ಕೋಟೆ ಎಂದರೆ ಆವರಣವುಳ್ಳ ಪ್ರದೇಶ ಎಂದರ್ಥ. ಕೋಟೆ ಅಥವಾ ರಕ್ಷಾವರಣ ಇದನ್ನು ಸಂಸ್ಕೃತದಲ್ಲಿ ದುರ್ಗ ಎಂದು ಹೇಳುತ್ತಾರೆ. ದುರ್ಗ-ದುಗ್ಗ ಕಾವ್ಯದಲ್ಲಿ ಭಾಗಸಿ ಯುಗ್ಗಡದ ಘನವರ್ಗ ಮೂಲವನೆರೆದೊಡೀ ಭವದಾಹಗ ಹರೇ ದೇರುವನೆ ಮುಕ್ತಿಯ ದುಗ್ಗವನು ಎಂದಿದೆ. ಕೋಟೆಗೆ ಪುರ, ಪ್ರಕಾರ, ಕಿಲ್ಲೆ ಎಂಬ ಅರ್ಥಗಳು ಉಂಟು. “ಸೈನಿಕರುಗಳಿಂದ ಆವರಿಸಲ್ಪಟ್ಟ ರಕ್ಷಿತವಾದ ಮತ್ತು ರಕ್ಷಣೆಗೆ ಮುಡುಪಾಗಿರುವ ಗಟ್ಟಿಯಾದ ಸ್ಥಳವೇ ಕೋಟೆ ಎಂದೆನಿಸಿಕೊಳ್ಳುತ್ತದೆ.” ಪ್ರಾಚೀನ ಗ್ರಂಥವಾದ ಋಗ್ವೇದದಲ್ಲಿ ‘ಪುರ’ ಗಳ ಉಲ್ಲೇಖವಿದೆ. ಪುರ ಅಂದರೆ ಭದ್ರವಾದಂತಹ ಕೋಟೆಯನ್ನು ಹೊಂದಿರುವ ಪಟ್ಟಣ ಎಂದರ್ಥ.

ಮಾನವನು ತನ್ನ ನಾಗರಿಕತೆಯ ಪ್ರಗತಿಯ ಪಥದಲ್ಲಿ ನಡೆದಂತೆ ತನ್ನ ಮತ್ತು ತನ್ನ ಸಮುದಾಯದ ಲೌಕಿಕ ಸಂಪತ್ತನ್ನು ಬೆಳೆಸುತ್ತಾ ನಡೆದನು. ಹಲವು ಕಿರು ಸಮುದಾಯಗಳು ಒಂದೆಡೆಯಲ್ಲಿ ನೆಲೆಗೊಂಡಾಗ ವಿವಿಧ ವಿಶಿಷ್ಟ ಹಿತಾಸಕ್ತಿಯ ಸಮಾಜಗಳು ನಿರ್ಮಾಣಗೊಂಡವು. ರಾಜ್ಯಗಳು-ಸಾಮ್ರಾಜ್ಯಗಳು ಉದಯವಾಗುವುದಕ್ಕಿಂತ ಮೊದಲು ಸಮಾಜದ ಜನರು ಸಣ್ಣ ಸಣ್ಣ ಗುಂಪುಗಳಾಗಿ ವಾಸಿಸುತ್ತಿದ್ದರು. ಕಾಲಕ್ರಮೇಣ ಈ ಗುಂಪುಗಳಲ್ಲಿ ಜನಸಂಖ್ಯೆ ಹೆಚ್ಚಾಗಿ ಅಥವಾ ಬೇರೆ ಗುಂಪುಗಳ ಜೊತೆಗೂಡಿ ಊರುಗಳಾದವು. ಈ ಪ್ರಕ್ರಿಯೆಗೆ ಮೂಲ ಕಾರಣ ಮನುಷ್ಯನ ಸಮಾಜ ಜೀವಿತ ಪ್ರಜ್ಞೆಯ ಪರಿಣಾಮವಾಗಿ ತನ್ನ ಸುತ್ತಲಿನ ಪರಿಸರದ ಅಭದ್ರತೆ ಬಗ್ಗೆ ಯೋಚಿಸಿದ. ಅಂತೆಯೇ ನೆಲೆ ನಿಂತಿದ್ದ ಊರಿನ ರಕ್ಷಣೆಗಾಗಿ ಕೋಟೆ ಕಟ್ಟಿಕೊಳ್ಳುವ ಅವಶ್ಯಕತೆ ಕಂಡುಬಂದಿತು. ಊರುಗಳು ಬೆಳೆದು ಹಲವಾರು ಊರುಗಳು ಒಟ್ಟುಗೂಡಿ ರಾಜ್ಯಗಳು ಸ್ಥಾಪನೆಯಾದ ಮೇಲೆ ಆಳುವ ಅರಸರು ತಮ್ಮ ರಾಜ್ಯಗಳನ್ನು ಸಂರಕ್ಷಿಸಿಕೊಳ್ಳುವ ರಾಜಧಾನಿಗಳಲ್ಲಿ ಹಾಗೂ ಗಡಿ ಪ್ರದೇಶಗಳಲ್ಲಿ ಬೃಹತ್ ಆಕಾರದ ಕೋಟೆಗಳನ್ನು ಕಟ್ಟಿಸಿದರು. ಹೀಗಾಗಿ ಪ್ರಾಚೀನ ಕಾಲದ ಮಾನವನ ರಕ್ಷಣೆಯ ಕಾರ್ಯದಲ್ಲಿ ಕೋಟೆ ಮಹತ್ತರ ಪಾತ್ರವಹಿಸಿದೆ. ಹಿಂದೆ ಯುದ್ಧಗಳು ನಡೆದಾಗ ಹೊರಗಿನ ಆಕ್ರಮಣ ತಡೆಯಲು ಕೋಟೆ ಕಟ್ಟಿಸಿಕೊಳ್ಳುವುದು ಅವಶ್ಯವಾಗಿತ್ತು. ಕೋಟೆಯು ರಾಜಕೀಯವೆಂಬ ದೇಹದ ಪ್ರಮುಖ ಹಾಗೂ ಅನಿವಾರ್ಯವಾದ ಅಂಗವಾಗಿದ್ದಿತು. ಯಾವುದೇ ರಾಜ್ಯದ ರಾಜಧಾನಿಯು ದೇಹದಲ್ಲಿನ ಹೃದಯವಿದ್ದಂತೆ ರಾಜಧಾನಿಯನ್ನು ವಶಪಡಿಸಿಕೊಂಡರೆ, ಸಾಮಾನ್ಯವಾಗಿ ಒಂದು ರಾಜ್ಯವು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಿತು. ಆದುದರಿಂದ ಕೋಟೆ ಅಥವಾ ದುರ್ಗದ ನಿರ್ಮಾಣವು ರಕ್ಷಣೆಯ ದೃಷ್ಟಿಯಿಂದ ಅತ್ಯವಶ್ಯವಾಗಿತ್ತು. ಜಿ.ಟಿ.ಡಾಟೆ ಪ್ರಕಾರ (Times of yore the Fortress was a capital means of defence)” ಪ್ರಾಚೀನ ಕಾಲದಲ್ಲಿ ಈ ಕೋಟೆಗಳು ರಾಜಧಾನಿಯ ರಕ್ಷಣೆಯ ಸಲುವಾಗಿ ಇರುವಂತಹವು.”[1] ಯಕ್ಟ್ ರಂ ಸ್ಟ್ರೇಟ್ ಪ್ರಕಾರ (Treatise on Fortification and Artillery observes Forts are equally usefull in offensive as defencive warfare)” ವಿರೋಧಿಗಳಿಂದ ಯುದ್ಧ ತಡೆಯುವುದಕ್ಕಾಗಿ ಮತ್ತು ರಕ್ಷಣೆಗಾಗಿ ಕೋಟೆಗಳು ತುಂಬಾ ಅನುಕೂಲಕರವಾಗಿದ್ದವು.”[2]

ಕೋಟೆ ರಚನೆಯ ಕುರಿತಾಗಿ ಪ್ರಸಿದ್ಧ ಕವಿಯಾದ ಹರಿಹರನು ‘ಗಿರಿಜಾ ಕಲ್ಯಾಣ’ ಎಂಬ ಕಾವ್ಯದಲ್ಲಿ ಕೊಟ್ಟಿರುವ ವಿವರ ಈ ಕೆಳಗಿನಂತಿದೆ.[3]

ಪಳಕಿನ ಕೋಂಟೆ ಬಟ್ಟದನೆ ಬೇವಿನದಂಡೆ ನಭಕ್ಕೆ ಮೀರುವ
ಟ್ಟಳೆ ನಿರ್ಮಿರ್ದೇರು ಪಾರುವ ವಿರಾಜಿತ ಗೊಂಟು ಗೊಂಟಿನೊಳ್
ಬಳಸಿದ ಕೊತ್ತಳಂ ಸೊಗಯಿ ಪಾಳ್ವೆರಿ ಡೆಂಕಣಿ ಸಾರಮಾರಿಯ
ಗ್ಗಳಲಿಸುವ ಗೋಪುರಂ ಪುಲಿಮೊಗಂ ಮೆರುಗಂ ಪುರದೊಳು ನಿರಂತರ||

ಹಳೇಗನ್ನಡದ ಕೋಂಟೆಯೇ ಹೊಸಗನ್ನಡದ ಕೋಟೆ. ಪಳಕಿನ (ಸ್ಫಟಿಕದ) ಕೋಟೆ ಎಂಬುದು ಕವಿಯ ಕಲ್ಪನೆ.

ಕಂಪಿಲರಾಯನ ದಂಡನಾಯಕನಾದ ಬೈಚಪ್ಪನು ಕೋಟೆಯನ್ನು ಸಿದ್ಧಮಾಡಿದ ಬಗೆಯನ್ನು ನಂಜುಂಡನು ರಾಮನಾಥ ಚರಿತ್ರೆಯಲ್ಲಿ ಈ ಕೆಳಗಿನಂತೆ ಹೇಳಿದ್ದಾನೆ.

ದಳವಾಡ ಸಹಿತ ಬೈಚಪ್ಪ ದುರ್ಗವ ಹೊಕ್ಕು
ತಳದವರ ಬಲಿಕೆಯನು
ಬಳಸಿ ಬಳಸಿ ನೋಡಿ ದುರ್ಗ ಸೌರಣೆಯನಂ
ದಲಸದೆ ಮಿಗೆ ಮೂಡಿಸಿದನು
ಅಗಳಾಳ್ವೇರಿ ಕೋಟೆ ಕೊತ್ತಳ ನೆಲದಿಡ್ಡಿ
ಮುಗಿಲಟ್ಟಣೆ ನೆಲಗಮ್ಮ
ಪ್ರಗಿಸಿ ಕೊಯೊಳಗಾಗಿಸಿಕೊಂಬ ಪಲಪುಲಿ
ಮೊಗಗಳನನು ಮೂಡಿಸಿದನು[4]

ರಾಜರ ಮತ್ತು ಚಿಕ್ಕ ಸಂಸ್ಥಾನದ ಮುಖ್ಯಸ್ಥರ ಅತಿ ಹೆಚ್ಚಿನ ಬಲ ಈ ಕೋಟೆಗಳೇ. ಕೋಟೆಯಿಂದ ರಕ್ಷಿತವಾಗಿಲ್ಲದ ಪಟ್ಟಣಗಳನ್ನು ಶತ್ರುಗಳು ಬಹು ಸುಲಭವಾಗಿ ಸ್ವಾಧೀನ ಪಡಿಸಿಕೊಳ್ಳಬಲ್ಲರು. ಆದ್ದರಿಂದ ಆಳುವವರು ಅತ್ಯವಶ್ಯಕವಾಗಿ ಕೋಟೆಯನ್ನು ಕಟ್ಟಬೇಕೆಂದು ಸಾಮ್ರಾಜ್ಯ ಲಕ್ಷ್ಮಿ ಪೀಠಕಾದಲ್ಲಿ ಪ್ರಸ್ತಾಪವಾಗಿದೆ.[5]

ಕೋಟೆಯ ಪ್ರಾಚೀನತೆ (Antiquity of Fort Architecture)

ಜಗತ್ತಿನ ಚರಿತ್ರೆಯಲ್ಲಿ ಕೋಟೆಗಳ ರಚನೆಯ ಇತಿಹಾಸವು ಬಹು ಸ್ವಾರಸ್ಯಕರವಾಗಿಯೇ ಮೂಡಿಬಂದಿದೆ. ಕ್ರಿ.ಪೂ.೨೦೦ಕ್ಕೆ ಹಿಂದಿನದೆಂದು ಹೇಳಲಾದ ನಿನೆವ ಮತ್ತು ಬೆಬಿಲೋನಿಯ (ಗ್ರೀಸ್) ರಕ್ಷಣಾ ಗೋಡೆಗಳು ೫೦ ಮೈಲಿ ಸುತ್ತಳತೆ ೧೫೦ ಅಡಿ ಎತ್ತರ ೩೦ ಅಡಿ ದಪ್ಪ ವಿರುವವಂತೆ. ನಿನೆವಾದ ಕೋಟೆ ಮೇಲೆ ೧೫೦೦ ರಕ್ಷಣಾ ಗೋಡೆಗಳಿದ್ದವೆಂದು ತಿಳಿದು ಬರುತ್ತದೆ. ಭೂಮಧ್ಯ ಜನರು ಕ್ರಿ.ಪೂ. ೬೦೦ರಲ್ಲೇ ಇಟ್ಟಿಗೆ ಮಣ್ಣು ಬೆರಸಿ ಕೋಟೆ ಕಟ್ಟುವ ವಿಧಾನ ತಿಳಿದಿದ್ದರಂತೆ. ಇನ್ನೊಂದು ಅಪೂರ್ವವಾದ ದಾಖಲೆ ಎಂದರೆ ವಿಶ್ವ ಅದ್ಭುತಗಳಲ್ಲಿ ಒಂದಾದ ಕ್ರಿ.ಪೂ. ೨೨೧ಕ್ಕೆ ಸೇರಿದ ಚೀನಾದ ಉದ್ದನೆಯ ರಕ್ಷಣಾ ಗೋಡೆಗಳು. ಮಂಗೋಲಿಯನ್ನರ ಆಕ್ರಮಣ ತಡೆದು, ರಕ್ಷಣೆ ಪಡಿಯಲೋಸುಗ ಕಟ್ಟಿದ ಈ ಗೋಡೆಯನ್ನು ನಿರ್ಮಿಸಲು ೧೦ ವರ್ಷ ಬೇಕಾಯಿತಂತೆ! ೨೫ ಅಡಿ ಅಗಲ, ೨೦ ಅಡಿ ಎತ್ತರವಿರುವ ಇದು ಪರ್ವತದ ಸಾಲಿನೊಂದಿಗೆ ಸಾಗಿ ಸುಮಾರು ೨೦೦೦ ಅಡಿ ಮೈಲು ಉದ್ದಕ್ಕೂ ವ್ಯಾಪಿಸಿದೆ. ರೋಮ್ ಸಾಮ್ರಾಜ್ಯದ ಅವಶೇಷಗಳಾಗಿರುವ ಬೃಹದಾಕಾರದ ೧೫-೨೦ ಅಡಿ ದಪ್ಪವಿರುವ ಕೋಟೆಗಳಿದ್ದವು. ಇಂತಾ ಸಾಮ್ರಾಜ್ಯದ ಬೃಹತ್ ಕೋಟೆ ಗೋಡೆಗಳು “ಸ್ವಚ್ ಸುಹೃಮಾನ್” ಎಂಬಲ್ಲಿ ನಿರ್ಮಿಸಿ ಕುಲ ಈ ದೈತ್ಯಾಕಾರದ ಕೋಟೆಯ ಒಂದೊಂದು ಕಲ್ಲು ೨೦ ಅಡಿ ಎತ್ತರವಿದ್ದು ಅದರ ತೂಕ ೧೦೦ ಟನ್‌ಗೂ ಮೀರಿತ್ತು ಎಂದು ಊಹಿಸಿದ್ದಾರೆ.

ಭಾರತೀಯ ಇತಿಹಾಸದಲ್ಲಿ ಕೋಟೆಯ ಪ್ರಾಚೀನತೆ ಪುರಾಣದ ಕಾಲಕ್ಕೆ ಹೋಗುತ್ತದೆ. ಇಂದ್ರಪ್ರಸ್ಥ ನಗರದ ಪಾಂಡವರ ಕೋಟೆಯ ಒಂದು ಭಾಗವನ್ನು ದೆಹಲಿಯ ಹುಮಾಯೂನನು ಸರಿಪಡಿಸಿದ ಪ್ರತೀತಿ ಇದೆ. ವಾಲ್ಮೀಕಿಯ ರಾಮಾಯಣದಲ್ಲಿ ಮತ್ತು ವ್ಯಾಸರ ಮಹಾಭಾರತದಲ್ಲಿಯೂ ಕೋಟೆಗಳ ಉಲ್ಲೇಖ ಬರುತ್ತದೆ. ಹರಪ್ಪಾ ಮತ್ತು ಮಹೆಂಜದಾರೋಗಳಲ್ಲಿ ಕೋಟೆಗಳಿದ್ದುದು ಉತ್ಖನನ ವರದಿಗಳಿಂದ ತಿಳಿಯುತ್ತದೆ. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಗ್ರೀಕರ ರಾಯಭಾರಿಯಾಗಿ ಮೊದಲನೆ ಚಂದ್ರಗುಪ್ತನ ಆಸ್ಥಾನಕ್ಕೆ ಬಂದಿದ್ದ ಮೇಗಾಸ್ತ ನೀಸನು ಪಾಟಲಿಪುತ್ರ ನಗರದ ಕೋಟೆಯನ್ನು ವರ್ಣಿಸಿದ್ದಾನೆ.

ಶಾತಕವಾಹನರ ಅವಧಿಯ ಸನ್ನತಿ ಕೋಟೆ ಕರ್ನಾಟಕದಲ್ಲಿ ಅತ್ಯಂತ ಪ್ರಾಚೀನವಾದುದು. ೫೪x೨೮x೯ ಸೆಂ.ಮೀ. ಗಾತ್ರದ ಸುಟ್ಟ ಇಟ್ಟಿಗೆಗಳಿಂದ ಈ ಕೋಟೆಯನ್ನು ಕಟ್ಟಲಾಗಿದೆ. ೫ ರಿಂದ ೬ ಮೀಟರ್ ಎತ್ತರವಿರುವ ಈ ಕೋಟೆಯು ಕ್ರಿ.ಶ. ೧-೨ ನೇ ಶತಮಾನದ್ದು.[6] ೪೫x೨೪x೮ ಸೆಂ.ಮೀ. ಗಳ ಗಾತ್ರದ ಇಟ್ಟಿಗೆಯ ಇನ್ನೊಂದು ಕೋಟೆ ಬನವಾಸಿಯಲ್ಲಿ ಕಂಡುಬರುತ್ತದೆ.[7]

ಕನ್ನಡ ನಾಡಿನ ಕೋಟೆಗಳಲ್ಲಿ ಪ್ರಾಚೀನವಾದುದು ಮತ್ತು ಶಿಲಾಶಾಸನಗಳ ಮೂಲಕ ಕಾಲವನ್ನು ನಿರ್ಧರಿಸಲ್ಪಟ್ಟ ಕೋಟೆಯೆಂದರೆ, ಬಾದಾಮಿ ಚಾಲುಕ್ಯರ ಮೊದಲ ಪುಲಿಕೇಶಿಯದು. ಇದರ ಕಾಲ ಕ್ರಿ.ಶ. ೫೪೩.

ಸ್ವಸ್ತಿ ಶಕವರ್ಷೇಷು ಚತುಶ್ಯತೇಷು ಪಂಚವಷ್ಠಿಯುತೇಷು
ಅಶ್ವಮೇಧಾದಿ ಯಜ್ಞಾನಾಂ ಯಜ್ವಾ ಶ್ರೌತವಿಧಾನತಃ ಹಿರಣ್ಯಗರ್ಭ
ಸಂಭೂತಶ್ಚಲಿಕ್ಯೋವಲ್ಲಭೇಶ್ವರಃ|| ಧರಾಧರೇಂಧ್ರ ವಾತಾಪಿಮಜೇಯಂ
ಭೂತಯೇ ಭುವಃ ಅಧಸ್ತಾದುಪರಿಷ್ಟಾಶ್ಚದುರ್ಗ ಮೇತದ ಚೀಕರತೆ|| [8]

ಬಳ್ಳಾರಿ ಜಿಲ್ಲೆಯ ಚಾಚೀನ ಕೋಟೆ ಎಂದರೆ ಕಲ್ಯಾಣ ಚಾಲುಕ್ಯರಿಗಿಂತ ಮುಂಚಿನದೆಂದು ಹೇಳುವ ಶಾಸನ ಉಲ್ಲೇಖಿತ ಉಚ್ಚಂಗಿದುರ್ಗದ ಅಭೇಧ್ಯವಾದ ಕೋಟೆ. ಇದರ ಕಾಲ ಸುಮಾರು ಕ್ರಿ.ಶ. ೯ನೆಯ ಶತಮಾನ.

ಗಳಗೇಶ್ವರ ದೇವರಿಗೇಂ ಕೃತಾರ್ತ್ಥನೋ ಸಕವರ್ಷ ೯೮೬ನೆಯ
ಕ್ರೋಧಿ ಸಂವತ್ಸರದ ಚೈತ್ರದ ಪೌರ್ಣ್ನಿಮಾ
ಸೆಯಾದಿತ್ಯವಾರಂ ವನದಪರ್ವ್ವ ನಿಮಿತ್ತಂ ಗಳಗೇಶ್ವರ ದೇವರ್ಗೆ “ಯುಚ್ಚಂಗಿಯ ಕೋಟೆಯಲು”
ತೆಂಕ ಬಣ್ಣಸಿಗೆರೆಯುಮಂ[9]

ಕ್ರಿ.ಶ. ೧೦೬೪ ಶಾಸನದಲ್ಲಿ ಉಚ್ಚಂಗಿಕೋಟೆಯ ಉಲ್ಲೇಖವಿದೆ ಎಂದಾಗ ಈ ಇದಕ್ಕೂ ಮೊದಲು ಅಲ್ಲೇ ಕೋಟೆ ನಿರ್ಮಾಣವಾಗಿರಬೇಕು.

ಕೋಟೆಯ ಮಹತ್ವ (Importance of Fort)

ಪ್ರಾಚೀನ ಸಾಹಿತ್ಯ ಕೃತಿಗಳಾದ ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕನ ನೀತಿಸಾರ, ಶುಕ್ರನ ಶುಕ್ರನೀತಿ, ಮೂರನೆಯ ಸೋಮೇಶ್ವರನ ಮಾನಸೋಲ್ಲಾಸಗಳಲ್ಲಿ ಈ ಕೋಟೆಗಳ ಮಹತ್ವವನ್ನು ವಿವರಿಸಲಾಗಿದೆ. ಅದೇ ರೀತಿ ಮಧ್ಯಕಾಲೀನ ಸಾಹಿತ್ಯ ಕೃತಿಗಳಾದ ಜನ್ನನ ಅನಂತನಾಥ ಪುರಾಣ, ನಂಜುಂಡನ ಕುಮಾರರಾಮಚರಿತೆ, ಬಸವರಾಜನ ಶಿವತತ್ವ ರತ್ನಾಕರ, ಕನಕದಾಸರ ಮೋಹನ ತರಂಗಿಣಿ, ಲಿಂಗಣ್ಣ ಕವಿಯ ಕೆಳದಿ ನೃಪವಿಜಯ, ಚಂದ್ರಕವಿಯ ಪಂಪಾಕ್ಷೇತ್ರ ವರ್ಣನಂ, ಚಾಮರಸನ ಪ್ರಭುಲಿಂಗಲೀಲೆ, ಶೃತಿಕೀರ್ತಿಯ ವಿಜಯಾಂಬುದಿ ಚರಿತೆ, ಸಿಂಗಿ ರಾಜನ-ಅಮಲಬಸವ ಚರಿತೆ, ಭೀಮಕವಿಯ ಬಸವಪುರಾಣ, ಬಾಹುಬಲಿ ಪಂಡಿತನ ಧರ್ಮನಾಥ ಪುರಾಣ, ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ, ಎರಡನೆಯ ಮಂಗರಸನ ಸಾಮ್ಯುಕ್ತ ಕೌಮದಿ ಹಾಗೂ ಕರ್ನಾಟಕದಾದ್ಯಂತ ದೊರೆತಿರುವ ಶಾಸನಗಳಲ್ಲಿ ಕೋಟೆಗಳ ಮತ್ತು ಅವುಗಳ ಮಹತ್ವವನ್ನು ರಸವತ್ತಾಗಿ ವರ್ಣಿಸಲಾಗಿದೆ.

ಪ್ರಾಚೀನ ರಾಜನೀತಿತಜ್ಞರಿಂದ ನಮೂದಿಸಲ್ಪಟ್ಟಿರುವ ರಾಜ್ಯದ ಏಳು ಮೂಲ ಅಂಶಗಳು ಅಥವಾ ಸಪ್ತಾಂಗಗಳು ಯಾವುದೆಂದರೆ ಸ್ವಾಮಿ (ಪ್ರಭು), ಅಮಾತ್ಯ (ಮಂತ್ರಿ), ರಾಷ್ಟ್ರ (ಸಂಸ್ಥಾನ), ದುರ್ಗ (ಕೋಟೆ), ಕೋಶ (ಖಜಾನೆ), ದಂಡ (ಸೈನ್ಯ), ಮತ್ತು ಮಿತ್ರರಾಜ್ಯ.[10] ರಾಜ್ಯವನ್ನು ಸ್ಥಾಪಿಸಲು ತಿಳಿಸಲ್ಪಟ್ಟಿರುವ ಈ ಸಪ್ತ ಮೂಲತತ್ವಗಳಲ್ಲಿ ದುರ್ಗ-ಕೋಟೆ ಬಹುಮುಖ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಕೋಟೆ ರಾಜ್ಯ ರಕ್ಷಣಾ ವ್ಯವಸ್ಥೆಯಲ್ಲಿ ಮುಖ್ಯವಾದ ಸಂಬಂಧವನ್ನು ಸ್ಥಾಪಿಸುತ್ತದೆ.

ರಾಜನು ತನ್ನ ರಾಣಿಯ, ತನ್ನ ಜನರ ಮತ್ತು ಸಂಪತ್ತಿನ ರಕ್ಷಣೆಗಾಗಿ ಭದ್ರವಾದ ಗೋಡಿ ಮತ್ತು ಬಾಗಿಲುಗಳುಳ್ಳ ಕೋಟೆಯನ್ನು ಅವಶ್ಯಕವಾಗಿ ಕಟ್ಟಲೇಬೇಕೆಂದು ರಾಜನೀತಿ ಪ್ರಕಾರದಲ್ಲಿ ಬೃಹಸ್ಪತಿಯ ವಚನ ಉಲ್ಲೇಖಿಸುತ್ತದೆ.[11] ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ರಾಜನು ತನ್ನ ರಾಜ್ಯದ ಗಡಿಯ ನಾಲ್ಕು ದಿಕ್ಕುಗಳಲ್ಲೂ ಶತ್ರುಗಳನ್ನು ತಡೆಗಟ್ಟಲು ಸೂಕ್ತವಾದ ಕೋಟೆಗಳನ್ನು ಕಟ್ಟಬೇಕೆಂದು ಹೇಳಿದ್ದಾನೆ.[12] ಒಬ್ಬ ಬಿಲ್ಲುಗಾರ ಕೋಟೆ ಗೋಡೆಯ ಮರೆ (ರಕ್ಷಣೆ)ಯಲ್ಲಿ ನೂರಾರು ಶತ್ರುಗಳೊಂದಿಗೆ ಹೋರಾಡಬಹುದು ಮತ್ತು ನೂರಾರು ಬಿಲ್ಗಾರರು ಹತ್ತು ಸಾವಿರ ಶತ್ರುಗಳೊಂದಿಗೆ ಹೋರಾಡಬಹುದು ಎಂದು ಹೇಳುತ್ತಾ ಮನು ಕೋಟೆಗಳನ್ನು ಕಟ್ಟುವುದನ್ನು ಸಮರ್ಥಿಸಿದ್ದಾನೆ.[13] ಸಾವಿರಾರು ಆನೆಗಳಿಂದ ಮತ್ತು ಲಕ್ಷಾಂತರ ಕುದುರೆಗಳಿಂದ ಯುದ್ಧದಲ್ಲಿ ನಿರ್ವಹಿಸಲಾಗದ ಕಾರ್ಯವನ್ನು ಒಬ್ಬ ರಾಜ ಕೋಟೆಯ ಸಹಾಯದಿಂದ ಆಶ್ಚರ್ಯಕರವಾಗಿ ನಿರ್ವಹಿಸಬಲ್ಲನು ಎಂದು ಪಂಚತಂತ್ರದಲ್ಲಿ ದೃಢವಾಗಿ ಹೇಳಲ್ಪಟ್ಟಿದೆ.[14]

ಜನ್ನಕವಿಯ ಅನಂತನಾಥ ಪುರಾಣದಲ್ಲಿ ಬರುವ ಚಂಡಶಾಸನ ವೃತ್ತಾಂತದ ಸಂದರ್ಭದಲ್ಲಿ ಕೋಟೆಯ ಬಗ್ಗೆ ಅನೇಕ ವಿವರ ನೀಡುತ್ತಾನೆ. “ಕೋಟೆ ಬೀಳುವ ಸ್ಥಿತಿ ಬಂದಿದೆ ಎಂದು ವಸ್ತ್ರ ಬೀಸುತ್ತಾ ಬೊಬ್ಬೆ ಹೊಡೆದರಂತೆ” ಇಲ್ಲಿ ವಸ್ತ್ರ ಬೀಸುತ್ತಿದ್ದುದು ಸೋಲನ್ನು ಒಪ್ಪಿದ ಚಿನ್ಹೆ ಆಗಿದ್ದಿರಬಹುದು.

ಶ್ರುಕ್ರನೀತಿ ಸಾರದಲ್ಲಿ ಅನೇಕ ರೀತಿಯ ಗಿಡಮರಗಳ ಪೊದರುಗಳಿಂದ ಕೂಡಿದ, ದನಕರುಗಳು, ಹಕ್ಕಿಗಳು ಮತ್ತಿತರ ಪ್ರಾಣಿಗಳಿಂದ ಸಮೃದ್ಧವಾಗಿರುವ, ಧಾನ್ಯ ಸಮೃದ್ಧಿ ಇರುವ, ಬೆಟ್ಟ ನೀರುಗಳಿಂದ ಆವೃತ್ತವಾಗಿರುವ ಪ್ರದೇಶಗಳಲ್ಲಿ ಕೋಟೆಗಳನ್ನು ನಿರ್ಮಿಸಬೇಕು[15] ಎಂದಿದೆ. ಅಂದರೆ ಕೋಟೆಯನ್ನು ಕಟ್ಟುವ ಸ್ಥಳದ ಆಯ್ಕೆ ಬಗ್ಗೆ ಇಲ್ಲಿ ವಿವರವಿದೆ. ಕಾಮಂದಕನು ನೀತಿಸಾರದಲ್ಲಿ “ಭದ್ರವಾದ ಕೋಟೆ ಇಲ್ಲದ ರಾಜ ಇಲ್ಲದ ರಾಜ ಬಿರುಗಾಳಿಗೆ ಸಿಕ್ಕಿದ ಮೋಡದ ತುಣುಕುಗಳಿಗೆ ಸಮಾನ ಎಂದಿದ್ದಾನೆ.”[16]

ವಿಷಹೀನೋ ಯಥನಾಗೋ ಮದಹೀನೋ ಯಥಾಗಜಃ|
ಸರ್ವೇಕ್ಷಾಂ ವಶ್ಯತಾಂ ಯಾತಿ ದುರ್ಗಹೀನಸ್ಥಧಾ ನೃಪಃ||

ಅಂದರೆ ಕೋಟೆ ಇಲ್ಲದ ರಾಜನನ್ನು ವಿಷರಹಿತವಾದ ಹಾವಿನಂತೆ ಅಥವಾ ಮದರಹಿತವಾದ ಆನೆಯಂತೆ ಸುಲಭವಾಗಿ ವಶಪಡಿಸಿಕೊಳ್ಳಬಹುದು ಎಂದು ಶಿವತತ್ವ ರತ್ನಾಕರದಲ್ಲಿ ಹೇಳಿದೆ.[17]

ಮದಹಸ್ತಿಗಳ ಕೈಯ ನೂಕಿ ಬಂದಿಸುವ ಪೆ
ಗ೯ದ ವಜ್ರಲಾಳವಿಂಗಡಿಗೆಯ
ಅದಟಿನ ದ್ವರಾಷ್ಟ್ರಕವ ವರ್ಣಿಸುವೊಡೆ ಪದಕವಿ
ಗಳಿ ಗೋಚರವು[18]

“ಮದ್ದಾನೆಯ ಸೊಂಡೆಯ ಸಹಾಯದಿಂದ ನೂಕಿ ಬಂಧಿಸುವಷ್ಟು ಹಿರಿದಾದ ವಜ್ರದ ಅಗುಳಿಯ ಬಾಗಿವುಳ್ಳ ಕೋಟೆಯನ್ನು ವರ್ಣಿಸುವುದು ಖ್ಯಾತ ಕವಿಗಳಿಗೂ ಅಸಾಧ್ಯವಾದುದು” ಎಂದು ಮೋಹನ ತರಂಗಿಣಿಯ ಗದ್ಯವನ್ನು ಎಸ್.ಎಸ್. ಕೋತಿನ ಅನುವಾದಿಸಿದ್ದಾರೆ.

ರಾಜವಂಶಗಳ ಸಂಘಟನೆಯಲ್ಲಿ ಕೋಟೆಗಳು ಅತಿ ಮುಖ್ಯ ಕಾರಣ ಕೋಟೆಗಳನ್ನು ಸ್ವಾಧೀನಪಡಿಸಿಕೊಳ್ಳುವಿಕೆ. ಅನೇಕ ರಾಜವಂಶಸ್ಥರು ಕಾಲ ಕಾಲಕ್ಕೆ ತಕ್ಕಂತೆ ಬೆಟ್ಟ-ಭೂಮಿಗಳ ಮೇಲೆ ಮತ್ತು ಗ್ರಂಥಗಳ ಅಧ್ಯಯನದಿಂದ ಕೋಟೆಗಳ ಮಹತ್ವ ಹಾಗೂ ವರ್ಣನೆಗಳು ವಿಫುಲವಾಗಿ ಕಂಡುಬರುತ್ತವೆ. ಈ ಪ್ರಬಂಧದಲ್ಲಿ ಕೋಟೆಗಳ ಮಹತ್ವಗಳನ್ನು ಆಯಾಯ ಅಧ್ಯಾಯಗಳಲ್ಲೇ ಹೇಳಲಾಗಿದೆ.

ಕೋಟೆಯ ಲಕ್ಷಣಗಳು (Characterstic Features of Fort)

ಕೋಟೆಯೆಂದಾಕ್ಷಣ ಅದರ ಅನೇಕ ಭಾಗಗಳು ನೆನಪಿಗೆ ಬರುತ್ತವೆ. ‘ಬಟ್ಟದನೆ’ ಎಂಬ ಪದ ಕೋಟೆಯ ಗೋಡೆಗಳ ಮೇಲೆ ಒತ್ತಾಗಿ ಕಟ್ಟಿರುವ ವೃತ್ತಾಕಾರದ ‘ತೆನೆ’ ಯನ್ನು ಸೂಚಿಸುತ್ತದೆ. ಕೋಟೆಯ ಗೋಡೆಯ ಮೇಲೆ ಉದ್ದಕ್ಕೂ ಬತ್ತದ ತೆನೆಯಾಕಾರದ ರಚನೆ ಇರುತ್ತದೆ. ಇಂಥ ಸಾವಿರಾರು ತೆನೆಗಳ ಕಾಂಡ ರಚನೆ ಕೋಟೆ ಗೋಡೆಯನ್ನು ಪ್ರತ್ಯಕ್ಷವಾಗಿ ನೋಡಿದಾಗ ಮಾತ್ರ ತಿಳಿದು ಬಂದೀತು. ಈ ರೀತಿಯ ತೆನೆಯಾಕಾರದ ರಚನೆ ಕೋಟೆಗೆ ಅಂದವನ್ನು ತಂದುಕೊಡುತ್ತದೆ. ಮೋಹನ ತರಂಗಿಣಿಯಲ್ಲಿ ಕೋಟೆ ತೆನೆಯನ್ನು ಈ ಕೆಳಗಿನಂತೆ ವರ್ಣಿಸಲಾಗಿದೆ.

ತಿಂಗಳ ಜೂಟಿಗೆ ಸುರಸತಿಯರು ತಂದ
ಮಂಗಳ ಜಲಕುಂಭದಂತೆ
ಕಂಗೂಳಿಸುವ ಕೋಟೆಯ ತೆನೆಗೊಂದೊಂದು
ಪೊಂಗಳಸಂಗಳೊಪ್ಪಿದವು[19]

ವೀರಗಲ್ಲುಗಳಲ್ಲಿ ಕೋಟೆ ತೆನೆ ಚಿತ್ರಣಗಳನ್ನು ಚಿತ್ರಿಸಿದ್ದು ಅವುಗಳ ಬಂದಳಿಕೆ, ಹಾನ ಗಲ್ಲು, ತಿಳವಳ್ಳಿ, ಎಲೆಬೇತೂರು, ಆನವಟ್ಟಿ, ಬೆಳಗಾವಿ ಹಾಗೂ ಬಾವಡೆಗಳಲ್ಲಿ ಕಂಡು ಬರುತ್ತವೆ.[20]

ಶಿಕಾರಿಪುರ ತಾಲೂಕು ಬಂದಳಿಕೆಯಲ್ಲಿರುವ ವೀರಗಲ್ಲಿನಲ್ಲಿ ಹೋರಾಟ ಹಂತದ ಕೆಳ ಭಾಗದಲ್ಲಿ ಕೋಟೆಯ ತೆನೆಗಳ ಚಿತ್ರವನ್ನು ಬಿಡಿಸಲಾಗಿದೆ. ಇಲ್ಲಿ ಕೋಟೆಯ ಸಂರಕ್ಷಕರು ಅಟ್ಟಣೆಯ ಮೇಲೆ ನಿಂತು ಬಾಣ ಪ್ರಯೋಗಿಸುತ್ತಿರುವರು.[21]

ಹಾನಗಲ್ಲಿನ ವೀರಗಲ್ಲಿನಲ್ಲಿ ಮೂರನೇ ಹಂತದ ಕೆಳಪಟ್ಟಿಯಲ್ಲಿ ಕೋಟೆಯ ತೆನೆಗಳನ್ನು ಚಿತ್ರಿಸಲಾಗಿದೆ. ಕೆಳಹಂತದಲ್ಲಿ ಗಜಯುದ್ಧ, ಎರಡನೆ ಹಂತದಲ್ಲಿ ಅಶ್ವಯುದ್ಧ, ಮೂರನೇ ಹಂತದಲ್ಲಿ ಕೋಟೆಯನ್ನು ಚಿತ್ರಿಸಿ, ಒಳಗಡೆ ಸೈನಿಕರು ಯುದ್ಧ ಸನ್ನದ್ಧರಾಗಿ ಕಾಳಗವನ್ನು ನೋಡುತ್ತಾ ನಿಂತಿದ್ದು, ಇವರಲ್ಲಿ ಕೆಲವರು ದುಂಡಾಗಿರುವ ಮತ್ತೆ ಕೆಲವರು ಚೌಕಾಕಾರವಾಗಿರುವ ಗುರಾಣಿಗಳೊಂದಿಗೆ ಸಿದ್ಧವಾಗಿದ್ದಾರೆ. ಯುದ್ಧದ ಮಧ್ಯೆ ಒಬ್ಬನು ಧ್ವಜವನ್ನು ಹಿಡಿದು ನಿಂತಿದ್ದಾನೆ. ಇವರೆಲ್ಲರೂ ಕೋಟೆಯ ಹೊರಗೆ ನಡೆಯುತ್ತಿರುವ ಯುದ್ಧವನ್ನು ಕೌತುಕದಿಂದ ವೀಕ್ಷಿಸುವಂತೆ ಚಿತ್ರಿಸಲಾಗಿದೆ. ಕೆಲವರು ತಮ್ಮ ಗುರಾಣಿಗಳನ್ನು ಕೋಟೆಯ ತೆನೆಗಳ ಮೇಲೆ ಇಟ್ಟುಕೊಂಡು ನಿಂತಿರುವರು.[22]

ಹಾನಗಲ್ಲು ತಾಲೂಕಿನ ತಿಳುವಳ್ಳಿಯ ಮೂರನೆ ಹಂತದ ಕೆಳಭಾಗದ ಪಟ್ಟಿಯಲ್ಲಿ ಕೋಟೆ ತೆನೆಗಳನ್ನು ಚಿತ್ರಿಸಲಾಗಿದೆ.[23]

ಹಾವೇರಿ ತಾಲೂಕಿನ ಎಲೆಬೇತೂರಿನ ವೀರಗಲ್ಲಿನಲ್ಲಿ ಹೋರಾಟದ ಹಂತದಲ್ಲಿ ಪಕ್ಕ ಮತ್ತು ಮೇಲಿನ ಭಾಗದ ಪಟ್ಟಿಯಲ್ಲಿ ಕೋಟೆಯ ತೆನೆಗಳನ್ನು ಕೆತ್ತಲಾಗಿದೆ.[24]

ಸೊರಬ ತಾಲೂಕಿನ ಆನವಟ್ಟಿಯ ವೀರಗಲ್ಲಿನಲ್ಲಿ ವೈರಿಯೊಬ್ಬ ಸತ್ತು ಬೋರಲಾಗಿ ಬಿದ್ದಿದ್ದು ಅವನ ಮುಂಭಾಗದಲ್ಲಿ ಕೋಟೆ ತೆನೆಯನ್ನು ಬಿಡಿಸಲಾಗಿದೆ.[25]

ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ವೀರಗಲ್ಲೋಂದರಲ್ಲಿಯೂ ಕೋಟೆಯ ತೆನೆಯನ್ನು ಕೆಳಭಾಗದಲ್ಲಿ ಚಿತ್ರಿಸಲಾಗಿದೆ.[26] ಕೆಲವು ಸೈನಿಕರು ಕೋಟೆಯ ಮೂಲೆಯಿಂದ ಇಣುಕಿ ನೋಡುತ್ತಿದ್ದು, ಕೆಲವರು ಗುರಾಣಿಗಳ ಮೇಲೆ ವೃತ್ತಾಕಾರ ಹಾಗೂ ಎಲೆಗಳ ಉಬ್ಬು ಆಕಾರಗಳನ್ನು ಬಿಡಿಸಿ ಅಲಂಕರಿಸಲಾಗಿದೆ.

ಮಾಳಸಿರಸ ತಾಲೂಕಿನ ಬಾವಡೆಯ ವೀರಗಲ್ಲಿನ ಎರಡನೆಯ ಹಂತದಲ್ಲಿ ಮೇಲಿನ ಪಟ್ಟಿಯಿಂದ ಕೆಳಗಿನ ಪಟ್ಟಿಯವರೆಗೂ ಕಂಸದ ಆಕಾರದಲ್ಲಿ ಕೋಟೆಯ ತೆನೆಗಳನ್ನು ಬಿಡಿಸಲಾಗಿದೆ. ಒಳಗಿನ ಯೋಧರು ಮೂರು ಸಾಲಿನಲ್ಲಿ ಗುರಾಣಿಗಳನ್ನು ಹಿಡಿದು ನಿಂತಿದ್ದಾರೆ. ಕೋಟೆಯ ಹೊರಗೆ ಮೂವರು ಕುದುರೆಯಾಳುಗಳು ಹೋರಾಡುತ್ತಿರುವರು. ಕೋಟೆಯ ಯಾವ ಭಾಗದಲ್ಲೂ ದ್ವಾರವಿಲ್ಲ. ಇಲ್ಲಿ ಸೊಗಸಾದ ಕೋಟೆ ಚಿತ್ರಣ ಮೂಡಿಬಂದಿದೆ.[27]

ಈ ಕೋಟೆ ತೆನೆಗಳ ನಡುವೆ ಮೆಲ್ಲಗೆ ತಲೆಹಾಕಿ ಕೆಳಕ್ಕೆ ಇಣುಕಿ ನೋಡಿ ಅವುಗಳ ಹಿಂದೆಯೇ ಕುಳಿತು ‘ಅಂಬುಗಂಡಿ’ಯಿಂದ ಬಾಣಗಳನ್ನು ಪ್ರಯೋಗಿಸಲು ಅನುಕೂಲ ಆಗಿರುತ್ತಿತ್ತು. ಈ ರೀತಿಯ ಒಂದು ವಿಶ್ರಾಂತಿ ತಾಣವನ್ನು ಕೋಟೆ ಗೋಡೆಯ ಹಿಂದುಗಡೆ ಕಟ್ಟುತ್ತಿದ್ದರು. ಅದು ಪಹರೆಯವರಿಗೆ ಕಾವಲುಗಾರರಿಗೆ ಸರದಿ ಪ್ರಕಾರ ವಿಶ್ರಾಂತಿಯನ್ನು ಪಡೆಯಲು ಅನುಕೂಲವಾಗುತ್ತಿತ್ತು.[28]

‘ಅಟ್ಟಳೆ’ ಎಂದರೆ ಕೋಟೆ ಗೋಡೆಯ ಮೇಲೆ ಎತ್ತರಕ್ಕೆ ಕಟ್ಟಿರುವ ವೇದಿಕೆ. ಒಂದು ರೀತಿಯಲ್ಲಿ ಹೇಳುವುದಾದರೆ ಅಟ್ಟಳೆಗಳು ವೀಕ್ಷಣಾ ಕೇಂದ್ರಗಳಿದ್ದ ಹಾಗೆ ಅಟ್ಟಳೆಯ ಮೇಲೆ ರಾಜನ ಲಾಂಛನ ಇರುವ ರಾಜ್ಯಧ್ವಜ ಹಾರಾಡುತ್ತಿದ್ದವು. ‘ಗೊಂಟು’ ಇದು ಕೋಟೆ ಗೋಡೆಗಳು ಒಂದಕ್ಕೊಂದು ಸಂಧಿಸುವ ಸ್ಥಳ. ಅಂಥ ಸಂಧಿಸ್ಥಾನದಲ್ಲಿ ಅಟ್ಟಳೆಗಳಿಗಿಂತಲೂ ಎತ್ತರವಾಗಿ, ಚೆನ್ನಾಗಿ ವೀಕ್ಷಿಸಲು ಅನುಕೂಲ ಆಗುವಂತೆ ವೀಕ್ಷಣೆ ಕೇಂದ್ರಗಳೋಪಾದಿಯಲ್ಲಿ ವೇದಿಕೆ ಕಟ್ಟುತ್ತಿದ್ದರು. ಅವುಗಳೇ ಕೊತ್ತಳಗಳು (ಬುರುಜು-Bastion) ಎಂದು ಕರೆಯುತ್ತಾರೆ. ಪ್ರತಿ ಕೋಟೆಯ ನಾಲ್ಕು ಅಥವಾ ಎಂಟು ದಿಕ್ಕುಗಳಿಲ್ಲಿಯೂ ಒಂದೊಂದು ಕೊತ್ತಳಗಳಿರುತ್ತಿದ್ದವು. ಕೋಟೆಯ ಆಳುವೇರಿ ಅಂದರೆ ಎತ್ತರವಾದ ಬಲಿಷ್ಠವಾದ ಗೋಡೆ ಎಂದರ್ಥ. ಡೆಂಕಣಿ ಎಂಬ ಆಯುಧ ವಿಶೇಷವನ್ನು ಪ್ರತಿ ಕೋಟೆಯಲ್ಲೂ ಬಳಸುತ್ತಿದ್ದರು ಅವುಗಳನ್ನು ಆಕಾಶದತ್ತ ಮುಖಮಾಡಿ ನಿಲ್ಲಿಸುತ್ತಿದ್ದರು. ಯುದ್ಧದ ಸಂದರ್ಭದಲ್ಲಿ ಡೆಂಕಣಿಗಳನ್ನು ನೆಲದ ಕಡೆ ಬಾಗಿಸಿ ಕಲ್ಲುಗುಂಡು ಸಿಡಿಸುವ ರೂಢಿ ಇತ್ತು. “ಸಾರಮಾರಿ” ಎಂಬುದೊಂದು ವಿಶೇಷ ಸಾಧನ. ಕೋಟೆಯನ್ನು ಲಗ್ಗೆ ಹತ್ತಲು ಶತ್ರು ಪಕ್ಷದವರು ಉಪಯೋಗಿಸುತ್ತಿದ್ದ ಸಾಧನ ‘ಸಾರ’ ಅದನ್ನು ನಾಶಪಡಿಸಲು ಕೋಟೆಯೊಳಗಣವರು ಬಳಸುತ್ತಿದ್ದ ವಿಶೇಷ ಸಾಧನವೇ “ಸಾರಮಾರಿ.” “ಪುಲಿಯೋಗ” ಇದು ಕೋಟೆಗೆ ಇರುವ ದಿಡ್ಡಿಬಾಗಿಲು ಅಥವಾ ಹೆಬ್ಬಾಗಿಲನ್ನು ಸೂಚಿಸುತ್ತದೆ. ಹೆಬ್ಬಾಗಿಲನ್ನು ೫ ಕೈಗಳ ಅಗಲ ಮಾಡಬೇಕು. ಕುದುರೆ ಹತ್ತಿ ಬರುವವನ ಮೇಲೆ ಎರಡು ಕೈಗಳ ಉದ್ದ ಪ್ರಮಾಣವಿರುವ ಹಾಗೆ ಕೋಟೆ ದ್ವಾರವನ್ನು ಮಾಡಬೇಕೆಂದು ಈ ಕೆಳಗಿನ ಶ್ಲೋಕ ಹೇಳುತ್ತದೆ.

ಅಶ್ವಾರೂಢೆ ಸಮಾಯಾತೇತಸೊ ಪರಿತಥೋಭಯಂ|
ಹಸ್ತ ಮಾತ್ರ ಪ್ರಮಾಣೇನದ್ವಾರಂ ಕುರ್ಯಾದ್ವಿ ಚಕ್ಷಣಃ||

ಕೋಟೆಗೆ ಚೋರ ಕಿಂಡಿಗಳನ್ನು ಜೋಡಿಸುತ್ತಿದ್ದರು. ಪೂರ್ವಾದಿ ದಿಕ್ಕುಗಳಾಗಲಿ ಆಗ್ನೇಯಾದಿ ಕೋಮಗಲ್ಲಾಗಲಿ ಕೆಳಗಾಗಲಿ ಲಕ್ಷಣವಿಲ್ಲದೆ ಇರಲಿ ಹೇಗಾದರೂ ರಹಸ್ಯವಾಗಿರುವ ಹಾಗೆ ಆಪತ್ತು ಸಂಭವಿಸಿದಾಗ ಪಲಾಯನವಾಗುವುದಕ್ಕೆ ಯೋಗ್ಯವಾಗಿ ಚೋರ ಕಿಂಡಿ ದ್ವಾರವಂ ಮಾಡಬೇಕೆಂದು ಈ ಕೆಳಗಿನ ಶ್ಲೋಕದಲ್ಲಿ ಹೇಳಿದೆ.

ಡಿಕ್ಷು ವಾಕೋಣ ದೇಶ ಶ್ಯಾಹ್ಯು ಪರಿಷೈಥವಾದ್ಯಧಃ|
ಅಲಕ್ಷಣಂವಾಗುಟಪ್ತಂಚ ದ್ವಾರಂಸ್ಯಾಚ್ಛೋರ ಖಂಡಿತಃ||[29]

ಕೋಟೆಯ ಸುತ್ತಲೂ ಆಳವಾದ ಕಂದಕ ಅಥವಾ ಆಗಳು ತೋಡಿಸಿ ಅವುಗಳ ತುಂಬ ನೀರು ತುಂಬಿಸುತ್ತಿದ್ದರು ಮೋಹನ ತರಂಗಿಣಿಯಲ್ಲಿ ಕಂದಕದ ವರ್ಣನೆಯನ್ನು ನೋಡಬಹುದು.

ನೆಗರು ನೀರಾನೆ ಪಾಠೀನ ಕಚ್ಛಪಕರ
ಯುಗಳ ಕರ್ಕಾಟಕ ನಿಚಯ
ಜಗಳಕ್ಕೆ ಬಪ್ಪ ಶತ್ರುಗಳ ಖಂಡಿಪೆ ವೆಂ
ದಗಳೊಳು ಘಳಿ ಘಳಿಸಿದವು[30]

ಕೋಟೆಯ ಕಂದಕದಲ್ಲಿಯ ಮೊಸಳೆ, ನೀರಾನೆ, ಮೀನ, ಆಮೆ, ಏಡಿಗಳು ಕದನಕ್ಕೆ ಬರುವ ಶತ್ರುಗಳನ್ನು ಬಂಧಿಸುವವೆಂದು ಘಳಿ ಘಳಿಸಿದವು. ಹೀಗೆ ಕಂದಕಗಳು ಕಂಡುಬರುವ ಪ್ರಮುಖ ಭಾಗಗಳಾಗಿವೆ.

ಕೋಟೆಯ ಪ್ರಕಾರಗಳು (Typology of Forts)

ಕೋಟೆಗಳು ಯಾವ ರೀತಿ ರಚಿತವಾಗುತ್ತಿದ್ದವು ಹಾಗೂ ಅವುಗಳ ರಚನೆಯ ವಿನ್ಯಾಸವೇನೆಂಬುದನ್ನು ತಿಳಿಯಬೇಕಾದರೆ ನಾವು ಸಾಹಿತ್ಯ ಹಾಗೂ ಶಾಸನಗಳನ್ನೆ ಮೊರೆ ಹೋಗಬೇಕಾಗುತ್ತದೆ.

ಪ್ರಾಚೀನ ವಾಸ್ತುಗ್ರಂಥಗಳಾದ ಮಾನಸಾರ, ಮಯಮತ, ವಿಶ್ವಕರ್ಮ ವಾಸ್ತು ಹಾಗೂ ಶಿಲ್ಪರತ್ನ, ಪುರಾಣಗಳಾದ ಮತ್ಸ್ಯಪುರಾಣ, ಮಾರ್ಕಂಡೇಯ ಪುರಾಣ, ವಿಷ್ಣು ಪುರಾಣ, ರಾಜನೀತಿ ಸಾಹಿತ್ಯ ಕೃತಿಗಳಾದ ಕೌಟಿಲ್ಯನ ಅರ್ಥಶಾಸ್ತ್ರ, ಮನುಸ್ಮೃತಿ, ಶುಕ್ರನೀತಿಸಾರ, ಬೃಹತ್ ಸಂಹಿತಾ ಇತ್ಯಾದಿಗಳು ಕೋಟೆಗಳ ವರ್ಗೀಕರಣವನ್ನು ತಿಳಿಸುತ್ತವೆ. ಈ ವರ್ಗೀಕರಣದಲ್ಲಿ ಕೋಟೆಯ ಸ್ಥಳ, ಆಕಾರ ಮತ್ತು ರಚನೆಗೆ ಉಪಯೋಗಿಸುವ ವಸ್ತುಗಳನ್ನು ಆಧಾರವಾಗಿರಿಸಿಕೊಂಡಿದೆ. ಕೋಟೆಯಲ್ಲಿ ಎರಡು ವಿಧಗಳಿವೆ. ಒಂದು ಶಾಶ್ವತವಾದಂತಹ ಕೋಟೆಗಳು; ಇಲ್ಲಿ ಜನರ ರಕ್ಷಣೆಗೆ ಮುಖ್ಯ ಆಧ್ಯತೆ. ಎರಡನೆಯದು ರಣರಂಗದ ಕೋಟೆ; ಇದು ಸೈನ್ಯವನ್ನು ವಶಪಡಿಸಿಕೊಳ್ಳುವುದು ಮತ್ತು ಯುದ್ಧ ಸ್ಥಳವನ್ನು ರಕ್ಷಿಸುವುದು.

[1] Date, G.T. Art of War in Ancient India. p.487. London.

[2] Straith, H. Treatise on Fortification and Artillery, p.42

[3] ಬೆಟ್ಟಗೇರಿ ಕೃಷ್ಣಶರ್ಮ. ೧೯೮೩. ಕರ್ನಾಟಕ ಜನಜೀವನ, ಪು, ೫೩. ಬೆಂಗಳೂರು: ವಿಶ್ವಕನ್ನಡ ಸಮ್ಮೇಳನ

[4] ದೇವೀರಪ್ಪ, ಎಚ್. (ಸಂ.), ೧೯೯೪. ರಾಮಚರಿತ ೨, ಪು. ೩೭ ಮತ್ತು ೫೨. ಮೈಸೂರು: ಮೈಸೂರು ವಿಶ್ವವಿದ್ಯಾಲಯ

[5] ರಾಧಾಕೃಷ್ಣಮೂರ್ತಿ. ೧೯೯೧. ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಇತಿಹಾಸ ದರ್ಶನ-೬, ಪು. ೧೫೭

[6] ಚನ್ನಬಸಪ್ಪ, ಎಸ್.ಪಾಟೀಲ. ೧೯೯೪. ಮಾತನಾಡುವ ಕೋಟೆಗಳು, ದಿಕ್ಸೂಚಿ (ಫೆಬ್ರುವರಿ), ಪು. ೩೦.

[7] ಚನ್ನಬಸಪ್ಪ, ಎಸ್ ಪಾಟೀಲ. ೧೯೯೪. ಬನವಾಸಿ ಕೋಟೆ, ದಿಕ್ಸೂಚಿ (ಸೆಪ್ಪೆಂಬರ್), ಪು.೩೪-೩೫

[8] ಜೋಶಿ, ಎಸ್.ಕೆ. ೨೦೦೦. ಕರ್ನಾಟಕದ ಪ್ರಾಚೀನ ಕೋಟೆಗಳು ಮತ್ತು ಇತಿಹಾಸ, ಸೂರ್ಯಕೀರ್ತಿ (ಸಂ: ಕೃಷ್ಣಮೂರ್ತಿ ಪಿ.ವಿ ಮತ್ತು ಕೆ. ವಸಂತಲಕ್ಷ್ಮಿ), ಪು.೧೪೮. ಬೆಂಗಳೂರು: ಸೂರ್ಯನಾಥ ಕಾಮತ್ ಅಭಿನಂದನಾ ಸಮಿತಿ.

[9]ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧ ಪು. ೪೬೩. ಹಂಪಿ: ಕನ್ನಡ ವಿಶ್ವವಿದ್ಯಾಲಯ.

[10] ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ. ಪು. ೧೪೭-೧೬೦

[11] ಆತ್ಮದಾರಾರ್ಥ ಲೋಕನಾಂ ಸಂಚಿತಾನಾಂತು ಗುಪ್ತಯೇ ನೃಪತಿಃ ಕಾರಯೇದ್ದುರ್ಗಂ ಪ್ರಕಾರದ್ವಾರ ಸಂಯುತಮ್, (ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ. ಪು. ೧೫೭)

[12] Rangarajan, L.N. (Ed.) 1987. Kautilyas Arthashastra. Pp. 3-4

[13] ಎಕಂ ಶತಂ ತೋದ್ಯಯಂತಿ ಪ್ರಕಾರ ಸ್ಯೋದ್ಯನುರ್ಧರಃ ಶತಂದಶ ಸಹಸ್ರಾಣಿ ತಸ್ಮಾದ್ದುರ್ಗಂ ವಿಧೀಯತೇಃ (ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ. ಪು. ೧೫೭)

[14] ಪಂಚತಂತ್ರ ನಾಗಜಾನಂ ಸಹಸ್ರೇಣ ನಚ ಲಕ್ಷೇಣ ವಾಜಿನಾಮ್ ತತ್ಕರ್ಮ ಸಾಧ್ಯತೇ ರಾಜಾಂ ದುರ್ಗೈಣೈಕೇನ ಯದ್ರಣಿ (ಸಂಸ್ಕೃತ ಗ್ರಂಥಗಳಲ್ಲಿ ಕೋಟೆಗಳ ವರ್ಣನೆ, ಪೂರ್ವೋಕ್ತ. ಪು. ೧೫೮)

[15] ಕರ್ನಾಟಕದ ಪ್ರಾಚೀನ ಕೋಟೆಗಳು ಮತ್ತು ಇತಿಹಾಸ ಪೂರ್ವೋಕ್ತ. ಪು. ೧೪೬-೧೫೨

[16] ರಾಮಶೇಷನ್, ನೀ.ಕೃ. ೧೯೮೦. ಕರ್ನಾಟಕದ ಕೋಟೆ-ಕೊತ್ತಳಗಳು, ಪು. ೧೦. ಬೆಂಗಳೂರು: ಐ.ಬಿ.ಎಚ್. ಪ್ರಕಾಶನ

[17] ಮಲ್ಲೇಪುರಂ ಜಿ. ವೆಂಕಟೇಶ (ಸಂ.), ೧೯೯೮. ಶಿವತತ್ವ ರತ್ನಾಕರ, ಪುಟ. ೨೬೮-೬೯೯, ಹಂಪಿ: ಕನ್ನಡ ವಿಶ್ವವಿದ್ಯಾಲಯ

[18] ಕೋತಿನ ಎಸ್. ಎಸ್. (ಅನುವಾದ), ೧೯೮೪. ಮೋಹನ ತರಂಗಿಣಿ, ಪು. ೨೯೫, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು

[19] ಅದೇ, ಪು. ೩೫೦

[20] ಪರಮಶಿವಮೂರ್ತಿ. ಡಿ. ವಿ. ೧೯೯೯. ಕನ್ನಡ ಶಾಸನ ಶಿಲ್ಪ, ಪು. ೧೯೮. ಹಂಪಿ ಕನ್ನಡ ವಿಶ್ವವಿದ್ಯಾಲಯ

[21] ಅದೇ, ಪು. ೧೯೯

[22] ಅದೇ, ಪು. ೧೯೯

[23] ಅದೇ, ಪು. ೧೯೯

[24] ಅದೇ, ಪು. ೧೯೯

[25] ಅನವಟ್ಟಿ, ಸೊರಬ ತಾಲೂಕು. ಶಿವಮೊಗ್ಗ ಜಿಲ್ಲೆ

[26] ಬಳ್ಳಿಗಾವಿ, ಶಿಕಾರಿಪುರ ತಾಲೂಕು. ಶಿವಮೊಗ್ಗ ಜಿಲ್ಲೆ

[27] ಕನ್ನಡ ಶಾಸನ ಶಿಲ್ಪ, ಪೂರ್ವೋಕ್ತ. ಪು. ೨೦೦

[28] ಗೃಹವಾಸ್ತು ದರ್ಪಣ, ಪು. ೫೩. ಗದಗ ಮೇ ಪಿ. ಸಿ. ಶಾಭಾದಿಮಠ ಬುಕ್ ಡಿಪೊ

[29] ಅದೇ, ಪು. ೫೩

[30] ಅದೇ, ಪು. ೨೯೫