ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಮೌರ್ಯ ಚಕ್ರವರ್ತಿ ಚಂದ್ರಗುಪ್ತನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಕೌಟಿಲ್ಯನು ಅರ್ಥಶಾಸ್ತ್ರ ಎಂಬ ರಾಜನೀತಿ ಗ್ರಂಥವನ್ನು ರಚಿಸಿದನು.[1] ಈತನ ಅರ್ಥಶಾಸ್ತ್ರದ ಪ್ರಕಾರ ಒಂದು ರಾಜ್ಯಕ್ಕೆ ಪ್ರಮುಖವಾದ ಸಪ್ತಾಂಗಗಳಿವೆ. ಅವುಗಳೆಂದರೆ ರಾಜ, ಅಮಾತ್ಯ, ರಾಜಧಾನಿ, ಕೋಶ, ದುರ್ಗ, ಮಿತ್ರ ಮತ್ತು ಸೈನ್ಯ ಇವುಗಳಲ್ಲಿ ದುರ್ಗ (ಕೋಟೆ) ಮುಖ್ಯವಾದುದು. ರಾಜ್ಯದಲ್ಲಿ ಸೈನ್ಯ ಮತ್ತು ಕೋಶ ಭದ್ರತೆಯಿಂದ ಇರಬೇಕೆಂದರೆ ಅಲ್ಲಿ ಕೋಟೆ ಇರಬೇಕೆಂಬುದು ಕೌಟಿಲ್ಯನ ಅಭಿಪ್ರಾಯವಾಗಿದೆ. ಅಲ್ಲದೆ ಕೋಟೆಯು ರಾಜಧಾನಿ ಪಟ್ಟಣದಲ್ಲಿ ಇರದೆ, ಗಡಿ ಪ್ರದೇಶದಲ್ಲಿಯೂ ಇರಬೇಕೆಂದು ಸೂಚಿಸಿದ್ದಾನೆ. ಕೌಟಿಲ್ಯನು ಮುಂದುವರೆದು ಕೋಟೆಗೆ ಮೂರು ರೀತಿಯ ಕಂದಕಗಳಿರಬೇಕೆಂದು ತಿಳಿಸಿದ್ದಾನೆ. ಕೋಟೆಗೆ ಅಂಟಿಕೊಂಡು ಕೊತ್ತಳಗಳಿರಬೇಕು, ಅವುಗಳಿಗೆ ಮೆಟ್ಟಿಲುಗಳು ಇರಬೇಕು, ಎರಡು ಕೊತ್ತಳಗಳ ನಡುವಿನ ಅಂತರ ಮೂವತ್ತು ದಂಡಗಳು ಇರಬೇಕೆಂದು ತಿಳಿಸಿದ್ದಾನೆ ಕೊತ್ತಳಕ್ಕೆ ಮೇಲ್ಛಾವಣಿ ಇರಬೇಕು. ಕೋಟೆಯೊಳಗೆ ರಥಬೀದಿ ಆನೆಬೀದಿ ದೇವಾಲಯಗಳು, ಉಗ್ರಾಣ ಮತ್ತು ಶಸ್ತ್ರಗಾರ ಮನೆ ಇರಬೇಕೆಂದು ಸೂಚಿಸಿದ್ದಾನೆ. ಕೌಟಿಲ್ಯನು ಈ ಕೆಳಗಿನಂತೆ ಸ್ಥಳದ ಆಧಾರದ ಮೇಲೆ ಕೋಟೆಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾನೆ.

೧. ಔದಕ: ನಡುಗಡ್ಡೆ ಅಥವಾ ಆಳವಾದ ಕಂದಕಗಳಂತೆ ಸುತ್ತಲೂ ಆಳವಾದ ನೀರಿನಿಂದ ಸುತ್ತುವರಿಯಲ್ಪಟ್ಟು ನೀರಿನ ಕೋಟೆ.

೨. ಪಾರ್ವತ: ಬೆಟ್ಟಗಳ ಮೇಲೆ ದೊಡ್ಡ ದೊಡ್ಡ ಕಲ್ಲು ಮತ್ತು ಬಂಡೆಗಳಿಂದ ಕಟ್ಟಿರುವುದು ಅಥವಾ ಭಯ ಹುಟ್ಟಿಸುವಂತೆ ಗುಹೆಯ ಮಾದರಿಯಲ್ಲಿರುವುದು.

೩. ಧಾನ್ವನ: ಮರಳು ಭೂಮಿಯಲ್ಲಿ ನೀರಿಲ್ಲದೆ ಒಣ ಮರಳು ಮತ್ತು ಒಣ ಮಣ್ಣನ್ನು ತುಂಬಿ ಕಟ್ಟಿದ ಕೋಟೆಗಳು.

೪. ವನ: ಅನೇಕ ಚಿಕ್ಕಪುಟ್ಟ ಪಕ್ಷಿಗಳಿಂದ ನೀರಿನಿಂದ ಕೂಡಿ ದಟ್ಟವಾಗಿರುವ ಅರಣ್ಯ ಕೋಟೆಗಳು.

ಈ ನಾಲ್ಕು ಪ್ರಕಾರದ ಕೋಟೆಗಳಲ್ಲಿ ಮೊದಲನೆ ಎರಡು ಅಂದರೆ ಔದಕ ಮತ್ತು ಪಾರ್ವತಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾನೆ. ಏಕೆಂದರೆ ಇವು ಅಧಿಕ ರಕ್ಷಣೆ ಕೊಡುತ್ತವೆ.[2]

ಮತ್ತೆ ಕೌಟಿಲ್ಯನು ತಲವಿನ್ಯಾಸ ಅಥವಾ ಆಕಾರದಿಂದ ಕೋಟೆಯನ್ನು ಮೂರು ರೀತಿಯಲ್ಲಿ ವಿಭಜಿಸಿದ್ದಾನೆ.

ವೃತ್ತ : ವರ್ತುಲಾಕಾರ

ಧೀರ್ಘಾಚತುರಸ್ರ : ಆಯತಾಕಾರ

ಚತುರಸ್ರ : ಚೌಕಾಕಾರ

ಕಾಮಂದಕನು ತನ್ನ ನೀತಿಸಾರದಲ್ಲಿ ಸ್ಥಳದ ಆಧಾರದ ಮೇಲೆ ಕೋಟೆಗಳನ್ನು ವಿಂಗಡಿಸಿ ಚರ್ಚಿಸಿದ್ದಾನೆ.[3]

ಔದಕ: ನೀರಿನಿಂದ ಆವೃತವಾಗಿರುವುದು

ಪಾರ್ವತ : ಗುಡ್ಡಗಳಿಂದ ಸುತ್ತುವರೆದಿದ್ದು

ಧಾನ್ವನ: ನೀರಿಲ್ಲದ ಒಣ ಭೂಮಿಯಿಂದ ಕೂಡಿದ್ದು

ವನ : ಅರಣ್ಯಗಳಿಂದ ಸುತ್ತುವರೆದಿದ್ದು

ಐರಣಿ ಹಳ್ಳ ಹಾಗೂ ಕಲ್ಲುಗಳಿಂದ ಸುತ್ತುವರೆಯಲ್ಪಟ್ಟಿದ್ದು, ಎಂಬುದಾಗಿ ಐದು ವಿಧಗಳಲ್ಲಿ ವಿಂಗಡಿಸಿದ್ದಾನೆ.

ಮನುಸ್ಮೃತಿಯಲ್ಲಿ ಕೋಟೆಗೆ ಉಪಯೋಗಿಸುವ ಸಾಮಗ್ರಿ ಹಾಗೂ ಸ್ಥಳದ ಆಧಾರದ ಮೇಲೆ ವಿಂಗಡಣೆಯಾದ ಆರು ವಿಧವಾದ ಕೋಟೆಗಳ ಬಗ್ಗೆ ಚರ್ಚಿಸಲಾಗಿದೆ.[4]

ಧನದುರ್ಗಂ ಮಹಿದುರ್ಗಂ ಅಬ್ ದುರ್ಗಂ ವಾಕ್ಷಮೇವ ವಾ |
ಗಿರಿದುರ್ಗಂ ನೃದುರ್ಗಂ ವಾಸಮಾಶ್ರಿತ್ಯ ವಸೇತ್ಪುರಮ್ ||[5]

ಧನು : ಕಾಡು ಹಾಗೂ ನೀರಿಲ್ಲದ ಪ್ರದೇಶದಿಂದ ಸುತ್ತುವರೆದ ಮರುಭೂಮಿ

ಮಹೀ: ಕಲ್ಲು ಅಥವಾ ಇಟ್ಟಿಗೆಯಿಂದ ನಿರ್ಮಿಸಿದ್ದು

ಜಲ : ಆಳವಾದ ನೀರಿನಿಂದ ಸುತ್ತುವರೆದಿರುವುದು

ವೃಕ್ಷ : ಎತ್ತರವಾದ ಮರಗಳು ಮುಳ್ಳುಗಿಡಗಳು ಬಳ್ಳಿಗಳು ಇತ್ಯಾದಿಗಳಿಂದ ಸುತ್ತುವರೆಯಲ್ಪಟ್ಟಿದ್ದು

ವರ : ಆನೆ, ಕುದುರೆ, ರಥ ಮತ್ತು ಕಾಲುದಳಗಳನ್ನೊಳಗೊಂಡ ಚತುರ್ಬಲಗಳಿಂದ ರಕ್ಷಿಸಲ್ಪಟ್ಟಿರುವುದು

ಗಿರಿ : ನೀರು ಮತ್ತು ಫಲ ನೀಡುವ ಮರಗಳಿಂದ ಕೂಡಿದ, ಹತ್ತಲು ಕಷ್ಟಕರವಾದ ಬೆಟ್ಟದ ಮೇಲಿನದು.

ಸರ್ವೇತು ಪ್ರಯತ್ನೇನ ಗರಿದುರ್ಗಂ ಸಮಾಶ್ರಯೇತ್ |
ಏಕ್ಷಾಂಹಿ ಬಾಹುಗುಣೇನ ಗಿರಿದುರ್ಗಂ ವಿಶೇಷತೆ ||[6]

ಮನು ಗಿರಿದುರ್ಗವನ್ನು ಅತ್ಯುತ್ತಮವೆಂದು ಪರಿಗಣಿಸಿದ್ದಾನೆ. ಏಕೆಂದರೆ ಅದನ್ನು ಬಹಳ ಶ್ರಮದಿಂದ ಮಾತ್ರ ವಶಪಡಿಸಿಕೊಳ್ಳಲು ಸಾಧ್ಯ.

ಸ್ಥಳದ ಆಧಾರದ ಮೇಲೆ ವಿಂಗಡಿಸಿದ ಒಂಬತ್ತು ವಿಧದ ಕೋಟೆಗಳನ್ನು ಶುಕ್ರ ನೀತಿಸಾರದಲ್ಲಿ ಚರ್ಚಿಸಲಾಗಿದೆ.[7]

ಪರಿಖ : ಕೋಟೆಯ ಸುತ್ತಲೂ ಆಳವಾದ ಕಂದಕವಿರುವುದು

ಐರಣಿ ಹಳ್ಳ, ಮುಳ್ಳು ಕಲ್ಲುಗಳಿಂದ ಸುತ್ತುವರೆಯಲ್ಪಟ್ಟಿದ್ದು

ಪರಿಘ : ಕಲ್ಲು ಇಟ್ಟಿಗೆ ಅಥವಾ ಮಣ್ಣಿನ ಎತ್ತರವಾದ ಗೋಡೆಗಳಿಂದ ಸಂರಕ್ಷಿಸಲ್ಪಟ್ಟಿರುವುದು

ವನ : ಸುತ್ತಲೂ ಮುಳ್ಳಿನಿಂದ, ಗುಂಪಾಗಿರುವ ಮರಗಳಿಂದ ಕೂಡಿರುವುದು

ಧನ್ವ : ನೀರಿಲ್ಲದ ಒಣಭೂಮಿ

ಜನ ಕೋಟೆ ಸುತ್ತಲೂ ನೀರಿನಿಂದ ಕೂಡಿರುವುದು

ಸೈನ್ಯ : ಶಾಸ್ತ್ರ ಸನ್ನದ್ಧವಾದ, ಸದೃಢರಾದ ಸೈನಿಕರಿಂದ ರಕ್ಷಿಸಲ್ಪಡುವ ಸ್ಥಳ

ಸಹಾಯ : ಬಂಧುಗಳು ಮತ್ತು ಸ್ನೇಹಿತರ ಮನೆಗಳಿಂದ ಅವೃತವಾಗಿರುವುದು

ಮೇಲೆ ಹೇಳಲಾದ ಪ್ರಕಾರಗಳಲ್ಲಿ ಯಾವ ಪ್ರಕಾರದ ಕೋಟೆ ಉತ್ತಮವೆಂದು ಈ ಕೆಳಗಿನಂತೆ ಪ್ರತಿಕ್ರಿಯಿಸುತ್ತಾನೆ.

ಪರಿಖಾ ದೈರಿಣಂ ಶ್ರೇಷ್ಟಂ ಪರಿಘಂತು ತತೋವನಮ್ |
ತತೋಧನಂ ಜನಂತಸ್ಮಾದ್ ಗಿರಿದುರ್ಗಂ ತತಃ ಸ್ಮೃತಮ್ ||

ಅಂದರೆ ಪರಿಖಗಿಂತ ಐರಿಣ ಉತ್ತಮವಾಗಿದೆ. ಇದಕ್ಕಿಂತ ಪರಿಘಾ ಉತ್ತಮವಾದ ಕೋಟೆ. ವನ ಪರಿಘಾಗಿಂತ ಹೆಚ್ಚು ರಕ್ಷಣೆಯನ್ನು ಕೊಡುತ್ತದೆ. ಸೈನಿಕ ಮತ್ತು ಸಹಾಯಕ ಕೋಟೆ ಬೇರೆ ಎಲ್ಲಾ ಕೋಟೆಗಳಿಗಿಂತಲೂ ಉತ್ತಮವಾದುದು.[8]

ಸ್ಥಳದ ಆಧಾರದ ಮೇಲೆ ವಿಂಗಡಿಸಿದ ಮೂರು ವಿಧದ ಕೋಟೆಗಳನ್ನು ಬೃಹತ್ ಸಂಹಿತೆಯಲ್ಲಿ ಕಾಣಬಹುದು.[9]

ಗಿರಿದುರ್ಗ : ಬೆಟ್ಟಗಳಿಂದ ಆವರಿಸಿದೆ.

ಸಲಿಲದುರ್ಗ : ನೀರಿನಿಂದ ಸುತ್ತುವರಿಯಲ್ಪಟ್ಟಿದ್ದು

ಅತ್ವೀಕ್: ಅರಣ್ಯಗಳಿಂದ ಕೂಡಿದ್ದು

ಭೋಜನಯುಕ್ತಿ ಕಲ್ಪತರು ತಮ್ಮ ಗ್ರಂಥದಲ್ಲಿ ಕೋಟೆಯ ಎರಡು ಬಗೆಯನ್ನು ಚರ್ಚಿಸಿದ್ದಾರೆ.[10]

ಕೃತ್ತಿಮ : ಅಸ್ವಾಭಾವಿಕ

ಅಕೃತ್ತಿಮ: ಸ್ವಾಭಾವಿಕ

ಸೋಮದೇವ ಸೂರಿಯು ತನ್ನ ನೀತಿವಾಕ್ಯಮೃತ ಗ್ರಂಥದಲ್ಲಿ ಎರಡು ವಿಧಗಳಲ್ಲಿ ವರ್ಗಿಸಿದ್ದಾನೆ.[11]

ಸ್ವಾಭಾವಿಕ : ಪ್ರಕೃತಿದತ್ತವಾದಂತಹ ಬೆಟ್ಟ ನೀರಿನಿಂದ ಕೂಡಿರುವಂತಹದ್ದು

ಅಸ್ವಾಭಾವಿಕ: ಕೋಟೆಗೆ ಬೇಕಾದ ಎತ್ತರವಾದ ಗೋಡೆಗಳು ಆಯುಧಗಳು,

ಸೈನಿಕರು ಬಾಗಿಲುಗಳಿಂದ ಕೂಡಿರುವುದು.

ದುರ್ಗಸಿಂಹನು ಹನ್ನೊಂದನೆ ಶತಮಾನದಲ್ಲಿ ಕಲ್ಯಾಣ ಚಾಲುಕ್ಯ ಅರಸ ಜಗದೇಕಮಲ್ಲ ಜಯಸಿಂಹನ ಸಂಧಿವಿಗ್ರಹಿಯಾಗಿದ್ದವನು. ಈತನು ಕನ್ನಡದಲ್ಲಿ ಪಂಚತಂತ್ರವನ್ನು ಬರೆದಿದ್ದಾನೆ. ಇದರಲ್ಲಿ ಸ್ಥಳಾಧಾರದ ಮೇಲೆ ವಿಂಗಡಿಸಿದ ಎರಡು ಪ್ರಕಾರದ ಕೋಟೆಗಳ ವಿವರವಿದೆ.[12]

ಜಲದುರ್ಗ

ಅಂತದ್ವೀಪ : ಎರಡು ನದಿಗಳ ಸಂಗಮದ ಮಧ್ಯದ ಕೋಟೆ. ದೊಡ್ಡ ಕೆರೆ, ಮುಳ್ಳುಗಳಿಂದ ತುಂಬಿದ ಸರೋವರಗಳಿಂದ ಸುತ್ತುವರೆದ ಕೋಟೆ

ಗಿರಿದುರ್ಗ

ಗುಹ್ಯ: ಬಹಳ ಎತ್ತರವಾದ ಬೆಟ್ಟದ ತುದಿಗಳು ನಾಲ್ಕು ಕಡೆಯಿದ್ದು, ಒಂದೇ ಬಾಗಿಲುಳ್ಳ ಕೋಟೆ

ಪ್ರಸ್ತರ : ಎಲ್ಲಿಯೂ ಒಳ್ಳೆಯ ದಾರಿ ಇಲ್ಲದೆ, ಬೆಟ್ಟಗಳ ನಡುವೆ ನೀರು ಬೀಳುವ ಸ್ಥಳದಲ್ಲಿ ಮಾತ್ರ ಕಿರಿದಾದ ದಾರಿ ಇರುವುದು.

ಸ್ಥಲದುರ್ಗ

ಉದಕಸ್ತಂಭ: ಕೋಟೆಯ ಹೊರವಲಯದಲ್ಲಿ ನೀರು, ಗಿಡ, ಮರ, ಹುಲ್ಲು, ಬಳ್ಳಿಗಳಿಲ್ಲದೆ, ಒಳಗೆ ಮಾತ್ರ ಹುಲ್ಲು ಕಡ್ಡಿ, ನೀರಿನಿಂದ ಸಮೃದ್ಧವಾಗಿರುವುದು.

ವೈರಿಣಿ: ದುರ್ಗದ ಹೊರಗೆ ಉಪ್ಪು ನೀರು ಕುಡಿಯಲು ಬಾರದ ನೀರು ಅಥವಾ ಸ್ವಲ್ಪ ನೀರು ಇರುವುದು.

ವನದುರ್ಗ

ಕರ್ದಮೋದಕ: ಸುತ್ತ ನೀರು ತುಂಬಿದ ಜಲಾಶಯವಿದ್ದು, ಹೆದರಿಸುವಷ್ಟು ಅತಿ ಶೀತಲವಾದ ಕೆಸರುಳ್ಳದ್ದು

ಸ್ತಂಬಗಹನ : ಅನೇಕ ಮರಗಳಿಂದ ಪರಿವೃತವಾಗಿ ಸುತ್ತಲೂ ಹುಲ್ಲು ಯಥೇಚ್ಛವಾಗಿ ಬೆಳೆದಿರುವುದು

ಹನ್ನೆರಡನೆಯ ಶತಮಾನದ ಮೂರನೆಯ ಚಾಳುಕ್ಯ ಸೋಮೇಶ್ವರನ ಮಾನಸೋಲ್ಲಾಸ ಅಥವಾ ಅಭಿತಾರ್ಥ ಚಿಂತಾಮಣಿ ಮತ್ತು ಹದಿನೇಳನೆಯ ಶತಮಾನದ ಕೆಳದಿ ಬಸವರಾಜನ ಶಿವಾತತ್ವ ರತ್ನಾಕರದಲ್ಲಿ ಒಂಭತ್ತು ಪ್ರಕಾರದ ಕೋಟೆಗಳು ನಮೂದಿಸಲ್ಪಟ್ಟಿವೆ.[13]

ಜಲದುರ್ಗ: ಆಳವಾದ ನೀರಿನಿಂದ ಆವರಿಸಲ್ಪಟ್ಟಿರುವುದು

ಗಿರಿದುರ್ಗ: ದುರ್ಗಮಯವಾದ ಬೆಟ್ಟದ ಮೇಲೆ ಕಟ್ಟಿರುವುದು

ಪಾಕ್ಷಣದುರ್ಗ : ಬಂಡೆಗಳಿಂದ ರಚಿಸಿರುವುದು

ಇಷ್ಟಕದುರ್ಗ: ಇಟ್ಟಿಗೆಗಳಿಂದ ಕಟ್ಟಿ ಸುಣ್ಣ ಬಣ್ಣ ಬಳಿದು ಅಗಲವಾದ ಮತ್ತು ಆಳವಾದ ಕಂದಕಗಳಿಂದ ಸುತ್ತುವರೆಯಲ್ಪಟ್ಟಿರುವುದು

ಮೃತ್ತಿಕಾಮಯಮ್ : ಮಣ್ಣಿನಿಂದ ಕಟ್ಟಿರುವುದು

ವನದುರ್ಗ: ದಟ್ಟವಾದ ಮುಳ್ಳು ಮರಗಳಿಂದ ಆವರಿಸಿರುವುದು

ಮರದುರ್ಗ : ಕೋಟೆಯೊಳಗೆ ಸಾಕಷ್ಟು ನೀರನ್ನು ಸಂಗ್ರಹಿಸಿ ಮರುಭೂಮಿಯಲ್ಲಿ ಕಟ್ಟಿರುವುದು

ದಾರಮಯದುರ್ಗ : ಮರ ಮತ್ತು ಬಂಬುಗಳಿಂದ ತಯಾರಿಸಿರುವುದು

ನರದುರ್ಗ : ಸುತ್ತಲೂ ಶಸ್ತ್ರ ಸಜ್ಜಿತರಾದ ಯೋಧರನ್ನು ನಿಲ್ಲಿಸಿ ನಿರ್ಮಿಸಿರುವುದು. ಪುರಾಣಗಳಲ್ಲಿಯೂ ಸಹ ಅನೇಕ ಪ್ರಕಾರದ ಪ್ರಸ್ತಾಪ ಮಾಡಿದ್ದಾನೆ.

ವಾಯು ಪುರಾಣದಲ್ಲಿ ನಾಲ್ಕು ಪ್ರಕಾರದ ಕೋಟೆಗಳ ವಿಂಗಡಣೆ ಇದೆ.[14] ಮತ್ಸ್ಯ ಪುರಾಣದಲ್ಲಿ ಆರು ಪ್ರಕಾರದ ಕೋಟೆಗಳ ಪ್ರಸ್ತಾಪವಿದೆ.[15]

ಧನುದುರ್ಗ : ಕಾಡು ಮತ್ತು ನೀರಿಲ್ಲದ ಪ್ರದೇಶದಿಂದ ಸುತ್ತುವರೆದ ಮರಳಭೂಮಿ

ಮಹಿದುರ್ಗ : ಕಲ್ಲು ಹಾಗೂ ಇಟ್ಟಿಗೆಯಿಂದ ಕಟ್ಟಿರುವುದು

ನರದುರ್ಗ: ಆನೆ, ಕುದುರೆ, ರಥ ಹಾಗೂ ಕಾಲುದಳಗಳನ್ನೊಳಗೊಂಡ ರಕ್ಷಣಾ ಸ್ಥಳ

ವೃಕ್ಷದುರ್ಗ : ಎತ್ತರವಾದ ಮರಗಳು, ಮರಗಿಡಗಳು ಇತ್ಯಾದಿ ಸುತ್ತುವರೆದಿದ್ದು

ಜಲದುರ್ಗ : ನೀರಿನಿಂದ ಆವರಿಸಿರುವುದು

ಗಿರಿದುರ್ಗ : ಬೆಟ್ಟಗಳಿಂದ ಆವರಿಸಿರುವುದು

ಮಹಾಭಾರತದ ಶಾಂತಿಪರ್ವ, ವಿಷ್ಣು ಧರ್ವೋತ್ತರ ಪುರಾಣ, ವಿಷ್ಣು ಧರ್ಮಸೂತ್ರ ಮುಂತಾದವುಗಳಲ್ಲಿ ಆರು ಬಗೆಯ ಕೋಟೆಗಳ ಉಲ್ಲೇಖಗಳಿವೆ.[16] ಭಾಗವತ ಪುರಾಣ, ಶಸ್ತ್ರದುರ್ಗದ ಬಗ್ಗೆ ತಿಳಿಸುತ್ತದೆ. ಇದರೊಂದಿಗೆ ಜಲ ಅಗ್ನಿ ಮತ್ತು ಅನಿಲದುರ್ಗಗಳನ್ನು ಹೆಸರಿಸುತ್ತದೆ.[17] ನರದುರ್ಗವೇ ಅತ್ಯುತ್ತಮವೆಂದು ಮಹಾಭಾರತ ತಿಳಿಸುತ್ತದೆ.[18]

ಮಾನಸಾರ ಗ್ರಂಥದಲ್ಲಿ ಗ್ರಾಮ ಮತ್ತು ನಗರ ವಿನ್ಯಾಸಗಳನ್ನು ಎರಡು ಮಾದರಿಯಲ್ಲಿ ವಿಂಗಡಿಸಲಾಗಿದೆ. ಪಟ್ಟಣ ಮತ್ತು ಕೋಟೆ ಎಂಬುದು ಇಲ್ಲಿ ಒಂದೇ ಆಗಿವೆ. ಎರಡರಲ್ಲೂ ವ್ಯತ್ಯಾಸ ಕಂಡುಬರುವುದಿಲ್ಲ.[19]

ದಂಡಕ : ಪಟ್ಟಣದ ನಾಲ್ಕು ಮೂಲೆಗೆ ಗೋಡೆಗಳಿರಬೇಕು. ಈಶಾನ್ಯಕ್ಕೆ ಶಿವ ದೇವಾಲಯ ಉತ್ತರಕ್ಕೆ ಚಾಮುಂಡಿ ಇರಬೇಕು.

ಸರ್ವೆತೋಬದ್ರ : ಚತುರ್ಮುಖ ಆಕಾರದಲ್ಲಿದ್ದು ಸುತ್ತಲೂ ಕಂದಕ ಮತ್ತು ನಾಲ್ಕು ದೊಡ್ಡ ಹಾಗೂ ಚಿಕ್ಕ ಬಾಗಿಲುಗಳ ಮೂಲೆಯಲ್ಲಿರಬೇಕು.

ಸಂದ್ಯವರ್ತ : ದೀರ್ಘ ಚತುಷ್ಕೋಣವಾಗಿದ್ದು ಒಳಗೆ ನಾಲ್ಕು ಭಾಗಗಳನ್ನಾಗಿ ಮಾಡಿ ಪ್ರತಿಯೊಂದಕ್ಕೂ ಮೂರರಿಂದ ಏಳು ಬೀದಿಗಳು ಇರುತ್ತಿದ್ದವು.

ಪದ್ಮಕ : ಕೋಟೆಗೆ ಗೋಡೆ, ಕಂದಕ ಮತ್ತು ಇದಕ್ಕೆ ನಾಲ್ಕು ಮೂರ್ತಿಗಳು ಎಂಟು ಹನ್ನೆರಡು ಅಥವಾ ಹದಿನಾರು ಮುಖಗಳು ಇದ್ದು ನೋಡಿದರೆ ಚೌಕಾಕಾರ ವೃತ್ತಾಕಾರದಲ್ಲಿ ಕಾಣುವುದು.

ಸ್ವಸ್ತಿಕ : ಕಂದಕ, ಗೋಡೆ, ಎರಡೆರಡು ಬಾಗಿಲುಗಳನ್ನು ಒಳಗೊಂಡಿದೆ.

ಪ್ರಸ್ತರ : ಚೌಕ ಅಥವಾ ಆಯತಾಕಾರ ಇರಬೇಕು. ಬದಲಾಗಿ ವೃತ್ತಾಕಾರದಲ್ಲಿ ಇರಬಾರದು. ಇಲ್ಲಿ ನಾಲ್ಕು ಮಧ್ಯದ ಬಾಗಿಲುಗಳು ಇರುತ್ತವೆ.

ಕರಮುಕ : ಇದು ಅರ್ಧವೃತ್ತಾಕಾರದಲ್ಲಿರುವುದು

ಚತುರ್ಮುಖ : ನಾಲ್ಕು ಮುಖದ ಬಾಗಿಲುಗಳು ಅವು ಚೌಕ ಅಥವಾ ಆಯತಾಕಾರದಲ್ಲಿರಬಹುದು.

ಕಾರ್ಯ ಸ್ವರೂಪ ಅಥವಾ ಊರುಗಳನ್ನು ಆಧಾರವಾಗಿಟ್ಟುಕೊಂಡು ಮಾನಾಸಾರ ಗ್ರಂಥದಲ್ಲಿ ಪುನಃ ಎಂಟು ವಿಧದ ಕೋಟೆಗಳನ್ನು ಹೆಸರಿಸಿದೆ[20] ಅವು ಕೆಳಗಿನಂತಿವೆ.

ಶಿರ : ರಾಜನಬೀಡು

ಸ್ಥಾನೀಯ : ರಾಜಧಾನಿ

ದ್ರೋಣಕ : ನೀರಿನ ಸಮೀಪ ಇರುವುದು

ವಾಹಿನೀ: ಮುಖ ಯುದ್ಧಭೂಮಿಯಿಂದ ದೂರ ಇರುವ ಸೈನ್ಯ ನೆಲೆ

ಸಂವಿದ್ದ : ಜಯವನ್ನು ಕೊಡುವುದು

ಕೋಲಕ: ಪರ್ವತಮಯ ಪ್ರದೇಶ, ದುರ್ಗಮವಾದುದು

ನಿಗಮ : ಕಾವಲುಗಾಗಿ ನಿರ್ಮಿಸಿರುವುದು

ಸ್ಕಂದಾವರ : ಸೈನ್ಯದ ಬೀಡು.

ಇದೇ ಗ್ರಂಥದಲ್ಲಿ ಮುಂದೆ ಸೈನಿಕ ವಾಸ್ತು ದೃಷ್ಟಿಯಿಂದ ಚರ್ಚಿಸಲ್ಪಟ್ಟು ಏಳು ಪ್ರಕಾರದ ಕೋಟೆಗಳ ಪ್ರಸ್ತಾಪವಿದೆ.[21]

ಗಿರಿದುರ್ಗ : ಬೆಟ್ಟದ ಮೇಲಿರುವುದು

ವನದುರ್ಗ : ಅರಣ್ಯದಲ್ಲಿರುವುದು

ಜಲದುರ್ಗ : ನೀರಿನ ಮಧ್ಯದಲ್ಲಿರುವುದು

ಪಂಕದುರ್ಗ : ಮಣ್ಣಿನ ದುರ್ಗ

ರಥದುರ್ಗ: ಯುದ್ಧಭೂಮಿಯಲ್ಲಿ ರಥಗಳು ಸುತ್ತುವರೆದಿರುವುದು

ದೇವದುರ್ಗ : ಮಂತ್ರಗಳ ಮೂಲಕ ದೇವರು ರಕ್ಷಿಸುವ ದುರ್ಗ

ಮಿಶ್ರದುರ್ಗ : ಮೇಲಿನ ಒಂದಕ್ಕಿಂತ ಹೆಚ್ಚು ಅಂಶಗಳನ್ನು ಒಳಗೊಂಡ ಕೋಟೆ.

ಪಟ್ಟಣವನ್ನು ಆಧಾರವಾಗಿಟ್ಟುಕೊಂಡು ಹದಿನಾಲ್ಕು ಪ್ರಕಾರದ ಕೋಟೆಗಳನ್ನು ಮಯಾಮತ ಗ್ರಂಥವು ಹೆಸರಿಸುತ್ತದೆ.[22] ಗ್ರಾಮ, ಖೇಟಕ, ಕರ್ವಕ, ದುರ್ಗ, ನಗರ, ರಾಜಧಾನಿ, ಪಟ್ಟಣ, ದ್ರೋಣಕ, ಶಿಖಿರ, ಸ್ಕಂದವರ ಸ್ಥಾನೀಯ, ವಿಹಂಬಿಕಾ ನಿಗಮ ಮತ್ತು ಸಕಾನಗರ. ಇದೇ ಗ್ರಂಥವು ಆಕಾರದ ಆಧಾರದ ಮೇಲೆ ಐದು ವಿಧ ಕೋಟೆಗಳನ್ನು ವಿಂಗಡಿಸಿದೆ.[23] ಅವುಗಳೆಂದರೆ ಚತುರಸ್ರ, ದೀರ್ಘ ಚತುರಸ್ರ, ವೃತ್ತಾಯತ ಮತ್ತು ಗೋಲ ವೃತ್ತಗಳಾಗಿವೆ. ಮುಂದೆ ಗಾತ್ರದ ಆಧಾರದ ಮೇಲೆ ಮೂರು ವಿಧದ ಕೋಟೆಗಳನ್ನು ಹೆಸರಿಸಿದೆ. ಚಿಕ್ಕದು : ೬೦೪ (ದಂಡ ಅಳತೆಯಲ್ಲಿ) ಮಧ್ಯಮ: ೭೦೪ (ದಂಡ ಅಳತೆಯಲ್ಲಿ) ದೊಡ್ಡದು: ೭೬೮ (ದಂಡ ಅಳತೆಯಲ್ಲಿ)

ವಿಶ್ವಕರ್ಮ ವಾಸ್ತು ಶಾಸ್ತ್ರವು ಕೋಟೆಯ ಪ್ರಾದೇಶಿಕತೆ, ಅದರ ದ್ವಾರಗಳು ಹಾಗೂ ತಾಂತ್ರಿಕತೆಯ ಆಧಾರದ ಮೇಲೆ ಕೋಟೆಯನ್ನು ಹನ್ನೆರಡು ವಿಧಗಳಲ್ಲಿ ವಿಂಗಡಿಸುತ್ತದೆ.[24]

ಗಿರಿದುರ್ಗ : ಬೆಟ್ಟದ ಮೇಲಿರುವುದು ಇದರಲ್ಲಿ ಮೂರು ವಿಧಗಳಿವೆ. ಗಿರಿಸನು ಗಿರಮರ್ಧ್ಯ ಮತ್ತು ಗಿರಿಮರ್ದನಿ

ವನದುರ್ಗ : ಅರಣ್ಯದಲ್ಲಿರುವುವು. ಇದರಲ್ಲಿ ಮೂರು ಬಗೆಗಳಿವೆ. ಊರ್ಧ್ವ, ಭೂದುರ್ಗ ಮತ್ತು ಅಂತಸ್ತ

ಜಲದುರ್ಗ : ಸುತ್ತಲೂ ನೀರಿನಿಂದ ಕೂಡಿರುವುದು

ಐರಣಿ : ಸುತ್ತಲೂ ಮರಳಿನಿಂದ ಕೂಡಿರುವುದು.

ದೈವತ: ಪ್ರಕೃತಿದತ್ತವಾಗಿ ಕಣಿವೆ, ಕಂದಕಗಳಿಂದ ಕೂಡಿರುವುದು.

ಪಾರ್ವತ: ಐದು ಗಿರಿದುರ್ಗದ ಶೈಲಿಯಲ್ಲಿರುವುದು

ದ್ವಾರದ ಆಧಾರ
ಏಕ ಮುಖ
ದ್ವಿಮುಖ
ಚತುರ್ಮುಖಗಳು

ತಾಂತ್ರಿಕತೆ ಆಧಾರ

ಪ್ರಭುದುರ್ಗ: ಬೆಟ್ಟದ ಇಳಿಜಾರಿನಲ್ಲಿ ಕಟ್ಟಬೇಕು. ಸುಲಭವಾಗಿ ಯಾರೂ ಹತ್ತಿರಕ್ಕೆ ಹೋಗಕೂಡದು. ಸುತ್ತಲೂ ಆಳವಾದ ಕಂದಕ ಇದ್ದು, ಇಲ್ಲಿ ಒಂದೇ ಮುಖ್ಯಬಾಗಿಲು ಮತ್ತು ಹನ್ನೆರಡು ಗೋಡೆಗಳು ಇದ್ದು, ಒಳಗೆ ಕಾವಲು ಗೋಪುರ ಕೊತ್ತಳಗಳನ್ನು ಒಳಗೊಂಡಿರಬೇಕು. ಇದು ನಾಲ್ಕು ಮುಖಗಳನ್ನು ಹೊಂದಿರಬೇಕು.

ಯುದ್ಧಮಾರ್ಗ : ಸುರಕ್ಷಿತವಾದಂತ ಸ್ಥಳದಲ್ಲಿ ಶತ್ರುವಿನ ಮೇಲೆ ದಾಳಿ ಮಾಡುವುದು. ಈ ಸ್ಥಳವು ಆರು ಅಥವಾ ಎಂಟು ಮೂಲೆಯಲ್ಲಿರುವುದು ಸೂಕ್ತವಾಗಿರುವುದು.

ಶಿಲ್ಪರತ್ನ ವಾಸ್ತು ಗ್ರಂಥದಲ್ಲಿ ಆಕಾರ ಮತ್ತು ಸ್ಥಳದ ಆಧಾರದ ಮೇಲೆ ಕೋಟೆಗಳನ್ನು ವಿಂಗಡಿಸಿದೆ. ಇಂಥ ಹತ್ತು ಪ್ರಕಾರಗಳನ್ನು ನಾವಿಲ್ಲಿ ಕಾಣಬಹುದು.[25] ಅವುಗಳೆಂದರೆ ಗಿರಿದುರ್ಗ, ಅರಣ್ಯದುರ್ಗ, ಜಲದುರ್ಗ, ದೈವಿಕದುರ್ಗ, ಧಾನ್ವ (ನೀರಿಲ್ಲದ ಪ್ರದೇಶ), ಕೃತ್ತಿಮದುರ್ಗ, ತ್ರಿಕೋನಾಕಾರ, ಚೌಕಾಕಾರ, ವೃತ್ತಾಕಾರ ಮತ್ತು ಆಯತಾಕಾರ ಎಂದಿದೆ.[26]

ಶೈವತಂತ್ರದ ಭಾಗವಾದ “ಸಾಮ್ರಾಜ್ಯಲಕ್ಷ್ಮಿ ಪೀಠಿಕಾ” ದಲ್ಲಿ ಎಂಟು ಪ್ರಕಾರದ ಕೋಟೆಗಳು ನಮೂದಿಸಲ್ಪಟ್ಟಿದೆ.[27] ಅವುಗಳೆಂದರೆ ಗಿರಿದುರ್ಗ, ವನದುರ್ಗ, ಗಹ್ವರದುರ್ಗ, ಜಲದುರ್ಗ, ಕದರ್ಮದುರ್ಗ, ಮಿಶ್ರದುರ್ಗ, ನರದುರ್ಗ ಮತ್ತು ಕಾಷ್ಟದುರ್ಗಗಳಾಗಿವೆ.

ಎತ್ತರವಾದ ಬೆಟ್ಟದ ಮೇಲೆ, ಅಗಲವಾದ ಅಗಮ್ಯವಾದ ಅವಾಹ್ಯತವಾಗಿ ನೀರಿನಿಂದ ಕೂಡಿದ, ಕಡಿದಾದ ಬಂಡೆಗಳನ್ನು ಹೊಂದಿದೆ ಮತ್ತು ಇಳಕಲಾದ, ಮೇಲೆ ಮತ್ತು ಕೆಳಗೆ ಅನೇಕ ಪ್ರಕಾರಗಳಿಂದ ಸುತ್ತುವರೆಯಲ್ಪಟ್ಟಿರುವ ಸುಲಭವಾಗಿ ಹತ್ತಲು ಅಸಾಧ್ಯವಾಗಿರುವ ಪಟ್ಟಣವನ್ನು ಗಿರಿದುರ್ಗ ಎಂದು ಹೇಳುತ್ತಾರೆ. ಗಿರಿದುರ್ಗದಲ್ಲಿ ಎಂಟು ಪ್ರಕಾರಗಳಿವೆ ಅವುಗಳೆಂದರೆ:

ಭದ್ರಮ್: ಎತ್ತರವಾದ ವೃತ್ತಾಕಾರದ ಹೊರ ಮೇಲ್ಮೈ ತಳಕಿನಿಂದ ಕೂಡಿದ ಸಾಕಷ್ಟು ಗುಹೆಗಳು ಮತ್ತು ಪಥಿಕಾಶ್ರಮಗಳನ್ನು ಹೊಂದಿದ್ದು ಸಂಪೂರ್ಣ ನೀರಿದ್ದು ಒಂದೇ ಒಂದು ಬಂಡೆಯ ಮೇಲೆ ಕಟ್ಟಲ್ಪಟ್ಟಿರುತ್ತದೆ.

ಅತಿಭದ್ರಮ್ : ನೆಲದಿಂದ ಮೇಲಿನವರೆಗೂ ವರ್ಗಾಕಾರದಲ್ಲಿದ್ದು, ಅತಿ ಎತ್ತರವಾದ ಅಗಲವಾದ ಗುಹೆಗಳು ಮತ್ತು ನೀರಿನಿಂದ ಆವರಿಸಲ್ಪಟ್ಟಿರುತ್ತದೆ.

ಚಂದ್ರ : ತಳದಲ್ಲಿ ದಂಡಾಕಾರದ ಅತಿ ಅಗಲವಾದ ತುದಿಚಂದ್ರನ ಆಕಾರದಲ್ಲಿದ್ದು, ಬಹಳವಾದ ನೀರಿನಿಂದ ಕೂಡಿದ್ದು, ದೇವತೆಗಳಿಗೂ ಸಹ ಅಗಮ್ಯವಾಗಿರುತ್ತದೆ.

ಅರ್ಧಚಂದ್ರ : ಅರ್ಧಚಂದ್ರಾಕಾರವಾಗಿದ್ದು, ಅತಿ ಹೆಚ್ಚು ಎತ್ತರವೂ ಅಲ್ಲದ ಅತಿ ಕಡಿಮೆಯೂ ಅಲ್ಲದ ಗುಹೆಗಳು ಪಥಿಕಾಶ್ರಮಗಳು ಮತ್ತು ನೀರಿನಿಂದ ಕೂಡಿರುತ್ತದೆ.

ನಾಭ: ತಳದಲ್ಲಿ ಸಂಕೀರ್ಣವಾಗಿದ್ದು, ತುದಿಯಲ್ಲಿ ಅಗಲವಾಗಿದ್ದು ಕ್ರಮವಾಗಿ ಹೆಚ್ಚುತ್ತಿದ್ದು ಕಮಲದ ಬೀಜದ ಸಿಂಬಿಯ ಆಕಾರದಲ್ಲಿರುತ್ತದೆ.

ಸುನಾಭ : ತಳದಲ್ಲಿ ಅಗಲವಾಗಿದ್ದು, ಮೇಲೆ ಹೋಗುತ್ತಾ ಚಿಕ್ಕದಾಗಿ ತುದಿಯಲ್ಲಿ ಕಿರಿದಾಗಿರುತ್ತದೆ.

ರುಚಿರಮ್ : ಸೋಪಾನ ಮಾರ್ಗದ ಮೆಟ್ಟಿಲುಗಳ ಉದ್ದ ಮತ್ತು ಅಗಲಗಳು ಕ್ರಮವಾಗಿ ಅಗಲವಾಗುತ್ತಿದ್ದು, ಉಪ್ಪರಿಗೆಯಂತಿರುತ್ತದೆ ಮತ್ತು ಹೆಚ್ಚು ನೀರಿನಿಂದ ಕೂಡಿರುತ್ತದೆ.

ವರ್ಧಮಾನಮ್ : ಮೃದಂಗ ಅಥವಾ ಮದ್ದಲೆಯ ಆಕಾರದಲ್ಲಿರುತ್ತದೆ.

ಇದೇ ರೀತಿ “ಸಾಮ್ರಾಜ್ಯಲಕ್ಷ್ಮಿ ಪೀಠಿಕಾ” ವನದುರ್ಗ ಹಾಗೂ ಗಹ್ವರ ದುರ್ಗಗಳನ್ನು ವರ್ಣಿಸಿದ. ವನದುರ್ಗವೆಂದರೆ ದಟ್ಟವಾದ ಮುಳ್ಳುಮರಗಳು ಪೊದೆಗಳು ಮತ್ತು ಬಳ್ಳಿಗಳಿಂದ ಅರಣ್ಯದಲ್ಲಿ ಕಟ್ಟಿರುವ ಕೋಟೆ. ರಹಸ್ಯ ಮಾರ್ಗಗಳು ಅಗಮ್ಯ ಪ್ರದೇಶಗಳು ಸೂರ್ಯನ ಕಿರಣಗಳೂ ಸಹ ಅಲ್ಲಿ ಪ್ರವೇಶಿಸಲಾರವು. ಸಿಂಹ ಮುಂತಾದ ವನ್ಯ ಪ್ರಾಣಿಗಳು ವಾಸಿಸುತ್ತಿದ್ದು ಭಯೋತ್ಪಾದಕವಾಗಿರುವಂತಹ ಕೋಟೆಗಳು. ಪುಲಿಂದ, ಪುಲ್ಕಸ, ಮ್ಲೇಚ್ಛ, ಶಬರ ಮುಂತಾದ ಪಂಗಡಗಳವರಿಂದ ಕಟ್ಟಲ್ಪಟ್ಟಿತ್ತು. ಸುತ್ತಲೂ ಅತಿ ಆಳವಾದ ಸಂಪೂರ್ಣ ನೀರಿನ ದೊಡ್ಡ ಸರೋವರಗಳು ಇರುತ್ತಿದ್ದವು.

ಗಹ್ವರದುರ್ಗ ನಗರವನ್ನು ರಕ್ಷಿಸುತ್ತದೆ. ಇದು ಸಮತಟ್ಟಲ್ಲದ; ಕೇವಲ ಕಲ್ಲು ಬಂಡೆಗಳೇ ಇರುವ ಭೂಮಿಯ ಮೇಲೆ ಕಟ್ಟಲ್ಪಟ್ಟಿರುತ್ತದೆ. ಗವಿ ಮತ್ತು ಹುಗೆಗಳಂತಿರುತ್ತದೆ. ಸುತ್ತಲೂ ಎಲ್ಲಾ ಕಡೆ ದೊಡ್ಡ ಮತ್ತು ಚಿಕ್ಕ ಕಲ್ಲುಗಳಿರುತ್ತದೆ. ಹತ್ತಿರದಲ್ಲಿ ವಾಸ ಮಾಡುವವರಿಗೆ ಅದು ಅಗೋಚರವಾಗಿರುತ್ತದೆ. ಸಾಕಷ್ಟು ಮರ, ಹುಲ್ಲು ಮತ್ತು ನೀರು ಇರುತ್ತದೆ. ನೀರಿನ ಮಧ್ಯೆ ದೀಪದಂತೆ ಜಲದುರ್ಗ ಕಟ್ಟಲ್ಪಟ್ಟಿರುತ್ತದೆ. ಸುತ್ತಲೂ ಕೆಸರು ತುಂಬಿದ್ದು, ಜಾರುವ ಕೆಸರಿನ ಮಧ್ಯೆ ಮುಚ್ಚಿ ಹೀರುವ ಕೋಟೆ ಪಂಕದುರ್ಗ. ಮಿಶ್ರದುರ್ಗ ಬೆಟ್ಟದ ಮೇಲೆ ಕಟ್ಟಲ್ಪಟ್ಟಿರುತ್ತದೆ; ಅಥವಾ ಕಾಡಿನಲ್ಲಿ ಮತ್ತು ಸುತ್ತಲೂ ಎಲ್ಲಾ ಕಡೆ ಜವಳು ಭೂಮಿಯಿದ್ದರೆ ಅದಕ್ಕೆ ಮಿಶ್ರದುರ್ಗ ಎಂದು ಕರೆಯುತ್ತಾರೆ. ನರದುರ್ಗವು ಸುತ್ತಲೂ ವಿವಿಧ ಪ್ರಕಾರದ ಶಸ್ತ್ರಗಳಿಂದ ಸುಸಜ್ಜಿತರಾದ ಸೈನಿಕ ಯೋಧರಿಂದ ರಕ್ಷಿಸಲ್ಪಡುತ್ತದೆ. ಕೋಷ್ಠದುರ್ಗ ಎತ್ತರವಾದ ಪ್ರಾಕಾರಗಳನ್ನು ಹೊಂದಿರುತ್ತದೆ. ಸುತ್ತಲೂ ಸುರಂಗಗಳು ಅನೇಕ ರೀತಿಯ ಪದಾರ್ಥಗಳು, ಆಯುಧಗಳು, ಕಟ್ಟಿಗೆಗಳು, ನೀರು ಮುಂತಾದವುಗಳಿರುತ್ತವೆ. ಆಕಾರ, ಪ್ರಕಾರಗಳ ಸಂಖ್ಯೆ ಮತ್ತು ಅವುಗಳ ಉದ್ದ ಅಗಲಗಳಿಗನುಗುಣವಾಗಿ ವೇದಸ್ರ, ವರ್ತುಲ, ದೀರ್ಘ ವರ್ತುಲ, ಪಂಚಕೋಣ, ಅಷ್ಟಾಶ್ರ. ಪದ್ಮ ಸನ್ನಿಭ ಎಂದು ಕೋಷ್ಠ ದುರ್ಗದ ಎಂಟು ಪ್ರಕಾರಗಳು ಇವೆ.

ಕನ್ನಡ ಶಾಸನಗಳು ಮೂರು ಬಗೆಯ ದುರ್ಗಗಳನ್ನು ಉಲ್ಲೇಖಿಸಿದೆ. ಗಿರಿದುರ್ಗ, ವನದುರ್ಗ ಮತ್ತು ಜಲದುರ್ಗ[28] ಐಹೊಳೆ ಸ್ಥಲದುರ್ಗವನ್ನು ಉಲ್ಲೇಖಿಸುತ್ತದೆ. ಕ್ರಿ.ಶ. ೬೩೪ರ ಶಾಸನವು ಪುಲಿಕೇಶಿಯ ಸೇನಾ ಸಮುದ್ರವು ಸುತ್ತುವರೆದುದರಿಂದ ಸ್ಥಲದುರ್ಗವಾದ ಬನವಾಸಿಯ ಜಲದುರ್ಗವಾಯಿತ್ತೆಂದು ವರ್ಣಿಸುತ್ತದೆ. ಸಿರಸಂಗಿಯ ಕ್ರಿ.ಶ. ೧೧೬೮ರ ಶಾಸನವು ದೇವದುರ್ಗದ ವಿವರಣೆಯನ್ನು ನೀಡುತ್ತದೆ. ಮೂರುಕಡೆ ಪರ್ವತಗಳಿದ್ದು, ಒಂದು ಕಡೆ ಮಾತ್ರ ಬಯಲಿದ್ದರೆ ಅಂತಹ ಊರನ್ನು ಖರ್ವಡೆವೆಂದು ಕರೆಯುತ್ತಾರೆಂದೂ ಅದರಲ್ಲಿ ಬುಗ್ಗೆಯಿದ್ದರೆ ಅದನ್ನು ದೇವದುರ್ಗವೆನ್ನುತ್ತಾರೆಂದೂ ಅದು ತಿಳಿಸುತ್ತದೆ. ಬಾಗಳಿಯ ಕ್ರಿ.ಶ.೧೧೬೦ರ ಶಾಸನವು ವೀರಪಾಂಡ್ಯನು ಗಿರಿದುರ್ಗಕ್ಕೆ ಶನಿಸ್ವರೂಪನಾಗಿದ್ದನು. ಅಚನ ಕನ್ತಾರ (ವನ) ದುರ್ಗಕ್ಕೆ ಭೀಕರವಾದ ದಾವಾನಲ (ಕಾಡ್ಗಿಚ್ಚು) ಆಗಿದ್ದನು ಮತ್ತು ಅತಿ ಉದಾತ್ತ ಜನದುರ್ಗಕ್ಕೆ ಔರ್ವ (ಸಮುದ್ರದೊಳಗಿನ ಬೆಂಕಿ) ಯಾಗಿದ್ದನೆಂದು ವರ್ಣಿಸುತ್ತದೆ.[29] ವನದುರ್ಗವನ್ನು ಇಲ್ಲಿ ಕಾಂತಾರ ದುರ್ಗವೆಂದು ಕರೆಯಲಾಗಿದೆ.

ಶಾಸನಗಳು ಕೋಟೆಯ ಕೆಲವು ಭಾಗಗಳನ್ನು ಸಹ ಉಲ್ಲೇಖಿಸುತ್ತವೆ. ವಿಜಯನಗರ ಕೋಟೆಯ ಬಾಗಿಲುಗಳನ್ನು ಹೆಬ್ಬಾಗಿಲು, ಬಾಗಿಲು ಮತ್ತು ದಿಡ್ಡಿಗಳೆಂದು ವರ್ಗೀಕರಿಸಿರುವುದು ಶಾಸನಗಳಿಂದ ತಿಳಿಯುತ್ತದೆ. ಯುದ್ಧ ಸಮಯದಲ್ಲಿ ಗುರುತಿಸಲು ಅನುಕೂಲವಾಗುವಂತೆ ಈ ಬಾಗಿಲುಗಳಿಗೆ ಹೆಸರುಗಳನ್ನು ಇಡಲಾಗಿದೆ.

ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕೋಟೆಗಳು ಸಹ ವಿವಿಧ ರೀತಿಯ ಆಕಾರ ಗಾತ್ರ ಮತ್ತು ಆಯಕಟ್ಟಿನ ಸ್ಥಳಗಳನ್ನು ಹೊಂದಿರುವುದನ್ನು ನಾವು ನೋಡಬಹುದು. ಉಚ್ಚಂಗಿದುರ್ಗವು ಶ್ರೇಷ್ಟವಾದ ಗಿರಿದುರ್ಗವಾಗಿತ್ತೆಂದು ಶಾಸನಗಳಿಂದ ತಿಳಿಯುತ್ತದೆ. ಹೊಯ್ಸಳ ಬಲ್ಲಾಳನು ಈ ಕೋಟೆಯನ್ನು ಜಯಿಸಿ ಗಿರಿದುರ್ಗ ಮಲ್ಲನೆಂಬ ಬಿರುದನ್ನು ಪಡೆದನೆಂದು ತಿಳಿಸುತ್ತವೆ. ಗಡೇಕೋಟೆ, ಜರಿಮಲೆ, ವೀರದುರ್ಗ, ಕರಡಿದುರ್ಗ, ಬಳ್ಳಾರಿ, ಕೆಂಚನಗುಡ್ಡ ಮತ್ತು ತಂಬ್ರಹಳ್ಳಿ ಕೋಟೆಗಳು ಗಿರಿದುರ್ಗಕ್ಕೆ ಉತ್ತಮ ನಿದರ್ಶನಗಳಾಗಿವೆ. ಹರಪನಹಳ್ಳಿ, ಕೃಷ್ಣಾನಗರ, ಕಂಪ್ಲಿ, ಸಿರುಗುಪ್ಪ ಮತ್ತು ಹಂಪಾಪಟ್ಟಣದ ಕೋಟೆಗಳು ಬಯಲು ದುರ್ಗಗಳಾಗಿವೆ. ಹೊಸಮಲೆದುರ್ಗವನ್ನು ಜಿ.ವರದರಾಜ್ ರವರು ‘ವನ’ ದುರ್ಗವೆಂದು ಕರೆದಿದ್ದಾರೆ.[30] ಹಂಪಿ ಕೋಟೆಯನ್ನು ಗಿರಿದುರ್ಗವೆಂದು ಎಸ್.ಕೆ.ಜೋಶಿಯವರು ಅಭಿಪ್ರಾಯಪಟ್ಟಿರುವುದು ಸರಿಯಾಗಿಯೇ ಇದೆ.[31]

ಕೊತ್ತಳಗಳು (Bastions)

ಕೊತ್ತಳವೆಂದರೆ ಕೋಟೆಯ ಮೇಲ್ಭಾಗ ಕೋಟೆಯ ಮೇಲಿನ ಸೈನಿಕರು ನಿಂತು ಕಾದುವ ಎತ್ತರ ಪ್ರದೇಶವೆಂದು ಅರ್ಥಕೊಡುತ್ತದೆ. ಕೊತ್ತಳಕ್ಕೆ ಬುರುಜು, ಕೊತ್ತೆಲ, ಕೊತ್ತಲ ಮತ್ತು ಕಾವಲು ಗೋಪುರವೆಂತಲೂ ಕರೆಯುತ್ತಾರೆ. ಕೋಟೆ ಪದದೊಂದಿಗೆ ಕೊತ್ತಳವು ಸೇರಿಕೊಂಡಿದೆ.

ಈ ಜಿಲ್ಲೆಯ ಪ್ರದೇಶದಲ್ಲಿ ಬಹುಪಾಲು ಗ್ರಾಮಗಳಲ್ಲಿ ಕೊತ್ತಳಗಳಿವೆ. ಈ ಕೊತ್ತಳಗಳನ್ನು ಗ್ರಾಮದ ರಕ್ಷಣೆಗಾಗಿ ನಿರ್ಮಿಸುತ್ತಿದ್ದರು. ಯುದ್ಧ ನಡೆಯುವ ಸನ್ನಿವೇಶ ಬಂದಾಗ ಇವು ಆಯಕಟ್ಟಿನ ರಚನೆಯಾಗಿದ್ದವು. ಎತ್ತರವಾದ ಸ್ಥಳದಲ್ಲಿ ನಿರ್ಮಿತವಾಗಿರುವುದರಿಂದ ಶತ್ರುವಿನ ವಿರುದ್ಧ ಸಹಜವಾಗಿಯೇ ಒದಗುವ ಪ್ರಕೃತಿ ರಕ್ಷಣೆ. ಸುತ್ತಲೂ ವ್ಯಾಪಿಸಿರುವ ತಗ್ಗು ಪ್ರದೇಶದ ಶತ್ರು ಸೇನೆಯ ಮೇಲೆ ಕೋಟೆಯೊಳಗಿನಿಂದಲೇ ಕಾದಾಡಬಹುದಾದ ಅನುಕೂಲಕರ ಪರಿಸ್ಥಿತಿ.

ಕೌಟಿಲ್ಯನು ಅರ್ಥಶಾಸ್ತ್ರದಲ್ಲಿ ಕೋಟೆಗೆ ಅಂಟಿಕೊಂಡು ಕೊತ್ತಳಗಳಿರಬೇಕು, ಅವುಗಳಿಗೆ ಮೆಟ್ಟಿಲುಗಳಿರಬೇಕು. ಛಾವಣಿ ಹಾಕಿರಬೇಕೆಂದು ಹೇಳಿದ್ದಾನೆ.[32]

ಕೃಷ್ಣದೇವರಾಯನ ದಿನಚರಿಯಲ್ಲಿ ಕೋಟೆಯ ಜೊತೆಗೆ ಕೊತ್ತಳಗಳನ್ನು ನಿರ್ಮಿಸಿ ಅದನ್ನು ನೋಡಿಕೊಳ್ಳಲು ಪಾರುಪತ್ಯಗಾರರೆಂಬ ಅಧಿಕಾರಿಗಳನ್ನು ನೇಮಕ ಮಾಡಿದುದು ಕಂಡುಬರುತ್ತದೆ.[33] ಬಸವ ಪುರಾಣದಲ್ಲಿ ಭೀಮ ಕವಿಯ ಕೊತ್ತಳವನ್ನು ಉಲ್ಲೇಖಿಸುತ್ತಾನೆ.

ಇತ್ತರದೊಳುತ್ತಕ್ಕೂ ಕೋಂಟೆಯ
ಕೊತ್ತಳಂಗಳ ಸಂಧಿ ಸಂಧಿಯೂ
ಳೆತ್ತಿಸಿದ ನಟ್ಟಣೆಗಳಂ ಡೆಂಕಣಿಗಳೆಂತಹ
ಮುತ್ತಿಗೆಯೊಳಗಾಗದಂತಹ[34]

ಮೋಹನ ತರಂಗಿಣಿಯಲ್ಲಿ ಜಘನಗಳ ಕೊತ್ತಳ, ಕೊಬ್ಬಿದ ಕುಚಗಳ ಮುಗಿಲೆತ್ತರದ ಬುರುಜುಗಳನ್ನು ಸೂರ್ಯಕಾಂತ ಶಿಲೆಯಿಂದ ಮಾಡಿರುವುದಾಗಿ ಹಾಗೂ ಕೊತ್ತಳಗಳು ವಶಪಡಿಸಿಕೊಳ್ಳಲು ಹೊರಡುವ ವೈರಿಗಳ ಅಪ್ಪಂನಂತಿರುವವು[35] ಎಂದು ವರ್ಣಿತವಾಗಿದೆ.

ಶಾಸನಗಳು ಸಹ ಕೊತ್ತಳಗಳನ್ನು ಉಲ್ಲೇಖಿಸುತ್ತವೆ. ಕ್ರಿ.ಶ.೧೬೭೧ರ ಶಾಸನವು ಮಲಿಕ್ ಅಬ್ದುಲ್ ಮಹಮದನು ಹುಸೇನಿ ಬರುಜನ್ನು ಕಟ್ಟಿಸಿದಂತೆ ಹೇಳುತ್ತದೆ.[36] ಕ್ರಿ.ಶ. ೧೬೪೯ರ ಶಾಸನವು ಈ ಬುರುಜನ್ನು ಸಾಹೇಬ ಬುರುಜು ಎಂದು ಹೆಸರಿಸಿದೆ.[37] ಹಂಪಿಯಲ್ಲಿ ಕಂಡು ಬರುವ ಶಾಸನಗಳಲ್ಲಿ ಜಲಸೇನ ದೇವರ ಕೊತ್ತಳ,[38] ಮತಂಗದೇವರ ಕೊತ್ತಳ,[39] ಮಳಲ ವಿನಾಯಕ ಕೊತ್ತಳ,[40] ಸ್ವಾಮಿ ದ್ರೋಹದ ಗಂಡನ ಕೊತ್ತಳ,[41] ಪ್ರತಾಪ ಕೊತ್ತಳ,[42] ಸಂಖರದೇವರ ಕೊತ್ತಳ[43] ಮತ್ತು ಮೀಸರ ಗಂಡನ ಕೊತ್ತಳ[44] ಇತ್ಯಾದಿಗಳ ಉಲ್ಲೇಖಗಳಿವೆ. ಕೋಟೆ ಗೋಡೆಯಿಂದ ಚೌಕಾಕಾರದಲ್ಲಿ ಮುಂದೆ ಚಾಚಿದ ಭಾಗವನ್ನು ಕೊತ್ತಳವೆಂದು ಕರೆದಿರುವುದಲ್ಲದೆ. ಕೋಟೆ ಗೋಡೆಯ ಪಕ್ಕದಲ್ಲಿಯೆ ನೈಸರ್ಗಿಕವಾಗಿ ಎತ್ತರವಾಗಿರುವ ಬೆಟ್ಟದ ಭಾಗವನ್ನು ಕೊತ್ತಳವೆಂದು ಉಲ್ಲೇಖಿಸಲಾಗಿದೆ. ಬಳ್ಳಾರಿ ಪ್ರದೇಶದಲ್ಲಿ ಕಂಡುಬರುವ ಎಲ್ಲಾ ಕೋಟೆಗಳಲ್ಲಿ ಹತ್ತಾರು ಕೊತ್ತಳಗಳನ್ನು ಆಯಾ ಅಧ್ಯಾಯಗಳಲ್ಲೇ ನೀಡಲಾಗಿದೆ. ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಕಂಡುಬರುವ ಕೊತ್ತಳಗಳನ್ನು ಆಯಾ ತಾಲೂಕುಗಳಲ್ಲಿ ಕೊಡಲಾಗಿದೆ.

[1] Kautilyas Arthashastra., ಪೂರ್ವೋಕ್ತ. ಪು. ೧೮೪ -೧೮೫

[2] ಅದೇ, ಪು. ೧೮೪ -೧೮೫

[3] Ganapathi Shashtri, T. (Ed.), Nitisara of Kamandaka

[4] Buhler, G. Laws of Manu. SBE Series, Pp. 227 228

[5] ಸಂಸ್ಕೃತ ಗ್ರಂಥಗ

ಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ, ಪು. ೧೫೭ -೧೬೦

 

[6] ಅದೇ, ಪು. ೧೮೪ -೧೮೫

[7] Sarkar, B.S. Sudraniti Section IV

[8] ಅದೇ, ಪು. ೧೭೪

[9] Subramanya Shastri, V. Brihastsamhita, p. 174

[10] ಸುಜಾತ ಮಲ್ಲನಗೌಡ. ೨೦೦೦. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಕೋಟೆಗಳು ಒಂದು ಅಧ್ಯಯನ ಪಿಎಚ್. ಡಿ.

[11] Somadeva Suri. Nitivakyamritam, Pp. 81-82

[12] ರಾಮಾನುಜ ಅಯ್ಯಂಗಾರ್. ಪಂಚತಂತ್ರ. ಪು. ೨೧೫ ೧೬

[13] ಶಿವತತ್ವ ರತ್ನಾಕರ ೬, ಪೂರ್ವೋಕ್ತ.ಪು. ೫೬ -೬೦

[14] ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ. ಪು. ೧೫೭ -೧೬೦

[15] ಅದೇ, ಪು ೧೫೯

[16] ಅದೇ, ಪು. ೧೫೯

[17] ಅದೇ, ಪು. ೧೬೦

[18] ಅದೇ, ಪು. ೧೬೦

[19] Acharya, P.K. 1927. Manasara- an Encyclopedia of Architecture, p. 53. Allahabad

[20] ಅದೇ, ಪು. ೭೩

[21] ಅದೇ, ಪು. ೭೫

[22] ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೋಟೆಗಳು ಒಂದು ಅಧ್ಯಯನ, ಪೂರ್ವೋಕ್ತ. ಪು. ೪೩

[23] ಅದೇ, ಪು. ೪೯

[24] ಅದೇ, ಪು. ೪೩

[25] Rangachari, K. Town Planning and House Building in Ancient India, Pp. 813-23

[26] ಚಿದಾನಂದಮೂರ್ತಿ, ಎಂ. ೧೯೬೬. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪು. ೨೯೬-೮೭ ಮೈಸೂರು ವಿಶ್ವವಿದ್ಯಾಲಯ

[27] ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ. ಪು. ೧೬೦

[28] Ec.II. 43

[29] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧, ಪೂರ್ವೋಕ್ತ. ಪು. ೬೨೬-೩೦

[30] ವರದರಾಜ್ ರಾವ್, ಜಿ. ೧೯೮೫. ಕಮ್ಮಟದುರ್ಗ, ಪು. ೩೮. ಬೆಂಗಳೂರು ಐಬಿಎಚ್ ಪ್ರಕಾಶನ

[31] ಕರ್ನಾಟಕದ ಪ್ರಾಚೀನ ಕೋಟೆಗಳು ಮತ್ತು ಇತಿಹಾಸ ಪೂರ್ವೋಕ್ತ. ಪು. ೧೫೨

[32] Kautilyas Arthashastra, ಪೂರ್ವೋಕ್ತ. ಪು. ೧೮೪-೮೫

[33] ಸೀತಾರಾಮಯ್ಯ, ಎಂ.ವಿ. ಕೃಷ್ಣದೇವರಾಯನ ದಿನಚರಿ, ಪು. ೨೦- ೨೧. ಬೆಂಗಳೂರು ಬಿ. ಎಂ. ಶ್ರೀ ಪ್ರತಿಷ್ಠಾನ

[34] ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ. ಪು. ೧೫ -೨೦

[35] ಕೋತಿನ ಎಸ್. ಎಸ್. ಅನುವಾದ, ೧೯೮೪. ಮೋಹನ ತರಂಗಿಣಿ, ಪು. ೪೫. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು

[36] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧, ಪೂರ್ವೋಕ್ತ. ಪು. ೯೪

[37] ಅದೇ, ಪು. ೯೪

[38] ಅದೇ, ಪುಟ. ೮೬

[39] ಅದೇ, ಪುಟ. ೧೮೫

[40] ಅದೇ, ಪು. ೧೮೫

[41] ಅದೇ, ಪು. ೧೬೮

[42] ಅದೇ, ಪು. ೧೮೯

[43] ಅದೇ, ಪು. ೨೧೫

[44] ಅದೇ, ಪು. ೨೧೬.