ಸೋಮವಾರದ ಬಾಗಿಲು: ವಿಜಯನಗರದಲ್ಲಿ ಕೃಷಿ ಪ್ರಧಾನ ಸಂಸ್ಕೃತಿ ಇತ್ತು. ಕೃಷಿಕರಿಗೆ ಸೋಮವಾರ ಬಿಡುವಿನ ದಿನ. ಅಂದು ಬೇಸಾಯಕ್ಕೆ ದನಗಳನ್ನು ಹೂಡುತ್ತಿರಲಿಲ್ಲ. ಆ ಸಂಸ್ಕೃತಿ ಇಂದಿಗೂ ಇದೆ. ಹಾಗಾಗಿ ಸೋಮವಾರ ಮಾರುಕಟ್ಟೆಯ ದಿನ. ಈ ಬಾಗಿಲನ್ನು ಸುತ್ತಮುತ್ತಲಿನ ವಿಶಾಲವಾದ ಬಯಲು ಜಾಗವಿದೆ. ಇಲ್ಲಿಯೆ ಕೃಷಿ ಮಾರುಕಟ್ಟೆ ಇತ್ತು

[1] ಎನ್ನುವ ಅಬ್ದುಲ್ ರಜಾಕ್ ಅಭಿಪ್ರಾಯವು ಮೇಲಿನ ಅಂಶಕ್ಕೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಕರಿಗೆ ಶ್ರೇಷ್ಠ ದಿನವಾದ ಸೋಮವಾರ ಈ ಪ್ರದೇಶದಲ್ಲಿ ಮಾರುಕಟ್ಟೆ ನಡೆಯುತ್ತಿದ್ದರಿಂದ ಬಾಗಿಲಿಗೆ ಈ ನಾಮ ಅನ್ವರ್ಥವಾಗಿರಲು ಸಾಧ್ಯತೆಗಳಿವೆ. ಕ್ರಿ.ಶ. ೧೫೪೫ರ ಸದಾಶಿವರಾಯನ ಶಾಸನವು ಮೇಲಿನ ಅಂಶವನ್ನು ಸಮರ್ಥಿಸುತ್ತದೆ (SII P No. 4, p.266) ಅಥವಾ ಸೋಮಯ್ಯ ಎನ್ನುವ ದೇವರ ಹೆಸರಿನಿಂದ ಈ ಬಾಗಿಲನ್ನು ಕರೆದಿರಬಹುದು. ಇದಕ್ಕೆ ಪೂರಕವೆಂಬಂತೆ ಈ ಬಾಗಿಲ ಮುಂಭಾಗದಲ್ಲಿ ಶೈವ ದೇಗುಲವಿದೆ.

ಈ ಬಾಗಿಲು ಸಿಂಘಾರದ ಹೆಬ್ಬಾಗಿಲಿನ ದಕ್ಷಿಣಭಾಗದಲ್ಲಿದೆ. ಇಲ್ಲಿಯೇ ಉತ್ತರದ ಬೆಟ್ಟದ ಮೇಲಿನ ಗುಂಡಿನಲ್ಲಿರುವ ವೀರಬುಕ್ಕರಾಯನ ಶಾಸನವು ಸೋಮವಾರ ಬಾಗಿಲು ಹೆಸರನ್ನು ಉಲ್ಲೇಖಿಸುತ್ತದೆ.[2] ಈ ಬಾಗಿಲು ಭಾಗಶಃ ಹಾಳಾಗಿದೆ. ಸುಮಾರು ೨೦ ಅಡಿ ಅಗಲ, ೨೦ ಅಡಿ ಎತ್ತರವಾಗಿರುವ ಬಾಗಿಲಿನ ಪಾರ್ಶ್ವದ ಗೋಡೆಗಳಲ್ಲಿ ಆಂಜನೇಯ, ಆನೆ, ಹಂಸ, ಗಣೇಶ, ಬಿಲ್ಲು ಬಾಣಗಳನ್ನು ಹಿಡಿದು ನಿಂತಿರುವ ವೀರನ ಉಬ್ಬುಗೆತ್ತನೆಗಳಿವೆ. ಮುಂಭಾಗದಲ್ಲಿ ದಕ್ಷಿಣಾಭಿಮುಖವಾಗಿರುವ ಶೈವ ದೇಗುಲವಿದೆ. ಇದರಲ್ಲಿ ಗರ್ಭಗೃಹ, ತೆರೆದ ಸಭಾಮಂಟಪಗಳಿವೆ. ಗರ್ಭಗೃಹದ ಪ್ರವೇಶದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರ ಉಬ್ಬುಗೆತ್ತನೆಗಳಿವೆ. ಸೋಮವಾರದ ಬಾಗಿಲು ಪೂರ್ವಾಭಿಮುಖವಾಗಿದೆ.

ಉದಯಗಿರಿ ಬಾಗಿಲು: ಕಮಲಾಪುರದಿಂದ ಕಂಪ್ಲಿಗೆ ಹೋಗುವ ರಸ್ತೆಯ ಬದಿಯಲ್ಲಿ ಇದನ್ನು ಎರಡು ಬೆಟ್ಟಗಳ ನಡುವಿನ ಕಣಿವೆಯನ್ನು ಬಳಸಿ ಕಟ್ಟಲಾಗಿದೆ. ಉದಯಗಿರಿಯಿಂದ ವಿಜಯನಗರಕ್ಕೆ ಬರುವ ಈ ಬಾಗಿಲನ್ನು ಬಳಸಿಕೊಂಡೇ ಬರಬೇಕು. ಹಾಗಾಗಿ ಇದಕ್ಕೆ ಉದಯಗಿರಿ ಬಾಗಿಲೆಂದೇ ಹೆಸರು ಬಂದಿದೆ. ವಿಠ್ಠಲ ದೇವಾಲಯದ ಗರ್ಭಗೃಹದ ಮುಂದಿನ ಮಂಟಪದಲ್ಲಿರುವ ಶಾಸನವು ಉದಯಗಿರಿ ಬಾಗಿಲನ್ನು ಉಲ್ಲೇಖಿಸುತ್ತದೆ.[3] ಪೂರ್ವಾಭಿಮುಖವಾಗಿರುವ ಈ ಬಾಗಿಲು ದೂರದಿಂದ ನೋಡಲು ಕಾಣದಂತೆ ಗೋಡೆಗಳನ್ನು ಮರೆಮಾಡಲಾಗಿದೆ. ಇತರೆ ಬಾಗಿಲುಗಳ ಲಕ್ಷಣಗಳನ್ನೇ ಇದು ಹೋಲುತ್ತದೆ. ಇಲ್ಲಿ ದೇವಾಲಯವು ಪಾಳು ಬಿದ್ದಿದೆ.

ಅರೆಶಂಕರ ಬಾಗಿಲು: ಕಮಲಾಪುರದಿಂದ ಆನೆಗೊಂದಿಗೆ ಹೋಗುವ ದಾರಿಯಲ್ಲಿ ಸು. ೪ ಕಿ.ಮೀ. ದೂರದಲ್ಲಿ ಈ ಬಾಗಿಲಿದೆ. ದಕ್ಷಿಣಾಭಿಮುಖವಾಗಿರುವ ಇದು ವಾಸ್ತವವಾಗಿ ಸಂಪೂರ್ಣ ಹಾಳಾಗಿದೆ. ಇದನ್ನು ತಳವಾರಘಟ್ಟದ್ ಬಾಗಿಲು, ಆನೆಗೊಂದಿ ಬಾಗಿಲು ಎಂತಲೂ ಕರೆಯುತ್ತಾರೆ. ಈಗ ಗೋಚರಿಸುವ ಬಾಗಿಲು ಎರಡು ಮಹಡಿಗಳನ್ನು ಹೊಂದಿದೆ. ಪ್ರವೇಶದ ಪಾರ್ಶ್ವದಲ್ಲಿ ಮಂಟಪಗಳಿವೆ. ಎ.ಜಿ.ಗ್ರೀನ್ ಲಾ ಅವರು ೧೫೦ ವರ್ಷಗಳ ಹಿಂದೆ ತೆಗೆದಿರುವ ಈ ಬಾಗಿಲಿನ ದೃಶ್ಯವು ಇತರೆ ಬಾಗಿಲುಗಳಂತೆಯೇ ದೊಡ್ಡ ಪ್ರಮಾಣದಲ್ಲಿರುವುದನ್ನು ತೋರಿಸುತ್ತದೆ. ಒಳಭಾಗದಲ್ಲಿ ಪೂರ್ವಾಭಿಮುಖವಾಗಿರುವ ಆಂಜನೇಯನ ದೇಗುಲವಿದೆ. ಇಲ್ಲಿ ಕಲ್ಲುಗೋಡೆ ಹಾಗೂ ಹಿಂದೂ ಮುಸ್ಲಿಂ ಶೈಲಿಯ ಕಿಟಕಿಗಳಿದ್ದವೆಂದು ತಿಳಿದುಬರುತ್ತದೆ.

ಒಂದನೇ ಪೆನಿಗೊಂಡ ಬಾಗಿಲು ಹೊರಬದಿ ಕೋಟೆಯ ಈ ಬಾಗಿಲು ಕಮಲಾಪುರದ ಆಗ್ನೇಯ ದಿಕ್ಕಿಗಿರುವ ಪಟ್ಟಾಭಿರಾಮ ದೇಗುಲಯದ ಹತ್ತಿರದಲ್ಲಿದೆ. ಇದು ಪೆನುಗೊಂಡದಿಂದ ವರದರಾಜಮ್ಮನ ಪಟ್ಟಣಕ್ಕೆ ಪ್ರವೇಶವನ್ನು ಕಲ್ಪಿಸುತ್ತದೆ. ವರದಾದೇವಿ ಅಚ್ಯುತರಾಯನ ಪಟ್ಟದರಸಿ. ಈಕೆಯ ನೆನಪಿಗಾಗಿ ಕಟ್ಟಿಸಿದ ಪಟ್ಟಣವೇ ವರದರಾಜಮ್ಮನ ಪಟ್ಟಣ. ವರದಾದೇವಿ ಪೆನುಗೊಂಡದವಳೆಂದು ಕಾಣುತ್ತದೆ. ಈ ಕಾರಣಗಳಿಂದಾಗಿ ಪೆನುಗೊಂಡ ಬಾಗಿಲೆಂದು ಕರೆದಿರಬಹುದು.

ಕ್ರಿ.ಶ. ೧೫೪೦ರ ಅಚ್ಯುತರಾಯನ ಶಾಸನದಲ್ಲಿ ಪೆನುಗೊಂಡ ಬಾಗಿಲು ಹಾಗೂ ಅಲ್ಲಿ ಪ್ರಸ್ತಾಪಿಸಿದ ರಘುನಾಥ ದೇವರ ಉಲ್ಲೇಖಗಳಿವೆ.[4] ಪೆನುಗೊಂಡ ಬಾಗಿಲಿಗೆ ಸಣ್ಣಕ್ಕೆಪ್ಪನ ಆಗಸೆ ಎಂದು ಸ್ಥಳೀಯರು ಅಭಿಪ್ರಾಯಿಸುವರು. ಬಾಗಿಲ ಹೊರಭಾಗದಲ್ಲಿ ಈಗಲೂ ಸಣ್ಣಕ್ಕಿ ವೀರಭದ್ರ ದೇವಾಲಯವಿರುವುದನ್ನು ನೋಡಬಹುದು. ಅದರ ಹೆಸರನ್ನೇ ಈ ಬಾಗಿಲಿಗೆ ಅನ್ವಯಿಸಿರುವರು. ಇದರ ಹಿಂಬದಿ ಮುಂಬದಿಗೆ ಸಾಲುಮಂಟಪಗಳು, ಮಧ್ಯದಲ್ಲಿ ಬೀದಿಯಿದೆ. ಇದನ್ನೇ ವರದರಾಜಮ್ಮನ ಬಜಾರು ಎಂದು ಕರೆಯುತ್ತಾರೆ. ಬಾಗಿಲು ಮತ್ತು ಕೋಟೆ ಗೋಡೆಗೆ ಹೊಂದಿಕೊಂಡು ಮೂರು ದೇವಾಲಯಗಳಿವೆ. ಅವುಗಳಲ್ಲಿ ಒಂದನ್ನು ಅಚ್ಯುತರಾಯನ ಕಾಲದಲ್ಲಿ ಕಟ್ಟಲಾದ ರಘುನಾಥದೇವಾಲಯವೆಂದು ಶಾಸನವು ಸ್ಪಷ್ಟವಾಗಿ ಹೇಳಿದರೂ ಸ್ಥಳೀಯರು ಮಾತ್ರ ಕಳ್ಳರ ಗುಡಿಯೆಂದೇ ಗುರುತಿಸುತ್ತಾರೆ. ಉತ್ತರಾಭಿಮುಖವಾಗಿರುವ ಈ ದೇಗುಲವು ಗರ್ಭಗುಡಿ ಮತ್ತು ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಯಾವುದೇ ಮೂರ್ತಿಗಳಿಲ್ಲ. ಇದರ ಸುತ್ತಲೂ ಗರ್ಭಗೃಹಕ್ಕಿಂತ ಕೆಳಮಟ್ಟದಲ್ಲಿ ನಿರ್ಮಿಸಿದ ಪ್ರದಕ್ಷಿಣಾಪಥವಿದೆ. ಎದುರು ಭಾಗದಲ್ಲಿ ಒಂದು ದೇವಾಲಯವಿದೆ. ಇದು ದಕ್ಷಿಣಾಭಿಮುಖವಾಗಿದ್ದು ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲು ತೋಳುಗಳಲ್ಲಿರುವ ವೈಷ್ಣವ ದ್ವಾರಪಾಲಕರಿಂದ ಇದು ವೈಷ್ಣವ ದೇವಾಲಯವೆಂದು ದೃಢಪಟ್ಟರೂ ಗರ್ಭಗೃಹ ಖಾಲಿಯಿದೆ. ರಘುನಾಥ ದೇವಾಲಯದ ಬಲ ಬದಿಗೆ ಕೋಟೆ ಬಾಗಿಲಿಗೆ ಹೊಂದಿಕೊಂಡಿರುವ ಚಿಕ್ಕದೇವಾಲಯದ ಗರ್ಭಗೃಹದಲ್ಲಿ ಇಲ್ಲಿಯನ್ನು ಕಡೆದಿರುವ ಪೀಠದ ಮೇಲೆ ಗಣೇಶನ ಭಗ್ನ ಶಿಲ್ಪವಿದೆ. ಹಾಗಾಗಿ ಇದು ಗಣೇಶನ ಗುಡಿಯೆಂದು ಖಚಿತವಾಗುವುದು.

ಎರಡನೇ ಪೆನುಗೊಂಡೆ: ಈ ಬಾಗಿಲು ಕಮಲಾಪುರದ ಆಗ್ನೇಯಕ್ಕೆ ಸು. ೨ ಕಿ.ಮೀ ಅಂತರದಲ್ಲಿದೆ. ಮೊದಲ ಪೆನುಗೊಂಡ ಬಾಗಿಲಿನ ಉತ್ತರಕ್ಕಿದೆ. ಪೆನುಗೊಂಡಕ್ಕೂ ವಿಜಯನಗರಕ್ಕೂ ನಿಕಟವಾದ ಸಂಬಂಧಗಳಿವೆ. ಪೆನುಗೊಂಡದಿಂದ ಬರುವವರು ಈ ಮಾರ್ಗವಾಗಿಯೇ ಹೋಗಬೇಕಿತ್ತು. ಹಾಗಾಗಿ ಇದಕ್ಕೆ ಪೆನುಗೊಂಡದ ಎರಡನೇ ಬಾಗಿಲೆಂದು ಇಲ್ಲಿ ಗುರುತಿಸಲಾಗಿದೆ.

ಕಳ್ಳರ ಗುಡಿಯ ಹತ್ತಿರ ಪೆನುಗೊಂಡ ಬೀದಿಯಿದೆ. ಇದರ ದಕ್ಷಿಣಕ್ಕೆ ಪೆನುಗೊಂಡ ಬಾಗಿಲು ಇರುತ್ತದೆ. ಪೆನುಗೊಂಡ ಬೀದಿಯ ಒಂದು ಮಾರ್ಗವು ಗುಮ್ಮಟದ ಬಾಗಿಲಿಗೆ ಹೋಗಿ ಅಲ್ಲಿಂದ ಭೀಮನ ಅಗಸಿಯ ಮೂಲಕ ಹಂಪಿ ನಗರದತ್ತ ಕರೆದೊಯ್ಯುತ್ತದೆ. ಪೆನುಗೊಂಡ ಬಾಗಿಲಿಗೆ ಹೊಂದಿಕೊಂಡ ಕೋಟೆಗೋಡೆ ಮಲಪನಗುಡಿ ಕೋಟೆ ಗೋಡಿಗೆ ಹತ್ತಿ ಕೊಂಡಿದ್ದೆಂದು ವಸುಂಧರಾ ಫಿಲಿಯೋಜಾ ಅಭಿಪ್ರಾಯಪಡುತ್ತಾರೆ.[5] ಪ್ರಸ್ತುತ ಪೆನುಗೊಂಡ ಬಾಗಿಲಿನಿಂದ ಪೆನುಗೊಂಡ ಕಮಲಾಪುರ ಕೆರೆಯ ಹಿಂಭಾಗದವರೆಗೆ ಕೋಟೆ ಗೋಡೆ ಗೋಚರಿಸುತ್ತದೆ. ಅಲ್ಲಿಂದಾಚೆಗೆ ಕೋಟೆ ಗೋಡೆಯ ಯಾವುದೇ ಅವಶೇಷಗಳಿಲ್ಲ. ಹಾಗೂ ಅವರ ಅಭಿಪ್ರಾಯವೂ ಸಮಂಜಸವಾಗಿಲ್ಲ. ಪೂರ್ವಾಭಿಮುಖವಾಗಿರುವ ಈ ಬಾಗಿಲು ಸುಮಾರು ೧೫ ಅಡಿ ಅಗಲ, ೨೦ ಅಡಿ ಎತ್ತರವಾಗಿದೆ. ಬಾಗಿಲ ತೋಳುಗಳಲ್ಲಿ ದ್ವಾರಪಾಲಕರ ಉಬ್ಬುಶಿಲ್ಪಗಳು ಲಲಾಟ ಬಿಂಬದ ಎರಡೂ ಬದಿಯ ಕೆಳಗೆ ಇಳಿ ಬಿದ್ದ ಪದ್ಮದ ಮೊಗ್ಗುಗಳಿವೆ. ಎಡ ಭಾಗದಲ್ಲಿ ಉಪಬಾಗಿಲು ಬಲ ಭಾಗದ ಗೋಡೆಯಲ್ಲಿ ಶಿವಲಿಂಗ, ನಂದಿ, ಅಂಜನಾಮುದ್ರೆಯಲ್ಲಿ ನಿಂತಿರುವ ರಾಜ (ಈತನನ್ನೇ ಪ್ರೌಢದೇವರಾಯ ಎಂದು ಕರೆದಿರುವರು). ರಾಜನ ಉಬ್ಬುಶಿಲ್ಪಗಳಿವೆ. ಪ್ರವೇಶದ ಎರಡೂ ಬದಿಗೆ ಕಟ್ಟೆಯ ಮೇಲೆ ಮಂಟಪಗಳನ್ನು ನಿರ್ಮಿಸಿರುವರು. ಹತ್ತಿರದಲ್ಲಿಯೇ ಆಂಜನೇಯ ಮತ್ತು ಗಣೇಶನ ದೇವಾಲಯಗಳಿವೆ.

ಕೋಟಿ ಶಂಕರ ದೇವರ ಬಾಗಿಲು: ಈ ಬಾಗಿಲು ಕಮಲಾಪುರದಿಂದ ಹಂಪಿಗೆ ಹೋಗುವ ರಸ್ತೆಯ ಬದಿಯಲ್ಲಿರುವ ಅಕ್ಕ-ತಂಗಿಯರ ಗುಡ್ಡದ ಹಿಂಬದಿಗೆ ಕೋಟಿ ಶಂಕರ ದೇವರ ಬಾಗಿಲಿದೆ. ಕೋಟೆಗೆ ಹೊಂದಿಕೊಂಡು ಶಂಕರ ದೇವರ ಗುಡಿ ಇದೆ. ಈ ಹಿನ್ನೆಲೆಯಲ್ಲಿ ಈ ಬಾಗಿಲಿಗೆ ಈ ಹೆಸರೇ ರೂಢೀಗತವಾಗಿ ಬಂದಿದೆ. ಪ್ರಸನ್ನ ವಿರೂಪಾಕ್ಷ ದೇವಾಲಯದ ಹತ್ತಿರವಿರುವ ಗುಂಡಿನ ಮೇಲಿರುವ[6] ಹಾಗೂ ಇದರ ಪಕ್ಕದಲ್ಲಿರುವ ಬಂಡೆಯ ಶಾಸನಗಳಲ್ಲಿ[7] ಕೋಟಿ ಶಂಕರ ದೇವರ ಬಾಗಿಲಿನ ಪ್ರಸ್ತಾಪವಿದೆ. ಈ ಬಾಗಿಲು ದಕ್ಷಿಣಾಭಿಮುಖವಾಗಿದ್ದು ಪ್ರವೇಶದ ಆರಂಭದಲ್ಲಿ ಬೃಹದಾಕಾರದ ಬಂಡೆಯ ಮೇಲೆ ಭೀಮಾನಾಕೃತಿಯನ್ನು ಕೆತ್ತಲಾಗಿದೆ. ಭಗ್ನಾವಸ್ಥೆಯಲ್ಲಿರುವ ಈ ಬಾಗಿಲು ಸು. ೧೦ ಅಡಿ ಅಗಲ ಮತ್ತು ೨೦ ಅಡಿ ಎತ್ತರವಾಗಿದೆ.

ಹೊದೆಯ ಬಾಗಿಲು: ಇದು ಉತ್ತರಾಭಿಮುಖವಾಗಿದ್ದು ಅರಮನೆ ಪ್ರದೇಶದಿಂದ ಮಾತಂಗ ಗುಡ್ಡಕ್ಕೆ ಹೋಗುವದಕ್ಕಾಗಿ ನಿರ್ಮಿಸಿರುವರು. ಮಾಲ್ಯವಂತ ಪರ್ವತದ ಪಶ್ಚಿಮಕ್ಕಿರುವ ಶಾಸನದಲ್ಲಿ ಹೊದೆಯ ಬಾಗಿಲು ವಿನಾಯಕನಿಗೆ ದಾನ ನೀಡಿದಂತೆ ಉಲ್ಲೇಖವಿದೆ.[8]

ಹೂವಿನ ಬಾಗಿಲು: ಕೋಟೆಯ ನೈರುತ್ಯ ದಿಕ್ಕಿನಲ್ಲಿ ಹೂವಿನ ಬಾಗಿಲಿದೆ. ದಕ್ಷಿಣಾಭಿಮುಖವಾಗಿರುವ ಇದು ನೇರ ಅಂತಃಪುರಕ್ಕೆ ಪ್ರವೇಶವನ್ನು ಕೊಡುತ್ತದೆ. ಸಂಡೂರು ತಾಲ್ಲೂಕಿನ ಹೊಸಮಲೆದುರ್ಗದ ರಾಮನ ದೇಗುಲದ ಶಾಸನದಲ್ಲಿ ಹೂವಿನ ಬಾಗಿಲ ಆಂಜನೇಯ ದೇವಾಲಯದ ಪೂಜಾರಿಯ ಪ್ರಸ್ತಾಪಗಳಿವೆ.[9] ಇದಕ್ಕೆ ಪೂರಕವೆಂಬಂತೆ ಹೂವಿನ ಬಾಗಿಲ ಮುಂಭಾಗದಲ್ಲಿ ಆಂಜನೇಯನ ಗುಡಿಯಿದೆ. ಇದು ವಿಜಯನಗರದ ಅರಸ ಮಲ್ಲಿಕಾರ್ಜುನನ ಅವಧಿಯಲ್ಲಿ ನಿರ್ಮಾಣಗೊಂಡಿದೆ.[10]

ದೂರದಿಂದ ಈ ಬಾಗಿಲು ಗೋಚರಿಸುವುದಿಲ್ಲ. ಸು. ೧೦ ಅಡಿ ಅಗಲ, ೨೦ ಅಡಿ ಎತ್ತರವಾಗಿರುವ ಇದರ ಲಲಾಟಬಿಂಬದ ಕೆಳ ಬದಿಗೆ ಇಳಿಬಿದ್ದ ಮೊಗ್ಗುಗಳಿವೆ. ಮುಂಭಾಗದಲ್ಲಿ ವಿಶಾಲವಾದ ಆವರಣವಿದೆ. ಇದು ಗರ್ಭಗೃಹ ಮತ್ತು ತೆರೆದ ಸಭಾಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಆಂಜನೇಯನ ಶಿಲ್ಪವಿದೆ. ಸಭಾಮಂಟಪದಲ್ಲಿರುವ ನಾಲ್ಕು ಕಂಬಗಳಲ್ಲಿ ಆನೆ, ಯಾಳಿ, ಆಂಜನೇಯ, ಗಣೇಶ ಇತ್ಯಾದಿ ಉಬ್ಬುಶಿಲ್ಪಗಳಿವೆ. ಗರ್ಭಗೃಹದ ಮೇಲೆ ಇಟ್ಟಿಗೆ ಗಾರೆಯಿಂದ ಶಿಖರವನ್ನು ನಿರ್ಮಿಸಲಾಗಿದೆ. ಸಭಾಮಂಟಪದ ಕೈಪಿಡಿ ಗೋಡೆಯಲ್ಲಿ ದೇವ ಕೋಷ್ಠಕಗಳಿವೆ.

ಕೊಠಾರದ ಬಾಗಿಲು: ಇದು ಕೋಟೆಯ ಈಶಾನ್ಯ ದಿಕ್ಕಿಗೆ ಇದೆ. ಪೂರ್ವಾಭಿಮುಖವಾಗಿರುವ ಈ ಬಾಗಿಲು ಇಂದು ಪೂರ್ಣ ಭಗ್ನಾವಸ್ಥೆಯಲ್ಲಿದೆ. ಕೋಷ್ಠಗಾರ ಎಂದರೆ ಕೊಟ್ಟಗಾರ, ಸಂಗ್ರಾಲಯ, ಖಜಾನೆ, ಕಣಜ ಎಂಬಿತ್ಯಾದಿ ಅರ್ಥಗಳಿವೆ. ಈ ಬಾಗಿಲ ಮೂಲಕ ಒಳಸಾಗಿದರೆ ಖಜಾನೆ, ಕಣಜಗಳಿದ್ದವೇನೋ? ಈ ಕಾರಣಕ್ಕಾಗಿ ಇದಕ್ಕೆ ಕೊಠಾರದ ಬಾಗಿಲೆಂದು ಕರೆದಿರಬೇಕು. ನಿಂಬಾಪುರದ ಕಪಿಲಾಶ್ರಮದ ಬಳಿಯ ಶಾಸನದಲ್ಲಿ ಈ ಬಾಗಿಲಿನ ಉಲ್ಲೇಖವಿದೆ.[11]

ಉಪ್ಪರಿಗೆ ಬಾಗಿಲು: ಇದು ವಿಟ್ಲಾಪುರ ಹಾಗೂ ನದಿಯಿಂದ ನಗರದೊಳಗೆ ಬರುವವರಿಗೆ ಪ್ರವೇಶವನ್ನು ನೀಡುತ್ತದೆ. ಇದನ್ನು ಎರಡು ಅಂತಸ್ತುಗಳಲ್ಲಿ ನಿರ್ಮಿಸಲಾಗಿದ್ದು, ಇದರ ಮುಂಭಾಗದಲ್ಲಿ ರಾಮನ ದೇವಾಲಯವಿದೆ.

ಜಡೆಯಶಂಕರ ದೇವರ ದಿಡ್ಡಿ: ಇದು ಕಮಲಾಪುರದಿಂದ ಹಂಪಿಗೆ ಹೋಗುವ ರಸ್ತೆ ಬದಿಯಲ್ಲಿರುವ ಅಕ್ಕ ತಂಗಿಯರ ಹಿಂಬದಿಗೆ ಇದೆ. ಶಾಸನದಲ್ಲಿ ಜಡೆಶಂಕರ ದೇವರ ದಿಡ್ಡಿಯ ಸ್ಥಳ ನಿರ್ದೇಶವನ್ನು ನೀಡುತ್ತದೆ.[12] ಉತ್ತರಾಭಿಮುಖವಾಗಿರುವ ಇದು ದೊಡ್ಡ ಕಂದಕದಲ್ಲಿದೆ.

ರೆಮ್ಮದಿಡ್ಡಿ: ಬೇಟೆಕಾರರ ಹಾಗೂ ಅರೆಶಂಕರ ಹೆಬ್ಬಾಗಿಲುಗಳ ಮಧ್ಯದ ಬೆಟ್ಟಗಳ ಕಣಿವೆಯಲ್ಲಿ ರೆಮ್ಮುದಿಡ್ಡಿ ಬಾಗಿಲಿದೆ. ಪೂರ್ವಾಭಿಮುಖವಾಗಿರುವ[13] ಇದು ಸಂಪೂರ್ಣ ಹಾಳಾಗಿದ್ದು, ಪ್ರಸ್ತುತ ಎರಡು ಮಂಟಪಗಳು ಮಾತ್ರ ಗೋಚರಿಸುತ್ತವೆ. ಇಲ್ಲಿರುವ ಬಂಡೆಯ ಮೇಲಿನ ಶಾಸನದಲ್ಲಿ ಈ ದಿಡ್ಡಿಯ ಉಲ್ಲೇಖವಿದೆ.[14]

ಹೂವಿನ ಬಾಗಿಲೂ ಕೋಟೆಯ ನೈರುತ್ಯ ದಿಕ್ಕಿನಲ್ಲಿ ಹೂವಿನ ಬಾಗಿಲಿದೆ. ದಕ್ಷಿಣಾಭಿಮುಖವಾಗಿರುವ ಇದು ನೇರ ಅಂತಃಪುರಕ್ಕೆ ಪ್ರವೇಶವನ್ನು ಕೊಡುತ್ತದೆ. ಸಂಡೂರು ತಾಲೂಕಿನ ಹೊಸಮಲೈದುರ್ಗದ ರಾಮನ ದೇಗುಲದ ಮುಂದಿರುವ ಶಾಸನದಲ್ಲಿ ಹೂವಿನ ಬಾಗಿಲ ವಿಜಯನಗರ ಆಂಜನೇಯ ದೇವಾಲಯದ ಪೂಜಾರಿಯ ಪ್ರಸ್ತಾಪಗಳಿವೆ. ಇದಕ್ಕೆ ಪೂರಕವೆಂಬಂತೆ ಹೂವಿನ ಬಾಗಿಲ ಮುಂಭಾಗದಲ್ಲಿ ಆಂಜನೇಯನ ಗುಡಿ ಇದೆ. ಇದು ವಿಜಯನಗರದ ಅರಸ ಮಲ್ಲಿಕಾರ್ಜುನ ಕ್ರಿ.ಶ. ೧೪೪೭-೬೬ನ ಅವಧಿಯಲ್ಲಿ ನಿರ್ಮಾಣಗೊಂಡಿದೆ.

ದೂರದಿಂದ ಈ ಬಾಗಿಲು ಗೋಚರಿಸುವುದಿಲ್ಲ. ೧೦ ಅಡಿ ಅಗಲ ೨೦ ಅಡಿ ಎತ್ತರವಾಗಿರುವ ಇದರ ಲಲಾಟಬಿಂಬದ ಕೆಳಬದಿಗೆ ಇಳಿಬಿದ್ದ ಮೊಗ್ಗುಗಳಿವೆ. ಮುಂಭಾಗದಲ್ಲಿ ವಿಶಾಲವಾದ ಆವರಣವಿದೆ. ಈ ಆವರಣದಿಂದ ಪೂರ್ವಕ್ಕೆ ಆಂಜನೇಯ ದೇವಾಲಯವಿದೆ. ಇದು ಗರ್ಭಗೃಹ ಹಾಗೂ ತೆರೆದ ಸಭಾಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಆಂಜನೇಯ ಶಿಲವಿದೆ. ಸಭಾಮಂಟಪದಲ್ಲಿರುವ ನಾಲ್ಕು ಕಂಬಗಳಲ್ಲಿ ಆನೆ,ಯಾಳಿ, ಆಂಜನೇಯ, ಗಣೇಶ ಇತ್ಯಾದಿ ಉಬ್ಬುಶಿಲ್ಪಗಳಿವೆ. ಗರ್ಭಗೃಹದ ಮೇಲೆ ಇಟ್ಟಿಗೆ ಗಾರೆಯಿಂದ ಶಿಖರವನ್ನು ನಿರ್ಮಿಸಲಾಗಿದೆ. ಸಭಾಮಂಟಪದ ಮೇಲಿರುವ ಕೈಪಿಡಿ ಗೋಡೆಯಲ್ಲಿ ದೇವಕೋಷ್ಠಗಳಿವೆ.

ಕೊತ್ತಳಗಳು

ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳ ಇಕ್ಕೆಲಗಳಲ್ಲಿ ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ, ಕೋಟೆ ಗೋಡೆಯ ಮೇಲೆ ನಿಂತು ಹೋರಾಟ ಮಾಡಲು ಅನುಕೂಲವಾಗುವಂತೆ ಮತ್ತು ಕೆಲವು ಗುಪ್ತ ಸ್ಥಳಗಳಲ್ಲಿ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಇವುಗಳ ಲಕ್ಷಣಗಳನ್ನು ಈಗಾಗಲೇ ಮೇಲೆ ತಿಳಿಸಲಾಗಿದೆ. ಇಲ್ಲಿ ಶಾಸನೋಕ್ತ ಮತ್ತು ಇತರೆ ಕೊತ್ತಳಗಳ ವಿವರಣೆಗಳನ್ನು ನೀಡಲಾಗಿದೆ.

ಪ್ರತಾಪ ಕೊತ್ತಳ: ಪ್ರತಾಪ ಕೊತ್ತಳವು ಕೋಟಿ ಶಂಕರ ಬಾಗಿಲು ಮುಂಭಾಗದಲ್ಲಿದ್ದು, ಅಕ್ಕ ತಂಗಿಯರ ಗುಂಡುಗಳ ಪಶ್ಚಿಮದ ಬಂಡೆಯ ಮೇಲಿನ ಶಾಸನವು ಇದನ್ನು ಗುರುತಿಸುತ್ತದೆ.[15] ಪ್ರತಾಪ ಎನ್ನುವುದು ವಿಜಯನಗರದ ಅರಸರುಗಳಿಗಿದ್ದ ಬಿರುದು.

ಸ್ವಾಮಿದ್ರೋಹರ ಗಂಡನ ಕೊತ್ತಳ: ಹಂಪಾದೇವಿ ದಿಡ್ಡಿ ಬಾಗಿಲು ಹಾಗೂ ಜಡೆಯಶಂಕರ ದೇವರ ದಿಡ್ಡಿ ಬಾಗಿಲುಗಳ ಮಧ್ಯದಲ್ಲಿರುವುದೇ ಸ್ವಾಮಿದ್ರೋಹರ ಗಂಡನ ಕೊತ್ತಳ. ಕೋಟೆ ಗೋಡೆಯಲ್ಲಿರುವ ಶಾಸನವು ಈ ಕೊತ್ತಳವನ್ನು ಸೂಚಿಸುತ್ತದೆ.[16]

ಮತಂಗದೇವರ ಕೊತ್ತಳ: ಹೊದೆಯ ಬಾಗಿಲ ಪಶ್ಚಿಮ ದಿಕ್ಕಿಗಿರುವುದೇ ಮತಂಗ ದೇವರ ಕೊತ್ತಳ. ಹಂಪಾದೇವಿ ದಿಡ್ಡಿಯ ಉತ್ತರಕ್ಕಿರುವ ಬಂಡೆ ಶಾಸನವು ಮತಂಗದೇವರ ಕೊತ್ತಳವನ್ನು ಹೆಸರಿಸುತ್ತದೆ.[17] ಮಾತಂಗಿ ವಿಜಯನಗರದ ಅರಸರ ಆರಾಧ್ಯ ದೇವತೆ. ಮಾತಂಗ ಪರ್ವತದ ಮೇಲೆ ಈ ದೇವತೆಯ ಗುಡಿ ಇದೆ.

ಮಳಲ ವಿನಾಯಕ ಕೊತ್ತಳ: ಇದು ಮತಂಗ ದೇವರ ಕೊತ್ತಳದ ಉತ್ತರ ದಿಕ್ಕಿಗಿದೆ. ಇಲ್ಲಿಯೇ ಕೋಟೆ ಗೋಡೆಯಲ್ಲಿರುವ ಶಾಸನವು ಮಳಲ ವಿನಾಯಕ ಕೊತ್ತಳವನ್ನು ಹೆಸರಿಸಿದೆ.[18]

ಜಲಸೇನ ದೇವರ ಕೊತ್ತಳ: ಇದು ಮಳಲ ವಿನಾಯಕ ಕೊತ್ತಳದ ಆಗ್ನೇಯ ದಿಕ್ಕಿಗಿದೆ. ಜಲಸೇನ ವಿಜಯನಗರ ಅರಸರು ಆರಾಧಿಸುತ್ತಿದ್ದ ದೇವರು. ಈ ಕೊತ್ತಳದ ಹೆಸರಿಸುವ ಶಾಸನವು ಉದ್ದಾನ ವೀರಭದ್ರ ದೇವಾಲಯದ ಪೂರ್ವದ ಕೋಟೆ ಗೋಡೆಯಲ್ಲಿದೆ.[19]

ಹಂಪಿಯ ಕೊತ್ತಳ: ಕೋಟಿ ಶಂಕರ ದೇವರ ಬಾಗಿಲಿನ ಪೂರ್ವ ದಿಕ್ಕಿಗಿದೆ. ಹಂಪಿ ವಿಜಯನಗರದ ಅರಸರ ರಾಜಧಾನಿ, ಇಂದು ಪರಸಿದ್ಧ ಪರವಾಸಿ ತಾಣ.

ಹನುಮನ ಕೊತ್ತಳ: ಹೊದೆಯ ಬಾಗಿಲಿನ ಆಗ್ನೇಯ ದಿಕ್ಕಿಗಿರುವುದೇ ಹನುಮನ ಕೊತ್ತಳ. ರಹನುಮನ ಇನ್ನೊಂದು ಹೆಸರು ಆಂಜನೇಯ. ರಾಮಾಯಣದಲ್ಲಿ ಶ್ರೀ ರಾಮಚಂದ್ರನ ಭಕ್ತ, ಸೇವಕ. ಹಂಪಿಯಲ್ಲಿ ಆಂಜನೇಯನ ಗುಡಿಗಳು ಸಾಕಷ್ಟಿವೆ.

ಶಂಕರ ದೇವರ ಕೊತ್ತಳ: ಈ ಕೊತ್ತಳವು ಹನುಮನ ಕೊತ್ತಳದ ಪೂರ್ವ ದಿಕ್ಕಿಗಿದೆ. ಶಂಕರ ದೇವರ ಕೊತ್ತಳವನ್ನು ಹೆಸರಿಸುವ ಶಾಸನವು ಈ ಕೊತ್ತಳದ ದಕ್ಷಿಣದ ಬಂಡೆಯ ಮೇಲಿದೆ.[20] ಶಂಕರ ದೇವರ ಹೆಸರನ್ನು ಈ ಕೊತ್ತಳಕ್ಕೆ ಇಡಲಾಗಿದೆ.

ಮದನ ಕೊತ್ತಳ: ಮತಂಗೇಶ್ವರ ದೇವರ ದಿಡ್ಡಿ ಬಾಗಿಲಿನ ಆಗ್ನೇಯ ದಿಕ್ಕಿಗಿರುವುದೇ ಮದನ ಕೊತ್ತಳ. ರಾಣಿವಾಸದ ಆವರಣದ ಉತ್ತರಕ್ಕೆ ಬೆಟ್ಟದ ಮೇಲೆ ನಾಲ್ಕು ಕಂಬಗಳುಳ್ಳ ಕಾವಲು ಗೋಪುರದ ಕೆಳಬಂಡೆಯ ಮೇಲಿನ ಶಾಸನದಲ್ಲಿ ಇದರ ಉಲ್ಲೇಖವಿದೆ.[21]

ಮೀಸರ ಗಂಡನ ಕೊತ್ತಳ: ಈ ಕೊತ್ತಳವು ಮದನ ಕೊತ್ತಳದ ಪೂರ್ವ ದಿಕ್ಕಿಗಿದೆ. ಹತ್ತಿರದ ಬಂಡೆಯ ಮೇಲೆ ಮೀಸರ ಗಂಡನ ಕೊತ್ತಳವೆಂದು ಕರೆದಿರುವುದು.[22]

ಆನೆಗೊಂದಿಯ ಕೊತ್ತಳ: ಈ ಕೊತ್ತಳವು ಸಿಂಘಾರದ ಹೆಬ್ಬಾಗಿಲಿನ ಉತ್ತರಕ್ಕಿರುವ ಬೆಟ್ಟದ ಮೇಲಿದೆ. ಆನೆಗುಂದಿ ವಿಜಯನಗರದ ಅರಸರ ಎರಡನೆಯ ರಾಜಧಾನಿ. ಈಗಲೂ ವಿಜಯನಗರದ ವಂಶಸ್ಥರು ಇಲ್ಲಿದ್ದಾರೆ. ಗಜಶಾಲೆಯ ಹಿಂಭಾಗದ ಬೆಟ್ಟದಲ್ಲಿರುವ ಬಂಡೆಯ ಮೇಲೆ ಆನೆಗುಂದಿ ಕೊತ್ತಳವೆಂದು ಕೆತ್ತಲಾಗಿದೆ.[23]

ಸೋಮಯ್ಯದೇವರ ಕೊತ್ತಳ: ಈ ಕೊತ್ತಳವು ಸಿಂಘಾರದ ಹಾಗೂ ಸೋಮವಾರದ ಬಾಗಿಲು ಮಧ್ಯಭಾಗದಲ್ಲಿದೆ. ಇಲ್ಲಿಯೇ ಉತ್ತರಕ್ಕಿರುವ ಬೆಟ್ಟದ ಮೇಲೆ ಸೋಮಯ್ಯ ದೇವರ ಕೊತ್ತಳವೆಂದು ಕರೆಯಲಾಗಿದೆ.[24] ಸೋಮಯ್ಯ ದೇವರ ಹೆಸರಿನಿಂದ ಅಥವಾ ಸೋಮವಾರ ಮಾರುಕಟ್ಟೆ ಸಂತೆ ನಡೆಯುವ ದಿನವೆಂದು, ಈ ಹೆಸರಿನಿಂದಲೇ ಕೊತ್ತಳಕ್ಕೆ ಸೋಮಯ್ಯದೇವರ ಕೊತ್ತಳವೆಂದು ಕರೆದಿರುವುದು.

ಕೋಟೆಯಲ್ಲಿ ನೀರಿನ ಪೂರೈಕೆ

ವಿಜಯನಗರದ ಕೋಟೆಯೊಳಗೆ ಉತ್ತಮವಾದ ನೀರಿನ ಸೌಕರ್ಯವಿದ್ದು ಇತಿಹಾಸಕಾರರಿಗೆ ತಿಳಿದಿರುವ ವಿಷಯವೆ. ಕೋಟೆಯಲ್ಲಿ ವಾಸಿಸುವ ಜನರ ದೈನಂದಿನ ಉಪಯೋಗಕ್ಕೆ ಹೊಲಗದ್ದೆ ತೋಟಗಳಿಗೆ ಮತ್ತು ಪ್ರವಾಸಿಗಳಿಗೆ ಒದಗಿಸಿದ ನೀರಿನ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಣೆಕಟ್ಟು, ಕಾಲುವೆ, ಕೆರೆ ಬಾವಿ ಅರವಟ್ಟಿಗಳನ್ನು ಕಟ್ಟಿಸಿದ್ದರು.

ಜನರಿಗೆ, ಪ್ರಾಣಿಗಳಿಗೆ ಮತ್ತು ವ್ಯವಸಾಯಕ್ಕೆ ನೀರಿನ ವ್ಯವಸ್ಥೆಯನ್ನು ಒದಗಿಸುವುದು ಒಂದು ಸಾಮಾಜಿಕ ಜವಾಬ್ದಾರಿಯಾಗಿತ್ತೆಂಬುದಕ್ಕೆ ಹಂಪಿಯ ಕಡಲೆಕಾಳು ಗಣೇಶನ ಗುಡಿಯ ಮುಂದಿರುವ ಶಾಸನವು ಮುಖ್ಯಸಾಕ್ಷಿಯಾಗಿತ್ತದು. ಕ್ರಿ.ಶ. ೧೪೧೧ರ ಪ್ರೌಢದೇವರಾಯನ ಶಾಸನದಲ್ಲಿ ಈತನ ಮಂತ್ರಿಯಾದ ಲಕ್ಷ್ಮೀಧರನು ಕೂಸಾಗಿದ್ದಾಗ ಅವನ ತಾಯಿ ಹಾಡಿ ಹಾಲೆರೆಯುತ್ತಾ ಕಿವಿಯಲ್ಲಿ ಹೇಳಿದ ಒಂದು ಪದ್ಯ ಹೀಗಿದೆ.[25]

ಕೆರೆಯಂ ಕಟ್ಟಿಸು ಬಾವಿಯಂ ಸವಸು ದೇವಗಾರಮಂ
ಮಾಡಿಸಜ್ಜೆರೆ ಯೊಳ್ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗ್ಗಿಬುಕೆಯಿ
ನಂಬಿದರ್ಗ್ಗೆರೆವೆಟ್ಟಾಗಿರು ಶಿಷ್ಟರಂ ಪೊರೆಯೆನುತ್ತಿಂ ತೆಲ್ಲವಂ
ಪಿಂದೆ ತಾಂಯೆರದಳ್ವಾಲೆರವಂದು ತೊಟ್ಟು ಕಿವಿಯೊಳ್
ಲಕ್ಷ್ಮೀಧರಾಮಾತ್ಯನಾ

ಅಣೆಕಟ್ಟು ಮತ್ತು ಕಾಲುವೆಗಳು: ವಿಜಯನಗರ ಪಟ್ಟಣದ ಪಕ್ಕದಲ್ಲಿಯೇ ಹರಿಯುತ್ತಿರುವ ತುಂಗಭದ್ರ ನದಿಗೆ ಅಣೆಕಟ್ಟನ್ನು ಕಟ್ಟಿ ಅಲ್ಲಿಂದ ಕಾಲುವೆ ಮುಖಾಂತರ ಕೋಟೆಯೊಳಗೆ ನೀರು ಹರಿಸಲಾಗಿತ್ತು. ಇಂದಿಗೂ ಅಂಥಹ ಕಾಲುವೆಗಳು ಅಸ್ತಿತ್ವದಲ್ಲಿರುವುದನ್ನು ಕಾಣಬಹುದು. ಮುಖ್ಯವಾದ ಕಾಲುವೆಗಳಲ್ಲಿ ವಿಜಯನಗರ ತುರ್ತಾ ಕಾಲುವೆಯೂ[26] ಒಂದು. ಇದನ್ನು ಶಾಸನಗಳು ಹಿರಿಯ ಕಾಲುವೆ ಎಂದು ಕರೆದಿವೆ.[27] ಈ ಕಾಲುವೆಯ ಅಣೆಕಟ್ಟಿನಿಂದ ಪ್ರಾರಂಭವಾಗಿ ೬.೨ ಕಿ.ಮೀ ದೂರದಲ್ಲಿ ಮಾತಂಗ ಪರ್ವತದ ಪೂರ್ವಕ್ಕೆ ಕಲ್ಲು ಬಂಡೆಯನ್ನು ಸೀಳಿಕೊಂಡು ಮುಂದೆ ಸಾಗುತ್ತದೆ. ಬಂಡೆಯನ್ನು ಒಡೆಸಿ ಕಾಲುವೆಯನ್ನು ಕಟ್ಟಿಸಿದ್ದು, ಶಾಸನಗಳಿಂದ ತಿಳಿಯುತ್ತದೆ. ಈ ಕಾಲುವೆಯ ಕೋಟೆಯೊಳಗಿನ ಉದ್ದಾನ ವೀರಭದ್ರ ದೇವಾಲಯದ ಹತ್ತಿರ ಹರಿದು ಕೃಷ್ಣಾಪುರದ ಪೇಟೆಗೆ ನೀರನ್ನು ಒದಗಿಸಿದೆ.[28] ಊಟದ ಕಾಲುವೆಯು ಮಹಾನವಮಿ ದಿಬ್ಬವಿರುವ ಆವರಣದ ಬಳಿ ರಸ್ತೆಯ ಎಡಕ್ಕೆ ಭೋಜನ ಶಾಲೆಯೆಂದು ಕರೆಯುವ ಸ್ಥಳದ ಬಳಿ ಹರಿದಿದೆ. ಇಲ್ಲಿ ಒಂದು ಚಿಕ್ಕ ಕಾಲುವೆಯ ದಂಡೆಯ ಮೇಲೆ ಹಸಿರು ಬಣ್ಣದ ಕಲ್ಲು ಚಪ್ಪಡಿಗಳನ್ನು ಜೋಡಿಸಿದೆ. ಚಪ್ಪಡಿಗಳ ಮಧ್ಯದಲ್ಲಿ ತಟ್ಟೆ ಮತ್ತು ಬಾಳೆ ಎಲೆಯ ಆಕಾರದ ತಗ್ಗು ಇದ್ದು ಸುತ್ತಲೂ ಬಟ್ಟಲಿನಾಕಾರದ ತಗ್ಗುಗಳಿವೆ. ಇವುಗಳನ್ನು ಊಟಕ್ಕೆ ಉಪಯೋಗಿಸುತ್ತಿದ್ದರೆಂಬುದು ಸ್ಥಳೀಯ ಪ್ರತೀತಿ, ಹಾಗಾಗಿ ಇದರ ಪಕ್ಕದಲ್ಲಿ ಹರಿದಿರುವ ಕಾಲುವೆಗೆ ಊಟದ ಕಾಲುವೆ ಎಂದು ಹೆಸರು ಬಂದಿದೆ. ಹೀಗೆ ತುರ್ತಾ ಹಾಗೂ ಊಟದ ಕಾಲುವೆಗಳು ಕೋಟೆಯೊಳಗಿನ ಜನರ ದಾಹವನ್ನು ಇಂಗಿಸಿವೆ.

ಕೆರೆಗಳು: ವಿಜಯನಗರದ ರಾಜಧಾನಿಯಲ್ಲಿ ಕೆರೆಗಳು ಬಹಳ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿವೆ. ಅರಸರು ಈ ಭಾಗದ ಮಳೆಯ ವೈಪರಿತ್ಯ ಸ್ವಭಾವಗಳನ್ನು ಪರಿಗಣಿಸಿ ಕೆರೆಗಳನ್ನು ನಿರ್ಮಿಸಿದ್ದಾರೆ.[29] ವಿಜಯನಗರ ಕೆರೆಗಳ ಬಗ್ಗೆ ಎಂ.ಎಲ್. ಸರಸ್ವತಿಯವರು, ಜಿ.ಎಸ್.ದೀಕ್ಷಿತ್, ಜಿ.ಆರ್. ಕುಪ್ಪುಸ್ವಾಮಿ, ಸಿ.ಟಿ.ಯಂ. ಕೊಟ್ರಯ್ಯ, ಡಾ.ವಾಸುದೇವನ್, ಎಂ.ಕೊಟ್ರೇಶ್ ಇವರು ಸಂಶೋಧನೆ ಮಾಡಿರುವರು. ರಾಜಧಾನಿಯ ಕೋಟೆಯ ಒಳಗೂ ನೀರಿನ ವ್ಯವಸ್ಥೆಗಾಗಿ ಕೆರೆಗಳನ್ನು ನಿರ್ಮಿಸಿರುವುದು ಶಾಸನಗಳಿಂದ ತಿಳಿದು ಬರುವ ಅಂಶ. ಇಲ್ಲಿ ಭೂಪತಿ ಕೆರೆ,[30] ಕಮಲಾಪುರದ ಕೆರೆ,[31] ಕೃಷ್ಣರಾಯ ಸಮುದ್ರಕೆರೆ,[32] ಕೋಟೆಯೊಳಗಿರುವ ಮುಖ್ಯ ಕೆರೆಗಳಾಗಿವೆ. ಇವುಗಳಲ್ಲಿ ಕಮಲಾಪುರದ ಕೆರೆ ಮಾತ್ರ ಉಳಿದುಕೊಂಡಿದೆ.

ಕೊಂಡಗಳು: ನಿಸರ್ಗದತ್ತ ಕಲ್ಲುಬಂಡಗಳನ್ನು ಕಡಿದು ನೀರಿನ ವ್ಯವಸ್ಥೆಗಾಗಿ ಕೊಂಡಗಳನ್ನು ನಿರ್ಮಿಸಿಕೊಂಡಿದ್ದರು. ಅವುಗಳಲ್ಲಿ ನರಸಿಂಹ ದೇವಾಲಯದ ಉತ್ತರಕ್ಕೆ ನದಿಯ ದಡದಲ್ಲಿರುವ ಸೀತಾಕೊಂಡ.[33] ಬೇಟೆಕಾರರ ಹೆಬ್ಬಾಗಿಲಿನ ಹಿಂದೆ ಇರುವ ಒರತೆಯಕೊಂಡ ಮುಖ್ಯವಾಗಿವೆ.[34]

ಬಂಡೆಯ ಮೇಲೆ ಪ್ರಕೃತಿ ನಿರ್ಮಿತ ಚಿಕ್ಕ ತೊಟ್ಟಿಯಾಕಾರದ ತಗ್ಗುಗಳನ್ನು ನೀರಿನ ಸಂಗ್ರಹಣೆಗಾಗಿ ಉಪಯೋಗಿಸಿಕೊಂಡಿದ್ದರು. ಇಂಥಹ ತೊಟ್ಟಿಗಳನ್ನು ರಾಜಧಾನಿಯ ಅನೇಕ ಭಾಗಗಳಲ್ಲಿ ಕಾಣಬಹುದು ಮತ್ತು ಕೆಲವು ತೊಟ್ಟಿಗಳನ್ನು ಸಮಾಜದ ಬಗ್ಗೆ ಕಾಳಜಿ ಇರುವವರು ಮಾಡಿಸಿರುವಂತೆ ಶಾಸನಗಳು ಹೇಳುತ್ತವೆ. ವಿರೂಪಾಕ್ಷ ತೇರುಬೀದಿಯಲ್ಲಿ ಕಂಪ್ಲಿ ಮಠದ ಪಕ್ಕದಲ್ಲಿರುವ ತೊಟ್ಟಿಯನ್ನು ಅಬರಾಜು ತಿಮ್ಮಪ್ಪ ಮಾಡಿಸಿದ.[35] ಕೋದಂಡರಾಮ ದೇವಾಲಯದ ಹತ್ತಿರವಿರುವ ತೊಟ್ಟಿಯನ್ನು ತುಳು ಬನವಾಸಿಯ ಮಗ ಕತ್ತೆಲಬಯ್ಯನು ಮಾಡಿಸಿದ.[36] ಮಾಲ್ಯವಂತ ಪರ್ವತದ ಈಶಾನ್ಯಕ್ಕೆ ತುರ್ತಾ ಕಾಲುವೆಯ ಬಲದಂಡೆಯ ಹತ್ತಿರ ದೊಡ್ಡ ಕಲ್ಲಿನೊಳಗೆ ತೊಟ್ಟಿಯನ್ನು[37] ಕಟ್ಟಿಸಿರುವಂತೆ ತಿಳಿದು ಬರುವುದು.

ಬಾವಿಗಳು

ಬಾವಿಗಳು ಮಾನವ ನಿರ್ಮಿತವಾದವು. ಇವುಗಳಲ್ಲಿ ಎರಡು ಪ್ರಕಾರಗಳಿವೆ, ಕುಡಿಯುವ ನೀರಿನ ಬಾವಿ ಮತ್ತು ಬಳಸುವ ನೀರಿನ ಬಾವಿಗಳೆಂದು. ವಿಜಯನಗರ ರಾಜಧಾನಿಯಲ್ಲಿ ನೂರಾರು ಬಾವಿಗಳು ಇದ್ದವಾದರು ಇಲ್ಲಿ ಶಾಸನಗಳಲ್ಲಿ ಬರುವ ಬಾವಿಗಳನ್ನು ಮಾತ್ರ ಹೇಳಲಾಗಿದೆ. ಮಾತಂಗ ಪರ್ವತದ ಹತ್ತಿರ ದೊಡ್ಡಬಾವಿ ಇದೆ. ಶಾಸನಗಳಲ್ಲಿ ಮಹಾದೇವಿ ಅಕ್ಕನ ಬಾವಿ ಮತ್ತು ಕೆಳಬಾವಿಯೆಂದು ಉಲ್ಲೇಖಿಸಿದೆ.[38] ಹೊದೆಯ ಬಾಗಿಲ ಉತ್ತರಕ್ಕೆ ಗುಡ್ಡದ ಪಕ್ಕದಲ್ಲಿರುವ ಬಾವಿಯನ್ನು ದೇವರಾಯನು ಕ್ರಿ.ಶ. ೧೪೧೧ ರಲ್ಲಿ ಕಟ್ಟಿಸಿದಂತೆ ಶಾಸನವು ಹೇಳುತ್ತದೆ.[39] ಸಿಂಘಾರದ ಹೆಬ್ಬಾಗಿಲಿನ ಈ ಶಾನ್ಯಕ್ಕೆ ಕಟ್ಟಿಗೆ ಅಹ್ಮದ್ ಖಾನನ ಧರ್ಮಶಾಲೆ ಶಾಸನವಿದೆ.[40] ಬೇಟೆಕಾರರ ಹೆಬ್ಬಾಗಿಲಿನ ಈಶಾನ್ಯಕ್ಕೆ ಲಿಂಗನಬಾವಿ ಮತ್ತು ರಂಗನಾಥನ ಬಾವಿಗಳಿವೆ.[41] ಇವುಗಳು ಕೋಟೆಯೊಳಗಿನ ಜನತೆಯ ಜೀವಸೆಲೆಯಾಗಿದ್ದವು.

ವಿದೇಶಿಯರು ಕಂಡ ವಿಜಯನಗರದ ಕೋಟೆ (Vijayanagara Fort as seen by Foreign Travellers)

ವಿಶ್ವವಿಖ್ಯಾತ ಹಂಪಿಗೆ ಕ್ರಿ.ಶ. ೧೪ನೆಯ ಶತಮಾನದಿಂದ ಇಂದಿನವರೆಗೂ ವಿದೇಶಿ ಪ್ರವಾಸಿಗರು, ಸಂಶೋಧಕರು, ವ್ಯಾಪಾರಿಗಳು, ಸಂದರ್ಶಕರು, ರಾಯಭಾರಿಗಳು ಬರುತ್ತಲೇ ಇದ್ದು, ಅವರು ತಮಗಾದ ಅನುಭವಗಳನ್ನು ದಾಖಲಿಸುತ್ತಲೇ ಬಂದಿದ್ದಾರೆ. ವಿಜಯನಗರದ ಸಮಕಾಲೀನ ಪಾಶ್ಚಾತ್ಯ ಬರಹಗಾರರು ಮತ್ತು ಪ್ರವಾಸಿಗರು ತಾವು ಇಲ್ಲಿ ಕಂಡುಂಡ ಅನುಭವ ಕಥನಗಳನ್ನು ತಮ್ಮ ಬುದ್ಧಿಮತ್ಯಕ್ಕೆ ಅನುಸಾರವಾಗಿ ಆತ್ಮಕಥನಗಳಲ್ಲಿ, ದಿನಚರಿಗಳಲ್ಲಿ ಬರೆದಿಟ್ಟಿದ್ದಾರೆ. ಅಂಥವರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದವರೆಂದರೆ ನೀಕೋಲೋ ಕೌಂಟಿ, ಅಬ್ದುಲ್ ರಜಾಕ್, ನಿಕೇಟಿನ್, ಡ್ಯೂರಾಟೆ ಬಾರ್ಬೋಸ್, ಡಾಮಾನಿಗೊ ಪೇಸ್, ವಾರ್ಥಿಮ್, ನ್ಯೂನಿಜ್ ಇವರುಗಳು ತಾವು ಕಂಡ ವಿಜಯನಗರದ ಕೋಟೆಯ ಬಗ್ಗೆ ಈ ಕೆಳಗಿನಂತೆ ವರ್ಣಿಸಿದ್ದಾರೆ.

ನೀಕೋಲೊ ಕೌಂಟಿ (Nicolo Conti) ಇವನು ದಕ್ಷಿಣ ಯುರೋಪಿನ ವೆನಿಸ್ ಪಟ್ಟಣದವನು. ಈತ ತನ್ನ ಹೆಂಡತಿಯೊಡನೆ ಕ್ರಿ.ಶ. ೧೪೨೦ರಲ್ಲಿ ಎರಡನೇ ದೇವರಾಯನ ಆಳ್ವಿಕೆಯಲ್ಲಿ ವಿಜಯನಗರಕ್ಕೆ ಬಂದಿದ್ದನು. ಈತನು ಕೋಟೆಯ ಬಗ್ಗೆ ಈ ಕೆಳಗಿನಂತೆ ಹೇಳಿದ್ದಾನೆ. ದೊಡ್ಡ ಪಟ್ಟಣವಾದ ವಿಜಯನಗರವು ಕಡಿದಾದ ಗುಡ್ಡಗಳ ಹತ್ತಿರ ಇದೆ. ಈ ಪಟ್ಟಣದ ಸುತ್ತಳತೆ[42] ಮೈಲುಗಳು. ಪಟ್ಟಣದ ಕೋಟೆ ಗೋಡೆಗಳನ್ನು ಗುಡ್ಡದ ಮೇಲೆಯೂ ಏರಿಸಲಾಗಿದೆ. ಆ ಪಟ್ಟಣದಲ್ಲಿ ೯೦,೦೦೦ ಸೈನಿಕರಿದ್ದಾರೆ.

“The great city of Bijienegalia is Situated near very steep mountains. The circumstance of the city is sixty miles, its walls are carried up to mountains and enclose the valleys at their foot, so that its Extent is there by increased. In this city there are ninty thousand men fit to bear arms” [43]

ಅಬ್ದುಲ್ ರಜಾಕ್ (Abdul Razak) : ಇವನು ಪರ್ಶಿಯಾದ ರಾಯಭಾರಿ. ಕ್ರಿ.ಶ. ೧೪೩ ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದನು. ಆತ ತನ್ನ ಪ್ರವಾಸ ಕಥನದ ಅನುಭವದಲ್ಲಿ ವಿಜಯನಗರದ ಕೋಟೆಯ ಬಗ್ಗೆ ಹೀಗೆ ಹೇಳುತ್ತಾನೆ. ಬಿಜನಗರದಂಥ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳು ಏಳು ಕೋಟೆಗಳು ಒಂದನ್ನೊಂದು ಆವರಿಸಿಕೊಂಡಿವೆ.

ಒಂದನೆಯ ದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಬಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿದ್ದಾರೆ. ಇವುಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಹೇಗೆ ಹೂತಿದ್ದಾರೆಂದರೆ ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದ ಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರವಾಗಿದೆ. ಇದನ್ನು ಬೆಟ್ಟದ ತುದಿಯ ಮೇಲೆ ಕಲ್ಲು ಮತ್ತು ಗಾರೆಯಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಗಳು ಬಹು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಾರೆ. ಯಾರನ್ನೂ ಸಂಪೂರ್ಣ ಪರೀಕ್ಷೆ ಮಾಡದೇ ಒಳಗೆ ಬಿಡುವುದಿಲ್ಲ. ಇವರು ಸುಂಕವ ಸೂಲಯನ್ನೂ ಮಾಡುತ್ತಾರೆ ಎರಡನೆಯ ಕೋಟೆ ವಿಶಾಲವಾದ ಜಾಗವನ್ನು ಆಕ್ರಮಿಸಿದೆ. ಇದರಂತೆ ನಾಲ್ಕು ಐದು ಮತ್ತು ಆರನೆಯ ಕೋಟೆಗಳಿವೆ. ಎಲ್ಲಾ ಕೋಟೆಗಳ ಮಧ್ಯದಲ್ಲಿ ಏಳನೆಯ ಕೋಟೆ ಆಕ್ರಮಿಸಿಕೊಂಡಿರುವ ಜಾಗ ಹೆರಾಸ್ ನಗರದ ಮಾರ್ಕೆಟ್ ಜಾಗದ ಹತ್ತರಷ್ಟು ವಿಶಾಲವಾಗಿದೆ. ಇಲ್ಲಿ ರಾಜನು ವಾಸ ಮಾಡುವ ಅರಮನೆಯಿದೆ. ಉತ್ತರ ದಿಕ್ಕಿನಲ್ಲಿ ಮೊದಲನೆ ಕೋಟೆಯ ಹೆಬ್ಬಾಗಿಲಿನಿಂದ ಹಿಡಿದು ದಕ್ಷಿಣದಲ್ಲಿರುವ ಹೆಬ್ಬಾಗಿಲಿಗೆ ಎರಡು ಪರಸಾಂಗುಗಳಷ್ಟು ದೂರವಿದೆ. ಪೂರ್ವದಿಂದ ಪಶ್ಚಿಮಕ್ಕೂ ಅಷ್ಟೇ ದೂರ.[44]

ಮೊದಲನೆಯ ಕೋಟೆಗೂ ಎರಡುಕೋಟೆಗೂ ಮಧ್ಯ ಇರುವ ಜಾಗದಲ್ಲಿ ಅಂದರೆ ಮೂರನೆ ಕೋಟೆವರೆಗೆ ಇರುವ ಜಾಗದಲ್ಲಿ ಬೇಸಾಯದ ಹೊಲಗಳೂ, ಮನೆಗಳೂ ಮತ್ತು ತೋಟಗಳಿವೆ. ಮೂರನೆ ಕೋಟೆಯಿಂದ ಎರಡನೆಯ ಕೋಟೆಯವರೆಗೆ ಅಸಂಖ್ಯಾತ ಜನಗಳನ್ನು ಅನೇಕ ಅಂಗಡಿಗಳನ್ನೂ ಅಂಗಡಿ ಬೀದಿಗಳನ್ನೂ ನೋಡಬಹುದು. ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ ಎದುರು ಬದಿರಾಗಿ ನಾಲ್ಕು ಅಂಗಡಿ ಬೀದಿಗಳಿವೆ. ಉತ್ತರದಲ್ಲಿ ರಾಯ್ ನ ಅರಮನೆಯ ಮಹಾದ್ವಾರವಿದೆ.

“The city of Bidinagar is such that the pupil of the eye has never seen a please like it, and the year of intelligence has never been informed that there existence any things to equal it in the world. It is built in such a manner that seven citadels and the same number of walls enclose each other. Around the first citadel are stones of the height of a man, one half of which sunk in the ground while the other half rises above it. These are fixed in beside other in such a manner that no horse of foot soldier could boldly is with ease approach the citadel”

“Other citadel appeared like round shape built on summit of mountain and constructed of stone and lime. It has very solid gates, the guards of which are constantly at their post and examine every thing with severe inspection.”[45]

“The seventh fortress is to north and is the place of the king. The space which separates the first fortress, is filled with the third fields and with houses and gardens. In the spece from the third to the seventh, one meets a numberless crowed of people, many shops and bazars. By the king, palace are four bazars, placed opposites each other. On the north is the portico of “Rai” Above each bazar is lofty arcade with magnificient gallery, but the audience hall of the king, palace is elevated above all the rest. The bazars are axtremely long and Broad.”

“Each elephant has a seperate compartment, the walls of which are solid, and roof compose of strong pieces of wood….. opposites the mint is the house of the Governor where are stationed twelve thousands soldiers on guards…..”[46]

ನಿಕಟಿನ್ (Niketin): ಈತ ರಷ್ಯಾದ ಪ್ರವಾಸಿ. ವ್ಯಾಪಾರಕ್ಕಾಗಿ ಕ್ರಿ.ಶ. ೧೪೭೦ ರಲ್ಲಿ ಭಾರತಕ್ಕೆ ಬಂದ. ಬೀದರ್ ನಲ್ಲಿ ನಾಲ್ಕು ವರ್ಷಗಳಿದ್ದು, ಬಹುಮನಿ ರಾಜ್ಯದ ಬಗ್ಗೆ ತನ್ನ ಅನುಭವಗಳನ್ನು ಹೇಳುತ್ತಾ ವಿಜಯನಗರದ ಬಗ್ಗೆಯೂ ಪ್ರಸ್ತಾಪಿಸಿದ್ದಾನೆ. ವಿಜಯನಗರದಲ್ಲಿ ಒಂದು ಲಕ್ಷ ಸೈನಿಕರು ಮತ್ತು ೫೦,೦೦೦ ಕುದುರೆಗಳುಳ್ಳ ಅಶ್ವದಳವೂ ಇದೆ. ಇಲ್ಲಿ ಹಿಂದೂ ಸುಲ್ತಾನನಾದ ಕದಮ್ ಬಹಳ ಬಲಶಾಲಿಯಾಗಿದ್ದಾನೆ. ಅವನಲ್ಲಿ ದೊಡ್ಡ ಸೈನ್ಯವಿರುವುದರಿಂದ ವಿಜಯನಗರದ ಸುತ್ತಲೂ ಮೂರು ಕೋಟೆಗಳಿವೆ. ಒಂದು ಬದಿಗೆ ನದಿ ಹರಿಯುತ್ತಿದೆ. ಇನ್ನೊಂದು ಬದಿಗೆ ದಟ್ಟವಾದ ಕಾಡು ಇದೆ.[47]

Vijayanagara city is surrounded by three Forts and intersected by a River, bordering on the side by a dreadful jungle and the other a dale, the town is impregnable.[48]

ಡ್ಯೂರಾಟೆ ಬಾರ್ಬೋಸ್ (Durate barbose) : ಇವನು ಕ್ರಿ.ಶ. ೧೫೧೪ರಲ್ಲಿ ಕೃಷ್ಣದೇವರಾಯನ ಆಳ್ವಿಕೆ ಅವಧಿಯಲ್ಲಿ ವ್ಯಾಪಾರಕ್ಕಾಗಿ ಭಾರತಕ್ಕೆ ಪೋರ್ಚುಗಲ್ಲಿನಿಂದ ಬಂದಿದ್ದನು. ವಿಜಯನಗರದ ಬಗ್ಗೆ ಹೇಳುವಾಗ ಕೋಟೆಯನ್ನು ಕುರಿತು ಪರ್ವತಗಳಿಂದ ೪೫ ರಹದಾರಿ ದೂರದಲ್ಲಿ ಬಿಜನಗರ ಎಂಬ ಬಹುದೊಡ್ಡ ನಗರವಿದೆ. ಅದು ವಿಪುಲ ಜನಸಂಖ್ಯೆ ಉಳ್ಳದ್ದೂ, ಒಂದು ಬದಿಯಲ್ಲಿ ಉತ್ತಮ ಗೋಡೆಯಿಂದ ಇನ್ನೊಂದು ಬದಿಯಲ್ಲಿ ನದಿಯಿಂದ ಮತ್ತೊಂದು ಬದಿಯಲ್ಲಿ ಪರ್ವತದಿಂದ ಸುತ್ತುವರೆಯಲ್ಪಟ್ಟಿದೆ. ನಗರವು ಸಮತಲ ನೆಲದ ಮೇಲಿದೆ ಎಂದು ದಾಖಲಿಸಿದ್ದಾನೆ.[49]

“Forty five leagues from these mountains, there is very large city, which is called Bijanagara, Very populars and surrounded on one side by a very good wall and another by river and on the another by mountain, The city is on a level ground……” “The King keeps at all times nine hundred elephants and more than twenty thousands houses, all are brought with his own money.”[50]

ಡಾಮಿನಿಗೊ ಪೇಸ್ (Domingo Paes) ಈತನು ಕ್ರಿ.ಶ. ೧೫೨೦ರಲ್ಲಿ ವಿಜಯನಗರಕ್ಕೆ ಭೇಟಿಕೊಟ್ಟ ಪೋರ್ಚ್ ಗೀಸ್ ಪ್ರವಾಸಿಗ. ವಿಜಯನಗರ ಕೋಟೆಯ ಬಗ್ಗೆ ಇಲ್ಲಿಯ ನಗರ ಮತ್ತು ಪಟ್ಟಣಗಳು ಕೋಟೆಗಳನ್ನು ಹೊಂದಿದ್ದು, ಅವು ಸ್ವಾವಲಂಬಿಯಾಗಿದ್ದು, ಸುಂದರವಾಗಿದೆ. ಪಶ್ಚಿಮಾ ಕರಾವಳಿಯಿಂದ ವಿಜಯನಗರಕ್ಕೆ ಮಾರ್ಗದ ಬಗೆಗೆ ಹೇಳುತ್ತಾ ಪ್ರಥಮ ಶ್ರೇಣಿ ಅರ್ಥಾತ್ ಬಯಲಿನಿಂದ ಮೇಲೆ ಸಾಗುವಾಗ ಮೊದಲು ಕಾಣುವ ಶ್ರೇಣಿಯನ್ನು ವರ್ಣಿಸುತ್ತಾ ಈ ಗುಡ್ಡಗಳಲ್ಲಿ ಆ ಬದಿಯಿಂದ ಮುಖ್ಯ ಪ್ರವೇಶ ಮಾರ್ಗವಿತ್ತು ಎಂದು ಹೇಳುತ್ತಾನೆ. ಇದನ್ನು ಸೇರಿದಂತೆ ಇಲ್ಲಿಯ ಗೋಡೆಯನ್ನು ರಾಜಾ ಕೃಷ್ಣ ಕಟ್ಟಿಸಿದನೆಂದು ಹೇಳುತ್ತಾನೆ.[51]

“Bisnaga (Hampi-Vijayanagara) is the capital of all the kingdom where the king always resides, inside the city, very beautiful rows of buildings made after their manner with flat roofs… and on the pillers are other images, yet more subordinable, between these images and pillars run a design of foliage.”[52]

ವಾರ್ಥಿಮಾ (Vartheme) : ವಿಜಯನಗರಕ್ಕೆ ಕ್ರಿ.ಶ. ೧೫೦೫ರಲ್ಲಿ ಬಂದ ಇಟಾಲಿಯನ್ ಪ್ರವಾಸಿಯಾಗಿದ್ದನು. ವಿಜಯನಗರವನ್ನು ಬಲ ಮತ್ತು ಭದ್ರ ಗೋಡೆಗಳುಲ್ಲ ಮಹಾನಗರವೆಂದು ವರ್ಣಿಸಿದ್ದಾನೆ. ಅದು ಗುಡ್ಡದ ಬದಿಯಲ್ಲಿ ಸ್ಥಾಪಿತವಾಗಿದೆ ಮತ್ತು ಅದರ ಸುತ್ತಳತೆ ೭ ಮೈಲು ಇದೆ. ಅದಕ್ಕೆ ಗೋಡೆಗಳ ಮುಮ್ಮಡಿ ವೃತ್ತಕವಿದೆ ಎಂದಿದ್ದಾನೆ.[53]

“A very large and strongly walled city, seven miles in circumference, well sheltered by mountains, very wealthy and well equipped city situated on a beautiful site and enjoying and excellent climate.”[54]

ನ್ಯೂನಿಜ್ (Nuniz) ಪೋರ್ಚಗೀಸ್ ಪ್ರವಾಸಿಯಾದ ಈತನು ಕ್ರಿ.ಶ. ೧೫೩೫ ರಲ್ಲಿ ಅಂದರೆ ಅಚ್ಯುತದೇವರಾಯನ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ್ದನು. ೨ನೇ ಹರಿಹರನ ಉತ್ತರಾಧಿಕಾರಿ ಹೊಸ ಗೋಡೆಗಳು ಮತ್ತು ಗೋಪುರಗಳನ್ನು ಕಟ್ಟಿ ಆದರೆ ವ್ಯಾಪ್ತಿಯನ್ನು ವಿಸ್ತರಿಸಿ ಮತ್ತು ಕೋಟೆಗಳಿಗೆ ಇನ್ನು ಹೆಚ್ಚು ಸುತ್ತಗಳನ್ನು ಕಟ್ಟಿಸಿ ವಿಜಯನಗರ ಪಟ್ಟಣವನ್ನು ಬಹಳ ಅಭಿವೃದ್ಧಿ ಪಡಿಸಿದನೆಂದು ಹೇಳಿದ್ದಾನೆ.[55]

“His Chronick is more historical than descriptive of the empire or its capital. He laboured to gather full History of Vijayanagara empire right from the days of its foundation by Harihara and his brothers. He says, it was best provided city in the world.”[56]

[1] ಬಾಲಸುಬ್ರಹ್ಮಣ್ಯ. ಅನುವಾದ ೨೦೦೦. ಮರೆಯಲಾಗದ ಮಹಾಸಾಮ್ರಾಜ್ಯ, ಪು. ೩೫೦ ಹಂಪಿ ಕನ್ನಡ ವಿಶ್ವವಿದ್ಯಾಲಯ

[2] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ. ಪು. ೨೪೩

[3] ಅದೇ, ಪು. ೧೪೧

[4] ಅದೇ, ಪು. ೨೩೮-೩೯

[5] ವಸುಂಧರಾ ಫಿಲಿಯೋಜಾ. ೧೯೮೨. ಅಳಿದುಳಿದ ಹಂಪೆ, ಪು. ೧೦೪ ಬೆಂಗಳೂರು ಮಾನಸೊಲ್ಲಾಸ ಪ್ರಕಾಶನ

[6] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ. ಪು. ೧೮೯

[7] ಅದೇ, ಪು. ೧೮೯

[8] Supra INS, No. 124, Pp-23, 24

[9] ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧, ಪು. ೨೦೩. ಹಂಪಿ ಕನ್ನಡ ವಿಶ್ವವಿದ್ಯಾಲಯ.

[10] ಹೂವಿನ ಬಾಗಿಲ ಮುಂದಿರುವ ಆಂಜನೇಯ ದೇವಾಲಯದ ಗರ್ಭಗೃಹದ ಪ್ರವೇಶದ್ವಾರ ಪಾರ್ಶ್ವಗಳಲ್ಲಿಯ ಬಾಗಿಲ ತೊಳುಗಳಲ್ಲಿರುವ ಶಾಸನದಲ್ಲಿ

[11] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೨೮೨

[12] ಅದೇ, ಪು. ೧೮೮

[13] ಅದೇ, ಪು. ೧೮೬

[14] ಅದೇ, ಪು. ೨೭೦

[15] ಅದೇ, ಪು, ೧೮೯

[16] ಅದೇ, ಪು. ೧೮೮

[17] ಅದೇ, ಪು. ೧೮೫

[18] ಅದೇ, ಪು, ೧೮೫

[19] ಅದೇ, ಪು, ೧೨೦

[20] ಅದೇ, ಪು. ೨೧೫

[21] ಅದೇ, ಪು. ೨೧೫

[22] ಅದೇ, ಪು. ೨೧೬

[23] ಅದೇ, ಪು. ೨೪೫

[24] ಅದೇ, ಪು. ೨೪೨

[25] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೫೬

[26] ಅದೇ, ಪು. ೧

[27] ಅದೇ, ಪು. ೮೨

[28] ಅದೇ, ಪು. ೮೩

[29] ಕೊಟ್ರೇಶ್, ಎಂ. ೧೯೯೭. ವಿಜಯನಗರ ಕೆರೆಗಳು, ವಿಜಯನಗರ ಸಾಂಸ್ಕೃತಿಕ ಆಯಾಮಗಳು, ಪು. ೮೨. ಆನೆಗೊಂದಿ ಹೊಸಪೇಟೆ, ಶ್ರೀ ವಿದ್ಯಾ ವಿಜಯನಗರ ಹಂಪಿ ಹೆರಿಟೇಜ್ ಟ್ರಸ್ಟ್

[30] ಚನ್ನಬಸಪ್ಪ, ಎಸ್. ಪಾಟೀಲ್. ೧೯೬ ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ ವಿಜಯನಗರ ಅಧ್ಯಯನ ಸಂಪುಟ ೧, ಪು. ೮೨. ಮೈಸೂರು ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ.

[31] ಅದೇ, ಪು. ೬೩

[32] ಅದೇ, ಪು. ೬೩

[33] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೬೮

[34] ಅದೇ, ಪು.೮೭

[35] ಅದೇ, ಪು. ೯೨

[36] ಅದೇ, ಪು. ೬೮

[37] ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ, ಪೂರ್ವೋಕ್ತ. ಪು. ೬೪

[38] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಪೂರ್ವೋಕ್ತ, ಪು. ೯೩

[39] ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ, ಪೂರ್ವೋಕ್ತ. ಪು. ೬೫

[40] SII ix (pt II) No. 447

[41] ೫೯ ಶಾಸನಗಳಲ್ಲಿ ಕಂಡಂತೆ ವಿಜಯನಗರ ಪಟ್ಟಣದ ನೀರಿನ ವ್ಯವಸ್ಥೆ, ಪೂರ್ವೋಕ್ತ. ಪು. ೬೫

[42] ೨೧ ಬಾಲಸುಬ್ರಹ್ಮಣ್ಯ. ಅನುವಾದ ೨೦೦೦. ಮರೆಯಲಾಗದ ಮಹಾಸಾಮ್ರಾಜ್ಯ ಪು. ೩೨೫ ಹಂಪಿ ಕನ್ನಡ ವಿಶ್ವವಿದ್ಯಾಲಯ

[43] Major Indian in the 15th Century Kaklayuts London 1857, P-12

[44] ಅದೇ, ಪು. ೨೫೦

[45] ನಾಗೇಗೌಡ, ಎಚ್.ಎಲ್. ೧೯೯೬. ಪ್ರವಾಸಿ ಕಂಡ ಇಂಡಿಯಾ, ಪು. ೧೫. ಮೈಸೂರು, ಮೈಸೂರು ವಿಶ್ವವಿದ್ಯಾಲಯ

[46] Suresh K.M. 1993, Sculptural Art of Hampi Pp-9

[47] ಅಪರಂಜಿ, ಎನ್.ಆರ್. ೧೯೮೨. ಕರ್ನಾಟಕದ ಇತಿಹಾಸ ಪು. ೧೭೪. ಗದಗ ವಿಜಯ ಬುಕ್ ಡಿಪೊ

[48] Sewell Robert 1962 Forgotten P-138. New Delhi.

[49] ಸದಾನಂದ ಕನವಳ್ಳಿ. ಅನುವಾದ, ೧೯೨. ಮರೆತು ಹೋದ ಮಹಾಸಾಮ್ರಾಜ್ಯ ವಿಜಯನಗರ, ಪು. ೧೩೮. ಹಂಪಿ ಕನ್ನಡ ವಿಶ್ವವಿದ್ಯಾಲಯ

[50] ಅದೇ, ಪು. ೧೨೯

[51] ಅದೇ, ಪು. ೧೭೬

[52] ಅದೇ, ಪು. ೨೪೩, ೨೭೭

[53] ಅದೇ, ಪು. ೧೨೭

[54] ಅದೇ, ಪು. ೧೮

[55] ಅದೇ, ಪು. ೫೪

[56] ಅದೇ, ಪು. ೩೦೧, ೩೦೩