ಬಳ್ಳಾರಿ ಪಟ್ಟಣ ಜಿಲ್ಲೆಯ ಕೇಂದ್ರ ಸ್ಥಳವಾಗಿದೆ. ಇದು ಬೆಂಗಳೂರಿನಿಂದ ಉತ್ತರ ದಿಕ್ಕಿಗೆ ೩೦೬ ಕಿ.ಮೀ. ದೂರದಲ್ಲಿದೆ. ಈ ನಗರದ ಪಕ್ಕದ ಬೆಟ್ಟವು ಸಮುದ್ರಮಟ್ಟದಿಂದ ೧೯೭೬ ಅಡಿಗಳಷ್ಟು ಎತ್ತರವಿದೆ. ಈ ಬೆಟ್ಟವನ್ನು ಸುತ್ತುವರೆದು ಕೋಟೆಯನ್ನು ಕಟ್ಟಲಾಗಿದೆ. ಬಳ್ಳಾರಿ ಪಟ್ಟಣದ ಮೊದಲ ಹೆಸರು ಬಳ್ಳಾರೆ ಎಂಬುದು ಕ್ರಿ.ಶ. ೧೨ ನೆಯ ಶತಮಾನದ ಕೋಳೂರು, ಸಿಂದಿಗೇರಿ, ಬೈಲೂರು ಮತ್ತು ಕುರುಗೋಡು ಶಾಸನಗಳಿಂದ ತಿಳಿದು ಬರುತ್ತದೆ. ರಾಚಮಲ್ಲ[1], ಭೀಮರಸ[2] ಅಜ್ಜರಸ[3] ಮೊದಲಾದ ಸಿಂದವಂಶದ ಅರಸರಿಗೆ ಈ ಪಟ್ಟಣ ರಾಜಧಾನಿಯಾಗಿತ್ತು. ಬಳ್ಳೇಶ ಮಲ್ಲಾರ್ಯ ಎಂಬ ಶರಣರು ಬಳ್ಳವನ್ನೆ ಶಿವಲಿಂಗವೆಂದು ಪೂಜಿಸಿದ್ದರ ಫಲವಾಗಿ ಬಳ್ಳಾ-ಅರಿ=ಬಳ್ಳಾರಿ ಎಂದಾಯಿತು.[4] ಈ ಊರಿನ ಗ್ರಾಮದೇವತೆ ಬಲಾರಿ ಹೆಸರಿನಿಂದ ಪ್ರಖ್ಯಾತಗಳಾಗಿದ್ದರಿಂದ ಈ ಬಲಾರಿ, ಬಳ್ಳಾರಿ ಆಯಿತೆಂದು ಸ್ಥಳೀಯ ಪ್ರತೀತಿ.

ಬಳ್ಳಾರಿ ಗುಡ್ಡದ ಮೇಲೆ ಬಳಸುರನೆಂಬ ರಾಕ್ಷಸನು ಆಶ್ರಯ ಮಾಡಿಕೊಂಡು ಇಲ್ಲಿ ಜನರಿಗೆ ಉಪದ್ರವ ಕೊಡುತ್ತಿದ್ದನು. ಸ್ವರ್ಗಲೋಕದಿಂದ ದೇವಕನ್ಯೆಯರು ಇಚ್ಛಾವಿಹಾರಲ್ಲಿ ವಿಹರಿಸುತ್ತ ಈ ಪರ್ವತದ ಮೇಲೆ ಖೇಚರ ಮಾರ್ಗದಲ್ಲಿ ಹೋಗುತ್ತಿರುವಾಗ ರಾಕ್ಷಸನು ಕಾಮಾತುರನಾಗಿ ಅವರಿಗೆ ಉಪದ್ರವ ಕೊಟ್ಟಿದ್ದರಿಂದ ಅವರು ದೇವೇಂದ್ರನಲ್ಲಿ ಮೊರೆ ಇಟ್ಟರು. ಆಗ ದೇವೇಂದ್ರ ಬಾಳಾಸುರನನ್ನು ವಜ್ರಾಯುಧದಿಂದ ಸಂಹಾರ ಮಾಡಿದ್ದರಿಂದ ಈ ಗುಡ್ಡಕ್ಕೆ ಬಳ್ಳಾರಿ (ಬಳಾರಿ) ಯೆಂಬ ನಾಮ ಪ್ರಸಿದ್ಧಿ ಹೊಂದಿತೆಂದು ಸಂಸ್ಕೃತ ಮೂಲ ಹೇಳುತ್ತದೆ.

ಕಲಿಯುಗದಲ್ಲಿ ಬಳ್ಳರಾಯನ ವಂಶಸ್ಥನಾದ ಸಿಂದು ಬಲ್ಲಾಳರಾಯನು ಇಲ್ಲಿ ರಾಜ್ಯಕಟ್ಟಿದ್ದರಿಂದ ಅವನ ಹೆಸರಿನಿಂದಲೇ ಬಳ್ಳಾರಿ ಆಯಿತೆಂದು ಬಳ್ಳಾರಿ ಕೈಫಿಯತ್ತು ಹೇಳುತ್ತದೆ.[5]

ಸಿಂದು ವಂಶದ ಎರಡನೆಯ ರಾಚಮಲ್ಲನ ಮಗನಾದ ಚಾಲುಕ್ಯನ ಕೊನೆಯ ಮಹಾ ಮಂಡಳೇಶ್ವರನಾದ ವೀರಕಲಿದೇವರಸನನ್ನು ಹೊಯ್ಸಳ ವೀರ ಎರಡನೆಯ ಬಲ್ಲಾಳನು (ಕ್ರಿ.ಶ. ೧೧೭೩-೧೨೨೦) ಸೋಲಿಸಿ ಆ ರಾಜ್ಯಗಳನ್ನೆಲ್ಲಾ ಆಕ್ರಮಿಸಿಕೊಂಡನು. ಅವನಿಗೆ “ಸಿಂದು ಬಲ್ಲಾಳ” ನೆಂಬ ಬಿರುದು ಬಂದಿತ್ತು. ಈತನೂ ಚಾಲುಕ್ಯರ ಸಾಮಂತನಾಗಿದ್ದವನೇ ಈ ಗುಡ್ಡದ ಸೌಂದರ್ಯ ಹಾಗೂ ಕೋಟೆಯ ಭದ್ರತೆಯನ್ನು ವೀಕ್ಷಿಸಿ, ಮಾರುಹೋಗಿ ಈ ಗುಡ್ಡಕ್ಕೆ ತನ್ನ ಹೆಸರನ್ನೆ ಇಟ್ಟು ಬಲ್ಲಾಳಗುಡ್ಡವೆಂದು ಕರೆದಿರಬಹುದು. ಈಗಲೂ “ಬಲ್ಲಾಳ ಗುಡ್ಡ” ವೆಂದು ಇನ್ನೊಂದು ಹೆಸರಿದೆ ಎಂಬ ಸಿ.ಆರ್. ಶ್ಯಾಮಲರವರ ವಾದವು ಸ್ವಲ್ಪ ವಸ್ತುನಿಷ್ಟವಾಗಿದೆ.[6]

ಇತಿಹಾಸ

ಕ್ರಮವಾಗಿ ಬಳ್ಳಾರಿಯು ಮೌರ್ಯ, ಶಾತವಾಹನ ಮತ್ತು ಬಾದಾಮಿ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ಬಲ್ಲಕುಂದೆ-೩೦೦ರ ಪ್ರಮುಖ ವಿಭಾಗವಾಗಿ ಬಳ್ಳಾರಿ-೩೦ ರೂಪುಗೊಂಡಿತು. ಸಬಾಲ-೭೦೦ರಲ್ಲಿ ಬಳ್ಳಾರಿ ಸೇರಿತ್ತೆಂದು ಚನ್ನಬಸವಯ್ಯ ಹಿರೇಮಠರು ಹೇಳಿದ್ದಾರೆ.[7] ಅವರು ಕೋಳೂರಿನಲ್ಲಿ ಇತ್ತೀಚೆಗೆ ದೊರೆತ ಶಾಸನವನ್ನು ಗಮನಿಸಿಲ್ಲ. ಈ ಶಾಸನದಲ್ಲಿ ಪಲ್ಲವ ವಂಶದ ಮಗ್ಙಪರಸನು “ಬಳ್ಳಾರೆ ಮೂವತ್ತರ” ಪೊಲೆಯರಿಗೆ ತೆರಿಗೆ ಬಿಟ್ಟಿದ್ದನ್ನು ತಿಳಿಸುತ್ತದೆ.[8]

ಬಲ್ಲಕುಂದೆ ನಾಡಿನ ಮೂರುನೂರು ಹಳ್ಳಿಗಳಲ್ಲಿ ದೊರವಡಿ-೭೦, ಸಬಾಲ-೭೦, ನಲ್ವಡಿ -೧೨ ಮತ್ತು ತೆಕ್ಕೆಕಲ್ಲು -೧೨ (೭೦+೭೦+೧೨+೧೨=೧೬೪)ಗಳು ಸೇರಿ ಒಂದು ನೂರು ಅರವತ್ತು ನಾಲ್ಕು ಹಳ್ಳಿಗಳ ಲೆಕ್ಕ ಸಿಗುತ್ತದೆ. ಇನ್ನುಳಿದ ೧೩೬ ಹಳ್ಳಿಗಳನ್ನು ಹುಡುಕಬೇಕಾಗಿದೆ ಎಂದಿದ್ದಾರೆ.[9] ಆದ್ದರಿಂದ ೧೩೬ ಹಳ್ಳಿಗಳಲ್ಲಿ ಬಳ್ಳಾರಿ-೩೦ನ್ನು ತೆಗೆದರೆ ಇನ್ನುಳಿದ ೧೦೬ ಹಳ್ಳಿಗಳನ್ನು ಮಾತ್ರ ಪತ್ತೆಹಚ್ಚಬೇಕಿದೆ.

ಬಳ್ಳಾರಿ-೩೦, ಮೂವತ್ತು ಹಳ್ಳಿಗಳ ಮುಖ್ಯ ಕೇಂದ್ರವಾಗಿತ್ತು. ನಿಡುದೋಳು ಸಿಂದನ ನಾಲ್ಕು ಜನ ಮಕ್ಕಳಲ್ಲಿ ಬುದ ಸೇದ್ಯನು ಬಳ್ಳರೆ ನಾಡಿಗೆ ಅಧಿಪತಿಯಾಗಿದ್ದ ವಿಷಯವನ್ನು ಚನ್ನಬಸವಯ್ಯ ಹಿರೇಮಠರೇ ಹೇಳಿದ್ದಾರೆ.[10] ಸಿಂದವಂಶದ ರಾಚಮಲ್ಲ, ಭೀಮರಸ ಮತ್ತು ಅಜ್ಜರಸರನ್ನು ಬಳ್ಳಾರೆ ಮುಂದೆ (ಶಾಸನಗಳಲ್ಲಿ) ಗುರುತಿಸಲಾಗಿದೆ. ಕಲಿದೇವರಸನ ಮರಣದೊಂದಿಗೆ ಬಳ್ಳಾರಿಯು ಹೊಯ್ಸಳರ ಅಧಿಪತ್ಯಕ್ಕೆ ಸೇರಿತ್ತು. ಹೊಯ್ಸಳ ವಿಷ್ಣುವರ್ಧನ ಗೆದ್ದ ಕೋಟೆಗಳ ಪಟ್ಟಿಯಲ್ಲಿ ಬಳ್ಳಾರಿಯೂ ಸೇರಿರುವದರಿಂದ ೧೨ನೆಯ ಶತಮಾನದಲ್ಲಿ ಇಲ್ಲಿ ಕೋಟೆ ಇದ್ದುದು ಖಚಿತವಾಗುತ್ತದೆ.[11] ಸಿಂದುವಂಶದ ಆಳ್ವಿಕೆಯ ಭದ್ರತೆಗಾಗಿಯೇ ಇವರು ಕೋಟೆಯನ್ನು ಕಟ್ಟಿಕೊಂಡಿದ್ದರು. ನಂತರ ವಿಜಯನಗರ ಅರಸ ಕೃಷ್ಣದೇವರಾಯನ ಕಾಲದಲ್ಲಿ ಈ ಭಾಗವನ್ನು ತಮ್ಮಣ್ಣ ನಾಯಕನು ಆಳುತ್ತಿದ್ದ ವಿಷಯವನ್ನು ಬಳ್ಳಾರಿ ಕೈಫಿಯತ್ತು ತಿಳಿಸುತ್ತದೆ.[12] ಈತನೇ ಇಲ್ಲಿ ಕೋಟೆ ಕಟ್ಟಿಸಿರಬೇಕೆಂದು ಸಿ.ಎನ್.ಪಾಟೀಲರು ಹೇಳಿದ್ದಾರೆ.[13] ಕೃಷ್ಣದೇವರಾಯನ ಆಳ್ವಿಕೆಯ ಮುಂಚೆಯೇ ಬಳ್ಳಾರಿಯಲ್ಲಿ ಕೋಟೆ ಇದ್ದುದು ಈಗಾಗಲೇ ಸ್ಪಷ್ಟವಾಗಿರುವುದರಿಂದ ತಮ್ಮಣ್ಣನಾಯಕನು ಕೋಟೆಯ ಕೆಲಭಾಗಗಳನ್ನು ಜೀರ್ಣೋದ್ದಾರ ಮಾಡಿದನೆಂದು ಹೇಳಬಹುದು. ಮುಂದೆ ಅಚ್ಛುತರಾಯನು ಈ ಕೋಟೆಯ ಪೂರ್ವಭಾಗದಲ್ಲಿ ಪೇಟೆಯೊಂದನ್ನು ಕಟ್ಟಿಸಿದಂತೆ ಕೈಫಿಯತ್ತು ಹೇಳುತ್ತದೆ.[14]

ವಿಜಯನಗರ ಪತನದ ನಂತರ ಸುಲ್ತಾನರ ಪ್ರಬಲ್ಯ ಹೆಚ್ಚಾಯಿತು. ಇವರಲ್ಲಿ ಮಂತ್ರಿಯಾಗಿದ್ದ ಹಂಡೆ ಕುರುಬ ಜಾತಿಯ ಬಾಲದ ಹನುಮಪ್ಪ ನಾಯಕನನ್ನು ದಕ್ಷಿಣ ಪ್ರಾಂತ್ಯದ ಬಳ್ಳಾರಿ, ತೆಕ್ಕಲಕೋಟೆ, ಕುರುಗೋಡುಗಳ ಮುಖಂಡನನ್ನಾಗಿ ನೇಮಿಸಲಾಯಿತು. ಈತನು ಪ್ರಬಲನಾಗುತ್ತಾ ಬಳ್ಳಾರಿಯಲ್ಲಿ ಸ್ವತಂತ್ರ್ಯ ಪಾಳೆಪಟ್ಟನ್ನು ಸ್ಥಾಪಿಸಿದ. ಬಳ್ಳಾರಿ ಕೋಟೆಯನ್ನು ವ್ಯವಸ್ಥಿತವಾಗಿ ಈತನ ಕಾಲದಲ್ಲೇ ಕಟ್ಟಲಾಯಿತೆಂದು ಆಧಾರಗಳು ದೃಢಪಡಿಸುತ್ತವೆ.

ಹಂಡೆ ಪಾಳೆಯಗಾರರು ಮೊದಲು ಕ್ರಿ.ಶ. ೧೬೩೧ರೆಗೆ ಬಳ್ಳಾರಿ ಕೋಟೆಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ನಂತರ ಮುಸ್ಲಿಂರ ವಶವಾದ ಕೋಟೆ ಸುಮಾರು ಕ್ರಿ.ಶ. ೧೬೭೮ರಲ್ಲಿ ಶಿವಾಜಿಯ ವಶವಾಯಿತು. ಮುಂದೆ ಔರಂಗಜೇಬನ ಆಡಳಿತಕ್ಕೊಳಪಟ್ಟು ಕ್ರಿ.ಶ. ೧೬೯೨ರಲ್ಲಿ ಪುನಃ ಹಂಡೆ ಪಾಳೆಯಗಾರರ ವಶವಾಯಿತು. ಮುಂದೆ ದ್ಯಾವಪ್ಪನಾಯಕನ ಮಕ್ಕಳು ಹನುಮಪ್ಪನಾಯಕ, ರಮರಿಯ ರಾಮಪ್ಪ ನಾಯಕ, ಚಿಕ್ಕರಾಮಪ್ಪನಾಯಕ ಈ ಮೂರು ಮಂದಿ ಮಕ್ಕಳು ಕ್ರಿ.ಶ. ೧೭೦೯ ರಿಂದ ೧೭೧೯ರವರೆಗೆ ಆಳಿದರೆಂದು ತಿಳಿದು ಬರುತ್ತದೆ.[15] ಚಿಕ್ಕರಾಮಪ್ಪನಾಯಕನು ಕ್ರಿ.ಶ. ೧೭೨೬ ರಿಂದ ೧೭೩೦ರ ವರೆಗೆ ಆಳ್ವಿಕೆ ಮಾಡಿದನು. ಇವನ ಅವಧಿಯಲ್ಲಿ ಬಳ್ಳಾರಿಯ ಕೆಳಗಿನ ಕೋಟೆಯನ್ನು ಕಟ್ಟಲಾಯಿತು.[16]

ನೀಲಮ್ಮ ಬಳ್ಳಾರಿಯಲ್ಲಿ ರಾಮಪ್ಪನಾಯಕನನ್ನು ಅಧಿಕಾರಕ್ಕೆ ತಂದಳು. ಇವನೇ ಬಳ್ಳಾರಿ ಕೋಟೆಯನ್ನು ದುರಸ್ಥಿ ಮಾಡಿಸಿ ಕೋಟೆ ಸುತ್ತಲೂ ಕಂದಕವನ್ನು ತೆಗೆಸಿದಂತೆ ಕೈಫಿಯತ್ತುಗಳು ಹೇಳುತ್ತವೆ.[17] ಕ್ರಿ.ಶ. ೧೭೬೪ ರಲ್ಲಿ ಅದವಾನಿ ಸಂಸ್ಥಾನದ ಬಸಾಲತ್ ಜಂಗನ ಅಧೀನದಲ್ಲಿದ್ದಾಗ ರಾಮಪ್ಪನು ಬಳ್ಳಾರಿಯನ್ನು ಆಳುತ್ತಿದ್ದನು. ದೊಡ್ಡಪ್ಪನಾಯಕನು ಇಲ್ಲಿ ಆಳ್ವಿಕೆ ಮಾಡುತ್ತಿರುವಾಗ[18] ಕ್ರಿ.ಶ. ೧೭೭೫ರಲ್ಲಿ ಹೈದರಾಲಿಯು ಈ ಕೋಟೆಯನ್ನು ವಶಪಡಿಸಿಕೊಂಡನು.[19] ಆಗ ದೊಡ್ಡಪ್ಪನಾಯಕನು ಇಲ್ಲಿಂದ ಕುರುಗೋಡಿಗೆ ಪತ್ನಿಯರ ಸಹಿತವಾಗಿ ಪಲಾಯನ ಮಾಡಿದನು. ಆಗ ಹೈದರಾಲಿಯು ಮೊದಲಿನ ಪಾಳೆಯಗಾರರು ಕಟ್ಟಿಸಿದ್ದ ಕೋಟೆಯನ್ನು ಕೆಡವಿ ಹೊಸದಾಗಿ ಬುನಾದಿ ಹಾಕಿ ಈಗಿನಂತೆ ಕಟ್ಟಿಸಿದನು. ನಂತರ ಕ್ರಿ.ಶ. ೧೭೯೨ರಲ್ಲಿ ಟಿಪ್ಪುವಿನ ವಶದಲ್ಲಿದ್ದಾಗ, ಈ ಕೋಟೆಯ ಕೊತ್ತಳ ಮತ್ತು ಕಂದಕಗಳಿಗೆ ಗಚ್ಚಿನ ಕಾಮಗಾರಿ ಮಾಡಿಸುವ ಮೂಲಕ ದುರಸ್ಥಿ ಮಾಡಿಸಿದನು. ಈ ಕಾರ್ಯಕ್ಕಾಗಿ ಫ್ರೆಂಚ್ ಇಂಜಿನಿಯರನ್ನು ನೇಮಿಸಲಾಗಿತ್ತೆಂದು ತಿಳಿದುಬರುತ್ತದೆ. ಬಳ್ಳಾರಿ ಕೋಟೆಯು ಹೈದ್ರಾಬಾದಿನ ನಿಜಾಮನ ವಶದಲ್ಲಿ ಸ್ವಲ್ಪ ಕಾಲ ಇತ್ತು ನಂತರ ಕ್ರಿ.ಶ. ೧೮೦೦ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರವಾಯಿತು. ಆಗ ಬ್ರಿಟಿಷರು ಕೆಳಕೋಟೆಯಲ್ಲಿ ಅನೇಕ ಕಟ್ಟಡಗಳನ್ನು ನಿರ್ಮಿಸಿದರು. ಇಂದಿನ ಲೋಕೋಪಯೋಗಿ ಇಲಾಖೆಯ ಕಟ್ಟಡದ ಕಲ್ಲಿನ ಮೇಲೆ ಬ್ರಿಟಿಷರ ಶಾಸನವಿದೆ. ಅದರಲ್ಲಿ ಕಂಪನಿ ಸರಕಾರವು ಈ ಕಟ್ಟಡವನ್ನು ಕಟ್ಟಿಸಿದ ಬಗ್ಗೆ ಹೇಳಿದೆ. ಬ್ರಿಟಿಷರು ಕರ್ನೂಲಿನ ನವಾಬು ಮುಝಪರ್ ಖಾನ್ ಎಂಬುವನನ್ನು ಕ್ರಿ.ಶ. ೧೮೨೩ ರಿಂದ ೧೮೬೪ ರ ವರೆಗೆ ಈ ಕೋಟೆಯಲ್ಲಿ ಬಂಧನದಲ್ಲಿಟ್ಟಿದ್ದರು.

ಬಳ್ಳಾರಿ ಕೋಟೆಯು ನಗರದ ಪಶ್ಚಿಮ ದಿಕ್ಕಿನಲ್ಲಿದೆ. ಈ ಕೋಟೆಯನ್ನು ಬಳಸಿಕೊಂಡು ಗುಂತಕಲ್ಲು ಹೊಸಪೇಟೆ ರೈಲು ಮಾರ್ಗ ದಕ್ಷಿಣ ದಿಕ್ಕಿನಲ್ಲಿ ಸಾಗುತ್ತದೆ. ಉತ್ತರದಲ್ಲಿ ಈ ಕೋಟೆ ಮತ್ತು ಮುಖಬೆಟ್ಟ ಇವುಗಳ ಮಧ್ಯದಲ್ಲಿ ಬಳ್ಳಾರಿ ಹೊಸಪೇಟೆ ರಸ್ತೆ ಸಾಗುತ್ತದೆ. ನಾಲ್ಕೂ ಸುತ್ತಿನ ಕೋಟೆಯ ಹೊಸಕೋಟೆ ಅಥವಾ ಮೊದಲನೆಯ ಕೋಟೆ ಬೆಟ್ಟದ ಪೂರ್ವಕ್ಕಿರುವ ಸಮತಟ್ಟಾದ ಪ್ರದೇಶವನ್ನು ಸುತ್ತುವರೆದು ಬೆಟ್ಟವನ್ನು ಆವರಿಸಿದೆ. ಉಳಿದ ಮೂರು ಸುತ್ತುಗಳು ಬೆಟ್ಟದ ಮೇಲಿವೆ. ಇದರ ಎತ್ತರ ಸಮುದ್ರ ಪಾತಳಿಯಿಂದ ಸುಮಾರು ೧೪೮೬ ಅಡಿ ಇದೆ. ಹೊರ ಕೋಟೆಯ ಸುತ್ತಲೂ ಸುಮಾರು ೨೫ ಅಡಿ ಅಗಲ ಹಾಗೂ ಅಷ್ಟೇ ಆಳವಾದ ಕಂದಕವಿದೆ. ಈ ಕಂದಕಕ್ಕೆ ಆಗ್ನೇಯದ ಕೆರೆಯಿಂದ ನೀರನ್ನು ತುಂಬಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಕಂದಕವನ್ನು ದಾಟಿ ಬರಲು ಶತ್ರುಗಳಿಗೆ ಅಸಾಧ್ಯ. ಈ ಜಿಲ್ಲೆಯ ಯಾವ ಕೋಟೆಯಲ್ಲಿಯೂ ಇಂಥಹ ಕಂದಕ ಕಂಡುಬರುವುದಿಲ್ಲ. ಹೊರಕೋಟೆಯ ಮಧ್ಯ ಭಾಗದಲ್ಲಿ ಕಣಶಿಲೆಯ ಗುಡ್ಡ ಇದೆ. ಈ ಗುಡ್ಡವನ್ನು ದಾಖಲೆಗಳಲ್ಲಿ ಕೋಟೆ ಗುಡ್ಡ ಎಂದೇ ದಾಖಲಿಸಲಾಗಿದೆ. ಈ ಗುಡ್ಡದ ಶಿಖರದ ಎತ್ತರ ೧೯೬೬ ಅಡಿ ಎಂದರೆ ನೆಲಮಟ್ಟದಿಂದ ೪೮೦ ಅಡಿ ಎತ್ತರವಿರುವ ಈ ಗುಡ್ಡ ಅತಿ ಕಡಿದಾದ ಇಳುಕಲ್ಲನ್ನು ಹೊಂದಿದೆ.

ಈ ಕಡಿದಾದ ಇಳುಕಲ್ಲೇ ಕೋಟೆಯನ್ನು ಈ ಗುಡ್ಡದ ಮೇಲೆ ಕಟ್ಟಲು ನಿರ್ಧರಿಸಿರುವುದಕ್ಕೆ ಮೊಟ್ಟ ಮೊದಲ ಕಾರಣ. ಮೇಲೇರಿ ಬರುವ ವೈರಿಗಳ ಸೈನಿಕರನ್ನು ಮೇಲೆ ಇರುವ ಕೋಟೆಯೊಳಗಿನಿಂದಲೇ ಸುಲಭವಾಗಿ ಘಾಸಿಗೊಳಿಸಬಹುದು. ಆದ್ದರಿಂದ ಈ ನಿವೇಶನದ ಆಯ್ಕೆ ನೈತಿಕ ಕಾರ್ಯಾಚರಣೆಯ ದೃಷ್ಟಿಯಿಂದ ಸಮರ್ಪಕವಾಗಿದೆ.

ಈ ನಾಲ್ಕು ಸುತ್ತಿನ ಕೋಟೆಯ ಮೊದಲನೆ ಸುತ್ತಿಗೆ ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಬಾಗಿಲುಗಳಿವೆ. ಪೂರ್ವದ ಬಾಗಿಲು ಸುಮಾರು ೧೫ ಅಡಿ ಎತ್ತರವಿದೆ. ಮೇಲೆ ಸೂರ್ಯಚಂದ್ರ ಹಾಗೂ ಇಳಿಬಿದ್ದ ಪದ್ಮಗಳ ಶಿಲ್ಪಗಳಿವೆ ಬಾಗಿಲುವಾಡದ ಮೇಲೆ ಎರಡು ಕಮಾನಿನ ಅಲಂಕಾರಣೆಗಳಿದ್ದು, ಇದರ ಮೇಲೆ ಉದ್ದಕ್ಕೂ ಕೋಟೆ ತೆನೆಗಳಿವೆ. ಬಾಗಿಲಿಗೆ ಸುಮಾರು ೬ ಅಡಿ ಅಗಲ ಮತ್ತು ೧೫ ಉದ್ದದ ಕಟ್ಟಿಗೆಯ ಕದಗಳನ್ನು ಜೋಡಿಸಲಾಗಿದೆ. ಪ್ರವೇಶದ ಎರಡು ಬದಿಗೆ ಮಂಟಪಗಳ ಹಿಂಭಾಗದಿಂದ ಕೋಟೆಯ ಮೇಲೇರಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಪ್ರವೇಶದ್ವಾರ ಮುಂಭಾಗದ ಎರಡು ಬದಿಗೆ ವೃತ್ತಾಕಾರದ ಸುಮಾರು ೨೦ ಅಡಿ ಎತ್ತರದ ಮರಗೋಡೆಯನ್ನು ನಿರ್ಮಿಸಲಾಗಿದೆ.

ದಕ್ಷಿಣ ಪ್ರವೇಶದ್ವಾರವು ಇದೇ ಲಕ್ಷಣಗಳನ್ನು ಹೋಲುತ್ತದೆ. ಇದಕ್ಕೆ ಪ್ರತ್ಯೇಕ ಉಪಬಾಗಿಲನ್ನು ಮಾತ್ರ ಜೋಡಿಸಲಾಗಿದೆ. ಮುಖ್ಯದ್ವಾರವನ್ನು ಮುಚ್ಚಿದಾಗ ಈ ಉಪಬಾಗಿಲನ್ನು ಬಳಸುತ್ತಿದ್ದರು. ಪ್ರಾಯಶಃ ವಿಜಯನಗರದ ಕಡೆಯಿಂದ ಹೋಗುವವರಿಗಾಗಿ ಈ ದ್ವಾರವನ್ನು ರಚಿಸಿರಬಹುದು. ಈ ಮೊದಲನೆ ಸುತ್ತಿನ ಕೋಟೆಯಿಂದ ಪಾಳೆಯಗಾರರ ಅವಧಿಯ ಜೀವಾಂಜನೇಯ, ಕೋಟೆ ಆಂಜನೇಯ ದೇವಾಲಯಗಳಿವೆ.

ಬೆಟ್ಟದ ಮೇಲೆ ಹತ್ತಲು ಇದರ ಆಗ್ನೇಯ ದಿಕ್ಕಿನಲ್ಲಿ ಮೆಟ್ಟಿಲುಗಳಿವೆ. ಮೆಟ್ಟಿಲುದಾರಿಯ ಪಕ್ಕದಲ್ಲಿ ವಿಜಯನಗರ ಕಾಲದ ಬಸವಣ್ಣ, ದೇವಾಲಯವಿದೆ. ಇದರ ವಿವರಣೆಯನ್ನು ನಂತರ ಕೊಡಲಾಗುವುದು. ಮೆಟ್ಟಿಲುಗಳನ್ನು ಮೇಲೆ ಹತ್ತಿ ಹೋದಾಗ ಕೋಟೆಯ ಎರಡನೆಯ ಸುತ್ತಿನ ಬಾಗಿಲು ಎದುರಾಗುತ್ತದೆ. ಮೊದಲು ಎದುರಾಗುವ ಗೋಡೆಯಲ್ಲಿ ದಕ್ಷಿಣಭಿಮುಖವಾದ ಕಮಾನಿನ ಬಾಗಿಲಿದೆ. ಇದನ್ನು ದಾಟಿ ಬಲಕ್ಕೆ ತಿರುಗಿದಾಗ ಪಶ್ಚಿಮಾಭಿಮುಖವಾದ ದೊಡ್ಡ ಬಾಗಿಲಿದೆ. ಕಂಬ ತೊಲೆಗಳ ಬಾಗಿಲಿನಲ್ಲಿ ಅಲಂಕಾರಕ್ಕಾಗಿ ಕಮಾನನ್ನು ಬಳಸಿದೆ. ಬಾಗಿಲು ತೋಳುಗಳ ಮೇಲೆ ಪುಷ್ಪಬೋದಿಗೆಗಳಿವೆ. ಪ್ರವೇಶದ ಎರಡು ಬದಿಯಲ್ಲಿರುವ ಕಟ್ಟಿಯ ಮೇಲೆ ಎರಡೆರಡು ಅಷ್ಟ ಭುಜಾಕೃತಿಯ ಕಂಬಗಳಿವೆ. ದಕ್ಷಿಣ ಕಟ್ಟೆಯ ಹೊರಗೋಡೆಯಲ್ಲಿ ಮುಂದೆ ಚಾಚಿದ ಬಾಲ್ಕನಿಯಿದೆ. ಇದರ ಒಳಗೆ ಕುಳಿತು ಕಿಂಡಿಗಳ ಮೂಲಕ ಹೊರಗೆ ನೋಡಿದರೆ ಶತ್ರುಗಳ ಬರುವಿಕೆಯನ್ನು ಗುರುತಿಸಬಹುದು. ಉತ್ತರ ದಿಕ್ಕಿಗೆ ಒಂದು ಚಿಕ್ಕ ಬಾಗಿಲನ್ನು ಜೋಡಿಸಲಾಗಿದೆ. ಮೆಟ್ಟಿಲುಗಳನ್ನು ಹತ್ತಿ ಮುಂದೆ ಹೋದಾಗ ಎರಡನೆಯ ಕೋಟೆಯಲ್ಲಿ ಒಂದು ವಿಶಿಷ್ಟ ರಚನೆಯ ಕೊತ್ತಳವಿದೆ. ವೃತಾಕಾರದ ಈ ಕೊತ್ತಳದ ಮಧ್ಯದಲ್ಲಿ ಎರಡು ಚೌಕ ಮತ್ತು ಎರಡು ಅಷ್ಟಭುಜಾಕೃತಿಯ ಭಾಗಗಳನ್ನುಳ್ಳ ದಪ್ಪನೆಯ ಕಂಬವಿದೆ. ಈ ಕಂಬದ ಮೇಲೆ ವೃತಾಕಾರದ ತಲೆಭಾಗವಿದೆ. ಇದರ ಮೇಲೆ ಎಂಟು ದಿಕ್ಕಿಗೆ ಚಾಚಿದ ಎಂಟು ತೊಲೆಗಳಿವೆ. ತೊಲೆಗಳ ಮತ್ತೊಂದು ತುದಿಯನ್ನು ವೃತ್ತಾಕಾರದ ಗೋಡೆಯಲ್ಲಿಯೂ ಅರೆಗಂಬಗಳು ಹೊತ್ತಿವೆ. ಈ ಕೊತ್ತಳದ ಒಳಗೆ ಪ್ರವೇಶಿಸಲು ಬಾಗಿಲು ಹಾಗೂ ಸುತ್ತಲು ಅಂಬುಗಂಡಿಗಳಿವೆ.

ಮುಂದೆ ಪಶ್ಚಿಮಕ್ಕೆ ಮೆಟ್ಟಿಲುಗಳ ಮೂಲಕ ಮೇಲೆ ಹೋಗುವಾಗ ನಿಸರ್ಗ ನಿರ್ಮಿತವಾದ ದೊಡ್ಡ ದೊಡ್ಡ ಬಂಡೆಗಳ ಆಶ್ರಯದಲ್ಲಿ ವಿಶ್ರಾಂತಿ ತಾಣಗಳಿವೆ. ಸೈನಿಕರು ಬೇಸಿಗೆಯಲ್ಲಿ ಇಲ್ಲಿ ಕುಳಿತು ವಿಶ್ರಮಿಸುತ್ತಿರಬಹುದು. ಹಾಗಾಗಿ ಈ ಬಂಡೆಗಳು ಸವೆದಿವೆ. ಇಲ್ಲಿಂದ ನಂತರ ಬರುವುದೇ ಮೂರನೇ ಸುತ್ತಿನ ಕೋಟೆ ಬಾಗಿಲು.

ಇದು ಪೂರ್ವಾಭಿಮುಖವಾಗಿದ್ದು ಸುಮಾರು ೨೫ ಅಡಿ ಎತ್ತರ ೧೫ ಅಡಿ ಅಗಲವಾಗಿದೆ. ಈ ಬಾಗಿಲಿಗೆ ನಾಲ್ಕು ಹಂತದ ತೋಳುಗಳನ್ನು ಬಳಸಲಾಗಿದೆ. ಇವುಗಳ ಮೇಲ್ತುದಿಯಲ್ಲಿ ಇಳಿಬಿದ್ದ ಪದ್ಮಗಳಿವೆ. ಉತ್ತರಂಗದ ಮೇಲೆ ಸೂರ್ಯ ಚಂದ್ರ ಪುಷ್ಪಗಳ ಶಿಲ್ಪಗಳಿವೆ. ಈ ಬಾಗಿಲಿಗೆ ಕಮಾನಿನ ಅಲಂಕಾರವಿದೆ. ಇದರ ಬಲಭಾಗದ ಗೋಡೆಯಲ್ಲಿ ಮಿಥುನಶಿಲ್ಪ ಹಾಗೂ ಹಂಸಗಳ ಉಬ್ಬುಗೆತ್ತನೆಗಳಿವೆ. ಸುಂದರವಾದ ಈ ಬಾಗಿಲಿಗೆ ಆಸರೆ ಆಗದಿರಲೆಂದೇ ಪ್ರಾಯಶಃ ಗೋಡೆಯಲ್ಲಿ ಮಿಥಿನಶಿಲ್ಪ ಕೆತ್ತಿರಬಹುದು. ಈ ಶಿಲ್ಪದ ಭಾಗದಲ್ಲಿ ಉದ್ದನೆಯ ಬಂದೂಕು ಕಿಂಡಿಗಳಿವೆ. ಪ್ರವೇಶದ ಎರಡು ಬದಿಗೆ ಮಂಟಪಗಳಿವೆ. ಇದರಲ್ಲಿ ಅಷ್ಟಭುಜಾಕೃತಿಯ ಎರಡೆರಡು ಕಂಬಗಳಿವೆ. ಹಿಂಭಾಗದಿಂದ ಈ ಬಾಗಿಲನ್ನು ನೋಡಿದರೆ ಕಮಾನಿನಾಕಾರದಲ್ಲಿದೆ. ಇದರ ವಾಯುವ್ಯ ದಿಕ್ಕಿಗೆ ಸುಮಾರು ಒಂದು ಕಿ.ಮೀ. ದೂರದಲ್ಲಿ ಇನ್ನೊಂದು ದೊಡ್ಡ ಬಾಗಿಲಿದ್ದು ಪಶ್ಚಿಮಾಭಿಮುಖವಾಗಿದೆ. ಕಂಬ ತೊಲೆಗಳ ಈ ಬಾಗಿಲ ಮುಂದಿರುವ ದೊಡ್ಡ ವರ್ತುಲಾಕಾರದ ಕೊತ್ತಳವು ಬಾಗಿಲನ್ನು ಮರೆಮಾಡಿದೆ. ಪ್ರವೇಶದ ಬಲಕಟ್ಟೆಯ ಮೇಲೆ ಎರಡು ಮತ್ತು ಎಡಬದಿಯ ಕಟ್ಟೆಯ ಮೇಲೆ ನಾಲ್ಕು ಚೌಕ ಮತ್ತು ಒಂದು ಅಷ್ಟ ಭುಜಾಕೃತಿಯ ಕಂಬಗಳಿವೆ. ಇದೇ ಮೂರನೇ ಸುತ್ತಿನ ಕೋಟೆ ಗೋಡೆಯ ಮಧ್ಯದಲ್ಲಿಯ ಒಂದು ದೊಡ್ಡ ಬಂಡೆಯ ಆಸರೆಯಡಿಯಲ್ಲಿ ಮೊಸಳೆ ಮತ್ತು ನಾಗಗಳನ್ನು ಬಂಡೆಯ ಮೇಲೆ ಕೆತ್ತಿದೆ.

ಇದರ ಪೂರ್ವದ ಕೋಟೆ ಗೋಡೆಯ ನಂತರ ಒಂದು ದೊಡ್ಡ ನೀರಿನ ಕೊಳವಿದೆ. ಇದು ೨೯ ಅಡಿ ಆಳವಾಗಿದೆ. ಈ ಕೊಳದ ದಂಡೆಯ ಮೇಲೆ ಕಂಬಗಳುಳ್ಳ ಎರಡು ದೊಡ್ಡ ಮಂಟಪಗಳಿವೆ. ಮುಂದೆ ಉತ್ತರಕ್ಕೆ ಸಾಗಿದರೆ ಮತ್ತೊಂದು ಮಂಟಪ ಕಂಡುಬರುತ್ತದೆ.

ಕೋಟೆಯ ಉತ್ತರಭಾಗದಲ್ಲಿ ಮೂರನೆಯ ನಾಲ್ಕನೆಯ ಕೋಟೆಗಳ ಮಧ್ಯದಲ್ಲಿ ನೀರಿನ ಕೊಳಗಳಿವೆ. ಎರಡು ದೇವಾಲಯಗಳ ಮತ್ತು ಹನ್ನೊಂದು ಇಟ್ಟಿಗೆ ಗಾರೆ ಕಟ್ಟಡಗಳಿವೆ. ನೈಸರ್ಗಿಕವಾದ ಕೊಳಗಳಲ್ಲಿ ಕೆಲವು ಬಹಳ ಉದ್ದ ಮತ್ತು ಆಳವಾಗಿವೆ. ಎರಡು ಚಿಕ್ಕ ದೇವಾಲಯಗಳು ಅಕ್ಕಪಕ್ಕದಲ್ಲಿವೆ. ಇವು ಕುರುಗೋಡು ಸಿಂದರ ಕಾಲದವು. ಇವುಗಳ ವಿವರಗಳನ್ನು ಮುಂದೆ ನೀಡಲಾಗಿದೆ.

ನಾಲ್ಕನೆಯ ಅಥವಾ ಕೊನೆಯ ಕೋಟೆಯಲ್ಲಿ ದಕ್ಷಿಣ ಮತ್ತು ಪೂರ್ವದಿಕ್ಕಿಗೆ ಒಂದೊಂದು ಬಾಗಿಲುಗಳಿವೆ. ದಕ್ಷಿಣ ಪ್ರವೇಶದ ಮುಂಭಾಗದಲ್ಲಿ ಇಳಿಜಾರಾದ ಸುಮಾರು ೧೦೦ ಅಡಿ ಉದ್ದ ಮತ್ತು ೩೦ ಅಡಿ ಅಗಲದ ಕಲ್ಲು ಹಾಸಿನ ದಾರಿಯಿದೆ. ಇದರ ಎರಡು ಬದಿಗೆ ಮೆಟ್ಟಿಲುಗಳಿವೆ. ಈ ಬಾಗಿಲು ಕಮಾನಿನ ಅಲಂಕರಣೆಯನ್ನು ಹೊಂದಿದೆ. ಉತ್ತರಂಗದ ಕೆಳಗೆ ಇಳಿಬಿದ್ದ ಪದ್ಮಗಳಿವೆ. ಅದರ ಇಕ್ಕೆಲಗಳ ಗೋಡೆಗಳಲ್ಲಿ ಬಂದೂಕು ಕಿಂಡಿಗಳು ಹಾಗೂ ಮೇಲ್ಭಾಗದಲ್ಲಿ ಕೋಟೆ ತೆನೆಗಳಿವೆ. ಪ್ರವೇಶದ ಎರಡು ಬದಿಗೆ ಕಟ್ಟೆಯ ಮೇಲೆ ಕಂಬ ತೊಲೆಯ ಬಾಗಿಲುಗಳನ್ನು ಕಮಾನಿನಿಂದ ಅಲಂಕರಿಸಿದೆ.

ದಕ್ಷಿಣ ಬಾಗಿಲಿನಿಂದ ಶತ್ರುಗಳು ಈ ಕೋಟೆಯನ್ನು ಆಕ್ರಮಿಸಿದರೆ ಪೂರ್ವಬಾಗಿಲಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಪೂರ್ವದ ಬಾಗಿಲನ್ನು ನಿರ್ಮಿಸಲಾಗಿದೆ. ನಾಲ್ಕನೆಯ ಈ ಒಳಕೋಟೆ ತುಂಬ ಚಿಕ್ಕದಿದ್ದು ಇದರ ಸುತ್ತಲೂ ಎತ್ತರವಾದ ಆರು ಕೊತ್ತಳಗಳಿವೆ. ಶತ್ರುಗಳು ಕೆಳಕೋಟೆಯನ್ನು ವಶಪಡಿಸಿಕೊಳ್ಳುತ್ತಾ ಮೇಲೆ ಬಂದಂತೆ ಈ ಕೋಟೆಯಲ್ಲಿ ಅಡಗಿಕೊಳ್ಳಲು ಅಥವಾ ತಪ್ಪಿಸಿಕೊಳ್ಳಲು ಅನುಕೂಲವಾಗಿದೆ. ಇದರ ಆಗ್ನೇಯ ದಿಕ್ಕಿನಲ್ಲಿ ಮದ್ದುಗುಂಡುಗಳನ್ನು ಹಾಗೂ ಕುದುರೆಗಳನ್ನು ರಕ್ಷಿಸಿಡಲು ಅನುಕೂಲವಾಗುವಂತೆ ಮನೆಗಳನ್ನು ಕಟ್ಟಲಾಗಿದೆ. ಕೋಟೆಯೊಳಗೆ ಬೃಹತ್ ಆಕಾರದ ಕಟ್ಟಡಗಳನ್ನೇ ಅರಮನೆಗಳೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಸಿ.ಎಸ್. ಪಾಟೀಲರು ಈ ಕಟ್ಟಡಗಳನ್ನು ಕಣಜಗಳೆಂದು ಕರೆದಿದ್ದಾರೆ.[20] ರಕ್ಷಿತವಾದ ಈ ಪ್ರದೇಶ ಹಾಗೂ ಇದರೊಳಗೆ ಇರುವ ನೀರಿನ ಕೊಳ, ದೇವಸ್ಥಾನಗಳನ್ನು ನೋಡಿದರೆ ಇದು ಅರಮನೆ ಪ್ರದೇಶವಾಗಿರಬಹುದೆಂದು ಖಚಿತವಾಗುತ್ತದೆ.

ಹೊರಕೋಟೆಯನ್ನು ದಪ್ಪಕಲ್ಲಿನಿಂದ ಚೌಕಾಕಾರ ಮತ್ತು ವರ್ತುಲಾಕಾರದ ಕೊತ್ತಳಗಳಿವೆ. ಗೋಡೆಯಲ್ಲಿ ಬಂದೂಕು ಕಿಂಡಿಗಳಿವೆ. ಕೊತ್ತಳಗಳ ಮೇಲಿನ ಇಟ್ಟಿಗೆ ಮತ್ತು ಗಾರೆಯ ದಪ್ಪವಾದ ಕೈಪಿಡಿ ಗೋಡೆಯಲ್ಲಿ ತೋಪುಗಳಿಗಾಗಿ ಬಿಟ್ಟ ಸಂದಿಗಳಿವೆ. ರೈಲ್ವೆ ಹಳಿಯ ಮೇಲಿನ ಸೇತುವೆಯ ಹತ್ತಿರದ ಚೌಕಾಕಾರದ ಕೊತ್ತಳದ ಕಲ್ಲಿನ ಮೇಲೆ ನಾಗರಹಾವಿನ ಬಾಲವನ್ನು ಹಿಡಿದಿರುವ ಮಂಗದ ಶಿಲ್ಪವಿದೆ. ಈ ಕೊತ್ತಳದ ಹತ್ತಿರ ಕೋಟೆ ಗೋಡೆಯ ಮೇಲೆ ಕಾಳಿಂಗಮರ್ದನ ಕೃಷ್ಣ ಮತ್ತು ಎರಡು ಹುಲಿಗಳ ಶಿಲ್ಪಗಳಿವೆ.

ಬೆಟ್ಟದ ಮೇಲಿನ ಕೋಟೆಯ ಕೈಪಿಡಿ ಗೋಡೆಯನ್ನು ಇಟ್ಟಿಗೆ ಗಾರೆಯಿಂದ ಕಟ್ಟಿದ. ಅಗಲವಾದ ಕೈಪಿಡಿ ಗೋಡೆ ಹೊರಭಾಗದಲ್ಲಿ ಇಳಿಜಾರಾಗಿದೆ. ಇದರಲ್ಲಿ ಬಂದೂಕು ಕಿಂಡಿಗಳಿವೆ. ಕೊತ್ತಳಗಳ ಕೈಪಿಡಿ ಗೋಡೆಯಲ್ಲಿ ತೋಪುಗಳಿಗಾಗಿ ಬಿಟ್ಟ ಅಗಲವಾದ ಸಂದಿಗಳಿವೆ. ಕೆಲವು ಕೊತ್ತಳಗಳ ಮೇಲೆ ಗಾರೆಯಿಂದ ನಿರ್ಮಿಸಿದ ನೀರಿನ ಚಿಕ್ಕ ತೊಟ್ಟಿ ಮತ್ತು ಗೋಡೆಯಲ್ಲಿ ಕಾವಲುಗಾರರ ಕೊಠಡಿ ಗೂಡುಗಳಿವೆ. ಕೆಲವು ನೀರಿನ ತೊಟ್ಟಿಗಳು ಸುಂದರವಾದ ಜ್ಯಾಮಿತಿ ವಿನ್ಯಾಸದಿಂದ ಕೂಡಿದೆ.

ಈ ಕೋಟೆಯು ೧.೫ ಕಿ.ಮೀ. ಸುತ್ತಳತೆಯಿಂದ ಕೂಡಿದ್ದು, ಇದರ ಪಶ್ಚಿಮದಲ್ಲಿ ಅತಿ ಕಡಿದಾದ ಇಳುಕಲ್ಲುನ್ನು ಹೊಂದಿದೆ. ಈ ಕಡಿದಾದ ಇಳುಕಲ್ಲೇ ಈ ಕೋಟೆಯನ್ನು ನಿರ್ಮಿಸಲು ಕಾರಣವಾಗಿದೆ. ದೂರದಿಂದ ಏಕಶಿಲಾ ಬೆಟ್ಟದಂತೆ ಕಾಣುವ ಈ ಕಣಶಿಲೆಯ ಬೆಟ್ಟವನ್ನು ಭೂವೈಜ್ಞಾನಿಕ ನಿಯೋಗಿಗಳು ಹಲವಾರು ಕಡೆಗಳಲ್ಲಿ ಕೆಲವು ದಿಕ್ಕುಗಳಲ್ಲಿ ಛೇದಿಸಿವೆ. ಈ ಬೆಟ್ಟ ಪೂರ್ವಭಾಗವು ಛೇದಿತವಾಗಿ ಕಡಿದಾದ ದೊಡ್ಡ ಗುಂಡುಗಳಿಂದ ಕೂಡಿದೆ. ಎಂಥ ಬಲವಾದ ಗುಂಡುಗಳ ಮಧ್ಯದಲ್ಲಿ ಇರುವ ಖಾಲಿಜಾಗದಲ್ಲಿ ಬಲವಾದ ಕೋಟೆ ಗೋಡೆಯನ್ನು ಕಟ್ಟಲಾಗಿದೆ.

ಈ ಕೋಟೆಯೊಳಗೆ ಹೋಗಬೇಕಾರದೆ ಕಟ್ಟಲಾಗಿರುವ ಮೆಟ್ಟಿಲುಗಳನ್ನು ಮೇಲೇರಿಯೇ ಹೋಗಬೇಕು. ಈ ಮೆಟ್ಟಿಲುಗಳ ದಾರಿಯನ್ನು ಮುಚ್ಚಿದರೆ ಒಳಗೆ ಪ್ರವೇಶವಿಲ್ಲ. ಇದು ರಕ್ಷಣೆಯ ಬಹುಮುಖ್ಯವಾದ ಅಂಶ. ಬೆಟ್ಟದ ಹಲವು ಕಡೆ ಬಹುದೊಡ್ಡ ಗುಂಡುಗಳು ಒಂದಕ್ಕೊಂದು ಮೇಲೆ ಸೇರಿ ಕೆಳಗಡೆ ಪೊಳ್ಳನ್ನು ನಿರ್ಮಿಸಿವೆ. ಈ ವೈಶಿಷ್ಟತೆಗಳನ್ನು ಈ ಕೋಟೆಯನ್ನು ಯೋಜಿಸಿದ ರೂವಾರಿಗಳು ಅತ್ಯಂತ ಬುದ್ಧಿವಂತಿಕೆಯಿಂದ ತಮ್ಮ ರಕ್ಷಣಾ ಬೆರಳುಕಚ್ಚಿ ಮುತ್ತಿಗೆಗೆ ಮಂದಿ ಸಾಲದೆಂದು ಉದ್ಗಾರ ತೆಗೆದಿದ್ದಾನೆ.[21]

ಹೈದರಾಲಿಯು ಬಳ್ಳಾರಿ ಕೋಟೆಗೆ ಮುತ್ತಿಗೆ ಹಾಕಿದ್ದಾಗ ಗುಡ್ಡದ ದಕ್ಷಿಣಕ್ಕೆ ರಾಯದುರ್ಗದ ದಂಡನ್ನು ನೇಮಿಸಿದ. ಬಾಕಿ ಉಳಿದ ಮೂರೂ ದಿಕ್ಕುಗಳಿಗೆ ಒಂದು ಲಕ್ಷ ಕಾಲುದಾಳ, ನಲವತ್ತು ಸಾವಿರ ಅಶ್ವದಳ, ಐದು ನೂರು ಒಂಟೆ ದಳ, ಒಂದು ನೂರು ಗಜ ದಳ, ನೇಮಕ ಮಾಡಿದ್ದು, ಯುದ್ಧದಲ್ಲಿ ಒಂದು ನೂರು ಪಿರಂಗಿಗಳನ್ನು ಬಳಸಿದೆ. ಆನೆಯ ಮೇಲೇರಿ ಸ್ವತಃ ಯುದ್ಧ ಮಾಡಿದರೂ ಕೋಟೆ ಇವನಿಗೆ ಸುಲಭವಾಗಿ ದಕ್ಕಲಿಲ್ಲ.[22] ಹೀಗೆ ಇದೊಂದು ಅಭೇದ್ಯವಾದ ಗಿರಿದುರ್ಗವಾಗಿದೆ.

ಈ ಕೋಟೆಯ ಮಹತ್ವ ಹೆಚ್ಚಾಗಲು ಅಲ್ಲಿಯ ನೀರಿನ ವ್ಯವಸ್ಥೆಯು ಕಾರಣ. ಇಲ್ಲಿ ನೀರಿನ ಸಂಗ್ರಹದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಮಳೆ ನೀರನೂ ಹರಿದು ಬರುವ ಮೇಲು ಜಲವನ್ನೂ ಬಹು ಜಾಣ್ಮೆಯಿಂದ ಕೋಟೆಯ ಭದ್ರತೆಗಾಗಿ ಹಾಗೂ ಜಲಪೂರೈಕೆಗಾಗಿ ಉಪಯೋಗಿಸಿದ್ದಾರೆ. ಈ ಬೆಟ್ಟದ ಮೇಲೆ ಅಲ್ಲಲ್ಲಿ ಗುಂಡುಗಳಿದ್ದರೂ ಇದು ಹಾಸು ಬಂಡೆಯ ಪ್ರಸ್ತಭೂಮಿಯೇ ಆಗಿದೆ.

ಪ್ರಾಕೃತಿಕ ಕ್ರಿಯೆಗಳಿಂದಾಗಿ ಕಣಶಿಲೆಯಲ್ಲಿ ಬೋಗಣಿಗಳು ಮತ್ತು ಹೊಂಡಗಳು ನಿರ್ಮಾಣವಾಗಿದೆ. ಹಲವು ಬೋಗಣಿಗಳು ಒಂದೆರಡು ಅಡಿಗಳಷ್ಟು ಅಗಲವಾಗಿದ್ದರೆ ಮತ್ತೆ ಕೆಲವು ೨೦ ರಿಂದ ೩೦ ಅಡಿಗಳಷ್ಟು ಅಗಲವಾಗಿವೆ. ಇವುಗಳ ಆಳಗಳು ಕೂಡ ಒಂದೆರಡು ಅಡಿಗಳಿಂದ ೫-೧೦ ಅಡಿಗಳವರೆಗೆ ಇವೆ. ಇವುಗಳಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ. ಕೆಲವು ಕಡೆ ಅವಶ್ಯಕತೆ ಇದ್ದಲ್ಲಿ ಅಡ್ಡ ಕಟ್ಟೆಗಳನ್ನು ನಿರ್ಮಿಸಿ ನೀರು ಹರಿದುಹೋಗದಂತೆ ಮಾಡಲಾಗಿದೆ. ಈ ಬೋಗಣಿಗಳನ್ನು ಹೊಂಡಗಳನ್ನು, ನೀರಿನ ಸಂಗ್ರಹಣೆಗಾಗಿ ಟ್ಯಾಂಕುಗಳಂತೆ ಬಳಸಲಾಗಿದೆ.[23]

ಕೋಟೆಯ ಉತ್ತರಭಾಗದಲ್ಲಿ ಮೂರನೆಯ ನಾಲ್ಕನೆಯ ಕೋಟೆಯ ಮಧ್ಯದಲ್ಲಿ ಎರಡು ಚಿಕ್ಕದೇವಾಲಯಗಳು ಅಕ್ಕಪಕ್ಕದಲ್ಲಿವೆ. ಇವು ಕುರುಗೋಡು ಸಿಂದರ ಕಾಲದವು. ದೇವಾಲಯಗಳ ಅಧಿಷ್ಟಾನದಲ್ಲಿ ಪದ್ಮೋಪಾನ, ತ್ರಿಪಟ್ಟ ಕುಮುದ ಮತ್ತು ಕೂಡು ಉಬ್ಬುಗಳುಳ್ಳ ಕಪೋತ ಇವೆ. ಗೋಡೆಯ ಮೇಲೆ ಅರೆಗಂಬಗಳ ಅಲಂಕಾರವಿದೆ. ಗೋಡೆಯ ಮೇಲಿನ ಕಪೋತದ ಕೆಳಗೆ ಹಂಸಗಳ ಸಾಲಿನ ಉಬ್ಬುಶಿಲ್ಪಗಳಿವೆ. ಮೇಲೆ ಮೆಟ್ಟಿಲುಗಳ ಆಕಾರದಲ್ಲಿ ಕಟ್ಟಿದ ಇಟ್ಟಿಗೆಯ ಗೋಪುರವಿದೆ. ಈ ದೇವಾಲಯಗಳು ಗರ್ಭಗೃಹ ಮತ್ತು ಅಂತರಾಳವನ್ನು ಮಾತ್ರ ಹೊಂದಿವೆ. ಇವುಗಳ ಪೈಕಿ ಒಂದರಲ್ಲಿ ವರ್ತುಲಾಕಾರದ ಪೀಠವೂ ಮತ್ತೊಂದರಲ್ಲಿ ಚೌಕಾಕಾರದ ಪೀಠವೂ ಬಿದ್ದಿವೆ. ಅಂತರಾಳದ ಬಾಗಿಲಿನಲ್ಲಿ ಆರು ಶಾಖೆಗಳಿವೆ. ಅವುಗಳಲ್ಲಿ ಒಂದರಲ್ಲಿ ಚಿಕ್ಕ ಉಬ್ಬುಶಿಲ್ಪಗಳಿವೆ. ಬಾಗಿಲ ಲಲಾಟ ಬಿಂಬದಲ್ಲಿ ಗಜಲಕ್ಷ್ಮಿಯ ಶಿಲ್ಪಗಳಿವೆ. ದಕ್ಷಿಣಕ್ಕಿರುವ ದೇವಾಲಯದ ಬಾಗಿಲ ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ದ್ವಾರದ ಇಕ್ಕೆಲದ ಗೋಡೆಗಳಲ್ಲಿ ಅರೆಗಂಬಗಳಿವೆ. ಇವುಗಳ ಮಧ್ಯದಲ್ಲಿ ಆಯತಾಕಾರದ ಮೂರು ಅಂಕಣಗಳಲ್ಲಿ ಶಿಲ್ಪಗಳು ಕಂಡುಬರುತ್ತವೆ. ದಕ್ಷಿಣ ದೇವಾಲಯದ ಮುಂದೆ ಎತ್ತರವಾದ ದೀಪಸ್ತಂಭವಿದೆ. ಚೌಕ ಮತ್ತು ಅಷ್ಟಬುಜಾಕೃತಿಯ ಭಾಗಗಳುಳ್ಳ ಈ ಕಂಬದ ಮೇಲೆ ವೃತ್ತಾಕಾರದ ತಲೆಭಾಗವಿದೆ. ಕಂಬದ ಕೆಳಭಾಗದ ಪಶ್ಚಿಮ ಬದಿಯಲ್ಲಿ ಒಬ್ಬ ಭಕ್ತನು ಕೈಮುಗಿದು ನಿಂತಿದ್ದಾನೆ. ಉತ್ತರ ಬದಿಯಲ್ಲಿ ಕೈ ಮುಗಿದು ನಿಂತ ದಂಪತಿಯರು, ದಕ್ಷಿಣ ಬದಿಯಲ್ಲಿ ಆಂಜನೇಯ ಮತ್ತು ಪೂರ್ವ ಬದಿಯಲ್ಲಿ ಕನ್ನಡ ಶಾಸನ ಇವೆ. ಈ ದೇವಾಲಯದ ಶೈಲಿಯನ್ನೆ ಹೋಲುವ ನಾಲ್ಕಾರು ದೇವಾಲಯಗಳು ಕುರುಗೋಡಿನಲ್ಲಿ ಕಂಡುಬರುತ್ತವೆ. ಕುರುಗೋಡಿನಲ್ಲಿ ದೇವಾಲಯಗಳನ್ನು ನಿರ್ಮಿಸಿದ ಅವಧಿಯಲ್ಲಿಯೇ ಬಳ್ಳಾರಿ ಹುಟ್ಟಿದ ಮೇಲೆ ಈ ಜೋಡಿ ದೇವಾಲಯಗಳನ್ನು ನಿರ್ಮಿಸಿರಬೇಕು. ಚಾಲುಕ್ಯ ಮಂಡಳೇಶ್ವರ ಒಂದನೆಯ ರಾಚಮಲ್ಲನೇ ಈ ದೇವಾಲಯಗಳನ್ನು ನಿರ್ಮಿಸಿದ್ದಾನೆಂದು ಸಿ.ಆರ್.ಶ್ಯಾಮಲ ಅವರು ಅಭಿಪ್ರಾಯ ಪಟ್ಟಿದ್ದಾರೆ.[24] ನಂತರ ಇವು ಜೀರ್ಣೋದ್ಧಾರಗೊಂಡಿವೆ.

ಈ ಜೋಡಿ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಹನ್ನೊಂದು ಗಾರೆ ಕಟ್ಟಡಗಳಿವೆ. ಇವುಗಳನ್ನು ಎರಡನೆಯ ಬಲ್ಲಾಳನು ಕಟ್ಟಿಸಿದ ಜೈನ ದೇವಾಲಯಗಳಾಗಿರಬೇಕೆಂದು ಸಿ.ಆರ್. ಶ್ಯಾಮಲರವರ ಅಭಿಪ್ರಾಯ ಪಡುತ್ತಾರೆ.[25] ಈ ಊಹೆಗೆ ಯಾವುದೇ ಆಧಾರಗಳಿಲ್ಲ. ಕೈಫಿಯತ್ತಿನಲ್ಲಿ ಸಿಂಧೂ ಬಲ್ಲಾಳನು ಈ ಪರ್ವತಕ್ಕೆ ಪೂರ್ವಭಾಗದಲ್ಲಿ ಜೈನ ಬಸದಿಗಳನ್ನು ಕಟ್ಟಿಸಿದಂತೆ ಹೇಳಿದೆ.[26] ಈ ಪ್ರದೇಶ ಅಲ್ಲದೆ ಇದರ ವಾಯುವ್ಯ ಭಾಗಕ್ಕೆ ನಾಲ್ಕನೇ ಸುತ್ತಿನ ಕೋಟೆಯಲ್ಲಿ ಅರಮನೆಯಂತಹ ಕಟ್ಟಡಗಳಿರುವುದರಿಂದ ರಾಜಪರಿವಾರದವರ ರಕ್ಷಣೆ ಮಾಡುವ ಕಾವಲುಗಾರ ಅಥವಾ ಸೈನಿಕರ ವಾಸದ ಮನೆಗಳು ಇವಾಗಿರಬೇಕು. ಈ ಕಟ್ಟಡಗಳಿಗೆ ಇಟ್ಟಿಗೆ ಗಾರೆಯನ್ನು ಮಾತ್ರ ಬಳಸಿದ್ದು ಇವು ಇತ್ತೀಚಿನ ಅಂದರೆ ಸುಮಾರು ೩೦೦ ವರ್ಷ ಹಿಂದಿನವುಗಳಾಗಿವೆ. ಅಲ್ಲದೆ ಇಲ್ಲಿ ಹತ್ತಿರದಲ್ಲೇ ಈ ಕಟ್ಟಡಗಳ ಶೈಲಿಯನ್ನು ಹೋಲುವ ಒಂದು ಕಣಜವಿದೆ. ಇವು ಸಂಡೂರು ಕೃಷ್ಣನಗರ ಕೋಟೆಯೊಳಗಿನ ಕಣಜವು ನಿರ್ಮಾಣವಾಗಿರಬೇಕು. ನಾಲ್ಕನೇ ಕೋಟೆಯ ಆಗ್ನೇಯ ದಿಕ್ಕಿನಲ್ಲಿ ಒಂದು ಚಿಕ್ಕ ದೇವಾಲಯವಿದೆ. ದಕ್ಷಿಣಾಭಿಮುಖವಾಗಿರುವ ಇದು ಗರ್ಭಗೃಹ ತೆರೆದ ಸಭಾಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ಯಾವುದೇ ಮೂರ್ತಿಗಳಿಲ್ಲ. ಈ ದೇಗುಲದ ಹತ್ತಿರದಲ್ಲಿ ಬಿದ್ದಿರುವ ದೀಪಸ್ತಂಭದ ಕೆಳಭಾಗದಲ್ಲಿ ಆಂಜನೇಯ ಶಿಲ್ಪವಿದೆ. ಸಾಮಾನ್ಯವಾಗಿ ಆಂಜನೇಯ ದೇವಾಲಯಗಳು ದಕ್ಷಿಣಾಭಿಮುಖವಾಗಿರುವುದರಿಂದ ಇದು ಆಂಜನೇಯ ದೇವಾಲಯವಾಗಿರಬೇಕು. ಕ್ರಿ.ಶ. ೧೭೮೦ರ ಕುರುಗೋಡು ಶಾಸನವು ನವಾಬ ಹೈದರಾಲಿಖಾನನು ಹನುಮಂತ ದೇವರ ಗುಡಿ ಕಟ್ಟಿಸಿದಂತೆ ಹೇಳುತ್ತದೆ.[27] ಈ ದೇವಾಲಯದ ಪೂರ್ವಕ್ಕೆ ಕಣಜವಿದೆ. ಇದರಲ್ಲಿ ಕುದುರೆಗಳನ್ನು ಕಟ್ಟುತಿದ್ದರೆಂದು ಪ್ರತೀತಿ. ಪಶ್ಚಿಮಾಭಿಮುಖವಾಗಿರುವ ಇದಕ್ಕೆ ಎರಡು ಪ್ರವೇಶ ದ್ವಾರಗಳಿವೆ. ಮಧ್ಯದಲ್ಲಿ ನಾಲ್ಕು ಕಂಬಗಳಿವೆ. ಒಳಗಿನ ಕತ್ತಲನ್ನು ಹೋಗಲಾಡಿಸುವುದಕ್ಕಾಗಿ ಬೆಳಕಿಂಡಿಗಳನ್ನು ಇಡಲಾಗಿದೆ.

ಹೊರಕೋಟೆಯ ಆವರಣದ ವಾಯುವ್ಯ ಭಾಗದಲ್ಲಿ ವಿಜಯನಗರ ಕಾಲದ ಕೋಟೆ ಮಲ್ಲೇಶ್ವರ ದೇವಾಲಯವಿದೆ. ದೇವಾಲಯದ ಪ್ರಕಾರದ ಒಳಬದಿಯಲ್ಲಿ ಅರವತ್ತುಮೂರು ಪುರಾತನ ಶಿವಶರಣರ ಮತ್ತು ಶಿವಲೀಲೆಯ ಉಬ್ಬುಶಿಲ್ಪಗಳಿವೆ. ಇದರಲ್ಲಿ ಮಲ್ಲಶೆಟ್ಟಿ ಬಳ್ಳವನ್ನು ಪೂಜಿಸುತ್ತಿರುವ ಚಿತ್ರವನ್ನು ಕಡೆಯಲಾಗಿದೆ. ಬೆಟ್ಟದ ಆಗ್ನೇಯ ದಿಕ್ಕಿನಲ್ಲಿ ಪೂರ್ವಾಭಿಮುಖವಾದ ಬಸವಣ್ಣ ದೇವಾಲಯವಿದೆ. ಇದು ಗರ್ಭಗೃಹ, ಸಭಾಮಂಟಪ ಮತ್ತು ಮುಖ ಮಂಟಪಗಳನ್ನು ಹೊಂದಿವೆ. ಗರ್ಭಗೃಹದಲ್ಲಿ ನಂದಿಶಿಲ್ಪವಿದ್ದು ಇದರ ಪ್ರವೇಶದ ಎರಡು ಬದಿಗೆ ಶೈವ ದ್ವಾರಪಾಲಕರ ಶಿಲ್ಪಗಳಿವೆ. ಸಭಾಮಂಟಪದಲ್ಲಿ ಚೌಕಾಕಾರದ ನಾಲ್ಕು ಕಂಬಗಳಿವೆ. ಒಂದು ಕಂಬದಲ್ಲಿ ಕೈ ಮುಗಿದು ನಿಂತಿರುವ ಭಕ್ತನ ಉಬ್ಬುಶಿಲ್ಪವಿದೆ. ಸಭಾ ಮಂಟಪದ ಉತ್ತರಕ್ಕೆ ಇನ್ನೊಂದು ಖಾಲಿ ಗರ್ಭಗೃಹವಿದೆ. ಇದರ ಎದುರಿನ ಗೋಡೆಯಲ್ಲಿ ಚಿಕ್ಕ ಪ್ರವೇಶ ದ್ವಾರವಿದೆ. ಸಭಾಮಂಟಪದ ಪ್ರವೇಶದ್ವಾರದ ಎರಡುಬದಿಗೂ ಶೈವದ್ವಾರಪಾಲಕರ ಉಬ್ಬುಶಿಲ್ಪಗಳಿವೆ.

ಇದರ ಲಲಾಟ ಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಇದರ ಕೈಪಿಡಿ ಗೋಡೆಯನ್ನು ಇಟ್ಟಿಗೆ ಗಾರೆಯಿಂದ ನಿರ್ಮಿಸಿದ್ದು ಕೋಟೆ ತೆನೆಗಳನ್ನು ಹೊಂದಿದೆ. ಇದರ ನಾಲ್ಕೂ ಮೂಲೆಗೆ ನಂದಿಯ ಮೂರ್ತಿಗಳಿವೆ. ಮುಂಭಾಗದಲ್ಲಿ ದೀಪಸ್ತಂಭವಿದ್ದು ಇದರ ಕೆಳಭಾಗದ ಮೇಲೆ ಕೈ ಮುಗಿದು ನಿಂತ ಭಕ್ತನ ಉಬ್ಬುಶಿಲ್ಪವಿದೆ. ಇದೇ ರೀತಿಯ ದೀಪಸ್ತಂಭವನ್ನು ಕುರುಗೋಡು ಬೆಟ್ಟದ ಮೇಲಿರುವ ಕೋಟೆಯೊಳಗಿನ ಆಂಜನೇಯನ ಗುಡಿಯ ಮುಂದೆ ಕಾಣಬಹುದು. ಅಲ್ಲಿಯೂ ಕೈ ಮುಗಿದು ನಿಂತ ಭಕ್ತನ ಶಿಲ್ಪವಿದೆ. ಈ ಎರಡು ದೇವಾಲಯಗಳು ಪಾಳೆಯಗಾರರ ಅವಧಿಯವು ದೀಪಸ್ತಂಭದಲ್ಲಿ ಕೈ ಮುಗಿದು ನಿಂತ ಭಕ್ತ ಹಂಡೆ ಪಾಳೇಗಾರ ನಾಯಕರಲ್ಲಿ ಒಬ್ಬನಿರಬೇಕು.

ಹೊರಕೋಟೆಯ ಪೂರ್ವ ಪ್ರದೇಶದಲ್ಲಿ ವಿಜಯನಗರೋತ್ತರ ಕಾಲದ ಕೋಟೆ ಆಂಜನೇಯನ ಗುಡಿ ಇಲ್ಲಿದೆ. ಇಲ್ಲಿಂದ ಪಶ್ಚಿಮಕ್ಕೆ ಒಂದು ಪರ್ಲಾಂಗ ದೂರದಲ್ಲಿ ಜೀವಾಂಜನೇಯ ದೇಗುಲವಿದೆ. ದಕ್ಷಿಣಾಭಿಮುಖವಾದ ಇದು ಗರ್ಭಗೃಹ ತೆರೆದ ಸಭಾಮಂಟಪ, ಪ್ರದಕ್ಷಿಣಾಪಥ ಹಾಗೂ ಪ್ರಾಕಾರವನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಕಲ್ಲು ಬಂಡೆಯಲ್ಲಿ ಕೊರೆದ ಆಂಜನೇಯನ ಉಬ್ಬುಶಿಲ್ಪವಿದೆ. ಬಿಜಾಪುರ ಸುಲ್ತಾನರು ತಾಳಿಕೋಟೆ ಯುದ್ಧ ನಂತರ ವಿಜಯನಗರಕ್ಕೆ ಬಂದಾಗ ಅನೇಕರು ತಮ್ಮ ಪ್ರಾಣ ರಕ್ಷಣೆಗಾಗಿ ಇಲ್ಲಿ ಬಂದರೆಂದು ಇದೆ. ದೇವಾಲಯದ ಹಿಂಭಾಗದ ಬಂಡೆಯ ಮೇಲೆ ಬ್ರಿಟಿಷ್ ಲಾಂಛನವುಳ್ಳ ೧೮೪೧ ಇಸ್ವಿ ಮತ್ತು ಮಾರ್ಚ್ ತಿಂಗಳನ್ನು ಉಲ್ಲೇಖಿಸುವ ಶಾಸನವಿದೆ.

ಕುರುಗೋಡು

ಕುರುಗೋಡು ಬಳ್ಳಾರಿ ತಾಲ್ಲೂಕಿಗೆ ಸೇರಿದ ಪಟ್ಟಣಪ್ರದೇಶ. ಇದು ಬಳ್ಳಾರಿ ಜಿಲ್ಲಾ ಕೇಂದ್ರದಿಂದ ವಾಯುವ್ಯ ದಿಕ್ಕಿಗೆ. ೨೮ ಕಿ.ಮೀ. ದೂರದಲ್ಲಿದೆ. ನೇಯ್ಗೆ ಕೆಲಸಕ್ಕೆ ಪ್ರಸಿದ್ಧಿ ಪಡೆದಿದೆ. ಈ ಪಟ್ಟಣದ ಉತ್ತರದ ಬೆಟ್ಟದಲ್ಲಿ ಕೋಟೆಯ ಕೆಲವು ಸುತ್ತುಗಳು ಉಳಿದುಕೊಂಡಿವೆ.

ಕುರುಗೋಡನ್ನು ಕ್ರಿ.ಶ. ಸುಮಾರು ೭ನೆಯ ಶತಮಾನದ ಶಾಸನವು[28] ಕುರುಂಗೋಡ ಎಂದು ಕರೆದರೆ, ಕ್ರಿ.ಶ. ೧೧೭೬ರ ಶಾಸನವು[29] ಕುರುಗೋಡು ಎಂದಿದೆ. ನಂತರದ ಶಾಸನಗಳು ಕುರುಗೋಡು, ಎಂದು ಕರೆದಿವೆ. ಕುರುಂಗೋಡ>ಕುರುಗೋಡು (ಕುರು (ಚಿಕ್ಕ)+ ಕೋಡು) (ಶಿಖ>ಕುರುಂಗೋಡು>ಕುರುಂಗೋಡು>ಕುಛು ಗಡ್ಡೆ-ಬೆಟ್ಟ ಎತ್ತರದ ಪ್ರದೇಶ ಎಂದಾಗಿದೆ.

ಈ ಗ್ರಾಮದ ಸುತ್ತಲೂ ದೊಡ್ಡ ದೊಡ್ಡ ಬಂಡೆಗಳನ್ನು ಹೊತ್ತು ಬೆಟ್ಟಸಾಲುಗಳಿವೆ. ಇವುಗಳ ಆಶ್ರಯದಲ್ಲಿ ಆದಿಮಾನವನ ಸಂಸ್ಕೃತಿ ಬೆಳೆದುಬಂತು. ಅವನು ಬಳಸಿದ ಉಜ್ಜಿನಯಗೊಳಿಸಿದ ಕೈಗೊಡಲಿಗಳು ಕಪ್ಪು-ಕೆಂಪು ಮಡಿಕೆ ಚೂರುಗಳು ಮುಂತಾದ ಅವಶೇಷಗಳು ಕಂಡುಬರುತ್ತವೆ. ಕುರುಗೋಡು ಗ್ರಾಮದ ವರ್ಣಚಿತ್ರಗಳನ್ನು ಶೋಧಿಸಿದ ಅ. ಸುಂದರ[30] ಅವರು ಇದು ತಾಮ್ರ ಶಿಲಾಯುಗದ ಕಾಲಕ್ಕೆ ಸೇರಿದೆ ಎಂದಿದ್ದಾರೆ. ಅಲ್ಲದೇ ಬೆಟ್ಟಗಳ ಕಲ್ಲಾಶ್ರಯಗಳಲ್ಲಿ ಪ್ರಾಣಿ ಮತ್ತು ಮನುಷ್ಯರ ಪ್ರಾಗಿತಿಹಾಸ ಕಾಲದ ರೇಖಾಚಿತ್ರಗಳಿವೆ. ಇತಿಹಾಸ ಯುಗದಲ್ಲಿ ಕ್ರಿ.ಶ. ೨-೩ನೆಯ ಶತಮಾನಕ್ಕೆ ಸೇರಬಹುದಾದ ಕುರುಗೋಡು ಮತ್ತು ಹಂಪೆ ಶಾಸನಗಳು ಹೆಚ್ಚು ತೃಟಿತಗೊಂಡಿರುವುದರಿಂದ ಹೆಚ್ಚಿನ ಅಂಶಗಳು ತಿಳಿಯದಿದ್ದರೂ ಇಲ್ಲಿಯ ಬಹುಭಾಗವೂ ಶಾತವಾಹನರ ಆಳ್ವಿಕೆಗೆ ಒಳಪಟ್ಟಿದ್ದು, ಅದು ಶಾತವಾಹನಿಹಾರ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಿತು. ಈ ಪ್ರದೇಶ ಬಾದಾಮಿ ಚಾಲುಕ್ಯರ ವ್ಯಾಪ್ತಿಯಲ್ಲಿದ್ದು, ಇತ್ತೀಚಿನವರೆಗೂ ಪ್ರಸಿದ್ಧಿಯಲ್ಲಿರುವ ಕುರುಗೋಡು ಸಿಂದರ ಆಳ್ವಿಕೆಯಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು ಆಗ ನೊಳಂಬವಾಡಿ-೩೨೦೦೦, ಕದಂಬಳಿಗೆ-೧೦೦೦, ಕೋಗಳಿ-೫೦೦, ಬಲ್ಲಕುಂದೆ-೩೦೦, ಇವು ಆಡಳಿತ ಕೇಂದ್ರಭಾಗಗಳು. ಇವುಗಳಲ್ಲಿ ಈ ಬಲ್ಲಕುಂದೆ ನಾಡಿಗೆ ರಾಜಧಾನಿಯಾದುದು ಕುರುಗೋಡು, ಆಗ ಈ ಪಟ್ಟಣ ವಿಸ್ತೃತವಾಗಿ ಬೆಳೆಯಿತು. ಬೆಳೆದ ಪಟ್ಟಣದ ರಕ್ಷಣೆಗಾಗಿ ಸುತ್ತಲೂ ಕೋಟೆಯನ್ನು ಕಟ್ಟಿಕೊಂಡರು. ವಿಜಯನಗರದ ಅರಸರು ಈ ಕೋಟೆಯನ್ನು ಭದ್ರಪಡಿಸಿಕೊಂಡಿರಬಹುದು. ಏಕೆಂದರೆ ಅವರ ಆಡಳಿತ ಅವಧಿಯಲ್ಲಿ ಕುರುಗೋಡು ಹಲವು ಗ್ರಾಮಗಳನ್ನೊಳಗೊಂಡ ಸೀಮೆಯಾಗಿತ್ತು.[31] ಹಂಡೆಯ ಪಾಳೆಯಗಾರರು ಈ ಆಯಾಕಟ್ಟಿನ ಕುರುಗೋಡು ಕೋಟೆಯಲ್ಲಿಯೇ ಆಶ್ರಯ ಪಡೆದು ಕೆಲವು ಕಾಲ ಇಲ್ಲಿ ಆಳ್ವಿಕೆ ಮಾಡಿದರು. ನಂತರ ಕ್ರಮವಾಗಿ ಹೈದರಾಲಿ, ಟಿಪ್ಪು ಮತ್ತು ಬ್ರಿಟೀಷರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತು.

ಈ ಕೋಟೆಯು ಬಳ್ಳಾರಿ ಜಿಲ್ಲೆಯ ಪ್ರಾಚೀನ ಗಿರಿದುರ್ಗದಲ್ಲಿ ಎರಡನೆಯದು. ಪ್ರಕೃತಿದತ್ತವಾದ ಬೆಟ್ಟಗುಡ್ಡಗಳಿಂದ ಸುತ್ತುವರೆದಿದ್ದ ಈ ಪಟ್ಟಣದಲ್ಲಿ ಗುಡ್ಡದ ಮೇಲೆ ತುಂಬ ಎತ್ತರದ ಕೋಟೆ ಇತ್ತು. ಇದನ್ನು ಕುರುಗೋಡಿನ ಶಾಸನವು[32] “ಮುಗಿಲುದ್ದವಾಗಿ ಮೂವಳಿಸಿದ ಕೋಟೆ” ಎಂದು ಕರೆದಿದೆ. ಆದರೆ ಈ ಶಾಸನದಲ್ಲಿ ಈ ಕೋಟೆಯಲ್ಲಿ ಎಷ್ಟು ಸುತ್ತುಗಳಿವೆ. ಅದರ ವ್ಯಾಪ್ತಿ ಎಷ್ಟು ಎಂಬ ಮಾಹಿತಿಗಳಿಲ್ಲ.[33] “ನಾಲ್ಕು ಸುತ್ತಿನ ಕೋಟೆಯೊಳಗೆ ಕಂಗೊಳಿಸುತ್ತಿದ್ದ ಪ್ರಾಚೀನ ಕುರುಗೋಡು” ಎಂದು ಕೈಫಿಯತ್ತಿನಲ್ಲಿ ವರ್ಣಿಸಲಾಗಿರುವದರಿಂದ ಇದು ನಾಲ್ಕು ಸುತ್ತಿನ ಕೋಟೆ ಎಂಬುದು ಸ್ಪಷ್ಟ. ಕಂಪ್ಲಿ ಕಡೆಯಿಂದ ಕುರುಗೋಡನ್ನು ಪ್ರವೇಶಿಸುವಾಗ ಸಿಗುವ ಮೊದಲನೇ ಕೋಟೆ ಅಥವಾ ಹೊರಕೋಟೆ ಬಹಳ ವಿಶಾಲವಾದದ್ದು. ಇದು ಇಡೀ ಊರನ್ನಲ್ಲದೆ ಕಿಲ್ಲೆದುರ್ಗ, ಬೂದಿಕೊಳ್ಳದ ಗುಡ್ಡ, ಬಾಳೆಕೊಳ್ಳದ ಗುಡ್ಡ, ಬಾಲೆಕಿಲ್ಲೆ, ಜಿಂಕಲೆ ಹರವಿನ ಗುಡ್ಡ, ರಾಮಲಿಂಗನ ಗುಡ್ಡ, ದಿಡ್ಡಿ ಹನುಮಂತನ ಕಣಿವೆ ಮತ್ತು ಹಾಲಭಾವಿ ಕಣಿವೆಯನ್ನು ಸುತ್ತುವರೆದಿರುವುದು ತಿಳಿದುಬರುವ ಅಂಶ.[34]

ಬಳ್ಳಾರಿಯಿಂದ ಕುರುಗೋಡಿಗೆ ಬರುವಾಗ ಕೋಟೆಯ ಎರಡನೇ ಸುತ್ತಿನ ಅವಶೇಷಗಳು ಕಂಡುಬರುವವು. ಇದನ್ನು ಪ್ರಾಯಶಃ ಹನುಮಂತನ ಗುಡ್ಡದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ದೊಡ್ಡ ಬಸವೇಶ್ವರ ಗುಡಿಯನ್ನು ಬಳಸಿಕೊಂಡು ಕಟ್ಟಿರಬೇಕು. ಕುರುಗೋಡಿನಿಂದ ಸಿರಿಗೇರಿಗೆ ಹೋಗುವ ರಸ್ತೆಯ ಬಲಭಾಗಕ್ಕೆ ಕೋಟೆಯ ಮೂರನೆಯ ಸುತ್ತಿನ ಬಾಗಿಲಿದೆ. ಇದು ಪಶ್ಚಿಮ ಬೆಟ್ಟವನ್ನು ಸುತ್ತುವರೆದು ಹಿಂಡುಲಿ ಸಂಗಮೇಶ್ವರ ದೇವಾಲಯದ ಪಶ್ಚಿಮಕ್ಕೆ ಸಂಪೂರ್ಣ ಹಾಳಾಗಿ ಹೋದ ಕೋಟೆ ಗೋಡೆಯೇ ಶಾಸನೋಕ್ತ ಕೋಟೆಯ ಮೂರನೆಯ ಸುತ್ತು. ಇದನ್ನು ಜಂಕಲ ಹರವಿನ ಗುಡ್ಡಕ್ಕೆ ಹೊಂದಿಕೊಂಡಿರುವ ಪ್ರಾಚೀನ ಕೋಟೆಯೆಂದು ಕೈಫಿಯತ್ತು ಕರೆದಿದೆ. ಹನುಮಂತನ ಗುಡ್ಡದ ತುದಿಯಲ್ಲಿರುವುದೇ ಕೋಟೆಯ ನಾಲ್ಕನೇ ಸುತ್ತು ಇದನ್ನು ಹಂಡೆ ಪಾಳೆಯಗಾರರು ಕಟ್ಟಿಸಿರುವರೆಂದು ಕುರುಗೋಡು ಕೈಫಿಯತ್ತು ಹೇಳುತ್ತದೆ.[35] ಇದರೊಳಗೆ ವಸತಿಯ ಅವಶೇಷಗಳು, ಆಂಜನೇಯನಗುಡಿ, ಬಾವಿ ಹಾಗೂ ಖಾಲಿ ಮಂಟಪಗಳಿವೆ. ಇದು ಸುರಕ್ಷಿತ ಹಾಗು ಭದ್ರವಾಗಿರುವದರಿಂದ ಇಲ್ಲಿಯೇ ಹಂಡೆ ಪಾಳೆಯಗಾರರು ನೆಲೆಸಿರಬಹುದು.

ಈ ಮೇಲೆ ಉಲ್ಲೇಖಿಸಿದ ಕೋಟೆಯ ನಾಲ್ಕು ಸುತ್ತುಗಳಲ್ಲಿ ಮೊದಲ ಹಾಗೂ ಎರಡನೆಯ ಸುತ್ತಿನ ಕೋಟೆಗಳು ನಾಮಾವಶೇಷವಾಗಿವೆ. ಈಗ ಉಳಿದಿರುವುದು ಕೋಟೆಯ ಮೂರು ನಾಲ್ಕನೆ ಸುತ್ತುಗಳು ಮಾತ್ರ. ಈ ಗೋಡೆಗಳ ಪೂರ್ವಭಾಗಕ್ಕೆ ಪ್ರವೇಶ ದ್ವಾರಗಳಿವೆ. ಮೂರನೆಯ ಸುತ್ತಿನ ಗೋಡೆಯಲ್ಲಿರುವ ಬಾಗಿಲು ಸುಮಾರು ೨೦ ಅಡಿ ಎತ್ತರ ೮ ಅಡಿ ಅಗಲವಾಗಿದೆ. ಮೇಲಿನ ಛತ್ತು ಹಾಳಾಗಿದೆ. ಇದರ ಬಲಭಾಗದ ಕೋಟೆಗೋಡೆಯಲ್ಲಿ ನಂದಿಯ ಉಬ್ಬುಶಿಲ್ಪವಿದೆ. ಮುಂಭಾಗದಲ್ಲಿ ಆಂಜನೇಯನ ದೇವಾಲಯವಿದೆ. ಇದನ್ನು ಕೋಟೆ ಆಂಜನೇಯನೆಂದು ಕರೆಯುವರು. ನಾಲ್ಕನೇ ಸುತ್ತಿನ ಕೋಟೆಯ ಬಾಗಿಲು ಕೋಟೆಯೊಳಗೆ ನೇರವಾದ ಪ್ರವೇಶವನ್ನು ನೀಡುವುದಿಲ್ಲ. ದೂರದಿಂದ ನೋಡಿದಾಗ ಈ ಬಾಗಿಲು ಕಾಣುವುದಿಲ್ಲ ಬಾಗಿಲ ಎರಡು ಪಾರ್ಶ್ವಗಳಲ್ಲಿ ಮತ್ತು ಮುಂಭಾಗದಲ್ಲಿ ಅದೇ ರೀತಿಯ ಗೋಡೆಗಳನ್ನು ಕಟ್ಟಿ ಅದನ್ನು ಮರೆಮಾಡಿ ಗೋಡೆಯಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಹೀಗಾಗಿ ಒಳಗೆ ಬರುವ ದಾರಿಯು ಅಂಕು ಡೊಂಕಾಗುವುದು. ಇದರ ಎರಡೂ ಬದಿಗೆ ಕೊತ್ತಳಗಳಿವೆ. ಬಾಗಿಲಿನ ಮೂಲಕ ಅಂಕುಡೊಂಕಾದ ದಾರಿಯಲ್ಲಿ ಒಳ ಪ್ರವೇಶಿಸಲು ಪ್ರಯತ್ನಿಸುವ ವೈರಿ ಸೈನ್ಯವನ್ನು ಕೋಟೆ ಗೋಡೆಯ ಮತ್ತು ಕೊತ್ತಳಗಳ ಮೇಲೆ ಸಂರಕ್ಷಣೆಗಾಗಿ ನಿಂತ ಸೈನಿಕರು ಸುಲಭವಾಗಿ ಸದೆಬಡಿಯಲು ಅನುಕೂಲವಾಗುತ್ತಿತ್ತು.

ಕೋಟೆಯ ಆಯಾಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳನ್ನು ನಿರ್ಮಿಸಲಾಗಿದೆ. ಇವು ವೃತ್ತಾಕಾರವಾಗಿದ್ದು, ಕೋಟೆ ಗೋಡೆಗಿಂತ ಎತ್ತರವಾಗಿವೆ. ಬೆಟ್ಟದ ಮೇಲಿನ ಕೋಟೆಯಲ್ಲಿ ಕೆಲವು ಕೊತ್ತಳಗಳನ್ನು ಹಾಸುಬಂಡೆಗಳ ಮೇಲೆ ನಿರ್ಮಿಸಲಾಗಿದೆ. ಈಗ ಸುಮಾರು ೧೫ ಕೊತ್ತಳಗಳು ಮಾತ್ರ ಗೋಚರಿಸುತ್ತವೆ.

ಈ ಕೋಟೆಯನ್ನು ಕೆತ್ತಿ ನಯಮಾಡಿದ ಮಧ್ಯಮ ಗಾತ್ರದ ಕಲ್ಲುಗಳಿಂದ ಕಟ್ಟಿದೆ. ಕಲ್ಲುಗಳ ಮಧ್ಯದಲ್ಲಿ ಸಂಧಿ ಇಲ್ಲದಂತೆ ಒಂದು ಕಲ್ಲು ಮತ್ತೊಂದಕ್ಕೆ ಹೊಂದಿಕೊಳ್ಳುವಂತೆ ಅಂಚುಗಳನ್ನು ಕೆತ್ತಿ ಜೋಡಿಸಲಾಗಿದೆ. ಕಲ್ಲುಗಳ ಮಧ್ಯದಲ್ಲಿ ಯಾವುದೇ ಗಾರೆ ಇಲ್ಲ. ಸುಮಾರು ೧೫ ಅಡಿ ಎತ್ತರವಿರುವ ಕೋಟೆಯ ಮೇಲಿನ ಕಲ್ಲಿನ ಸಾಲು ಸ್ವಲ್ಪ ಮುಂದೆ ಚಾಚಿಗೊಂಡಿದೆ. ಕೋಟೆಯ ಅಗಲ ಸುಮಾರು ೩ ಅಡಿ ಮೇಲಿದ್ದ ಮಣ್ಣಿನ ಕುಂಬೆಯ ಅವಶೇಷಗಳು ಕಾಣುತ್ತವೆ. ಕೋಟೆಯ ಹೊರಮೈಯನ್ನು ಮಧ್ಯಮಗಾತ್ರದ ಕಲ್ಲುಗಳಿಂದ ಮತ್ತು ಒಳಮೈಯನ್ನು ಚಿಕ್ಕ ಕಲ್ಲುಗಳಿಂದ ಮಧ್ಯದಲ್ಲಿ ಮಣ್ಣುತುಂಬಿ ಕಟ್ಟಿದ. ಬೆಟ್ಟದ ಮೇಲಿರುವ ಕೋಟೆಗೋಡೆಗಳು ಮಾತ್ರ ಉಳಿದುಕೊಂಡಿವೆ. ಕೆಲವೆಡೆ ಕಲ್ಲಿನ ಭಾಗ ಬಿದ್ದು ಹೋಗಿ ಮಧ್ಯದಲ್ಲಿನ ಮಣ್ಣಿನ ಭಾಗ ಮಾತ್ರ ಉಳಿದಿದೆ.

ಕುರುಗೋಡು ಕೋಟೆಯ ನಿರ್ಮಾಪಕರು ಮತ್ತದರ ಕಾಲವನ್ನು ನಿಖರವಾಗಿ ಹೇಳುವುದು ಕಷ್ಟವಾದರೂ ಶಾಸನಾಧಾರಗಳಿಂದ ಈ ಕೆಳಗಿನಂತೆ ಚರ್ಚಿಸಿದೆ. ಇಲ್ಲಿ ದೊರೆತಿರುವ ಬಾದಾಮಿ ಚಾಳುಕ್ಯ ಸತ್ಯಾಶ್ರಯನ ಶಾಸನದಲ್ಲಾಗಲಿ[36] ಅಥವಾ ಈ ಮುಂಚಿನ ಯಾವುದೇ ದಾಖಲೆಗಳಲ್ಲಿ ಕುರುಗೋಡು ಕೋಟೆಯ ಪ್ರಸ್ತಾಪಗಳಿರುವುದಿಲ್ಲ. ಕಲಚೂರಿಗಳ ಕ್ರಿ.ಶ. ೧೧೭೩[37] ರ ಶಾಸನವನ್ನು ಸೇರಿದಂತೆ ಇತ್ತೀಚಿನ ಶಾಸನಗಳಲ್ಲಿ ಕುರುಗೋಡು ಕೋಟೆಯ ಉಲ್ಲೇಖಗಳಿವೆ. ಕುಮಾರರಾಮನಿಗಿಂತ ಮೊದಲು ಮಲ್ಲಾರಾಯರ ವಂಶದವರು ಕೋಟೆ ಕಟ್ಟಿಸಿದರೆಂದು ಕೈಫಿಯತ್ತಿನಲ್ಲಿ ಹೇಳಿದೆ.[38] ಕ್ರಿ.ಶ. ೧೧೪೧ರಲ್ಲಿ[39] ಹೊಯ್ಸಳ ವಿಷ್ಣುವರ್ಧನ ಸಿಂದರ ಆಳ್ವಿಕೆಗೊಳಪಟ್ಟ ಕುರುಗೋಡು ಕೋಟೆಯ ಮೇಲೆ ದಾಳಿ ಮಾಡಿರಬೇಕೆಂದು ಚನ್ನಬಸವ ಹಿರೇಮಠರು ಹೇಳುವರು.[40]

ಈ ಮೇಲಿನ ಶಾಸನಾಧಾರಗಳು ಕೈಫಿಯತ್ತಿನ ಆಧಾರಗಳೊಂದಿಗೆ ಸರಿಹೊಂದುವುದರಿಂದ ಕೈಫಿಯತ್ತಿನಲ್ಲಿ ಉಲ್ಲೇಖವಾಗುವ ಮಲ್ಲರಾಯರ ವಂಶದವರೆಂದರೆ ಸಿಂದವಂಶದ ರಾಚಮಲ್ಲನೇ ಇರಬೇಕು. ಒಟ್ಟಿನಲ್ಲಿ ಸಿಂದರ ಆಳ್ವಿಕೆ ಅವಧಿಯಲ್ಲಿಯೇ ಕುರುಗೋಡಿನಲ್ಲಿ ಕೋಟೆ ನಿರ್ಮಾಣವಾಗಿದೆ. ಮುಂದೆ ಈ ಕೋಟೆಯನ್ನು ವಿಜಯನಗರದ ಅರಸರು ಆಳಿದರು. ಹಂಡೆಯ ಪಾಳೆಯಗಾರರು ಈ ಕೋಟೆಯನ್ನು ಭದ್ರಪಡಿಸಿಕೊಂಡು ಕೋಟೆಯ ಕೆಲವು ಸುತ್ತುಗಳನ್ನು ಕಟ್ಟಿಸಿದರೆಂದು ತಿಳಿದುಬರುತ್ತದೆ.[41] ನಂತರ ಹೈದರಾಲಿ-ಟಿಪ್ಪು ಇವರು ಕುರುಗೋಡು ಕೋಟೆಯನ್ನು ಜೀರ್ಣೋದ್ಧಾರ ಮಾಡಿಕೊಂಡಿದ್ದಾರೆ. ಹೈದರಾಲಿ ಕೋಟೆಯ ಒಳಗೆ ಆಂಜನೇಯನ ದೇವಾಲಯವನ್ನು ಕಟ್ಟಿಸಿದ್ದಾನೆಂಬುದು ಶಾಸನದಿಂದ ತಿಳಿದು ಬರುತ್ತದೆ.[42]

ಬೆಟ್ಟ-ಗುಡ್ಡಗಳ ಮಧ್ಯದಲ್ಲಿ ನಾಲ್ಕು ಸುತ್ತಿನಲ್ಲಿ ನಿರ್ಮಾಣವಾದ ಕುರುಗೋಡು ಕೋಟೆ ಅಬೇಧ್ಯ ದುರ್ಗವೆನಿಸಿತ್ತು. ಇದನ್ನೆ ಶಾಸನಗಳು “ಕುಲಗಿರಿಗಳ್ಗೆ ಮೇರು ಗಿರಿಯಿರ್ಪ್ಪ ಮೊಲಿರ್ದ್ಧುದುತಾಂ ನದೀನದಾವಳಿಗೆ ಪಯಃ ಪಯೋಧಿನೆಗಳ್ದಿರ್ಪ ವೊಲಿರ್ದ್ದುದು ತಾರಕಾಸ ಮಾಕುಳಕೆ ಹಿಮಾಂಸುಬಿಂಬ ಮೆಸೆದಿರ್ಪ್ಪ ವೊಲಿರ್ದ್ದುದಾ ವಸುನ್ದರಾಲಲನಿಗೆ ವಕ್ತ್ರ ಪಂಕರುಹಮಿರ್ಪ್ಪ ವೊಲಿ ದಿತ್ತು”[43] ಎಂದೂ, “ರಾಜರಾಜನಗರ ರಮಣೀಯ ಮಣಿದರ್ಪಣಾಯನ ಮೆನಿಸೆ ಭರ್ಗ್ಗದ್ರಿ ಯಂತಾರ್ಗ್ರವರಿದ ದುರ್ಗಮವಾದ”[44] ಕೋಟೆಯು ಆಗಿತ್ತೆಂದು ಬಣ್ಣಿಸಿವೆ.

ಕೋಟೆಯ ಸುತ್ತಲೂ ಕಂದಕಗಳಿದ್ದು ಅದರಲ್ಲಿ ನೀರನ್ನು ತುಂಬಲಾಗಿತ್ತು. ಹೀಗೆ ಒಂದೆಡೆ ಗಿರಿದುರ್ಗ ಮತ್ತೊಂದೆಡೆ ಜಲದುರ್ಗಗಳಿಂದ ಕೂಡಿದ ಅದು[45]

||ಕಂ|| ಕೆಲಬಲದ ಜಲದ ದುರ್ಗಗಳ
ನೆಲವುದು ನೆರೆಯ ಹೊರೆಯ ತುರುಗಿರಿದುರ್ಗಂ
ಗಳ ನಿಳಿಸಿ ತನ್ನ ಮೆರೆವುದು
ಕುಲಗಿರಿ ಕುರುಗೋಡು ದುರ್ಗ್ಗ ವಾರ್ಗ್ಗುಂದುರ್ಗ್ಗಂ ಎನಿಸಿತ್ತು[46]

ಚೋಳ, ಗುರ್ಜರ, ಪಾಳ, ಪಾಂಡ್ಯ, ತೆಲುಗ ಭೂಪಾಲರು ಕುರುಗೋಡು ಕೋಟೆಯನ್ನು ಗೆಲ್ಲಲು ಆಗಾಗ ಪ್ರಯತ್ನಿಸುತ್ತಿದ್ದರು. ಚಾಳುಕ್ಯರ ಆಡಳಿತಾವಧಿಯಲ್ಲಿ ಈ ಕೋಟೆಯನ್ನು ಜಯಿಸಲು ನಡೆಸಿದ ಹೋರಾಟಗಳು ವಿಫಲ ಹೊಂದಿದ ಮೇಲೆ ಕಲಚೂರಿಗಳ ಕಾಲದಲ್ಲಿ ಇಂಥ ಪ್ರಯತ್ನವನ್ನು ಮುಂದುವರೆಸಿದರು. ಆದರೆ ಸಮರ್ಥ ಸಾಮಂತ ಅರಸರಾದ ಸಿಂದರಿಂದಾಗಿ ಬಲಿಷ್ಠವಾದ ಈ ಕೋಟೆಯನ್ನು ಪಡೆಯಲೇಬೇಕೆಂಬ ಇವರ ಕನಸು ನನಸಾಗಲಿಲ್ಲ.[47] ಬದಲಾಗಿ ಅದು.

ಚೋಳನನಾಳು ಮಾಡುವುದು ಗೂರ್ಜರರಂಸೆಲೆ ತರ್ದ್ದಿಕುಂಕರಂ
ಲಾಳನ ನಾಳಿಮಾಡುವುದು ಪಾಂಡ್ಯನ ನಂಡಲೆಗುಂ ತೆಲುಂಗ ಭೂ
ಪಾಲನ ನೇಳಿ ದಿಕ್ಕೆಯನೆ ಮಾಡುವದೀ ಕುರುಗೋಡು ಕೋಟೆ ತಾಂ
ಕಾಳಗ ಮೆಂದಡೇಳುಮಡಿ ಪೆರ್ಚ್ಚುವುದಚ್ಚರಿ ಯಾರೊ ಕಾದುವರ್

ಎನ್ನುವಂತೆ ಶಕ್ತಿಯುತವಾಗಿತ್ತು.[48] ಹೊಯ್ಸಳ ಬಲ್ಲಾಳನು ಕ್ರಿ.ಶ. ೧೧೯೯ರಲ್ಲಿ ಕುರುಗೋಡು ಕೋಟೆಯನ್ನು ವಶಪಡಿಸಿಕೊಳ್ಳಬೇಕೆಂದು ನಡೆಸಿದ ಯತ್ನವು ವಿಫಲವಾಯಿತು.[49] ಒಟ್ಟಿನಲ್ಲಿ ಬಲ್ಲಕುಂದೆನಾಡಿನ ರಾಜಧಾನಿಯಾಗಿದ್ದ ಕುರುಗೋಡು ಕೋಟೆಯು ವಿರೋಧಿ ಅರಸರಿಗೆ ಸುಲಭವಾಗಿ ವಶವಾಗಲಿಲ್ಲ. ಸಮರ್ಥ ನಾಯಕರಾಗಿದ್ದ ಸಿಂದರಸರು ಈ ಕೋಟೆಯನ್ನು ರಕ್ಷಿಸಿದ್ದರು. ಎರಡನೇ ಬಲ್ಲಾಳನು ಈ ಕೋಟೆಯನ್ನು ವಶಪಡಿಸಿಕೊಳ್ಳುವುದಕ್ಕಾಗಿ ಅಪಾರ ಸಂಖ್ಯೆಯ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು.

[1] ದೇವರಕೊಡಾರೆಡ್ಡಿ ಮತ್ತು ಇತರರು. ೧೯೯೯, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ (ಬಳ್ಳಾರಿ ಜಿಲ್ಲೆ) -೧, ಪು. ೫೬, ಹಂಪಿ ಕನ್ನಡ ವಿಶ್ವವಿದ್ಯಾಲಯ

[2] ಅದೇ, ಪು. ೫೬

[3] ಅದೇ, ಪು. ೫೬

[4] ಶಿವಮೂರ್ತಿಶಾಸ್ತ್ರಿ, ವಿ. ೧೯೯೮, ಕರ್ನಾಟಕ ಸಂದರ್ಶನ-೧, ಪು. ೫೧, ಬೆಂಗಳೂರು

[5] ಕಲಬುರ್ಗಿ, ಎಂ.ಎಂ. (ಸಂ.), ೧೯೯೪, ಕರ್ನಾಟಕದ ಕೈಫಿಯತ್ತುಗಳು, ಪು. ೫೨೬, ಹಂಪಿಃ ಕನ್ನಡ ವಿಶ್ವವಿದ್ಯಾಲಯ

[6] ಶ್ಯಾಮಲ, ಸಿ.ಆರ್. ೧೯೯೯, ಬಳ್ಳಾರಿ ಗುಡ್ಡದ ಮೇಲಿನ ದೇವಾಲಯಗಳು, ಇತಿಹಾಸ ದರ್ಶನ -೧೪, ಪು.೧೫೫

[7] ಚನ್ನಬಸವಯ್ಯ ಹಿರೇಮಠ. ೧೯೯೫, ಕುರುಗೋಡು ಸಿಂದರು ಒಂದು ಅಧ್ಯಯನ, ಪು. ೧೫೫ ಕೊಪ್ಪಳ ಸಂಗಣ್ಣನವರು ಅಗಡಿ ಸಂಸ್ಕೃತಿ ಪ್ರತಿಷ್ಠಾನ

[8] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ಪೂರ್ವೋಕ್ತ, ಪು. ೭

[9] ಕುರುಗೋಡು ಸಿಂದರು ಒಂದು ಅಧ್ಯಯನ, ಪೂರ್ವೋಕ್ತ, ಪು. ೬೮

[10] ಅದೇ, ಪು. ೬೯

[11] ಚನ್ನಬಸಪ್ಪ, ಎಸ್. ಪಾಟೀಲ. ೧೯೯೯, ಕರ್ನಾಟಕದ ಕೋಟೆಗಳು-೧ ಪು. ೧೦೦. ಹಂಪಿ ಕನ್ನಡ ವಿಶ್ವವಿದ್ಯಾಲಯ

[12] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ. ಪು. ೫೨೫

[13] ಕರ್ನಾಟಕದ ಕೋಟೆಗಳು, ಪೂರ್ವೋಕ್ತ. ಪು.೧೦೦

[14] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ, ಪು. ೫೨೫

[15] ಅದೇ, ಪು. ೫೨೮

[16] ಅದೇ, ಪು. ೫೨೮

[17] ಅದೇ, ಪು. ೫೨೮

[18] ಅದೇ, ಪು. ೫೩೨

[19] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ, ಪು. ೫೩೫

[20] ಅದೇ, ಪು. ೧೦೪

[21] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ, ಪು. ೫೩೫

[22] ಅದೇ, ಪು. ೫೩೩

[23] ಚಂದ್ರಶೇಖರ ಹೆಚ್. ೨೦೦೦. ಬಳ್ಳಾರಿ ಕೋಟೆಯ ರಚನೆಯಲ್ಲಿ ಭೂಸದೃಶ್ಯಗಳ ಪಾತ್ರ, ಇತಿಹಾಸ ದರ್ಶನ-೧೫, ಪು. ೨೩-೨೬

[24] ಶ್ಯಾಮಲ, ಸಿ.ಆರ್. ೧೯೯೯, ಪುರ್ವೋಕ್ತ, ಪು. ೧೫೫-೧೫೬

[25] ಅದೇ, ಪು. ೧೫೮

[26] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ, ಪು. ೫೩೫

[27] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ ಪು. ೧೧.

[28] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೮, ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ, (ಬಳ್ಳಾರಿ ಜಿಲ್ಲೆ -೧) ಪು. ೧೯, ಹಂಪಿಃ ಕನ್ನಡ ವಿಶ್ವವಿದ್ಯಾಲಯ.

[29] ಚನ್ನಬಸವಯ್ಯ ಹಿರೇಮಠ, ೧೯೯೫, ಕುರುಗೋಡು ಸಿಂಧರು: ಒಂದು ಅಧ್ಯಯನ, ಪು. ೧೦೮, ಕೊಪ್ಪಳ: ಸಂಗಣ್ಣನವರು, ಹಗಡಿ ಸಂಸ್ಕೃತಿ ಪ್ರತಿಷ್ಠಾನ.

[30] ಸುಂದರ. ಅ., ೧೯೯೪, ಕರ್ನಾಟಕ ಪ್ರಾಗಿತಿಹಾಸ ಕಾಲದ ಕಲೆ, ಪು. ೬೭, ೬೯, ಬೆಂಗಳೂರು : ಐ.ಬಿ.ಹೆಚ್. ಪ್ರಕಾಶನ

[31] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ, ಪು. ೩೯

[32] ಅದೇ, ಪು. ೧೩

[33] ಕಲಬುರ್ಗಿ. ಎಂ.ಎಂ., (ಸಂ.), ೧೯೯೪, ಕರ್ನಾಟಕದ ಕೈಫಿಯತ್ತುಗಳು, ಪು. ೪೫೫, ಹಂಪಿ: ಕನ್ನಡ ವಿಶ್ವವಿದ್ಯಾಲಯ

[34] ಅದೇ., ಪು. ೪೫೫

[35] ಅದೇ, ಪು. ೫೨೭

[36] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೧, ಪೂರ್ವೋಕ್ತ, ಪು. ೧೯

[37] ಅದೇ, ಪು. ೨೩

[38] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ, ಪು. ೪೫೬

[39] ಕುರುಗೋಡು ಸಿಂಧರು: ಒಂದು ಅಧ್ಯಯನ, ಪೂರ್ವೋಕ್ತ, ಪು. ೭೩, ೭೪

[40] ಚನ್ನಬಸವಯ್ಯ ಹಿರೇಮಠ, ೨೦೦೦, ಕುರುಗೋಡು ಕೋಟೆ ಮುತ್ತಿಗೆ, ಸೂರ್ಯಕೀರ್ತಿ, (ಸಂ., ಡಾ. ಕೃಷ್ಣಮೂರ್ತಿ ಪಿ.ವಿ. ಮತ್ತು ಕೆ. ವಸಂತಲಕ್ಷ್ಮಿ) ಪು. ೨೭೪, ಬೆಂಗಳೂರು: ಸೂರ್ಯನಾಥ ಕಾಮತ್ ಅಭಿನಂದನಾ ಸಮಿತಿ

[41] ಕರ್ನಾಟಕದ ಕೈಫಿಯತ್ತುಗಳು, ಪೂರ್ವೋಕ್ತ, ಪು. ೪೫೫

[42] ಕನ್ನಡ ವಿಶ್ವವಿದ್ಯಾಲಯದ ಶಾಸನ ಸಂಪುಟ-೧, ಪೂರ್ವೋಕ್ತ, ಪು. ೧೯

[43] ಅದೇ, ಪು. ೧೪

[44] ಅದೇ, ಪು. ೨೭

[45] ಕುರುಗೋಡು ಸಿಂಧರು : ಒಂದು ಅಧ್ಯಯನ, ಪು. ೧೦೪

[46] EIXIVP 265 ಕುರುಗೋಡು

[47] ಕುರುಗೋಡು ಸಿಂಧರು : ಒಂದು ಅಧ್ಯಯನ, ಪೂರ್ವೋಕ್ತ, ಪು. ೧೦೫

[48] SII IX(1) P-296 ಕುರುಗೋಡು

[49] ಚನ್ನಬಸವಯ್ಯ ಹಿರೇಮಠ, ೨೦೦೨, ಪೂರ್ವೋಕ್ತ, ಪು. ೨೭೫