. ಕಲಾ ಶಿಕ್ಷಣ ಸಂಸ್ಥೆಗಳು

ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಗೈತಿಹಾಸಿಕ ಕಾಲದಿಂದಲೂ ಚಿತ್ರಕಲೆಗೆ ಚಿಶೇಷ ಪ್ರೋತ್ಸಾಹ ಇತ್ತು. ಎಂಬುದಕ್ಕೆ ಹಂಪಿ ಪರಿಸರದ ಕಲ್ಲಾಸರೆಯ ಚಿತ್ರಗಳೇ ಸಾಕ್ಷಿ. ವಿಜಯನಗರ ಕಾಲದಲ್ಲಿಯೂ ಭಿತ್ತಿಚಿತ್ರ ರಚನಾ ಕಾರ್ಯವು ಗಣನೀಯ ಪ್ರಮಾಣದಲ್ಲಿ ಮುಂದುವರೆಯಿತು. ವಿಜಯನಗರ ಅರಸರು ದೇವಾಲಯ ಭವನ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಅಷ್ಟೇ ಅಲ್ಲದೇ, ಅವುಗಳನ್ನು ಚಿತ್ರಗಳಿಂದ ಅಲಂಕರಿಸುವ ಪ್ರಯತ್ನ ನಡೆಯಿತು. ಇದು ಪರೋಕ್ಷವಾಗಿ ಆಗಿನ ಕಾಲಾವಧಿಯಲ್ಲಿ ಇದ್ದ ಹಲವು ಕಲಾವಿದರಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ಎಂಬುದನ್ನು ಗುರುತಿಸಬುದಾಗಿದೆ. ಬಳ್ಳಾರಿ ಜಿಲ್ಲೆಯ ಚಿತ್ರಕಲೆಯ ಬೆಳವಣಿಗೆ ದೃಷ್ಟಿಯಿಂದ ವಿಶೇಷ ಪ್ರೋತ್ಸಾಹ ನೀಡಿದ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ನಾಡಿನ ಸಮಸ್ತ ಕನ್ನಡಿಗರ ದೇಗುಲವಾಗಿರುವ ಕನ್ನಡ ವಿಶ್ವವಿದ್ಯಾಲಯದ ಪಾತ್ರ ಹಿರಿದಾದುದು. ಹಂಪಿ ಪರಿಸರದ ವಿದ್ಯಾರಣ್ಯದಲ್ಲಿ ಕನ್ನಡ ವಿಶ್ವವಿದ್ಯಾಲಯ ತಲೆ ಎತ್ತಿದ ನಂತರ ನಮ್ಮ ಇತಿಹಾಸ ಕೇವಲ ದಿಗ್ವಿಜಯಗಳ ಇತಿಹಾಸ ಅಷ್ಟೇ ಆಗಬಾರದು, ಅದು ಸಾಂಸ್ಕೃತಿಕ ಇತಿಹಾಸವೂ ಆಗಬೇಕು ಎನ್ನುವ ಮಹತ್ವಪೂರ್ಣ ಉದ್ದೇಶವನ್ನಿಟ್ಟುಕೊಂಡು ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಿದ ಅದರ ಆರಂಭಿಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ವಿಶ್ವವಿದ್ಯಾಲಯದ ಆರಂಭದಲ್ಲಿ ಯೇ ೧೯೯೨ರಲ್ಲಿ ದೃಶ್ಯಕಲಾ ವಿಭಾಗವನ್ನು ವಿಭಾಗಗಳ ಜೊತೆಯಲ್ಲಿಯೇ ಆರಂಭಿಸಿದರು. ಅದು ಕರ್ನಾಟಕದ ಸಾಂಪ್ರದಾಯಿಕ ಚಿತ್ರಕಲೆಯನ್ನು ಮುಂದುವರೆಸುವ ಆಸಕ್ತಿವಂತ ವಿದ್ಯಾರ್ಥಿಗಳಿಗೆ ಒಂದು ಕಲಾಕೆಂದ್ರವಾಗಿ ಬೆಳೆದು ನಿಂತಿದೆ. ಕನ್ನಡ ವಿಶ್ವವಿದ್ಯಾಲಯದ ಒಂದು ವಿಭಾಗವಾದ ಶಿಲ್ಪಮತ್ತು ವರ್ಣ ಚಿತ್ರ ಕಲಾ ವಿಭಾಗವು ಬಾದಮಿ- ಬನಶಂಕರಿಯ ದೇವಾಲಯದ ಸುಂದರ ಅವರಣದಲ್ಲಿಯೇ ಇದೆ. ಇಲ್ಲಿ ವರ್ಣಚಿತ್ರ ಕಲೆಯನ್ನು ಕುರಿತು ಅಧ್ಯಯನ ಮಾಡುವ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ಪ್ರೋತ್ಸಾಹ ನೀಡುತ್ತದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಲಾವಿದರನ್ನು ಹುಟ್ಟು ಹಾಕುವ ಜವಾಬ್ಧಾರಿಯನ್ನು ಹೊತ್ತಿದೆ. ಮೂರು ವರ್ಷದ ವರ್ಣಚಿತ್ರ ಕಲಾ ಪದವಿ ತರಗತಿಗಳನ್ನು ನಡೆಸಲಾಗುತ್ತಿದೆ. ಸುಸಜ್ಜಿತ ಕಟ್ಟಡ, ಉತ್ತಮ ಕಲಾ ಪರಿಕರಗಳು ಹಾಗೂ ಅನುಭವಿ ಅಧ್ಯಾಪಕರನ್ನು ಒಳಗೊಂಡ ಅಭ್ಯಾಸದ ವಾತಾವರಣವನ್ನು ಕನ್ನಡ ವಿಶ್ವವಿದ್ಯಾಲಯ ಸೃಷ್ಟಿಸಿದೆ. ಪದವಿ ತರಗತಿಗಳ ಮುಂದುವರಿಕೆಯ ಅಧ್ಯಯನಕ್ಕಾಗಿ ಆಗಿನ ಕುಲಪತಿಗಳಾದ ಡಾ. ಎಚ್‌. ಜೆ. ಲಕ್ಕಪ್ಪಗೌಡರಿಂದ ಗಿರಿಸೀಮೆಯ ಬುಡಕಟ್ಟು ವಿಭಾಗದ ಸುಂದರ ವಾತಾವರಣದಲ್ಲಿ ೨೦೦೨ -೨೦೦೩ ರಿಂದ ಸ್ನಾತಕೋತ್ತರ ದೃಶ್ಯಕಲಾ ವಿಭಾಗವನ್ನು ಆರಂಭಿಸಲಾಗಿದೆ. ಈಗಾಗಲೇ ಶಿಲ್ಪ ಮತ್ತು ವರ್ಣಚಿತ್ರಕಲಾ ವಿಭಾಗದಲ್ಲಿ ಎಂಟು ವಿದ್ಯಾರ್ಥಿಗಳು ಪಿಎಚ್‌. ಡಿ. ಪದವಿಯನ್ನು, ಆರು ವಿದ್ಯಾರ್ಥಿಗಳು, ಎಂ. ಫಿಲ್‌. ಪದವಿಗಳನ್ನು ಪಡೆದಿದ್ದಾರೆ. ಸುಮಾರು ೮ ಕ್ಕೂ ಹೆಚು ವಿದ್ಯಾರ್ಥಿಗಳು ಚಿತ್ರಕಲೆ ಕುರಿತ ಬೇರೆ ಬೇರೆ ವಿಷಯವನ್ನು ಆಯ್ಕೆ ಮಾಡಿಕೊಂಡು ಡಾ. ಎಸ್‍‌. ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದೊಂದು ದೃಶ್ಯಕಲಾ ಸಾಹಿತ್ಯಿಕ ಸಂಶೋಧನಾ ದೃಷ್ಟಿಯಿಂದ ಒಂದು ಕ್ರಾಂತಿಕಾರಿಯಾದ ಬೆಳವಣಿಗೆ ಎಂದು ಹೇಳಬಹುದಾಗಿದೆ. ಕನ್ನಡ ವಿಶ್ವವಿದ್ಯಾಲಯದ ಶಿಲ್ಪ ಮತ್ತು ವರ್ಣಚಿತ್ರ ಕಲಾ ವಿಭಾಗ ಆರಂಭವಾದ ವರ್ಷಗಳಿಂದಲೂ ಇಲ್ಲಿನ ವಿದ್ಯಾರ್ಥಿಗಳು, ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನ, ಸಮೂಹ ಚಿತ್ರಕಲಾ ಪ್ರದರ್ಶನವನ್ನು ಕರ್ನಾಟಕದ ಹಲವು ಭಾಗಗಳಲ್ಲಿ ಪ್ರದರ್ಶಿಸಿದ್ದಾರೆ. ಅವುಗಳಲ್ಲಿ ಬೆಳಗಾಂ, ಧಾರವಾಡ, ಬೆಂಗಳೂರು, ಗುಲ್ಬರ್ಗಾ, ಇಳಕಲ್‌, ಹಂಪಿ, ಮುಂತಾದ ಸ್ಥಳಗಳಲ್ಲಿ ನಡೆದ ಚಿತ್ರಕಲಾ ಪ್ರದರ್ಶನಗಳಲ್ಲಿ ಜನಮೆಚ್ಚಿಗೆ ಪಡೆಯುವುದರ ಜೊತೆಗೆ ಬಹುಮಾನಗಳನ್ನು ಪಡೆದಿದ್ದಾರೆ. ಸುನಿತಾ ಪಾಟೀಲ, ಬಸೀರ ಕಟ್ಟಿ, ಬಶೀರ ಅಹಮದ್‌, ಶಿವನಾಂದ, ವಿಜಯ ಕೋರಣ್ಣ, ಪ್ರಸಾದ, ಇನ್ನೂ ಮುಂತಾದ ವಿದ್ಯಾರ್ಥಿಗಳ ಕಲಾ ಕೃತಿಗಳು ಮುಂಬೈನ ಕ್ಯಾಂಬ್ಲೇ ಗ್ಯಾಲರಿಯಲ್ಲಿಯೂ ಪ್ರದರ್ಶನಗೊಂಡಿವೆ. ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಚಿತ್ರಕಲಾ ಶಿಬಿರ, ಕೇಂದ್ರ ಲಲಿತಾ ಅಕಾಡೆಮಿಯ ಸಹಯೋಗದೊಂದಿಗೆ ಶಿಬಿರ, ಕರ್ನಾಟಕ ಲಲಿತಕಲಾ ಅಕಾಡೆಮಿಯೊಂದಿಗೆ ಶಿಬಿರ, ಅಖಿಲ ಭಾರತ ಚಿತ್ರ ಕಲಾವಿದರ ಶಿಬಿರ ‘ಸಂಸ್ಕಾರ ಭಾರತಿ’ ಸಂಘಟನೆಯೊಂದಿಗೂ ನಡೆದಿದೆ. ಹೀಗಾಗಿ, ಈ ವಿಭಾಗವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಲಾವಿದರಿಂದಲೂ ಮೆಚ್ಚುಗೆ ಪಡೆದಿದೆ. ಈ ಪ್ರದೇಶದ ಅದ್ಭುತವಾದ ಸಾಂಸ್ಕೃತಿಕ ಸಂಪತ್ತಾದ ಚಿತ್ರಕಲೆಯನ್ನು ಮುಂದೆವರೆಸುವಲ್ಲಿ ಯಶಸ್ವಿಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಚಿತ್ರಕಲೆಯ ಪ್ರೋತ್ಸಾಹ ದೃಷ್ಟಿಯಿಂದ ದುಡಿಯುತ್ತಿರುವ ಇನ್ನಿತರ ಕಲಾ ಸಂಸ್ಥೆಗಳೆಂದರೆ, ಭವಾನಿ ಲಲಿತಕಲಾ ಮಹಾವಿದ್ಯಾಲಯ, ಕಂಟೋನ್‌ಮೆಂಟ್‌, ತಿಲಕ್‌ನಗರ, ಬಳ್ಳಾರಿ ಈ ಶಿಕ್ಷಣ ಸಂಸ್ಥೆಯು ಚಿತ್ರಕಲಾ ವಿಷಯದಲ್ಲಿ ಡಿ. ಎಮ್‌. ಸಿ., ಎ.ಎಮ್‌.ಜಿ.ಡಿ. ಮುಂತಾದ ಚಿತ್ರಕಲೆ ಕುರಿತು ಡಿಪ್ಲೊಮಾ ತರಗತಿಗಳನ್ನು ನಡೆಸುತ್ತಿದೆ. ಇದು ೧೯೯೫ರಲ್ಲಿ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಈ ಸಂಸ್ಥೆ ಬಳ್ಳಾರಿಯಲ್ಲಿ ನೂರಾರು ಚಿತ್ರಕಲಾ ವಿದ್ಯಾರ್ಥಿಗಳನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ. ಬಳ್ಳಾರಿ ಇನ್ನಿತರ ಪ್ರದೇಶಗಳಲ್ಲಿ ಚಿತ್ರಕಲಾ ಪ್ರದರ್ಶನ ಶಿಬಿರಗಳನ್ನು ಕೈಗೊಂಡಿದ್ದಾರೆ. ಮತ್ತೊಂದು ಶಿಕ್ಷಣ ಸಂಸ್ಥೆ ಹಂಪಿ ಲಲಿತಕಲಾ ಮಹಾವಿದ್ಯಾಲಯ,ಹೊಸಪೇಟೆ, ಈ ಮಹಾವಿದ್ಯಾಲಯವು ಡಿ. ಎಮ್‌. ಸಿ. ಎ. ಎಮ್‌. ಜಿ. ಡಿ. ಮುಂತಾದ ಚಿತ್ರಕಲೆ ಕುರಿತ ಡಿಪ್ಲೊಮ ತರಗತಿಗಳನ್ನು ನಡೆಸುತ್ತಿದೆ. ೧೯೯೪-೯೫ ರಿಂದಲೂ ಚಿತ್ರಕಲೆಗೆ ವಿಶೇಷವಾಗಿ ದುಡಿಯುತ್ತಿರುವ ಈ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಮಪ್ಪನವರು ನಮ್ಮ ವಿದ್ಯಾರ್ಥಿಗಳೊಂದಿಗೆ ಹಲವು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಮೂಹ ಚಿತ್ರಕಲಾ ಪ್ರರ್ದಶನವನ್ನು ಹಂಪಿ ಉತ್ಸವ ಇನ್ನಿತರ ಸನ್ನಿವೇಶಗಳಲ್ಲಿ ಚಿತ್ರಕಲಾ ಪ್ರದರ್ಶನ ಮಾಡುವುದರ ಮೂಲಕ ಜನಮೆಚ್ಚುಗೆ ಪಡೆದಿದ್ದಾರೆ. ಮತ್ತೊಂದು ಚಿತ್ರಕಲಾ ಮಹಾವಿದ್ಯಾಲಯ, ಹೂವಿನ ಹಡಗಲಿಯಲ್ಲಿದೆ. ಇದೂ ಸಹ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದೆ. ಇಲ್ಲಿಯೂ ಯುವ ಕಲಾವಿದರನ್ನು ತರಬೇತಿಗೊಳಿಸಿ ಉತ್ತಮ ಕಲಾವಿದರನ್ನು ನಿರ್ಮಿಸುವ ಕಾರ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿದೆ ಈ ಮಹಾವಿದ್ಯಾಲಯ, ಪ್ರಾಚಾರ್ಯರಾದ ವೀರೇಶ ಬಡಿಗೇರ ಉತ್ಸಾಹಿ ಯುವ ಕಲಾವಿದರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿರುವ ಹಲವಾರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಯಲ್ಲಿಯೂ ಕಲಾ ಶಿಕ್ಷಕರಿದ್ದಾರೆ. ಅವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಚಿತ್ರಕಲೆಯ ಮೂಲಕ ಕಲಿಕೆಯನ್ನು ಪ್ರೋತ್ಸಾಹಿಸಿ ಯಶಸ್ವಿಗೊಳಿಸಿದ್ದಾರೆ. ಈ ದೃಷ್ಟಿಯಿಂದ ಬಳ್ಳಾರಿಯ ಹಲವು ಸಂಘ ಸಂಸ್ಥೆಗಳು, ರೋಟರಿ ಕ್ಲಬ್‌ಗಳು ರಾಷ್ಟ್ರೀಯ ಹಬ್ಬ ಇನ್ನಿತರ ಸಂದರ್ಭಗಳಲ್ಲಿ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ಹೊಸಪೇಟೆ, ಬಳ್ಳಾರಿ, ಸಿರಗುಪ್ಪ ಮುಂತಾದ ಸ್ಥಳಗಳಲ್ಲಿ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನನ್ನು ನೀಡಿ ಪ್ರೋತ್ಸಾಹಿಸಿವೆ.

III. ಚಿತ್ರಕಲೆ ಕುರಿತ ಗ್ರಂಥಗಳು

ಬಳ್ಳಾರಿ ಜಿಲ್ಲೆಯಲ್ಲಿರುವ ಚಿತ್ರಕಲೆಯನ್ನು ಕುರಿತು ಹಲವು ಸಂಶೋಧನಾತ್ಮಕ ಲೇಖನಗಳು, ಗ್ರಂಥಗಳು ಬಂದಿವೆ. ಅವುಗಳಲ್ಲಿ ಕರ್ನಾಟಕ ಚಿತ್ರಕಲೆಯಲ್ಲಿ ಬಣ್ಣದ ಬಳಕೆ ಕೃತಿಯನ್ನು ರಚಿಸಿದ. ಕೆ. ವಿ. ಕಾಳೆ ಪ್ರಾಚೀನ ಕಾಲದಿಂದಲೂ ಇಂದಿನವರೆಗೂ ಚಿತ್ರಕಲಾ ಮಾಧ್ಯಮದಲ್ಲಿ ಬಣ್ಣದ ಬಳಕೆಯ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಇಂತಹ ಕೃತಿಯನ್ನು ೨೦೦೧ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗ ಪ್ರಕಟಿಸಿದೆ. ಬಿ. ವಿ. ಕೆ. ಶಾಸ್ತ್ರಿ ಕರ್ನಾಟಕದ ಭಿತ್ತಿ ಚಿತ್ರಗಳು ಎಂಬ ಗ್ರಂಥವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಕಟಿಸಿದೆ. ಈ ಕೃತಿಯಲ್ಲಿ ವಿಜಯನಗರ ಕಾಲದ ಭಿತ್ತಿಚಿತ್ರ ರಚನಾ ವಿಧಾನ ವಿಜಯನಗರ ಚಿತ್ರಕಲೆಯು ಒಂದು ಹೊಸ ಶೈಲಿಯನ್ನು ಹುಟ್ಟಿಹಾಕಿತೆಂದು ಗುರುತಿಸಿದ್ದಾರೆ. ಡಾ. ಕರೀಗೌಡ ಬೀಚನಹಳ್ಳಿ ಸಂಪಾದಿಸಿರುವ ಕರ್ನಾಟಕದ ಕರಕುಶಲ ಕಲೆಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗ ಪ್ರಕಟಿಸಿರುವ ಈ ಕೃತಿ ಚಿತ್ರಕಲೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಯಾದಪ್ಪ ಪರದೇಶಿ ಅವರ ಅಪ್ರಕಟಿತ ಪಿಎಚ್‌. ಡಿ. ಮಹಾಪ್ರಬಂಧವಾದ ಉತ್ತರ ಕರ್ನಾಟಕದ ಭಿತ್ತಿಚಿತ್ರಕಲೆಯ ಅಧ್ಯಯನ ಎಂಬ ಸಂಶೋಧನಾತ್ಮಕ ಪ್ರಬಂಧವು ವಿಜಯನಗರ ಕಾಲದ ಭಿತ್ತಿಚಿತ್ರದ ಮೇಲೆ ವಿಶೇಷ ಅಧ್ಯಯನ ನಡೆಸಿದೆ. ರಾಜಶೇಖರ ಸಿಂದಗಿಯವರು ಬರೆದ ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ ಕೃತಿಯಲ್ಲಿ ವಿಜಯನಗರ ಕಾಲದ ಚಿತ್ರಕಲೆಯ ಕುರಿತು ಚಿತ್ರಕಲೆಯ ಶೈಲಿ, ಕಾಲಮಾನ ಇತ್ಯಾದಿಗಳ ಮೇಲೆ ಹೊಸ ಬೆಳಕು ನೀಡುತ್ತದೆ.

. ಜಾನಪದ ಚಿತ್ರಕಲೆ

ಕರ್ನಾಟಕದ ಚಿತ್ರಕಲೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ನಮ್ಮ ಜಾನಪದರು, ಅವರ ನೋವು ನಲಿವುಗಳನ್ನು ಬಾವಪೂರ್ಣವಾಗಿ ಪ್ರತಿ ಶಬ್ಧಗಳಲ್ಲಿಯೂ ತುಂಬಿ ಹಾಡಿದರು. ಅಲ್ಲದೇ ದೃಶ್ಯಕಲಾ ಮಾಧ್ಯಮದ ಮೂಲಕವೂ ತಮ್ಮ ಜೀವನ ಕ್ರಮಗಳನ್ನು ವಿಶಿಷ್ಟವಾದ ಸಾಂಸ್ಕೃತಿಕ ಮೌಲ್ಯಗಳನ್ನು ನಮ್ಮ ಜಾನಪದರು ಚಿತ್ರಕಲೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಈ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯಲ್ಲಿನ ಹಚ್ಚೆ ಹಾಕುವ ಕಲೆ, ರಂಗೋಲೆ ಮತ್ತು ತೊಗಲು ಗೊಂಬೆಯ ಚಿತ್ರಕಲೆಯನ್ನು ಕುರಿತು ಪರಿಚಯಿಸುವ ಪ್ರಯತ್ನ ನಡೆದಿದೆ.

. ಹಚ್ಚೆ ಕಲೆ
ಭಾರತದಲ್ಲಿ ಹಚ್ಚೆ ಕಲೆಯು ಬಹು ಭಾಗದಲ್ಲಿ ಕಂಡುಬರುತ್ತದೆ. ಅದು ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಾಗಿ ಇಂದಿಗೂ ಉಳಿದುಬಂದಿದೆ. ಕರ್ನಾಟಕದಲ್ಲಿಯೂ ಬಹು ಭಾಗದಲ್ಲಿ ಹಚ್ಚೆ ಚಿತ್ರಕಲೆ ಜೀವಂತವಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ, ಕುರುಗೋಡು, ಬಳ್ಳಾರಿ. ಕೂಡ್ಲಿಗಿ, ಮುಂತಾದ ಭಾಗಗಳಲ್ಲಿ ಹಚ್ಚೆ ಚಿತ್ರಕಲೆ ಜಾನಪದ ಮನೋಭಾವದಿಂದ ಹೆಚ್ಚು ಪ್ರೇರಿತವಾಗಿದೆ. ಪೌರಾಣಿಕ, ಧಾರ್ಮಿಕ ಹಿನ್ನೆಲೆಗಳಲ್ಲಿ ಜನರು ದೇಹದ ಅಂಗಾಂಗಗಳ ಮೇಲೆ ಚಿತ್ರ ರಚನೆ ಮಾಡಿಸಿಕೊಳ್ಳುವುದು ಬಹು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂತಹ ಕಲೆಯನ್ನು ಬಳ್ಳಾರಿ ಜಿಲ್ಲೆಯ ‘ಕಿಳ್ಳೆಕ್ಯಾತ’ ಸಮುದಾಯದ ಹೆಣ್ಣು ಮಕ್ಕಳು ಹಚ್ಚೆ ಹುಯ್ಯುವ ಕಲೆಯನ್ನು ರೂಢಿಗತಗಳಿಸಿಕೊಂಡಿದ್ದಾರೆ. ಇದು ಅವರಿಗೆ ಕುಲ ಕಸುಬಾಗಿದೆ.ಹಚ್ಚೆ ಹುಯ್ಯುವ ಕಲೆಗೆ ಆದಿವಾಸಿಗಳು ಕೊಟ್ಟಷ್ಟು ಮಹತ್ವ ಬೇರಾವುದಕ್ಕೂ ಕೊಟ್ಟಿಲ್ಲವೆಂದು ತೋರುತ್ತದೆ. ಹಚ್ಚೆ ಅವರ ಬಾಳಿನ ಸಂಗಾತಿ. ಮನುಷ್ಯ ಏನೇ ದುಡಿದರೂ, ಸಂಪಾದಿಸಿದರೂ ಕೊನೆಯಲ್ಲಿ ಅವನು ಏನು ತನ್ನ ಜೊತೆಯಲ್ಲಿ ಒಯ್ಯುವುದಿಲ್ಲ. ಆದರೆ, ಹಚ್ಚೆ ಚಿತ್ರಗಳು ತಮ್ಮ ಜೊತೆಯಲ್ಲಿಯೇ ಬರುತ್ತವೆ ಎಂಬ ನಂಬಿಕೆ ಇದೆ. ಕಿಳ್ಳೆಕ್ಯಾತ ಸಮುದಾಯದ ಮಹಿಳೆಯರು ಹಚ್ಚೆ ಒಯ್ಯಲು ಬೇಕಾದ ಸಲಕರಣೆಗಳನ್ನು ತಾವೇ ತಯಾರು ಮಾಡುತ್ತಾರೆ. ವಿವಿಧ ಜಾತಿಯ ಎಲೆಗಳಿಂದ ರಸವನ್ನು ತೆಗೆದು ಅದನ್ನು ಬಟ್ಟಿ ಇಳಿಸಿ ಕವಳೆ ಹಣ್ಣಿನ ಗಾತ್ರದ ಕರಿ ಬಣ್ಣದ ಚಿಕ್ಕ ಚಿಕ್ಕ ಕಾಡು ಹಣ್ಣುಗಳನ್ನು ಕುದಿಸಿ ಬಟ್ಟಿ ಇಳಿಸಿದ ರಸದಲ್ಲಿ ಸೇರಿಸಿ ಪಾಕ ಮಾಡಿಕೊಳ್ಳುತ್ತಾರೆ. ಇದಕ್ಕೆ ಹಚ್ಚೆರಸ ಎಂದು ಕರೆಯುತ್ತಾರೆ. ಇದನ್ನು ಅವರು ಗುಟ್ಟಾಗಿ ಇಟ್ಟಿರುತ್ತಾರೆ. ಯಾವ ಕಾರಣಾಕ್ಕೂ ಹಚ್ಚೆರಸ ತಯಾರಿಕ ವಿಧಾನವನ್ನು ಯಾರಿಗೂ ಹೇಳುವುದಿಲ್ಲ. ಇದು ಸಾಮಾನ್ಯವಾಗಿ ಕೆಲವೇ ಕುಟುಂಬದಲ್ಲಿ ವಂಶ ಪಾರಂಪರ್ಯಾವಾಗಿ ತಮ್ಮ ಸದಸ್ಯರಲ್ಲಿಯೇ ಉಳಿದು ಬಂದಿದೆ. ಇದು ಅವರ ವೃತ್ತಿಯ ಪ್ರತಿಷ್ಠೆಯ ಕುರುಹು ಆಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹಚ್ಚೆ ಮಸಿ ತಾಯಾರಿಸುವ ಮತ್ತೊಂದು ವಿಧಾನವಿದ್ದು, ಇದಕ್ಕೆ ಹಚ್ಚೆಯ ಕಪ್ಪು ತಯಾರಿಸುವುದು ಎನ್ನುತ್ತಾರೆ, ಹಚ್ಚೆಯ ಕಪ್ಪು ಬಣ್ಣವನ್ನು ಸಿದ್ಧಗೊಳಿಸುವ ರೀತಿ ಹೀಗಿದೆ. ಹೊಸ ಗಡಿಗೆಯನ್ನು ತಂದು ಅದರ ಕಂಟ ಒಡೆದು ಗಡಿಗೆಯನ್ನು ಕಂಟ ರಹಿತಗೊಳಿಸುವರು. ನಂತರ ಹಚ್ಚೆ ಸೊಪ್ಪು, ಒಣ ಅಂಚರಕಿ ಸೊಪ್ಪು, ಅರಿಷಿಣಗಳನ್ನು ಸಮನಾಗಿ ಕೂಡಿಸಿ, ಕುಟ್ಟಿ, ನೀರು ಬೆರೆಸಿ ರಸ ಮಾಡುತ್ತಾರೆ. ಈ ರಸವನ್ನು ಆ ಹೊಸ ಗಡಿಗೆಯ ಒಳ ಬದಿಗೆ ಲೇಪಿಸುತ್ತಾರೆ.ಇದಾದ ಮೇಲೆ ಅರ್ಧ ಕಿಲೋ ಒಳ್ಳೆ ಎಣ್ಣೆ, ಔಡಲ ಎಣ್ಣೆಯನ್ನು ಪಣತಿಯಲ್ಲಿ ಹಾಕಿ ಒಂಬತ್ತು ಬತ್ತಿಗಳು ಪಣತಿಯಲ್ಲಿ ಉರಿಯುವಂತೆ ಮಾಡಿ ಅದನ್ನು ಆ ಹೊಸ ಗಡಿಗೆಯಲ್ಲಿ ಇಡುತ್ತಾರೆ. ಆ ಗಡಿಗೆಯ ಮೇಲೆ ಡಬ್ಬಿಯೊಂದನ್ನು ಮುಚ್ಚುತ್ತಾರೆ. ಸಮಾನಾಂತರದಲ್ಲಿರುವ ಬತ್ತಿಗಳು ರಾತ್ರಿ ಇಡಿ ಉರಿಯುತ್ತವೆ. ಬೆಳಗ್ಗೆ ಮುಚ್ಚುಳ ತೆಗೆದಾಗ ದೀಪದ ಕಪ್ಪು ಹಚ್ಚೆಯ ಸೊಪ್ಪಿನ ಒಣ, ಅಂಚರಕಿ ಸೊಪ್ಪಿನ, ಅರಿಷಿನ ಮಿಶ್ರಣದ ರಸದೊಂದಿಗೆ ಸರಿ ಬೆರಕೆಯಾಗಿರುತ್ತದೆ ಈ ಕಪ್ಪನ್ನು ಸಣ್ಣ ಕುಡಿಕೆಯಲ್ಲಿ ತಮಗೆ ಬೇಕಾದಷ್ಟು ಸಂಗ್ರಹಿಸಿಕೊಂಡು ಹಚ್ಚೆ ಹುಯ್ಯಲು ಬಳಸುತ್ತಾರೆ. ಹೀಗೆ ಸಿದ್ಧವಾದ ಹಚ್ಚೆ ರಸದಿಂದ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಹಚ್ಚೆ ಹುಯ್ಯುವ ಕ್ರಮವನ್ನು ಅನುಸರಿಸುತ್ತಾರೆ. ಕಿಳ್ಳೆಕ್ಯಾತ ಸಮುದಾಯದ ಮಹಿಳೆಯರು ಹಚ್ಚೆ ಹಾಕುವ ವಿಧಾನ ಹೀಗಿದೆ. ಹಚ್ಚೆ ಹುಯ್ಯುವವಳ ಎದುರಿಗೆ ಬಂದು ಕುಳಿತುಕೊಳ್ಳುತ್ತಾರೆ. ಅದಕ್ಕೆ ಪೂರ್ವದಲ್ಲಿ ಒಂದು ಮರದಲ್ಲಿ ಜೋಳ ಅಥವಾ ರಾಗಿಯನ್ನು ಹಾಕಿ ಅದರಲ್ಲಿ ವೀಳ್ಯದೆಲೆ ದುಡ್ಡನ್ನು ಇಡುತ್ತಾರೆ. ಇದು ಹಚ್ಚೆ ಹಾಕುವವರಿಗೆ ಕೊಡುವ ಹಣವೂ ಅಗಿರುತ್ತದೆ. ಅನಂತರ ಮನೆಯ ಒಂದು ನೀರ್ದಿಷ್ಟ ಸ್ಥಳದಲ್ಲಿ ಕುಳಿತು ತಮಗೆ ಬೇಕಾದ ಹೆಸರನ್ನು, ಚಿತ್ರವನ್ನು ಅಥವಾ ಇನ್ನ್ಯಾವುದೋ ರೀತಿಯ ಆಕೃತಿಯನ್ನು ಕೈಗಳ ಮೇಲೆ ಹಾಕಿಸುವುದುಂಟು. ಕೆಲವೊಮ್ಮೆ ದೇಹದ ಇನ್ನಿತರ ಭಾಗದಲ್ಲಿಯೂ ಹಾಕಿಸಿಕೊಳ್ಳುತ್ತಾರೆ. ಹಚ್ಚೆ ಹುಯ್ಯುವ ಕ್ರಮವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಸೂಜಿ ಗಾತ್ರದ ಆಯುಧಗಳಿಂದ ಮೊದಲು ಆಕೃತಿ ಬರೆದುಕೊಂಡು ಕ್ರಮೇಣ ಧ್ವನಿ ಎತ್ತರಿಸಿ ಲಯಬದ್ಧವಾಗಿ ಹಾಡುತ್ತಾ ಹಚ್ಚೆ ಒಯ್ಯುತ್ತಾರೆ. ಆಗ ನೋವಾಗುವುದು ಸಹಜವಾದರೂ ತಮ್ಮ ಎಸುರಿನಲ್ಲೇ ಕಣ್ಣಮುಚ್ಚಿ ಹಚ್ಚೆ ಹುಯ್ಯುಸಿಕೊಳ್ಳುವವರು ಕುಳಿತಿರುತ್ತಾರೆ. ಅವರನ್ನು ನಗಿಸುವ ಕಿಳ್ಳೆಕ್ಯಾತ ಮಹಿಳೆಯರ ಚಾತುರ್ಯ ಮೆಚ್ಚುವಂಥದ್ದು, ಒಮ್ಮೆ ಹಚ್ಚೆ ಹುಯ್ದನಂತರ ಅದು ಯಾವ ಕಾರಣಕ್ಕೂ ಅಳಿಸುವುದಿಲ್ಲ. ಇದೊಂದು ಜಾನಪದ ರೀತಿಯ ಕಲೆಯಾಗಿದ್ದು, ಅದರಲ್ಲಿ ಹಲವಾರು ವರ್ಷಗಳಿಂದ ಕರಗತವಾದ ಪರಿಣಿತಿ ಇರುತ್ತದೆ. ಬಣ್ಣ ತಯಾರಿಕೆಯಿಂದ ಹಿಡಿದು ಹಚ್ಚೆ ಹುಯ್ಯುವವರೆಗೂ ಅವರಲ್ಲಿನ, ಶ್ರದ್ಧೆ, ತಾಳ್ಮೆ, ಸಂಯಮ ಅಸಾಮಾನ್ಯ ವಾಗಿರುತ್ತದೆ ದೇಹದ ಮೇಲೆ ಕಲಾಕೃತಿಗಳ ರೂಪದ ರೇಖೆಗಳು ಮೂಡಿಸುತ್ತವೆ. ಹಚ್ಚೆ ಹಾಕಿಕೊಳ್ಳುವ ಶರೀರದ ಪ್ರಮುಖ ಭಾಗಗಳನ್ನು ಶಾರೀರಿಕ ಅಂಗರಚನಾ ವಿನ್ಯಾಸದ ಹಿನ್ನೆಲೆಯಲ್ಲಿ ಮುಖದ ಹಚ್ಚೆ, ಕೊರಳ ಹಚ್ಚೆ, ಕೈಯ ಹಚ್ಚೆ, ಎದೆಯ ಹಚ್ಚೆ, ಹೊಟ್ಟೆಯ ಹಚ್ಚೆ, ಸುತ್ತಲಿನ ಹಚ್ಚೆ, ಬೆನ್ನಹಚ್ಚೆ, ಗುಪ್ತಾಂಗದ ಹಚ್ಚೆ, ಕಾಲಿನ ಹಚ್ಚೆ, ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಳ್ಳಾರಿ ಜಿಲ್ಲೆಯ ಎಲ್ಲ ಸ್ಥಳಗಳಲ್ಲಿಯೂ ಕೈಗಳಲ್ಲಿ ಮಾತ್ರವೇ ಹೆಚ್ಚಾಗಿ ಹಚ್ಚೆ ಹಾಕಿಸಿಕೊಳ್ಳುವ ರೂಢಿ ಇದೆ. ಅದನ್ನು ಬಲಗೈ ಹಚ್ಚೆ ಎಡಗೈ ಹಚ್ಚೆ ಎಂಬುದಾಗಿ ಗುರುತಿಸಬಹುದು. ಬಲಗೈ ಹಚ್ಚೆ ಚಿತ್ರ ಮೊಣಕೈಯಿಂದ ಹಿಡಿದು ಮುಂಗೈವರೆಗಿನ ಚಿತ್ರಗಳಲ್ಲಿ ಪ್ರಮುಖವಾದವು. ಗಿಳಿ, ಪದ್ಮಾ, ಯಾಲಕ್ಕಿ, ಸಾಲು, ನಾಣ್ಯಗಳ ಸಾಲು, ನವಗ್ರಹಗಳು, ಏಳು ಮಕ್ಕಳತಾಯಿ, ಕರಿಮನೆ ಸಾಲು, ಜೋಗಿ ಜಡೆ, ಶಿವನ ಬಾಸಿಂಗ, ಸೀತೆ ಸೆರಗು, ಮಲ್ಲಿಗೆ ದಂಡೆ, ತುಳಸಿ ಗಿಡ, ನಾಗಪ್ಪ, ನಾಗರ ಹಚ್ಚೆ, ಪಗಡಿ ಸಾಲು ಇಲ್ಲವೇ ಸೋದರ ಸೋದರಿಯರ ಹೆಸರು, ಗಂಡ ಅಥವಾ ಹೆಂಡತಿಯ ಹೆಸರು, ಪ್ರಿಯಕರನ ಹೆಸರು, ಗೆಳತಿ-ಗೆಳೆಯರ ಹೆಸರು ಇತ್ಯಾದಿಯಾಗಿ ಹಚ್ಚೆಯ ಮೂಲಕ ಬರೆಸಿಕೊಳ್ಳುತ್ತಾರೆ. ಎಡಗೈ ಹಚ್ಚೆಯಲ್ಲಿ ಮುಖ್ಯವಾಗಿ ಮೂಡಿ ಬಂದಿರುವ ಚಿತ್ರಗಳೆಂದರೆ, ಇವು ಸ್ತ್ರೀಯರಲ್ಲಿ ಅಧಿಕ ಪ್ರಮಾಣವಾಗಿ ಪುರುಷರಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ. ಎಡಗೈಯ ಮೊಣಕೈ ಹಚ್ಚೆಯಲ್ಲಿ ಕಂಡುಬರುವ ಪ್ರಮುಖ ಚಿತ್ರಗಳೆಂದರೆ, ಗೌರಿ ಗದ್ದಿಗೆ, ಜೋಗಿ ಜಡೆ, ತಾವರೆ ಹೂ, ಗಾಲಿ, ತೇರು, ಬಸವಣ್ಣನ ರಥ, ಹಂಪಿ ತೇರು, ಕುಮಾರ ರಾಮನ ಚಂಡು, ಕಮಲದ ಹೂ, ಪಾರಿಜಾತದ ಹೂ, ನಂದಿ ಕೋಲು, ಚೇಳು, ರಂಗೋಲೆ. ಗಿಳಿ, ನವಿಲು ಮುಂತಾದ ನೂರಾರು ಚಿತ್ರಗಳು ವಿವಿಧ ವಿನ್ಯಾಸದಲ್ಲಿ ಮೂಡಿವೆ. ಇಂದಿನ ಆದುನಿಕ ಬದಲಾವಣೆಯ ಸನ್ನಿವೇಶಗಳಲ್ಲಿಯೂ ಹಚ್ಚೆಯ ಕಲೆ ಬಳ್ಳಾರಿ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಇನ್ನೂ ಕಂಡುಬರುತ್ತದೆ.

. ರಂಗೋಲಿಯ ಕಲೆ

ಬಳ್ಳಾರಿ ಜಿಲ್ಲೆಯಲ್ಲಿ ರಂಗೋಲಿ ಚಿತ್ರಕಲೆ ಎಲ್ಲ ಗ್ರಾಮ, ನಗರಗಳಲ್ಲಿಯೂ ಕಂಡು ಬರುತ್ತವೆ. ಬದುಕಿನ ಸಂತೋಷ, ಮಂಗಳಕರ, ಪ್ರಸನ್ನತೆ, ಶುಭ ಸನ್ನಿವೇಶವನ್ನು ಹೇಳುವ ಲಾಲಿತ್ಯಪೂರ್ಣ ಕಲಾ ಕೌಶಲ್ಯವೇ ರಂಗೋಲಿ. ಈ ಕಲೆಯನ್ನು ಸೌಂದರ್ಯ ಪ್ರಜ್ಞೆಯ ದ್ಯೋತಕವಾಗಿಯೂ ಬಳಸುತ್ತಾರೆ. ಕರ್ನಾಟಕದಲ್ಲಿ ಪ್ರಚಲಿತವಿರುವ ನಾಣ್ನುಡಿಯಲ್ಲಿ “ರಂಗ ಬರುತ್ತಾನೆಂದು ರಂಗೋಲಿನ ಹೊಯ್ದೆ. ರಂಗ ಬರುತ್ತಾನೆ ಇಲ್ಲವೋ ಗೊತ್ತಿಲ್ಲ” ಎಂಬ ಮಾತಿದೆ. ಬಳ್ಳಾರಿಯ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ ಹೆಣ್ಣು ಮಕ್ಕಳು ಬೆಳಿಗ್ಗೆ ಎದ್ದೊಡನೆ ಹೊಸ್ತಿಲು ತೊಳೆದು ಅಂಗಳ ಸಾರಿಸಿ, ರಂಗೋಲಿಯನ್ನು ಹಾಕಿ ಹೊಸ್ತಿಲು ಪುಜೆ ಮಾಡಿ ದಿನಗೆಲಸ ಆರಂಭಿಸುವುದು ಸಂಪ್ರದಾಯವಾಗಿದೆ. ಈ ರಂಗೋಲಿ ಪದವನ್ನು ಬಿಡಿಸಿದಾಗ ಇಲ್ಲಿ ‘ರಂಗ’ ಎಂದರೆ, ಬಣ್ಣ ‘ವಲ್ಲಿ’ ಎಂದರೆ ಬಳ್ಳಿ ಎಂದರ್ಥ. ಬಣ್ಣದ ಸಾಲು, ಬಣ್ಣದ ಗೆರೆಗಳ ಸಮೂಹವೇ ರಂಗೋಲಿ ಎಂದು ಕರೆಯಬಹುದು. ಬಳ್ಳಾರಿ ಜಿಲ್ಲೆಯ ಗ್ರಾಮಂತರ ಜನ ವಿವಿಧ ಕಾಲಾವಧಿಯಲ್ಲಿ ರಂಗೋಲಿಯನ್ನು ಹಾಕುವ ಸಂಪ್ರದಾಯವಿದೆ. ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ, ರಾತ್ರಿಯಲ್ಲಿಯೂ ತಾಂತ್ರಿಕ ಆಚರಣೆಯಲ್ಲಿ ಮಧ್ಯಾಹ್ನದಲ್ಲಿಯೂ ರಂಗೋಲಿ ಹಾಕುತ್ತಾರೆ. ಈ ಪ್ರದೇಶದಲ್ಲಿರುವ ರಂಗೋಲಿಯನ್ನು ನಿತ್ಯದ ರಂಗೋಲಿ ನಿರ್ದಿಷ್ಟ ವಾರದ ರಂಗೋಲಿ, ತಿಂಗಳ ರಂಗೋಲಿ ಮುಂತಾಗಿ ಗುರುತಿಸಬಹುದು. ಹಾಗೂ ರಂಗೋಲಿ ಹಾಕುವ ವಿಧಾನವನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯ ಕ್ರಮ ಚುಕ್ಕೆಯಿಂದ ಚುಕ್ಕೆಗೆ ಗೆರೆಗಳನ್ನು ಕೂಡಿಸುತ್ತಾ ಅಪೇಕ್ಷಿತ ಚಿತ್ರಕಲಾ ಕೃತಿಗಳನ್ನು ತೆಗೆಯುವ ವಿಧಾನ. ಚುಕ್ಕಿಯ ರಂಗೋಲಿ ಎಂದು ಹೇಳುತ್ತಾರೆ. ಇದು ಚಿಕ್ಕವರಿಗೆ ರಂಗೋಲಿ ಹಾಕಲು ಕಲಿಸುವ ವಿಧಾನವಾಗಿದೆ. ಎರಡನೆಯ ಕ್ರಮ ಚುಕ್ಕೆ ರಹಿತ ರಂಗೋಲಿ. ಯಾವುದೇ ರೀತಿಯ ಚುಕ್ಕೆಗಳನ್ನು ಇಡದೇ ನೇರವಾಗಿ ರಂಗೋಲೆ ಹಾಕುವ ಕ್ರಮವನ್ನು ಚುಕ್ಕೆರಹಿತ ರಂಗೋಲೆ ಎಂದು ಕರೆಯುತ್ತೇವೆ. ಎಲೆ, ಹೂಗಿಡ, ಪಕ್ಷಿ, ಪ್ರಾಣಿ ಮುಂತಾದ ಆಕೃತಿಗಳನ್ನು ಹಾಕಲಾಗುತ್ತದೆ. ದೆವರ ಮುಂದೆ ಬರೆಯುವ ರಂಗೋಲಿಗಳಲ್ಲಿ ಪಂಚಕೋನ, ಷಟ್ಕೋನಗಳ ನಕ್ಷತ್ರಗಳು, ಶಂಖ, ಕಮಲಪುಷ್ಪ, ಚಕ್ರ , ಸ್ವಸ್ತಿಕ್‌ಮುಂತಾದವುಗಳು ಶುಭ ಸಂಕೇತವಾಗಿರುತ್ತವೆ. ಮನೆಯ ಮುಂದಿರುವ ತುಳಸಿಕಟ್ಟಿಯ ಹತ್ತಿರ, ಇಲ್ಲವೇ ಮನೆಯ ಪಡಸಾಲೆಯ ಮೂಲೆಯಲ್ಲಿಯೂ ವಿಶೇಷ ಸಂದರ್ಭಗಳಲ್ಲಿ, ವಿವಿಧ ರೀತಿಯ ರಂಗೋಲಿ ಚಿತ್ರಗಳನ್ನು ರಚಿಸುತ್ತಾರೆ.

. ತೊಗಲು ಗೊಂಬೆ ಚಿತ್ರಕಲೆ

ತೊಗಲು ಗೊಂಬೆಯ ಆಟವು ಪ್ರಾಚೀನ ಕಾಲದಿಂದಲೂ ಕರ್ನಾಟಕದಲ್ಲಿ ಬೆಳೆದು ಬಂದಿದೆ. ಇದರಿಂದ ಬಳ್ಳಾರಿ ಜಿಲ್ಲೆಯೂ ಹೊರತಾಗೇನಿಲ್ಲ. ಬಳ್ಳಾರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಈಗಲೂ ತೊಗಲು ಗೊಂಬೆಯಾಟ ಆಡುವ ಜನರಿದ್ದಾರೆ. ತೊಗಲು ಗೊಂಬೆಗಳ ಮೇಲೆ ವರ್ಣಚಿತ್ರಗಳಿಂದ ಅಲಂಕರಿಸಿದರೆ, ಅವು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಹೀಗಾಗಿ ತೊಗಲು ಗೊಂಬೆಗಳ ಸೊಬಗು ವಿನ್ಯಾಸ ಆಕರ್ಷಣೆಯಲ್ಲಿ ಅವುಗಳ ಬಣ್ಣದ ಮಹತ್ವವನ್ನು ನಿರ್ಲಕ್ಷಿಸುವಂತಿಲ್ಲ. ಹಿಂದೆ ಎಲ್ಲವೂ ಕಪ್ಪು ಬಿಳುಪಿನ ಗೊಂಬೆಗಳೇ ಇದ್ದವೆಂದು ಕಾಲಕ್ರಮೇಣ ಬಣ್ಣದ ಗೊಂಬೆಗಳು ಬೆಳಕಿಗೆ ಬಂದವೆಂದು ಹೇಳುತ್ತಾರೆ. ಈಗ ಕರ್ನಾಟಕದ ಎಲ್ಲ ಭಾಗದಲ್ಲಿಯೂ ಬಣ್ಣದ ಗೊಂಬೆಗಳೇ ಹೆಚ್ಚಾಗಿ ಕಾಣುತ್ತವೆ. ತೊಗಲು ಗೊಂಬೆಗೆ ಬಳಸುವ ಬಣ್ಣ ವಿಶೇಷವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಬಣ್ಣವನ್ನು ಬಳಸುವುದಿಲ್ಲ. ತೊಗಲು ಗೊಂಬೆ ಆಟಗಾರರು ತಾವೇ ನೈಸರ್ಗಿಕವಾಗಿ ದೊರೆಯುವ ಎಲೆ ಮತ್ತು ಕಾಯಿಗಳಿಂದ ತಯಾರಿಸಿಕೊಂಡ ಬಣ್ಣಗಳು ಯಾವಾಗಲೂ ತಮ್ಮ ಗಟ್ಟಿತನವನ್ನು ಉಳಿಸಿಕೊಳ್ಳುತ್ತವೆ ಎಂಬುದು ಅವರ ನಂಬಿಕೆಯಾಗಿದೆ. ತೊಗಲು ಗೊಂಬೆಗಳಲ್ಲಿ ಪ್ರಮುಖವಾಗಿ ಕಪ್ಪು, ಕೆಂಪು, ನೀಲಿ, ಸಿಂಧೂರ, ಹಳದಿ ಬಣ್ಣಗಳನ್ನು ಲೇಪಿಸುತ್ತಾರೆ. ಇಂತಹ ತೊಗಲು ಗೊಂಬೆ ತಯಾರಿಕೆಯಲ್ಲಿ ಆಗುವ ಚಿತ್ರಕಲೆಯಲ್ಲಿ ಬಳ್ಳಾರಿ ಕೌಲ್‌ಬಜಾರಿನ ದಿವಂಗತ ಹುಲಿಯಪ್ಪ ಅವರ ಮಗನಾದ ಎರ್ರಿಸ್ವಾಮಿ ಇವರು ಆಳೆತ್ತರದ ತೊಗಲು ಗೊಂಬೆಗಳಿಗೆ ಬಣ್ಣ ಬಳಿಯುವಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಅದೇ ರೀತಿ ಬಳ್ಳಾರಿಯ ಬೆಳಗಲ್‌ವೀರಣ್ಣ, ಕೂಡ್ಲಿಗಿ ತಾಲ್ಲೂಕಿನ ಬಡ್ಳಡಿಕೆ ಗ್ರಾಮದ ತಿಪ್ಪೇಸ್ವಾಮಿ, ಹೊಸಪೇಟೆ ತಾಲ್ಲೂಕಿನ ಕಾರಿಗನೂರಿನ ನಾರಾಯಣಪ್ಪ, ಬಳ್ಳಾರಿ ತಾಲ್ಲೂಕು ರೂಪನಗುಡಿಯ ಶ್ರೀಮತಿ ಮಲ್ಲಮ್ಮ ಇನ್ನೂ ಮುಂತಾದವರು ತೊಗಲು ಗೊಂಬೆಯ ಚಿತ್ರಕಲೆಯಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಸಾಮಾನ್ಯವಾಗಿ ತೊಗಲು ಗೊಂಬೆಯ ಮೇಲೆ ದಾರ್ಮಿಕ ಪ್ರಭಾವಲಯವನ್ನು ಚಿತ್ರಿಸಲಾಗುತ್ತದೆ. ದಾರ್ಮಿಕ ಕಥಾವಸ್ತುವಿನ ಹಿನ್ನೆಲೆಯಲ್ಲಿ ಇರುತ್ತದೆ. ಇವುಗಳನ್ನು ದೇವಾದಿ ದೇವತೆಗಳ ಚಿತ್ರ, ರಾಮಾಯಣದ ಚಿತ್ರ, ಮಹಾಭಾರತದ ಚಿತ್ರ, ಭಾಗವತ, ಬುಡಕಟ್ಟು ಚಿತ್ರಗಳು ಇನ್ನೂ ಮುಂತಾದವುಗಳು ಇರುತ್ತವೆ. ದೇವಾದಿ ದೇವತೆಗಳ ಚಿತ್ರಗಳು ತೊಗಲು ಗೊಂಬೆಯ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುವ ಮೊದಲ ಚಿತ್ರಗಳಾಗಿವೆ. ಗಣೇಶ ಮತ್ತು ಸರಸ್ವತಿಯ ಗೊಂಬೆಗಳು ಮುಖ್ಯವಾಗಿರುತ್ತವೆ. ಆಟದ ಆರಂಬದಲ್ಲಿಯೇ ಗಣೇಶ ದೇವತಾಸ್ತುತಿಯೊಂದಿಗೆ ಆಟ ಆರಂಭವಾಗುತ್ತದೆ. ಉಳಿದ ಪಾತ್ರದ ತೊಗಲು ಗೊಂಬೆಗಳನ್ನು ನಂತರದಲ್ಲಿ ಪ್ರವೇಶಗೊಳಿಸುತ್ತಾರೆ. ದಶಾವತಾರದ ತೊಗಲು ಗೊಂಬೆ ಚಿತ್ರಕಲೆಯು ವಿಷ್ಣುವಿನ ಹತ್ತು ಅವತಾರಗಳ ಕಥಾನಕವನ್ನು ಒಳಗೊಂಡಿರುತ್ತದೆ. ಹತ್ತು ಅವತಾರಕ್ಕೆ ಸಂಬಂದಿಸಿದ ಪ್ರಮುಖ ಪೌರಾಣಿಕ ಹಿನ್ನೆಲೆಯನ್ನು ಆದರಿಸಿ ಚಿತ್ರ ರಚಿಸಲಾಗಿರುತ್ತದೆ. ರಾಮಾಯಣದ ತೊಗಲು ಗೊಂಬೆಯಾಟದಲ್ಲಿ ರಾಮ, ಲಕ್ಷ್ಮಣ, ಸೀತೆ ಹನುಮಂತ, ರಾವಣ, ಇಂದ್ರಜಿತ್‌, ಅಶೋಕನವದ ಸೀತೆ, ವಾನರ ಸೈನ್ಯ ಮುಂತಾದ ಚಿತ್ರಗಳು ಕಂಡುಬರುತ್ತದೆ. ಮಹಾಭಾರತ ತೊಗಲು ಗೊಂಬೆ ಆಟದ ಗೊಂಬೆಗಳಲ್ಲಿ ಮಹಾಭಾರತದ ಕಥಾನಕದಲ್ಲಿ ಬರುವ ಪ್ರಮುಖ ದೃಶ್ಯಗಳನ್ನಾಧರಿಸಿ ಚಿತ್ರ ರಚಿಸಲಾಗಿರುತ್ತದೆ. ಇಲ್ಲಿ ಭೀಮ, ಶಕುನಿ, ಅರ್ಜುನ, ಕೃಷ್ಣ, ಬಕ, ಕೀಚಕನಂಥವರನ್ನು ಕುರಿತ ಚಿತ್ರಗಳು ಭವ್ಯ ಕಲ್ಪನೆಗೆ ಎಟಕುವಂತಿರುತ್ತವೆ.

. ಸಮಾರೋಪ

ಭಾರತದ ಚಿತ್ರಕಲಾ ಇತಿಹಾಸದಲ್ಲಿ ಸಂಪ್ರದಾಯಿಕ ಚಿತ್ರಕಲೆಗೆ ಮಹತ್ವದ ಸ್ಥಾನವಿರುವಂತೆ ಅಧುನಿಕ ಪ್ರಕಾರಗಳು ಬೆಳೆಯುತ್ತಿವೆ. ಇದರಂತೆ ಕರ್ನಾಟಕವು ಚಿತ್ರಕಲೆಗೆ ಬಹುಮುಖ್ಯ ಕೊಡುಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಚಿತ್ರಕಲೆಯೂ ಪ್ರಾಗೈತಿಹಾಸ, ಕಾಲದಿಂದ ಹಿಡಿದು ಅಧುನಿಕ ಕಾಲಾವಧಿಯವರೆಗೂ ಬೆಲೆದು ಬಂದ ಕ್ರಮವನ್ನು ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನ ನಡೆದಿದೆ. ಗವಿವರ್ಣ ಮತ್ತು ಬಯಲು ಬಂಡೆ ಚಿತ್ರಗಳನ್ನು ಪ್ರಾಗೈತಿಹಾಸಿಕ ಕಾಲದಲ್ಲಿ ಬೇರೆ ಬೇರೆ ಜನಾಂಗದವರು ಬಳ್ಳಾರಿ ಜಿಲ್ಲೆಯ ಹಂಪಿ ಸೇರಿದಂತೆ ಸಂಗನಕಲ್ಲು, ತೆಕ್ಕೆಲಕೋಟೆ ಮುಂತಾದ ಸ್ಥಳಗಳ ಚಿತ್ರಗಳನ್ನು ಕುರಿತು ಇಲ್ಲಿ ವಿವೇಚಿಸಲಾಗಿದೆ. ಒಂದೇ ಸ್ಥಳದಲ್ಲಿರುವ ಚಿತ್ರಗಳು ಬೇರೆ ಬೇರೆ ಕಾಲದವು ಆಗಿವೆ. ಬಹಳಷ್ಟು ಚಿತ್ರಗಳ ಕಾಲಮಾನವನ್ನು ನಿರ್ಧರಿಸುವುದು ಕಷ್ಟ ಸಾಧ್ಯ. ಆದರೂ, ಅವುಗಳ ನೆಲೆ, ಸ್ಥಿತಿ, ಚಿತ್ರಗಳ ವಸ್ತು, ನಿರೂಪಣಾ ಶೈಲಿ, ತಾಂತ್ರಿಕತೆ, ಸಮೀಪದ ಸಾಂಸ್ಕೃತಿಕ ನೆಲೆಯ ಮೂಲಕ ಗ್ರಹಿಸಬಹುದಾಗಿದೆ. ವಿಜಯನಗರ ಕಾಲದ ಭಿತ್ತಿ ಚಿತ್ರಕಲೆಗಳಿಗೂ ಅವುಗಳದೇ ಆದ ಮಹತ್ವದ ಸ್ಥಾನವಿದೆ. ಈ ಪ್ರದೇಶದ ಜನರ ಜೀವನ ವಿಧಾನ. ಆಚಾರ, ವಿಚಾರ, ನಂಬಿಕೆ ಮುಂತಾದವುಗಳು ಅವರ ಭಿತ್ತಿ ಚಿತ್ರಗಳ ರಚನೆ ಮೇಲೆ ಪ್ರಭಾವ ಬೀರಿ ಈ ಪರಂಪರೆಯು ವೈವಿಧ್ಯಮಯವಾಗಿ ರೂಪುಗೊಂಡಿದೆ. ಸಾಂಸ್ಕೃತಿಕ ಅಧ್ಯಯನ ಮಾಡುವವರೆಗೆ ವಿಪುಲವಾದ ಸಾಮಗ್ರಿ ವಿಜಯನಗರದ ಕಾಲದ ಭಿತ್ತಿ ಚಿತ್ರಕಲಾ ಕೃತಿಗಳಲ್ಲಿ ಇರುವುದನ್ನು ಕಾಣಬಹುದು. ಇಲ್ಲಿ ರಂಗೋಲಿ ಕೇವಲ ಸೌಂದರ್ಯಕ್ಕಾಗಿ ಅಲ್ಲ. ಮನರಂಜನೆಗಾಗಿಯೂ ಅಲ್ಲ. ಅಲ್ಲಿರುವ ವಿಧಿ ಕ್ರಿಯೆ ಸ್ತ್ರೀಯರ ವ್ಯಕ್ತಿಗತ ಮನೋಭಾವ ಮುಂತಾದವುಗಳನ್ನು ಹಚ್ಚೆ ಮತ್ತು ತೊಗಲು ಗೊಂಬೆ ಚಿತ್ರಕಲೆಯೂ ನಮ್ಮ ಸಂಸ್ಕೃತಿಯ ಅಂಗವಾಗಿ ಹುಟ್ಟಿ ಬೆಳೆದು ಉಳಿದು ಬಂದಿರುವುದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಇದಲ್ಲದೇ ಇತ್ತೀಚಿನ ಕಲಾವಿದರು ಚಿತ್ರಕಲೆಯನ್ನು ಮುಂದುವರೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ಗುರುತಿಸಲಾಗಿದೆ.