ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರವಾದ ಹಡಗಲಿ, ಬಳ್ಳಾರಿಯಿಂದ ಪಶ್ಚಿಮಕ್ಕೆ ಸುಮಾರು ೧೫೦ ಕಿ.ಮೀ. ದೂರದಲ್ಲಿದೆ. ತಾಲೂಕನ್ನು ಉತ್ತರದಲ್ಲಿ ಹಗರಿಬೊಮ್ಮನಹಳ್ಳಿ ಮತ್ತು ಹಾವೇರಿ ಜಿಲ್ಲೆಯ ಶಿರಹಟ್ಟಿ ತಾಲೂಕುಗಳು, ಪೂರ್ವದಲ್ಲಿ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ, ದಕ್ಷಿಣದಲ್ಲಿ ಹರಪನಹಳ್ಳಿ, ಪಶ್ಚಿಮದಲ್ಲಿ ಹಾವೇರಿ ಮತ್ತು ರಾಣಿಬೆನ್ನೂರು ತಾಲೂಕುಗಳು ಸುತ್ತುವರೆದಿದೆ. ಇಟ್ಟಿಗೆ, ಹಿರೇಹಡಗಲಿ, ಮಾಗಳ, ಉತ್ತಂಗಿ, ಹೊಳಲು ಈ ತಾಲೂಕಿನ ಹೋಬಳಿಗಳು.

ತಾಲೂಕಿನ ದಕ್ಷಿಣ ಮತ್ತು ಪಶ್ಚಿಮದ ಅಂಚಿನಲ್ಲಿ ತಾಲೂಕು ಗಡಿಯಾಗಿ ತುಂಗಭದ್ರಾ ನದಿ ಸ್ವಲ್ಪ ದೂರ ಹರಿಯುವುದು. ಈ ನದಿಯೇ ರಾಣಿಬೆನ್ನೂರು, ಹಾವೇರಿ ಮತ್ತು ಶಿರಹಟ್ಟಿ ತಾಲೂಕುಗಳನ್ನು ಹಡಗಲಿ ತಾಲೂಕಿನಿಂದ ಬೇರ್ಪಡಿಸಿದೆ. ಇದರ ಪೂರ್ವದಲ್ಲಿ ಸ್ವಲ್ಪದೂರ ಚಿನ್ನಹಗರಿ ನದಿ ಹರಿಯುವುದು. ಮಲ್ಲಪ್ಪನ ಗುಡ್ಡ ಶ್ರೇಣಿ ಈ ತಾಲೂಕಿನಲ್ಲಿ ವಾರ್ಷಿಕ ಸರಾಸರಿ ಮಳೆ ೬೭೧. ೬೧ ಮಿ. ಮೀ. ಎಣ್ಣೆ ಉತ್ಪಾದನೆ ಮತ್ತು ಹತ್ತಿ ಸಂಸ್ಕರಣೆ ಕೈಗಾರಿಕೆಗಳುಂಟು, ಈ ಹಿನ್ನೆಲೆಯಲ್ಲಿ ವಾಣಿಜ್ಯದಲ್ಲಿ ಬಹುಪ್ರಗತಿಯತ್ತ ಸಾಗಿದೆ. ಇದು ಇಂದಿನ ದೃಶ್ಯವಾದರೆ ಹಿಂದೆ ಈ ತಾಲೂಕು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿತ್ತು.

ಆದಿಹಳೆಯ ಶಿಲಾಯುಗ ಸಂಸ್ಕೃತಿ ನೆಲೆಯ ಉಪಕರಣಗಳು ತಾಲೂಕಿನ ಕುರುವತ್ತಿಯಲ್ಲಿ ಕಡಬಂದರೆ,[1] ಅಲ್ಲೀಪುರ, ಮಾಗಳ, ಮೈಲಾರ, ರಾಜವಾಳಗಳಲ್ಲಿ ನೂತನ ಶಿಲಾಯುಗ ಸಂಸ್ಕೃತಿಯ ಅವಶೇಷಗಳು ದೊರೆತಿವೆ.[2] ಶಿಲಾ ತಾಮ್ರಯುಗದ ಸಂಸ್ಕೃತಿಯ ಮಸುಕಾದ ಕೆಂಪುವರ್ಣದ ಮಡಿಕೆ ಭಾಗದ ಅವಶೇಷಗಳು ಅಲ್ಲೀಪುರದಲ್ಲಿ ಪತ್ತೆಯಾಗಿದೆ.[3] ಕೊಟ್ನಿಕಲ್ಲು, ಅಲ್ಲೀಪುರ, ನವಲಿ, ಮಾಗಳ, ಮೈಲಾರ, ರಾಜಾವಳ ಹುಲಿಗುಡ್ಡ ಮತ್ತು ಹೂವಿನಹಡಗಲಿಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಯ ಕಲ್ಗೋರಿಗಳು ಕಪ್ಪು ವರ್ಣದ ಮಡಿಕೆ ಭಾಗಗಳು ಹಾಗೂ ಜನವಾಸ್ತವ್ಯದ ನೆಲೆಗಳು ಕಂಡುಬಂದಿವೆ.[4] ಇತಿಹಾಸ, ಆರಂಭಯುಗದ ಅವಶೇಷಗಳು ಮೈಲಾರ, ಕೋಗಳಿ, ಮಾಗಳಗಳಲ್ಲಿ ಇರುವುವು.[5] ಇವುಗಳ ಆಧಾರದಿಂದಾಗಿ ಈ ತಾಲೂಕು ಪ್ರಾಚೀನ ಮಾನವನ ಅವಾಸಸ್ಥಾನವಾಗಿತ್ತೆಂದು ತಿಳಿದುಬರುವುದು.

ಮೌರ್ಯರು ಇಲ್ಲಿ ಆಳ್ವಿಕೆ ಮಾಡಿದ ಬಗ್ಗೆ ಅನುಮಾನಗಳಿವೆ. ಆದರೆ ಮೌರ್ಯರ ಆಡಳಿತ ವ್ಯಾಪ್ತಿಗೆ ಈ ಹಡಗಲಿ ತಾಲೂಕು ಸೇರಿತ್ತೆಂಬುದು ಸಮೀಪದ ಕೊಪ್ಪಳ, ಸಿರುಗುಪ್ಪ ತಾಲೂಕಿನಲ್ಲಿ ದೊರೆತ ಮೌರ್ಯರ ಶಾಸನಗಳೇ ಆಧಾರಗಳಾಗಿವೆ. ಶಾತವಾಹನರು ಮತ್ತು ಪಲ್ಲವರಿಗೂ ಈ ಪ್ರದೇಶ ಸೇರಿರುವುದು ಇದೇ ತಾಲೂಕಿನ ಹಿರೆಹಡಗಲಿಯಲ್ಲಿ ದೊರೆತ ಪ್ರಾಕೃತ ಶಾಸನದಿಂದ ತಿಳಿಯುತ್ತದೆ.[6] ಬಾದಾಮಿ ಚಾಳುಕ್ಯರ ಯಾವುದೇ ಸ್ಮಾರಕಾವಶೇಷಗಳು, ಶಾಸನಗಳು ಇಲ್ಲಿ ದೊರೆಯುವುದಿಲ್ಲ. ರಾಷ್ಟ್ರಕೂಟರ ಸುಮಾರು ಹನ್ನೊಂದು ಶಾಸನಗಳು ಪಕ್ಕದ ಹರಪನಹಳ್ಳಿ ತಾಲೂಕಿನಲ್ಲಿ ಕಂಡುಬಂದಿರುವುದರಿಂದ ಈ ಪ್ರದೇಶದಲ್ಲಿ ರಾಷ್ಟ್ರಕೂಟರು ಆಳ್ವಿಕೆ ಮಾಡಿರುವುದು ವೇದ್ಯವಾಗುತ್ತದೆ.[7] ಕಲ್ಯಾಣ ಚಾಳುಕ್ಯರ ಶಾಸನಗಳು ಮತ್ತು ದೇವಾಲಯಗಳು ಕುರುವತ್ತಿ, ಹೊಳಲು, ಕತ್ತೆಬೆನ್ನೂರು, ಹಿರೇಹಡಗಲಿ, ಹೊಳಗುಂದಿಗಳಲ್ಲಿ ಕಂಡುಬಂದಿವೆ. ಕಲ್ಯಾಣ ಚಾಳುಕ್ಯರು ನೇರವಾಗಿ ಇಲ್ಲಿ ಆಳ್ವಿಕೆ ಮಾಡಲಿಲ್ಲ. ಇವರ ಸಾಮಂತರಾಗಿ ನೊಳಂಬರು ನೊಳಂಬವಾಡಿ-೩೨೦೦೦ ಎಂಬ ದೊಡ್ಡ ಪ್ರಾಂತದ ಅಧಿಕಾರಿಗಳಾಗಿ ಆಳ್ವಿಕೆ ಮಾಡಿದರು. ಆಗ ಈ ತಾಲೂಕು ಸಂಪೂರ್ಣವಾಗಿ ಅವರ ಆಡಳಿತ ವ್ಯಾಪ್ತಿಗೆ ಸೇರಿತ್ತು. ಆಗ ಕುರುವತ್ತಿ, ಹೊಳಲು, ಸೋಗಿ, ಹೂವಿನಹಡಗಲಿ, ಮಾಗಳ, ಹೊಳಗುಂದಿ, ಉತ್ತಂಗಿಗಳಲ್ಲಿ ಕೋಟೆಗಳಿದ್ದುದಾಗಿ ತಿಳಿದುಬರುತ್ತದೆ.[8] ಆದರೆ ಶಾಸನಗಳಲ್ಲಿ ಮಾತ್ರ ಹೂವಿನಹಡಗಲಿ,[9] ಹಿರೇಹಡಗಲಿ,[10] ಮತ್ತು ಸೋಗಿ[11]ಯ ಕೋಟೆಗಳ ಪ್ರಸ್ತಾಪವಿದೆ. ಆದರೆ ಈ ಯಾವ ಕೋಟೆಗಳಾಗಲಿ ಅಥವಾ ಅದರ ಅವಶೇಷಗಳಾಗಲಿ ಇಂದು ಉಳಿದಿಲ್ಲ. ಹೊಳಲು, ಹೂವಿನಹಡಗಲಿಗಳಲ್ಲಿ ಕೋಟೆಯ ಮಾಹಿತಿಗಳಿರುವುದರಿಂದ ಅವುಗಳನ್ನು ಇಲ್ಲಿ ಚರ್ಚಿಸಲಾಗಿದೆ.

ನೊಳಂಬರ ನಂತರ ತಾಲೂಕು ಹೊಯ್ಸಳರ ಆಡಳಿತಕ್ಕೆ ಒಳಗಾಗಿರುವುದನ್ನು ಈ ಪ್ರದೇಶದ ಮಾಗಳ, ರಂಗಾಪುರ, ಹೊಳಲು, ಶಾಸನಗಳಿಂದ ಅರಿಯಬಹುದು.[12] ನಂತರ ವಿಜಯನಗರದ ಅರಸರು, ಪಾಳೆಯಗಾರರು, ಬ್ರಿಟಿಷರು ಇಲ್ಲಿ ಆಳ್ವಿಕೆ ಮಾಡಿದರು. ವಿಜಯನಗರೋತ್ತರ ಕಾಲದಲ್ಲಿ ಹ್ಯಾರಡ, ಬುದನೂರುಗಳಲ್ಲಿ ಕೋಟೆ ನಿರ್ಮಾಣವಾಗಿರುವ ಪ್ರಸ್ತಾಪಗಳಿವೆ. ಇವು ಕೂಡ ಸುಸ್ಥಿತಿಯಲ್ಲಿಲ್ಲ. ಅಳಿದುಳಿದ ಅವಶೇಷಗಳಿಂದ ಹ್ಯಾರಡ ಕೋಟೆಯ ಬಗ್ಗೆ ಕೆಳಗೆ ಚರ್ಚಿಸಲಾಗಿದೆ.

ಹ್ಯಾರಡ

ಹ್ಯಾರಡ ಗ್ರಾಮವು ಹೂವಿನಹಡಗಲಿ ತಾಲೂಕಿನಲ್ಲಿದ್ದು, ತಾಲೂಕು ಕೇಂದ್ರದಿಂದ ಸುಮಾರು ೨೮ ಕಿ.ಮೀ ದೂರದಲ್ಲಿದೆ. ಗ್ರಾಮದ ಮಧ್ಯದಲ್ಲಿ ಈ ಕೋಟೆ ಇದೆ.

ಹ್ಯಾರಾಡವನ್ನು ಶಾಸನಗಳು “ಹೆರಡ” ವೆಂದು ಕರೆದಿವೆ.[13] ಗ್ರಾಮದ ಪಶ್ಚಿಮಕ್ಕೆ ೧೨ ಕಿ.ಮೀ ದೂರದಲ್ಲಿರುವ ಮೈಲಾರದಲ್ಲಿ ನೂತನ, ಬೃಹತ್ ಮತ್ತು ಇತಿಹಾಸ ಆರಂಭಯುಗ ಹಂತದ ಅವಶೇಷಗಳು ಕಂಡುಬಂದಿವೆ.[14] ಗ್ರಾಮದ ಆಗ್ನೇಯಕ್ಕೆ ಹೊಲದಲ್ಲಿರುವ ಕ್ರಿ.ಶ. ೧೨೬೩ ರ ಯಾದವ ದೊರೆ ಮಹಾದೇವರಾಯನ ಶಾಸನದಲ್ಲಿ[15] ಮಲ್ಲಿಕಾರ್ಜುನ ದೇವರ ಸೇವಾಕಾರ್ಯಗಳಿಗಾಗಿ ಹೆರಡ ಗ್ರಾಮವನ್ನು ದಾನಮಾಡಿದಂತೆ ತಿಳಿದುಬರುತ್ತದೆ. ಈ ಮೇಲಿನ ಆಧಾರಗಳ ಹಿನ್ನೆಲೆಯಲ್ಲಿ ಹ್ಯಾರಡ ಗ್ರಾಮವು ಬಹುಪ್ರಾಚೀನವಾದುದು ಎಂಬುದು ಸ್ಪಷ್ಟವಾಗುತ್ತದೆ. ಹರಪನಹಳ್ಳಿ ಪಾಳೆಯಗಾರರ ಮೂರ್ನಾಲ್ಕು ಶಾಸನಗಳು[16] ಪಾಳೆಯಗಾರರ ಆಳ್ವಿಕೆಯ ವಿವರಗಳನ್ನು ನೀಡುತ್ತವೆ. ಆದರೆ ಈ ಯಾವ ಶಾಸನಗಳಲ್ಲಿಯೂ ಕೋಟೆಯ ಬಗ್ಗೆ ಪ್ರಸ್ತಾಪಗಳಿಲ್ಲ. ಹರಪನಹಳ್ಳಿ ಪಾಳೆಯಗಾರರು ತಮ್ಮ ಗಡಿ ರಕ್ಷಣೆಗಾಗಿ ಹಲವೆಡೆ ಸೈನಿಕ ನೆಲೆಗಳನ್ನು ಸ್ಥಾಪಿಸಿ ಕೋಟೆ ಕಟ್ಟಿಕೊಂಡಿದ್ದರು. ಇವುಗಳ ಆಧಾರದಿಂದ ಹೇಳುವುದಾದರೆ ತಮ್ಮ ರಾಜ್ಯದ ಪಶ್ಚಿಮದ ಗಡಿ ರಕ್ಷಣೆಗಾಗಿ ಹ್ಯಾರಡ ಗ್ರಾಮದಲ್ಲಿ ಕೋಟೆ ಕಟ್ಟಿಕೊಂಡಿರಬೇಕು. ಇದರ ಲಕ್ಷಣಗಳು ಸುಮಾರು ೧೭-೧೮ ಶತಮಾನದ ಕೋಟೆ ಎಂಬುದನ್ನು ದೃಢಪಡಿಸುತ್ತದೆ.

ಚೌಕಾಕಾರದ ಚಿಕ್ಕ ಕೋಟೆಯಿದು. ಇದನ್ನು ಕೆತ್ತಿ ನಯಮಾಡಿದ ಮಧ್ಯಮ ಗಾತ್ರದ ಕಣಶಿಲೆಯನ್ನು ಬಳಸಿ ಇವುಗಳ ಮಧ್ಯದಲ್ಲಿ ಸಂದುಗಳಿಗೆ ಮಣ್ಣನ್ನು ಹಾಕಿ ಒಂದು ಕಲ್ಲು ಮತ್ತೊಂದಕ್ಕೆ ಹೊಂದಿಕೊಳ್ಳುವಂತೆ ಅಂಚುಗಳನ್ನು ಜೋಡಿಸಲಾಗಿದೆ. ಗೋಡೆಯ ಮಧ್ಯದಲ್ಲಿ ಯಾವುದೇ ಗಾರೆ ಲೇಪನ ಮಾಡಿಲ್ಲ. ಸುಮಾರು ೧೫ ಅಡಿ ಎತ್ತರವಿರುವ ಕೋಟೆಯ ಮೇಲಿನ ಕಲ್ಲಿನ ಸಾಲು ಸ್ವಲ್ಪ ಮುಂದೆ ಚಾಚಿಕೊಂಡಿದೆ. ಕೋಟೆಯ ಅಗಲ ಸುಮಾರು ೩ ಅಡಿಗಳಾಗಿದ್ದು, ಕೆಲವೆಡೆ ಹೆಚ್ಚು ಕಡಿಮೆ ಇದೆ. ಇದರ ಮೇಲಿದ್ದ ಮಣ್ಣಿನ ಕುಂಬೆಯ ಅವಶೇಷಗಳು ಕಾಣುತ್ತವೆ. ಕೋಟೆಯ ಹೊರಮೈಯನ್ನು ಮಧ್ಯಮ ಗಾತ್ರದ ಕಲ್ಲುಗಳಿಂದ ಮತ್ತು ಒಳಮೈಯನ್ನು ಚಿಕ್ಕ ಕಲ್ಲುಗಳಿಂದ ಮಧ್ಯದಲ್ಲಿ ಮಣ್ಣುತುಂಬಿ ಕಟ್ಟಿದೆ. ಕೋಟೆಯ ಉತ್ತರದ ಹೊರಮೈ ಮಾತ್ರ ಸುಸ್ಥಿಯಲ್ಲಿದ್ದು, ಉಳಿದೆಡೆ ಬಿದ್ದುಹೋಗಿದೆ. ಕೋಟೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ವೃತ್ತಾಕಾರದ ಕೊತ್ತಳಗಳಿವೆ. ಇವುಗಳ ಪೈಕಿ ಈಶಾನ್ಯ ಮೂಲೆಯ ಕೊತ್ತಳ ಮಾತ್ರ ಸ್ವಲ್ಪ ಚೆನ್ನಾಗಿದೆ. ಕೋಟೆಯ ಉತ್ತರದ ಗೋಡೆಯಲ್ಲಿ ಬಾಗಿಲನ್ನು ಜೋಡಿಸಲಾಗಿದೆ. ಇದರ ಪೂರ್ವದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ಈ ಕೋಟೆಯ ತುಂಬೆಲ್ಲಾ ವಾಸದ ಮನೆಗಳಿವೆ.

ಕೋಟೆಯ ನೈರುತ್ಯ ಭಾಗದಲ್ಲಿ ಪಾಳೆಯಗಾರರ ಕುಲದೈವವಾದ ಆಂಜನೇಯನ ದೇವಾಲಯವಿದ್ದು, ಇದರಲ್ಲಿ ಗರ್ಭಗೃಹ ಮತಾರ ಕೋಟೆಯ ಮಧ್ಯಭಾಗದಲ್ಲಿ ಬಸವೇಶ್ವರ ದೇವಾಲಯವು ಕಂಡುಬರುವುದು.

ಹೂವಿನ ಹಡಗಲಿ

ಹೂವಿನ ಹಡಗಲಿ ತಾಲೂಕು ಕೇಂದ್ರ. ಈ ಪಟ್ಟಣದ ಉತ್ತರ ಭಾಗದಲ್ಲಿ ಕೋಟೆ ಇತ್ತು. ಶಾಸನಗಳು ಈ ನಗರವನ್ನು “ಪೂವಿನ ಪೊಸ ಪಡಂಗಿಲೆ” ಎಂದು ಕರೆದಿವೆ.[17] ಬೃಹತ್ ಶಿಲಾಯುಗ ಸಂಸ್ಕೃತಿಯ ಕಲ್ಗೋರಿ, ಕಪ್ಪುವರ್ಣದ ಹಾಗೂ ಜನವಸ್ತವ್ಯದ ನೆಲೆಗಳು ಇಲ್ಲಿ ಕಂಡುಬಂದಿವೆ.[18]

ತುಂಗಭದ್ರಾ ನದಿಯ ದಕ್ಷಿಣ ತಟದಲ್ಲಿರುವ ಪ್ರಸಿದ್ಧಿ ಅಗ್ರಹಾರಗಳಲ್ಲಿ ಹೂವಿನ ಹಡಗಲಿಯು ಒಂದು.[19] ಹುಟ್ಟೂರು.[20] ಈಕೆ ಇಲ್ಲಿಯ ಕೇಶನ ದೇವಾಲಯವನ್ನು ತನ್ನ ಹುಟ್ಟೂರಿನ ನೆನಪಿಗಾಗಿ ಕಟ್ಟಿಸಿದ್ದಳು.[21] ಕಲ್ಯಾಣ ಚಾಳುಕ್ಯರ ಹಡಗಲಿ[22] ಮತ್ತು ಕೊಟ್ನಿಕಲ್[23] ಶಾಸನಗಳು ಇಲ್ಲಿ ಕೋಟೆ ಇದ್ದುದನ್ನು ಪ್ರಸ್ತಾಪಿಸುತ್ತವೆ. ಈ ಮೇಲಿನ ಆಧಾರಗಳಿಂದ ಹೂವಿನ ಹಡಗಲಿ ಬಹುಪ್ರಾಚೀನ ನೆಲೆ ಎನ್ನುವ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಇಲ್ಲಿ ಕೋಟೆ ಇದ್ದಿರಬಹುದಾದು ಸ್ಪಷ್ಟವಾಗುತ್ತದೆ.

ಹೂವಿನ ಹಡಗಲಿ ಪಟ್ಟಣದ ಉತ್ತರದ ಮೂಲೆಯಲ್ಲಿನ ಪ್ರದೇಶವನ್ನು ಈಗಲೂ ಜನ ಕ್ವಾಟೆ, ಕೋಟೆ ಎಂದು ಗುರುತಿಸುತ್ತಾರೆ. ಪ್ರಸ್ತುತ ಅಲ್ಲಿಕೋಟೆ ಇರದೆ ಜನನಿಬಿಡ ಸ್ಥಳವಾಗಿದೆ. ಕೋಟೆಯ ಅವಶೇಷಗಳನೆನ್ನಬಹುದಾದ ಬಾವಿ, ಕಲ್ಲುಗಳ ರಾಶಿಗಳು, ದೇವಾಲಯಗಳಿವೆ. ಇಲ್ಲಿರುವ ಕೋಟೆಯ ಸಮಕಾಲಿನ ದೇವಾಲಯಗಳೆನ್ನಬಹುದಾದ ಕಲ್ಲೇಶ್ವರ, ಕೇಶವ, ಕೃಷ್ಣ, ಯೋಗನಾರಾಯಣ ಮತ್ತು ಆಂಜನೇಯನ ದೇಗುಲಗಳು ಮುಖ್ಯವಾಗಿವೆ. ಇವುಗಳಲ್ಲಿ ಕಲ್ಲೇಶ್ವರ ಹಾಗೂ ಕೇಶವ ದೇವಾಲಯಗಳು ಸುಸ್ಥಿತಿಯಲ್ಲಿವೆ. ಈ ಸುಸ್ಥಿತಿಗೆ ಕಾರಣ ಕೇಂದ್ರ ಪುರಾತತ್ವ ಇಲಾಖೆಯ ರಕ್ಷಣೆ.

ಕಲ್ಲೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ, ಸಭಾಮಂಟಪ ಹಾಗೂ ಎರಡು ಮುಖಮಂಟಪಗಳಿಂದ ಕೂಡಿದೆ. ಚೌಕಾಕಾರದ ಗರ್ಭಗೃಹದಲ್ಲಿ ಚಿಕ್ಕಪೀಠದ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಬಾಗಿಲವಾಡವು ಐದು ಶಾಖೆಗಳನ್ನು ಹೊಂದಿದೆ. ಈ ಶಾಖೆಗಳಲ್ಲಿ ಹೂಬಳ್ಳಿಗಳು, ಪದ್ಮಗಳನ್ನು ಹಿಡಿದಿರುವ ಸ್ತ್ರೀಯರು, ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಸುಂದರ ಉಬ್ಬುಶಿಲ್ಪವಿದೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳು ಕಲ್ಯಾಣ ಚಾಳುಕ್ಯರ ಶೈಲಿಯಲ್ಲಿದ್ದು, ಅವುಗಳಲ್ಲಿ ಶಿವ, ವಿಷ್ಣು, ಕೇಶವ, ನರಸಿಂಹ, ಹಿರಣ್ಯ ಕಶ್ಯಪುವಿನ ಸಂಹಾರ, ಸೂರ್ಯ, ಬ್ರಹ್ಮ, ಗಣೇಶ ಇತ್ಯಾದಿ ಉಬ್ಬುಶಿಲ್ಪಗಳಿವೆ. ಸಭಾಮಂಟಪಕ್ಕೆ ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಿಗೆ ಪ್ರವೇಶದ್ವಾರಗಳಿವೆ. ದಕ್ಷಿಣದ ಬಾಗಿಲು ಸುಂದರ ಕೆತ್ತನೆಯಿಂದ ಕೂಡಿದ್ದು, ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವನ್ನು ಹೊಂದಿದೆ. ಮುಂಭಾಗದ ಮಂಟಪದಲ್ಲಿ ಕಕ್ಷಾಸನವನ್ನು ನಿರ್ಮಿಸಲಾಗಿದೆ. ಪೂರ್ವದ ಬಾಗಿಲು ಹೂ ಸುರುಳಿಗಳು, ನೃತ್ಯಗಾರ್ತಿಯರು, ಆನೆ, ಸಿಂಹ, ಯಕ್ಷ, ಪೂರ್ಣಕುಂಬ, ಗಣೇಶ, ನಾಗನಾಗಿಣಿ, ಕನ್ನಡಿಯನ್ನು ಹಿಡಿದಿರುವ ಸ್ತ್ರೀಯರು, ಶೈವ ದ್ವಾರಪಾಲಕರ ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ಏಳು ಶಾಖೆಗಳಿಂದ ಕೂಡಿದೆ.

ಇದರ ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಕೆತ್ತನೆಯಿದೆ. ಮುಂಭಾಗದ ಮಂಟಪದಲ್ಲಿ ಕುಳಿತು ವಿಶ್ರಮಿಸಲು ಅನುಕೂಲವಾಗವಂತೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯದ ಹೊರಗೋಡೆಯ ಆದಿಷ್ಠಾನವು ಉಪಾನ, ಜಗತಿ, ಕಂಠ, ಕುಮುದ, ಪದ್ಮಗಳಿಂದ ಕೂಡಿದೆ. ಗರ್ಭಗೃಹದ ಹೊರಭಾಗದಲ್ಲಿರುವ ಭಿತ್ತಿಯಲ್ಲಿ ಅರ್ಧಗಂಬಗಳ ಮಧ್ಯೆ ವೇಸರ ಶೈಲಿಯ ಕೋಷ್ಠಕಗಳು, ಇಕ್ಕೆಲಗಳಲ್ಲಿ ಹಿಂಜರಿತ ಹಾಗೂ ಮುಂಜರಿತಗಳಿವೆ. ಗರ್ಭಗೃಹದ ಮೇಲೆ ಐದು ಹಂತದ ವೇಸರ ಶೈಲಿಯ ಶಿಖರವಿದೆ. ಕಪ್ಪು ಮಿಶ್ರಿತ ನೀಲಿ ಛಾಯೆಯ ಕಲ್ಲಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಕೇಶವದೇವಾಲಯವು ಉತ್ತರಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ, ಸಭಾಮಂಟಪ ಹಾಗೂ ಮುಖಮಂಟಪಗಳಿಂದ ಕೂಡಿದೆ.

ಇದನ್ನು ಕ್ರಿ.ಶ. ೧೦೯೦ರಲ್ಲಿ ಕಲ್ಯಾಣ ಚಾಳುಕ್ಯರ ಸೇನಾಪತಿ ರವಿದೇವನ ಪತ್ನಿಯಾದ ರೆಬ್ಬಲದೇವಿಯು ಕಟ್ಟಿಸಿದಳು. ಚೌಕಾಕಾರದ ಗರ್ಭಗೃಹದಲ್ಲಿ ಗರುಡಪೀಠದ ಮೇಲೆ ಕೇಶವನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಸಮಭಂಗಿಯಲ್ಲಿರುವ ಕೇಶವನ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳಿವೆ. ಇಕ್ಕೆಲಗಳಲ್ಲಿ ದೇವತೆಯರಿದ್ದಾರೆ. ಇದರ ಪ್ರಭಾವಳಿಯನ್ನು ಮಕರ ತೋರಣಗಳಿಂದ ಅಲಂಕರಿಸಲಾಗಿದೆ. ದೇವಾಲಯದ ಲಕ್ಷಣಗಳು ಕಲ್ಲೇಶ್ವರ ದೇವಾಲಯದಂತಿವೆ.

ಈ ಎರಡು ದೇವಾಲಯಗಳು ಕೋಟೆ ಗೋಡೆಗೆ ಹೊಂದಿಕೊಂಡಿದ್ದವೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಕೋಟೆಯ ಯಾವ ಕಟ್ಟಡಾವಶೇಷಗಳು ಅಲ್ಲಿಲ್ಲ.

ಹೊಳಲು

ಹೊಳಲು ಹೂವಿನಹಡಗಲಿ ತಾಲೂಕಿಗೆ ಸೇರಿದ ಹೋಬಳಿಕೇಂದ್ರ. ತಾಲೂಕು ಕೇಂದ್ರದಿಂದ ನೈರುತ್ಯ ದಿಕ್ಕಿಗೆ ೩೨. ಕಿ.ಮೀ. ದೂರದಲ್ಲಿದೆ. ಈ ಗ್ರಾಮಕ್ಕೆ ಸಮೀಪದಲ್ಲಿ ಮೈಲಾರ ಮತ್ತು ಹಿರೆಕುರುವತ್ತಿ ಐತಿಹಾಸಿಕ ಸ್ಥಳಗಳಿದ್ದು, ಉತ್ತರದಿಕ್ಕಿನಲ್ಲಿ ತುಂಗಭದ್ರಾ ನದಿಯು ಹೊರಿದಿದೆ. ಪೂರ್ವದಿಕ್ಕಿನಲ್ಲಿ ಹ್ಯಾರಡ ಗ್ರಾಮವಿದ್ದು, ಪ್ರಸ್ತುತ ಗ್ರಾಮದ ಪಶ್ಚಿಮ ಭಾಗಕ್ಕೆ ಕೋಟೆಯ ಅವಶೇಷಗಳು ಕಂಡುಬರುತ್ತವೆ.

ಹೊಳಲು ಪ್ರಾಚೀನ ಗ್ರಾಮ. ಇಲ್ಲಿ ಕಲ್ಯಾಣ ಚಾಳುಕ್ಯರು, ಹೊಯ್ಸಳರು, ವಿಜಯನಗರ ದರಸರು, ಹರಪನಹಳ್ಳಿ ಪಾಳೆಯಗಾರರು ಆಳ್ವಿಕೆ ಮಾಡಿದ್ದಾರೆ.[24] ಈ ಗ್ರಾಮಕ್ಕೆ ಗಂಡ ರಾದಿತ್ಯನ ಹೊಳಲು ಎಂದು ಕರೆಯುವರು. ಇದನ್ನು ಪ್ರಾಚೀನ ಶಾಸನಗಳು ಗಂಡಾರಾದಿತ್ಯನ “ಪೊಳಲ್” ಎಂದು ಕರೆದಿದೆ.[25] ಗಂಡಾರಾದಿತ್ಯನ ಕಲ್ಯಾಣ ಚಾಳುಕ್ಯರ ಮಹಾಮಂಡಳೇಶ್ವರ. ಇವನು ಧೀರ್ಘಾವಧಿಯವರೆಗೆ ಹೊಳಲನ್ನು ಆಳಿದನು. ಹಾಗಾಗಿ ಹೊಳಲು ಗ್ರಾಮಕ್ಕೆ ಈತನ ಹೆಸರನ್ನು ಜೋಡಿಸಲಾಗಿದೆ. ಹಳೆಗನ್ನಡದ “ಪೊಳಲ್” ಎಂದರೆ ಭಾಗ ಎಂದರ್ಥ. ಮಹಾ ಮಂಡಳೇಶ್ವರ ಗಂಡಾರಾದಿತ್ಯನ ಆಳ್ವಿಕೆ ಪ್ರದೇಶದಲ್ಲಿ ಇದು ಒಂದು ಭಾಗವಾಗಿರಬೇಕು. ಹಾಗಾಗಿ “ಪೊಳಲ್” ಎಂಬ ಹೆಸರು ಅನ್ವರ್ಥವಾಗಿರಬಹುದು. ಪೊಳಲ್ > ಹೊಳಲು ಎಂಬುದಾಗಿವೆ. ರೂಢಿಯಲ್ಲಿ ಗಾಡರಾಧಿತ್ಯ ಎಂಬುದನ್ನು ಜನ ಕೈಬಿಟ್ಟು ಹೊಳಲು ಎಂದಷ್ಟೆ ಕರೆಯುವರು.

ಹೊಳಲು ಪ್ರಚೀನ ಅಗ್ರಹಾರ. ಇಲ್ಲಿ ಬಹುಸಂಖ್ಯೆಯಲ್ಲಿ ಬ್ರಾಹ್ಮಣರಿದ್ದರು[26] ೧೨೦ ಮಹಾಜನರು ಗ್ರಾಮದ ಅಭಿವೃದ್ಧಿ ಕಾರ್ಯದಲ್ಲಿ ಆಡಳಿತಾಧಿಕಾರಿಗಳಿಗೆ ನೆರವಾಗಿದ್ದರು.[27] ವಿಜಯನಗರವು ಪ್ರಬಲವಾಗಿದ್ದಾಗ ಈ ಗ್ರಾಮ ವಿಜಯನಗರದ ಒಂದು ಆಡಳಿತ ಸೀಮೆ ಕೇಂದ್ರವಾಗಿದ್ದಿತು.[28] ನಂತರ ಹರಪನಹಳ್ಳಿ ಪಾಳೆಯಗಾರರ ಗಡಿಪ್ರದೇಶವಾಗಿ ಪ್ರಮುಖ ಪಾತ್ರವಹಿಸಿದೆ. ಹರಪನಹಳ್ಳಿ ಬಸವಂತನಾಯಕನು ಆಳ್ವಿಕೆ ಮಾಡುವಾಗ ತಮ್ಮ ರಾಜ್ಯದ ಪಶ್ಚಿಮ ಗಡಿಯಲ್ಲಿ ಗುತ್ತಲ, ಹಾವನೂರು, ಸವಣೂರು ಅರಸರು ಸದಾ ಕಿರುಕುಳ ಕೊಡುತ್ತಿದ್ದರಂತೆ ಹಾಗಾಗಿ ತಮ್ಮ ಸೈನ್ಯದಲ್ಲಿದ್ದ ಬಸವನಾಯಕ ಎಂಬುವವನನ್ನು ಪಶ್ಚಿಮದ ಗಡಿಯಾದ ಹೊಳಲು ಕೋಟೆಗೆ ಮುಖ್ಯಸ್ಥನನ್ನಾಗಿ ನೇಮಕ ಮಾಡಿದ ವಿಷಯವು ತಿಳಿದು ಬರುತ್ತದೆ.[29] ಈ ಮೇಲಿನ ವಿಷಯಕ್ಕೆ ಪ್ರತ್ಯಕ್ಷ ಸಾಕ್ಷಿಗಳೆಂಬಂತೆ ಕಲ್ಯಾಣ ಚಾಳುಕ್ಯರಾಧಿಯಾಗಿ ಪಾಳೆಯಗಾರರವರೆಗಿನ ದೇವಾಲಯಗಳು, ಶಾಸನಗಳು, ಇಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಹೊಳಲು ಗ್ರಾಮದಲ್ಲಿ ಪ್ರಾಚೀನ ಕೋಟೆ ಇದ್ದಿರಬೇಕು. ಬದಲಾದ ರಾಜಕೀಯ ಸ್ಥಿತಿಗನುಗುಣವಾಗಿ ಈ ಕೋಟೆ ರೂಪಾಂತರ ಹೊಂದಿ ಇಂದು ಅವನತಿ ಹೊಂದಿದೆ. ಅಳಿದುಳಿದ ಕೆಲವು ಕೋಟೆಯ ಅವಶೇಷಗಳನ್ನು ಇಟ್ಟುಕೊಂಡು ಅದರ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ.

ಹೊಳಲುಕೋಟೆ ಚೌಕಾಕಾರದ ಮಧ್ಯಗಾತ್ರದ್ದಾಗಿದೆ. ಇದನ್ನು ಕೆತ್ತಿ ನಯಮಾಡಿದ ಮಧ್ಯಮಗಾತ್ರದ ಕಲ್ಲುಗಳಿಂದ ಕಟ್ಟಿದೆ. ಕಲ್ಲುಗಳ ಮಧ್ಯದಲ್ಲಿ ಸಂಧಿಗಳಿಗೆ ಮಣ್ಣನ್ನು ತುಂಬಿ ಒಂದು ಕಲ್ಲು ಮತ್ತೊಂದಕ್ಕೆ ಹೊಂದಿಕೊಳ್ಳುವಂತೆ ಅಂಚುಗಳನ್ನು ಕೆತ್ತಿ ಜೋಡಿಸಿದೆ. ಕೋಟೆಯ ಪಶ್ಚಿಮಭಾಗದ ಕೊತ್ತಳ ಮಾತ್ರ ಸ್ವಲ್ಪ ಸುಸ್ಥಿತಿಯಲ್ಲಿದೆ. ಉಳಿದೆಡೆ ಕೋಟೆಯ ಅವಶೇಷಗಳೇ ಇಲ್ಲ. ಆದ್ದರಿಂದ ಸ್ಥಳೀಯರ ಹೇಳಿಕೆಗಳು ಇಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಕೋಟೆಯ ಮಧ್ಯದಲ್ಲಿ ಗ್ರಾಮಸ್ತರ ವಾಸದ ಮನೆಗಳಿವೆ. ವಾಯುವ್ಯ ಮೂಲೆಯಲ್ಲಿ ಕೋಟೆಗೆ ಹೊಂದಿಕೊಂಡು ಚೌಕಾಕಾರದ ದೊಡ್ಡ ಬಾವಿ ಇದ್ದು. ಸುಮಾರು ೧೦೦ ಅಡಿಗಳಷ್ಟು ಆಳವಾಗಿದೆ. ಪ್ರಾಯಶಃ ಕೋಟೆಯೊಳಗಿನವರೆಗೆ ಈ ಬಾವಿಯಿಂದಲೇ ನೀರನ್ನು ಪೂರೈಸುತ್ತಿರಬೇಕು. ಕೋಟೆಯ ಉತ್ತರದ ಗೋಡೆಯಲ್ಲಿ ಮುಖ್ಯಬಾಗಿಲನ್ನು ನಿರ್ಮಿಸಿರಬಹುದು. ಇದರ ಬಳಿ ಕೋಟೆ ಆಂಜನೇಯನ ದೇವಾಲಯವಿದೆ. ಈ ದೇಗುಲವನ್ನು ಜೀರ್ಣೋದ್ಧಾರ ಮಾಡಿರುವುದರಿಂದ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಕೋಟೆಯ ಮಧ್ಯದಲ್ಲಿ ವೀರಭದ್ರ, ಕೊಯಲೇಶ್ವರ ದೇಗುಲಗಳಿವೆ. ಇತ್ತೀಚೆಗೆ ಮಸೀದಿ ಕಟ್ಟಡ ನಿರ್ಮಿಸುವುದಕ್ಕಾಗಿ ತಳಪಾಯ ಅಗೆಯವಾಗ ಪ್ರಾಚೀನ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಇಲ್ಲಿ ಭೂ ಉತ್ಖನನ ನಡೆಸಿದರೆ ಹೊಸ-ಸಂಗತಿಗಳು ಬೆಳಕಿಗೆ ಬಂದಿರುವ ಸಾಧ್ಯತೆಗಳಿವೆ. ಆಳವಾದ ಕಂದಕವು ಕೋಟೆಯನ್ನು ಸುತ್ತುವರೆದಿರುವಂತೆ ಕಂಡುಬರುತ್ತದೆ.

[1] Foot R.B., 1916 “The foot collection of pre historic & proto historic antiquities notes on their ages & distribution, P.77 Madras: Govt of Museum

[2] ಶಿವತಾರಕ್, ಕೆ.ಬಿ. ೨೦೦೧, ಕರ್ನಾಟಕ ಪುರಾತತ್ವ ನೆಲೆಗಳು, ಪು. ೩೬೬-೩೬೭. ಕನ್ನಡ ವಿಶ್ವವಿದ್ಯಾಲಯ

[3] ಅದೇ, ಪು. ೨೬೬

[4] ಅದೇ, ಪು. ೩೬೬-೬೮

[5] ಅದೇ, ಪು. ೩೬೬-೬೮

[6] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ-೧, ಪು. ೧೮ ಹಂಪಿ ಕನ್ನಡ ವಿಶ್ವವಿದ್ಯಾಲಯ

[7] ಅದೇ, ಪು. ೧೯

[8] ಜೋಶಿ, ಎಸ್.ಕೆ. ೨೦೦೧, ಕರ್ನಾಟಕದ ಪ್ರಾಚೀನ ಕೋಟೆಗಳು, ಸೂರ್ಯಕೀರ್ತಿ ಸಂ. ಕೃಷ್ಣಮೂರ್ತಿ ಪಿ.ವಿ. ಮತ್ತು ಕೆ.ವಸಂತಲಕ್ಷ್ಮಿ, ಪು. ೧೪೬-೫೨೧. ಬೆಂಗಳೂರು ಸೂರ್ಯನಾಥ ಕಾಮತ್ ಅಭಿನಂದನಾ ಸಮಿತಿ

[9] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ, ಪು. ೪೧೪

[10] ಅದೇ, ಪು. ೨೫೮

[11] ಅದೇ, ಪು. ೪೪೨

[12] ಅದೇ, ಪು. ೪೫೦

[13] AR No. 488 of 1984 : SII IX(PT, 1) No. 373

[14] ಶಿವತಾರಕ್, ಕೆ.ಬಿ. ೨೦೦೧, ಕರ್ನಾಟಕ ಪುರಾತತ್ವ ನೆಲೆಗಳು, ಪು. ೩೬೭, ಹಂಪಿ ಕನ್ನಡ ವಿಶ್ವವಿದ್ಯಾಲಯ

[15] ದೇವರಕೊಂಡಾರೆಡ್ಡಿ ಮತ್ತು ಇತರರು ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ-೧, ಪು. ೩೫೦. ಹಂಪಿ ಕನ್ನಡ ವಿಶ್ವವಿದ್ಯಾಲಯ

[16] ಅದೇ, ಪು. ೩೫೧-೩೫೨

[17] ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ-೧, ಪು. ೪೧೦. ಹಂಪಿ ಕನ್ನಡ ವಿಶ್ವವಿದ್ಯಾಲಯ

[18] ಶಿವತಾರಕ್, ಕೆ.ಬಿ. ೨೦೦೧, ಕರ್ನಾಟಕ ಪುರಾತತ್ವ ನೆಲೆಗಳು, ಪು. ೩೬೬-೬೮ ಹಂಪಿ ಕನ್ನಡ ವಿಶ್ವವಿದ್ಯಾಲಯ

[19] ವೀಣಾ, ಎಂ.ಪಿ. ೧೯೯೬. ಹೂವಿನಹಡಗಲಿಯ ಕಲ್ಯಾಣ ಚಾಳುಕ್ಯರ ಒಂದು ಅಪ್ರಕಟಿತ ಶಾಸನ, ಇತಿಹಾಸ ದರ್ಶನ-೧೧, ಪು. ೧೧೮

[20] ಕುಂಬಾಸ. ೧೯೯೦, ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ, ಪು. ೧೭೮. ಕುಂಚೂರು ಮಾಲತೇಶ ಪ್ರಕಾಶನ

[21] ಅದೇ, ಪು. ೧೭೯

[22] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ, ಬಳ್ಳಾರಿ ಜಿಲ್ಲೆ-೧ ಪೂರ್ವೋಕ್ತ, ಪು. ೪೧೪

[23] ಅದೇ, ಪು. ೪೦೭

[24] ಕುಂಬಾಸ. ೧೯೯೦. ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ, ಪು. ೧೮೨-೧೮೩. ಕುಂಚೂರು ಮಾಲತೇಶ ಪ್ರಕಾಶನ

[25] SII IX (pt I) No. 169 ಹೊಳಲು

[26] ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ, ಪೂರ್ವೋಕ್ತ ಪು. ೧೮೩-೧೮೪

[27] ಅದೇ, ಪು. ೧೮೪

[28] SII IX (pt II) No. 657 ತಿಮ್ಮಲಾಪುರ

[29] ಸದಾಶಿವಪ್ಪ ಕುಂ. ಬಾ. ೧೯೯೬. ಹರಪನಹಳ್ಳಿ ಪಾಳೆಯಗಾರರು, ಪು. ೫೧. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು.