ವಿಜಯವಿಠ್ಠಲ ದೇವಾಲಯದ ಆಗ್ನೇಯದಲ್ಲಿ ಇರುವ ಮೊಸಳೆಯ್ಯನ ಗುಡ್ಡದಲ್ಲಿ ದೊಡ್ಡ ಬಂಡೆಗಳ ಆಸರೆಗಳಲ್ಲಿ ಕೆಲವು ಬಿಡಿ ಚಿತ್ರಗಳಿವೆ. ಅಲ್ಲಿ ಗೂಳಿ, ಹುಲಿ, ಮನುಷ್ಯ, ಕಾಡುಕೋಣ, ಚಿಗರೆ ಮುಂತಾದ ಚಿತ್ರಗಳಿವೆ, ವಿಶೇಷವಾಗಿ ಕೋಡುಗಳನ್ನು ಸ್ಪಲ್ಪ ಸ್ಪಲ್ಪ V ಆಕಾರದಲ್ಲಿ ಚಿತ್ರಿಸಲಾಗಿದೆ. ಕತ್ತು ಮುಂಡ ಬಲಿಷ್ಠವಾಗಿವೆ. ಬಾಲವನ್ನು ಮೇಲಕ್ಕೆತ್ತಲಾಗಿದೆ. ಈ ಗೂಳಿ ಚಿತ್ರವು ಸಂಪೂರ್ಣ ರೇಖೆಗಳಿಂದ ಕಲಾತ್ಮಕವಾಗಿದೆ. ಹೇಮಕೂಟದ ದೇವಾಲಯಗಳ ಪಶ್ಚಿಮದ ಅವರಣದ ಹೊರಗೆ ಮತ್ತೊಂದು ಚಿತ್ರವಿದೆ. ಈ ಪ್ರದೇಶದಲ್ಲಿ ಎರಡು ಕಡೆ ಮೀನುಗಳ ಬಾಹ್ಯರೇಖಾ ಚಿತ್ರಗಳಿದ್ದು, ಮೊದಲ ಮೀನು ಉದ್ದವಾಗಿ ದೊಡ್ದದಾಗಿದೆ. ಬಾಲದ ತುದಿ ಆಕಾರದಲ್ಲಿದೆ. ಅದರ ಸಮೀಪದಲ್ಲಿ ಚಿಕ್ಕ ಮೀನಿನ ಚಿತ್ರವಿದೆ. ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ದೊಡ್ಡ ಎರಡು ಜೋಡು ಬಂಡೆಗಳಲ್ಲಿ ಆರು ಮನುಷ್ಯನ ಚಿತ್ರಗಳು ಸುಮಾರು ಹತ್ತು ಚಿತ್ರಗಳನ್ನು ಬಿಡಿಸಲಾಗಿದೆ. ಮನುಷ್ಯನ ಚಿತ್ರಗಳು ರೇಖಾಚಿತ್ರವಾಗಿವೆ. ಇದರಲ್ಲಿ ಎರಡು ಮನುಷ್ಯ ಚಿತ್ರಗಳನ್ನು ವಕ್ಷಸ್ಥಾನದಲ್ಲಿ ಗೆರೆ ಎಳೆಯುವ ಮೂಲಕ ಜೋಡಿಸಲಾಗಿದೆ. ಬಹುಶಃ ಆ ಕಲಾವಧಿಯಲ್ಲಿ ಸಂಭೋಗ ಕ್ರಿಯೆಯನ್ನು ತೋರಿಸಲು ಚಿತ್ರಿಸಿರಬೇಕು. ಮನುಷ್ಯ ಚಿತ್ರದಲ್ಲಿ ತೆಲೆ ಬಾಹ್ಯರೇಖಾ ರೂಪದಲ್ಲಿ ಕೈಯಲ್ಲಿ ಬೆರಳುಗಳನ್ನು ಬಿಡಿಸಲಾಗಿದೆ. ಜಿಂಕೆಗಳಿಗೆ ದೊಡ್ಡ ಕೋಡುಗಳನ್ನು ಬಿಡಿಸಲಾಗಿದೆ. ಇದೇ ಪ್ರದೇಶದ ಮತ್ತೊಂದು ಭಾಗದಲ್ಲಿ ನಾಲ್ಕು ಜಿಂಕೆಗಳ ಮೂರು ಮನುಷ್ಯರ ಮತ್ತು ಒಂದು ನಾಯಿಯ ಚಿತ್ರಗಳಿವೆ.

ಬಾಲಕೃಷ್ಣ ದೇವಾಲಯದ ಮುಂದಿನ ಕಲ್ಲಾಸರೆಯಲ್ಲಿ ಉದ್ದ ಕತ್ತಿನ ಕಡವೆಯ ಚಿತ್ರ ಮತ್ತು ಮನುಷ್ಯ ಚಿತ್ರಗಳಿವೆ. ಕಡವೆಯದು ಬಾಹ್ಯರೇಖಾ ಚಿತ್ರ. ಕೇವಲ ಕತ್ತು ಮತ್ತು ಮುಖ ಮಾತ್ರ ಇದೆ. ಕೆಳಗೆ ಪಾರ್ಶ್ವ ಬದಿಯಲ್ಲಿ ಮನುಷ್ಯ ಚಿತ್ರವಿದೆ. ಕಾಲುಗಳನ್ನು ಸ್ವಲ್ಪ ಬಾಗಿಸಿ ನಿಂತಿದ್ದು, ಕೈಗಳಲ್ಲಿ ಮಾಸಿ ಹೋಗಿದೆ. ಸೊಂಟದಿಂದ ಕೆಳಗೆ ಕಾಲುಗಳನ್ನು ಚುಕ್ಕೆ ಸಾಲುಗಳಿಂದ ಅಲಂಕರಿಸಲಾಗಿದೆ. ಮೇಲ್ಭಾಗದಲ್ಲಿ ಒಂಟಿ ಕಲ್ಲುಗುಂಡಿಯಲ್ಲಿ ಒಂದು ಕೆಂಪು ವರ್ಣದ ಕವಡೆಯ ಚಿತ್ರವಿದೆ. ಇದು ೦.೨೮ ಮೀಟರ್‌ನಿಂದ ೦.೩೩ ಮೀಟರ್‌ಉದ್ದಾವಾಗಿದೆ. ಚಿತ್ರ ಬಾಹ್ಯ ರೇಖೆಯಲ್ಲಿದ್ದು, ಚಿಕ್ಕೋಡು ದೊಡ್ದ ದೇಹವನ್ನು ಹೊಂದಿವೆ. ಮುಂದಿನ ಕಾಲುಗಳು ಮಾತ್ರ ಕಾಣುತ್ತವೆ. ಹಿಂದಿನ ಕಾಲುಗಳು ಸ್ಪಷ್ಟವಾಗಿ ಕಾಣುವುದಿಲ್ಲ.

ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ವಿಭಾಗದ ಮುಂದೆ ಕೆರೆಯ ಸಮೀಪದ ಪಶ್ಚಿಮ ಭಾಗದ ವಿಶಾಲವಾದ ಬಂಡೆಯ ಇಳಿಜಾರಿನ ಮೇಲೆ ಎಂಟು ರೇಖಾ ಚಿತ್ರಗಳನ್ನು ಕುಟ್ಟಿ ಬಿಡಿಸಲಾಗಿದೆ. ಆರು ಎತ್ತಿನ ಚಿತ್ರಗಳಿವೆ. ಎರಡು ಎತ್ತು ಅವುಗಳ ಮೇಲೆ ಕುಳಿತ ಮನುಷ್ಯನ ಚಿತ್ರಗಳನ್ನು ಕುಟ್ಟಿ ಬಿಡಿಸಲಾಗಿದೆ. ಕೆಳಗಿನ ಎತ್ತುಗಳ ರಚನೆ ತುಂಬಾ ಆಕರ್ಷಕವಾಗಿವೆ. ಉದ್ದನೆಯ ಒಂದೇ ಕೋಡು ಉದ್ದವಾದ ಬಾಲ ಕಣ್ಣುಗಳಿಂದ ಚಿತ್ರವನ್ನು ಪೂರ್ಣಗೊಳಿಸಲಾಗಿದೆ.

ಹೊಸಪೇಟೆ ಸಮೀಪದ ಅನಂತಶಯನ ಗುಡಿಯಿಂದ ಉತ್ತರಕ್ಕೆ ನಾಲ್ಕು ಕಿ.ಮೀ. ದೂರದಲ್ಲಿರುವಾಗ ನಾಗೇನಹಳ್ಳಿ ಗ್ರಾಮದಿಂದ, ಉತ್ತರಕ್ಕೆ ಒಂದು ಕಿ.ಮೀ. ದೂರದಲ್ಲಿ ಧರಮರ ಗುಡ್ಡದ ದೇವಾಲಯದ ಹಿಂದೆ ಒಂದು ಕಲ್ಲಾಸರೆಯಲ್ಲಿ ಕೆಲವು ಚಿತ್ರಗಳಿವೆ. ಕೆಳಭಾಗದಲ್ಲಿ ಎರಡು ಎತ್ತಿನ ಸಣ್ಣ ಚಿತ್ರಗಳು, ಗೂಳಿ, ಕಡ್ಡಿಯಾಕಾರದ ಮನುಷ್ಯನ, ಎತ್ತಿನ ಸವಾರನ ಚಿತ್ರಗಳು ಇದ್ದು, ಇವುಗಳೂ ಸಹ ಆಕರ್ಷಕ ರೂಪವನ್ನು ಪಡೆದಿವೆ.

ಗವಿವರ್ಣ ಚಿತ್ರಗಳನ್ನು ಆದಿ ಮಾನವನು ತಾನು ವಾಸಿಸುತ್ತಿದ್ದ ಗವಿಗಳ ಇಲ್ಲವೆ, ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದ ಕಲ್ಲಾಸರೆಗಳ ಮೇಲ್ಛಾವಣಿಗಳಲ್ಲಿ, ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಸಾಮಾನ್ಯವಾಗಿ ಮನುಷ್ಯರು ಗೂಳಿಯ, ಪ್ರಾಣಿಗಳ ರೇಖಾಚಿತ್ರಗಳು ಹೆಚ್ಚಾಗಿರುತ್ತದೆ. ಕೆಲವು ಕಡೆ ಸಮೂಹ ನೃತ್ಯ, ಪ್ರಾಣಿಗಳು ಸಾಲು, ಮನುಷ್ಯರು ಕೈ ಕೈ ಜೋಡಿಯಾಗಿ ಹಿಡಿದಿರುವ ದೃಶ್ಯಗಳು, ಬೇಟೆಯ ದೃಶ್ಯಗಳು ಕಾಣುತ್ತವೆ.

ಬಯಲು ಬಂಡೆಯ ಚಿತ್ರಗಳು ಗವಿವರ್ಣಚಿತ್ರಗಳಿಗಿಂತ ಭಿನ್ನವಾಗಿರುತ್ತವೆ. ದೊಡ್ಡ ದೊಡ್ಡ ಬಂಡೆಗಳಿರುವ ಬೆಟ್ಟಗಳ ಮಧ್ಯದಲ್ಲಿ ಬಯಲಿನಲ್ಲಿರುವ ಬಂಡೆಗಳಲ್ಲಿ ಚಿತ್ರಗಳು ಕಂಡು ಬರುತ್ತವೆ. ಇಂತಹ ಚಿತ್ರಗಳನ್ನು ಕಟ್ಟುವಿಕೆಯ ತಂತ್ರದಲ್ಲಿಯೇ ಪೂರ್ಣ ಛಾಯಾ ಚಿತ್ರಗಳನ್ನು ಬಿಡಿಸಲಾಗಿದೆ. ಕಟ್ಟುವಿಕೆ ರೂಪವಾದ ಚಿತ್ರಗಳಲ್ಲಿ ಗೂಳಿ ಚಿತ್ರಗಳು ಹೆಚ್ಚಿನ ಪ್ರಮಾಣದಲ್ಲಿಯೂ, ಕಾಡುಕೋಣ, ಕಡಿಮೆ ಪ್ರಮಾಣದಲ್ಲಿಯೂ, ಮನುಷ್ಯನ ಚಿತ್ರಗಳು ವಿರಳವಾಗಿ ಕಾಣುತ್ತವೆ. ಪ್ರಾಗೈತಿಹಾಸ ಕಾಲದ ಕೃತಿಯ ಒಂದು ಪ್ರಕಾರವಾದ ವರ್ಣ, ಕೊರೆದ ಮತ್ತು ಕುಟ್ಟಿದ ಚಿತ್ರಗಳು ನಿರ್ದಿಷ್ಟವಾದ ನೆಲೆಗಳಲ್ಲಿರುತ್ತವೆ. ಸಾಮಾನ್ಯವಾಗಿ ವರ್ಣಚಿತ್ರಗಳು ಗವಿ ಮತ್ತು ಕಲ್ಲಾಸರೆಯಲ್ಲಿ ಇರುವುದನ್ನು ಗಮನಿಸಬಹುದಾಗಿದೆ.

ಪ್ರಾಗೈತಿಹಾಸ ಕಾಲದ ಮಾನವ ಚಿತ್ರಿಸಿದ ಚಿತ್ರಗಳ ರಚನಾ ವಿಧಾನ ಮತ್ತು ಮಾಧ್ಯಮ ಯಾವುದೆಂಬುದನ್ನು ಗಮನಿಸಿವುದಾದರೆ ಗವಿವರ್ಣಚಿತ್ರಗಳ ಮತ್ತು ಬಂಡೆಚಿತ್ರಗಳ ರಚನೆಯಲ್ಲಿ ಅವರು ಬಳಸಿರಬಹುದಾದ ಸಾಮಗ್ರಿಗಳನ್ನು ಆಯಾಯ ಚಿತ್ರ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ಹೀಗೆ ವಿವರಿಸಬಹುದು. ವರ್ಣಚಿತ್ರಗಳನ್ನು ಗವಿ ಮತ್ತು ಕಲ್ಲಾಸರೆಗಳಲ್ಲಿ ಬಣ್ಣಗಳಿಂದ ಚಿತ್ರಿಸಲಾಗಿದೆ. ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಕಾಣಬರುವ ಕೆಲವು ಗವಿ ಚಿತ್ರಗಳಲ್ಲಿ ಕೆಂಪು, ಕಪ್ಪು, ಹಳದಿ, ಕಂದು ಮುಂತಾದ ಬಣ್ಣಗಳ ಉಪಯೋಗ ಪ್ರಾಗೈತಿಹಾಸ ಮಾನವನಿಗೆ ತಿಳಿದಿತ್ತು. ವಿವಿಧ ಕಾಲಘಟ್ಟಗಳಲ್ಲಿ ಬೇರೆ ಬೇರೆ ಬಣ್ಣದ ಬಳಕೆ ಮಾಡಿರುವುದು ತಿಳಿಯುತ್ತದೆ. ಸೂಕ್ಷ್ಮ ಶಿಲಾಯುಗದಲ್ಲಿ ಕಂದು, ಕಪ್ಪು ಬಣ್ಣಗಳು, ನವಶಿಲಾಯುಗ ಕಾಲಾವಧಿಯನ್ನು ಹಾಗೂ ಶಿಲಾ ತಾಮ್ರಯುಗದಲ್ಲಿ ಕೆಂಪು, ಬಿಳುಪು, ಕಂದು, ತಿಳಿ, ಹಳದಿ, ಬಿಳಿಯ ಬಣ್ಣವನ್ನು ಹೆಚ್ಚಾಗಿ ಬಳಸಿದ್ದಾರೆ. ಇತಿಹಾಸ ಆರಂಭದ ಕಾಲದಲ್ಲಿ ಹಸಿರು ಹಳದಿ ಬಣ್ಣಗಳು ಹೆಚ್ಚಾಗಿ ಬಳಕೆಯಾಗಿದ್ದು ಬಿಳಿಯ ಬಣ್ಣವನ್ನು ಹೆಚ್ಚಾಗಿ ಬಳಸಿದ್ದಾರೆ. ಮಧ್ಯಕಾಲದ ಬುಡಕಟ್ಟು ಜನರು, ಕೆಂಪು ಬಿಳುಪು ಬಳಸಿದರುವುದನ್ನು ಗುರುತಿಸಬಹುದಾಗಿದೆ. ಹಂಪಿ ಪರಿಸರದಲ್ಲಿರುವ ವರ್ಣಚಿತ್ರಗಳು ಕೆಮ್ಮಣ್ಣಿನ ಬಣ್ಣವನ್ನು ಜೊತೆಗೆ ದಟ್ಟ ಕಂದು, ನೇರಳೆ, ಕೆಂಪು ಸ್ವಲ್ಪ ಪ್ರಮಾಣದ ಬಿಳಿ ಬಣ್ಣವನ್ನು ಬಳಸಲಾಗಿದೆ.

ಪ್ರಾಗೈತಿಹಾಸ ಮಾನವ ಬಣ್ಣಗಳನ್ನು ನೈಸರ್ಗಿಕವಾಗಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿ ಬಣ್ಣ ತಯಾರಿಸುತ್ತಿದ್ದರು. ನೇರಳೆ ಬಣ್ಣ ತಯಾರಿಕೆಯಲ್ಲಿ ಮ್ಯಾಂಗನೀಸ್‌ಆಕ್ಸೈಡ್‌ಕಪ್ಪು ಬಣ್ಣ ತಯಾರಿಕೆಯಲ್ಲಿ ಮರದ ಸುಟ್ಟು ಇದ್ದಿಲು, ಇಲ್ಲವೇ ಪ್ರಾಣಿಗಳ ಎಲುಬನ್ನು ಉಪಯೋಗಿಸುತ್ತಿದ್ದು, ಕಂದು, ಕೆಂಪು, ಹಳದಿ ಬಣ್ಣಗಳ ತಯಾರಿಕೆಯಲ್ಲಿ ಹಂದಿಯ ರಕ್ತ ಮತ್ತು ಕಬ್ಬಿಣದ ಆಕ್ಸೈಡನ್ನು ಕೆಲವು ಸಸ್ಯಗಳ ರಸವನ್ನು ಕಲಸಿ ಬಣ್ಣವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು.

ದೊಡ್ಡ ದೊಡ್ಡ ಬಂಡೆಗಳ ಮೇಲೆ ಕೊರೆದ, ಕುಟ್ಟಿದ, ಚಿಕ್ಕ ಕುಳಿಯ ಗುರುತುಗಳು ಕಂಡುಬರುತ್ತವೆ. ಇಂತಹ ಚಿತ್ರಗಳನ್ನು ಕೊರೆಯಲು ಲೋಹದ ಹುಳಿ ಇಲ್ಲವೆ, ಗಟ್ಟಿಯಾದ ಸೂಕ್ಷ್ಮ ಶಿಲೆಯ ಚೂಪಾದ ಆಯುಧಗಳನ್ನು ಬಳಸಿರಬಹುದು. ಸಣ್ಣ ಸಣ್ಣ ಗುರುತುಗಳನ್ನು ಕುಳಿಗಳ ರೂಪದಲ್ಲಿ ಒಂದರ ಹತ್ತಿರ ಒಂದನ್ನು ಹಾಕಿ ಕೆಲವು ಚಿತ್ರಗಳನ್ನ ಮೂಡಿಸಲಾಗಿದೆ. ಇಂತಹ ಗುರುತುಗಳನ್ನು ಲೋಹದ ಆಯುಧಗಳಿಂದಲೂ ಮಾಡಿಬರಬಹುದು.

ಪ್ರಾಗೈತಿಹಾಸ ಕಾಲದ ಮಾನವ ಕಲಾಸೃಷ್ಟಿಯ ಆರಂಭದ ವ್ಯಕ್ತಿಯಾಗಿದ್ದಾನೆ. ಪ್ರಾಗೈತಿಹಾಸದ ಮಾನವ ತನ್ನ ಸಂತೋಷ, ದುಃಖ ಭಾವನೆಗಳನ್ನು ವ್ಯಕ್ತಪಡಿಸುವ ಸಲುವಾಗಿ ತಾನಿರುವ ಗುಹೆಗಳ ಶಿಲಾಶ್ರಯಗಳ ಗೋಡೆಗಳ ಭಿತ್ತಿಗಳಲ್ಲಿ, ಛಾವಣಿಗಳಲ್ಲಿ ತನ್ನ ಸುತ್ತಿನ ಪರಿಸರವನ್ನು ನೋಡಿದ ಹಾಗೆ ಗೀಚತೊಡಗಿದ. ಇದೇ ಕ್ರಮೇಣ ಚಿತ್ರ ರಚನೆಗೆ ಮೂಲ ಪ್ರೇರಣೆಯಾಯಿತು. ಆಹಾರಕ್ಕಾಗಿ ಭೇಟೆಯನ್ನು ಕಸುಬನ್ನಾಗಿಸಿಕೊಂಡಿದ್ದು ಪ್ರಾಗೈತಿಹಾಸ ಮಾನವನಿಗೆ ಅವನ ಅನುಭವ ಚಟುವಟಿಕೆಗಳೇ ಅವನ ಚಿತ್ರಗಳಿಗೆ ವಸ್ತುವಾದವು. ಪ್ರಪಂಚದ ಹಲವಾರು ಭಾಗಗಳಲ್ಲಿ ಪ್ರಾಗೈತಿಹಾಸ ಹಾಗೂ ಇತಿಹಾಸ ಕಾಲದ ವರ್ಣಚಿತ್ರಗಳು, ಗವಿ ಚಿತ್ರಗಳು, ಕಲ್ಲಾಸರೆಯ ಚಿತ್ರಗಳು ಅಸಂಖ್ಯಾತವಾಗಿ ಗುರುತಿಸಲಾಗಿದೆ. ಇತ್ತೀಚಿನ ಕಾಲಮಾನಗಳಲ್ಲಿ ಇವುಗಳ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವದಿಂದಾಗಿ ಇವುಗಳ ಶೋಧನೆ ಹೆಚ್ಚಾಗಿ ನಡೆಯಬೇಕಾಗಿದೆ.

. ಜಿಲ್ಲೆಯ ಪ್ರಮುಖ ಪ್ರಾಗೈತಿಹಾಸ ವರ್ಣಚಿತ್ರದ ನೆಲೆಗಳು

ತಾಲ್ಲೂಕುಗಳು ಸ್ಥಳಗಳು ಚಿತ್ರಗಳ ವಿಶೇಷ
. ಬಳ್ಳಾರಿ ೦೧. ಕುಪ್ಪಗಲ್  
ಬೃಹತ್‌ಶಿಲಾಯುಗ ಈ ಸಂಸ್ಕೃತಿಯ ಗೋರಿ ನೆಲೆಯಿದು. ವರ್ಣಚಿತ್ರಗಳು ದೊರೆತಿವೆ.
ಇತಹಾಸ ಆರಂಭಯುಗ ಈ ಹಂತದ ವರ್ಣಚಿತ್ರಗಳು ದೊರೆತಿವೆ.
೦೨. ಕುರುಗೋಡು  
ಬೃಹತ್‌ಶಿಲಾಯುಗ ಈ ಸಂಸ್ಕೃತಿಯ ನೆಲೆಯಿದು, ವರ್ಣಚಿತ್ರಗಳು ದೊರೆತಿವೆ.
೦೩. ತೆಕ್ಕಲಕೋಟೆ  
ಶಿಲಾ – ತಾಮ್ರ ಯುಗ ಈ ಸಂಸ್ಕೃತಿಯ ವರ್ಣಚಿತ್ರಗಳು ಗವಿಗಳಲ್ಲಿ ಕಂಡುಬಂದಿವೆ. ಹೋರಿಯ ಚಿತ್ರಗಳು ಪ್ರಮುಖವಾದವುಗಳಾಗಿವೆ.
೦೪. ಭೈರನಾಯಕನ ಹಳ್ಳಿ  
ಶಿಲಾ – ತಾಮ್ರ ಯುಗ ಈ ಸಂಸ್ಕೃತಿಯ ಗೀರು ಚಿತ್ರಗಳು ದೊರೆತಿವೆ.
ಬೃಹತ್‌ಶಿಲಾ ಯುಗ ಈ ಸಂಸ್ಕೃತಿಯ ನೆಲೆಯಿದು. ಗೀರು ಚಿತ್ರಗಳು ದೊರೆತಿವೆ.
೦೫. ರಾಜಾಪುರ  
ನೂತನ ಶಿಲಾ ಯುಗ ಈ ಸಂಸ್ಕೃತಿಯ ನೆಲೆಯಿದು. ಉಜ್ಜಿ ನಯಗೊಳಿಸಿದ ಕೊಡಲಿಯ ತುಂಡೊಂದು ದೊರೆತಿದೆ. ಬಂಡೆ ಚಿತ್ರಗಳು ದೊರೆತಿವೆ.
. ಹೂವಿನ ಹಡಗಲಿ ೦೬. ಕೋಟ್ನಿಕಲ್ ಈ ಸಂಸ್ಕೃತಿಯ ವಾಸ್ತವ್ಯದ ನೆಲೆಯಿದು. ಹಲವಾರು ರೇಖಾ ಚಿತ್ರಗಳು ಕಂಡು ಬಂದಿದ್ದು, ನಂತರದ ಕಾಲದ್ದೆಂದು ತಿಳಿಯಲಾಗಿದೆ
. ಹೂಸಪೇಟೆ ೦೭. ಗುಡಿಓಬಳಾಪುರ  
ಶಿಲಾ – ತಾಮ್ರ ಯುಗ ಬಂಡೆಯ ಮೇಲೆ ಕೆಂಪು ವರ್ಣಚಿತ್ರ ದೊರೆತಿದ್ದು ಮಾಸಿದಂತಾಗಿದೆ.
ಇತಿಹಾಸ ಆರಂಭ ಯುಗ ಈ ಹಂತ ನೆಲೆಯಿದು. ಕಪ್ಪು-ಕೆಂಪು ವರ್ಣದ ಮಡಕೆ ಭಾಗಗಳು ದೊರೆತಿವೆ.
೦೮. ದಾನಾಪುರ  
ಸೂಕ್ಷ್ಮ ಶಿಲಾಯುಗ ಈ ಸಂಸ್ಕೃತಿಯ ಉಪಕರಣಗಳು ದೊರೆತಿದ್ದು, ಚರ್ಟ ಶಿಲೆಯಲ್ಲಿ ರೂಪಿಸಲಾಗಿದೆ. ಬಂಡೆ ಕಲ್ಲು ವರ್ಣಚಿತ್ರ ದೊರೆತಿದ್ದು ಮಾಸಿದಂತಾಗಿದೆ.
೦೯. ಬೆಳಗಲ್ಲು  
ಶಿಲಾ – ತಾಮ್ರ ಯುಗ ಈ ಸಂಸ್ಕೃತಿಯ ನೆಲೆಯಿದು. ಕುಟ್ಟಿದ ಗೀರು ಚಿತ್ರಗಳು ದೊರೆತಿವೆ.
ಬೃಹತ್‌ಶಿಲಾ ಯುಗ ಈ ಸಂಸ್ಕೃತಿಯ ನೆಲೆಯಿದು. ಕುಟ್ಟಿದ ಗೀರು ಚಿತ್ರಗಳು ಕಂಡುಬಂದಿವೆ.
೧೦. ವೆಂಕಟಾಪುರ  
ನೂತನ ಶಿಲಾ ಯುಗ ಈ ಸಂಸ್ಕೃತಿಗೆ ಸೇರಿದ ಬೂದಿ ದಿಬ್ಬ ದೊರೆತಿವೆ.
ಶಿಲಾ – ತಾಮ್ರ ಯುಗ ಈ ಸಂಸ್ಕೃತಿಯ ನೆಲೆಯಿದು. ಕುಟ್ಟಿದ ಗೀರು ಚಿತ್ರಗಳು ಕಂಡುಬಂದಿವೆ.
೧೧. ಹಳಕುಂಡಿ  
ಶಿಲಾ – ತಾಮ್ರ ಯುಗ ಈ ಸಂಸ್ಕೃತಿಯ ಗೀರು ಚಿತ್ರಗಳು ದೊರೆತಿವೆ.
ಬೃಹತ್‌ಶಿಲಾ ಯುಗ ಈ ಸಂಸ್ಕೃತಿಯ ನೆಲೆಯಿದು. ಕುಟ್ಟಿದ ಗೀರು ಚಿತ್ರಗಳು ದೊರೆತಿವೆ.
೧೨. ಹಂಪಿ  
ಶಿಲಾ – ತಾಮ್ರ ಯುಗ ಈ ಸಂಸ್ಕೃತಿಯ ವರ್ಣ ಚಿತ್ರಗಳು ಗವಿಗಳಲ್ಲಿ ಕಂಡು ಬಂದಿವೆ ಮತ್ತು ಈ ಸಂಸ್ಕೃತಿಗೆ ಸೇರಿದ ವರ್ಣಚಿತ್ರಗಳು ದೊರೆತಿದ್ದು, ಮನುಷ್ಯರ ಮತ್ತು ಪ್ರಾಣಿಗಳ ಚಿತ್ರಗಳಾಗಿವೆ. ಬಂಡೆಯ ಮೇಲಿವೆ.
ಬೃಹತ್‌ಶಿಲಾ ಯುಗ ಈ ಸಂಸ್ಕೃತಿಯ ನೆಲೆಯಿದು. ಗುಹಾ ಚಿತ್ರಗಳು ದೊರೆತಿವೆ.
ಇತಿಹಾಸ ಆರಂಭ ಯುಗ ಈ ಹಂತದ ವರ್ಣಚಿತ್ರಗಳು ದೊರೆತಿವೆ.

. ಭಿತ್ತಿ ಚಿತ್ರ ಕಲೆ

ಭಾರತದಲ್ಲಿ ಚಿತ್ರಕಲೆಯ ಚರಿತ್ರೆಯ ಬೆಳವಣಿಗೆಯನ್ನು ಗುರುತಿಸಿದರೆ ಅವುಗಳಲ್ಲಿನ ವಿವಿಧ ಹಂತಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಪ್ರಾಚಿನ ಮಾನವನ ಗುಹಾಂತರ ಚಿತ್ರಗಳಿಂದ ಹಿಡಿದು ಅಜಂತ, ಭಾಘ್‌ನಲ್ಲಿಯ ಬೌದ್ಧ ಧರ್ಮದ ಚಿತ್ರಗಳು ಬಾದಾಮಿ, ಎಲ್ಲೋರಾದ ವೈದಿಕ ಸಂಪ್ರದಾಯದ ಭಿತ್ತಿಚಿತ್ರಗಳು, ತಂಜಾವೂರು, ಸಿಂತಾನ್‌ವಾಸಲ್‌ಮುಂತಾದ ಪ್ರದೇಶಗಳ ಭಿತ್ತಿ ಚಿತ್ರಗಳಲ್ಲಿ ಆಕೃತಿಗಳೆಲ್ಲವೂ ರೇಖಾ ಪ್ರಧಾನವಾಗದವುಗಳೇ, ಮಧ್ಯಕಾಲೀನ ಭಿತ್ತಿ ಚಿತ್ರಗಳಲ್ಲಿ ಮೊಗಲ್‌, ರಾಜಸ್ಥಾನಿ, ಪಹಾಡಿ, ಚಿಕಣಿ ಚಿತ್ರಗಳು ಮತ್ತು ಜೈನ ತಾಳೇಗರಿ, ಹಸ್ತಪ್ರತಿಗಳಲ್ಲಿನ ಚಿತ್ರಗಳು ಹಾಗೂ ವಿಜಯನಗರ ಕಾಲದ ಹಂಪಿ, ಲೇಪಾಕ್ಷಿ ಮತ್ತು ತಾಡಪತ್ರಿಗಳಲ್ಲಿನ ಭಿತ್ತಿ ಚಿತ್ರಗಳೆಲ್ಲವೂ ರೇಖಾ ಪ್ರಧಾನವಾದ ಚಿತ್ರಗಳೇ, ಚಿತ್ರಗಳಲ್ಲಿ ಭಿತ್ತಿ ಚಿತ್ರಗಳದ್ದು ಅತ್ಯಂತ ಮುಖ್ಯಪಾತ್ರ, ಯಾವುದೇ ಒಂದು ಆಕೃತಿಯ ರಚನೆ ಆಗಬೇಕಾದರೆ, ರೇಖೆಗಳು ಅದನ್ನು ನಿರ್ಧರಿಸಬೇಕು. ರೇಖೆಗಳು ವಿವಿಧ ರೂಪಗಳೊಡನೆ, ಭಾವ, ಭಂಗಿಗಳೊಡನೆ ಲಾಲಿತ್ಯದಿಂದ ಕೂಡಿವೆ. ರೇಖೆಗಳಲ್ಲಿನ ಸತ್ವ ಮತ್ತು ಜೀವಂತಿಕೆ ಆಕೃತಿಗಳನ್ನು ಆಕರ್ಷಕವಾಗಿಸುತ್ತವೆ. ಅಲ್ಲದೇ, ಅವುಗಳಲ್ಲಿ ಅಗಾಧವಾದ ಚಾಲನೆಯನ್ನು ತುಂಬುತ್ತವೆ. ಈ ಮೇಲೆ ಹೆಸರಿಸಿದ ಉದಾಹರಣೆಗಳಲ್ಲಿ ಆಕೃತಿಗಳ ಬಾಹ್ಯರೇಖೆಗಳಾಗಿ ಅವುಗಳಲ್ಲಿನ ವಿವಿಧ ಅಂಶಗಳನ್ನು ತೋರಿಸುವ ಸಾಧನೆಗಳಾಗಿ ರೇಖೆಗಳೇ ಆಕೃತಿಗಳ ನಿರ್ದಿಷ್ಟ ರೂಪರೇಖೆಯನ್ನು ನಿರ್ದೇಶಿಸುತ್ತವೆ.

ಭಿತ್ತಿ ಚಿತ್ರಕಲೆ ಎಂದರೆ, ಗೋಡೆಗಳ ಮೇಲೆ ಚಿತ್ರ ರಚನೆ ಮಾಡುವದೇ ಆಗಿದೆ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲು ಈ ಕಲೆ ರೂಢಿಯಲ್ಲಿದೆ. ಕ್ರಿ.ಶ. ೭ನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರು ಚಕ್ರವರ್ತಿ ಮಂಗಳೇಶನು ಬಾದಾಮಿ ೩ನೇ ಗುಹೆಯ ಮೇಲ್ಛಾವಣಿಗೆ ವರ್ಣ ಚಿತ್ರಗಳಿಂದ ಅಲಂಕರಿಸಿರುವುದು ಕಂಡುಬರುತ್ತದೆ. ಇದು ಕರ್ನಾಟಕದ ಭಿತ್ತಿ ಚಿತ್ರ ಸಂಪ್ರದಾಯದ ಪ್ರಾಚೀನ ನಿದರ್ಶನವೆನ್ನಬಹುದು. ಹೀಗೆ ಕರ್ನಾಟಕದ ಭಿತ್ತಿ ಚಿತ್ರಕಲೆ ದೀರ್ಘಕಾಲದಿಂದ ಶಾಸನಗಳಲ್ಲಿ ಹಾಗೂ ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿದೆ. ಚಿತ್ರಗಳಿಂದ ಕೂಡಿದ ಪ್ರತ್ಯೇಕ ಚಿತ್ರಕಲೆ ಹಾಗೂ ನಾಟ್ಯ ಕಲೆಗಳ ಪ್ರಸ್ತಾಪವು ಕಲ್ಯಾಣಿ ಚಾಲುಕ್ಯ ಚಕ್ರವರ್ತಿ ೩ನೇ ಸೋಮೇಶ್ವರನು ರಚಿಸಿದ ಮಾನಸೋಲ್ಲಾಸದಲ್ಲಿ ಬರುತ್ತದೆ. ಮುಂದೆ ಹೊಯ್ಸಳರ ಕಾಲಾವಧಿಯಲ್ಲಿಯೂ ಮೊದಲನೇ ಬಲ್ಲಾಳನ ಹೆಗ್ಗಡೆ ಕಾಳಿಮಯ್ಯನ ಹಾಸನದ ಬಳಿಯ ಜಕ್ಕನ ಹಳ್ಳಿಯಲ್ಲಿರುವ ಕಾಳೇಶ್ವರ ದೇವಾಲಯದ ಮಾಳಿಗೆ ಗೋಡೆ ಮತ್ತು ಕಂಬಗಳನ್ನು ವರ್ಣಚಿತ್ರಗಳಿಂದ ಅಲಂಕರಿಸಿದನು. ಈ ದೇವಾಲಯವನ್ನು ೧೧೭೦ರಲ್ಲಿ ನಿರ್ಮಿಸಲಾಗಿತ್ತು. ಇದಲ್ಲದೇ ಶ್ರವಣಬೆಳಗೊಳದ ಒಂದು ಬಸದಿಯು ಭಿತ್ತಿಚಿತ್ರಗಳಿಂದ ಅಲಂಕೃತವಾದ ಬಗ್ಗೆ ಉಲ್ಲೇಖವಿದೆ.

. ಹಂಪಿ
ವಿಜಯನಗರದ ಅರಸ ಕಾಲಾವಧಿಯಲ್ಲಿ ಭಿತ್ತಿಚಿತ್ರಕಲೆಗೆ ವಿಶೇಷ ಪ್ರೋತ್ಸಾಹ ದೊರೆಯಿತು. ಇದರ ಫಲವಾಗಿ ಚಿತ್ರಕಲೆಯಲ್ಲಿ ಒಂದು ಹೊಸ ಶೈಲಿ ದಕ್ಷಿಣ ಭಾರತದಲ್ಲಿ ಹುಟ್ಟಿತು. ವಿಜಯನಗರ ಶೈಲಿಯಲ್ಲಿ ರಚಿತವಾದ ಚಿತ್ರಗಳನ್ನು ದಕ್ಷಿಣ ಭಾರತದ ತಾಡಪತ್ರಿ, ಲೇಪಾಕ್ಷಿ, ತಿರುಪತಿ, ಕಾಂಚಿಪುರ, ಶ್ರೀರಂಗ ಮುಂತಾದ ಪ್ರದೇಶಗಳಲ್ಲಿ ಕಾಣಬಹುದು. ವಿಜಯನಗರ ಅರಸ ಕಾಲದ ಭಿತ್ತಿ ಚಿತ್ರಕಲೆಗೆ ಒಳ್ಳೆಯ ಉದಾಹರಣೆ ವಿರೂಪಾಕ್ಷ ದೇವಾಲಯವಾಗಿದೆ.

ವಿರೂಪಾಕ್ಷ ದೇವಾಲಯದ ಮಂಟಪದಲ್ಲಿರುವ ಭಿತ್ತಿ ಚಿತ್ರಗಳನ್ನು ಹಲವು ವಿದ್ವಾಂಸರು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ೧೯೩೯ರಲ್ಲಿ ಮೊದಲು ಜನರ ಗಮನ ಸೆಳೆದವರು ಎಸ್‌. ಪರಮಶಿವನ್‌. ನಂತರ ೧೯೪೬ ರಲ್ಲಿ ಸಿ. ಟಿ. ಎಂ. ಕೊಟ್ರಯ್ಯನವರು ಈ ಚಿತ್ರಗಳ ವಸ್ತುವಿಷಯ, ವರ್ಣಗಾರಿಕೆ ಕಾಲಾವಧಿ, ರಚನಾವಿಧಾನಗಳನ್ನು ಕುರಿತು ವಿವರ ನೀಡಿದರು. ಕರ್ನಾಟಕದ ಚಿತ್ರಕಲೆಯ ಬಗ್ಗೆ ವಿವರವಾಗಿ ದಾಖಲಿಸುವ ಪ್ರಯತ್ನ ಮಾಡಿದ ಡಾ. ಶಿವರಾಮ ಕಾರಂತರು ಈ ಚಿತ್ರಗಳ ವಿಷಯವಾಗಿ ಬರೆದಿದ್ದಾರೆ. ಪಿ. ಶ್ರೀನಿವಾಸಾಚಾರ್ಯ ಅವರ ವಿಜಯನಗರ ಪೇಂಟಿಂಗ್ಸ್‌‌ಎಂಬ ಗ್ರಂಥವು ಬಹುಮುಖ್ಯವಾದದು. ಸಿ. ಶಿವರಾಮಮೂರ್ತಿಯವರ ಲೇಖನಗಳನ್ನು ಪ್ರಕಟಿಸಲಾಗಿದೆ. ಡಾ. ಸಿಂಧಗಿ ರಾಜಶೇಖರ ಅವರು ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ ಕೃತಿಯಲ್ಲಿಯೂ ಈ ಚಿತ್ರಗಳ ಬಗ್ಗೆ ವಿವರವಾಗಿ ದಾಖಲಿಸಿದ್ದಾರೆ. ಡಾ. ಎಸ್‌. ಸಿ. ಪಾಟೀಲ ಅವರು ಜಾನಪದ ಚಿತ್ರಕಲೆಯ ಬಗ್ಗೆ ಅಧ್ಯಯನ ಮಾಡುವಾಗ ಚಿತ್ರಕಲೆಯನ್ನು ಕುರಿತು ವಿವೇಚಿಸಿದ್ದಾರೆ. ಹಾಗೆಯೇ ಆ. ಲ. ನರಸಿಂಹನ್‌, ಕೆ. ವ್ಹಿ. ಎನ್‌. ಶಾಸ್ತ್ರೀ, ಡಾ. ಯಾದಪ್ಪ ಪರದೇಶಿ ಅವರು ಉತ್ತರ ಕರ್ನಾಟಕದ ಭಿತ್ತಿ ಚಿತ್ರಕಲೆ ಕುರಿತು ಪಿಎಚ್‌. ಡಿ. ಮಹಾಪ್ರಬಂಧದಲ್ಲಿ ಚರ್ಚಿಸಿದ್ದಾರೆ. ಇನ್ನೂ ಮುಂತಾದ ವಿದ್ವಾಂಸರು, ವಿಜಯನಗರ ಕಾಲದ ಚಿತ್ರಕಲೆಯನ್ನು ಕುರಿತು ವಿವರವಾದ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ. ಇಲ್ಲಿನ ಚಿತ್ರಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯವು ಮೇಲ್ಛಾವಣಿಯ ಚಿತ್ರಗಳು, ಎರಡನೆಯವು ತೊಲೆಗಳ ಮೇಲಿನ ಚಿತ್ರಗಳೆಂದು ಗುರುತಿಸಬಹುದು. ಮೇಲ್ಛಾವಣಿಯ ಚಿತ್ರಗಳಲ್ಲಿ ದೊಡ್ಡ ದೊಡ್ಡ ಪಟ್ಟಿಕೆಗಳನ್ನಾಗಿ ಮಾಡಿಕೊಂಡು ಚಿತ್ರ ರಚನೆ ಮಾಡಲಾಗಿದೆ. ತೊಲೆಗಳ ಮೇಲಿನ ಚಿತ್ರಗಳನ್ನು ಚಿಕ್ಕ ಚಿಕ್ಕ ಪಟ್ಟಿಕೆಗಳ ಮೂಲಕ ಚಿತ್ರಿಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗಿಂತಲೂ ಮೊದಲೇ ವಿರೂಪಾಕ್ಷ ದೇವಾಲಯ ವಿದ್ದಿತು. ಅದು ಹಲವಾರು ಜೀರ್ಣೋದ್ಧಾರಗಳನ್ನು ಕಂಡಿದೆ. ಮುಖ್ಯ ದೇವಾಲಯ ಉತ್ತರಕ್ಕಿರುವ ಪಂಪಾದೇವಿ ಮತ್ತು ಭುವನೇಶ್ವರಿ ಆಲಯಗಳಲ್ಲಿ ಸುಮಾರು ೧೧-೧೨ನೇ ಶತಮಾನದ ವಾಸ್ತು ಲಕ್ಷಣಗಳನ್ನು ನೋಡಬಹುದು. ಇದರ ಮಹಾರಂಗ ಮಂಟಪವನ್ನು ಕೃಷ್ಣದೇವರಾಯ ಕ್ರಿ. ಶ. ೧೫೧೦ – ೧೫೨೯ರ ಅವಧಿಯಲ್ಲಿ ಕಟ್ಟಿಸಿದನು. ಮಹಾರಂಗ ಮಂಟಪದ ಒಳ ಛಾವಣಿಯಲ್ಲಿ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಅವು ರಂಗಮಂಟಪದ ಭುವನೇಶ್ವರಿ ಮತ್ತು ತೊಲೆಗಳ ಮೇಲಿವೆ. ಹಂಪೆಯ ವಿರೂಪಾಕ್ಷ ದೇವಾಲಯದ ವರ್ಣಚಿತ್ರಗಳು ಲೇಪಾಕ್ಷಿಯ ನಂತರದವು. ಇವು ಶೈವ ಪ್ರಧಾನವಾದ ಚಿತ್ರಗಳು.

ಹಂಪಿಯ ವರ್ಣಚಿತ್ರಗಳಲ್ಲಿ ಎದ್ದು ಕಾಣುವ ಲಕ್ಷಣಗಳೆಂದರೆ ಆಕೃತಿಗಳನ್ನು ಸಾಮಾನ್ಯವಾಗಿ ಪಾರ್ಶ್ವಮುಖಿ ಛಾಯೆಯಲ್ಲಿ ಚಿತ್ರಿಸಿದ್ದಾರೆ. ಬ್ರಹ್ಮನನ್ನು ಚಿತ್ರಿಸುವಾಗ ಅವನ ನಾಲ್ಕು ಮುಖಗಳನ್ನು ಬಿಡಿಸಿದ್ದಾರೆ. ಈ ವರ್ಣಚಿತ್ರಗಳಲ್ಲಿ ಎದ್ದು ಕಾಣುವ ವರ್ಣಗಳೆಂದರೆ ಹಸಿರು, ಬೂದು ಬಣ್ಣ ಮತ್ತು ಟೊಮೆಟೋ ಕೆಂಪು, ಪ್ರಾಣಿಗಳ ಕಣ್ಣುಗಳನ್ನು ಮನುಷ್ಯರ ಕಣ್ಣಿನಂತೆಯೇ ಚಿತ್ರಿಸಲಾಗಿದೆ. ಪ್ರತಿಯೊಂದು ದೃಶ್ಯವನ್ನು ಚೌಕಗಳಲ್ಲಿ ಚಿತ್ರಿಸಲಾಗಿದೆ. ಈ ಚೌಕಗಳಿಗೆ ಹೂ ಬಳ್ಳಿಗಳ ಪಟ್ಟಿ ಇದೆ. ಕಣ್ಣಿನ ಚಿತ್ರಗಳಲ್ಲಿ ಮಾರುತಿ ಪ್ರಮುಖವಾಗಿ ಎದ್ದು ಕಾಣುತ್ತದೆ. ಈ ಚಿತ್ರಗಳಲ್ಲಿ ಕೆಲವೊಂದರ ಬಣ್ಣಗಳು ಮಂಕಾಗಿವೆ. ಇನ್ನೂ ಕೆಲವು ಸುಲಿದು ಬಂಧ ಶಿಥಿಲವಾಗುತ್ತಿವೆ. ಆದರೂ ಆಕಾರ ರಚನಾ ವಿಧಾನ ಮುಂತಾದ ಅಂಶಗಳಲ್ಲಿ ಹಿಂದಿನ ಸಂಪ್ರದಾಯದ ಸಂಪರ್ಕ ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಸ್ಪಲ್ಪ ಉತ್ತಮ ರೀತಿಯಲ್ಲಿ ಉಳಿದುಕೊಂಡಿರುವ ಅತೀ ಹಳೆಯ ಭಿತ್ತಿ ಚಿತ್ರಗಳೆಂದರೆ ಈ ವಿರೂಪಕ್ಷ ದೇವಾಲಯವೆನ್ನಬಹುದು. ಇಲ್ಲಿ ಚಿತ್ರಿತವಾಗಿರುವ ಶಿವ, ಕಲ್ಯಾಣ ಸುಂದರ, ಕಾಮದಹನ ಮೂರ್ತಿ ಮತ್ತು ತ್ರಿಪುರಾಂತಕ ಜೊತೆಗೆ ವಿಷ್ಣುವಿನ ದಶಾವತಾರಗಳು ಅಷ್ಟದಿಕ್ಪಾಲರು, ಅರ್ಜುನನು ಪ್ರತಿಬಿಂಬವನ್ನು ನೋಡಿ ಮೀನಿಗೆ ಗುರಿ ಇಟ್ಟು ಬಾಣ ಬಿಡುತ್ತಿರುವುದು, ಮೆರವಣಿಗೆಯಲ್ಲಿ ಒಬ್ಬ ಮುನಿಯನ್ನು ಒಯ್ಯುತ್ತಿರುವುದು, ಗಿರಿಜಕಲ್ಯಾಣ, ತ್ರಿಪುರಾಸುರರ ಸಂಹಾರ, ದಕ್ಷಯಜ್ಞ, ಮನ್ಮಥ ವಿಜಯ, ದ್ರೌಪದಿ ಸ್ವಯಂವರ, ಗೋಪಿಕಾ ವಸ್ತ್ರಾಪಹರಣ ಪ್ರಸಂಗಗಳು ಇಲ್ಲಿ ಮಂಟಪದ ಛಾವಣಿಯಲ್ಲಿ ಚಿತ್ರಲಂಕೃತವಾಗಿವೆ. ಛಾವಣಿಯನ್ನು ಅಂಕಣಗಳಾಗಿ ವಿಂಗಡಿಸಲಾಗಿದೆ. ಒಂದೊಂದು ಅಂಕಣದಲ್ಲಿಯೂ, ರಾಮಾಯಣ, ಮಹಾಭಾರತ, ಭಾಗವತ ಗಳಿಂದ ಆಯ್ದ ಕಥಾ ಸಂದರ್ಭಗಳು ಚಿತ್ರಿತವಾಗಿವೆ. ಇವುಗಳಲ್ಲಿ ಸ್ವಾರಸ್ಯವಾದ ಒಂದು ಚಿತ್ರ ವಿದ್ಯಾರಣ್ಯ್ರ ಮೆರವಣಿಗೆ. ಈ ರಾಜ್ಯ ಗುರುಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಕರೆದೊಯ್ಯುತ್ತಿರುವ ಈ ಚಿತ್ರವು ವಿಜಯನಗರದ ಇತಿಹಾಸದ ದೃಷ್ಟಿಯಿಂದ ಮಹತ್ವವಾದುದು. ಇಲ್ಲಿ ತ್ರಿಪುರ ಸಂಹಾರದ ವರ್ಣಚಿತ್ರ ಲೇಪಾಕ್ಷಿಯ ತ್ರಿಪುರ ಸಂಹಾರದ ವರ್ಣ ಚಿತ್ರಕ್ಕಿಂತಲೂ ಉತ್ತಮವಾಗಿ ಚಿತ್ರಿತವಾಗಿದೆ. ಶಿವನು ತಾರಕಾಸುರನ ಮಕ್ಕಳಾದ ಕಾಮಾಕ್ಷ, ಮಕರಾಕ್ಷ ಮತ್ತು ವಿದ್ಯುನರ್‌ರ ತ್ರಿಪುರ ಗಳನ್ನು ನಾಶಪಡಿಸುವ ದೃಶ್ಯದ ಸಂಯೋಜನೆ ಚಿತ್ರಕಾರನ ನಿರೂಪಣಾಶಕ್ತಿಗೆ ಒರೆ ಇಟ್ಟಂತಿದೆ. ಶಿವನ ನಿಂತ ಭಂಗಿ ಆಸುರನನ್ನು ದಮನ ಮಾಡುವ ಛಲವನ್ನು ಎತ್ತಿ ತೋರಿಸುತ್ತದೆ. ಇಲ್ಲಿ ಶಿವನು ಅಜಯ ಯೋಧ ಹಂಪಿಯ ವರ್ಣಚಿತ್ರಗಳಲ್ಲಿ ತೋರಣದ ಮೇಲೆ ಮೂಲೆಗಳಲ್ಲಿ ಗಂಡ ಭೇರುಂಡ, ಗಿಳಿ ಮುಂತಾದ ಪಕ್ಷಿಗಳ ಚಿತ್ರಗಳಿವೆ.

ವರ್ಣಚಿತ್ರಗಳಲ್ಲಿರುವ ಕೆಲವನ್ನು ಹೀಗೆ ವಿವರಿಸಬಹುದು. ಮೇಲ್ಛಾವಣಿಯಲ್ಲಿರುವ ದೊಡ್ಡ ದೊಡ್ಡ ಪಟ್ಟಿಕೆಗಳನ್ನು ಹಾಗೂ ಅಲ್ಲಿ ಪೂರಕವಾದ ಚಿಕ್ಕ ಪಟ್ಟಿಕೆಗಳನ್ನು ರೂಪಿಸಿಕೊಂಡು ಅವುಗಳಲ್ಲಿ ಚಿತ್ರ ರಚನೆ ಮಾಡಲಾಗಿದೆ. ಮೇಲ್ಛಾವಣಿಯ ಈ ಚಿತ್ರಗಳನ್ನು ಚಾರಿತ್ರಿಕ ಚಿತ್ರಗಳು, ಧಾರ್ಮಿಕ ಚಿತ್ರಗಳು ಎಂಬುದಾಗಿಯೂ ಗುರುತಿಸಬಹುದು. ಚಾರಿತ್ರಿಕ ಚಿತ್ರದಲ್ಲಿ ಮುಖ್ಯವಾಗಿ ವಿದ್ಯಾರಣ್ಯರ ಮೆರವಣಿಗೆಯ ವಾದ್ಯಗಾರರಿರುವ ಚಿತ್ರ ಹಾಗೂ ಯುದ್ಧವೊಂದರ ಚಿತ್ರಗಳನ್ನು ಗುರುತಿಸಬಹುದು. ವಿದ್ಯಾರಣ್ಯರ ಮೆರವಣಿಗೆಯ ಚಿತ್ರವು ಮಂಟಪವನ್ನು ಪೂರ್ವ ದಿಕ್ಕಿನಿಂದ ಪ್ರವೇಶ ಮಾಡಿದಾಗ ಮೇಲಿನ ಪಟ್ಟಿಕೆಯಲ್ಲಿ ವಿದ್ಯಾರಣ್ಯರ ಮೆರವಣಿಗೆ ಕೊಂಡೊಯ್ಯುತ್ತಿರುವ ಚಿತ್ರಣ ಸ್ಪಷ್ಟವಾಗಿ ಕಾಣುತ್ತದೆ. ಪಲ್ಲಕ್ಕಿಯಲ್ಲಿ ಕುಳಿತ ಋಷಿಯೊಬ್ಬರನ್ನು ಕರೆದೊಯ್ಯುವಂತೆ ಚಿತ್ರಿಸಲಾಗಿದೆ. ಅದರ ಹಿಂದೆ ಮತ್ತು ಮುಂದೆ ಛತ್ರ ಚಾಮರಗಳನ್ನು ಹಿಡಿದುಕೊಂಡ ಹಲವು ಜನರು ಅನೆ, ಕುದುರೆ, ವಾದ್ಯಗಾರರು ಮುನ್ನಡೆಯುತ್ತಿದ್ದಾರೆ. ತೀರಾ ಹಿಂಭಾಗದಲ್ಲಿ ಅಂಬಾರಿಯ ಮೇಲೆ ಅಂಬಾರಿಯನ್ನು ಹೊತ್ತ ಅನೆ ಗಂಭೀರವಾಗಿ ಮುಂದೆ ಸಾಗುತ್ತಿದೆ. ಇಲ್ಲಿನ ಎಲ್ಲ ಚಿತ್ರಗಳು ಒಂದೇ ಕಡೆಯ ನೋಟದಲ್ಲಿದೆ. ಒಬ್ಬನ ಹಿಂದೆ ಒಬ್ಬನು ಸಾಲಾಗಿ ಇರುವಂತೆ ಜನರನ್ನು ಚಿತ್ರಿಸಿದಾಗ್ಯೂ ಕೊನೆಯಲ್ಲಿರುವ ಜನರು ಕಾಣಲೆಂದು ಮುಂದಿನವರಿಗಿಂತ ಹಿಂದಿನವರನ್ನು ಎತ್ತರದಲ್ಲಿ ಕಾಣುವಂತೆ ಚಿತ್ರಿಸಲಾಗಿದೆ. ಅದೇ ಪಟ್ಟಿಕೆಯ ಹತ್ತಿರವೇ ಯುದ್ಧದ ಒಂದು ದೃಶ್ಯವಿದೆ. ಮೊದಲ ಚೌಕದಲ್ಲಿ ಮೂರು ರಥಗಳಿದ್ದು, ಎರಡು ರಥಗಳನ್ನು ಕುದುರೆಗಳಿಂದ ಎಳೆಯಲಾಗುತ್ತಿದೆ. ಮಧ್ಯದ ಒಂದು ರಥವನ್ನು ಕುದುರೆಗಳು ಎಳೆಯುತ್ತಿವೆ. ಈ ಚಿತ್ರದಲ್ಲಿ ಮೊದಲ ರಥದ ಚಿತ್ರಗಳು ಮಸುಕಾಗಿವೆ. ಮೂರು ರಥಗಳಲ್ಲಿ ಹಿಂದಿನ ರಥವು ಸುಂದರವಾಗಿದೆ. ಮೊದಲನೆಯ ರಥದಲ್ಲಿ ಒಬ್ಬ ಯೋಧ ಓಡುತ್ತಿರುವಂತೆ ಇದ್ದು, ಆತ ಕತ್ತಿ, ಗುರಾಣಿ ಹಿಡಿದಿದ್ದಾನೆ. ಅಲ್ಲದೇ ಅವನ ದೇಹಕ್ಕೆ ಬರೀ ಲಂಗೋಟಿಯೊಂದನ್ನು ತೊಡಿಸಲಾಗಿದೆ. ತಲೆಗೆ ಅರಿವೆಯೊಂದನ್ನು ಸುತ್ತಿಕೊಂಡಿದ್ದಾನೆ. ಮೂರನೆಯ ರಥದ ಮೇಲಿನ ಭಾಗದಲ್ಲಿ ಇನ್ನೊಬ್ಬ ಯೋಧನಿದ್ದು ಆತ ಪಾಶ್ಚಿಮಾತ್ಯ ಉಡುಪಿನಲ್ಲಿದ್ದು ಹೆಗಲಿಗೆ ಕೋವಿ (ಬಂದೂಕು) ಏರಿಸಿಕೊಂಡಿದ್ದಾನೆ. ಮಧ್ಯದ ರಥದ ಭಾಗದಲ್ಲಿರುವ ಯೋಧನ ಬಲಗೈಯಲ್ಲಿ ಖಡ್ಗ ಹಿಡಿದುಕೊಂಡಿದ್ದಾನೆ. ಮೂರನೇ ಚೌಕದಲ್ಲಿಯೂ ಮೂರು ರಥಗಳಿದ್ದು ಒಂದು ಆನೆಯಿಂದ ಮತ್ತು ಇನ್ನೆರಡು ಕುದುರೆಯಿಂದ ಎಳೆಯಲ್ಪಡುತ್ತವೆ. ಈ ರಥಗಳು ಎರಡನೇ ಚೌಕದಲ್ಲಿನ ರಥಗಳ ಹಾಗೆ ಸುಂದರವಾಗಿದ್ದು, ಮೇಲ್ಭಾಗದಲ್ಲಿ ಜೋಡಿ ಕಳಸ ಬಂದಿವೆ. ಈ ರಥಗಳಲ್ಲಿ ಪ್ರತಿಯೊಂದರಲ್ಲಿ ಮೂರು ಜನರಿದ್ದಾರೆ. ಸಾರಥಿ, ರಾಜ ಅಥವಾ ಯುದ್ಧಾಳು, ಇನ್ನೊಬ್ಬ ಸೇವಕನಂತಿರುವ ವ್ಯಕ್ತಿ ಕುಳಿತುಕೊಂಡಿದ್ದಾನೆ. ಕಳಶಗಳು ವಿಜಯ ನಗರ ಶೈಲಿಯ ದೇವಾಲಯದ ಗೋಪುರಗಳಂತೆಯೇ ಇವೆ. ಈ ರಥಗಳ ಮೇಲ್ಭಾಗದಲ್ಲಿಯೂ ಸೈನಿಕರು, ಆನೆ, ಕುದುರೆಗಳು ಯುದ್ಧನಿರತವಾಗಿವೆ. ದೇವಾಲಯದ ಪ್ರವೇಶ ದ್ವಾರದ ಕಡೆಯಿಂದ ಏಳನೇ ಪಟ್ಟಿಕೆಯಲ್ಲಿ ಮತ್ತೊಂದು ಮೆರವಣಿಗೆಯ ದೃಶ್ಯವಿದೆ. ಇದರಲ್ಲಿ ಚಿಕ್ಕ ಪ್ರಮಾಣದ ಚಿತ್ರಗಳಿವೆ. ನಗಾರಿ ಬಾರಿಸುವವರು ಕೊಂಬು, ಕಹಳೆಗಳನ್ನು ಊದುತ್ತಿರುವವರು ಕಂಡುಬರುತ್ತಾರೆ. ಹೀಗೆ ಅನೇಕ ವಾದ್ಯಗಾರರಲ್ಲದೇ, ಕೆಲವು ಸೈನಿಕರು ಇಲ್ಲಿ ಚಿತ್ರತಗೊಂಡಿದ್ದಾರೆ. ಹೀಗಾಗಿ, ಇದು ರಣಘೋಷದೊಂದಿಗೆ, ಯುದ್ಧಕ್ಕೆ ಹೊರಟ ದೃಶ್ಯ ವಾಗಿರಬಹುದು. ಇಲ್ಲವೆ ಯುದ್ಧವನ್ನು ಗೆದ್ದ ವಿಜಯೋತ್ಸವದ ಮೆರವಣಿಗೆಯಂತೆ ಕಾಣುತ್ತದೆ.