ಕರ್ನಾಟಕದ ಮಧ್ಯದ ಸ್ಥಾನದಲ್ಲಿರುವ (ದಕ್ಷಿಣೋತ್ತರವಾಗಿ ನೋಡಿದರೆ) ಬಳ್ಳಾರಿ ಜೆಲ್ಲೆಯ ಈಶಾನ್ಯ ಮತ್ತು ನೈರುತ್ಯ ದಿಕ್ಕಿನಲ್ಲಿ ಉದ್ದಕ್ಕೆ ಹಬ್ಬಿದೆ. ಕ್ರಿ.ಶ. ೧೯೯೮ ಕ್ಕಿಂತ ಮೊದಲು ಈ ಜೆಲ್ಲೆ ಎಂಟು ತಾಲ್ಲೂಕುಗಳನ್ನು ಒಳಗೊಂಡಿತ್ತು. ಅವುಗಳೆಂದರೆ ಬಳ್ಳಾರಿ, ಸಂಡೂರು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಮತ್ತು ಸಿರುಗುಪ್ಪ. ಕ್ರಿ.ಶ. ೧೯೯೮ ರಿಂದೀಚೆಗೆ ಹೊಸದಾಗಿ ರಚಿತವಾದ ದಾವಣಗೆರೆ ಜಿಲ್ಲೆಗೆ ಬಳ್ಳಾರಿ ಜೆಲ್ಲೆಯ ಹರಪನಹಳ್ಳಿ ತಾಲ್ಲೂಕನ್ನು ಸೇರಿಸಲಾಗಿದೆ.

ದಾವಣಗೆರೆ ಜಿಲ್ಲೆಯನ್ನು ರಚಿಸುವಾಗ ಈ ಜಿಲ್ಲೆಗೆ ಹಡಗಲಿ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಬೇಕೆಂದು ಕರ್ನಾಟಕ ಸರಕಾರದ ಶ್ರೀ ಎ.ಡಿ. ಗೋರ್ವೆಲ ಮತ್ತು ಶ್ರೀ ಪಿ.ಸಿ. ಮಹಾಲನೋಬಿಸ್ ಮುಂತಾದ ತಜ್ಞರನ್ನು ಒಳಗೊಂಡ ಸಮಿತಿ ಸೂಚಿಸಿತ್ತು. ಈ ವಿರೋಧದ ಮಧ್ಯೆಯು ಶ್ರೀ ಹುಂಡೇಕಾರ್ ಮತ್ತು ಗದ್ದಿಗೌಡರ್ ಸಮಿತಿಗಳು ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಳಿಸಿದವು.[1] ಹಡಗಲಿ ತಾಲ್ಲೂಕು ಮಾತ್ರ ಬಳ್ಳಾರಿ ಜಿಲ್ಲೆಯಲ್ಲೇ ಉಳಿಯಿತು. ಹರಪನಹಳ್ಳಿ ತಾಲ್ಲೂಕನ್ನು ಆಡಳಿತಾತ್ಮಕವಾಗಿ ದಾವಣಗೆರೆ ಜಿಲ್ಲೆಗೆ ಸೇರಿಸಿದರೂ, ಈ ತಾಲ್ಲೂಕಿನ ಸಂಬಂಧಗಳು ಭೌಗೋಳಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಬಳ್ಳಾರಿ ಜಿಲ್ಲೆಯೊಂದಿಗೆ ಬೆಸೆದುಕೊಂಡಿರುವುದನ್ನು ಈ ಜಿಲ್ಲೆಯ ಚರಿತ್ರೆಯಿಂದ ತಿಳಿಯಬಹುದು.

ಬಳ್ಳಾರಿ ಜಿಲ್ಲೆಯು ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಲ್ಲಿ ಬೃಹತ್ ಬಂಡೆಗಳನ್ನು ಹೊತ್ತ ಬೆಟ್ಟಗಳು, ನದಿ-ಹಳ್ಳ ತೊರೆಗಳಿಂದ ಕೂಡಿದ ನೀರಿನ ನೆಲೆಗಳು ಅದಿರಿನ ನಿಕ್ಷೇಪಗಳು ಫಲವತ್ತಾದ ಭೂ-ಭಾಗಗಳು ಇದ್ದು ಭೌಗೋಳಿಕವಾಗಿ ಸಮೃದ್ಧವಾಗಿದೆ. ಹೀಗಾಗಿ ಆದಿ ಶಿಲಾಯುಗ ಕಾಲದಿಂದಲೂ ಮಾನವನ ತಾಣವಾಗಿ ಈ ಪ್ರದೇಶ ಬೆಳೆದು ಬರಲು ಸಹಕಾರಿಯಾಯಿತು. ಅಂತಲೇ ಭೂ-ವಿಜ್ಞಾನಿ ಬ್ರುಸ್ ಫೂಟರು “ಇತಿಹಾಸಪೂರ್ವ ಕುರುಹುಗಳು ಈ ಜಿಲ್ಲೆಯಲ್ಲಿ ಅತ್ಯಂತ ಶ್ರೀಮಂತವಾಗಿವೆ” ಎಂದಿದ್ದಾನೆ.[2]

ಪ್ರಾಗಿತಿಹಾಸ ಕಾಲದ ಜನಸಂಸ್ಕೃತಿಯನ್ನು ಗಮನಿಸಿದರೆ ಹಲವು ಪ್ರಮುಖ ಅಂಶಗಳು ಕಂಡುಬರುತ್ತವೆ. ಈ ಅವಧಿಯಲ್ಲಿ ಮಾನವನು ಬೇಟೆಯಾಡುತ್ತಾ ಆಹಾರ ಸಂಗ್ರಹಿಸುತ್ತ ಜೀವನ ನಡೆಸುತ್ತಿದ್ದನು. ಆತನು ನಿರಂತರವಾಗಿ ಪ್ರಕೃತಿಯೊಡನೆ ಸೆಣಸಬೇಕಾಗಿತ್ತು. ಮಳೆ, ಗುಡುಗು, ಸಿಡಿಲು, ಕಾಳ್ಗಿಚ್ಚು, ನಿಸರ್ಗದಲ್ಲಿ ನಡೆಯುವ ಇಂಥಹ ಘಟನೆಗಳು ಆತನಲ್ಲಿ ಭಯ ಹುಟ್ಟಿಸಿದವು. ಇವುಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ದೊಡ್ಡ ದೊಡ್ಡ ಬಂಡೆಗಳ ಆಶ್ರಯದಲ್ಲಿ ವಾಸಿಸಿದನು. ತಾನು ಸುಭದ್ರವಾಗಿ ಇರಬೇಕೆಂದರೆ ಬೃಹತ್ ಬಂಡೆಗಳ ಸಮೂಹಗಳ ಮಧ್ಯದಲ್ಲಿ ಎಂದು ಅರಿತನು. ಇಂಥ ಬೃಹತ್ ಬಂಡೆಗಳ ಸಮೂಹಗಳು ಗುಡೇಕೋಟೆ, ಜರಿಮಲೆ, ಕುರುಗೋಡು, ಹಂಪಿ ಮುಂತಾದ ಸ್ಥಳದಲ್ಲಿ ಕಾಣಸಿಗುತ್ತವೆ. ಹೀಗೆ ರಕ್ಷಣೆಯ ಕಲ್ಪನೆಯನ್ನು ನಾವಿಲ್ಲಿ ಕಾಣಬಹುದು.

ಈ ಪ್ರದೇಶವು ಮೌರ್ಯ, ಶಾತವಾಹನ, ಪಲ್ಲವ, ಬಾದಾಮಿ-ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ಕಳಚೂರ್ಯ, ನೊಳಂಬ, ಕೊಟ್ಟೂರಿನ ಕದಂಬರು, ಸಿಂಧರು, ಪಾಂಡ್ಯರು, ಹೊಯ್ಸಳರು, ಹರಪನಹಳ್ಳಿ, ಗುಡೇಕೋಟೆ, ಜರಿಮಲೆ ಪಾಳೆಯಗಾರರು, ಬಿಜಾಪುರದ ಸುಲ್ತಾನರು, ಸಂಡೂರು ಘೋರ್ಪಡೆಯವರು, ಹಂಡೆ ಪಾಳೆಯಗಾರರು, ಹೈದರಾಲಿ, ಟಿಪ್ಪು ಮತ್ತು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತ್ತು.[3]

ಕ್ರಿ.ಪೂ. ೩ನೆಯ ಶತಮಾನದಲ್ಲಿ ಉತ್ತರ ಭಾರತದಲ್ಲಿ ಅಧಿಕಾರ ಹೊಂದಿದ್ದ ಮೌರ್ಯರು ದಕ್ಷಿಣ ಭಾರತದ ಕೆಲವು ಪ್ರದೇಶಗಳ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು. ಈ ಜಿಲ್ಲೆಯಲ್ಲಿಯೂ ಅವರು ಆಳ್ವಿಕೆ ಮಾಡಿದರೆಂಬುದು ಅವರ ಶಾಸನಗಳಿಂದ ತಿಳಿಯುತ್ತದೆ. ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಯ ಉತ್ಖನನದಲ್ಲಿ ಕೆಲವು ಕಟ್ಟಡ ಅವಶೇಷಗಳು ದೊರೆತಿದ್ದರೂ ಅವು ಕೋಟೆಗಳಿಗೆ ಸಂಬಂಧಿಸಿಲ್ಲದಂತೆ ಕಾಣುತ್ತವೆ.

ಮೌರ್ಯರ ನಂತರ ಆಡಳಿತಕ್ಕೆ ಬಂದ ಶಾತವಾಹನರು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಹುಭಾಗವನ್ನು ತಮ್ಮ ಆಡಳಿತ ವ್ಯಾಪ್ತಿಯಲ್ಲಿ ತಂದುಕೊಂಡಿದ್ದರು. ಈ ಅವಧಿಯಲ್ಲಿ ಅವರು ಕರ್ನಾಟಕದ ಸನ್ನತಿ ಮತ್ತು ಬನವಾಸಿಗಳಲ್ಲಿ ಕೋಟೆ ಕಟ್ಟಿಕೊಂಡರು. ಬಳ್ಳಾರಿ ಜಿಲ್ಲೆಯು ಅವರ ಆಡಳಿತ ಮಿತಿಯಲ್ಲಿದ್ದರೂ ಅವರ ಕಾಲದ ಕೋಟೆಗಳಾವುವೂ ಇಲ್ಲಿ ನಿರ್ಮಾಣವಾದಂತಿಲ್ಲ.

ಶಾತವಾಹನರ ಸಮಕಾಲೀನರಾಗಿ ಪಲ್ಲವರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರೆಂಬುದು ಹಿರೇಹಡಗಲಿ[4] ತಾಮ್ರಪಟ ಮತ್ತು ಅಣಜಿ[5] ಶಾಸನಗಳಿಂದ ತಿಳಿದುಬರುತ್ತದೆ. ದಾವಣಗೆರೆ ಮತ್ತು ಹರಪನಹಳ್ಳಿ ತಾಲ್ಲೂಕುಗಳ ಗಡಿ ಪ್ರದೇಶವಾಗಿದ್ದ ಕೆಲವು ಕಾಲದ್ದಿರಬೇಕು, ಅಣಜಿ ಗ್ರಾಮದ ಉತ್ತರದಿಕ್ಕಿನಲ್ಲಿರುವ ಉಚ್ಚಂಗಿದುರ್ಗದಲ್ಲಿರುವ ಕೋಟೆಯು ಪಲ್ಲವರ ಕಾಲದ್ದೆಂದು ಕೆಲವರು ಅಭಿಪ್ರಾಯ ಪಡುತ್ತಾರೆ.[6] ಈ ಪ್ರದೇಶದಲ್ಲಿ ದೊರೆಯುವ ಪಲ್ಲವರ ಯಾವ ಶಾಸನದಲ್ಲೂ ಕೋಟೆಯ ಪ್ರಸ್ತಾಪಗಳಿರುವುದಿಲ್ಲವಾದ್ದರಿಂದ ಮೇಲಿನ ಅಭಿಪ್ರಾಯವು ದೃಢಗೊಳ್ಳುವುದಿಲ್ಲ.

ಬಾದಾಮಿ ಚಾಲುಕ್ಯರ ಆಡಳಿತಕ್ಕೆ ಈ ಪ್ರದೇಶ ಸೇರಿತ್ತೆಂಬುದು ಕುರುಗೋಡು,[7] ಸಂಡೂರು ಕುಮಾರಸ್ವಾಮಿ ಬೆಟ್ಟದಲ್ಲಿರುವ ಶಾಸನಗಳಿಂದ ತಿಳಿದುಬರುತ್ತದೆ. ಬಾದಾಮಿ ಚಾಲುಕ್ಯರ ಒಂದನೆಯ ಪುಲಿಕೇಶಿಯು ಕ್ರಿ.ಶ. ೫೪೩ರಲ್ಲಿ ಬಾದಾಮಿ ಬೆಟ್ಟದಲ್ಲಿ ಕೋಟೆ ಕಟ್ಟಿಸಿದನಾದರು[8] ಬಳ್ಳಾರಿ ಜಿಲ್ಲೆಯಲ್ಲಿ ಅವರ ಯಾವ ಕೋಟೆಗಳು ಕಂಡುಬರುವುದಿಲ್ಲ.

ಇವರ ನಂತರ ಅಧಿಕಾರಕ್ಕೆ ಬಂದ ರಾಷ್ಟ್ರಕೂಟರು ವಿಶಾಲವಾದ ಸಾಮ್ರಾಜ್ಯವನ್ನು ಸ್ಥಾಪಿಸಿ, ಮಳಖೇಡ ರಾಜಧಾನಿಯಲ್ಲಿ ಬಹುದೊಡ್ಡ ಕೋಟೆಯನ್ನು ಕಟ್ಟಿಸಿದರು.[9] ರಾಷ್ಟ್ರಕೂಟರ ಹತ್ತಾರು ಶಾಸನಗಳು ಬಳ್ಳಾರಿ ಜಿಲ್ಲೆಯಲ್ಲಿ ಆಡಳಿತ ನಡೆಸಿದ ಬಗ್ಗೆ ತಿಳಿಸಿದರೂ ಅವರಿಲ್ಲಿ ಕೋಟೆ ಕಟ್ಟಿಕೊಂಡ ಬಗ್ಗೆ ಶಾಸನಗಳು ಮೌನವಾಗಿವೆ.

ರಾಷ್ಟ್ರಕೂಟರ ಆಡಳಿತವನ್ನು ಕೊನೆಗಾಣಿಸಿ ಕಲ್ಯಾಣಚಾಳುಕ್ಯರು ರಾಜಧಾನಿ ಮಾಡಿಕೊಂಡು ಚಾಳುಕ್ಯರ ರಾಜ್ಯವನ್ನು ಪುನರಾರಂಭಿಸುತ್ತಾರೆ. ಇವರ ಆಡಳಿತಾವಧಿಯಲ್ಲಿ ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಲ್ಲಿ ಕೋಟೆಗಳು ನಿರ್ಮಾಣವಾಗಿವೆ. ಅಲ್ಲದೆ ಈ ಜಿಲ್ಲೆಯ ಉಚ್ಚಂಗಿದುರ್ಗದಲ್ಲಿಯ ಕೋಟೆ ಇದೇ ಕಾಲದ್ದು, ಇದನ್ನು ಶಾಸನಗಳು ದೃಢ ಪಡಿಸುತ್ತವೆ.[10] ಇದೇ ಬಳ್ಳಾರಿ ಜಿಲ್ಲೆಯ ಶಾಸನೋಕ್ತ ಮೊದಲ ಕೋಟೆ ಇವರ ಸಾಮಂತರಾದ ಕದಂಬ ವಂಶದವರು ಕೊಟ್ಟೂರಿನಲ್ಲಿ ಕೋಟೆ. ಕಟ್ಟಿಸಿದಂತೆ ಶಾಸನದಲ್ಲಿ ಪ್ರಸ್ತಾಪವಾಗಿದೆ.[11] ಚಾಳುಕ್ಯರ ಇನ್ನೊಬ್ಬ ಸಾಮಂತರಾದ ಸಿಂಧರ ಕಾಲದ ಕೋಟೆಯು ಕುರುಗೋಡಿನಲ್ಲಿದೆ.[12] ಇದೇ ಕಾಲದಲ್ಲಿ ಕೊಳೂರಿನಲ್ಲಿಯೂ ಕೋಟೆ ಇದ್ದ ಬಗ್ಗೆ ಶಾಸನದಲ್ಲಿ ಉಲ್ಲೇಖವಾಗಿದ್ದರೂ[13] ಕೋಟೆಯ ಯಾವ ಕುರುಹುಗಳೂ ಆ ಗ್ರಾಮದಲ್ಲಿಲ್ಲ. ಕ್ರಿ.ಶ. ೧೧೦೪-೦೫ರ ದರೋಜಿ ಶಾಸನವು[14] ದೊರವದಿ ಕೋಟೆಯನ್ನು ಉಲ್ಲೇಖಿಸುತ್ತದೆ.

ದ್ವಾರಸಮುದ್ರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಹೊಯ್ಸಳರು ಹಳೇಬೀಡಿನಲ್ಲಿ ಕೋಟೆ ಕಟ್ಟಿಸಿದರು.[15] ಹಂಪಿಯ ಮೂಲಕೋಟೆಯು ಇವರದ್ದೇ ಎಂದು ತಿಳಿದುಬರುತ್ತದೆ.[16] ಹೊಯ್ಸಳರ ವೀರಬಲ್ಲಾಳನ ಕಾಲದಿಂದೀಚೆಗೆ ದೇವಗಿರಿಯ ಯಾದವರ ಶಾಸನಗಳು[17] ಈ ಪ್ರದೇಶದಲ್ಲಿ ಕಂಡುಬರುವುದಲ್ಲದೆ ಹರಪನಹಳ್ಳಿ ತಾಲ್ಲೂಕಿನ ಹಲುವಾಗಿಲು ಕೋಟೆ ಯಾದವರದೆಂದು ಅಂದಾಜಿಸಲಾಗಿದೆ. ಹೊಯ್ಸಳ ಸಮಕಾಲೀನರಾದ ಕಂಪಿಲ, ಕುಮಾರರಾಮರು ಹೊಸಮಲೆದುರ್ಗ ಹಾಗೂ ಕುಮ್ಮಟದುರ್ಗಗಳಲ್ಲಿ[18] ಕೋಟೆಯನ್ನು ಕಟ್ಟಿಸಿದ್ದಾರೆ.

ಹಂಪಿಯನ್ನು ರಾಜಧಾನಿ ಮಾಡಿಕೊಂದು ಆಳ್ವಿಕೆ ನಡೆಸಿದ ವಿಜಯನಗರದ ಅರಸರು ರಾಯಚೂರು, ಮುದುಗಲ್ಲು, ಆನೆಗೊಂದಿ ಮುಂತಾದ ಕಡೆಗಳಲ್ಲಿ ಕೋಟೆ ಕಟ್ಟಿಸಿದ್ದಾರೆ.[19] ಅಂತೆಯೇ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಬಲಿಷ್ಠವಾದ ಕೋಟೆಯನ್ನು ಕಟ್ಟಿ ಕೊಂಡಿದ್ದರು.

ವಿಜಯನಗರ ಅವನತಿಯತ್ತ ಸಾಗಿದಂತೆ ಅನೇಕ ಸಣ್ಣ ಪುಟ್ಟ ಪಾಳೆಯಪಟ್ಟುಗಳು ಸ್ವತಂತ್ರ ಆಳ್ವಿಕೆಯನ್ನು ಆರಂಭಿಸಿದವು. ಅವುಗಳಲ್ಲಿ ಹಂಡೇಪಾಳೆಯಗಾರರು, ಗುಡೇಕೋಟೆ, ಜರಿಮಲೆ, ಹರಪನಹಳ್ಳಿ ಪಾಳೆಯಗಾರರು ಮುಖ್ಯವಾಗಿದ್ದಾರೆ. ಇವರುಗಳು ತಮ್ಮ ರಾಜ್ಯಗಳ ರಕ್ಷಣೆಗಾಗಿ ಚಿಕ್ಕ-ಪುಟ್ಟ ಕೋಟೆಗಳನ್ನು ನಿರ್ಮಿಸಿಕೊಂಡಿದ್ದನ್ನು ನಾವು ಕಾಣುತ್ತೇವೆ. ಈ ಪಾಳೆಯಗಾರರ ಕೋಟೆಗಳ ಬಗ್ಗೆ ಇಲ್ಲಿ ದೀರ್ಘವಾಗಿ ಚರ್ಚಿಸಲಾಗಿದೆ. ಹೈದರಾಲಿ-ಟಿಪ್ಪು, ಬ್ರಿಟಿಷರು ಸಹ ಇಲ್ಲಿ ಹಲವು ಕೋಟೆಗಳನ್ನು ದುರಸ್ಥಿ ಮಾಡಿಕೊಂಡು ಆಳ್ವಿಕೆ ನಡೆಸಿದರು.

ಇತಿಹಾಸವೆಂದರೆ ರಾಜಕೀಯ ಇತಿಹಾಸ. ಅದರಲ್ಲಿಯೂ ಗಣ್ಯ ರಾಜಮನೆತನಗಳ ಇತಿಹಾಸವೆಂಬ ದೃಷ್ಟಿಕೋನ ಬೆಳೆದು, ಅಗ್ರಗಣ್ಯ ರಾಜಮನೆತನಗಳು ಅಲಕ್ಷ್ಯಕ್ಕೆ ಗುರಿಯಾಗುತ್ತಾ ಬಂದಿವೆ. ಇಂದಿನದು ರಾಜಸತ್ತಾಯುಗವಲ್ಲ. ಪ್ರಜಾಸತ್ತಾಯುಗ. ಹೀಗಾಗಿ ಇಂದು ನಮ್ಮ ಇತಿಹಾಸದ ಅಧ್ಯಯನ ರಾಜರಿಂದ ಪ್ರಜೆಗಳತ್ತ ಸರಿಯುತ್ತಲಿದೆ. ಶಿಷ್ಟಸಾಹಿತ್ಯದೊಂದಿಗೆ ಜನಪದ ಸಾಹಿತ್ಯದ ಕಡೆಗೆ ಹರಿದ ಅಧ್ಯಯನವೇ ಇದಕ್ಕೆ ಸಾಕ್ಷಿಯಾಗಿದೆ. ಸಾಮ್ರಾಟರ ಅಧ್ಯಯನದ ಗಮನಹರಿಸುತ್ತಲಿರುವುದು ಪ್ರಾಚೀನ ಪರಂಪರೆಯ ಸಮಗ್ರ ಚಿತ್ರಣವನ್ನು ನೀಡುವಲ್ಲಿ ಸಫಲತೆ ಕಾಣುತ್ತಿದೆ.

ಹೊಸ ರೀತಿಯ ರಕ್ಷಣಾ ವ್ಯವಸ್ಥೆಯಿಂದಾಗಿ ಗಣ್ಯ ಮತ್ತು ಅಗಣ್ಯ ರಾಜ್ಯ ಮನೆತನಗಳೆರಡು ನಿರ್ಮಿಸಿದ್ದ ಪ್ರಾಚೀನ ಕೋಟೆಗಳು ಇಂದು ಉಪೇಕ್ಷೆಗೆ ಗುರಿಯಾಗುತ್ತಾ ನಡೆದಿವೆ. ನಾಶವಾಗುವ ಮುನ್ನ ಈ ವಿಶಿಷ್ಟ ವಾಸ್ತುಗಳನ್ನು ಅಕ್ಷರಗಳಲ್ಲಿ ಛಾಯಾಚಿತ್ರಗಳಲ್ಲಿ ಹಿಡಿದಿಡುವುದು ತುಂಬಾ ಅವಶ್ಯವಾಗಿದೆ.

ಈ ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಚೀನ ಮತ್ತು ಮಧ್ಯಕಾಲೀನ ಯುಗದಲ್ಲಿ ಅನೇಕ ರಾಜ ಮನೆತನಗಳು, ಸಾಮಂತರು, ಪಾಳೆಯಗಾರರು ಆಳ್ವಿಕೆ ನಡೆಸಿರುವುದನ್ನು ನಾವು ಕಾಣುತ್ತೇವೆ. ವಿಭಿನ್ನವಾದ ಈ ರಾಜ್ಯಾಡಳಿತಗಳು ರಕ್ಷಣೆಗಾಗಿ ತಮ್ಮದೇ ಆದ ವಿಶಿಷ್ಟ ರೀತಿಯ ಕೋಟೆ-ಕೊತ್ತಳದಂತಹ ಸ್ಮಾರಕಗಳನ್ನು ನಿರ್ಮಿಸಿಕೊಂಡಿದ್ದರು. ಇವುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಂದೆಡೆ ಕ್ರೋಢೀಕರಿಸಿ ಅಧ್ಯಯನ ಮಾಡುವುದು ಈ ಹೊತ್ತಿಗೆಯ ಉದ್ದೇಶವಾಗಿದೆ.

ಹನ್ನೊಂದು ಅಧ್ಯಾಯಗಳಲ್ಲಿ ಹಬ್ಬಿರುವ ಈ ಪುಸ್ತಕದಲ್ಲಿ ಬಳ್ಳಾರಿ ಜಿಲ್ಲೆಯ ತಾಲ್ಲೂಕುವಾರು ಗೋಚರಿತ ಕೋಟೆ-ಕೊತ್ತಳಗಳ ಎಲ್ಲಾ ಆಯಾಮಗಳನ್ನು ಅಭ್ಯಸಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ. ಕೋಟೆಯ ಅರ್ಥ, ಪ್ರಾಚೀನತೆ, ಪ್ರಕಾರ ಹಾಗೂ ಮಹತ್ವದಿಂದ ಈ ಅಧ್ಯಯನ ಆರಂಭವಾಗುತ್ತಿದ್ದು, ಪ್ರತಿಯೊಂದು ಕೋಟೆಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುತ್ತಾ ಕ್ಷೇತ್ರಕಾರ್ಯದ ಮೂಲಕ ಹೊಸದಾಗಿ ಅಲಕ್ಷಿತ ಕೋಟೆಗಳು ಒಳಗೊಂಡಂತೆ ಒಟ್ಟು ೩೧ ಕೋಟೆ ಮತ್ತು ಕೊತ್ತಳಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬಳ್ಳಾರಿ ಜಿಲ್ಲೆಯು ಎಂಟು ತಾಲ್ಲೂಕುಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಬಳ್ಳಾರಿ, ಕುರುಗೋಡು (ಬಳ್ಳಾರಿ ತಾಲ್ಲೂಕು), ಶಿರುಗುಪ್ಪ, ತೆಕ್ಕಲಕೋಟೆ, ನಡಿವಿ, ಕೆಂಚನಗುಡ್ಡ (ಶಿರುಗುಪ್ಪ ತಾಲ್ಲೂಕು), ಕೃಷ್ಣಾನಗರ, ಹೊಸಮಲೆದುರ್ಗ, ದೊರವದಿ (ಸಂಡೂರು ತಾಲ್ಲೂಕು), ಗುಡೇಕೋಟೆ, ಜರಿಮಲೆ, ದೇವಲಾಪುರ, ಪಾಲಯ್ಯನ ಕೋಟೆ, ವೀರನದುರ್ಗ (ಕೂಡ್ಲಿಗಿ ತಾಲ್ಲೂಕು), ಹಂಪಿ, ಹೊಸಪೇಟೆ, ಕಂಪ್ಲಿ, ಕಮಲಾಪುರ, ರಾಮಸಾಗರ, ಪಾಪಿನಾಯಕನಹಳ್ಳಿ (ಹೊಸಪೇಟೆ ತಾಲ್ಲೂಕು), ಹರಪನಹಳ್ಳಿ, ಉಚ್ಚಂಗಿದುರ್ಗ, ಬಂಡ್ರಿ, ಕರಡಿದುರ್ಗ, ಹಲುವಾಗಿಲು (ಹರಪನಹಳ್ಳಿ ತಾಲ್ಲೂಕು), ಹಡಗಲಿ, ಹೊಳಲು, ಹ್ಯಾರಡ (ಹಡಗಲಿ ತಾಲ್ಲೂಕು), ಹನಸಿ, ಹಂಪಾಪಟ್ಟಣ, ತಂಬ್ರಹಳ್ಳಿ (ಹಗರಿಬೊಮ್ಮನಹಳ್ಳಿ ತಾಲ್ಲೂಕು)ಗಳಲ್ಲಿ ಕೋಟೆಗಳು ಕಂಡುಬರುತ್ತವೆ. ಮತ್ತೆ ಕೆಲವು ಕಡೆ ಕೋಟೆಗಳಿಲ್ಲ. ಆದರೆ ಕೋಟೆಯ ಉಲ್ಲೇಖಗಳು ಶಾಸನಗಳಲ್ಲಿ ಹಾಗೂ ಸಾಹಿತ್ಯಕೃತಿಗಳಲ್ಲಿ ಕಂಡುಬರುತ್ತವೆ. ಇನ್ನು ಕೆಲವು ಕೋಟೆಗಳು ಕಾಲನ ತುಳಿತಕ್ಕೆ ಸಿಕ್ಕು ಅವನತಿಯನ್ನು ಹೊಂದಿವೆ. ಕೆಲವು ಕೋಟೆಗಳು ಮೂಲಸ್ವರರೂಪದಲ್ಲಿಲ್ಲ. ಜೀರ್ಣೋದ್ಧಾರಗೊಂಡಿವೆ. ಬಳ್ಳಾರಿ ಜಿಲ್ಲೆಯ ಸಂಬಂಧಿಸಿದಂತೆ ವಿವಿಧ ವಿಷಯಗಳ ಮೇಲೆ ಹತ್ತಾರು ಅಧ್ಯಯನಗಳು ನಡೆದಿದ್ದರೂ ಕೋಟೆಕೊತ್ತಳಗಳ ಕುರಿತಾಗಿ ಹೆಚ್ಚು ಅಧ್ಯಯನ ನಡೆದಿಲ್ಲ. ಈ ಕೊರೆತೆಯನ್ನು ತುಂಬಲು ವ್ಯವಸ್ಥಿತ ಅಧ್ಯಯನದ ಅವಶ್ಯಕತೆ ಇದೆ. ಇಲ್ಲಿ ಆಳ್ವಿಕೆ ನಡೆಸಿದ ರಾಕರು, ಸಾಮಂತರು ಮತ್ತು ಪಾಳೆಯಗಾರರು ನಿರ್ಮಿಸಿದ ಕೋಟೆಗಳು ಅವುಗಳ ವಾಸ್ತು ವೈಶಿಷ್ಟ್ಯ, ಲಕ್ಷಣಗಳು ಮತ್ತು ಮಹತ್ವವನ್ನು ಚರ್ಚಿಸುತ್ತಾ ಗ್ರಾಮ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ನಡೆದಿದೆ.

ಕೋಟೆಗಳ ಚರಿತ್ರೆಯಾಗಲಿ ಅಥವಾ ಒಂದು ಅರಸು ಮನೆತನದ ಚರಿತ್ರೆಯಾಗಲಿ ಅದನ್ನರಿಯಲು ಸಾಧನ ಸಾಮಗ್ರಿಗಳ ಮೊರೆ ಹೋಗಬೇಕಾದುದು ಅನಿವಾರ್ಯ. ಹೀಗಾಗಿ ಚರಿತ್ರೆಯ ರಚನೆಗೆ ಸಂಬಂಧಪಟ್ಟ ಆಧಾರಗಳನ್ನು ಪ್ರಾಕ್ತನ ಹಾಗೂ ಸಾಹಿತ್ಯವೆಂಬೆರಡು ವಿಭಾಗಗಳಲ್ಲಿ ವಿಭಾಗಿಸಿ ನೋಡಲಾಗುತ್ತದೆ. ಪ್ರಾಕ್ತನ ಆಧಾರಗಳಲ್ಲಿ ಶಾಸನ, ನಾಣ್ಯ, ಭೂ-ಉತ್ಖನನ ಹಾಗೂ ಸ್ಮಾರಕಗಳು ಸೇರ್ಪಡೆಯಾದರೆ ಸಾಹಿತ್ಯದಲ್ಲಿ ದೇಶಿಯ-ವಿದೇಶಿಯವೆಂಬೆರಡು ವಿಭಾಗಗಳಿದ್ದು, ಇವು ದೇಶಿಯ ಹಾಗೂ ವಿದೇಶಿಯ ಬರಹಗಾರರ ಬರವಣಿಗೆಗಳನ್ನು ಹೊಂದಿರುತ್ತವೆ. ಪ್ರಸ್ತುತ ಈ ಅಧ್ಯಯನದಲ್ಲಿ ಎಲ್ಲಾ ಸಾಮಗ್ರಿಗಳ ನೆರವನ್ನು ಪಡೆದುಕೊಂಡಿದೆಯಾದರೂ ಶಾಸನಗಳನ್ನು ನಿಖರವಾದ ದಾಖಲೆ ಎಂದು ತಿಳಿದು ಅವುಗಳ ಆಧಾರದಿಂದ ರಚಿಸಲಾಗಿದೆ. ಚರಿತ್ರೆಯ ಪುನಃ ರಚನೆಯಲ್ಲಿ ಶಾಸನಗಳು ವಹಿಸಿದ ಮತ್ತು ವಹಿಸುತ್ತಿರುವ ಪಾತ್ರ ತುಂಬ ಮಹತ್ವದ್ದು. ಆದ್ದರಿಂದಲೇ ನಮ್ಮ ನಾಡಿನ ಚರಿತ್ರೆಯ ರಚನಾ ಸ್ವರೂಪಕ್ಕೆ ಶಾಸನ ಸಾಮಗ್ರಿಯೇ ಜೀವನಾಡಿಯಾಗಿದೆ. ಅವು ಪ್ರಾಚೀನ ಮತ್ತು ಮಧ್ಯ ಕಾಲೀನ ಜನರ ಬದುಕಿನ ಸಮಸ್ತ ಸಂವೇದನೆಗಳ ಪ್ರಾಮಾಣಿಕ ಧ್ವನಿಗಳಾಗಿರುವುದರಿಂದ ನಮ್ಮ ನಾಡಿನ ಜನಜೀವನವು ಶಾಸನಗಳು ಐತಿಹಾಸಿಕ ಕೋಟೆಗಳ ಪ್ರತಿ ಅಧ್ಯಯನದಲ್ಲಿಯೂ ಅಧಿಕೃತ ಭೂಮಿಕೆಯಾಗಿ ನಿಲ್ಲುತ್ತವೆ. ಆದರೂ ಸಂದರ್ಭಕ್ಕನುಸಾರವಾಗಿ ಸಮಕಾಲೀನ ಸಾಹಿತ್ಯ, ಸ್ಥಳೀಯರ ಅಭಿಪ್ರಾಯಗಳು, ಪೌರಾಣಿಕ ಕಥೆಗಳನ್ನು ಇಲ್ಲಿ ಉಪಯೋಗಿಸಿ ಕೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಯನ್ನು ಕುರಿತಾಗಿ ಕರ್ನಾಟಕ ದೇವಾಲಯ ಕೋಶ-ಬಳ್ಳಾರಿ ಜಿಲ್ಲೆ[20] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ (ಬಳ್ಳಾರಿ ಜಿಲ್ಲೆ) ೧,[21] ಬಳ್ಳಾರಿ ಜಿಲ್ಲೆಯ ಜನಪದ ಕಥೆಗಳು,[22] ಬಳ್ಳಾರಿ ಜಿಲ್ಲೆಯ ಜನಪದ ಗೀತೆಗಳು, [23]ಬಳ್ಳಾರಿ ಜಿಲ್ಲೆಯ ಜನಪದ ಸಾಹಿತ್ಯ,[24] ಬಳ್ಳಾರಿ ಜಿಲ್ಲೆಯ ನಿಸರ್ಗಸಂಪತ್ತು,[25] ಬಳ್ಳಾರಿ ಜಿಲ್ಲೆಯ ಬಯಲಾಟಗಳು,[26] ಬಳ್ಳಾರಿ ಜಿಲ್ಲೆಯ ಬರಹಗಾರರು,[27] ಬಳ್ಳಾರಿ ಜಿಲ್ಲೆಯ ಶಾಸನಗಳು,[28] ಬಳ್ಳಾರಿ ಜಿಲ್ಲೆಯ ಶಿವ ಶರಣರು,[29] ಬಳ್ಳಾರಿ ಜಿಲ್ಲೆಯ ಶೈಕ್ಷಣಿಕ ಸೌಲಭ್ಯಗಳು,[30] ಬಳ್ಳಾರಿ ಜಿಲ್ಲೆಯ ಕೈಗಾರೀಕರಣ ಮತ್ತು ಕನಂದೋಲನ,[31] ಬಳ್ಳಾರಿ ಬಳೆನಾದ,[32] ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ,[33] ಎಂಬ ಪುಸ್ತಕಗಳು ಪ್ರಕಟವಾಗಿವೆ. ಆದರೂ ಈ ಜಿಲ್ಲೆಯ ಕೋಟೆಗಳ ಬಗ್ಗೆ ಇಂತಹ ಪ್ರತ್ಯೇಕ ಅಧ್ಯಯನ ನಡೆಯದೇ ಹೋದರೂ ಚನ್ನಬಸಪ್ಪ ಎಸ್. ಪಾಟೀಲರ ಕರ್ನಾಟಕದ ಕೋಟೆಗಳು,[34] ಕುಂ. ಬಾ. ಸದಾಶಿವಪ್ಪನವರ ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ,[35] ಎಸ್.ಕೆ. ಜೋಶಿಯವರ ಕರ್ನಾಟಕದ ಪ್ರಾಚೀನ ಕೋಟೆಗಳು,[36] ಬಳ್ಳಾರಿ ಜಿಲ್ಲಾ ಗ್ಯಾಸೆಟಿಯರ್,[37] ಎಂಬೀ ಗ್ರಂಥಗಳಲ್ಲಿ ಜಿಲ್ಲೆಯ ಕೆಲವು ಕೋಟೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಚರ್ಚೆ ಮಿಸೆಲ್,[38] ಚನ್ನಬಸಪ್ಪ ಎಸ್. ಪಾಟೀಲ,[39] ವಸುಂಧರಾ ಫಿಲಿಯೋಜಾ,[40] ಸೂರ್ಯನಾರಾಯಣ ರಾವ್[41] ಮುಂತಾದವರು ತಮ್ಮ ಕೃತಿಗಳಲ್ಲಿ ಸಾಂದರ್ಭಿಕವಾಗಿ ಚರ್ಚಿಸಿದ್ದಾರೆ. ಬಸವರಾಜ ಎಚ್. ಎಂ. ಗುಡೇಕೋಟೆ: ಒಂದು ಚಾರಿತ್ರಿಕ ಅಧ್ಯಯನ[42] ಎಂಬ ಎಂ.ಫಿಲ್. ಚಂದ್ರಶೇಖರ್[43] ಹಾಗೂ ಶ್ಯಾಮಲ[44] ಅವರು ಲೇಖನಗಳನ್ನು ಬರೆದಿರುವರು. ಜರಿಮಲೆ ಪಾಳೆಯಗಾರರ ಸಂಬಂಧವಾಗಿ ಲಕ್ಷ್ಮಣ್ ತೆಲಗಾವಿ,[45] ಯೋಗೀಶ್ವರಪ್ಪನವರು[46] ಕೆಲಸ ಮಾಡಿರುವರು. ಹರಪನಹಳ್ಳಿ ಪಾಳೆಯಗಾರರು ಎಂಬ ಕೃತಿಯಲ್ಲಿ ಕುಂ.ಬಾ. ಸದಾಶಿವಪ್ಪನವರು ಕೋಟೆಯ ಕೆಲವು ವಿವರಗಳನ್ನು ನೀಡಿದ್ದಾರೆ,[47] ಕುರುಗೋಡು ಕೋಟೆಯ ಬಗ್ಗೆ ಚನ್ನಬಸಯ್ಯ ಹಿರೇಮಠರು ತಮ್ಮ ಕುರುಗೋಡು ಸಿಂದರು[48] ಎಂಬ ಗ್ರಂಥದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಕಾಣದ ಕೈಗಳೆಷ್ಟೋ ಈ ಕ್ಷೇತ್ರದಲ್ಲಿ ಕೆಲಸ ಮಾಡಿರಬಹುದು. ಒಟ್ಟಿನಲ್ಲಿ ಈ ಜಿಲ್ಲೆಯ ಕೋಟೆ-ಕೊತ್ತಳಗಳ ಬಗ್ಗೆ ಅಧ್ಯಯನಿಸಲು ಈ ಮೇಲಿನ ವಿವಿಧ ಆಕರಗಳು ಸಹಾಯಕವಾಗಿದೆ. ಮೂಲ ಸಾಮಗ್ರಿಗಳು ಸಾಕಷ್ಟು ದೊರೆಯದಿದ್ದರೂ ಪುಸ್ತಕ ಮತ್ತು ಲೇಖನಗಳ ರೂಪದಲ್ಲಿ ತಕ್ಕಮಟ್ಟಿಗಾದರೂ ದೊರೆಯುತ್ತವೆ.

ವರದಿಗಳು, ಗೆಜೆಟಿಯರ್‌ಗಳನ್ನು ಆಧಾರವಾಗಿಟ್ಟುಕೊಂಡು ಈ ಜಿಲ್ಲೆಯೊಳಗಡೆ ಕಂಡು ಬರುವ ಕೋಟೆ-ಕೊತ್ತಳಗಳ ಪಟ್ಟಿಯೊಂದನ್ನು ತಯಾರಿಸಿಕೊಳ್ಳಲಾಯಿತು. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯಿಂದ ಕೋಟೆಗಳ ಬಗ್ಗೆ ಮಾಹಿತಿಯನ್ನು ಪಡೆದ ಕ್ಷೇತ್ರಕಾರ್ಯ ಮಾಡಬೇಕಾದ ಸ್ಥಳಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. ಕೋಟೆಯ ಸ್ಥಳ, ದಿಕ್ಕು, ವಿಸ್ತೀರ್ಣ, ತಾಲ್ಲೂಕು, ಸುತ್ತಲಿನ ಪರಿಸರ, ಕಾಲಮಾನ, ನಕ್ಷೆ, ಸ್ಮಾರಕಗಳು, ಕೊತ್ತಳಗಳು, ಕೋಟೆಗೆ ಸಂಬಂಧಿಸಿದ ಶಾಸನ ಇತರೆ ಎಲ್ಲಾ ಅಂಶಗಳನ್ನೊಳಗೊಂಡ ಪ್ರಪತ್ರವೊಂದನ್ನು ಸಿದ್ಧಪಡಿಸಿಕೊಂಡು ಕೋಟೆಯ ಸ್ಥಳಕ್ಕೆ ಹೋಗಿ ಅದನ್ನು ಭರ್ತಿ ಮಾಡಿಕೊಂಡು, ಸ್ಥಳೀಯರ ಹೇಳಿಕೆಗಳನ್ನು ಸಂಗ್ರಹಿಸಿ ಜೊತೆಗೆ ಛಾಯಚಿತ್ರಗಳನ್ನು ತೆಗೆದುಕೊಂಡು ಬರಲಾಯಿತು. ಇದಲ್ಲದೆ ಪರಿಣಿತರಿಂದ ಕೋಟೆಯ ರೇಖಾಚಿತ್ರಗಳನ್ನು ತಯಾರಿಸಿಕೊಂಡು ಈ ಮೊದಲು ಪ್ರಕಟಿತ ಗ್ರಂಥಗಳಿಂದ ಸಂಗ್ರಹಿಸಲಾದ ಟಿಪ್ಪಣಿ ಇತ್ಯಾದಿ ಮಾಹಿತಿಗಳನ್ನೆಲ್ಲಾ ಕಲೆಹಾಕಿ ತಾತ್ವಿಕವಾಗಿ ಚಿಂತಿಸಿ ಈ ಗ್ರಂಥವನ್ನು ಸಿದ್ಧಪಡಿಸಿದೆ. ಶಾಸನಗಳು ಮತ್ತು ಪ್ರಕಟಿತ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಕೆಲವು ಸ್ಥಳಗಳಲ್ಲಿ ಕೋಟೆಗಳಿದ್ದ ಬಗ್ಗೆ ಯಾವುದೇ ಸ್ಪಷ್ಟ ಸುಳಿವುಗಳು ದೊರೆಯುವುದಿಲ್ಲ. ಆದರೂ ದೊರೆಯುವ ಇತರೆ ಶಾಸನಗಳ ಆಧಾರದ ಮೇಲೆ ಅನೇಕ ಕಡೆ ಅವುಗಳ ಕಾಲವನ್ನು ಗುರುತಿಸಲು ಪ್ರಯತ್ನಿಸಲಾಗಿದೆ. ಕ್ಷೇತ್ರ ಪರಿವೀಕ್ಷಣಾ ಕಾಲದಲ್ಲಿ ತೆಗೆದ ಛಾಯಚಿತ್ರಗಳು ಈ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುತ್ತವೆ. ಹೀಗೆ ಸ್ಥಳೀಯರ ಹೇಳಿಕೆಗಳು, ಸಾಹಿತ್ಯ ಹಾಗೂ ಶಾಸನಗಳ ಆಧಾರದ ಮೇಲೆ ಕೋಟೆಯನ್ನು ಗುರುತಿಸಲು ಪ್ರಯತ್ನಿಸಿದಾಗ ಅವುಗಳ ಹರವು ವಿಸ್ತಾರವಾಗಿರುವುದು ಕಂಡುಬಂದಿದೆ. ಪ್ರಸ್ತುತ ಈ ಅಧ್ಯಯನದ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪೂರಕ ಸಾಮಗ್ರಿಯೆಂದು ಪರಿಗಣಿಸಿ ರಾಜವಂಶಗಳ ಮೇಲೆ ಬಂದಿರುವ ಚಾರಿತ್ರಿಕ ಗ್ರಂಥಗಳಲ್ಲದೆ ರಕ್ಷಣಾ ಸ್ಮಾರಕಗಳನ್ನು ಆಧಾರವಾಗಿಟ್ಟುಕೊಂಡು ರಚಿತವಾದ ಗ್ರಂಥಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಹಾಗೂ ನಿಯತಕಾಲಿಕೆಗಳಲ್ಲಿ ಬರೆದ ಬಿಡಿ ಬರಹಗಳನ್ನು ಗಮನಿಸಿ ವಿವರ ಪಡೆಯಲಾಗಿದೆ. ಈ ಕ್ಷೇತ್ರದ ಮೇಲೆ ರಚಿತವಾದ ಕೆಲವು ಅಪ್ರಕಟಿತ ಲೇಖನ, ಪ್ರಬಂಧಗಳನ್ನು ಅಭ್ಯಸಿಸಲಾಗಿದೆ. ತಾಲ್ಲೂಕುವಾರು ಕೋಟೆಗಳನ್ನು ವಿಂಗಡಿಸಿ ತಾಲ್ಲೂಕುಗಳ ಇತಿಹಾಸವನ್ನು ತಿಳಿಸುವ ಜೊತೆಗೆ ಕೋಟೆ ಇರುವ ಗ್ರಾಮನಾಮವನ್ನು ಪರಿಚಯಿಸಿ ಪ್ರತಿಯೊಂದು ಕೋಟೆಯನ್ನು ಪ್ರತ್ಯೇಕವಾಗಿ ಚರ್ಚಿಸಲಾಗಿದೆ. ಇವುಗಳ ಕೊನೆಯಲ್ಲಿ ಟಿಪ್ಪಣಿಗಳನ್ನು ಕೊಡಲಾಗಿದೆ. ಪ್ರತಿ ತಾಲ್ಲೂಕಿನ ಮುಂದೆ ತಾಲ್ಲೂಕು ನಕ್ಷೆ ಹಾಗೂ ಹಿಂಭಾಗಕ್ಕೆ ಛಾಯಾಚಿತ್ರಗಳನ್ನು ಜೋಡಿಸಿದೆ. ಅನುಬಂಧದಲ್ಲಿ ಕೋಟೆ ಪದಕೋಶ ನೀಡಿದೆ.

ನೈರುತ್ಯ ಮತ್ತು ಈಶಾನ್ಯ ನಡುವೆ ಚಾಚಿಕೊಂಡಿರುವ ಬಳ್ಳಾರಿ ಜಿಲ್ಲೆಯ ಭೌಗೋಳಿಕ ನೆಲೆಯ ನೈರುತ್ಯ ದಿಕ್ಕಿನ ಹರಪನಹಳ್ಳಿ ತಾಲ್ಲೂಕಿನ ’ಹರವಿ’ ಎಂಬ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ಶಿರುಗುಪ್ಪ ತಾಲೂಕಿನ ಸಲ್ಲಕುದಲೂರು ಎಂಬ ಗ್ರಾಮದವರೆಗೆ ೧೮೭ ಕಿ.ಮೀ. ಉದ್ದವಾಗಿ ಹರಡಿಕೊಂಡಿದೆ. ಆದರೆ ಪೂರ್ವ-ಪಶ್ಚಿಮವಾಗಿ ಬಳ್ಳಾರಿ ತಾಲ್ಲೂಕು ಕಾರೆಕಲ್ಲು ವೀರಾಪುರದಿಂದ ಹಡಗಲಿ ತಾಲ್ಲೂಕಿನ ಹಿರೇಬನ್ನಿಹಟ್ಟಿಯವರೆಗೆ ೧೬೧ ಕಿ.ಮೀ. ಅಗಲವಾಗಿ ಹರಡಿಕೊಂಡಿದೆ. ಈ ಜಿಲ್ಲೆಯ ವಾಸ್ತವಿಕ ಭೌಗೋಳಿಕ ನೆಲೆಯ ಉತ್ತರ ೧೪೩೦೩ ಮತ್ತು ೧೫೦೫೦ ಹಾಗೂ ೭೫೦೪೦ ಮತ್ತು ೭೭೦೧೧ ನಲ್ಲಿದೆ. ಇದರ ವಿಸ್ತೀರ್ಣ ೯೮೮೫ ಚದರ ಕಿ.ಮೀ. ಎಂದು ಅಂದಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೬೨೮ ಗ್ರಾಮಗಳು, ೩೦ ಹೋಬಳಿಗಳು ಇವೆ.

ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಜಿಲ್ಲೆಯಿದ್ದರೆ, ದಕ್ಷಿಣಕ್ಕೆ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿವೆ. ಪೂರ್ವಕ್ಕೆ ಆಂಧ್ರ ಪ್ರದೇಶ, ಪಶ್ಚಿಮಕ್ಕೆ ಕೊಪ್ಪಳ, ಗದಗ, ಹಾವೇರಿ, ಜಿಲ್ಲೆಗಳು ಇವೆ. ರಾಜಕೀಯವಾಗಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಬಳ್ಳಾರಿ ಮದ್ರಾಸ್ ಪ್ರಾಂತ್ಯದ ಒಂದು ದೊಡ್ಡ ಜಿಲ್ಲೆಯಾಗಿತ್ತು.

ಜಿಲ್ಲೆಯ ಪೂರ್ವಭಾಗದಲ್ಲಿ ಸಿರುಗುಪ್ಪ ಮತ್ತು ಬಳ್ಳಾರಿ ತಾಲ್ಲೂಕುಗಳಿವೆ. ಈ ಪೂರ್ವ ಭಾಗವು ಸಮತಟ್ಟಾದ ಭೂಮಿಯನ್ನು ಹೊಂದಿದೆ. ಹವಾಮಾನದ ದೃಷ್ಟಿಯಿಂದ ಅತಿ ಉಷ್ಣವಲಯವಾಗಿದೆ. ಮಳೆಯ ಪ್ರಮಾಣ ತೀರಾ ಕಡಿಮೆ. ಶುಷ್ಕ ವಾತಾವರಣದಿಂದ ಕೂಡಿದ ಪೂರ್ವಭಾಗದಲ್ಲಿ ಅರಣ್ಯವಿಲ್ಲ. ಪಶ್ಚಿಮ ಭಾಗವು ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಹಡಗಲಿ ತಾಲ್ಲೂಕುಗಳನ್ನು ಹೊಂದಿದೆ. ಈ ಭಾಗದಲ್ಲಿ ಸಾಮಾನ್ಯವೆನ್ನಬಹುದಾದಷ್ಟು ಮಳೆಯಾಗುತ್ತದೆ. ಪೂರ್ವ ಭಾಗಕ್ಕಿಂತ ಹೆಚ್ಚು ತಂಪಾದ ಹವಾಮಾನ ಪಡೆದಿದೆ. ಈ ಭಾಗದ ಸಂಡೂರು ಕೂಡ್ಲಿಗಿ ಪ್ರದೇಶದಲ್ಲಿ ಅರಣ್ಯಗಳಿವೆ.

ತುಂಗಾ ಭದ್ರಾ ನದಿಯು ಜಿಲ್ಲೆಯ ಪಶ್ಚಿಮ ಮತ್ತು ಉತ್ತರ ದಿಕ್ಕುಗಳ ಮೇರೆಯಾಗಿದೆ. ಈ ನದಿಯು ಜಿಲ್ಲೆಯಲ್ಲಿ ಸುಮಾರು ೩೨೦ ಕಿ.ಮೀ. ನಷ್ಟು ದೂರ ಹರಿಯುತ್ತದೆ. ಇದನ್ನು ಬಿಟ್ಟರೆ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಕೆಲವು ಸಣ್ಣ ಪುಟ್ಟ ನದಿಗಳು ಹರಿದಿವೆ. ಇವುಗಳಲ್ಲಿ ಹಗರಿ, ಚಿಕ್ಕ ಹಗರಿ ಮುಖ್ಯವಾದವು.

ಈ ಜಿಲ್ಲೆಯ ಮತ್ತೊಂದು ವಿಶೇಷ ಲಕ್ಷಣವೆಂದರೆ, ಬೆಟ್ಟ ಗುಡ್ಡಗಳ ತುಂಗಾ ಭದ್ರಾ ಅಣೆಕಟ್ಟೆ ಹತ್ತಿರದ ಮುಲ್ಲಾಪುರ ಎಂಬ ಗ್ರಾಮದಿಂದ ಹಿಡಿದು ಬಳ್ಳಾರಿ ನಗರದವರೆಗೆ ಸುಮಾರು ಮುವತ್ತು ಮೈಲು ಹಬ್ಬಿರುವ ಬೆಟ್ಟ ಶ್ರೇಣಿಯು ಖನಿಜಗಳ ಭಂಡಾರಗಳಾಗಿವೆ. ಕುಮಾರಸ್ವಾಮಿ ದೇವಾಲಯದ ಮೇಲ್ಭಾಗದಲ್ಲಿರುವ ಬೆಟ್ಟವು ಈ ಶ್ರೇಣಿಯ ಅತಿ ಉನ್ನತ ಗುಡ್ಡವಾಗಿದೆ. ಈ ಸಂಡೂರು ಬೆಟ್ಟ ಶ್ರೇಣಿಗಳಿಂದ ೬ ಕಿ.ಮೀ. ದೂರದಲ್ಲಿ ತಾಮ್ರದ ಬೆಟ್ಟಸಾಲು ಇದೆ. ದರೋಜಿ ಕೆರೆಯಿಂದ ಹಗರಿ ನದಿಯವರೆಗೂ ೨೫ ಮೈಲು ಹಬ್ಬಿದೆ. ಸಂಡೂರಿನಿಂದ ದಕ್ಷಿಣಕ್ಕೆ ೩೦ ಮೈಲು ದೂರದಲ್ಲಿ ಮಲ್ಲಪ್ಪನ ಗುಡ್ಡ ಸಾಲು ಇದೆ. ಈ ಬೆಟ್ಟ ಸಾಲು ಹಡಗಲಿ, ಹರಪನಹಳ್ಳಿ ತಾಲ್ಲೂಕುಗಳಲ್ಲಿ ೨೫ ಮೈಲು ಹಬ್ಬಿದೆ. ಮಲ್ಲಪ್ಪನ ಗುಡ್ಡದ ದಕ್ಷಿಣಕ್ಕೆ ಕಲ್ಲಹಳ್ಳಿ ಗುಡ್ಡಗಳ ಸಾಲು ಇದೆ. ಈ ಬೆಟ್ಟದ ಸಾಲಿನಲ್ಲಿ ಪ್ರಸಿದ್ಧ ಗುಡ್ಡಗಳೆಂದರೆ ನರಸಿಂಹ ದೇವರ ಗುಡ್ಡ ಮತ್ತು ಉಚ್ಚಂಗಿ ದುರ್ಗ, ಕೂಡ್ಲಿಗಿ, ಗುಡ್ಡೇಕೋಟೆ ಪ್ರಮುಖವಾಗಿದೆ. ಈ ರೀತಿಯ ಬೆಟ್ಟ ಸಾಲುಗಳಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ನಿಂತಿರುವ ಹಲವಾರು ಬೆಟ್ಟಗುಡ್ಡಗಳಿವೆ. ಅವುಗಳಲ್ಲಿ ದರೋಜಿ, ಕಂಪ್ಲಿ, ಕುರು ಗೋಡು ಮುಖ್ಯವಾಗಿವೆ.

ಬಳ್ಳಾರಿ ಜಿಲ್ಲೆಯು ತನ್ನ ಉತ್ತಮ ಗುಣಮಟ್ಟದ ಕಬ್ಬಿಣದ ಅದಿರಿನಿಂದ ವಿಶ್ವಮಾನ್ಯತೆ ಪಡೆದಿದೆ. ಇದು ಅಲ್ಲದೆ ಮ್ಯಾಂಗನೀಸ್, ತಾಮ್ರ, ಮ್ಯಾಗ್ನಸೈಟ್, ಜಿಪ್ಸಮ್, ಸತು ಮುಂತಾದವುಗಳು ಈ ಜಿಲ್ಲೆಯಲ್ಲಿ ಲಭ್ಯ. ತುಂಗ ಭದ್ರಾ ಅಣೆಕಟ್ಟೆಯ ಮಲ್ಲಾಪುರ ಎಂಬ ಸ್ಥಳದಿಂದ ಆಗ್ನೇಯ ದಿಕ್ಕಿಗೆ ಸು. ೩೦ ಮೈಲುಗಳ ಉದ್ದ ಹಬ್ಬಿರುವ ಹೊಸಪೇಟೆ, ಸಂಡೂರು ಬೆಟ್ಟಸಾಲು ಶ್ರೇಷ್ಠ ಗುಣಮಟ್ಟದ ಖನಿಜಗಳ ಆಗರವಾಗಿದೆ. ಗಣಿಗಾರಿಕೆಯು ಕೂಡ ಇಂತಹ ಖನಿಜ ಸಂಪತ್ತು ಆಧಾರಿತ ಪ್ರಮುಖ ಆರ್ಥಿಕ ಚಟುವಟಿಕೆಯಾಗಿದೆ. ಸಾವಿರಾರು ಕುಟುಂಬಗಳ ತುತ್ತಿನ ಚೀಲಗಳಿಗೆ ಆಧಾರವೂ ಹೌದು. ಗಣಿಗಾರಿಕೆಯಿಂದಾಗಿಯೇ ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ಹಾಳಾಗುತ್ತಿವೆ ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಹೊಸಮಲೆದುರ್ಗ, ಬಂಡ್ರಿ ಕೋಟೆಗಳು ನಾಮಾವಶೇಷವಾಗಿದೆ. ನಮಗೆ ನಮ್ಮ ಬದುಕು ಮುಖ್ಯ ನಿಜ. ಆದರೆ ನಮ್ಮ ಹಿರಿಯರು ಬಿಟ್ಟುಹೋದ ಪಳಿಯುಳಿಕೆಗಳನ್ನು ಸಾಧ್ಯವಾದಷ್ಟು ರಕ್ಷಿಸುತ್ತ ನಮ್ಮ ಜೀವನವನ್ನು ರೂಪಿಸಿಕೊಂಡರೆ ನಮ್ಮ ಭವಿಷ್ಯದ ಜೀವನ ಸುಖಮಯವಾಗಿರುವುದು. ಹಂಪಿ, ಪಟ್ಟದಕಲ್ಲು, ಐಹೊಳೆಗಳಂತಹ ಐತಿಹಾಸಿಕ ಸ್ಮಾರಕಗಳಿಂದಾಗಿಯೇ ನಾವು ವಿಶ್ವಮಾನ್ಯತೆ ಗಳಿಸಿರುವುದು ಮಿತ್ಯವಲ್ಲ.

[1] ತಿಪ್ಪೆಸ್ವಾಮಿ, ಎಚ್.೨೦೦೧. ದಾವಣಗೇರಿ ಜಿಲ್ಲೆಯ ದೇವಾಲಯಗಳು, ಪಿಎಚ್.ಡಿ. ಮಹಾಪ್ರಬಂಧ, ಪು.೧೦. ಹಂಪಿ: ಕನ್ನಡ ವಿಶ್ವವಿದ್ಯಾಲಯ.

[2] ಸೂರ್ಯನಾಥ ಯು. ಕಾಮತ್ (ಸಂ.), ೧೯೮೪. ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ಪು. ೪೮೬. ಬೆಂಗಳೂರು: ಸರ್ಕಾರಿ ಮುದ್ರಣಾಲಯ.

[3] ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ (ಬಳ್ಳಾರಿ ಜಿಲ್ಲೆ) ೧.ಪು. ೧೨೪-೧೨೬. ಹಂಪಿ: ಕನ್ನಡ ವಿಶ್ವವಿದ್ಯಾಲಯ.

[4] ಅದೇ, ಪು. ೩೭೦

[5] ಅದೇ, ಪು. ೩೫೬-೫೮

[6] ಗೋವಿಂದಚಾರ್ಯ ಚಿಕ್ಕೇರೂರು. ಅಪ್ರಕಟಿತ ಹಸ್ತಪ್ರತಿ.

[7] ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ-೧, ಪೂರ್ವೋಕ್ತ, ಪು. ೧೯.

[8] ಜೋಶಿ, ಎಸ್. ಕೆ.೨೦೦೦. ಕರ್ನಾಟಕದ ಪ್ರಾಚೀನ ಕೋಟೆಗಳು ಮತ್ತು ಇತಿಹಾಸ, ಸೂರ್ಯಕೀರ್ತಿ (ಸಂ: ಕೃಷ್ಣಮೂರ್ತಿ ಪಿ.ವಿ ಮತ್ತು ಕೆ. ವಸಂತಲಕ್ಷ್ಮಿ), ಪು. ೧೪೮-೧೬೨, ಬೆಂಗಳೂರು ಸೂರ್ಯನಾಥ ಕಾಮತರ ಅಭಿನಂದನ ಸಮಿತಿ.

[9] ಚನ್ನಬಸಪ್ಪ, ಎಸ್. ಪಾಟೀಲ್. ೧೯೯೯. ಕರ್ನಾಟಕ ಕೋಟೆಗಳು, ಪು. ೬ ಹಂಪಿ: ಕನ್ನಡ ವಿಶ್ವವಿದ್ಯಾಲಯ.

[10] ಕೊಟ್ರೇಶ್ ಎಂ. ೧೯೯೮. ಗಿರಿದುರ್ಗ ಉಚ್ಚಂಗಿ ಪ್ರದೇಶ- ಒಂದು ಪರಿಶೀಲನೆ, ಇತಿಹಾಸ ದರ್ಶನ-೧೩, ಪು. ೮೨.

[11] ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ-೧, ಪೂರ್ವೋಕ್ತ, ಪು. ೨೩೪.

[12] ಚನ್ನಬಸವಯ್ಯ ಹಿರೇಮಠ. ೧೯೯೫. ಕುರುಗೋಡು ಸಿಂದರು: ಒಂದು ಅಧ್ಯಯನ, ಪು. ೧೦೪. ಕೊಪ್ಪಳ: ಸಂಗಣ್ಣನವರು ಅಗಡಿ ಪ್ರತಿಷ್ಠಾನ.

[13] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ, ಪು. ೪.

[14] ಕರ್ನಾಟಕ ಕೋಟೆಗಳು, ಪೂರ್ವೋಕ್ತ, ಪು. ೬೩.

[15] ಅದೇ, ಪು. ೪೦

[16] ಅದೇ, ಪು. ೯೧-೯೨

[17] VII IX (pt. 1) No.380, ಹಲುವಾಗಿಲು

[18] ಕರ್ನಾಟಕ ಕೋಟೆಗಳು, ಪೂರ್ವೋಕ್ತ, ಪು. ೬೬-೭೧.

[19] ಅದೇ, ಪು. ೯೧

[20] ಸುರೇಶ್, ಕೆ.ಎಂ. ಮತ್ತು ಇತರರು, ೧೯೯೯. ಕರ್ನಾಟಕದ ದೇವಾಲಯಕೋಶ ಬಳ್ಳಾರಿ ಜಿಲ್ಲೆ. ಹಂಪಿ: ಕನ್ನಡ ವಿಶ್ವವಿದ್ಯಾಲಯ.

[21] ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ-೧, ಪೂರ್ವೋಕ್ತ.

[22] ಬಸವರಾಜ ಮಲಶೆಟ್ಟಿ. ೧೯೭೯. ಬಳ್ಳಾರಿ ಜಿಲ್ಲೆಯ ಜಾನಪದ ಕಥೆಗಳು. ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

[23] ರಾಜಪ್ಪ ಟಿ.ಎಸ್.೧೯೮೬. ಬಳ್ಳಾರಿ ಜಿಲ್ಲೆಯ ಜನಪದ ಗೀತೆಗಳು. ಮೈಸೂರು: ಮೈಸೂರು ವಿಶ್ವವಿದ್ಯಾಲಯ.

[24] ರುದ್ರಪ್ಪ, ಕೆ., ೧೯೯೪. ಬಳ್ಳಾರಿ ಜಿಲ್ಲೆಯ ಜನಪದ ಸಾಹಿತ್ಯ. ಪುರ: ಸಿದ್ಧವೀರ ಶಿವಚಾರ್ಯ ಜ್ಞಾನ ಪ್ರಕಾಶನ.

[25] ಚಂದ್ರಶೇಖರ್ ಟಿ.ಆರ್. ೧೯೯೪. ಬಳ್ಳಾರಿ ಜಿಲ್ಲೆಯ ನಿಸರ್ಗ ಸಂಪತ್ತು. ಪುರ: ಶ್ರೀ ಸಿದ್ಧವೀರ ಶಿವಾಚಾರ್ಯ ಜ್ಞಾನ ಪ್ರಕಾಶನ.

[26] ದುರ್ಗಾದಾಸ್. ೧೯೯೬. ಬಳ್ಳಾರಿ ಜಿಲ್ಲೆಯ ಬಯಲಾಟಗಳ. ಬೆಳಗಾವಿ: ಸಮತಾ ಪ್ರಕಾಶನ.

[27] ಮೃತ್ಯುಂಜಯ್ಯ ಹೊರಕೇರಿ. ೧೯೯೪. ಬಳ್ಳಾರಿ ಜಿಲ್ಲೆಯ ಬರಹಗಾರರರು. ಪುರ: ಶ್ರೀ ಸಿದ್ಧವೀರ ಶಿವಾಚಾರ್ಯ ಜ್ಞಾನ ಪ್ರಕಾಶನ.

[28] ನಾಗಯ್ಯ, ಜೆ.ಎಂ.೧೯೯೧. ಬಳ್ಳಾರಿ ಜಿಲ್ಲೆಯ ಶಾಸನಗಳು. ಗುಲ್ಬರ್ಗಾ: ಗುಲ್ಬರ್ಗಾ ವಿಶ್ವವಿದ್ಯಾಲಯ.

[29] ಶಾಂತರಸ (ಸಂ.), ೧೯೭೫. ಬಳ್ಳಾರಿ ಜಿಲ್ಲೆಯ ಶಿವಶರಣರು. ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

[30] ರಾಜಶೇಖರ್ ಪಿ.ಎಂ., ೧೯೯೪. ಬಳ್ಳಾರಿ ಜಿಲ್ಲೆಯ ಶೈಕ್ಷಣಿಕ ಸೌಲಭ್ಯಗಳು. ಪುರ: ಶ್ರೀ ಸಿದ್ಧವೀರ ಶಿವಾಚಾರ್ಯ ಜ್ಞಾನ ಪ್ರಕಾಶನ

[31] ಶೇಷಾದ್ರಿ ಬಿ. ೧೯೯೮. ಬಳ್ಳಾರಿ ಜಿಲ್ಲೆಯ ಕೈಗಾರಿಕೀಕರಣ ಮತ್ತು ಜನಾಂದೋಲನ. ಹಂಪಿ: ಕನ್ನಡ ವಿಶ್ವವಿದ್ಯಾಲಯ.

[32] ಪದ್ಮಾವಿಠಲ. ೧೯೯೨. ಬಳ್ಳಾರಿ ಬಳೆನಾದ. ಹಗರಿಬೊಮ್ಮನಹಳ್ಳಿ: ಅಶ್ಚಿನಿ ಪ್ರಕಾಶನ.

[33] ನಾಗಯ್ಯ ಜೆ.ಎಂ. ೨೦೦೧. ಬಳ್ಳಾರಿ ಜಿಲ್ಲೆಯ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಬಳ್ಳಾರಿ: ಲೋಹಿಯಾ ಪ್ರಕಾಶನ.

[34] ಕರ್ನಾಟಕದ ಪ್ರಾಚೀನ ಕೋಟೆಗಳು ಮತ್ತು ಇತಿಹಾಸ. ಪೂರ್ವೋಕ್ತ.

[35] ಕುಂಬಾಸ. ೧೯೯೦. ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ. ಕುಂಚೂರು: ಮಾಲತೇಶ ಪ್ರಕಾಶನ.

[36] ಕರ್ನಾಟಕ ಪ್ರಾಚೀನ ಕೋಟೆಗಳು, ಪೂರ್ವೋಕ್ತ.

[37] ಸೂರ್ಯನಾಥ ಯು. ಕಾಮತ್ (ಸಂ.), ೧೯೮೪. ಕರ್ನಾಟಕ ರಾಜ್ಯ ಗ್ರಾಸೆಟಿಯರ್-೩. ಬೆಂಗಳೂರು: ಸರ್ಕಾರಿ ಮುದ್ರಣಾಲಯ.

[38] Michel george.1990, Vijayanagar: Architectural Inventory of the Urban Core, Vol. I & II. Mysore: Directorate of Archaeology and Museums.

[39] Channabasappa, S. Patil. 1991. Further Epigraphical References to City Gates and Watch Towers of Vijayanagara, in Vijayanagara Progress of Research, 1984-87, Pp. 191-194. Mysore: Directorate of Archaeology and Museums.

[40] ವಸುಂಧರಾ ಫಿಲಯೋಜಾ, ೧೯೮೨. ಆಳಿದುಳಿದ ಹಂಪೆ. ಬೆಂಗಳೂರು: ಮಾನಸೋಲ್ಲಾಸ ಪ್ರಕಾಶನ.

[41] Suryanarayan Rao B., 1993. The Never to be Forgotten Empire. New Delhi

[42] ಬಸವರಾಜ ಎಚ್.ಎಂ., ೨೦೦೨. ಗುಡೇಕೋಟೆ: ಒಂದು ಚಾರಿತ್ರಿಕ ಅಧ್ಯಯನ. ಎಂ.ಫಿಲ್, ಮಹಾಪ್ರಬಂಧ. ಹಂಪಿ: ಕನ್ನದ ವಿಶ್ವವಿದ್ಯಾಲಯ.

[43] ಚಂದ್ರಶೇಖರ್ ಹೆಚ್. ೨೦೦೦. ಬಳ್ಳಾರಿ ಕೋಟೆಯ ರಚನೆಯಲ್ಲಿ ಭೂ ಸಾದೃಶ್ಯಗಳ ಪಾತ್ರ. ಇತಿಹಾಸ ದರ್ಶನ-೧೫. ಪು. ೨೩-೨೬.

[44] ಶ್ಯಾಮಲ ಸಿ.ಆರ್.ಸಿ.ಆರ್.೧೯೯೯. ಬಳ್ಳಾರಿ ಗುಡ್ಡದ ಮೇಲಿನ ದೇವಾಲಯಗಳು, ಇತಿಹಾಸ ದರ್ಶನ- ೧೪ ಪು. ೧೫೫.

[45] ಲಕ್ಷ್ಮಣ್ ತೆಲಗಾವಿ ೧೯೭೬. ಜರಿಮಲೆ ಸಂಸ್ಥಾನದ ವಂಶಾವಳಿ, ಚಂದ್ರವಳ್ಳಿ, ಚಿತ್ರದುರ್ಗ

[46] ಯೋಗೀಶ್ವರಪ್ಪ ಡಿ.ಎನ್. ೨೦೦೨. ನಾಯಕರು (ಕ್ರಿ.ಶ.೧೫೦೦ ೧೮೦೦), ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ೨, ಪು. ೩೧ ೪೭. ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

[47] ಕುಂಬಾಸ. ೧೯೯೬. ಹರಪನಹಳ್ಳಿ ಪಾಳೆಯಗಾರರು. ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

[48] ಕುರುಗೋಡು ಸಿಂದರು: ಒಂದು ಅಧ್ಯಯನ. ಪೂರ್ವೋಕ್ತ.