ಹೊಸಪೇಟೆ ನಗರ ಬಳ್ಳಾರಿ ಜಿಲ್ಲೆಯ ತಾಲ್ಲೂಕು ಹಾಗೂ ಉಪ ವಿಭಾಗ ಕೇಂದ್ರವಾಗಿದೆ. ಇದು ಬಳ್ಳಾರಿಯಿಂದ ಪಶ್ಚಿಮ ದಿಕ್ಕಿಗೆ ೬೪ ಕಿ.ಮೀ. ದೂರದಲ್ಲಿದೆ. ನೀರಾವರಿ, ಕೃಷಿ, ಕೈಗಾರಿಕೆ ಮತ್ತು ಗಣಿ ಉಧ್ಯಮದ ಸಂಪನ್ಮೂಲ ಹೊಂದಿರುವ ಈ ಪರಿಸರವು ನಗರದ ನಿರಂತರ ಬೆಳವಣಿಗೆಗೆ ಕಾರಣವಾಗಿದೆ. ಇಲ್ಲಿ ಆದಾಯವೂ ಹೆಚ್ಚು, ಅಪರಾಧಗಳೂ ಹೆಚ್ಚು, ಅಪಘಾತಗಳೂ ಹೆಚ್ಚು, ಬೆಲೆಯೂ ಹೆಚ್ಚು, ಹದಗೆಟ್ಟಿರುವ ರಸ್ತೆಗಳೂ ಹೆಚ್ಚು. ವಾಹನ ದಟ್ಟಣೆಯೂ ಹೆಚ್ಚು, ಇತ್ತೀಚೆಗೆ ಜನಸಂಖ್ಯೆಯೂ ಹೆಚ್ಚು. ಈ ಹೆಚ್ಚುಗಾರಿಕೆಗಳಿಗೆ ಕೊರತೆಯೇನೂ ಇಲ್ಲ.

ಈಗಿನ ಹೊಸಪೇಟೆ ನಗರವು ವಿಜಯನಗರ ಕಾಲದಲ್ಲಿ ಎಂದರೆ ಸು. ೪೦೦ ವರ್ಷಗಳಿಗಿಂತ ಪೂರ್ವದಲ್ಲಿ ಇದ್ದಂತೆ ಇಲ್ಲವಾದರೂ ಅದು ಕಾಲ ಕಾಲಕ್ಕೆ ಬದಲಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಅನೇಕ ಮಾರ್ಪಾಡುಗಳಿಗೆ ಗುರಿಯಾದುದಾಗಿದೆ. ಆದುದರಿಂದ ಅದರ ಪೂರ್ವದ ವಿವರಗಳನ್ನು ಈಗ ಕೊಡುವುದು ಅಸಾಧ್ಯ. ಆದರೂ ಈಗ ಸಣ್ಣಕ್ಕಿ ವೀರಭದ್ರ ಗುಡಿಯ ಅವರಣದಲ್ಲಿ ಇಂದಿರಾ ನಗರ ಬಡಾವಣೆಯಲ್ಲಿ ಅಮರಾವತಿಯ ಪೂಜಾರಿ ಹನುಮಂತಪ್ಪನವರ ಹಿತ್ತಲಿನಲ್ಲಿ ಹಾಗೂ ಸಂಡೂರು ರಸ್ತೆ ಹತ್ತಿರ ಸಹಾಯಕ ಆಯುಕ್ತರ ಕಛೇರಿಯ ಆವರಣದಲ್ಲಿ ಕಂಡು ಬರುವ ಶಾಸನಗಳ ಪ್ರಕಾರ ಈ ಪ್ರದೇಶವು ತಿರುಮಲಾ ದೇವಿ ಪಟ್ಟಣವೆಂದು ಪ್ರಸಿದ್ಧಿಯಾಗಿತ್ತು. ತಿರುಮಲಾ ದೇವಿಯ ಕೃಷ್ಣ ದೇವರಾಯನ ಇಬ್ಬರು ಪಟ್ಟದರಸಿಯರಲ್ಲಿ ಒಬ್ಬಳಾಗಿದ್ದಳೆಂಬುದು ಅನೇಕ ಶಾಸನಗಳಿಂದ ಮತ್ತು ತಿರುಪತಿಯ ವೆಂಕಟೇಶ್ವರನ ಮುಂದಿರುವ ಕಂಚಿನ ಪ್ರತಿಮೆಗಳಿಂದ ತಿಳಿದು ಬರುತ್ತದೆ. ತಿರುಮಲ ದೇವಿ ಅಮ್ಮನವರ ಪಟ್ಟಣದಲ್ಲಿದ್ದ ಸಣ್ಣಕ್ಕಿ ವೀರಭದ್ರ ದೇವರ ಗುಡಿಯ ಪರಿಸರಕ್ಕೆ ಸಣ್ಣಕ್ಕಿ ಪೇಟೆ ಎಂಬ ಹೆಸರಿರುವುದು ಈಗಲೂ ವಾಡಿಕೆಯಿದೆ. ಅಂದರೆ ಇದು ವ್ಯಾಪರೀ ಪೇಟೆ ಇದ್ದಿರಬೇಕು. ಇಲ್ಲಿ ಗೌರೀಶ್ವರ ಎಂಬ ದೇವರು ಶೆಟ್ಟಿ ಬಣಜಿಗರ ಕುಲದೇವತೆ. ಪ್ರಾಯಶಃ ಈಗಿನ ವೀರಭದ್ರ ದೇವರ ದೇಗುಲವು ಗೌರಿಶ್ವರ ದೇವಸ್ಥಾನವಾಗಿದ್ದಿರಬಹುದು. ಮತ್ತು ಇಲ್ಲಿಯ ವೀರಭದ್ರನ ಮೂರ್ತಿ ಆನಂತರದಲ್ಲಿ ಸ್ಥಾಪನೆಯಾಗಿರಲೂ ಸಾಕು.

ವಿಜಯನಗರ ಪತನಾ ನಂತರ ಈ ಭಾಗವೂ ಹಾಳು ಬಿದ್ದು ಜನವಸತಿಯ ಕ್ರಮೇಣ ಕಡಿಮೆಯಾಗುತ್ತಾ ಬಂದು ಸ್ವಲ್ಪ ಸ್ಥಳಾಂತರವಾಗಿರಲೂ ಬೇಕು. ಇದಕ್ಕೆ ಪೂರಕವೆನ್ನುವಂತೆ ಈ ಭಾಗದಲ್ಲಿ ಕೋಟೆ, ಕೊತ್ತಳಗಳ ಅವಶೇಷಗಳಿದ್ದು ಇಲ್ಲಿಯೇ ಹೊಸಪೇಟೆಯು ನಿರ್ಮಾಣಗೊಂಡಿದೆ.

ನೈಜವಾಗಿ ಹೊಸಪೇಟೆಯ ಚಾರಿತ್ರಿಕ ಮಹತ್ವ ಕಳಚೂರಿಯ ಬಿಜ್ಜಳ ದೇವನ ಕಾಲದಿಂದ ಅಥವಾ ಇದಕ್ಕೂ ಪುರ್ವದಿಂದ ಪ್ರಾರಂಭವಾಗುತ್ತದೆ. ಸು. ೧೨ನೇ ಶತಮಾನಕ್ಕೆ ಸೇರುವ ಒಡೆದ ಶಾಸನವು ಜೈನ ತೀರ್ಥಂಕರನ ಶಿಲ್ಪಗಳು ಸಾಣ್ಣಕ್ಕಿ ಗುಡಿಯ ಹಿಂಭಾಗದಲ್ಲಿವೆ. ಹಿಂದೆ ಚಾರಿತ್ರಿಕವಾಗಿ ಮೌರ್ಯರ, ಶಾತವಾಹನರ ಆಡಳಿತಕ್ಕೂ ಈ ಪ್ರದೇಶವನ್ನು ಒಳಪಟ್ಟು ನಂತರ ಕದಂಬರು, ಬಾದಾಮಿ ಚಾಲುಕ್ಯರು, ಗಂಗರು ಮತ್ತು ರಾಷ್ಟ್ರಕೂಟರ ಗಡಿಸೀಮೆಯಾಗಿತ್ತು ಎಂಬುದು ಗಮನಾರ್ಹ ಅಂಶ. ಈ ತಾಲ್ಲೂಕಿನ ಪ್ರಾಚೀನ ಕೋಟೆಯೆಂದರೆ ಬಹುಶಃ ಕಂಪ್ಲಿಯದಿರಬೇಕು. ನಂತರದ ಕಾಲಘಟ್ಟದಲ್ಲಿ ಹೊಸಪೇಟೆ, ಹಂಪಿ, ಕಮಲಾಪುರ, ಪಾಪಿನಾಯಕನ ಹಳ್ಳಿ, ರಾಮಸಾಗರ ಕೋಟೆಗಳು ನಿರ್ಮಾಣಗೊಂಡಿದೆ. ಇವುಗಳಲ್ಲಿ ಪ್ರಾಚೀನವಾದ ಕೋಟೆಯೆಂದರೆ ಕಂಪ್ಲಿಯದು. ವಿಸ್ತಾರದಲ್ಲಿ ಹಂಪಿ ಕೋಟೆ ಬಹುದೊಡ್ಡದು. ಹಂಪಿ ಕೋಟೆಯು ಏಳು ಸುತ್ತಿನಿಂದ ಕೂಡಿದೆಯೆಂದು ಅನೇಕ ಸಾಹಿತ್ಯಿಕ ಉಲ್ಲೇಖಗಳಿವೆ. ವಿಜಯನಗರ ಸೈನ್ಯದಲ್ಲಿ ಸೇನಾ ಪ್ರಮುಖರಿಗೆ ಕೆಲವು ಗ್ರಾಮಗಳನ್ನು ವಿಜಯನಗರದ ಅರಸರು ದತ್ತಿ ನೀಡಿದ್ದರು. ಅಂತಪುರಗಳಲ್ಲಿ ಕೊಂಡನಾಯಕನ ಹಳ್ಳಿ, ಕಮಲಾಪುರ ಮುಂತಾದ ಕಡೆ ಇವೆ. ಅಲ್ಲಿ ಇಂದಿಗೂ ಬೃಹತ್ ಆಕಾರದ ಕೊತ್ತಳ ಮತ್ತು ಕೋಟೆಯ ಅವಶೇಷಗಳಿವೆ. ರಾಮಸಾಗರದ ಕೋಟೆ ಸುಸ್ಥಿತಿಯಲ್ಲಿದೆ. ಹೊಸಪೇಟೆ ಕೋಟೆಯು ನಗರದ ಬೆಳವಣಿಗೆಯಲ್ಲಿ ಅಡಗಿ ಹೋಗಿದೆ. ರಾಮಸಾಗರ, ಪಾಪನಾಯಕನಹಳ್ಳಿ ಕೋಟೆಗಳು ಗಿರಿದುರ್ಗಗಳಾಗಿದ್ದರೆ, ಹೊಸಪೇಟೆ, ಕಂಪ್ಲಿಯ ಕೋಟೆಗಳು ನೆಲದುರ್ಗಗಳಾಗಿವೆ. ಹಂಪಿ ಕೋಟೆಯಲ್ಲಿ ನೆಲಗಿರಿ, ಜಲ ದುರ್ಗಗಳ ಲಕ್ಷಣಗಳಿವೆ.

ಹೊಸಪೇಟೆಯು ಒಂದು ತಾಲೂಕು ಕೇಂದ್ರ. ಹೊಸಪೇಟೆ ತಾಲೂಕು ಇತಿಹಾಸ ಎಂಬುವುದರಲ್ಲಿ ನಗರದ ಇತಿಹಾಸದ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ನಗರದ ದಕ್ಷಿಣ ಭಾಗಕ್ಕೆ ಇರುವ ಹಳೇ ಊರಿನ ಜನ ವಸತಿ ಪ್ರದೇಶವನ್ನು ಈಗಲೂ ಕ್ವಾಟೆ, ಕೋಟೆ ಎಂದು ಕರೆಯುವರು. ಆದರೆ ಕೋಟೆ ಕೊತ್ತಳಗಳ ಯಾವುದೇ ಅವಶೇಷಗಳು ಇಂದು ಅಲ್ಲಿ ಕಾಣುವುದಿಲ್ಲ. ನಗರವು ವೇಗವಾಗಿ ಬೆಳೆಯುತ್ತಿರುವುದರಿಂದ ಇಲ್ಲಿಯು ಕೋಟೆ ಕೊತ್ತಲಾವಶೇಷಗಳನ್ನು ನುಂಗಿ ಹಾಕಿದೆ. ಇಲ್ಲಿಯ ಭೌಗೋಳಿಕ ಲಕ್ಷಣಗಳು ಹಾಗೂ ಸ್ಥಳೀಯರ ಹೇಳಿಕೆಯಿಂದಾಗಿ ಕೋಟೆಯ ಉತ್ತರಾಭಿಮುಖವಾಗಿದಂತೆ ತಿಳಿದುಬರುವುದು.

ಹೊಸಪೇಟೆ ಪಟ್ಟಣದ ಇಂದಿರಾನಗರ ಬಡಾವಣೆಯ ಈಶ್ವರನ ಗುಡಿಯಲ್ಲಿರುವ ಶಾಸನದಲ್ಲಿ ಹೊಸಪೇಟೆ ಪ್ರದೇಶದಲ್ಲಿ ಕೋಟೆ ಇದ್ದುದಕ್ಕೆ ಪೂರಕವಾಗಿ ಪ್ರಸ್ತಾಪವು ಕೆಳಗಿನಂತಿದೆ.

ಶುಭಮಸ್ತು ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ
ಶಕ ವರ್ಷಗಳು ೧೪೩ ನೆಯ ವಿಷು ಸಂವತ್ಸರ ಕಾರ್ತಿ
ಶು ೧೧ ಪುಣ್ಯ ಕಾಲದಲ್ಲು ಶ್ರೀಮನ್ ಮಹಾರಾಜಾಧಿ ರಾ
ಜಾ ರಾಜಪರಮೇಶ್ವರ ಶ್ರೀ ವೀರ ಪ್ರತಾಪ ಶ್ರೀ ವೀರ ಕೃಷ್ಣರಾಯಮ
ಹರಾರಯರು ಪ್ರುಥವಿ ರಾಜ್ಯಂ ಗೈಉತಯಿರಲು ತಿರುಮ
ಲದೇವಿಯರ ಪಟ್ಟಣದ ನಾಲ್ಕು ಬಾಹಿಲ ಬಳಿಯ ಶ್ರೀ ಕಾಸಿ ವಿ
ಶ್ವೇಶ್ವರನ ಪ್ರತಿಷ್ಠಾಕಾಲದಲ್ಲು ಅಭಿಷೇಕ ಪೂಜಾ ನೈವೇದ್ಯಕ್ಕೆ
ತಿರುಮಲದೇವಿ ಪಟ್ಟಣಕ್ಕೆ ಸಲ್ಲುವ ಕೋಟೆಗೆ ಬಡಗಲು
ಯಲ್ಲಂಪಣನ ಕೆರೆಯನು ಶ್ರೀ ಕಾಸಿ ವಿಶ್ವನಾಥ ದೇವರಿಗೆ……..

ಈ ಶಾಸನವು ತಿರುಮಲದೇವಿ ಅಮ್ಮನವರ ಪಟ್ಟಣದಲ್ಲಿ ಯಲ್ಲಪಣ್ಣನ ಕೆರೆಯ ದಕ್ಷಿಣಕ್ಕೆ ಕೋಟೆ ಇರುವುದನ್ನು ಸೂಚಿಸುತ್ತದೆ. ಯಲ್ಲಪಣ್ಣನ ಕೆರೆಯು ಇಂದು ಬಸವೇಶ್ವರ ಬಡಾವಣೆಯಾಗಿದೆ. ಈಗ ಕೋಟೆಯಿಂದ ಕರೆಯುವ ಪ್ರದೇಶವು ಬಸವೇಶ್ವರ ಬಡಾವಣೆಯಿಂದ ದಕ್ಷಿಣ ದಿಕ್ಕಿಗೆ ೧ ಕಿ.ಮೀ. ದೂರದಲ್ಲಿದೆ. ಕೋಟೆಯಲ್ಲಿ ವಿಜಯನಗರ ಕಾಲದ ರಾಮಲಿಂಗೇಶ್ವರ, ಈಶ್ವರ, ಒಡಕರಾಯ ಆಂಜನೇಯನ ಗುಡಿಗಳಲ್ಲದೆ, ಒಂದೆರಡು ಕಡೆ ಕೋಟೆಗೆ ಬಳಸಿದ್ದ ಮಧ್ಯಮಗಾತ್ರದ ಕಣಶಿಲೆಗಳು ಕಂಡುಬಂದಿವೆ.

ವಾಸ್ತವವಾಗಿ ಹೊಸಪೇಟೆಯ ಚಾರಿತ್ರಿಕ ಮಹತ್ವ ಕಳಚೂರಿ ಬಿಜ್ಜಳ ದೇವನ ಕಾಲದಿಂದ ಅಥವಾ ಅದಕ್ಕೂ ಪೂರ್ವದಿಂದ ಪ್ರಾರಂಭವಾಗುತ್ತದೆ. ಹೊಸಪೇಟೆಯ ಸಣ್ಣಕ್ಕಿ ವೀರಭದ್ರ ದೇವಾಲಯದ ಹಿಂಭಾಗದಲ್ಲಿರುವ ಮರದ ಬುಡದಲ್ಲಿ ಕಲ್ಯಾಣ ಚಾಳುಕ್ಯರ ಶಾಸನ ಶಿಲ್ಪಗಳು ಕಂಡುಬರುತ್ತವೆ. ಇಲ್ಲಿ ಕೋಟೆ ಇದ್ದುದರ ಬಗ್ಗೆ ಚಾಳುಕ್ಯರ ಶಾಸನಗಳು ಏನು ಹೇಳುವುದಿಲ್ಲ. ಆಗ ಹೊಸಪೇಟೆಯು ಚಿಕ್ಕ ಗ್ರಾಮವಾಗಿತ್ತೆಂದು ತಿಳಿಯುವುದು.

ಹೊಸಪೇಟೆಯ ಜಂಬುನಾಥ ದೇವಾಲಯದ ಪೂಜಾರಿ ವೀರಯ್ಯಸ್ವಾಮಿ ಅವರ ವಶದಲ್ಲಿದ್ದ ತಾಮ್ರಶಾಸನದ ಕಾಗದ ಪ್ರತಿಯಲ್ಲಿ ಚೋಳರಾಯನು ಹೊಸಪೇಟೆಯ ಕೋಟೆ ಕಟ್ಟಿಸಿ, ಜೋಳದ ರಾಶಿ ಗುಡ್ಡದ ಬಳಿಯ ಕೆರೆಗಳನ್ನು ಕಟ್ಟಿಸಿದನೆಂದು ಹೇಳಿದೆ. ಈ ತಾಮ್ರಪತ್ರವು ಇತ್ತೀಚಿಗೆ ಅಂದರೆ ೨೦ನೆಯ ಶತಮಾನದಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ವಿಷಯಗಳು ಕ್ರಮಬದ್ಧವಾಗಿಲ್ಲ. ಕ್ರಿ.ಶ. ೧೫೨೧ರ ಕೃಷ್ಣ ದೇವರಾಯನ ಕಾಲದ ಶಾಸನವು ತಿರುಮಲದೇವಿ ಅಮ್ಮನವರ ಪಟ್ಟಣದಲ್ಲಿ ಕೋಟೆ ಇದ್ದುದನ್ನು ಹೇಳುತ್ತದೆ. ಆದರೆ ಕಲ್ಯಾಣ ಚಾಳುಕ್ಯರ ಇಲ್ಲಿಯ ಶಾಸನಗಳಲ್ಲಿ ಕೋಟೆಯ ಯಾವುದೇ ಉಲ್ಲೇಖಗಳು ಬರುವುದಿಲ್ಲ. ಹಾಗಾಗಿ ಇವೆರಡರ ಮಧ್ಯದ ಅವಧಿಯಲ್ಲಿ ಹೊಸಪೇಟೆ ತಿರುಮಲದೇವಿ ಪಟ್ಟಣಯಲ್ಲಿ ಕೋಟೆ ನಿರ್ಮಾಣವಾಗಿರಬಹುದು.

ಸ್ಥಳೀಯ ಮಾಹಿತಿಯನ್ನು ಗಮನಿಸಿದಾಗ ದ್ವಾರಸಮುದ್ರದ ಅರಸನಾದ ೩ನೇ ಬಲ್ಲಾಳನು ತನ್ನ ಕೋಟೆಯ ರಕ್ಷಣೆಗಾಗಿ ಸುತ್ತಲೂ ಕಿರಾತಪಡೆಗಳನ್ನು ಸ್ಥಾಪಿಸಿದನೆಂದು ಅವೇ ಕಾಲಕ್ರಮದಲ್ಲಿ ಗ್ರಾಮಗಳಾದವೆಂದು ತಿಳಿದುಬರುತ್ತದೆ. ಅವುಗಳೆಂದರೆ ಇಂದಿನ ಹೊಸಪೇಟೆಯ ಶ್ರೀ ಜಗಳೀ ಕಚ್ಚೆರಾಯನೆಂಬ ಆಂಜನೇಯ ಗುಡಿಯ ಹತ್ತಿರ ಜಗಳೀಕಟ್ಟೆ ಬೈಲುಹನುಮಪ್ಪನ ಗುಡಿಯ ಹತ್ತಿರ ಹಂದಿಗನೂರು, ಉತ್ತರಾದಿ ಮಠದ ಹತ್ತಿರ ವಿರೂಪಾಕ್ಷ ಪುರ ಸಣ್ಣಕ್ಕಿ ವೀರಭದ್ರನ ಗುಡಿಯ ಹತ್ತಿರ ತಿರುಮಲಾಪುರ ಮತ್ತು ಶ್ರೀ ವೇಣುಗೋಪಾಲಕೃಷ್ಣ ದೇವಾಲಯದ ಹತ್ತಿರ ವಿಜಯಪುರ ಗ್ರಾಮಗಳು ಮತ್ತೊಂದು ಮಾಹಿತಿಯಂತೆ ಹರಪನಹಳ್ಳಿ ಸೋಮಶೇಖರ ನಾಯಕನ ಕ್ರಿ.ಶ. ೧೭೪೨-೬೬ ಕಾಲದಲ್ಲಿ ಜಗಳೀಕಟ್ಟೆ ವಿರೂಪಾಕ್ಷಪುರ, ವಿಜಯಪುರ, ತಿರುಮಲಪುರ ಮತ್ತು ಹಂದಿಗನೂರು ಗ್ರಾಮಗಳನ್ನು ಒಂದುಗೂಡಿಸಿ ಹೊಸಪೇಟೆಯನ್ನಾಗಿ ಪರಿವರ್ತಿಸಲಾಯಿತ್ತೆಂದು ತಿಳಿದುಬರುತ್ತದೆ. ಹೊಸಪೇಟೆಯ ಹಳೆಯ ವಸತಿ ಸ್ಥಾನಗಳಲ್ಲಿ ಕೋಟೆಯ ಪ್ರದೇಶ ಮುಖ್ಯವಾಗಿದ್ದು, ಪ್ರಾಯಶ ವಿಜಯನಗರ ಕಾಲದ ತಿರುಮಲಾದೇವಿ ಪಟ್ಟಣವೇ ಇದಾಗಿದೆ. ಇದರ ಮೇರೆಗಳು ಪೂರ್ವಕ್ಕೆ ಮುದಿಯಪ್ಪನ ಗುಡಿ, ಉತ್ತರಕ್ಕೆ ಬಳ್ಳಾರಿ ದುರ್ಗಮ್ಮನ ಗುಡಿ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಕೋಟೆ ಗೋಡೆಯಿದ್ದು, ಉತ್ತರದಲ್ಲಿ ಗೋಡೆಯ ಹೊರಗೆ ಕಬ್ಬೇರ, ಅಗಸ ಮತ್ತು ಕುರುಬರ ಕೇರಿಗಳಿವೆಯೆಂದು ಹೇಳಲಾಗುತ್ತದೆ. ಇಲ್ಲಿನ ದೇಸಾಯಿ ಮನೆತನದ ನರಸಪ್ಪನಿಗೆ ಸಹಾಯಕರಾಗಿದ್ದ ೭೦೦೦ ಬೇಡರಿಗೆ ಹೊಸಪೇಟೆ ಕೋಟೆಯ ಸುತ್ತಲೂ ವಾಸಿಸಲು ನಿವಾಸಗಳನ್ನು ಏರ್ಪಡಿಸಲಾಯಿತು. ನಂತರದ ಕಾಲದಲ್ಲಿ ಸಂಭವಿಸಿದ ಮಲೇರಿಯಾ ಕಾಯಿಲೆ ಪರಿಣಾಮವಾಗಿ ಸಮೀಪದ ಗ್ರಾಮಗಳಿಂದ ಎತ್ತರದ ಹೊಸಪೇಟೆಗೆ ಜನರ ವಲಸೆ ಬಂದಿತು. ಹಾಗೂ ಪ್ಲೇಗ್ ನಂತಹ ಕಾಯಿಲೆ ನಿಯಂತ್ರಣಕ್ಕೆ ಇಲ್ಲಿನ ಕೋಟೆಗಳನ್ನು ಕೆಡವಿ ಹಳ್ಳಕೊಳ್ಳಗಳನ್ನು ಮುಚ್ಚಲಾಯಿತ್ತೆಂದು ಸ್ಥಳೀಯರು ಹೇಳುತ್ತಾರೆ. ಈ ಮೇಲಿನ ವಿಷಯಕ್ಕೆ ಪೂರಕವೆಂಬಂತೆ ಈ ಕೋಟೆಯ ಪ್ರದೇಶದ ಪಶ್ಚಿಮಕ್ಕೆ ಸಂಪೂರ್ಣವಾಗಿ ನಾಯಕರ ಮನೆಗಳೇ ಇವೆ. ಕೋಟೆಯೊಳಗೆ ದೇಸಾಯಿಗಳು, ಪಾಂಡೆಯವರ ವಂಶದವರು ಈಗಲೂ ತಮ್ಮ ಪುರಾತನ ಸ್ಥಳದಲ್ಲಿಯೇ ಇದ್ದಾರೆ. ಹೊಸಪೇಟೆ ಎಂಬ ಗ್ರಾಮವು ಪೂರ್ವಕಾಲದಲ್ಲಿ ವಿಜಯನಗರ ರಾಜ್ಯದ ರಕ್ಷಾದುರ್ಗವಾಗಿದ್ದಿತು. ಇದೊಂದು ಚಿಕ್ಕಹಳ್ಳಿಯಾಗಿದ್ದರೂ ಭದ್ರತಾವಾದ ಕೋಟೆ ಕೊತ್ತಳಗಳಿಂದ ಸುರಕ್ಷಿತವಾಗಿತ್ತೆಂದು ಚಿಕ್ಕೇರೂರು ಗೋವಿಂದಚಾರ್ಯರು ಅಭಿಪ್ರಾಯ ಪಡುತ್ತಾರೆ. ಹೊಸಪೇಟೆಯ ದುರ್ಗವನ್ನು ಮಾತ್ರ ಅಚ್ಚಳಿಯದೇ ಉಳಿಸಿಕೊಂಡು ಇಲ್ಲಿಯೇ ಕೋಟೆಯಲ್ಲಿ ಒಂದು ಸಿಂಹಾಸನವನ್ನು ಸ್ಥಾಪಿಸಿಕೊಂಡು ಒಂದನೇ ಬುಕ್ಕನು ಆಳ್ವಿಕೆ ಮಾಡಿದಂತೆ ತಿಳಿದುಬರುತ್ತದೆ. ಹಾಳು ಬಿದ್ದ ಕಂದಕ ಕೋಟೆ ಕೊತ್ತಳಗಳು ಕ್ರಿ.ಶ. ೧೯೫೭ ರವರೆಗೆ ಇದ್ದವೆಂದು ತಿಳಿಯುವುದು.

ಕಂಪ್ಲಿ

ಕಂಪ್ಲಿಯ ಹೊಸಪೇಟೆ ತಾಲ್ಲೂಕಿಗೆ ಸೇರಿದ ಒಂದು ಪಟ್ಟಣ ಪ್ರದೇಶ. ಹೊಸಪೇಟೆಯಿಂದ ನೈರುತ್ಯ ದಿಕ್ಕಿಗೆ ೩೩ ಕಿ.ಮೀ. ದೂರದ ಗಂಗಾವತಿ ಮಾರ್ಗದಲ್ಲಿ ತುಂಗ-ಭದ್ರಾ ನದಿಯ ದಂಡೆಯ ಮೇಲಿದೆ. ಕೃಷಿ ವ್ಯಾಪಾರದಿಂದ ಸಮೃದ್ಧವಾಗಿರುವ ಕಂಪ್ಲಿಯು, ಹತ್ತಾರು ಅಕ್ಕಿ ಗಿರಿಣಿಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡು ವಿಸ್ತೃತವಾಗಿ ಬೆಳೆದಿದೆ. ಇದು ಪ್ರಸ್ತುತ ಪರಿಸ್ಥಿತಿಯಾದರೆ, ಪ್ರಾಚೀನದಲ್ಲಿ ನೊಳಂಬರ ನೊಳಂಬವಾಡಿ ೩೨೦೦ಕ್ಕೆ ಹಿಂದಿ ರಾಜಧಾನಿಯಾಗಿತ್ತು. ಕಂಪ್ಲಿ ಪಟ್ಟಣವು ಹಳೇ-ಹೊಸ ಊರುಗಳನ್ನು ಸೇರಿಕೊಂಡಿದೆ. ಹಳೇ ಊರಿನಲ್ಲಿ ಕೋಟೆ ಇರುವುದು.

ಕ್ರಿ.ಶ. ೧೦೬೨ರ ಹೂವಿನ ಹಡಗಲಿಯ ಪಾಂಡುರಂಗ ದೇವಾಲಯದ ಆವರಣದಲ್ಲಿರುವ ಶಾಸನದಿಂದ ತಿಳಿದುಬರುವಂತೆ, ಕಲ್ಯಾಣದಲ್ಲಿ ತ್ರೈಲೋಕ್ಯ ಮಲ್ಲದೇವನು (ಒಂದನೆಯ ಸೋಮೇಶ್ವರ) ಆಳುತ್ತಿರುವಾಗ ಆತನ ಮಗ ವಿಜಯಾದಿತ್ಯನು ನೊಳಂಬವಾಡಿ ೩೨೦೦೦ಯನ್ನು ಕಂಪಿಲಿಯಿಂದ ಆಳುತ್ತಿದ್ದನು. ನೊಂಳಂಬವಾಡಿ-೩೨೦೦೦ ದಕ್ಷಿಣಭಾಗದ ಬಹುದೊಡ್ಡ ಪ್ರಾಂತ. ಇದು ಕರ್ನಾಟಕದ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಹಾಸನ, ಬಳ್ಳಾರಿ ಜಿಲ್ಲೆಗಳು, ಆಂಧ್ರದ ಅನಂತಪುರ, ಚಿತ್ತೂರು ಜಿಲ್ಲೆಗಳು, ತಮಿಳುನಾಡಿನ ಉತ್ತರ ಆರ್ಕಾಟ್ ಮತ್ತು ಧರ್ಮಪುರಿ ಜಿಲ್ಲೆಗಳನ್ನು ಒಳಗೊಂಡ ವಿಶಾಲ ಪ್ರಾಂತವಾಗಿತ್ತು. ಈ ಪ್ರಾಂತಕ್ಕೆ ‘ಕಂಪಿಲಿ’ ರಾಜಧಾನಿ. ಕಲ್ಯಾಣ ಚಾಳುಕ್ಯರ ನಂತರ ಈ ಪ್ರದೇಶ ಹೊಯ್ಸಳರ ವಶಕ್ಕೆ ಹೋಯಿತು. ಹೊಯ್ಸಳ ವಿಷ್ಣುವರ್ಧನನು ಕಂಪಿಲಿ ಕೋಟೆಯನ್ನು ಗೆದ್ದಿದ್ದನು. ಇವರ ನಂತರ ಸೇವುಣರು ಇಲ್ಲಿ ರಾಜ್ಯಭಾರ ಮಾಡಿದಂತೆ ಕ್ರಿ.ಶ. ೧೧೮೦ರ ಶಾಸನವು ತಿಳಿಸುತ್ತದೆ. ಸೇವುಣರ ರಾಮಚಂದ್ರನ ಸೇನಾಧಿಪತಿ ಚಾವುಂಡರಸನು ಮುಮ್ಮಡಿ ಸಿಂಗೇ ನಾಯಕನಿಂದ ಕೊಲ್ಲಲ್ಪಟ್ಟನು. ಆಗ ಕಂಪಲಿ ರಾಜ್ಯವು ಮುಮ್ಮಡಿ ಸಿಂಗನೇನಾಯಕನಿಗೆ ಸೇರಿತ್ತು. ಕುಮ್ಮಟದುರ್ಗವು ಮುಮ್ಮಡಿಸಿಂಗನ ರಾಜಧಾನಿಯಾದರೂ ಕಂಪಲಿಯು ಇವರ ವಶದಲ್ಲಿದ್ದ ಒಂದು ಮುಖ್ಯಸ್ಥಳ. ಕಂಪಲಿಯು ಎಂದೂ ಕುಮ್ಮಟದರಸರ ರಾಜಧಾನಿಯಾಗಿರಲಿಲ್ಲ. ಆದರೂ ಇವರು ಕಂಪಲಿಯ ಅರಸರೆಂದು ಗುರುತಿಸಲ್ಪಟ್ಟರು. ಇದಕ್ಕೆ ಕಾರಣ ಇಲ್ಲದಿಲ್ಲ. ಮುಮ್ಮಡಿ ಸಿಂಗನಿಗೆ ಮಕ್ಕಳಿಲ್ಲವಾದ್ದರಿಂದ ಕಂಪಲಿಯ ಸೋಮಶ್ವರನಿಗೆ ಮೊರೆಹೋದನು. ಈ ದೈವಾನುಗ್ರಹದಿಂದಾಗಿ ಮುಮ್ಮಡಿ ಸಿಂಗನಿಗೆ ಗಂಡು ಸಂತಾನವಾಯಿತು. ಕಂಪಲಿದೇವರ ವರಪ್ರಸಾದದಿಂದಾಗಿ ಹುಟ್ಟಿದ್ದಕ್ಕಾಗಿ ಈ ಮಗುವಿಗೆ ಕಂಪಲಿರಾಯ, ಖಂಡೇರಾಯ ಎಂಬುದಾಗಿ ಕರೆದಿವೆ. ಕಂಪಿಲನ ಮತ್ತೊಂದು ಹೆಸರು ಖಂಡೇರಾಯ. ಈ ಎರಡೂ ಹೆಸರುಗಳು ಕಂಪಿಲ ಸೋಮೇಶ್ವರನಿಗೆ ಸಂಬಂಧಿಸಿದಂತೆ ಕಂಡು ಬರುತ್ತದೆ. ಈ ಪಟ್ಟಣದ ಮುಖ್ಯ ದೇವರಾದ ಸೋಮೇಶ್ವರನನ್ನು ಕಂಪಿಲದೇವ ಹಾಗೂ ಖಡ್ಗವನ್ನು ಹಿಡಿದು ರೌದ್ರಭಾವವನ್ನು ವ್ಯಕ್ತಪಡಿಸುವ ಇವನನ್ನು ಖಂಡೇರಾಯ ಎಂದು ಕರೆದಿರಬಹುದು. ಅದೇನೆ ಇದ್ದರು ಕಂಪಿಲರಾಯ ಮತ್ತು ಅವನ ಪುತ್ರ ಕುಮಾರರಾಮರು ಕಂಪಿಲಿಯನ್ನು ಆಳಿದರು.

ಕ್ರಿ.ಶ. ೧೩೧೩ರಲ್ಲಿ ದೆಹಲಿ ಸುಲ್ತಾನರು ದೇವಗಿರಿ-ವಾರಂಗಲ್ ಗಳನ್ನು ನೋಡಿಕೊಳ್ಳಲು ರಾಜ್ಯಪಾಲರನ್ನು ನೇಮಿಸಿದ್ದರು. ಆಗ ಕಂಪಲಿಯು ಸೇವುಣ ಹಾಗೂ ಹೊಯ್ಸಳರ ಆಡಳಿತಕ್ಕೊಳಪಟ್ಟಿತ್ತು. ಕ್ರಿ.ಶ. ೧೩೧೪-೧೫ರಲ್ಲಿ ಮಲ್ಲಿಕಾಫರನು ಕಂಪಲಿಯ ವಿರುದ್ಧ ದಾಳಿ ಮಾಡಿದನು. ಅದರಲ್ಲಿ ಅವನಿಗೆ ಜಯ ದೊರಕಲಿಲ್ಲ. ಮಹಮ್ಮದ್ ಬಿನ್-ತುಘಲಕ್‌ನ ಸಹೋದರ ಸಂಬಂಧಿ ಬಹುದ್ದೀನ್-ಗುರುಶಾಪ್ ಗುಲ್ಬರ್ಗಾದ ಬಳಿ ಇರುವ ಸಾಗರದ ರಾಜ್ಯಪಾಲನಾಗಿದ್ದನು. ಅವನು ಕಂಪಲಿಯ ಮೇಲೆ ಎರಡು ಬಾರಿ ದಾಳಿಮಾಡಿದನು. ಆದರೂ ಅವನಿಗೆ ಜಯ ದೊರಕಲಿಲ್ಲ. ಮೂರನೆಯ ದಾಳಿ ಮಲ್ಲಿಕಾ ಜಾದಾನಿಂದ ಜರುಗಿ ಕ್ರಿ.ಶ. ೧೩೨೭ ರಲ್ಲಿ, ಕಂಪಲಿರಾಯನು ಸೋತು ಸೆರೆಯಾದನು. ಕಂಪಿಲನ ಪುತ್ರ ಕುಮಾರರಾಮನು ಘೋರ ಕದನ ಮಾಡಿ ಕೊನೆಗೂ ಸೋಲುಂಡನು. ಇವರ ವೀರ ಹೋರಾಟದ ಸಾಹಸಗಾಥೆಯು ಕಂಪಲಿ ಜನತೆಯ ಮನೆ ಮಾತಾಗಿದೆ.

ಇವರ ನಂತರ ಕಂಪಲಿಯು ವಿಜಯನಗರ ಆಡಳಿತಕ್ಕೆ ಒಳಪಟ್ಟಿತ್ತು. ಈ ಅವಧಿಯಲ್ಲ ಕಂಪಲಿ ಪ್ರಮುಖ ಪಟ್ಟಣ ಕೇಂದ್ರವಾಗಿತ್ತೆಂಬುದು ಕ್ರಿ.ಶ. ೧೬೧೯ರ ವೆಂಕಟಪತಿ ದೇವರಾಯನ ಶಾಸನದಿಂದ ತಿಳಿದುಬರುತ್ತದೆ. ಅದರಲ್ಲಿ ಕಂಪಲಿ ಪೇಟೆಯ ನರಸಿಂಹ ಮತ್ತು ಕೆಲವು ದೇವಾಲಯಗಳಿಗೆ ದಾರಿಯನ್ನು ನಿಗದಿಪಡಿಸಿದಂತೆ ತಿಳಿಯುವುದು. ಕಂಪ್ಲಿಯಲ್ಲಿ ವಿಜಯನಗರದ ಅರಸರು ದೇವಾಲಯಗಳನ್ನು ಕಟ್ಟಿಸಿ, ಅವುಗಳಿಗೆ ದಾನ ನೀಡಿದಂತೆಯೂ ಬಹುತೇಕ ಶಾಸನಗಳಲ್ಲಿ ಕಂಡುಬರುತ್ತದೆ. ನಂತರ ಕ್ರಮವಾಗಿ ಕಂಪಲಿಯು ಪಾಳೆಯಗಾರರ ಹಾಗೂ ಬ್ರಿಟಿಷರ ವಶವಾಯಿತು.

ಕಂಪ್ಲಿಯ ಹಳೇಗ್ರಾಮವಿರುವುದು ಈ ಕೋಟೆಯೊಳಗೆ. ಇದು ಸುಮಾರು ೨೫ ಎಕರೆ ಪ್ರದೇಶವನ್ನು ಆವರಿಸಿದೆ. ಉತ್ತರಕ್ಕೆ ತುಂಗಾಭದ್ರಾ ನದಿ ಸುತ್ತುವರೆದಿರುವುದರಿಂದ ಭಾಗಶಃ ಜಲದುರ್ಗವಾಗಿದೆ. ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳಿಗೆ ಆಳವಾದ ಕಂದಕವಿದೆ. ನದಿಯ ನೀರನ್ನು ಈ ಕಂದರಕ್ಕೆ ಹರಿಸುತ್ತಿದ್ದರು. ಶತ್ರುಗಳು ಈ ಕಂದಕವನ್ನು ದಾಟಿ ಬರದಂತೆ ಮೊಸಳೆಗಳನ್ನು ಬಿಡಲಾಗುತ್ತಿತ್ತು. ಕೋಟೆಗೆ ಪೂರ್ವದಿಕ್ಕಿನಿಂದ ಪ್ರವೇಶವಿದ್ದು ಈ ಪ್ರವೇಶದ್ವಾರವು ಸುಮಾರು ೨೦ ಅಡಿ ಅಗಲ, ೩೦ ಅಡಿ ಎತ್ತರವಾಗಿದೆ. ಮೇಲ್ಭಾಗದಲ್ಲಿ ಕಮಾನು, ಹಾಗೂ ಸಾಲಾಗಿ ಬಂದೂಕು ಕಿಂಡಿಗಳಿವೆ. ಗೋಡೆಯ ತುದಿಭಾಗದಲ್ಲಿ ಕೋಟೆ ತೆನೆಗಳು ಹಾಗೂ ತೋರಣದ ಅಲಂಕರಣೆ ಮಾಡಲಾಗಿದೆ. ಈ ಹೆಬ್ಬಾಗಿಲನ್ನು ಮುಚ್ಚಿದಾಗ ದಿನನಿತ್ಯದ ಚಟುವಟಿಕೆಗಳಿಗಾಗಿ ಕೋಟೆಯೊಳಗಿನ ಜನ ಹೊರಗೆ ಬಂದು ಹೋಗಲು ಅನುಕೂಲವಾಗುವಂತೆ ಉಪಬಾಗಿಲನ್ನು ನಿರ್ಮಿಸಲಾಗಿದೆ. ಹೆಬ್ಬಗಿಲ ಮುಂಭಾಗದಲ್ಲಿ ಕೋಟೆ ಆಂಜನೇಯ ಹಾಗೂ ಬನ್ನಿಮಹಾಂಕಾಳಿಯ ದೇಗುಲಗಳಿದ್ದರೆ ಹೆಬ್ಬಾಗಿಲ ಒಳಬದಿಗೆ ಕಿಲ್ಲಾ ಮತ್ತು ದಿಡ್ಡಿ ಆಂಜನೇಯನ ಗುಡಿಗಳಿವೆ.

ಕೋಟೆಯು ವೃತ್ತಾಕಾರವಾಗಿದ್ದು, ಇದರ ಆಯಾಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ೯ ಕೊತ್ತಳಗಳು ಮಾತ್ರ ಗೋಚರಿಸುತ್ತವೆ. ಕೊತ್ತಳಗಳು ವೃತ್ತಾಕಾರವಾಗಿದ್ದು, ಸುಮಾರು ೨೦ ಅಡಿ ಎತ್ತರ ಹಾಗೂ ಬಂದೂಕು ಕಿಂಡಿಗಳನ್ನು ಹೊಂದಿವೆ. ಪ್ರತಿ ಕೊತ್ತಳದಲ್ಲಿಯು ಕಲ್ಲುಗುಂಡನ್ನಿಟ್ಟು ಆರಾಧಿಸುತ್ತಾರೆ. ಇವುಗಳಿಗೆ ದ್ಯಾಮವ್ವ, ತಾಯಮ್ಮ,ಗಂಗಮ್ಮನ, ಕಬನದ ವೀರನಾಗರಕಟ್ಟೆ ಕೊತ್ತಳಗಳೆಂದು ಜನ ಗುರುತಿಸುತ್ತಾರೆ.

ಆಳವಾದ ತಳಪಾಯವನ್ನು ಹಾಕಿ, ಮಧ್ಯಮ ಹಾಗೂ ಚಿಕ್ಕಗಾತ್ರದ ಕಣಶಿಲೆ, ಗಚ್ಚುಗಾರೆ ಸುಣ್ಣವನ್ನು ಬಳಸಿ ಈ ಕೋಟೆಯನ್ನು ಕಟ್ಟಲಾಗಿದೆ.

ರಾಜಕೀಯವಾಗಿ ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದ್ದ ಕಂಪಲಿಯು ಸೇವುಣರು, ಕಾಕತೀಯರು ಹಾಗೂ ಹೊಯ್ಸಳರು ಇವರ ಪೈಪೋಟಿಯ ತ್ರಿಕೋಣದ ಮಧ್ಯೆ ತಡೆ-ರಾಜ್ಯ (Buffer State) ಆಗಿ ಇದ್ದಿತೆನ್ನದೆ ಸ್ವಂತಿಕೆಯನ್ನು ಪ್ರತ್ಯೇಕತೆಯನ್ನು ಉಳಿಸಿ ಬೆಳೆಸಿ ಕೊಳ್ಳಲು ಸಮರ್ಥವಾದುದು.

ನೈಸರ್ಗಿಕವಾಗಿ ಸಮೃದ್ಧವಾಗಿ ತುಂಬಿ ಹರಿಯುವ ತುಂಗ-ಭದ್ರಾ ಫಲವತ್ತಾದ ಮಣ್ಣು ಇಲ್ಲಿ ಹೇರಳವಾಗಿ ದೊರೆಯುವ ಕಣಶಿಲೆ, ಹೀಗೆ ರಾಜಕೀಯ ಹಾಗೂ ನೈಸರ್ಗಿಕ ಹಿನ್ನೆಲೆಯಲ್ಲಿ ಇಲ್ಲಿ ಕೋಟೆಯನ್ನು ಕಟ್ಟಲಾಗಿರುವುದು. ಆದರೆ ಕೋಟೆ ನಿರ್ಮಾಣಗೊಂಡಿರುವ ಕಾಲಾವಧಿಯ ಬಗ್ಗೆ ಜಿಜ್ಞಾಸೆಗಳಿವೆ.

ತುಂಗ-ಭದ್ರಾ ನದೀ ತೀರದಲ್ಲಿರುವ ಕಂಪ್ಲಿಕೋಟೆಯನ್ನು ಬಳ್ಳಾರಿಯ ಒಬ್ಬ ಪಾಳೆಯಗಾರನು ಕಟ್ಟಿಸಿದನೆಂದು, ಗ್ಯಾಸಿಟೆಯರ್ ನಲ್ಲಿ ಹೇಳಲಾಗಿದೆ. ಮುಮ್ಮಡಿ ಸಿಂಗನಾಯಕನಿಗೆ ಕಂಪಲಿಯ ಸೋಮೇಶ್ವರ ದೇವರ ವರಪ್ರಸಾದದಿಂದಾಗಿ ಹುಟ್ಟಿದ ಮಗುವಿಗೆ “ಕಂಪಿಲರಾಯ ಎಂಬ ನಾಮಕರಣ ಮಾಡಿ ಅಲ್ಲೇ ಕೋಟೆ ಕಟ್ಟಿಸಿದನೆಂದು ಕೈಫಿಯತ್ತು ಹೇಳುತ್ತದೆ. ನೊಳಂಬವಾಡಿ ೩೨೦೦೦ಯನ್ನು ಕ್ರಿ.ಶ. ೧೦೬೪ ರಲ್ಲಿ ಚಾಳುಕ್ಯರ ವಿಜಯಾದಿತ್ಯನು ಕಂಪಲಿಯನ್ನು ಮುಖ್ಯಪಟ್ಟಣವಾಗಿಟ್ಟುಕೊಂಡು ಆಳುತ್ತಿರುವಾಗ ಹೊಯ್ಸಳರ ಶ್ರೇಷ್ಠ ಅರಸನಾದ ವಿಷ್ಣುವರ್ಧನನು ಈ ಕೋಟೆಯನ್ನು ಗೆದ್ದನೆಂದು ಅಭಿಪ್ರಾಯವಿದೆ. ಈ ಮೇಲಿನ ಹೇಳಿಕೆಗಳನ್ನು ಗಮನಿಸಲಾಗಿ, ನೊಳಂಬವಾಡಿ ೩೨೦೦೦ ದಂಥ ದೊಡ್ಡ ಪ್ರಾಂತಕ್ಕೆ ರಾಜಧಾನಿಯಾಗಿ ಕ್ರಿ.ಶ. ೧೧ನೆಯ ಶತಮಾನದಲ್ಲಿಯೇ ಕಂಪಲಿಯು ಪ್ರಸಿದ್ಧ ಹೊಂದಿತ್ತು. ಕೈಫಿಯತ್ತಿನಲ್ಲಿ ಉಲ್ಲೇಖವಾದಂತೆ ಮುಮ್ಮಡಿ ಸಿಂಗೇನಾಯಕನು ಈಗಾಗಲೇ ಕಂಪ್ಲಿಗೆ ಅನತಿ ದೂರದಲ್ಲಿ ಕುಮ್ಮಟದುರ್ಗ ಕೋಟೆ ನಿರ್ಮಿಸಿರುವುದರಿಂದ ಇನ್ನೊಂದು ಕೋಟೆಯ ಅವಶ್ಯಕತೆ ಇರಲಿಲ್ಲ. ಹಾಗಾಗಿ ಕ್ರಿ.ಶ. ೧೨ನೆಯ ಶತಮಾನದ ಆರಂಭದಲ್ಲಿಯೇ ಈ ಕೋಟೆ ನಿರ್ಮಾಣವಾಗಿರಬೇಕು. ನಂತರ ಹೊಯ್ಸಳ ವಿಷ್ಣುವರ್ಧನನು ಈ ಕೋಟೆಯನ್ನು ಗೆದ್ದಿದ್ದನು. ಮುಮ್ಮಡಿಸಿಂಗ ಹಾಗೂ ಪಾಳೆಯಗಾರರು ಈ ಕೋಟೆಯನ್ನು ಜೀರ್ಣೋದ್ಧಾರ ಮಾಡಿರಬಹುದು. ಹಾಗಾಗಿ ಕೋಟೆಯು ತನ್ನ ಮೂಲರೂಪವನ್ನು ಕಳೆದುಕೊಂಡಿದೆ.

ಕೋಟೆಯ ಒಳಗೆ ಹಾಗೂ ಆಸು-ಪಾಸುಗಳ ದೇಗುಲಗಳು, ವೀರಗಲ್ಲುಗಳು, ಶಾಸನಗಳು ಕಂಡುಬರುತ್ತದೆ. ಕೋಟೆ ಆಂಜನೇಯ ದೇಗುಲ ಕೋಟೆಯ ಹೆಬ್ಬಾಗಿಲಿನ ಮುಂಭಾಗದಲ್ಲಿದೆ. ಇದು ದಕ್ಷಣಾಭಿಮುಖವಾಗಿದ್ದು, ಗರ್ಭಗೃಹ, ಹಾಗೂ ತೆರೆದ ಸಭಾಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಆಂಜನೇಯನ ಉಬ್ಬುಶಿಲ್ಪವಿದೆ. ಸಭಾಮಂಟಪದಲ್ಲಿ ಸಾದಾ ಕೆತ್ತನೆಯ ನಾಲ್ಕು ಕಂಭಗಳಿವೆ. ಗರ್ಭಗೃಹದ ಮೇಲೆ ಶಿಖರ ಹಾಗೂ ಮುಂಭಾಗದಲ್ಲಿ ಗರುಡಗಂಬವಿದೆ. ಈ ದೇವಾಲಯದ ಹಿಂಭಾಗದಲ್ಲಿ ಬನ್ನು ಮಹಾಕಾಳಿಯ ಚಿಕ್ಕ ದೇಗುಲವಿದೆ. ಇದರ ಹಿಂಬದಿ ಕಟ್ಟೆಗೆ ಹೊಂದಿಕೊಂಡು ಎರಡು ಎತ್ತರದ ವೀರಗಲ್ಲು ಇದೆ. ಮತ್ತೆ ಇಲ್ಲಿ ವೀರ ಸಮಭಂಗಿಯಲ್ಲಿದ್ದು, ಕೈಗಳಲ್ಲಿ ಖಡ್ಗಗಳನ್ನು ಹಿಡಿದಿದ್ದಾನೆ. ಈ ಶಿಲ್ಪಕ್ಕೆ ಕೊರಳಹಾರ, ಸೊಂಟಹಾರ, ಖಡ್ಗ, ಕೈಕಡಗ, ಕಾಲಕಡಗ, ಕಿರೀಟ ಮುಕುಟಗಳಿಂದ ಅಲಂಕರಿಸಲಾಗಿದೆ.

ಕೋಟೆಯ ಒಳ ಬದಿಗೆ ಕಿಲ್ಲಾ ಆಂಜನೇಯನ ಗುಡಿ ದಕ್ಷಿಣಾಭಿಮುಖವಾಗಿದೆ. ಇದರಲ್ಲಿ ಗರ್ಭಗೃಹ, ತೆರೆದ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಆಂಜನೇಯನ ಉಬ್ಬುಶಿಲ್ಪವಿದೆ.

ಕೋಟೆಯ ಪಶ್ಚಿಮಕ್ಕೆ ಪಂಪಾಪತಿ ದೇವಾಲಯವಿದೆ. ಇದು ಸುಮಾರು ಹದಿನೈದನೆಯ ಶತಮಾನದಲ್ಲಿ ನಿರ್ಮಾಣವಾಗಿದ್ದು, ದ್ವಿಕೂಟಾಚಲವಾಗಿದೆ. ದಕ್ಷಿಣ, ಪಶ್ಚಿಮ ಭಾಗಗಳಲ್ಲಿ ಗರ್ಭಗೃಹಗಳಿದ್ದು, ಅವುಗಳಿಗೆ ಹೊಂದಿಕೊಂಡು ಸಭಾಮಂಟಪ ಮತ್ತು ಮುಖಮಂಟಪಗಳಿವೆ. ದಕ್ಷಿಣ ಗರ್ಭಗೃಹದಲ್ಲಿ ಚಿಕ್ಕ ಶಿವಲಿಂಗವಿದ್ದರೆ, ಪಶ್ಚಿಮ ಗರ್ಭಗೃಹದಲ್ಲಿ ಪಂಪಾದೇವಿಯ ಚಿಕ್ಕ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ಸಭಾಮಂಟಪದಲ್ಲಿ ಚೌಕಾಕಾರದ ನಾಲ್ಕು ಕಂಭಗಳಲ್ಲಿ ಎರಡರಲ್ಲಿ ಕುಬ್ಜ ಉಬ್ಬುಶಿಲ್ಪಗಳಿವೆ. ಗರ್ಭಗೃಹದ ಮೇಲೆ ಗಾರೆ ಇಟ್ಟಿಗೆಯಿಂದ ನಿರ್ಮಿಸಿದ ದ್ರಾವಿಡ ಮಾದರಿಯ ತ್ರಿತಲ ಶಿಖರದಲ್ಲಿ, ಉಪಶಿಖರಗಳು ಮುಂಭಾಗ ಶಿವ-ಪಾರ್ವತಿ, ನಾಲ್ಕು ಮುಖಗಳಲ್ಲಿ ಶೈವಶಿಲ್ಪಗಳು, ಮೇಲ್ಭಾಗದ ನಾಲ್ಕು ಮೂಲೆಗಳಲ್ಲಿ ನಂದಿಶಿಲ್ಪಗಳನ್ನು ಅಳವಡಿಸಲಾಗಿದೆ. ಈ ದೇವಾಲಯದ ಆವರಣಗಳಲ್ಲಿ ವಿಜಯನಗರದ ಅರಸ ಸದಾಶಿವರಾಯನ ಕ್ರಿ.ಶ. ೧೫೫೨ರ ಶಾಸನವಿದೆ.

ಕಂಪ್ಲಿಯ ದಕ್ಷಿಣಕ್ಕೆ ಸೋಮೇಶ್ವರ ದೇವಾಲಯವಿದೆ. ಇದು ಕ್ರಿ.ಶ. ಸುಮಾರು ೧೪ನೆಯ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಇದಕ್ಕೆ ವಿಶಾಲವಾದ ಪ್ರಾಕಾರವಿದೆ. ಅದರೊಳಗೆ ಈ ಗುಡಿಯಿದ್ದು, ಗರ್ಭಗೃಹ, ಅಂತರಾಳ, ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಆರು ಅಡಿ ಎತ್ತರದ ಸುಖಾಸನದಲ್ಲಿರುವ ಸೋಮೇಶ್ವರನ ವಿಗ್ರಹವಿದೆ. ಇವನ ಕೈಗಳಲ್ಲಿ ತ್ರಿಶೂಲ, ಡಮರು, ಖಡ್ಗ, ಕಪಾಲಿ ಹಿಡಿದುಕೊಂಡಿದ್ದಾನೆ. ಅಂತರಾಳದಲ್ಲಿ ಸುಮಾರು ಐದು ಅಡಿ ಎತ್ತರದ ಸುಖಾಸನದಲ್ಲಿ ಕುಳಿತ ಶಿಲ್ಪವಿದೆ. ಕೈಗಳಲ್ಲಿ ಖಡ್ಗ, ಕಪಾಲಿ ಹಿಡಿದುಕೊಂಡಿರುವ ಇದನ್ನು ಸ್ಥಳೀಯರು ಕಂಪಿಲರಾಯನೆಂದು ಕರೆಯುತ್ತಾರೆ. ಈ ದೇವಾಲಯದ ಎಡ ಭಾಗದಲ್ಲಿ ಪಾರ್ವತಿ ಗುಡಿ ಇದೆ.

ಕಮಲಾಪುರ

ಹೊಸಪೇಟೆ ತಾಲೂಕಿನ ವಿಶ್ವವಿಖ್ಯಾತ ಸ್ಮಾರಕವೆಂದು ಮನ್ನಣೆ ಪಡೆದ ಹಂಪಿಗೆ ಹೊಂದಿಕೊಂಡಿರುವ ಕಮಲಾಪುರವು ಒಂದು ಪಟ್ಟಣ ಪ್ರದೇಶ ಹೊಸಪೇಟೆಯಿಂದ ೧೧ ಕಿ.ಮೀ. ದೂರದಲ್ಲಿದೆ. ತೀವ್ರತರ ಬೆಳವಣೆಗೆಗೆ ಪ್ರವಾಸಿ ತಾಣವಾದ ಹಂಪಿಯು ಒಂದು ಕಾರಣ. ಹಂಪಿಗೂ ಕಮಲಾಪುರಕ್ಕೂ ನಿಕಟವಾದ ಸಂಬಂಧಗಳಿವೆ. ಹಾಗಾಗಿ ವಿಜಯನಗರ ಕಾಲದ ಕೋಟೆ ಈ ಪಟ್ಟಣದ ದಕ್ಷಿಣ ಭಾಗದಲ್ಲಿದೆ.

ಕಮಲಾದೇವಿ ಎಂಬ ಇಲ್ಲಿಯಾ ಆರಾಧ್ಯ ದೇವತೆಯ ಹೆಸರಿನಿಂದ ಈ ಗ್ರಾಮವನ್ನು ಕಮಲಪುರವೆಂದು ಕರೆದಿರುವುದಾಗಿ ಕೈಫಿಯತ್ತು ಹೇಳುತ್ತದೆ. ವಿಜಯನಗರ ಕಾಲದಲ್ಲಿ ವರದ ರಾಜಮ್ಮನ ಪಟ್ಟಣವೆಂದು ಕರೆಯುತ್ತಿದ್ದುದ್ದು ತಿಳಿಯುವುದು. ಕ್ರಿ.ಶ. ೧೫೧೮ರ ಕೃಷ್ಣದೇವರಾಯನ ಶಾಸನದಲ್ಲಿ ಕೃಷ್ಣದೇವರಾಯನ ಹಿರಿಯ ರಾಣಿ ತಿರುಮಲದೇವಿ ಹಂಪಿ ಹತ್ತಿರದ ಅಂಜನ ಗಿರಿಯ ಕುಮಾರಗುಂಟೆ ತಿರುವೆಂಗಲನಾಥ ದೇವರ ಸೇವೆಗಾಗಿ ಒಂದು ಮತ್ತು ಭೂಮಿದಾನ ಮಾಡಿದ ಉಲ್ಲೇಖವಿದೆ. ಇದರಲ್ಲಿ ಬರುವ ಕುಮಾರಗುಂಟೆ ಮುಂದೆ ಕಮಲಾಪುರವಾಯಿತೆಂದು ಕುಂ.ಬಾ ಸದಾಶಿವಪ್ಪ ಅಭಿಪ್ರಾಯ ಪಡುತ್ತಾರೆ. ಕ್ರಿ.ಶ.೧೫೩೧ರ ಶಾಸನದಲ್ಲಿ ಕಮಲಾಪುರವೂ ಕೊಂಡಮಾರಸಯ್ಯನ ಪಾಳ್ಯದಲ್ಲಿರುವುದು ಪ್ರಸ್ಥಾಪವಾಗುತ್ತದೆ.

ಮೊದಲನೆಯದಾಗಿ ಈ ಗ್ರಾಮವು ವಿಜಯನಗರ ಕಾಲಾವಧಿಯಲ್ಲಿ ನಿರ್ಮಾಣಗೊಂಡಿರುವುದು ಖಚಿತವಾಗುತ್ತದೆ. ಏಕೆಂದರೆ ಈ ಮುಂಚೆ ಕಮಲಾಪುರ ಇದ್ದ ಬಗ್ಗೆ ಯಾವುದೇ ಆಧಾರವಿಲ್ಲ. ಎರಡನೆಯದಾಗಿ ವಿಜಯನಗರ ಅವಧಿಯಲ್ಲಿ ಸ್ಥಾಪನೆಗೊಂಡ ಬಹುತೇಕ ಗ್ರಾಮಗಳಿಗೆ ವಿಜಯನಗರದ ಅರಸರು ಮತ್ತವರ ರಾಣಿಯವರು ಹಾಗೂ ಮಕ್ಕಳುಗಳ ಹೆಸರುಗಳನ್ನೆ ಇಡುತ್ತಿದ್ದುದು ವಾಡಿಕೆ. ಉದಾಹರಣೆಗಾಗಿ ತಿರುಮಲದೇವಿ ಪಟ್ಟಣ (ಹೊಸಪೇಟೆ), ಚಿನ್ನಾಪುರ, ನಾಗಲಾಪುರ, ಕೃಷ್ಣಾನಗರ, ಸಾಲೆ ತಿರುಮಲಾ ಪಟ್ಟಣ ಇತ್ಯಾದಿಯಾಗಿ ಈ ಹಿನ್ನೆಯಲ್ಲಿ ಕಮಲಾ ಎಂದರೆ ಲಕ್ಷ್ಮಿ, ಉತ್ತಮ ಸ್ತ್ರೀ, ಕುಮಾರ, ಲಕ್ಷಿಮಿಯ ಮಗ, ಮನ್ಮಥ ಇತ್ಯಾದಿ ಅರ್ಥಗಳಿವೆ.

ಕಮಲಾದೇವಿ ಎಂಬುವವಳು ಉತ್ತಮ ಸ್ತ್ರೀ ಇದ್ದು, ಇವಳು ವಿಜಯನಗರದ ಅರಸರೊಂದಿಗೆ ಸಂಬಂಧ ಹೊಂದಿದವಳಾಗಿರಬೇಕು. ಹೀಗಾಗಿ ಅವಳ ಹೆಸರಿನಿಂದಲೇ ಈ ಗ್ರಾಮಕ್ಕೆ ಕಮಲಾಪುರವೆಂದು ಕರೆದಿರಬಹುದು. ಇದಕ್ಕೆ ಪೂರಕವೆಂಬಂತೆ ವಿಜಯನಗರದ ಅರಸರ ‘ಗಾಣ (ಸೇವಕಿಯಾದ) ಗಿತ್ತಿ’ ಹೆಸರಿನಲ್ಲಿಯೇ ಒಂದು ದೇವಾಲಯ ನಿರ್ಮಿಸಿರುವುದು ಕಾಣಬಹುದು.

ಪ್ರಾಚೀನ ಮಾನವನ ಆವಾಸ ಸ್ಥಾನವಾಗಿ ಇತಿಹಾಸ ಕಾಲದಿಂದಲೂ ಇಂದಿನವರೆಗೂ ಚಾರಿತ್ರಿಕ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ಕಮಲಾಪುರದಲ್ಲಿ ವಿಜಯನಗರ ಕಾಲದ ಕೋಟೆಯೊಂದು ಈ ಗ್ರಾಮ ರಕ್ಷಣೆಗಾಗಿ ನಿರ್ಮಾಣಗೊಂಡಂತೆ ಕಂಡುಬರುತ್ತದೆ.

ಕಮಲಾಪುರವು ಬೆಳೆದಂತೆ ಇಲ್ಲಿನ ಕೋಟೆ ಹಾಳಾಗಿದೆ. ಈಗ ಉಳಿದಿರುವ ಕೆಲವು ಅವಶೇಷಗಳಿಂದ ಈ ಕೋಟೆಯ ಲಕ್ಷಣಗಳನ್ನು ಅರಿಯಲು ಯತ್ನಿಸಿದೆ.

ಸುಮಾರು ೨೦ ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಈ ಕೋಟೆಯ ಪರಿಘಾ (ನೆಲದುರ್ಗ) ಪ್ರಕಾರಕ್ಕೆ ಸೇರುತ್ತದೆ. ಚೌಕಾಕಾರದ ಕೋಟೆಯನ್ನು ಬೃಹತ್ ಮತ್ತು ಮಧ್ಯಮ ಗಾತ್ರದ ಕಲ್ಲು ಹಾಗೂ ಗಾರೆಯಿಂದ ಕಟ್ಟಿದೆ. ಕೋಟೆಯ ಮೇಲ್ಭಾಗದಲ್ಲಿ ಕೈಪಿಡಿ ಗೋಡೆಯನ್ನು ಇಟ್ಟಿಗೆ ಹಾಗೂ ಗಾರೆಯಿಂದ ಕಟ್ಟಿರಬಹುದಾದರು ಈಗ ಗೋಚರಿಸುವುದಿಲ್ಲ. ಕೋಟೆಯ ಉತ್ತರ ದಿಕ್ಕಿನಲ್ಲಿ ಗೋಡೆಯ ಮಧ್ಯದಲ್ಲಿ ದೊಡ್ಡ ಬಾಗಿಲಿದೆ. ದಕ್ಷಿಣ ದಿಕ್ಕಿನ ಗೋಡೆಯ ಮಧ್ಯದಲ್ಲಿ ಚಿಕ್ಕ ದಿಡ್ಡಿ ಇದ್ದ ಬಗ್ಗೆ ಪ್ರತೀತಿ ಇದೆ. ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳಿವೆ. ಕೋಟೆಯ ಸುತ್ತಲು ಕಂದಕವಿದ್ದ ಬಗ್ಗೆ ಅನುಮಾನವಿದೆ.

ಉತ್ತರ ದಿಕ್ಕಿನ ಭಾಗಿಲಿನ ಮೇಲಿನ ಕೈಪಿಡಿ ಗೋಡೆಯಲ್ಲಿ ಚಿಕ್ಕಚಿಕ್ಕ ರಂಧ್ರಗಳಿವೆ. ಇಕ್ಕೆಲ್ಲದ ಗೋಡೆಗಳಲ್ಲಿ ಮೀನು, ಮೊಸಳೆ, ನವಿಲು, ಹಂಸಗಳ ಉಬ್ಬುಗೆತ್ತನೆಗಳಿವೆ. ಈ ಬಾಗಿಲಿನ ಎರಡು (ಪೂರ್ವ ಮತ್ತು ಪಶ್ಚಿಮ) ದಿಕ್ಕಿಗೆ ವೃತ್ತಾಕಾರದ ಕೊತ್ತಳಗಳಿವೆ. ಪ್ರವೇಶದ ಎರಡು ಬದಿಗೆ ಎತ್ತರವಾದ ಕಟ್ಟೆಗಳಿವೆ. ಈ ಕಟ್ಟೆಗಳಿಗೆ ಹೊಂದಿಕೊಂಡು ನಗರೇಶ್ವರ ದೇವಾಲಯವಿದೆ. ಕೋಟೆಯ ಒಳಗೆ ಕಮಲಾಪುರ ಗ್ರಾಮವಿದೆ. ಈ ಪ್ರದೇಶವನ್ನು ಕ್ವಾಟೆ, ಕೋಟೆ ಎಂದು ಸ್ಥಳೀಯರು ಈಗಲೂ ಗುರುತಿಸುತ್ತಾರೆ. ಇದರ ಮಧ್ಯಭಾಗದಲ್ಲಿ ಬೃಹದಾಕಾರದ ಕೊತ್ತಳವಿದೆ. ಇದು ಅರವತ್ತು ಅಡಿ ಎತ್ತರ ಸುಮಾರು ೧೫೦ ಅಡಿ ಸುತ್ತಳತೆಯನ್ನು ಹೊಂದಿದೆ. ಕೊತ್ತಳದ ಮೇಲೇರಲು ಅನುಕೂಲವಾಗುವಂತೆ ಪಶ್ಚಿಮ ದಿಕ್ಕಿಗೆ ಮೆಟ್ಟಿಲುಗಳನ್ನು ನಿರ್ಮಿಸಿ, ಇದಕ್ಕೆ ಚಿಕ್ಕ ಬಾಗಿಲನ್ನು ಜೋಡಿಸಲಾಗಿದೆ. ಈ ಎತ್ತರದ ಕೊತ್ತಳದ ಮೇಲಿಂದ ಇಡೀ ಹಂಪೆ ಪ್ರದೇಶವಲ್ಲದೆ ಸುತ್ತಾಮುತ್ತಲಿನ ಬಹುತೇಕ ಪ್ರದೇಶಗಳನ್ನು ಕಂಡುಬರುತ್ತವೆ. ಇದರಿಂದ ಈ ಕೊತ್ತಳದ ಉದ್ದೇಶವನ್ನು ತಿಳಿಯಬಹುದು. ಕೊತ್ತಳದ ಕಾಂಡ ಭಾಗದಲ್ಲಿ ಚಿಕ್ಕಗೂಡೊಂದು ನಿರ್ಮಿಸಿ, ಇದರಲ್ಲಿ ಕಲ್ಲುಗುಂಡನ್ನಿಟ್ಟು ತಾಯಮ್ಮನೆಂದು ಆರಾಧಿಸುತ್ತಾರೆ.

ಕ್ರಿ.ಶ. ೧೫೬೫ರ ನಂತರ ವಿಜಯನಗರ ಅವಸಾನದತ್ತ ನಡೆದಿರುವಾಗ ಅನೇಕ ಪಾಳೆಯಗಾರರು ಸ್ವತಂತ್ರ್ಯರಾದರು. ಈ ಹಿನ್ನೆಲೆಯಲ್ಲಿ ಕುರುಗೋಡಿನ ಪರಗಣಿಯಲ್ಲಿ ಕಮಲಾಪುರವು ಸೇರಿತು. ಆಗ ಕುರುಗೋಡಿನ ಪರಗಣಿಯನ್ನು ಆಳುತ್ತಿದ್ದ ಚಿನ್ನರಾಯ ಕ್ರಿ.ಶ. ೧೭೦೩ರಲ್ಲಿ ಕಮಲಾಪುರ ಕೋಟೆ, ಹುಲಿಮುಖ, ಹುಡೇವುಗಳನ್ನು ಕಟ್ಟಿಸಿದನೆಂದು ಕೈಫಿಯತ್ತಿನಲ್ಲಿ ಹೇಳಲಾಗಿದೆ. ಕಮಲಾಪುರದ ಕೋಟೆಯ ಲಕ್ಷಣಗಳಿಗೂ ಮತ್ತು ವಿಜಯನಗರದ ಕೋಟೆ (ಹಂಪಿ) ಯ ಲಕ್ಷಣಗಳಿಗೂ ವ್ಯತ್ಯಾಸಗಳು ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಈ ಕೋಟೆಯು ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಪಾಳೆಯಗಾರರ ಅವಧಿಯಲ್ಲಿ ಜೀರ್ಣೋದ್ಧಾರ ಕಂಡಿದೆ.

ಪಾಪಿನಾಯಕನಹಳ್ಳಿ

ಹೊಸಪೇಟೆಯಿಂದ ೧೨ ಕಿ.ಮೀ. ದೂರದ ಪಶ್ಚಿಮ ದಿಕ್ಕಿಗಿರುವ ಪಾಪಿನಾಯಕನ ಹಳ್ಳಿಯು ಒಂದು ಗ್ರಾಮ ಪಂಚಾಯಿತಿ ಕೇಂದ್ರ. ಗ್ರಾಮದ ಪೂರ್ಣ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳಿಗೆ ಬಯಲು ಸೀಮೆಯ ಹೊಸ ಮತ್ತು ಗದ್ದೆಗಳಿವೆ. ಉತ್ತರ ದಿಕ್ಕಿಗೆ ಬೆಟ್ಟದ ಸಾಲಿದೆ. ಪಾಪಿನಾಯಕನ ಹಳ್ಳಿಯಿಂದ ಈ ಬೆಟ್ಟದ ಸಾಲು ಸಾಗಿ ದರೋಜಿ ಬೆಟ್ಟದ ಶ್ರೇಣಿಗೆ ಸೇರುತ್ತದೆ. ಈ ಬೆಟ್ಟದಲ್ಲಿರುವುದೇ ಪಾಪಿನಾಯಕನಹಳ್ಳಿಯ ಗಿರಿದುರ್ಗ.

ಪಾಪನಾಯಕ ಎನ್ನುವ ಪಾಳೆಯಗಾರನಿಂದಾಗಿಯೇ ಈ ಗ್ರಾಮಕ್ಕೆ ಪಾಪಿನಾಯಕನಹಳ್ಳಿ ಎಂದು ಕರೆದಿರುವುದು. ಈತನೆ ಇಲ್ಲಿಕಟೆಕಟ್ಟಿಸಿರಬಹುದೆಂದು ಸ್ಥಳೀಯರಿಂದ ತಿಳಿದುಬರುವ ಅಂಶ. ಈ ಪಾಳೆಯಗಾರರು ಹಂಪಿಕಡೆಯಿಂದ ಬಂದಿರುವರೆಂದು ಹೇಳುತ್ತಾರೆ. ಹಾಗಾದರೆ ಪಾಪನಾಯಕ ಯಾರು? ಮ್ಯಾಸಬೇಡ ಜನಾಂಗದ ಸಾಂಸ್ಕೃತಿಕ ವೀರನೆಂದು ಗುರುತಿಸಿರುವ ಗಾದರಿ ಪಾಲನಾಯಕನ ವಂಶಸ್ಥರಾದ ತೊರ್ರೆಲ ಮಲ್ಲನಾಯಕನ ಮಗ ಪಾಪನಾಯಕನಿರಬಹುದು. ಈತನು ಪಶುಪಾಲನೆ ವೃತ್ತಿಗಾಗಿ ಈ ಪ್ರದೇಶಕ್ಕೆ ಬಂದಿರುವನೆ. ಇದಕ್ಕೆ ಎತ್ತು ನೀಡುವ ಇನೊಂದು ಅಂಶವೆಂದರೆ ಆನೆಗೊಂದಿ ರಾಜರ ಮರ್ಯಾದೆಗೆ ಕುಂದು ಉಂಟಾಗುವುವಂತೆ ಊರ ಬಾಗಿಲಿಗೆ ತನ್ನ ಇಜಾರ ಕಟ್ಟಿಸಿ ಮೆರೆಯುತ್ತಿದ್ದ ಭೀಮಜೆಟ್ಟಿ ಎಂಬುವವನು ಸೋಲಿಸಿದ್ದು, ಪಾಪನಾಯಕನ ಮೊಮ್ಮಗ ಜೋಡಿ ಮಲ್ಲಪ್ಪನಾಯಕ ಎಂಬುವುದಿದೆ.

ಕೈಫಿಯತ್ತು ಈ ಗ್ರಾಮವನ್ನು ಮೊದಲು ಅಪಲಾಪುರವೆಂದು ಕರೆದಿದ್ದು, ನಂತರ ಪಾಪಿನಾಯಕನಹಳ್ಳಿ ಎಂದು ಉಲ್ಲೇಖಿಸಿ, ಇಲ್ಲಿ ತಿಮ್ಮಪ್ಪನಾಯಕನು ಕೋಟೆಕಟ್ಟಿಸಿದಂತೆ ತಿಳಿಸುತ್ತದೆ. ಪಾಪಿನಾಯಕನಹಳ್ಳಿಯ ದಕ್ಷಿಣದಿಕ್ಕಿಗೆ ಅಂಕಾಲಮ್ಮನ ಗುಡಿಯ ಮುಂದೆ ಶಾಸನವಿದೆ. ಕ್ರಿ.ಶ. ೧೪೩೨ ರ ಈ ಶಾಸನದಲ್ಲಿ ಈ ಗ್ರಾಮವನ್ನು ಪಾ(ಅ) ಪಿನಾಯಕನ ಪುರ ಇಲ್ಲಿ ತಲಾರಿ ತಿಮ್ಮನಾಯಕನು ಆಳ್ವಿಕೆ ಮಾಡಿದಂತೆ ತಿಳಿಸುತ್ತದೆ. ಪಾ(ಅ) ಪಿನಾಕನ ಪುರ, ಜನ ಭಾಷೆಯಲ್ಲಿ ಪಾಪಿನಾಯಕನಹಳ್ಳಿಯಾಗಿದೆ. ತಿಮ್ಮನಾಯಕ ಎನ್ನುವವನು ಇಲ್ಲಿ ಕೋಟೆ ಕಟ್ಟಿಸಿರಬೇಕು. ಇವನೇ ಸ್ಥಳೀಯರು ಹೇಳುವ ಪಾಪನಾಯಕನು. ವಿಜಯನಗರ ಕಾಲದಲ್ಲಿ ಕಮಲಾಪುರ (ಕೊಂಡ ಮಾರಸಯ್ಯನವಾಡಿ)ದ ಪಾಳ್ಯದಂತೆ ಇದು ಒಂದು ಪಾಳ್ಯ.

ಪಾಪಿನಾಯಕನಹಳ್ಳಿ ಕೋಟೆಯು ನಿಸರ್ಗದತ್ತವಾದ ಬೆಟ್ಟವನ್ನು ಬಳಸಿ ನಿರ್ಮಿಸಿದ ಚಿಕ್ಕಕೋಟೆಯಾಗಿದೆ. ಇದರ ಪಕ್ಕದಲ್ಲಿ ವಸತಿ ತಾಣವಿದ್ದ ಈ ಕೋಟೆಯನ್ನು ಸ್ಥಳೀಯರು ಸಂತೆ ಗುಡ್ಡದ ಕೋಟೆ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವಾಗಿ ಕೋಟೆಯ ಪೂರ್ಣಭಾಗಕ್ಕೆ ವಿಶಾಲವಾದ ಬಯಲಿದೆ. ಇದನ್ನು ಸಂತಬಯಲು ಎನ್ನುವರು. ಉತ್ತರದಿಂದ ದಕ್ಷಿಣದಿಕ್ಕಿಗೆ ಇಳಿಜಾರಾಗಿರುವ ಬೆಟ್ಟದ ಮೇಲ್ತುದಿಯನ್ನು ಆವರಿಸಿ ಕೋಟೆಯನ್ನು ಕಟ್ಟಲಾಗಿದೆ. ಈ ಕೋಟೆಗೆ ದಕ್ಷಿಣದಿಂದ ಪ್ರವೇಶ ಕಲ್ಪಿಸಿರುವರು. ಈ ಪ್ರವೇಶ ದ್ವಾರವು ಬಹು ಕಿರಿದಾಗಿದ್ದು ಇದರ ಇಕ್ಕೆಲಗಳಲ್ಲಿ ತಾಯಮ್ಮ ಹಾಗೂ ವೀರಭದ್ರನ ಚಿಕ್ಕ ಚಿಕ್ಕ ಗುಡಿಗಳನ್ನು ಹೊಂದಿದೆ. ಸುಮಾರು ಎರಡು ಎಕರೆ ವಿಸ್ತೀರ್ಣವನ್ನು ಹೊಂದಿರುವ ಕೋಟೆಯ ಮಧ್ಯದಲ್ಲಿ ಯಾವುದು ಸ್ಮಾರಕಾವಶೇಷಗಳು ಗೋಚರಿಸುವುದಿಲ್ಲ. ಕೋಟೆಗೋಡೆಯು ೫ ರಿಂದ ೧೦ ಅಡಿಗಳವರೆಗೆ ಎತ್ತರ ಹಾಗೂ ಐದು ಅಡಿ ಅಗಲವಾಗಿದೆ. ಕೆಲವು ಕಡೆ ಹೆಚ್ಚು ಕಡಿಮೆ ಇದೆ. ಸ್ಥಳೀಯವಾಗಿ ದೊರೆಯುವ ಚಿಕ್ಕ ಮತ್ತು ಮಧ್ಯಮ ಗಾತ್ರದ ಶಿಲೆಗಳನ್ನು ಕೋಟೆ ಕಟ್ಟಡಕ್ಕೆ ಬಳಸಲಾಗಿದೆ. ಇದರ ಆಯಾಕಟ್ಟಿನ ಸ್ಥಳಗಳನ್ನು ನಿರ್ಮಿಸಲಾಗಿದ್ದು ಒಟ್ಟು ಮೂರು ಬತೇರಿಗಳಿವೆ. ಕೋಟೆಯ ಹಿಂಭಾಗದ ಗೋಡೆಗಿರುವ ಕೊತ್ತಳವು ಬೃಹದಾಕಾರವಾಗಿದೆ. ವೃತ್ತಾಕಾರವಾಗಿರುವ ಈ ಕೊತ್ತಳವು ಸು. ೨೦ ಅಡಿಗಳಷ್ಟು ಎತ್ತರವಾಗಿರುವುದು. ಇದರ ಮೇಲಿನಿಂದ ನೋಡಿದರೆ ಇಡೀ ಕೋಟೆಯು ತಲೆ ಕೆಳಗಾಗಿ ಕಾಣುತ್ತದೆ ಶತ್ರುಗಳ ಬರುವಿಕೆಯನ್ನು ಗ್ರಹಿಸುವುದಕ್ಕಾಗಿ ಕೊತ್ತಳವನ್ನು ನಿರ್ಮಿಸಿದ್ದಾರೆ. ಇನ್ನುಳಿದ ಎರಡು ಕೊತ್ತಳಗಳು ಕೋಟೆಯ ಪ್ರವೇಶದ ಎರಡು ಬದಿಗಳಲ್ಲಿವೆ. ಇವು ಸಾಧಾರಣ ಮಟ್ಟದವು.

ಈ ಕೋಟೆ ಇರುವ ಬೆಟ್ಟದಿಂದ ಕೆಳಗೆ ಪಶ್ಚಿಮಕ್ಕೆ ವಸತಿ ಅವಶೇಷಗಳಿವೆ. ನಮ್ಮ ಊರು ಮೊದಲು ಅಲ್ಲೇ ಇತ್ತು ನಮ್ಮ ಮನೆಗಳು ಅಲ್ಲಿ ಇದ್ದವೆಂದು ಸುಮಾರು ೮೦ ವರ್ಷದ ದುರುಗಮ್ಮ ಹೇಳುತ್ತಾರೆ. ಈ ಹಳೆ ಊರಿನಿಂದ ಹಂಪಿಗೆ ನೆಲಮಾಳಿಗೆ ಇದೆಯಂತೆ. ಇಲ್ಲಿಂದ ಹಂಪಿಗೆ ದಾರಿಯಿದೆ ಎನ್ನುವುದು ಸ್ಥಳೀಯರ ನಂಬಿಕೆ. ಇದಕ್ಕೆ ಪೂರಕವೆಂಬಂತೆ ಈಗಲೂ ಹಳೆ ಊರಿನಲ್ಲಿ ಭೂಮಿಯಲ್ಲಿ ನೆಲಮಾಳಿಗೆ ಇದೆ. ಅದು ಎಲ್ಲಿಯವರೆಗೆ ಹೋಗಿದೆಯೆಂಬುದು ತಿಳಿಯದು. ಕೋಟೆಯ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿರುವ ವೆಂಕಟೇಶ್ವರನ ದೇವಾಲಯವಿದೆ. ಇದು ಗರ್ಭಗೃಹ, ಅಂತರಾಳ, ಸಭಾಮಂಟಪ ಹಾಗೂ ಸುತ್ತಲೂ ಪ್ರಾಕಾರವನ್ನು ಹೊಂದಿದೆ.ರ್ಭಗೃಹದಲ್ಲಿ ವೆಂಕಟೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಂತರಾಳದಲ್ಲಿ ಗಣೇಶನ ಶಿಲ್ಪವಿದೆ. ಗರ್ಭಗೃಹ ಹಾಗೂ ಅಂತರಾಳದ ಬಾಗಿಲುಗಳ ಸರಳವಾಗಿವೆ. ಸಭಾಮಂಟಪದಲ್ಲಿ ಯಾಳಿ ಶಿಲ್ಪಗಳುಳ್ಳ ನಾಲ್ಕು ಕಂಬಗಳಿವೆ. ಇದರ ಬಲ ಪಾರ್ಶ್ವದಲ್ಲಿ ಆಂಜನೇಯನ ಶಿಲ್ಪವಿದೆ. ಸಭಾಮಂಟಪದ ಪ್ರವೇಶದ ಎರಡೂ ಬದಿಗೆ ವೈಷ್ಣವ ದ್ವಾರಪಾಲಕರ ಶಿಲ್ಪಗಳಿವೆ. ಗರ್ಭಗೃಹದ ಮೇಲೆ ದ್ವಾವಿಡ ಶೈಲಿಯ ಶಿಖರ, ಸಭಾಮಂಟಪದ ಮೇಲೆ ಕೈಪಿಡಿ ಗೋಡೆಯಿದೆ. ದೇವಾಲಯದ ಮುಂಭಾಗದಲ್ಲಿ ಗರುಡಗಂಬವಿದೆ. ದೇವಾಲಯಕ್ಕೆ ಕಣಶಿಲೆ, ಇಟ್ಟಿಗೆ, ಗಾರೆಯನ್ನು ಬಳಸಿ ಕಟ್ಟಲಾಗಿದೆ. ಈ ದೇವಾಲಯದ ವಾಸ್ತು ಮತ್ತು ಶೈಲಿಗಳನ್ನು ಗಮನಿಸಿದಾಗ ವಿಜಯನಗರ ಕಾಲದ್ದೆಂದು ಹೇಳಬಹುದು. ಒಟ್ಟಾರೆ ಈ ಅಧ್ಯಯನದ ಸಮೀಕ್ಷೆಯನ್ನು ನೋಡಲಾಗಿ ಈ ಕೋಟೆಯು ಹೊಸಪೇಟೆ ತಾಲೂಕಿನ ರಾಮಸಾಗರದಷ್ಟೇ ದೊಡ್ಡದಿದ್ದು ರಕ್ಷಣಾ ದೃಷ್ಟಿಯಿಂದ ತುಂಬಾ ಅನುಕೂಲವಾಗಿದೆ. ಇದೊಂದು ಸೈನಿಕ ನೆಲೆಯೆಂದು, ಗ್ರಾಮದ ರಕ್ಷಣೆಗೆ ಈ ಕೋಟೆಯನ್ನು ಕಟ್ಟಿರ ಬಹುದೆಂದು ಹೇಳಬಹುದು.