ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರವಾದ ಶಿರುಗುಪ್ಪ ಬಳ್ಳಾರಿಯಿಂದ ಸುಮಾರು ೫೬ ಕಿ.ಮೀ. ದೂರದಲ್ಲಿದೆ. ದಕ್ಷಿಣದಲ್ಲಿ ಬಳ್ಳಾರಿ, ನೈರುತ್ಯದಲ್ಲಿ ಹೊಸಪೇಟೆ ತಾಲೂಕುಗಳು, ಪಶ್ಚಿಮದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ರಾಯಚೂರು ಕಿಲ್ಲೆಯ ಸಿಂಧನೂರು, ಉತ್ತರ ಮತ್ತು ಪೂರ್ವದಲ್ಲಿ ಆಂಧ್ರಪ್ರದೇಶವೂ ಈ ತಾಲೂಕನ್ನು ಸುತ್ತುವರೆದಿದೆ. ಈ ತಾಲೂಕಿನಲ್ಲಿ ಹಚ್ಚೊಳ್ಳಿ, ಶಿರುಗುಪ್ಪ, ತೆಕ್ಕಲಕೋಟೆ ಮತ್ತು ಕರೂರುಗಳು ಹೋಬಳಿ ಕೇಂದ್ರಗಳು.

ತಾಲೂಕಿನ ಪಶ್ಚಿಮ ಮತ್ತು ವಾಯುವ್ಯ ಭಾಗದ ಉದ್ದಕ್ಕೂ ಈಶಾನ್ಯಾಭಿಮುಖವಾಗಿ ಈ ತಾಲೂಕನ್ನು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಂದ ವಿಂಗಡಿಸಿಕೊಂಡು ತುಂಗ ಭದ್ರಾನದಿ ಹರಿಯುತ್ತದೆ. ತುಂಗಭದ್ರಾ ನದಿಯಿಂದಾಗಿಯೇ ಈ ಪ್ರದೇಶ ಸಂಪದ್ಭರಿತವಾಗಿರುವುದು. ಹಾಗಾಗಿಯೇ ಈ ಪಟ್ಟಣಕ್ಕೆ ಶಿರುಗುಪ್ಪ ಎಂಬ ಹೆಸರು ಬಂದಿದೆ. ಸಿರಿ ಎಂದರೆ ಐಶ್ವರ್ಯ, ಗುಪ್ಪೆ ಎಂದರೆ ಗುಂಪು, ರಾಶಿ ಎಂದರ್ಥ. ಈ ಹಿನ್ನೆಲೆಯಲ್ಲಿ ಶಿರುಗುಪ್ಪ ಎಂದರೆ ಐಶ್ವರ್ಯದ ರಾಶಿ ಎಂದರ್ಥ ನೀಡುತ್ತದೆ. ಕ್ರಿ.ಶ. ೧೦೯೧ರ ಶಾಸನದಲ್ಲಿ ಶಿರುಗುಪ್ಪ ತೆಕ್ಕೆಕ್ಕಲ್ಲು ೧೨ಕ್ಕೆ ಸೇರಿಂತೆ ಹೇಳಿದೆ.[1] ಸಿಂಧು ಕುಳಾನ್ವಯಂ ಎಂಬುದರಿಂದ ಶಿರುಗುಪ್ಪ ಹೆಸರು ಉಂಟಾಗಿರಬೇಕು.[2] ಎನ್ನುವ ಕುಂ.ಬಾ.ಸದಾಶಿವಪ್ಪನವರ ಅಭಿಪ್ರಾಯ ಸ್ಪಷ್ಟವಾಗಿರುವುದಿಲ್ಲ.

ನೈಸರ್ಗಿಕವಾಗಿ ಸಂಪದ್ಬರಿತವಾಗಿರುವಂತೆಯೇ ತಾಲೂಕು ಐತಿಹಾಸಿಕವಾಗಿಯೂ ಸಂಮೃದ್ಧವಾಗಿದೆ. ಈ ತಾಲೂಕಿನ ನಿಟ್ಟೂರಿನಲ್ಲಿ ಆದಿ ಹಳೆಯ ಶಿಲಾಯುಗ ಸಂಸ್ಕೃತಿಯ ಉಪಕರಣಗಳು ಬಾಸೆ ನೊಮಿಡಕಸ್ ಪ್ರಾಣಿಯ ಆಸ್ತಿ ಅವಶೇಷ ದೊರೆತಿವೆ.[3] ನಿಟ್ಟೂರು ಹಾಗೂ ಹತ್ತಿರದ ಸುಕ್ರದಪ್ಪ ಬೆಟ್ಟಗಳಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಗೋರಿಗಳು ಪತ್ತೆಯಾಗಿವೆ.[4]ಕೊಂಚಗೇರಿ, ಕೋಟೆಕಲ್ಲು, ದುರ್ಗಹಳ್ಳಿ, ತೆಕ್ಕಲಕೋಟೆ, ನಿಟ್ಟೂರು, ಸನವಾಸಪುರಗಳಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ಉಜ್ಜಿ ನಯಗೊಳಿಸಿದ ಕೊಡಲಿಗಳು, ಮಡಿಕೆಗಳು ಮತ್ತು ನೀಳಗೆರೆಗಳುಳ್ಳ ಮೂಲ ಶಿಲಾಗಚ್ಚಿಗಳು ಕಂಡುಬಂದಿವೆ.[5] ಇನ್ನು ಇತಿಹಾಸ ಆರಂಭ ಯುಗದ ಅವಶೇಷಗಳು ನಡಿವಿ, ಉದೇಗೊಳಂ, ಬಾಗೇವಾಡಿ, ಹಚ್ಚೊಳ್ಳಿ ಮತ್ತು ಹಿರೇಕಲ್ಲುಗಳಲ್ಲಿವೆ.[6] ಹೀಗೆ ಪ್ರಾಗಿತಿಹಾಸ ಕಾಲದ ಮಾನವನ ಬದುಕು ಈ ಪ್ರದೇಶದುದ್ದಕ್ಕೂ ಸಾಗಿ ಪ್ರಾಚೀನತೆಯ ಮಹತ್ವವನ್ನು ಹೆಚ್ಚಿಸಿದೆ.

ಈ ತಾಲೂಕಿನಲ್ಲಿ ಇತಿಹಾಸ ಪೂರ್ವಕಾಲದ ಅವಶೇಷಗಳು ವ್ಯಾಪಕವಾಗಿ ಕಂಡು ಬಂದರೂ ಇತಿಹಾಸ ಕಾಲದ ಶಾಸನಗಳು ದೊರೆತಿದ್ದುದು ಮೌರ್ಯರ ಕಾಲ ದಿಂದೀಚೆಗೆ. ೧೯೭೭ರಲ್ಲಿ ಉದೇಗೊಳ[7] ಮತ್ತು ನಿಟ್ಟೂರು[8] ಸ್ಥಳಗಳಲ್ಲಿ ಬಂಡೆಗಳ ಮೇಲೆ ಬರೆದ ಅಶೋಕನ ಎರಡೆರಡು ಶಾಸನಗಳು ಬೆಳಕಿಗೆ ಬಂದವು. ಇದರೊಂದಿಗೆ ಮೌರ್ಯರ ನೇರ ಆಡಳಿತಕ್ಕೆ ಈ ಪ್ರದೇಶ ಸೇರಿತೆಂಬ ಅಂಶ ಬೆಳಕಿಗೆ ಬರುವುದು. ಈ ಪ್ರದೇಶದ ರಕ್ಷಣೆಗಾಗಿ ಅವರು ಈ ಭಾಗದಲ್ಲಿ ಆ ವೆಳೆಗಾಗಲೇ ಕೋಟೆ ಕಟ್ಟಿಕೊಂಡಿರಬೇಕು. ಬಹು ದೀರ್ಘಾವಧಿ ಕಾಲದ ಅಂತರದಿಂದ ಅವರ ಕೋಟೆಗಳಾವುವು ಈಗ ಉಳಿದುಕೊಂಡಿಲ್ಲ.

ಶಾತವಾಹನರು ಮತ್ತು ಪಲ್ಲವರ ಆಡಳಿತ ವ್ಯಾಪ್ತಿಗೆ ಈ ಪ್ರದೇಶವು ಸೇರಿತ್ತು. ಆದರೆ ಅವರು ಇಲ್ಲಿ ಆಳ್ವಿಕೆ ಮಾಡಿದಂತೆ ಯಾವ ದಾಖಲೆಗಳು ಹೇಳುವುದಿಲ್ಲ. ಬಾದಾಮಿ ಚಾಳುಕ್ಯರ ಯಾವುದೇ ಶಾಸನಗಳಲೀ ಅಥವಾ ಸ್ಮಾರಕಗಳಾಗಲಿ ಇಲ್ಲಿ ಕಂಡುಬರುವುದಿಲ್ಲವಾದರೂ ಹತ್ತಿರದ ಕುರುಗೋಡಿನಲ್ಲಿ ಸತ್ಯಾಶ್ರಯನ ಉಲ್ಲೇಖವಿರುವ ಬಾದಾಮಿ ಚಾಳುಕ್ಯರ ಶಾಸನವು ಕಂಡುಬಂದಿರುವುದರಿಂದ,[9] ಈ ಪ್ರದೇಶವು ಬಾದಾಮಿ ಚಾಳುಕ್ಯರಿಗೆ ಸೇರಿರುವ ಅಂಶ ತಿಳಿಯುವುದು.

ರಾಷ್ಟ್ರಕೂಟರ ಶಾಸನಗಳು ಹಾಗೂ ಸ್ಮಾರಕಬಶೇಷಗಳು ನೆರೆಯ ಬಳ್ಳಾರಿ ತಾಲೂಕಿನ ಕುಡುತಿನಿ[10] ಹಾಗೂ ಕೋಳಗಲ್ಲುಗಳಲ್ಲಿ ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಶಿರುಗುಪ್ಪ ಪ್ರದೇಶವು ಅವರ ಆಳ್ವಿಕೆಯ ವ್ಯಾಪ್ತಿಗೆ ಒಳಪಟ್ಟಿರುವುದರಲ್ಲಿ ಸಂದೇಹವಿಲ್ಲ.

ರಾಷ್ಟ್ರಕೂಟರ ಪಥನಾ ನಂತರ ಈ ಪ್ರದೇಶವು ಕಲ್ಯಾಣ ಚಾಳುಕ್ಯರ ನೇರ ಆಡಳಿತ ವ್ಯಾಪ್ತಿಗೆ ಸೇರಿರುವುದು ಶಾಸನಾಧಾರಗಳಿಂದ ದೃಢವಾಗುತ್ತದೆ. ಇವರ ಶಾಸನಗಳು ತಾಲೂಕಿನ ಕಂಚುಗಾರ ಬೆಳಗಲ್ಲು, ಮಲ್ಲಯ್ಯನ ಗುಡ್ಡ, ಬಲಕುಂದೆಗಳಲ್ಲಿದ್ದು,[11] ದೇವಾಲಯಗಳು ಅಲಬೂರು, ಕುರುವಳ್ಳಿ, ಕೊಂಚಗೇರಿ ತೆಕ್ಕಲಕೋಟೆ, ನಾಗಲಾಪುರ, ಬಾಗೇವಾಡಿ, ರಾರಾವಿ, ರಾವಿಹಾಳ್, ಸಿರಿಗೇರಿ, ಶಿರುಗುಪ್ಪ, ಆಲೂರುಗಳಲ್ಲಿ ಕಂಡುಬಂದಿವೆ.[12] ಹಾಗಾಗಿ ಕಲ್ಯಾಣ ಚಾಳುಕ್ಯರ ಬಹುಮುಖ್ಯ ಕೇಂದ್ರ ಈ ತಾಲೂಕಾಗಿತ್ತು.

ಕಲ್ಯಾಣ ಚಾಳುಕ್ಯರ ಅಧೀನವಾಗಿ ಆಳ್ವಿಕೆ ಮಾಡಿದ ನೊಳಂಬರು ನೊಳಂಬವಾಡಿ ೩೨೦೦೦ ಕ್ಕೆ ಅಧಿಪತಿಗಳಾಗಿದ್ದರು. ನೊಳಂಬವಾಡಿ ಪ್ರಾಂತದ ಕೇಂದ್ರ ಭಾಗವೇ ಶಿರುಗುಪ್ಪ ತಾಲೂಕು. ನೊಳಂಬವಾಡಿ ಪ್ರಾಂತದಲ್ಲಿ ದೊರವದಿ-೭೦, ಕುದಿಪರವಿ-೭೦, ಬಲಕುಂದೆ-೨೦೦, ತೆಕ್ಕೆಲು-೧೨, ಕರವಿಡಿ-೭೦ಗಳು ಸೇರಿದ್ದವು[13] ಬಲಕುಂದೆ ಮತ್ತು ತೆಕ್ಕೆಕಲ್ಲು ಈ ತಾಲೂಕಿನಲ್ಲಿವೆ.[14] ಈ ಕಾಲಾವಧಿಯಲ್ಲಿ ಇಲ್ಲಿ ಕೋಟೆಗಳು ಇದ್ದಿರಬಹುದಾದರೂ ಅವುಗಳ ಅವಶೇಷಗಳಾಗಲೀ ದಾಖಲೆಗಳಾಗಿಲಿ ಉಳಿದಿರುವುದಿಲ್ಲ.

ಈ ತಾಲೂಕು ರಾವಿಹಾಳ್,[15] ಅಗಸೂರು,[16] ಗುಂಡಿಗನೂರು,[17] ಮಲ್ಲಯ್ಯನ ಗುಡ್ಡ[18] ಗಳಲ್ಲಿ ವಿಜಯನಗರ ಶಾಸನಗಳು ಕಂಡುಬಂದಿರುವುದರಿಂದ ಈ ತಾಲೂಕು ಮಲ್ಲಯ್ಯನಗುಡ್ಡ, ತೆಕ್ಕಲಕೋಟೆ, ಶಿರುಗುಪ್ಪ, ಹಳೇಕೋಟೆಗಳಲ್ಲಿ ಕೋಟೆ ಇದ್ದುದು ತಿಳಿದು ಬಂದರು ಈಗ ಉಳಿದಿರುವುದು ತೆಕ್ಕೆಲಕೋಟೆ ಮತ್ತು ಶಿರುಗುಪ್ಪಗಳಲ್ಲಿ ಮಾತ್ರ.

ಶಿರುಗುಪ್ಪ ಪ್ರದೇಶವನ್ನು ಹಂಪೆ ಪಾಳೆಯಗಾರರು, ಸ್ಥಳೀಯ ಪ್ರತಿನಿಧಿಗಳು, ಗೌಡರು ಆಳ್ವಿಕೆ ಮಾಡಿ ಕೋಟೆಗಳನ್ನು ಕಟ್ಟಿಸಿದಂತೆ ಇಲ್ಲಿಯ ಶಾಸನಗಳು ಹೇಳುತ್ತವೆ. ಅಂಥವುಗಳಲ್ಲಿ ಕೆಮ್ಚನಗುಡ್ಡ, ನಡಿವಿ ಕೋಟೆಗಳು ಮುಖ್ಯವಾಗಿವೆ. ಹಾವಿನಾಳು, ಶಿರಗೇರಿ, ಕರೂರುಗಳಲ್ಲಿ ಕೋಟೆಗಳಿದ್ದವೆಂದು ಕೈಫಿಯತ್ತಿನಲ್ಲಿ[19] ಹೇಳಲಾಗಿದೆ.

ಕೆಂಚನಗುಡ್ಡ

ಕೆಂಚನಗುಡ್ಡ ಶಿರುಗುಪ್ಪ ತಾಲೂಕಿನಲ್ಲಿರುವ ಒಂದು ಚಿಕ್ಕ ಹಳ್ಳಿ. ಶಿರುಗುಪ್ಪದಿಂದ ನೈರುತ್ಯ ದಿಕ್ಕಿಗೆ ೬ ಕಿ.ಮೀ. ದೂರದಲ್ಲಿ ತುಂಗಭದ್ರಾ ನದಿಯ ಬಲದಂಡೆಯ ಮೇಲಿದೆ. ಕೆಂಚನಗುಡ್ಡದ ಪರ್ವತ ಶ್ರೇಣಿಯು ದಕ್ಷಿಣಕ್ಕೆ ನಿಟ್ಟೂರು ಉದೇಗೋಳಂ ಮೂಲಕ ತೆಕ್ಕಲ ಕೋಟೆ ಪರ್ವತ ಶ್ರೇಣಿಗೆ ಸೇರುತ್ತದೆ. ನಿಟ್ಟೂರು, ಉದೇಗೊಳಂದಂತೆಯೇ ಬಹು ಪ್ರಾಚೀನವಾದ ನೆಲೆ. ಇದು ಪ್ರಸಿದ್ಧಿಗೆ ಬಂದಿದ್ದು ವಿಜಯನಗರೋತ್ತರ ಕಾಲದಲ್ಲಿ ಕ್ರಿ.ಶ. ೧೪೬೬ರ ದೇವರಾಯನ ಶಾಸನವು ಕೆಂಚನಗುಡ್ಡ ಬಳಿಯ ತುಂಗಭದ್ರಾ ನದಿಗೆ ಅಣೆಕಟ್ಟನ್ನು ಕಟ್ಟಿದಂತೆ ಹೇಳುತ್ತದೆ.[20] ಹಾಗಾಗಿ ವಿಜಯನಗರ ಅರಸರ ನೇರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿರುವುದು ಸ್ಪಷ್ಟವಾಗುತ್ತದೆ.

ಕನ್ನಡ ನಿಘಂಟುಗಳಲ್ಲಿ ಬರುವ ಕಾಂಚನ ಎಂಬುದರ ಶಾಬ್ದಿಕ ಅರ್ಥವು ಬಂಗಾರ, ಪ್ರಕಾಶ, ಕಾಂತಿ ಎಂಬ ಪದಗಳನ್ನು ನಿರ್ದೇಶಿಸುತ್ತಿದ್ದು ಈಗಲೂ ಕೆಂಚನಗುಡ್ಡದ ಸುತ್ತಲೂ ಕಲ್ಲುಗಳು ಪ್ರಕಾಶಮಾನವಾಗಿ ಹೊಳೆಯುವವು. ಹಾಗಾಗಿ ಇಲ್ಲಿರುವ ಬೆಟ್ಟಕ್ಕೆ ಕಾಂಚನಗುಡ್ಡ ಎಂದು ಕರೆದಿರಬಹುದೇ?

ಈ ಸ್ಥಳವನ್ನಾಳುತ್ತಿದ್ದ ಕೆಂಚನಗೌಡನಿಂದಾಗಿ ಈ ಮೇಲಿನ ಕೋಟೆಗೆ ಕೆಂಚನಗುಡ್ಡ ಎಂಬ ಹೆಸರು ಬಂದಿದೆ ಎಂಬ ಅಂಶವು ಗ್ಯಾಸಿಟಿಯರ್ ನಲ್ಲಿದೆ.[21] ಈ ವಿಷಯವನ್ನು ಒಪ್ಪಬಹುದಾದುದಕ್ಕೆ ಈ ಕೆಳಗಿನಂತೆ ಸ್ಪಷ್ಟನೆ ನೀಡಲಾಗಿದೆ.

ಕೆಂಚನಗೌಡ ಎಂಬಾತನು ಮಂಗಾಪುರದ ಭೂಮಿಯೊಳಗೆ ಗುಡ ಹೊಸೂರು ದುರ್ಗವನ್ನು ನಿರ್ಮಿಸಿದಂತೆ ಕ್ರಿ.ಶ. ೧೭೦೮ರ ಶಾಸನವು ಹೇಳುತ್ತದೆ.[22] ಮುದುಕಣ ಗೌಡನು ಶಿರುಗುಪ್ಪ ಸೀಮೆಯ ನಾಡ ಗೌಡಿಕೆಯನ್ನು ಪಡೆದು ಅಲ್ಲಿಯ ಆಡಳಿತವನ್ನು ನೋಡಿ ಕೊಳ್ಳುತ್ತಿದ್ದನು. ಆಗ ಈತನ ಮಗನಾದ ಕೆಂಚನಗೌಡ ಎಂಬಾತನಿಗೆ ಮಂಗಾಪುರ ಗ್ರಾಮವನ್ನು ಉಮ್ಮಳಿಯಾಗಿ ನೀಡಲಾಗಿತ್ತು. ಆಗ ಉಮ್ಮಳಿಯಾಗಿ ದೊರೆತ ಮಂಗಾಪುರ ಮತ್ತದರ ಬೆಟ್ಟದಲ್ಲಿ ಕೆಂಚನಗೌಡನು ಕೋಟೆಯನ್ನು ಕಟ್ಟಿಕೊಂಡು ಆಳ್ವಿಕೆ ಮಾಡಿದನು. ಹಾಗಾಗಿ ಕೆಂಚನಗೌಡನ ಹೆಸರೇ ಆ ಬೆಟ್ಟಕ್ಕೂ ಹಾಗೂ ಗ್ರಾಮಕ್ಕೆ ಬಂದಿದೆಂಬ ಅಂಶ ಗಂಗಾಧರೇಶ್ವರ ದೇವಾಲಯದ ಆವರಣದಲ್ಲಿರುವ ಶಾಸನದಿಂದ ತಿಳಿದುಬರುತ್ತದೆ.[23] ಹಾಗಾಗಿ ಕೆಂಚನಗುಡ್ಡನೆಂಬ ಪಾಳೆಯಗಾರನಿಂದಾಗಿಯೇ ಈ ಗ್ರಾಮಕ್ಕೆ ಕೆಂಚನಗುಡ್ಡ ಎಂಬ ಹೆಸರು ಬಂದಿರುವುದು ಸರಿಯಾಗಿಯೇ ಇದೆ.

ಹೈದರಾಲಿ, ಟಿಪ್ಪುವಿನ ಗಡಿಪ್ರದೇಶವಾಗಿ ಮುಂದೆ ಸ್ವಾತಂತ್ರ್ಯ ಬರುವವರೆಗೂ ಬ್ರಿಟೀಷರ ಆಡಳಿತ ವ್ಯಾಪ್ತಿಗೆ ಈ ಗ್ರಾಮವು ಸೇರುತ್ತದೆ.

ನಿಸರ್ಗದತ್ತವಾದ ಎರಡು ಬೆಟ್ಟಗಳನ್ನು ಬಳಸಿ ಸುತ್ತಲೂ ಕೋಟೆಯನ್ನು ಕಟ್ಟಲಾಗಿದೆ. ಈ ಎರಡು ಬೆಟ್ಟಗಳ ಮಧ್ಯೆ ವಿಶಾಲವಾದ ವಸತಿ ಪ್ರದೇಶವಿರುವುದು. ಇದರ ಸುತ್ತಲೂ ಕೋಟೆ ಗೋಡೆ ಇದೆ. ಹಾಗಾಗಿ ಕೆಳಗೆ ಮತ್ತು ಗುಡ್ಡದ ಮೇಲೆ ಒಟ್ಟು ಎರಡು ಕೋಟೆಗಳಿವೆ ಎಂದು ಗ್ಯಾಸಿಟಿಯರ್ ನಲ್ಲಿ ಹೇಳಲಾಗಿದೆ.[24] ಬೆಟ್ಟದ ತುದಿಯನ್ನು ತಲುಪಲು ಒಂದೇ ಒಂದು ದಾರಿಯಿದೆ. ಈ ದಾರಿ ಇಂದಿನ ಊರಿನಿಂದ ಪಶ್ಚಿಮಕ್ಕೆ ಸಾಗಿ ಕೋಟೆಯ ಮುಖ್ಯ ಬಾಗಿಲನ್ನು ದಾಟಿ ಬೆಟ್ಟಗಳ ಮಧ್ಯದ ಬಯಲನ್ನು ಸೇರುತ್ತದೆ. ಇಲ್ಲಿಂದ ಮುಂದೆ ದಕ್ಷಿಣ ದಿಕ್ಕಿಗೆ ಸಾಗಿ ಎರಡು ಬಾಗಿಲುಗಳನ್ನು ದಾಟಿ ಬೆಟ್ಟದ ತುದಿಯನ್ನು ತಲುಪುತ್ತದೆ. ಈ ದಾರಿಯೂ ಹಿಂದಿನಿಂದಲೂ ಬಳಕೆಯಲ್ಲಿದೆ.

ಈ ಗಿರಿದುರ್ಗವು ಮೂರು ಸುತ್ತುಗಳನ್ನು ಒಳಗೊಂಡಿದ್ದು, ಮೊದಲ ಸುತ್ತು ಎರಡು ಬೆಟ್ಟಗಳು ಹಾಗೂ ವಸತಿ ನೆಲೆಯನ್ನು ಆವರಿಸಿದೆ. ಕೋಟೆಯ ಎರಡನೇ ಸುತ್ತದಲ್ಲಿ ಗಂಗಾಧರೇಶ್ವರ ದೇವಾಲಯ ಹಾಗೂ ಅರ್ಧ ಬೆಟ್ಟವು ಸೇರಿವೆ. ಗಂಗಾಧರೇಶ್ವರ ದೇವಾಲಯವಿರುವ ಬೆಟ್ಟದ ತುದಿಯಲ್ಲಿರುವ ಪಾಳು ಗ್ರಾಮವನ್ನು ಸುತ್ತುವರೆದಿರುವುದೇ ಅಂತಿಮ ಸುತ್ತು. ಕೋಟೆಯ ಹೊರಸುತ್ತಿನ ಗೋಡೆಯ ಆಗ್ನೇಯ ಭಾಗಕ್ಕೆ ಮುಖ್ಯ ಬಾಗಿಲಿದೆ. ಇದು ಸುಮಾರು ೨೦ ಅಡಿ ಎತ್ತರ, ೮ ಅಡಿ ಅಗಲವಾಗಿದೆ. ಬಾಗಿಲು ತೋಳುಗಳು ಸಾದಾ ಕೆತ್ತನೆಯಿಂದ ಇದರ ಲಲಾಟ ಬಿಂಬದ ಕೆಳಗಿನ ಎರಡೂ ಬದಿಗೆ ಇಳಿಬಿದ್ದ ಮೊಗ್ಗುಗಳಿವೆ. ಮುಖ್ಯಬಾಗಿಲಿನ ಬಲಭಾಗಕ್ಕೆ ಚಿಕ್ಕ ಬಾಗಿಲನ್ನು ರಚಿಸಲಾಗಿದೆ. ಮುಖ್ಯ ಬಾಗಿಲನ್ನು ಮುಚ್ಚಿದಾಗ ಉಪಯೋಗಿಸುವುದಕ್ಕಾಗಿ ಚಿಕ್ಕ ಬಾಗಿಲಿರುವುದು. ಈ ಎರಡು ಬಾಗಿಲುಗಳ ಮೇಲೆ ಬಂದೂಕು ಕಿಂಡಿಗಳಿವೆ.

ಮುಖ್ಯ ಬಾಗಿಲಿನ ಮುಂದೆ ಸುಂದರ ಕೆತ್ತನೆಯ ಎರಡು ಶಿಲ್ಪಗಳಿವೆ. ಈ ಶಿಲ್ಪಗಳು ವೀರಮಹಾಸತಿ ಕಲ್ಲು ಮತ್ತು ವೀರಗಲ್ಲು. ವೀರಮಹಾಸತಿ ಕಲ್ಲು ೬ ಅಡಿ ಅಗಲ, ೪ ಅಡಿ ಎತ್ತರವಿದೆ. ಇದರಲ್ಲಿ ವೀರನು ಯುದ್ಧದಲ್ಲಿ ಹೋರಾಡಿ ಮಡಿದ ಸಂಕೇತವಾಗಿ ಕುದುರೆಯ ಮೇಲೆ ಆಯುಧಗಳನ್ನು ಹಿಡಿದು ಕುಳಿತಿದ್ದಾನೆ. ಹಿಂಭಾಗದಲ್ಲಿ ವೀರನ ಹೆಂಡತಿ ಸಹ ಗಮನ ಹೊಂದಿದಂತೆ ಸೂಚಿಸುವ ಸ್ತ್ರೀ ಶಿಲ್ಪವನ್ನು ಕೆತ್ತಲಾಗಿದೆ. ಕೆಂಚನಗುಡ್ಡದ ಪಾಳೆಯಗಾರನ ಶಿಲ್ಪವೇ ಇದಾಗಿರಬಹುದು. ಪಾಳೆಯಗಾರರ ಅವಧಿಯಲ್ಲಿ ಸತಿ ಸಹಗಮನ ಪದ್ಧತಿಯು ಜಾರಿಯಲ್ಲಿದ್ದುದು ಈ ಶಿಲ್ಪದಿಂದ ತಿಳಿಯುವುದು. ವೀರಗಲ್ಲು ೩ ಅಡಿ ಎತ್ತರ ೪ ಅಡಿ ಅಗಲವಾಗಿದೆ. ಇದರಲ್ಲಿ ರಾಜನ ಹೆಂಡತಿ ಕುದುರೆಯ ಮೇಲೆ ಒಂದು ಕೈಯಲ್ಲಿ ಖಡ್ಗ ಹಾಗೂ ಇನ್ನೊಂದು ಕೈಯಿಂದ ಮಗುವನ್ನು ಹಿಡಿದು ಕುಳಿತಿದ್ದಾಳೆ. ಮುಂದೆ ರಾಜನ ಹೆಂಡತಿ ಹಾಗೂ ಮಗುವನ್ನು ಯುದ್ಧಭೂಮಿಯಿಂದ ಕರೆದುಕೊಂಡು ಹೋಗುವಂತೆ ಚಿತ್ರಿಸಲಾಗಿರಬಹುದು.

ಆಗ್ನೇಯದ ಬಾಗಿಲಿಂದ ಒಂದು ದಾರಿ ಗಂಗಾಧರೇಶ್ವರ ದೇವಾಲಯಕ್ಕೆ ಹೋಗುತ್ತದೆ. ಎತ್ತರಕ್ಕೆ ಹೋಗುವ ದಾರಿ ಪೂರ್ವಕ್ಕಿರುವ ಬೆಟ್ಟದ ಮೇಲೆ ಹೋಗುತ್ತದೆ. ಈ ದಾರಿ ಕವಲೋಡೆಯುವ ಮುಂಭಾಗದಲ್ಲಿಯೇ ಪಾಳುಗ್ರಾಮದ ಅವಶೇಷಗಳು, ಕಣಜಗಳು, ಬಾವಿಗಳು, ಸಮಾಧಿಗಳು ಇತ್ಯಾದಿಗಳು ಕಂಡು ಬರುತ್ತವೆ.

ಈ ಪಾಳು ಗ್ರಾಮದಿಂದ ದಕ್ಷಿಣಕ್ಕೆ ಗಂಗಾಧರೇಶ್ವರ ದೇವಾಲಯವಿದೆ. ಈ ದೇವಾಲಯದ ದಕ್ಷಿಣಕ್ಕೆ ಕೋಟೆ ಗೋಡೆಯಲ್ಲಿ ಮೂರನೆಯ ಬಾಗಿಲಿದೆ. ಇದು ಚಿಕ್ಕ ಬಾಗಿಲು, ಒಳಭಾಗದಲ್ಲಿ ಕಣಜಗಳು, ವೃತ್ತಾಕಾರದ ಕೊತ್ತಳಗಳು, ಮನೆಗಳು ಅವಶೇಷಗಳು ಕಂಡು ಬರುತ್ತವೆ. ಇದು ಬಹುರಕ್ಷಿತ ಪ್ರದೇಶವಾದ್ದರಿಂದ ಪ್ರಾಯಶ ರಾಜಪರಿವಾರದವರು ಇಲ್ಲಿದ್ದಿರಬಹುದು. ಇದರ ಪಶ್ಚಿಮಕ್ಕೆ ಚೌಕಾಕಾರದ ಕಡೆಗಾಪ್ಪ (citadel) ಇದೆ. ದಕ್ಷಿಣದ ಕೋಟೆಗೋಡೆಯಲ್ಲಿ ಬಾಗಿಲೊಂದಿದೆ. ಇದು ನೇರ‍ವಾಗಿ ನದಿಗೆ ಪ್ರವೇಶವನ್ನು ಕೊಡುತ್ತದೆ.

ಈ ಬೆಟ್ಟದ ತುದಿಯನ್ನು ತಲುಪಲು ಸಾಧ್ಯವಾಗದಂತೆ ಪಶ್ಚಿಮ, ದಕ್ಷಿಣ ದಿಕ್ಕುಗಳಿಗೆ ತುಂಗಭದ್ರಾ ನದಿ, ಉತ್ತರ ಮತ್ತು ಪೂರ್ವ ದಿಕ್ಕುಗಳಿಗೆ ಕೋಟೆಯ ಭದ್ರವಾದ ಅನೇಕ ಸುತ್ತಗಳಿವೆ.

ಕೋಟೆಯನ್ನು ಮಧ್ಯಮಗಾತ್ರದ ಕಲ್ಲುಗಳಿಂದ ಕಟ್ಟಲಾಗಿದೆ. ಕೆಲವು ಕಡೆ ಗಾರೆಯನ್ನು ಬಳಸದೆ ಮಣ್ಣಿನಿಂದಲೇ ಕಟ್ಟಿರುವರು. ಕೋಟೆ ಗೋಡೆಯುದ್ಧಕ್ಕೂ ಬಂದೂಕು ಕಿಂಡಿಗಳಿವೆ. ಕೋಟೆಯ ಆಯಕಟ್ಟಿನ ಸ್ಥಳಗಳಲ್ಲಿ ವೃತ್ತಾಕಾರ ಹಾಗೂ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಕೆಲವು ನಿಸರ್ಗ ನಿರ್ಮಿತ ಬಂಡೆಗಳನ್ನೆ ಕೊತ್ತಳಗಳನ್ನಾಗಿ ಮಾಡಿಕೊಳ್ಳಲಾಗಿದೆ. ಇವು ಕೋಟೆಗೋಡೆ ಭದ್ರತೆ ಜೊತೆ ಶತ್ರುಗಳೊಡನೆ ಹೋರಾಡಲು ಅನುಕೂಲವಾಗಿದ್ದವು.

ಕೋಟೆಯ ಕೆಳಭಾಗದ ಮುಂದಕ್ಕೆ ಸಮಾಧಿ ಕಟ್ಟಡಗಳು ತುಲಾಭಾರ ಕಂಬಗಳಿವೆ. ಅಲ್ಲಿರುವ ಸಮಾಧಿ ಕಟ್ಟಡಗಳು ಕೆಂಚನಗೌಡ ಮತ್ತು ಪರಿವಾರದವು ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬರುವ ಅಂಶ.[25]

ಕೆಂಚನಗುಡ್ಡದ ಕೋಟೆಯೊಳಗೆ ಗಂಗಾಧರೇಶ್ವರ, ಆಂಜನೇಯ ದೇವಾಲಯಗಳು, ಮಸೀದಿ ಹಾಗೂ ಮನೆಯ ಕಟ್ಟಡಾವಶೇಷಗಳಿವೆ.

ಗಂಗಾಧರೇಶ್ವರ ದೇವಾಲಯ: ಕೋಟೆಯ ಎರಡನೇ ಸುತ್ತಿನ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿರುವ ಪಂಚಕೂಟ ದೇವಾಲಯವಿದು. ಇದು ಐದು ಗರ್ಭಗೃಹಗಳು, ಸಭಾಮಂಟಪವನ್ನು ಹೊಂದಿದೆ. ಮುಖ್ಯ ಗರ್ಭಗೃಹವು ಮಾತ್ರ ಅಂತರಾಳವನ್ನು ಹೊಂದಿದೆ. ಪ್ರಧಾನ ಗರ್ಭಗೃಹದ ಎಡಬದಿಗಳಲ್ಲಿರುವ ಗರ್ಭಗೃಹವು ಒಂದು ಪೂರ್ವಕ್ಕೆ ಇನ್ನೊಂದು ದಕ್ಷಿಣಕ್ಕೆ ಮುಖ ಮಾಡಿವೆ. ಪ್ರಮುಖ ಗರ್ಭಗೃಹದಲ್ಲಿ ಮಾತ್ರ ಶಿವಲಿಂಗವಿದೆ. ಉಳಿದ ಗರ್ಭಗೃಹಗಳಲ್ಲಿ ಯಾವುದೇ ವಿಗ್ರಹಗಳಿಲ್ಲ. ಈ ಗರ್ಭಗೃಹದ ಬಾಗಿಕುವಾಡದಲ್ಲಿ ಶೈವ ದ್ವಾರಪಾಲಕರು, ಅರೆ ಗಂಬಗಳಿದ್ದು, ಲಲಾಟಬಿಂಬದಲ್ಲಿ ಗಜಲಕ್ಷ್ಮಿಯನ್ನು ಕೆತ್ತಲಾಗಿದೆ.

ಈ ದೇವಾಲಯ ಹದಿನಾರು ಕಂಬಗಳುಳ್ಳ ವಿಶಾಲ ತೆರೆದ ಸಭಾಮಂಟಪವನ್ನು ಹೊಂದಿದೆ. ಈ ಕಂಬಗಳು ಚಚ್ಚೌಳ ಹಾಗೂ ಅಷ್ಟಮುಖಗಳನ್ನು ಹೊಂದಿವೆ. ಮಧ್ಯಭಾಗದ ಗರ್ಭಗೃಹಗಳ ಮೇಲೆಯೂ ದ್ರಾವಿಡ ಶೈಲಿಯ ಶಿಖರಗಳನ್ನು ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿರುವರು. ದೇಗುಲದ ಮಧ್ಯದ ಗರ್ಭಗೃಹಕ್ಕೆ ಪ್ರದಕ್ಷಿಣೆಯ ಸಲುವಾಗಿ ವಿಶಾಲ ಸ್ಥಳವನ್ನು ಬಿಟ್ಟು ಮತ್ತೊಂದು ಗೋಡೆಯನ್ನು ಸುತ್ತಲೂ ಕಟ್ಟಲಾಗಿದೆ.

ದೇವಾಲಯಕ್ಕೆ ವಿಶಾಲವಾದ ಪ್ರಾಕಾರ ಗೋಡೆಯಿದ್ದು, ಎತ್ತರಕ್ಕೆ ದ್ವಾರಬಾಗಿಲು ಇದೆ. ಈ ಪ್ರಕಾರ ಗೋಡೆಯಲ್ಲಿಯೇ ಕ್ರಿ.ಶ. ೧೭೦೮ರ ಕೆಂಚನಗೌಡನ ಶಾಸನವಿರುವುದು. ಈ ದೇವಾಲಯದ ಲಕ್ಷಣಗಳು ಸಹ ಸರಿಸುಮಾರು ಇದೇ ಅವಧಿಯನ್ನು ಹೋಲುತ್ತವೆ.

ಆಂಜನೇಯ ದೇವಾಲಯ ಇದು ಕೋಟೆಯ ಮುಂಭಾಗದಲ್ಲಿದ್ದು ಪೂರ್ವಾಭಿಮುಖವಾಗಿದೆ. ಕಣಶಿಲೆಯನ್ನು ಬಳಸಿ ಕಟ್ಟಲಾದ ಈ ದೇಗುಲವು ಗರ್ಭಗೃಹ, ಸಭಾಮಂಟಪ ದೀಪಸ್ತಂಭವನ್ನು ಹೊಂದಿದೆ. ಗರ್ಭಗೃಹದ ಸುತ್ತಲೂ ಪ್ರದಕ್ಷಿಣೆ ಹಾಕಲು ಅನುಕೂಲವಾಗುವಂತೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಹದಿನೈದು ಅಡಿ ಎತ್ತರದ ದೀಪಸ್ತಂಭವಿದೆ. ಗರ್ಭಗೃಹದಲ್ಲಿ ಎರಡುವರೆ ಅಡಿ ಎತ್ತರದ ಆಂಜನೇಯನ ಉಬ್ಬುಕೆತ್ತನೆಯಿದೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳನ್ನು ಆಯತಾಕಾರದ ಕಲ್ಲುಗಳಿಂದ ಕಟ್ಟಲಾಗಿರುವುದರಿಂದ ಯಾವುದೇ ಅಲಂಕರಣೆ ಇರುವುದಿಲ್ಲ. ಈ ದೇವಾಲಯವು ಪಾಳೆಯಗಾರರ ಅವಧಿಯಲ್ಲಿಯೇ ನಿರ್ಮಾಣಗೊಂಡಿರುವ ಎಲ್ಲಾ ಲಕ್ಷಣಗಳಿವೆ.

ತೆಕ್ಕಲಕೋಟೆ

ತೆಕ್ಕಲಕೋಟೆಯು ಬಳ್ಳಾರಿಯಿಂದ ಶಿರುಗುಪ್ಪ ರಸ್ತೆಯಲ್ಲಿ ಉತ್ತರ ದಿಕ್ಕಿಗೆ ಸುಮಾರು ೪೩ ಕಿ.ಮೀ ದೂರದಲ್ಲಿದೆ. ಈ ಪ್ರದೇಶ ತುಂಬಾ ಪ್ರಾಚೀನವಾದುದು. ಇಲ್ಲಿ ನೂತನ ಹಾಗೂ ತಾಮ್ರ ಶಿಲಾಯುಗ ಸಂಸ್ಕೃತಿಗಳ ವಾಸ್ತವ್ಯದ ನೆಲೆಗಳು ವಿವಿಧ ಬಗೆಯ ಉಪಕರಣಗಳು ಮತ್ತು ವರ್ಣಚಿತ್ರಗಳು ಕಂಡುಬಂದಿವೆ. ಈ ಗ್ರಾಮವನ್ನು ಪ್ರಾಚೀನ ಶಾಸನಗಳು ತೆಕ್ಕೆಕಲ್ಲು ಎಂದು ಕರೆದಿದೆ. ತೆಕ್ಕಕಲ್ಲು ಇದು ನಿಸರ್ಗವಾಚಿ. ತೆಕ್ಕೆ ಎಂದರೆ ಅಧಿಕ, ಸುರಳಿ + ಕಲ್ಲುತೆಕ್ಕಕಲ್ಲು ತೆಕ್ಕಲ್ಲು ತೆಕ್ಕಲಕೋಟೆ ಆಗಿದೆ. ಈ ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಸುರಳೀಯಾಕರಾದ ಅಧಿಕ ಸಂಖ್ಯೆಯ ಕಲ್ಲುಗಳು ಪರಸ್ಪರ ತಬ್ಬಿಕೊಂಡಂತಿವೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರದೇಶಕ್ಕೆ ತೆಕ್ಕಕಲ್ಲು ಎಂದಿರಬಹುದು. ಕ್ರಿ.ಶ. ೧೭೦೧ರ ಶಾಸನದಲ್ಲಿ ತೆಕ್ಕಲಕೋಟೆ ಎಂದಿದೆ. ತೆಕ್ಕಲಕೋಟೆಯು ಹಿಂದೆಯೇ ತೆಕ್ಕೆಕಲ್ಲು ಹನ್ನೆರಡು ಮುಖ್ಯ ಪಟ್ಟಣವಾಗಿತ್ತು. ನೊಳಂಬವಾಡಿ ಮೂವತ್ತೆರಡು ಸಾವಿರವೆನ್ನುವುದು ಬಹುದೊಡ್ಡ ಪ್ರಾಂತ. ಇದರಲ್ಲಿ ಬಲಕುಂದೆ ಮೂರುನೂರು ಒಂದು ವಿಭಾಗವಾದರೆ ತೆಕ್ಕೆಕಲ್ಲು ಉಪವಿಭಾಗಕೇಂದ್ರ. ಇದರ ಉಲ್ಲೇಖಗಳು ಶಿರುಗುಪ್ಪೆ ಮತ್ತು ಸಾಲಕುಂದೆ ಶಾಸನಗಳಲ್ಲಿ ಬರುತ್ತದೆ. ಶಿರುಗುಪ್ಪ ಶಾಸನವು ಬಲಕುಂದ ಮೂರುನೂರರ ಬಳಿಯ ತೆಕ್ಕೆಕಲ್ಲು ಪನ್ನೆರಡರೊಳಗನ ಭತ್ತಗ್ರಾಮ ಶಿರುಗುಪ್ಪೆ… ರಕಳ ನೂರಂತಟು ಮೂರೂರುಗಳನ್ನು ಉಲ್ಲೇಖಿಸಿದೆ. ಇವುಗಳೊಂದಿಗೆ ಸಿನ್ದವೂರು, ಬಾಗೇವಾಡಿ, ರಾರಾವಿ, ಬಗ್ಗೂರು, ಕೊತ್ತಲಚಿಂತೆ, ಅಗ್ರಹಾರ, ಕಂಚಗಾರ ಬೆಳಗಲು, ಕಲ್ಲುಕುಂಟೆ ಮತ್ತು ಬಲಕುಂದೆ ಗ್ರಾಮಗಳು ಸೇರಿ ಹನ್ನೆರಡು ಹಳ್ಳಿಗಳಾಗುತ್ತವೆ. ತೆಕ್ಕಲಕೋಟೆಯು ಪ್ರಾಚೀನ ಕಾಲದಿಂದಲೂ ಆಸ್ತಿತ್ವದಲ್ಲಿದ್ದು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಮಹತ್ವ ಪಡೆದುಕೊಂಡು ಇಂದಿಗೂ ತನ್ನ ಇರುವಿಕೆಯನ್ನು ಗುರುತಿಸಿಕೊಂಡಿದೆ. ಇದಕ್ಕೆ ಉದಾಹರಣೆಗಳಾಗಿ ಪ್ರಾಚೀನ ದೇವಮಂದಿರಗಳು, ಕೋಟೆ-ಕೊತ್ತಳಗಳು ಉಳಿದುಕೊಂಡಿವೆ.

ತೆಕ್ಕಲಕೋಟೆ ಗ್ರಾಮದ ಮಧ್ಯದಲ್ಲಿ ಕೋಟೆಯಿದೆ. ಇದು ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಆವರಿಸಿದ್ದು, ಚೌಕಾಕಾರವಾಗಿದೆ. ಮಾನಸಾರ ಗ್ರಂಥದಲ್ಲಿ ಚೌಕಾಕಾರದ ವಿನ್ಯಾಸದ ಕೋಟೆಗೆ ಪದ್ಮಕ ಎನ್ನಲಾಗಿದ್ದರೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ದೀರ್ಘಾಚತುರಸ್ರದಿರುವುದು ನೆಲದ ಮೇಲೆ ಕಟ್ಟಿರುವ ಈ ಕೋಟೆಯ ಸುತ್ತಲೂ ಆಳವಾದ ಕಂದಕವಿದ್ದ ಬಗ್ಗೆ ಗುರುತುಗಳಿವೆ. ಕೋಟೆಯ ನಾಲ್ಕೂ ಮೂಲೆಗೂ ವೃತ್ತಾಕಾರದ ಕೊತ್ತಳಗಳಿವೆ. ಇವು ಕೋಟೆ ಗೋಡೆಗಿಂತ ಎತ್ತರವಾಗಿದ್ದು, ಶಸ್ತ್ರಗಳ ಸಹಿತ ಮೇಲೆರಲು ಮೆಟ್ಟಿಲುಗಳನ್ನು ರಚಿಸಲಾಗಿದೆ. ಪ್ರತಿ ಕೊತ್ತಳಕ್ಕೂ ಸುಮಾರು ನೂರು ಮೀಟರ್ ಅಂತರವಿದೆ. ಕೋಟೆ ಗೋಡೆಯು ಸುತ್ತಲೂ ಸುಸ್ಥಿತಿಯಲ್ಲಿದೆ. ಎತ್ತರದ ಗೋಡೆಯ ಮಧ್ಯದಲ್ಲಿ ಆಯಾತಾಕಾರದ ಮುಂಚಾಚಿದ ಮತ್ತೊಂದು ಗೋಡೆಯಿದೆ. ಇದರ ಮಧ್ಯದಲ್ಲಿ ಮುಖ್ಯಬಾಗಿಲನ್ನು ನಿರ್ಮಿಸಲಾಗಿದೆ. ಈ ಬಾಗಿಲು ೨೦ ಅಡಿ ಎತ್ತರ, ೬ ಅಡಿ ಅಗಲವಾಗಿದೆ. ಮೇಲ್ಭಾಗದಲ್ಲಿ ಕಮಾನಿನಾಕೃತಿ. ಇದರ ಕೆಳ ಇಕ್ಕೆಲಗಳಲ್ಲಿ ಇಳಿ ಬಿದ್ದ ಮೊಗ್ಗುಗಳಿವೆ. ಬಾಗಿಲು ಬಲಭಾಗಕ್ಕೆ ಉಪಬಾಗಿಲನ್ನು ಜೋಡಿಸಲಾಗಿದೆ. ಬಾಗಿಲು ಮತ್ತು ಉಪಬಾಗಿಲುಗಳಿರುವ ಉಂಚಾಚಿದ ಗೋಡೆಯ ಮಧ್ಯದಲ್ಲಿ ಬಂದೂಕು ಕಿಂಡಿಗಳು, ಮೇಲ್ತುದಿಯಲ್ಲಿ ಕೋಟೆ ತೆನೆಗಳನ್ನು ರಚಿಸಲಾಗಿದೆ. ಕೋಟೆಯೊಳಗೆ ನೈರುತ್ಯ ದಿಕ್ಕಿನಲ್ಲಿ ಚಿಕ್ಕ ದೇಗುಲವಿದೆ. ಇದರಲ್ಲಿ ಯಾವುದೇ ಮೂರ್ತಿಗಳಿಲ್ಲ. ಮಧ್ಯದಲ್ಲಿ ನಾಲ್ಕಾರು ಬಾವಿಗಳಿದ್ದವೆಂದು ಸ್ಥಳೀಯರು ಹೇಳುತ್ತಾರೆ. ಪ್ರಸ್ತುತ ಎರಡು ಬಾವಿಗಳು ಮಾತ್ರ ಉಳಿದಿವೆ. ಇತ್ತೀಚಿಗೆ ಸರಕಾರವು ಬಾಲಕೀಯರ ಪ್ರೌಢಶಾಲೆಯೊಂದನ್ನು ಕೋಟೆಯ ಮಧ್ಯದಲ್ಲಿ ನಿರ್ಮಿಸಿರುವುದರಿಂದ ಕೋಟೆಯ ಅವಶೇಷಗಳಿಗೆ ರಕ್ಷಣೆ ಸಿಕ್ಕಂತಾಗಿದೆ. ಇಲ್ಲಿ ಶಾಲೆ ಇಲ್ಲದಿದ್ದರೆ ಸಾರ್ವಜನಿಕ ಶೌಚಾಲಯವೋ ಮತ್ತು ದನಕರುಗಳ ತಂಗುದಾಣವೋ ಆಗಿರುತ್ತಿತ್ತು. ಇಂತಹ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ.

ಕೋಟೆಯನ್ನು ಕೆತ್ತನೆಯ ಮಾಡಿದ ಮಧ್ಯಮ ಗಾತ್ರದ ಕಲ್ಲುಗಳಿಂದ ಕಟ್ಟಿದೆ. ಕಲ್ಲುಗಳ ಮಧ್ಯದಲ್ಲಿ ಸಂಧಿ ಇಲ್ಲದಂತೆ ಒಂದು ಕಲ್ಲು ಮತ್ತೊಂದಕ್ಕೆ ಹೊಂದಿಕೊಳ್ಳುವಂತೆ ಅಂಚುಗಳನ್ನು ಕೆತ್ತಿ ಜೋಡಿಸಿದೆ. ಕಲ್ಲುಗಳ ಮಧ್ಯದಲ್ಲಿ ಯಾವುದೇ ಲೇಪನವಿಲ್ಲ. ಸುಮಾರು ೨ ಮೀಟರ ಎತ್ತರವಿರುವ ಕೋಟೆಯ ಮೇಲಿನ ಕಲ್ಲಿನ ಸಾಲು ಸ್ವಲ್ಪ ಮುಂದೆ ಚಾಚಿಕೊಂಡಿದೆ. ಕೋಟೆಯ ಅಗಲ ಸುಮಾರು ೫ ಅಡಿಗಳು. ಇದರ ಮೇಲಿದ್ದ ಗಾರೆಮಣ್ಣಿನ ಕುಂಬೆಯ ಅವಶೇಷಗಳು ಕಾಣುತ್ತವೆ. ಕೋಟೆಯ ಹೊರಮೈಯನ್ನು ದಪ್ಪ ಮತ್ತು ಮಧ್ಯಮ ಕಲ್ಲುಗಳಿಂದ ಹಾಗೂ ಒಳಮೈಯನ್ನು ಚಿಕ್ಕ ಕಲ್ಲುಗಳಿಂದ ಮಧ್ಯದಲ್ಲಿ ಮಣ್ಣು ತುಂಬಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಗ್ರಾಮಕ್ಕೆ ಕೋಟೆ ನಿರ್ಮಾಣ ಪೂರ್ವದಲ್ಲಿ ತೆಕ್ಕೆಕಲ್ಲು ಎಂದಿದ್ದು, ಕೋಟೆಯ ನಿರ್ಮಾಣದ ನಂತರ ತೆಕ್ಕಲಕೋಟೆ ಎಂದು ಕರೆಯುತ್ತಿರುವುದು ಶಾಸನಾಧಾರಗಳಿಂದ ಸ್ಪಷ್ಟವಾಗುತ್ತಿದೆ. ಹಾಗಾದರೆ ತೆಕ್ಕಲಕೋಟೆ ಎಂದು ನಿರ್ಮಾಣವಾಯಿತು? ಯಾರು ನಿರ್ಮಿಸಿದರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ನಿಕರವಾದ ಕಾಲ ಹಾಗೂ ನಿರ್ಮಾಪಕರನ್ನು ಗುರುತಿಸುವುದು ಕಠಿಣತರವಾದ ಕೆಲಸ. ಆದರೂ ಕೂಡ ಕೆಲವಾರು ಶಾಸನಾಧಾರಗಳಿಂದ ಈ ಕೆಳಗಿನಂತೆ ಹೇಳಬಹುದು.

ಒಂದನೆಯದಾಗಿ ಇಲ್ಲಿ ದೊರೆತಿರುವ ಎಲ್ಲಾ ಕಲ್ಯಾಣ ಚಾಳುಕ್ಯರ ಶಾಸನಗಳನ್ನು ಗಮನಿಸಲಾಗಿದೆ, ಕ್ರಿ.ಶ. ೧೧೦೨ ರ ವರೆಗಿನ ಶಾಸನಗಳಲ್ಲಿ ತೆಕ್ಕೆಕಲ್ಲು ಎಂದು ಉಲ್ಲೇಖಿತವಾಗಿದ್ದು, ಕ್ರಿ.ಶ ೧೫೩೯ರ ಮಲ್ಲಯ್ಯನಗುಡ್ಡದ ಶಾಸನಗಳಿಂದ ಈಚೆಗೆ ಹೈದರಾಲಿ, ಟಿಪ್ಪುವಿನ ಶಾಸನಗಳವರೆಗೂ ತೆಕ್ಕಲಕೋಟೆ ಎಂಬ ಹೆಸರು ಉಕ್ತವಾಗಿದೆ.

ಎರಡನೆಯದಾಗಿ ಬಿಜಾಪುರ ಸುಲ್ತಾನರ ಪ್ರತಿನಿಧಿಗಳಾಗಿ ಇಲ್ಲಿ ಆಳ್ವಿಕೆ ಮಾಡಿದ ಹಂಡೆ ಪಾಳೆಯಗಾರರ ಬಾಲದ ಹನುಮಪ್ಪಬಾಯಕನೇ ಕ್ರಿ.ಶ. ೧೫೬೭ರ ನಂತರ ತೆಕ್ಕಲಕೋಟೆ ಕೋಟೆಯನ್ನು ಕಟ್ಟಿಸಿದನೆಂದು ಕೈಫಿಯತ್ತು ಹೇಳುತ್ತದೆ. ಇದೇ ಅಂಶವನ್ನು ಗ್ಯಾಸೆಟಿಯರ್ ನಲ್ಲಿಯೂ ವ್ಯಕ್ತಪಡಿಸಲಾಗಿದೆ.

ಈ ಮೇಲಿನ ಅಂಶಗಳನ್ನು ಗಮನಿಕೊಂಡಲ್ಲಿ, ತೆಕ್ಕೆಕಲ್ಲು, ಬಲ್ಲಕುನ್ದೆ ನಾಡಿನಲ್ಲಿ ಬರುವ ಮುಖ್ಯ ಉಪವಿಭಾಗವಾಗಿದ್ದರಿಂದ ಆಗಲೇ ಅಲ್ಲಿ ಕೋಟೆ ಇದ್ದಿರಬಹುದು. ಕ್ರಿ.ಶ ೧೧೦೨ರ ನಂತರ ಹಾಗೂ ಕ್ರಿ.ಶ. ೧೫೩೯ರ ಮಧ್ಯದ ಅವಧಿಯಲ್ಲೇ ಮತ್ತೊಮ್ಮೆ ಕೋಟೆಯನ್ನು ಕಟ್ಟಿಕೊಂಡಿರಬೇಕು. ನಂತರ ಬಂದ ಹಂಡೆ ಪಾಳೆಯಗಾರರು ಈ ಕೋಟೆಯನ್ನು ಜೀರ್ಣೋದ್ಧಾರ ಮಾಡಿರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ೧೬ನೆಯ ಶತಮಾನದಲ್ಲಿ ಆ ಕೋಟೆ ನಿರ್ಮಾಣವದಂತೆ ಅದರ ಲಕ್ಷಣಗಳು ತಿಳಿಸುತ್ತವೆ.

ಈ ಕೋಟೆಯನ್ನು ಕ್ರಮವಾಗಿ ಹಂಡೆ ಪಾಳೆಯಗಾರರು, ಅದೋನಿಯ ಹಸಮಲ್ಲಾ ಖಾನ್, ಕ್ರಿ.ಶ. ೧೭೬೯ರಲ್ಲಿ ಪೀರ್ ಮೋಹಿದ್ದಿನ್, ಕ್ರಿ.ಶ. ೧೭೭೫ರಲ್ಲಿ ಹೈದರಾಲಿ, ಕ್ರಿ.ಶ.೧೮೦೦ರ ನಂತರ ಬ್ರಿಟಿಷರು ಆಳಿದರೆಂದು ತಿಳಿದುಬರುತ್ತದೆ.

ನಡಿವಿ

ನಡಿವಿ ಶಿರುಗುಪ್ಪ ತಾಲೀಕಿನಲ್ಲಿರುವ ಒಂದು ಚಿಕ್ಕ ಗ್ರಾಮ. ಶಿರುಗುಪ್ಪದಿಂದ ರ್ಗ್ರಾಮದ ಬಳಿ ಇತಿಹಾಸ ಆರಂಭಯುಗದ ಹಂತದ ಅವಶೇಷಗಳು ಕಂಡುಬಂದಿವೆ.[26] ತುಂಗಾಭದ್ರಾ ನದಿಯು U ಆಕಾರದಲ್ಲಿ ಹರಿದು ನಡಿವಿ ಪ್ರದೇಶವನ್ನು ಮೂರು ಕಡೆಯಿಂದ ಸುತ್ತುವರಿದಿದೆ. ನದಿಯ ನಡು (ಮಧ್ಯ) ಭಾಗದಲ್ಲಿರುವುದರಿಂದ ಈ ಗ್ರಾಮಕ್ಕೆ “ನಡಿವಿ” ಎಂಬ ಹೆಸರು ಬಂದಿರಬಹುದು. ನಡಿವಿ ಗ್ರಾಮ ಈಗ ಎರಡು ಭಾಗವಾಗಿದೆ. ಮೂಲನೆಲೆಯಲ್ಲಿರುವುದು ಹಳೇಗ್ರಾಮ ಅಲ್ಲಿಂದ ಆಗ್ನೇಯ ದಿಕ್ಕಿಗೆ ೧ ಕಿ.ಮೀ. ದೂರದಲ್ಲಿ ಹೊಸ ಗ್ರಾಮವಿದೆ. ತುಂಗಾಭದ್ರಾ ನದಿಯು ಪ್ರವಾಹಕ್ಕೆ ತುತ್ತಾದವರು ತಮ್ಮ ಮನೆಗಳನ್ನು ಹಳೆಯ ಗ್ರಾಮದಿಂದ ಹೊಸ ಗ್ರಾಮಕ್ಕೆ ವರ್ಗಾಯಿಸಿಕೊಂಡಿರುವರೆಂದು ಸ್ಥಳೀಯರು ಹೇಳುತ್ತಾರೆ.

ಕೋಟೆಯ ಸುತ್ತಲೂ ತುಂಗಾಭದ್ರಾ ನದಿ ಸುತ್ತುವರಿದಿರುವುದರಿಂದ ಇದು ಎಂದು ಹೇಳುವರು. ಜಲದುರ್ಗವಾಗಿತ್ತೆಂದು ಹೇಳುವರು. ಹಾಗಿದಲ್ಲಿ ಬಳ್ಳಾರ ಜಿಲ್ಲೆಯಲ್ಲಿ ಕಂಡುಬರುವ ಮೊದಲ ಜಲದುರ್ಗವಿದು ಎಂದು ಹೇಳಬಹುದು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಇಂಥಹ ಜಲದುರ್ಗಗಳನ್ನು ಔದಕಗಳೆಂದು ಕರೆದಿದ್ದಾನೆ.[27] ವ್ಯವಸ್ಥಿತವಾಗಿ ನಿರ್ಮಾಣಗೊಂಡು ಸುಸ್ಥಿತಿಯಲ್ಲಿರುವ ಇಲ್ಲಿನ ಕೋಟೆ ಅವಶೇಷಗಳು ಬೆಳಕಿಗೆ ಬಾರದ ಕೋಟೆಗಳ ಸಾಲಿಗೆ ಸೇರಿದೆ ಎಂದೇ ಹೇಳಬೇಕು.

ಇತಿಹಾಸ ಆರಂಭಯುಗದಿಂದ ಹೊಯ್ಸಳರ ಆಳ್ವಿಕೆಯವರೆಗೂ ಈ ಗ್ರಾಮ ಅಸ್ತಿತ್ವ ಅಲ್ಲಿಯ ಕೋಟೆ ಕೊತ್ತಳಗಳಿಂದ ತಿಳಿದುಬರುವುದು.

ತುಂಗಾಭದ್ರಾ ನದಿಯು U ಆಕಾರದಲ್ಲಿ ಹರಿಯುವ ಸ್ವಾಭಾವಿಕ ರಕ್ಷಣಾತ್ಮಕ ರಚನೆಯನ್ನು ಪರಿಗಣಿಸಿ ಇಲ್ಲಿ ಊರನ್ನು ಕಟ್ಟಲಾಗಿದೆ. ನಂತರ ಈ ಊರಿನ ಆಯಕಟ್ಟಿನ ಸ್ಥಳದಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ. ಇಲ್ಲಿ ನದಿಯು ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಅರ್ಥ ವರ್ತುಲಾಕಾರದಲ್ಲಿ ಸುತ್ತುವರೆದ ಕೋಟೆಯನ್ನು ರಕ್ಷಿಸುತ್ತದೆ.

ನಡಿವಿ ಕೋಟೆ ಚೌಕಾಕಾರವಾಗಿ ಮುಂಚಾಚಿದ ಚಿಕ್ಕಕೋಟೆ, ಇದನ್ನು ಕೆತ್ತಿ ನಯ ಮಾಡಿದ ಮಧ್ಯಮ ಮತ್ತು ಚಿಕ್ಕಗಾತ್ರದ ಕಲ್ಲುಗಳಿಂದ ಕಟ್ಟಿದೆ. ಕಲ್ಲುಗಳ ಮಧ್ಯದಲ್ಲಿ ಸಂದಿ ಇಲ್ಲದಂತೆ ಒಂದು ಕಲ್ಲು ಮತ್ತೊಂದಕ್ಕೆ ಹೊಂದಿಕೊಳ್ಳುವಂತೆ ಅಂಚುಗಳನ್ನು ಕೆತ್ತಿ ಜೋಡಿಸಿದೆ. ಕಲ್ಲುಗಳ ಮಧ್ಯದಲ್ಲಿ ಯಾವುದೇ ಗಾರೆಯ ಲೇಪನವಿಲ್ಲ. ಸುಮಾರು ೨೫ ಅಡಿ ಎತ್ತರವಿರುವ ಕೋಟೆಯು ಮೇಲಿನ ಕಲ್ಲಿನ ಸಾಲು ಸ್ವಲ್ಪ ಮುಂದೆ ಚಾಚಿಕೊಂಡಿದೆ. ಕೋಟೆಯು ಅಗಲ ಸುಮಾರು ೫ ಅಡಿಗಳು. ಇದರ ಮೇಲಿದ್ದ ಮಣ್ಣಿನ ಕುಂಬೆಯ ಅವಶೇಷಗಳು ಕಾಣುತ್ತದೆ. ಕೋಟೆಯ ಹೊರ ಮತ್ತು ಒಳಮೈಗಳನ್ನು ಒಂದೇ ಬಗೆಯ ಕಲ್ಲುಗಳಿಂದ ಮಧ್ಯದಲ್ಲಿ ಮಣ್ಣು ತುಂಬಿ ಕಟ್ಟಿದೆ. ಕೋಟೆ ಗೋಡೆಯು ಈಗಲೂ ಸುಸ್ಥಿತಿಯಲ್ಲಿದೆ. ಇದರ ಆಯಕಟ್ಟಿನ ಸ್ಥಳಗಳಲ್ಲಿ ಏಳು ಕೊತ್ತಳಗಳನ್ನು ರಚಿಸಲಾಗಿದೆ. ಕೋಟೆ ವೃತ್ತಾಕಾರದಲ್ಲಿ ಕಟ್ಟಲಾಗಿದೆ. ಇವು ಕೋಟೆ ಗೋಡೆಯಲ್ಲಿ ಮುಂಚಾಚಿಕೊಂಡಿವೆ. ಯುದ್ಧದ ಸಮಯದಲ್ಲಿ ಹೆಚ್ಚು ಸೈನಿಕರು ನಿಲ್ಲಲ್ಲು ಸಹ ಕೊತ್ತಳಗಳು ಉಪಯೋಗವಾಗುತ್ತಿದ್ದರು. ಇವುಗಳ ಮೇಲೆ ಕಾವಲಿನವರು ನಿಂತು ಕೋಟೆಯನ್ನು ಸಂರಕ್ಷಿಸುತ್ತಿದ್ದರು.

ಕೋಟೆಯ ಮಧ್ಯದಲ್ಲಿ ಹಿಂದಿನ ಗೋಡೆಗೆ ಹೊಂದಿಕೊಂಡು ಬಹುದೊಡ್ಡ ಚೌಕಾಕಾರದ ಕೊತ್ತಳವಿದೆ. ಇದು ಇತರೆ ಕೊತ್ತಳಗಳಿಗಿಂತ ಅಗಲ ಹಾಗೂ ಎತ್ತರವಾಗಿದೆ. ಮೇಲ್ಭಾಗದಲ್ಲಿ ವಿಶಾಲವಾದ ಸ್ಥಳವಿರುವುದರಿಂದ ರಾಮಲಿಂಗೇಶ್ವರ ದೇವಾಲಯವನ್ನು ನಿರ್ಮ್ಸಲಾಗಿದೆ. ಇದು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿರುವುದು. ಈ ಗುಡಿ ಕ್ರಿ.ಶ. ೧೯೮೯ರಲ್ಲಿ ಜೀರ್ಣೋದ್ಧಾರವಾಗಿದೆ.

ರಾಮಲಿಂಗೇಶ್ವರ ದೇವಾಲಯದ ಬಲಭಾಗದಲ್ಲಿ ೬ ಅಡಿ ಎತ್ತರ, ೩ ಅಡಿ ಅಗಲವಿರುವ ವೀರಗಲ್ಲೊಂದಿದೆ. ಇದು ೩ ಹಂತಲ್ಲಿದ್ದು, ಕೆಳಗಿನ ಮೊದಲ ಹಂತದಲ್ಲಿ ವೀರ ಶತ್ರುಗಳೊಡನೆ ಹೋರಾಡುವ ದೃಶ್ಯ, ಎರಡನೆಯ ಹಂತದಲ್ಲಿ ಕನ್ಯೆಯರು ವೀರನನ್ನು ಕೈಲಾಸಕ್ಕೆ ಕರೆದೊಯ್ಯುವ ಚಿತ್ರಣ, ಅಂತಿಮ ಘಟ್ಟದಲ್ಲಿ ವೀರನು ಶಿವಲಿಂಗದ ಮುಂದೆ ನಿಂತಿದ್ದಾನೆ. ಈ ವೀರಗಲ್ಲಿನ ಪಟ್ಟಿಗಳಲ್ಲಿ ಶಾಸನಪಾಠವಿದ್ದು, ಅದು ಸವೆದಿದೆ.

ಪಶ್ಚಿಮ ದಿಕ್ಕಿನ ಗೋಡೆಯ ಮಧ್ಯದಲ್ಲಿ ವೃತಾಕಾರದಲ್ಲಿ ಮುಂದಕ್ಕೆ ಚಾಚಿಕೊಂಡ ಕೊತ್ತಳವಿದೆ. ಇದರ ಪಕ್ಕದಲ್ಲಿ ಕೋಟೆಬಾಗಿಲು ಇದೆ. ಸುಮಾರು ೨೫ ಅಡಿ ಎತ್ತರ, ೮ ಅಡಿ ಅಗಲವಾಗಿದೆ. ಬಾಗಿಲು ತೋಳುಗಳು ಸಾದಾ ಕೆತ್ತೆನೆಯಿಂದ ಕೂಡಿರುವವು. ಬಾಗಿಲಿನ ಮೇಲೆ ಗೋಡೆಯಲ್ಲಿ ಕಮಾನನ್ನು ರಚಿಸಲಾಗಿದೆ.

ಕೋಟೆಯ ಒಳಗೆ ಗಿಡ-ಗಂಟೆಗಳು ಬೆಳೆದಿವೆ. ಪಶ್ಚಿಮಕ್ಕೆ ಗೋಡೆಯಲ್ಲಿ ಚಿಕ್ಕಬಾಗಿಲನ್ನು ಜೋಡಿಸಲಾಗಿದೆ. ಶತ್ರುಗಳು ಮುಖ್ಯ ಬಾಗಿಲಿನಿಂದ ಕೋಟೆಯೊಳಗೆ ನುಗ್ಗಿದಾಗ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಚಿಕ್ಕ ಬಾಗಿಲನ್ನು ರಚಿಸಲಾಗಿದೆ. ಮತ್ತು ಮುಖ್ಯ ಬಾಗಿಲನ್ನು ಮುಚ್ಚಿದಾಗ, ನದಿಯಿಂದ ಕೋಟೆಯೊಳಗೆ ನೀರು ತರಲು ಈ ಬಾಗಿಲು ಉಪಯೋಗಕ್ಕೆ ಬರುತ್ತಿತ್ತು.

ಕೋಟೆ ಗೋಡೆಗೆ ಹೊಂದಿಕೊಂಡು ನಡಿವಿ ಗ್ರಾಮವು ಪೂರ್ವ ದಿಕ್ಕಿಗೆ ವಿಸ್ತರಿಸಿದೆ. ನದಿಯು ಪ್ರವಾಹದಿಂದ ರಕ್ಷಣೆ ಪಡೆಯುವುದಕ್ಕಾಗಿ ಗ್ರಾಮದ ಸುತ್ತಲೂ ಸುಮಾರು ೨೦ ಅಡಿ ಎತ್ತರದ ಗೋಡೆಯನ್ನು ಕಟ್ಟಲಾಗಿದೆ. ಪೂರ್ವದ ಗೋಡೆಯಲ್ಲಿ ಗ್ರಾಮದ ಮುಖ್ಯ ಪ್ರವೇಶದ್ವಾರವಿದ್ದು, ಇತ್ತೀಚೆಗೆ ಜೀರ್ಣೋದ್ಧಾರ ಮಾಡಲಾಗಿದೆ. ಇದರ ಮುಂಭಾಗದಲ್ಲಿ ಆಂಜನೇಯನ ಗುಡಿ, ಗ್ರಾಮದ ಛಾವಡಿ ಕಟ್ಟೆಗಳಿವೆ.

ಆಂಜನೇಯ ದೇವಾಲಯವು ದಕ್ಷಿಣಾಭಿಮುಖವಾಗಿದ್ದು ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಹೊಂದಿವೆ. ಗರ್ಭಗೃಹದಲ್ಲಿ ಆಂಜನೇಯನ ವಿಗ್ರಹವನ್ನು ಇತ್ತೀಚೆಗೆ ಪ್ರತಿಷ್ಠಾಪಿಸಲಾಗಿದೆ. ಇದರ ಮೂಲ ವಿಗ್ರಹ ಭಿನ್ನವಾಗಿರುವುದರಿಂದ ದೇವಾಲಯದ ಹೊರ ಭಾಗದಲ್ಲಿಡಲಾಗಿದೆ. ದೇವಾಲಯವು ಜೀರ್ಣೋದ್ಧಾರವಾಗಿದ್ದು, ಅಲ್ಲಿ ಕಂಡುಬರುವ ಸಪ್ತಮಾತೃಕಾ, ವೀರಗಲ್ಲು, ನಮ್ದಿಶಿಲ್ಪಗಳು ಪ್ರಾಚೀನವಾಗಿದೆ.

ದೇವಾಲಯದ ಮುಂದಿನ ಕಟ್ಟೆಗೆ ಹೊಂದಿಕೊಂಡಿರುವ ವೀರಗಲ್ಲು ಸುಮಾರು ೪ ಅಡಿ ಎತ್ತರ ೩ ಅಡಿ ಅಗಲವಾಗಿದೆ. ಇದರಲ್ಲಿ ವೀರನು ಖಡ್ಗ, ಗುರಾಣಿಗಳನ್ನು ಹಿಡಿದು ನಿಂತಿದ್ದಾನೆ. ಈತನ ಪಕ್ಕದಲ್ಲಿ ಒಬ್ಬ ಸೇವಕನಿದ್ದಂತೆ ಕಂಡುಬರುತ್ತದೆ. ಪ್ರಾಯಶಃ ಈತನೇ ನಡಿವಿ ಕೋಟೆಯನ್ನು ಆಳಿದ ಪಾಳೆಯಗಾರನಿರಬೇಕು. ಇದಕ್ಕೆ ಯಾವುದೇ ಆಧಾರಗಳು ಈತನಕ ದೊರೆತಿಲ್ಲ.

ಶಿರುಗುಪ್ಪ

ಶಿರುಗುಪ್ಪ ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬಳ್ಳಾರಿಯಿಂದ ಉತ್ತರ ದಿಕ್ಕಿಗೆ ೫೬ ಕಿ.ಮೀ. ದೂರದಲ್ಲಿದೆ. ಶಿರುಗುಪ್ಪದಿಂದ ೨ ಕಿ.ಮೀ. ಪಶ್ಚಿಮಕ್ಕೆ ದೇಶನೂರಿಗೆ ಹೋಗುವ ರಸ್ತೆಯಲ್ಲಿ ತುಂಗಾಭದ್ರಾ ನದಿಗೆ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯ ಪಕ್ಕದ ನದಿಯು ಬಲದಂಡೆಯ ಮೇಲೆ ಶಿರಗುಪ್ಪೆಯ ಹಳೇ ಗ್ರಾಮವಿತ್ತು. ಈ ವಿಷಯವನ್ನು ಅಲ್ಲಿಯ ಶಂಭುಲಿಂಗೇಶ್ವರ ದೇವಾಲಯದಲ್ಲಿರುವ ಕ್ರಿ.ಶ. ೧೦೧೯ರ ಶಾಸನದಲ್ಲಿ ಹೇಳಿದೆ.[28] ಈ ಶಾಸನವು ಹಳೇ ಶಿರುಗುಪ್ಪ ಗ್ರಾಮದ ದಕ್ಷಿಣ ದಿಕ್ಕಿಗೆ ಶಂಭುಲಿಂಗೇಶ್ವರ ದೇವಾಲಯವಿರುವುದನ್ನು ಉಲ್ಲೇಖಿಸುವುದು. ರಾಜ್ಯಗಳಿಗೆ ಗಡಿಪ್ರದೇಶವಾಗಿ ಶಿರುಗುಪ್ಪವು ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ಪ್ರಾಯಶಃ ಆಗಲೇ ಇಲ್ಲಿ ಕೋಟೆಯನ್ನು ಕಟ್ಟಿಕೊಂಡಿರಬೇಕು. ಏಕೆಂದರೆ ಕಂಪಿಲರಾಯನಿಗೂ ವೀರಬಲ್ಲಾಳನು ಸೇನೆಯೊಂದಿಗೆ ಶಿರುಗುಪ್ಪೆಯಲ್ಲಿ ಬೇಡು ಬಿಡುತ್ತಾನೆ. ಇಲ್ಲಿ ಘೋರವಾದ ಯುದ್ಧ ನಡೆದು ಅದರಲ್ಲಿ ಬಲ್ಲಾಳನು ಬಂಟ ಚಂಬೆದಂಡನಾಯಕನು ವೀರಾವೇಶದಿಂದ ಹೋರಾಡಿದ ಚಿತ್ರಣವಿದ್ದು ಅದು ಹೀಗಿದೆ.[29]

ಭರದಿಂದಂ ಶಿರುಗುಪ್ಪೆಯ್ದ ಬೀಡಲನ್ತಾ ವಾರ್ತೆ
ಯಂ ಕಂಪಿಲಂ ನಿರುತಂ ಕೇಳಿರ ()ಲ್ಲ
ಬನ್ದುಯೋಳ್ ಸೊಂಪಾಗೆ ಮಾರ್ಕೋಣ್ದು ಭೂದರ ಬಲ್ಲಾಳ
ನೃಪಾಳನಿಕ್ಕಲನ ನೋಡಲ್ ಚಂಬೆ ದಂಡಾಧೀಪಂ ಧುರದೊಳ್
ಪೊಕ್ಕಿರೆ ದೊಕ್ಕಲಿಕ್ಕಿ ಕಡಿದಂ ಸರ್ಬ್ಬೋರ್ಬ್ಬಿ ಬಾರ್ಪೆ ವಿನಂ ಎಂದು

ಕೊಡಲಾಗಿದೆ. ಕಂಪಿಲರಾಯನಿಗೂ ವೀರಬಲ್ಲಾಳನಿಗೂ ಶಿರುಗುಪ್ಪದಲ್ಲಿ ಯುದ್ಧ ನಡೆದಾಗ ವೀರಬಲ್ಲಾಳನು ಇಲ್ಲಿ ಬಂದು ಬೇಡು ಬಿಡಲು ಇದು ರಕ್ಷಣೆಗೆ ಯೋಗ್ಯಸ್ಥಳವಾಗಿರಲೇಬೇಕು.

ಮುಂದೆ ವಿಜಯನಗರ ಕಾಲಕ್ಕೆ ಶಿರುಗುಪ್ಪವನ್ನು ಸೀಮೆ ಎಂದು ಕರೆದಿರುವಂತೆ ಶಾಸನಗಳಿಂದ ತಿಳಿಯುವ ಅಂಶ. ಸೇಮೆ ಎನ್ನುವುದು ವಿಜಯನಗರ ಅರಸರ ಆಡಳಿತ ವಿಭಾಗ, ಇಲ್ಲಿ ವಿಜಯನಗರ ಅರಸರ ನಂತರ ಹಂಡೆ ಪಾಳೆಯಗಾರರು, ಆದೋನಿ ನವಾಬರು ಇಲ್ಲಿ ಆಳ್ವಿಕೆಯನ್ನು ಮಾಡಿದಂತೆ ಶಾಸನಗಳು[30] ಹಾಗೂ ಕೈಫಿಯತ್ತುಗಳು ಹೇಳುತಾವೆ.[31] ಇವರುಗಳು ಶಿರುಗುಪ್ಪ ಕೋಟೆಯನ್ನು ಜೀರ್ಣೋದ್ಧಾರ ಮಾಡಿಕೊಂಡಂತೆ ತಿಳಿದುಬರುತ್ತದೆ.[32]

ಹಳೆಯ ಶಿರುಗುಪ್ಪ ಪ್ರದೇಶದಲ್ಲಿ ಕೋಟೆಗೋಡೆ ಕೊತ್ತಳಗಳ ಅವಶೇಷಗಳಿರುವುದರಿಂದ ಇವುಗಳ ಆಧಾರದ ಮೇಲೆ ಅಲ್ಲಿಯ ಕೋಟೆಯ ರೂಪುರೇಷೆಗಳನ್ನು ತಿಳಿಯಲು ಯತ್ನಿಸಿದೆ. ಕೋಟೆಗೆ ಆಗ್ನೇಯ ಭಾಗದಿಂದ ಪ್ರವೇಶದ್ವಾರವಿದ್ದಂತೆ ಗುರುತುಗಳಿವೆ. ಇದರ ಬಲಭಾಗಕ್ಕೆ ಆಂಜನೇಯನ ಗುಡಿ ಇದೆ. ಸಾಮಾನ್ಯವಾಗಿ ಆಂಜನೇಯನ ದೇವಾಲಯಗಳಿರುವುದು ಕೋಟೆಯ ಪ್ರದೇಶದ್ವಾರದ ಬಳಿ ಎನ್ನುವುದನ್ನು ಗಮನಿಸಬೇಕು. ಇಲ್ಲಿಂದ ಪಶ್ಚಿಮಕ್ಕೆ ಕೋಟೆಯೊಳಗೆ ಶಂಭುಲಿಂಗೇಶ್ವರ ದೇವಾಲಯವಿದೆ. ಈ ಗುಡಿ ಹಿಂಭಾಗದ ನದಿಯ ದಂಡೆಗೆ ಕೋಟೆಗೋಡೆ ಇದೆ. ಇದು ಇಲ್ಲಿಂದ ದಕ್ಷಿಣ ದಿಕ್ಕಿಗೆ ಸುಮಾರು ೨೦೦ ಮೀಟರ್ ನಷ್ಟು ಉದ್ಧವಿದೆ ಈ ಕೋಟೆಗೋಡೆ ಅಂಚಿಗು ಒಂದು ಆಂಜನೇಯ ಗುಡಿ ಇದೆ. ಈ ಕೋಟೆ ಗೋಡೆಯಲ್ಲಿ ಚೌಕ ಮತ್ತು ವೃತ್ತಾಕಾರದ ನಾಲ್ಕು ಕೊತ್ತಳಗಳಿವೆ.

ಶಂಭುಲಿಂಗೇಶ್ವರ ದೇವಾಲಯದ ಉತ್ತರಕ್ಕೆ ಕೋಟೆ ಬಾಗಿಲಿದೆ. ಇದನ್ನು ಹೊಳೆಯ ಕಡೆಯ ಬಾಗಿಲೆಂದು ಶಾಸನವು ಕರೆದಿದೆ.[33] ಈ ಬಾಗಿಲಿನ ದಕ್ಷಿಣದ ಕೋಟೆಗೋಡೆಯಲ್ಲಿ ಮುಂಚಾಚಿದ ವೃತ್ತಾಕಾರದ ಕೊತ್ತಳವಿದೆ. ಇದನ್ನು ಕ್ರಿ.ಶ. ೧೬೪೯ರಲ್ಲಿ ರುದ್ರು ಲಿಂಗೋಜಿ ಕಟ್ಟಿಸಿ ಈ ಕೊತ್ತಳಕ್ಕೆ ‘ಸಾಹೇಬ ಬುರ್ಜಿ’ ಎಂದು ಕರೆದಿರುವಂತೆ ಶಾಸನದಲ್ಲಿ ಉಲ್ಲೇಖವಾಗಿದೆ.[34] ಕೋಟೆಯ ಆಗ್ನೇಯ ದಿಕ್ಕಿಗೆ ಬಹುಭುಜಾಕೃತಿಯ ಬೃಹದಾಕಾರದ ಕೊತ್ತಳವಿದೆ. ಇದನ್ನು ಕ್ರಿ.ಶ. ೧೬೨೭ರ ಮಹತ್ವದನ ಕಾಲದ ಶಾಸನದಲ್ಲಿ[35] “ಹುಸೇನಿ ಬುರ್ಜ” ಎಂದು ಕರೆದು ದಳಪತ್ ರಾಯನು ಇದನ್ನು ಕಟ್ಟಿಸಿದನೆಂದು ಹೇಳುವುದು.

ಕೋಟೆಯನ್ನು ಕೆತ್ತಿ ನಯಮಾಡಿದ ಮಧ್ಯಮ ಗಾತ್ರದಕಲ್ಲುಗಳಿಂದ ಕಟ್ಟಿದೆ. ಕಲ್ಲುಗಳ ಮಧ್ಯದಲ್ಲಿ ಸಂದಿ ಇಲ್ಲದಂತೆ ಒಂದು ಕಲ್ಲು ಮತ್ತೊಂದಕ್ಕೆ ಹೊಂದಿಕೊಳ್ಳುವಂತೆ ಅಂಚುಗಳನ್ನು ಕೆತ್ತಿ ಜೋಡಿಸಿದೆ. ಕಲ್ಲುಗಳ ಮಧ್ಯದಲ್ಲಿ ಯಾವುದೇ ಗಾರೆಯ ಲೇಪನವಿಲ್ಲ. ಸುಮಾರು ೨೫ ಅಡಿ ಎತ್ತರವಿರುವ ಕೋಟೆಯ ಮೇಲಿನ ಅಗಲ ಸುಮಾರು ೫ ಅಡಿ ಇದರ ಮೇಲಿದ್ದ ಗಾರೆಯ ಕುಂಬೆಯ ಅವಶೇಷಗಳು ಕಾಣುತ್ತವೆ. ಕೋಟೆಯೊಳಗೆ ಇನ್ನೂ ಶಿಥಿಲವಾದ ಕಟ್ಟಡಗಳಿವೆ. ಅಲ್ಲಿ ಜನವಾಸವಿಲ್ಲ. ಇಲ್ಲಿಯ ಭೂಮಿಯಲ್ಲಿ ಉಳುಮೆ ಮಾಡಲಾಗುತ್ತಿದೆ.

ಕೋಟೆಯೊಳಗೆ ಶಂಭುಲಿಂಗೇಶ್ವರ ದೇವಾಲಯ, ಎರಡು ಆಂಜನೇಯನ ಗುಡಿಗಳು, ಬಾವಿ, ಮಸೀದಿ ಇತ್ಯಾದಿಗಳಿವೆ.

ಶಂಭುಲಿಂಗೇಶ್ವರ ದೇವಾಲಯ: ಪೂರ್ವಾಭಿಮುಖವಾಗಿರುವ ಈ ದೇವಾಲಯವು ಮೂಲತಃ ತ್ರಿಕೂಟ. ಮುಖ್ಯ ಗರ್ಭಗೃಹದಲ್ಲಿ ಶಂಭುಲಿಂಗವಿದ್ದು ಅದರ ಮುಂಭಾಗದಲ್ಲಿ ನಂದಿ ಶಿಲ್ಪವಿದೆ. ಇದರ ಎಡಬದಿಯ ಗರ್ಭಗೃಹದಲ್ಲಿ ಕಾಶಿವಿಶ್ವನಾಥ ಲಿಂಗವಿದ್ದರೆ, ಬಲ ಬದಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನನೆಂದು ಕರೆಯುವ ಲಿಂಗವಿದೆ. ಈ ಗರ್ಭಗೃಹಗಳ ಮಧ್ಯಭಾಗದಲ್ಲಿ ವಿಶಾಲವಾದ ಸಭಾಮಂಟಪ ಹಾಗೂ ಮುಖಮಂಟಪವನ್ನು ಹೊಂದಿದೆ. ಕಂಬಗಳಲ್ಲಿ ಚಚ್ಚೌಕ, ಬಹುಮುಖ, ವೃತ್ತಕಗಳನ್ನು ಹಂತ ಹಂತವಾಗಿ ಕಡಿದು ಅಲಂಕರಿಸಲಾಗಿದೆ. ದೇವಾಲಯದ ಆವರಣದಲ್ಲಿ ಗಣೇಶ, ನಂದಿ, ಷಣ್ಮುಖ ಶಿಲ್ಪಗಳಿದ್ದು, ಕಲ್ಯಾಣಿ ಚಾಳುಕ್ಯರ ಶಾಸನಗಳೂ ಇವೆ.

ಈ ದೇವಾಲಯದ ಆವರಣದಲ್ಲಿ ಎರಡು ಶಾಸನಗಳಿವೆ. ಒಂದು ಕಲ್ಯಾಣ ಚಾಳುಕ್ಯ ಅರಸ ತ್ರಿಭುವನ ಮಲ್ಲದೇವನ ಪತ್ನಿಯಾದ ವಿರಿಯಕೇತಲ ದೇವಿಯು ಶಿರುಗುಪ್ಪ ಕೊಳನೂರು ಮೊದಲಾದ ಗ್ರಾಮಗಳನ್ನು ದತ್ತಿಬಿಟ್ಟು ವಿವರ ಹೊಂದಿದೆ.[36] ಇನ್ನೊಂದು ಮಲ್ಲಿಕ್ ಅಬ್ದುಲ್ ಮಹಮದನ ಶಾಸನ.[37] ಕಲ್ಯಾಣ ಚಾಳುಕ್ಯ ಶೈಲಿಯನ್ನು ಸಂಪೂರ್ಣವಾಗಿ ತನ್ನಲ್ಲಿ ಅಡಗಿಸಿಕೊಂಡ ಈ ದೇವಾಲಯವು ಕಲ್ಯಾಣ ಚಾಳುಕ್ಯರೆಂದು ಮೇಲಿನ ಶಾಸನಗಳು ದೃಢಪಡಿಸುತ್ತವೆ.

ಬಾವಿ: ಶಂಭುಲಿಂಗೇಶ್ವರ ದೇವಾಲಯದ ಬಲಭಾಗಕ್ಕೆ ಹಳೆಯ ಬಾವಿ ಇದೆ. ಇದನ್ನು ಕ್ರಿ.ಶ. ೧೬೨೭ರಲ್ಲಿ ಮಲ್ಲಿಕ್ ಅಬ್ದುಲ್ ಮಹಮದ್ ನ ದಳಪತಿರಾಯ್ ನೆಂಬುವವನು ಕಟ್ಟಿಸಿದನೆಂದು ಶಾಸನವಿದೆ.[38] ವೃತ್ತಾಕಾರವಾಗಿದ್ದು, ಸುಮಾರು ೧೦೦ ಅಡಿಗಳಷ್ಟು ಆಳವಿದೆ ಎಂದು ತಿಳಿದುಬರುತ್ತದೆ. ಈ ಬಾವಿಯು ಕೋಟೆಯೊಳಗಿನ ಜನತೆಗೆ ನೀರನ್ನು ಪೂರೈಸಿದೆ.

ಮಸೀದಿ ಇದು ಹುಸೇನಿಬುರ್ಜದ ಪಕ್ಕದಲ್ಲಿಯೇ ಇದೆ. ಈ ಮಸೀದಿಗೆ ಶೈಯದ್ ನೂರ್ ಮಹಮದ್ ಷಾ ಖಾದ್ರಿದರ್ಗಾ ಎಂದು ಕರೆಯುವರು. ಇತ್ತೀಚೆಗೆ ನಿರ್ಮಿಸಿರುವುದಾಗಿ ಅದರ ಲಕ್ಷಣಗಳು ಹೇಳುತ್ತವೆ.

[1] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೮ ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ-೧, ಪು. ೯೨-೯೩, ಹಂಪಿ ಕನ್ನಡ ವಿಶ್ವವಿದ್ಯಾಲಯ

[2] ಕುಂಬಾಸ, ೧೯೯೪, ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ, ಕುಂಚೂರು ಮಾಲತೇಶ ಪ್ರಕಾಶ

[3] Sankalia, H.D. 1974, Prehistory and Protohistory of India and Pakistan. Pune: Deccan college.

[4] ಶಿವತಾರಕ್. ಕೆ.ಬಿ. ೨೦೦೧. ಕರ್ನಾಟಕದ ಪುರಾತತ್ವ ನೆಲೆಗಳು ಪು. ೩೫೯. ಹಂಪಿ ಕನ್ನಡ ವಿಶ್ವವಿದ್ಯಾಲಯ

[5] ಅದೇ, ಪು. ೫೫೮, ೫೬೦

[6] ಅದೇ ಪು. ೫೫೮, ೫೫೯

[7] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ ಪು. ೧೨೧

[8] ಅದೇ, ಪು. ೧೨೫

[9] SII IX (Pt.1) No. 53

[10] SII IX (Pt.1) No. 70

[11] ಕನ್ನಡ ವಿಶ್ವವಿದ್ಯಾಲಯದ ಶಾಸನ ಸಂಪುಟ-೧, ಪೂರ್ವೋಕ್ತ, ಪು. ೯೧, ೧೩೩

[12] ಸುರೇಶ್. ಕೆ.ಎಂ. ಮತ್ತು ಇತರರು, ೨೦೦೨, ಕರ್ನಾಟಕ ದೇವಾಲಯ ಕೋಶ ಬಳ್ಳಾರಿ ಜಿಲ್ಲೆ ಪು. ೧೬೦, ೨೦೨ ಹಂಪಿ ಕನ್ನಡ ವಿಶ್ವವಿದ್ಯಾಲಯ

[13] ನಾಗಯ್ಯ, ಜೆ.ಎಂ. ೨೦೦೨. ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಪು. ೨೨ ಬಳ್ಳಾರಿ ಲೋಹಿಯಾ ಪ್ರಕಾಶನ

[14] ಅದೇ, ಪು. ೨೧

[15] ಅದೇ, ಪು. ೧೦೮

[16] ಅದೇ, ಪು. ೧೦೮

[17] ಅದೇ, ಪು. ೧೨೧

[18] ಅದೇ, ಪು. ೧೩೪

[19] ಕಲಬುರ್ಗಿ, ಎಂ.ಎಂ. ೧೯೯೪, ಕರ್ನಾಟಕದ ಕೈಫಿಯತ್ತುಗಳು, ಪು. ೪೫೭. ಹಂಪಿ ಕನ್ನಡ ವಿಶ್ವವಿದ್ಯಾಲಯ.

[20] ಶೇಷಗಿರಿ ಆಚಾರ್, ಜೆ. ೧೯೯೭, ಶಿರುಗುಪ್ಪೆಯ ಸಿರಿ, ಪು. ೭ ಅಗಸೂರು ಉದಯ ಸರಸ್ವತಿ ಪ್ರಕಾಶನ

[21] ಸೂರ್ಯನಾಥ್, ಯು.ಕಾಮತ್, ಸಂ, ೧೯೮೬, ಕರ್ನಾಟಕ ಗ್ಯಾಸಿಟಿಯರ್ ೩, ಪು. ೬೧೫. ಬೆಂಗಳೂರು ಕರ್ನಾಟಕ ಗ್ಯಾಸಿಟಿಯರ್ ಇಲಾಖೆ

[22] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪು ೧೨೬-೧೨೭ ಹಂಪಿ ಕನ್ನಡ ವಿಶ್ವವಿದ್ಯಾಲಯ

[23] ಅದೇ, ಪು. ೧೨೬, ೧೨೭

[24] ಕರ್ನಾಟಕ ಗ್ಯಾಸಿಟಿಯರ್ ೩, ಪೂರ್ವೋಕ್ತ, ಪು. ೬೧೬

[25] ಶಿರುಗುಪ್ಪ ಸಿರಿ, ಪೂರ್ವೋಕ್ತ, ಪು. ೯

[26] ಶಿವತಾರಕ್, ಕೆ.ಬಿ. ೨೦೦೧, ಕರ್ನಾಟಕದ ಪುರಾತತ್ವ ನೆಲೆಗಳು, ಪು. ೨೫೯, ಹಂಪಿ ಕನ್ನಡ ವಿಶ್ವವಿದ್ಯಾಲಯ

[27] Rangarajan, L.N. 1987, Kautilyas Arthashastra Pp. 184

[28] ದೇವರಕೊಂಡಾರೆಡ್ಡಿ ಮತ್ತು ಇತರರು ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧. ಬಳ್ಳಾರಿ ಜಿಲ್ಲೆ, ಪು.೯೧ ಹಂಪಿ ಕನ್ನಡ ವಿಶ್ವವಿದ್ಯಾಲಯ

[29] ನಾಗಯ್ಯ, ಜೆ.ಎಂ. ೨೦೦೨, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಪು. ೧೨೬ ಬಳ್ಳಾರಿ ಲೋಹಿಯಾ ಪ್ರಕಾಶನ

[30] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ. ಪು. ೧೨೬

[31] ಕಲಬುರ್ಗಿ, ಎಂ. ಎಂ. ೧೯೯೪, ಕರ್ನಾಟಕದ ಕೈಫಿಯತ್ತುಗಳು, ಪು. ೪೬೩. ಹಂಪಿ ಕನ್ನಡ ವಿಶ್ವವಿದ್ಯಾಲಯ

[32] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ, ಪು. ೯೧-೯೨

[33] ಅದೇ, ಪು. ೯೪

[34] ಅದೇ, ಪು. ೯೪

[35] ಅದೇ, ಪು. ೯೪-೯೫

[36] ಅದೇ, ಪು. ೯೧-೯೨

[37] AR No. 106 of 1977: P.78

[38] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ. ಪು. ೯೨