ರಾಮಸಾಗರ

ರಾಮಸಾಗರವು ಹೊಸಪೇಟೆಯಿಂದ ಆಗ್ನೇಯ ದಿಕ್ಕಿಗೆ ಸುಮಾರು ೨೫ ಕಿ.ಮೀ ದೂರದಲ್ಲಿದೆ. ರಾಮಸಾಗರದ ಈಶಾನ್ಯ ದಿಕ್ಕಿನ ಬೆಟ್ಟದ ಮೇಲೆ ಈ ಕಿರಿದಾದ ಕೋಟೆಯಿದೆ. ಇದರ ಬಗ್ಗೆ ಯಾವುದೇ ನಿಖರವಾದ ಆಧಾರಗಳಿಲ್ಲ. ಅದರೂ ಸಿಕ್ಕಿರುವ ಅಲ್ಪ ಮಾಹಿತಿಗಳಿಂದಲೇ ಈ ಕೋಟೆಯ ಬಗ್ಗೆ ಚರ್ಚಿಸಲಾಗಿದೆ.

ತೆಲುಗು ಭಾಷೆಯ ಕನ್ನಡ ಲಿಪಿಯ ತಾಮ್ರಶಾಸನವು ತಿಳಿಸುವಂತೆ ಭೀಮಾಜೆಟ್ಟಿ ಎಂಬುವವನು ಬಲಿಷ್ಠರಾದ ಆನೆಗೊಂದಿ ರಾಜರ ಮರ್ಯಾದೆಗೆ ಕುಂದು ಉಂಟಾಗುವಂತೆ ಊರ ಬಾಗಿಲಿಗೆ ತನ್ನ ಇಜಾರವನ್ನು ಕಟ್ಟಿಸಿ ಮೆರೆಯುತ್ತಿದ್ದನು. ಜೋಡಿ ಮಲ್ಲಪ್ಪ ನಾಯಕ ಎನ್ನುವವನು ಈ ಭೀಮಾಜೆಟ್ಟಿಯನ್ನು ಸೋಲಿಸಿದ್ದಕ್ಕಾಗಿ ಆನೆಗೊಂದಿ ಅರಸರಾಯ ತಿರುಮಲ ರಾಜದೇವನು ಬುಕ್ಕಸಾಗರ, ಹರಿಯ ಸಮುದ್ರ ಗ್ರಾಮಗಳ ನಡುವೆ ಇದ್ದ ಕಳಸಾಪುರ ಗ್ರಾಮವನ್ನು ಅದರ ಸಮೀಪವೇ ಇದ್ದ ಕಮಲಾಪುರದ ಕೆರೆಯ ಕೆಳಗಿನ ಮೂರು ಖಂಡುಗದ ಬೀಜಾವರಿ ಭೂಮಿಯನ್ನು ಉಂಬಳಿಯನ್ನಾಗಿ ಕೊಟ್ಟನು. ಅಲ್ಲದೆ ಜೋಡಿ ಮಲ್ಲಪ್ಪನಾಯಕನಿಗೆ ಭೀಮ ಎಂಬ ಬಿರುದನ್ನು ನೀಡಿದರು. ಈ ಬಿರುದು ನೀಡಿದ ನೆನಪಿಗಾಗಿ ಭೀಮನ ಕೆರೆ, ಹಿರೇ ಕೆರೆ, ಚಿಕ್ಕ ಕೆರೆ, ಹೊಸಕೆರೆ ಹಾಗೂ ರಾಮಸಾಗರದ ಕೆರೆಗಳನ್ನು ನಿರ್ಮಿಸಿದರು. ಕೆರೆಗಳನ್ನು ಕಟ್ಟಿಸುವುದರ ಮೂಲಕ ಜನಪರ ಕಾರ್ಯಗಳನ್ನು ಮಾಡಿದುದಲ್ಲದೆ ಆನೆಗೊಂದಿ ರಾಜರ ಹೆಸರಿನಲ್ಲಿ ತಿಮ್ಮಾಪುರ ಹಳ್ಳಿ, ರಾಮಸಾಗರ ಗ್ರಾಮಗಳನ್ನು ಕಟ್ಟಿಸಿರುವಂತೆ ಆನೆಗೊಂದಿ ಅರಸರೇ ಈ ಗ್ರಾಮಗಳನ್ನು ಅಸ್ತಿತ್ವಕ್ಕೆ ತಂದರೆಂದು ಮೇಲಿನ ತಾಮ್ರ ಶಾಸನವು ಹೇಳುತ್ತದೆ.

ಕ್ರಿ.ಶ. ೧೫೬೧ರ ಸದಾಶಿವರಾಯರ ಶಾಸನದಲ್ಲಿ ವಿಠ್ಠಲದೇವರ ಅಮೃತಪಡಿಗೆ ರಾಮಸಾಗರದಲ್ಲಿ ೧೦ ಕೊಳಗ ಗದ್ದೆ ನೀಡಿದಂತೆ ವ್ಯಕ್ತವಾಗುತ್ತದೆ. ಬುಕ್ಕರಾಯನ ಶಾಸನವು ಇಂದಿನ ರಾಮಸಾಗರದ ಪಶ್ಚಿಮ ಭಾಗದಲ್ಲಿ ದೊರೆತಿದೆಯಾದರೂ ಅದರಲ್ಲಿ ರಾಮಸಾಗರದ ಉಲ್ಲೇಖವಿಲ್ಲ. ಈ ಮೇಲಿನ ಆಧಾರಗಳಿಂದ ರಾಮಸಾಗರವು ಕ್ರಿ.ಶ. ೧೫೬೧ ಕ್ಕಿಂತಲೂ ಮೊದಲೇ ಅಸ್ತಿತ್ವದಲ್ಲಿದ್ದುದು ಕಂಡುಬರುತ್ತದೆ. ಏಕೆಂದರೆ ತಾಮ್ರಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಮತ್ತು ಬುಕ್ಕರಾಯನ ಶಾಸನದಲ್ಲಿ ರಾಮಸಾಗರದ ಪ್ರಸ್ತಾಪವೂ ಇಲ್ಲ.

ಈ ಮೇಲಿನ ಆಧಾರಗಳನ್ನಿಟ್ಟುಕೊಂಡು ಮುಂದುವರೆದಂತೆ ಕೋಟೆ ನಿರ್ಮಾಣವನ್ನು ಚರ್ಚಿಸಲಾಗಿದೆ. ರಾಮಸಾಗರದ ಕೋಟೆಯ ಪ್ರವೇಶದಲ್ಲಿ ಮೊದಲು ಕಂಡುಬರುವುದು ಭೀಮೇಶ್ವರ ದೇವಸ್ಥಾನ. ಆನೆಗೊಂದಿ ಅರಸರು ಕಷ್ಟಕಾಲದಲ್ಲಿ ಸಹಾಯ ಮಾಡಿದ ಜೋಡಿ ಮಲ್ಲಪ್ಪನಾಯಕನಿಗೆ ಭೀಮ ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಈ ಸಹಾಯಾರ್ಥ ನೆನಪಿಗಾಗಿ ಭೀಮ ಎಂಬ ಬಿರುದಿನ ಹೆಸರಿನಿಂದಲೇ ಭೀಮೇಶ್ವರ ದೇವಸ್ಥಾನ ನಿರ್ಮಾಣವಾಗಿರಬಹುದು. ಪ್ರಾಯಶಃ ಆಗಲೇ ಅಲ್ಲಿ ಕೋಟೆ ನಿಮಾರ್ಣವಾಗಿರಬೇಕು. ಇಂತಹ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ.

ರಾಮಸಾಗರದ ಈಶಾನ್ಯಕ್ಕಿರುವ ಚಿಕ್ಕ ಬೆಟ್ಟವೊಂದರ ಮೇಲೆ ಸು. ೪ ಎಕರೆ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಲಾಗಿದೆ. ಇದು ಗ್ರಾಮರಕ್ಷಣೆಯ ಗಿರಿದುರ‍್ಗವಾಗಿದೆ. ಕೋಟೆ ಇರುವ ಬೆಟ್ಟದ ಪೂರ್ವಕ್ಕೆ ಕಣಿವೆ ಇದ್ದು ಇದರಲ್ಲಿ ಹೊಲಗಳಿವೆ. ಇದೇ ಹಿಂದೆ ಉದಯಗಿರಿಗೆ ದಾರಿಯಾಗಿತ್ತು. ಏಕೆಂದರೆ ಈ ಕಣಿವೆಯ ಮೂಲಕ ನೈರುತ್ಯಕ್ಕೆ ಸಾಗಿದರೆ ಹಂಪಿ ಕೋಟೆಯ ಉದಯಗಿರಿಯ ಹೆಬ್ಬಾಗಿಲು ಸಿಗುತ್ತದೆ. ಪಶ್ಚಿಮದಿಕ್ಕಿಗೆ ರಾಮಸಾಗರ ಗ್ರಾಮವಿದೆ. ಉತ್ತರಕ್ಕೆ ಇತ್ತೀಚಿಗೆ ನಿರ್ಮಾಣವಾದ ಮನೆಗಳಿವೆ. ದಕ್ಷಿಣಕ್ಕೆ ರಾಮಸಾಗರ ಗ್ರಾಮವು ವಿಸ್ತರಿಸಿದೆ. ಈ ಕೋಟೆಯು ಉತ್ತರಾಭಿಮುಖವಾಗಿದ್ದು ಸರಳ ಬಾಗಿಲವಾಡವನ್ನು ಹೊಂದಿದೆ. ಒಳ ಮಧ್ಯ ಭಾಗದಲ್ಲಿ ದೊಡ್ಡ ಕೊತ್ತಳವಿದೆ. ಇದು ಸು. ೩೦ ಅಡಿ ಸುತ್ತಳತೆ ಹಾಗೂ ೩೦ ಅಡಿ ಎತ್ತರವಾಗಿದೆ. ವೃತ್ತಾಕಾರದಲ್ಲಿರುವ ಈ ಕೊತ್ತಳವನ್ನು ಮೇಲೇರಿ ಶತ್ರುಗಳನ್ನು ಗಮನಿಸಲು ಅನುಕೂಲವಾಗುವಂತೆ ಕಟ್ಟಲಾಗಿದೆ. ಇದೇ ಲಕ್ಷಣಗಳನ್ನು ಹೋಲುವ ಆರು ಕೊತ್ತಳಗಳು ಕೋಟೆ ಗೋಡೆಯಲ್ಲಿದೆ. ಕೋಟೆಯು ಸರಿ ಸುಮಾರು ೧೦ ಅಡಿ ಎತ್ತರವಾಗಿದೆ. ಕೆಲವು ಕಡೆ ಹೆಚ್ಚು ಕಡಿಮೆ ಇರುವುದನ್ನು ಕಾಣಬಹುದು. ಇದು ೩ ರಿಂದ ೫ ಅಡಿಗಳಷ್ಟು ಅಗಲವಾಗಿದ್ದು ಸು. ೩೦೦ ಮೀಟರುಗಳಷ್ಟು ಸುತ್ತಳತೆಯನ್ನು ಹೊಂದಿದ ಬಹು ಕಿರಿದಾದ ಕೋಟೆಯಾಗಿದೆ. ತಳಪಾಯವಿಲ್ಲದೆ ಹಾಸುಬಂಡೆಯ ಮೇಲೆ ಮಧ್ಯಮ ಗಾತ್ರದ ಕಣಶಿಲೆಯಿಂದ ಕೋಟೆಯನ್ನು ನಿರ್ಮಿಸಲಾಗಿದೆ. ಮಧ್ಯದಲ್ಲಿ ಕೆಲವು ವಾಸದ ಮನೆಗಳಿದ್ದ ಅವಶೇಷಗಳಿವೆ. ಇಲ್ಲಿ ವಾಸಿಸುತ್ತಿದ್ದ ಜನರಿಗಾಗಿ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಇಂದಿಗೂ ಈ ಬಾವಿಯಲ್ಲಿ ಜಲ ಬತ್ತಿಲ್ಲ. ಇದೇ ಕೋಟೆಯಲ್ಲಿ ಆಂಜನೇಯ ಹಾಗೂ ಭೀಮೇಶ್ವರ ಗುಡಿಗಳಿವೆ. ಆಂಜನೇಯನ ಗುಡಿಯು ದಕ್ಷಿಣಾಭಿಮುಖವಾಗಿದ್ದು ಉತ್ತರದ ಕೋಟೆಗೆ ಗೋಡೆಗೆ ಹೊಂದಿಕೊಂಡಿದೆ. ಇದರಲ್ಲಿ ಗರ್ಭಗೃಹ, ತೆರೆದ ಸಭಾಮಂಟಪದಲ್ಲಿ ಸಾದಾ ಗೆತ್ತನೆಯ ನಾಲ್ಕು ಕಂಬಗಳಿವೆ. ಭೀಮೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು ಗರ್ಭಗೃಹ, ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಕಲ್ಲುಗುಂಡನ್ನಿಟ್ಟು ಆರಾಧಿಸುತ್ತಾರೆ.

ಈ ಪ್ರದೇಶದ ಸುತ್ತಲೂ ಇರುವ ಬೆಟ್ಟಗಳಿಗಿಂತ ಇದು ಎತ್ತರವಾಗಿದೆ. ಮತ್ತು ಮೇಲ್ತುದಿಯಲ್ಲಿ ವಿಶಾಲ ಪ್ರದೇಶವನ್ನು ಹೊಂದಿದೆ. ಈ ಕಾರಣವಾಗಿಯೇ ಇಲ್ಲಿ ಕೋಟೆ ಕಟ್ಟಿರಬೇಕು. ಪ್ರಾಯಶಃ ವಿಜಯನಗರಕ್ಕೆ ಪೂರ್ವದಿಂದ ಬರುವ ಶತ್ರುಗಳನ್ನು ಗ್ರಹಿಸುವುದಕ್ಕಾಗಿ ಮತ್ತು ತಡೆ ಹಿಡಿಯುವುದಕ್ಕಾಗಿ ಹಾಗೂ ಚಿಕ್ಕ ಸೇನಾನೆಲೆಯನ್ನಿಡಲು ಈ ಕೋಟೆಯನ್ನು ಕಟ್ಟಿರಬೇಕು.

ಹಂಪಿ

ಇತಿಹಾಸ ಪ್ರಸಿದ್ಧ ಹಂಪಿಯು ಹೊಸಪೇಟೆಯಿಂದ ೧೨ ಕಿ.ಮೀ. ದೂರದಲ್ಲಿ ತುಂಗಾಭದ್ರ ನದಿಯ ದಂಡೆಯಲ್ಲಿದೆ. ಉತ್ತರ ಅಕ್ಷಾಂಶ ೧೫, ೧೮.೫ ಇಂದ ೧೫.೨೧ ಮತ್ತು ರೇಖಾಂಶ ೭೮.೨೭.೫ ರಿಂದ ೭೮.೩೦ ರ ವರೆಗಿನ ಮಧ್ಯದಲ್ಲಿ ಈ ಗ್ರಾಮ ಬರುತ್ತದೆ. ಇದು ಸುಮಾರು ೨೫ ಚ.ಕಿ. ರಷ್ಟು ವಿಸ್ತಾರವನ್ನು ಹೊಂದಿದೆ.

ಹಂಪಿ ಅನೇಕ ಪುರಾಣ, ಇತಿಹಾಸ ಪ್ರಸಿದ್ಧ ಕ್ಷೇತ್ರಗಳಿಂದ ಸುತ್ತುವರೆದಿದೆ. ಉತ್ತರಕ್ಕೆ ರಾಮಾಯಣದ ಕುರುಹುಗಳಾಗಿ ಕಿಷ್ಕಿಂಧೆ, ಅಂಜನಾದ್ರಿ, ದಕ್ಷಿಣಕ್ಕೆ ಮಾತಂಗ ಪರ್ವತ ಸರೋವರದ ಬಳಿ ಶಬರಿ ವಾಸವಾಗಿದ್ದಳು ಎಂಬ ಹೇಳಿಕೆಗಳಿವೆ. ಶಾಸನಗಳು ಹಂಪಿಯನ್ನು ಭಾಸ್ಕರ ಕ್ಷೇತ್ರವೆಂದು ಕರೆ. ಮೊದಲಿನಿಂದ ಶೈವ, ಶಾಕ್ತರ ಬಳಿಕ ವೈಷ್ಣವ, ಜೈನ, ಇತ್ಯಾದಿ ಧರ್ಮಗಳ ಪ್ರದೇಶವಾಗಿ ಬೆಳೆಯುತ್ತ ಬಂದಿವೆ. ಇಲ್ಲಿ ಬೆಟ್ಟಗಳು ದೊಡ್ಡ ಗುಂಡುಗಳಿಂದ ಕೂಡಿದ್ದು ಇವುಗಳ ಮಧ್ಯದಲ್ಲಿ ಕೋಟೆಯನ್ನು ಕಟ್ಟಲಾಗಿದೆ.

ಹಂಪಿಯು ಆದಿ ಮಾನವನ ಕಾಲದಿಂದಲೂ ಜನವಸತಿಯ ಕೇಂದ್ರವಾಗಿತ್ತು. ವಿರೂಪಾಕ್ಷ ದೇವಾಲಯದ ಹಿಂಬದಿಯಲ್ಲಿ ಹಾಗೂ ಹೇಮಕೂಟದ ಪಕ್ಕದಲ್ಲಿ ಪ್ರಾಗಿತಿಹಾಸಿಕ ಕಾಲದ ನೆಲೆಯಾಗಿದೆ.

ಹಂಪಿಯನ್ನು ಪಂಪಾ ಕ್ಷೇತ್ರ, ಪಂಪಾ ತೀರ್ಥ, ಪಂಪಾ ಪುರ, ಪಂಪಾ ಪಟ್ಟಣ ಎಂದು ಶಾಸನಗಳಲ್ಲಿ ಪುರಾಣಗಳಲ್ಲಿ ಕರೆದಿದ್ದು, ವಿಜಯನಗರದ ಸ್ಥಾಪನೆಯ ನಂತರ ಹಂಪಿ ವಿಜಯನಗರ ಪಟ್ಟಣದ ಒಂದು ಭಾಗವಾಯಿತು. ರಾಜಕೀಯವಾಗಿ ಪತನ ಹೊಂದಿ ಹಾಳಾದ ಮೇಲೆ ವಿಜಯನಗರ ಪಟ್ಟಣ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಆದರೆ ಹಂಪಿಯು ಪುಣ್ಯಕ್ಷೇತ್ರವಾಗಿ ಮುಂದುವರೆಯಿತು.

ಐತಿಹಾಸಿಕವಾಗಿ ಹಂಪಿಯ ಪ್ರಾಚೀನತೆ ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಬಾದಾಮಿ ಚಾಲುಕ್ಯರ ಕ್ರಿ.ಶ. ೬೯೧ರ ಶಾಸನದಲ್ಲಿ ಕ್ರಿ.ಶ. ೧೦೧೮ರ ನೊಳಂಬ ವಿನಯಾದಿತ್ಯನ ಬಾಗಳಿ ಶಾಸನದಲ್ಲಿ[1] ಪಂಪಾತೀರ್ಥದ ಉಲ್ಲೇಖಗಳಿವೆ. ಕ್ರಿ.ಶ. ೧೦೫೩ರ ಶಾಸನದಲ್ಲಿ ಹಂಪಿ ತೀರ್ಥದ ಉಲ್ಲೇಖ ಬರುತ್ತದೆ. ಕ್ರಿ.ಶ. ೧೧೯೯ರ ಕುರುಗೋಡು ಶಾಸನವು[2] ಈ ಪ್ರದೇಶವನ್ನು ವಿರೂಪಾಕ್ಷ ಸೀಮೆ ಎಂದು ಕರೆದಿದ್ದು, ಇದರಲ್ಲಿ ಸಿಂದ ಕಲಿದೇವರಸ ಕುರುಗೋಡಿನಿಂದ ಆಳುತ್ತಿದ್ದ ವಿಷಯವೂ ಸೇರಿದೆ.

ಬಾದಾಮಿ ಚಾಲುಕ್ಯ, ರಾಷ್ಟ್ರಕೂಟರ ಆಳ್ವಿಕೆಗೆ ಈ ಪ್ರದೇಶ ಸೇರಿತ್ತೆಂಬ ಬಗ್ಗೆ ಯಾವುದೇ ಗೊಂದಲಗಳಿಲ್ಲವಾದರೂ ಅವರದೆಂದು ಹೇಳಬಹುದು ಶಾಸನಗಳಾವವೂ ಹಂಪಿಯ ಪರಿಸರದಲ್ಲಿ ದೊರೆತಿಲ್ಲ. ಬೇರೆ ಕಡೆ (ಹಂಪಿಯ ಹೊರಗೆ) ಕಂಡು ಬಂದಿರುವ ಶಾಸನಗಳಲ್ಲಿ ಪಂಪಾ ತೀರ್ಥ, ಹಾಗೂ ಪಂಪಾ ತೀರದ ಉಲ್ಲೇಖಗಳಿವೆ. ಈ ಕಾಲದ ಕೆಲವು ವಾಸ್ತು ಕುರುಹುಗಳು ಹೇಮಕೂಟದ ಬೆಟ್ಟದಲ್ಲಿವೆ. ಮರಳುಗಲ್ಲಿನಲ್ಲಿ ಕಟ್ಟಿರುವ ದೇವಾಲಯ ಸಮುಚ್ಛಯದ ಭಾಗವೊಂದು ಈಗಿನ ವಿರೂಪಾಕ್ಷ ದೇವಾಲಯದ ಹಿಂಬದಿ ಮೇಲ್ಭಾಗದಲ್ಲಿದೆ. ಈಗಾಗಿ ಸು.ಕ್ರಿ.ಶ. ೮ನೇ ಶತಮಾನದವರೆಗೆ ಅವರ ಚಟುವಟಿಕೆಗಳು ಕಾಣಬರುತ್ತವೆ.

ಕಲ್ಯಾಣಿ ಚಾಲುಕ್ಯರು, ನೊಳಂಬರು, ಸಿಂದರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿರುವುದು ಶಾಸನಗಳಿಂದ ವೇದ್ಯವಾಗುತ್ತದೆ. ಹೊಯ್ಸಳ ಅರಸ ಸೋಮೇಶ್ವರನು ಕ್ರಿ.ಶ. ೧೨೩೬ರಲ್ಲಿ ಪಂಪಾಕ್ಷೇತ್ರದ ವಿರೂಪಾಕ್ಷನಿಗೆ ಒಂದು ಹಳ್ಳಿಯನ್ನು ದಾನ ಮಾಡಿದನು.[3] ದ್ವಾರ ಸಮುದ್ರವು ಮುಸ್ಲಿಮರ ದಾಳಿಯಿಂದ ನಾಶವಾದ ಮೇಲೆ ಮೂರನೆಯ ಬಲ್ಲಾಳನು ಕ್ರಿ.ಶ. ೧೩೩೧ ರಲ್ಲಿ ವಿರೂಪಾಕ್ಷ ಹೊಸ ದುರ್ಗದಿಂದ ಆಳುತ್ತಿದ್ದನು. ಹಂಪಿಯನ್ನು ವಿರೂಪಾಕ್ಷ ಹೊಸದುರ್ಗವೆಂದು ಕರೆದಿರುವುದರಿಂದ ಬಲ್ಲಾಳನು ಹೊಸತಾಗಿ ಈ ಕೋಟೆಯನ್ನು ಕಟ್ಟಿಸಿರಬೇಕೆಂದು ಸಿ.ಎಸ್. ಪಾಟೀಲರು ಅಭಿಪ್ರಾಯ ಪಡುತ್ತಾರೆ.[4] ಕ್ರಿ.ಶ. ೧೩೨೦ರ ಬಲ್ಲಾಳನ ಶಾಸನದಲ್ಲಿರುವಂತೆ ಬಲ್ಲಾಳನು ಪುದುಪಡೈವೀಡಿನಲ್ಲಿದ್ದ.[5] ಅರಸೀಕೆರೆ ತಾಲೂಕಿನ ಶಾಸನದ ಪ್ರಕಾರ ಬಲ್ಲಾಳನು ಹೊಸ ಪಟ್ಟಣದಲ್ಲಿದ್ದ.[6] ಗುಬ್ಬಿ ತಾಲ್ಲೂಕಿನ ಶಾಸನದ ಪ್ರಕಾರ ಅದರ ಹೆಸರು ವಿರೂಪಾಕ್ಷ ಹೊಸ ಪಟ್ಟಣ.[7] ಹೊಸಪೇಟೆ ಶಾಸನದ ಪ್ರಕಾರ ಅದರ ಹೆಸರು ವಿಜಯ ವಿರೂಪಾಪುರ. ಮುಮ್ಮಡಿ ಬಲ್ಲಾಳನ. ಹೀಗೆ ಹೊಯ್ಸಳರು ಮಗನ ಹೆಸರು ವೀರವಿಜಯ ಬಲ್ಲಾಳ ಅಥವಾ ವೀರ ವಿರೂಪಾಕ್ಷ ಬಲ್ಲಾಳ. ಹೀಗೆ ಹೊಯ್ಸಳರು ಅಂತಃಕಾಲದಲ್ಲಿಯೇ ವಿರೂಪಾಕ್ಷನ ಸಮೀಪ ಒಂದು ನೆಲೆವೀಡನ್ನು ಹೊಂದಿದ್ದರು. ಡಾ.ಸಿ.ಎಸ್. ಪಾಟೀಲರ ಅಭಿಪ್ರಾಯಕ್ಕೆ ಸ್ಪಂದಿಸುತ್ತ ಈ ಸ್ಪಷ್ಟನೆ ನೀಡಲಾಗಿದೆ.

ಕ್ರಿ.ಶ. ೧೪ನೇ ಶತಮಾನದ ಆರಂಭದಲ್ಲಿ ಕುಮ್ಮಟದುರ್ಗದ ಅರಸನಾದ ಕಂಪಿಲರಾಯ ಮತ್ತು ಕುಮಾರರಾಮರು ಪ್ರಸಿದ್ಧಿಗೆ ಬಂದಿದ್ದರು. ಆಗ ಹಂಪಿ ಪ್ರದೇಶ ಸಂಪೂರ್ಣವಾಗಿ ಅವರ ಆಳ್ವಿಕೆಗೆ ಒಳಪಟ್ಟಿತೆಂಬುದು ಸ್ಪಷ್ಟವಾಗಿದೆ.[8]

ಕ್ರಿ.ಶ. ೧೩೩೬ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯು ಸಂಗಮ ಸಹೋದರರಾದ ಹರಿಹರ, ಬುಕ್ಕ, ಕಂಪಣ್ಣ, ಮಾರಣ್ಣ ಮತ್ತು ಮುದ್ದಪ್ಪರಿಂದಾಯಿತು. ಈ ವಂಶದ ಮೊದಲ ಅರಸರು ಮೊದಲನೆಯ ಹರಿಹರ (ಕ್ರಿ.ಶ. ೧೩೩೬ ರಿಂದ ೧೩೫೬). ಮತ್ತು ಮೊದಲನೆಯ ಬುಕ್ಕ (ಕ್ರಿ.ಶ. ೧೩೫೬ ರಿಂದ ೧೩೭೭) ಆನೆಗೊಂದಿಯಿಂದ ಆಳಿದರೆಂಬ ಪ್ರತೀತಿ ಇದೆ.[9] ಆದರೆ ಕ್ರಿ.ಶ. ೧೩೮೦ರ ಹಂಪೆಯ ಶಾಸನವು ವಿಜಯ ಎಂಬ ಹೆಸರಿನ ಪಟ್ಟಣದಲ್ಲಿ ಒಂದನೇ ಹರಿಹರ ಮತ್ತು ಬುಕ್ಕನು ಆಳುತ್ತಿದ್ದಂತೆಯೂ ಅದು ಇಂದ್ರನ ಅಮರಾವತಿಯಂತೆ ಇತ್ತೆಂದು ವರ್ಣಿತವಾಗಿದೆ.[10] ಅಂದರೆ ಹರಿಹರ ಮತ್ತು ಬುಕ್ಕರಾಯನ ರಾಜಧಾನಿಯು ಪಂಪಾಕ್ಷೇತ್ರದ ಬಳಿಯಿದ್ದ ವಿಜಯ ಪಟ್ಟಣವೆಂದಾಯಿತು. ಈ ವಿಜಯ ವಿರೂಪಾಕ್ಷಪುರವೇ ತನ್ನ ಹೆಸರನ್ನು ಮೊಟುಕು ಮಾಡಿಕೊಂಡು ವಿಜಯನಗರವಾಗಿ ಬೆಳೆಯಿತು. ಈ ವಿಜಯನಗರದಲ್ಲಿ ಸಂಗಮ, ಸಾಳ್ವ, ತುಳು ಮತ್ತು ಅರವೀಡು ವಂಶಗಳು ಸು. ೩೦೦ ವರ್ಷಗಳ ಕಾಲ ಆಳ್ವಿಕೆ ಮಾಡಿದವು. ಈ ವಂಶಗಳಲ್ಲಿ ಹರಿಹರ, ಪ್ರೌಢದೇವರಾಯ, ಕೃಷ್ಣದೇವರಾಯ ಪ್ರಸಿದ್ಧ ಅರಸರು. ಈ ಅರಸರು ವಿವಿಧ ಕಾಲಘಟ್ಟದಲ್ಲಿ ಕಟ್ಟಿಸಿದ್ದ ಕೋಟೆಯ ಲಕ್ಷಣಗಳನ್ನು ಈ ಕೆಳಗಿನಂತೆ ಚರ್ಚಿಸಲಾಗಿದೆ.

ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಪಟ್ಟಣದ ಸುತ್ತಲೂ ಕಟ್ಟಿಸಿದ್ದ ಕೋಟೆಯು ಈಗ ಒಳಕೋಟೆಯಾಗಿದೆ ಈ ಕೋಟೆಯು ಮಹಾನವಮಿ ದಿಬ್ಬವಿರುವ ಅರಮನೆ ಪ್ರದೇಶ, ಹಜಾರರಾಮಸ್ವಾಮಿ ದೇವಾಲಯ, ರಾಣಿ ಸ್ನಾನಗೃಹ, ಆನೆಸಾಲಿನ ಹಿಂದಿನ ಜೈನ ದೇವಾಲಯ, ಭೂಮಿಯ ಕೆಳಮಟ್ಟದ ದೇವಾಲಯ ಮುಂತಾದ ಪ್ರದೇಶವನ್ನು ಸುತ್ತುವರೆದಿದೆ. ಈ ಕೋಟೆಯಲ್ಲಿ ಸಿಂಗಾರದ ಹೆಬ್ಬಾಗಿಲು, ಸೋಮವಾರದ ಬಾಗಿಲು, ಗಾಣಗಿತ್ತಿ, ಜೈನ ದೇವಾಲಯದ ಉತ್ತರಕ್ಕಿರುವ ಬಾಗಿಲು, ಭೂಮಿಯ ಕೆಳಮಟ್ಟದ ದೇವಾಲಯದ ಉತ್ತರಕ್ಕಿರುವ ಬಾಗಿಲು, ಅದೇ ದೇವಾಲಯದ ಆಗ್ನೇಯ ದಿಕ್ಕಿಗಿರುವ ಹೂವಿನ ಬಾಗಿಲು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಅರಮನೆ ಪ್ರದೇಶದ ಉತ್ತರಕ್ಕೆ ಬಾಗಿಲುಗಳಿವೆ. ಈ ಕೋಟೆಯ ಸುತ್ತು ಬುಕ್ಕನ ಕಾಲದಲ್ಲಿ ನಿರ್ಮಾಣಗೊಂಡಿದ್ದನ್ನು ಸಿಂಘಾರದ ಹೆಬ್ಬಾಗಿಲನ್ನು ಉಲ್ಲೇಖಿಸುವ ಶಾಸನವು ಪುಷ್ಠೀ ಕರಿಸುತ್ತದೆ. ಆ ಶಾಸನ ಪಾಠ ಈ ಕೆಳಕಂಡಂತಿದೆ.[11]

ಶ್ರೀ ವೀರಬುಕ್ಕರಾಯನ ವಿಜಯ
ನಗರ ಪಟ್ಟಣದ ಮೂಡಣ ಸಿಂ
ಘಾರದ ಹೆಬ್ಬಾಗಿಲ ಬಡಗಣ ಮೂಲೆ
ಅರೆಯ ಮೇಲಣ ಆನೆಯಗೊಂದೆಯ ಕೊತ್ತಣಕ್ಕೆ ಮಂಗಳ ಮಾ
ಹಾ ಶ್ರೀ ಶ್ರೀ…..

ಜೈನ ಬಸದಿಯ ಸಮೀಪದ ಸೋಮವಾರ ಬಾಗಿಲಿನ ಉತ್ತರಕ್ಕಿರುವ ಬೆಟ್ಟದ ಮೇಲಿನ ಗುಂಡಿನ ಶಾಸನದಲ್ಲಿ ಬರುವ ಶ್ರೀ ವೀರಬುಕ್ಕರಾಯನ ವಿಜಯನಗರ ಪಟ್ಟಣದ ಮೂಡಣ ಸೋಮವಾರದ ಬಾಗಿಲ ಬೆಟ್ಟ ಸೋಮಯ ದೇವರ ಕೊತ್ತಳದ ಎಂಬ ವಿಷಯವು ಈ ಮೇಲಿನ ಅಂಶಕ್ಕೆ ಒತ್ತು ನೀಡುತ್ತದೆ. [12]

ಸಾಮ್ರಾಜ್ಯ ಬೆಳೆದಂತೆ ರಾಜಧಾನಿಯೂ ಬೆಳೆಯತೊಡಗಿತು. ಬೆಳೆದ ಪಟ್ಟಣದ ಸುತ್ತಲೂ ಎರಡನೆಯ ಸುತ್ತಿನ ಕೋಟೆಯನ್ನು ಕಟ್ಟಲಾಯಿತು. ಈ ಸುತ್ತಿನ ಸ್ವಲ್ಪ ಭಾಗ ಮಾತ್ರ ಆಗ್ನೇಯ ಭಾಗದಲ್ಲಿ ಕಾಣುತ್ತದೆ. ಇದರಲ್ಲಿ ಭೀಮನ ಬಾಗಿಲು ಇರುತ್ತದೆ. ಎರಡನೆಯ ಹರಿಹರನ ಕಾಲದಲ್ಲಿ (ಕ್ರಿ.ಶ. ೧೩೭೭-೧೪೦೪) ಬೆಳೆದ ಪಟ್ಟಣದ ಸುತ್ತ ಮೂರನೆಯ ಕೋಟೆಯನ್ನು ಕಟ್ಟಲಾಯಿತು. ಈ ಕೋಟೆಯ ಸುತ್ತನ್ನು, ಬೇಟೆಕಾರರ ಹೆಬ್ಬಾಗಿಲು ಹಾಗೂ ಹೊದೆಯ ಬಾಗಿಲನ್ನು ಉಲ್ಲೇಖಿಸುವ ಶಾಸನಗಳು ದೃಢೀಕರಿಸುತ್ತವೆ. ಮಾಲ್ಯವಂತ ರಘುನಾಥ ದೇವಾಲಯದ ಆಗ್ನೇಯ ದಿಕ್ಕಿನ ಕಣಿವೆಯಲ್ಲಿರುವ ಬೇಟೆಕಾರರ ಹೆಬ್ಬಾಗಿಲಿನ ಪೂರ್ವಕ್ಕಿರುವ ಗುಂಡಿನ ಮೇಲಿನ ಕ್ರಿ.ಶ. ೧೩೮೦ರ ಶಾಸನದಲ್ಲಿ[13] ಈ ಮೊದಲೇ ಇಲ್ಲಿ ಕೋಟೆ ಇದ್ದುದನ್ನು ಸ್ಪಷ್ಟಪಡಿಸುತ್ತದೆ. ಸುಸ್ಥಿತಿಯಲ್ಲಿರುವ ಕೋಟೆಯು ಮಾಲ್ಯವಂತ ಪರ್ವತವನ್ನು ಒಳಗೊಂಡ ವಿಶಾಲ ಪ್ರದೇಶವನ್ನು ಸುತ್ತುವರೆದಿದೆ. ಇದರಲ್ಲಿ ಕೋಟೆಶಂಕರ ದೇವರ ಬಾಗಿಲು, ಜಡೆ ಶಂಕರ ದೇವರ ದಿಡ್ಡಿ, ಹಂಪಾದೇವಿಯ ದಿಡ್ಡಿ ಹೊದೆಯ ಬಾಗಿಲು, ಅರೆಶಂಕರ ಬಾಗಿಲು ರೆಮ್ಮ ದಿಡ್ಡಿ, ಉದಯಗಿರಿ ಬಾಗಿಲು ಗುಮ್ಮಟದ ಹೆಬ್ಬಾಗಿಲುಗಳಿವೆ.

ಎರಡನೆಯ ದೇವರಾಯನ ಕಾಲದಲ್ಲಿ (ಕ್ರಿ.ಶ. ೧೪೨೪-೧೪೪೬) ಪಟ್ಟಣವು ಸಮೃದ್ಧಿಯಿಂದ ವಿಜೃಂಭಿಸಿತು. ಆಗಲೇ ರಾಜ್ಯದ ವಿಸ್ತಾರ ಹೆಚ್ಚುತ್ತಾ ಹೋಯಿತು. ಹಾಗಾಗಿ ಇಮ್ಮಡಿ ದೇವರಾಯನು ಕೋಟೆಯ ನಾಲ್ಕನೆಯ ಸುತ್ತನ್ನು ಕಟ್ಟಿಸಿರಬಹುದು.[14] ಇದು ಪ್ರಸ್ತುತ ಆಗ್ನೇಯ ನೈರುತ್ಯ ಭಾಗಗಳಲ್ಲಿ ಮಾತ್ರ ಉಳಿದುಕೊಂಡಿದೆ. ಇದರೊಳಗೆ ವರದರಾಜಮ್ಮನ ಪಟ್ಟಣ ವಿತ್ತು. ಈ ಕೋಟೆಯ ಸುತ್ತಿನಲ್ಲಿ ಪೆನುಗೊಂಡ ಬಾಗಿಲು ಇರುವುದನ್ನು ಶಾಸನದಲ್ಲಿ ಕಾಣ ಬಹುದು.[15]

ಕೋಟೆಯ ಕೊನೆಯ ಸುತ್ತಿನ ಹೊರಗೆ ಇನ್ನೊಂದು ತರಹದ ಸಂರಕ್ಷಣಾ ವ್ಯವಸ್ಥೆ ಇದ್ದುದು ಕ್ರಿ.ಶ. ೧೫೦೨ ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದ ಪೋರ್ಚ್ ಗೀಸ್ ಪ್ರವಾಸಿ ಡಾಮಿನಿಗೂ ಪಾಯಸ್‌ನಿಂದ ತಿಳಿಯುತ್ತದೆ. ಕೆಳಮಟ್ಟದಲ್ಲಿಯ ಭೂಮಿಯಲ್ಲಿ ಎದೆ ಮಟ್ಟದ ಚೂಪಾದ ಕಲ್ಲುಗಳನ್ನು ನೆಟ್ಟಿದ್ದರು. ಇದು ಗುಡ್ಡ ಪ್ರದೇಶಗಳನ್ನು ತಲುಪುವವರೆಗೆ ಮುಂದುವರೆದಿದ್ದವು. ಇಂತಹ ಕಲ್ಲುಗಳನ್ನು ಕುದುರೆ ಮತ್ತು ಮನುಷ್ಯನ ಚಲನೆಯನ್ನು ತಡೆಯಲು ನೆಟ್ಟಿದ್ದುದನ್ನು ಅಬ್ದುಲ್ ರಜಾಕ್ ಸಹ ದಾಖಲಿಸಿದ್ದಾನೆ. ಈ ಕಲ್ಲುಗಳು ಈಗ ಹಂಪಿ ಪರಿಸರದಲ್ಲಿ ಕಾಣದಿದ್ದರೂ ಕುಮ್ಮಟದುರ್ಗದಲ್ಲಿ ಕಂಡುಬರುತ್ತದೆ.

ಕೋಟೆಯ ಕೊನೆಯ ಸುತ್ತು ಕಮಲಾಪುರದ ರಾಯರ ಕೆರೆಯ ಹಿಂಭಾಗದಿಂದ ಸಾಗಿ ಮಲಪನಗುಡಿಯ ಮೂಲಕ ಹೊಸಪೇಟೆಯನ್ನು ಬಳಸಿಕೊಂಡು ಈಗಿನ ತುಂಗಭದ್ರ ಅಣೆಕಟ್ಟಿನ ಹಿಂಭಾಗದವರೆಗೂ ವಿಸ್ತರಿಸಿರುವುದನ್ನು ಗುರುತಿಸಬಹುದು. ಇದಕ್ಕೆ ಪೂರಕವೆಂಬಂತೆ ಮಲಪನಗುಡಿ ಹಾಗೂ ತುಂಗಭದ್ರಾ ಅಣೆಕಟ್ಟಿನ ಹಿಂಬದಿಯಲ್ಲಿ ಪ್ರವೇಶ ದ್ವಾರಗಳಿವೆ. ಅಣೆಕಟ್ಟಿನ ಹಿಂಬದಿಯಲ್ಲಿ ಪ್ರವೇಶದ್ವಾರಗಳಿವೆ. ಅಣೆಕಟ್ಟಿನ ಹಿಂಬದಿಯ ದ್ವಾರಕ್ಕೆ ಗೋವಾ ಗೇಟ್ ಎಂದು ಕರೆಲಾಗುತ್ತಿದೆ. ಇಂದಿಗೂ ಸುಸ್ಥಿತಿಯಲ್ಲಿದೆ. ಪ್ರಾಯಶಃ ವಿಜಯನಗರದಿಂದ ಗೋವಾಕ್ಕೆ ಹೋಗುವವರಿಗೆ ಹಾಗೂ ಬರುವವರಿಗಾಗಿ ಈ ಗೇಟ್ ಬಳಕೆಯಾಗುತ್ತಿದ್ದರಿಂದ ಗೋವಾ ಗೇಟ್ ಎಂದೇ ಖ್ಯಾತಿಯಾಗಿದೆ. ಇದು ಹಂಪಿಯ ಹಿಂಭಾಗದಿಂದ ನಗರಕ್ಕೆ ಪ್ರವೇಶವನ್ನು ಕೊಡುತ್ತಿತ್ತು.

ಸುಮಾರು ೩೦೦ ವರ್ಷಗಳ ಕಾಲ ವಿಜೃಂಭಿಸಿದ ವಿಜಯನಗರ ಅವಸಾನ ಹೊಂದುವ ಕಾಲ ಹತ್ತಿರವಾಯಿತು. ಕ್ರಿ.ಶ. ೧೫೬೫ ರಲ್ಲಿ ರಕ್ಕಸ ತಂಗಡಿಗಿಯಲ್ಲಿ ನಡೆದ ನಿರ್ಣಾಯಕ ಕದನದಲ್ಲಿ ವಿಜಯನಗರ ಪರಾಜಯ ಹೊಂದಿತು. ಆಗ ಅಳಿಯ ರಾಮರಾಯ ಹತನಾದ ಉಳಿದ ತಿರುಮಲ ರಾಜಧಾನಿಗೆ ಹಿಂದಿರುಗಿ ರಾಣಿವಾಸದವರನ್ನು ಹಾಗೂ ಬಂಧು ವರ್ಗದವರನ್ನು ಸಾಧ್ಯವಾದಷ್ಟು ಧನ ಕನಕಗಳನ್ನು ಸಾವಿರಾರು ಆನೆಗಳ ಮೇಲೆ ಹೇರಿಕೊಂಡು ಚಂದ್ರಗಿರಿಗೆ ಹೋದನು. ಬೆನ್ನಟ್ಟಿ ಬಂದ ಶತ್ರುಸೇನೆ ರಾಜಧಾನಿಯನ್ನು ಬೆಂಕಿ, ಖಡ್ಗ, ಹಾರೆ ಮತ್ತು ಕೊಡಲಿಗಳಿಂದ ಐದು ತಿಂಗಳ ಕಾಲ ಧ್ವಂಸ ಮಾಡಿ ಹಾಳುಗೆಡವಿತಂತೆ. ಆಗ ಕೋಟೆಯ ಬಹುತೇಕ ಭಾಗಗಳು ಭಗ್ನಗೊಂಡಿವೆ.

ರಾಜಧಾನಿಯನ್ನು ಕಟ್ಟುವಾಗ ಈ ಸ್ಥಳವನ್ನು ಆಯ್ಕೆ ಮಾಡಲು ಸ್ವಾಭಾವಿಕವಾಗಿ ರಕ್ಷಣೆ ನೀಡುವ ನದಿ ಮತ್ತು ಗುಡ್ಡಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ರಾಜಧಾನಿಯ ಉತ್ತರಕ್ಕೆ ತುಂಗಭದ್ರಾ ನದಿ ಮತ್ತು ಗುಡ್ಡಗಳ ಸಾಲು ನೈಸರ್ಗಿಕ ರಕ್ಷಣೆಯನ್ನು ನೀಡುತ್ತವೆ. ಪೂರ್ವದಿಕ್ಕಿಗೂ ಅನೇಕ ಗುಡ್ಡಗಳ ಸಾಲುಗಳಿವೆ. ಈ ಗುಡ್ಡಗಳ ಮಧ್ಯದಲ್ಲಿ ಮೇಲೆ ಕೆಲವೆಡೆ ನೆಲಮಟ್ಟದಲ್ಲಿ ಕೋಟೆಯನ್ನು ಕಟ್ಟಲಾಗಿದೆ. ಭದ್ರವಾದ ಕೋಟೆಯು ಅನೇಕ ಸುತ್ತುಗಳಲ್ಲಿದ್ದು, ರಾಜಧಾನಿಯನ್ನು ರಕ್ಷಿಸುತ್ತಿತ್ತು. ಈ ಮೇಲಿನ ಅಂಶಗಳಿಂದ ಇದು ನೆಲದುರ್ಗ, ಗಿರಿದುರ್ಗ ಮತ್ತು ಜಲದುರ್ಗದ ಲಕ್ಷಣಗಳನ್ನು ಹೊಂದಿವೆ. ಸಂಪ್ರದಾಯ ಹಾಗೂ ವಿದೇಶಿ ಪ್ರವಾಸಿಗರ ಪ್ರಕಾರ ವಿಜಯನಗರ ಏಳುಸುತ್ತಿನ ಕೋಟೆಯಿಂದ ಸುತ್ತುವರೆಯಲ್ಪಟ್ಟಿತ್ತು. ಈಗ ಕೆಲವು ಸುತ್ತುಗಳು ಮಾತ್ರ ಕಾಣುತ್ತವೆ.

ಅಳ್ವೇರಿಗಳು ಬಹಳ ದಪ್ಪವಾಗಿದ್ದು, ಹೊರಮೈಗೆ ದಪ್ಪ ಕಲ್ಲುಗಳಿದ್ದು, ಒಳಮೈಗೆ ಮಣ್ಣಿನ ಇಳಿವೊರೆ (Ramp) ಇದೆ. ಹೊರಭಾಗದಲ್ಲಿ ದೊಡ್ಡ ಕಲ್ಲುಗಳ ಮಧ್ಯದಲ್ಲಿ ಯಾವುದೇ ಗಾರೆಯನ್ನು ಉಪಯೋಗಿಸದೆ ಒಂದು ಕಲ್ಲು ಮತ್ತೊಂದು ಜೊತೆಗೆ ಸರಿಯಾಗಿ ಹೊಂದಿಕೊಳ್ಳುವಂತೆ ಸಂದುಗಳಿಲ್ಲ ಕಟ್ಟಲಾಗಿದೆ. ದೊಡ್ಡ ಕಲ್ಲನ್ನು ಮೇಲೆಕ್ಕೆತ್ತುವಾಗ ಆಗುವ ಭಾರವನ್ನು ಕಡಿಮೆ ಮಾಡುವುದಕ್ಕಾಗಿ ಬೆಣೆಯಾಕಾರದ (Wedge-shaped) ಕಲ್ಲುಗಳನ್ನು ಬಹಳ ಜಾಣ್ಮೆಯಿಂದ ಆಯಾತಾಕಾರದ ಕಲ್ಲುಗಳ ಬದಲಿಗೆ ಉಪಯೋಗಿಸಲಾಗಿದೆ. ಇವುಗಳ ಹೊರಭಾಗ ಅಗಲವಾಗಿದ್ದು, ಒಳಭಾಗವು ಚೂಪಾಗಿರುತ್ತದೆ. ಒಳಭಾಗದಲ್ಲಿ ಕಲ್ಲುಗಳ ಮಧ್ಯದ ಸಂದುಗಳನ್ನು ಸಣ್ಣಕಲ್ಲು ಮತ್ತು ಮಣ್ಣಿನಿಂದ ತುಂಬಲಾಗಿದೆ. ಕೋಟೆಗೋಡೆಯ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಅಲ್ಲಲ್ಲಿ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಈ ಕೊತ್ತಳಗಳು ಚೌಕಾಕಾರದಲ್ಲಿ ಮುಂದೆ ಚಾಚಿಕೊಂಡಿರುವ ಕೋಟೆಗೋಡೆಯ ಭಾಗಗಳಾಗಿವೆ. ಯುದ್ಧದ ಸಮಯದಲ್ಲಿ ಹೆಚ್ಚು ಸೈನಿಕರು ನಿಲ್ಲಲು ಸಹ ಕೊತ್ತಳಗಳು ಉಪಯೋಗವಾಗುತ್ತವೆ. ಕೊತ್ತಳಗಳ ಮೇಲೆ ಕಾವಲಿನವರು ನಿಂತು ಕೋಟೆಯನ್ನು ಸಂರಕ್ಷಿಸುತ್ತಿದ್ದರು. ಇವರಿಗಾಗಿ ನಿರ್ಮಿಸಿದ ಚಿಕ್ಕ ಕಟ್ಟಡಗಳ ಅವಶೇಷಗಳು ಕೆಲವು ಕೊತ್ತಳಗಳ ಮೇಲೆ ಈಗಲೂ ಕಾಣುತ್ತಿವೆ. ಕೋಟೆ ಪಕ್ಕದಲ್ಲಿ ನೈಸರ್ಗಿಕವಾಗಿ ಎತ್ತರದಲ್ಲಿರುವ ಕೆಲವು ಸ್ಥಳಗಳನ್ನು ಸಹ ಕೊತ್ತಳಗಳಂತೆ ಉಪಯೋಗಿಸಲಾಗಿದೆ. ಕೋಟೆಯ ಪಕ್ಕದಲ್ಲಿದ್ದ ಅವುಗಳು ಈಗ ಮುಚ್ಚಿ ಹೋಗಿವೆ. ಕೋಟೆ ಗೋಡೆಗಳಲ್ಲಿರುವ ಬಾಗಿಲುಗಳು ಒಂದೇ ತರಹವಿಲ್ಲ. ಪ್ರಮುಖ್ಯತೆ ಹಾಗು ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಬಾಗಿಲುಗಳನ್ನು ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳೆಂದು ವಿಂಗಡಿಸಿದ್ದುದು ಅಲ್ಲಿಯ ಶಾಸನಗಳಿಂದ ತಿಳಿದು ಬರುತ್ತದೆ.

ಹೆಬ್ಬಾಗಿಲುಗಳು ಅತಿ ದೊಡ್ಡವು. ಇವುಗಳನ್ನು ಮುಖ್ಯ ಪ್ರವೇಶದ್ವಾರಗಳಾಗಿ ಉಪಯೋಗಿಸುತ್ತಿದ್ದರು. ಬಾಗಿಲುಗಳು ಮಧ್ಯಮಗಾತ್ರದವು. ದಿಡ್ಡಿಗಳು ಚಿಕ್ಕ ಬಾಗಿಲುಗಳಾಗಿದ್ದು, ಜನರು ತಮ್ಮ ದಿನ ನಿತ್ಯ ಕೆಲಸಗಳಿಗಾಗಿ ಪಟ್ಟಣದ ಎಲ್ಲಾ ದಿಕ್ಕಿಗೂ ಸುಲಭವಾಗಿ ಹೋಗಲು ಅನುಕೂಲವಾಗುವಂತೆ ನಿರ್ಮಿಸಲ್ಪಟ್ಟವು. ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳ ವಿನ್ಯಾಸವನ್ನು ಯುದ್ಧ ತಂತ್ರದ ದೃಷ್ಟಿಯಿಂದ ಬಹಳ ಎಚ್ಚರಿಕೆಯಿಂದ ಮಾಡಲಾಗಿದೆ. ಕೋಟೆಯೊಳಗೆ ನೇರವಾದ ಪ್ರವೇಶವನ್ನು ಇವು ನೀಡುವುದಿಲ್ಲ. ದೂರದಿಂದ ನೋಡಿದಾಗ ಪ್ರವೇಶದ್ವಾರವೇ ಕಾಣುವುದಿಲ್ಲ. ಪ್ರವೇಶದ್ವಾರದ ಎರಡೂ ಪಾರ್ಶ್ವಗಳಲ್ಲಿ ಮತ್ತು ಮುಂಭಾಗದಲ್ಲಿ ಅದೇ ರೀತಿಯ ಗೋಡೆಗಳನ್ನು ಕಟ್ಟಿ ಅದನ್ನು ಮರೆಮಾಡಿ ಗೋಡೆಯಲ್ಲಿ ಎರಡನೆಯ ಪ್ರವೇಶದ್ವಾರವನ್ನು ಕಲ್ಪಿಸಲಾಗಿದೆ. ಹೀಗಾಗಿ ಒಳಗೆ ಬರುವ ದಾರಿಯ ಅಂಕು ಡೊಂಕಾಗುವುದು. ಸಾಮಾನ್ಯವಾಗಿ ಬಾಗಿಲುಗಳ ಪಾರ್ಶ್ವದಲ್ಲಿ ಎರಡೂ ದೊಡ್ಡ ಕೊತ್ತಳಗಳಿವೆ. ಬಾಗಿಲಿನ ಮೂಲಕ ಅಂಕುಡೊಂಕಾದ ದಾರಿಯಲ್ಲಿ ಒಳಪ್ರವೇಶಿಸಲು ಪ್ರಯತ್ನಿಸುವ ವೈರಿ ಪಡೆಯನ್ನು ಕೋಟೆ ಗೋಡೆಯ ಮತ್ತು ಕೊತ್ತಳಗಳ ಮೇಲೆ ಸಂರಕ್ಷಣೆಗಾಗಿ ನಿಂತ ಸುಲಭವಾಗಿ ಸದೆ ಬಡಿಯಲು ಅನುಕೂಲವಾಗುತ್ತಿತ್ತು. ಬಾಗಿಲುಗಳನ್ನು ಕಾವಲುಗಾರರಿರುತ್ತಿದ್ದರು. ಇವರು ಖಡ್ಗ, ದೊಣ್ಣೆ ಮತ್ತು ಚಾವಟಿಗಳನ್ನು ಹಿಡಿದುಕೊಂಡು ನಿಂತಿರುತ್ತಿದ್ದರು. ಇಂತಹ ಕೆಲವು ಶಿಲ್ಪಗಳನ್ನು ಬಾಗಿಲುಗಳ ತೋಳಗಂಬಗಳ ಮೇಲೆ ಕೆತ್ತಲಾಗಿದೆ.

ಪ್ರವೇಶದ್ವಾರಗಳು ಕಂಬ ಮತ್ತು ತೊಲೆಗಳಿಂದ, ಇಟ್ಟಿಗೆ ಗಾರೆ ಬಳಸದೆ, ಹಿಂದೂ ಶೈಲಿಯಲ್ಲಿ ಕಟ್ಟಲಾಗಿದೆ. ಬಾಗಿಲು ತೋಳುಗಳ ಮೇಲೆ ದ್ವಾರಪಾಲಕರು ಮತ್ತು ಅಲಂಕಾರಿಕ ಶಾಖೆಗಳನ್ನು ಕೆತ್ತಿದೆ. ಪ್ರವೇಶಕ್ಕಿಂತ ಮೊದಲು ದೊಡ್ಡ ಆವರಣವಿದೆ. ಪ್ರವೇಶದ ಇಕ್ಕೆಲಗಳಲ್ಲಿ ಕಂಬಗಳ ಅಂಕಣಗಳುಳ್ಳ ಕಟ್ಟೆಗಳಿವೆ. ಸೈನಿಕರು ಮತ್ತು ಪ್ರವಾಸಿಗರು ವಿಶ್ರಾಂತಿ ಪಡೆಯಲು ಇವು ಅನುಕೂಲವಾಗಿದೆ. ನೇರ ಪ್ರವೇಶದ ಕದನಗಳನ್ನು ಹಾಕಿದಾಗ ಬಳಸಲು ಪಕ್ಕದಲ್ಲಿ L ಅಥವಾ U ಆಕಾರದ ಉಪ ಪ್ರವೇಶಗಳನ್ನು ಒದಗಿಸಿವೆ. ಕೆಲವು ಪ್ರವೇಶದ್ವಾರಗಳ ರಚನೆಯಲ್ಲಿ ಮುಸ್ಲಿಂ ವಾಸ್ತುವಿನ ಪ್ರಭಾವವು ಕಾಣುತ್ತದೆ. ಗುಮ್ಮಟದ ಬಾಗಿಲೆಂದೆ ಕರೆಯುವ ಪ್ರವೇಶದ್ವಾರದ ಮೇಲಿನ ಗುಮ್ಮಟ ಮತ್ತು ಬೇಟೆಕಾರರ ಹೆಬಾಗಿಲು ಮತ್ತು ಅರೆಶಂಕರ ಬಾಗಿಲುಗಳ ಮೇಲಿನ ಕಮಾನುಗಳು ಮುಸ್ಲಿಂ ಶೈಲಿಯಲ್ಲಿದೆ. ಕೆಲವು ಬಾಗಿಲುಗಳ ಗೋಡೆಗಳನ್ನು ಶಿಲ್ಪಗಳಿಂದ ಅಲಂಕರಿಸಿದೆ ಹಾಗೂ ಕೆಲವು ಬಾಗಿಲುಗಳ ಆವರಣದಲ್ಲಿ ದೇವಾಲಯಗಳಿವೆ.

ವಿಜಯನಗರದ ಕೋಟೆಯು ಬಹು ದೊಡ್ಡದಿದೆ. ಇದರ ಭಾಗಗಳನ್ನು ವೇಗವಾಗಿ ಪತ್ತೆ ಹಚ್ಚುವುದು ಯುದ್ಧ ಸಮಯದಲ್ಲಿ ಅತ್ಯವಶ್ಯಕವಾಗುತ್ತದೆ. ಕೋಟೆಯ ಯಾವುದಾದರೊಂದು ಭಾಗಕ್ಕೆ ಸೈನಿಕರನ್ನು ಕಳುಹಿಸುವಾಗ ಅವರು ಯಾವುದೇ ಗೊಂದಲಕ್ಕೊಳಪಡದೆ ನೇರವಾಗಿ ವೇಗದಲ್ಲಿ ಹೋಗಿ ಆ ಭಾಗವನ್ನು ಸೇರುವಂತೆ ಕೋಟೆಯ ವಿವಿಧ ಭಾಗಗಳಿಗೆ ಹೆಸರುಗಳನ್ನು ಕೊಟ್ಟು ಗುರುತಿಸುವುದು ಅತಿ ಮುಖ್ಯವಾದ ವಿಷಯ, ಹಂಪಿ ಕೋಟೆಯಲ್ಲಿ ಇಂತಹ ವ್ಯವಸ್ಥೆ ಇದ್ದುದು ಇತ್ತೀಚೆಗಷ್ಟೇ ಪತ್ತೆ ಮಾಡಿ ಹೊರತಂದ ಹಲವಾರು ಶಾಸನಗಳಿಂದ ಬೆಳಕಿಗೆ ಬಂದಿದೆ. ಕೋಟೆಯ ಬಾಗಿಲುಗಳಿಗೆ ಹಾಗೂ ಕೊತ್ತಳಗಳಿಗೆ ಹೆಸರುಗಳನ್ನಿಟ್ಟು ಅವುಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಮಾಡಲಾಗಿದೆ. ಶಾಸನ ಮತ್ತು ಇತರ ಆಧಾರದ ಮೇಲೆ ಇದುವರೆಗೆ ಪತ್ತೆ ಹಚ್ಚಿದ ಬಾಗಿಲು ಹಾಗೂ ಕೊತ್ತಳಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಸಿಂಘಾರದ ಹೆಬ್ಬಾಗಿಲು: ರಾಜಧಾನಿಯ ಸಿಂಘಾಪುರಕ್ಕೆ ಈ ಹೆಬ್ಬಾಗಿಲು ಪ್ರವೇಶ ನೀಡುವದರಿಂದ ಇದನ್ನು ಸಿಂಘಾರದ ಹೆಬ್ಬಾಗಿಲೆಂದು ಕರೆಯಲಾಗಿದೆ. ಆನೆ ಸಾಲಿನ ಹಿಂಭಾಗದಲ್ಲಿ ಈ ಹೆಬ್ಬಾಗಿಲು ಬರುತ್ತದೆ. ಇದರ ಉಲ್ಲೇಖವು ಸಿಂಘಾರದ ಹೆಬ್ಬಾಗಿಲಿನ ಉತ್ತರಕ್ಕಿರುವ ಚಿಕ್ಕ ಬೆಟ್ಟವೊಂದರ ಕಲ್ಲಿನಲ್ಲಿರುವ ಶಾಸನದಲ್ಲಿ ಬರುತ್ತದೆ.[16]

ದೂರದಿಂದ ನೋಡಿದಾಗ ಈ ಹೆಬ್ಬಾಗಿಲು ಕಾಣುವುದಿಲ್ಲ. ಪ್ರವೇಶದ್ವಾರದ ಎರಡೂ ಬದಿಗೆ ಬಲಿಷ್ಠವಾದ ಗೋಡೆಗಳಿವೆ. ಮುಂಭಾಗದಲ್ಲಿಯೂ ಇದೇ ರೀತಿಯ ಗೋಡೆಗಳಿವೆ. ಹಾಗಾಗಿ ಒಳಗೆ ಬರುವ ದಾರಿಯು ಅಂಕು ಡೊಂಕಾಗಿರುವುದು. ಮಧ್ಯದಲ್ಲಿ ವಿಶಾಲವಾದ ಆವರಣದಲ್ಲಿ. ಈ ಆವರಣದ ಎಡಭಾಗದ ವೇದಿಕೆಯ ಮೇಲೆ ವೈಷ್ಣವ ದೇವಾಲಯವಿದೆ. ಉತ್ತರಾಭಿಮುಖವಾಗಿರುವ ಈ ದೇವಾಲಯದಲ್ಲಿ ಗರ್ಭಗೃಹ, ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಯಾವುದೇ ಶಿಲ್ಪಗಳಿಲ್ಲ. ಪ್ರವೇಶದ್ವಾರದ ಎರಡೂ ಬದಿಗೆ ಬಾಗಿಲು ತೋಳುಗಳಲ್ಲಿ ವೈಷ್ಣವ ದ್ವಾರಪಾಲಕ ಉಬ್ಬುಶಿಲ್ಪಗಳಿವೆ. ಸಭಾಮಂಟಪದಲ್ಲಿರುವ ನಾಲ್ಕು ಕಂಬಗಳಲ್ಲಿ ಯಾಳಿ, ಆಂಜನೇಯ ಇತ್ಯಾದಿ ಉಬ್ಬುಗೆತ್ತನೆಗಳಿವೆ. ಆವರಣದ ಪಶ್ಚಿಮದ ಗೋಡೆಯಲ್ಲಿ ಗಣೇಶ ಸಿಂಗಾರ ಮಾಡಿಕೊಳ್ಳುವ ಸ್ರೀ, ನಂದಿ, ಆನೆ, ವೀರರ ಉಬ್ಬುಶಿಲ್ಪಗಳಿವೆ. ಬಾಗಿಲು ತೋಳುಗಳಲ್ಲಿ ಎರಡೂ ಬದಿಗೆ ದ್ಬಾರಪಾಲಕರ ಉಬ್ಬುಶಿಲ್ಪಗಳಿವೆ. ಪ್ರವೇಶದ್ವಾರದ ಒಳಬದಿಗೆ ಇಕ್ಕೆಲಗಳಲ್ಲಿ ಕಟ್ಟೆಗಳಿವೆ. ಪ್ರವೇಶದ್ವಾರದ ಪಾರ್ಶ್ವದಲ್ಲಿ ಉಪಬಾಗಿಲನ್ನು ನಿರ್ಮಿಸಲಾಗಿದೆ. ಈ ದ್ಬಾರದ ಮೂಲಕ ಪಶ್ಚಿಮಕ್ಕೆ ಸಾಗಿದರೆ ಸಿಂಘಾರಪುರ ಪ್ರದೇಶ ಸಿಗುವುದು. ಸಿಂಘಾರಪುರದ ಉಲ್ಲೇಖ ಬರುವ ಶಾಸನವು ವಿಠ್ಠಲಸ್ವಾಮಿ ದೇವಾಲಯದ ಮುಂದಿರುವ ಮಂಟಪದ ದಕ್ಷಿಣ ಗೋಡೆಯಲ್ಲಿದೆ.[17] ಈ ಹೆಬ್ಬಾಗಿಲು ನಗರಕ್ಕೆ ನೇರವಾಗಿ ಪ್ರವೇಶವನ್ನು ಕೊಡುತ್ತದೆ.

ಬೇಟೆಕಾರರ ಹೆಬ್ಬಾಗಿಲು: ವಿಜಯನಗರ ಕಾಲದಲ್ಲಿ ಬೇಟೆಗೆ ಪ್ರಧಾನ ಪಾತ್ರವಿತ್ತು ಅಂತೆಯೇ ಅರಸರು ತಮ್ಮ ಮನೋರಂಜನೆಗಾಗಿ ಬೇಟೆಯಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಅಡವಿಯಲ್ಲಿ ಬೇಟೆಯಾಡಿ ಈ ದ್ವಾರದ ಮೂಲಕ ನಗರದೊಳಕ್ಕೆ ಪ್ರವೇಶ ಮಾಡಲಾಗುತ್ತಿತ್ತು. ಹಾಗಾಗಿ ಇದನ್ನು ಬೇಟೆಕಾರರ ಹೆಬ್ಬಾಗಿಲೆಂದು ಕರೆದಿರುವರು.

ಮಾಲ್ಯವಂತ ರಘುನಾಥ ದೇವಾಲಯದ ಆಗ್ನೇಯ ದಿಕ್ಕಿಗೆ ಬೇಟೆಕಾರರ ಹೆಬ್ಬಾಗಿಲು ಕಂಡುಬರುತ್ತದೆ. ಹೆಬ್ಬಾಗಿಲಿನ ಪೂರ್ವಕ್ಕಿರುವ ಕಲ್ಲುಗುಂಡಿನ ಮೇಲಿರುವ ಶಾಸನವು ಈ ಕೆಳಗಿ ನಂತಿವೆ.

ಶ್ರೀ ಶಕ ವರುಷ ೧೩೧೨ ಉದ್ರಿ ಸಂವತ್ಸರದ ಆಶ್ವೀಜ ಸು ಗು
ಶ್ರೀ ಮನ್ಮಮಹಾರಾಜಾಧಿರಾಜ
ರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಹರಿಹರ ಮಹಾರಾಯರ
ನೆಯ ಎಡವಂಕದ ಬೇಟೆಕಾರ ಮಲಗೆಯ ನಾಯ್ಕನ ಮಗ ಬಥ್ಥೆಯನಾಯ್ಕ
ನು ಬೇಟೆಕಾರರ ಹೆಬ್ಬಾಗಿಲ ಮೂಡಣ ದಿಕ್ಕಿನ ಒರತೆಯ ಮೈಲಾರದೇವರ ಪ್ರ
ತಿಷ್ಠೆ ಅಗ್ನಿದಿಸೆಯ ಆಲದ ಅರವೆ ದೇವರ ಹಿಂದಣ ವಾಯುತ್ಯದ ದಿಕ್ಕಿ
ಒರತೆಯ್ವ್ಯ ಕೊಂಡವನು ಮಾಡಿದನು ಮಂಗಳ ಮಹಾ ಶ್ರೀ ಶ್ರೀ ಶ್ರೀ[18]

ಈ ಶಾಸನವು ಬೇಟೆಕಾರರ ಹೆಬ್ಬಾಗಿಲಿನ ಪರಿಚಯವನ್ನು ಸ್ಪಷ್ಟವಾಗಿ ಮಾಡಿಕೊಡುತ್ತದೆ. ಈ ಹೆಬ್ಬಾಗಿಲು ಸಿಂಘಾರದ ಹೆಬ್ಬಾಗಿಲಿನಂತೆ ಪ್ರಧಾನವಾದ ಮಹಾದ್ವಾರವೆನಿಸಿದೆ. ಸಿಂಘಾರದ ಹೆಬ್ಬಾಗಿಲು ೨ನೆ ಹಂತಕ್ಕೆ ಪೂರ್ವದಿಂದಲೇ ನಗರಕ್ಕೆ ಪ್ರವೇಶವನ್ನು ಕೊಡುತ್ತದೆ. ಇದರ ಸುತ್ತಲೂ ಬೆಟ್ಟ-ಗುಡ್ಡ ಮತ್ತು ಕಾಡು ಆವರಿಸಿದೆ. ಎರಡು ಬೆಟ್ಟಗಳ ಸಂದನ್ನು (ಕಣಿವೆ) ಉಪಯೋಗಿಸಿ ಬಹು ಜಾಣ್ಮೆಯಿಂದ ಈ ಹೆಬ್ಬಾಗಿಲನ್ನು ಕಟ್ಟಲಾಗಿದೆ. ದೂರದಿಂದ ನೋಡಲು ಕಾಣದಂತೆ ಗೋಡೆಗಳ ಮರೆಯಲ್ಲಿದೆ. ಪ್ರವೇಶದ್ವಾರದ ಪಾರ್ಶ್ವದಲ್ಲಿರುವ ಗೋಡೆಗಳು ವಿಶಾಲ ಆವರಣವನ್ನು ನಿರ್ಮಿಸಿ ಮುಂದೆ ಹಾಗೆಯೇ ಗೋಡೆಗಳನ್ನು ಉತ್ತರಕ್ಕೆ ತಿರುಗಿಸಲಾಗಿದೆ. ಮಧ್ಯದಲ್ಲಿರುವ ವಿಶಾಲವಾದ ಆವರಣದಲ್ಲಿ ದಕ್ಷಿಣಾಭಿಮುಖವಾದ ದೇಗುಲವಿದೆ. ಇದು ಗರ್ಭಗೃಹ, ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಯಾವುದೇ ಮೂರ್ತಿಗಳಿಲ್ಲ. ಸಭಾಮಂಟಪದಲ್ಲಿ ಆಂಜನೇಯನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಸಭಾಮಂಟಪದ ಮೇಲೆ ಕೈಪಿಡಿಗೋಡೆಯಲ್ಲಿ ದೇವಕೋಷ್ಠಕಗಳಿವೆ.

ಬೇಟೆಕಾರರ ಹೆಬ್ಬಾಗಿಲು ಪೂರ್ಣವಾಗಿ ಗೋಚರಿಸದಿದ್ದರೂ ಇಟ್ಟಿಗೆ-ಗಾರೆ ಕಲ್ಲಿನ ಅವಶೇಷಗಳು ವ್ಯಾಪಕವಾಗಿ ಕಂಡುಬರುತ್ತವೆ. ಬೇಟೆಕಾರರಿಗಾಗಿ ಪ್ರತ್ಯೇಕ ಹೆಬ್ಬಾಗಿಲನ್ನೇ ನಿರ್ಮಿಸಿರುವ ವಿಜಯನಗರ ಅರಸು ಬೇಟೆಗೆ ಬಹುಪ್ರಮುಖ್ಯತೆಯನ್ನು ನೀಡಿದ್ದರು. ಅಂತೆಯೇ ವಿದೇಶಿ ಯಾತ್ರಿಕರಾದ ಅಬ್ದುಲ್ ರಜಾಕ್, ನ್ಯೂನಿಜ್ ಮತ್ತು ಬಾರ್ಬೋಸರು ಬೇಟೆಯ ಸಂದರ್ಭಗಳನ್ನು ವಿಸ್ತೃತವಾಗಿ ಹೇಳಿದ್ದಾರೆ.[19]

ಗುಮ್ಮಟದ ಬಾಗಿಲು: ಕಮಲಾಪುರದ ಈಶಾನ್ಯ ದಿಕ್ಕಿಗೆ ಸುಮಾರು ೧ ಕಿ.ಮೀ ದೂರದಲ್ಲಿ (H.P.C. ಯ) ಬಳಿ ಈ ಗುಮ್ಮಟದ ಬಾಗಿಲಿದೆ. ಗುಮ್ಮಟದಂತಿರುವದರಿಂದ ಇದನ್ನು ಗುಮ್ಮಟದ ಬಾಗಿಲೆಂದು ಗುರುತಿಸುತ್ತಾರೆ. ಬೃಹದಾಕಾರದ ಹಾಗೂ ಸುಸ್ಥಿತಿಯಲ್ಲಿರುವ ಹೆಬ್ಬಾಗಿಲುಗಳಲ್ಲಿ ಇದು ಒಂದು. ಪೆನುಗೊಂಡದಿಂದ ಬರುವವರು ಮೊದಲು ಪೆನುಗೊಂಡ ಬಾಗಿಲನ್ನು ಬಳಸಿಕೊಂಡು ಗುಮ್ಮಟ ಹಾಗೂ ಭೀಮನ ಹೆಬ್ಬಾಗಿಲುಗಳ ಮೂಲಕ ನಗರ ಪ್ರವೇಶ ಮಾಡುತ್ತಿದ್ದರು. ಹಿಂದೂ ಮುಸ್ಲಿಂ ಶೈಲಿಯಲ್ಲಿ ನಿರ್ಮಾಣವಾಗಿರುವ ಸ್ಮಾರಕಗಳಲ್ಲಿ ಗುಮ್ಮಟದ ಬಾಗಿಲು ಒಂದು.

ಪ್ರವೇಶದ್ವಾರದ ಮುಂಭಾಗಕ್ಕೆ ೨೦ ಅಡಿ ಅಗಲ ಅಭಿಮುಖವಾದ ಎರಡು ಗೋಡೆಗಳು ದಕ್ಷಿಣಕ್ಕೆ ಮುಂಚಾಚಿವೆ. ಇವುಗಳ ಮುಂದಿರುವುದೇ ವಿಶಾಲವಾದ ಆವರಣ. ಈ ಆವರಣದ ಪಶ್ಚಿಮಗೋಡೆಯಲ್ಲಿ ಉಪಬಾಗಿಲನ್ನು ಜೋಡಿಸಲಾಗಿದೆ.

ಈ ಆವರಣವನ್ನು ಸುತ್ತುವರೆದಿರುವ ಗೋಡೆಯು ಪೂರ್ವ ದಿಕ್ಕಿಗೆ ಸುಮಾರು ೧೦೦ ಅಡಿಗಳಷ್ಟು ಉದ್ದವಾಗಿದೆ. ಇದಕ್ಕೆ ಅಭಿಮುಖವಾದ ಇನ್ನೊಂದು ಗೋಡೆ ಇದೆ. ಇದರಲ್ಲಿ ಮೀನು ಮೊಸಳೆಯು ಉಬ್ಬುಗೆತ್ತನೆಗಳಿವೆ. ಇದಕ್ಕೆ ಹೊಂದಿಕೊಂಡು ಆಂಜನೇಯನ ಗುಡಿಯನ್ನು ನಿರ್ಮಿಸಲಾಗಿದೆ. ಇದು ಗರ್ಭಗೃಹ ಮಾತ್ರ ಹೊಂದಿದ್ದು, ಅದರಲ್ಲಿ ಸುಮಾರು ಆರು ಅಡಿ ಎತ್ತರದ ಆಂಜನೇಯನ ಉಬ್ಬುಶಿಲ್ಪವಿದೆ. ಈ ಗುಡಿಯ ಎದುರಿನ ಗೋಡೆಯಲ್ಲಿ ಇಮ್ಮಡಿ ದೇವರಾಯನನ್ನು ಪ್ರತಿನಿಧಿಸುವ ಉಬ್ಬುಶಿಲ್ಪವಿದೆ.[20] ಇಲ್ಲಿ ದೊರೆಯು ವಿಜಯನಗರ ಕಾಲದ ಸಾಂಪ್ರದಾಯಿಕ ಉಡುಗೆಯಲ್ಲಿ ಅಂಜಲಿ ಬದ್ಧನಾಗಿ ಶಿವಲಿಂಗದ ಎದುರು ನಿಂತಿದ್ದಾನೆ. ಇವೆರಡು ಶಿಲ್ಪಗಳ ನಡುವೆ ನಂದಿ ವಿಗ್ರಹವಿದೆ.

ಪೂರ್ವದಿಂದ ಈ ಬಾಗಿಲಿನೊಳಗೆ ಮೊದಲು ಪ್ರವೇಶ ಮಾಡುವಾಗ ಇಕ್ಕೆಲಗಳಲ್ಲಿ ಬೃಹದಾಕಾರದ ಗೋಡೆಗಳಿವೆ. ಈ ಪ್ರವೇಶದ ಮೇಲೆ ಕಮಾನಿನಾಕಾರದ ಗುಮ್ಮಟವಿದೆ. ಇದು ಮೂರು ಸ್ತರಗಳಲ್ಲಿದ್ದು, ಪ್ರಥಮ ಹಂತದಲ್ಲಿ ನಾಲ್ಕೂ ದಿಕ್ಕುಗಳಿಗೆ ಕಮಾನುಗಳಿವೆ. ಇದರ ಮೇಲೆ ಅಡ್ಡಪಟ್ಟಿಕೆ ಹಾಕಲಾಗಿದೆ. ಎರಡನೆಯ ಹಂತದಲ್ಲಿ ಚೌಕಾಕಾರದ ನಾಲ್ಕು ಮೂಲೆಯ ಕಟ್ಟಡವಿದೆ. ಮೂರನೆಯ ಹಂತದಲ್ಲಿ ವೃತ್ತಾಕಾರದ ಗುಮ್ಮಟವಿದೆ. ಗೋಡೆಗೆ ಹಾಗೂ ಬಾಗಿಲಿನ ಪ್ರಥಮ ಹಂತಕ್ಕೆ ಮಧ್ಯಮ ಗಾತ್ರದ ಕಲ್ಲು ಹಾಗೂ ಗಾರೆಯನ್ನು ಬಳಸಲಾಗಿದೆ. ಕಮಾನಿನ ಎರಡು ಮತ್ತು ಮೂರನೆಯ ಹಂತದಲ್ಲಿ ಇಟ್ಟಿಗೆ-ಗಾರೆಯನ್ನು ಬಳಕೆ ಮಾಡಿದ್ದಾರೆ.

ಭೀಮನ ಹೆಬ್ಬಾಗಿಲು: ಕಮಲಾಪುರದಿಂದ ಕಂಪ್ಲಿಗೆ ಹೋಗುವ ರಸ್ತೆ ಬದಿಯಲ್ಲಿ ಬರುವ ಗಾಣಗಿತ್ತಿ ದೇವಾಲಯದ ಆಗ್ನೇಯ ದಿಕ್ಕಿಗೆ ಈ ಹೆಬ್ಬಾಗಿಳಿದೆ. ಸುಸ್ಥಿತಿಯಲ್ಲಿರುವ ಬೃಹದಾಕಾರದ ಬಾಗಿಲುಗಳಲ್ಲಿ ಇದು ಒಂದು. ಇದರ ಆಕಾರದ ಕಾರಣದಿಂದಾಗಿಯೇ ಇದಕ್ಕೆ ಭೀಮನ ಹೆಬ್ಬಾಗಿಲೆಂದು ಹೆಸರು ಬಂದಿರಬಹುದು. ಈ ಬಾಗಿಲು ಸುಮಾರು ೨೦ ಅಡಿ ಎತ್ತರ ಹಾಗೂ ೧೫ ಅಡಿ ಅಗಲವಾಗಿದೆ. ಬಾಗಿಲು ತೋಳುಗಳು ಸರಳ ಅಲಂಕರಣೆ ಹೊಂದಿದ್ದು, ಲಾಲಾಟ ಬಿಂಬದ ಎರಡೂ ಬದಿಯ ಕೆಳಗೆ ಇಳಿಬಿದ್ದ ಪದ್ಮದ ಮೊಗ್ಗುಗಳಿವೆ. ಹೆಬ್ಬಾಗಿಲ ಮುಂಭಾಗದಲ್ಲಿ ವಿಶಾಲವಾದ ಆವರಣವಿದೆ. ಇದು ದಕ್ಷಿಣಕ್ಕೆ ಹೆಚ್ಚು ವಿಸ್ತರಿಸಿದೆ.

ಇಲ್ಲಿ ಸುಮಾರು ೮ ಅಡಿ ಎತ್ತರದ ಭೀಮನ ಬಿಡಿ ಶಿಲ್ಪ ಹಾಗೂ ಶಾಸನಗಳಿದೆ. ಹತ್ತಿರದ ಗೋಡೆಯಲ್ಲಿ ಭೀಮನ ಕೀಚಕನನ್ನು ಸಂಹಾರ ಮಾಡುವ ದೃಶ್ಯವನ್ನು ಕೆತ್ತಲಾಗಿದೆ. ದಕ್ಷಿಣದ ಗೋಡೆಗೆ ಹೊಂದಿಕೊಂಡು ಉತ್ತರಾಭಿಮುಖವಾಗಿರುವ ಮೂರು ಗರ್ಭಗೃಹಗಳಿವೆ. ಇವುಗಳಲ್ಲಿ ಯಾವುದೇ ಮೂರ್ತಿಗೆತ್ತನೆಗಳಿವೆ. ಪ್ರವೇಶದ ಇಕ್ಕೆಲದ ತೋಳುಗಳಲ್ಲಿ ವೈಷ್ಣವ ದ್ವಾರಪಾಲಕರ ಉಬ್ಬುಗೆತ್ತನೆಗಳಲ್ಲಿ. ಇದೇ ಗೋಡೆಗೆ ಉಪಬಾಗಿಲನ್ನು ತೆರೆಯಲಾಗಿದೆ. ಈ ಭೀಮನ ಹೆಬ್ಬಾಗಿಲಿಗೆ ಪ್ರವೇಶದ ಮಾಡಲು ಮೊದಲು ಉತ್ತರದಿಂದ ದಕ್ಷಿಣಕ್ಕೆ ಬಂದು ಅಲ್ಲಿಂದ ಪಶ್ಚಿಮಕ್ಕೆ ತಿರುಗಿ ಪೂರ್ವದಿಂದ ಮುಖ್ಯ ಪ್ರವೇಶದ್ವಾರಕ್ಕೆ ಪ್ರವೇಶಿಸಬೇಕಾಗುತ್ತದೆ.

[1] A.R. No. 87 of 1904; SII IX (Pt I), No. 80. ಹಂಪಿ

[2] ದೇವರಕೊಂಡಾರೆಡ್ಡಿ ಮತ್ತು ಇತರರು. ೨೦೦೦. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ (ಹಂಪಿ) -೩ ಪು. ೨೦. ಹಂಪಿ : ಕನ್ನಡ ವಿಶ್ವವಿದ್ಯಾಲಯ

[3] ಅದೇ, ಪು. ೨೩

[4] ಚನ್ನಬಸಪ್ಪ ಎಸ್. ಪಾಟೀಲ, ೧೯೯೯. ಕರ್ನಾಟಕದ ಕೋಟೆಗಳು ಸಂಪುಟ ೧, ಪು. ೯೧. ಹಂಪಿ: ಕನ್ನಡ ವಿಶ್ವವಿದ್ಯಾಲಯ

[5] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೩, ಪೂರ್ವೋಕ್ತ. ಪು. ೨೪

[6] Ec X, kl. 75

[7] Ec X, (R), AR 66

[8] Ec XII, GB.75

[9] ಕರ್ನಾಟಕ ಕೋಟೆಗಳು, ಪೂರ್ವೋಕ್ತ. ಪು. ೯೧

[10] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ. ಪು. ೭೭

[11] ಅದೇ, ಪು. ೨೪೫

[12] ಅದೇ, ಪು. ೨೪೨

[13] ಅದೇ, ಪು. ೨೬೨

[14] ಪೆನುಗೊಂಡ ಮತ್ತು ಗುಮ್ಮಟದ ಬಾಗಿಲುಗಳ ಬಲಭಾಗದ ಗೋಡೆಗಳಲ್ಲಿ ನಂದಿ, ಶಿವಲಿಂಗ ಇದರ ಮುಂದೆ ಕೈಮುಗಿದು ನಿಂತಿರುವ ರಾಜ (ಪ್ರೌಢದೇವರಾಯ) ಉಬ್ಬು ಶಿಲ್ಪಗಳಿವೆ.

[15] VPR, No 2 of 1983-84; ವಿಶಾ. ಪು. ೩೪೬

[16] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೩, ಪೂರ್ವೋಕ್ತ. ಪು. ೧೬೪

[17] ಅದೇ, ಪು. ೧೬೪

[18] ಅದೇ, ಪು. ೨೬೨

[19] ರಾಮರಾವ್, ಜಿ.ಎನ್. ವಿದೇಶೀಯರು ಕಂಡ ವಿಜಯನಗರ. ಬೆಂಗಳೂರು ಐಬಿಎಚ್ ಪ್ರಕಾಶನ

[20] ದೀಕ್ಷಿತ್. ಜಿ.ಎಸ್. ಮತ್ತು ವಿಶ್ವೇಶ್ವರಯ್ಯ, ಎಂ. ವಿ. ೧೯೭೧. ಸಂಗಮರ ಕಾಲದ ವಿಜಯನಗರ, ಪು. ೯೪ ೯೫. ಬೆಂಗಳೂರು ಬಿ.ಎಂ. ಶ್ರೀ ಪ್ರತಿಷ್ಠಾನ