್ನು ಗೆದ್ದುಕೊಂಡಿದ್ದನು. ಷಾಲ್ ಬಾಯ್ ಒಪ್ಪಂದದ ಪ್ರಕಾರ ಹೈದರನು ಈ ಪ್ರದೇಶಗಳನ್ನು ಮರಾಠರಿಗೆ ವಾಪಸ್ ಕೊಡಲು ಒಪ್ಪಿದ್ದನು. ಈ ಮಧ್ಯ ಹೈದರನು ಮರಣ ಹೊಂದಿದನು. ಮರಾಠರಿಗೆ ಈ ಪ್ರದೇಶಗಳನ್ನು ಹಿಂದಿರುಗಿಸಬೇಕೆಂದು ಟಿಪ್ಪುವನ್ನು ಪೇಶ್ವೆಯು ಕೇಳಿಕೊಂಡನು. ಟಿಪ್ಪುವು ಇದಕ್ಕೆ ಒಪ್ಪಲಿಲ್ಲ ಆಗ ಟಿಪ್ಪುವಿಗೂ ಮರಾಠರಿಗೂ ಯುದ್ಧವಾಯಿತು. ಆಗ ಮರಾಠರು ಸೋಲಿನ ಅಂಚಿನಲ್ಲಿದ್ದರು. ಆಗ ಟಿಪ್ಪುವಿಗೂ ಮರಾಠರಿಗೂ ಒಪ್ಪಂದವಾಯಿತು. ಈ ಒಪ್ಪಂದದ ಪ್ರಕಾರ ಟಿಪ್ಪುವು ಮರಾಠರಿಗೆ ಕಪ್ಪವನ್ನು ಕೊಡಬೇಕೆಂದೂ ಅದಕ್ಕೆ ಬದಲಾಗಿ ಟಿಪ್ಪುವು ಮರಾಠರ ಕೆಲವು ಪ್ರದೇಶಗಳನ್ನು ಪಡೆಯಬೇಕೆಂದೂ ತೀರ್ಮಾನವಾಯಿತು. ಆ ಸಮಯದಲ್ಲಿಯೇ ಈ ಬಳ್ಳಾರಿ ಪ್ರದೇಶದ ಸ್ಥಳಗಳು ಟಿಪ್ಪುವಿನ ಕೈ ಸೇರಿದವು. ಕ್ರಿ.ಶ. ೧೭೮೬ರಲ್ಲಿ ಆನೆಗೊಂದಿಯನ್ನು ರೂ. ೧೨೦೦೦ ಗಳಿಗೆ ಕೊಂಡುಕೊಂಡನು.[12] ಈ ಸಮಯದಲ್ಲಿಯೇ ಅಂದರೆ ಕ್ರಿ.ಶ. ೧೭೯೦ಕ್ಕಿಂತ ಮುಂಚೆಯೇ ಕೃಷ್ಣಾನಗರ ಕೋಟೆಯನ್ನು ಪೂರ್ಣಗೊಳಿಸಿದ್ದ. ಏಕೆಂದರೆ ಕ್ರಿ.ಶ. ೧೭೯೦-೯೨ರವರೆಗೂ ಮೂರನೇ ಆಂಗ್ಲೋ ಮೈಸೂರು ಯುದ್ಧವಾಯಿತು.[13] ಈ ಯುದ್ಧದಲ್ಲಿ ಟಿಪ್ಪು ಅರ್ಧರಾಜ್ಯ ಧನ ಕನಕಾದಿಗಳನ್ನು ಕಳೆದುಕೊಂಡು ಆರ್ಥಿಕವಾಗಿ ಹೀನಾಯ ಸ್ಥಿತಿಯನ್ನು ತಲುಪಿದ. ಆದ್ದರಿಂದ ಕ್ರಿ.ಶ. ೧೭೭೨ರ ನಂತರ ೧೭೯೦ ಕ್ಕಿಂತ ಮೊದಲೇ ಈ ಕಾಲಘಟ್ಟದಲ್ಲಿ ಕೃಷ್ಣಾನಗರದ ಕೋಟೆ ನಿರ್ಮಾಣವಾಗಿದೆ.

ಸಂಡೂರುನಿಂದ ಬಳ್ಳಾರಿಗೆ ಹೋಗುವಾಗ ಎಡಭಾಗದಲ್ಲಿ ಕೃಷ್ಣಾನಗರದ ಕೋಟೆ ಇದೆ. ಪೂರ್ವ ದಿಕ್ಕಿನಲ್ಲಿ ಬಾಗಿಲಿನ ಹಿಂದೆ ಎರಡು ಆವರಣಗಳನ್ನು ರಚಿಸಿ ಈ ಆವರಣಗಳಿಗೆ ಒಂದೊಂದು ಬಾಗಿಲನ್ನು ಜೋಡಿಸಲಾಗಿದೆ. ಕೋಟೆಯೊಳಗೆ ಪ್ರವೇಶಿಸಲು ಒಟ್ಟು ಮೂರು ಪ್ರವೇಶ ದ್ವಾರಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ.

ಪೂರ್ವ ದಿಕ್ಕಿನಲ್ಲಿ ಮುಖ್ಯಬಾಗಿಲು ಕಮಾನಾಕೃತಿಯಲ್ಲಿದೆ. ಇದು ಸುಮಾರು ಹದಿನೈದು ಅಡಿ ಅಗಲ ಸುಮಾರು ಇಪ್ಪತ್ತು ಅಡಿ ಎತ್ತರವಾಗಿದೆ. ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿಸಿದ, ಇದರ ಕೈಪಿಡಿ ಗೋಡೆಯಲ್ಲಿ ಚಿಕ್ಕ ಕಮಾನುಗಳ ಮತ್ತು ಕೋಟೆ ತೆನೆಗಳಿವೆ. ಇವುಗಳ ಮಧ್ಯದಲ್ಲಿ ಅಂಬು ಗಂಡಿಗಳು ಕಂಡುಬರುತ್ತವೆ. ಮುಖ್ಯ ಬಾಗಿಲಿನ ಈಶಾನ್ಯ ಮತ್ತು ಆಗ್ನೇಯಕ್ಕೆ ಸುಮಾರು ನೂರು ಮೀಟರ್ ಮುಂಚಾಚಿದ ಕೋಟೆ ಗೋಡೆ ಇವೆ. ಆಗ್ನೇಯದ ಕೋಟೆಗೋಡೆ ಮುಂದೆ ಪಶ್ಚಿಮಕ್ಕೆ ತಿರುಗಿ ಒಳಬಾಗಿಲು ಕೋಟೆ ಗೋಡೆಯನ್ನು ಸ್ವಲ್ಪ ಅಂತರದಲ್ಲಿ ಸಂಧಿಸುತ್ತದೆ. ಇದೇ ರೀತಿಯ ಈಶಾನ್ಯದ ಕೋಟೆ ಗೋಡೆಯು ಪಶ್ಚಿಮಕ್ಕೆ ತಿರುಗಿ ಒಳಬಾಗಿಲ ಕೋಟೆ ಗೋಡೆಯನ್ನು ಸ್ವಲ್ಪ ಅಂತರದಲ್ಲಿ ಸಂಧಿಸುತ್ತದೆ. ಮುಖ್ಯ ಬಾಗಿಲಿನ ಈಶಾನ್ಯ ಹಾಗೂ ಆಗ್ನೇಯ ದಿಕ್ಕುಗಳಲ್ಲಿ ಕೊತ್ತಳಗಳಿವೆ. ಈಶಾನ್ಯಕ್ಕಿರುವ ಕೊತ್ತಳದ ಮೇಲೆ ಅಂಬುಗಂಡಿಗಳಿವೆ. ಆಗ್ನೇಯಕ್ಕಿರುವ ಕೊತ್ತಳಶಿಥಿಲವಾಗಿದೆ.

ಉತ್ತರಕ್ಕಿರುವ ಒಳಬಾಗಿಲು ಸುಮಾರು ಹತ್ತು ಅಡಿ ಅಗಲ ಮತ್ತು ಸುಮಾರು ಇಪ್ಪತ್ತೈದು ಅಡಿ ಎತ್ತರವಾಗಿದೆ. ದೊಡ್ಡದಾಗಿರುವ ಬಾಗಿಲಿನ ತೋಳಿನ ಮಧ್ಯಭಾಗದಲ್ಲಿ ಉಬ್ಬಿದ ಪಟ್ಟಿ ಮತ್ತು ಕೆಳ ಮೂಲೆಯಲ್ಲಿ ಮುಂದೆ ಚಾಚಿದ ಪುಷ್ಪದಳ ಇವೆ. ಮೇಲೆ ಎರಡು ಬೋದುಗೆ ಭಾಗಗಳಿವೆ. ಕೆಳಗಿನ ಬೋದುಗೆ ಬಾಳೆಯ ಮೊಗ್ಗಿನ ಆಕಾರದಲ್ಲಿದೆ. ಮೇಲಿನದು ಚೌಕಾಕಾರದ ಪುಷ್ಪ ಮತ್ತು ಆನೆಯ ಸೊಂಡಿಲಿನಿಂದ ಹೊರಬಂದ ಬಾಳೆಯ ಮೊಗ್ಗಿನ ಆಕಾರದಲ್ಲಿದೆ. ತೋಳುಗಳಂತೆಯೇ ಇರುವ ಬಾಗಿಲ ಉತ್ತರಂಗದ ತುದಿಗಳಲ್ಲಿ ಚೌಕಾಕಾರದ ಪುಷ್ಪಗಳಿವೆ. ಈ ಒಳಬಾಗಿಲ ಪಶ್ಚಿಮಕ್ಕೆ ಪಕ್ಕದಲ್ಲಿಯೇ ಒಂದು ಚಿಕ್ಕ ಉಪಬಾಗಿಲಿದೆ. ಈ ಉಪಬಾಗಿಲಿನ ಚೌಕಟ್ಟು ಮುಖ್ಯ ಬಾಗಿಲಿನ ಚೌಕಟ್ಟಿನಂತೆಯೇ ಇದೆ. ಆದರೆ ಇದರಲ್ಲಿ ಬೋದುಗೆಗಳಿಲ್ಲ. ಈ ಮಧ್ಯದದ ಬಾಗಿಲಿನ ಪ್ರವೇಶದ ಹಿಂಬದಿ ಇಕ್ಕೆಲಗಳಲ್ಲಿ ಮೂರು ಹಂತಗಳಲ್ಲಿ ಕಟ್ಟಲಾದ ಕಟ್ಟೆ ಇದೆ. ಈ ಕಟ್ಟೆಯ ಮೇಲೆ ಮೂರು ಚೌಕ ಮತ್ತು ಎರಡು ಅಷ್ಟ ಭುಜಾಕೃತಿಯ ನಾಲ್ಕು ಕಂಬಗಳಿವೆ. ಕಂಬಗಳ ಮೇಲೆ ಸುರುಳಿಯಾಕಾರದ ಬೋದುಗೆಗಳಿವೆ. ಈ ಬಾಗಿಲಿನ ಪಾರ್ಶ್ವದ ಗೋಡೆಗಳು ಕೊನೆಯಾಗುವ ಅಂಚಿನಲ್ಲಿ ಕೊತ್ತಳಗಳಿವೆ. ಒಳಗಿನ ಬಾಗಿಲು ಪ್ರಧಾನಕೋಟೆ ಗೋಡೆಯಲ್ಲಿ ಪೂರ್ವಾಭಿಮುಖವಾಗಿದೆ. ಈ ಹಿಂದಿನ ಬಾಗಿಲುಗಳಿಗಿಂತಲೂ ಇದು ಬಹು ದೊಡ್ಡದಾಗಿದೆ. ಮತ್ತೆ ಪ್ರಧಾನವಾಗಿದೆ. ಬೃಹದಾಕಾರವಾಗಿರುವ ಈ ಬಾಗಿಲಿಗೆ ಎರಡು ಚೌಕಟ್ಟುಗಳಿವೆ. ಒಳ ಚೌಕಟ್ಟಿನ ತೋಳಿನ ಒಳ ಬದಿಯನ್ನು ಆನೆಯ ಸೊಂಡಿಲಿನಿಂದ ಹೊರಬಂದ ತೋರಣದಿಂದ, ಮೂರ್ತಿಯನ್ನು ಪುಷ್ಪದಳಗಳಿಂದ ಮತ್ತು ಹೊರ ಬದಿಯನ್ನು ವ್ಯಾಳದಿಂದ ಹೊರಬಂದ ಬಳ್ಳಿ ಸುರಳಿಗಳಿಂದ ಅಲಂಕರಿಸಲಾಗಿದೆ. ಹೊರ ಚೌಕಟ್ಟಿನ ತೋಳನ್ನು ವಜ್ರಾಕೃತಿಯ ವಿನ್ಯಾಸದಿಂದ ಮತ್ತು ಕುಂಭದಿಂದ ಹೊರಬಂದ ಬಳ್ಳಿ ಸುರಳಿಗಳಿಂದ ಅಲಂಕರಿಸಿದೆ. ಬಾಗಿಲ ಒಳಬದಿಗೆ ಬಾಳೆಯ ಮೊಗ್ಗಿನ ಆಕಾರದ ಬೋದುಗೆ ಮತ್ತು ಮುಂಭಾಗದಲ್ಲಿ ವ್ಯಾಳಿಯ ಬಾಯಿಂದ ಹೊರಬಂದ ಉಪಬಾಗಿಲಿದೆ. ಈ ಉಪಬಾಗಿಲನ್ನು ನಾಲ್ಕು ಭಾಗಗಳಲ್ಲಿ ವಿಭಜಿಸಿದ ವಜ್ರಾಕೃತಿಯ ವಿನ್ಯಾಸಗಳಿಂದ ಅಲಂಕರಿಸಿದೆ. ಎರಡು ಬಾಗಿಲುಗಳ ಮಧ್ಯದಲ್ಲಿ ಗೋಡೆಯ ಮೇಲೆ ಮಿಥುನ ಮತ್ತು ಪ್ರಾಣಿ. ಶಿಲ್ಪವಿದೆ. ಬಾಗಿಲ ಮೇಲಿನ ಕೈಪಿಡಿ ಗೋಡೆಯನ್ನು ಇಟ್ಟಿಗೆ ಗಾರೆಯ ಶಿಲ್ಪದಿಂದ ತೆನೆಗಳಿಂದ ಅಲಂಕರಿಸಿದೆ. ಬಾಗಿಲಿನ ಒಂದು ಭಾಗವು ಮಾತ್ರ ಕದ ಉಳಿದಿದೆ. ಕಟ್ಟಿಗೆ ಕದದ ಮೇಲೆ ಅಲಂಕಾರಿಕ ಉದ್ದ ಮತ್ತು ಅಡ್ಡ ಪಟ್ಟಿಗಳು ಮತ್ತು ಕಬ್ಬಿಣದ ಮೊಳೆಗಳ ಚೂಪಾದ ತಲೆಗಳಿವೆ. ಪ್ರವೇಶದ ಹಿಂಬದಿಗಿರುವ ಕಟ್ಟೆಯ ಮೇಲೆ ಆರು ಕಂಬಗಳು ನಾಲ್ಕು ಮೂಲೆಗಂಬದ ಆರು ಅರ್ಧಗಂಬಗಳನ್ನು ಅಳವಡಿಸಲಾಗಿದೆ. ಈ ಕಂಬಗಳು ಕೆಳಭಾಗ ಚೌಕಾಕಾರವಾಗಿ, ಮೇಲ್ಭಾಗ ಅಷ್ಟಭುಜಾಕೃತಿಯನ್ನು ಹೊಂದಿವೆ. ಕಂಬದ ಗಾತ್ರ ಮೇಲೆ ಕೈ ಮುಗಿದು ನಿಂತಿರುವ ಪುರುಷನ ಉಬ್ಬು ಶಿಲ್ಪವಿದೆ. ಉತ್ತರ ಮತ್ತು ದಕ್ಷಿಣ ಗೋಡೆಗಳಲ್ಲಿ ಕಮಾನಾಕೃತಿಯ ಗೂಡುಗಳಿವೆ. ಕೋಟೆಯ ಒಳಭಾಗದಲ್ಲಿ ಬಾಗಿಲ ಎರಡು ಇಕ್ಕೆಲಗಳಲ್ಲಿರುವ ಮೆಟ್ಟಿಲುಗಳ ಮೂಲಕ ಕೋಟೆಯ ಮೇಲೆ ಹತ್ತಲು ಅನುಕೂಲವಿದೆ.

ಈ ಕೋಟೆಯ ದಕ್ಷಿಣದ ಗೋಡೆ ಮಧ್ಯದಲ್ಲಿ ದಿಡ್ಡಿ ಇದೆ. ಕಿರಿದಾದ ಈ ದಿಡ್ಡಿಯು ಸುಮಾರು ಐದು ಅಡಿ ಅಗಲ ಎಂಟು ಅಡಿ ಎತ್ತರವಾಗಿದೆ. ಈ ದಿಡ್ಡಿಯ ಚೌಕಟ್ಟಿನ ಕೆಳಗೆ ಉತ್ತರಂಗದ ಮತ್ತು ತುದಿಗಳಲ್ಲಿ ಚೌಕಾಕಾರದ ಪುಷ್ಪ ವಿನ್ಯಾಸವಿದೆ. ಬಾಗಿಲ ಮೇಲ್ಭಾಗದಲ್ಲಿಯ ಮತ್ತೊಂದು ಉತ್ತರಂಗದ ಮಧ್ಯದಲ್ಲಿ ವೃತ್ತಾಕಾರದ ಪುಷ್ಪ ಮತ್ತು ಅದರ ಬದಿಗಳಲ್ಲಿ ನವಿಲು ಮತ್ತು ಪಾರಿವಾಳದ ಉಬ್ಬುಶಿಲ್ಪಗಳಿವೆ. ಇದರ ಬಲಭಾಗದ ಗೋಡೆಯಲ್ಲಿ ಸ್ತ್ರೀಯೊಬ್ಬಳಿಂದ ಹೆರಿಗೆ ಮಾಡಿಸಿಕೊಳ್ಳುವಂತೆ ಭಾಸವಾಗುವ ಉಬ್ಬುಶಿಲ್ಪವಿದೆ. ಸ್ತ್ರೀ ಕಾಲು ಅಗಲಿಸಿ ವೀರಾಸನದಲ್ಲಿ ಕುಳಿತುಕೊಳ್ಳುವ ದೃಶ್ಯ, ಇದರ ಇಕ್ಕೆಲಗಳಲ್ಲಿ ಸ್ತ್ರೀಯರು ಮಧ್ಯದವಳ ಕೈಗಳನ್ನು ಹಿಡಿದುಕೊಂಡಿದ್ದಾರೆ. ಕೆಳಭಾಗದಲ್ಲಿ ಮಗುವೊಂದರ ಉಬ್ಬುಶಿಲ್ಪವಿದೆ.

ಕೋಟೆಯೊಳಗಿನ ಕೃಷ್ಣಾನಗರದ ಜನತೆ ಸಂಡೂರು ನಗರಕ್ಕೆ ದಿನನಿತ್ಯದ ಕೆಲಸಕ್ಕೆ ಓಡಾಡಲು ಈ ದಾರಿಯನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರಾಯಶಃ ಅಂದು ಇದೇ ಉದ್ದೇಶಕ್ಕಾಗಿ ಈ ದಿಡ್ಡಿಯನ್ನು ಕಟ್ಟಿರಬಹುದೇ. ಶತ್ರುಗಳು ಮುಖ್ಯ ಬಾಗಿಲನ್ನು ಮುತ್ತಿದಾಗ ಈ ದಿಡ್ಡಿ ಬಾಗಿಲಿನ ಮೂಲಕ ಹೊರಬರುವ ವ್ಯವಸ್ಥೆಯನ್ನು ಕಲ್ಪಿಸಿರಬಹುದು.

ಕೋಟೆಯ ಗೋಡೆಯ ಮೇಲೆ ಸುತ್ತಲೂ ನಿರ್ಮಿಸಿರುವ ಒಟ್ಟು ಹತ್ತೊಂಬತ್ತು ಕೊತ್ತಳಗಳಿವೆ. ಈಶಾನ್ಯ ದಿಕ್ಕಿನ ಕೊತ್ತಳದ ಹೊರ ಗೋಡೆಯ ಕಲ್ಲಿನಲ್ಲಿ ಆಂಜನೇಯನ ಉಬ್ಬುಶಿಲ್ಪವಿದೆ. ಈ ಕೊತ್ತಳಗಳ ಕೈಪಿಡಿ ಗೋಡೆಗಳಲ್ಲಿ ಬಂದೂಕು ಕಿಂಡಿಗಳು ಮತ್ತು ತೋಪಿಗಾಗಿ ಬಿಟ್ಟ ಸಂದಿಗಳಿವೆ. ಕೈಪಿಡಿ ಗೋಡೆಯ ಸುಮಾರು ಐದು ಅಡಿ ಎತ್ತರ ಮೂರು ಅಡಿ ಅಗಲವಾಗಿದ್ದು ಹೊರಬದಿಗೆ ಇಳಿಜಾರಾಗಿದೆ. ಕೊತ್ತಳಗಳಲ್ಲಿ ಕಾವಲುಗಾರರಿಗಾಗಿ ಮಾಡಿದ U ಆಕಾರದ ಚಿಕ್ಕ ಕೋಷ್ಟಕಗಳಿವೆ. ಕೆಲವು L ಆಕಾರದಲ್ಲಿವೆ. ಬೃಹದಾಕಾರದ ಈ ಕೊತ್ತಳಗಳು ತುಂಬಾ ವಿಶಾಲವಾಗಿವೆ. ಪಶ್ಚಿಮ ದಿಕ್ಕಿನ ಕೋಟೆಯ ಗೋಡೆ ಮಧ್ಯದಲ್ಲಿಯ ಕೊತ್ತಳ ಬಹಳ ದೊಡ್ಡದಾಗಿದೆ. ಇದರ ಮೇಲೆ ಇನ್ನೊಂದು ಕೊತ್ತಳ ಇದೆ. ಈ ಕೊತ್ತಳದಿಂದ ಕೆಳಗೆ ಇಳಿಯಲು ಒಂದು ಬದಿಗೆ ಮೆಟ್ಟಿಲುಗಳಿವೆ. ಈ ಕೊತ್ತಳದ ಮೇಲಿಂದ ಕೋಟೆಯ ದೃಶ್ಯ ಪರಿಪೂರ್ಣವಾಗಿ ಕಂಡುಬರುತ್ತದೆ. ಭೂಮಟ್ಟದಿಂದ ಸುಮಾರು ಎಪ್ಪತ್ತು ಅಡಿ ಎತ್ತರವಾಗಿದೆ. ಈ ಕೊತ್ತಳದ ಕೆಳಮಟ್ಟದ ತಗ್ಗಿನಲ್ಲಿ ಒಮ್ದು ಆಯತಾಕಾರದ ಕಟ್ಟಡವಿದೆ. ಕೆಳಗೆ ಇಳಿಯಲು ಎರಡೂ ಬದಿಗೆ ಮೆಟ್ಟಿಲುಗಳಿವೆ. ಎಂಟು ಕಂಬಗಳ ಕಟ್ಟಡದ ಮುಂಭಾಗದಲ್ಲಿ ಕಮಾನುಗಳಿವೆ. ಇದು ಹಿಂದೂಮುಸ್ಲಿಂ ಶೈಲಿಯಲ್ಲಿದೆ. ಮದ್ದು ಗುಂಡುಗಳ ಸಂಗ್ರಹಿಸಿಡುವ ಕಟ್ಟಡವೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ ಆಳ್ವೇರಿಯ ಮೇಲೆ ಓಡಾಡಲು ವಿಸ್ತೃತವಾದ ದಾರಿಯಿದೆ. ಆಳ್ವೇರಿಯನ್ನು ಫಿರಂಗಿಗಳು ಮೇಲೇರಲು ಸಹಾಯವಾಗುವಂತೆ ಕೋಟೆಯ ನೈಋತ್ಯಕ್ಕೆ ಮೂಲೆಯಲ್ಲಿ ಇಳಿಜಾರಾದ ದಾರಿಯನ್ನು ನಿರ್ಮಿಸಲಾಗಿದೆ. ಆಳ್ವೇರಿ ಮೇಲೆ ಕೈಪಿಡಿ ಗೋಡೆಯಲ್ಲಿ ಅಂಬುಗಂಡಿಗಳು ಹಾಗೂ ತೋಪು ಸಂದಿಗಳಿವೆ.

ಕೋಟೆಯ ಹೊರಮೈಗೆ ಮಧ್ಯಮ ಗಾತ್ರದ ಕಲ್ಲುಗಳನ್ನು ಬಳಸಲಾಗಿದೆ. ಕಲ್ಲುಗಳ ಮಧ್ಯದಲ್ಲಿ ಅಗಲವಾದ ಸಂದಿಗಳುಂಟಾಗದಂತೆ ಕಲ್ಲುಗಳ ಅಂಚುಗಳನ್ನು ಕೆತ್ತಿ ಜೋಡಿಸಲಾಗಿದೆಯಾದರೂ ಸಂದಿಗಳಲ್ಲಿ ಸುಣ್ಣದ ಗಾರೆಯನ್ನು ಉಪಯೋಗಿಸಲಾಗಿದೆ. ಬಹಳ ಅಗಲವಾದ ಕೋಟೆಯ ಒಳ ಮೈಗೆ ಚಿಕ್ಕ ಕಲ್ಲುಗಳನ್ನು ಬಳಸಲಾಗಿದೆ. ಕೋಟೆಯ ಮೇಲೆ ಇಟ್ಟಿಗೆ ಮತ್ತು ಗಾರೆಯಿಂದ ಮಾಡಿದ ಅಗಲವಾದ ಕೈಪಿಡಿ ಗೋಡೆಯಿದೆ. ಎತ್ತರವಾದ ಈ ಕೈಪಿಡಿ ಗೋಡೆಯ ಮೇಲ್ಭಾಗ ಇಳಿಜಾರಾಗಿದೆ. ಹೊರಗಿನಿಂದ ಬಂದ ಗುಂಡುಗಳನ್ನು ಹಿಂದಕ್ಕೆ ಬೀಳುವಂತೆ ಮಾಡುವುದಕ್ಕಾಗಿ ಹೊರಭಾಗವನ್ನು ಇಳಿಜಾರಾಗಿ ಮಾಡಲಾಗಿದೆ. ಈ ಕೈಪಿಡಿ ಗೋಡೆಯಲ್ಲಿರುವ ಕೆಲವು ಗಿಂಡಿಗಳು ಕಮಾನಿನಾಕಾರದಲ್ಲಿವೆ. ಒಳಭಾಗದಲ್ಲಿರುವ ಕಿಂಡಿ ಮೂರು ದಿಕ್ಕುಗಳಿಗೆ ಹೋಗಿ ಹೊರಭಾಗದಲ್ಲಿ ಮೂರು ಕಿಂಡಿಗಳಾಗುತ್ತವೆ. ಕೋಟೆಗೆ ಬಳಸಿದ ಇಟ್ಟಿಗೆ ಮತ್ತು ಗುಣಮಟ್ಟದ್ದಾಗಿರುವುದರಿಂದ ಗಾಳಿ, ಮಳೆ, ಬಿಸಿಲಿಗೆ ನಲುಗದೆ ಹೊಸದಾಗಿ ಕಟ್ಟಿಸಿದ ಕೋಟೆಯಂತೆಯೇ ಉಳಿದುಬಂದಿದೆ. ಈ ಕೋಟೆಯ ಸುತ್ತಲೂ ಸುಮಾರು ೩೫ ಅಡಿ ಅಗಲ ಮತ್ತು ೧೫ ಅಡಿ ಆಳವಾದ ಅಗಲ ಇದೆ. ಸುಮಾರು ೨ ಕಿ.ಮೀ. ಸುತ್ತಳತೆಯ ಈ ಕೋಟೆಯ ಗೋಡೆ ಸುಮಾರು ೨೦ ರಿಂದ ೩೦ ಅಡಿ ಎತ್ತರವಾಗಿದೆ.

ಕೋಟೆಯ ಒಳಗೆ ವಿವಿಧ ಭಾಗಗಳಲ್ಲಿ ನಾಲ್ಕು ಮದ್ದಿನ ಮನೆಗಳಿವೆ ಇವುಗಳನ್ನು ಸ್ಥಳೀಯರು ಲದಾವಿಗಳೆಂದೇ ಸಂಭೋದಿಸುತ್ತಾರೆ. ಆಕಸ್ಮಿಕವಾಗಿ ಮದ್ದಿನ ಮನೆಗೆ ಬೆಂಕಿ ಬಿದ್ದರೂ ಹೆಚ್ಚು ಹಾನಿಯಾಗದಂತೆ ಎಚ್ಚರವಹಿಸಿ ಇವುಗಳ ವಾಸ್ತುವನ್ನು ವಿನ್ಯಾಸಗೊಳಿಸಿದೆ. ಈ ಮದ್ದಿನ ಮನೆಗಳಿಗೆ ಚಿಕ್ಕ ಚಿಕ್ಕ ಕಮಾನಿನಾಕಾರದ ಬಾಗಿಲುಗಳನ್ನು ಹಾಗೂ ಕಿರಿದಾದ ಕಿಡಕಿಗಳನ್ನು ಜೋಡಿಸಲಾಗಿದೆ. ಮೇಲಿನ ಛಾವಣಿಯ ನಾಲ್ಕು ಬದಿಗಳು ಇಳಿಜಾರಾಗಿದೆ. ಇವುಗಳ ಮಾಳಿಗೆಗಳು ಗುಡಿಸಲಿನಾಕಾರದಲ್ಲಿವೆ.

ಆಗ್ನೇಯ ಮೂಲೆಯಲ್ಲಿರುವ ಮದ್ದಿನ ಮನೆಯು ಉತ್ತರಾಭಿಮುಖವಾಗಿದೆ. ಇದು ಪೂರ್ವ ಪಶ್ಚಿಮವಾಗಿ ೭೦ ಅಡಿ ಉದ್ದ ಹಾಗೂ ಉತ್ತರ ದಕ್ಷಿಣವಾಗಿ ಸುಮಾರು ೩೦ ಅಡಿ ಅಗಲವಾಗಿದೆ. ಉತ್ತರದ ಗೋಡೆಯ ಮಧ್ಯದಲ್ಲಿ ಕಿರಿದಾದ ಕಮಾನಿನಾಕಾರದ ೩ ಬಾಗಿಲುಗಳಿವೆ. ಒಳಭಾಗದಲ್ಲಿ ಒಟ್ಟು ೧೨ ಕಂಬಗಳಿವೆ. ಇವುಗಳು ಕಮಾನಿನಾಕಾರದಲ್ಲಿದ್ದು ಇವುಗಳ ಮೇಲೆ ಒಳಮಾಳಿಗೆ ನಿಂತಿದೆ.

ನೈಋತ್ಯ ಮೂಲೆಯಲ್ಲಿಯ ಮದ್ದಿನ ಮನೆಯು ಉತ್ತರಾಭಿಮುಖವಾಗಿದೆ. ಇದಕ್ಕೆ ಎರಡು ಬಾಗಿಲುಗಳಿವೆ. ಕಟ್ಟಡದ ಒಳಗೆ ಹೋಗಲು ಇನ್ನೆರಡು ಬಾಗಿಲುಗಳಿವೆ. ಇದರೊಳಗೆ ಎಂಟು ಕಂಬಗಳಿವೆ. ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಎರಡು ಚಿಕ್ಕ ಕಿಟಕಿಗಳಿವೆ. ಇದು ಆಗ್ನೇಯಕ್ಕಿರುವ ಮದ್ದಿನ ಮನೆಗಿಂತ ಚಿಕ್ಕವಾಗಿದೆ. ವಾಯುವ್ಯ ದಿಕ್ಕಿನಲ್ಲಿರುವ ಮದ್ದಿನ ಮನೆಯು ಪೂರ್ವಾಭಿಮುಖವಾಗಿದೆ. ಇದು ಉತ್ತರ ದಕ್ಷಿಣವಾಗಿ ಸುಮಾರು ೬೦ ಅಡಿ ಉದ್ದ ಹಾಗೂ ಪೂರ್ವಪಶ್ಚಿಮವಾಗಿ ೨೦ ಅಡಿ ಅಗಲವಾಗಿದೆ. ಇದರ ಪೂರ್ವದ ಗೋಡೆಯಲ್ಲಿ ಕಿರಿದಾದ ಕಮಾನಿನಾಕಾರದ ಮೂರು ಬಾಗಿಲುಗಳಿವೆ. ನಾಲ್ಕು ದಿಕ್ಕಿಗೂ ಚಿಕ್ಕ ಚಿಕ್ಕ ಕಿಟಕಿಗಳಿವೆ. ಒಳಗೆ ಒಂದೇ ಸಾಲಿನಲ್ಲಿ ಒಂಬತ್ತು ಕಂಬಗಳಿವೆ. ಈಶಾನ್ಯ ದಿಕ್ಕಿಗಿರುವ ಮದ್ದಿನ ಮನೆಯು ದಕ್ಷಿಣಾಭಿಮುಖವಾಗಿ ಸುಮಾರು ೨೦ ಅಡಿ ಅಗಲವಾಗಿದೆ. ಮುಂಭಾಗದಲ್ಲಿ ಕಮಾನಿನಾಕಾರದ ಐದು ಬಾಗಿಲುಗಳಿವೆ. ಒಳಭಾಗದಲ್ಲಿ ಎರಡು ಸಾಲುಗಳಲ್ಲಿ ಒಟ್ಟು ೧೨ ಕಂಬಗಳಿವೆ. ಈ ಕಟ್ಟಡಗಳನ್ನು ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಇದರಲ್ಲಿ ದವಸಧಾನ್ಯಗಳನ್ನು ಹಾಕುವುದಕ್ಕಾಗಿ, ದನಕರುಗಳನ್ನು ಕಟ್ಟುವುದಕ್ಕಾಗಿ ಮತ್ತು ಮೇವುಗಳನ್ನು ಇಡುವುದಕ್ಕಾಗಿ ಬಳಸಲಾಗುತ್ತಿದೆ. ಕೋಟೆಯೊಳಗೆ ಕೃಷ್ಣಾನಗರವಿದೆ. ಈ ನಗರದಲ್ಲಿ ರಾಮಸ್ವಾಮಿ, ಈಶ್ವರ, ಊರಮ್ಮ,ತಾಯಮ್ಮನ ದೇವಾಲಯಗಳು, ದರ್ಗಾಗಳು ಹಾಗೂ ಮಸೀದಿಗಳಿವೆ. ಕೋಟೆಯ ಪೂರ್ವ ದಿಕ್ಕಿನ ಬಾಗಿಲಿನ ಹತ್ತಿರ ಆಯತಾಕರಾದ ಬಾವಿ ಇದೆ. ಇದಕ್ಕೆ ಉತ್ತರ ದಿಕ್ಕಿನಲ್ಲಿ ಪ್ರವೇಶ ಮಾಡಲು ಮೆಟ್ಟಿಲುಗಳಿವೆ. ಪೂರ್ವ ಮತ್ತು ಪಶ್ಚಿಮ ಗೋಡೆಯಲ್ಲಿ ಗೂಡುಗಳಿವೆ.

ಇದರ ಸಮಕಾಲೀನ ಕೋಟೆಗಳಾದ ಶ್ರೀರಂಗಪಟ್ಟಣ, ಮಂಜರಾಬಾದ್, ಚನ್ನರಾಯದುರ್ಗ, ದೇವನಹಳ್ಳಿ ಮುಖ್ಯವಾಗಿವೆ. ಇವುಗಳ ಬಹುತೇಕ ಲಕ್ಷಣಗಳನ್ನು ಕೃಷ್ಣಾನಗರದ ಕೋಟೆಯಲ್ಲಿ ಕಾಣಬಹುದಾಗಿದೆ.

ದರೋಜಿ

ದರೋಜಿಯು ಸಂಡೂರು ತಾಲ್ಲೂಕಿನಲ್ಲಿದ್ದು ಬಳ್ಳಾರಿಯಿಂದ ೩೨ ಕಿ.ಮೀ. ಮತ್ತು ಕಂಪ್ಲಿಯಿಂದ ೨೦ ಕಿ.ಮೀ. ದೂರದಲ್ಲಿರುವ ಒಂದು ಚಿಕ್ಕ ಗ್ರಾಮ. ಇದನ್ನು ಶಾಸನಗಳು ದೊರವದಿ ಎಂದು ಕರೆದಿವೆ.[14] ಇದು ಬಲ್ಲಕುಂದೆ ನಾಡಿನ ದೊಡ್ಡ ಉಪ ವಿಭಾಗಗಳಲ್ಲಿ ಒಂದೆಂಬ ಅಂಶವು ಓರವಾಯಿ ಮತ್ತು ಹಂಪೆ ಶಾಸನಗಳಿಂದ ತಿಳಿಯುತ್ತದೆ.[15] ಕ್ರಿ.ಶ. ೧೨ನೇ ಶತಮಾನದಲ್ಲಿ ದೊರವಡಿನಾಡು ಅಥವಾ ದೊರವಡಿ-೭೦ರ ರಾಜಧಾನಿಯಾಗಿದ್ದಿತು.[16] ದೊರವದಿಯು ಹಲವು ಇತಿಹಾಸಕಾರರ ಚರ್ಚೆಗೊಳಗಾದ ಪ್ರದೇಶ. ಈ ಊರಿನ ದರೋಜಿ ಹೆಸರು ಬರಲು ಅಲ್ಲಿಯ ಒಂದು ದೊಡ್ಡ ಕೆರೆ ಅಂದರೆ ದರಿಯ ತಲಾಬ (Dariya Talaba) ಕಾರಣವಾಗಿದೆ ಎಂದು ಊಹಿಸಲಾಗಿದೆ. ಇನ್ನು ಗ್ರಾಮದ ಹೆಸರು ‘ದ್ವಾರತಿ’ ಎಂದೂ ಮುಂದೆ ಅದು ದೊರವಡಿಯಾಗಿ[17] ಬದಲಾವಣೆ ಹೊಂದಿತೆಂದು ಹೇಳಲಾಗುವುದು. ಆದರೆ ಇವೆಲ್ಲ ಕೇವಲ ಊಹೆಗಳನ್ನಾಧರಿಸಿದ್ದು, ಅವಕ್ಕೆ ಭಾವಶಾಸ್ತ್ರೀಯ ಆಧಾರಗಳಿಲ್ಲವೆಂದು ಮೇಲುನೋಟಕ್ಕೆ ಸ್ಪಷ್ಟವಾಗಿದೆ. ದೊರವಡಿ (ಕ್ರಿ.ಶ. ೧೦೯೯)> ದರೋಜಿ(ದೊರೆಯ(ಅರಸ)+ವಾಡಿ > ದೊರದೆಯವಾಡಿ > ದೊರೆವಾಡಿ > ದೊರೆವಡಿ > ದೊರವಡಿ > ದರೋಜಿ) ಯಾಗಿದೆ. ಇಲ್ಲಿ ಕ್ರಿ.ಶ.೧೨ನೇ ಶತಮಾನದ ಪ್ರಾರಂಭದಲ್ಲಿ ಕೋಟೆಯಿದ್ದುದು ಕ್ರಿ.ಶ. ೧೧೪೦-೦೫ರ ಶಾಸನದಿಂದ ತಿಳಿಯುತ್ತದೆ.[18]

ಇಲ್ಲಿ ಆದಿ ಹಳೆಯ ಶಿಲಾಯುಗ, ನೂತನ ಶಿಲಾಯುಗ, ಶಿಲಾ-ತಾಮ್ರಯುಗದ ಸಂಸ್ಕೃತಿಗಳ ಅವಶೇಷಗಳು ಕಂಡುಬಂದಿವೆ.[19] ಹೀಗೆ ಪ್ರಾಚೀನ ನೆಲೆಯಾದ ದರೋಜಿಯು ಕಲ್ಯಾಣ ಚಾಳುಕ್ಯ, ಹೊಯ್ಸಳ, ಕುಮ್ಮಟದುರ್ಗದ ಅರಸ, ಸ್ವಲ್ಪಕಾಲ ಯಾದವರ, ಹಾಗೂ ವಿಜಯನಗರದವರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು. ಕ್ರಿ.ಶ. ೧೨ನೆಯ ಶತಮಾನಕ್ಕೂ ಮೊದಲೆ ನಿರ್ಮಾಣವಾಗಿರುವ ಈ ಕೋಟೆಯನ್ನು ೧೨ನೆಯ ಶತಮಾನದ ಕೊನೆಯಲ್ಲಿ ಹೊಯ್ಸಳ ಎರಡನೇ ಬಲ್ಲಾಳ ಜಯಸಿದ್ದನು. ಕ್ರಿ.ಶ. ೧೨೮೦ರ ಆಸುಪಾಸಿನಲ್ಲಿ ಮುಮ್ಮಡಿಸಿಂಗೆ ನಾಯಕ ದರೋಜಿಯನ್ನು ಆಳುತ್ತಿದ್ದಾಗ ಯಾದವ ರಾಯದೇವನ ಸೈನ್ಯವು ಈ ಕೋಟೆಯ ಮೇಲೆ ಯುದ್ಧ ಮಾಡುತ್ತದೆ. ಇದು ನಡೆದದ್ದು ದೊರವಡಿ(ದರೋಜಿ) ಕೋಟೆಯಲ್ಲಿ, ಇದರಲ್ಲಿ ವಣಿದೇವರಸ ಹೋರಾಡಿ ಹಲವು ಆಳು, ಕುದುರೆಗಳನ್ನು ಕೊಂದು ಸುರಲೋಕ ಪ್ರಾಪ್ತವಾಗುತ್ತಾನೆಂಬ ವಿಷಯದಲ್ಲಿ ದೊರವಡಿ ಕೋಟೆಯ ಮಹತ್ವ ಅಡಗಿದೆ.[20] ಕ್ರಿ.ಶ. ೧೩೨೦ರಲ್ಲಿ ಮುಮ್ಮಡಿಸಿಂಗೆಯ ನಾಯಕನ ಮಗ ಕಂಪಲರಾಯ ದರೋಜಿ(ದೊರವದಿ)ಯನ್ನು ಆಳುತ್ತಿದ್ದಾಗ ಹೊಯ್ಸಳ ೩ನೇ ಬಲ್ಲಾಳ ದಂಡೆತ್ತಿ ಬಂದನು. ಕ್ರಿ.ಶ. ೧೬ನೆಯ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ದರೋಜಿಯ ಸುತ್ತಲಿನ ಪ್ರದೇಶವನ್ನು ದೊರವಡಿ ವೇಠೆ ಎಂದು ಕರೆದಿರುವರು.

ದೊರವಡಿ ಪಟ್ಟಣವಿದ್ದ ಸ್ಥಳವನ್ನು ಹಳೆ ದರೋಜಿ ಎಂದು ಕರೆಯುತ್ತಾರೆ. ಇದರ ಪಶ್ಚಿಮಕ್ಕೆ ದರೋಜಿ ಬೆಟ್ಟವಿದೆ. ಬೆಟ್ಟದ ಮೇಲೆ ಕೋಟೆ ಮತ್ತು ಕಟ್ಟಡಗಳ ಅವಶೇಷಗಳಿವೆ. ದೊರವಡಿ ಪಟ್ಟಣ ಅಥವಾ ಹಳೆ ದರೋಜಿಯ ಸುತ್ತ ಹಿಂದೆ ಕೋಟೆಯಿದ್ದ ಬಗ್ಗೆ ಈಗ ಆಧಾರಗಳಿಲ್ಲ. ಒಂದು ವೇಳೆ ಕೋಟೆ ಇದ್ದಿದ್ದರೂ ಅದನ್ನು ವ್ಯವಸಾಯ ಮಾಡಲು ಹಾಳು ಮಾಡಿರಬಹುದು. ಏಕೆಂದರೆ ಹಾಳು ಪಟ್ಟಣದ ಪ್ರದೇಶವು ವ್ಯವಸಾಯಕ್ಕೆ ಒಳಪಟ್ಟಿದೆ. ಆದರೆ ಬೆಟ್ಟದ ಮೇಲೆ ೧೨ನೇ ಶತಮಾನದಲ್ಲಿಯೇ ಕೋಟೆ ಇದ್ದುದಕ್ಕೆ ಅಲ್ಲಿನ ರಾಮಲಿಂಗೇಶ್ವರ ದೇವಾಲಯದಲ್ಲಿಯ ಶಾಸನವು ಆಧಾರವಾಗಿದೆ. ಶಾಸನದ ಪ್ರಕಾರ ಈ ದೇವಾಲಯವು ದೊರವಡಿ ಕೋಟೆಯ ಒಳಗಿತ್ತು.

ದರೋಜಿ ಬೆಟ್ಟದ ಸಾಲಿನಲ್ಲಿ ಮೂರು ಬೆಟ್ಟಗಳಿವೆ. ಇವುಗಳನ್ನು ಉತ್ತರ ಬೆಟ್ಟಮಧ್ಯ ಬೆಟ್ಟ ಮತ್ತು ದಕ್ಷಿಣ ಬೆಟ್ಟಗಳೆಂದು ಕರೆಯಬಹುದು. ಇವುಗಳಲ್ಲಿ ಮಧ್ಯ ಮತ್ತು ದಕ್ಷಿಣ ಬೆಟ್ಟಗಳ ಮೇಲೆ ಕೋಟೆ ವಿಸ್ತರಿಸಿದೆ. ದಕ್ಷಿಣ ಬೆಟ್ಟದ ಬುಡದಲ್ಲಿ ವೀರಭದ್ರ ದೇವಾಲಯವಿದೆ. ಬೆಟ್ಟಗಳ ಮೇಲೆ ಹತ್ತಲು ಮಧ್ಯ ದಕ್ಷಿಣ ಬೆಟ್ಟಗಳ ಮಧ್ಯದಲ್ಲಿ ಕಿರಿದಾದ ಕೊಳ್ಳದಲ್ಲಿ ಮೆಟ್ಟಿಲುಗಳಿವೆ. ಕೊಳ್ಳದ ದಾರಿಯಲ್ಲಿ ಆಗ್ನೇಯಕ್ಕೆ ಎರಡು ಮತ್ತು ವಾಯುವ್ಯಕ್ಕೆ ಎರಡು ಕೋಟೆಗೋಡೆಗಳನ್ನು ಎರಡು ಬೆಟ್ಟಗಳ ನಡುವೆ ಕಟ್ಟಲಾಗಿದೆ. ಈ ಕೋಟೆಗಳಲ್ಲಿ ತೆರೆದ ದ್ವಾರಗಳಿವೆ. ಆದರೆ ಬಾಗಿಲಿನಂತಹ ಯಾವುದೆ ಕಟ್ಟಡಗಳಿಲ್ಲ. ಚಿಕ್ಕ ಕಲ್ಲುಗಳಿಂದ ಕಟ್ಟಿದ ಆಗ್ನೇಯ ಕೋಟೆಗೋಡೆಗಳು ೧೭-೧೮ ನೇ ಶತಮಾನಗಳವು. ಆದರೆ ವಾಯುವ್ಯ ಕೋಟೆ ಗೋಡೆಗಳನ್ನು ಭಾಗಶಃ ಕತ್ತರಿಸಿದ ದೊಡ್ಡ ಕಲ್ಲುಗಳಿಂದ ಕಟ್ಟಿದ್ದು ಇವು ೧೨ನೇ ಶತಮಾನ ಅಥವಾ ಅದಕ್ಕಿಂತ ಹಿಂದಿನ ಕಾಲದವು. ಈ ಕೊಳ್ಳದಲ್ಲಿ ಬೆಟ್ಟದ ಮೇಲಿನಿಂದ ಹರಿದು ಬಂದ ನೀರನ್ನು ಸಂಗ್ರಹಿಸಲು ಎರಡು ಚಿಕ್ಕ ಕೆರೆಗಳಿವೆ.

ಆಗ್ನೇಯದಿಂದ ಮೊದಲನೆಯ ಕೋಟೆಗೋಡೆಯನ್ನು ದಾಟಿ ಎರಡನೆಯ ಕೋಟೆಯ ಹತ್ತಿರ ಹೋದಾಗ ಒಂದು ದಾರಿ ದಕ್ಷಿಣ ಬೆಟ್ಟದ ಮೇಲೆ ಹೋಗುತ್ತದೆ. ಈ ದಾರಿಯಲ್ಲಿ ಕೆಲವು ಮೆಟ್ಟಿಲುಗಳನ್ನು ಹತ್ತಿ ಮುಂದೆ ಹೋದಾಗ ರಾಮಲಿಂಗೇಶ್ವರ ದೇವಾಲಯ ಕಾಣುತ್ತದೆ. ಈ ದೇವಾಲಯದಲ್ಲಿ ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿವೆ. ಗರ್ಭಗೃಹದ ಬಾಗಿಲಿನ ಮೇಲೆ ಗಜಲಕ್ಷ್ಮಿಯಲ್ಲದೆ ಬೇರೆ ಅಲಂಕಾರವಿಲ್ಲ. ಅಂತರಾಳದ ಮುಂದೆ ಬಾಗಿಲವಾಡವಿಲ್ಲ. ನಂತರ ಸೇರಿಸಲಾದ ಸಭಾಮಂಟಪ ಭಾಗಶಃ ಬಿದ್ದುಹೋಗಿದೆ. ಹೊರಗೋಡೆಯ ಮೇಲೆ ಅರೆಗಂಬಗಳ ಅಲಂಕಾರವಿದೆ. ಸಭಾಮಂಟಪದ ಉತ್ತರ ಗೋಡೆಯ ಮೇಲೆ ಆನೆಯ ಎರಡು ಉಬ್ಬುಶಿಲ್ಪಗಳಿವೆ. ಅಂತರಾಳದ ಅರೆಗಂಬಗಳ ಮೇಲಿನ ಶಾಸನವು ಕ್ರಿ.ಶ. ೧೧೦೪-೦೫ ರಲ್ಲಿ ದರೊವಡಿ ಕೋಟೆಯೊಳಗಿನ ರಾಮೇಶ್ವರ ದೇವರಿಗೆ ದಾನ ಕೊಟ್ಟಿದುದನ್ನು ದಾಖಲಿಸುತ್ತದೆ. ಈ ದೇವಾಲಯವು ಶಾಸನದ ಕಾಲಕ್ಕಿಂತ ಕೆಲವು ವರ್ಷ ಹಿಂದಿನದಾಗಿದೆ.

ದೇವಾಲಯದ ಮುಂದೆ ಚಿಕ್ಕ ನೀರಿನ ದೋಣಿಯಿದೆ. ದೇವಾಲಯದ ಸುತ್ತಲಿನ ಸಮತಟ್ಟಾದ ಪ್ರದೇಶದ ಸುತ್ತಲೂ ಕೋಟೆಯಿದೆ. ಈ ಕೋಟೆಗೆ ದಕ್ಷಿಣಕ್ಕೆ ಬಾಗಿಲಿದೆ. ಇಲ್ಲಿಂದ ಮೇಲೆ ಮೊದಲು ಪಶ್ಚಿಮಕ್ಕೆ ನಂತರ ವಾಯುವ್ಯಕ್ಕೆ ಮೂರು ಬಾಗಿಲುಗಳ ಮೂಲಕ ಹೋದಾಗ ಬೆಟ್ಟದ ತುದಿಯಲ್ಲಿರುವ ಸಮತಟ್ಟಾದ ಪ್ರದೇಶವನ್ನು ತಲುಪುತ್ತೇವೆ. ಈ ಪ್ರದೇಶದ ಸುತ್ತಲಿನ ಕೋಟೆಯನ್ನು ಚಿಕ್ಕ ಕಲ್ಲುಗಳಿಂದ ಕಟ್ಟಲಾಗಿದೆ. ಈ ಕೋಟೆಯಲ್ಲಿ ವೃತ್ತಾಕಾರದ ಕೊತ್ತಳಗಳಿವೆ. ಇಲ್ಲಿ ಕೆಲವು ಕಟ್ಟಡಗಳ ಅವಶೇಷಗಳು ಮತ್ತು ಒಂದು ನೀರಿನ ದೋಣಿ ಇದೆ. ಇಲ್ಲಿಯ ಒಂದು ಗುಂಡಿನ ಮೇಲೆ ಹುಲಿಯನ್ನು ಬಂದೂಕಿನಿಂದ ಬೇಟೆಯಾಡುತ್ತಿರುವ ಮನುಷ್ಯನ, ಬಂಡೆಯ ಮೇಲೆ ಕುಳಿತ ನಗಾರಿ ಬಾರಿಸುವವನ, ಖಡ್ಗ ಹಿಡಿದು ಕುದುರೆಯ ಮೇಲೆ ಕುಳಿತವನ ಮತ್ತು ಧ್ವಜದೊಂದಿಗೆ ಅಂಬಾರಿಯನ್ನು ಹೊತ್ತ ಆನೆಯ ರೇಖಾಚಿತ್ರವಿದೆ. ಮತ್ತೊಂದು ಗುಂಡಿನ ಮೇಲೆ ಆನೆಯನ್ನು ಕೊಲ್ಲುತ್ತಿರುವ ಸಿಂಹದ ರೇಖಾಚಿತ್ರವಿದೆ. ಮನುಷ್ಯರ ಭಂಗಿ ಮತ್ತು ಪ್ರಾಣಿಗಳ ಚಲನವಲನಗಳನ್ನು ನೈಜವಾಗಿ ಚಿತ್ರಿಸಲಾಗಿದೆ.

ಮಧ್ಯ ಬೆಟ್ಟದ ಸುತ್ತಲು ಎರಡು ಕೋಟೆಗೋಡೆಗಳಿವೆ. ಚಿಕ್ಕ ಕಲ್ಲುಗಳಿಂದ ಕಟ್ಟಿದ ಈ ಗೋಡೆಗಳಲ್ಲಿ ವೃತ್ತಾಕಾರದ ಕೊತ್ತಳಗಳಿವೆ. ಬೆಟ್ಟದ ತುದಿಯಲ್ಲಿನ ಸಮತಟ್ಟಾದ ಪ್ರದೇಶದಲ್ಲಿ ಕೆಲವು ಕಟ್ಟಡಗಳ ಅವಶೇಷಗಳು ಮತ್ತು ಒಂದು ನೀರಿನ ದೊಣೆ ಇದೆ. ಈ ಬೆಟ್ಟದ ಉತ್ತರಕ್ಕಿರುವ ಕೋಟೆಗೋಡೆಯನ್ನು ದೊಡ್ಡ ಕಲ್ಲುಗಳಿಂದ ಕಟ್ಟಲಾಗಿದ್ದು, ಇದು ೧೩-೧೪ನೇ ಶತಮಾನದ್ದು. ಈ ಬೆಟ್ಟದ ಮೇಲಿನ ಉಳಿದ ಕೋಟೆ ಮತ್ತು ದಕ್ಷಿಣ ಬೆಟ್ಟದ ಮೇಲಿನ ಕೋಟೆ ೧೭-೧೮ನೇ ಶತಮಾನದವು.

[1] ನಾಗಭೂಷಣ, ಎಸ್.ಎಂ.೧೯೯೫, ಸೊಂಡೂರು ಇತಿಹಾಸ ಮತ್ತು ಸಂಸ್ಕೃತಿ, ಇತಿಹಾಸ ದರ್ಶನ-೧೫, ಪು. ೧೭೬-೧೮೨

[2] SII IX (PT.!) No. 326 Sandur

[3] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೯, ಕನ್ನಡ ವಿಶ್ವವಿದ್ಯಾಲಯ ಸಂಪುಟ ಬಳ್ಳಾರಿ ಜಿಲ್ಲೆ-೧, ಪು.೧೯೭, ಹಂಪಿ ಕನ್ನಡ ವಿಶ್ವವಿದ್ಯಾಲಯ

[4] ಅದೇ, ಪು. ೧೯೭-೧೯೮

[5] ಅದೇ, ಪು. ೨೧೩

[6] ಅದೇ, ಪು. ೨೦೧, ೨೦೩ ಮತ್ತು ೨೧೩

[7] ಅದೇ, ಪು. ೨೧೬

[8] Desai, P.B. 1970 A History of Karnataka, Pp. 433-434. Dharawada: Kannada Research Institute, Karnataka University.

[9] ಚನ್ನಬಸಪ್ಪ, ಎಸ್.ಪಾಟೀಲ, ೧೯೯೯, ಕರ್ನಾಟಕ ಕೋಟೆಗಳು, ಪು. ೨೬೫ ಹಂಪಿ ಕನ್ನಡ ವಿಶ್ವವಿದ್ಯಾಲಯ.

[10] ಅದೇ, ಪು. ೨೬೬

[11] ಷೇಕ್ ಅಲಿ, ಬಿ. ೧೯೯೭, ಕರ್ನಾಟಕ ಚರಿತ್ರೆ- ೫, ಪು. ೨೧೯, ಹಂಪಿ ಕನ್ನಡ ವಿಶ್ವವಿದ್ಯಾಲಯ.

[12] 5th Report of the Madras Presidency. p. 449

[13] ಶಿವರುದ್ರಸ್ವಾಮಿ, ಎಸ್.ಎನ್.೨೦೦೦, ಕರ್ನಾಟಕ ಪ್ರೌಢ ಇತಿಹಾಸ ಮತ್ತು ಸಂಸ್ಕೃತಿ, ಪು. ೩೮೦-೩೯೮, ತಿಪಟೂರು ಪೌರಸ್ತ್ಯ ಪ್ರಕಾಶನ

[14] SII IX (pt.I) No. 166. ಕುಡುತಿನಿ ಓರುವಾಯಿ

[15] SII IX (pt.I) No. 253. ಓರುವಾಯಿ-

[16] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ (ಬಳ್ಳಾರಿ ಜಿಲ್ಲೆ)-೧, ಪು. ೫೪-೫೫, ಹಂಪಿ ಕನ್ನಡ ವಿಶ್ವವಿದ್ಯಾಲಯ.

[17] ಲಕ್ಷ್ಮಣ್ ತೆಲಗಾವಿ ಮತ್ತು ಶ್ರೀನಿವಾಸ ರಿತ್ತಿ, ಎಂ.ವಿ. (ಅನುವಾದ), ಹುಲ್ಲೂರು ಶ್ರೀನಿವಾಸ ಜೋಯಿಸರ ಇತಿಹಾಸ ಲೇಖನಗಳು

[18] ಚನ್ನಬಸಪ್ಪ, ಎಸ್.ಪಾಟೀಲ. ೧೯೯೯, ಕರ್ನಾಟಕ ಕೋಟೆಗಳು, ಪು. ೬೩ ಹಂಪಿ ಕನ್ನಡ ವಿಶ್ವವಿದ್ಯಾಲಯ

[19] ಶಿವತಾರಕ, ಕೆ.ಬಿ. ೨೦೦೧, ಕರ್ನಾಟಕ ಪುರಾತತ್ವ ನೆಲೆಗಳು, ಪು. ೨೬೩. ಹಂಪಿ ಕನ್ನಡ ವಿಶ್ವವಿದ್ಯಾಲಯ

[20] ನಾಗಯ್ಯ ಜಿ.ಎಂ. ೨೦೦೦, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಪು. ೨೧ ಬಳ್ಳಾರಿ ಲೋಹಿಯಾ ಪ್ರಕಾಶನ.