ಹಗರಿಬೊಮ್ಮನ ಹಳ್ಳಿಯು ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಬಳ್ಳಾರಿಯಿಂದ ಸುಮಾರು ೧೦೨ ಕಿ.ಮೀ. ದೂರದಲ್ಲಿದೆ. ಈ ತಾಲೂಕನ್ನು ಉತ್ತರದಲ್ಲಿ ರಾಯಚೂರು ಜಿಲ್ಲೆ. ಪೂರ್ವದಲ್ಲಿ ಹೊಸಪೇಟೆ ಕೂಡ್ಲಿಗಿ, ದಕ್ಷಿಣದಲ್ಲಿ ಹರಪನಹಳ್ಳಿ ಪಶ್ಚಿಮದಲ್ಲಿ ಹಡಗಲಿ ತಾಲೂಕುಗಳು ಸುತ್ತುವರಿದಿವೆ. ಈ ತಾಲೂಕಿನಲ್ಲಿ ಹಂಪಾಪಟ್ಟಣ, ಮಾಲವಿ, ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿಗಳು ಪ್ರಮುಖ ಹೋಬಳಿ ಕೇಂದ್ರಗಳಾಗಿವೆ. ತಾಲೂಕಿನ ಉತ್ತರದಲ್ಲಿ ತುಂಗಾಭದ್ರಾ ನದಿ ಮತ್ತು ತುಂಗಾಭದ್ರಾ ಜಲಾಶಯದ ಹಿನ್ನೀರು ಹರಡಿದ್ದು, ತಾಲೂಕು ಗಡಿಯಾಗಿ ರಾಯಚೂರು ಜಿಲ್ಲೆಯನ್ನು ಇಲ್ಲಿಂದ ಬೇರ್ಪಡಿಸಿದೆ. ಚಿಕ್ಕಹಗರಿ ಈ ತಾಲೂಕಿನ ಮುಖ್ಯನದಿ. ಇದು ದಕ್ಷಿಣದಿಂದ ಉತ್ತರಾಭಿಮುಖವಾಗಿ ಹರಿದು ತುಂಗಭದ್ರಾ ನದಿಯನ್ನು ಸೇರಿಕೊಳ್ಳುತ್ತದೆ. ಸಾಮಾನ್ಯ ಮಳೆಯಾಗುವ ಈ ತಾಲೂಕಿನ ವ್ಯವಸಾಯಕ್ಕೆ ಅನುಕೂಲವಾಗಲು ಚಿಕ್ಕಹಗರಿ ನದಿಗೆ ಹಗರಿಬೊಮ್ಮನಹಳ್ಳಿಯ ದಕ್ಷಿಣಕ್ಕೆ ೪. ಕಿ.ಮೀ. ದೂರದಲ್ಲಿ ಮಾಲವಿಯ ನೈರುತ್ಯಕ್ಕೆ ಸುಮಾರು ೧ ಕಿ.ಮೀ. ದೂರದಲ್ಲೂ ಕಟ್ಟೆಕಟ್ಟಿ ಹಗರಿಬೊಮ್ಮನಹಳ್ಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಜಲಾಶಯದಿಂದ ಎರಡು ನಾಲೆಗಳಿಂದ ಈ ಭಾಗದ ಒಣಭೂಮಿಗೆ ನೀರನ್ನು ಒದಗಿಸಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಅನೇಕ ಎಣ್ಣೆ ಕಾರ್ಖಾನೆಗಳಿದ್ದು, ತೈಲೋತ್ಪತ್ತಿ ಒಂದು ಮುಖ್ಯ ಕೇಂದ್ರವಾಗಿದೆ. ಇದು ಇಂದಿನ ನೋಟ. ಆದರೆ ಈ ಪ್ರದೇಶದ ಇತಿಹಾಸ ಬಹು ಪ್ರಾಚೀನ ಕಾಲಕ್ಕೆ ಹೋಗುತ್ತದೆ.

ತಾಲೂಕಿನ ಹಂಪಾಸಾಗರದಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ಅವಶೇಷಗಳು[1] ಮತ್ತು ಬೃಹತ್ ಶಿಲಾಯುಗ ಸಂಸ್ಕೃತಿಯ ಸುಟ್ಟ ಮಣ್ಣಿನ ಶವಪೆಟ್ಟಿಗೆ ದೊರೆತಿವೆ.[2] ಗದ್ದೀಕೇರಿಯಲ್ಲಿ ಶಿಲಾಯುಗ ಹಾಗೂ ಇತಿಹಾಸ ಆರಂಭಯುಗದ ಅವಶೇಷಗಳು ಕಂಡು ಬಂದಿವೆ.[3] ಶಾತವಾಹನರ, ಪಲ್ಲವರ, ಬಾದಾಮಿಯ ಚಾಳುಕ್ಯರ ಕೋಟೆಯ ಯಾವುದೇ ಅವಶೇಷಗಳು ಇಲ್ಲಿಲ್ಲ. ರಾಷ್ಟ್ರಕೂಟರ ಕೋಗಳಿಯಲ್ಲಿವೆ. ಕೋಗಳಿ, ಅಂಬಳಿ, ಹೊಳಗುಂದಿ, ಮೋರಿಗೇರಿಗಳಲ್ಲಿ ಕಲ್ಯಾಣ ಚಾಳುಕ್ಯರ ಕೋಟೆಗಳಿರುವವೆಂದು ಎಸ್. ಕೆ. ಜೋಶಿಯವರು ಸೂಚಿಸಿರುವರು.[4] ಪ್ರಸ್ತುತ ಕೋಟೆಯ ಯಾವ ಲಕ್ಷಣಗಳು ಅಲ್ಲಿ ಗೋಚರಿಸುವುದಿಲ್ಲ. ವಿಜಯನಗರೋತ್ತರ ಕಾಲದ ಕೋಟೆಯ ಕೆಲವು ಪಳೆಯುಳಿಕೆಗಳು ತಂಬ್ರಹಳ್ಳಿ, ಹಂಪಾಪಟ್ಟಣ, ಹನಸಿಗಳಲ್ಲಿ ಕಂಡುಬರುತ್ತದೆ. ಇವುಗಳನ್ನು ಕುರಿತಾಗಿ ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಕೋಟೆಯ ಭಾಗವಾಗಿದ್ದ ಕೊತ್ತಳಗಳು ಚಿಂತ್ರಪಳ್ಳಿ, ಹಗರಿಬೊಮ್ಮನಹಳ್ಳಿ, ಉಪ್ಪಾರಗಟ್ಟಿ ಇತ್ಯಾದಿ ಹಳ್ಳಿಗಳಲ್ಲಿವೆ.

ತಂಬ್ರಹಳ್ಳಿ

ತಂಬ್ರಹಳ್ಳಿಯು ಹಗರಿಬೊಮ್ಮನಹಳ್ಳಿಯಿಂದ ಪಶ್ಚಿಮಕ್ಕೆ ಸುಮಾರು ೨೦ ಕಿ.ಮೀ. ಅಂತರದಲ್ಲಿ ದೂರದಲ್ಲಿರುವ ಹೋಬಳಿಕೇಂದ್ರ. ಇಲ್ಲಿಂದ ಈಶಾನ್ಯಕ್ಕೆ ಸುಮಾರು ೩ ಕಿ.ಮೀ. ಅಂತರದಲ್ಲಿ ಬಂಡಿಕ್ಯಾಪ್ ಇದೆ. ಇದರ ಪೂರ್ವ ಬೆಟ್ಟದ ಮೇಲಿರುವುದೇ ತಂಬ್ರಹಳ್ಳಿ ಕೋಟೆ. ತಂಬ್ರಹಳ್ಳಿ ಕೋಟೆ ಇರುವ ಬೆಟ್ಟವನ್ನು ಜನ ಹೆಸರಿಸುತ್ತಿರುವುದು ರಂಗನಾಥನ ಬೆಟ್ಟವೆಂದು. ಬೆಟ್ಟದ ಮೇಲಿರುವ ರಂಗನಾಥನ ಗುಡಿಯಿಂದಾಗಿಯೇ ರಂಗನಾಥನ ಬೆಟ್ಟವೆಂದು ಹೆಸರು ಬಂದಿದೆ.

ಕೋಟೆಯಿರುವ ರಂಗನಾಥನ ಬೆಟ್ಟವನ್ನು ಪೂರ್ವ, ದಕ್ಷಿಣ, ಉತ್ತರ ದಿಕ್ಕುಗಳಲ್ಲಿ ತುಂಗಭದ್ರಾ ಅಣೆಕಟ್ಟಿನ ಹಿನ್ನೀರು ಸುತ್ತುವರೆದಿದೆ. ಹಾಗಾಗಿ ಗಿರಿದುರ್ಗವಾಗಿದ್ದ ಈ ಕೋಟೆ ಈಗೀಗ ಜಲದುರ್ಗದಂತೆ ಗೋಚರಿಸುತ್ತದೆ.

ಓಬರನಾಯಕನೆಂಬ ಸೇನಾಪತಿಯು ಕ್ರಿ.ಶ.೧೬೧೬ ರಿಂದ ೧೫೫೧ರ ದೀರ್ಘಾವಧಿವರೆಗೆ ಆಳ್ವಿಕೆ ಮಾಡಿದ. ಹರಪನಹಳ್ಳಿ ಪಾಳೆಯಗಾರರ ಭರಮಣ್ಣನಾಯಕನ ಸೈನ್ಯದಲ್ಲಿ ಕೆಲಕಾಲ ಇದ್ದು, ಅನೇಕ ಯುದ್ಧಗಳಲ್ಲಿ ಅರಸರಿಗೆ ಜಯವನ್ನು ತಂದುಕೊಟ್ಟು ಹರಪನಹಳ್ಳಿ ರಾಜ್ಯ ವಿಸ್ತರಣೆಗೆ ಸಹಾಯಕನಾಗಿದ್ದಂತೆ. ಹಾಗಾಗಿ ಹರಪನಹಳ್ಳಿ ಪಾಳೆಯಗಾರರಿಗೆ ಇವನ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸಗಳಿದ್ದವು. ಹೀಗಾಗಿ ರಾಜ್ಯದ ವಾಯುವ್ಯ ಗಡಿ ರಕ್ಷಣೆಗಾಗಿ ತಂಬ್ರಹಳ್ಳಿಯಲ್ಲಿ ಸೈನಿಕ ನೆಲೆಯ ಮುಖ್ಯಸ್ಥನನ್ನಾಗಿ ಓಬರನಾಯಕನನ್ನು ನೇಮಿಸಿದರೆಂದು ತಿಳಿದು ಬರುತ್ತದೆ.[5] ಮುಂದೆ ಇಲ್ಲಿ ಕೋಟೆ ಕಟ್ಟಿಕೊಂಡು ಸಾಮಂತ ಅರಸನಾಗಿ ರಾಜ್ಯವಾಳುತ್ತಾ ಹರಪನಹಳ್ಳಿ ರಾಜ್ಯದ ಮೇಲೆ ಅನ್ಯ ಅರಸರು ಯುದ್ಧ ಸಾರಿದಾಗ ತಮ್ಮ ಒಡೆಯರಾದ ಹರಪನಹಳ್ಳಿ ಪಾಳೆಯಗಾರರಿಗೆ ನಿಷ್ಠೆ ತೋರಿಸಿ, ಅವರಿಗೆ ಎಲ್ಲಾ ರೀತಿಯ ನೆರವನ್ನು ಕೊಡುತ್ತಿದ್ದನೆಂದು ಸ್ಥಳೀಯರು ಅಭಿಪ್ರಾಯ ಪಡುವರು.

ಕೋಟೆಯೊಳಗೆ ನಾಲ್ಕಾರು ತುಂಡು ಶಾಸನಗಳಿವೆ.[6] ಅವು ತೃಟಿತವಾಗಿರುವದರಿಂದ ಕೋಟೆಯ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ. ಈ ಶಾಸನಗಳು ವಿಜಯನಗರೋತ್ತರ ಕಾಲದವೆಂದು ಮಾತ್ರ ಹೇಳಬಹುದು. ಒಂದು ಶಾಸನವು ಇಟ್ಟಿಗೆ ಶಾನಭೊಗವ ಬರಸೈಯನ ಮಗ ಸುರೇರಾಯ ಆನೆಹೊಂಡವನ್ನು ಕಟ್ಟಿಸಿದಂತೆ ಸೂಚಿಸುತ್ತದೆ.[7]

ಹರಪನಹಳ್ಳಿ ಪಾಳೆಯಗಾರರು ತಮ್ಮ ರಾಜ್ಯ ವಿಸ್ತರಣೆಯಲ್ಲಿ ರಾಜ್ಯದ ಹಲವೆಡೆ ತಮ್ಮ ಸೈನಿಕ ನೆಲೆಗಳನ್ನು ಸ್ಥಾಪಿಸಿ, ಅಲ್ಲಿ ರಕ್ಷಣೆಗಾಗಿ ಕೋಟೆಗಳನ್ನು ಕಟ್ಟಿಕೊಂಡಿದ್ದರು. ಉದಾಹರಣೆಗಾಗಿ ಕರಡಿದುರ್ಗ, ಬಂಡ್ರಿ, ಚಿಗಟೇರಿ, ವೀರನದುರ್ಗ ಮುಂತಾದವು. ವಾಯುವ್ಯ ಭಾಗದ ಗಡಿ ರಕ್ಷಣೆಗಾಗಿ ತಂಬ್ರಹಳ್ಳಿಯಲ್ಲಿಯೂ ಇವರೇ ಕೋಟೆ ಕಟ್ಟಿಸಿರಬಹುದ. ಸ್ಥಳೀಯರು ಗುರುತಿಸುವ ಓಬರನಾಯಕ ಅಲ್ಲಿಯ ಶಾಸನದಲ್ಲಿ ಬರುವ[8] ಇಟ್ಟಿಗೆ ಶಾನುಭೋಗರ ಮಗನಾಗಿದ್ದು, ಈತನೇ ತಂಬ್ರಹಳ್ಳಿ ಕೋಟೆಯನ್ನು ಆಳಿರಬಹುದು.

ಬೆಟ್ಟವನ್ನು ಬಳಸಿ ಸುತ್ತಲೂ ಕೋಟೆ ನಿರ್ಮಿಸಿದ್ದರೂ ಪ್ರಸ್ತುತ ಇರುವುದು ಹರಕಲು ಮುರುಕಲು ಕೋಟೆ ಗೋಡೆಗಳು ಮಾತ್ರ. ಕೋಟೆಯ ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಗೋಡೆಯ ಅವಶೇಷಗಳಿವೆ. ಕೋಟೆಯನ್ನು ತಳಪಾಯದ ಆಸರೆ ಇಲ್ಲದೆ ಹಾಸು ಬಂಡೆಯ ಮೇಲೆ ಕಟ್ಟಲಾಗಿದೆ.[9] ಕೋಟೆಯನ್ನು ಆಯಾಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳು ಇದ್ದವಾದರೂ ಈಗ ಗೋಚರಿಸುವುದಿಲ್ಲ. ಇಲ್ಲಿಯ ಭೌಗೋಳಿಕ ಲಕ್ಷಣಗಳಿಂದಾಗಿ ಕೋಟೆಯ ಮುಖ್ಯ ಬಾಗಿಲು ದಕ್ಷಿಣದ ಕೋಟೆ ಗೋಡೆಯಲ್ಲಿದಂತೆ ಕಾಣುತ್ತದೆ. ಈ ಭಾಗದಲ್ಲಿ ಕೋಟೆಯ ಒಳಹೋಗಲು ಸವೆದ ಮೆಟ್ಟಿಲುಗಳ ದಾರಿ ಇದೆ.

ಕೋಟೆಯೊಳಗಿರುವ ನಿಸರ್ಗದತ್ತ ಬಂಡೆಗಳನ್ನು ಕಡೆದು ನೀರಿನ ವ್ಯವಸ್ಥೆಗಾಗಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದರು. ಇಂತಹ ನಾಲ್ಕಾರು ಹೊಂಡಗಳು ಕೋಟೆಯ ನೈರುತ್ಯ ಭಾಗದಲ್ಲಿವೆ. ಇವುಗಳಿಗೆ ಹೆಸರುಗಳಿದ್ದವು. ಒಂದಕ್ಕೆ ಆನೆಹೊಂಡವೆಂದು ಕರೆದಿರುವುದು ಶಾಸನದಿಂದ ತಿಳಿಯುತ್ತದೆ.

ಕೋಟೆಯ ದಕ್ಷಿಣದಿಕ್ಕಿಗೆ ಪಾಳೆಯಗಾರರ ಬಾವಿ ಇದೆ. ಇದನ್ನು ತಂಬ್ರಹಳ್ಳಿ ಓಬರನಾಯಕ ಕಟ್ಟಿಸಿದನೆಂದು ತಿಳಿದುಬರುತ್ತದೆ.[10] ಇದು ಪೂರ್ವಾಭಿಮುಖವಾಗಿದ್ದು, ಸುಮಾರು ೧೦೦ ಅಡಿ ಉದ್ದ, ೧೫ ರಿಂದ ೨೦ ಅಡಿ ಅಗಲವಾಗಿದೆ. ಪ್ರವೇಶದಲ್ಲಿ ಬಹಳ ಉದ್ದವಾದ ಮೆಟ್ಟಿಲುಗಳಿವೆ. ಪ್ರವೇಶದ ಪ್ರಾರಂಭದಲ್ಲಿ ಭೂಮಿಯ ಮಟ್ಟದ ಮೇಲೆ ಕಟ್ಟಿದ ಮುಖಮಂಟಪವಿದೆ. ಬಾವಿಯ ಮುಖ ಪಾತ್ರಕ್ಕೆ ಹೋಗುವಾಗ ಎರಡೂ ಬದಿಗೆ ಕುಳಿತು ವಿಶ್ರಮಿಸಲು ಅನುಕೂಲವಾಗುವಂತೆ ಗೂಡುಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲುಗಳು ನೀರಿರುವ ಭಾಗವನ್ನು ಸಂಧಿಸುವ ಸ್ಥಳದಲ್ಲಿ ಸೇತುವೆ ಇದೆ. ಸೇತುವೆಯ ಮೇಲೆ ಮಾಳಿಗೆ ಇದ್ದು, ಇಲ್ಲಿ ವಿಶ್ರಾಂತಿ ಪಡೆಯಲು ಸ್ಥಳಾವಕಾಶವಿದೆ. ಬಾವಿಯನ್ನು ಅಲ್ಲಲ್ಲಿ ಶಿಲ್ಪಗಳಿಂದ ಅಲಂಕರಿಸಲಾಗಿದೆ. ನಾಲ್ಕು ದಿಕ್ಕಿನಿಂದ ನೀರನ್ನು ಮೇಲೆತ್ತುವಂತೆ ವ್ಯವಸ್ಥೆ ಮಾಡಲಾಗಿದೆ. ಗೋಡೆಗಳಲ್ಲಿ ಚಿಕ್ಕ ಹಾಗೂ ದೊಡ್ಡ ಗೂಡುಗಳಿವೆ. ಇವುಗಳಲ್ಲಿ ಗಣೇಶ, ಆಂಜನೇಯ, ಗರುಡ, ಕಾಳಿಂಗಮರ್ಧನ ಶಿಲ್ಪಗಳನ್ನು ಕೆತ್ತಲಾಗಿದೆ. ಕೋಟೆಯೊಳಗೆ ವಾಸ ಮಾಡುತ್ತಿದ್ದವರಿಗೆ ಈ ಬಾವಿಯಿಂದ ನೀರಿನ ಪೂರೈಕೆಯಾಗುತ್ತಿತ್ತೆಂದು ಸ್ಥಳೀಯರು ಅಭಿಪ್ರಾಯ ಪಡುವರು.

ಕೋಟೆಯ ಮಧ್ಯದಲ್ಲಿ ಬಂಡಿರಂಗನಾಥ, ಲಕ್ಷ್ಮಿ ಹಾಗೂ ಕನಕರಾಯನ ದೇವಾಲಯಗಳಿವೆ. ರಂಗನಾಥ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಕಲ್ಲು ಬಂಡೆಯ ಮೇಲೆ ಕೊರೆದಿರುವ ರಂಗನಾಥನ ಶಿಲ್ಪವಿದೆ. ಸದಾ ಕೆತ್ತನೆಯಿಂದ ಕೂಡಿದ ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಶಂಖ, ಚಕ್ರ, ಗದೆಗಳನ್ನು ಹಿಡಿದು ನಿಂತಿರುವ ದ್ವಾರಪಾಲಕರ ಶಿಲ್ಪಗಳಿವೆ. ಅಂತರಾಳದ ಪ್ರವೇಶದ್ವಾರವು ಇದೇ ಮಾದರಿಯದ್ದಾಗಿದೆ. ಸಭಾಮಂಟಪದಲ್ಲಿ ನಾಲ್ಕು ಚೌಕಾಕಾರದ ಕಂಬಗಳಿವೆ. ಅವುಗಳಲ್ಲಿ ಆಳ್ವಾರ್, ಲಜ್ಜೆಗೌರಿ ಶಿಲ್ಪಗಳನ್ನು ಇದರಲ್ಲಿರುವ ದೇವ ಕೋಷ್ಠಕಗಳಲ್ಲಿ ಗಾರೆ ಶಿಲ್ಪಗಳನ್ನು ಅಳವಡಿಸಲಾಗಿದೆ.

ಲಕ್ಷ್ಮೀ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ ಹಾಗೂ ಸಭಾಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಲಕ್ಷ್ಮಿ ದೇವಿಯ ವಿಗ್ರಹವಿದೆ. ಪ್ರವೇಶದ್ವಾರವು ಸಾದಾ ಕೆತ್ತನೆಯಿಂದ ಕೂಡಿದೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ, ಈ ದೇವಾಲಯವನ್ನು ಕಣಶಿಲೆ ಹಾಗೂ ಗಾರೆಯಿಂದ ನಿರ್ಮಿಸಲಾಗಿದೆ.

ಕನಕರಾಯನ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಸಭಾಮಂಟಪವನ್ನು ಹೊಂದಿದೆ.

ಹಂಪಾಪಟ್ಟಣ

ಹಂಪಾಪಟ್ಟಣವು ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರದಿಂದ ಈಶಾನ್ಯದಿಕ್ಕಿಗೆ ಸುಮಾರು ೧೨ ಕಿ.ಮೀ. ದೂರದಲ್ಲಿರುವ ಒಂದು ಹೋಬಳಿ ಕೇಂದ್ರ. ಪಾಳೆಯಗಾರರ ಅವಧಿಯಲ್ಲಿ ಕಟ್ಟಿರುವ ಕೋಟೆಯ ಅವಶೇಷಗಳು ಇಲ್ಲಿವೆ.

ಈ ಕೋಟೆಯ ಕಾಲ ಮತ್ತು ನಿರ್ಮಾಣಕರನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ. ಆಧಾರಗಳ ಕೊರತೆ. ಸ್ಥಳಿಯರು ಹಂಪಾಪಟ್ಟಣ ಹಂಪಾದೇವಿಯ ತವರೂರು ಹಾಗಾಗಿ ಹಂಪಿಗೂ ನಮ್ಮೂರಿಗೂ ನಿಕಟವಾದ ಸಂಬಂಧಗಳಿವೆ ಎಂದಿಷ್ಟೆ ಹೇಳುತ್ತಾರೆ.

ಹರಪನಹಳ್ಳಿ ಪಾಳೆಯಗಾರರ ಸೋಮಶೇಖರ ನಾಯಕನು ಆಳ್ವಿಕೆ ಮಾಡುವಾಗ ಅವನಿಗೆ ಮಂತ್ರಿಯಾಗಿದ್ದವನು ಹಂಪರಸ. ರಾಜನ ವಿರುದ್ಧ ಬ್ರಿಟಿಷರ ಪರ ಹಂಪರಸ ಪಿತೂರಿ ಮಾಡಿದಂತೆ. ಅದಕ್ಕಾಗಿ ಸೋಮಶೇಖರ ನಾಯಕನು ಹಂಪರಸನನ್ನು ಸಂಹರಿಸುವ ಒಳಸಂಚು ಮಾಡಿದ. ಇದನ್ನರಿತ ಹಂಪರಸ ಬ್ರಿಟಿಷ್ ಅಧಿಕಾರಿ ಹ್ಯಾರಿಸನ ಸಹಾಯ ಕೇಳಿದನು, ಆಗ ಹ್ಯಾರಿಸನು ಹೊಸಪೇಟೆ ತಾಲೂಕಿನ ನಂದಿಬಂಡಿ, ಕಲ್ಲಹಳ್ಳಿ, ಬೆನಕನಗುಡಿ ಎಂಬ ಗ್ರಾಮಗಳನ್ನು ಹಂಪರಸನಿಗೆ ಜಹಗೀರಾಗಿ ಕೊಟ್ಟನು.[11] ಈ ಗ್ರಾಮಗಳು ಇಂದಿನ ಹಂಪಾಪಟ್ಟಣದ ಸುತ್ತಮುತ್ತಲೂ ಇವೆ. ಈ ಹಿನ್ನೆಲೆಯಲ್ಲಿ ಹಂಪರಸನೇ ಇಲ್ಲಿ ರಾಜ್ಯಭಾರ ಮಾಡಿ ಕೋಟೆ ಕಟ್ಟಿಕೊಂಡನೇ ಎಂಬ ಅನುಮಾನವಿದೆ.

ಕೋಟೆಯು ಗ್ರಾಮದ ಹೊರಭಾಗದಲ್ಲಿದ್ದು, ಇಲ್ಲಿ ಜನವಾಸವಿಲ್ಲ. ಚೌಕಾಕಾರದಲ್ಲಿರುವ ಇದು ಸುಮಾರು ೪ ಎಕರೆ ವಿಸ್ತೀರ್ಣವುಳ್ಳದ್ದಾಗಿದೆ. ಇಲ್ಲಿ ಹಾಳು ಮನೆಗಳು ಮತ್ತು ಕಟ್ಟಡಾವಶೇಷಗಳು ಕಂಡುಬರುತ್ತವೆ. ಕೋಟೆಗೆ ಉತ್ತರ ದಿಕ್ಕಿನಲ್ಲಿ ಅಗಸಿಯಿದೆ. ಕೋಟೆ ಗೋಡೆಯಲ್ಲಿ ವೃತ್ತಾಕಾರದ ನಾಲ್ಕು ಕೊತ್ತಳಗಲಿರುವಂತೆ ಗೋಚರಿಸುತ್ತದೆ. ಕೋಟೆ ಗೋಡೆಯನ್ನು ಚಿಕ್ಕ ಚಿಕ್ಕ ಕಲ್ಲುಗಳು, ಇಟ್ಟಿಗೆ ಇವುಗಳ ಮಧ್ಯೆ ಮಣ್ಣನ್ನು ತುಂಬಿ ಕಟ್ಟಲಾಗಿದೆ. ನೆಲಮಟ್ಟದಿಂದ ಗೋಡೆ ಎಷ್ಟು ಎತ್ತರ ಇತ್ತು ಎಂಬುದಕ್ಕೆ ಪೂರ್ಣ ಪ್ರಮಾಣದ ಗೋಡೆ ಎಲ್ಲೂ ಕಂಡು ಬರುವುದಿಲ್ಲ. ಕೋಟೆಯ ಸುತ್ತಲೂ ಸುಮಾರು ೧೫ ಅಡಿ ಅಗಲ ೧೦ ಅಡಿ ಆಳವಾಗಿರುವ ಕಂದಕವಿದೆ. ಶಿಥಿಲಾವಸ್ಥೆಯಲ್ಲಿರುವ ಕೋಟೆಯ ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಲ್ಲಿ ಗೋಡೆಯ ಅಲ್ಪ-ಸ್ವಲ್ಪ ಭಾಗಗಳು ಕಂಡುಬರುತ್ತವೆ. ಕೋಟೆಯೊಳಗೆ ಎರಡು ಚಿಕ್ಕ ದೇವಾಲಯಗಳಿವೆ.

ಬಾವಿ, ಕಣಜ ಮತ್ತು ಪಾರ್ವತಿ ವಿಗ್ರಹಗಳಿವೆ. ಬಾವಿಯನ್ನು ಮಧ್ಯಮ ಗಾತ್ರದ ಕಣ ಶಿಲೆಯಿಂದ ಕಟ್ಟಲಾಗಿದೆ. ಪಾಳೆಯಗಾರರು ಬಳಸಿದ್ದರು ಎನ್ನಲಾದ ಮೂರು ಅಡಿ ಎತ್ತರದ ಎರಡು ಖಡ್ಗಗಳು, ಒಂದೂವರೆ ಅಡಿ ಎತ್ತರದ ಕೈಗತ್ತಿ, ಕೈಗೊಡಲಿ, ನಾಲ್ಕು ಅಡಿ ಎತ್ತರದ ಬಂದೂಕುಗಳು ದೊರೆತಿವೆ. ಇವುಗಳ ಛಾಯಾಚಿತ್ರವನ್ನು ನೀಡಲಾಗಿದೆ. ಕೋಟೆಯ ಮುಂಭಾಗದಲ್ಲಿ ಆಂಜನೇಯನ ಹಾಗೂ ವೀರಭದ್ರ ದೇವಾಲಯದ ಜೊತೆಗೆ ಪಾಳೆಯಗಾರರ ದೊಡ್ಡ ಬಾವಿ ಇದೆ. ಆಂಜನೇಯನ ಗುಡಿಯ ಮುಂದೆ ಭೈರವಿ, ಪಾರ್ವತಿ ಶಿಲ್ಪಗಳಿವೆ.

ಹನಸಿ

ಹನಸಿ ಗ್ರಾಮವು ಹಗರಿಬೊಮ್ಮನಹಳ್ಳಿಯಿಂದ ಆಗ್ನೇಯ ದಿಕ್ಕಿಗೆ ೧೮ ಕಿ.ಮೀ. ದೂರದಲ್ಲಿದೆ. ಈ ಊರಿನ ಮೊದಲ ಹೆಸರು ನಾಗರಕಟ್ಟೆ. ಕಟ್ಟೆಯನ್ನು ತೆಗೆದು ಕೆರೆ ನಿರ್ಮಿಸಿದ ಮೇಲೆ ಭತ್ತ ಬೆಳೆಯಲು ಆರಂಭಿಸಿದರಂತೆ. ಈ ಭತ್ತದಿಂದ ತೆಗೆದ ಅಕ್ಕಿಯ ಅನ್ನ (ಅನ್ನ+ಸಿಹಿ) ಸಿಹಿ ಇದ್ದುದರಿಂದ ಈ ಗ್ರಾಮಕ್ಕೆ ‘ಹನಸಿ’ ಎಂಬ ಹೆಸರು ಬಂದಿತ್ತೆಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಹನಸಿ ಎಂದರೆ ನೀರಾಡು, ನೀರುಸುರಿ, ಹಸಿಯಾಗಿರು, ತೇವವಾಗಿರು ಎಂಬರ್ಥಗಳಿವೆ. ಈ ಗ್ರಾಮದ ಪಕ್ಕದಲ್ಲಿಯೇ ಹರಿದಿರುವ ಹಳ್ಳಕ್ಕೆ ಕೆರೆ ಕಟ್ಟಿರುವುದರಿಂದ ಗ್ರಾಮದಲ್ಲಿಯ ಭುಮಿ ಯಾವಾಗಲು ಹಸಿಯಾಗಿಯೇ ಇರುವ ಕಾರಣಕ್ಕಾಗಿ ‘ಹನಸಿ’ ಎಂಬ ಹೆಸರು ಬಂದಿರುವ ಸಾಧ್ಯತೆಗಳೂ ಇವೆ. ಈ ಗ್ರಾಮದ ಕ್ರಿ.ಶ. ೧೧೧೧ರ ಶಾಸನವು “ಹನಸೆ”ಎಂದು ಕರೆದಿದೆ.

ಕ್ರಿ.ಶ. ೧೧೧೧ರ ಚಾಳುಕ್ಯರ ಶಾಸನದಿಂದ ಪಾಂಡ್ಯರ ಆಡಳಿತ ವ್ಯಾಪ್ತಿಗೆ ಹನಸಿಯು ಸೇರಿರುವುದು ಸ್ಪಷ್ಟವಾಗುತ್ತದೆ.೧೧ ಮುಂದೆ ವಿಜಯನಗರದರಸರು, ಪಾಳೆಯಗಾರರು ಆಳ್ವಿಕೆ ಮಾಡಿದರು. ಇಲ್ಲಿಯ ಕೋಟೆಯನ್ನು ಈ ಮೇಲಿನ ಯಾವ ಅರಸರು ಮನೆತನದವರು ಕಟ್ಟಿಸಿದರೆಂಬುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ. ಆದರೆ ಸ್ಥಳೀಯರು ಇದು ಪಾಳೆಯಗಾರರ ಕೋಟೆಯೆಂದು ಗುರುತಿಸುತ್ತಾರೆ.

ಕ್ರಿ.ಶ. ೧೬ ರಿಂದ ವರೆಗೆ ಆಳ್ವಿಕೆ ಮಾಡಿದ ಹರಪನಹಳ್ಳಿ ಪಾಳೆಯಗಾರ ಭರಮಣ್ಣನಾಯಕನು ಹನಸಿ ಕೋಟೆಗೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದನು. ಆದರೆ ಕೋಟೆಯು ಹೆಚ್ಚು ಭದ್ರವಾಗಿರುವುದಲ್ಲದೆ ರಾಗಿಯ ಅಂಬಲಿಯನ್ನು ಕೋಟೆ ಗೋಡೆಗೆ ಹಾಕ್ಕಿದ್ದರಿಂದ ಶತ್ರುಗಳಿಗೆ ಇದನ್ನೇರಲು ಹಾಗಲಿಲ್ಲ. ಹೀಗಾಗಿ ಭರಮಣ್ಣ ನಾಯಕನಿಗೆ ಹನಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಆಗ, ಕೋಟೆ ಹೊರಗಿನ ಹೊಲದ ನವಣೆ ಪೈರಿಗೆ ಬೆಂಕಿ ಹಚ್ಚಿದನು. ಇದನ್ನಾರಿಸಲು ಬಂದ ಹನಸಿ ಕೋಟೆ ಕಾವಲು ಪಡೆಯನ್ನು ಸಂಹರಿಸಿ ಮೂರು ತಿಂಗಳ ನಂತರ ಕೋಟೆಯನ್ನು ವಶಪಡಿಸಿಕೊಂಡರೆಂದು ತಿಳಿದುಬರುತ್ತದೆ.[12] ಇದರಿಂದ ಹನಸಿ ಕೋಟೆ ಬಲಾಢ್ಯತೆಯ ಅರಿವಾಗುತ್ತದೆ.

ಈ ಮೇಲಿನ ಆಧಾರ ಮತ್ತು ಚರ್ಚೆಗಳ ಹಿನ್ನೆಲೆಯಲ್ಲಿ ಹರಪನಹಳ್ಳಿ ಪಾಳೆಯಗಾರರ ಸಮಕಾಲೀನ ಈ ಭಾಗದ ಪಾಳೆಯಗಾರರೆಂದರೆ ಜರಿಮಲೆ ನಾಯಕರು. ಇವರು ಹರಪನಹಳ್ಳಿ ನಾಯಕರ ಪ್ರತಿಸ್ಪರ್ಧಿಗಳೂ ಹೌದು. ಹನಸಿ ಕೋಟೆ ಜರಿಮಲೆ ನಾಯಕರ ವಶದಲ್ಲಿದ್ದಿರಬಹುದೆಂದು ಕಾಣುತ್ತದೆ.

ಹನಸಿ ಕೋಟೆ ಗೋಲಾಕಾರದ ನೆಲದುರ್ಗ, ಕೋಟೆಯ ಸುತ್ತಲೂ ಆಳವಾದ ಕಂದಕ, ಇದರಲ್ಲಿ ನೀರನ್ನು ತುಂಬಿ ಮೊಸಳೆಗಳನ್ನು ಬಿಡುತ್ತಿದ್ದುದು ಸ್ಥಳೀಯ ವೃದ್ಧರಿಂದ ತಿಳಿಯುವುದು. ಶತ್ರುಗಳು ಈ ಕೋಟೆಗೆ ಮುತ್ತಿಗೆ ಹಾಕಲು ಸುಲಭವಾಗದಂತೆ ಎಚ್ಚರಿಕೆ ವಹಿಸಿ ಹಳ್ಳದ ಮತ್ತು ಕಟ್ಟಲಾಗಿದೆ. ಕೋಟೆಯ ಕಟ್ಟಡಕ್ಕೆ ಮಧ್ಯಮ ಮತ್ತು ಚಿಕ್ಕಗಾತ್ರದ ಕಲ್ಲುಗಳು ಮಣ್ಣು ಮತ್ತು ಮರವನ್ನು ಬಳಸಲಾಗಿದೆ. ಸುಮಾರು ೧೫ ಅಡಿ ಎತ್ತರವಿರುವ ಕೋಟೆಯ ಮೇಲಿನ ಕುಂಬಿಗಳು ಚಿಕ್ಕದಾಗಿದೆ. ಗೋಡೆಯ ಅಗಲ ೩ ರಿಂದ ೪ ಅಡಿಗಳಷ್ಟಿದೆ. ಕೋಟೆ ಸುಮಾರು ೫ ರಿಂದ ೧೦ ಎಕರೆಗಳವರೆಗೂ ವಿಸ್ತೀರ್ಣಗೊಂಡಿದೆ. ಈಗ ಎರಡು ಚಿಕ್ಕ ಗೋಡೆಗಳು ಮಾತ್ರ ಉಳಿದುಕೊಂಡಿವೆ. ಉಳಿದೆಡೆ ಕೋಟೆ ಗೋಡೆ ಬಿದ್ದು ಹೋಗಿದೆ.

ಕೋಟೆಯ ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟಿಸಿದ ಒಟ್ಟು ಮೂರು ಕೊತ್ತಳಗಳಿದ್ದವು. ಪ್ರಸ್ತುತ ವೃತ್ತಾಕಾರದ ಅರ್ಧ ಮುಕ್ಕಾಗಿರುವ ಒಂದು ಕೊತ್ತಳ ಮಾತ್ರ ಗೋಚರಿಸುತ್ತದೆ. ಕೋಟೆಯೊಳಗೆ ಜನರು ವಾಸಮಾಡುತ್ತಾರೆ. ಇದರ ದಕ್ಷಿಣದಿಕ್ಕಿಗೆ ಪರಮೇಶ್ವರ ದೇವಾಲಯವಿದೆ. ಇದು ಗರ್ಭಗೃಹ ಸಭಾಮಂಟಪ ಹಾಗೂ ಪ್ರಾಕಾರಗಳಿಂದ ಕೂಡಿದೆ. ದಕ್ಷಿಣಾಭಿಮುಖವಾಗಿರುವ ಈ ದೇಗುಲ ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಪ್ರವೇಶದ್ವಾರಕ್ಕೆ ತ್ರಿಶೂಲ, ಡಮರು, ಗದೆಗಳನ್ನು ಹಿಡಿದು ನಿಂತಿರುವ ದ್ವಾರಪಾಲಕರ ವಿಗ್ರಹಗಳಿವೆ. ವಿಶಾಲವಾದ ಅಂತರಾಳದ ಪ್ರವೇಶದ್ವಾರವು ಸಾದಾ ಕೆತ್ತನೆಯಿಂದ ಕೂಡಿದೆ. ಸಭಾಮಂಟಪದಲ್ಲಿ ವಿಜಯನಗರ ಮಾದರಿಯ ಕಂಬಗಳಿವೆ. ಇದಕ್ಕೆ ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಿಗೂ ಪ್ರವೇಶದ್ವಾರಗಳಿವೆ. ಮುಖ್ಯ ಪ್ರವೇಶದ್ವಾರದ ಲಲಾಟಬಿಂಬದಲ್ಲಿ ನಂದಿಯ ಉಬ್ಬುಶಿಲ್ಪವಿದೆ. ದೇವಾಲಯದ ಹೊರಗೋಡೆಗಳು ಸರಳ ಶೈಲಿಯಲ್ಲಿವೆ. ಗರ್ಭಗೃಹದ ಮೇಲ್ಭಾಗದಲ್ಲಿ ನಂದಿಶಿಲ್ಪಗಳು ಹಾಗೂ ದೇವಕೋಷ್ಟಕಗಳಿಂದ ಕೂಡಿ ವರ್ತುಲಾಕಾರದ ಕೂಟ ಶಿಖರವಿದೆ. ಸಭಾಮಂಟಪವು ಜೀರ್ಣೋದ್ಧಾರಗೊಂಡಿದೆ.

ಕೋಟೆಯ ಹೊರಗೆ ನೈರುತ್ಯ ದಿಕ್ಕಿಗೆ ರಾವೇಶ್ವರ ದೇವಾಲಯವಿದೆ. ಇದು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ, ಸಭಾಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ಪ್ರವೇಶದ್ವಾರವು ಸಾದಾ ಕೆತ್ತನೆಯಿಂದ ಕೂಡಿದ್ದು, ಲಲಾಟ ಬಿಂಬದಲ್ಲಿ ಗಜಲಕ್ಷ್ಮಿ ಹಾಗು ಶೈವ ದ್ವಾರಪಾಲಕರ ಶಿಲ್ಪಗಳಿವೆ. ಅಂತರಾಳದಲ್ಲಿ ಸುಖಾಸನದಲ್ಲಿರುವ ಬನಶಂಕರಿ ಶಿಲ್ಪ, ಇದರ ಪಾರ್ಶ್ವದಲ್ಲಿ ಪಾರ್ವತಿ ಶಿಲ್ಪವಿದೆ. ಸಭಾಮಂಟಪಕ್ಕೆ ಉತ್ತರ ಹಾಗೂ ದಕ್ಷಿಣ ದಿಕ್ಕುಗಳಿಗೂ ಪ್ರವೇಶದ್ವಾರಗಳಿವೆ. ಒಳಗೆ ಸಪ್ತಮಾತೃಕಾ, ಗಣೇಶ ಹಾಗೂ ಶಾಸನ ಶಿಲ್ಪಗಳಿವೆ. ಈ ಶಾಸನದಲ್ಲಿ ಕ್ರಿ.ಶ. ೧೧೧೧ ರಲ್ಲಿ ಕೋಗಳಿ-೫೦೦ರ ಹನಸಿಯ ಒರಾಶುರಾಮೇಶ್ವರ ದೇವರಿಗೆ ಚಿಕ್ಕಲಬ್ಬೆ ಕೆರೆಯನ್ನು ದಾನ ನೀಡಿದ ಉಲ್ಲೇಖವಿದೆ. ಈ ದೇವಾಲಯ ಬದಿಯಲ್ಲಿ ಭೀಮೇಶ್ವರ ದೇವಾಲಯವಿದೆ.

ಹನಸಿ ಗ್ರಾಮಸ್ಥರ ಹೇಳಿಕೆಗಳು, ಕೋಟೆಯ ಲಕ್ಷಣಗಳು, ಈ ಭಾಗದ ರಾಜಕೀಯ ಏರಿಳಿತಗಳು ಮತ್ತು ಪ್ರಾಚೀನ ದೇವಾಲಯಗಳನ್ನು ಗಮನಿಸಲಾಗಿ ಹನಸಿಯು ಕ್ರಿ.ಶ. ೧೧೧೧ ರಲ್ಲಿ ಕೋಗಳಿ-೫೦೦ ಕ್ಕೆ ಸೇರಿದ್ದಾಗ ಇಲ್ಲೊಂದು ಕೋಟೆ ಕಟ್ಟಿಸಿರಬಹುದು. ನಂತರ ಪಾಳೆಯಗಾರರು ಈ ಕೋಟೆಯನ್ನು ಜೀರ್ಣೋದ್ಧಾರಗೊಳ್ಳಿರುವ ಸಾಧ್ಯತೆಗಳಿವೆ.

[1] ವೀಣಾ, ಎಂ.ಪಿ. ೧೯೯೮, ಕೋಟ್ನಕಲ್ಲು ಪರಿಸರದ ಪ್ರಾಗೈತಿಹಾಸಿಕ ನೆಲೆಗಳು, ಇತಿಹಾಸ ದರ್ಶನ-೧೩, ಪು. ೧೬

[2] Foote R.B. 1916, The Foote collections of Pre historic & Proto historic Antiquities notes on their ages & distribution, p.80, Madras; Govt of Museum.

[3] ಶಿವತಾರಕ್. ಕೆ.ಬಿ. ೨೦೦೧, ಕರ್ನಾಟಕದ ಪುರಾತತ್ವ ನೆಲೆಗಳು, ಪು. ೩೬೫ ಹಂಪಿ ಕನ್ನಡ ವಿಶ್ವವಿದ್ಯಾಲಯ.

[4] ಜೋಶಿ, ಎಸ್.ಕೆ. ೨೦೦೦, ಕರ್ನಾಟಕದ ಪ್ರಾಚೀನ ಕೋಟೆಗಳು, ಸೂರ್ಯಕೀರ್ತಿ (ಸಂ ಕೃಷ್ಣಮೂರ್ತಿ ಪಿ.ವಿ. ಮತ್ತು ಕೆ. ವಸಂತಲಕ್ಷ್ಮಿ) ಪು. ೧೪೯, ಬೆಂಗಳೂರು ಸೂರ್ಯನಾಥ ಕಾಮತ್ ಅಭಿನಂಧನಾ ಸಮಿತಿ

[5] ಕುಂಬಾಸ, ೧೯೯೬, ಹರಪನಹಳ್ಳಿ ಪಾಳೆಯಗಾರರು, ಪು. ೧೬ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು

[6] ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ-೧, ಪು. ೨೯೩-೨೯೫. ಹಂಪಿ ಕನ್ನಡ ವಿಶ್ವವಿದ್ಯಾಲಯ

[7] ಅದೇ, ಪು. ೨೯೪-೨೯೫

[8] ಅದೇ, ಪು. ೨೯೫

[9] ಅದೇ, ಪು. ೨೯೪-೨೯೫

[10] ಹರಪನಹಳ್ಳಿ ಪಾಳೆಯಗಾರರು, ಪೂರ್ವೋಕ್ತ. ಪು. ೧೬

[11] SII, (pt. 1), No. 184 ಹನಸಿ

[12] ಸದಾಶಿವಪ್ಪ, ಕುಂ.ಬಾ. ೧೯೯೬ ಹರಪನಹಳ್ಳಿ ಪಾಳೆಯಗಾರರು, ಪು. ೧೬-೩೦, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು.