ಬಳ್ಳಾರಿ ಜಿಲ್ಲೆಯ ಇತಿಹಾಸ ಆದಿಮಾನವನಿಂದ ಪ್ರಾರಂಭವಾಗುತ್ತದೆ. ಈ ಮಾನವನು ನಾಗರೀಕ ಜೀವನವನ್ನು ಆರಂಭಿಸುತ್ತಿದ್ದಂತೆ ಇವನಲ್ಲಿ ಜೀವಿತ ಪ್ರಜ್ಞೆ ಬೆಳೆಯಿತು. ಆಗ ಸಮುದಾಯದೊಂದಿಗೆ ತನ್ನ ಬದುಕನ್ನು ರೂಢಿಸಿಕೊಂಡು, ಜತೆಜತೆಗೆ ತನ್ನ ಮತ್ತು ಸಮುದಾಯದ ಲೌಕಿಕ ಸಂಪತ್ತನ್ನು ಹೆಚ್ಚಿಸುತ್ತಾ ಹೋದನು. ಆಗ ಸಹಜವಾಗಿ ಇದರ ರಕ್ಷಣೆಗಾಗಿ ಕೋಟೆ ಕಟ್ಟಿಕೊಳ್ಳುವ ಸಂದರ್ಭ ಒದಗಿ ಬಂತು. ಈ ರೀತಿಯ ಕೋಟೆಮ್ ಕಟ್ಟಡಗಳಂತಹ ಅವಶೇಷಗಳನ್ನು ಜಿಲ್ಲೆಯ ಪ್ರಾಚೀನ ನೆಲೆಗಳಾದ ಸಂಗನಕಲ್ಲು, ತೆಕ್ಕಲಕೋಟೆ ಮುಂತಾದೆಡೆಗಳಲ್ಲಿ ಕಾಣಬಹುದು. ತದನಂತರ ರಾಜ್ಯಗಳ ಸ್ಥಾಪನೆಯಾದ ಮೇಲೆ, ಆಳುವ ಅರಸರು ಕೋಟೆಗಳನ್ನು ಕಟ್ಟಿಸಿದರು. ಹೀಗೆ ಆರಂಭವಾದ ಕೋಟೆಗಳ ನಿರ್ಮಾನ ಕಾರ್ಯ ಈ ಜಿಲ್ಲೆಯಲ್ಲಿ ಕ್ರಿ.ಶ. ೯ನೇ ಶತಮಾನದಿಂದ ೧೯ನೆಯ ಶತಮಾನದವರೆಗೆ ನಿರಂತರವಾಗಿ ನಡೆದುದು ಇತಿಹಾಸ ಮತ್ತು ಕೋಟೆಗಳ ಅಧ್ಯಯನದಿಂದ ತಿಳಿಯುತ್ತದೆ. ನಿರ್ಮಾಣಗೊಂಡ ಎಲ್ಲಾ ಕೋಟೆಗಳು ಈ ಜಿಲ್ಲೆಯಲ್ಲಿ ಉಳಿದಿಲ್ಲ. ಕೆಲವು ಸಂಪೂರ್ಣ ನಾಶವಾಗಿವೆ. ಅವುಗಳಲ್ಲಿ ಕೋಳೂರು, ಕೊಟ್ಟೂರು, ಕೋಗಳಿ, ಹೂವಿನಹಡಗಲಿ, ಮಾಗಳ, ಕುರವತ್ತಿ ಕೋಟೆಗಳು ಮುಖ್ಯವಾಗಿವೆ. ಕೆಲವು ಪದೇ ಪದೇ ದುರಸ್ಥಿ ಇಲ್ಲವೆ ಬಲಪಡಿಸಿರುವುದರಿಂದ ಮೂಲ ರಚನೆಯಲ್ಲಿ ಬದಲಾವಣೆ ಕಂಡಿವೆ. ಅವುಗಳೆಂದರೆ ಉಚ್ಚಂಗಿದುರ್ಗ, ಬಳ್ಳಾರಿ ಮತ್ತು ಕುರುಗೋಡಿನವು. ಕೋಟೆಗಳಿದ್ದ ಸ್ಥಳಗಳಲ್ಲಿಯೇ ನಂತರದ ಅರಸರು ವಿಶಾಲವಾದ ಕೋಟೆಗಳನ್ನು ಹೊಸ ವಿನ್ಯಾಸದೊಂದಿಗೆ ಕಟ್ಟಿರುವುದರಿಂದ ಮೊದಲಿದ್ದ ಕೋಟೆಗಳ ರೂಪುರೇಷೆಗಳು ಸಂಪೂರ್ಣವಾಗಿ ಅಳಿಸಿಹೋಗಿವೆ. ಹಂಪಿ ಕೋಟೆ ಇದಕ್ಕೆ ಉತ್ತಮ ಉದಾಹರಣೆ.

ಈ ಜಿಲ್ಲೆಯಲ್ಲಿ ಜಲ, ಸ್ಥಳ ಮತ್ತು ಗಿರಿದುರ್ಗಗಳೆಂಬ ಮೂರು ಪ್ರಕಾರದ ಕೋಟೆಗಳು ಮಾತ್ರ ಕಂಡುಬರುತ್ತವೆ. ಇವುಗಳನ್ನು ರಕ್ಷಣಾದೃಷ್ಟಿಯಿಂದ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಕಟ್ಟಲಾಗಿದೆ. ನದಿಯ ದಂಡೆಯ ಮೇಲೆ ನೀರಿನಿಂದ ಸುತ್ತುವರೆದಿರುವ ಕೋಟೆಗಳನ್ನು ಇಲ್ಲಿ ಜಲದುರ್ಗವೆಂದು ಪರಿಗಣಿಸಲಾಗಿದೆ. ನದಿ ಹರಿಯುವ ಬದಿಯಿಂದ ಈ ಕೋಟೆಗಳೆಡೆಗೆ ಹೋಗಲು ವೈರಿಗಳಿಗೆ ಸಾಧ್ಯವಾಗುವುದಿಲ್ಲ. ನಡಿವಿ, ಹಲವಾಗಿಲು, ಕೆಂಚನಗುಡ್ಡದ ಕೋಟೆಗಳು ತುಂಗಭದ್ರಾ ನದಿಯಿಂದ ಸುತ್ತುವರೆದ ಜಲದುರ್ಗಗಳಿಗೆ ನಿದರ್ಶನಗಳಾಗಿವೆ. ನಡಿವಿ ಜಲದುರ್ಗ ಅಭೇದ್ಯವಾಗಿರುವುದರಿಂದ ಸುಸ್ಥಿತಿಯಲ್ಲಿದೆ. ಕೋಟೆಗಳ ರೂಪುರೇಷೆಗಳು ಬಹುತೇಕ ಅವುಗಳನ್ನು ಕಟ್ಟಿರುವ ಸ್ಥಳವನ್ನವಲಂಬಿಸಿವೆ. ನೆಲದ ಮೇಲೆ ಕಟ್ಟಿದ ದುರ್ಗಗಳು ನಿಯಮಿತವಾಗಿ ಆಯತ, ಚೌಕ, ವೃತ್ತಾಕಾರದಲ್ಲಿವೆ. ಇನ್ನೂ ಕೆಲವು ನಿರ್ದಿಷ್ಟ ಆಕಾರ ಹೊಂದಿಲ್ಲ. ತೆಕ್ಕಲಕೋಟೆ, ಕೃಷ್ಣಾನಗರ, ಹಂಪಾಪಟ್ಟಣ, ಹ್ಯಾರಡದ ಈ ಸ್ಥಳ ದುರ್ಗಗಳು ಯಾತಾಕಾರವಾಗಿವೆ. ಹರಪನಹಳ್ಳಿ, ಹನಸಿ, ಹೊಳಲು ಕೋಟೆಗಳು ವೃತ್ತಾಕಾರದಲ್ಲಿದೆ. ಬೆಟ್ಟಗಳ ಆಕಾರಕ್ಕೆ ತಕ್ಕಂತೆ ಕಟ್ಟಿರುವ ಗಿರಿದುರ್ಗಗಳನ್ನು ಅರ್ಧಭಾಗ ನೆಲದ ಮೇಲೆ ಇನ್ನರ್ಧ ಭಾಗ ಬೆಟ್ಟದ ಮೇಲೆ ಕಟ್ಟಲಾಗಿದೆ. ಇಲ್ಲಿ ಆಳ್ವಿಕೆ ಮಾಡಿದ ಬಹುಪಾಲು ಪಾಳೆಯಗಾರರು ತಮ್ಮ ರಾಜಧಾನಿಯನ್ನು ದುರ್ಗಮವಾದ ಗುಡ್ಡ ಅಥವಾ ಬೆಟ್ಟದ ಮೇಲೆ ಕಟ್ಟಿಕೊಂಡಿರುತ್ತಿದ್ದರು. ಕಾರಣ ಶತ್ರುಗಳಿಂದ ರಕ್ಷಣೆ ಪಡೆಯಲು ಇವು ಸೂಕ್ತ ಸ್ಥಳಗಳಾಗಿದ್ದವು. ಇಂಥಹ ಗಿರಿದುರ್ಗಗಳನ್ನು ಉಚ್ಚಂಗಿದುರ್ಗ, ಕುರುಗೋಡು, ದರೋಜಿ, ಹೊಸಮಲೆ, ಬಳ್ಳಾರಿ, ಕರಡಿದುರ್ಗ, ಬಂಡ್ರಿ, ಗುಡೇಕೋಟೆ, ಜರಿಮಲೆ, ಪಾಲಯ್ಯನ ಕೋಟೆ, ತಂಬ್ರಹಳ್ಳಿ ಮುಂತಾದ ಕಡೆ ನೋಡಬಹುದು. ಹಂಪಿ ಕೋಟೆಯು ಜಲ, ಸ್ಥಳ ಮತ್ತು ಗಿರಿದುರ್ಗಗಳ ಲಕ್ಷಣಗಳನ್ನು ಮೈಗೂಡಿಸಿಕೊಂಡಿದೆ.

ಕೋಟೆಗಳನ್ನು ಹಲವು ಸುತ್ತುಗಳಲ್ಲಿ ಕಟ್ಟಿಕೊಂಡಿದ್ದರು. ಚಿಕ್ಕಕೋಟೆಗಳಲ್ಲಿ ಒಂದು ಎರಡು ಸುತ್ತುಗಳಿದ್ದರೆ, ದೊಡ್ಡ ಕೋಟೆಗಳು ಎರಡಕ್ಕಿಂತ ಹೆಚ್ಚು ಸುತ್ತುಗಳನ್ನು ಹೊಂದಿದ್ದವು. ಕೋಟೆಯ ಒಂದೊಂದು ಸುತ್ತು ವೈರಿಯ ದಾಳಿಗೆ ತುತ್ತಾಗಿ ಅವನ ವಶವಾದಾಗ, ಹಿಂದಕ್ಕೆ ಸರಿಯುತ್ತಾ ಒಳಕೋಟೆಗಳಲ್ಲಿ ರಕ್ಷಣೆ ಪಡೆಯುವ ಉದ್ದೇಶಕ್ಕಾಗಿ ಸುತ್ತುಗಳು ನಿರ್ಮಾಣಗೊಂಡಿವೆ. ವೈರಿಯು ಅಂತಿಮ ಸುತ್ತಿನ ಕೋಟೆಯು ವಶವಾಗುವವರೆಗೂ ಕಾದಾಡಬೇಕಾಗುತ್ತಿತ್ತು. ಇಂತಹ ಎರಡಕ್ಕಿಂತ ಅಧಿಕ ಸುತ್ತುಗಳನ್ನು ಬಳ್ಳಾರಿ, ಹಂಪಿ, ಉಚ್ಚಂಗಿದುರ್ಗ ಮತ್ತು ವೀರದುರ್ಗಗಳಲ್ಲಿ ಕಾಣಬಹುದು. ಬಳ್ಳಾರಿ ಮತ್ತು ಉಚ್ಚಂಗಿದುರ್ಗದ ಕೋಟೆಯ ಹೊರಸುತ್ತು ಬೆಟ್ಟದ ಬದಿಯಲ್ಲಿರುವ ಊರನ್ನು ಸುತ್ತುವರೆದಿದೆ. ಉಳಿದ ಸುತ್ತುಗಳು ಬೆಟ್ಟದ ವಿವಿಧ ಎತ್ತರಗಳಲ್ಲಿದ್ದು, ಕೊನೆಯ ಸುತ್ತು ಅತಿ ಎತ್ತರದ ಭಾಗದಲ್ಲಿವೆ. ಬೆಟ್ಟದ ಮೇಲಿನ ಒಳಸುತ್ತಿನಲ್ಲಿ ರಾಜ ಪರಿವಾರದವರಿಗೆ ಸಂಬಂಧಿಸಿದ ಕಟ್ಟಗಳಿವೆ. ಹಾಗಾಗಿ ಈ ಸುತ್ತನ್ನು ಕಡೆಗಾಪು ಅಥವಾ ರಾಜವಾಡೆಗಳೆಂದು ಕರೆದಿರುವರು. ಯುದ್ಧದ ಸಂದರ್ಭದಲ್ಲಿ ಊರಜನರು ಈ ಸುತ್ತಿನಲ್ಲಿ ಆಶ್ರಯ ಪಡೆಯುವರು.

ನೀರು ಮತ್ತು ಆಹಾರ ಧಾನ್ಯಗಳು ಜೀವನಕ್ಕೆ ಅವಶ್ಯಕವಾದವು. ಇವುಗಳ ಸಂಗ್ರಹಣೆಗೆ ಕೋಟೆಗಳಲ್ಲಿ ವ್ಯವಸ್ಥೆ ಇದೆ. ಮಳೆಗಾಲದಲ್ಲಿ ಬಿದ್ದ ನೀರನ್ನು ಹರಿದು ಹೋಗಲು ಬಿಡದೆ ಅಲ್ಲಲ್ಲೇ ತಡೆ ಗೋಡೆಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವ ವ್ಯವಸ್ಥೆಯಿದ್ದುದನ್ನು ದರೋಜಿ, ಬಳ್ಳಾರಿ, ಉಚ್ಚಂಗಿದುರ್ಗ, ಗುಡೇಕೋಟೆ, ಜರಿಮಲೆ, ವೀರದುರ್ಗ, ಪಾಲಯ್ಯನ ಕೋಟ ಹಾಗೂ ತಂಬ್ರಹಳ್ಳಿ ಕೋಟೆಗಳಲ್ಲಿ ಕಾಣಬಹುದು. ಸ್ಥಳದುರ್ಗಗಳಲ್ಲಿ ಈ ವ್ಯವಸ್ಥೆ ತುಂಬಾ ಸುಲಭ. ನೀರಿಗಾಗಿ ಕೆರೆ-ಬಾವಿಗಳನ್ನು ನಿರ್ಮಿಸಿಕೊಂಡಿರುವರು. ಇಂತಹ ಕೆರೆ-ಬಾವಿ-ಹೊಂಡಗಳು ಹಂಪಿ, ಹಂಪಾಪಟ್ಟಣ, ಹರಪನಹಳ್ಳಿ ಮುಂತಾದ ಕೋಟೆಗಳಲ್ಲಿ ಕಾಣಸಿಗುವವು. ಹಂಪಿ ಕೋಟೆಗೆ ತುಂಗಾಭದ್ರಾ ನದಿಯಿಂದ ಕಾಲುವೆಗಳ ಮೂಲಕ ನೀರನ್ನು ಒದಗಿಸುತ್ತಿದ್ದ ಮಾಹಿತಿಗಳಿವೆ. ಈ ಭಾಗದ ಯಾವುದೇ ಕೋಟೆಗಳಲ್ಲಿ ಈ ವ್ಯವಸ್ಥೆ ಇಲ್ಲದಿರುವುದು ಗಮನೀಯ ಅಂಶ. ಮುನ್ನೆಚ್ಚರಿಕೆಯ ಪ್ರತಿರೂಪವಾಗಿ ತಲೆ ಎತ್ತಿದ ಆಹಾರ ಧಾನ್ಯಗಳ ಕಣಜಗಳು ಗುಡೇಕೋಟೆ, ಜರಿಮಲೆ, ಕರಡಿದುರ್ಗಗಳಲ್ಲಿವೆ. ಇವುಗಳನ್ನು ರಾಗಿ ಕಣಜಗಳೆಂದು ಜನರು ಇಂದಿಗೂ ಗುರುತಿಸುತ್ತಾರೆ. ತುಪ್ಪ-ಎಣ್ಣೆಯ ಶೇಖರಣೆಗಾಗಿ ಪ್ರತ್ಯೇಕ ಕಣಜ ಗುಡೇಕೋಟೆಯಲ್ಲಿದೆ. ಕಣಜ (ಉಗ್ರಾಣ)ಗಳು ಆರ್ಥಿಕ ಸ್ಥಿತಿ-ಗತಿಗಳನ್ನು ಪ್ರತಿಬಿಂಬಿಸುತ್ತವೆ. ಇದೇ ರೀತಿ ಒಂದು ರಾಜ್ಯದ ಅಳಿವು, ಉಳಿವು, ಅವುಗಳ ಶಕ್ತಿ ಸಾಮರ್ಥ್ಯದ ಮೇಲೆ ನಿಂತಿದೆ. ಈ ಸಾಮರ್ಥ್ಯವಿರುವುದು ಯುದ್ಧ ಸಾಮಗ್ರಿಗಳ ಸಂಗ್ರಹದಲ್ಲಿ. ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳು ನವೀನ ತಂತ್ರಜ್ಞಾನದ ಯುದ್ಧ ಸಾಮಗ್ರಿಗಳನ್ನು ಕೂಡಿ ಹಾಕುವುದಕ್ಕಾಗಿ ರಾಷ್ಟ್ರ ಆದಾಯದ ಬಹುಭಾಗವನ್ನು ವೆಚ್ಚಮಾಡುತ್ತಿವೆ. ಕ್ರಿ.ಶ. ೧೮ನೇ ಶತಮಾನದ ಮಧ್ಯಭಾಗದಲ್ಲಿಯೇ ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಬಳ್ಳಾರಿ ಹಾಗೂ ಕೃಷ್ಣಾನಗರದ ಕೋಟೆಯ ಭದ್ರವಾದ ಸ್ಥಳಗಳಲ್ಲಿ ಯುದ್ಧ ಸಾಮಗ್ರಿಗಳಾದ ಮದ್ದು-ಗುಂಡುಗಳನ್ನು ರಕ್ಷಿಸುವುದಕ್ಕಾಗಿ ಇಟ್ಟಿಗೆ-ಗಾರೆಯಿಂದ ನಿರ್ಮಿಸಿರುವ ಕಣಜ (ಮದ್ದಿನ ಮನೆ)ಗಳನ್ನು ನಾವಿಂದು ನೋಡಬಹುದು.

ಉಚ್ಚಂಗಿದುರ್ಗ ಮತ್ತು ಕುರುಗೋಡಿನ ಕೋಟೆಗಳು ಕ್ರಿ.ಶ. ಹತ್ತನೆಯ ಶತಮಾನದವು. ಇವು ರಾಜಕೀಯ ಏರಿಳಿತಗಳಿಂದಾಗಿ ಮೂಲರೂಪದಲ್ಲಿಲ್ಲ. ಉಚ್ಚಂಗಿ ಗಿರಿದುರ್ಗದ ಬಾಗಿಲುಗಳು ಸರಳವಾಗಿರದೆ ವೈರಿಗೆ ಗೊಂದಲವುಂಟು ಮಾಡುವ ರೀತಿಯಲ್ಲಿವೆ. ದೊಡ್ಡ ಕೊತ್ತಳಗಳಂತೆ ಮುಂದೆ ಚಾಚಿರುವ ಭಾಗದ ಬದಿಯಲ್ಲಿರುವ ಬಾಗಿಲು ಶತ್ರುದೃಷ್ಟಿಗೆ ಬೀಳುವುದಿಲ್ಲ. ಪ್ರವೇಶವು ಹಲವು ದಿಕ್ಕುಗಳನ್ನು ಬದಲಿಸುವುದರಿಂದ ಶತ್ರುವನ್ನು ತಡೆಹಿಡಿಯುವುದು ತೀರಾ ಸುಲಭ. ಈ ಕೋಟೆಯ ಹರಿಹರದ ಬಾಗಿಲಿನ ಮುಂದೆ ವೈರಿಗೆ ಕಾಣದಂತೆ L ಆಕಾರದ ಗೋಡೆಯನ್ನು ಕಟ್ಟಿದೆ. ಬೆಟ್ಟದ ಮೇಲಿನ ನಿಸರ್ಗದ ತೊಟ್ಟಿಗಳು, ಕೋಟೆಯ ದಕ್ಷಿಣ ಬದಿಯ ಚಿಕ್ಕ ಮತ್ತು ಹಿರೇ ಹೊಂಡಗಳು ಬರಿದಾಗುವ ಉದಾಹರಣೆಗಳೇ ಇಲ್ಲ. ಇವು ಕೋಟೆಯೊಳಗಿನ ಜನತೆಯ ಜೀವಸಲೆಯಾಗಿದ್ದವು. ಉತ್ತಮ ನೀರಿನ ಸೌಕರ್ಯ ಹಾಗೂ ಭದ್ರವಾಗಿರುವ ಕೋಟೆ ಇದಾಗಿರುವ ಕಾರಣ ಈ ಗಿರಿದುರ್ಗವನ್ನು ಗೆದ್ದವರಿಗೆ ಪ್ರತಿಷ್ಠೆ ತಾನಾಗಿಯೇ ಹೆಚ್ಚುತ್ತಿತ್ತು. ಕುರುಗೋಡಿನ ಬಹು ವಿಶಾಲವಾಗಿರುವುದಿಲ್ಲ, ಕಡಿದಾದ ಬೆಟ್ಟದ ಮೇಲೆಯು ಎತ್ತರವಾದ ಕೋಟೆ-ಗೋಡೆಗಳಿದ್ದವು. ಹೀಗಾಗಿ ಕುರುಗೋಡಿನ ಶಾಸನಗಳು ಈ ಕೋಟೆಯನ್ನು ಮುಗಿಲುದ್ಧವಾಗಿ ಮುವಳಿದ ಕೋಟೆ ಎಂದಿವೆ.

ಹದಿಮೂರನೆಯ ಶತಮಾನದ ಆರಂಭದಲ್ಲಿ ದರೋಜಿ ಕೋಟೆಯನ್ನು ದಿಮ್ಮಿಯಾಕಾರ ಕಲ್ಲುಗಳಿಂದ ನಿರ್ಮಿಸಿದೆ. ಎರಡು ಬೆಟ್ಟಗಳನ್ನು ಬಳಸಿಕೊಂಡು ದಟ್ಟವಾಗಿ ಬೆಳೆದ ಕಾಡಿನಲ್ಲಿ ಕೋಟೆ ಕಟ್ಟಿರುವರು. ತದನಂತರದಲ್ಲಿ ಹೊಸಮಲೆದುರ್ಗದ ಕೋಟೆ ತಲೆ ಎತ್ತಿದೆ. ಇದು ಬಹು ಎತ್ತರದ ಬೆಟ್ಟದ ಮೇಲೆ ಸಮತಟ್ಟಾದ ಪ್ರದೇಶದಲ್ಲಿ ಕಟ್ಟಲ್ಪಟ್ಟಿದೆ. ಕುಮ್ಮಟದುರ್ಗದ ಕೋಟೆಯು ಇದರ ಸಮಕಾಲೀನದು. ಹೊಸಮಲೆ, ಕುಮ್ಮಟದುರ್ಗಗಳೆರಡರಲ್ಲೂ ಕುಮಾರ ರಾಮನ ಕಥೆಗೆ ಪೂರಕವಾದ ಸ್ಮಾರಕಾವಶೇಷಗಳು, ಕಂಡುಬರುತ್ತವೆ. ಮೇಲಿನ ಮೂರು ಕೋಟೆಗಳು ಒಂದೇ ಅರಸು ಮನೆತನಕ್ಕೆ ಸೇರಿದವು. ಆದರೆ ಇವುಗಳು ಪರಸ್ಪರ ಭಿನ್ನವಾಗಿದೆ.

ಹದಿನಾಲ್ಕನೆಯ ಶತಮಾನದಲ್ಲಿ ವಿಜಯನಗರ ಕಾಲದ ಕೋಟೆಯ ರಚನೆಯಲ್ಲಿ ಹಲವು ವ್ಯತ್ಯಾಸಗಳನ್ನು ನೋಡಬಹುದು. ಈ ತನಕ ಬಳಸುತ್ತಿದ್ದ ಉದ್ದವಾದ ದಿಮ್ಮಿಯಾಕಾರ ಮತ್ತು ಚೌಕಾಕಾರದ ಕಲ್ಲುಗಳ ಬದಲಾಗಿ ಬೆಣೆಯಾಕಾರದ ಹಾಗೂ ಮಧ್ಯಮ ಗಾತ್ರದ ಕಲ್ಲುಗಳು ಬಳಕೆ ಆರಂಭವಾಯಿತು. ಇವು ಹೊರಭಾಗದಲ್ಲಿ ಚೌಕಾಕಾರ ಕಂಡರೂ ಅವು ಗೋಡೆಯಲ್ಲಿ ಆಳವಾಗಿ ಒಳಗೆ ಸೇರುವುದರಿಂದ ಗೋಡೆಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತವೆ. ಒಳಗಿನ ತುದಿ ಚೌಕಾಕಾರವಾಗಿರದೆ ಬೆಣೆಯಾಕಾರದಲ್ಲಿ ಚೂಪಾಗಿರುತ್ತದೆ. ಈ ವಿಶಿಷ್ಟ ಆಕಾರದಿಂದ ಕಲ್ಲಿನ ಭಾರ ಕಡಿಮೆಯಾಗುತ್ತದೆ. ಎರಡು ತುದಿಗಳು ಚೌಕಾಕಾರವಾಗಿ ದಪ್ಪವಾಗಿದ್ದರೆ ಭಾರ ಹೆಚ್ಚಾಗುತ್ತದೆ. ಕಡಿಮೆ ಭಾರದ ಕಲ್ಲುಗಳನ್ನು ಸಾಗಿಸುವುದು ಮತ್ತು ಕೋಟೆಯ ಮೇಲ್ಭಾಗಕ್ಕೆ ಎತ್ತುವುದು ಸುಲಭ. ಗೋಡೆಯ ಒಳಭಾಗದಲ್ಲಿ ಇಂತಹ ಕಲ್ಲುಗಳ ಮಧ್ಯದಲ್ಲಿ ಉಂಟಾಗುವ ಸಂದಿಗಳಿಗೆ ಕಲ್ಲು, ಮಣ್ಣನ್ನು ತುಂಬಿದೆ. ಗೋಡೆಯ ಒಳಮೈಗೆ ಚಿಕ್ಕಕಲ್ಲುಗಳನ್ನು ಬಳಸಿದಂತೆ ಕಾಣುವುದು. ಹಂಪಿ ಕೋಟೆಯ ಬಾಗಿಲುಗಳು ಕಂಬ ತೊಲೆಗಳಿಂದ ರಚಿತವಾದ ಚೌಕಟ್ಟುಗಳನ್ನು ಹೊಂದಿವೆ. ಈ ಚೌಕಟ್ಟು ಮುಟ್ಟುವ ಮೊದಲು ಪ್ರವೇಶವು ಹಲವು ಕೋನಗಳಲ್ಲಿ ತಿರುಗಿ ಅಂಕುಡೊಂಕಾಗಿದೆ. ಬಾಗಿಲ ಮುಂದಿನ ದೊಡ್ಡ ಆವರಣ ಕೋಟೆಯಷ್ಟೇ ಎತ್ತರವಾದ ಗೋಡೆಗಳಿಂದ ಸುತ್ತುವರೆದಿದೆ. ಚೌಕ ಮತ್ತು ಆಯಾತಾಕಾರದ ಕೊತ್ತಳಗಳ ಮೇಲೆ ಕಾವಲುಗಾರರ ಮಂಟಪ ತಾಣಗಳಿವೆ. ಭೀಮನ ಹೆಬ್ಬಾಗಿಲು, ಸಿಂಘಾರದ ಹೆಬ್ಬಾಗಿಲು, ಹೂವಿನ ಬಾಗಿಲುಗಳಲ್ಲಿ ಮೇಲಿನ ಕೆಲವು ಲಕ್ಷಣಗಳನ್ನು ನಾವಿಂದು ಕಾಣಬಹುದು. ಬಾಗಿಲುಗಳಿಗೆ ಅಲಂಕರಿಸಲು ಗಾರೆಯ ಕಮಾನು ಮತ್ತು ಗುಮ್ಮಟಗಳನ್ನು ವಿಜಯನಗರ ಕಾಲದ ಮಧ್ಯವಧಿಯಲ್ಲಿ ಅಳವಡಿಸಿದೆ. ಇದಕ್ಕೆ ಉದಾಹರ‍ಣೆ ಎಂದರೆ ಅರೆಶಂಕರ ಹಾಗೂ ಗುಮ್ಮಟದ ಬಾಗಿಲುಗಳು. ಇದರಿಂದ ಹಂಪಿ ಕೋಟೆಯಲ್ಲಿ ಮುಸ್ಲಿಂರ ಪ್ರಭಾವವನ್ನು ಗುರುತಿಸಬಹುದು. ಈ ಬಾಗಿಲುಗಳನ್ನು ಹೆಬ್ಬಾಗಿಲು, ಬಾಗಿಲು, ದಿಡ್ಡಿಗಳೆಂದು ವಿಂಗಡಿಸಿದುದು ವಿಶೇಷ. ಕ್ರಿ.ಶ. ೧೩೯೦ರ ಹಂಪಿ ಶಾಸನವು ಬೇಟೆಕಾರರ ಬಾಗಿಲನ್ನು ಹೆಬ್ಬಾಗಿಲೆಂದು ಸೂಚಿಸುತ್ತದೆ. ವಿಜಯವಿಠ್ಠಲ ದೇವಾಲಯ ಗರ್ಭಗೃಹದ ಮುಂದಿನ ಮಂಟಪದಲ್ಲಿರುವ ಶಾಸನವು ಉದಯಗಿರಿಯ ಪ್ರವೇಶ ದ್ವಾರವನ್ನು ‘ಬಾಗಿಲೆಂದು’ ಕರೆದಿದೆ. ಬಹುಪಾಲು ಶಾಸನಗಳು ದಿಡ್ಡಿ ಹಾಗೂ ಕೊತ್ತಳಗಳನ್ನು ಹೆಸರಿಸುತ್ತದೆ. ಯುದ್ಧದ ಸಮದಲ್ಲಿ ಈ ಬೃಹದಾಕಾರದ ಕೋಟೆಯ ವಿವಿಧ ಭಾಗಗಳನ್ನು ಶೀಘ್ರದಲ್ಲಿ ಗುರುತಿಸುವ ಉದ್ದೇಶದಿಂದಾಗಿ ಹೆಸರುಗಳನ್ನು ಇಟ್ಟಿರಬಹುದು. ವಿಜಯನಗರ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಮುದಗಲ್ಲು ಕೋಟೆಯ ಭಾಗಗಳನ್ನು ಗುರುತಿಸುವುದಕ್ಕಾಗಿ ಹೆಸರುಗಳನ್ನು ಇಟ್ಟುಕೊಂಡಿರುವುದು ಅಲ್ಲಿಯ ಶಾಸನಗಳಿಂದ ತಿಳಿಯುವುದು.

ವಿಜಯನಗರ ಪತನಾ ನಂತರ ಕ್ರಿ.ಶ. ೧೬ ರಿಂದ ೧೮ನೆಯ ಶತಮಾನದವರೆಗೆ ಪಾಳೆಯಗಾರರು ಪ್ರಬಲರಾಗಿ ರಾಜ್ಯವಾಳಿದರು. ಈ ಅವಧಿಯಲ್ಲಿ ಹತ್ತಾರು ಕೋಟೆಗಳು ನಿರ್ಮಾಣವಾಗಿವೆ. ಇವುಗಳಲ್ಲಿ ಹೆಚ್ಚು ಗಿರಿದುರ್ಗಗಳಿವೆ. ಪಾಳೆಯಗಾರರ ಕೋಟೆಗಳ ರಚನಾಕ್ರಮದಲ್ಲಿ ಬದಲಾವಣೆಗೊಂಡಿವೆ. ಕಾರಣ ಆರ್ಧಿಕವಾಗಿ ಇವರು ಪ್ರಬಲರಾಗಿದ್ದಿಲ್ಲ. ಹೀಗಾಗಿ ಮಧ್ಯಮ ಮತ್ತು ಚಿಕ್ಕಗಾತ್ರದ ಕಲ್ಲುಗಳಿಂದ ಕಿರಿದಾದ ಕೋಟೆಗಳನ್ನು ಊರು ಸುತ್ತಲೂ ಕಟ್ಟಿಸಿದ್ದಾರೆ. ಕೆಲವರು ತಮ್ಮ ಅರಮನೆ ಅಥವಾ ವಾಸಸ್ಥಳಗಳ ಆವರಣ ಗೋಡೆಗಳನ್ನು ಮಾತ್ರ ಕಟ್ಟಿ ಕೊಂಡಿದ್ದಾರೆ. ಸ್ವಲ್ಪ ಪ್ರಬಲರಾಗಿದ್ದು, ಆರ್ಥಿಕ ಶಕ್ತಿ ಹೊಂದಿದವರು ದೊಡ್ಡ ದುರ್ಗಗಳನ್ನೆ ನಿರ್ಮಿಸಿರುವರು. ಬಳ್ಳಾರಿ, ಗುಡೇಕೋಟೆ, ಜರಿಮಲೆ, ಹರಪನಹಳ್ಳಿ, ವೀರನದುರ್ಗದ ಕೋಟೆಗಳು ಆಕಾರದಲ್ಲಿ ದೊಡ್ಡದಿದ್ದು ಪ್ರಬಲವಾಗಿವೆ. ಇನ್ನುಳಿದ ಪಾಳೆಯಗಾರರ ಕೋಟೆಗಳು ಸಾಧಾರಣವಾಗಿವೆ. ಪಾಳೆಯಗಾರರ ಕೋಟೆಗಳಲ್ಲಿ ಹಿಂದೂ-ಮುಸ್ಲಿಂ ಮಿಶ್ರಶೈಲಿಯನ್ನು ಗುರುತಿಸಬಹುದು. ಕಲ್ಲುಗಳ ಜೊತೆಗೆ ಇಟ್ಟಿಗೆ ಗಾರೆ ಬಳಕೆ ಹಾಗೂ ಕಮಾನಿನಾಕಾರದ ಬಾಗಿಲುಗಳು ರಚನೆಯಾದವೂ. ಈ ಮೊದಲಿದ್ದ ಆಳ್ವೇರಿಗಳ ಮೇಲಿನ ತೆನೆಗಳ ವಿನ್ಯಾಸದಲ್ಲಿ ಬದಲಾವಣೆಯಾಗಿದೆ. ಮುಂಚಿನ ಕೋಟೆ ತೆನೆಗಳು ಘನರೂಪದವುಗಳಾಗಿದ್ದವು. ಇವುಗಳ ಹಿಂದೆ ನಿಂತು ಬಿಲ್ಲುಗಾರರು ಎರಡು ತೆನೆಗಳ ಮಧ್ಯದ ಸಂದಿಯ ಮೂಲಕ ಬಾಣಗಳನ್ನು ಬಿಡುತ್ತಿದ್ದರು.

ಈ ಕಾಲಾವಧಿಯಲ್ಲಿ ಬಂದೂಕಗಳ ಬಳಕೆ ಪ್ರಾರಂಭವಾದುದರಿಂದ ಅವುಗಳಿಗಾಗಿ ತೆನೆಗಳಲ್ಲಿ ಹಾಗೂ ಕೋಟೆ ಗೋಡೆಗಳಲ್ಲಿ ರಂಧ್ರಗಳನ್ನು ಮಾಡಿದೆ. ನಡಿವಿ, ಕರಡಿದುರ್ಗ ಹಾಗೂ ವೀರನದುರ್ಗದ ಕೋಟೆ ಗೋಡೆಗಳಲ್ಲಿ ರಂಧ್ರಗಳಲ್ಲಿ ಬಂದೂಕುಗಳನ್ನು ಇಟ್ಟು ಬೇಕಾದ ದಿಕ್ಕಿನಲ್ಲಿ ಗುಂಡು ಹಾರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಿದೆ. ರಂಧ್ರಗಳ ಅಳತೆ, ಆಕಾರ ಮತ್ತು ಸಂಖ್ಯೆಗಳಲ್ಲಿ ವೈವಿಧ್ಯತೆ ಇದೆ. ಕೆಲವುಗಳಲ್ಲಿ ಒಳಮೈಯಲ್ಲಿ ರಂಧ್ರಗಳ ಅಳತೆ, ಆಕಾರ, ಮತ್ತು ಸಂಖ್ಯೆಗಳಲ್ಲಿ ವೈವಿಧ್ಯತೆ ಇದೆ. ಕೆಲವುಗಳಲ್ಲಿ ರಂಧ್ರಗಳ ಸಂಖ್ಯೆ ಕಡಿಮೆ ಇದ್ದು, ಹೊರಮೈಯಲ್ಲಿ ಹೆಚ್ಚಿವೆ. ಕೆಲವು ಇದಕ್ಕೆ ವಿರುದ್ಧವಾಗಿವೆ. ವೈರಿ ಎಸೆಯುವ ಆಯುಧ, ಗುಂಡುಗಳಿಂದ ತಪ್ಪಿಸಿಕೊಳ್ಳಲು ಮತ್ತು ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ತೆನೆಗಳಲ್ಲಿ ದೊಡ್ಡ ಕೋಷ್ಟಕಗಳನ್ನು ನಿರ್ಮಿಸಿದೆ. ಜೊತೆಗೆ ದೂರದಿಂದಲೇ ವೈರಿಗಳನ್ನು ಗಮನಿಸಿ ದಾಳಿಮಾಡಲು ಗೋಡೆಯಿಂದ ಚಾಚಿದ ಮುಂಚಾಚುಗಳನ್ನು ರಚಿಸಲಾಗಿರುವುದು.

ಹದಿನೆಂಟನೆಯ ಶತಮಾನದಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನ ಕಟ್ಟಿಸಿದ ಕೋಟೆಗಳು ತಮ್ಮದೇ ಆದ ವಾಸ್ತು ವೈಶಿಷ್ಟ್ಯಗಳನ್ನು ಹೊಂದಿವೆ. ಹೈದರಾಲಿಯು ಕೊಪ್ಪಳದ ಬತೇರಿ ಹಾಗೂ ಬಹಾದ್ದೂರ ಬಂಡೆಯ ಕೋಟೆಯನ್ನು ಐರೋಪ್ಯ ಶೈಲಿಯಲ್ಲಿ ಕಟ್ಟಿಸಿದ್ದನ್ನು ಅಲ್ಲಿಯ ಶಾಸನಗಳು ಉಲ್ಲೇಖಿಸುತ್ತವೆ. ಈ ಜಿಲ್ಲೆಯ ಕೃಷ್ಣಾನಗರದ ಕೋಟೆಯನ್ನು ಹೈದರಾಲಿ ಮತ್ತು ಟಿಪ್ಪುಸುಲ್ತಾನರು ನಿರ್ಮಿಸಿದ್ದಾರೆ. ಇದರ ಪ್ರವೇಶಕ್ಕೆ ಮುನ್ನ ಆಯಾತಾಕಾರದ ಚೌಕಟ್ಟಿನ ಬಾಗಿಲ ಮುಂದೆ ಆವರಣವಿದೆ. ನಂತರದ ಬಾಗಿಲುಗಳಲ್ಲಿ ಕಮಾನುಗಳಲ್ಲದೆ ಒಂದಕ್ಕಿಂತ ಹೆಚ್ಚು ಬಾಗಿಲು ಮತ್ತು ಆವರಣಗಳಿದ್ದು, ಬಾಗಿಲುಗಳು ದೊಡ್ಡ ಸಂಕೀರ್ಣಗಳಾಗಿ ಮಾರ್ಪಾಡುತ್ತವೆ. ಈ ಕೋಟೆಯ ಕೈಪಿಡಿಗೋಡೆ ಅಗಲವಾಗಿದ್ದು, ಹೊರಬದಿಗೆ ಇಳಿಜಾರಾಗಿದೆ. ಇಂತಹ ಗೋಡೆಯ ಮೇಲಿನ ತುದಿಗೆ ತಗುಲಿದ ತೋಪಿನ ಗುಂಡು ಹಿಂದಕ್ಕೆ ಜಾರಿ ಬೀಳುವಂತೆ ವಿನ್ಯಾಸಗೊಳಿಸಿವೆ. ಇದನ್ನೆ ಫ್ರೆಂಚ್ ಮಾದರಿ ಎನ್ನುವುದು. ಓಡಾಟಕ್ಕಾಗಿ ರೂಪಿಸಿದೆ. ಇದೇ ಲಕ್ಷಣಗಳು ಹೈದರಾಲಿ ಜೀರ್ಣೋದ್ಧಾರಗೊಳಿಸಿದ ಬಳ್ಳಾರಿ ಕೋಟೆಯಲ್ಲಿಯೂ ಇದೆ.