ಪೀಠಿಕೆ

ಪ್ರಾಗೈತಿಹಾಸಿಕ ಕಾಲದ ವರ್ಣಚಿತ್ರಕಲೆಯ ಕಾಲಾವಧಿಯಿಂದ ಹಿಡಿದು ಇತ್ತೀಚಿನ ಕಾಲಾವಧಿಯವರೆಗೂ ಬಳ್ಳಾರಿ ಜಿಲ್ಲೆಯಲ್ಲಿ ವರ್ಣಚಿತ್ರಕಲೆ ಬೆಳೆದು ಬಂದ ಕ್ರಮವನ್ನು ಕುರಿತು ವಿಶ್ಲೇಷಿಸುವುದು ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯು ಚಿತ್ರಕಲೆಗೆ ತನ್ನದೇ ಆದ ಪ್ರೋತ್ಸಾಹವನ್ನು ನೀಡಿದೆ. ಪ್ರಾಗೈತಿಹಾಸಿಕ ಕಾಲದ ವರ್ಣಚಿತ್ರಗಳು, ವಿಜಯನಗರ ಕಾಲದ ಭಿತ್ತಿಚಿತ್ರಗಳು, ವಿಜಯನಗರೋತ್ತರ ಕಾಲದಿಂದಲೂ ಜಾನಪದಶೈಲಿಯ ಚಿತ್ರಗಳಾದ, ಹಚ್ಚೆಹಾಕುವಿಕೆ, ರಂಗೋಲಿ, ತೊಗಲು ಗೊಂಬೆಯ ಚಿತ್ರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗುತ್ತದೆ. ಜೊತೆಗೆ ಇತ್ತೀಚಿನ ವರ್ಣಚಿತ್ರ ಕಲಾವಿದರು, ವರ್ಣ ಚಿತ್ರಕಲೆಯನ್ನು ಉಳಿಸಿ ಬೆಳೆಸಲು ತರಬೇತಿ ನೀಡುತ್ತಿರುವ ವರ್ಣಚಿತ್ರಕಲಾ ಶಿಕ್ಷಣ ಸಂಸ್ಥೆಗಳನ್ನು ಕುರಿತು ಹಾಗೂ ವರ್ಣಚಿತ್ರಕಲೆ ಕುರಿತು ಇತ್ತೀಚೆಗೆ ಪ್ರಕಟಗೊಂಡಿರುವ ಗ್ರಂಥಗಳನ್ನು ಪರಿಶೀಲನೆ ಮಾಡಲಾಗಿದೆ.

ಕರ್ನಾಟಕ ಇತಿಹಾಸನವನ್ನು ಕಲೆಗಳ ದೃಷ್ಟಿಯಿಂದ ಪರಿಶೀಲಿಸಿದರೆ ಅದರ ಭವ್ಯತೆ, ಸೌಂದರ್ಯ ಮತ್ತು ವೈವಿಧ್ಯತೆಗಳು ಎಂಥವರನ್ನು ಬೆರಗುಗೊಳಿಸುತ್ತವೆ. ಪ್ರಾಗೈತಿಹಾಸಿಕ ಕಾಲ, ಪೂರ್ವಭಾವಿ ಇತಿಹಾಸ ಕಾಲಗಳಲ್ಲಿಯೂ ಬಳ್ಳಾರಿ ಜಿಲ್ಲೆಯಲ್ಲಿ ಕಲಾ ಚಟುವಟಿಕೆ ನಡೆದಿದೆ. ವಿಜಯನಗರ ಅರಸರ ಕಾಲಾವಧಿಯಲ್ಲಿ ಈ ನೆಲದಲ್ಲಿ ದಕ್ಷಿಣ ಭಾರತದಲ್ಲೆಯೇ ತನ್ನ ಪ್ರಭಾವ ಬೀರಿದ ವಿಶಿಷ್ಟವಾದ ಭಿತ್ತಿಚಿತ್ರ ಪರಂಪರೆ ಬೆಳೆದು ಬಂದಿದೆ. ಕರ್ನಾಟಕದ ಭಿತ್ತಿಚಿತ್ರಗಳು ಸಂಖ್ಯೆಯಲ್ಲಿ ಹೆಚ್ಚಾಗಿವೆಯಷ್ಟೇ ಅಲ್ಲದೇ ವಿಜಯನಗರ ಕಾಲದ ಶೈಲಿ ವಿನ್ಯಾಸ, ವಸ್ತು ವಿಷಯಗಳಲ್ಲಿಯೂ ವೈವಿಧ್ಯತೆಯಿಂದ ಕೂಡಿವೆ. ಪ್ರಾಗೈತಿಹಾಸಿಕ ಚಿತ್ರಗಳೂ ಸಹ ತಮ್ಮ ದೈನಂದಿನ ಜೀವನದ ಆರ್ಥಿಕ ಸಫಲತೆ, ನಿಸರ್ಗದಲ್ಲಿ ತಾವು ನೋಡಿದ ಪ್ರಾಣಿಗಳ ಗಾಂಭೀರ್ಯ ಚಲುವಿಗೆ, ಭಾವೋದ್ರಕಿತರಾಗಿ ಇಂತಹ ಚಿತ್ರಗಳನ್ನು ಬಂಡೆಗಳ, ಕಲ್ಲಾಸರೆಗಳಲ್ಲಿ ಬಿಡಿಸಿರಬಹುದು. ಕೇವಲ ಪ್ರಾಣಿಗಳಲ್ಲದೇ ಅವರು ನೋಡಿದ ಗಿಡ, ಮರಗಳು, ಹೂಬಳ್ಳಿಗಳು, ನದಿ, ಚಿಟ್ಟೆ, ಪಶು ಪ್ರಾಣಿಗಳು ಅವರ ಚಿತ್ರಕಲೆಯ ವಸ್ತುಗಳಾಗಿವೆ ಈ ಕಲೆಯ ವಿಧಾನ, ತಂತ್ರ, ವರ್ಣ ಸಂಯೋಜನೆಯಲ್ಲಿಯೂ ವಿವಿಧ ಪ್ರಕಾರಗಳನ್ನು ಗುರುತಿಸಬಹುದಾಗಿದೆ. ಈ ಚಿತ್ರಗಳಲ್ಲಿ ಹೆಚ್ಚಾಗಿ ಪ್ರಾಣಿಗಳು ಅದರಲ್ಲಿಯೂ ಕೆಲವೇ ಪ್ರಾಣಿಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಮನುಷ್ಯನ ಚಿತ್ರಗಳಲ್ಲಿ ಸಮೂಹ ನೃತ್ಯ, ಗೂಳಿ ಚಿತ್ರ ಮುಂತಾದವುಗಳ ವಸ್ತುವಿನ ಸಹಜ ಲಕ್ಷಣಗಳನ್ನು ಗುರುಸಬಹುದಾಗಿದೆ. ಪ್ರಾಗೈತಿಸಹಾಸಿಕ ಮಾನವನು ತನಗೆ ಆಹಾರವಾದ ಪ್ರಾಣಿಗಳ ಅಭಿವೃದ್ಧಿ, ಇವುಗಳ ಯಶಸ್ವಿ ಬೇಟೆ, ತನ್ನ ಜನಾಂಗದ ವಂಶೋಭಿವೃದ್ಧಿ ಇವುಗಳ ಮೇಲೆ ಆಧಾರಿತನಾಗಿ ಚಿತ್ರಗಳನ್ನು ಬಿಡಿಸಿರುವುದು, ಆ ಸಮಾಜದ ಸಾಮಾನ್ಯ ವ್ಯಕ್ತಿ ಮಾಂತ್ರಿಕ ವಿಧಾನದಿಂದಲೂ, ಸಮಾಜದ ಅವಶ್ಯಕತೆಗಳನ್ನು ಪೂರೈಸುವ ಪ್ರಯತ್ನ ಅವನದ್ದಾಗಿದೆ. ತಾನು ನೋಡಿದ್ದನ್ನು ಉದ್ದೇಶಕ್ಕನುಗುಣವಾಗಿ ಬಿಡಿಸುವ ಕುಶಲಗಾರನಾಗಿದ್ದಾನೆ. ಇಲ್ಲಿನ ಚಿತ್ರಗಳು ಸಾಂಕೇತಿಕ. ಆದ್ದರಿಂದ ಕೇವಲ ಛಾಯಾನಿರೂಪಣ ತಂತ್ರವನ್ನು ಬಳಸಿದ್ದು ಇದು ತಾಂತ್ರಿಕ ಯುಗದಲ್ಲಿಯೂ ಮುಂದುವರೆಯಿತು. ಇಂತಹ ಚಿತ್ರಗಳು ವರ್ಣಿಸಲಾರದಷ್ಟು ವೈವಿಧ್ಯಮಯವಾಗಿವೆ. ಇಂತಹ ಚಿತ್ರಗಳನ್ನು ಬಿಡಿಸಲು ಬಳಸಿಕೊಂಡ ಪ್ರದೇಶಗಳನ್ನು ಸುಲಭವಾಗಿ ನೋಡುವಂತಹ ಸ್ಥಳದಲ್ಲಿ ಪ್ರಾಗೈತಿಹಾಸಿಕ ಮಾನವನು ಸ್ವಸಂತೋಷಕ್ಕೋಸ್ಕರ ಮಾತ್ರವಲ್ಲದೇ ತಮ್ಮ ಸಮಾಜದ ಜನರೂ ನೋಡಲೆಂದು ಮಾಡಿದ್ದಾನೆ. ಎಲ್ಲರಿಗೂ ನೋಡಲು ಆಗುವಂತಹ ಸ್ಥಳಗಳಲ್ಲಿ ಇವು ಇರುತ್ತಿದ್ದವೆಂದು ನಾವು ಭಾವಿಸಬಹುದಾಗಿದೆ. ಈ ವೈವಿಧ್ಯತೆಗೆ ಪ್ರಾಗೈತಿಹಾಸಿಕ ಮಾನವ ವಾಸವಾಗಿದ್ದ ಸಾಸ್ಕೃತಿಕ ಪರಂಪರೆ ಮತ್ತು ಭೌಗೋಳಿಕ ಹಿನ್ನೆಲೆಯು ಕಾರಣವಿರಬಹುದು.

ವಿಜಯನಗರ ಕಾಲದಲ್ಲಿ ಭಿತ್ತಿಚಿತ್ರಕಲೆಯು ಹಂಪಿ ಪರಿಸರದಲ್ಲಿ ಮಾತ್ರವಲ್ಲದೇ ಆಂಧ್ರಪ್ರದೇಶದ ಲೇಪಾಕ್ಷಿ, ಕಾಳಹಸ್ತಿ, ತಾಡಪತ್ರಿ, ಪೆನುಗೊಂಡೆ, ತಮಿಳನಾಡಿನ ತಂಜಾವೂರು ಸೇರಿದಂತೆ ಸುಮಾರು ೧೪ ಸ್ಥಳಗಳಲ್ಲಿ ಭಿತ್ತಿಚಿತ್ರಕಲೆಯು ವ್ಯಾಪಿಸಿದೆ. ಹೀಗಾಗಿ ಇದರ ಹರವು ವಿಸ್ತಾರವಾಗಿದ್ದು, ಇದೊಂದು ಪ್ರತ್ಯೇಕ ಜ್ಞಾನದ ವಿಷಯವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬೆಳೆದು ಬಂದ ಚಿತ್ರಕಲೆಯನ್ನು ಮಾತ್ರ ಸೀಮಿತಗೊಳಿಸಿಕೊಂಡು ಅಧ್ಯಯನ ಮಾಡಲಾಗಿದೆ.

ಪ್ರಾಗೈತಿಹಾಸಿಕ ಕಾಲಾವಧಿಯಿಂದ ಆಧುನಿಕ ಕಾಲಾವಧಿಯವರೆಗೆ ವರ್ಣಚಿತ್ರಕಲೆಯ ಬೆಳವಣಿಗೆಯನ್ನು ಸಾಂಸ್ಕೃತಿಕ ಪರಂಪರೆಯ ದೃಷ್ಟಿಯಿಂದ ವಿವಿಧ ಕಾಲಘಟ್ಟಗಳಲ್ಲಿ ರಚನೆಗೊಂಡ ಚಿತ್ರಕಲೆ ಕುರಿತು ವಿವರಿಸಲಾಗಿದೆ. ಆದ್ದರಿಂದ ಈ ಪ್ರದೇಶದ ಜನ ಸಮುದಾಯದ ಆಶೋತ್ತರಗಳನ್ನು ಬಿಂಬಿಸುತ್ತಿವೆ. ಇದು ಇಂತಹ ಅಧ್ಯಯನವೊಂದರ ಅಗತ್ಯತೆ ಇದೆಯೆಂದು ಭಾವಿಸುತ್ತೇನೆ.

ಸಂಸ್ಕೃತಿಯನ್ನು ಅರಿಯಲು ಇರುವ ಆಕರಗಳಲ್ಲಿ ಚಿತ್ರಕಲೆಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಆ ದಿಸೆಯಲ್ಲಿ ಚಿತ್ರಕಲೆಯ ಮುಖಾಂತರ ಮಾನವ ತನ್ನ ಸಂಸ್ಕೃತಿಯನ್ನು ಹೇಗೆ ವ್ಯಕ್ತಗೊಳಿಸಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಸಂಸ್ಕೃತಿಯ ಒಂದು ಭಾಗವೇ ಆಗಿರುವ ಚಿತ್ರಕಲೆ ಇತರ ಆಕರಗಳಿಗಿಂತ ಬೇರೆಯಾಗಿದೆ. ಇದು ನಮ್ಮ ಸಾಂಸ್ಕೃತಿಕ ಇತಿಹಾಸವನ್ನು ಪುನಾರಚಿಸಲು ಸಹಾಯಕವಾಗಿದೆ. ನಮ್ಮ ಸಾಂಸ್ಕೃತಿಕ ಜೀವನದ ಕಲಾತ್ಮಕ ಬದುಕನ್ನು ಕಂಡುಕೊಳ್ಳುವುದರತ್ತ ಗಮನಹರಿಸಬಹುದಾಗಿದೆ. ಈ ಸಂದರ್ಭದಲ್ಲಿ ಇವುಗಳ ವ್ಯಾಪಕ ಅಧ್ಯಯನದ ಅಗತ್ಯ ಇಂದು ತುಂಬಾ ಮಹತ್ವದ್ದಾಗಿದೆ. ಪ್ರಾಗೈತಿಹಾಸಿಕ ಕಾಲದಿಂದ ಇತ್ತೀಚಿನ ಕಾಲಾವಧಿಯಲ್ಲಿ ತನ್ನ ಸೌಂದರ್ಯ ಪ್ರಜ್ಞೆಯಿಂದ ಮನಸ್ಸಿನಲ್ಲಿ ಮೂಡಿದ ಪ್ರತಿಮೆಗಳನ್ನು ಚಿತ್ರಗಳಲ್ಲಿ ಸೆರೆಹಿಡಿದ ಶ್ರೇಷ್ಠ ಕಲಾವಿದರಾಗಿದ್ದಾರೆ. ಪ್ರಕೃತಿ ಚಿತ್ರ, ರೇಖಾಚಿತ್ರ, ಭಾವಚಿತ್ರ, ಸಂಯೋಜನಾ ಚಿತ್ರಗಳಿಂದಲೂ ಅವರ ಸೂಕ್ಷ್ಮ ಸಂವೇದನೆ ಮತ್ತು ವೈಚಾರಿಕತೆ ಈ ಜಿಲ್ಲೆಯ ಚಿತ್ರಕಲೆಯಲ್ಲಿ ಪ್ರಕಟವಾಗಿದೆ.

. ಚಾರಿತ್ರಿಕ ಹಿನ್ನೆಲೆ

ಬಳ್ಳಾರಿ ಜಿಲ್ಲೆಯ ಕರ್ನಾಟಕ ರಾಜ್ಯದ ಪೂರ್ವ ಭಾಗದಲ್ಲಿದೆ. ಜಿಲ್ಲೆಯು ಪೂರ್ವ ಪಶ್ಚಿಮವಾಗಿ ೧೬೧ ಕಿ.ಮೀ. ಉದ್ದವನ್ನು ದಕ್ಷಿಣೋತ್ತರವಾಗಿ ೮೩.೭ ಕಿ.ಮೀ. ಅಗಲವನ್ನು ನೈರುತ್ಯವಾಗಿ ೧೮೦ ಕಿ.ಮೀ. ಉದ್ದವನ್ನು ಹೊಂದಿದೆ. ಪೂರ್ವ ಭಾಗದಲ್ಲಿ ಆಂಧ್ರಪ್ರದೇಶದ ಗಡಿಯನ್ನು ಉತ್ತರದಲ್ಲಿ ರಾಯಚೂರು, ಕೊಪ್ಪಳ, ದಕ್ಷಿಣದಲ್ಲಿ ಚಿತ್ರದುರ್ಗ, ಪಶ್ಚಿಮದಲ್ಲಿ ಬಾಗಲಕೋಟೆ ಮತ್ತು ದಾವಣಗೆರೆಯ ಸ್ವಲ್ಪ ಭಾಗದ ಗಡಿ ಪ್ರದೇಶವನ್ನು ಹೊಂದಿದೆ. ಇದು ಉತ್ತರ ಅಕ್ಷಾಂಶ ೧೪.೩೦, ೫೦.೫೦ ಮತ್ತು ಪೂರ್ವ ರೇಖಾಂಶ ೭೫.೪೦ / ೭೭.೧೧ರ ನಡುವೆ ಇದೆ. ಜಿಲ್ಲೆಯಲ್ಲಿ ಸರಾಸರಿ ಮಳೆಯ ಪ್ರಮಾಣ ೫೭೪.೯ರಿಂದ ೪೭೧.೬ ಮಿ.ಮೀ. ಗಳಷ್ಟು ಇದೆ. ಹೆಚ್ಚು ಮಳೆ ಬೀಳದಿರುವ ಕಾರಣ ಸಂಡೂರು ತಾಲ್ಲೂಕಿನ ಕೆಲವು ಭಾಗಗಳನ್ನು ಬಿಟ್ಟರೆ, ಉಳಿದ ಭಾಗದಲ್ಲಿ ಕುರುಚಲು ಗಿಡಗಳಿಂದ ಕೂಡಿದ ಬೆಟ್ಟ ಗುಡ್ಡಗಳ ಅರಣ್ಯವನ್ನು ಕಾಣಬಹುದು. ಬಳ್ಳಾರಿ ಜಿಲ್ಲೆಯ ತುಂಗಭಧ್ರಾ ನದಿಗೆ ೧೯೪೪ರಲ್ಲಿ ನಿರ್ಮಿಸಲಾಗಿರುವ ತುಂಗಭದ್ರಾ ಅಣೆಕಟ್ಟಿನಿಂದ ಹೊಸಪೇಟೆ ತಾಲ್ಲೂಕು ಸಂಪೂರ್ಣ ನೀರಾವರಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಸಿರುಗುಪ್ಪ ಅಲ್ಪ ಪ್ರಮಾಣದ ನೀರಾವರಿ ಸೌಲಭ್ಯವನ್ನು ಪಡೆದಿದೆ. ನೀರಾವರಿ ಸೌಲಭ್ಯವಿಲ್ಲದ ಬಯಲು ಪ್ರದೇಶದಲ್ಲಿ ಹತ್ತಿ, ಜೋಳ, ರಾಗಿ ಇತರ ದ್ವಿದಳ ಧನ್ಯವನ್ನು ಬೆಳೆಯುತ್ತಾರೆ. ನೀರಾವರಿ ಆಶ್ರಿತ ಪ್ರದೇಶದಲ್ಲಿ ಭತ್ತ, ಕಬ್ಬು ಮತ್ತು ಬಾಳೆ ಪ್ರಮುಖ ಬೆಳೆಗಳಾಗಿವೆ. ಉಷ್ಣಾಂಶ ಏಪ್ರಿಲ್‌ಮೇ ತಿಂಗಳಲ್ಲಿ ೪೦%ರಷ್ಟಿರುತ್ತದೆ. ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಸಂಡೂರು, ಹಗರಿಬೊಬ್ಬನ ಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ ಮತ್ತು ಸಿರಗುಪ್ಪ ಏಳು ತಾಲ್ಲೂಕು ಕೇಂದ್ರಗಳನ್ನು ಒಳಗೊಂಡಿದೆ. ಬಳ್ಳಾರಿ ಜಿಲ್ಲೆಯು ಭೌಗೋಳಿಕವಾಗಿ ಸಮೃದ್ಧವಾದುದು. ಇಲ್ಲಿಯ ದೊಡ್ಡ ದೊಡ್ಡ ಬಂಡೆಗಳನ್ನು ಹಾಗೂ ಬೆಟ್ಟಗಳು, ನದಿ ಹಳ್ಳ, ತೊರೆಗಳಿಂದ ಕೂಡಿದ ನೀರಿನ ಸೆಲೆಗಳು, ಹೊಸಪೇಟೆ ಮತ್ತು ಸಂಡೂರು ಭಾಗದಲ್ಲಿ ಅತ್ಯುತ್ತಮ ದರ್ಜೆಯ ಕಬ್ಬಿಣ, ಮ್ಯಾಂಗನೀಸ್‌, ಅದಿರು ದೊರೆಯುತ್ತದೆ. ಇವಲ್ಲದೇ ತಾಮ್ರ, ಬೆಳ್ಳಿ ಮೊದಲಾದ ಲೋಹದ ಅದಿರುಗಳು ದೊರೆಯುತ್ತವೆ. ಫಲವತ್ತಾದ ಭೂಭಾಗವನ್ನು ಹೊಂದಿದೆ. ಹೀಗಾಗಿ ಪ್ರಾಗೈತಿಹಾಸಿಕ ಕಾಲದಿಂದಲೂ ಮಾನವನ ವಾಸದ ತಾಣವಾಗಿ ಬೆಳೆದು ಬರಲು ಸಹಕಾರಿಯಾಗಿದ್ದವು.

ಪುರಾಣಗಳಲ್ಲಿ ಹಂಪಿ ಪ್ರದೇಶಕ್ಕೆ ಕಿಷ್ಕಿಂಧೆ ಎಂಬ ಹೆಸರು ಇರುವುದು ತಿಳಿದುಬರುತ್ತದೆ. ಕನಿಷ್ಟ ಒಂದು ಸಾವಿರ ವರ್ಷಕ್ಕಿಂತ ಮೊದಲು ಈ ಹೆಸರು ಇತ್ತೆಂಬುದಕ್ಕೆ ಹಂಪಿಯ ಸಮೀಪದ ೧೦೬೪ ಶಾಸನದಿಂದ, ಶಿರಸಂಗಿಯ ೧೨೩೪ರ ಶಾಸನದಿಂದ ತಿಳಿಯುತ್ತದೆ. ಹಂಪಿ, ಆನೆಗೊಂದಿ, ಹಿರೇಬೆನಕಲ್‌ಪ್ರದೇಶಗಳ ಕಬ್ಬಿಣ ಯುಗದ ಬೃಹತ್‌ಶಿಲಾಸಂಸ್ಕೃತಿಯ ಕಾಲದ ವರ್ಣ ಚಿತ್ರಗಳಲ್ಲಿ ಅಪರೂಪವಾಗಿ ಮಾನವ ಛಾಯಾಕೃತಿಗಳಿಗೆ ಬಾಲವನ್ನು ತೋರಿಸಲಾಗಿದೆ. ಈ ಪ್ರದೇಶವು ಸು. ಕ್ರಿ.ಪೂ. ೧೫೦೦ ರ ಒಂದು ಬೂದಿ ದಿನ್ನೆಗೆ ‘ವಾಲಿದಿಬ್ಬ’ವೆಂದೂ ಹೆಸರಿರುವುದನ್ನು ಡಾ. ಅ. ಸುಂದರ ಅವರು ಗುರುತಿಸಿದ್ದಾರೆ. ಸು. ಕ್ರಿ.ಪೂ. ೧೫೦೦ರಿಂದ ಕ್ರಿ.ಶ. ೧೦೦೦ವರೆಗಿನ ಆಕರಗಳಾದ ಶಾಸನ, ಗವಿ ವರ್ಣಚಿತ್ರ ಬೂದಿ ದಿನ್ನೆಗಳಲ್ಲಿ ಸ್ಥಳೀಯ ಕಥೆಗೆ ಸ್ವಲ್ಪಮಟ್ಟಿಗೆ ಹೊಂದಿಕೊಳ್ಳುವಂತೆ ಕಾಣುತ್ತದೆ. ಈ ಪ್ರದೇಶದ ನೂತನ ಶಿಲಾಯುಗ, ಬೃಹತ್‌ಶಿಲಾ ಸಂಸ್ಕೃತಿಯ ಜನಸಮುದಾಯಗಳಲ್ಲಿ ವಾನರ ವರ್ಣದ ಪರಂಪರೆಯವರು ಇದ್ದಿರಬಹುದೆಂದು ಊಹಿಸಲಾಗಿದೆ.

ಸಂಡೂರಿನ ಬಳಿ ಇರುವ ಕುಮಾರ ಸ್ವಾಮಿ ಬೆಟ್ಟವು ಕಾರ್ತಿಕೇಯ ವನವೆಂದು ಸ್ಥಳೀಯ ಪುರಾಣಗಳಲ್ಲಿವೆ. ಅಲ್ಲದೇ ಕುಡುತಿನಿಯ ಶಾಸನಗಳಲ್ಲಿಯೂ ಕಾರ್ತಿಕೇಯ ತಪೋವನವು ಇದೆ ಎಂದು ತಿಳಿಯಲಾಗಿದೆ. ಶ್ರೀಮದ್‌ರಾಮಾಯಣದ ಕಿಷ್ಕಿಂಧ ಖಂಡದಲ್ಲಿ ರಾಮನು ಕಿಷ್ಕಿಂಧೆಗೆ ಹೋಗುವ ಮೊದಲು ಕಾರ್ತಿಕೇಯ ವನಕ್ಕೆ ಹೋಗಿ, ಅಲ್ಲಿ ಶ್ರೀ ಕಾರ್ತಿಕೇಯ ಸ್ವಾಮಿಯ ದರ್ಶನ ಮಾಡಿಕೊಂಡು ಬರಬೇಕೆಂದು ಋಷಿಗಳು ಅವನಿಗೆ ತಿಳಿಸಿದ್ದರು. ಇದರಂತೆ ಕಾರ್ತಿಕೇಯ ಸ್ವಾಮಿಯ ದರ್ಶನವಾದ ನಂತರ ದೇವತೆಯ ಸೇನಾನಿಯಾದ ಕಾರ್ತಿಕೇಯ ಸ್ವಾಮಿಯು, ಸೀತೆಯನ್ನು ಕದ್ದು ಹೋಗಿರುವ ಲಂಕಾಧಿಪತಿ ರಾವಣನಲ್ಲಿ ಪ್ರಬಲ ಶಸ್ತ್ರಾಸ್ತ್ರಗಳಿವೆ, ಶ್ರೀರಾಮನ ಬಳಿಯಲ್ಲಿರುವ ಶಸ್ತ್ರಾಸ್ತ್ರಗಳಿಗಿಂತ ಉತ್ತಮವಾಗಿವೆ. ಆದ್ದರಿಂದ, ಕಾರ್ತಿಕೇಯ ಪ್ರದೇಶದಲ್ಲಿಯೇ ಶಸ್ತ್ರಗಳನ್ನು ಮಾಡಿಸಿಕೊಳ್ಳಬೇಕೆಂದು ಸೂಚನೆ ಕೊಟ್ಟರು. ಮುಂದೆ ಸುಗ್ರೀವನು ಬಲಿಷ್ಠನಾದ ತನ್ನ ಅಣ್ಣನನ್ನು ಶ್ರೀರಾಮ ಗೆಲ್ಲಲು ಸಾಧ್ಯವೇ ಎಂದು ಅನುಮಾನ ಪಟ್ಟ, ಶ್ರೀರಾಮನು ಕಾರ್ತಿಕೇಯ ಪ್ರದೇಶದಲ್ಲಿ ಸಿದ್ಧವಾದ ಪ್ರಬಲ ಅಸ್ತ್ರಗಳು ನನ್ನ ಬಳಿ ಇವೆ ಎಂದು ಹೇಳುತ್ತಾನೆ. ಹೀಗಾಗಿ ರಾಮಾಯಣದ ಕಾವ್ಯರಚನೆಯಾಗುವೆ ವೇಳೆಗೆ ಕಾರ್ತಿಕೇಯ ವನವು ಉತ್ತಮ ಶಸ್ತ್ರಗಳನ್ನು ತಯಾರು ಮಾಡುವ ಪ್ರದೇಶವಾಗಿತ್ತು.

ಬಳ್ಳಾರಿ ಜಿಲ್ಲೆಯಲ್ಲಿ ದೊರೆತಿರುವ ಮೌರ್ಯ ಚಕ್ರವರ್ತಿ ಅಶೋಕನ ಶಾಸನಗಳು ೧೯೭೭ರಲ್ಲಿ ನಿಟ್ಟೂರು ಮತ್ತು ಉದಯಗೂಳಂನಲ್ಲಿವೆ. ಇವುಗಳಿಂದಾಗಿ ಮೌರ್ಯ ಸಾಮ್ರಾಜ್ಯದ ಗಡಿಯನ್ನು ಗುರುತಿಸಲು ಸಾಧ್ಯವಾಗಿದೆ. ನಿಟ್ಟೂರು ಮತ್ತು ಉದಯಗೂಳಂ ಶಾಸನದಲ್ಲಿಯೂ ಅಶೋಕ ರಾಜನೆಂಬ ಉಲ್ಲೇಖವಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಬಹುಭಾಗವು ಮೌರ್ಯರ ಆಡಳಿತಕ್ಕೆ ಒಳಪಟ್ಟಿತ್ತು. ಬಳ್ಳಾರಿಯ ಸಮೀಪದಲ್ಲಿಯೇ ಇರುವ ಬ್ರಹ್ಮಗಿರಿ ಶಾಸನದಲ್ಲಿ ಸುವರ್ಣಗಿರಿ ಮಹಾಮಾತ್ರರ ಮೂಲಕ ಇಸಿಲದ ಮಹಾಮಾತ್ರರಿಗೆ ಕಳುಹಿಸಿದ ರಾಜಾಜ್ಞೆಯ ಶಾಸನದ ವಿಷಯ. ಆದ್ದರಿಂದ ಆ ಚಕ್ರವರ್ತಿಯ ಕಾಲದ ಇಸಿಲ ಎಂದು ಕರೆಯಲ್ಪಟ್ಟ, ಈಗಿನ ಬ್ರಹ್ಮಗಿರಿ ಭಾಗವೂ ಆಶೋಕ ಚಕ್ರವರ್ತಿಯ ಮಹಾಮಾತ್ರ ಆಡಳಿತ ಕೇಂದ್ರವಾಗಿತ್ತೆಂದು ಸ್ಪಷ್ಟವಾಯಿತು.

ದಖನ್‌ಪ್ರಸ್ಥಭೂಮಿಯಲ್ಲಿ ಮೌರ್ಯರ ನಂತರ ರಾಜ್ಯವನ್ನು ಕಟ್ಟಿ ಆಳಿದ ಶಾತವಾಹನರ ಕಾಲದ ಕೆಲವು ಶಾಸನಗಳು ಉತ್ತರ ಕರ್ನಾಟಕದಲ್ಲಿವೆ. ಇವು ಹೆಚ್ಚಾಗಿ ದಾನಶಾನಗಳಾಗಿವೆ. ಗೌತಮಿಪುತ್ರ ಶಾತಕರ್ಣಿಯ ದಂಡಯಾತ್ರೆಗಳು ರಾಜ್ಯ ವಿಸ್ತಾರ ಮೊದಲಾದವುಗಳನ್ನು ಕೊಡುವಂತಹ ಒಂದು ಶಾನಸ ಬಳ್ಳಾರಿ ಜಿಲ್ಲೆಯ ಮ್ಯಾಕೆದೋಣಿಯಲ್ಲಿ ದೊರೆತಿದೆ. ಈ ಜಿಲ್ಲೆಯ ಹಿರೇಹಡಗಲಿ ಮತ್ತು ಮ್ಯಾಕದೋಣಿಯ ಶಾಸನದಲ್ಲಿ ‘ಶಾತವಾಹನಿರ’ ಎಂಬ ಹೆಸರಿನಿಂದ ಗುರುತಿಸಿದ್ದಾರೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಬಹು ಭಾಗವು ಶಾತವಾಹನರ ಆಡಳಿತಕ್ಕೆ ಒಳಪಟ್ಟಿತ್ತು.

ಬಾದಾಮಿ ಚಾಲುಕ್ಯರು ಕ್ರಿ.ಶ. ೫೩೫ರಿಂದ ೭೨೭ರವರೆಗೂ ಬಾದಾಮಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದರು. ಇವರ ಕಾಲಾವಧಿಯ ದೇವಾಲಯ, ಸಂಡೂರು, ಕುಮಾರಸ್ವಾಮಿಯ ಬೆಟ್ಟದ ಮೇಲೆ ಇದೆ. ವಿಶಾಲ ಸಾಮ್ರಜ್ಯವನ್ನು ಕಟ್ಟಿ ಆಳಿದ ಬಾದಾಮಿ ಚಾಲುಕ್ಯರು ಬಳ್ಳಾರಿ ಜಿಲ್ಲೆಯ ಬಹು ಭಾಗವನ್ನು ತಮ್ಮ ಅಧೀನಕ್ಕೆ ಒಳಪಡಿಸಿಕೊಂಡಿದ್ದರು. ಈ ಪ್ರದೇಶದಲ್ಲಿ ರಾಷ್ಟ್ರಕೂಟರ ಹಲವು ದತ್ತಿಶಾಸನಗಳು ದೊರೆತಿವೆ. ಮುಮ್ಮಡಿ ಕೃಷ್ಣನ ಕಾಲದಲ್ಲಿ ಕುರುಗೋಡಿನ ಮಹಾರಾಜರು ಕ್ರಿ.ಶ. ೯೪೭ರಲ್ಲಿ ಕುಡತಿನಿಯ ದೇಕಮ್ಮನ ಅಧಿಕಾರಿ, ಗದಾಧರ ಬ್ರಹ್ಮಚಾರಿ ಎಂಬುವನು ಕಾರ್ತಿಕೇಯ, ಸೂರ್ಯ, ವಿಷ್ಣು, ಶಿವ, ಪಾರ್ವತಿ, ವಿನಾಯಕ ದೇವರನ್ನು ಪ್ರತಿಷ್ಠಪಿಸಿ, ಕರೆ, ಬಾವಿ, ಛತ್ರಗಳನ್ನು ಕಟ್ಟಿಸುತ್ತಾನೆ. ಅಲ್ಲದೇ ಕುಡುತಿನಿಯಲ್ಲಿ ಕಾರ್ತಿಕೇಯ ದೇವಾಲಯವನ್ನು ಕಟ್ಟಿಸುತ್ತಾನೆ. ಸಂಡೂರು ಕುಮಾರಸ್ವಾಮಿ ಬೆಟ್ಟದಲ್ಲಿರುವ ಹೊಯ್ಸಳರ ವೀರಬಲ್ಲಾಳನ ಶಾಸನದಲ್ಲಿ ಮುಮ್ಮಡಿ ಕೃಷ್ಣನು ಕಾರ್ತಿಕೇಯನಿಗೆ ಕರೆಯ ಬಳಿ ಗ್ರಾಮವನ್ನು ದಾನ ಬಿಟ್ಟದ್ದನ್ನು ಗಮನಿಸಿದರೆ, ಗದಾಧರನು ಇದೇ ಅವಧಿಯಲ್ಲಿ ಕಾರ್ತಿಕೇಯ ದೇವಾಲಯವನ್ನು ಕಟ್ಟಿಸಿದಂತೆ ಕಾಣುತ್ತದೆ. ಶ್ರೀ ವಿಜಯ ರಚಿಸಿದ ಕನ್ನಡದ ಪ್ರಾಚೀನ ಕೃತಿ ಕವಿರಾಜ ಮಾರ್ಗದಲ್ಲಿ ಗೋದಾವರಿಯಿಂದ ಕಾವೇರಿಯವರೆಗೆ ವಿಸ್ತಾರವಾಗಿದ್ದ ಕನ್ನಡ ನಾಡನ್ನು ವರ್ಣಿಸಲಾಗಿದೆ. ಈ ಚಾರಿತ್ರಿಕ ಕರ್ನಾಟಕವು ಕಲ್ಯಾಣಿ ಚಾಲುಕ್ಯ ಅರಸು ಮನೆತನವು ಪತನವಾಗುರವವರೆಗೂ ಅಸ್ತಿತ್ವದಲ್ಲಿತ್ತು. ರಾಷ್ಟ್ರಕೂಟರ ನಂತರ ಕಲ್ಯಾಣದ ಚಾಲುಕ್ಯರು ತಮ್ಮ ಅಧಿಪತ್ಯವನ್ನು ಸ್ಥಾಪಿಸಿ, ಬಳ್ಳಾರಿ ಜಿಲ್ಲೆಯಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿದರು. ಕ್ರಿ.ಶ. ೧೧೮೩ ಮಾನ್ಯರ ಮಾಸಲವಾಡ ಶಾಸನದಲ್ಲಿ ಚಾಲುಕ್ಯ ದೊರೆ ಜಗದೇಕ ಮಲ್ಲನು ಕಲ್ಯಾಣದಿಂದ ಆಳುತ್ತಿರುವಾಗ, ಆತನ ಮಾಂಡಲೀಕ ವಿಜಯಪಾಂಡ್ಯ ದೇವರು ಕೋಗಳಿ ೫೦೦, ನೊಳಂಬವಾಡಿ ೩೨,೦೦೦ ಆಳುತ್ತಿದ್ದನು. ಈ ಅವಧಿಯಲ್ಲಿ ನೊಳಂಬವಾಡಿ ಆಡಳಿತ ಕೇಂದ್ರಕ್ಕೆ ಬಳ್ಳಾರಿ ಜಿಲ್ಲೆಯ ಬಹುಭಾಗವು ಸೇರ್ಪಡೆ ಹೊಂದಿತ್ತು.

ದಕ್ಷಿಣ ಭಾರತದ ಪ್ರಬಲ ಸಾಮ್ರಾಜ್ಯವಾದ ವಿಜಯನಗರ ೧೩೩೬ರಲ್ಲಿ ಸ್ಥಾಪನೆಯೊಂದಿಗೆ ಬಳ್ಳಾರಿ ಪ್ರದೇಶ ಸೇರಿದಂತೆ ೧೫೬೫ರವರೆಗೂ ದಕ್ಷಿಣ ಭಾರತದ ಬಹುಭಾಗ ವಿಜಯನಗರ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ವಿಜಯನಗರ ರಾಜಧಾನಿ ಹಂಪಿ ಪರಿಸರದಲ್ಲಿ ಇತ್ತು. ಆ ಕಾಲಾವಧಿಯ ನೂರಾರು ಸ್ಮಾರಕಗಳನ್ನು ನೋಡಬಹುದಾಗಿದೆ.

ವಿಜಯನಗರದ ಪತನದ ನಂತರ ಮರಾಠರು ನಂತರ ಬ್ರಿಟಿಷರು, ಬಳ್ಳಾರಿ ಜಿಲ್ಲೆಯನ್ನು ೧೭ ಮತ್ತು ೧೮ನೇ ಶತಮಾನದಿಂದ ಸ್ವತಂತ್ರವಾಗುವವರೆಗೂ ಮದ್ರಾಸ್‌ಪ್ರಾಂತ್ಯಕ್ಕೆ ಸೇರಿಸಿದ್ದರು. ೧೯೪೭ರ ನಂತರ ಬಳ್ಳಾರಿ ಜಿಲ್ಲೆಯ ಮೂರು ಪೂರ್ವ ತಾಲ್ಲೂಕುಗಳು ಸೇರಿದಂತೆ ಬಹುಭಾಗ ಆಂಧ್ರಕ್ಕೆ ಸೇರ್ಪಡೆ ಹೊಂದಬೇಕೆಂಬ ಚಳವಳಿ ನಡೆಸಿದರು. ಆದವಾನಿ, ಆಲೂರು, ರಾಯದುರ್ಗವನ್ನು ಬಿಟ್ಟು ಹೊಸಪೇಟೆ, ಬಳ್ಳಾರಿ ಜಿಲ್ಲೆ ಸೇರಿದಂತೆ ಇತರೇ ತಾಲ್ಲೂಕು ಕೇಂದ್ರಗಳನ್ನೊಳಗೊಂಡ ಬಳ್ಳಾರಿ ಜಿಲ್ಲೆಯು ೧೯೫೩ ನವೆಂಬರ್‌೧ ರಂದು ಹಳೆಯ ಮೈಸೂರು ಸಂಸ್ಥಾನದಲ್ಲಿ ವಿಲೀನಗೊಂಡಿತು.

ಈ ಪ್ರದೇಶದ ಸುತ್ತಮುತ್ತಲಿನ ಪ್ರದೇಶವಾದ ಆಳಕುಂಡಿ, ಜೇಡರ ಬೆಳಗಲ್ಲು, ಗಾದಿಗನೂರು, ದರೋಜಿ, ಹಂಪಾಸಾಗರ, ಬಳ್ಳಾರಿ, ನಿಟ್ಟೂರು ಮುಂತಾದವುಗಳಲ್ಲಿ ಆದಿ ಶಿಲಾಯುಗಕ್ಕೆ ಸಂಬಂಧಿಸಿದ ಮಾನವ ನಿರ್ಮಿತ ಆಯುಧಗಳು ದೊರೆತಿವೆ. ಕುಪ್ಪಗಲ್ಲು, ಸಂಗನಕಲ್ಲು, ತೆಕ್ಕಲಕೋಟೆ, ಬಳ್ಳಾರಿ, ಸಂಡೂರು, ಅನೆಗುಂದಿ, ಮಲ್ಲಾಪುರ ಮುಂತಾದ ಪ್ರದೇಶಗಳಲ್ಲಿ ನವ ಶಿಲಾಯುಗದಿಂದ ಇತಿಹಾಸ ಕಾಲದವರೆಗಿನ ಅನೇಕ ಮಾನವನಿರ್ಮಿತ ಅಯುಧಗಳು ಮಡಕೆ ಕುಡಿಕೆಗಳು ದೊರೆತಿವೆ. ಉದಾಹರಣೆಗೆ ಬಳ್ಳಾರಿ ನಗರದಿಂದ ಈಶಾನ್ಯಕ್ಕೆ ಐದು ಕಿ. ಮೀ. ದೂರದಲ್ಲಿರುವ ಸಂಗನಕಲ್ಲು ಗ್ರಾಮದ ಉತ್ತರ ಭಾಗ ಅನೇಕ ಬೆಟ್ಟ ಗುಡ್ದಗಳಿಂದ ಕೂಡಿದೆ. ಈ ಪ್ರದೇಶದಲ್ಲಿ ಇತಿಹಾಸ ಪೂರ್ವದ ನಿವೇಶನಗಳು ದೊರೆತಿವೆ. ಸುಬ್ಬರಾವ್‌ರವರು ೧೯೪೮ರಲ್ಲಿ ಸರಸಮ್ಮ ಬೆಟ್ಟದಲ್ಲಿಯ ಸಮತಟ್ಟಿನ ಪ್ರದೇಶದಲ್ಲಿ ಉತ್ಖನನ ಮಾಡಿ, ಪ್ರಾಚೀನ ಜನ ವಸತಿಯ ನಿವೇಶನಗಳಿರುವುದನ್ನು ಪತ್ತೆ ಹಚ್ಚಿದರು. ಇಲ್ಲಿ ಹಲವು ಸಾಂಸ್ಕೃತಿಕ ಹಂತಗಳನ್ನು ಗುರುತಿಸಿದರು. ನೂತನ ಶಿಲಾಯುಗ ಸಂಸ್ಕೃತಿ ಹಂತ, ಕಬ್ಬಿಣ ಯುಗದ ಬೃಹತ್‌ಶಿಲಾಯುಗದ ಸಂಸ್ಕೃತಿ ಹಂತ ಮತ್ತು ಆದಿ ಇತಿಹಾಸ ಸಂಸ್ಕೃತಿ ಹಂತವನ್ನು ಅನುಕ್ರಮವಾಗಿ ಗುರುತಿಸಿದರು. ಇಲ್ಲಿ ದೊರೆತ ಆಯುಧಗಳು ಕ್ವಾಟ್ರಜ್‌‍ಕಲ್ಲಿನವು. ಇವು ಡೊಲ್ಲರೇಟ್‌ಕಲ್ಲಿನ ಪುಡಿ ಚೆಕ್ಕೆಗಳೊಂದಿಗೆ ದೊರೆತವು. ಇದೇ ಪ್ರದೇಶವನ್ನು ೧೯೬೯ ರಲ್ಲಿ ಡಾ. ಹೆಚ್‌. ಡಿ. ಸಂಕಾಲಿಯ ಅವರು ಉತ್ಖನನ ಮಾಡಿದರು. ಈ ನೆಲೆಯು ನವ ಶೀಲಾಯುಗದ ಪೂರ್ವದೆಂದು ಗುರುತಿಸಿದರು. ಕ್ವಾಟ್ರಜ್‌‍ಶಿಲೆಯಲ್ಲಿ ಮಾಡಿದ ಚೆಕ್ಕೆ ಹಲಗು ಮತ್ತು ಮಧ್ಯ ಹಳೇ ಶಿಲಾಯುಗದ ಮೊನಚುಗಳ ಹರೆಯುವ ಚೆಕ್ಕೆಗಳು, ತಿರುಳುಗಲ್ಲು ಚೆಕ್ಕೆಗಳು ದೊರೆತಿದ್ದವು. ಇದಲ್ಲದೇ ಸೂಕ್ಷ್ಮ ಶಿಲಾಯುಗದ ಸಂಸ್ಕೃತಿಯ ಆಯುಧಗಳನ್ನು ಇದೇ ಪ್ರದೇಶದಲ್ಲಿ ತಯಾರಿಸಿದ್ದನ್ನು ಗುರುತಿಸಿದ್ದಾರೆ.

ಕೂಡ್ಲಿಗಿ ತಾಲ್ಲೂಕಿನ ಸರ್ವೋದಯ ಗ್ರಾಮದ ಪೂರ್ವದಲ್ಲಿ ಪಂಚಲಿಂಗೇಶ್ವರ ಗುಹಾಲಯದ ಸುಮಾರು ಒಂದು ನೂರು ಅಡಿಗಳಿಗೂ ಉದ್ದವಾದ ಕಣಶಿಲೆಯು ವಿಶಾಲ ಬಂಡೆಗಲ್ಲಿನ ಕೆಳಭಾಗಲ್ಲಿರುವ ಗುಹಾಂತರ ದೇವಾಲಯವಿದು. ಬಂಡೆಯ ಕೆಳಭಾಗದಲ್ಲಿ ಬಿಳಿವರ್ಣದ ವರ್ಣಚಿತ್ರಗಳಿವೆ. ಇವುಗಳಿಂದ ನೂತನ ಶಿಲಾಯುಗದ ಮಾನವರು ಈ ಗುಹೆಯಲ್ಲಿ ವಾಸವಾಗಿದ್ದರೆಂದು ಹೇಳಬಹುದು. ಮಾತಂಗ ಪರ್ವತ, ಚಕ್ರತೀರ್ಥದ ಸಮೀಪ ಮತ್ತು ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ಪ್ರಾಗೈತಿಹಾಸ ಕಾಲದ ಚಿತ್ರಗಳು ಕಂಡುಬರುತ್ತವೆ. ಹೀಗಾಗಿ ಅಧ್ಯಯನ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯು ಒಂದು ಮಹತ್ವಪೂರ್ಣವಾದ ಚಾರಿತ್ರಿಕ ಹಿನ್ನೆಲೆ ಹೊಂದಿದೆ.

. ಪ್ರಾಗೈತಿಹಾಸಿಕ ಚಿತ್ರಕಲೆ

ಜನಸಾಮಾನ್ಯರ ಸೌಂದರ್ಯದ ಪ್ರಜ್ಞೆಯು ಮಣ್ಣಿನ ಗೊಂಬೆಗಳಲ್ಲಿ, ಕಲ್ಲಿನ ಆಯುಧಗಳಲ್ಲಿ, ಮಡಕೆ ಕುಡಿಕೆಗಳಲ್ಲಿ, ಕಲ್ಲಾಸರೆ, ಗವಿ ವರ್ಣಚಿತ್ರಗಳಲ್ಲಿ ಸೂಚಿತವಾಗಿದೆ. ವಿಶೇಷವಾಗಿ ಸಂಗನ ಕಲ್ಲಿನಲ್ಲಿಯೂ ದೊರೆತಿವೆ. ತುಂಗಭದ್ರಾ ಮೇಲ್ದಂಡೆ ಪ್ರದೇಶದಲ್ಲಿ ಕಂದು ಮತ್ತು ಹೆಚ್ಚು ಕಪ್ಪು ಪಾತ್ರೆಗಳೇ ದೊರೆತಿವೆ. ಇವುಗಳ ಮೇಲ್ವರ್ಣವು ತೀರ ತೆಳ್ಳಗಿದ್ದು ಪಾತ್ರೆಯು ಒರಟಾಗಿ ಕಾಣಿಸುತ್ತದೆ. ಹಂತ ಹಂತವಾಗಿ ಕೈಯಿಂದ ಮಾಡಿದ ದಪ್ಪನೆಯ ದೊಡ್ಡ ದೊಡ್ಡ ಗುಡಾಣಗಳು ಮಧ್ಯಮ ಆಕಾರದ ಉಬ್ಬಿದ ಹೊಟ್ಟೆಯ ಮತ್ತು ಹೊರ ಚಾಚಿತ ಉದ್ದನೆಯ ಹಿಡಿಕೆಯುಳ್ಳ ಗಡಿಗೆಗಳು, ಅಗಲ ಬಾಯುಳ್ಳ ಬಟ್ಟಲುಗಳು, ಭುಜದ ಭಾಗದಲ್ಲಿ ಕೊಳವೆಯುಳ್ಳ ಪಾತ್ರೆಗಳು, ಅರ್ಧ ಗೋಲಾಕೃತಿಯ ಬಟ್ಟಲು ತಟ್ಟೆ, ನಾನಾ ವಿಧದ ಮುಚ್ಚಳ ಇವೇ ಮೊದಲಾದ ಮಣ್ಣಿನ ಪಾತ್ರೆಗಳು ದೊರೆತಿವೆ. ದೊಡ್ಡಗುಡಾಣವನ್ನು ಹಸ್ತಿಸಂಚಯನಕ್ಕೋಸ್ಕರ ಶವಸಂಸ್ಕಾರದಲ್ಲಿಯೂ ಕೂಡ ಉಪಯೋಗಿಸುತ್ತಿದ್ದರು. ಇಂತಹ ಗುಡಾಣಗಳ ಬುಡವನ್ನು ಹೊಡೆದು ಅದರಲ್ಲಿ ಇನ್ನೊಂದರ ಬಾಯನ್ನು ಸೇರಿಸುವ ಹಾಗೆ ಮೂರು ಅಥವಾ ನಾಲ್ಕು ಗುಡಾಣಗಳನ್ನು ಜೋಡಿಸಿ ಶವ ಕುಣಿಕೆಯಲ್ಲಿಟ್ಟು ಅದರೊಳಗೆ ಹಸ್ತಿಸಂಚಯನ ಮಾಡುತ್ತಿದ್ದರು. ಒಂದು ಶವ ಕುಣಿಯು ತೆಕ್ಕಲಕೋಟೆಯಲ್ಲಿ ದೊರೆತಿದೆ. ಉಳಿದ ಪಾತ್ರೆಗಳಲ್ಲಿ ಆಹಾರ ಧಾನ್ಯ ನೀರು ಮೊದಲಾದ ಪಾನೀಯಗಳನ್ನು ಶೇಖರಿಸಿಡಲಾಗುತ್ತಿತ್ತು. ಇಂತಹ ಮಡಿಕೆಗಳ ತಯಾರಿಕಾ ಕ್ರಮ ಅತ್ಯಂತ ಕಲಾತ್ಮಕವಾರುತ್ತಿತ್ತು. ತುಂಗಭದ್ರಾ ಮೇಲ್ದಂಡೆ ಪ್ರದೇಶದಲ್ಲಿ ದೊರೆತಿರುವ ಮಡಿಕೆಗಳ ಮೇಲೆ ಯಾವುದೇ ರೀತಿಯ ವರ್ಣಚಿತ್ರಗಳಿರುವುದಿಲ್ಲ. ಆದರೆ, ಬಟ್ಟಲು, ತಟ್ಟೆ, ಮಡಿಕೆಗಳ ಅಂಚಿನಲ್ಲಿ ಕೆಮ್ಮಣ್ಣಿನ ಬಣ್ಣವನ್ನು ಹಚ್ಚಿರುತ್ತಾರೆ. ಇಂತಹ ಮಣ್ಣಿನ ಪಾತ್ರೆಗಳನ್ನು ಬಟ್ಟಿಯಲ್ಲಿಟ್ಟು ಸುಟ್ಟ ನಂತರ ಒಂದು ರೀತಿಯ ಅಲಂಕರಣವನ್ನು ಮಾಡಲಾಗಿದೆ. ಕನಿಷ್ಟ ೪೦,೦೦೦ ವರ್ಷದಷ್ಟು ಪ್ರಾಚೀನ ಕಾಲದಿಂದಲೇ ಅಂದರೆ ಅಂತ್ಯ ಹಳೆಯ ಶಿಲಾಯುಗ ಹಂತದಿಂದ ಇಂತಹ ವಿವಿಧ ಪ್ರಕಾರಗಳ ಕಲಾಕೃತಿಗಳು ಸೃಷ್ಟಿಯಾಗುತ್ತ ಬಂದವು. ಸೂಕ್ಷ್ಮವಾಗಿ ಇವುಗಳನ್ನು ಪರಿಶೀಲಿಸಿದಾಗ, ಈ ಪ್ರಾಚೀನ ಮಾನವನ ಸೌಂದರ್ಯ ಪ್ರಜ್ಞೆಯನ್ನು ಕಾಣಬಹುದು. ಕ್ರಿ. ಪೂ. ಸುಮಾರು ೨ರಿಂದ ೫ ಲಕ್ಷ ವರ್ಷಗಳ ಹಿಂದಿನ ಮಾನವ ಸಂಸ್ಕೃತಿಯ ಅತಂತ್ಯ ಪ್ರಾಚೀನ ಹಂತವಾದ ಹಳೆ ಶಿಲಾಯುಗದ ಜನರು ಕೇವಲ ತಮ್ಮ ಆಹಾರ ಸಂಗ್ರಹಣೆಗೋಸ್ಕರ ಕಲ್ಲಿನ ಆಯುಧಗಳನ್ನು ತಯಾರು ಮಾಡಿಕೊಳ್ಳುವ ಮೂಲಕ ಅದರ ತಾಂತ್ರಿಕತೆಗೆ ವಹಿಸುವ ಗಮನವನ್ನು ಆಯುಧದ ಸೌಂದರ್ಯಕ್ಕೂ ಹರಿಸುತ್ತಿದ್ದರು. ವಿವಿಧ ಬಣ್ಣದ ಉತ್ತಮ ಜಾತಿಯ ಕಲ್ಲಿನ ರೇಖೆ ಏಕಪ್ರಕಾರ ಹದವರಿತ ಸಮತೋಲನ ಕೆತ್ತನೆ ಕೇಂದ್ರದಲ್ಲಿನ ಉದ್ದ – ಅಗಲ ಎರಡೂ ಬದಿಗಳ ಮತ್ತು ಬಾಹ್ಯ ಆಕೃತಿಯ ಸಮಪ್ರಮಾಣದ, ಇವುಗಳನ್ನು ಒಂದು ಸುಂದರ ಕಲಾಕೃತಿಯನ್ನಾಗಿ ಮಾಡಿದವು. ಆದಿಮಾನವ ತನ್ನ ಆಹಾರ ಸಂಗ್ರಹಣೆಯ ಉಪಯೋಗದ ನಂತರ ಅವನು ಅಲ್ಲಿಯೇ ಬೀಡು ಬಿಡುತ್ತಿದ್ದನು. ಪ್ರಾಗೈತಿಹಾಸಿಕ ಮಾನವ ನಿಸರ್ಗದೊಂದಿಗೆ ಹೊಂದಿಕೊಂಡು ಪಶುಪಕ್ಕಿಗಳೊಡನೆ ಗಿಡ ಮರಗಳ, ಹೂಬಳ್ಳಿಗಳ, ನದಿ ಬೆಟ್ಟಗಳ, ಕಾಡು – ಮೇಡುಗಳ ಪರಿಸರದಲ್ಲಿ ತನ್ನ ಬದುಕನ್ನು ಸುಧಾರಿಸಿಕೊಳ್ಳುತ್ತಾ ಸಾಗಿದ್ದಾಗ ಆತನ ಮನಸ್ಸು ಸೌಂದರ್ಯದ ಕಡೆ ತಿರುಗಿತು. ತಾನು ಕಂಡು ನೋಡಿದ್ದ ಅನುಭವವನ್ನು ಒಂದೆಡೆ ವ್ಯಕ್ತಪಡಿಸಿದ ಪ್ರಯತ್ನವೇ ಕಲಾಸೃಷ್ಟಿಗೆ ನಾಂದಿಯಾಯಿತು.

ಕಲ್ಲಾಸರೆಯ ಹತ್ತಿರವೇ ಮಣ್ಣಿನ ಗಟ್ಟಿಗಳಿಂದ ಮತ್ತು ಗಿಡದ ಟೊಂಗೆಯ ಎಲೆಗಳಿಂದಲೂ ಬಣ್ಣ ತಯಾರಿಸಿಕೊಂಡು, ಇಂತಹ ಚಿತ್ರಗಳನ್ನು ಬಿಡಿಸಿರಲೂಬಹುದು. ಇದಲ್ಲದೇ ಕುಟ್ಟಿದ ಚಿತ್ರಗಳನ್ನು ಉದ್ದನೆಯ, ಚೂಪಾದ, ಗಟ್ಟಿಯಾದ ಕಲಿನಿಂದ ಒಂದೇ ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ಚಿತ್ರಗಳನ್ನು ಸೃಷ್ಟಿಸಿದ್ದಾನೆ. ಈ ಆಶೋತ್ತರಗಳ ಯಶಸ್ವಿ ಪೂರೈಕೆಗೆ ಕೆಲವು ನಂಬಿಕೆಗಳು, ಕಟ್ಟಳೆಗಳು ಬೆಳೆದು ಬಂದಿರಬಹುದು. ಇದಕ್ಕೋಸ್ಕರ ಗರ್ಭಧರಿಸುವ ಪ್ರಾಣಿ, ಗರ್ಭಿಣಿ ಸ್ತ್ರೀ, ಬಾಣ, ಈಟಿಯಿಂದ ಚುಚ್ಚಲ್ಪಟ್ಟ ಪ್ರಾಣಿ, ಪ್ರಾಣಿಗಳ ಬೇಟೆಗೆ ಹೊರಡುವ ಮುಂಚೆ ಯಶಸ್ಸಿನ ಬೇಟೆಯನ್ನು ಸೂಚಿಸುವ ಸಮೂಹ ನೃತ್ಯ ಇದೇ ಮೊದಲಾದ ವಿಷಯಗಳ ಚಿತ್ರಗಳನ್ನು ಬರೆದು ಕಟ್ಟಳೆಗಳನ್ನು ಮಾಡುವ ಪದ್ಧತಿ ಬೆಳೆಯಿತು. ಇವುಗಳಿಗೆ ಸಂಬಂಧಿಸಿದಂತೆ ತಮ್ಮ ಇಚ್ಛಾನುಸಾರ ಪ್ರಾಣಿ, ಪಶುಪಕ್ಷಿಗಳ ನಿಯಂತ್ರಣ ಇಂತಹ ಸಾಂಕೇತಿಕ ಮಾಂತ್ರಿಕ ರೇಖಾಕೃತಿಗಳು ಹುಟ್ಟಿಕೊಂಡವು. ಇಂತಹ ಪರಂಪರೆಯ ಎಷ್ಟೋ ಅಂಶಗಳು ವಿಶ್ವದ ನಾನಾ ಭಾಗಗಳಲ್ಲಿಯೂ ಅದಿವಾಸಿಗಳ ಜಾನಪದ ರೈತಾಪಿ ಜನವರ್ಗಗಳಲ್ಲಿ ಇನ್ನೂ ಉಳಿದು ಬಂದಿದೆ. ಆದ್ದರಿಂದ, ವಿವಿಧ ಪ್ರಕಾರಗಳ ಇಂತಹ ಚಿತ್ರಗಳನ್ನು ಸೃಷ್ಟಿಸುವ ಕಲಾ ಕುಶಲತೆ ಹಿಂದಿನ ಕಾಲಾವಧಿಯಿಂದ, ಇಂದಿನವರೆಗೂ ಮುಂದುವರೆದು ಬಂದಿದೆ. ಈ ಕಾಲ ಕ್ರಮಣಿಕೆಯನ್ನು ಸೂಕ್ಷ್ಮ ಶಿಲಾಯುಗದ ಹಂತ ಸು.ಕ್ರಿ. ಪೂ. ೫೦೦೦-೧೫೦೦, ನೂತನ ಶಿಲಾಯುಗ, ಸು.ಕ್ರಿ. ಪೂ. ೨೦೦೦-೧೦೦೦, ಕಬ್ಬಿಣ ಶಿಲಾಯುಗದ ಬೃಹತ್‌ಶಿಲಾ ಸಂಸ್ಕೃತಿ, ಸು. ಕ್ರಿ. ಪೂ. ೧೦೦೦ – ೨೦೦, ಆದಿ ಇತಿಹಾಸ, ಸು.ಕ್ರಿ. ಪೂ. ೨೦೦-ಕ್ರಿ. ಶ. ೩೦೦, ಇತಿಹಾಸ ಕಾಲ ಸು.ಕ್ರಿ. ಶ. ೩೦೦-೬೦೦. ಈ ಇತಿಹಾಸದ ಕಾಲದ ಹಂತಗಳನ್ನು ಡಾ. ಅ. ಸುಂದರ ಅವರು ಹೀಗೆ ಗುರುತಿಸಿದ್ದಾರೆ.

ಸ್ಪೇನ್‌ಹಾಗೂ ಫ್ರಾನ್ಸ್‌ದೇಶಗಳಲ್ಲಿನ ಗುಹಾ ರೇಖಾಚಿತ್ರಗಳು ವಿಶ್ವದ ಮೊದಲ ಚಿತ್ರಗಳಾಗಿವೆ. ಇವುಗಳ ಸಂಶೋಧನೆಯಿಂದ ೨೦ನೇ ಶತಮಾನದ ಅರಂಭದಲ್ಲಿಯೇ ಭಾರತದಲ್ಲಿಯೂ ಗುಹಾಚಿತ್ರಗಳ ಸಂಶೋಧನಾ ಕಾರ್ಯ ಆರಂಭವಾಯಿತು. ಇಡೀ ಪ್ರಪಂಚದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಗುಹಾಚಿತ್ರಗಳು ಭಾರತದಲ್ಲಿ ಕಂಡುಬಂದಿದೆ. ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲದಲ್ಲಿ ‘ಹ್ಯೂ ಬಟರ್‌ನಾಕ್ಸ್‌’ ಇಂಗ್ಲಿಷ್‌ವಿದ್ವಾಂಸ ಮೊಟ್ಟ ಮೊದಲಿಗೆ ಗವಿಚಿತ್ರಗಳನ್ನು ಪತ್ತೆ ಹಚ್ಚಿದನು. ನಂತರ ಕಾಲದಲ್ಲಿ ಲಿಯೋನಾರ್ಡೋಮನ್‌, ಎಫ್‌.ಆರ್. ಅಲ್‌ಚಿನ್‌ಕಂಡು ಹಿಡಿದರು. ಇತ್ತೀಚಿನ ಎರಡು ದಶಕಗಳಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ, ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು, ಬೆಳಗಲ್ಲು ಮತ್ತು ಕುರುಗೋಡು, ಅಪ್ಪಯ್ಯನ ಹಳ್ಳಿಗಳಲ್ಲಿ ಇಂತಹ ಚಿತ್ರಗಳನ್ನು ಡಾ. ಎಂ. ಎಸ್‌.ನಾಗರಾಜವ್‌, ಡಾ. ರು. ಮ. ಷಡಕ್ಷರಯ್ಯ ಮೊದಲಾದವರು ಶೋಧಿಸಿದರು. ಬಳ್ಳಾರಿ ಜಿಲ್ಲೆಯ ಹಳಕುಂಡಿ, ಕುರುಗೋಡು, ಹಂಪಿ ಪರಿಸರದಲ್ಲಿನ ಕೆಲವು ಗುಹಾಚಿತ್ರಗಳನ್ನು ಡಾ. ಅ. ಸುಂದರ ಅವರು ಗುರುತಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಅವರಣದಲ್ಲಿರುವ ಗುಹಾಚಿತ್ರಗಳನ್ನು ಪ್ರೊ. ಲಕ್ಷ್ಮಣ್‌ತೆಲಗಾವಿ ಅವರು ಗುರುತಿಸಿದ್ದಾರೆ. ಕೊಪ್ಪಳ ಮತ್ತು ಹಂಪಿ ಪರಿಸರದ ಗುಹಾಚಿತ್ರಗಳ ಕುರಿತು ಪಿಎಚ್‌. ಡಿ. ಮಹಾಪ್ರಭಂಧ ಬರೆದಿರುವ ಶರಣಬಸಪ್ಪ ಕೊಲ್ಕಾರ್‌ಅವರು ಸಹ ಹಂಪಿ ಪರಿಸರದಲ್ಲಿ ಕೆಲವು ಹೊಸ ಗುಹಾಚಿತ್ರಗಳನ್ನು ಗುರುತಿಸಿದ್ದಾರೆ.

ಕಲ್ಲಾಸರೆ, ಗವಿವರ್ಣ ಚಿತ್ರಗಳು ಹೆಚ್ಚಾಗಿ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು, ತೆಕ್ಕಲಕೋಟೆ, ಹಂಪಿ ಪ್ರದೇಶದ ಬೆಟ್ಟಗಳಲ್ಲಿ ಬಯಲು ಬಂಡೆಗಳ ಮೇಲೆಯೂ ಇವೆ. ಈ ಚಿತ್ರಗಳಲ್ಲಿ ಮೂರು ವಿಧಗಳಿವೆ. ಸಾಮಾನ್ಯವಾಗಿ ಗವಿಗಳಲ್ಲಿ ಕಲ್ಲಾಸರೆಗಳಲ್ಲಿ ಕೆಮ್ಮಣ್ಣಿನ ಬಣ್ಣದ ಚಿತ್ರಗಳು ಬಯಲಿನಲ್ಲಿರುವ ಪ್ರದೇಶವನ್ನು ಸಮೀಪದಲ್ಲಿನ ಪ್ರಾಚೀನ ನೆಲೆಗಳನ್ನು ಶಿಲಾ ತಾಮ್ರಯುಗದ ಮಣ್ಣಿನ ಪ್ರಾತ್ರೆಗಳ ಮೇಲಿನ ಚಿತ್ರಗಳಿಗೆ ಹೋಲಿಸಿ ಚಿತ್ರಗಳಲ್ಲಿಯ ಪ್ರಾಣಿ, ಪಶುಪಕ್ಷಿ, ಮನುಷ್ಯನ ಚಿತ್ರ ಮೊದಲಾದವುಗಳ ಶೈಲಿಯನ್ನು ಗಮನಿಸಿ ಅವುಗಳ ಕಾಲಮಾನವನ್ನು ನಿರ್ಧರಿಸುವ ಪ್ರಯತ್ನ ಮಾಡಿದ್ದಾರೆ. ಸಂಗನಕಲ್ಲು, ತೆಕ್ಕಲಕೋಟೆ, ಸ್ಥಳಗಳಲ್ಲಿ ದೊರೆತಿರುವ ವರ್ಣಚಿತ್ರಗಳು ಬಹುಮಟ್ಟಿಗೆ ಶಿಲಾ – ತಾಮ್ರಯುಗ ಸಂಸ್ಕೃತಿಯ ಜನರ ಕೃತಿಗಳಾಗಿರಬಹುದು. ಇಂತಹ ವರ್ಣಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣುವುದು ಗೂಳಿ, ಅಲ್ಪಪ್ರಮಾಣದಲ್ಲಿ ಆಕಳು, ಜಿಂಕೆ, ಹುಲಿ, ಮನುಷ್ಯರು ಕೈ ಕೈ ಹಿಡಿದುಕೊಂಡ ಜನರ ನೃತ್ಯ ಸಮೂಹ, ಬೇಟೆಯಾಡುವ ಮುಂತಾದ ಕುತೂಹಲಕಾರಿಯಾದ ರೇಖಾಚಿತ್ರಗಳಲ್ಲಿರುತ್ತವೆ. ಇವುಗಳಲ್ಲಿ ಗೂಳಿಯ ಚಿತ್ರ ಮತ್ತು ಸಮೂಹ ನೃತ್ಯ ಚಿತ್ರಗಳು ತೆಕ್ಕಲಕೋಟೆಯ ಗವಿವರ್ಣಚಿತ್ರಗಳಿಗೆ ಹೋಲುವಂತಿದ್ದು, ಇವುಗಳಲ್ಲಿಯೂ ಬಹುಮಟ್ಟಿಗೆ ಶಿಲಾತಾಮ್ರಯುಗದ ಹಂತವು. ಶಿಲಾ – ತಾಮ್ರಯುಗದ ಜನರ ಸಂಸ್ಕೃತಿಯು ಪಶುಸಂಗೋಪನೆ ಮುಖ್ಯ ಕಸುಬಾಗಿದ್ದು, ಅಲೆಮಾರಿ ಜನಾಂಗದ್ದೆಂದು ಕಾಣುವುದು, ತೀಕ್ಷ್ಣ ಗೀರಿನ ರೇಖಾಚಿತ್ರಗಳು ಬಹಳ ಕಡಿಮೆ. ಇವೆರಡು ಪ್ರಕಾರದ ಚಿತ್ರಗಳು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಬೆಳಗಲಿ ಗ್ರಾಮದಲ್ಲಿಯೂ ದೊರೆತಿವೆ. ಹಂಪಿ ಪ್ರದೇಶದ ವರ್ಣಚಿತ್ರದಲ್ಲಿ ಒಬ್ಬ ಸ್ತ್ರೀಯೂ ಸೇರಿದಂತೆ ನಾಲ್ಕು ಜನರು ನೃತ್ಯದಲ್ಲಿ ತೊಡಗಿರುವಂತೆ ತೋರುತ್ತದೆ. ಇದಲ್ಲದೇ ನೆರಳಿನಾಕೃತಿಯ ಹಲವಾರು ಜನರು ಕೈ ಕೈ ಹಿಡಿದುಕೊಂಡು ಸಮೂಹ ನೃತ್ಯ ಮಾಡುತ್ತಿರುವ ಚಿತ್ರಗಳಿವೆ. ಕುದುರೆ ಸವಾರರು ವಿವಿಧ ಆಯುಧಗಳನ್ನು ಧರಿಸಿದ ಯೋಧರು ಮೊದಲಾದ ಚಿತ್ರಗಳು ಹಲವು ಗುಹೆಗಳಲ್ಲಿವೆ.

ಹಂಪಿ ಪರಿಸರದಲ್ಲಿ ಈವರೆಗೆ ಗುರುತಿಸಲಾದ ವರ್ಣಚಿತ್ರ ಗವಿಗಳಲ್ಲಿ ಸ್ಥಳೀಯ ಜನರು ಕರೆಯುವ ಭರಮದೇವರ ಗುಂಡಿನ ಚಿತ್ರಗಳು ಅತ್ಯಂತ ವಿಸ್ಮಯಕಾರಿಯೂ, ರೋಚಕವೂ, ಅರ್ಥಪೂರಕವೂ ಆಗಿವೆ. ಡಾ. ಅ. ಸುಂದರ ಅವರು ಗಮನಿಸಿರುವಂತೆ “ಇವುಗಳು ಬರೆಯಲ್ಪಟ್ಟ ಕಲ್ಲಾಸರೆಯು ಸ್ಪಲ್ಪವೇ ಹಿಂಜರಿದ ಅರ್ಧ ಗೋಲಾಕೃತಿಯ ಚಕ್ರಪಟದಂತಿದೆ. ಇದರ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಯವರಿಗೆ ಕುಣಿತದಲ್ಲಿ ತೊಡಗಿರುವ ನಾಲ್ಕು ಸ್ಪಲ್ಪ ದೊಡ್ಡ ದೊಡ್ಡ ಮನುಷ್ಯಾಕೃತಿಗಳಿವೆ. ವ್ಯಕ್ತಿಗಳು ಈ ಗೋಲಾಕೃತಿಯ ರಂಗಮಂಟಪದಲ್ಲಿರುವಂತೆ ಕಾಣುತ್ತದೆ. ತನ್ನ ಚಿತ್ರಗಳಿಗೆ ಸೂಕ್ತ ಆಸರೆಯನ್ನು ಆರಿಸುವುದರಲ್ಲಿ ಆ ಕಲಾವಿದನ ಪ್ರತಿಭೆಗೆ ಇದು ಒಂದು ಉತ್ತಮ ನಿದರ್ಶನ. ಎಡಗಡೆಯಿಂದ ಮೊದಲನೇ ಮೂರು, ಬಲ ಬದಿ ನೋಟದಲ್ಲಿವೆ. ಕೊನೆಯದು ಮುಂಬದಿ ನೋಟದಲ್ಲಿದೆ. ಮೊದಲನೆಯ ಎರಡು ಚಿತ್ರಗಳಲ್ಲಿ ಸ್ಪಷ್ಟವಾಗಿ ಉಬ್ಬಿದ ಸ್ತನವು ಕಾಣಿಸುವುದರಿಂದ ಅವು ಸ್ತ್ರೀಯರು, ಮೂರನೆಯದು ಪುರುಷನ ಸಣ್ಣಾಕೃತಿ ಬಹುಶಃ ಹುಡಗನಿರಬೇಕು, ತಲೆಯ ಭಾಗವು ಅಳಸಿ ಹೋಗಿರಬಹುದು. ಈ ಮೂರು ಸ್ಪಲ್ಪ ಕುಗ್ಗಿನಿಂತ ಭಂಗಿಯಲ್ಲಿವೆ. ಮುಂಡದ ಭಾಗವು ಸ್ಪಲ್ಪ ಮುಂದೆ ಬಾಗಿದೆ. ಕೈಗಳನ್ನು ನೆಟ್ಟಗೆ ಮುಂಚಾಚಿವೆ. ಬೆರಳುಗಳನ್ನು ಬಿಡಿಸಲಾಗಿದೆ. ಮುಖದ ಮೇಲೆ ಗುಣಾಕಾರ ಆಕೃತಿ ಇದ್ದು ಪ್ರತಿಯೊಂದು ಕವಲಿನಲ್ಲಿಯೂ ಒಂದೊಂದು ಅರ್ಧ ಕಂಸವಿದೆ. ಕೈಗಳ ಉದ್ದಕ್ಕೂ ನೀಳ ರೇಖೆಗಳಿವೆ. ಮುಂಡದ ಭಾಗ ದ್ವಿರೇಖೆಯ ಗುಣಾಕಾರನ ಆಕೃತಿ ಇದ್ದು ರೇಖೆಗಳ ಮಧ್ಯದಲ್ಲಿ ಅಡ್ಡರೇಖೆಗಳಿವೆ” ಎಂದು ಗಮನಿಸಿದ್ದಾರೆ. ಈ ಸಂಸ್ಕೃತಿಯ ಕಪ್ಪು- ಕೆಂಪು ಪಾತ್ರೆಗಳಲ್ಲಿ ಬಿಳಿ ಬಣ್ಣದ ರೇಖಾಚಿತ್ರಗಳಿರುತ್ತವೆ. ಈ ಚಿತ್ರಗಳು ತೀರಾ ಸರಳವಾದವು. ಮುಖ್ಯವಾಗಿ ಈ ಸಂಸ್ಕೃತಿಯ ಜನರು ಕೃಷಿ, ಪಶುಸಂಗೋಪನೆ ಮತ್ತು ಸ್ಪಲ್ಪ ಮಟ್ಟಿಗೆ ಬೇಟೆ ಆಡುವುದು, ಮೀನು ಹಿಡಿಯುವುದು ಇವರ ಜೀವನ ಆಧಾರವಾಗಿತ್ತು. ಇಂತಹ ಅವಶೇಷದಲ್ಲಿ ಭತ್ತ, ಗೋಧಿ, ಹುರಳಿ ಮೊದಲಾದವುಗಳನ್ನು ಬೆಳೆಯುತ್ತಿದ್ದರು. ಇಂತಹ ಕಾಳುಕಡ್ಡಿಗಳ ಅವಶೇಷಗಳು ತೆಕ್ಕಲಕೋಟೆಯಲ್ಲಿ ದೊರೆತಿವೆ.