ಕರ್ನಾಟಕದ ಎಂಟನೆಯ ದೊಡ್ಡ ಜಿಲ್ಲೆ ಬಳ್ಳಾರಿ. ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನಹಳ್ಳಿ, ಹಡಗಲಿ, ಸಂಡೂರು, ಸಿರುಗುಪ್ಪ ಒಟ್ಟು ೭ ತಾಲೂಕುಗಳನ್ನು ಒಳಗೊಂಡಂತೆ ೮೪೧೯ ಚ.ಕಿ.ಮೀ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.

 

ಬಳ್ಳದಲ್ಲಿ ಶಿವ ಪ್ರತ್ಯಕ್ಷನಾದ ಸ್ಥಳ ಬಳ್ಳಾರಿ. ಬಳನೆಂಬ ರಾಕ್ಷಸನನ್ನು ಇಂದ್ರ ಕೊಂದ ಸ್ಥಳವಾದ್ದರಿಂದ ಬಳಹರಿಯು ಬಳ್ಳಾರಿಯಾಗಿದೆಯೆಂದು ಬಳ್ಳಾರಿಯ ಪ್ರಾಚೀನತೆ ಗುರುತಿಸಬಹುದು.ಆದಿ ಮಾನವನ ನೆಲೆಯಾಗಿದ್ದಿತೆಂದು ಹಳೆ ಶಿಲಾ ಯುಗದಿಂದ ಕಬ್ಬಿಣದ ಯುಗದವರೆಗೆ ಇಲ್ಲಿ ಜನಜೀವನವಿದ್ದಿತೆಂದು ಪ್ರಾಗೈತಿಹಾಸಿಕ ಸಂಶೋಧನೆಗಳಿಂದ ತಿಳಿದು ಬರುತ್ತದೆ.

ತೆಕ್ಕಲಕೋಟೆಯ ನಿಟ್ಟೂರಿನಲ್ಲಿ ದೊರೆತ ಎರಡು ಶಾಸನಗಳಿಂದ ಈ ಪ್ರಾಂತ್ಯ ಮೌರ್ಯರ ಆಳ್ವಿಕೆಗೆ ಒಳಪಟ್ಟಿದ್ದು ನಂತರ ಶಾತವಾಹನ, ಬನವಾಸಿಯ Pದಂಬ, ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ, ನೊಳಂಬ, ಗಂಗ , ಉಚ್ಚಂಗಿ, ಪಾಂಡ್ಯ, ಕಂಪಿಲಿಯ ಕಂಪಿಲರಾಯ , ಕುಮಾರರಾಮರು ಈ ಪ್ರಾಂತ್ಯ ಆಳಿದ್ದಾರೆ. ವಿಶ್ವ ವಿಖ್ಯಾತ  ವಿಜಯನಗರ ಅರಸ ನಂತರ ಆದಿಲ್ ಶಾಹೀ ಸುಲ್ತಾನರ ಪಾಳೇಗಾರರ , ಮರಾಠ ಮೊಘಲರ ಆಳ್ವಿಕೆಗೆ ಒಳಪಟ್ಟಿತ್ತು. ಮೈಸೂರಿನ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ ಈ ಜಿಲ್ಲೆಯನ್ನು ತಮ್ಮ ಅಧೀನಕ್ಕೊಳಪಡಿಸಿಕೊಂಡಿದ್ದರು. ೧೭೯೨ ರ ಒಪ್ಪಂದದಂತೆ ಟಿಪ್ಪು ಜಿಲ್ಲೆಯ ಕೆಲಭಾಗಗಳನ್ನು ನಿಜಾಮನಿಗೆ ಬಿಟ್ಟುಕೊಟ್ಟನು.೧೮೦೦ ಸುಮಾರಿಗೆ ಶ್ರೀರಂಗಪಟ್ಟಣ ಪತನಾನಂತರ ಬಳ್ಳಾರಿ ಜಿಲ್ಲೆ ಬ್ರಿಟೀಷರಿಗೆ ಸೇರಿ ಮದರಾಸು ಪ್ರಾಂತ್ಯದ ಭಾಗವಾಯಿತು.೧೯೫೬ ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿ ಅಂದಿನ ಬಳ್ಳಾರಿ ಜಿಲ್ಲೆಯ ಆದವಾನಿ, ಆಲೂರು, ರಾಯದುರ್ಗ ತಾಲೂಕು ಹೊರತು ಪಡಿಸಿ ಉಳಿದ ಭಾಗ ಮೈಸೂರು ಸಂಸ್ಥಾನಕ್ಕೆ ಸೇರಿ ಬಳ್ಳಾರಿ ಜಿಲ್ಲೆಯಾಯಿತು. ೧೯೯೭ ರ ಹೊಸ ಜಿಲ್ಲಾ ರಚನೆಯಲ್ಲಿ ಈ ಜಿಲ್ಲೆಯಲ್ಲಿ ಇದ್ದ ಹರಪನಹಳ್ಳಿ ತಾಲೂಕು ಕಳಚಿಕೊಂಡು ದಾವಣಗೆರೆ ಜಿಲ್ಲೆಗೆ ಸೇರಿತು.

ಈ ಜಿಲ್ಲೆಯು ಆರ್ಥಿಕ , ಸಾಮಾಜಿಕ , ಸಾಂಸ್ಕೃತಿಕ ಕ್ಷೇತ್ರಗಳ ಶ್ರೀಮಂತಿಕೆಯಿಂದ ಮೆರೆದಿದೆ. ಕಬ್ಬಿಣ , ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳಿಂದ , ಸಿದ್ಧ ಉಡುಪುಗಳ ತಯಾರಿಕೆಯಿಂದ ದಕ್ಷಿಣ ಭಾರತದಲ್ಲಿಯೇ ಆರ್ಥಿಕ ವಹಿವಾಟಿನಲ್ಲಿ ಮುಂದಿದೆ. ಸಾಮಾಜಿಕ ಪರಿಸರದಲ್ಲಿ ಪ್ರಥಮ ಕನ್ನಡ ದಿನಪತ್ರಿಕೆ “ಮಂಗಳೂರು ಸಮಾಚಾರ “ ಪ್ರಕಟಣೆ, ವಡ್ಡಾರಾಧನೆ ಮೊದಲ ಗದ್ಯ ಕೃತಿರಚನಾ ತಾಣ ಕೋಗಳಿ, ಎರಡನೇ ಏಕಶಿಲಾ ಬೆಟ್ಟ ಹೊಂದಿದ ಬಳ್ಳಾರಿ ವಿಶ್ವವಿಖ್ಯಾತವಾಗಿದೆ.

ಸಾಂಸ್ಕೃತಿಕ ತಾಣವಾದ ಈ ಜಿಲ್ಲೆಯು ಬಳ್ಳಾರಿ ಮರಿಕಲ್ಯಾಣವೆನಿಸಿದೆ. ಪಂಚಗಣಾಧೀಶ ಶಿವಶರಣರ ಬೀಡಾಗಿದೆ. ಬಳ್ಳಾರಿ , ಅಲ್ಲೀಪುರ , ಚೆಳ್ಳಗುರ್ಕಿ , ಕೊಟ್ಟೂರು , ಸಂಡೂರುಗಳು ಶರಣ ತಾಣ ಪುಣ್ಯ ಕ್ಷೇತ್ರಗಳಾಗಿವೆ.ಐತಿಹಾಸಿಕ ತಾಣವಾದ ಹಂಪಿ ವಿಶ್ವ ವಿಖ್ಯಾತವಾಗಿದೆ.

ಇತಿಹಾಸದ ಪಳಿಯುಳಿಕೆಗಳನ್ನು ಕುರುಗೋಡು , ಸಂಗನಕಲ್ಲು , ತೆಕ್ಕಲಕೋಟೆ , ಕಪ್ಪಗಲ್ಲು , ಮಿಂಚೇರಿ , ಕೋಗಳಿ , ಸಿರುಗುಪ್ಪಗಳಲ್ಲಿ ಕಾಣಬಹುದಾಗಿದೆ.

ಶೈಕ್ಷಣಿಕವಾಗಿಯೂ ಮುಂಚೂಣಿಯಲ್ಲಿರುವ ಈ ಜಿಲ್ಲೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ , ವೈದ್ಯಕೀಯ , ತಾಂತ್ರಿಕ ಮಹಾವಿದ್ಯಾಲಯಗಳ ಬೀಡಾಗಿದೆ. ಮೊದಲ ಏಕೈಕ ಕನ್ನಡ ವಿಶ್ವವಿದ್ಯಾಲಯವನ್ನು ಹೊಂದಿರುವ ಹೆಗ್ಗಳಿಕೆ ಈ ಜಿಲ್ಲೆಯದಾಗಿದೆ.

ಗಡಿಭಾಗವಾದ ಈ ಜಿಲ್ಲೆ ಬಹು ಭಾಷಿಕರ ತಾಣವಾಗಿ ಸಾಸ್ಕೃತಿಕ ಸೌಹಾರ್ದತೆಯನ್ನು ಮೆರೆದಿದೆ. ಈ ಜಿಲ್ಲೆಯ ಪ್ರತಿ ತಾಲೂಕುಗಳು ನೋಡುವ ಬೀಡುಗಳಾಗಿವೆ. ಸಂಡೂರಿನ ವನಸಿರಿ ಕಾರ್ತಿಕೇಯ, ಕೂಡ್ಲಿಗಿಯ ಗಾಂಧಿಚಿತಾಭಸ್ಮ, ಸರ್ವೋದಯ ಗ್ರಾಮ, ಕೊಟ್ಟೂರು, ಉಜ್ಜಯಿನಿ, ಹೊಸಪೇಟೆಯ ತುಂಗಭದ್ರಾ ಡ್ಯಾಂ, ಹಂಪಿ, ಜಂಬುನಾಥ ಗುಡ್ಡ, ಸಿರುಗುಪ್ಪೆಯ ಕೆಂಚನಗುಡ್ಡ, ತೆಕ್ಕಲಕೋಟೆ, ಬಳ್ಳಾರಿಯ ಏಕಶಿಲಾ ಬೆಟ್ಟ, ಅಲ್ಲೀಪುರ ಸೆರೆಮನೆ, ಹಡಗಲಿಯ ಬೆಟ್ಟದ ಮಲ್ಲೇಶ, ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯ ಮುಂತಾದವನ್ನು ಸಾಂಕೇತಿಕವಾಗಿ ಹೆಸರಿಸಬಹುದು.

ಜಿಲ್ಲೆಯ  ಪ್ರತಿ ಗ್ರಾಮವು ಸ್ಥಳ ವಿಶೇಷತೆಯಿಂದ ಕೂಡಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಜೋಳದರಾಶಿ ದೊಡ್ಡನಗೌಡ, ಬಳ್ಳಾರಿಯ ರಾಘವ, ವೈ.ನಾಗೇಶ ಶಾಸ್ತರಿ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ಮುಂತಾದ ಕವಿ ಸಾಹಿತಿ ಗಮಕಿ ಕಲಾವಿದರಿಂದ ಮೆರೆದಿದೆ. ಆನಪದ ಕಲೆಯ ತೊಗಲು ಬೊಂಬೆ ಆಟ, ಯಡ್ರಮ್ಮನಹಳ್ಳಿ ಭರಮಪ್ಪ , ಬೆಳಗಲ್ಲು ವೀರಣ್ಣ, ರಂಗಭೂಮಿಯ ಸುಭದ್ರಮ್ಮ ಮನ್ಸೂರು , ದರೋಜಿ ಈರಮ್ಮ ಮುಂತಾದ ಕಲಾವಿದರಿಂದ ಶ್ರೀಮಂತವಾಗಿದೆ.

ಕವಿಗಳು: ಸಾಯಣಾಚಾರ್ಯರು, ಹರಿಹರ, ರಾಘವಾಂಕ, ಚಾಮರಸ, ತಿಮ್ಮಣ್ಣ, ಮಧುರ, ಮಹಾಲಿಂಗರಂಗ, ದೇವಕವಿ, ಮೈಲಾರ ಬಸಪ್ಪ, ಮುತ್ತಿಗಿ ಆನಚಿದರಾವ್ ಮತ್ತು ಸದಾಶಿವ ಇವರೆಲ್ಲರೂ ಬಳ್ಳಾರಿ ಜಿಲ್ಲೆಯವರೇ.

ದಾಸರು: ಪುರಂದರದಾಸರು,ವ್ಯಾಸರಾಯರು, ಕನಕದಾಸರು(ಕಾರ್ಯಕ್ಷೇತ್ರ-ಬಳ್ಳಾರಿ)

ಸಾಧು ಸಂತರು : ವಿದ್ಯಾರಣ್ಯರು, ಚೆಳ್ಳಗುರ್ಕಿ ಎರಿತಾತ, ಎಮ್ಮಿಗನೂರು ಜಡೆತಾತ, ದಮ್ಮೂರು ವೆಂಕಪ್ಪ ಅವಧೂತರು,ಉಜ್ಜನಿ ಸಿದ್ದಲಿಂಗಸ್ವಾಮಿಗಳು,ಶ್ರೀ ಕೊಟ್ಟೂರೇಶ್ವರರು, ಕುರುಗೋಡು ಶ್ರೀಮತಿ ನೀಲಮ್ಮ ಹಾಲವರ್ತಿ, ಚೆನ್ನವೀರಸ್ವಾಮಿಗಳು, ತೆಕ್ಕಲೊಕೋಟೆ ಕಾಡಿಸಿದ್ದಪ್ಪ ಇನ್ನೂ ಅನೇಕ ಸಾಧು ಸಚಿತರ ನೆಲೆಬೀಡು ನಮ್ಮ ಬಳ್ಳಾರಿ