ದೇವಲಾಪುರ

ದೇವಲಾಪುರವು ಕೂಡ್ಲಿಗಿ ತಾಲೂಕಿನಲ್ಲಿರುವ ಒಂದು ಪಾಳು ಗ್ರಾಮ. ಇದು ಕೂಡ್ಲಿಗಿಯಿಂದ ನೈರುತ್ಯದಿಕ್ಕಿನಲ್ಲಿ ೯ ಕಿ.ಮೀ. ದೂರದಲ್ಲಿದೆ. ಕೊಟ್ಟೂರು ಮತ್ತು ಕೂಡ್ಲಿಗಿ ರಸ್ತೆಯಲ್ಲಿ ಬರುವ ಗಜಾಪುರದಿಂದ ಅಗ್ನೇಯಕ್ಕೆ ಹೋಗುವ ಬಂಡಿಜಾಡಿನಲ್ಲಿ ಸುಮಾರು ೩ ಕಿ.ಮೀ. ಗದ್ದೆಗಳ ಮಧ್ಯೆ ನಡೆದುಕೊಂಡು ಹೋಗಬೇಕು. ಅಲ್ಲಿ ಕುರುಚಲ ಗಿಡ ಮರ, ಬಳ್ಳಿಗಳು ಹಾಗೂ ಬೆಟ್ಟಗಳ ಮಧ್ಯದಲ್ಲಿ ಶಿಲಾಮಂಟಪಗಳಿವೆ. ಇವುಗಳ ಹಿಂಭಾಗಕ್ಕೆ ಇರುವುದೇ ಕೋಟೆ.

ಇಲ್ಲಿರುವ ಪಾಳು ಗ್ರಾಮವನ್ನು ಸ್ಥಳೀಕರು ಹಾಳು ಗಜಾಪುರ ಎಂದು ಕರೆಯುವುದುಂಟು. ಆದರೆ ಶಾಸನದಲ್ಲಿ ದೇವಲಾಪುರವೆಂದು ಉಲ್ಲೇಖಿಸಿದೆ.[1] ಸ್ಥಳನಾಮ ದೇವಲಾಪುರ ದೇವರಿಗೆ ಬಿಟ್ಟಪುರ ದೇವಪುರ. ದೇವಲಾಪುರ ಆಗಿರಬೇಕು ಅಥವಾ ದೇವಾಂಗದವರ ಪುರ ದೇವಾಂಗಪುರ[2] ದೇವಲಾಪುರವಾಗಿರಲೂಬಹುದು.

ಕ್ರಿ.ಶ. ೧೩೩೬ರಲ್ಲಿ ಸ್ಥಾಪನೆಗೊಂಡ ವಿಜಯನಗರ ಸಾಮ್ರಾಜ್ಯವು ತನ್ನ ಪರಕಾಷ್ಠತೆಯನ್ನು ತಲುಪಿ ಇಳಿಮುಖಗೊಂಡು ಅವಧಿಯಲ್ಲಿ ಅನೇಕ ಸ್ವತಂತ್ರ ನಾಯಕರುಗಳು ತಲೆ ಎತ್ತಿದ್ದರು. ಅಂತವರಲ್ಲಿ ಜರಿಮಲೆ, ಗುಡೇಕೋಟೆ, ಚಿತ್ರದುರ್ಗ ಮತ್ತು ಹರಪನಹಳ್ಳಿಯವರು ಪ್ರಮುಖರು. ಹರಪನಹಳ್ಳಿ ಪಾಳೆಯಗಾರರು ತಮ್ಮ ವಿಶಾಲ ರಾಜ್ಯದ ರಕ್ಷಣೆಗಾಗಿ ಹಲವಡೆ ಸೈನಿಕ ನೆಲೆಗಳನ್ನು ಸ್ಥಾಪಿಸಿದರು. ಅವುಗಳೆಂದರೆ ವೀರನದುರ್ಗ, ಕರಡಿದುರ್ಗ, ಬಂಡ್ರಿ, ಚಿಕ್ಕಹಳ್ಳಿ, ಚಿಗಟೇರಿ ಮುಂತಾದವು. ಅವುಗಳಲ್ಲಿ ಈ ದೇವಾಲಾಪುರವು ಒಂದಾಗಿರಬಹುದು. ಏಕೆಂದರೆ ಇದು ಹರಪನಹಳ್ಳಿ ರಾಜ್ಯದ ವ್ಯಾಪ್ತಿಯಲ್ಲೇ ಬರುತ್ತಿತ್ತು. ವೀರನದುರ್ಗವು ಹರಪನಹಳ್ಳಿ ಪಾಳೆಯಗಾರರ ಪ್ರಮುಖ್ಯ ರಕ್ಷಣೆಯ ಗಡಿಭಾಗವಾಗಿದ್ದು ಇದರೊಳಗೆ ಈ ದೇವಲಾಪುರದ ಚಿಕ್ಕ ಕೋಟೆ ಇದೆ.

ಆಯತಾಕಾರದ ಕೋಟೆಯ ಮಧ್ಯದಲ್ಲಿ ತುಂಬಿ ಕಟ್ಟಲಾಗಿದೆ. ಈಗ ಮಧ್ಯದ ಮಣ್ಣುಗುಡ್ಡೆ ಮಾತ್ರ ಉಳಿದುಕೊಂಡಿದೆ. ಕೋಟೆ ಗೋಡೆಯು ಪಶ್ಚಿಮದಲ್ಲಿ ಸ್ವಲ್ಪಭಾಗ ಕಂಡುಬರುತ್ತದೆ. ಉಳಿದ ಮೂರು ಕಡೆ ಗೋಡೆ ನಾಶವಾಗಿರುವುದರಿಂದ ರಚನೆಯ ವಿವರಗಳು ತಿಳಿಯುವುದಿಲ್ಲ. ಉತ್ತರಗೋಡೆಯ ಮಧ್ಯದಲ್ಲಿ ತೆರದ ಬಾಗಿಲಿದೆ. ಇದರ ಎರಡು ಬದಿಗೆ ಕೊತ್ತಳಗಳಿದ್ದ ಗುರುತುಗಳಿವೆ. ಈ ಕೊತ್ತಳಗಳ ಬಳಿಯಲ್ಲಿಯೇ ವಸಂತ ಮಲ್ಲಿಕಾರ್ಜುನ ಹಾಗೂ ವೀರಭದ್ರ ದೇವಸ್ಥಾನಗಳಿವೆ. ಕೋಟೆಯನ್ನು ಮಧ್ಯಮ ಗಾತ್ರದ ಕಲ್ಲುಗಳಿಂದ ಕಟ್ಟಿದೆ.

ದೇವಲಾಪುರದ ಕೋಟೆಯ ಬಲಭಾಗಕ್ಕೆ ಮುಂಭಾಗದಲ್ಲಿರುವುದೇ ಕುರ್ಕಿ ಲಿಂಗ ವಸಂತ ಮಲ್ಲಿಕಾರ್ಜುನ ದೇವಾಲಯ. ಕ್ರಿ.ಶ. ೧೫೫[3] ಸದಾಶಿವರಾಯನ ಶಾಸನದಲ್ಲಿ. ಈ ದೇವಾಲಯವು ವಸಂತ ಮಲ್ಲಿಕಾರ್ಜುನದೆಂದು ಹೇಳಿದೆ. ಇದು ಉತ್ತರಾಭಿಮುಖವಾಗಿದ್ದು, ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹವು ಸುಮಾರು ೮ ಅಡಿ ಚೌಕಾಕಾರದಲ್ಲಿದ್ದು, ಇದರ ಮಧ್ಯದಲ್ಲಿ ಉದ್ಭವ ಲಿಂಗವಿದೆ. ಸುಮಾರು ನಾಲ್ಕೂವರೆ ಅಡಿ ಎತ್ತರವಾಗಿರುವ ಗರ್ಭಗೃಹದ ಬಾಗಿಲವಾಡವು ಹಲವಾರು ಪಟ್ಟಿಕೆಗಳಿಂದ ಕೂಡಿದೆ. ಈ ಬಾಗಿಲಿನ ಎರಡು ಬದಿಗಳಲ್ಲಿ ಶೈವ ದ್ವಾರಪಾಲಕರ ಉಬ್ಬುಗೆತ್ತನೆಗಳಿವೆ. ಅಂತರಾಳವು ಗರ್ಭಗೃಹದಷ್ಟು ವಿಸ್ತಾರವಾಗಿದ್ದು, ಸರಳವಾದ ಬಾಗಿಲವಾಡವನ್ನು ಹೊಂದಿದೆ. ಇಲ್ಲಿಯೂ ಎರಡೂ ಬದಿಗಳಲ್ಲಿ ಶೈವ ದ್ವಾರಪಾಲಕರಿದ್ದಾರೆ. ನವರಂಗದ ಮಧ್ಯದ ಅಂಕಣದ ವೇದಿಕೆ ಒಂದು ಅಡಿಯಷ್ಟು ಎತ್ತರವಾಗಿದ್ದು, ಮೇಲಿನ ಛತ್ತು ಚೌರಸಗಳಿಂದ ಕೂಡಿದೆ. ನವರಂಗಕ್ಕೆ ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಿಗೆ ಪ್ರವೇಶದ್ವಾರಗಳಿವೆ. ಇಲ್ಲಿರುವ ಕಂಬಗಳ ಕಾಂಡಭಾಗದಲ್ಲಿ ಆಯಾತಾಕಾರವಾಗಿದ್ದು, ಎರಡನೇ ಹಂತದಲ್ಲಿ ಹದಿನಾರು, ಮೂರನೇ ಹಂತದಲ್ಲಿ ಅಷ್ಟಕೋನಾಕೃತಿ ಹೊಂದಿದೆ. ಇವುಗಳಲ್ಲಿ ನಂದಿ, ಭೈರವ, ಆದಿಶಕ್ತಿ, ಗಣಪತಿ ಮತ್ತು ನೃತ್ಯ ಸ್ತ್ರೀಯರ ಉಬ್ಬುಗೆತ್ತನೆಗಳಿವೆ. ನವರಂಗದ ಹೊರಬದಿಗೆ ಎರಡು ಭಾಗದಲ್ಲಿ ಸಣ್ಣ ಗರ್ಭಗೃಹಗಳಿವೆ. ಇವುಗಳನ್ನು ಗೌರಿ ಮತ್ತು ಗಣೇಶನ ಗುಡಿಗಳೆಂದು ಕರೆಯುತ್ತಾರೆ. ವಿಶಾಲವಾದ ಮುಖಮಂಟಪವು ಹದಿನಾರು ಕಂಬಗಳನ್ನು ಒಳಗೊಂಡಿದೆ. ಇವು ನವರಂಗದಲ್ಲಿರುವ ಕಂಬಗಳ ಲಕ್ಷಣಗಳನ್ನೆ ಹೋಲುತ್ತವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಗೋಪುರವಿದೆ. ಇದನ್ನು ಕಣಶಿಲೆ ಕಲ್ಲಿನಿಂದ ಕಟ್ಟಲಾಗಿದೆ. ಈ ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಕಾರ ಗೋಡೆಯಿದೆ. ಈ ಗೋಡೆಯೇ ಹಿಂದಿನ ಕೋಟೆ ಗೋಡೆಗೆ ಹೊಂದಿಕೊಂಡಿದೆ.

ವಸಂತ ಮಲ್ಲಿಕಾರ್ಜುನ ದೇವಾಲಯದ ಪೂರ್ವಕ್ಕೆ ಉತ್ತರಾಭಿಮುಖವಾಗಿರುವ ವೀರಭದ್ರನ ದೇಗುಲವಿದೆ. ಇದು ಗರ್ಭಗೃಹ ಹಾಗೂ ಸಭಾಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿದ್ದ ವೀರಭದ್ರನ ಮೂರ್ತಿಯನ್ನು, ಗ್ರಾಮವನ್ನು ಸ್ಥಳಾಂತರಿಸುವಾಗ ಆ ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದಾರೆ. ಕೋಟೆಯೊಳಗೆ ವಸತಿ ಮನೆಗಳು ಮತ್ತು ಕಣಜಗಳ ಅವಶೇಷಗಳು ಕಂಡುಬರುತ್ತವೆ.

ಪಾಲಯ್ಯನ ಕೋಟೆ

ಪಾಲಯ್ಯನ ಕೋಟೆ ಗ್ರಾಮವು ಕೂಡ್ಲಿಗಿಯಿಂದ ದಕ್ಷಿಣಕ್ಕೆ ೧೮ ಕಿ.ಮೀ. ದೂರದಲ್ಲಿರುವುದು. ಇದನ್ನು ಅಡವಿಪೂಜಾರಳ್ಳಿ ಎಂತಲೂ ಕರೆಯುತ್ತಾರೆ. ಗ್ರಾಮದ ಉತ್ತರಕ್ಕಿರುವ ಬೆಟ್ಟದ ಮೇಲೆ ಕೋಟೆ ಇದೆ.

ಕೋಟೆ ಇರುವ ಬೆಟ್ಟವು ತುಂಬಾ ಕಡಿದಾಗಿದೆ. ಪಶ್ಚಿಮಕ್ಕೆ ದೊಡ್ಡ ಹಳ್ಳವಿದೆ. ಬೆಟ್ಟದ ಸುತ್ತಲೂ ದಟ್ಟವಾದ ಕಾಡು ಇದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಸುಮಾರು ೨ ಕಿ.ಮೀ. ದೂರದವರೆಗಿನ ದೃಶ್ಯಗಳು ಕಾಣುತ್ತವೆ. ಈ ಕಾರಣವಾಗಿಯೇ ಬೆಟ್ಟವನ್ನು ಕೋಟೆ ಕಟ್ಟಲು ಆಯ್ಕೆಮಾಡಿಕೊಂಡಿರಬೇಕು.

ಕೋಟೆಯ ಪೂರ್ವಕ್ಕೆ ಸುಮಾರು ೧೨ ಕಿ.ಮೀ. ದೂರದಲ್ಲಿ ಜರಿಮಲೆ ಪಾಳೆಯಗಾರರ ಸಂಸ್ಥಾನವಿತ್ತು. ಪಶ್ಚಿಮಕ್ಕೆ ಸುಮಾರು ೩೫ ಕಿ.ಮೀ. ಅಂತರದಲ್ಲಿ ಹರಪನಹಳ್ಳಿ ಪಾಳೆಯಗಾರರು, ಆಗ್ನೇಯಕ್ಕೆ ಸುಮಾರು ೭೦ ಕಿ.ಮೀ. ದೂರದಲ್ಲಿ ಚಿತ್ರದುರ್ಗದ ಪಾಳೆಯಗಾರರ ರಾಜ್ಯ ಹಾಗೂ ಉತ್ತರಕ್ಕೆ ೩೬ ಕಿ.ಮೀ ನಲ್ಲಿ ಮರಾಠರ ಘೋರ್ಪಡೆಯ ಸಂಸ್ಥಾನಗಳಿದ್ದವು. ಇವುಗಳ ಕೇಂದ್ರಸ್ಥಾನದಲ್ಲಿ ಪಾಲಯ್ಯನ ಕೋಟೆ ಇದೆ. ಆದರೆ ಈ ಕೋಟೆಯನ್ನು ಯಾರು ಕಟ್ಟಿಸಿದರು ಯಾವಾಗ ಕಟ್ಟಿಸಿದರು ಏಕೆ ಕಟ್ಟಿಸಿದರೆಂಬ ಮಾಹಿತಿಗಳು ಮಾತ್ರ ಅಲಭ್ಯ. ಕೋಟೆ ಮಾತ್ರ ಸುಸ್ಥಿತಿಯಲ್ಲಿದೆ.

ಗ್ರಾಮದ ಉತ್ತರ ದಿಕ್ಕಿಗೆ ೧ ಕಿ.ಮೀ. ದೂರದಲ್ಲಿ ಎರಡು ಬೆಟ್ಟಗಳಿವೆ. ಇವುಗಳಿಗೆ ದುರುಗವ್ವ ಮತ್ತು ಬಸವನ ಬೆಟ್ಟದಲ್ಲಿ ಕುದುರೆ ಹೆಜ್ಜೆಗಳನ್ನು ಕಡೆಯಲಾಗಿದೆ. ಇವು ಇಲ್ಲಿ ಆಳ್ವಿಕೆ ಮಾಡಿದ ಪಾಳೆಯಕಾರರ ಕುದುರೆಯವು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಕೋಟೆ ಇರುವುದು ದುರುಗವ್ವನ ಬೆಟ್ಟದಲ್ಲಿ.

ವಜ್ರಾಕಾರದ ಕೋಟೆಯನ್ನು ಚಿಕ್ಕಗಾತ್ರದ ಕಲ್ಲುಗಳಿಂದ ಕಟ್ಟಿದೆ. ಕಲ್ಲುಗಳ ಮಧ್ಯದಲ್ಲಿ ಸಂಧಿ ಉಂಟಾಗದಂತೆ ಮಣ್ಣನ್ನು ತುಂಬಲಾಗಿದೆ. ಸುಮಾರು ೧೫ ರಿಂದ ೨೦ ಅಡಿಗಳಷ್ಟು ಗೋಡೆಗಳು ಎತ್ತರವಾಗಿದೆ. ಕೋಟೆ ಗೋಡೆಯ ಅಗಲ ಸುಮಾರು ೩ ಅಡಿಗಳು. ಇದರ ಮೇಲಿದ್ದ ಮಣ್ಣಿನ ಕುಂಬೆಯ ಅವಶೇಷಗಳು ಕಾಣುತ್ತವೆ. ಕೋಟೆ ಗೋಡೆಯು ಸುಸ್ಥಿತಿಯಲ್ಲಿದೆ. ಗೋಡೆಯ ಮಧ್ಯಭಾಗದಲ್ಲಿ ಉದ್ದವಾದ ಬಂದೂಕು ಕಿಂಡಿಗಳಿವೆ. ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ವೃತ್ತಾಕಾರದ ಆರು ಕೊತ್ತಳಗಳಿವೆ. ಇವು ಕೋಟೆಗೋಡೆಗಿಂತ ಎತ್ತರವಾಗಿವೆ. ಕೋಟೆಯೊಳಗೆ ಇರುವ ಗೋಡೆಗೆ ಹೊಂದಿಕೊಂಡು ಬೃಹದಾಕಾರದ ಕಾವಲು ಗೋಪುರವಿದೆ. ಕೋಟೆಯ ಪಶ್ಚಿಮದ ಗೋಡೆಯಲ್ಲಿ ಬಾಗಿಲನ್ನು ಜೋಡಿಸಲಾಗಿದೆ. ಕೋಟೆಯೊಳಗೆ ೨ ಭಾಗಗಳಿದ್ದು, ಒಂದರಲ್ಲಿ ಮನೆ ಹಾಗೂ ಕಣಜಗಳ ಅವಶೇಷಗಳಿವೆ. ಇನ್ನೊಂದು ಭಾಗ ಖಾಲಿ ಇದೆ.

ಕೋಟೆಯ ಪೂರ್ವಕ್ಕೆ ಗೋಡೆಗೆ ಹೊಂದಿಕೊಂಡು ಬಾಲಿಯಿದೆ.. ಪಶ್ಚಿಮಕ್ಕೆ ಹಳೆಯ ಗ್ರಾಮದ ಕಟ್ಟಡಾವಶೇಷಗಳಿವೆ. ಇಲ್ಲಿಯೇ ಮೊದಲು ಗ್ರಾಮವಿದ್ದುದು. ಸುಮಾರು ೯೦ ವರ್ಷಗಳ ಹಿಂದೆ ಪ್ಲೇಗ್ ಹಾವಳಿಗೆ ನೂರಾರು ಜನ ಬಲಿಯಾದುದರಿಂದ ಗ್ರಾಮವನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯರು ಪ್ರತಿಕ್ರಿಯಿಸುತ್ತಾರೆ. ಇದಕ್ಕೆ ಪೂರಕವೆಂಬಂತೆ ದುರುಗಮ್ಮ ದೇವಿಗೆ ಪ್ರತಿವರ್ಷವೂ ಜಾತ್ರೆ ಹಾಗೂ ನಿತ್ಯವು ಪೂಜೆ ಪುನಸ್ಕಾರಗಳು ನಡೆಯುತ್ತವೆ.

ವೀರನದುರ್ಗ

ಕೂಡ್ಲಿಗಿಯಿಂದ ದಕ್ಷಿಣ ದಿಕ್ಕಿಗೆ ೭ ಕಿ.ಮೀ. ದೂರದಲ್ಲಿ ಈ ವೀರನದುರ್ಗವಿದೆ. ಸ್ಥಳೀಯರು ಕೋಟೆಯನ್ನು ಒಳಗೊಂಡ ಬೆಟ್ಟವನ್ನು ಬೀರಲಗುಡ್ಡವೆಂದು ಹೆಸರಿಸುತ್ತಿರುವುದು ವಾಡಿಕೆ. ಪೀರಲನಿಗೂ ಪಕೀರಸ್ವಾಮಿ ಬೀರಲಗುಡ್ಡಕ್ಕೂ ಸಂಬಂಧ ಕಲ್ಪಿಸುವುದು ಕಷ್ಟವೆನಿಸುವುದಿಲ್ಲ. ಕೆಲವರು ಪೀರಲನ ಹೆಸರಿನಿಂದ ಈ ಗುಡ್ಡಕ್ಕೆ ಬೀರಲಗುಡ್ಡವೆಂದು ಕರೆದಿರುವಂತೆ ನಂಬುತ್ತಾರೆ. ಇದಕ್ಕೆ ಕಟ್ಟಿಕೊಂಡಿರುವ ಕಥೆಗಳೇ ಆಧಾರವಾಗಿವೆ.

ಬೀರಲಗುಡ್ಡವೆಂಬುದು ವೀರನಗುಡ್ಡ ಎಂಬುದರ ಅಪಭ್ರಂಶ ರೂಪ. ವೀರನಗುಡ್ಡವು ಕೋಟೆಯನ್ನು ಒಳಗೊಂಡು ವಸತಿ ನೆಲೆಯನ್ನು ಹೊಂದಿರುವುದರಿಂದ ವೀರನದುರ್ಗವೆಂಬುದಾಗಿ ಕರೆಯಲ್ಪಟ್ಟಿದೆ. ವೀರನದುರ್ಗ ಎಂಬ ಹೆಸರು ಇಲ್ಲಿ ಆಳ್ವಿಕೆ ನಡೆಸಿದ ವೀರ ನಾಯಕ ಎಂಬುವವನಿಂದ ಬಂದಿದೆ. ಇಲ್ಲಿರುವ ಶಾಸನದಲ್ಲಿ ಅಕ್ಷರ ಸಂವತ್ಸರ… ರಾಮಯ್ಯನಾಯಕ ಎಂದಿಷ್ಟೇ ಇದೆ.[4] ಹಾಗಾದರೆ ವೀರನಾಯಕ ಯಾರು? ಹರಪನಹಳ್ಳಿ ವೀರಮುಮ್ಮಡಿ ನಾಯಕನೇ ಈ ವೀರನಾಯಕ. ಜರಿಮಲೆ ಪಾಳೆಯಗಾರರಿಂದ ಈ ಪ್ರದೇಶವನ್ನು ವಶಪಡಿಸಿಕೊಂಡು ಈತನೇ ಇಲ್ಲಿ ಕೋಟೆಯನ್ನು ನಿರ್ಮಿಸಿದನೆಂಬುದು ಸ್ಥಳೀಯ ಮೂಲಗಳಿಂದ ತಿಳಿದುಬರುವ ಅಂಶ.

ವೀರಮುಮಡಿ ನಾಯಕನೇ ಈ ವೀರನಾಯಕ ಎಂಬುದಕ್ಕೆ ಯಾವುದೇ ಶಾಸನ ಸಾಹಿತ್ಯಾಧಾರಗಳು ಲಭ್ಯವಿಲ್ಲ. ಹರಪನಹಳ್ಳಿಯನ್ನು ಆಳಿದ ಯಾವುದೇ ಪಾಳೆಯಗಾರರು ವೀರನ ದುರ್ಗವನ್ನು ಕಟ್ಟಿಸಿದ ಬಗ್ಗೆ ಎಲ್ಲೂ ಉಲ್ಲೇಖವಾಗಿಲ್ಲ. ಈ ವೀರ ಮುಮ್ಮಡಿನಾಯಕನು ಕ್ರಿ.ಶ. ೧೬೫೫ ರಿಂದ ೧೬೭೭ರ ಅವಧಿಯಲ್ಲಿ[5] ಒಮ್ಮೆ ಕೂಡ್ಲಿಗಿ ತಾಲೂಕಿನಲ್ಲಿ ಬರುವ ಬೆಳ್ಳಾಡು ಕೋಟೆಗೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡರು. ಆಗ ಬೆಳ್ಳಾಡು ಕೋಟೆ ಸಂಪೂರ್ಣ ನಾಶವಾಯಿತಂತೆ. ಆಗ ಬೆಳ್ಳಾಡು ಗ್ರಾಮದ ಜನರು ಶಿವಪುರದಲ್ಲಿ ಬಂದು ವಾಸಿಸಿದ ವಿಚಾರವನ್ನು ಆ ಗ್ರಾಮಸ್ಥರು ಇಂದಿಗೂ ಹೇಳುತ್ತಾರೆ. ಈ ಶಿವಪುರ ಗ್ರಾಮವು ವೀರನದುರ್ಗದಿಂದ ೧೦ ಕಿ.ಮೀ. ದೂರದಲ್ಲಿದೆ.

ಕ್ರಿ.ಶ. ೧೫೭೦ ರಿಂದ ೧೬೦೮ರ ವರೆಗೆ ಹರಪನಹಳ್ಳಿ ಆಳಿದ ಭರಮಣ್ಣ ನಾಯಕನೆಂಬ ಪಾಳೆಯಗಾರನು ಒಮ್ಮೆ ಹನಸಿ ಕೋಟೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡು ವಿಚಾರವು ತಿಳಿದುಬರುತ್ತದೆ.[6] ಈ ಹನಸಿ ಗ್ರಾಮವು ವೀರನದುರ್ಗದಿಂದ ೧೫ ಕಿ.ಮೀ. ದೂರದಲ್ಲಿದೆ. ಮೊದಲ ಸೋಮಶೇಖರ ನಾಯಕನು ಕ್ರಿ.ಶ. ೧೭೪೨ ರಿಂದ ೧೭೬ರ ಕಾಲಾವಧಿಯಲ್ಲಿ ಚಿತ್ರದುರ್ಗದ ಮದಕರಿ ನಾಯಕನು ಕೊಟ್ಟೂರಿನಲ್ಲಿ ಸೋಲಿಸುವ ಮೂಲಕ ಆ ಕೋಟೆಯನ್ನು ಭದ್ರಪಡಿಸಿದಂತೆ ಕಂಡುಬರುತ್ತದೆ.[7] ಈ ಕೊಟ್ಟೂರು ವೀರನದುರ್ಗದಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಟಿಪ್ಪುಸುಲ್ತಾನನು ಕ್ರಿ.ಶ. ೧೭೮೭-೮೮ ರಲ್ಲಿ ವೀರನದುರ್ಗದ ಮೇಲೆ ದಂಡೆತ್ತಿ ಬಂದಾಗ ಅಲ್ಲಿ ರಾಮಯ್ಯನಾಯಕನು ಅಧಿಕಾರಿಯಾಗಿದ್ದನು.[8] ಇವನೇ ಸ್ವತಃ ಟಿಪ್ಪುವಿನ ವಿರುದ್ಧ ಹೋರಾಡಿ ಹರಪನಹಳ್ಳಿ ಪಾಳೆಯಗಾರರಿಗೆ ಜಯ ತಂದುಕೊಟ್ಟನು. ಹರಪನಹಳ್ಳಿಯ ಆರಂಭಿಕ ಪಾಳೆಯಗಾರರಾದ ದಾದನಾಯಕ ಹಾಗೂ ರಂಗಣ್ಣ ನಾಯಕರುಗಳ ಜರಿಮಲೆ ಪಾಳೆಯಗಾರರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳಸಿಕೊಂಡಿದ್ದರು.[9]

ಈ ಮೇಲಿನ ರಾಜಕೀಯ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಚರ್ಚಿಸಿದಲ್ಲಿ ಆರಂಭದಲ್ಲಿ ಜರಿಮಲೆ ಮತ್ತು ಹರಪನಹಳ್ಳಿ ಪಾಳೆಯಗಾರರು ಉತ್ತಮ ಸಂಬಂಧಗಳನ್ನು ಹೊಂದಿದ್ದರು. ಈ ಪಾಳೆ ಪಟ್ಟಣಗಳು, ವಿಜಯನಗರ ಸಾಮ್ರಾಜ್ಯ ಪತನಾ ನಂತರ ಸ್ವತಂತ್ರ ಹಾಗೂ ಅಧೀನವಾಗಿ ತಮ್ಮ ಶಕ್ತ್ಯಾನುಸಾರ ರಾಜ್ಯ ವಿಸ್ತರಣೆ ಮಾಡುತ್ತಾ ಬಂದವು. ಕಾಲಕ್ರಮ ರಾಜ್ಯ ವಿಸ್ತರಿಸುವಲ್ಲಿ ಇವರಿಬ್ಬರ ಮಧ್ಯೆ ಸ್ಪರ್ಧೆಗಳು ಏರ್ಪಟ್ಟಿರಬೇಕು. ಆಗಲೇ ಹರಪನಹಳ್ಳಿ ಪಾಳೆಯಗಾರರು ತಮ್ಮ ಸೈನಿಕ ನೆಲೆಗಳನ್ನು ಕೆಲವೆಡೆ ಸ್ಥಾಪಿಸಿದರು. ಅವುಗಳೆಂದರೆ ಬಾಗಳಿ, ಚಿಗಟೇರಿ, ಬಂಡ್ರಿ, ಚಿಕ್ಕಹಳ್ಳಿ, ಹ್ಯಾರಡ, ಹೊಳಲು, ಬೂದನೂರು, ತಂಬ್ರಹಳ್ಳಿ, ಕುರದಗಡ್ಡೆ, ಕರಡಿದುರ್ಗ ಮುಖ್ಯವಾಗಿದ್ದವು. ಇವುಗಳಂತೆಯೇ ಪೂರ್ವ ರಾಜ್ಯದ ಗಡಿಗಳ ರಕ್ಷಣೆಗಾಗಿ ಈ ವೀರನದುರ್ಗದ ಕೋಟೆಯನ್ನು ಸ್ಥಳೀಯರು ಹೇಳುವ ವೀರ ಮುಮ್ಮಡಿ ನಾಯಕನೇ ಕಟ್ಟಿಸಿರಬೇಕು. ಏಕೆಂದರೆ ವೀರನದುರ್ಗಕ್ಕೆ ಅನತಿ ದೂರದಲ್ಲಿರುವ ಬೆಳ್ಳಾಡು ಕೋಟೆ ಕೂಡ್ಲಿಗಿ ತಾಲೂಕನ್ನು ಈತನೇ ಜಯಸಿದ್ದನು. ಇನ್ನುಳಿದ ಹರಪನಹಳ್ಳಿ ಯಾವ ಪಾಳೆಯಗಾರರು ಈ ಪ್ರದೇಶಗಳ ಕಡೆ ಬಂದಿರುವುದಿಲ್ಲ. ಹಾಗಾಗಿ ಸ್ಥಳೀಯರು ಗುರುತಿಸುವ ಈ ವೀರನಾಯಕ ಈತನೇ ಆಗಿದ್ದಾನೆ.

ವೀರನದುರ್ಗವು ಪ್ರಕೃತಿದತ್ತವಾದ ಬೆಟ್ಟವನ್ನು ಬಳಸಿ ನಿರ್ಮಿಸಿದ ಗಿರಿದುರ್ಗ, ವಸತಿಯ ಅವಶೇಷಗಳು ಇಲ್ಲಿರುವುದರಿಂದ ಸ್ಥಳೀಯರು ಈ ಕೋಟೆಯನ್ನು ಏಳುಬಾಗಿಲು ಊರು ಎಂದು ಕರೆಯುತ್ತಾರೆ. ಇದಕ್ಕೆ ಆಧಾರಗಳೆಂಬಂತೆ ಐದು ಬಾಗಿಲುಗಳಿದ್ದು, ಉಳಿದ ಎರಡು ಬಾಗಿಲುಗಳು ಗೋಚರಿಸುವುದಿಲ್ಲ. ಪ್ರಸ್ತುತ ಐದು ಸುತ್ತುಗಳನ್ನು ನಾವಿಲ್ಲಿ ಕಾಣಬಹುದು. ಇವು ಉತ್ತರದಿಕ್ಕಿನಿಂದ ದಕ್ಷಿಣದಿಕ್ಕಿಗೆ ಮೇಲ್ಮುಖವಾಗಿ ವಿಸ್ತರಿಸಿವೆ. ಶತ್ರುಗಳಿಂದ ಅಂತಿಮ ಕ್ಷಣಗಳವರೆಗೂ ರಕ್ಷಣೆ ಪಡೆಯುವುದಕ್ಕಾಗಿ ಕೋಟೆಯನ್ನು ಹಲವಾರು ಸುತ್ತುಗಳಲ್ಲಿ ನಿರ್ಮಿಸುತ್ತಿದ್ದರು. ಶತ್ರುಗಳಿಂದ ಹಾವಳಿ, ಅವಶ್ಯಕತೆಗಳ ಹೆಚ್ಚಳ ಮತ್ತು ರಾಜ್ಯವು ವಿಸ್ತಾರವಾಗುತ್ತಾ ಹೋದಂತೆ ಕೋಟೆಯ ಸುತ್ತುಗಳು ಹೆಚ್ಚಿವೆ. ಶತ್ರುಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪ್ರತಿ ಸುತ್ತಿನಲ್ಲೂ ಗುಪ್ತ ಮಾರ್ಗಗಳನ್ನು ರಚಿಸಿದ್ದರು.

ಕೋಟೆಯ ಹೊರ ಗೋಡೆಯ ಮೊದಲ ಹಾಗೂ ಎರಡನೆಯ ಸುತ್ತುಗಳು ಸಮತಟ್ಟಾದ ಪ್ರದೇಶದ ಮೇಲಿವೆ. ಇವುಗಳ ಮಧ್ಯಭಾಗದಲ್ಲಿ ವಸತಿ ತಾಣಗಳಿದ್ದ ಅವಶೇಷಗಳಿವೆ. ಇಲ್ಲಿಯೇ ಶೈವ ದೇವಾಲಯ ರುದ್ರಯ್ಯನ ಬಾವಿ, ಹೊನ್ನೂರುಸ್ವಾಮಿ ಮಠ ಇತ್ಯಾದಿಗಳಿವೆ. ಇಲ್ಲಿಂದ ಕೋಟೆಯನ್ನು ಹತ್ತಲು ಆರಂಭಿಸಿದರೆ ಮೊದಲು ಸಿಗುವುದೇ ಒನಕಿಂಡಿ. ವೀರನದುರ್ಗದ ಪ್ರಮುಖ ದ್ವಾರವಿದೆ.

ಈ ಬಾಗಿಲನ್ನು ಎರಡು ಬೃಹತ್ ಬಂಡೆಗಳ ಸಂಧಿಯನ್ನು ಬಳಸಿ ಕಟ್ಟಲಾಗಿದೆ. ಕರ್ನಾಟಕದ ಚಿತ್ರದುರ್ಗ, ಹಂಪೆ ಮೊದಲಾದ ಕೋಟೆಗಳಲ್ಲಿ ಒನಕೆ ಕಿಂಡಿಗಳಿವೆ.[10] ಈ ಒನಕೆ ಕಿಂಡಿಗೆ ಕಂಚಿನ ಕದಗಳನ್ನು ಹೊಂದಿಸಲಾಗಿದ್ದಿತ್ತೆಂಬುದು ಸ್ಥಳೀಯರಿಂದ ತಿಳಿದು ಬರುವ ಸಂಗತಿ. ಇಲ್ಲಿಂದ ಪಶ್ಚಿಮ ದಿಕ್ಕಿಗೆ ೨೦ ಕಿ. ಮೀ. ದೂರದ ಕೊಟ್ಟೂರಿಗೆ ವಿವಾಹ ಮಾಡಿ ಕೊಟ್ಟ ಹೆಂಗಸೊಬ್ಬಳು ರಾತ್ರಿ ವೇಳೆ ಈ ಕಂಚಿನ ಕದಗಳನ್ನು ಮುಚ್ಚಿದ ಶಬ್ದ ಕೇಳಿ ಮಲಗುವ ಹೊತ್ತಾಯಿತೆಂದು ತಿಳಿದು ಹಾಲಿಗೆ ಹೆಪ್ಪು ಹಾಕುತ್ತಿದ್ದಳೆಂಬುದು ಇಲ್ಲಿಯ ಜನರು ಪ್ರತಿಕ್ರಿಯಿಸುತ್ತಾರೆ. ಈ ರೀತಿಯ ಕಥೆಗಳು ಚಿತ್ರದುರ್ಗ ಹಾಗೂ ಉಚ್ಚಂಗಿದುರ್ಗದ ವಿಷಯಗಳಲ್ಲಿಯೂ ಕಾಣಬಹುದು.[11] ಒನಕೆ ಕಿಂಡಿಯ ಬಾಗಿಲು ಮೂಲಕ ಪೂರ್ವಕ್ಕೆ ಸಾಗಿದರೆ ಅಲ್ಲಿ ಜನವಸತಿಗಳ ಅವಶೇಷಗಳಿವೆ. ವೀರನದುರ್ಗದ ಗ್ರಾಮದ ವೃದ್ಧರು ಹೇಳುವಂತೆ ಬಹಳ ವರ್ಷಗಳ ಹಿಂದೆ ಬೀರಲಗುಡ್ಡದ ಜನರು ಇಲ್ಲಿ ವಾಸವಾಗಿದ್ದರು, ಪ್ಲೇಗಿನ ಹಾವಳಿಯಿಂದ ಈಗಿರುವ ಗ್ರಾಮಕ್ಕೆ ಬದಲಾಯಿಸಬೇಕಾಯಿತು. ಇದರೊಳಗೆ ತಮ್ಮ ಮನೆಗಳಿದ್ದ ಬಗ್ಗೆ ಅವರು ನೆನಪು ಮಾಡಿಕೊಳ್ಳುತ್ತಾರೆ.

ಮುಖ್ಯ ಪ್ರವೇಶ ಒನಕೆ ಕಿಂಡಿ ದ್ವಾರದ ಮೂಲಕ ಕೋಟೆಯ ಮೇಲೇರಲು ಕಲ್ಲುಹಾಸಿನ ದಾರಿಯನ್ನು ನಿರ್ಮಿಸಲಾಗಿದೆ. ಈ ಮೆಟ್ಟಿಲುಗಳಿಗೆ ಹಾಕಿರುವ ಕಲ್ಲುಗಳ ಸವಕಳಿಯನ್ನು ಗಮನಿಸಿದರೆ ನೂರಾರು ವರ್ಷಗಳ ಕಾಲ ಈ ದಾರಿಯನ್ನು ಬಳಸಿರುವುದು ಸ್ಪಷ್ಟವಾಗುವುದು. ಈ ದಾರಿಯ ಮೂಲಕ ಮುಂದೆ ಸಾಗಲು ದುರ್ಗದ ಮಧ್ಯಬಾಗಿಲು ಸಿಗುವುದು. ಇದನ್ನು ನಡುವಲಕೇರಿ ಬಾಗಿಲೆಂದು ಕರೆಯುವರು. ಇದು ಕೋಟೆಯ ಮುಖ್ಯಭಾಗ. ಇಲ್ಲಿ ಆಡಳಿತಾಧಿಕಾರಿಗಳು, ಸೈನಿಕ ಮುಖಂಡರು ಶ್ಯಾನಬೋಗರ ಮನೆಗಳು ಇಲ್ಲಿದ್ದವೆನ್ನುವುದು ಸ್ಥಳೀಯರ ನಂಬಿಕೆ. ಇದಕ್ಕೆ ಪೂರಕ ಅಂಶಗಳೆನ್ನುವಂತೆ ಮನೆಯ ತಳಪಾಯಾವಶೇಷಗಳು ಇಲ್ಲಿ ಗೋಚರಿಸುತ್ತವೆ. ಈ ಸ್ಥಳದಲ್ಲಿ ವಾಸವಾಗಿದ್ದ ಅಧಿಕಾರಿಗಳು ಈಗಲೂ ಹೊಸಪೇಟೆಯಲ್ಲಿದ್ದಾರಂತೆ. ಇಲ್ಲಿಂದ ದಕ್ಷಿಣಕ್ಕೆ ಮೇಲೇರಲು ಕೋಟೆಯ ನಾಲ್ಕನೆಯ ಸುತ್ತು ಸಿಗುವುದು. ಇದರೊಳಗಿರುವ ಪ್ರದೇಶವು ವಿಶಾಲ ಹಾಗೂ ಸಮತಟ್ಟಾಗಿದೆ. ಇಲ್ಲಿ ಕೋಟೆ ಗೋಡೆ ವ್ಯವಸ್ಥಿತವಾಗಿದ್ದು, ಇದು ಸುಮಾರು ೧೫ ರಿಂದ ೨೦ ಅಡಿಗಳ ವೆರೆಗೆ ಎತ್ತರವಿರುವುದಲ್ಲದೆ ತುಂಬಾ ಉದ್ದವಾಗಿದೆ. ಕೋಟೆಯ ಹೊರಭಾಗದ ಶತ್ರುಗಳನ್ನು ಕೋಟೆಯೊಳಗಿನಿಂದಲೇ ಬಂದೂಕುಗಳನ್ನಿಟ್ಟು ಗುಂಡು ಹಾರಿಸುವಂತೆ ಗೋಡೆಯಲ್ಲಿ ರಂಧ್ರಗಳನ್ನು ರಚಿಸಲಾಗಿದೆ.

ಕೋಟೆಯ ಅಂತಿಮ ಸುತ್ತು ಬೆಟ್ಟದ ತುಟ್ಟ ತುದಿಯಲ್ಲಿದೆ. ಇಲ್ಲಿ ಮಲಿಯಮ್ಮ ದೇವಾಲಯ, ಸುಮಾರು ೪೦ ಅಡಿ ಹೊಂಡಗಳು, ಧ್ಯಾನ ಸಂಗ್ರಹಿಸುವ ಹಗೇವುಗಳು, ಬೃಹದಾಕಾರದ ಕಲ್ಲು ಗುಂಡುಗಳ ಮೇಲೆ ಕಟ್ಟಿಸಿರುವ ಕೊತ್ತಳಗಳನ್ನು ಕಾಣಬಹುದು.

ಈ ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ಸುಮಾರು ೨೦ಕ್ಕೂ ಹೆಚ್ಚು ಕೊತ್ತಳಗಳಿವೆ. ಕೊತ್ತಳಗಳು ಕೋಟೆಯನ್ನು ರಕ್ಷಣೆ ಮಾಡುವುದಲ್ಲದೆ, ಶತ್ರುಗಳ ಬರುವಿಕೆಯನ್ನು ಗ್ರಹಿಸಲು ತುಂಬಾ ಅನುಕೂಲವಾಗಿದ್ದವು. ವೃತ್ತಾಕಾರವಾಗಿರುವ ಇವುಗಳನ್ನು ಮಧ್ಯಮಗಾತ್ರ ಶಿಲೆ, ಹಾಗೂ ಗಾರೆಯಿಂದ ನಿರ್ಮಿಸಲಾಗಿದೆ. ಒಳಗೆ ಹೋಗಲು ಪ್ರವೇಶ ದ್ವಾರಗಳು ಮತ್ತು ಕೊತ್ತಳಗಳ ಗೋಡೆಗಳಲ್ಲಿ ಸುತ್ತಲೂ ಬಂದೂಕು ಕಿಂಡಿಗಳಿವೆ.

ಬೃಹದಾಕಾರದ ಈ ಕೊತ್ತಳಗಳು ಕೋಟೆಯ ಅಂದವನ್ನು ಇಮ್ಮಡಿಗೊಳಿಸಿವೆ. ಕೆಲವು ಕೊತ್ತಳಗಳನ್ನು ನಿಸರ್ಗದತ್ತ ಬೃಹದಾಕಾರದ ಬಂಡೆಗಳ ಸಂದುಗಳಿಗೆ ಕಲ್ಲುಗಳನ್ನೊಟ್ಟಿ ನಿರ್ಮಿಸಲಾಗಿದೆ. ಇವು ಕೋಟೆ ನಿರ್ಮಾಪಕನ ತಂತ್ರಗಾರಿಕೆಯ ಪ್ರತಿಫಲವಾಗಿವೆ. ಈ ರೀತಿಯ ಕೊತ್ತಳಗಳನ್ನು ಗುಡೇಕೋಟೆ, ಜರಿಮಲೆ ಮತ್ತು ಹಂಪೆ ಕೋಟೆಗಳಲ್ಲಿ ಕಾಣಬಹುದು. ವೀರನ ದುರ್ಗದ ಕೋಟೆಗೆ ಬಳಸಿರುವ ಶಿಲೆ ಸ್ಥಳೀಯವಾಗಿ ದೊರೆಯುವ ಕಣಶಿಲೆಯಾಗಿದೆ. ಇಲ್ಲಿ ಹಂಪೆ, ಉಚ್ಚಂಗಿದುರ್ಗದ ಕೋಟೆಗೆ ಬಳಸಿದಂತೆ ಬೃಹತ್ ಗಾತ್ರದ ಕಲ್ಲುಗಳನ್ನು ತುಂಡರಿಸಿ ಬಳಸಲಾಗಿದೆ. ಈ ಕೋಟೆಗೆ ನಿಸರ್ಗದತ್ತ ಬಂಡೆಗಳೇ ತಳಪಾಯವಾಗಿವೆ.

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ನೀರು ಒಂದು. ಮನುಷ್ಯ ನೀರಿನ ಸೌಲಭ್ಯವಿದ್ದ ಕಡೆ ವಾಸಿಸುತ್ತಾನೆ. ಇಲ್ಲವೆ ತಾನಿದ್ದ ಕಡೆ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಾನೆ. ಇಲ್ಲಿ ತಾವಿದ್ದ ಕಡೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದರು. ಕೋಟೆಯ ಕೆಳಭಾಗದ ಸುತ್ತಿನಲ್ಲಿ ರುದ್ರಯ್ಯನ ಬಾವಿ ಇದೆ. ಇದು ರುದ್ರಯ್ಯನ ಮಠದ ಆವರಣದಲ್ಲಿರುವುದರಿಂದ ಈ ಹೆಸರು ಬಂದಿದೆ. ಇದಕ್ಕೆ ಹೊಂಡವೆಂತಲೂ ಕರೆಯುವರು. ಇದರಲ್ಲಿ ಸದಾ ಕಾಲವು ನೀರು ತುಂಬಿರುತ್ತದೆ. ಇದರ ಅಂತರ್ಜಲ ಬತ್ತದಂತೆ ಬೆಟ್ಟದ ಇಳಿಜಾರುಗಳಿಗೆ ಅಡ್ಡ ಗೋಡೆಗಳನ್ನು ಕಟ್ಟಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಕೋಟೆಯ ಮೇಲ್ಭಾಗದ ಜನರಿಗೆ ಪ್ರತ್ಯೇಕ ಹೊಂಡಗಳಿವೆ. ಇವುಗಳು ಮಳೆಗಾಲದಲ್ಲಿ ಮಾತ್ರ ತುಂಬಿರುತ್ತಿದ್ದವು. ಇಂತಹ ಹೊಂಡಗಳನ್ನು ಬಹುತೇಕ ಎಲ್ಲಾ ಗಿರಿದುರ್ಗಗಳಲ್ಲೂ ಕಾಣಬಹುದು.

ರುದ್ರಯ್ಯನ ಮಠ, ಹೊನ್ನೂರಸ್ವಾಮಿ ಮಠ, ಮಲಿಯಮ್ಮನ ದೇವಾಲಯ, ಆಂಜನೇಯನ ದೇವಾಲಯ ಹಾಗೂ ವೀರಗಲ್ಲುಗಳು ಈ ಕೋಟೆಯಲ್ಲಿವೆ.

ರುದ್ರಯ್ಯನ ಮಠ ಇದನ್ನು ಕೆಲವರು ಕೊಟ್ಟೂರೇಶ್ವರ ಮಠವೆಂತಲೂ ಕರೆಯುವರು. ಇದರಲ್ಲಿ ಗರ್ಭಗೃಹ ತೆರೆದ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಯಾವುದೇ ಮೂರ್ತಿಶಿಲ್ಪವಿಲ್ಲ. ಸಭಾಮಂಟಪದಲ್ಲಿ ಒಟ್ಟು ಆರು ಕಂಬಗಳಿವೆ. ಇವು ವಿಜಯನಗರೋತ್ತರ ಶೈಲಿಯವು. ಇಲ್ಲಿ ವೀರನಗಲ್ಲು ಇದೆ. ಎರಡು ಹಂತಗಳಲ್ಲಿರುವ ಇದರಲ್ಲಿ ವೀರನು ಕದನದಲ್ಲಿ ಶತ್ರುಗಳೊಂದಿಗೆ ಹೋರಾಡುವ ಹಾಗೂ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಚಿತ್ರಣಗಳಿವೆ. ಇದರಲ್ಲಿ ಶಾಸನವನ್ನು ಕಡೆಯಲಾಗಿದೆ. ಈ ದೇಗುಲವು ಪೂರ್ವಕ್ಕೆ ಮುಖ ಮಾಡಿದ್ದರೆ, ಇದರ ಮುಂಭಾಗದಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿರುವ ಹೊನ್ನೂರಸ್ವಾಮಿ ಮಠವಿದೆ. ಇದು ಇತ್ತೀಚಿನ ವಾಸ್ತು ಕೃತಿ. ಇದರಲ್ಲಿ ಯಾವುದೇ ಮೂರ್ತಿಗಳಿಲ್ಲ.

ಆಂಜನೇಯನ ಗುಡಿ ಕೋಟೆಯ ಕೆಳಸುತ್ತಿನ ಅಂಗಳದಲ್ಲಿ ಈ ದೇಗುಲವಿದ್ದು, ಪೂರ್ವಾಭಿಮುಖವಾಗಿದೆ. ಇದರಲ್ಲಿ ಗರ್ಭಗೃಹ ಮಾತ್ರ ಇದ್ದು ಆಂಜನೇಯನ ಉಬ್ಬುಶಿಲ್ಪವಿದೆ.

ಮಲಿಯಮ್ಮ ದೇವಾಲಯ ಇದು ಬೆಟ್ಟದ ತುದಿಯಲ್ಲಿ ಇದೆ. ಇದರಲ್ಲಿ ಗರ್ಭಗೃಹ, ತೆರೆದ ಸಭಾಮಂಟಪಗಳಿವೆ. ಪೂರ್ವಾಭಿಮುಖವಾಗಿರುವ ಇದರ ಗರ್ಭಗೃಹದಲ್ಲಿ ಕಲ್ಲು ಗುಂಡುನಿಟ್ಟು ಪೂಜಿಸುತ್ತಾರೆ. ಮಲಿಯಮ್ಮ ಇಲ್ಲಿನ ಜನರ ಅಧಿದೇವತೆಯಾಗಿದ್ದು, ಇಲ್ಲಿ ಶ್ರಾವಣಮಾಸದ ಮಧ್ಯ ಮಂಗಳವಾರದಂದು ವಿಶೇಷ ಪೂಜೆ ನಡೆಯುತ್ತದೆ. ಈ ದೇಗುಲದ ಹಿಂಭಾಗದಲ್ಲಿರುವ ಬೃಹತ್ ಬಂಡೆಯನ್ನು ಮಲಿಯಮ್ಮನ ಬಂಡೆ ಎಂದೇ ಕರೆಯುತ್ತಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿದ್ದ ಸ್ಥಳವಿದೆ. ಕೈದಿಗಳು ಮತ್ತಿತರರನ್ನು ಇಲ್ಲಿಂದ ನೂಕಿ ಕೊಲ್ಲುತ್ತಿದ್ದರು. ಕೋಟೆಯಲ್ಲಿ ವಾಸವಾಗಿದ್ದ ಗುರಿಕಾರರ ಮನೆತನಗಳು ಈಗಿನ ಬೀರಲ ಗುಡ್ಡ ಗ್ರಾಮದಲ್ಲಿದೆ. ಇವು ಹರಪನಹಳ್ಳಿ ಪಾಳೆಯಗಾರರ ಸೈನ್ಯದಲ್ಲಿ ಗುರಿಕಾರರ ಪ್ರಮುಖ ತಂಡವೇ ಇದ್ದುದಕ್ಕೆ ಪುಷ್ಟಿ ನೀಡುತ್ತದೆ. ಈ ಮನೆತನಗಳಲ್ಲಿ ಇಂದಿಗೂ ಬಂದೂಕು, ಕತ್ತಿ ಗುರಾಣಿಗಳಿರುವುವು.[12]

ಬಳ್ಳಾರಿ ಜಿಲ್ಲೆಯಲ್ಲಿರುವ ಪ್ರಬಲತರ ಗಿರಿದುರ್ಗಗಳಲ್ಲಿ ವೀರನದುರ್ಗ ಒಂದು. ಉಚ್ಚಂಗಿದುರ್ಗದ ಕೋಟೆಯಷ್ಟೇ ಇದು ಭದ್ರವಾಗಿದ್ದು, ಶತ್ರುಗಳಿಗೆ ಸಿಂಹಸ್ವಪ್ನವಾಗಿತ್ತು. ಹರಪನಹಳ್ಳಿ ಬಸಪ್ಪನಾಯಕನ ಅವಧಿಯಲ್ಲಿ ಟಿಪ್ಪುಸುಲ್ತಾನನು ಕೊಪ್ಪಳ ಕೋಟೆಯನ್ನು ವಶಪಡಿಸಿಕೊಂಡು ಒಂದು ಯೋಜನೆಯನ್ನು ರೂಪಿಸಿದನು. ಈ ಗುಪ್ತ ಯೋಜನೆಯಂತೆ ನಾಯಕರ ಬಸಪ್ಪನಾಯಕನನ್ನು ಸೆರೆಹಿಡಿದು ಕಬ್ಬಾಳದುರ್ಗಕ್ಕೆ ಕಳುಹಿಸಿಕೊಟ್ಟರು. ನಾರಾಯಣ ದೇವರ ಕೆರೆ, ತಂಬ್ರಹಳ್ಳಿ, ಕರಡಿದುರ್ಗ, ಉಚ್ಚಂಗಿದುರ್ಗ ಮತ್ತು ಹರಪನಹಳ್ಳಿಗೆ ಒಂದೇ ವೇಳೆಗೆ ಮುತ್ತಿಗೆ ಹಾಕಿ ನಾಯಕನನ್ನು ದಂಗು ಬಡಿಸಿದ್ದನು.[13] ಕೋಟೆಗಳನ್ನು ವಶಪಡಿಸಿಕೊಂಡು ವೀರನದುರ್ಗದ ಮೇಲೂ ದಾಳಿಮಾಡಿದನು. ಆಗ ಈ ಕೋಟೆಯಲ್ಲಿ ರಾಮಯ್ಯ ನಾಯಕನೆಂಬ ಅಧಿಕಾರಿಯು ಟಿಪ್ಪುಸುಲ್ತಾನನ ವಿರುದ್ಧ ವೀರಾವೇಶದಿಂದ ಹೋರಾಡಿದನು.[14] ನಿರಂತರವಾಗಿ ಒಂದು ವಾರದ ಕಾಲ ಕದನ ನಡೆದರೂ ವೀರನದುರ್ಗದ ಕೋಟೆ ಟಿಪ್ಪುವಿನ ವಶವಾಗಲಿಲ್ಲ. ತಾನು ಖಡ್ಗ ಇಟ್ಟಲ್ಲೆಲ್ಲ ಜಯ ಸಂಪಾದಿಸಿದ್ದ ಟಿಪ್ಪುಗತ್ಯಂತರವಿಲ್ಲದೆ. ಇಲ್ಲಿಂದ ಹೊರಡಬೇಕಾಯಿತು. ಮರಳಿ ಇಲ್ಲಿ ಸುಳಿಯಲೇ ಇಲ್ಲ. ಟಿಪ್ಪುವಿನೊಂದಿಗೆ ನಡೆದ ಕದನವನ್ನು ನೆನಪಿಸುವ ರಕ್ತ ಬಾಳಯ್ಯನ ಕಟ್ಟೆಯ ಕಾಳಗ ನಡೆದ ಆವರಣದಲ್ಲಿದೆ. ಈ ಕಾಳಗದಲ್ಲಿ ಮಡಿದ ಸೈನಿಕ ರಕ್ತವು ಕಟ್ಟೆಯಲ್ಲಿ ಸಂಗ್ರಹವಾಯಿತೆಂಬುದು ಸ್ಥಳೀಯರ ನಂಬಿಕೆ.

ಹರಪನಹಳ್ಳಿ ಪಾಳೆಯಗಾರರು ಸುಮಾರು ೨೫೦ ವರ್ಷಗಳ ಕಾಲ ಸೈನಿಕ ನೆಲೆಗಳನ್ನು ಸ್ಥಾಪಿಸಿ, ಅವಧಿಗೊಬ್ಬ ಅಧಿಕಾರಿಗಳನ್ನು ನೇಮಿಸುತ್ತಿದ್ದರು. ಅವುಗಳಲ್ಲಿ ವೀರನದುರ್ಗವು ಒಂದು. ಹರಪನಳ್ಳಿ ಹಾಗೂ ಜರಿಮಲೆ, ಗುಡೇ ಕೋಟೆಗಳ ಗಡಿಭಾಗವಾಗಿ ವೀರನದುರ್ಗ ಮಹತ್ವದ ಪಾತ್ರ ನಿರ್ವಹಿಸಿದೆ. ಹರಪನಹಳ್ಳಿ ಪಾಳೆಯಗಾರರ ಉಚ್ಚಂಗಿದುರ್ಗದ ಕೋಟೆಯನ್ನು ಹೊರತು ಪಡಿಸಿದರೆ ಇದೇ ಬಲಿಷ್ಟವಾದ ಗಿರಿದುರ್ಗ. ಇಲ್ಲಿಯ ಭೌಗೋಳಿಕ ಲಕ್ಷಣಗಳೇ ಪಾಳೆಯಗಾರರಿಗೆ ಕೋಟೆ ನಿರ್ಮಿಸಲು ಆಸಕ್ತಿ ಹುಟ್ಟಿಸಿರಬೇಕು. ಇಂಥಹ ಹಲವು ಕೋಟೆಗಳು ಹರಪನಹಳ್ಳಿ ರಾಜ್ಯದ ಗಡಿಭಾಗಗಳಾದ್ದುದರಿಂದ ಸುತ್ತಲೂ ಶತ್ರುಗಳಿದ್ದರೂ ಹರಪನಹಳ್ಳಿಯವರು ನಿರಾತಂಕವಾಗಿ ಉಸಿರಾಡಲು ಸಾಧ್ಯವಾಯಿತು. ಹೀಗೆ ಹರಪನಹಳ್ಳಿ ಪಾಳೆಯಗಾರರು ಇಂಥಹ ಗಿರಿದುರ್ಗಗಳ ರಕ್ಷಣೆಯಲ್ಲಿದ್ದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದ್ದರೆಂಬುದರಲ್ಲಿ ಅನುಮಾನವಿಲ್ಲ.

[1] ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧. ಪು. ೨೨೬. ಹಂಪಿ ಕನ್ನಡ ವಿಶ್ವವಿದ್ಯಾಲಯ

[2] ನಾಗಭೂಷಣ, ಎಸ್.ಎಂ. ೧೯೯೩. ದೇವಲಾಪುರ ವಾಸ್ತುಶಿಲ್ಪ ವ್ಯಾಸಂಗ, ಇತಿಹಾಸ ದರ್ಶನ ೮. ಪು. ೫೭೬೦

[3] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧. ಪೂರ್ವೋಕ್ತ. ಪು. ೨೨೫-೨೬

[4] ಗೋವಿಂದಚಾರ್ಯ ಚಿಕ್ಕೇರೂರು. ಆಪ್ರಕಟಿತ ಹಸ್ತಪ್ರತಿ

[5] ಸದಾಶಿವಪ್ಪ ಕುಂ. ಬಾ. ೧೯೯೬. ಹರಪನಹಳ್ಳಿ ಪಾಳೆಯಗಾರರು, ಪು. ೨೦. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು

[6] ಅದೇ, ಪು. ೧೬

[7] ಅದೇ, ಪು. ೨೮

[8] ಸೋಮಶೇಖರ್, ಎಸ್.ವೈ. ೧೯೯೯. ಕೂಡ್ಲಿಗಿ ತಾಲೂಕಿನ ವೀರನದುರ್ಗದ ಕೋಟೆ, ಇತಿಹಾಸ ದರ್ಶನ ೧೪. ಪು. ೧೯೧

[9] ಹರಪನಹಳ್ಳಿ ಪಾಳೆಯಗಾರರು, ಪೂರ್ವೋಕ್ತ. ಪು. ೧೫

[10] ಸೋಮಶೇಖರ್, ಎಸ್.ವೈ. ೧೯೯೯. ಪೂರ್ವೋಕ್ತ.ಪು. ೧೯೦

[11] ಹರಪನಹಳ್ಳಿ ಪಾಳೆಯಗಾರರು, ಪೂರ್ವೋಕ್ತ. ಪು. ೪೦

[12] ಸೋಮಶೇಖರ್, ಎಸ್.ವೈ.೧೯೯೯. ಪೂರ್ವೋಕ್ತ. ಪು. ೧೯೦

[13] ಹರಪನಹಳ್ಳಿ ಪಾಳೆಯಗಾರರು, ಪೂರ್ವೋಕ್ತ. ಪು. ೪೦

[14] ಅದೇ, ಪು. ೫೦.