ಮೇಲ್ಛಾವಣಿಯಲ್ಲಿರುವ ಧಾರ್ಮಿಕ ಚಿತ್ರಗಳಲ್ಲಿ ಕೆಲವನ್ನು ಹೀಗೆ ಗಮನಿಸಬಹುದು. ದ್ರೌಪದಿಯ ಸ್ವಯಂವರದ ಚಿತ್ರವನ್ನು ಮೂರು ಚೌಕುಗಳಲ್ಲಿ ವಿಭಾಗಿಸಿ ಚಿತ್ರಿಸಿದ್ದಾರೆ. ಮೊದಲನೆಯ ಚೌಕದಲ್ಲಿ ಅರ್ಜುನನು ಮೀನಿನ ಪ್ರತಿಬಿಂಬವನ್ನು ಎಣ್ಣೆಯಲ್ಲಿ ನೋಡಿ ಬಾಣ ಬಿಡುತ್ತಿರುವನು. ಎರಡನೆಯ ಚೌಕದಲ್ಲಿ ದ್ರೌಪದಿ ಅರ್ಜುನರು, ಜೊತೆಗಿದ್ದು, ಸ್ವಯಂವರ ನಡೆಯುತ್ತಿದೆ. ಮೂರನೆಯ ಚಿತ್ರದಲ್ಲಿ ಆಮಂತ್ರಿಕ ಗಣ್ಯರು, ಋಷಮುನಿಗಳು ರಾಜಪರಿವಾರದವರು ಮುಂತಾದವರ ಚಿತ್ರಗಳಿವೆ. ಮತ್ಸ್ಯಛೇದನ ಮಾಡುತ್ತಿರುವ ಅರ್ಜುನನು ಕಿರೀಟ ಧರಿಸಿದ್ದು ಅರ್ಧ ಚಂದ್ರಾಕೃತಿ ಪಾತ್ರೆಯಲ್ಲಿ ಮೇಲೆ ಕಟ್ಟಲಾಗಿರುವ ಮೀನಿನ ಪ್ರತಿಬಿಂಬವನ್ನು ನೋಡಿ ಬಾಣ ಬಿಡುತ್ತಿದ್ದಾನೆ. ಆತನ ಮೈಬಣ್ಣ ಕೆಂಪಾಗಿದ್ದು, ಕೈಕಾಲು ಮುಖದ ವರ್ಣಛಾಯೆಯು ಬದಲಾಗಿದೆ. ದ್ರೌಪದಿಯು ಗಾಢ ವರ್ಣದ ಜರತಾರಿ ಅಂಚುಳ್ಳ ಸೀರೆಯನ್ನು ಕಚ್ಚೆಹಾಕಿ ಉಟ್ಟಿದ್ದಾಳೆ. ಬಲಗಡೆಗಿರುವ ವ್ಯಕ್ತಿಯ ಕೈಯಲ್ಲಿ ಗದೆಯಂತಹ ದಂಡವಿದೆ. ಆತನ ಬಲಕ್ಕೆ ಇನ್ನೊಬ್ಬ ವ್ಯಕ್ತಿ ಇದ್ದು ಈ ಇಬ್ಬರು ತೊಡೆ ಮಟ್ಟದ ಪಂಚೆ ಉಟ್ಟಿದ್ದಾರೆ. ಸೊಂಟದಿಂದ ಕೆಳಕ್ಕೆ ಕುಂಚ ಹಾಯ್ದಿದೆ. ಹೆಗಲಿನ ಉತ್ತರೀಯವು ಮೊಣಕಾಲ ಕೆಳಗಿನವರಿಗೆ ಇಳಿಬಿಡಲಾಗಿದೆ. ಇಲ್ಲಿ ಇವೆಲ್ಲವನ್ನು ಅತ್ಯಂತ ಸೂಕ್ಷ್ಮವಾದ ವರ್ಣವಿನ್ಯಾಸದಿಂದ ಸಂಯೋಜಿಸಲಾಗಿದೆ. ತ್ರಿಪುರ ಸಂಹಾರ ಶಿವನ ದೃಶ್ಯವನ್ನು ಮಧ್ಯದ ಚೌಕ ಬಿಟ್ಟು ಮುಂದಿನ ಚೌಕದಲ್ಲಿ ಮನ್ಮಥ ವಿಜಯ ದೃಶ್ಯವನ್ನು ರಚಿಸಲಾಗಿದೆ. ತ್ರಿಪುರ ಸಂಹಾರ ಶಿವನ ಚಿತ್ರವು ಒಂದು ಆಕರ್ಷಕ ಚಿತ್ರವಾಗಿದ್ದು, ಇಲ್ಲಿ ಶಿವನು ರಥದಲ್ಲಿ ಕುಳಿತು ತ್ರಿಪುರ ಸಂಹಾರಕ್ಕಾಗಿ ಧಾವಿಸುತ್ತಿದ್ದಾನೆ. ಸೂರ್ಯ ಚಂದ್ರರೇ ಅವನ ರಥದ ಗಾಲಿಗಳಾಗಿದ್ದಾರೆ. ಬ್ರಹ್ಮನು ರಥನು ರಥದ ಸಾರಥಿಯಾಗಿದ್ದಾನೆ. ಶಿವ ಸಂಹರಿಸಲು ಮೂರು ಪುರಕಗಳು ಮೂರು ವೃತ್ತದಲ್ಲಿ ರಚನೆಯಾಗಿವೆ. ಈ ಮೂರು ವೃತ್ತಗಳನ್ನು ಅವುಗಳ ಒಂದು ಬದಿಗೆ ಕಿಂಡಿ ಮಾಡಿ ಆಧಾರ ಒಂದರಿಂದ ಒಟ್ಟಾಗಿ ಬಂಧಿಸುವಂತೆ ಇವೆ. ಈ ಪುರಗಳ ವೃತ್ತಗಳಲ್ಲಿ ಒಂದರಲ್ಲಿ ವಿಷ್ಣುನಗ್ನವಾಗಿ ನಿಂತಿದ್ದು ಆತನ ಎಡಬಲಗಳಲ್ಲಿ ಇಬ್ಬರು ಕನ್ಯೆಯರು ಆತನ ಸೆವೆಯಲ್ಲಿ ತೊಡಗಿದ್ದಾರೆ. ಇನ್ನೊಂದು ರಥದಲ್ಲಿ ಕೆಂಪು, ಹಳದಿ ವರ್ಣದ ಮತ್ತು ಕಪ್ಪು ವರ್ಣದ ರಾಕ್ಷಸರಿಬ್ಬರು ಕತ್ತಿ, ಢಾಲು, ಗುರಾಣಿ ಹಿಡಿದುಕೊಂಡು ಕಾದಾಡುತ್ತಿದ್ದಾರೆ. ತ್ರಿಪುರಗಳನ್ನು ಸೂಚಿಸುವ ಮೂರು ವೃತ್ತಗಳ ಸೂತ್ತಲೂ ಪಕ್ಷಿಗಳು, ಪ್ರಾಣಿಗಳು, ಮೀನು ಗಳಂತಹ ವಿವಿಧ ಜೀವ ಸಂಕುಲಗಳನ್ನು ಚಿತ್ರಿಸಲಾಗಿದೆ. ಮತ್ತೊಂದು ಚಿಕ್ಕ ಪಟ್ಟಿಕೆಯಲ್ಲಿ ಅಷ್ಟದಿಕ್ಷಾಲಕರ ಚಿತ್ರಗಳಿವೆ. ಪ್ರತಿಯೊಂದನ್ನು ಒಂದೊಂದು ಚೌಕದಲ್ಲಿ ಪ್ರತ್ಯೇಕವಾಗಿಯೇ ಅವರವರ ಮಾಹನಗಳೊಂದಿಗೆ ಚಿತ್ರಿಸಲಾಗಿದೆ. ಎತ್ತು ಕುದರೆ, ಟಗರು, (ಮೇಷ) ಮನುಷ್ಯ, ಕೋಣ, ಆನೆ, ಶರಭ ಮುಂತಾದವುಗಳು ಇಲ್ಲಿ ವಾಹನಗಳನ್ನಾಗಿ ಗುರುತಿಸಲಾಗಿದೆ. ಅದರ ಸಮೀಪದಲ್ಲಿಯೇ ವಿರೂಪಾಕ್ಷ ದೇವರಿಗೆ ಪೂಜೆ ಮಾಡುತ್ತಿರುವ ಚಿತ್ರಣವಿದೆ. ಇದರಲ್ಲಿ ವಿರೂಪಾಕ್ಷ ದೇವರ ಮುಂದೆ ನಂದಿಯ ಮುಖವನ್ನು ಚಿತ್ರಿಸಲಾಗಿದೆ. ಇದರ ಪಕ್ಕದ ಚಿತ್ರ ಪಟ್ಟಿಕೆಯಲ್ಲಿ ಕೃಷ್ಣನು ಗೋಪಿಕಾ ಸ್ತ್ರೀಯರ ವಸ್ತ್ರಗಳನ್ನು ಅಪಹರಿಸಿ ಗಿಡದ ಮೇಲೆ ಕುಳಿತುಕೊಂಡಿದ್ದಾರೆ. ಗೋಪಿಕಾ ಸ್ತ್ರೀಯರೆಲ್ಲ ಮರದ ಸುತ್ತಲೂ ನಿಂತು ತಮ್ಮ ಬಟ್ಟೆಗಳಿಗಾಗಿ ಕೃಷ್ಣನನ್ನು ಕೇಳುವ ಸನ್ನಿವೇಶ ಚಿತ್ರಿಸಲಾಗಿದೆ. ಅದರ ಮುಂದಿನ ಪಟ್ಟಿಕೆಯಲ್ಲಿಯೇ ರಾಮನು ಶಿವನ ಧನಸ್ಸನ್ನು ಎದೆಗೆ ಏರಿಸಿಕೊಂಡು ಮುರಿಯುತ್ತಿರುವುದು. ಸೀತಾ ರಾಮರ ಕಲ್ಯಾಣ ಚಿತ್ರಣ, ಸ್ವಯಂವರಕ್ಕೆ ಬಂದ ರಾಜ ಮಹಾರಾಜರು, ಗಣ್ಯರು, ಋಷಿಮುನಿಗಳು, ರಾಜ ಪರಿವಾರದವರು ಮುಂತಾದವರ ಚಿತ್ರಣಗಳಲ್ಲದೇ ಋಷಿಮುನಿಗಳಿಂದ ಆಶೀರ್ವಾದ ಪಡೆಯುತ್ತಿರುವ ಚಿತ್ರಣವೂ ಇದೆ. ಅದರ ಮತ್ತೊಂದು ಪಟ್ಟಿಕೆಯಲ್ಲಿ ವಿಷ್ಣುವಿಗೆ ಸಂಬಂಧಿಸಿದ ಹತ್ತು ದಶಾವತಾರಗಳನ್ನು ಒಂದೇ ಬದಿಯ ನೋಟಗಳನ್ನು ಒಳಗೊಂಡಂತೆ ಚಿತ್ರಿಸಲಾಗಿದೆ. ನರಸಿಂಹ ಅವತಾರದಲ್ಲಿ ಕಟ್ಟಿಯ ಕೆಳಭಾಗ, ಬದಿಯ ನೋಟ ತೋರಿಸುತ್ತಿದ್ದರೂ ಮೇಲಿನ ಭಾಗ ಸಂಪೂರ್ಣ ಇದಿರು ನೋಟದ್ದಾಗಿ ಚಿತ್ರಿಸಲಾಗಿದೆ. ನರಸಿಂಹನ ಉಗ್ರವಾದ ಸಿಂಹಮುಖವನ್ನು ತೋರಿಸುವುದಕ್ಕಾಗಿ ಮೇಲ್ಭಾಗವನ್ನು ಎದುರಾಗಿ ಚಿತ್ರಿಸಿರಬೇಕು. ಇದರ ಸಮೀಪದಲ್ಲಿಯೇ ಶಿವಪಾರ್ವತಿಯರ ಕಲ್ಯಾಣದ ಮತ್ತೊಂದು ಚಿತ್ರವಿದೆ. ಚರ್ತುಭುಜನಾದ ಶಿವನು ಇಲ್ಲಿ ಮಗ್ಗಲು ನೋಟದಲ್ಲಿದ್ದಾನೆ. ಮುಂದಿನ ಆತನ ಎರಡೂ ಕೈಗಳನ್ನು ಎದುರು ನಿಂತು ಪಾರ್ವತಿ ದೇವತೆಯು ಹಿಡಿದುಕೊಂಡಿದ್ದಾಳೆ. ಶಿವನ ಹಿಂದಿನ ಒಂದು ಕೈಯಲ್ಲಿ ಮೃಗ ಸಂಕೇತವಿದೆ. ಶಿವನ ಎದುರಾಗಿ ಪಾರ್ವತಿಯ ಪಕ್ಕದಲ್ಲಿ ಶ್ರೀದೇವಿ, ಭೂದೇವಿ ಸರ್ವಾಲಂಕೃತರಾಗಿ ಕಿರೀಟ ಧರಿಸಿ ನಿಂತಿದ್ದಾರೆ. ಪಕ್ಕದ ಚೌಕದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಚಿತ್ರಗಳಿವೆ. ಇವುಗಳಲ್ಲದೇ, ಪಕ್ಕದ ಚಿಕ್ಕ ಚಿಕ್ಕ ಪಟ್ಟಿಕೆಗಳಲ್ಲಿ ಋಷಿ ಮುನಿಗಳು, ದೇವತೆಗಳು, ಗಂಧರ್ವರು, ಯಕ್ಷ ಯಕ್ಷಣಿಯರು, ಕಾಲ್ಪನಿಕ ಪ್ರಾಣಿಗಳು, ಪೌರಾಣಿಕ ಪ್ರಾಣಿಗಳು, ಐರಾವತ, ಕಾಮಧೇನು, ಶರಭ ಮುಂತಾದ ಪ್ರಾಣಿಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ಇದೇ ಪಟ್ಟಿಕೆಯ ತೊಲೆಗಳಲ್ಲಿಯೂ ಚಿಕ್ಕ ಪ್ರಮಾಣದ ಚಿತ್ರಗಳನ್ನು ಚಿತ್ರಿಸಲಾಗಿದೆ. ಪಶ್ಚಿಮ ದಿಕ್ಕಿನ ತೊಲೆಯಲ್ಲಿ ವಿರೂಪಾಕ್ಷ ದೇವರ ಗರ್ಭಗೃಹದ ಕಡೆಯಿರುವ ಈ ತೊಲೆಯಲ್ಲಿ ವಿರೂಪಾಕ್ಷ ದೇವರ ಮುಖವಾಡದ ಪ್ರತಿರೂಪದಂತೆ ಇರುವ ಚಿತ್ರ, ಇದರ ಎಡ ಬಲ ಭಾಗಗಳಲ್ಲಿ ನಂದಿ, ಪೂಜಾರಿಗಳ, ಋಷಿಮುನಿಗಳ ಇತರ ದೇವತೆಗಳನ್ನು ಕುರಿತು ಹದಿನೆಂಟು ಚಿತ್ರಗಳಿವೆ. ಉತ್ತರ ದಿಕ್ಕಿನ ತೊಲೆಗಳ ಮೇಲೆ ಸುಮಾರು ೨೪ ಚಿತ್ರಗಳನ್ನು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಚಿತ್ರಿಸಲಾಗಿದೆ. ನಾಲ್ಕು ಮುಖದ ಆಕಳು ಶಿವಲಿಂಗಕ್ಕೆ ಹಾಲು ಕರೆಯುತ್ತಿರುವುದು. ಶರಬ, ಐರಾವತ, ಕಾಮಧೇನು, ವಿಷ್ಣು ಮಹಿಮೆ ಸಾರುವ ಚಿತ್ರಗಳು ಕಾರ್ತಿಕೇಯ, ಶಿವಗಣಗಳು ಮತ್ತು ಇತರ ದೇವತೆಗಳ ಚಿತ್ರಗಳಿವೆ. ದಕ್ಷಿಣ ದಿಕ್ಕಿನ ತೊಲೆಯ ಮೇಲೆ ಆನೆ ಮತ್ತು ಆಕಳು ಸಂಯುಕ್ತಗೊಂಡ ಚಮತ್ಕಾರಿಕ ಚಿತ್ರಗಳಿವೆ. ಇದಲ್ಲದೇ, ಶೇಷ ಶಯನ ವಿಷ್ಣು, ಗಣಪತಿ, ಋಷಿಮುನಿಗಳು, ದೇವತಾ ಪುರುಷರ ಒಟ್ಟು ಇಪ್ಪತ್ನಾಲ್ಕು ಚಿತ್ರಗಳನ್ನು ಈ ತೊಲೆಗಳ ಮೇಲೆ ಚಿತ್ರಿಸಲಾಗಿದೆ.

ವಿಜಯವಿಠ್ಠಲ ದೇವಾಲಯ

ಕೃಷ್ಣದೇವರಾಯನ ಕಾಲಾವಧಿಯಲ್ಲಿ ನಿರ್ಮಿಸಲಾಗಿರುವ ವಿಜಯವಿಠ್ಠಲ ದೇವಾಲಯವು ಭಿತ್ತಿಚಿತ್ರಗಳಿಂದ ಅಲಂಕೃತವಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ವಿಜಯನಗರದ ಅರಸರು ಇದರ ಮಂಟಪವನ್ನು ಸಂಗೀತ, ನೃತ್ಯ, ಉತ್ಸವಗಳಿಗಾಗಿ ಬಳಸುತ್ತಿದ್ದು. ಈ ಮಂಟಪದ ಛಾವಣಿಯು ವರ್ಣಚಿತ್ರಗಳಿಂದ ಕೂಡಿದ್ದಕ್ಕೆ ಇಂದಿಗೂ ಛಾವಣಿಯಲ್ಲಿ ಬಣ್ಣದ ಛಾಯೆ ಉಳಿಕೆಗಳು ಅಲ್ಲಲ್ಲಿ ಕಂಡುಬರುತ್ತವೆ. ಕೆಂಪು, ನೀಲಿ, ಹಸಿರು, ನಸುಗೆಂಪು ಬಣ್ಣದ ಗುರುತುಗಳು ಗೋಚರಿಸುವುದರಿಂದ ಈ ಮಂಟಪವು ಭಿತ್ತಿ ಚಿತ್ರಗಳಿಂದ ಅಲಂಕೃತವಾಗಿತ್ತು. ಆದರೆ, ಕಾಲಕ್ರಮೇಣವಾಗಿ ಎಲ್ಲವೂ ನಾಶವಾಗಿವೆ. ವಿಜಯವಿಠ್ಠಲ ದೇವಾಲಯದ ಮುಂದೆ ಇರುವ ಕಲ್ಲಿನ ರಥವನ್ನು ಚಿತ್ರಗಳಿಂದ ಅಲಂಕರಿಸಲಾಗಿತ್ತು. ಈ ರಥಕ್ಕೆ ಅಳವಡಿಸಿರುವ ಕಲ್ಲಿನ ಚಕ್ರಗಳು ತಿರುಗುತ್ತಿದ್ದವು. ಆದರೆ, ವಾತಾವರಣಕ್ಕೆ ಸಿಕ್ಕಿ ಇದರಲ್ಲಿದ್ದ ವರ್ಣಚಿತ್ರಗಳು ಸಂಪೂರ್ಣವಾಗಿ ನಾಶವಾಗಿದೆ. ಈ ರಥದ ಮಂಟಪದ ಹಾಗಿರುವ ಕಮಾನುಗಳಲ್ಲಿ ಉದ್ದವಾದ ಪಟ್ಟಿಕೆಗಳಲ್ಲಿ ಅಲ್ಲಲ್ಲಿ ಹಸಿರು, ಕೆಂಪು, ನೀಲ ಛಾಯೆ ವರ್ಣದ ಗುರುತುಗಳನ್ನು ಪರೀಕ್ಷಿಸಿ ನೋಡಬಹುದು.

. ಆನೆಗೊಂದಿ

ಆನೆಗೊಂದಿಯು ಒಂದು ಐತಿಹಾಸಿಕ ಮಹತ್ವ ಪಡೆದ ಸ್ಥಳ. ಆನೆಗೊಂದಿಯ ಹುಚ್ಚಪ್ಪಯ್ಯನ ಮಠದಲ್ಲಿ ಹಳೆ ಕಾಲದ ಭಿತ್ತಿಚಿತ್ರಗಳು ಸಾಕಷ್ಟು ಕಂಡುಬರುತ್ತವೆ. ಹುಚ್ಚಪ್ಪಯ್ಯನ ಮಠ ಎಂದು ಕರೆಯಲಾಗುವ ಹಳೆಯ ಕಟ್ಟಡವು ಇಂದು ಒಂದು ಗದ್ದೆಯಲ್ಲಿದೆ. ಈ ಗದ್ದೆಯು ಮುಸ್ಲಿಂ ಕುಟುಂಬದ ಒಡೆತನಕ್ಕೆ ಸೇರಿದೆ. ಹುಚ್ಚಪ್ಪಯ್ಯನ ಮಠದ ಉತ್ತರ ಭಾಗದಲ್ಲಿ ಹಲವು ಕಂಬಗಳಿಂದ ಕೂಡಿದ ಹಜಾರದಂತಹ ಮಂಟಪವಿದೆ. ಈ ಮಂಟಪದ ಮೇಲ್ಭಾವಣಿಗಳಲ್ಲಿ ಚಿತ್ರಗಳಿವೆ. ಇವು ವಿಜಯನಗರ ಕಾಲದಲ್ಲಿಯೇ ರಚಿಸಲಾಗಿದೆ. ಎಂದು ಊಹಿಸಲಾಗಿದೆ. ಇವುಗಳ ಶೈಲಿಯನ್ನು ನೋಡಿದರೆ ಸ್ಪಷ್ಟವಾಗಿ ತಿಳಿಯುತ್ತದೆ. ಈ ಚಿತ್ರಗಳಲ್ಲಿ ನವನಾರೀ ಕುಂಜರದ ಸೊಂಡಲಿನ ಭಾಗದ ಇಬ್ಬರು ಸ್ತ್ರೀಯರ ಅಸ್ಪಷ್ಟ ರೂಪಗಳು, ಚಾಮರ ಬೀಸುತ್ತಿರುವ ಪರಿಚಾರಿಕೆ, ಕಮಲದ ಹೂವಿನ ತೂಗು ಬಿಟ್ಟ ಹಾರಗಳು, ಪಂಚನಾರಿ ತುರಗದ ತಲೆಯ ಭಾಗದಲ್ಲಿ ಒಬ್ಬಳು ಸ್ತ್ರೀ ಹೀಗೆ ಕೆಲವೇ ಮಸುಕು ಚಿತ್ರಗಳು ಉಳಿದುಕೊಂಡಿವೆ. ಇಷ್ಟರಿಂದಲೇ ಅವು ರೇಖೆ ಮತ್ತು ಬಣ್ಣಗಾರಿಕೆಯಲ್ಲಿ ವಿಜಯನಗರ ಕಾಲದ ಮಾದರಿಯಲ್ಲಿವೆ ಎಂದು ಗುರುತಿಸಬಹುದಾಗಿದೆ. ಒಂದು ಅಂಕಣದಲ್ಲಿ ಹೂಗೊಂಚಲು ಅದರಲ್ಲಿ ಓಡಾಡುತ್ತಿರುವ ಅಳಿಲುಗಳನ್ನು ಚಿತ್ರಿಸಲಾಗಿದೆ. ಅಲ್ಲೇ ಇಬ್ಬರು ಸ್ತ್ರೀಯರು ಮತ್ತು ಚಿಕ್ಕ ಆಕೃತಿಗಳು ನೃತ್ಯ ಮಾಡುತ್ತಿರುವಂತೆ ಇದೆ. ಇದನ್ನು ಇಬ್ಬರು ಪುರುಷರು ನಿಂತು ನೋಡುತ್ತಿದ್ದು ಮೇಲ್ಭಾಗದಲ್ಲಿ ದೊಡ್ಡದಾದ ಕಮಲಾಕೃತಿ ಇದೆ. ಇನ್ನೊಂದು ಅಂಕಣದಲ್ಲಿ ಇಬ್ಬರು ಸ್ತ್ರೀಯರು ರಾಣಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ಮೆರವಣಿಗೆ ಹೊರಟಿರುವ ದೃಶ್ಯವಿದೆ. ಈ ದೃಶ್ಯದ ಮೇಲ್ಭಾಗದಲ್ಲಿ ಕಮಲದ ಮಗ್ಗಲಲ್ಲಿ ಹಾರಗಳನ್ನು ರಚಿಸಿದ್ದಾರೆ. ಮತ್ತೊಂದು ಅಂಕಣದಲ್ಲಿ ಕಿರೀಟಧಾರಿಯಾದ ಗಡ್ಡ ಬಿಟ್ಟಿರುವ ವ್ಯಕ್ತಿ ಒಂಟಿಯ ಮೇಲೆ ಕುಳಿತು ಸವಾರಿ ಹೊರಟಿರುವ ಚಿತ್ರಣವಿದೆ. ಅವನ ಮುಂದೆ ಆನೆ ಅದರ ಜೊತೆಗೆ ನವನಾರೀ ಕುಂಜರ ಮತ್ತು ಪಂಚನಾರೀ ತುರಗ ಚಿತ್ರಗಳನ್ನು ರಚಿಸಲಾಗಿದೆ. ಇವುಗಳ ಮುಂದೆ ಚಾಮರ ಹಿಡಿದ ಮತ್ತು ವಸ್ತ್ರ ಹಾರಾಡಿಸುತ್ತಿರುವ ಸ್ತ್ರೀಯರನ್ನು ಚಿತ್ರಿಸಿದ್ದಾರೆ.

ಚಿತ್ರಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಅದರ ಶೈಲಿಗೆ ಸಂಬಂಧಪಟ್ಟಂತೆ ಹಿಂದಿನ ಬಾದಾಮಿಯ ಚಿತ್ರಗಳಲ್ಲಾಗಲಿ, ಮುಂದಿನ ಪಶ್ಚಿಮ ಭಾರತ, ರಾಜಸ್ಥಾನ ಮುಂತಾದ ಕಡೆಗಳಲ್ಲಿ ಬೆಳೆದು ಬಂದ ಭಿತ್ತಿ ಚಿತ್ರ ಶೈಲಿಗಿಂತ ಭಿನ್ನವಾಗಿದೆ. ಇದು ಒಂದು ಪ್ರತ್ಯೇಕ ಶೈಲಿ ರೂಪಗೊಂಡಂತೆ ತಿಳಿಯುತ್ತದೆ. ಬಹುಶಃ ಅವರು ಆಗಮ. ಶಿಲ್ಪಶಾಸ್ತ್ರಗಳ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರಿಸಿದಂತೆ ತೋರುತ್ತದೆ. ಹಲವು ಸಂದರ್ಭದಲ್ಲಿ ಇಲ್ಲಿನ ಚಿತ್ರಗಳು ಆಯಾ ದೇವತೆಗಳ ಶಿಲ್ಪಗಳು, ಚಿತ್ರರೂಪದಲ್ಲಿ ಚಿತ್ರಿಸಿದಂತೆ ಕಾಣುತ್ತವೆ. ಇಲ್ಲಿನ ವ್ಯಕ್ತಿ ಚಿತ್ರಗಳ ನಿಲುವಿನಲ್ಲಿ ಒಂದು ಅಪರೂಪದ ಭಂಗಿ ಇದೆ. ಪಾದದಿಂದ ಸೊಂಟದವರೆಗೂ ಹಿಂದಕ್ಕೆ ಬಾಗಿದ್ದುಂಟು, ಅಲ್ಲಿಂದ ಮೇಲಿನ ಭಾಗ ಸ್ಪಲ್ಪ ಮುಂಚಾಚಿದಂತಿದೆ. ಕೆಲವು ಚಿತ್ರಗಳಲ್ಲಿ ತೋರದಂತಹ ಅಲಂಕಾರವೂ ಇದೆ. ಹಂಪಿಯ ವರ್ಣಚಿತ್ರಗಳನ್ನು ಕುರಿತು ಸಿ. ಟಿ. ಎಂ.ಕೊಟ್ರಯ್ಯನವರು ಕ್ರಿ. ಶ. ೧೫೦೯ರ ನಂತರ ಮತ್ತು ಕ್ರಿ. ಶ. ೧೫೬೫ ಒಳಗೆ ಚಿತ್ರಿತವಾಗಿದೆ ಎಂದಿದ್ದಾರೆ. ಏಕೆಂದರೆ ವರ್ಣಚಿತ್ರಗಳಿರುವ ರಂಗಮಂಟಪವನ್ನು ಕೃಷ್ಣದೇವರಾಯನು ಕ್ರಿ. ಶ. ೧೫೧೦ರಲ್ಲಿ ಕಟ್ಟಿಸಿದನು. ಕ್ರಿ. ಶ. ೧೫೬೫ರಲ್ಲಿ ನಡೆದ ರಕ್ಕಸತಂಗಡಿಗಿ ಯುದ್ಧದಲ್ಲಿ ವಿಜಯನಗರ ಪತನ ಹೊಂದಿತು. ಅಂದರೆ, ಈ ವರ್ಣಚಿತ್ರಗಳು ಕ್ರಿ. ಶ. ೧೫೬೫ರ ಮುಂಚೆ ಮಾಡಿರಬೇಕು ಎಂಬುದು ಅವರ ಅಭಿಪ್ರಾಯವಾಗಿದೆ, ಸಿ. ಶಿವರಾಮಮೂರ್ತಿಯವರು ಈ ವರ್ಣಚಿತ್ರಗಳನ್ನು ಲೇಪಾಕ್ಷಿಯ ವರ್ಣಚಿತ್ರಗಳಿಗಿಂತಲೂ ಹಳೆಯವೆಂದು ಅಬಿಪ್ರಾಯ ಪಡುತ್ತಾರೆ. ಹೀಗಾಗಿ ಈ ಇಬ್ಬರು ವಿದ್ವಾಂಸರ ಅಭಿಪ್ರಾಯ ಒಂದೇ ಆಗಿದೆ.

ಹಂಪಿಯ ವರ್ಣಚಿತ್ರಗಳಿಗೂ ಮತ್ತು ಲೇಪಾಕ್ಷಿಯ ವರ್ಣಚಿತ್ರಗಳಲ್ಲಿ ಸಾಕಷ್ಟು ಭೆದವಿದೆ. ಶೈಲಿಯಲ್ಲಿ ಮತ್ತು ಸಂಯೋಜನೆಯಲ್ಲಿ ಭಿನ್ನತೆಯಿದೆ. ಲೇಪಾಕ್ಷಿಯ ವರ್ಣಚಿತ್ರಗಳೂ ಮತ್ತು ಹಂಪಿಯ ವರ್ಣಚಿತ್ರಗಳು ಚೌಕದಲ್ಲಿವೆ. ಹಂಪಿಯ ವರ್ಣಚಿತ್ರಗಳು ಚೌಕಗಳಲ್ಲಿ ಇದ್ದರೂ, ಇಲ್ಲಿ ಕೆಲವು ಚಿತ್ರಗಳ ಮೇಲ್ಭಾಗದಲ್ಲಿ ತೋರಣದಂತಹ ಅಲಂಕಾರವಿದೆ. ಇಂತಹ ತೋರಣದ ಅಲಂಕಾರ ಲೇಪಾಕ್ಷಿಯಲ್ಲಿ ಕಾಣಸಿಗುವುದಿಲ್ಲ. ಇಂತಹ ತೋರಣ ೧೭ನೇ ಶತಮಾನದ ವರ್ಣಚಿತ್ರಗಳಲ್ಲಿ ಮೊದಲು ಕಾಣಸಿಗುತ್ತದೆ. ಅಲ್ಲದೇ ಅನೇಕ ವರ್ಣಚಿತ್ರಗಳಲ್ಲಿ ದೇವಾಲಯಗಳ ಚಿತ್ರಗಳು ಮತ್ತು ಈ ದೇವಾಲಯಗಳ ಎರಡೂ ಬದಿಯಲ್ಲಿ ತೆಂಗಿನ ಮರದ ಚಿತ್ರಗಳನ್ನು ಬಿಡಿಸಿದ್ದಾರೆ. ಈ ರೀತಿ ವರ್ಣಚಿತ್ರದ ಹಂಚಿನಲ್ಲಿ ದೇವಾಲಯದ ಶಿಖರಗಳು ಲೇಪಾಕ್ಷಿಯಲ್ಲಿ ಕಾಣಸಿಗುವುದಿಲ್ಲ. ಹಾಗೆಯೇ ಹಕ್ಕಿಗಳ ತೆಂಗಿನ ಮರಗಳ ಚಿತ್ರಗಳು ಕೂಡ ಈ ರೀತಿ ದೇವಾಲಯಗಳನ್ನು ತೆಂಗಿನ ಮರಗಳನ್ನು ಚಿತ್ರಿಸುವ ಸಂಪ್ರದಾಯ ೧೬ನೇ ಶತಮಾನದಲ್ಲಿರಲಿಲ್ಲ. ಈ ಸಂಪ್ರದಾಯದ ಚಿತ್ರಗಳಿಗೆ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕ ಜಿಲ್ಲೆಯ ಆಲೂರು ತಾಲ್ಲೂಕಿನ ಹೊಳಲ ಗುಂದದಲ್ಲಿರುವ ಸಿದ್ಧೇಶ್ವರ ದೇವಾಲಯದಲ್ಲಿರುವ ವರ್ಣಚಿತ್ರಗಳನ್ನು ಗುರುತಿಸಬಹುದು. ೧೮ನೇ ಶತಮಾನದ ಅಂತ್ಯದ ಭಾಗ ಇಲ್ಲವೇ ೧೯ನೇ ಶತಮಾನದಲ್ಲಿ ಚಿತ್ರಿಸಿದವು. ಇಲ್ಲಿನ ವರ್ಣಚಿತ್ರಗಳಲ್ಲಿ ಸಮುದ್ರ ಮಂಥನ, ಮನ್ಮಥವಿಜಯ ಗಿರಿಜಾಕಲ್ಯಾಣ, ತಾರಕಸಾಹಾರ, ಸೀತಾಸ್ವಯಂವರ ಮುಂತಾದ ವರ್ಣಚಿತ್ರಗಳಲ್ಲಿ ತೋರಣಗಳ, ಪಕ್ಷಿಗಳ ಮತ್ತು ದೇವಾಲಯಗಳ ವರ್ಣಚಿತ್ರಗಳ ಬಳಕೆ ಸಾಮಾನ್ಯವಾಗಿದೆ. ಇದು ಹಂಪಿಯ ವರ್ಣಚಿತ್ರಗಳಿಂದ ಪ್ರಭಾವವಾಗಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಭಾರತದ ಇತರೇ ಭಾಗಗಳಲ್ಲಿರುವ ಭಿತ್ತಿಚಿತ್ರಗಳಂತೆಯೇ ಹಂಪಿಯ ಭಿತ್ತಿಚಿತ್ರಗಳಲ್ಲಿಯೂ ರೇಖೆಯೇ ಪ್ರಧಾನಾಂಶ ಅಂತರಗಳನ್ನು ಆವರಿಸಿ ಕಲ್ಪನೆಗಳಿಗೆ ಖಚಿತ ರೂಪುಕೊಡುವುದು. ಈ ರೇಖಾಚಿತ್ರಗಳ ವಸ್ತು ಬಹುತೇಕ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಇತರ ಪುರಾಣಗಳಿಂದ ಅರಿಸಲಾದ ಕಥಾ ಸಂದರ್ಭಗಳ ಚಿತ್ರಗಳು. ಬಹುಶಃ ಎರಡನೇ ಆಯಾಮ ಉಳ್ಳವು ಘನಾಕೃತಿಯವು. ಪ್ರಾಯಶಃ ಇಲ್ಲಿ ಲೌಕಿಕ ಜೀವನ ಸಂದರ್ಭಗಳನ್ನು ನಿರೂಪಿಸುವಾಗ ವಿನಾ ರೂಪ ನಿರ್ಮಾಣದಲ್ಲಿ ಅವುಗಳ ಅಲಂಕಾರದಲ್ಲಿ ಭಾವಭಂಗಿಗಳಲ್ಲಿ ಆಗಮ, ಶಿಲ್ಪಶಾಸ್ತ್ರ ಮುಂತಾದ ಗ್ರಂಥಗಳಲ್ಲಿ ಹೇಳಲಾದ ಲಕ್ಷಣಗಳನ್ನೇ ಅನುಸರಿಸುತ್ತವೆ.

. ಇತ್ತೀಚಿನ ಚಿತ್ರಕಲೆಯ ಬೆಳವಣಿಗೆ

ಕರ್ನಾಟಕದಲ್ಲಿ ನವ್ಯ, ನವ್ಯೋತ್ತರ ಕಾಲಾವಧಿಯ ಸಾಹಿತ್ಯದ ಜೊತೆಯಲ್ಲಿಯೇ, ಸಮಕಾಲೀನ ಚಿತ್ರಕಲೆಯು ಬೆಳವಣಿಗೆ ಹೊಂದಿತು. ಚಿತ್ರಕಲೆಯನ್ನು ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ನೆಲೆಯಲ್ಲಿ ಇಟ್ಟು ನೋಡಬಲ್ಲ ಸಮರ್ಥ ಕಲಾವಿದರ ಪರಂಪರೆಯು ಸೃಷ್ಟಿಯಾಯಿತು. ಅಂತಹವರಲ್ಲಿ ರವಿವರ್ಮ, ಕೆ. ಕೆ. ಹೆಬ್ಬಾರ, ಮುಂತಾದವರಿಂದ ಆರಂಭವಾಗಿ ಬಾದಾಮಿಯ ಐತಿಹಾಸಿಕ ಹಿನ್ನೆಲೆಯಲ್ಲಿ ಜನಿಸಿದ ಆರ್‌. ಎಂ. ಹಡಪದ, ಇವರ ಜೊತೆಯಲ್ಲೇ ಬೆಳೆದು ನಿಂತ ಜೆ. ಎಸ್‌. ಖಂಡೇರಾವ್‌, ಅಂಬಾನಿ ಮತ್ತು ಕೆ. ಜಿ. ಸುಬ್ರಮಣ್ಯರಂತಹ ಸಾಂಪ್ರದಾಯಿಕ ಕಲಾವಿದರು ಚಿತ್ರಕಲೆಯಲ್ಲಿ ತಮ್ಮ ಗುರುತನ್ನು ಮೂಡಿಸಿದರು. ಈ ತಲೆಮಾರಿನಲ್ಲಿ ನೂರಾರು ಕಲಾವಿದರು, ದೃಶ್ಯಕಲೆಯನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಸಾಂಸ್ಕೃತಿಕ ಚಟುವಟಿಕೆಯ ಸುತ್ತಲೂ ಬಳ್ಳಾರಿ ಜಿಲ್ಲೆಯ ಕಲಾವಿದರು, ೨೦ನೇ ಶತಮಾನದ ಅಂತ್ಯ ಭಾಗದಲ್ಲಾದರೂ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆಂಬುದನ್ನು ಕಲಾ ಇತಿಹಾಸದ ದೃಷ್ಟಿಯಿಂದ ಗಮನಿಸುವ ಪ್ರಯತ್ನ ನಡೆದಿದೆ. ಚಿತ್ರಕಲೆಯ ರಚನಾಕಾರ್ಯ, ಕಲಾಕೃತಿಗಳ ಸಂಗ್ರಹ, ಚಿತ್ರಕಲೆಯನ್ನು ಅಧ್ಯಯನ ವಿಷಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುವ ಅವರನ್ನು ಶಿಸ್ತುಬದ್ಧ ಕಲಾವಿದರನ್ನಾಗಿ ತಯಾರು ಮಾಡುವ ಚಿತ್ರಕಲಾ ತರಬೇತಿ ಸಂಸ್ಥೆಗಳು ಆರಂಭವಾದವು. ಇದರ ಜೊತೆಗೆ ನಮ್ಮ ಸಂಸ್ಕೃತಿಯ ಅಂಗವಾದ ಚಿತ್ರಕಲೆ ಕುರಿತ ಗ್ರಂಥಗಳು ರಚನೆಯಾಗಿವೆ. ಈ ಎಲ್ಲ ಕ್ಷೇತ್ರಗಳಲ್ಲಿಯೂ ಬಳ್ಳಾರಿ ಜಿಲ್ಲೆಯ ಸಾಧನೆಯನ್ನು ಕುರಿತು ವಿಚೇಚಿಸಲಾಗಿದೆ.

I. ಕಲಾವಿದರು

. ವ್ಹಿ. ಟಿ. ಕಾಳೆ

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನೆಲೆಸಿರುವ ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಹನಗುಂದದಲ್ಲಿ ೧೯೩೪ರಲ್ಲಿ ಜನಿಸಿದರು. ಇವರು ಉನ್ನತ ಕಲಾ ಶಿಕ್ಷಣವನ್ನು ಪಡೆದು, ೧೯೫೨ರಿಂದ ೧೯೬೪ರವರೆಗೆ ಗದಗಿನ ವಿಜಯ ಕಲಾಮಂದಿರದಲಿ ಚಿತ್ರಕಲಾ ಶಿಕ್ಷಕರಾಗಿ, ೧೯೬೪ರಿಂದ ೧೯೯೭ರವರೆಗೆ ಸಂಡೂರಿನ ವಸತಿ ಸಂಯುಕ್ತ ಕಾಲೇಜಿನಲ್ಲಿ ಕಲಾ ಶಿಕ್ಷಕರಾಗಿ ದುಡಿದರು. ಇದೇ ಅವಧಿಯಲ್ಲಿ ಅವರು ಸಲ್ಲಿಸಿದ ವಿವಿಧ ಸೇವೆಗಳೆಂದರೆ ಕರ್ನಾಟಕ ಸರಕಾರದ ಪಠ್ಯ ಪುಸ್ತಕಗಳ ಕಲಾವಿದ ಸದಸ್ಯರಾಗಿ, ಕರ್ನಾಟಕ ಸರಕಾರದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಕೇಂದ್ರವು ಕೈಗೊಂಡ ಪ್ರಾಥಮಿಕ ಶಿಕ್ಷಣ ಪಠ್ಯಕ್ರಮ ಮತ್ತು ನವೀಕರಣ ಕಾರ್ಯದಲ್ಲಿ ಕಲಾವಿದ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಸರಕಾರವು ನೇಮಿಸಿದ ಸಲಹಾ ಸಮಿತಿಯ ಸದಸ್ಯರಾಗಿ ೧೯೬೦ರಿಂದ ೧೯೬೮ರವರೆಗೆ ಹಾಗೂ ಕರ್ನಾಟಕ ಲಲಿತಕಲಾ ಆಕಾಡೆಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಾಟಕ ರಚನಕಾರರಾಗಿ ನಿರ್ದೇಶಕರಾಗಿ ಅಲ್ಲದೆ ನಾಟಕ ಮತ್ತು ಚಲನಚಿತ್ರಗಳಲ್ಲಿ ನಟರಾಗಿಯೂ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದ್ದಾರೆ.

ಚಿತ್ರ ಕಲಾವಿದರಾಗಿ ಇವರು ರಚಿಸಿದ ವರ್ಣಚಿತ್ರ ಕಲಾಕೃತಿಗಳು ಹಲವು ಗ್ಯಾಲರಿಗಳಲ್ಲಿ ಸಂಗ್ರಹವಾಗಿವೆ. ಗದಗಿನ ನಗರಸಭೆ, ಪಂಡಿತ್‌ಪಂಚಾಕ್ಷರಿ ಗವಾಯಿಗಳ ಅವರ ವೀರಶೈವ ಪುಣ್ಯಾಶ್ರಮ, ಕರ್ನಾಟಕ ಲಲಿತಕಲಾ ಅಕಾಡೆಮಿ ಗದುಗಿನ ಕಲಾಮಂದಿರ ಇನ್ನು ಮುಂತಾದ ಕಡೆಗಳಲ್ಲದೆ ಮಂಬೈ ಕಲಾ ಗ್ಯಾಲರಿಗಳಲ್ಲಿ, ವಿದೇಶಗಳಾದ ಅಮೇರಿಕಾ, ಲಂಡನ್‌ಮತ್ತು ಪಾಕಿಸ್ತಾನದ ಕಲಾ ಗ್ಯಾಲರಿಗಳಲ್ಲಿಯೂ ಸಂಗ್ರಹವಾಗಿವೆ. ಕಲಾವಿದರೇ ಹೇಳುವಂತೆ ಅವರ ಕಲಾಕೃತಿಗಳ ಸಂಖ್ಯೆ ೨೦ ಸಾವಿರಕ್ಕಿಂತ ಹೆಚ್ಚಾಗಿವೆ. ಇವುಗಳಲ್ಲಿ ಭಾವ ಚಿತ್ರಗಳು ಮತ್ತು ನಿಸರ್ಗ ಚಿತ್ರಗಳು ಸೇರಿವೆ. ೧೫ ಸಾವಿರಕ್ಕಿಂತಲೂ ಹೆಚ್ಚು ಚಿತ್ರಗಳು ಪ್ರಕಟಗೊಂಡಿವೆ. ಚಿತ್ರಕಲಾ ಕ್ಷೇತ್ರಕ್ಕೆ ಸುಮಾರು ೫೦ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಅವರು ಆರಂಭದಲ್ಲಿ ರಜಪೂತ, ಅಜಂತಾ, ಪರ್ಶಿಯನ್‌ಮೊದಲಾದ ಸಾಂಪ್ರದಾಯಿಕ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ನಂತರ ಆಧುನಿಕ ಮಾರ್ಪಾಡಿನಂತೆ ಅಜಂತಾ ಮತ್ತು ರಜಪೂತ ಶೈಲಿಯ ಸಮ್ಮಿಶ್ರಣದ ತಮ್ಮದೇ ಆದ ಹೊಸ ಶೈಲಿಯನ್ನು ರೂಢಿಸಿ ಕೊಂಡು, ಆ ಮೂಲಕ ಕಲಾ ಪರಂಪರೆಯಲ್ಲಿ ವಿಶಿಷ್ಟ ಸ್ಥಾನಗಳಿಸಿದರು. ಅವರ ವರ್ಣಚಿತ್ರಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಅದರಲ್ಲಿ ಗುತ್ತಿಕೋಟೆ ವರ್ಣಚಿತ್ರವು ಅವರ ಅದ್ಭುತ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ. ಅವರ ಇತರ ಕಲಾಕೃತಿಗಳಲ್ಲಿ ಹೆಣ್ಣಿನ ದಿನಚರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ ಉದಾ, ದಿವಾ, ಸಂಧ್ಯಾ ಹಾಗೂ ನಿಶಾ ನಾಲ್ಕು ಪ್ರಕಾರಗಳನ್ನು ಪ್ರತಿನಿಧಿಸುವ ತೈಲ ಚಿತ್ರಗಳು ನೋಡಿದವರಿಗೆ ವಿಶಿಷ್ಟ ಅರ್ಥವನ್ನು ಕಟ್ಟಿಕೊಡುತ್ತವೆ. ಕಣ್ಣಿಂದ ಕಂಡದ್ದನ್ನು ಕ್ಯಾನ್ವಾಸ್‌ಮೇಲೆ ಮೂಡಿಸುವ ಕಲೆಯಲ್ಲಿ ಬಾರಿ ಕೈಚಳಕವುಳ್ಳವರಾಗಿದ್ದಾರೆ. ಅವರ ಕಲೆಯಲ್ಲಿ ವಾಸ್ತವ ಅಂಶಗಳ ಸೂಕ್ಷ್ಮ ಗ್ರಹಕೆಯನ್ನು ಗುರುತಿಸಬಹುದಾಗಿದೆ.

ಒಬ್ಬ ಕಲಾವಿದರಾಗಿ ಹಲವು ಕಲಾ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಚಿತ್ರಕಲಾ ಪರಿಚಯ, ಚಿತ್ರಕಲಾ ದರ್ಪಣ, ಜೊತೆಗೆ ಎಸ್‌.ಪಿ. ಅಕಿ ಮತ್ತು ಟಿ. ಪಿ. ಅಕ್ಕಿ, ಮೊದಲಾದ ಕಲಾವಿದರ ಜೀವನಚರಿತ್ರೆ ಕುರಿತ ಪುಸ್ತಕಗಳಾಗಿವೆ. ಲಲಿತಕಲಾ ಆಕಾಡೆಮಿಗೆ ಕಲಾಕೋಶವನ್ನು ಸಂಪಾದಿಸಿಕೊಟ್ಟಿದ್ದಾರೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಹಲವು ಸನ್ಮಾನ ಪ್ರಶಸ್ತಿಗಳು ದೊತೆತಿವೆ.

. ಕೆ. ವ್ಹಿ. ಕಾಳೆ

ಬಳ್ಳಾರಿ ಜಿಲ್ಲೆಯ ಕಾಶ್ಮೀರವೆಂದು ಖ್ಯತಿ ಪಡೆದ ಸಂಡೂರಿನಲ್ಲಿ ಜನಿಸಿದ ಕೆ. ವ್ಹಿ. ಕಾಳೆ ಗದುಗಿನ ವಿಜಯ ಕಲಾ ಮಂದಿರದ ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದ ಆಧುನಿಕ ಶೈಲಿಯಲ್ಲಿ ಕಲಾ ಕೃತಿಗಳನ್ನು ರಚಿಸಿದ್ದಾರೆ. ಆರಂಭದಲ್ಲಿ ರಜಪೂತ, ಕಾಂಗ್ರ, ಪಹಾಡಿ, ಬೋಂಧಿ, ಪರ್ಷಿಯನ್‌, ಕನ್ನಾಳ ತೊಗಲಗೊಂಬೆ, ಸುರಪುರ ಹಾಗೂ ನಪ್ಪಾಣಿವಾಡ ಶೈಲಿಗಳ ಸಮ್ಮಿಶ್ರಣ ಮಾಡಿ ತಮ್ಮದೆ ಆದ ಹೊಸ ಶೈಲಿಯನ್ನು ರೂಢಿಸಿಕೊಂಡು ವರ್ಣಚಿತ್ರಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕಲಾಕೃತಿಗಳಲ್ಲಿ ದುರ್ಗಿ-ಮುರ್ಗಿ, ಬುಡ-ಬುಡಕೆ, ಕರಡಿ ಕುಣಿತ, ಕಾಲಜ್ಞಾನಿ, ಮುಂತಾದ ಜಾನಪದ ಶೈಲಿಯ ಚಿತ್ರಗಳಲ್ಲಿ ಜಾನಪದರ ಬದುಕು ಸಂಪ್ರದಾಯ ಆಚಾರ ವಿಚಾರಗಳನ್ನು ಪ್ರತಿಬಿಂಬಿಸುತ್ತಿವೆ. ಐತಿಹಾಸಿಕ ಸ್ಮಾರಕಗಳಾದ ಕೋಟೆಗಳನ್ನು ಜಲ ವರ್ಣದ ವಿಚಾರಗಳನ್ನು ಪ್ರತಿಬಿಂಬಿಸುತ್ತಿವೆ. ಸಂಡೂರಿನ ಕರಕುಶಲ ಕೇಂದ್ರದ ಸುತ್ತ ಲಂಬಾಣಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಭಿತ್ತಿಚಿತ್ರಗಳು ಅತ್ಯಂತ ಸುಂದರವಾಗಿವೆ. ಈ ಕಲಾವಿದ ತನ್ನ ಪ್ರಜ್ಞೆಯ ಅಭಿವ್ಯಕ್ತಿಗಾಗಿ ಕಿನ್ನಾಳ ಮತ್ತು ಕಾವಿಯ ಕಲಾಶೈಲಿಯನ್ನು ನವೀಕರಿಸಿ ತನ್ನ ಪ್ರತಿಭೆಯನ್ನು ರೂಢಿಸಿಕೊಂಡಿದ್ದಾನೆ. ಕಾವಿಯ ದಟ್ಟ ವರ್ಣಶೈಲಿ ಮತ್ತು ಕಿನ್ನಾಳ ಕಲೆಯ ಬೀಸುರೇಖೆಗಳನ್ನು ಈ ಕಲಾವಿದನ ಕಲಾಕೃತಿಗಳಲ್ಲಿ ನೋಡಬಹುದು. ಇವರ ಇತರ ಕಲಾಕೃತಿಗಳಾದ ಕೋಲೆ ಬಸವ, ಕಾರುಹುಣ್ಣುಮೆಯ ಎತ್ತುಗಳು, ಮಥುರೆಯ ಕೃಷ್ಣನೊಂದಿಗೆ ಇರುವ ಪ್ರಬುದ್ಧ ಆಕಳುಗಳು, ಕಾಳು ಬೀಸುವ ಗ್ರಾಮೀಣ ಮಹಿಳೆಯರು ಮತ್ತು ಜಾತ್ರೆಯ ಸಂದರ್ಭದಲ್ಲಿ ಊರಿಗೆ ಮರಳುತ್ತಿರುವ ಹಳ್ಳಿಗರ ಬದುಕನ್ನು ಚಿತ್ರಿಸುವ ತೈಲಚಿತ್ರಗಳು ಅತ್ಯಂತ ಅಪರೂಪವಾಗಿವೆ. ಗಣೇಶ, ಗರುಡು, ಕೃಷ್ಣ-ರಾಧೆಯರ ಒಡನಾಟ, ರತಿ-ಮನ್ಮಥರ, ಲಕ್ಷ್ಮೀನಾರಾಯಣರ ಇನ್ನು ಮುಂತಾದ ದೇವಾನುದೇವತೆಗಳ ಚಿತ್ರಗಳನ್ನು ಗುರುತಿಸಬಹುದು.

ಇವನು ಬೆದ ಕರ್ನಾಟಕ ಚಿತ್ರಕಲೆಯಲ್ಲಿ ಬಣ್ಣದ ಬಳಕೆಎಂಬ ಪುಸ್ತಕವನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ೨೦೦೧ರಲ್ಲಿ ಪ್ರಕಟಿಸಿದೆ. ಇವರ ಕಲಾಕೃತಿಗಳಲ್ಲಿ ದೇಶೀಯ ಬದುಕನ್ನು ತಮ್ಮ ವರ್ಣಚಿತ್ರಗಳ ಮೂಲಕ ಸೆರೆ ಹಿಡಿದಿರುವ ಕಾಳೆಯವರು ಯಾವುದೇ ಗೊಂದಲಕ್ಕೆ ಒಳಗಾಗಿಲ್ಲ. ಜಾನಪದ ಜಗತ್ತಿನ ಜನಪ್ರಿಯ ಮಾಧ್ಯಮಗಳಾದ ತೊಗಲು ಗೊಂಬೆ ಚಿತ್ರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಹಲವು ಕಲಾಕೃತಿಗಳಿಗೆ ಪ್ರಶಸ್ತಿಗಳು ದೊರೆತಿವೆ.

. ಕೆ. ಕೆ. ಮಕಾಳಿ

ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೊರ್ತಿಕೊಲ್ಲಾರದಲ್ಲಿ ಜನಸಿದ, ಇವರು ಧಾರವಾಡದ ಸರಕಾರಿ ಚಿತ್ರಕಲಾ ಶಾಲೆಯಲ್ಲಿ ಡಿಪ್ಲೊಮಾ ಪಡೆದು, ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಪುಸ್ತಕಗಳ ಮುಖಪುಟಗಳನ್ನು ಚಿತ್ರಿಸಿ ಕನ್ನಡ ನಾಡಿನ ಗಮನ ಸೆಳೆದಿದ್ದಾರೆ. ಇವರು ಪುಸ್ತಕದ ಮುಖಪುಟದ ಚಿತ್ರಗಳಿಗೆ ಜೀವ ತುಂಬ ಬಲ್ಲವರಾಗಿದ್ದಾರೆ. ಅವುಗಳಲ್ಲಿ ರೇಖೆಗಳು ಎದ್ದು ಕಾಣುತ್ತವೆ. ಅಲ್ಲದೆ ಜಾನಪದ ಶೈಲಿಯ ಚಿತ್ರಗಳನ್ನು ರಚಿಸಿದ್ದಾರೆ.

. ಡಾ. ಎಸ್‌. ಸಿ. ಪಾಟೀಲ

ಗುಲಬರ್ಗಾ ಜಿಲ್ಲೆಯ ಮಾಣಶಿವಣಗಿಯಲ್ಲಿ ೧೯೫೫ರಲ್ಲಿ ಜನಿಸಿದ, ಇವರು ಕನ್ನಡ ವಿಶ್ವವಿದ್ಯಾಲಯದ ಬಾದಾಮಿಯ ಶಿಲ್ಪ ಮತ್ತು ವರ್ಣ ಚಿತ್ರಕಲಾ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದಾರೆ. ಇವರು ಉನ್ನತ ಕಲಾ ಶಿಕ್ಷಣ ಪಡೆಯುವುದರೊಂದಿಗೆ ಸಾಹಿತ್ಯ, ಚಿತ್ರಕಲೆ, ಶಿಕ್ಷಣ, ಜಾನಪದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು, ಹತ್ತಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ. ಇವರ “ಕರ್ನಾಟಕದ ಜಾನಪದ ಚಿತ್ರಕಲೆ” ಎಂಬ ಪಿಎಚ್‌. ಡಿ. ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡಿದೆ. ಬಾರೋಕ್‌ಕಲೆಯನ್ನು ಕುರಿತ ಪುಸ್ತಕಕ್ಕೆ ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ ಶ್ರೇಷ್ಠ ಪುಸ್ತಕ ಪ್ರಶಸ್ತಿ ನೀಡಿದೆ. ಒಬ್ಬ ಕಲಾವಿದರಾಗಿ ಹಲವು ಕಲಾಕೃತಿಗಳನ್ನು ರಚಿಸುವುದರೊಂದಿಗೆ ಇವರ ಮಾರ್ಗದರ್ಶನದಲ್ಲಿ ಎಂಟು ಜನ ಪಿಎಚ್‌. ಡಿ. ಪದವಿಯನ್ನು ಮತ್ತು ಆರು ಜನ ಎಂ. ಫಿಲ್‌. ಪದವಿಯನ್ನು ಪಡೆದಿದ್ದಾರೆ. ಇನ್ನು ಹಲವಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿಯು ಸೇರಿದಂತೆ ಹಲವು ಪ್ರಶ್ತಿಗಳು ದೊರೆತಿವೆ. ಚಿತ್ರಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿರುವ ಇವರು ಬಹುಮುಖ ವ್ಯಕ್ತಿತ್ವ ಹೊಂದಿದ್ದಾರೆ.

. ಇತರೆ ಕಲಾವಿದರು

ಬಳ್ಳಾರಿ ಜಿಲ್ಲೆಯ ಇತರ ಕಲಾವಿದರಲ್ಲಿ ತೇರಬೀದಿಯ ಹಳೆಯ ರಾಘವೇಂದ್ರ ಸ್ವಾಮಿ ಮಠದ ಹತ್ತಿರವಿರುವ ಶ್ರೀ ಶ್ರೀನಿವಾಸಾಚಾರ್ಯ ಇವರು ಭಾರತೀಯ ಧಾರ್ಮಿಕ ಪರಂಪರೆಯ ಭಾವಚಿತ್ರ ಮತ್ತು ಸಂಯೋಜನಾ ಚಿತ್ರಗಳನ್ನು ರಚಿಸಿದ್ದಾರೆ. ಇವರ ಪ್ರಮುಖ ವರ್ಣಚಿತ್ರಗಳೆಂದರೆ ಮಧ್ವಾಚಾರ್ಯರು, ಉಡುಪಿಯ ಶ್ರೀಕೃಷ್ಣ, ವೇದವ್ಯಾಸರು, ತಿರುಪತಿಯ ವೆಂಕಟರಮಣ, ಮುಂತಾದವು ಪ್ರಸಿದ್ಧಿ ಪಡೆದಿವೆ. ಮತ್ತೊಬ್ಬ ಕಲಾವಿದರಾದ ಬಳ್ಳಾರಿಯ ಕೃಷ್ಣಾ ಎಂದೇ ಪ್ರಸಿದ್ಧರಾಗಿರುವ ಇವರು ಮೂಕರಾಗಿದ್ದರೂ ಶ್ರೇಷ್ಠ ಕಲಾವಿದರಲ್ಲಿರಬೇಕಾದ ಎಲ್ಲ ಗುಣಗಳು ಇವರಲ್ಲಿವೆ. ಇವರ ವರ್ಣಚಿತ್ರಗಳು ಬಹುತೇಕ ಧಾರ್ಮಿಕ ಪ್ರಭಾವದಿಂದ ಕೂಡಿದ ಕಲಾಕೃತಿಗಳಾಗಿವೆ. ಇವರ ಪ್ರಮುಖ ಕಲಾಕೃತಿಗಳೆಂದರೆ ರಾಮ-ಸೀತೆ, ಹನುಮಂತ, ಯಶೋಧೆ-ಕೃಷ್ಣ, ಶ್ರೀ ವೇದವ್ಯಾಸರು, ರಾಘವೇಂದ್ರಸ್ವಾಮಿಗಳ ಭಾವಚಿತ್ರ ಮುಂತಾದವುಗಳು ಇಂದಿಗೂ ಬಳ್ಳಾರಿ ರಾಘವೇಂದ್ರಸ್ವಾಮಿಯ ಮಠದ ಒಳಾಂಗಣದಲ್ಲಿವೆ. ಬಿ. ರಾಮಭಟ್ಟರು ಶಿರಾಗುಪ್ಪಾ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿ ದೇಶನೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರ ತೈಲಚಿತ್ರಗಳಲ್ಲಿ ಓಂಕಾರ ಗಣಪತಿ, ಹಂಪಿಯ ವಿರುಪಾಕ್ಷ ದೇವಲಾಯ, ಹಂಪಿಯ ರಥ, ಪುರಂದರದಾಸರ ಭಾವಚಿತ್ರಗಳು ಪ್ರಸಿದ್ಧಿ ಪಡೆದಿವೆ. ಇವರಲ್ಲದೆ ಬಳ್ಳಾರಿ ಜಿಲ್ಲೆಯ ವಿವಿಧ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳಲ್ಲಿರುವ ಚಿತ್ರಕಲಾ ಶಿಕ್ಷಕರು ಇನ್ನಿತರ ಕಲಾವಿದರು ಬಳ್ಳಾರಿ ಜಿಲ್ಲೆಯ ಚಿತ್ರಕಲೆಯ ಬೆಳವಣಿಗೆಯ ದೃಷ್ಟಿಯಿಂದ ಗುರುತಿಸಬಹುದಾಗಿದೆ.

II. ಸಂಸ್ಥೆಗಳು

. ಕಲಾಕೃತಿಗಳ ಸಂಗ್ರಹ

ಬಳ್ಳಾರಿ ಜಿಲ್ಲೆಯು ಚಿತ್ರಕಲೆಗೆ ಪ್ರೋತ್ಸಾಹ ನೀಡಿ ಅಪಾರ ಸಂಖ್ಯೆಯ ಕಲಾಕೃತಿಗಳನ್ನು ರಕ್ಷಿಸುವ ಕೆಲಸವೂ ನಡೆದಿದೆ. ಇದರಲ್ಲಿ ಕನ್ನಡ ವಿಶ್ವವಿದ್ಯಾಯಲಯದ ಪಾತ್ರ ಬಹುಮುಖ್ಯವಾದುದು. ಕನ್ನಡ ವಿಶ್ವವಿದ್ಯಾಲಯದಲ್ಲಿ ನೂರಾರು ಕಲಾಕೃತಿಗಳು ಸುರಕ್ಷಿತವಾಗಿವೆ. ಗ್ರಂಥಾಲಯದ ಅಕ್ಷರ ಕಟ್ಟಡದಲ್ಲಿ ವಸ್ತುಸಂಗ್ರಹಾಲಯವು ಸ್ಥಾಪಿಸಲ್ಪಟ್ಟಿದ್ದು, ಅದರಲ್ಲಿ ಕಲಾಕೃತಿಗಳಿಗಾಗಿಯೇ ಪ್ರತ್ಯೇಕವಾದ ಆಧುನಿಕ ಕಲಾ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಸುಮಾರು ೫೦ಕ್ಕೂ ಹೆಚ್ಚಿನ ವರ್ಣಚಿತ್ರಗಳು, ತೈಲಚಿತ್ರಗಳು ಗೋಡೆಯ ಮೇಲೆ ಪ್ರದರ್ಶಿಸಲಾಗಿದೆ. ಇವುಗಳನ್ನು ಕರ್ನಾಟಕದ ಹೆಸರಾಂತ ಕಲಾವಿದರಾದ ಆರ್. ಎಮ್‌. ಹಡಪದ, ಜಿ. ಎಸ್‌. ಖಂಡೇರಾವ್‌, ಅಂದಾನಿ, ಸಿಂಧೂರ, ಮಣಿ ಮುಂತಾದ ಕಲಾವಿದರು ಚಿತ್ರಿಸಿದ್ದಾರೆ. ಈ ಕಲಾಕೃತಿಗಳು ಕನ್ನಡ ನಾಡಿನ ಬಹುಸಂಖ್ಯಾತ ಜನರ ಮನಸ್ಸಂತೋಷಗೊಳಿಸಿವೆ. ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿರುವ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀನಿವಾಸಾಚಾರ್ಯ ಮತ್ತು ಕೃಷ್ಣಾ ಎಂಬ ಕಲಾವಿದರು ರಚಿಸಿರುವ ೬೦ ತೈಲವರ್ಣ ಚಿತ್ರಗಳಿವೆ. ಇಲ್ಲಿರುವ ಎಲ್ಲಾ ವರ್ಣಚಿತ್ರಗಳು ಸಂಯೋಜಿತ ಇಲ್ಲವೇ ಭಾವಚಿತ್ರದಿಂದ ಕೂಡಿದ ವರ್ಣಚಿತ್ರಗಳಾಗಿವೆ. ಅದರಲ್ಲಿ ಪ್ರಮುಖವಾದ ವರ್ಣಚಿತ್ರಗಳೆಂದರೆ, ಮಧ್ವಾಚಾರರು, ಶ್ರೀ ವೇದವ್ಯಾಸರು, ವೆಂಕಟೇಶ್ವರ, ಸುಜಿತೇಂದ್ರ ತೀರ್ಥರು, ರಾಮ-ಸೀತೆ, ಹನುಮಂತ, ಶ್ರೀಕೃಷ್ಣ, ಮುಂತಾದ ಎಲ್ಲಾ ವರ್ಣಚಿತ್ರಗಳಿಗೂ ಸುಂದರವಾದ ಫ್ರೇಮ್‌ಹಾಕಿಸಿ ಹತ್ತು ಅಡಿ ಎತ್ತರದ ಗೋಡೆಯ ಮೇಲೆ ಮಠದ ಒಳಗಡೆ ಪ್ರದರ್ಶಿಸಲಾಗಿದೆ. ಮತ್ತೊಂದು ಬಹುಮುಖ್ಯವಾದ ಚಿತ್ರ ಬಳ್ಳಾರಿಯ ಬಸವಭವನದಲ್ಲಿ ಇರುವ ವಚನ ಬರೆಯುತ್ತಿರುವ ಬಸವಣ್ಣನವರ ತೈಲಚಿತ್ರ. ಎಮ್‌. ಎಮ್‌. ಚಟ್ಟಿ ಮತ್ತು ಹಿರೇಗೌಡರು ಚಿತ್ರಿಸಿರುವ ವರ್ಣಚಿತ್ರಗಳು ಬಳ್ಳಾರಿ ಜಿಲ್ಲೆಯ ಚೇಳಗುರ್ಕಿಯಲ್ಲಿ ಇವೆ. ಇವೆಲ್ಲವೂ ಎರ್ರಿತಾತನ ಜೀವನದ ಪೌರಾಣಿಕ ಘಟನೆಗಳನ್ನು ಕುರಿತ ತೈಲ ವರ್ಣಚಿತ್ರಗಳು ಇಲ್ಲಿನ ಗೋಡೆಗಳ ಮೇಲೆ ಇವೆ. ಅದರಲ್ಲಿ ಪ್ರಮುಖವಾದ ೮ ಚಿತ್ರಗಳಿವೆ. ಇವೆಲ್ಲಾ ಸಂಯೋಜಿತ ತೈಲಚಿತ್ರಗಳು ಎರ್ರಿತಾತ ಒಬ್ಬ ಕುರುಬನ ಕಂಬಳಿಗೆ ಜೀವಂತವಿರುವ ಹಾವನ್ನು ಕಾಕುತ್ತಾನೆ. ಅದು ಮುಂದೆ ಬಂಗಾರದ ಹಾವಾಗಿದ್ದು, ಪವಾಡ ಕುರಿತಂತೆ ಸತ್ತ ಕರುವನ್ನು ಬದುಕಿಸಿದ್ದು, ಒಬ್ಬ ಮಹಿಳೆಯನ್ನು ಎರ್ರಿತಾತ ತಾಯಿ ನನಗೆ ಮಜ್ಜಿಗೆ ಕೊಡಿ ಎಂದು ಕೇಳುವ ದೃಶ್ಯ, ಮನೆಯ ಒಡತಿ ನಿನಗೆಲ್ಲಿಂದ ಕೊಡಲಿ ಕರು ಸತ್ತು ಬಿದ್ದಿದೆ ಎನ್ನುವ ದೃಶ್ಯಗಳಿವೆ. ಹಾಗೆಯೇ ಎರ್ರಿತಾತ ಎಡಗಾಲಿಟ್ಟಾಗ ಸತ್ತ ಕರುವು ಬದುಕುತ್ತದೆ. ಎರ್ರಿತಾತ ಒಮ್ಮೆ ಶಿವಾಲಯಕ್ಕೆ ಹೋದಾಗ ಕಲ್ಲು ದೇವರಿಗೇಕೆ ನಮಸ್ಕರಿಸುವುದು, ನೀವೇ ಇರುವಾಗ ಜನರ ಎದುರಿನಲ್ಲೇ ಕಲ್ಲು ನಂದಿ ನಡೆದು ಬರುವ ದೃಶ್ಯ, ಒಮ್ಮೆ ಎರ್ರಿತಾತ ಪೂಜೆಗೆ ಕುಳಿತಾಗ ಯೋಗಸಿದ್ಧಿ ಸಮಾಧಿ ಸ್ಥಿತಿಯಲ್ಲಿರುವಾಗ ದರೋಡೆಕೋರರು ಅವರ ಮೇಲೆ ಕತ್ತಿಸಮೇತ ಕುಡಗೋಲಿನಲ್ಲಿ ಎರಗಿದಾಗ, ಅದು ಅವರಿಗೆ ತಿರುಗುತ್ತದೆ. ಇಂತಹ ಕೆಲವು ಎರ್ರಿತಾತರ ಪವಾಡಗಳನ್ನು ಕುರಿತ ದೃಶ್ಯಗಳನ್ನು ಚೇಳುಗುರ್ಕಿಯಲ್ಲಿ ನೋಡಬಹುದು. ಸಂಡೂರಿನ ಕರಶಲ ಕಲಾಕೆಂದ್ರದ ಭಿತ್ತಿಯ ಸುತ್ತಲೂ ಹಲವು ವರ್ಣಚಿತ್ರಗಳಿದ್ದು ಇವುಗಳನ್ನು ಸ್ಥಳೀಯ ಕಲಾವಿದರಾದ ಕೆ. ವಿ. ಕಾಳೆ ನಿರ್ಮಿಸಿದ್ದಾರೆ. ಇವುಗಳಲ್ಲದೇ ಸುರಕ್ಷಿತವಲ್ಲದ ಪ್ರದೇಶಗಳಲ್ಲಿಯೂ ಭಿತ್ತಿಚಿತ್ರಗಳನ್ನು ಅಲ್ಲಲ್ಲಿ ಕಾಣಬಹುದು. ಹೊಸಪೇಟೆ ತಾಲ್ಲೂಕಿನ ಹುಲಿಗೆಯ ಹುಲಿಗೆಮ್ಮ ದೇವಾಲಯದಲ್ಲಿಯೂ ಹಲವು ಪವಾಡಗಳನ್ನು ಕುರಿತ ವರ್ಣಚಿತ್ರಗಳಿವೆ. ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಗೈತಿಹಾಸ ಕಾಲಾವಸ್ಧಿಯಿಂದ ಹಿಡಿದು ಅಧುನಿಕ ಕಾಲಾವಧಿವರೆಗಿನ ಚಿತ್ರಕಲಾ ಕೃತಿಗಳನ್ನು ಕಾಣಬಹುದು.