ರಂಗಭೂಮಿ ಚೆನ್ನಾಗಿ ಸಜ್ಜಾಗಿದೆ. ಸುತ್ತಮುತ್ತ ಗ್ಯಾಸ್ ಲೈಟುಗಳು. ಬಣ್ಣದ ಚಿತ್ರಗಳುಳ್ಳ ಪರದೆಗಳು. ನಾಟಕ, “ವಿಜಯನಗರ ಸಾಮ್ರಾಜ್ಯ ಪತನ”. ಜನರು ರಂಗಮಂದಿರದಲ್ಲಿ ಕಿಕ್ಕಿರಿದು ತುಂಬಿದ್ದಾರೆ. “ಶುಕ್ಲಾಂ ಬರಧರಂ ವಿಷ್ಣುಂ….” ಪ್ರಾಥನೆ. ಗಣೇಶ, ಶಾರದೆಯರ ಸ್ತುತಿ ಆಯಿತು. ನಾಟಕ ಪ್ರಾರಂಭವಾಯಿತು.

ರಂಗುರಂಗಾದ ಬೆಳಕಿನಲ್ಲಿ ರಂಗಭೂಮಿಯ ಒಂದೆಡೆಯಿಂದ ಕುದುರೆ ಸವಾರನೊಬ್ಬ ಪ್ರವೇಶಿಸಿದ. ಬಂದವನು ಇಳಿದು ಕುದುರೆಯನ್ನು ಕಟ್ಟಿಹಾಕಿದ. ಮೈಯನ್ನೊಮ್ಮೆ ನವಿರಾಗಿ ಕೊಡವಿಕೊಂಡ. ಕುದುರೆಯನ್ನು ಪ್ರೀತಿಯಿಂದ ನೇವರಿಸುತ್ತ, ಗರಿಕೆಯ ಹುಲ್ಲನ್ನು ತಿನ್ನಿಸತೊಡಗಿದ.

ಅತ ಪಠಾಣ. ಕಟ್ಟುಮಸ್ತಾದ ಆಸಾಮಿ. ಸ್ಫುರದ್ರೂಪಿ. ಹೊಳೆಯುವ ಕಣ್ಣುಗಳು. ತುಂಬಿದ ಗಲ್ಲ, ದುಂಡುಮುಖ. ಒಮ್ಮೆ ನೋಡಿದರೆ, ಮತ್ತೆ ನೋಡಬೇಕು ಅನ್ನಿಸುವ ರೂಪು.

ಕುದುರೆಗೆ ಗರಿಕೆ ತಿನ್ನಿಸುತ್ತ, “ಭೇಟಾ, ಖಾವೋ…” ಎನ್ನುತ್ತಿದ್ದಾನೆ. ಹಿನ್ನಲೆಯಿಂದ, ಮನಸ್ಸು ಮಿಡಿಯುವ ಶೋಕದ ನಾದ ತರಂಗ ತರಂಗವಾಗಿ ರಂಗವೆಲ್ಲ ತುಂಬುತ್ತಿದೆ. ಪಠಾಣ ಮೂಕ ಆದ. “…. ಆಯಿತು, ಇನ್ನು ಕಳೆಯಿತು ಆ ವೈಭವ. ಇನ್ನೂರೈವತ್ತು ವರ್ಷ ಪರ್ಯಂತ ಸುವ್ಯವಸ್ಥಿತ ರಾಜ್ಯಭಾರ ನಡೆಸಿದ ವಿಜಯನಗರ ಸಾಮ್ರಾಜ್ಯದ ಜ್ಯೋತಿ ನಂದಿತು. ಅರಸು ರಾಮರಾಯನ ಕೊಲೆ, ದುರ್ಗದ ಲೂಟಿ! ವಿದ್ಯಾರಣ್ಯರು ಹರಸಿದ ರಾಜ್ಯ,ಹೀಗೆ ಅವನತಿ ಕಾಣುವುದೆ? ಅಯ್ಯೋ, ಎಂಥ ದುರ್ದೈವ!….” ಮಾತು ಆಗುವಾಗ, ರೊಟ್ಟಿ ತಿನ್ನುತ್ತಿರುವ ಪಠಾಣ ಹಾಗೆಯೆ ನಿಲ್ಲುತ್ತಾನೆ. ಕಂಬನಿ ಕಣ್ಣಂಚಿನಲ್ಲಿ ಕಾಣುತ್ತಿದೆ. “ಇತಿಹಾಸದ ಸುವರ್ಣ ಅಧ್ಯಾಯ, ಕೊಲೆಯಲ್ಲಿ ಕೊನೆಗಂಡಿತೆ” ಎಂದು ಶೋಕಿಸುತ್ತಾನೆ.

ಪಠಾಣನ ಅಭನಯ ಮೆಚ್ಚಿದ ಪ್ರೇಕ್ಷಕರು ಕಿವಿ ಕಿವುಡಾಗುವಂತೆ ಚಪ್ಪಾಳೆ ತಟ್ಟಿದರು.

ಅಂಥ ಸೊಗಸಾದ ಅಭಿನಯ ನೀಡುತ್ತಿದ್ದವರು ಮಹಾನಟ ಬಳ್ಳಾರಿ ರಾಘವರು.

ರಾಘವರು ಬಣ್ಣ ಹಚ್ಚಿಕೊಳ್ಳುವರೆಂದರೆ, ಜನಕ್ಕೆ ಹಿಗ್ಗೋ ಹಿಗ್ಗು. ನಾಟಕ ಮಂದಿರಕ್ಕೆ ನುಗ್ಗೊ ನುಗ್ಗು. ಪ್ರತಿ ದೃಶ್ಯಕ್ಕೂ ಮೊರೆಯುವ ಚಪ್ಪಾಳೆ!

ಪಠಾಣನ ಕಣ್ಣಿನಲ್ಲಿ ನೀರು

ಪ್ರೀತಿ ತುಂಬಿ ಬಾಲ್ಯ

ರಾಘವರ ಹುಟ್ಟೂರು ಬಳ್ಳಾರಿ ಜಿಲ್ಲೆಯ ತಾಡಪತ್ರಿ. ತಂದೆ ನರಸಿಂಹಾಚಾರ್ಯರು. ಬಳ್ಳಾರಿಯು ಮುನಿಸಿಪಲ್ ಹೈಸ್ಕೂಲಿನಲ್ಲಿ ಉಪಾಧ್ಯಾಯರು. ಜತೆಗೆ ವೇದಾಭ್ಯಾಸ ಮಾಡಿ, ಸಂಸ್ಕೃತದಲ್ಲಿ ತಕ್ಕಮಟ್ಟಿಗೆ ಪಾಂಡಿತ್ಯಗಳಿಸಿದ್ದರು. ತಾಯಿ ಶೇಷಮ್ಮನವರು. ತಂದೆ ತಾಯಿಯರು ಸಾತ್ವಿಕರು, ಧರ್ಮಭೀರುಗಳು. ಮದುವೆಯಾಗಿ ಎಷ್ಟೋ ವರ್ಷ ಕಳೆದರೂ ಸಂತಾನ ಆಗಲಿಲ್ಲ. ಇದೇ ಕೊರಗು ನರಸಿಂಹಾಚಾರ್ಯರಿಗೆ.

ಬಳ್ಳಾರಿಯಲ್ಲೆ ಬಸಪ್ಪನವರೆಂಬ ಒಬ್ಬ ಅವಧೂತರು ಇದ್ದರು. ನರಸಿಂಹಾಚಾರ್ಯರು ಹೆಂಡತಿಯೊಂದಿಗೆ ಬಸಪ್ಪನವರ ಬಳಿಗೆ ಹೋದರು. ಭಕ್ತಿಯಿಂದ ಸೇವೆ ಮಾಡಿದರು. “ಒಳ್ಳೆಯದಾಗುತ್ತೆ ಹೋಗಿ” ಎಂದರ ಅವಧೂತರು. ಅನಂತರ ೧೮೮೦ ರ ಆಗಸ್ಟ್ ಎರಡರಂದು ಜನಿಸಿದ ಮಗುವೇ ರಾಘವರು. ತಂದೆ ತಾಯಿಗಳು ಹುಟ್ಟಿದ ಗಂಡು ಮಗುವಿಗೆ “ಬಸಪ್ಪ” ನೆಂತಲೇ ಹೆಸರಿಟ್ಟರು. ಕ್ರಮೇಣ ಮಗನ ಮೇಲಣ ಮುದ್ದಿಗಾಗಿ “ರಾಘವ” ಎಂದು ಕರೆಯತೊಡಗಿದರು. ಅದೇ ಹೆಸರು ಮುಂದೆಯೂ ರೂಢಿಗೆ ಬಂತು. ‘ಬಳ್ಳಾರಿ ರಾಘವ’ ಎಂದೇ ಅವರು ಪ್ರಸಿದ್ಧರಾದರು. ಆಮೇಲೆ ಶೇಷಮ್ಮನವರಿಗೆ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗು ಜನಿಸಿದವು.

ಉಪಾಧ್ಯಾಯರಾದ ತಂದೆಗೆ, ತನ್ನ ಮಗ ವಕೀಲ ಆಗಬೇಕು ಎನ್ನುವ ಆಸೆ. ವಕಿಲಿ ವೃತ್ತಿ ಎಂದರೆ ಸಮಾಜದಲ್ಲಿ ಉನ್ನತಮಟ್ಟದ್ದು ಎಂಬ ಭಾವನೆ. ಅದರಿಂದಲೆ ತಂದೆ ಮಗನಿಗೆ ತಾವೇ ಇಂಗ್ಲಿಷ್ ಪಾಠ ಹೇಳಿದರು. ಕನ್ನಡ, ಸಂಸ್ಕೃತವೂ ರೂಢಿ ಆದವು. ಮನೆ ಮಾತೋ ತೆಲುಗು. ಮಗು ರಾಘವ, ತಂದೆ ಹೇಳಿಕೊಟ್ಟ ದೇವರ ಸ್ತೋತ್ರಗಳನ್ನು ರಾಗವಾಗಿ ಹೇಳುತ್ತಿದ್ದ. ದೈವಭಕ್ತಿ ತಾನಾಗಿಯೇ ಬೆಳೆಯಿತು. ಇದು ಅವರಲ್ಲಿ ವಿನಯ, ಶ್ರದ್ಧೆಗಳನ್ನು ಬೆಳೆಸಲು ಪೋಷಕವಾಯಿತು. ರಾಘವ, ಚುರುಕು ಬುದ್ಧಿಯವರು. ಅದರಿದ ಹೈಸ್ಕೂಲಿನವರೆ ಅವರನ್ನು ಫೀಸಿಲ್ಲದೆಯೆ ಸೇರಿಸಿಕೊಂಡಿದ್ದರು. ಪ್ರತಿವರ್ಷವೂ ಸ್ಕೂಲಿನವರು ಬುದ್ಧಿವಂತ ವಿದ್ಯಾರ್ಥಿಗೆ ಕೊಡುತ್ತಿದ್ದ ಬಹುಮಾನ ರಾಘವರಿಗೇ ಮೀಸಲು!

ಹದಿನಾಲ್ಕನೆಯ ವಯಸ್ಸಿಗೆ ಅವರು ಮೆಟ್ರಿಕ್ಯುಲೇಷನ್ ಪಾಸಾದರು. ಅನಂತರ ಮುಂದೆ ಓದಲು, ತಂದೆ ಬೆಂಗಳೂರು ಸೆಂಟ್ರಲ್ ಕಾಲೇಜಿಗೆ ರಾಘವರನ್ನು ಕಳಿಸಿದರು. ಅದೇಕೊ, ಅಲ್ಲಿ ರಾಘವರಿಗೆ ಹೊಂದಲಿಲ್ಲ. ಬಳ್ಳಾರಿಗೇ ಹಿಂತಿರುಗಿದರು. ಅನಂತರ  ಎಫ್.ಎ. ಪಾಸಾದರು. ಮುಂದೆ ಬಿ.ಎ., ಓದಲು ಮದರಾಸಿಗೆ ಹೋದರು.

ಪ್ರೌಢ ವಿದ್ಯಾಭ್ಯಾಸ

ಮದರಾಸಿನಲ್ಲೆ ರಾಘವರಿಗೆ ನಾಟಕದ ಬಗ್ಗೆ ವಿಶೇಷ ಆಸಕ್ತಿ, ಒಲವು ಮುಡಿದ್ದು. ಆಟ, ನಾಟಕ, ಓದಿಗೆ ಅಡ್ಡಿಯೇನೂ ತರಲಿಲ್ಲ. ಬಿ.ಎ. ಪರೀಕ್ಷೆಯ ಕೆಲವು ವಿಷಯ ಮತ್ತೆ ಬರೆದು, ಪಾಸಾಗಬೇಕಾಯಿತಷ್ಟೆ. ಆಗ ರಾಘವರಿಗೆ ಇಪ್ಪತ್ತು ವರುಷ. ಪದವೀಧರ ಆದ ಮೇಲೆ ರಾಘವರು, ಆರು ತಿಂಗಳು ಬಳ್ಳಾರಿ ಹೈಸ್ಕೂಲಿನಲ್ಲೆ ಅಧ್ಯಾಪಕರಾದರು. ಎರಡು ತಿಂಗಳು ಇಂಜಿನಿಯರ್ ಆಫೀಸಿನಲ್ಲಿ ಗುಮಾಸ್ತರಾದರು. ಆದರೆ ತಂದೆಯ ಆಸೆ ಇನ್ನೂ ಈಡೇರಿರಲಿಲ್ಲ. ಇದನನು ರಾಘವರು ಬಲ್ಲರು. ಅಂತೆಯೆ ಕೆಲಸ ಬಿಟ್ಟು ಅವರು ಬಿ.ಎಲ್. ಪರೀಕ್ಷೆಗೆ ಕೂತರು. ಶ್ರಮದ ಫಲವಾಗಿ ೧೯೦೫ ರಲ್ಲಿ ಪಾಸೂ ಆದರು. ಆಗಲೇ ಅವರು ಇಂಗ್ಲಿಷ್ ಸಾಹಿತ್ಯದ ಅಧ್ಯಯನ ಮಾಡಿದ್ದು.

ರಾಘವರಿಗೆ ಈ ಮೊದಲೆ ಮದುವೆ ಆಗಿತ್ತು. ಹೆಂಡತಿ ಕಷ್ಣಮ್ಮನವರು. ಕರ್ನೂಲಿನ ವಕೀಲ ಲಕ್ಷ್ಮಣಾಚಾರ್ಯರ ಮಗಳು. ಪತಿಯೆ ದೈವ ಎಂದು ನಂಬಿದ್ದ ಗುಣವತಿ. ಆಕೆಯ ಪತಿಪ್ರೇಮ, ಒಳ್ಳೆಯ ಸ್ವಭಾವ ಕಂಡ ಸುತ್ತಣವರು ‘ದೊಡ್ಡಮ್ಮ’ನೆಂದೆ ಕರೆಯುತ್ತಿದ್ದರು.

ಬಳ್ಳಾರಿಯಲ್ಲಿ ಧರ್ಮಾವರಂ ಕೃಷ್ಣಮಾಚಾರ್ಯರು ಎಂಬ ಪ್ರಸಿದ್ಧ ವಕೀಲರಿದ್ದರು. ಅವರು ರಾಘವರಿಗೆ ಸೋದರಮವ ಕೂಡ. ೧೯೦೬ ರಿಂದ ಅವರ ಬಳಿಯೆ ರಾಘವರು ವಕೀಲಿವೃತ್ತಿಯಲ್ಲಿ ಅದು ವರ್ಷ ತರಬೇತಿ ಪಡೆದರು. ಅನಂತರ ತಾವೇ ಸ್ವತಂತ್ರವಾಗಿ ವಕಾಲತ್ತು ನಡೆಸಲು ಆರಂಭಿಸಿದರು. ಜಾಣ್ಮೆ, ಧೈರ್ಯ, ಅಭ್ಯಾಸ, ಶ್ರದ್ಧೆ ಅದರ ಜತೆಗೆ ಅದೃಷ್ಟವೂ ಕೂಡಿ ಬಂದರೆ ಇನ್ನೇನು ಬೇಕು? ರಾಘವರು ಕೆಲವು ವರುಷಗಳಲ್ಲೆ ಪ್ರಸಿದ್ಧ ವಕೀಲರೆನಿಸಿಕೊಂಡರು. ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು.

ನಾಟಕದಲ್ಲಿ ಆಸಕ್ತಿ

ಮೊದಲಿನಿಂದಲೂ ರಾಘವರಿಗೆ ನಾಟಕದಲ್ಲಿ ತುಂಬಾ ಒಲವು. ವಿದ್ಯಾರ್ಥಿಯಾಗಿದ್ದಾಗಲೆ ‘ಡಾಕ್ಟರ್ ಅಂಡ್ ಅಪಾತಕಾರಿ’ ಎಂಬ ಇಂಗ್ಲಿಷ್ ನಾಟಕದಲ್ಲಿ ಅಭಿನಯಿಸಿದ್ದರು. ಮದರಾಸಿನಲ್ಲಿ ನಾಟಕ ನೋಡುವ ಅಭ್ಯಾಸವೂ ಬೆಳೆದಿತ್ತು. ಆಗ್ಗೆ ಹೆಸರಾದುದು ‘ಬಾಂಬೆ ಪಾರ್ಸಿ ಥ್ರಿಯಾಟ್ರಿಕಲ್ ಕಂಪನಿ’. ಈ ಮಂಡಲಿಯ ಅನೇಕ ನಾಟಕಗಳನ್ನು ರಾಘವರು ನೋಡಿದರು. ಆ ಕಂಪನಿಯ ಪ್ರಸಿದ್ಧ ನಟರಾದ ದಾದಾಭಾಯಿ ಮಿಸ್ತ್ರಿ ಅವರ ಉನ್ನತ ಮಟ್ಟದ ಅಭಿನಯ ರಾಘವರ ಮೇಲೆ ಹೆಚ್ಚು ಪ್ರಭಾವ ಬೀರಿತು.

ತೆಲುಗಿನವರಾದರೂ, ರಾಘವರು ಕನ್ನಡ ನಾಟಕರಂಗಕ್ಕೆ ಹೆಜ್ಜೆ ಇರಿಸಿದರು. ಬಳ್ಳಾರಿಯಲ್ಲಿ ಆಗ್ಗೆ ನಾಟಕ ಕಲೆಗೆ ಪ್ರೋತ್ಸಾಹಪೂರ್ಣ ವಾತಾವರಣವಿತ್ತು. ಇದು ರಾಘವರಿಗೆ ಉತ್ತೇಜನ ನೀಡಿತು. ಅವರಲ್ಲಿ ಅಡಗಿದ್ದಕಲೆಯ ಅಭಿರುಚಿ ಬೆಳೆಯಲು ಪೋಷಕವಾಯಿತು.

ರಾಘವರ ಸೋದರಮಾವ ಧರ್ಮಾವರಂ ಕೃಷ್ಣಮಾಚಾರ್ಯರು “ಸರಸ ವಿನೋದಿನಿ ಸಭಾ” ಎಂಬ ನಾಟಕ ಕಂಪನಿ ನಡೆಸುತ್ತಿದ್ದರು. ಅದಲ್ಲದೆ ಕೋಲಾಚಲಂ ಶ್ರೀನಿವಾಸರಾಯರೆಂಬುವರು “ಸುಮನೋರಮ ಸಭಾ” ಎಂಬ ನಾಟಕ ಮಂಡಳಿ ಸ್ಥಾಪಿಸಿದ್ದರು. ೧೮೮೪ ರಲ್ಲಿ ಬಳ್ಳಾರಿಗೆ ಬಂದ ಮೈಸೂರಿನ ಮಹಾರಾಜ ಕಂಪನಿ, ರಂಗಾಚಾರ್ಯ ಕಂಪನಿಗಳ ನಾಟಕಗಳು ಜನತೆಯಲ್ಲಿ ನಾಟಕದ ಒಲವನ್ನು ಇಮ್ಮಡಿಗೊಳಿಸಿದವು. ಬಳ್ಳಾರಿಯ ಹಳ್ಳಿಹಳ್ಳಿಯಲ್ಲೂ ನಾಟಕದ ಅಭಿಮಾನ, ಬಿಡುವಿನ ದಿನಗಳಲ್ಲ ನಾಟಕ ಪ್ರದರ್ಶನ. ಹಣದ ಚಲಾವಣೆ ಕಡಮೆ ಆಗ. ಜನರು ದವಸಧಾನ್ಯಗಳನ್ನೆ ಕೊಟ್ಟು ನಾಟಕ ನೋಡುತ್ತಿದ್ದರು!

ರಾಘವರು, ಸೋದರಮಾವಂದಿರ ಕಂಪನಿಗೆ ಸೇರಿ, ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಅದೂ ಸ್ವಲ್ಪ ಕಾಲ ಮಾತ್ರ. ಕಂಪನಿಯ ವಾತಾವರಣ ಅವರಿಗೆ ಹಿಡಿಸಲಿಲ್ಲ. ನಟರಿಗೆ ಸ್ವಾತಂತ್ರ್ಯವೇ ಇರದಿದ್ದರೆ, ನಟನ ಕಲೆ ಹೇಗೆ ಬೆಳೆದೀತು ಅನ್ನಿಸಿತು ರಾಘವರಿಗೆ, ಅವರ ಮಾವನಿಗೂ ಇದು ತಿಳಿಯಿತು. ಅಳಿಯನಿಗೆ ಅವರು ಅಡ್ಡಿ ಮಾಡಲಿಲ್ಲ. ರಾಘವರು ಸಂಸ್ಥೆ ಬಿಟ್ಟರೂ, ಪ್ರೀತಿಯೇನೂ ಕಡಿಮೆ ಆಗಲಿಲ್ಲ. ವಕೀಲರೂ ಆಗಿ, ನಾಟಕದ ಅಭಿರುಚಿಯನ್ನು ಬೆಳಸಿಕೊಂಡ ರಾಘವರೆಂದರೆ ಕೃಷ್ಣಮಾಚಾಯ್ರಿಗೆ ಅಭಿಮಾನ.

ಹೊಸದಾರಿ ತುಳಿಯಬೇಕು

ಆಗ್ಗೆ ಪೌರಾಣಿಕ ನಾಟಕವೆ ಹೆಚ್ಚು. ರಾಮಾಯಣ ಮಹಾಭಾರತಗಳಿಂದ ತೆಗೆದುಕೊಂಡ ಕಥೆಗಳು, ನಳದಮಯಂತಿ, ಪ್ರಹ್ಲಾದ, ಶಕುಂತಳೆ ಮೊದಲಾದವರ ಕಥೆಗಳು ಇವೇ ನಾಟಕಗಳ ವಸ್ತು. ಇವು ಸವಕಲು ನಾಣ್ಯ ಆಗುತ್ತದೆನ್ನಿಸಿತು ರಾಘವರಿಗೆ. ಅದೇ ವಸಂತ ಋತು, ಆಲಾಪನೆ, ಸೀಸಪದ್ಯ, ಉದ್ದುದ್ದ ಮಾತು! ಬದಲಾಗುತ್ತಿರುವ ಸಮಾಜಕ್ಕೆ ಇದರಿಂದೇನು ಪ್ರಯೋಜನ? ಸಮಾಜದ ಕುಂದುಕೊರತೆ, ಮೂಢಪದ್ಧತಿ, ಇವನ್ನು ಟೀಕಿಸಿ ರಾಷ್ಟ್ರ ಸ್ವಾತಂತ್ರ್ಯ ಪ್ರೇಮವನ್ನು ನಾಟಕದಲ್ಲಿ ಮೂಡಿಸಿದರೆ ಉತ್ತಮ ಅನ್ನಿಸಿತು ರಾಘವರಿಗೆ. ಹಿಡಿದದ್ದು ಮಾಡುವುದೆ ರಾಘವರ ಸ್ವಭಾವ. ಅವರಿಗೆ ಇಂಗ್ಲಿಷ್ ಭಾಷೆ, ಸಾಹಿತ್ಯಗಳಲ್ಲಿ ಪರಿಣತಿ ಇತ್ತು. ಇಂಗ್ಲಿಷ್ ನಾಟಕಗಳು ಅವರ ಮೇಲೆ ತುಂಬ ಪ್ರಭಾವ ಬೀರಿದ್ದುವು. ರಂಗಭೂಮಿಗೂ ಹೊಸ ಚೇತನ ಬೇಕಿತ್ತು. ವಟ್ಟಂ ಸೋದರರು ಎನ್ನುವವರು ರಾಘವರ ಮಿತ್ರರು. ಇವರ ಜೊತೆ ಇತರ ಗೆಳೆಯರನ್ನು ಸೇರಿಸಿಕೊಂಡು ಬಳ್ಳಾರಿಯಲ್ಲೇ “ಪೇಕ್ಸಪಿಯರ್ ಕ್ಲಬ್” ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು. (ಷೇಕ್ಸ್ಪಿಯರ್ ಎನ್ನುವಾತ ಜಗತ್ತಿನ ಅತ್ಯಂತ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬ. ಇಂಗ್ಲಿಷ್ ಭಾಷೆಯಲ್ಲಿ ಬರೆದ. ಹುಟ್ಟಿದ್ದು ೧೫೬೪, ತೀರಿಕೊಂಡದ್ದು ೧೬೧೬)

ಸಂಸ್ಥೆಯ ಮುಖ್ಯಧ್ಯೇಯ ಸಮಾಜ ಸುಧಾರಣೆ. ಅದರ ಅಂಶಗಳನ್ನು ನಿರೂಪಿಸಿ, ಸಾಮಾನ್ಯರ ಮನಸ್ಸಿಗೆ ಪ್ರಭಾವ ಬೀರುವ ನಾಟಕಗಳನ್ನು ಅಭಿನಯಿಸಬೇಕು. ಅದಕ್ಕೆ ಹೊಂದುವ ನಾಟಕ ಬರೆಯುವವರನ್ನು ರಾಘವರು ಹುಡುಕತೊಡಗಿದರು. ಇದೇ ಸಮಯಕ್ಕೆ, ಸರಸವಿನೋದಿನಿ ಸಭೆಯ ಷರತ್ತುಗಳಿಗೆ ಬೇಸತ್ತ ಕೆಲವು ನಟರು ಕಂಪನಿ ತೊರೆದು ಬಂದರು. ಪದ್ಮನಾಭ ವೆಂಕೋಬಾಚಾರ್ಯರು ಇವರ ಮುಂದಾಳು. ತಾವೇ ‘ಲೋಕದರ್ಪಣ’ ಎಂಬ ನಾಟಕ ಬರೆದರು. ಮನೋರಮ ಸಭಾ ಎಂಬ ಕಂಪನಿ ಕಟ್ಟಿ ನಾಟಕ ಪ್ರದರ್ಶಿಸಿದರು. ಆದರೆ, ಸರಸ ವಿನೋದಿನಿ ಸಭೆ ಎದುರು ಸ್ಪರ್ಧಿಸಲಾಗಲಿಲ್ಲ. ಕೋಲಾಚಲಂ ಶ್ರೀನಿವಾಸರಾಯರ ನೆರವಿನಿಂದ, ಸುಮನೋರಮ ಸಭೆ ಅಂತ ಹೊಸ ಹೆಸರಿತ್ತು ನಾಟಕ ಅಭಿನಯಿಸತೊಡಗಿದರು. ರಾಯರೇ ಸಂಸ್ಥೆಯ ಅಧ್ಯಕ್ಷರು, ನಾಟಕಕಾರರು ಕೂಡ. ಕ್ರಮಬದ್ಧ ಅಭ್ಯಾಸ, ಇದರಿಂದಾಗಿ ನಾಟಕಗಳು ಉತ್ತಮಗೊಂಡವು. ಸರಸ ವಿನೋದಿನಿ ಸಭೆಗೇ ಸವಾಲು ಹಾಕಿದವು!

ನೀವಲ್ಲ ಬಿಡ್ರಿ

ಶ್ರೀನಿವಾಸರಾಯರ ನಾಟಕ, ‘ಸುನಂದಿನೀ ಪರಿಣಯ’ದಲ್ಲಿ ಸುಮತಿ ಎಂಬ ಮುದುಕನ ಪಾತ್ರ ರಾಘವರದು. ತರುಣರಾದರೂ ಆ ಪಾತ್ರವನ್ನು ಎಷ್ಟು ಮನೋಜ್ಞವಾಗಿ ಅಭಿನಯಿಸಿದರೆನ್ನಲು ನಡೆದ ಈ ಒಂದು ಪ್ರಸಂಗ ಸಾಷಿ.

ನಾಟಕದಲ್ಲಿನ ಸುಮತಿಯ ಪಾತ್ರ ಮನಮಿಡಿಯುವಂತಿತ್ತು. ನಾಟಕ ನಡೆದ ಮರುದಿನ ಎಂದಿನಂತೆ ರಾಘವರು ವಕೀಲಿ ಕಚೇರಿಯಲ್ಲಿದ್ದರು. ರಾಯದುರ್ಗದಿಂದ ಒಬ್ಬರು ತಮ್ಮ ಕೇಸು ನಡೆಸಲು ರಾಘವರಲ್ಲಿಗೆ ಬಂದರು. “ರಾಘವಾಚಾರ್ಯರಿದ್ದಾರೆಯೆ?” ಎಂದರು. ರಾಘವರು ಕಕ್ಷಿದಾರನನ್ನು ದಿಟ್ಟಿಸಿ, “ಬನ್ನಿ, ನಾನೇ ರಾಘವಾಚಾರ್ಯ” ಅಂದರು. “ನೀವಲ್ಲ ಬಿಡ್ರೀ!” ಅನ್ನಬೇಕೆ ಆತ? ಅಚ್ಚರಿಗೊಂಡ ರಾಘವರು “ಸ್ವಾಮಿ, ನಾನೇ ರಾಘವಚಾರಿ. ಮೊದಲೇನಾದರೂ ನೀವು ಅವರನ್ನ ನೋಡಿದ್ದೀರೇನು?” ಅಂತ ಕೇಳಿದರು. ಕಕ್ಷಿದಾರ ಬೇಸತ್ತು, “ನಿನ್ನೆ ನಾಟಕ ನೋಡಿದ್ದೇನೆ, ಏನು ಮಾತಾಡ್ತೀರ್ರಿ ನೀವು? ಮುದುಕನ ವೇಷ, ಅಬಿನಯ, ಮರೆಯೋಕಾಗುತ್ಯೆ? ಹುಡುಗನ್ನಲ್ರೀ ನಾನು ಕಾಣೋಕೆ ಬಂದದ್ದು, ಮುದುಕನ್ನ” ಎಂದರು.

ರಾಘವರು ಘೊಳ್ಳೆಂದು ನಕ್ಕರು. “ಸ್ವಾಮಿ ನಾನೇ ಆ ಪಾರ್ಟು ಮಾಡಿದೋನು. ಹೇಗೊ ಅಂತೂ ಸುಮತಿ ನಿಮ್ಮ ಮನಸ್ಸನ್ನು ತುಂಬಿದ್ನಲ್ಲ, ಅಷ್ಟೆ ಸಾಕು ಬಿಡಿ” ಅಂದರು. “ಸುಳ್ಳು ಅಷ್ಟೊಂದು ಹೇಳಬಾರದಯ್ಯ. ಮೀಸೆ ಹುಟ್ಟೊ ವಯಸ್ಸು, ಬಿಳೀತಲೆ ಪಾರ್ಟಿ?” ಅಂದ ಕಕ್ಷಿದಾರ!

ಆ ವೇಳೆಗೆ ರಾಘವರ ಮಿತ್ರರೊಬ್ಬರು ಬಂದರು. ರಾಘವರು ಅವರತ್ತ ತಿರುಗಿ, “ನೋಡಯ್ಯ ತಮಾಷೇನ. ಸುಮತಿ ಪಾತ್ರ ನಾನೇ ಮಾಡಿದ್ದೆ ಅಂದರೆ, ಈತ ಒಪ್ಪತಾ ಇಲ್ಲ” ಎಂದಾಗ, ಆ ಸ್ನೇಹಿತ ಅಂದ : “ನೀನೊಳ್ಳೆ ಮಾತನಾಡ್ತೀಯಯ್ಯ. ನಂಬೊ ಮಾತೆ ಆತ ಹೇಳಿದ್ದು.” ಕೂಡಲೆ ಕಕ್ಷಿದಾರ “ನೀವೇ ಹೇಳಿ ಸ್ವಾಮಿ. ಅನುಭವಸ್ಥ ಲಾಯರನ್ನ ನೋಡಲು ಬಂದರೆ, ಈ ಹುಡುಗ ನಾನೆ ರಾಘವಚಾರಿ ಅಂತಾನಲ್ಲ, ನ್ಯಾಯವೆ?” ಅಂದ. ಸ್ನೇಹಿತ, “ಒಳ್ಳೆ ಗ್ರಹಚಾರ ಕಣೋ ರಾಘವಾಚಾರಿ! ಇಲ್ಲ ಬಣ್ಣವಾದರೂ ಬಳಕೊ, ಅಥವಾ ಕರಿಕಟನ್ನಾದ್ರೂ ಹಾಕ್ಕೊ. ಎರಡರಲ್ಲೂ ಇರ್ತೀನೀಂತ ಪ್ರಾಣ ತಿನ್ನತೀಯಲ್ಲೊ” ಅಂದ. ಕಕ್ಷಿದಾರ ಏನೂ ತೊಚದೆ ಹೊರಟೇ ಬಿಟ್ಟ. ರಾಘವರ ಅಭಿನಯ ಅಂದರೆ ಹೀಗೆ.

ಚಿಕ್ಕಂದಿನಿಂದ ರಾಘವರಿಗೆ ಒಳ್ಳೆಯ ಜ್ಞಾಪಕ ಶಕ್ತಿ, ಕವಿತಾ ಶಕ್ತಿ ಕೂಡ ಬೆಳೆದಿತ್ತು. ಯಾವುದೇ ಸಂಗತಿ ಕೇಳಲಿ, ನೋಡಲಿ, ಅದಕ್ಕೆ ತಕ್ಕ ಆಶುಕವಿತೆ ರಚಿಸುತ್ತಿದ್ದರು! ಮದರಾಸಿನಿಂದ, ತಂದೆಗೆ ಬರೆದ ಅನೇಕ ಪತ್ರಗಳು ಕಾವ್ಯವೇ ಆಗಿರುತ್ತಿದ್ದವು! ಆದರೆ, ಮಗನಿಗೆ ತಂದೆ ಈ ವಿಚಾರದಲ್ಲಿ ಪ್ರೋತ್ಸ್ಸಾಹಿಸಲಿಲ್ಲ.

ಅಭಿನಯ ಚಾತುರ್ಯ

ರಾಘವರ ಅಭಿನಯ ಚಾತುರ್ಯಕ್ಕೆ ಇನ್ನೊಂದು ಘಟನೆ ಹೆಸರಿಸುವಂಥದು. ‘ಭಾರತ ಯುದ್ಧ’ ನಾಟಕ ಪ್ರದರ್ಶನ. ನಾಟಕ ಆರಂಭ ಆಯಿತು. ಧರ್ಮರಾಜನ ಒಂದು ದೃಶ್ಯ ಮುಗಿದು, ಮತ್ತೊಂದು ದೃಶ್ಯ ಶುರು ಆಗಿತ್ತು. ನಾಲ್ಕನೆ ದೃಶ್ಯದಲ್ಲಿ ಮತ್ತೆ ಧರ್ಮರಾಯ ಬರಬೇಕು. ಅಷ್ಟರಲ್ಲಿ ಆ ಪಾತ್ರಧಾರಿಯ ಮಗಳಿಗೆ ಕಾಲರ ಅಂತ ಸುದ್ದಿ ಬಂತು. ತಕ್ಷಣವೇ ಆತ ತನ್ನ ವೇಷ ಕಳಚಿ ಮನೆಗೋಡಿದ! ನಾಟಕದ ಗತಿ? ಪ್ರೇಕ್ಷಕರ ಗಲಾಟೆಯೋ ಅಸಾಧ್ಯವಾಗಿತ್ತು! ಶ್ರೀನಿವಾಸರಾಯರಿಗೆ ರಾಘವರ ನೆನಪಾಯಿತು. ಓಡಿಬಂದರು. ಯಾರೊಂದಿಗೊ ಮಾತಾಡುತ್ತಿದ್ದರು ರಾಘವ. ಧಾವಿಸಿದ ರಾಯರು, “ಬಾರಯ್ಯ ಧರ್ಮರಾಯನ ಪಾತ್ರ ಮಾಡಿ ನಾಟಕದ ಮಾನ ಉಳಿಸು” ಎಂದು ಕೋರಿದರು. ತನಗೆ ಆ ಪಾತ್ರ, ಸಂಭಾಷಣೆ ಗೊತ್ತಿಲ್ಲ ಅಂತ ರಾಘವರಿಗೆ ಅನಿಸಲೇ ಇಲ್ಲ! ಕೂಡಲೆ ರಂಗಮಂದಿರಕ್ಕೆ ಬಂದರು. “ರಾಯರೆ, ಬಣ್ಣ ಬಳೀತೀರಂತೆ. ಪರದೆ ಹಿಂದೆ ಕೂತು, ತಪ್ಪೊ ಮಾತನ್ನ ತಿದ್ದುತಾನಲ್ಲ, ಅವನನ್ನು ಕರೆಯಿರಿ” ಎಂದರು. ಆತ ಬಂದ. “ಧರ್ಮರಾಯನ ಮಾತುಗಳನ್ನು ಓದಯ್ಯ” ಎಂದರು ರಾಘವ. ಆತ ಓದುತ್ತಿದ್ದಂತೆ ವೇಷಭೂಷಣ ಧರಿಸಿದರು. ಹೊರಗಡೆ ಗಲಭೆಯೊ ಗಲಭೆ! ರಾಘವರು ಗಾಂಭೀರ್ಯದಿಂದ ರಂಗ ಪ್ರವೇಶಿಸಿದರು. ಅಭಿನಯ ಯಶಸ್ವಿಯಾಯಿತು. ಶ್ರೀನಿವಾಸರಾಯರ ಸಂತೋಷಕ್ಕೆ ಪಾರವೇ ಇಲ್ಲ! “ನಾಟಕಕ್ಕೆ ಗೌರವವಿತ್ತೆ” ಎಂದು ಅವರನ್ನು ಹೊಗಳಿದರು.

ಇಲ್ಲಿ ನಡೆದದ್ದಿಷ್ಟೆ, ಧರ್ಮರಾಯನ ಪಾತ್ರದ ಸಂಭಾಷಣೆಯನ್ನೆಲ್ಲ ಆಗ ಬಾಯಿಪಾಠ ಮಾಡಲು ಸಾಧ್ಯವಿರಲಿಲ್ಲ. ಆದರೆ ನಾಟಕದ ಇತರ ನಟರು ತಮ್ಮ ತಮ್ಮ ಮಾತುಗಳನ್ನು ಬಾಯಿಪಾಠ ಮಾಡಿದ್ದವರು. ‘ಧರ್ಮರಾಯ ಈ ಮಾತು ಹೇಳಿ ನಿಲ್ಲಿಸಿದಾಗ ನಾನು ಪ್ರಾರಂಭಿಸಬೇಕು’ ಎಂದು ಪ್ರತಿ ನಟನೂ ತನ್ನ ಮಾತಿಗೆ ಮೊದಲು ಧರ್ಮರಾಯನ ಪಾತ್ರ ವಹಿಸಿದವನು ಯಾವ ಶಬ್ದ ಹೇಗೆ ನಿಲ್ಲಿಸುತ್ತಾನೆ ಎಂದು ನೆನಪಿಟ್ಟುಕೊಳ್ಳುತ್ತಿದ್ದ. ಕೊನೆಯ ಮಾತುಗಳನ್ನು ಮಾತ್ರ ರಾಘವರು ನೆನಪಿನಲ್ಲಿಟ್ಟುಕೊಂಡರು. ಇದರಿಂದ ಬೇರೆಯವರಿಗೂ ತೊಂದರೆ ಆಗಲಿಲ್ಲ. ಉಳಿದ ಮಾತು, ಸಂದರ್ಭಕ್ಕೆ ತಕ್ಕಂತೆ, ತಾವೇ ಅಲ್ಲಿಯೇ ಸೃಷ್ಟಿಸಿ ಆಡುತ್ತಾ ಹೋದರು. ಹಾಡೊ? ಸಂಗೀತ ವಾದ್ಯಬೇಡ ಅಂದರು. ತಾವೇ ಭಾವಪೂರ್ಣವಾಗಿ ಹಾಡಿದರು.

ಇದೇ ರೀತಿ ಹೈದರಾಬಾದಿನಲ್ಲೊಮ್ಮೆ “ಸರಸ ವಿನೋಧಿಸಿ ಸಭೆ”ಯವರು “ಚಿತ್ರನಳೀಯ” ನಾಟಕ ಅಭಿನಯಿಸಬೇಕಿತ್ತು. ವೀರನಾಯಕನ ಪಾತ್ರವಹಿಸಲು ರಾಘವರಿಗೆ ಕರೆ ಬಂದಿತು. ಬೇರೆಯವರಿಗೆ ಆಶ್ಚರ್ಯ, ತಿರಸ್ಕಾರ ತೋರಿದ ಸಂಸ್ಥೆ ಪುರಸ್ಕರಿಸುತ್ತಾ ಇದೆಯಲ್ಲ ಅಂತ. ರಾಘವರು ಸೋದರಮಾವನ ಮಾತು ಮೀರಲಿಲ್ಲ. ನೇರ ಹೈದರಾಬಾದಿಗೆ ಹೋದರು.

ಅವರು ಅಭಿನಯಿಸಬೇಕಾಗಿದ್ದ ವೀರನಾಯಕನ ಪಾತ್ರ ಚಿಕ್ಕದು. ನಳ, ದಮಯಂತಿಯ ಕಥೆ ನಾಟಕದ ವಸ್ತು. ನಳ, ದಮಯಂತಿಯನ್ನು ಕಾಡಿನಲ್ಲಿ ಬಿಟ್ಟು ಹೊರಟು ಹೋಗುತ್ತಾನೆ. ಕಾಡಿನಲ್ಲಿ ಅಲೆಯುವಾಗ ದಮಯಂತಿಯ ಮೇಲೆ ಒಂದು ಹೆಬ್ಬಾವು ಎರಗುತ್ತದೆ. ವೀರ ನಾಯಕನ ಪಾತ್ರ ಎಂದರೆ ದಮಯಂತಿಯನ್ನು ಹೆಬ್ಬಾವಿನಿಂದ ಬಿಡಿಸುವುದು. ಅನಂತರ ಅವಳನ್ನು ಮೋಹಿಸಿ ಶಾಪಕ್ಕೆ ತುತ್ತಾಗುವುದು. ದುರಂತ ಪಾತ್ರ. ರಾಘವರು ಇದಕ್ಕೆ ಹೊಸ ಕಳೆಯನ್ನೆ ನೀಡಿದರು. ವೀರನಿಗೆ ತಕ್ಕ ಘನತೆ, ಸೌಜನ್ಯವನ್ನು ಪಾತ್ರದಲ್ಲಿ ಮೈ ದುಂಬಿಸಿದರು. ಪ್ರೇಕ್ಷಕರು “ಭಲೆ!” ಎನ್ನುವಂತಾಯಿತು. ಮತ್ತೊಮ್ಮೆ ಷೇಕ್ಸ್ಪಿಯರ್ ಕ್ಲಬ್ಬಲ್ಲಿ ‘ಒಥೆಲೊ’ ನಾಟಕ. ಇಂಗ್ಲೆಂಡಿನವನಾದ ಕ್ಯಾಪ್ಟನ್ ಮಾರ್ಷಲ್ ಅಧ್ಯಕ್ಷತೆ. ಆತ ಪ್ರಸಿದ್ಧ ರಂಗನಟ ಕೂಡ. ರಾಘವರು ಒಥೆಲೊ ಪಾತ್ರವನ್ನು ಅಭಿನಯಿಸಿ ಪಾಶ್ಚಾತ್ಯರಿಗೆ ಭಾರತೀಯರೇನೂ ಕಡಿಮೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆದರೂ ಬಳ್ಳಾರಿ ಜನತೆ ರಾಘವರ ಉನ್ನತ ಮಟ್ಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿಲ್ಲ. ಪೌರಾಣಿಕ ನಾಟಕವೇ ಬೇಕು! ಹೋಗಲಿ, ಚಾರಿತ್ರಿಕ ನಾಟಕವೊ ಎನ್ನಿಸಿತು ರಾಘವರಿಗೆ. ಶ್ರೀನಿವಾಸರಾಯರ ಕೈಯಲ್ಲಿ ‘ಚಾಂದ್ಬೀಬಿ’ ಬರೆಸಿದರು. ರಾಘವರದ್ದೆ ಪ್ರಮುಖ ಪಾತ್ರ. ಒಮ್ಮೆ ಈ ನಾಟಕ ವೀಕ್ಷಿಸಲು ಬಾಲ ಗಂಗಾಧರ ತಿಲಕ್, ದೇಶಪಾಂಡೆ ಗಂಗಾಧರರಾಯರಂಥ ಪ್ರಸಿದ್ಧ ವ್ಯಕ್ತಿಗಳು ಬಂದದ್ದುಂಟು. ರಾಘವರ ಆಸ್ಮನ್ಬೇಗ್ ಪಾತ್ರವನ್ನು ತಿಲಕ್ ಮೆಚ್ಚಿ ಶಹಬಾಸ್ಗಿರಿ ಕೊಟ್ಟರು! ಜನ ಬರಬೇಡವೆ? ನಾಟಕ ಅಭಿನಯಿಸಿದ ಹೊಸತರಲ್ಲಿ ಕೇವಲ ಹದಿಮೂರುವರೆ ರೂಪಾಯಿ ಸಂಗ್ರಹ! ಕಂಪನಿ ಮುಖ್ಯಸ್ಥ ಟಿ. ಸುಬ್ಬರಾಯರು ಓಡಿಹೋಗಿ, ನಾಟಕಕ್ಕೆ ಹಣದ ನೆರವಿತ್ತ ಮಾರವಾಡಿಗಳನ್ನು ಎಳೆದು ತಂದರು. ನಾಟಕದ ಪಾಡಿಗೆ ನಾಟಕ. ವ್ಯವಹಾರದ ಮಾತೇ ಮಾರವಾಡಿಗಳದ್ದು, ಅದೂ ಸ್ಟೇಜಿಗೆ ಬೆನ್ನು ಮಾಡಿಕೊಂಡು! ರಾಘವರು ಇದಕ್ಕೆಲ್ಲ ಗಮನ ವೀಯಲಿಲ್ಲ. ನಟನಿಗೆ ನಾನೇ ಪ್ರೇಕ್ಷಕ ಎಂಬ ಮನೋಭಾವ ಇರಬೇಕು. ಪಾತ್ರದಲ್ಲಿ ತಲ್ಲೀನತೆ ಬೇಕು. ಇದು ಅವರ ಅಭಿಪ್ರಾಯ.

‘ಪ್ರಹ್ಲಾದ’ ನಾಟಕದಲ್ಲಿ ಹಿರಣ್ಯಕಶಿಪು

ಎ.ಡಿ.ಎ

೧೯೦೯ ರಲ್ಲಿ ‘ಅಮೆಚೂರ್ ಡ್ರಮ್ಯಾಟಿಕ್ ಅಸೋಸಿಯೇಷನ್’ ಎಂಬ ಸಂಘವನ್ನು ರಾಘವರು ಸ್ಥಾಪಿಸಿದರು. (ಇದು ಎ.ಡಿ.ಎ. ಎಂದು ಪ್ರಸಿದ್ಧವಾಯಿತು). ಹಳೆಯ ಮೈಸೂರು ಪ್ರಾಂತ, ಬೆಂಗಳೂರಿನ ಕಲಾಭಿಮಾನಿ ಅಧ್ಯಾಪಕರು, ವಕೀಲರು, ವರ್ತಕರು ಎಲ್ಲ ಸೇರಿ ಸ್ಥಾಪಿಸಿದ ಈ ಸಂಸ್ಥೆ, ನಾಟಕ ಮಂಡಲಿಗಳಲ್ಲಿಯೆ ಹೆಸರಾದದ್ದು. ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ರತ್ನಾವಳಿ ಕಂಪನಿ, ಅರಮನೆಯ ಚಾಮರಾಜೇಂದ್ರ ನಾಟಕ ಸಭೆಗಳ ಸಮಕ್ಕೆ ನಿಂತಿತ್ತು ಈ ಸಂಸ್ಥೆ! ಆಧುನಿಕ ಕನ್ನಡ ನಾಟಕಗಳ ಪಿತಾಮಹರೆನಿಸಿಕೊಂಡ ಕೈಲಾಸಂರವರ “ಟೊಳ್ಳುಗಟ್ಟಿ” ನಾಟಕವನ್ನು ೧೯೧೯ ರಲ್ಲಿ ಈ ಸಂಘವೇ ಪ್ರದರ್ಶಿಸಿದ್ದು. ಆಂಧ್ರ, ಮೈಸೂರುಗಳಲ್ಲೆಲ್ಲ ಸಂಸ್ಥೆ ಪ್ರವಾಸ ಮಾಡಿತು. ಜಯಭೇರಿ ಹೊಡೆಯಿತು.

ಎ.ಡಿ.ಎ. ಅಂದರೆ ರಾಘವರೆಂದೆ ಅರ್ಥ. ಆಗ್ಗೆ ಕನ್ನಡ ತೆಲುಗು ರಂಗಭೂಮಿಗಳಲ್ಲಿ ರಾಘವರ ಹೆಸರು ಜನಜನಿತ. ಅವರ ನಿರ್ದೇಶನದ ಮೇರೆಗೆ ಮಂಡಳಿಯ ಒಂದು ಗುಂಪು ಉತ್ತರ ಭಾರತ ಪ್ರವಾಸ ಕೈಗೊಂಡಿತು. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ನಾಟಕ ಆಡುತ್ತ ಪರ್ಯಟನ ಮಾಡಿದ ಮೊದಲ ಸಂಸ್ಥೆ ರಾಘವರದ್ದೆ! ಮುಂಬಯಿ, ಕಲ್ಕತ್ತ, ಸಿಮ್ಲಾಗಳಲ್ಲಿ ಕನ್ನಡದ ಕಲೆ, ಪ್ರತಿಭೆ, ಸಂಸ್ಕೃತಿ, ಹಿರಿಮೆಗಳನ್ನು ಮಂಡಲಿ ಬೆಳಗಿಸಿತು. ಬಂಗಳಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಕಲಾವಿದರ ಬಗ್ಗೆ ಬಂದ ಪ್ರಶಂಸೆ ಉಲ್ಲೇಖಾರ್ಹ ಆದದ್ದು.

‘ದಿ ಸ್ಟೇಟ್ಸ್ಮನ್’ ಎಂಬ ಪ್ರಸಿದ್ಧ ಪತ್ರಿಕೆ ಹೀಗೆಂದಿತು: “ಬೆಂಗಳೂರು ಎ.ಡಿ.ಎ. ಕಲಾವಿದರು, ‘ಕಬೀರ್’ ಎಂಬ ಕನ್ನಡ ನಾಟಕದ ಹಿಂದಿ ರೂಪಾಂತರವನ್ನು ಆಲ್ಫ್ರೆಡ್ ಥಿಯೇಟರಿನಲ್ಲಿ ಅಭಿನಯಿಸಿದರು. ಬಂಗಾಳಿ ನಾಟಕಪ್ರಿಯರಿಗೆ ತುಂಬಾ ಮೆಚ್ಚಿಗೆ ಆಯಿತು. ಕಲಾವಿದರ ಬಹುಮುಖ ಪ್ರತಿಭೆ ಅಲ್ಲಿ ಕಾಣಬಹುದಿತ್ತು. ಕಿಕ್ಕಿರಿದ ಜನತೆಯ ಕೋರಿಕೆಯಂತೆ, ಮತ್ತೊಮ್ಮೆ ಅದನ್ನೆ ಅಭಿನಯಿಸಲಾಯಿತು.”

‘ಲಿಬರ್ಟಿ’ ಎಂಬ ಪತ್ರಿಕೆ ಬರೆದದ್ದು: “ರಾಘವರ ‘ಒಥಲೊ’ ನಾಟಕದ ಪಾತ್ರ ಮರೆಯಲಾಗದ್ದು! ತಪ್ಪಿರದ ಉಚ್ಚಾರಣೆ! ಭಾವಪೂರಿತ ಅಭಿನಯ! ‘ಕಬೀರ’ನ ಜತೆ, ತೆಲುಗು ನಾಟಕ ‘ರಾಮದಾಸ್’, ಭಾಷೆ ಬೇರೆ  ಆದರೇನಂತೆ? ರಸ ಪೋಷಣೆ, ಅನುಭವಗಳೆ ನಾಟಕದ ಜೀವಾಳ. ಅದಕ್ಕೆ ಅಡ್ಡಿ ಆಗಲಿಲ್ಲ. ರಾಘವಾಚಾರ್ಯರು ನಟನ ಕಲೆಯಲ್ಲಿ ಯಶಸ್ವಿಯೂ ಆಗಿದ್ದಾರೆ.” ಕಲ್ಕತ್ತೆಯ ‘ಅಮೃತ ಬಜಾರ್’ ಪತ್ರಿಕೆಯು ಹೀಗೆಂದಿತು : “ಭಾರತೀಯರ ರಂಗಕಲೆಯ ಶ್ರೀಮಂತಿಕೆಗೆ ಇದು ಸಾಕ್ಷಿ”

ಸಂಸ್ಥೆಯ ಮಾಸ್ತಿಯವರ ‘ತಾಳಿಕೋಟೆ’, ‘ಶಾಂತಾ’, ಸಿ.ಕೆ. ವೆಂಕಟರಾಮಯ್ಯನವರ ‘ಮಂಡೋದರಿ’, ‘ನಚಿಕೇತ’, ಪಂಡಿತ ತಾರಾನಾಥರ ‘ದೀನಬಂಧು ಕಬೀರ್’, ಅನಕೃ, ಕೈಲಾಸಂ, ಬೆಳ್ಳಾವೆ ನರಹರಿಶಾಸ್ತ್ರಿ ಮುಂತಾದವರ ನಾಟಕಗಳನ್ನು ಪ್ರದರ್ಶಿಸಿತು.

ರಂಗಭೂಮಿಗಾಗಿ ಪತ್ರಿಕೆಗಳು

ರಾಘವರ ಮಹತ್ಸಾಧನೆ, ‘ರಂಗಭೂಮಿ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ್ದು. ಡಿ.ಕೆ. ಭಾರಧ್ವಾಜರೆ ಇದರ ಸಂಪಾದಕರು. ಇಂಗ್ಲಿಷಿನಲ್ಲಿ ‘ಥಿಯೇಟರ್’ ಪತ್ರಿಕೆ. ವಿ. ಭಾಸ್ಕರನ್ ಇದರ ಸಂಪಾದಕರು. ಈ ಪತ್ರಿಕೆಗಳು ಸಂಪೂರ್ಣವಾಗಿ ನಾಟಕ ಕಲೆಗೇ ಮೀಸಲು. ಅಕ್ಷರಸ್ಥರ ಸಂಖ್ಯೆ, ಪುಸ್ತಕಗಳ ಸಂಖ್ಯೆ ಬೆಳೆದಿರುವ ಈ ದಿನಗಳಲ್ಲಿ ಸಹ ಇಂತಹ ಪತ್ರಿಕೆಯನ್ನು ನಡೆಸುವುದೆಂದರೆ ತುಂಬಾ ಸಾಹಸದ ಮಾತು. ನಲವತ್ತು ವರ್ಷಗಳ ಹಿಂದೆ ರಾಘವರು ಈ ಕಾರ್ಯಗಳನ್ನು ಕೈಗೊಂಡರೆಂದರೆ ಬೆರಗುಮಾಡುವ ಸಂಗತಿ. ಮೂರು ತಿಂಗಳಿಗೊಮ್ಮೆ ಸಂಚಿಕೆ. ಇದಲ್ಲದೆ, ಸಂಸ್ಥೆ ಸ್ವಂತ ಪುಸ್ತಕ ಭಂಡಾರ ಹೊಂದಿತ್ತು. ೧೯೩೧ರ ವೇಳೆಗೆ ೪೭ ವೃತ್ತಪತ್ರಿಕೆ, ವಾರ ಪತ್ರಿಕೆಗಳು ಬರುತ್ತಿದ್ದವು. ವಾರಕ್ಕೊಮ್ಮೆ ನಾಟಕವನ್ನು ಕುರಿತ ಗೋಷ್ಠಿ. ಸಂಘ ರಿಜಿಸ್ಟರ್ ಆಯಿತು. ಅಭಿನಯಿಸುತ್ತಿದ್ದ ನಾಟಕಗಳನ್ನು ಮುದ್ರಿಸಿತು. ಈ ಎಲ್ಲ ರೀತಿಯ ಕಾರ್ಯವೂ ರಾಘವರ ನೇತೃತ್ವದಲ್ಲೆ. ವರ್ಷಕ್ಕೊಮ್ಮೆ ನಾಟಕೋತ್ಸವ, ಸಮ್ಮೇಳನ ನಡೆಸುತ್ತಿದ್ದುದೂ ಸಂಸ್ಥೆಯ ವೈಶಿಷ್ಟ್ಯ.

ಪಾತ್ರ ನಿರ್ವಹಣೆಯ ಶಕ್ತಿ

ಇಷ್ಟಾದರೂ, ರಾಘವರು ಕೋರ್ಟಿನಲ್ಲಿ ಲಾಯರು. ಪ್ರತಿ ಶನಿವಾರ, ಭಾನುವಾರ ಕೋರ್ಟಿಗೆ ರಜೆ. ರಂಗ ಭೂಮಿಯೆ ನೆಲೆವೀಡು. ರಂಗೂನಿನಲ್ಲೂ ರಾಘವರು ನಾಟಕ ಅಭಿನಯಿಸಿದ್ದುಂಟು. ಅದರಿಂದಲೆ ಮುಂದೆ, ‘ಮಂಡೋದರಿ’ ಅಭಿನಯಿಸಬೇಕೆಂದಾಗ, ಆಂಧ್ರದ ರಂಗನಟ ಸ್ಥಾನಂ ನರಸಿಂಹರಾಯರು ಹೇಳಿದರಂತೆ: “ಮಂಡೋದರಿ ನಾನಾದೇನು, ರಾಘವರಂತೆ ರಾವಣ ಪಾತ್ರ ಯಾರು ವಹಿಸಿಯಾರು?”

ರಾಘವರಿಗೆ ಪಾತ್ರ ಮೈ ತುಂಬುತ್ತಿತ್ತು ಎಂಬುದಕ್ಕೆ ಒಂದು ಘಟನೆಯೆ ಸಾಕ್ಷಿ. ಬೆಂಗಳೂರಿನ ತುಳಸಿ ತೋಟದ ರಂಗಮಂದಿರದಲ್ಲಿ ‘ಪ್ರಹ್ಲಾದ’ ನಾಟಕ. ರಾಘವರೆ ಹಿರಣ್ಯಕಶಿಪು. ಮ್ಯುಸಿಯಂನಿಂದ ಕೆಲವು ಖಡ್ಗಗಳನ್ನು ಎರವಲು ತಂದಿದ್ದರು. ಅದರಲ್ಲಿ ಜೋರಾಗಿದ್ದ ಬಿಚ್ಚುಗತ್ತಿಯನ್ನು ರಾಘವರು ತೆಗೆದುಕೊಂಡರು. ಅದು ಯಾವ ಕಾಲದ್ದೊ, ಎಷ್ಟು ರಕ್ತ ಕುಡಿದಿತ್ತೊ? ಕಡೆಯ ದೃಶ್ಯದಲ್ಲಿ ಖಡ್ಗವನ್ನೊಮ್ಮೆ ಝಳಪಿಸಿ, ರಾಘವರು “ಹ್ಹಹ್ಹಹ್ಹ” ಎಂದರು ಅಟ್ಟಹಾಸದಿಂದ ನಕ್ಕರು! ಏಕ್ದಂ ಪ್ರಹ್ಲಾದನ ಮೇಲೆ ನೆಗೆದೊಡನೆ ಹುಡುಗ ಮೂರ್ಛೆಬಿದ್ದ! ರಾಘವರೂ ಅಷ್ಟೇ. ತೂಗಾಡಿ ಕುಸಿದರು. ನರಸಿಂಹಾವತಾರ ಆಗಲಿಲ್ಲ, ಪರದೆ ಇಳಿಸಬೇಕಾಯಿತು. ಕೆಂಪೋಕುಳಿ ಆರತಿ ನಿವಾಳಿಸಲಾಯಿತು. ರಾಘವರು ನಿಧಾನವಾಗಿ ಎಚ್ಚೆತ್ತರು. ಪ್ರಹ್ಲಾದ ಮಾತ್ರ ಬೆಪ್ಪಾಗಿ ಕೂತಿದ್ದ.

೧೯೧೯ ರಲ್ಲಿ ಬೆಂಗಳೂರಿನಲ್ಲಿ ನಾಟಕೋತ್ಸವಂ ಉದ್ಘಾಟಿಸಿದವರು ರವೀಂದ್ರನಾಥ ಠಾಕೂರರು. ಅಧ್ಯಕ್ಷೆ ಸರೋಜಿನಿ ನಾಯುಡು. ಸಿ.ಪಿ. ರಾಮಸ್ವಾಮಿ ಐಯ್ಯರ್, ಸಿ.ಆರ್. ರೆಡ್ಡಿ ಮೊದಲಾದ ಗಣ್ಯರು ಬಂದಿದ್ದರು. ಅಂದಿನ “ಸುಭದ್ರಾಪರಿಣಯ” ದಲ್ಲಿ ಅರ್ಜುನನ ಪಾತ್ರ ರಾಘವರದು. ಶೃಂಗಾರ, ನಾಟ್ಯ, ವೀರ್ಯವತ್ತಾದ ಅಭಿನಯ ಕಂಡ ರವೀಂದ್ರರು “ಇಂದಿರುವವರಲ್ಲಿ ರಾಘವಾಚಾರ್ಯರು ಬಹುದೊಡ್ಡ ನಟರು” ಎಂದು ಪ್ರಶಂಸಿದರು. ೧೯೨೭ರ ಜುಲೈ ೧೯ ರಂದು “ದೀನಬಂಧು ಕಬೀರ್” ನಾಟಕವನ್ನು ಮಹಾತ್ಮ ಗಾಂಧಿಯವರ ಹರಿಜನೋದ್ದಾರ ಕಾರ್ಯದ ನೆರವಿಗೋಸುಗ ಪ್ರದರ್ಶಿಸಿದರು. ನಾಟಕವನ್ನು ಸಂಪೂರ್ಣ ವೀಕ್ಷಿಸಿದ ಗಾಂಧೀಜಿ, “ಕರ್ನಾಟಕ ಬಗೆಗೆ ಎಂದೂ ಮಾದ ಒಂದು ಚೈತನ್ಯಕಾರಿ ಅನುಭವ ಈ ನಾಟಕದ್ದು” ಎಂದರು!

ಒಮ್ಮೆ ಹೀಗಾಯಿತು. ರಾಮದಾಸನನ್ನು ಹರಸಿ ಕಮಂಡಲುವಿನಲ್ಲಿರುವ ಕುಂಕುಮದ ಭರಣಿ ತೆಗೆದು, ತಿಲಕವನ್ನು ಹಣೆಗಿಡಬೇಕು ಕಬೀರ. ಕಮಂಡಲ ತಡಕಿದರೆ, ಕುಂಕುಮದ ಭರಣಿಯೆ ನಾಪತ್ತೆ! ಕೂಡಲೆ, ಎಂದಿನಂತೆಯೆ, ತನ್ನ ಹಣೆಯ ತಿಲಕವನ್ನೆ ಬೆರಳಿನಿಂದ ಅದುಮಿ ಕಮಂಡಲುವಿಂದ ತೆಗೆದಂತೆ ಮಾಡಿಹಚ್ಚಿದರು. ಪ್ರೇಕ್ಷಕರು ಸಂತೋಷದಿಂದ ಜಯಕಾರ ಕೂಗಿದರು! ಅಂಥ ಸಮಯೋಚಿತ ಅಭಿನಯ ರಾಘವರದ್ದು.

ಲಂಡನಿನಲ್ಲಿ

ಎಲ್ಲಕ್ಕೂ ವಿಶೇಷ, ರಾಘವರ ವಿದೇಶ ಪ್ರವಾಸ. ಲಂಡನಿನಲ್ಲಿ ಅವರು, ನಾಟಕಕಾರ ಬರ್ನಾಡ್ ಷಾ ಅವರನ್ನು ಸಂದರ್ಶಿಸಿದರು. ಬರ್ನಾಡ್ ಷಾ ತಮ್ಮ ತೀಕ್ಷ್ಣ ವಿಮರ್ಶೆಯ ನಾಟಕಗಳಿಂದ ಜಗದ್ವಿಖ್ಯಾತಿ ಪಡೆದವರು. ಯಾರಿಗೂ ಹೆಚ್ಚುಕಾಲ ಅವಕಾಶವೀಯದ ಷಾ, ರಾಘವರೊಂದಿಗೆ ಎರಡು ಗಂಟೆ ಮಾತನಾಡಿದರು! ರಾಘವರ ನಟನಕಲೆಯ ವ್ಯಾಪ್ತಿಯನ್ನು ಷಾ ಅರಿತರು. ಅವರು ನುಡಿದದ್ದಿಷ್ಟೆ : “ಹಿಂದುಸ್ಥಾನ ಧರ್ಮ, ಕಲೆಗಳ ಆಗರ. ಹಾಗಿರುವಲ್ಲಿ ನಿಮಗೆ ನಾವೇನು ಹೇಳಿಕೊಟ್ಟೇವು? ನೀವಿಲ್ಲಿ ಕಲಿಯುವುದಕ್ಕಿಂತ ಕಲಿಸುವುದೇ ಬಹಳ ಇದೆ”

ರಾಘವರ ವಿದೇಶ ಪರ್ಯಟನದ ಉದ್ದೇಶ ಸಂಸ್ಕೃತಿ ವಿನಿಮಯ. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ದೇಶಗಳಿಗೆ ಭೇಟಿಯಿತ್ತ ಉದ್ದೇಶ, ಅಲ್ಲಿನ ನಾಟಕ, ಕಲೆ, ರಂಗಭೂಮಿ ಕುರಿತು ತಿಳಿಯುವುದು. ಲಂಡನ್ನಿನಲ್ಲಿ ರಾಘವರಿದ್ದದ್ದು ಎರಡೇ ತಿಂಗಳು. ಐವತ್ತೇಳು ನಾಟಕಗಳನ್ನು ನೋಡಿದರು. ಪ್ರಸಿದ್ಧನಟರಾದ ಎಫ್. ರಾಬರ್ಟ್ಸ್ನ್, ಹ್ಯಾಂಡನ್ ಅವರನ್ನೂ ಭೇಟಿಮಾಡಿದರು.

ಲಂಡನ್ನಿನಲ್ಲಿ “ಗ್ಯಾರಿಕ್ ಕ್ಲಬ್”, ಡೇವಿಡ್ ಗ್ಯಾರಿಕ್ ಎಂಬ ರಂಗನಟನ ಸ್ಮಾರಕ ಕಲಾಸಂಸ್ಥೆ. ಇದರ ಧ್ಯೇಯ ನಟ, ನಾಟಕಕಾರ, ವಿಮರ್ಶಕರು, ಪೋಷಕರು – ಇವರೆಲ್ಲರನ್ನೂ ಒಂದೆಡೆ ಭೇಟಿ ಮಾಡಿಸುವುದು. ರಾಘವರಿಗೆ ಇಲ್ಲೊಂದು ಭಾರಿ ಸತ್ಕಾರಕೂಟವಾಯಿತು. ವಿನ್ಸ್ಟನ್ ಚರ್ಚಿಲ್, ಬರ್ನಾರ್ಡ್ ಷಾ ಮೊದಲಾದ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. “ಇದು ಭಾರತೀಯ ರಂಗಭೂಮಿಗೆ ಸಂದ ಸನ್ಮಾನ” ಎಂದರು ರಾಘವ. ಅನಂತರ ಭಾರತದ ಕಾರ್ಯದರ್ಶಿಗಳಾಗಿದ್ದ ಲಾರ್ಡ್ ಹಾಲ್ಡನ್ ಅವರಿಂದ ಸತ್ಕಾರ. ಪ್ಯಾರಿಸ್ಸಿನ ಅಖಿಲ ಯುರೋಪ್ ರಂಗಭೂಮಿಯ ಒಕ್ಕೂಟ ರಾಘವರನ್ನು ಆಹ್ವಾನಿಸಿತು. ಅಲ್ಲಿ ‘ಭಾರತೀಯ ನಾಟ್ಯಕಲೆ’ ಕುರಿತು ವಿದ್ವತ್ಪೂರ್ಣ ಉಪನ್ಯಾಸ ಮಾಡಿದರು. ರಾಘವರ ಇಂಗ್ಲಿಷ್ ಪಾಂಡಿತ್ಯ, ಆಂಗ್ಲರನ್ನೇ ದಂಗು ಬಡಿಸಿತು. ಮತ್ತೊಂದು ಉಪನ್ಯಾಸ ಜರ್ಮನಿಯ ಬರ್ಲಿನ್ನಲ್ಲಿ. ಸನಿಹವಿದ್ದ ದೇಶಗಳನ್ನು ನೋಡಿ, ಅಲ್ಲಿನ ರಂಗನಟರನ್ನು ಸಂದರ್ಶಿಸಿದ ನಂತರ ರಾಘವರು ತಾಯ್ನಾಡಿಗೆ ವಾಪಸಾದರು.

ನಾಟಕ ಸಾರ್ಥಕವಾಗಬೇಕು

ರಾಘವರ ಕಲಾ ಜೀವನದಲ್ಲಿ ಇದೊಂದು ಮೈಲುಗಲ್ಲು. ಭಾರತವೆ ಅವರನ್ನು ಹೊಗಳಿದರ, ನಾಟಕಕ್ಕೆ ಪೂಜ್ಯಸ್ಥಾನ ದೊರೆಯುವುದೆಂದು ಎಂಬುದೆ ಅವರ ಕೊರಗು. ವಿದೇಶೀಯ ರಂಗಭೂಮಿ, ಅನುಭವ ಕುರಿತು ಅವರು ಉಪನ್ಯಾಸಗಳನ್ನು ನೀಡಿದರು. ಅವರ ಧ್ಯೇಯ ಇದು. ದೇಶದ ಉದ್ಧಾರಕ್ಕೆ ನಾಟಕ ಸಹಕಾರಿ ಆಗಬೇಕು. ಕೇವಲ ಮನರಂಜನೆ ಆಗಬಾರದು. ಸಮಾಜ ಸುಧಾರಣೆ,  ನಾಟಕದ ಮೂಲಕ ನಿರೂಪಿಸಬಹುದು. ಸುಸಜ್ಜಿತ ರಂಗಮಂದಿರ, ನಾಡಿನ ಎಲ್ಲೆಡೆ ನಿರ್ಮಾಣ ಆಗಬೇಕು. ನಟರಿಗೆ ಅಭಿನಯ ತರಬೇತಿ ನೀಡಬೇಕು. ಮುಪ್ಪಾಗುವ ಅಶಕ್ತ ಕಲಾವಿದರಿಗೆ ಸಹಾಯಧನ ನೀಡಬೇಕು. ‘ಉಪನ್ಯಾಸ ಕೇಳಿದರಾಯ್ತೆ? ಗಂಟಲು ಒಣಗಿತಷ್ಟೆ’ ಎನ್ನುತ್ತಿದ್ದರು ರಾಘವರು. ಸ್ವಾತಂತ್ರ್ಯಪ್ರೇಮ, ರಾಷ್ಟ್ರಭಕ್ತಿ, ಸತ್ಯನಿಷ್ಠೆಗಳನ್ನು ನಾಟಕಗಳಲ್ಲೂ ಭಾಷಣಗಳಲ್ಲೂ ತಂದರು ರಾಘವ.

ಒಂದು ಘಟನೆ

ಅವರ ಪಠಾಣರುಸ್ತುಂ ಪಾತ್ರವನ್ನು ಕೆಲವರು ತಪ್ಪಾಗಿ ತಿಳಿದರು. ರಂಗೂನಿನಲ್ಲಿ ನಡೆದ ಪ್ರಸಂಗ ಇದಕ್ಕೆ ನಿದರ್ಶನ. ಥಿಯೇಟರಿನ ಮಾಲಿಕ ಬಾಡಿಗೆಗೆ ಸೀನರಿ, ವೇಷಭೂಣ ತಂದಿದ್ದ. ಅವುಗಳ ಒಡೆಯ ಮುಸಲ್ಮಾನ, ನಾಟಕ ಯಾವುದೆಂದು ಅವನಿಗೆ ತಿಳಿಯಿತು. ಕೋಪದಿಂದಲೇ ಧಾವಿಸಿದ, ನಾಟಕ ನಡೆಯುತ್ತಿತ್ತು. ರುಸ್ತುಂಪಾತ್ರವಂತೂ ಕಳೆಗಟ್ಟಿತ್ತು! ನೋಡುವವರು ಮೈಮರೆತಿದ್ದರು. ನಾಟಕ ನೋಡುತ್ತಾ ಬಂದವನ ಕೋಪ ಇಳಿಯಿತು. ತಾನು ಬಂದ ಕಾರಣವನ್ನೆ ಮರೆತ. ನಾಟಕ ಮುಗಿದೊಡನೆ, ರುಸ್ತುಂ ಪಾತ್ರವನ್ನು ಮಾಡಿದ್ದ ರಾಘವರನ್ನು ತಬ್ಬಿಕೊಂಡ. ರಾಘವರಿಗೆ, ತನ್ನೆಲ್ಲ ಸಲಕರಣೆಗಳನ್ನು “ಬೇಕಾದಾಗ ಬಳಸಿಕೊಳ್ಳಿ” ಎಂದು ಹೇಳಿದ.

ಹೊಸ ವಿಚಾರಸರಣಿ

ರಾಘವರ ಮಾತು ನೇರ, ಸರಳ. ೧೯೩೩ರ ಡಿಸೆಂಬರ್ನಲ್ಲಿ ಮದರಾಸಿನಲ್ಲಿ ಮೂರನೆಯ ಆಂಧ್ರ ನಾಟಕ ಕಲಾ ಪರಿಷತ್ತು ಸೇರಿತ್ತು. ಅಧ್ಯಕ್ಷರಾದ ರಾಘವರು, ನಿತ್ಯಜೀವನಕ್ಕೆ ಸಂಬಂಧಿಸಿದ ವಿಚಾರ ನಾಟಕದಲ್ಲಿ ಮಾಡಬೇಕು. ಸುಬ್ರಹ್ಮಣ್ಯನಿಗೆ ಲಗ್ನ ಆಯಿತೆ ಇಲ್ಲವೆ, ಸತ್ಯಭಾಮೆಗೆ ಸವತಿ ಬುದ್ಧಿಯಿತ್ತೆ, ಎಲ್ಲ ಯಾಕೀಗ?” ಎಂದು ಖಂಡಾಖಂಡಿತವಾಗಿ ನುಡಿದರು.

“ಶಿಲಾದಿತ್ಯ” ಇಂಥ ವಿಚಾರಪೂರ್ಣ ನಾಟಕ. ಮಂತ್ರಿಯ ಮಗ ಮದನನ ಪಾತ್ರ ರಾಘವರದು. ಮದನ ಒಮ್ಮೆ ಹೆಂಗಸಿನ ವೇಷ ಧರಿಸಬೇಕಾಗುತ್ತದೆ! ರಾಘವರ ಅಭಿನಯ ಚಾತುರ್ಯ ಇಲ್ಲಿಯೆ. ಥೇಟ್ ಹೆಣ್ಣೆ! ಅದೇ ಲಾಲಿತ್ಯ, ಅನಂತರ ಗಂಡಿನ ಗತ್ತು! ನಾಟಕ ವೀಕ್ಷಿಸಿದ ಪಿಠಾಪುರದ ರಾಜರು, ಇಂಗ್ಲೆಂಡಿನಿಂದ ತರಿಸಿದ್ದ ಅಮೂಲ್ಯವಾದ ಪದಕ, ಖಡ್ಗಗಳನ್ನು ರಾಘವರಿಗೆ ಉಡುಗೊರೆ ನೀಡಿದರು.

ಮುಂದೆ ದಿನ ಕಳೆದಂತೆ, ರಾಘವರು ಪೌರಾಣಿಕ ನಾಟಕಗಳಲ್ಲೂ ಅಭಿನಯಿಸಿದರು. ಅವರ ನಿಲುವು ಬದಲಾದದ್ದು, ಮಿತ್ರರಿಗೆಲ್ಲ ಅಚ್ಚರಿ. ರಾಘವರ ಆಪ್ತರು ಜೋಳದರಾಶಿ ದೊಡ್ಡನ ಗೌಡರು. ಪ್ರಸಿದ್ಧ ರಂಗನಟರು, ಗಮಕಿಗಳು. ರಾಘವರನ್ನೇ ಭೇಟಿ ಮಾಡೋಣ ಎಂದು ಬಂದರು. ಸ್ನೇಹಿತರ ಜತೆ ಸಾಹಿತ್ಯ ಸಂಸ್ಕೃತಿ ಕುರಿತು ಮಾತನಾಡುತ್ತಿದ್ದ ರಾಘವರು, ಅವರನ್ನು ಸ್ವಾಗತಿಸಿದರು. ಸ್ವಲ್ಪ ಹೊತ್ತಾದ ಮೇಲೆ, ದೊಡ್ಡನಗೌಡರು ರಾಘವರನ್ನು ಕೇಳಿದರು: “ಇದ್ದಕ್ಕಿದ್ದಂತೆ ಪೌರಾಣಿಕ ನಾಟಕಗಳಲ್ಲಿ ಅಭಿನಿಯಿಸುತ್ತಿದ್ದೀರಲ್ಲ? ನಿಮ್ಮ ನಿಲುವೇಕೆ ಬದಲಾಯಿತು”? “ಖಂಡಿತವಾಗಿ ಕೇಳಿ. ಹರಿಶ್ಚಂದ್ರನ ಸತ್ಯನಿಷ್ಠೆ, ತ್ಯಾಗ, ಚಂದ್ರಮತಿಯ ಧೈರ್ಯ, ಶಾಂತಿ, ನಮ್ಮವರಿಗೆ ತಿಳಿಯಲೆಂದು ಅಭಿನಯಿಸಿದೆ.” ಎಂದರು ರಾಘವ.

ಗೌಡರು : ಹಳೇ ಕಾಲದ ನಾಟಕವನ್ನು ಆರಿಸಿಕೊಂಡಿರೇಕೆ?

ರಾಘವ : ಕತೆ ಹಳೆಯದಾದರೆ, ಸತ್ಯ, ನೀತಿ ಹಳೆಯದೇನು?

ಗೌಡರು : ಹೊಸ ರೀತಿಯಲ್ಲೂ ಆ ಕತೆ ತರಬಹುದಿತ್ತು. ಸಾಮಾನ್ಯರಿಗೂ ತಿಳಿಯುವಂತೆ.

ರಾಘವ : ಅದೇಕೆ? ಸತ್ಯ ಸಮಾಜಕ್ಕೆ ಅಗತ್ಯ ಅಂತ ನಿರೂಪಿಸೋದೆ ಧ್ಯೇಯ. ಶ್ರೀರಾಮ ತನ್ನ ಪ್ರಜಾಹಿತಕ್ಕಾಗಿ, ಅವರ ಸಮಸ್ಯೆಗಳನ್ನು ಹೇಗೆ ನಿವಾರಿಸಿದ ಎಂಬುದೇ ನಾವು ರಾಮಾಯಣದಲ್ಲಿ ಗಮನಿಸಬೇಕಾದ್ದು. ರಾಜ್ಯ ಆಳುವ ಅಧಿಕಾರಿಗಳಿಗಿದು ತಿಳಿಯಬೇಕಲ್ಲವೆ?

ರಾಘವರ ಧ್ಯೇಯವನ್ನು ದೊಡ್ಡನಗೌಡರು ಅರಿತರು. ಪಂಪ, ರನ್ನರ ಕಾವ್ಯಗಳನ್ನೇ ರಾಘವರು ಅರಗಿಸಿಕೊಂಡವರು. ದುರ್ಯೋಧನನ ಔದಾರ್ಯ, ಕೃಷ್ಣನ ಬಲ್ಲೆ ನಾನು ಬಲ್ಲೆನೆಂಬ ಅರಿವು, ಛಲಕ್ಕೋಸುಗ ಬದುಕುವೆನೆಂಬ ಮನೋಧರ್ಮ, ಇವನ್ನು ಪ್ರತಿಪಾದಿಸುವುದೆ ರಾಘವರ ಉದ್ದೇಶ. ಹಿರಣ್ಯಕಶಿಪುವಿನ ಪುತ್ರವಾತ್ಸಲ್ಯ, ರಾವನ ಶಿವಭಕ್ತಿ ಇವುಗಳನ್ನು ಅಭಿನಯದಲ್ಲಿ ಸ್ಪಷ್ಟಪಡಿಸುತ್ತಿದ್ದರು. ಆ ಪಾತ್ರಗಳಿಗೆ ಹೊಸಚೈತನ್ಯ ನೀಡಿದ್ದಲ್ಲದೆ, ಪಾತ್ರ ತನ್ಮಯತೆಯ ಬಗೆಗೂ ಅರಿವು ಮೂಡಿಸಿದರವರು.

ಯಶಸ್ವಿ ನಾಟಕಗಳು

ರಾಘವರಿಗೆ ಯಶಸ್ಸು ತಂದ ನಾಟಕಗಳು, “ಭದ್ರಾ ಚಲ ರಾಮದಾಸ”, ದ್ವಿಜೇಂದ್ರಲಾಲ್ರಾಯ್ ಅವರ “ಪ್ರಚಂಡ ಚಾಣಕ್ಯ ಅಥವಾ ಚಂದ್ರಗುಪ್ತ” ಹಾಗೂ “ದೀನಬಂಧು ಕಬೀರ್”. ರಾಮದಾಸನ ಪಾತ್ರವಂತೂ ಪ್ರತಿದಿನವೂ ಹೊಸತಾಗಿಯೇ ತೋರುತ್ತಿತ್ತು.

ರಂಗನಟರಲ್ಲಿ ಸುಪ್ರಸಿದ್ಧರು ವರದಾಚಾರ್ಯರು. ಅವರನ್ನು ಯಾರೋ “ಷೇಕ್ಸ್ಪಿಯರನ ದುರಂತ ಪಾತ್ರಗಳನ್ನೇಕೆ ನೀವು ಅಭಿನಯಿಸುವುದಿಲ್ಲ?” ಎಂದು ಕೇಳಿದರಂತೆ. ಆಚಾರ್ಯರು ನುಡಿದರು, “ಏನಂತ ಹೇಳ್ತೀರಿ? ಒಥೆಲೊ, ಹ್ಯಾಮ್ಲೆಟ್, ರಾಘವರು ಅಭಿನಯಿಸಿದ ಮೇಲೂ ನಾನು ಮಾಡುವುದೇ? ಅವರಂತೆ ಯಾರು ಅಭಿನಯಿಸಿಯಾರು?”

ನಾಟಕದಲ್ಲಿ ಸಂಗೀತ ಬೇಕೆ, ಬೇಡವೆ ಎಂಬುದಕ್ಕೆ ರಾಘವರು ೧೯೩೦ ರಲ್ಲಿ ತಿರುವಾಂಕೂರಿನಲ್ಲಿ ನಾಟಕ ಪರಿಷತ್ತಿನ ಅಧ್ಯಕ್ಷಸ್ಥಾನದಿಂದ ಹೇಳಿದ್ದು : “ರೋಗ ಹಿಡಿದ ಬೆಕ್ಕಿನ ಅರಚಾಟ ಅಲ್ಲ ಬೇಕಾದ್ದು, ನಿಜವಾದ ಸಂಗೀತ ಬೇಕು. ಒಳ್ಳೆಯ ಸಂಗೀತವು ಮನಸ್ಸಿನ ಅಶಾಂತಿ ನಿವಾರಿಸುತ್ತದೆ. ಪ್ರೇಮದ ಹಣೆಗೆ ಸಂಗೀತ ಕೋಹಿನೂರು ವಜ್ರ ಇದ್ದಂತೆ. ಪ್ರಕೃತಿಪ್ರೇಮ, ಜ್ಞಾನದ ಅಭಿವೃದ್ಧಿ, ಆತ್ಮಸಾಧನೆಗಳಿಗೆ ಸಂಗೀತ ಉತ್ತಮ ಮಾಧ್ಯಮ. ರಂಗಭೂಮಿಯ ಪೂಜಾ ಮಂದಿರದಿಂದ ಸಂಗೀತವನ್ನು ದೂರವಿಡಲು ನಾನು ಒಪ್ಪುವುದಿಲ್ಲ. ಅಂದ ಮಾತ್ರಕ್ಕೆ ಮಾತಿಗೊಂದು ಹಾಡನ್ನು ಹಾಡಬೇಕು ಎಂದಲ್ಲ. ಹಿತಮಿತ ಆದ ಸಂಗೀತ ಇರಬೇಕು.”

ರಾಘವರಲ್ಲಿ ಒಳಗೊಂದು, ಹೊರಗೊಂದು ಭಾವನೆ ಇರಲಿಲ್ಲ. ನೇರ ಮಾತು, ವಕೀಲಿಯಲ್ಲೂ ಅಷ್ಟೇ ನಿಷ್ಠೆ. ಕೇಸನ್ನು ಅಭ್ಯಾಸಮಾಡಿ ಟಿಪ್ಪಣಿ ತಯಾರಿಸುವುದು ಶ್ರಮದ ಫಲ, ಜಯ. ೧೯೨೭ ರಲ್ಲಿ ರಾಘವರು ಸರ್ಕಾರಿ ವಕೀಲರಾದರು. ಒಂಬತ್ತು ವರ್ಷ ಸೇವೆ ಸಲ್ಲಿಸಿದರು.

‘ಒಥೆಲೊ’ ಪಾತ್ರದಲ್ಲಿ

ವಕೀಲರು

ವಕೀಲರಾಗಿ ರಾಘವರು ಬಹು ಒಳ್ಳೆಯ ಹೆಸರನ್ನು ಸಂಪಾದಿಸಿದ್ದರು. ರಾಘವರು, ಅಂದು ಬಳ್ಳಾರಿಯಲ್ಲಿ ಹೆಸರಾಂತ ವಕೀಲ ಶಿವರಾಯರನ್ನು ಎದುರಿಸಿದ್ದು ಮರೆಯಲಾಗದ್ದು. ಶಿವರಾಯರೆಂದರೆ, ವಕೀಲರಿಗೆ ಅಂಜಿಕೆ. ರಾಘವರು ಇದಕ್ಕೆ ಸೊಪ್ಪು ಹಾಕಲಿಲ್ಲ, ಶಿವರಾಯರು, “ಇದು ನಾಟಕವಲ್ಲ, ಕೋರ್ಟ್” ಅಂದರೆ, ರಾಘವರು “ಗೊತ್ತಪ್ಪ, ಇದು ನಿಮ್ಮ ಗರ್ಜನೆಯ ಮೃಗಾಲಯವಲ್ಲವೆ?” ಎಂದು ಬಿಟ್ಟರು! ಕೋರ್ಟೇ ಘೊಳ್ಳೆಂದಿತು.

ವಕೀಲರಾದ ರಾಘವರು ಕೇಸನ್ನು ತಿರುಳರಿಯದೆ ಒಪ್ಪುತ್ತಿರಲಿಲ್ಲ. ಒಮ್ಮೆ ಒಬ್ಬನಿಗೆ, “ಇದು ನಿಲ್ಲೊಲ್ಲಯ್ಯ. ಫೀಜು ಕೊಟ್ಟು ದಂಡ ಮಾಡಿಕೊಬೇಡ. ರಾಜೀಮಾಡಿಕೊ” ಅಂತ ಹೇಳಿ ಕಳಿಸಿದ್ದೂ ಉಂಟು.

ಸ್ವಾತಂತ್ರ್ಯ ಪ್ರೇಮ

ರಾಘವರು ಸಂಘದೊಂದಿಗೆ ಅನಂತರದಲ್ಲಿ ಅಭಿನಯಿಸಿದ ನಾಟಕಗಳಲ್ಲಿ ಸ್ವಾತಂತ್ರ್ಯ ಬಯಕೆ, ರಾಷ್ಟ್ರಪ್ರೇಮ ಎದ್ದು ತೋರುತ್ತಿತ್ತು. “ಬರಿಯ ಭಾಷಣ ನನ್ನ ಗಂಟಲೊಣಗಿಸೀತಷ್ಟೆ. ದೇಶ ಗುಲಾಮರ ರಾಷ್ಟ್ರ ಆಗಿದೆ. ಅಮೂಲ್ಯವಾದ ಸ್ವಾತಂತ್ರ್ಯವನ್ನೆ ಕಳಕೊಂಡಿದೆ. ಬದುಕಿನ ಶಾಶ್ವತ ಮೌಲ್ಯಗಳಾದ ನೀತಿ, ಧರ್ಮ, ರಾಷ್ಟ್ರಪ್ರೇಮ, ಸತ್ಯನಿಷ್ಠೆ, ವೀರತ್ವ ಎಲ್ಲಿ ಹೋಯಿತಯ್ಯ?” ಎಂದು ಪ್ರತಿ ನಾಟಕ, ಉಪನ್ಯಾಸಗಳಲ್ಲಿ ರಾಘವರು ನುಡಿಯುತ್ತಿದ್ದುದುಂಟು. ಮುಂಬಯಿ, ಕಲ್ಕತ್ತ, ಸಿಮ್ಲಾ, ಬರ್ಮಾ ಮುಂತಾದಡೆಯೆಲ್ಲ ಅಭಿನಯಿಸಿದ ನಾಟಕಗಳಲ್ಲಿ ಈ ಮೌಲ್ಯಗಳನ್ನೆ ಅವರು ಪ್ರತಿಪಾದಿಸಿದ್ದು. ಹಾಗೂ ರಾಘವರು ರಾಷ್ಟ್ರೀಯ ನಾಟಕದ ಮೂಲಕ ಜನತೆಗೊಂದು ನವಚೇತನ ನೀಡಿದರು. ರಾಘವರು ಹಣದ ಹೊಳೆಯನ್ನೆ ಹರಿಸಬಹುದಿತ್ತು. ಕಲೆ ಕೈ ಬೀಸಿ ಕರೆಯಿತು. ಹೊಟ್ಟೆಪಾಡಿಗೆ ಮಾತ್ರ ವಕೀಲಿವೃತ್ತಿ, ಅಷ್ಟೆ.

ಚಲನಚಿತ್ರ ಜಗತ್ತಿನಲ್ಲಿ

ಚಲನಚಿತ್ರರಂಗವನ್ನು ರಾಘವರು ಪ್ರವೇಶಿಸದಿರಲಿಲ್ಲ. ‘ದ್ರೌಪದಿ ಮಾನಸಂರಕ್ಷಣ’, ‘ಚಂಡಿಕಾ’, ‘ರೈತುಬಿಡ್ಡ’, ‘ತಪ್ಪೆವರದಿ’ ಮೊದಲಾದ ಚಿತ್ರಗಳಲ್ಲಿ ರಾಘವರು ಅಭಿನಯಿಸಿದರು. ಆದರೆ ಸಿನಿಮಾದ ಯಾಂತ್ರಿಕತೆ ಅವರಿಗೆ ಹೊಂದಲಿಲ್ಲ. ಅಲ್ಲಿ ಅಭಿನಯಕ್ಕೆ ಸ್ವಾತಂತ್ರ್ಯವಿಲ್ಲ. ನಾಟಕಗಳಲ್ಲಿ ತೋರಬಹುದಿದ್ದ ಸೂಕ್ಷ್ಮ ಅಭಿನಯ, ಸಿನಿಮಾಗಳಲ್ಲಿ ತೋರಿದರೂ, ಜನತೆಗೆ ಅದು ಅರ್ಥ ಆಗಲಿಲ್ಲ. ಇದಲ್ಲದೆ ಚಿತ್ರರಂಗ ರಾಘವರ ಆರೋಗ್ಯಕ್ಕೆ ಮುಳುವಾಯಿತು. ಅಲ್ಲಿಯ ಹಣದ ದಾಹ ರಾಘವರಿಗೆ ಬೇಸರ ತಂದಿತು. ಅಂತೆಯೆ ಅವರು ಅಲ್ಲಿಂದ ದೂರಾದರು.

ಉತ್ಸಾಹದ ಪ್ರಣತೆ ಆರಿತು

ಆರೋಗ್ಯ ಸುಧಾರಿಸಿಕೊಂಡ ರಾಘವರು ತಮ್ಮ ಕಲಾ ಸೇವೆ ಎಂದಿನಂತೆ ಮುಂದುವರಿಸಿದರು. ಉಪನ್ಯಾಸದಲ್ಲಿ ತಾವು ಸೂಚಿಸಿದ್ದ ಅಂಶಗಳನ್ನು ಆಚರಿಸಲು ಅವರು ತುಂಬ ಶ್ರಮಿಸಿದರು. ಊರೂರು ತಿರುಗಿ, ನಾಟಕ ಆಡಿದರು. ನಮ್ಮ ದೇಶದ ಕಲಾವಿದರಿಗೆ ಬದುಕಲ್ಲಿ ನೆಮ್ಮದಿ ಇಲ್ಲ, ಅದಿದ್ದರೆ ಅವರ ಸಾವಿನಲ್ಲೆ. ಸತ್ತ ಮೇಲೆ ಜನ ಹೊಗಳಿ, ಸಮಾಧಿಗೆ ಹೂ ಏರಿಸುತ್ತಾರೆ. ಇದ್ದಾಗ ಹೊಟ್ಟೆಗೆ ಹಾಕದಿದ್ದರೂ ಕೂಡ ಎಂದು ಅವರು ಕಂಬನಿದುಂಬಿ ಹೇಳುತ್ತಿದ್ದರು.

ರಾಷ್ಟ್ರೀಯ ರಂಗಭೂಮಿಯೊಂದನ್ನು ನಿರ್ಮಿಸಬೇಕು, ನಾಟಕ ಸೇವೆ ಮಾಡಬೇಕೆಂಬುದು ರಾಘವರ ಹಂಬಲ. ವಿಶ್ವವಿದ್ಯಾನಿಲಯಗಳಲ್ಲಿ ರಂಗಕಲೆ ಅಧ್ಯಯನದ ವಿಷಯ ಆಗಬೇಕೆಂಬ ಆಸೆ. ಅದು ಅವರ ಜೀವಮಾನದಲ್ಲಿ ಕನಸೇ ಆದದ್ದು ನಾಡಿನ ದೌರ್ಭಾಗ್ಯ. ಈ ವೇಳೆಗಾಗಲೆ ಅವರಿಗೆ ೬೩ ವರುಷ. ಆದರೂ ಆರದ ಉತ್ಸಾಹ. ಮುಪ್ಪು ದೇಹಕ್ಕೆ ಬಂತೇ ಹೊರತು, ಅವರ ಕಲೆಗೆ, ಪ್ರತಿಭೆಗೆ ಬರಲಿಲ್ಲ. ದಿನ ಸರಿದಂತೆ, ಚದುರಿ ಹೋಗುತ್ತಿದ್ದ ಸಂಘ ಒಟ್ಟಾಗಿಸಲು ರಾಘವರು ಶ್ರಮಿಸಿದರು. ನಾಟಕ ಕಲೆ ವಿಕಸಿಸಲು ಜನತೆಯ ನೆರವು ದೊರೆಯದಾಗ, ಅವರಿಗೆ ತುಂಬ ಬೇಸರವಾಯಿತು. ವಕೀಲಿಯಿಂದ ಬಂದ ದುಡ್ಡನ್ನೆ ನಾಟಕಕ್ಕೂ ಹಾಕುವುದು. ವರ್ಷಕ್ಕೊಮ್ಮೆ ತಮ್ಮ ಮನೆಯಲ್ಲೆ ಹರಿಜನರಿಗೆ ಅನ್ನ, ಬಟ್ಟೆ ದಾನಮಾಡುವುದು. ಹರಿಜನ ಶಾಲೆಯ ಮೇಲ್ವಿಚಾರಣೆ, ಜತೆಗೆ ರಂಗಭೂಮಿಯ ಚಿಂತನ. ಇದೆಲ್ಲ ಇದ್ದರೂ ಅವರ ಆಧ್ಯಾತ್ಮಿಕ ಮನೋಧರ್ಮಕ್ಕೆ ರಂಗಭೂಮಿ ಏನೂ ಅಡ್ಡಿಯಾಗಲಿಲ್ಲ. “ಹಣ ಕೇವಲ ಶರೀರದ ಉದ್ಧಾರಕ್ಕೆ ಕಲೆಯೊ ಆತ್ಮೋದ್ಧಾರಕ್ಕೆ. ಕಲೆಗಾಗಿ ಹಣವೇ ಹೊರತು, ಹಣಕ್ಕಾಗಿ ಕಲೆ ಅಲ್ಲ” ಎಂದು ಅವರು ಪದೇಪದೇ ನುಡಿಯುತ್ತಿದ್ದುದುಂಟು.

ರಾಘವರ ಕೊನೆಯಾಸೆ, “ತೆಗನಿ ಸಮಸ್ಯ” (ತೀರದ ಸಮಸ್ಯೆ) ಎಂಬ ನಾಟಕ ಪ್ರದರ್ಶಿಸಬೇಕೆಂಬುದು. ಅದೇನೊ ಅದಕ್ಕೆ ವಿಘ್ನವೇ ಬರುತ್ತಿತ್ತು, ಇದನ್ನು ಪ್ರದರ್ಶಿಸಲೇ ಬೇಕು ಅಂತ ರಾಘವರ ಹಠ. ರಾಜಮನ್ನಾರ್ ಎಂಬ ನ್ಯಾಯಾಧೀಶರು ರಾಘವರೂ ಸೇರಿ ಈ ನಾಟಕ ಬರೆದದ್ದು. ಏನಾದರಾಗಲಿ ನಾಟಕ ಆಡಿಯೆ ತೀರಬೇಕೆಂದು ಮಿತ್ರರೊಡಗೂಡಿ ನಿರ್ಧರಿಸಿದರು ರಾಘವ.

ನಾಟಕವೇನೊ ಯಶಸ್ವಿ ಆಯಿತು. ರಾಘವರಿಗೆ ಅದು ದೈವಿಕ ಸಿದ್ಧಿಯ ಸಂತೃಪ್ತಿಯನ್ನು ನೀಡಿತು. ಆದರೆ ಅದಾದ ಹದಿನೈದು ದಿನಗಳಲ್ಲೆ ರಾಘವರು ಕುರುಬೇನೆಯಿಂದ ಹಾಸಿಗೆ ಹಿಡಿದರು. ಕಲೆಗೋಸುಗವೆ ತನ್ನ ಬದುಕನ್ನು ತೇದ ರಾಘವ ೧೯೪೬ ಏಪ್ರಿಲ್ ಹದಿನಾರರಂದು ಇಹದ ಬದುಕಿನ ರಂಗದಿಂದ ದೂರವಾದರು. ಅಂದು ಹಂಪೆಯ ವಿರೂಪಾಕ್ಷನ ರಥೋತ್ಸವದ ಮಂಗಳಮಯ ದಿನ.

ರಂಗಭೂಮಿಯ ಧ್ರುವತಾರೆ

ರಾಘವರ ಉನ್ನತ ಮಟ್ಟದ ಅಭಿನಯ ನೋಡಿ ಆಸ್ವಾದಿಸಿದ ಮಹನೀಯರಿನ್ನೂ ಇದ್ದಾರೆ. ಬಿ.ಎಸ್. ಗರೂಡ್ ಆಗಿನ ಕಾಲಕ್ಕೆ ಹೆಸರುವಾಸಿ ಆದ ರಂಗನಟರು. “ರಾಘವರೊಂದಿಗೆ ಹತ್ತಾರು ವರ್ಷ ಮುಖ್ಯ ಸ್ತ್ರೀ ಪಾತ್ರ ವಹಿಸಿದ್ದೇನೆ. ಪ್ರತಿಯೊಂದು ಬಾರಿಯೂ, ಪಾತ್ರದ ವೈಶಿಷ್ಟ್ಯ ಬೇರೆ ಬೇರೆ ರೀತಿ ಬೆಳಗುವಂತೆ ಅವರು ಅಭಿನಯಿಸುತ್ತಿದ್ದರು ಎಂದರೆ ಉತ್ಪ್ರೇಕ್ಷೆಯಲ್ಲ! ಆತ ಎಂಥ ಸಾಧಕ, ಮಹಾನಟ ಎಂಬುದೀಗ ಸ್ಪಷ್ಟ ಆಗುತ್ತದೆ” ಎಂದರು ಗರೂಡ್ ಒಮ್ಮೆ.

ರಾಘವರು ಅನೇಕ ಬಡಕಲಾವಿದರಿಗೆ ಪ್ರತಿ ತಿಂಗಳೂ ನಿಗದಿ ಆದ ಸಹಾಯ ಧನ ನೀಡುತ್ತಿದ್ದರು. ರಂಗಭೂಮಿಯ ಅಭಿವೃದ್ಧಿ ಅವರ ಬಾಳಿನ ಉಸಿರಾಗಿತ್ತು. ಅದಕ್ಕೆ ಯಾವ ರೀತಿ ಪರಿಚರ್ಯೆ ನಡೆಸಲೂ ಅವರು ಸದಾ ಸಿದ್ಧರೆ.

ರಾಘವರು ದೈವಪ್ರೇಮಿ, ದೇಶಭಕ್ತರು. ವೇದಾಂತ ಆಭ್ಯಸಿಸಿ, ತಮ್ಮ ಕಲಾರಾಧನೆಗೂ ಅಳವಡಿಸಿಕೊಂಡವರು. ಸಹೃದಯಿಗಳು. ರಾಘವರ ನಾಟಕಗಳನ್ನು ನೋಡಿದ, ದೀನಬಂಧು ಸಿ.ಎಫ್. ಆಂಡ್ರೂಸ್ ಹೇಳಿದಂತೆ, “ನಾಟ್ಯಕಲಾ ಸರಸ್ವತಿಯ ಎರಡು ಕಣ್ಣುಗಳು ರಾಘವಾಚಾರ್ಯರು, ವರದಾಚಾರ್ಯರು. ಇವರನ್ನು ಹೆತ್ತ ನಾಡು ಧನ್ಯ.” ಶ್ರೀಗಂಧ ತೇದರೂ, ಕಂಪು ಉಳಿಯುತ್ತದೆ. ಧೂಪ ಆಗಿ ಬೆಳಗಿದರೂ, ಕಂಪು ಹರಡುತ್ತದೆ. ಅದು ವಿಷಕ್ರಿಮಿಗಳಿಗೆ ಮಾರಕ, ದೈವಾರಾಧನೆಗೆ ಪ್ರಿಯ ಆದದ್ದೆ. ರಾಘವರು ಹೀಗೆ ತಮ್ಮನ್ನೆ ರಂಗಭೂಮಿಗೆ ತೇದರು. ಬದುಕನ್ನು ರಂಗಪೂಜೆಯ ಪರಿಮಳ ದ್ರವ್ಯ ಆಗಿಸಿದರು. ಅವರು ಇಲ್ಲ ಎಂದರೆ ಅಪರಾಧ ಆದೀತು. ರಂಗಭೂಮಿ ಇರುವವರೆಗೂ ಅವರು ಧ್ರುವತಾರೆಯೆ.