ಕೂಡ್ಲಿಗಿಯು ಬಳ್ಳಾರಿಯ ಎಂಟು ತಾಲೂಕುಗಳಲ್ಲಿ ಒಂದು. ಇದು ಬಳ್ಳಾರಿಯಿಂದ ೮೦. ಕಿ.ಮೀ. ದೂರದಲ್ಲಿದೆ. ಗುಡೇಕೋಟೆ ಕೂಡಲಾಗಿ ಎಂದಾಯಿತು ಎನ್ನುವುದು ಇಲ್ಲಿಯ ಜನರ ನಂಬಿಕೆ. ಜನ ಬಂದು ಇಲ್ಲಿಗೆ ಕೂಡಿದ್ದರಿಂದ ಸ್ಥಳಕ್ಕೆ ಕೂಡಲಗಿ ಎಂದು ಈಗ ಕೂಡ್ಲಿಗಿ ಆಗಿದೆ ಎಂಬುದು ಕುಂಬಾಸ ಅವರ ಅಭಿಪ್ರಾಯವಾಗಿದೆ.[1] ಕೂಡ ಅ ಕೂಟ, ಕೂಡುವಿಕೆ, ಬೆರಕೆ ನಾಲ್ಕಾರು ಹಾದಿಗಳು ಕೂಡಿದ ಸ್ಥಳ ಕೂಡಲ ಕೂಡಲಗಿ ಕೂಡ್ಲಿಗಿ ಎಂದಾಯಿತು. ನದಿಗಳು ಕೂಡುವ ಸ್ಥಳಗಳಿಗೂ ಕೂಡಲ ಕೂಡಲಗಿ ಕೂಡಲ ಸಂಗಮ ಇತ್ಯಾದಿಯಾಗಿ ಕರೆದಿರುವರು. ಆದರೆ ಇಲ್ಲಿ ನದಿಗಳಿಲ್ಲ. ಜರಿಮಲೆ, ಗುಡೇಕೋಟೆ, ರಾಯದುರ್ಗ, ಮರಾಠರು, ಬಿಜಾಪುರ ಸುಲ್ತಾನರು, ಹರಪನಹಳ್ಳಿ ಪಾಳೆಯಗಾರರು, ಇವುಗಳಲ್ಲಿ ಯಾವುದೇ ರಾಜ್ಯಕ್ಕೆ ಹೋದರೂ ಈ ಪ್ರದೇಶವನ್ನು ಸಂಧಿಸಬೇಕಾಗುವುದು. ಈ ಹಿನ್ನೆಲೆಯಲ್ಲಿ ಕೂಡ್ಲಿಗಿ ಹೆಸರು ಬಂದಿದೆ. ಕ್ರಿ.ಶ. ೧೭೦೫ ರ ಚನ್ನೇನಹಳ್ಳಿ[2] ಶಾಸನದಿಂದ ಕೂಡ್ಲಿಗಿಯ ೧೮ನೆಯ ಶತಮಾನಕ್ಕಿಂತಲೂ ಮುಂಚಿನದೆಂದು ಸ್ಪಷ್ಟವಾಗುವುದು. ಆದರೆ ಈ ತಾಲೂಕು ಬಹುಪ್ರಾಚೀನ ಇತಿಹಾಸವನ್ನು ಹೊಂದಿದೆ. ಆದಿ ಹಳೆಯ ಶಿಲಾಯುಗದ ನೆಲೆಯು ಈ ತಾಲೂಕಿನ ಜುಮ್ಮೋಬನಹಳ್ಳಿಯಲ್ಲಿ ಕಂಡುಬಂದಿದೆ.[3] ಇದರ ಜೊತೆಗೆ ಇತಿಹಾಸ ಕಾಲದ ಕುರುಹುಗಳು ಇಲ್ಲಿ ಹೇರಳವಾಗಿವೆ. ಕೂಡ್ಲಿಗಿಯಿಂದ ೨೯ ಕಿ.ಮೀ. ದೂರದಲ್ಲಿರುವ ಸಿಡೆಗಲ್ಲು ಗ್ರಾಮದ ಬಳಿ ಸೂಕ್ಷ್ಮ ಶಿಲಾಯುಗದ ನೆಲೆಯ ಕಂಡುಬರುತ್ತದೆ.[4] ಸಿಡೆಗಲ್ಲು ಗ್ರಾಮದ ಸುತ್ತಲೂ ಇರುವ ಬೆಟ್ಟದ ಸಾಲು ಗುಡೇಕೋಟೆಯವರಿಗೆ ಹಬ್ಬಿದೆ. ಕೂಡ್ಲಿಗಿಯಿಂದ ಸುಮಾರು ೧೪ ಕಿ.ಮೀ. ದೂರದಲ್ಲಿರುವ ಜರಿಮಲೆಯ ಬಾಗೇಶ್ವರ ದೇವಾಲಯದ ಹತ್ತಿರ ನವಶಿಲಾಯುಗ ಕಾಲಕ್ಕೆ ಸೇರಿದ ಆಯುಧಾವಶೇಷಗಳು ಕಂಡುಬಂದಿವೆ.[5] ತಾಲೂಕು ಕೇಂದ್ರದಿಂದ ೪೦. ಕಿ.ಮೀ. ದೂರದಲ್ಲಿರುವ ಕುಮತಿ ಗ್ರಾಮದ ಬಳಿ ಹರಿದಿರುವ ಚಿನ್ನಹಗರಿ ನದಿಯ ದಂಡೆಯ ಮೇಲೆ ಬೃಹತ್ ಶಿಲಾಯುಗದ ನೆಲೆಯೂ ಇದೆ. ಹೀಗೆ ಈ ಪ್ರದೇಶದಲ್ಲಿ ಬಹು ಹಿಂದಿನಿಂದಲೂ ಪ್ರಾಚೀನ ಮಾನವನು ನೆಲೆಸಿದ್ದು ಕಂಡುಬರುತ್ತದೆ.[6]

ಹನ್ನೆರಡನೆಯ ಶತಮಾನದ ಶಿಕಾರಿಪುರದ ಶಾಸನಗಳು ಈ ಪ್ರದೇಶದಲ್ಲಿ ನಂತರ ಆಳ್ವಿಕೆಯಿದ್ದಿತೆಂಬುದನ್ನು ಸೂಚಿಸುತ್ತದೆ.[7] ಆದರೆ ಈ ಶಾಸನವು ಯಾವಾಗ ನಂದರು ಇಲ್ಲಿ ಆಳ್ವಿಕೆ ಮಾಡಿದರೆಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡುವುದಿಲ್ಲ.

ಕಲ್ಯಾಣ ಚಾಳುಕ್ಯರ ಕಾಲದ ಕೋಟೆಯು ಕೊಟ್ಟೂರಿನಲ್ಲಿದ್ದುದನ್ನು ಕ್ರಿ.ಶ. ೧೧೧೨ರ ಶಾಸನವು ತಿಳಿಸುತ್ತದೆ.[8] ಕೊಟ್ಟೂರು ಹನ್ನೆರಡು ಗ್ರಾಮಗಳ ಚಿಕ್ಕವಿಭಾಗದ ಉಲ್ಲೇಖ ಕೂಡ್ಲಿಗಿ ತಾಲೂಕಿನ ಹಳ್ಯ ಶಾಸನದಲ್ಲಿದೆ.[9] ಕದಂಬ ವಂಶದ ನಾಚಿದೇವರಸನು ಕೋಗಳಿ ೫೦೦ರಲ್ಲಿ ಕೊಟ್ಟೂರು ೧೨ನ್ನು ಕೊಟ್ಟೂರಿನಿಂದ ಆಳುತ್ತಿದ್ದನೆಂದು ತಿಳಿದುಬರುತ್ತದೆ. ಈ ಹಿನ್ನೆಲೆಯಲ್ಲಿ ಕೊಟ್ಟೂರಿನ ಕೋಟೆಯು ಬಹುಪ್ರಾಚೀನ ಮತ್ತು ಮಹತ್ವದ್ದಾಗಿತ್ತೆಂದು ಸ್ಪಷ್ಟವಾಗುತ್ತದೆ. ಆದರೆ ಕೋಟೆಯ ಯಾವುದೇ ಅವಶೇಷಗಳು ಇಂದು ಉಳಿದಿಲ್ಲ.

ಪಾಳೆಯಗಾರರ ಕಾಲದ ಉಜ್ಜನಿಯಲ್ಲಿ ಕೋಟೆ ಇದ್ದುದನ್ನು ಕೈಫಿಯತ್ತುಗಳು ತಿಳಿಸುತ್ತವೆ.[10] ಉಜ್ಜಿನ ಕೋಗಳಿ ೫೦೦ ರಲ್ಲಿ ಬರುವ ಒಂದು ಉಪಗ್ರಾಮ. ಇಲ್ಲಿ ಕಲ್ಯಾಣ ಚಾಳುಕ್ಯ ವಿಜಯನಗರದರಸರ ದೇವಾಲಯಗಳು ಮತ್ತು ಶಾಸನಗಳು ಕಂಡುಬರುತ್ತವೆ. ಈ ಶಾಸನಗಳಲ್ಲಿ ಉಜ್ಜನಿ ಕೋಟೆಯ ಪ್ರಸ್ತಾಪಗಳಿಲ್ಲ. ಪ್ರಸ್ತುತ ಕೋಟೆಯ ಅವಶೇಷಗಳಾವುವು ಅಲ್ಲಿ ಕಂಡುಬರುವುದಿಲ್ಲ. ಈ ಹಿನ್ನೆಯಲ್ಲಿ ಉಜ್ಜನಿಯಲ್ಲಿ ಕೋಟೆ ಇದ್ದ ಬಗ್ಗೆ ಅನುಮಾನಗಳಿವೆ.

ಪಾಳೆಯಗಾರರ ಕೋಟೆಗಳು, ತಾಲೂಕಿನ ಗುಡೇಕೋಟೆ, ಜರಿಮಲೆ, ದೇವಲಾಪುರ, ಪಾಳಯ್ಯನ ಕೋಟೆ, ವೀರನದುರ್ಗಗಳಲ್ಲಿವೆ. ಇವುಗಳಲ್ಲಿ ಗುಡೇಕೋಟೆ, ಜರಿಮಲೆ, ವೀರನದುರ್ಗ ಹಾಗೂ ಪಾಳಯ್ಯನ ಕೋಟೆಗಳು ಸುಸ್ಥಿತಿಯಲ್ಲಿವೆ.

ಗುಡೇಕೋಟೆ

ಗುಡೇಕೋಟೆ ಕೂಡ್ಲಿಗಿಯಿಂದ ಪೂರ್ವದಿಕ್ಕಿಗೆ ೨೮ ಕಿ.ಮೀ. ದೂರದಲ್ಲಿರುವ ಒಂದು ಹೋಬಳಿ ಕೇಂದ್ರ. ಈ ಗ್ರಾಮದ ಸುತ್ತಲೂ ಬೆಟ್ಟ ಗುಡ್ಡಗಳು, ಕುರುಚಲ ಗಿಡ ಕಾಡುಗಳು ಸುತ್ತುವರಿದಿವೆ. ಗುಡೇಕೋಟೆಯು ದೊರೆಗಳ ಗುಡ್ಡ, ಸೋಮೇಶ್ವರ ಗುಡ್ಡ ಅಗಸರ, ಹರಿಜನ ಕೇರಿ ಗುಡ್ಡ, ಕರಡಿ ಗುಡ್ಡಗಳ ಮಧ್ಯದಲ್ಲಿದೆ. ಇಂದಿನ ಗುಡೇಕೋಟೆಗೆ ಹಿಂದೇ ಬಾಣಾಸುರ ಪಟ್ಟಣವೆಂದು ಕರೆಯುತ್ತಿದ್ದರೆಂದು ಸ್ಥಳೀಯರ ವಾಡಿಕೆ. ಸುಮಾರು ವರ್ಷಗಳ ಹಿಂದೆ ಬಾಣಾಸರು ಎಂಬ ಅರಸನು ಆಳುತ್ತಿದ್ದನಂತೆ. ಇವನು ಶಿವಪಾರ್ವತಿಯರ ಪರಮಭಕ್ತ. ಈತನ ಭಕ್ತಿಗೆ ಮೆಚ್ಚಿದ ಆ ದೇವ ದಂಪತಿಗಳು ಈ ಪಟ್ಟಣದ ಮಹಾದ್ವಾರವನ್ನು ಸದಾಕಾಲ ಕಾಯುತ್ತಿರುವುದಾಗಿ ಅಭಯ ನೀಡಿದ್ದರೆಂಬ ಪ್ರತೀತಿ. ಈ ಗ್ರಾಮವು ಅರಸನ ಕಾಲದಲ್ಲಿ ಪಟ್ಟಣದಷ್ಟು ದೊಡ್ಡದಾಗಿದ್ದು, ಅರಸನ ಹೆಸರನ್ನೇ ಈ ಗ್ರಾಮವು ಹೊಂದಿತು. ಸಿ.ಡಿ.ಮ್ಯಾಕಲಿನ್ ತಮ್ಮ ಕೃತಿಯಲ್ಲಿ Goodi cottah Gudikotatal from (Gudital, Temple + kota, tal fort,) ಎಂದು ಉಲ್ಲೇಖಿಸಿದ್ದಾನೆ.[11] ಚೋರನೂರು, ನಾರಾಯಣದೇವರ ಕೆರೆ ಶಾಸನಗಳಲ್ಲಿ ಗುಡೇಕೋಟೆಯನ್ನು ಗುಡಿಯ ಕೋಟೆ ಎಂದು ಉಲ್ಲೇಖಿಸಿದೆ.[12] ಗುಡೇಕೋಟೆಯ ಹೆಸರು ಕೈಫಿಯತ್ತುಗಳಲ್ಲಿ ಗುಡಿಕೋಟೆ ಎಂಬುದಾಗಿದೆ.[13] ಗಡಿಯಾಂಕ ಭೀಮನ ಪಟ್ಟಣವೆಂದು ಪೌರಾಣಿಕ ಪ್ರಸಂಗಗಳು ಹೇಳುತ್ತವೆ. ಕನ್ನಡ ನಿಘಂಟುಗಳಲ್ಲಿ ಬರುವ ಗುಡೇ ಎಂಬುದರ ಶಾಬ್ದಿಕ ಅರ್ಥವು ರಾಶಿ, ಸಮೂಹ, ಗುಂಪು ಎಂಬ ಪದಗಳನ್ನು ನಿರ್ದೇಶಿಸುತ್ತಿದ್ದು, ಈಗಲೂ ಗುಡೇಕೋಟೆ ಸುತ್ತಲೂ ಅನೇಕ ಗುಡ್ಡಗಳು ರಾಶಿ ರಾಶಿಯಾಗಿ ಹಬ್ಬಿರುವುದನ್ನು ನೋಡಲಾಗಿ ಅಲ್ಲಿಯ ಕೋಟೆಯನ್ನು ಸೂಚಿಸಲು ಅನ್ವರ್ಥಕವಾಗಿ ಗುಡೇ ಎಂಬ ವಿಶೇಷಣೆಯನ್ನು ಸೇರಿಕೊಂಡಿರಬೇಕು. ಹಾಗಾಗಿ ಈ ಗ್ರಾಮಕ್ಕೆ ಗುಡೇಕೋಟೆ ಎಂಬ ಹೆಸರು ಪ್ರಾಪ್ತವಾಗಿರಬೇಕು.

ಇತಿಹಾಸ

ಗುಡೇಕೋಟೆಯ ಪ್ರಾಚೀನತೆಯನ್ನು ಪ್ರಾಗಿತಿಹಾಸ ಕಾಲದವರಿಗೆ ತಲುಪಿರುವ ಅವಶೇಷಗಳು ಈ ಗ್ರಾಮದ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುತ್ತವೆ. ಗುಡೇಕೋಟೆ ಗ್ರಾಮವು ಸೇರಿದಂತೆ ಇದರ ಸುತ್ತಮುತ್ತಲಿನ ಪರಿಸರವು ಭೌಗೋಳಿಕವಾಗಿ ಸಮೃದ್ಧವಾದುದು. ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಬಂಡೆಗಳನ್ನು ಹೊತ್ತ ಬೆಟ್ಟಗಳು, ನೈಸರ್ಗಿಕ ಗುಹೆಗಳು ಹಳ್ಳ ತೊರೆಗಳಿಂದ ಕೂಡಿದ ನೆಲೆಗಳು ಇಲ್ಲಿಯ ಫಲವತ್ತಾದ ಭೂ ಭಾಗಗಳು ಪ್ರಾಗಿತಿಹಾಸ ಕಾಲದಿಂದಲೂ ಮಾನವನ ತಾಣವಾಗಿ ಬೆಳೆದು ಬರಲು ಸಾಧ್ಯವಾಗಿದೆ. ಗುಡೇಕೋಟೆ ಈ ಪ್ರದೇಶದ ಅಪ್ಪಯ್ಯಗನಹಳ್ಳಿ, ಪಂಚಲಿಂಗೇಶ್ವರ, ದೊರೆ ಗುಡ್ಡದಲ್ಲಿ ಬಂಡೆಯ ಬದಿಯಲ್ಲಿ, ಕಲ್ಲಾಸರೆ ಗವಿಗಳಲ್ಲಿ, ಬಂಡೆಗಲ್ಲುಗಳ ಮೇಲೆ ಹಳೆಯ ಶಿಲಾಯುಗಕ್ಕೆ ಸೇರಿದ ಆಯುಧಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಈ ಪರಿಸರದಲ್ಲಿ ಸಾಕಷ್ಟು ದೊರೆಯುತ್ತವೆ. ಇವುಗಳಿಂದ ಈ ಪ್ರದೇಶದ ಪ್ರಾಚೀನತೆ ಅರಿವಾಗುತ್ತದೆ.

ಗುಡೇಕೋಟೆ ಪರಿಸರದ ಪ್ರದೇಶವು ಮೌರ್ಯ ಸಾಮ್ರಾಜ್ಯದ ಒಂದು ಭಾಗವಾಗಿದ್ದು ಅವರ ಆಡಳಿತ ಪದ್ಧತಿಗೆ ಒಳಪಟ್ಟಿದ್ದಿತು. ಇಲ್ಲಿಯ ಬ್ರಹ್ಮಗಿರಿ, ಸಿದ್ಧಾಪುರ ಪ್ರದೇಶದಲ್ಲಿ ಸಿಕ್ಕಿರುವ ಶಾಸನಗಳಿಂದ ಮತ್ತು ಅವಶೇಷಗಳಿಂದ ಈ ಅಂಶ ದೃಢಪಡುತ್ತದೆ.

ಗುಡೇಕೋಟೆ ಗ್ರಾಮದ ಹತ್ತಿರದಲ್ಲಿರುವ ಕೊಟ್ಟೂರು, ಕೂಡ್ಲಿಗಿ, ಶಿವಪುರ, ಚೋರನೂರು, ಮೊಳಕಾಲ್ಲೂರು, ಅಶೋಕ ಸಿದ್ಧಾಪುರ ಮುಂತಾದ ಊರುಗಳಲ್ಲಿ ಶಾತವಾಹನ ಕಾಲದ ಅವಶೇಷಗಳು ದೊರೆತಿವೆ.[14] ಇದರಿಂದ ಗುಡೇಕೋಟೆ ಗ್ರಾಮ ಶಾತವಾಹನರ ಆಳ್ವಿಕೆಗೆ ಒಳಪಟ್ಟಿತ್ತೆಂದು ಹೇಳಬಹುದು. ಉಚ್ಚಂಗಿದುರ್ಗವನ್ನು ಪೂರ್ವಭಾಗದ ರಾಜಧಾನಿಯಾಗಿ ಮಾಡಿಕೊಂಡು ಆಳಿದ ಕದಂಬರಿಗೆ ಕೋಗಳಿ, ಕೊಟ್ಟೂರುಗಳಂತೆ ಗುಡೇಕೋಟೆಯ ಪ್ರದೇಶವು ಒಳಪಟ್ಟಿತ್ತು. ಮುಂದೆ ಬಾದಾಮಿ, ಕಲ್ಯಾಣ ಚಾಳುಕ್ಯರ ಆಡಳಿತಕ್ಕೂ ಒಳಪಟ್ಟು ಇದು ರಾಷ್ಟ್ರಕೂಟರಿಗೂ ಪ್ರಮುಖ ನೆಲೆಯಾಗಿದ್ದುದು ಅವರ ವಾಸ್ತು ಶೈಲಿಯ ದೇಗುಲದಿಂದ ದೃಢವಾಗುತ್ತದೆ. ಹೊಯ್ಸಳರು, ಹೊಸಮಲೆದುರ್ಗದ ಅರಸರ ನೇರ ಆಳ್ವಿಕೆಯಲ್ಲಿ ಈ ಪ್ರದೇಶ ಅಭಿವೃದ್ಧಿಗೆ ಬರುತ್ತದೆ. ವಿಜಯನಗರ ಸಾಮ್ರಾಜ್ಯದಲ್ಲಿ ಒಂದು ಕಿರು ಪ್ರಾಂತ್ಯವಾಗಿ ರೂಪುಗೊಂಡ ಗುಡೇಕೋಟೆ ಪಾಳೆಯಗಾರರ ಬಹುಮುಖ್ಯ ಆಡಳಿತ ಕೇಂದ್ರವಾಗಿ ಬೆಳೆದುದು ಈ ಅವಧಿಯಲ್ಲಿಯೇ ಎಂಬುದು ಕೈಫಿಯತ್ತುಗಳಿಂದ ತಿಳಿದುಬರುತ್ತದೆ.[15] ಬಿಜಾಪುರ ಹಾಗೂ ಮರಾಠ ಶಿವಾಜಿಯರ ಕಾಲದಿಂದಾಚೆ ಈ ಪ್ರದೇಶದ ಪಾಳೆಯಗಾರರು ಹೆಚ್ಚು ಪ್ರಬಲರಾದರು. ಗುಡೇಕೋಟೆ ಪಾಳೆಯಗಾರರು ಸುಮಾರು ಕ್ರಿ.ಶ. ೧೫೦೬ ರಿಂದ ೧೭೫೨ ರವರೆಗೆ ಅಂದರೆ ಅಂದಾಜು ೨೫೦ ವರ್ಷಗಳ ಕಾಲ ಗುಡೇಕೋಟೆಯನ್ನು ಆಳಿದರು. ಗುಂಡಳನಾಯಕನು ಗುಡೇಕೋಟೆ ಪಾಳೆಯಗಾರರಲ್ಲಿ ಪ್ರಥಮಿಗ.[16] ಬೊಮ್ಮಂತರಾಜ, ಚಿನ್ನಯರಾಜ, ಇಮ್ಮಡಿ ರಾಜಪ್ಪನಾಯಕ, ಜಟಂಗಿ ರಾಜರು, ರಾಮಪ್ಪನಾಯಕ, ಶಿವಪ್ಪನಾಯಕ ಇವರುಗಳು ಗುಡೇಕೋಟೆಯನ್ನಾಳಿದ ಪ್ರಮುಖರು. ಇವರ ಆಡಳಿತಕ್ಕೆ ಲಿಂಗಮಹಳ್ಳಿ ಜಾಜರಕಲ್ಲು, ಮಡೇನಹಳ್ಳಿ, ಲಕ್ಷ್ಮಿಪುರ, ಹಿರೇಹಾಳು ಗ್ರಾಮಗಳು ಒಳಪಟ್ಟಿದ್ದವು. ಹೀಗೆ ಪಾಳೆಯಗಾರರ ಪ್ರಮುಖ ಆಡಳಿತ ಕೇಂದ್ರವಾಗಿದ್ದ ಗುಡೇಕೋಟೆಯಲ್ಲಿ ಆಗಲೇ ಪ್ರಬಲರ ಗಿರಿದುರ್ಗ ನಿರ್ಮಾಣವಾಯಿತು. ಈ ಮೇಲಿನ ರಾಜಕೀಯ ಇತಿಹಾಸವನ್ನು ಶ್ರೀ ಕುಮಾರ ದೇವರ ಕೈಫಿಯತ್ತು,[17] ಹಿರೇಹಾಳು ಕೈಫಿಯತ್ತು,[18] ದರೋಜಿ ಗ್ರಾಮದ ಕೈಫಿಯತ್ತು,[19] ಅಂತಾಪುರ ಕೈಫಿಯತ್ತು,[20] ಚೋರನೂರು,[21] ಕುದಿರಡವು[22] ಶಾಸನಾಧಾರಗಳು ದೃಢಪಡಿಸುತ್ತವೆ.

ಪಾಳೆಯಗಾರರ ನಂತರ ಗುಡೇಕೋಟೆಯು ಕ್ರಿ.ಶ. ೧೮ನೇ ಶತಮಾನದ ಕೊನೆಯಾರ್ಧದಲ್ಲಿ ಹೈದರಾಲಿ ಮತ್ತು ಟಿಪ್ಪುವಿನ ವಶದಲ್ಲಿತ್ತು. ಕ್ರಿ.ಶ. ೧೭೯೨ ರಲ್ಲಿ ಬ್ರಿಟಿಷರಿಂದ ಟಿಪ್ಪು ಪರಾಜಯಗೊಂಡಿದ್ದರಿಂದ ಗುಡೇಕೋಟೆ ಪಾಳಯಗಾರರಿಗೆ ಪುನಃ ಸೇರಿತು. ಕ್ರಿ.ಶ. ೧೭೯೯ ರಲ್ಲಿ ಟಿಪ್ಪುಸುಲ್ತಾನನ ಮೇಲೆ ಬ್ರಿಟಿಷರು ಆಕ್ರಮಣ ಮಾಡಿ ಗುಡೇಕೋಟೆಯನ್ನು ವಶಪಡಿಸಿಕೊಂಡರು. ಆಗ ಒಪ್ಪಂದದಂತೆ ಗುಡೇಕೋಟೆ ಹೈದರಾಬಾದಿನ ನಿಜಾಮನಿಗೆ ಸೇರಿತು. ಕ್ರಿ.ಶ.೧೮೦೦ರಲ್ಲಿ ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟು ನಿಜಾಮ ಬ್ರಿಟಿಷರಿಗೆ ಗುಡೇಕೋಟೆಯನ್ನು ಒಪ್ಪಿಸಿದನು. ಬ್ರಿಟಿಷರ ೧೫೦ ವರ್ಷಗಳ ಆಳ್ವಿಕೆಯ ನಂತರ ಅಂದರೆ ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾದ ಮೇಲೆ ಗುಡೇಕೋಟೆ ಮೈಸೂರು ರಾಜ್ಯಕ್ಕೆ ಸೇರಿತು.

ಗುಡೇಕೋಟೆ ಗ್ರಾಮವನ್ನು ಹಳೇ ಊರು ಹೊಸ ಊರುಗಳೆಂದು ವಿಂಗಡಿಸಲಾಗಿದೆ. ಹಳೇ ಊರಿನಲ್ಲಿ ಪಾಳು ಕಟ್ಟಡಾವಶೇಷಗಳು ಹಾಗೂ ದೊರೆಯ ಗುಡ್ಡವಿದೆ. ಈ ದೊರೆಗಳ ಗುಡ್ಡ ಇಂದಿನ ಗ್ರಾಮದ ಉತ್ತರಕ್ಕೆ ಕೂಡ್ಲಿಗಿ ರಸ್ತೆಯ ಪಕ್ಕದಲ್ಲಿದೆ. ಈ ಗುಡ್ಡದ ಮೇಲಿರುವುದೇ ಪಾಳೆಯಗಾರರ ಕೋಟೆ. ಹಳೇಗ್ರಾಮದ ಉತ್ತರಕ್ಕೆ ಕೋಟೆಯೊಳಗೆ ಹೋಗುವ ದಾರಿಯಿಂದ ಈ ಮಾರ್ಗದ ಪ್ರಾರಂಭದಲ್ಲಿ ಉಪ್ಪರಿಗೆ ಕಂಡುಬರುತ್ತದೆ. ಇದನ್ನು ಸ್ಥಳೀಯರು ತಂಗಾಳಿ ಮಹಲ್ ಎಂದು ಗುರುತಿಸುತ್ತಾರೆ. ಇದು ಎರಡು ಮಹಡಿಗಳನ್ನು ಹೊಂದಿದ್ದು, ಮೇಲ್ಭಾಗದ ಛಾವಣಿಯಲ್ಲಿ ಪಾಳೆಯಗಾರರು ಮತ್ತು ರಾಣಿಯರು ತಂಪಾದ ಗಾಳಿಗೆ ಮೈ ಒಡ್ಡಿ ಆಹ್ಲಾದತೆಯನ್ನು ಪಡೆಯುತ್ತಿದ್ದರಂತೆ.[23] ಇಂದು ಭಾಹಶಃ ಹಾಳಾಗಿ ಅಂಗವಿಕಲ ಮಹಲ್ ಆಗಿದೆ. ಇದರ ಸುತ್ತಲೂ ಗೋಡೆಗಳಲ್ಲಿ ಕಮಾನಗಳು ಮತ್ತು ಕಿಟಕಿಗಳಿವೆ. ಮೇಲ್ಭಾಗದ ನಾಲ್ಕೂ ಮೂಲೆಗೂ ನಿರ್ಮಿಸಿರುವ ಕಾವಲು ಗೋಪುರಗಳಿಂದ ಸುಂದರವಾಗಿರುವ ಈ ಉಪ್ಪರಿಗೆ ಆಸರೆ ಆಗದಿರಲೆಂದೇ ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ.

ಇದರ ಸುತ್ತಲೂ ಬೃಹದಾಕಾರದ ಬಂಡೆಗಳ ಗುಡ್ಡ ಇರುವುದರಿಂದ ಇಲ್ಲಿನ ಬಿಸಿಲಿನ ತಾಪ ಹೆಚ್ಚು ಹಾಗಾಗಿಯೇ ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯುವುದಕ್ಕಾಗಿ ಈ ಕಟ್ಟಡ ನಿರ್ಮಿಸಿರುವುದು. ಈಗಲೂ ಇದನ್ನು ಬೇಸಿಗೆಮನೆ ಎಂದು ಕರೆಯುತ್ತಾರೆ. ಕಲ್ಲು, ಇಟ್ಟಿಗೆ ಗಾರೆಯನ್ನು ಬಳಸಿ, ಹಿಂದೂ ಮುಸ್ಲಿಂ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಉಪ್ಪರಿಗೆಯನ್ನು ಬಳಸಿ ಉತ್ತರಕ್ಕೆ ಸಾಗಿದರೆ ಕೋಟೆ ಇರುವ ದೊರೆಯ ಗುಡ್ಡಕ್ಕೆ ದಾರಿ ಇದೆ.

ಕೋಟೆ ಇರುವ ದೊರೆಯ ಬೆಟ್ಟದ ಉತ್ತರಕ್ಕೆ ದಟ್ಟವಾಗಿ ಬೆಳೆದುನಿಂತ ಕಾಡು ಗಿರಿ ಕಂದರಗಳಿವೆ. ಪೂರ್ವದಿಕ್ಕಿಗೆ ಗುಡೇಕೋಟೆಯಿಂದ ರಾಯದುರ್ಗಕ್ಕೆ ಹೋಗುವ ರಸ್ತೆ ಪಶ್ಚಿಮ ದಿಕ್ಕಿಗೆ ಬೊಮ್ಮಲಿಂಗನ ಬಹುದೊಡ್ಡಕೆರೆ, ದಕ್ಷಿಣಕ್ಕೆ ಗುಡೇಕೋಟೆ ಗ್ರಾಮಗಳಿವೆ. ಎರಡು ಗುಡ್ಡಗಳನ್ನು ಬಳಸಿಕೊಂಡು ಹೊರಕೋಟೆಯನ್ನು ಕಟ್ಟಿದ್ದು, ಇದೊಂದು ಗಿರಿದುರ್ಗವಾಗಿದೆ. ಈ ಕೋಟೆಯ ಗುಡ್ಡಗಳ ಕೆಳಗೂ ವ್ಯಾಪಿಸಿರುವ ಸಾಧ್ಯತೆಗಳಿವೆ. ಹಾಸು ಬಂಡೆಗಳೇ ಈ ಕೋಟೆಗೆ ತಳಪಾಯವಾಗಿದೆ. ದೊಡ್ಡ ದೊಡ್ಡ ಬಂಡೆಗಳ ಸಂದುಗಳು ಹಾಗೂ ಅವುಗಳ ಮೇಲೆ ಕೋಟೆಯನ್ನು ಕಟ್ಟಲಾಗಿದೆ. ಇನ್ನು ಕೆಲವಡೆ ಪ್ರಕೃತಿ ನಿರ್ಮಿತ ಬಂಡೆಗಳೇ ಆಳ್ವೇರಿಗಳಾಗಿವೆ. ಬೆಟ್ಟದ ತುದಿಯನ್ನು ತಲುಪಲು ಶತ್ರುಗಳಿಗೆ ಸಾಧ್ಯವಾಗದಂತೆ ಕೆಲವು ಮರ್ಮಗಳನ್ನು ಬಳಸಿ ಕೋಟೆಯನ್ನು ಭದ್ರಪಡಿಸಿದ್ದಾದರೂ ಇಂದು ಶಿಥಿಲ ಸ್ಥಿತಿಯಲ್ಲಿದೆ. ಕೋಟೆಯ ಗೋಡೆಯೂ ಸರಾಸರಿ ೧೦ ಅಡಿ ಎತ್ತರವಾಗಿದ್ದರೂ, ಕೆಲವು ಕಡೆ ಹೆಚ್ಚು ಕಡಿಮೆ ಇದೆ. ಇದರ ಅಗಲ ಸುಮಾರು ೨ ರಿಂದ ೩ ಅಡಿಗಳಾಗಿದ್ದು, ಇನ್ನು ಹಲವು ಕಡೆ ೫ ಅಡಿಯವರೆಗೂ ಅಗಲವಾಗಿದೆ. ಕೋಟೆಯ ಗೋಡೆಯ ಕೆಳಭಾಗದಲ್ಲಿ ಆಯಾತಾಕಾರದ ಕಲ್ಲುಗಳನ್ನು ಬಳಸಿದ್ದು, ಮೇಲ್ಭಾಗದಲ್ಲಿ ಮಧ್ಯಮ ಗಾತ್ರದ ಕಲ್ಲುಗಳನ್ನು ಉಪಯೋಗಿಸಿ ಮೇಲ್ತುದಿಯಲ್ಲಿ ಗಾರೆಯನ್ನು ಬಳಸಲಾಗಿದೆ.

ಈ ಕೋಟೆಯಲ್ಲಿ ಒಟ್ಟು ೧೦ ರಿಂದ ೨೫ ಕೊತ್ತಳಗಳಿದ್ದು, ಇವುಗಳನ್ನು ಆಯಾಕಟ್ಟಿನ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಶಸ್ತಾಸ್ತ್ರಗಳ ಸಹಿತ ಮೇಲೇರಲು ಅನುಕೂಲವಾಗುವಂತೆ ಚೌಕಾಕಾರದ ಮತ್ತು ವೃತ್ತಾಕಾರದಲ್ಲಿ ನಿರ್ಮಿಸಲ್ಪಟ್ಟಿವೆ. ಶತ್ರುಗಳ ಬರುವಿಕೆಯನ್ನು ಗ್ರಹಿಸಲು ಮತ್ತು ಕೋಟೆಯನ್ನು ರಕ್ಷಣೆ ಮಾಡುವ ಉದ್ದೇಶದಿಂದಾಗಿ ಕೊತ್ತಳಗಳನ್ನು ಕೋಟೆ ಗೋಡೆಗಿಂತ ತುಂಬಾ ಎತ್ತರವಾಗಿ ನಿರ್ಮಿಸಿರುವುದು ಇವುಗಳ ಸುತ್ತಲೂ ಕೋಟೆ ಗೋಡೆಗೆ ಇರುವಂತೆ ಬಂದೂಕು ಕಿಂಡಿಗಳನ್ನು ಅಳವಡಿಸಲಾಗಿದೆ. ಈ ಕೋಟೆಗೆ ಎರಡು ಪ್ರವೇಶ ದ್ವಾರಗಳಿವೆ. ಹೊರ ಕೋಟೆಯ ಪ್ರವೇಶದ್ವಾರವು, ದಕ್ಷಿಣಾಭಿಮುಖವಾಗಿದೆ. ಈ ಪ್ರವೇಶದ್ವಾರಕ್ಕೆ ಬರುವ ಪೂರ್ವದಲ್ಲಿ ಕಲ್ಲಾಸರೆಯಲ್ಲಿರುವ ಪ್ರಾಗಿತಿಹಾಸ ಕಾಲದ ರೇಖಾ ಚಿತ್ರಗಳು ಗೋಚರಿಸುತ್ತವೆ. ಒಳಗೆ ಎರಡು ವಿಶಾಲ ಪ್ರದೇಶಗಳಿವೆ. ಮೊದಲನೆಯ ಪ್ರದೇಶದಲ್ಲಿ ಆನೆ ಹೊಂಡ, ಅಥವಾ ಚಿಕ್ಕಹೊಂಡ, ಆಂಜನೇಯನ ಉಬ್ಬುಶಿಲ್ಪ, ಬಿಸಿಲು ಕಾಣದ ಬಾವಿ, ಸೈನಿಕರ ವಸತಿಗಳು, ಇತರೆ ಬಿಡಿ ಶಿಲ್ಪಗಳು ಕಂಡುಬರುತ್ತವೆ. ಇವುಗಳ ವಿವರಣೆಯನ್ನು ಮುಂದಿನ ಪುಟಗಳಲ್ಲಿ ನೀಡಲಾಗಿದೆ. ಈ ಮೊದನೆಯ ಪ್ರದೇಶದಿಂದ ಪಶ್ಚಿಮಾಭಿಮುಖವಾಗಿರುತ್ತದೆ. ಪ್ರವೇಶದ್ವಾರದಲ್ಲಿ ಒಳಹೋದರೆ ಎರಡನೆಯ ಪ್ರವೇಶ ಕಂಡುಬರುತ್ತದೆ. ಈ ಪ್ರವೇಶದ್ವಾರವು ಸುಮಾರು ಆರು ಅಡಿ ಅಗಲ ಎಂಟು ಅಡಿ ಎತ್ತರವಾಗಿದೆ. ಒಳ ಬದಿಯ ಇಕ್ಕೆಲಗಳಲ್ಲಿ ವಿಶಾಲವಾದ ಕಟ್ಟೆಗಳಿವೆ. ಇವು ನ್ಯಾಯಾದಾನದ ಕಟ್ಟೆಗಳು ಆಗಿರುವ ಸಾಧ್ಯತೆಗಳಿವೆ. ಏಕೆಂದರೆ ಇದರ ಪಕ್ಕದಲ್ಲಿಯೇ ಅರಮನೆಯೂ ಇದೆ. ಇಂದು ಅರಮನೆಯ ಪಾಳು ಅವಶೇಷಗಳು ಮಾತ್ರ ನಮಗೆ ಲಭ್ಯ. ೨ನೆಯ ಪ್ರದೇಶದಲ್ಲಿ ಓಕುಳಿ ಹೊಂಡ, ಆಂಜನೇಯನ ಗುಡಿ, ರಾಗಿ, ಕಣಜ, ತುಪ್ಪದ ಕಣಜ ಹಾಗೂ ಅರಮನೆಗಳು ಇವೆ. ಇದು ಮುಖ್ಯವಾದ ಮತ್ತು ರಕ್ಷಿತ ಪ್ರದೇಶವಾಗಿದೆ. ಈ ಕೋಟೆಯ ಮುಖ್ಯ ಪ್ರವೇಶದ್ವಾರ ಮುಚ್ಚಿದಾಗ ಹಾಗೂ ಶತ್ರುಗಳು ಕೋಟೆಯನ್ನು ಆಕ್ರಮಿಸಿದಾಗ ಕೋಟೆಯಿಂದ ತಪ್ಪಿಸಿಕೊಂಡು ಹೋಗಲು ಗುಪ್ತ ಮಾರ್ಗಗಳನ್ನು ರಚಿಸಲಾಗಿದೆ. ಇವುಗಳು ದೊಡ್ಡ ದೊಡ್ಡ ಬಂಡೆಗಳ ಸಂದುಗಳಲ್ಲಿವೆ.

ಜೀವ ಜಗತ್ತಿನ ಮೂಲಭೂತ ಅವಶ್ಯಕತೆಯಾದುದು ನೀರು. ಹಾಗಾಗಿ ಈ ಕುಡಿಯುವ ನೀರಿಗೆ ಪಾಳೆಯಗಾರರು ವಿಶೇಷ ಗಮನ ಹರಿಸಿರುವುದು ಕಂಡುಬರುತ್ತದೆ. ಬೆಟ್ಟ ಗುಡ್ಡಗಳು ಒಳಗೊಂಡಂತೆ ಕೋಟೆಯಲ್ಲೂ ಚಿಕ್ಕ ದೊಡ್ಡ ಬಂಡೆಯ ಸಂದುಗಳಿಗೆ ಅಡ್ಡಲಾಗಿ ಗೋಡೆಗಳನ್ನು ಕಟ್ಟಿ ಮಳೆಯ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಇಂತಹ ಮಳೆಯ ನೀರಿನ ಸಂಗ್ರಹದ ಬಾವಿ ಹೊಂಡಗಳನ್ನು ಈಗಲೂ ಎಲ್ಲಾ ಕೋಟೆಗಳಲ್ಲಿರುವಂತೆ ಇಲ್ಲಿಯೂ ಇವೆ. ಅವುಗಳೆಂದರೆ: ತೊಟ್ಟಿಲುಬಾವಿ, ತಣ್ಣೀರಿನ, ಉಸುಕಿನ ಮತ್ತು ಅಕ್ಕಮ್ಮನ ಹೊಂಡಗಳು.

ತೊಟ್ಟಿಲು ಬಾವಿ. ತೊಟ್ಟಿಲು ಬಾವಿಯ ಇನ್ನೊಂದು ಹೆಸರು ಬಿಸಿಲು ಬಾವಿ. ಈ ಬಾವಿಯ ಮೇಲ್ಭಾಗದಲ್ಲಿ ಸುತ್ತಲೂ ಹೆಬ್ಬಂಡೆಗಳು ಆವರಿಸಿರುವುದರಿಂದ ಸೂರ್ಯಕಿರಣಗಳು ಬಾವಿಯೊಳಗೆ ಬೀಳುವುದು ಕಷ್ಟಕರ. ಹಾಗಾಗಿಯೇ ಬಿಸಿಲು ಬೀಳದಿರುವ ಬಾವಿಯೇ ಬಿಸಿಲು ಬಾವಿಯಾಯ್ತು. ತೊಟ್ಟಿಲಿನ ಆಕಾರದಲ್ಲಿರುವುದರಿಂದ ಇದಕ್ಕೆ ತೊಟ್ಟಿಲು ಬಾವಿಯೆಂತಲೂ ಸ್ಥಳೀಯರ ವಾಡಿಕೆ. ಇದು ಸೈನಿಕರ ವಸತಿಯ ಬಳಿ ಇದ್ದು, ಬೇಸಿಗೆಯಲ್ಲೂ ಸೈನಿಕರುಗಳಿಗೆ ತಣ್ಣೀರನ್ನು ಒದಗಿಸುತ್ತಿತ್ತು. ಇದರ ಮೇಲ್ಭಾಗದಲ್ಲಿರುವ ಹೆಬ್ಬಂಡೆಯ ಆಸರೆಯಲ್ಲಿ ಪ್ರಾಗಿತಿಹಾಸ ಕಾಲದ ರೇಖಾ ಚಿತ್ರಗಳಿವೆ. ಅಂದರೆ, ಪ್ರಾಚೀನ ಮಾನವನ ವಾಸಸ್ಥಾನವೂ ಇದಾಗಿರುವುದು ಸ್ಪಷ್ಟವಾಗುತ್ತದೆ.

ಓಕುಳಿ ಹೊಂಡ ತಣ್ಣೀರಿನ ಹಾಗೂ ಉಸುಕಿನ ಹೊಂಡಗಳು ಓಕುಳಿ ಹೊಂಡಕ್ಕೆ ಹೊಂದಿಕೊಂಡಿವೆ. ಇದು ಅರಮನೆಯ ಬಳಿ ಇರುವ ಆಂಜನೇಯನ ಗುಡಿಯ ಮುಂಭಾಗದಲ್ಲಿದೆ. ಇದರ ಜೊತೆಯಲ್ಲಿರುವ ತಣ್ಣೀರಿನ ಮತ್ತು ಉಸುಕಿನ ಹೊಂಡಗಳು ಅರಮನೆಯ ನೀರಿನ ಪೂರೈಕೆಗಾಗಿ ಇದ್ದಿರಬಹುದು. ಓಕುಳಿ ಹೊಂಡವು ದೇವತಾಕಾರ್ಯಗಳಿಗಾಗಿ ಉಪಯೋಗವಾಗುತ್ತಿತ್ತು. ಇಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಮನರಂಜನಾ ಕ್ರೀಡೆಗಳು ನಡೆಯುತ್ತಿದ್ದವಂತೆ. ಓಕುಳಿ ಇಲ್ಲಿ ಆಡುವುದು ಪ್ರಮುಖವಾದ ಮನೋರಂಜನಾ ಕ್ರೀಡೆಯಾಗಿತ್ತೆಂಬುದಕ್ಕೆ ಇಂದಿಗೂ ಆ ಸಂಪ್ರದಾಯ ಉಳಿದುಬಂದಿದೆ. ಈ ಹೊಂಡಗಳು ಇಂದು ಪಾಳುಬಿದ್ದಿವೆ. ಹೊಂಡಗಳಲ್ಲಿ ನೀರು ಶಾಶ್ವತವಾಗಿರಲೆಂದು ಮತ್ತು ಅಂತರ್ಜಲದ ಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಇಲ್ಲಿನ ಪಾಳೆಯಗಾರರು ಕೋಟೆಯ ಹೊರಭಾಗದಲ್ಲಿ ಬೊಮ್ಮಲಿಂಗನ ಕೆರೆಯನ್ನು ನಿರ್ಮಾಣ ಮಾಡಿದ್ದರೆಂದು ಕಂಡುಬರುತ್ತದೆ. ಈ ಕೋಟೆಯಲ್ಲಿ ವಾಸ ಮಾಡುವವರಿಗಾಗಿ ಬೇಕಾಗುವಷ್ಟು ನೀರನ್ನು ಬಂಡೆಯ ಸಂದುಗಳಿಗೆ ಗೋಡೆಯನ್ನು ಅಡ್ಡಕಟ್ಟಿ ಅರಮನೆಯ ಆವರಣದಲ್ಲಿ ನೀರನ್ನು ಸಂಗ್ರಹಿಸುತ್ತಿದ್ದರು. ಈ ಸಂಗ್ರಹ ತಾಣಗಳು ಹೊಂಡಾಗಳಾಗಿ ಬದಲಾವಣೆಗೊಂಡಿವೆ. ಈ ಹೊಂಡಗಳಲ್ಲಿ ಅರಮನೆಯ ಹೊಂಡ ಮಾತ್ರ ಮೆಟ್ಟಿಲುಗಳಂತೆ ನಿರ್ಮಿಸಿದ್ದಾರೆ. ಇದನ್ನು ಪಾಳೆಯಗಾರರು ಜಲಕ್ರೀಡೆಗಾಗಿ ನಿರ್ಮಿಸಿರಬಹುದಾಗಿದೆ. ಪಾಳೆಯಗಾರರ ಕರ್ತವ್ಯ ಪ್ರಜ್ಞೆಯಿಂದಾಗಿಯೇ ಜನಸಾಮಾನ್ಯರಿಗಾಗಿ ನೀರಿನ ಹೊಂಡಗಳು ನಿರ್ಮಾಣವಾಗಿವೆ ಎನ್ನಬಹುದು.

ಕೋಟೆಯೊಳಗೆ ಪಾಳೆಯಗಾರರ ಕಾಲಾವಧಿಯ ಅರಮನೆ, ಸೈನಿಕರ ವಾಸದ ಮನೆಗಳು, ರಾಗಿ ಮತ್ತು ತುಪ್ಪದ ಕಣಜಗಳು, ದೇವಾಲಯಗಳನ್ನು ಕಾಣಬಹುದು. ಈ ಸ್ಮಾರಕಗಳ ವಿವರಣೆಯನ್ನು ಕೆಳಗೆ ಕೊಡಲಾಗಿದೆ.

ರಾಗಿ ಕಣಜ ರಾಗಿಯನ್ನು ಸಂಗ್ರಹಿಸಿಡುವ ಉಗ್ರಾಣವಾದ್ದರಿಂದ ಇದಕ್ಕೆ ರಾಗಿ ಕಣಜವೆಂದು ಕರೆದಿರಬಹುದು. ಇಲ್ಲಿಯ ಪರಿಸರ ರಾಗಿ ಬೆಳೆಗೆ ತುಂಬಾ ಯೋಗ್ಯವಾಗಿದೆ. ಸುಗ್ಗಿಯಲ್ಲಿ ಸಂಗ್ರಹವಾಗುವ ರಾಗಿಯನ್ನು ಈ ಕಣಜದಲ್ಲಿ ಸಂಗ್ರಹ ಮಾಡಿಟ್ಟು, ವರ್ಷವಿಡಿ ಉಪಯೋಗಿಸಲು ಪಾಳೆಯಗಾರರು ಉಗ್ರಾಣವನ್ನು ನಿರ್ಮಿಸಿದ್ದರು. ಇದು ಸುಮಾರು ೬೦ ಅಡಿ ಉದ್ದ ೨೫ ಅಡಿ ಅಗಲ ಹಾಗೂ ೧೦ ಅಡಿ ಎತ್ತರವಾಗಿದೆ. ಇದನ್ನು ಸುಟ್ಟ ಇಟ್ಟಿಗೆ ಗಾರೆಗಳಿಂದ ಕಟ್ಟಲಾಗಿದೆ. ಈ ಉಗ್ರಾಣದಲ್ಲಿ ಮೂರು ಕೋಣೆಗಳಿವೆ. ಇದರೊಳಗೆ ಹೋಗಲು ಮೇಲ್ಭಾಗದಲ್ಲಿ ಕಿಂಡಿಗಳನ್ನು ಬಿಡಲಾಗಿದೆ.

ತುಪ್ಪದ ಕಣಜ ಇಂದು ತುಪ್ಪವನ್ನು ಹಾಕಿಡುವದಕ್ಕಾಗಿ ಗಿಂಡಿಗಳನ್ನು ಹಾಗೂ ಬಾಟಲ್ ಗಳನ್ನು ಬಳಸುವುದು ನಮಗೆ ಗೊತ್ತಿದೆ. ಪಾಳೆಯಗಾರರು ತುಪ್ಪ ಹಾಕಿಡುವುದಕ್ಕಾಗಿ ಉಗ್ರಾಣವನ್ನೆ ನಿರ್ಮಿಸಿದ್ದರು. ತುಪ್ಪದ ಕಣಜವನ್ನು ಅರಮನೆಯ ಈಶಾನ್ಯ ದಿಕ್ಕಿಗೆ ಬೃಹದಾಕಾರದ ಬಂಡೆಯ ಮೇಲೆ ನಿರ್ಮಿಸಲಾಗಿದೆ. ತುಪ್ಪದ ಕೊಳಗಳು ಸಾಮಾನ್ಯವಾಗಿ ನೆಲಮಟ್ಟದಿಂದ ಕೆಳಗೆ ಇರುತ್ತವೆ. ಆದರೆ ಕಣಜವು ಬಂಡೆಯ ಮೇಲಿದೆ. ಇದು ಬಾವಿಯಂತೆ ವರ್ತುಲಾಕಾರವಾಗಿ ನಿರ್ಮಿತವಾಗಿದ್ದು, ಇದರ ಒಳಭಾಗದಲ್ಲಿ ಗಾರೆಯಿಂದ ಗಿಲಾವು ಮಾಡಲಾಗಿದೆ. ನೆಲಮಟ್ಟದಿಂದ ಬಂಡೆಗಳ ಮೇಲಕ್ಕೆ ಚೌಕಾಕಾರದ ಇಟ್ಟಿಗೆ ಗಾರೆಗಳಿಂದ ನಿರ್ಮಿತ ಗೋಡೆಗಳಿವೆ. ಇದಕ್ಕೆ ರಕ್ಷಣಾ ವ್ಯವಸ್ಥೆ ಇದ್ದು, ಇವುಗಳನ್ನು ಯುದ್ಧ ಸಮಯದಲ್ಲಿ ತುಪಾಕಿಗಳಿಗೆ, ಫಿರಂಗಿಗಳಿಗೆ, ಕೋವಿಗಳಿಗೆ ಸವರಲು ಹಾಗೂ ಗಾಯಗೊಂಡ ಸೈನಿಕರ ಶಸ್ತ್ರ ಚಿಕತ್ಸೆಯ ಸಮಯದಲ್ಲಿ ಉಪಯೋಗಿಸಲಾಗುತ್ತಿತ್ತು.

ಇಂತಹ ಕಣಜಗಳನ್ನು ಬಳ್ಳಾರಿ ಜಿಲ್ಲೆಯ ಜರಿಮಲೆ, ಉಚ್ಚಂಗಿದುರ್ಗ, ಕರಡಿದುರ್ಗ ಮತ್ತು ಕೃಷ್ಣಾನಗರದ ಪಾಳೆಯಗಾರರ ಕೋಟೆಗಳಲ್ಲಿ ಕಾಣಬಹುದು. ಕರ್ನಾಟಕದ ಇತಿಹಾಸ ಪ್ರಸಿದ್ಧ ಕೋಟೆಗಳಲ್ಲಿ ತುಪ್ಪದ ಕಣಜಗಳು ಕೋಟೆಯ ಅವಿಭಾಜ್ಯ ಅಂಗವೆನಿಸಿದ್ದವು.[24]

ಒಂದು ಪಾಳೆಯ ಪಟ್ಟಿನ ಅಳಿವು ಉಳಿವಿಗೆ ನಾಯಕನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಕೋಟೆಗಳ ಪಾತ್ರ. ಕೋಟೆಯ ಮಹತ್ವ ಹೆಚ್ಚಾಗಲು ಕೋಟೆ ಕಟ್ಟಲು ಆಯ್ಕೆ ಮಾಡಿಕೊಳ್ಳುವ ಸ್ಥಳವು ಪ್ರಮುಖವಾಗಿರುತ್ತದೆ. ಗಿರಿದುರ್ಗವನ್ನು ಕಟ್ಟುವಲ್ಲಿ ಮನುಷ್ಯನ ಪಾತ್ರಕ್ಕಿಂತ ನಿಸರ್ಗದ ಪಾತ್ರ ಹಿರಿದು. ಭೌಗೋಳಿಕವಾಗಿ ಒಂದು ಪಟ್ಟಣದ ಸುತ್ತಲೂ ಬೆಟ್ಟ ಗುಡ್ಡಗಳಿದ್ದರೆ ಗಿರಿದುರ್ಗಕ್ಕೆ ಪ್ರಶಸ್ಥವಾದ ಸ್ಥಳವೆಂದು ಹೇಳಬಹುದು. ಈ ಮೇಲಿನ ಎಲ್ಲಾ ಅನುಕೂಲಗಳು ಗುಡೇಕೋಟೆ ದುರ್ಗಕ್ಕೆ ಲಭ್ಯವಿದೆ. ಈ ಪ್ರದೇಶದಲ್ಲಿ ಕಂಡುಬರುವ ನಾಲ್ಕು ಬೆಟ್ಟಗಳಲ್ಲಿ ಈಗ ಕೋಟೆ ನಿರ್ಮಿಸಿರುವ ದೊರೆಗಳ ಬೆಟ್ಟ ಬಹು ಎತ್ತರವಾಗಿದ್ದು, ಶತ್ರುಗಳು ಸುಲಭವಾಗಿ ಮೇಲೇರಿ ಬರದಂತೆ ಕಡಿದಾಗಿದೆ. ಉಳಿದ ಬೆಟ್ಟಗಳಿಗಿಂತ ಇಲ್ಲಿ ನೀರಿನ ಸೌಲಭ್ಯ ಚೆನ್ನಾಗಿದೆ. ಈ ಕಾರಣವಾಗಿಯೇ ಇಲ್ಲಿ ಕೋಟೆ ನಿರ್ಮಿಸಲಾಗಿದೆ. ಕೋಟೆಯನ್ನು ಕಟ್ಟಲು ಉಪಯೋಗವಾಗುವಂತಹ ಬೃಹದಾಕಾರದ ಕಲ್ಲು ಬಂಡೆಗಳು ಇಲ್ಲಿ ದೊರೆಯುತ್ತವೆ. ಹಾಗಾಗಿಯೇ ಪ್ರಸಿದ್ಧ ಭೂವಿಜ್ಞಾನಿ ಬ್ರೂಸ್ ಪ್ಲೂಟನು ದಕ್ಷಿಣ ಭಾರತದಲ್ಲಿಯೇ ಇನ್ನೆಲ್ಲಿಯೂ ಇಷ್ಟು ಬೃಹತ್ ಗಾತ್ರದ ಕಲ್ಲುಗಳನ್ನೊಟ್ಟಿ ಕಟ್ಟಿದ ಕಟ್ಟಡ ಇಲ್ಲ ಎಂದು ಉದ್ಗಾರ ತೆಗೆದಿದ್ದಾನೆ.[25]

ಗುಡೇಕೋಟೆಯ ಪೂರ್ವಕ್ಕೆ ರಾಯದುರ್ಗದವರು, ಪಶ್ಚಿಮಕ್ಕೆ ಹರಪನಹಳ್ಳಿಯವರು, ಉತ್ತರಕ್ಕೆ ಹೈದರಾಲಿ ಮತ್ತು ಟಿಪ್ಪು, ದಕ್ಷಿಣಕ್ಕೆ ಚಿತ್ರದುರ್ಗದ ನಾಯಕರು ಹೀಗೆ ಸುತ್ತಲೂ ನಾಲ್ಕೂ ಪಾಳೆಯಗಾರರಿಗೆ ಗಡಿ ಪ್ರದೇಶವೆಂದರೆ ಗುಡೇಕೋಟೆ. ಇನ್ನೊಂದು ರಾಜ್ಯದ ಮೇಲೆ ದಂಡೆತ್ತಿ ಹೋಗಬೇಕೆಂದರೆ ಗುಡೇಕೋಟೆಯನ್ನು ಹಾದುಕೊಂಡು ಹೋಗಬೇಕು. ಹೈದರಾಲಿಯಂತೂ ಎರಡು ಬಾರಿ ದಾಳಿ ಮಾಡಿದನು. ಪ್ರತಿ ಬಾರಿಯು ೨೦೦೦ ಕಲ್ದಾಳ, ೨೦೦ ಅಶ್ವದಳ ಇತ್ಯಾದಿಯಾಗಿ ತೆಗೆದುಕೊಂಡು ಬರುತ್ತಿದ್ದನೆಂದು ಹೇಳಲಾಗಿದೆ.[26] ಹೈದರಾಲಿಯು ಹರಪನಹಳ್ಳಿಗೆ ಮುತ್ತಿಗೆ ಹಾಕಿದಾಗ ಹರಪನಹಳ್ಳಿಯು ಸಂಪೂರ್ಣ ನಾಶವಾಯಿತು. ಟಿಪ್ಪುವು ಕ್ರಿ.ಶ. ೧೭೯೯ ರ ಒಳಗೆ ಇಲ್ಲಿ ದಾಳಿ ಮಾಡಿದ. ಚಿತ್ರದುರ್ಗ ಹಾಗೂ ಹರಪನಹಳ್ಳಿ ನಾಯಕರುಗಳು ಪದೇ ಪದೇ ದಾಳಿ ಮಾಡುತ್ತಿದ್ದರು. ಹರಪನಹಳ್ಳಿಯಂತಹ ದೊಡ್ಡ ಪಾಳೆಯಪಟ್ಟು ಹೈದರಾಲಿಯು ದಾಳಿಗೆ ಸಂಪೂರ್ಣ ನಾಶವಾದರೂ ಗುಡೇಕೋಟೆ ಪಾಳೆಯಪಟ್ಟು ಈ ಮೇಲಿನ ಎಲ್ಲರ ದಾಳಿಯನ್ನು ಎದುರಿಸಿ ತನ್ನ ಜೀವಂತಿಕೆಯನ್ನು ಇರಿಸಿಕೊಳ್ಳಲು ಕಾರಣ ಗುಡೇಕೋಟೆಯ ಗಿರಿದುರ್ಗವೇ ಆಗಿದೆ.

ಜರಿಮಲೆ

ಜರಿಮಲೆ ಗ್ರಾಮವು ಕೂಡ್ಲಿಗಿ ತಾಲ್ಲೂಕಿನಲ್ಲಿದ್ದು, ಇದು ತಾಲ್ಲೂಕು ಕೇಂದ್ರದಿಂದ ನೈರುತ್ಯಕ್ಕೆ ೧೫ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಪೂರ್ವದಿಕ್ಕಿಗೆ ಕೋಟೆಯನ್ನು ಒಳಗೊಂಡ ಬೆಟ್ಟವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ೨೭೫೦ ಅಡಿ ಎತ್ತರವಿದ್ದು, ಸುತ್ತಲಿನ ಪ್ರದೇಶಕ್ಕಿಂತ ೩೦೦ ಅಡಿ ಎತ್ತರವಿದೆ. ಬೆಟ್ಟದ ಸುತ್ತಲೂ ಹಾಗೂ ಬೆಟ್ಟದ ಮೇಲಿರುವ ಕೋಟೆಯು ಶಿಥಿಲವಾಗಿದ್ದು, ಅದರ ಅಳಿದುಳಿದ ಭಾಗಗಳ ಸಹಾಯದಿಂದ ಕೋಟೆಯ ಲಕ್ಷಣ ಹಾಗೂ ಮಹತ್ವವನ್ನು ಕೆಳಗೆ ಚರ್ಚಿಸಲಾಗಿದೆ. ಈ ಚರ್ಚೆಗೆ ಪರಿಕರಗಳೆಂದರೆ ಸ್ಥಳೀಯರ ಹೇಳಿಕೆಗಳು, ಕೈಫಿಯತ್ತುಗಳು,[27] ಜರಿಮಲೆ ಪಾಳೆಯಗಾರರ ವಂಶಾವಳಿಗಳು,[28] ಮೆಕಂಜಿ ಹಸ್ತಪ್ರತಿ,[29] ಲೇಖನಗಳು,[30] ಥಾಮಸ್ ಮನ್ರೋನ ವರದಿಗಳು[31] ಮುಖ್ಯವಾಗಿವೆ. ದುರಾದೃಷ್ಟವೆಂದರೆ ಜರಿಮಲೆ ಪಾಳೆಯಗಾರರ ಶಾಸನಗಳಾವುವು ಲಭ್ಯವಾಗದಿರುವುದು.

ಪ್ರಾಗಿತಿಹಾಸಕಾಲ ಮಾನವನ ನೆಲೆಯಾಗಿದ್ದ ಜರಿಮಲೆಯ ಪ್ರಸಿದ್ಧಿಗೆ ಬಂದದ್ದು, ಪಾಳೆಯಗಾರರಿಂದ. ಆಂಧ್ರದ ಕದ್ರಿಯ[32] ಮೂಲದವರಾದ ಇವರು ಕಾರಣಾಂತರಗಳಿಂದ ವಿಜಯನಗರಕ್ಕೆ ಬಂದು ನೆಲೆಸಿದ್ದರು. ವಿಜಯನಗರದ ಅರಸರ ಸೇವೆಯನ್ನು ಮಾಡಿಕೊಂಡಿದ್ದ ಇವರಲ್ಲಿ ಮೊದಲಿಗ ಪಾಪಣ್ಣ ನಾಯಕ.[33] ಇವನು ವೀರನರಸಿಂಹನ ಕ್ರಿ.ಶ. ೧೪೧೯-೧೫೦೫ ಸೇವಕರಲ್ಲಿ ಒಬ್ಬನಾಗಿ ಸೇವೆ ಸಲ್ಲಿಸುತ್ತಿದ್ದನು. ವೀರನರಸಿಂಹನ ಪ್ರೀತಿಗೆ ಪಾತ್ರನಾಗಿದ್ದರಿಂದ ಪಾಪಣ್ಣನಿಗೆ ವಡ್ಡು ದರೋಜಿ ಗ್ರಾಮಗಳು ಬಳುವಳಿಯಾಗಿ ಬಂದವು.[34] ಮುಂದೆ ಈ ಬಳುವಳಿ ಗ್ರಾಮಕ್ಕೆ ಒಡೆಯನಾಗಿ ಆಳ್ವಿಕೆ ಮಾಡಿದವನು ಪಾಪಣ್ಣನಾಯಕನ ಮಗ ಪೆನ್ನಪ್ಪ ನಾಯಕನಿಗೆ ಉಡುಗೊರೆಯಾಗಿ ಕೊಟ್ಟನೆಂದು ತಿಳಿದುಬರುತ್ತದೆ.[35] ಹೀಗೆ ಬಲಿಷ್ಠನಾದ ಪೆನ್ನಪ್ಪನು ಉಜ್ಜನಿಯಲ್ಲಿ ಕೋಟೆ ಕಟ್ಟಿಸಿದನೆಂದು ಹೇಳಿದ್ದರು. ಈಗ ಅಲ್ಲಿ ಕೋಟೆಯ ಯಾವ ಅವಶೇಷಗಳು ಕಂಡುಬರುವುದಿಲ್ಲ.

ವಿಜಯನಗರದ ಅಚ್ಯುತರಾಯನು ಜರಿಮಲೆ ನಾಯಕರಿಗೆ ೧೫, ೩೩ ಮಹಮದ್ ಷಾಯಿ ಪಗೋಡ ಆದಾಯವಿರುವ ನಾಲ್ಕು ಮಾರ್ಗಗಳನ್ನು ಹಾಗೂ ೫೦೦ ಅಶ್ವದಳ ೩೦೦೦ ಕಾಲಾಳು ಪಡೆ ಇಟ್ಟುಕೊಳ್ಳಲು ಅನುಮತಿ ನೀಡಿದನು.[36] ಈ ಅನುಮತಿಯನ್ನು ಯುದ್ಧ ಕಾಲದಲ್ಲಿ ವಿಜಯನಗರದ ಅರಸರಿಗೆ ಸಹಾಯ ಮಾಡಲಿಕ್ಕಾಗಿ ಸದಾ ಸೈನ್ಯವನ್ನು ಸಿದ್ಧವಾಗಿಡಬೇಕೆಂಬ ಷರತ್ತಿನ ಮೇಲೆ ನೀಡಲಾಗಿತ್ತು. ಈ ಪದ್ಧತಿ ವಿಜಯನಗರ ನಾಯಕರ ಆಳ್ವಿಕೆ ಮಾಡುತ್ತಿದ್ದನು. ನಂತರ ಅಧಿಕಾರಕ್ಕೆ ಬಂದವನು ಇಮ್ಮಡಿನಾಯಕ ಭೂಮಿರಾಜನ ತಮ್ಮನ ಮಗ. ಆಗ ಉಜ್ಜನಿಯನ್ನು ಹರಪನಹಳ್ಳಿ ಪಾಳೆಯಗಾರರು ಹಿಡಿದುಕೊಂಡರೆಂದು ತಿಳಿದುಬರುತ್ತದೆ.[37] ಇದಕ್ಕೆ ಪೂರಕವೆಂಬಂತೆ ಹರಪನಹಳ್ಳಿ ಪಾಳೆಯಗಾರರು ವಿಜಯದ ಸಂಕೇತವಾಗಿ ಮರಳುಸಿದ್ದೇಶ್ವರ ದೇವಾಲಯಕ್ಕೆ ಗಂಟೆಯನ್ನು ಸಮರ್ಪಿಸಿದಂತೆ ಅಲ್ಲಿಯ ಶಾಸನವು ತಿಳಿಸುತ್ತದೆ.[38] ಇದರಿಂದ ವಿಜಯನಗರ ಅರಸರಿಂದ ಬಂದ ಎಲ್ಲಾ ಬಳುವಳಿಗಳನ್ನು ಹಂತಹಂತವಾಗಿ ಕಳೆದುಕೊಂಡು ಇಮ್ಮಡಿನಾಯಕನು ನೆಲೆ ಇಲ್ಲದೆ ಅಲೆದಾಡುವಂತಾಯಿತು. ತನ್ನ ಸುರಕ್ಷತೆಗೋಸ್ಕರ ಭದ್ರವಾದ ಸ್ಥಳವನ್ನು ಹುಡುಕತೊಡಗಿದನು. ಆಗ ಇವನು ಈಗಿನ ಜರಿಮಲೆ ಎಂಬ ಸ್ಥಳಕ್ಕೆ ಬಂದು ಚಿತ್ರದುರ್ಗ ನಾಯಕರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಸ್ನೇಹ ಸಂಪಾದಿಸಿ ಇಲ್ಲಿಯೇ ಕೋಟೆ ಕಟ್ಟಿಸಿ ರಾಜ್ಯವಾಳಿದನೆಂದು ತಿಳಿದುಬರುತ್ತದೆ.[39] ಮುಂದೆ ಈ ಜರಿಮಲೆ ಸಂಸ್ಥಾನವನ್ನು ಕಿರಿ ಇಮ್ಮಡಿನಾಯಕ, ಬೊಮ್ಮಣ್ಣನಾಯಕ, ಇಮ್ಮಡಿನಾಯಕ, ಈತನ ಮಕ್ಕಳಾದ ಬೊಮ್ಮಣ್ಣನಾಯಕ ಮತ್ತು ಮಲ್ಲಿಕಾರ್ಜುನ ನಾಯಕರು ಆಳಿದರೆಂದು ಜರಿಮಲೆ ವಂಶಾವಳಿಯಿಂದ ತಿಳಿದುಬರುತ್ತದೆ.[40] ಜರಿಮಲೆಯವರು ಕಾರಣಾಂತರದಿಂದ ಚಿತ್ರದುರ್ಗದವರ ವಿರುದ್ಧ ಹೈದರಾಲಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಆದರೆ ಹೈದರಾಲಿಯ ಮಗ ಟಿಪ್ಪು ಪಾಳೆಯಗಾರರ ಕಡು ವಿರೋಧಿಯಾಗಿದ್ದನು. ಹಾಗಾಗಿ ಕ್ರಿ.ಶ. ೧೭೮೨ರಲ್ಲಿ ಜರಿಮಲೆಯನ್ನು ಟಿಪ್ಪು ವಶಪಡಿಸಿಕೊಂಡು,[41] ಜರಿಮಲೆ ನಾಯಕರನ್ನು ಸೆರೆಹಿಡಿದು, ಅವರಿಗೆ ಇಸ್ಲಾಂ ಮತಕ್ಕೆ ಪರಿವರ್ತನೆಯಾಗುವಂತೆ ಬಲವಂತ ಮಾಡಿದ್ದರಿಂದ ಜರಿಮಲೆಯವರು ಉಪಾಯದಿಂದ ಟಿಪ್ಪುವಿನ ಸೆರೆಯಿಂದ ತಪ್ಪಿಸಿಕೊಂಡು ಸುರಪುರಕ್ಕೆ ಪಲಾಯನ ಮಾಡಿದರೆಂದು ತಿಳಿದು ಬರುತ್ತದೆ.[42] ನಾಲ್ಕನೆ ಆಂಗ್ಲೋ ಮೈಸೂರು ಯುದ್ಧದ ನಂತರ ಬ್ರಿಟಿಷರು ಮತ್ತು ನಿಜಾಮನಿಗೆ ಆದ ಒಪ್ಪಂದದಂತೆ ಜರಿಮಲೆ ಹೈದ್ರಾಬಾದ್ ನಿಜಾಮನಿಗೆ ಸೇರಿತು. ಜರಿಮಲೆಯವರು ಒಪ್ಪಂದದ ಮೇರೆಗೆ ಪುನಃ ಹೈದ್ರಾಬಾದ್ ನಿಜಾಮನಿಂದ ಪಡೆದರೆಂದು ಕಾಣುತ್ತದೆ. ಒಟ್ಟಿನಲ್ಲಿ ಸುಮಾರು ಕ್ರಿ.ಶ. ೧೫೦೦ ರಿಂದ ೧೮೦೦ರ ವರೆಗೆ ಈ ಪಾಳೆಯಗಾರರು ಅಸ್ತಿತ್ವದಲ್ಲಿದ್ದರೆಂದು ಈ ಮೇಲಿನ ಚರ್ಚೆಯಿಂದ ತಿಳಿಯುತ್ತದೆ.

ಬೆಟ್ಟವನ್ನು ಬಳಸಿಕೊಂಡು ಕಟ್ಟಿರುವ ಈ ಕೋಟೆಯ ಗಿರಿದುರ್ಗಗಳ ಸಾಲಿಗೆ ಸೇರುತ್ತದೆ. ಹಾಸುಬಂಡೆಗಳೇ ಕೋಟೆಗೆ ತಳಪಾಯವಾಗಿವೆ. ದೊಡ್ಡ ದೊಡ್ಡ ಬಂಡೆಗಳ ಸಂದುಗಳನ್ನು ನುಸರಿಸಿ ಹಾಗೂ ಅವುಗಳ ಮೇಲೆ ಕೋಟೆಯನ್ನು ಕಟ್ಟಲಾಗಿದೆ. ಇನ್ನು ಕೆಲವೆಡೆ ಪ್ರಕೃತಿ ನಿರ್ಮಿತ ಬಂಡೆಗಳೇ ಕೋಟೆ ಗೋಡೆಯಾಗಿದೆ. ಬೆಟ್ಟದ ತುದಿಯನ್ನು ತಲುಪಲು ಶತ್ರುಗಳಿಗೆ ಸಾಧ್ಯವಾಗದಂತೆ ಕೋಟೆಯ ಪ್ರವೇಶದ್ವಾರಗಳನ್ನು ನಿರ್ಮಿಸಲಾಗಿದೆ. ಕೋಟೆ ಗೋಡೆಯ ಸರಾಸರಿ ೧೦ ಅಡಿ ಎತ್ತರವಾಗಿದ್ದರೂ ಕೆಲವು ಕಡೆ ಹೆಚ್ಚು ಕಡಿಮೆ ಇದೆ. ಇದರ ಅಗಲ ಸುಮಾರು ೨ ರಿಂದ ೩ ಅಡಿಗಳಾಗಿದ್ದು, ಹಲವಡೆ ತಾರತಮ್ಯವಿದೆ. ಕೋಟೆ ಗೋಡೆಯ ಕೆಳಭಾಗದಲ್ಲಿ ಆಯಾತಾಕಾರದ ಕಲ್ಲುಗಳನ್ನು ಬಳಸಿದ್ದು, ಮೇಲ್ಭಾಗದಲ್ಲಿ ಮಧ್ಯಮಗಾತ್ರದ ಕಲ್ಲುಗಳನ್ನು ಉಪಯೋಗಿಸಿ ಮೇಲ್ತುದಿಯಲ್ಲಿ ಗಾರೀ ಲೇಪನ ಮಾಡಲಾಗಿದೆ. ಈ ಕೋಟೆಯಲ್ಲಿ ಒಟ್ಟು ೩೦ ಕೊತ್ತಳಗಳಿದ್ದು, ಇವುಗಳನ್ನು ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಶಸ್ತಾಸ್ತ್ರಗಳ ಸಹಿತ ಮೇಲೇರಲು ಅನುಕೂಲವಾಗುವಂತೆ ಚೌಕಾಕಾರದ ಮತ್ತು ವೃತ್ತಾಕಾರದಲ್ಲಿ ನಿರ್ಮಿಸಲ್ಪಟ್ಟಿವೆ. ಶತ್ರುಗಳ ಬರುವಿಕೆಯನ್ನು ಗ್ರಹಿಸಲು ಮತ್ತು ಕೋಟೆಯನ್ನು ರಕ್ಷಣೆ ಮಾಡುವ ಉದ್ದೇಶದಿಂದಾಗಿ ಕೋಟೆ ಗೋಡೆಗಿಂತ ಎತ್ತರವಾಗಿ ನಿರ್ಮಿಸಿರುವ ಈ ಕೊತ್ತಳಗಳ ಸುತ್ತಲೂ ಕೋಟೆ ಗೋಡೆಗೆ ಇರುವಂತೆಯೇ ಬಂದೂಕು ಕಿಂಡಿಗಳನ್ನು ಅಳವಡಿಸಲಾಗಿದೆ.

ಈ ಕೋಟೆಯ ಹಲವು ಸುತ್ತುಗಳನ್ನು ಹೊಂದಿತ್ತಾದರೂ ಈಗ ಅಳಿದುಳಿದ ಒಂದೇ ಸುತ್ತ ಗೋಚರಿಸುತ್ತದೆ. ಕೋಟೆಗೆ ಮೂರು ಪ್ರವೇಶ ದ್ವಾರಗಳಿವೆ. ಹೊರಕೋಟೆಯ ಪ್ರವೇಶ ದ್ವಾರವು ಕೋಟೆಯ ಪಶ್ಚಿಮದಿಕ್ಕಿನ ಗೋಡೆಯಲ್ಲಿದೆ. ಬಾಗಿಲುವಾಡಗಳು ನಾಶವಾಗಿವೆ. ಈ ಪ್ರವೇಶ ದ್ವಾರಕ್ಕೆ ಬರುವ ಮೊದಲು ಬಸವೇಶ್ವರ ದೇವಾಲಯ ಸಿಗುವುದು. ಇಲ್ಲಿಂದ ಪ್ರವೇಶದ್ವಾರದ ಮೂಲಕ ಒಳಸಾಗಿದಾಗ ಸಿಗುವುದೇ ಅರಮನೆ. ಈಗ ಅರಮನೆಯ ತಳಪಾಯ, ಗೋಡೆಗಳು ಮಾತ್ರ ಉಳಿದುಕೊಂಡಿವೆ. ಇಲ್ಲಿಂದ ಈಶಾನ್ಯಕ್ಕೆ ಸ್ವಲ್ಪ ದೂರದಲ್ಲಿ ಬೃಹದಾಕಾರದ ಬಂಡೆಯಿದೆ. ಇದರಲ್ಲಿ ಸುಮಾರು ೬ ಅಡಿ ಎತ್ತರದ ಆಂಜನೇಯ ಶಿಲ್ಪವನ್ನು ಕಡೆಯಲಾಗಿದೆ. ಇಲ್ಲಿಯೇ ನೀರಿನ ಹೊಂಡ, ಬಾವಿಗಳು ಹಾಗೂ ಗರಡಿಮನೆಗಳಿವೆ. ಇವುಗಳನ್ನು ದಾಟಿಕೊಂದು ಪಶ್ಚಿಮದಿಕ್ಕಿನಿಂದ ಈಶಾನ್ಯದೆಡೆಗೆ ಪ್ರವೇಶಿಸಲು ಬಾಗಿಲನ್ನು ಜೋಡಿಸಲಾಗಿದೆ. ಈ ಬಾಗಿಲು ಜರಿಮಲೆ ಗ್ರಾಮದಿಂದ ಕೋಟೆಗೆ ನೇರ ಪ್ರವೇಶವನ್ನು ಕೊಡುತ್ತದೆ. ಈ ಬಾಗಿಲಿಗೆ ಕಂಚಿನ ಕದಗಳನ್ನು ಜೋಡಿಸಿದ್ದರು, ಇವುಗಳನ್ನು ಮುಚ್ಚಿದಾಗ ಇದರ ಸದ್ದು ಚಿತ್ರದುರ್ಗಕ್ಕೆ ಕೇಳಿಸುತ್ತಿತ್ತೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಈ ಬಾಗಿಲು ಸುಮಾರು ೨೦ ಅಡಿ ಎತ್ತರ, ೧೦ ಅಡಿ ಅಗಲವಿದೆ. ಒಳ ಹಿಂಬದಿ ಭಾಗಕ್ಕೆ ಇಕ್ಕೆಲಗಳಲ್ಲಿ ಮಂಟಪಗಳಿವೆ. ಲಲಾಟ ಬಿಂಬದಲ್ಲಿ ಗಣೇಶನ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ. ಬಾಗಿಲು ತೊಳುಗಳ ಮೇಲ್ತುದಿಗಳಲ್ಲಿ ಇಳಿಬಿದ್ದ ಪದ್ಮದ ಮೊಗ್ಗುಗಳಿವೆ. ಈ ಬಾಗಿಲನ್ನು ಮುಚ್ಚಿದಾಗ ಉಪಯೋಗಿಸಲು ಬಲಭಾಗದಲ್ಲಿ ಚಿಕ್ಕ ಉಪ ಬಾಗಿಲನ್ನು ಜೋಡಿಸಲಾಗಿದೆ.

ಈ ಬಾಗಿಲ ಮೂಲಕ ಒಳ ಪ್ರವೇಶಿಸಿದಾಗ ಕಾಣುವುದೇ ಆನೆಹೊಂಡ. ಪಾಳೆಯಗಾರರು ಇಲ್ಲಿ ಆನೆಗಳ ಸ್ನಾನ ಮಾಡಿಸುತ್ತಿದ್ದರೆಂದು ಈಗಲೂ ವಾಡಿಕೆ ಇದೆ. ಈ ಹೊಂಡದಿಂದ ಪೂರ್ವಕ್ಕೆ ರಾಗಿ ಕಣಜವಿದೆ. ಇಲ್ಲಿಂದ ಬೆಟ್ಟದ ಮೇಲೆ ಹೋಗಲು ಕಲ್ಲುಹಾಸಿನ ದಾರಿಯಿದೆ. ಈ ದಾರಿಯ ಮಧ್ಯದಲ್ಲಿ ಬಂಡೆಯ ಮೇಲೆ ಆಂಜನೇಯನ ಸುಂದರ ಉಬ್ಬುಶಿಲ್ಪವಿದೆ.

ಬೆಟ್ಟದ ತುದಿಯಲ್ಲಿ ವಾಸದ ಮನೆಗಳು, ಕಣಜಗಳು, ನೀರಿನ ಹೊಂಡಗಳು ಇವೆ. ಪ್ರಾಯಶಃ ಶತ್ರುಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಕೆಳಗಿನಂತೆಯೇ ಇಲ್ಲಿಯು ಅರಮನೆ, ಪ್ರಮುಖ ಅಧಿಕಾರಿಗಳ ವಾಸದ ಮನೆಗಳಿದ್ದಿರಬಹುದು.

ಕೋಟೆ ಇರುವ ಬೆಟ್ಟದ ಸುತ್ತಲೂ ದಟ್ಟವಾದ ಕಾಡು ಉತ್ತರ, ದಕ್ಷಿಣ, ಪಶ್ಚಿಮದಲ್ಲಿ ಆವರಿಸಿದ್ದರೆ ಪೂರ್ವದಲ್ಲಿ ಬೆಟ್ಟಗಳ ಸಾಲುಗಳಿವೆ. ಈ ಕಾರಣವಾಗಿಯೇ ಜರಿಮಲೆ ಪಾಳೆಯಗಾರರು ಕೋಟೆ ಕಟ್ಟಲು ಈ ಸ್ಥಳವನ್ನು ಆಯ್ಕೆಮಾಡಿಕೊಂಡಿರಬೇಕು. ಇವರು ಎಷ್ಟೇ ನೈಸರ್ಗಿಕ ರಕ್ಷಣೆ ಪಡೆದು ಕೋಟೆ ಕಟ್ಟಿಕೊಂಡರು ಇವರ ರಾಜಕೀಯ ಅಸ್ಥಿರತೆಯಿಂದಾಗಿ ಇವರ ಮೇಲೆ ಬಲಾಢ್ಯ ರಾಜ್ಯಗಳಾದ ನಿಜಾಮ, ಮರಾಠರು, ಮೈಸೂರು ಅರಸರು, ಚಿತ್ರದುರ್ಗದ ನಾಯಕರು, ಹರಪನಹಳ್ಳಿ ಪಾಳೆಯಗಾರರು ಪದೇ ಪದೇ ಆಕ್ರಮಣ ಮಾಡುತ್ತಿದ್ದರು. ಇವರುಗಳ ರಾಜಕೀಯ ಮಹತ್ವಾಕಾಂಕ್ಷೆಯ ನಡುವೆ ಈ ಸಣ್ಣ ರಾಜ್ಯ ಉಳಿದುಕೊಳ್ಳುವುದೇ ಕಷ್ಟ ಸಾಧ್ಯವಾಗಿತ್ತು. ಇಂತಹ ಕ್ಲಿಷ್ಟ ಸಮಯದಲ್ಲಿಯೂ ತಮ್ಮ ಅಸ್ಥಿತ್ವದ ಕುರುಹುಗಳಾಗಿ ಅರಮನೆ, ಕೋಟೆ, ಕಣಜಗಳಂತ ರಕ್ಷಣಾ ಸ್ಮಾರಕಗಳನ್ನು ಕಟ್ಟಿಕೊಂಡಿದ್ದು ಅವರ ಸಾಹಸವೇ ಸರಿ.

ಕೋಟೆಯ ನೈರುತ್ಯಭಾಗದಲ್ಲಿ ಬಾಗೀಶ್ವರ ದೇವಾಲಯವಿದೆ. ಉತ್ತರಾಭಿಮುಖವಾಗಿರುವ ಈ ದೇಗುಲದಲ್ಲಿ ಗರ್ಭಗೃಹ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪಗಳಿವೆ. ಸಭಾಮಂಟಪದಲ್ಲಿ ಮೂರು ಪ್ರವೇಶ ಬಾಗಿಲುಗಳಿವೆ. ಗರ್ಭಗೃಹದಲ್ಲಿ ಪ್ರತಿಷ್ಠಾಪನ ಶಿವಲಿಂಗವಿದ್ದು, ಕಪ್ಪುಸ್ಗಿಲೆಯಲ್ಲಿ ಕೆತ್ತಲಾಗಿದೆ. ಇದು ಎರಡೂವರೆ ಅಡಿಗಳಷ್ಟು ಎತ್ತರವಿದೆ. ಶಿವಲಿಂಗಕ್ಕೆ ನೇರವಾಗಿ ಸಭಾಮಂಟಪದಲ್ಲಿ ನಂದಿಯಿದೆ. ದೇವಾಲಯದ ಕಂಬಗಳ ದಿಂಡು ನಾಲ್ಕು ಹಂತಗಳಲ್ಲಿದೆ. ಎರಡು ಹಂತಗಳನ್ನು ಚಚ್ಚೌಕವಾಗಿ, ಮಧ್ಯದ ಭಾಗವನ್ನು ಬಹು ಮುಖಗಳಲ್ಲಿ ಹಾಗೂ ಮೇಲ್ಭಾಗದ ಬೋದಿಗೆಯನ್ನು ದಿಂಬಿನಾಕಾರದಲ್ಲಿ ಕೆತ್ತಿದ್ದಾರೆ. ಚಾಚುಪೀಠಗಳು ಮೊಗ್ಗಿನಾಕಾರದಲ್ಲಿವೆ. ಈ ದೇಗುಲ ಗರ್ಭಗೃಹದ ಮೇಲೆ ಪಾಳೆಯಗಾರ ಶೈಲಿಯ ಏಕತಲದ ಶಿಖರವಿದೆ. ಇದರಲ್ಲಿ ಕೀರ್ತಿಮುಖ, ನಂದಿ ಅಲಂಕರಣೆಗಳಿವೆ. ಜರಿಮಲೆ ಪಾಳೆಯಗಾರರು ಕ್ರಿ.ಶ. ೧೭ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿರಬಹುದೆಂದು ಇದರ ಲಕ್ಷಣಗಳಿಂದ ಹೇಳಬಹುದು.

ಕೋಟೆಯ ಪಶ್ಚಿಮಭಾಗದಲ್ಲಿರುವ ಮುರುಘಸ್ವಾಮಿ ಮಠವು ಪೂರ್ವಾಭಿಮುಖವಾಗಿದೆ. ಇದು ಜರಿಮಲೆ ಪಾಳೆಯಗಾರರ ಕಾಲದಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಸ್ವಾಮಿಗಳ ಮಠದ ಒಂದು ಶಾಖೆಯಾಗಿದ್ದಿರಬಹುದು. ವಿಶಾಲವಾದ ಗರ್ಭಗೃಹ, ಸಭಾಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಯಾವುದೇ ವಿಗ್ರಹವಿಲ್ಲ. ಗರ್ಭಗೃಹವು ಸಭಾಮಂಟಪದಷ್ಟೇ ಅಗಲವಾಗಿದ್ದು. ಶ್ರೀಗಳು ವಾಸಿಸಲು ಅನುವಾಗುವಷ್ಟು ಸ್ಥಳಾವಕಾಶವಿದೆ. ಇದರಲ್ಲಿ ನಾಲ್ಕು ಕಂಬಗಳಿದ್ದು, ಕಟಾಂಜನವಿದೆ. ಕಂಬಗಳು ಚಚ್ಚೌಕ ಹಾಗೂ ಬಹುಮುಖಗಳಲ್ಲಿವೆ. ಇವುಗಳ ಮೇಲೆ ದಿಂಬಿನಾಕಾರದ ಬೋದಿಗೆ ಹಾಗೂ ಮೊಗ್ಗಿನಂತಿರುವ ಚಾಚು ಪೀಠಗಳಿವೆ. ಉಳಿದ ಕಂಬಗಳು ಗೋಡೆಯಲ್ಲಿ ಸೇರಿವೆ. ದೇವಾಲಯಗಳನ್ನು ಕಣಶಿಲೆ ಮತ್ತು ಗಾರೆಯನ್ನು ಬಳಸಿ ಕಟ್ಟಲಾಗಿದ್ದು, ಇದು ಜರಿಮಲೆ ಪಾಳೆಯಗಾರರು ನಿರ್ಮಿತಿಯೇ ಆಗಿದೆ.

[1] ಕುಂಬಾಸ. ೧೯೯೦. ಬಳ್ಳಾರಿ ಜಿಲ್ಲಾ ದರ್ಶನ, ಪು ೪೭. ಕುಂಚೂರು ಮಾಲತೇಶ ಪ್ರಕಾಶನ

[2] ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೯. ಪು. ೨೪೩. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧, ಹಂಪಿ ಕನ್ನಡ ವಿಶ್ವವಿದ್ಯಾಲಯ

[3] ತಿಪ್ಪೇಸ್ವಾಮಿ, ಹೆಚ್. ೨೦೦೧. ಕೂಡ್ಲಿಗಿ ತಾಲೂಕಿನಲ್ಲಿ ಪ್ರಗೈತಿಹಾಸಿಕ ನೆಲೆಗಳು, ಇತಿಹಾಸದರ್ಶನ ೧೬ ಪು. ೨

[4] ಅದೇ, ಪು. ೨

[5] ಅದೇ, ಪು. ೧

[6] ಅದೇ, ಪು. ೨

[7] ತಿಪ್ಪೇಸ್ವಾಮಿ, ಹೆಚ್. ೧೯೯೮. ಕೂಡ್ಲಿಗಿ ತಾಲೂಕಿನ ಅಪರೂಪದ ಮಾನವಾಕೃತಿಗಳು, ಇತಿಹಾಸದರ್ಶನ ೧೨ ಪು. ೧೯

[8] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧, ಪೂರ್ವೋಕ್ತ. ಪು. ೨೩೪

[9] ಅದೇ, ಪು. ೨೨೭

[10] ಕಲಬುರ್ಗಿ, ಎಂ. ಎಂ. ಸಂ., ೧೯೯೩. ಕರ್ನಾಟಕದ ಕೈಫಿಯತ್ತುಗಳು, ಪು. ೪೦೫ ೪೫೦. ಹಂಪಿ ಕನ್ನಡ ವಿಶ್ವವಿದ್ಯಾಲಯ.

[11] Maclean, C.D. (Ed.), 1987 Manual of Administration presidency Vol-1, p. 212. New Delhi Arian Education Services

[12] ಚನ್ನಬಸಪ್ಪ ಎಸ್. ಪಾಟೀಲ. ೧೯೯೭. ಬಳ್ಳಾರಿ ಜಿಲ್ಲೆಯ ಶಾಸನಗಳು ಭಾಗ ೨, ಪು. ೧೬೪. ಮೈಸೂರು ಪ್ರಾಚ್ಯವಸ್ತು ಮತ್ತು ಸಂಗ್ರಾಹಾಲಯಗಳು ನಿರ್ದೇಶನಾಲಯ

[13] ಕಲಬುರ್ಗಿ, ಎಂ.ಎಂ. ಸಂ., ೧೯೯೪. ಕರ್ನಾಟಕದ ಕೈಫಿಯತ್ತುಗಳು, ಪು. ೪೦೬. ಹಂಪಿ ಕನ್ನಡ ವಿಶ್ವವಿದ್ಯಾಲಯ

[14] ಬಸವರಾಜ, ಎಚ್. ಎಂ. ೨೦೦೨. ಗುಡೇಕೋಟೆ ಒಂದು ಚಾರಿತ್ರಿಕ ಅಧ್ಯಯನ, ಅಪ್ರಕಟಿತ ಎಂ. ಫಿಲ್. ಪ್ರಬಂಧ, ಪು. ೨೨. ಹಂಪಿ. ಕನ್ನಡ ವಿಶ್ವವಿದ್ಯಾಲಯ

[15] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ.ಪು. ೪೦೮

[16] ಗುಡೇಕೋಟೆ ಒಂದು ಚಾರಿತ್ರಿಕ ಅಧ್ಯಯನ, ಪೂರ್ವೋಕ್ತ. ಪು. ೪೮

[17] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ. ಪು. ೫೪೧

[18] ಅದೇ, ಪು. ೫೬೧

[19] ಅದೇ, ಪು. ೫೧೧

[20] ಅದೇ, ಪು. ೪೦೪

[21] ಗುಡೇಕೋಟೆ ಒಂದು ಚಾರಿತ್ರಿಕ ಅಧ್ಯಯನ, ಪೂರ್ವೋಕ್ತ. ಪು. ೩೬

[22] ಅದೇ, ಪು. ೩೬

[23] ತೇಜೇಶ್ವರಮ್ಮ, ಹೆಚ್. ಸಂ., ೧೯೯೫ ಸಾಧನೆಯ ಸಿರಿ, ಪು. ೧೧ ಗದಗ ವಿಕ್ರಮ ಪ್ರಿಂಟರ್ಸ್

[24] ನಾಗರತ್ನ, ಎಸ್. ೨೦೦೧. ಪಾವಗಡದ ಪಾಳೆಯಗಾರರು, ದಕ್ಷಿಣ ಕರ್ನಾಟಕದ ಅರಸು ಮನೆತನಗಳು, ಸಂ ವಸು ಎಂ. ವಿ., ಪು.೭೩. ಹಂಪಿ ಕನ್ನಡ ವಿಶ್ವವಿದ್ಯಾಲಯ

[25] ಸೂರ್ಯನಾಥ, ಯು. ಕಾಮತ್. ಸಂ, ೧೯೮೪. ಕರ್ನಾಟಕ ರಾಜ್ಯ ಗ್ಯಾಸೆಟಿಯರ್. ಪು.೪೮೬

[26] Hayavadauna Rao, C. 1943. A History of Mysore-3.p. 250.

[27] ಕಲಬುರ್ಗಿ, ಎಂ. ಎಂ. ಸಂ., ೧೯೯೪. ಕರ್ನಾಟಕದ ಕೈಫಿಯತ್ತುಗಳು. ಹಂಪಿ ಕನ್ನಡ ವಿಶ್ವವಿದ್ಯಾಲಯ

[28] ಲಕ್ಷ್ಮಣ್ ತೆಲಗಾವಿ. ೧೯೭೬. ಜರಿಮಲೆ ಸಂಸ್ಥಾನದ ವಂಶಾವಳಿ, ಚಂದ್ರವಳ್ಳಿ, ಪು. ೩೭ ೫೦. ಚಿತ್ರದುರ್ಗ

[29] ಮೆಕಂಜಿ. Tha Vamshavallee of Jeremale Samsthan Family

[30] ಯೋಗೀಶ್ವರಪ್ಪ, ಡಿ.ಎನ್. ೨೦೦೨. ಜರಿಮಲೆ ನಾಯಕರು, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ೨, ಪು. ೩೧ ೪೭. ಬೆಂಗಳೂರು

[31] Memorandum of Paligars of the Ceded Districts Dated 1802. Murno Report.

[32] ಯೋಗೀಶ್ವರಪ್ಪ, ಡಿ.ಎನ್.೨೦೦೨. ಪೂರ್ವೋಕ್ತ. ಪು.೩೭.

[33] ಅದೇ, ಪು. ೩೧-೪೭

[34] ಅದೇ, ಪು. ೩೪

[35] ಮೆಕೆಂಜಿ. The Vamshavallee of Jeremale Samsthan Family

[36] Memorandum of Paligars of the Ceded Districts Dated 1802. Murno Report.

[37] ಪುಟ್ಟಣ್ಣ, ಎಂ.ಎಸ್.೧೯೨೩. ಚಿತ್ರದುರ್ಗದ ಪಾಳೆಯಗಾರರು, ಪು. ೩೧-೩೨. ಬೆಂಗಳೂರು.

[38] ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧, ಪು.೨೨೯. ಹಂಪಿ ಕನ್ನಡ ವಿಶ್ವವಿದ್ಯಾಲಯ

[39] ಯೋಗೀಶ್ವರಪ್ಪ ಡಿ. ಎನ್ ೨೦೦೨. ಪೂರ್ವೋಕ್ತ. ಪು. ೩೮

[40] ಅದೇ, ಪು. ೩೯

[41] ಅದೇ, ಪು. ೪೧

[42] Aruni, S.K. 1998. History and culture of Surapura Samsthana 1857-1958, A Ph.D. Thesis, Pune: University of Puna.