ಬಳ್ಳಿ ಬಸಳೆ ಬಹುವಾರ್ಷಿಕ ಬಳ್ಳಿ. ಒಮ್ಮೆ ನೆಟ್ಟರೆ ಹಲವಾರು ವರ್ಷಗಳವರೆಗೆ ಸೊಪ್ಪು ಸಿಗುತ್ತಿರುತ್ತದೆ. ಆಸರೆ ಸಿಕ್ಕಿದಲ್ಲಿ ಹಂಬುಗಳು ಮೇಲಕ್ಕೇರಬಲ್ಲವು. ಸಸ್ಯಭಾಗಗಳು ರಸಮಯವಿದ್ದು ಲೋಳೆಯಿಂದ ಕೂಡಿರುತ್ತವೆ. ಎಲೆ ಮತ್ತು ಚಿಗುರು ಕುಡಿಗಳನ್ನು ತರಕಾರಿಯಾಗಿ ಬಳಸುತ್ತಾರೆ. ಇದರ ಬೇಸಯ ಮತ್ತು ಬಳಕೆಗಳು ದಕ್ಷಿಣ ಭಾರತದಲ್ಲಿ ಹೆಚ್ಚು. ಉತ್ತರ ಭಾರತದಲ್ಲಿ ಮೈದಾನ ಪ್ರದೇಶಗಳಲ್ಲಿ ಅಲ್ಲಲ್ಲಿ ಬೆಳೆಯುತ್ತಾರೆ. ಹಣ್ಣು ಪೂರ್ಣಬಲಿತು ಪಕ್ವಗೊಂಡಾಗ ಕೆನ್ನೀಲಿ ಬಣ್ಣದ ರಸವನ್ನು ಹೊಂದಿರುತ್ತವೆ. ಈ ರ್ವದ್ರವ್ಯವನ್ನು ಉನ್ನತ ಅಧಿಕಾರಿಗಳು ಠಸ್ಸೆಗಳಿಗಾಗಿ ಬಳಸುತ್ತಿದ್ದಂತೆ. ಈ ಬಣ್ಣ ಹಣ್ಣಿನ ಪಾಕ, ಭಕ್ಷ್ಯಗಳು, ಮಿಠಾಯಿ ಮುಂತಾದುವುಗಳಿಗೆ ರಂಗನ್ನು ಕೊಡಲು ಸೂಕ್ತ.

ಪೌಷ್ಟಿಕ ಗುಣಗಳು : ಇದರ ಸೊಪ್ಪು ಮತ್ತು ಚಿಗುರು ಕುಡಿಗಳನ್ನು ಸಾರು, ಪಲ್ಯ, ಹುಳಿ, ಚಟ್ನಿ ಮುಂತಾಗಿ ಮಾಡಿ ತಿನ್ನುವರು. ಇತರ ಸೊಪ್ಪು ತರಕಾರಿಗಳೊಂದಿಗೆ ಬೆರೆಸಿ ಸಹ ಬಳಸಬಹುದು. ಇದರಲ್ಲಿ ಪ್ರೊಟೀನ್, ಕಬ್ಬಿಣ ಹಾಗೂ ಜೀವಸತ್ವಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ಪೋಷಕಾಂಶಗಳು

ತೇವಾಂಶ – ೮೮.೦೦ ಗ್ರಾಂ
ಒಣ ಪದಾರ್ಥ – ೬.೪೦ ಗ್ರಾಂ
ಪ್ರೊಟೀನ್ – ೧.೬೦ ಗ್ರಾಂ
ನಾರು ಪದಾರ್ಥ – ೦.೬೦ ಗ್ರಾಂ
ಕ್ಯಾಲ್ಸಿಯಂ – ೦.೧೫ ಗ್ರಾಂ
ಕಬ್ಬಿಣ – ೧.೬೦ ಗ್ರಾಂ
’ಎ’ ಜೀವಸತ್ವ – ೩೨೫೦ ಐಯು
ಥಯಮಿನ್ – ೪೦ ಮಿ.ಗ್ರಾಂ
’ಸಿ’ ಜೀವಸತ್ವ – ೮೬ ಮಿ.ಗ್ರಾಂ
ರೈಬೋಫ್ಲೇವಿನ್ – ೧೦ ಷರ್ಮನ್ ಯೂನಿಟ್

ಔಷಧೀಯ ಗುಣಗಳು : ಸೊಪ್ಪು ಮತ್ತು ಚಿಗುರು ಕುಡಿಗಳಲ್ಲಿ ಲೋಳೆ ಪದಾರ್ಥವಿದ್ದು ವಿರೇಚಕವಿರುತ್ತದೆ. ಮಕ್ಕಳು ಮತ್ತು ಗರ್ಭಿಣಿಯರು ಮಲಬದ್ಧತೆಯಿಂದ ನರಳುತ್ತಿದ್ದಲ್ಲಿ ಇದನ್ನು ನಿರ್ದೇಶಿಸುವುದುಂಟು. ಎಲೆಗಳಲ್ಲಿ ಮೂತ್ರವರ್ಧಕ ಗುಣಗಳಿವೆ. ಅವು ಶಮನಕಾರಕವೂ ಹೌದು. ಸುಲಭವಾಗಿ ಜೀರ್ಣಗೊಳ್ಳುತ್ತವೆ. ಕಣ್ಣಿನ ತೊಂದರೆಗಳಿಗೆ ಇದು ಉಪಯುಕ್ತ. ಗಾಯ, ವ್ರಣ, ಬೊಬ್ಬೆ ಮುಂತಾದುವುಗಳಲ್ಲಿ ಇದರ ಎಲೆಗಳನ್ನು ಅರೆದು ಪಟ್ಟು ಹಾಕಿದಲ್ಲಿ ಬೇಗ ಗುಣ ಕಂಡುಬರುತ್ತದೆ. ಗುಹ್ಯರೋಗಗಳಿಗೆ ಈ ಎಲೆಗಳಿಂದ ತೆಗೆದ ರಸ ಮತ್ತು ಕಲ್ಲುಸಕ್ಕರೆಗಳ ಮಿಶ್ರಣವನ್ನು ನಿರ್ದೇಶಿಸುವುದುಂಟು. ತಲೆನೋವಿದ್ದಲ್ಲಿಯೂ ಸಹ ಇವುಗಳ ಬಳಕೆ ಬಹಳ ಉಪಯುಕ್ತ. ಸುಟ್ಟ ಗಾಯಗಳಿಗೆ ಎಲೆಗಳ ರಸ ಮತ್ತು ಬೆಣ್ಣೆಗಳನ್ನು ಚೆನ್ನಾಗಿ ಮಿಶ್ರಮಾಡಿ ಹಚ್ಚಿದಲ್ಲಿ ಉಪಶಮನ ಸಿಗುತ್ತದೆ. ಒಣ ಎಲೆಗಳಿಂದ ಸಿಹಿ ಪಾನೀಯವನ್ನು ತಯಾರಿಸುತ್ತಾರೆ. ಚಿಗುರು ಮತ್ತು ಎಲೆಗಳಿಂದ ತಯಾರಿಸಿದ ಲೋಳೆ ಪಾನೀಯವನ್ನು ಸೇವಿಸಿದಲ್ಲಿ ತಲೆನೋವು ದೂರಗೊಳ್ಳುವುದು. ಬೇರುಗಳನ್ನು ಕುದಿಸಿ ತಯಾರಿಸಿದ ಕಷಾಯ ಸೇವಿಸಿದಲ್ಲಿ ಪಿತ್ತರಸ ಸಂಬಂಧದ ವಾಕರಿಗೆ ಒಳ್ಳೆಯದು. ಇದರ ಸೇವನೆಯಿಂದ ಶರೀರ ಸ್ಥೂಲಗೊಳ್ಳುವುದು ಹಾಗಾಗಿ ಸಣಕಲು ಶರೀರ ಇರುವವರು ಇದರ ಲಾಭ ಪಡೆದುಕೊಳ್ಳಬೇಕು.

ಉಗಮ ಮತ್ತು ಹಂಚಿಕೆ : ಇದರ ತವರೂರು ಭಾರತ ಮತ್ತು ಚೀನಾ ಇದನ್ನು ಹೆಚ್ಚಾಗಿ ಬೆಳೆದು ಬಳಸುವ ದೇಶಗಳೆಂದರೆ ಏಷ್ಯಾ ಖಂಡದ ಉಷ್ಣಪ್ರದೇಶಗಳು, ಆಫ್ರಿಕಾ ಮತ್ತು ಅಮೆರಿಕ ನಮ್ಮ ದೇಶದಾದ್ಯಂತ ಇದರ ಬೇಸಾಯವಿದೆ. ದಕ್ಷಿಣ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸಸ್ಯ ವರ್ಣನೆ : ಬಳ್ಳಿ ಬಸಳೆ ಚಿನೊಪೋಡಿಯೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹಸುರಿನ ಬಳ್ಳಿ. ಇದರಲ್ಲಿ ಎರಡು ಬಗೆ. ಅವುಗಳೆಂದರೆ ಕೆಂಪು ಬಸಳೆ ಮತ್ತು ಬಿಳಿ ಬಸಳೆ.

ಬಸಳೆ ಧಾರಾಳವಾಗಿ ಕವಲೊಡೆದು ಬೆಳೆಯುವ ಬಹುವಾರ್ಷಿಕ ಬಳ್ಳಿ. ಆಸರೆ ಸಿಕ್ಕರೆ ಮೇಲಕ್ಕೆ ಏರಬಲ್ಲದು. ಹಂಬುಗಳು ಸುಮಾರು ೩ ರಿಂದ ೪.೫ ಮೀಟರ್ ಉದ್ದಕ್ಕೆ ಬೆಳೆಯಬಲ್ಲವು. ಕಾಂಡ ಮೃದು, ಅದು ರಸವತ್ತಾಗಿದ್ದು ಕೆಂಪು ಇಲ್ಲವೇ ಬಿಳಿ ಹಸುರು ಬಣ್ಣದ್ದಿರುತ್ತದೆ. ಬಿಡಿ ಎಲೆಗಳು ೮ ರಿಂದ ೧೫ ಸೆಂ.ಮೀ. ಉದ್ದ ಹಾಗೂ ೮ ರಿಂದ ೧೦ ಸೆಂ.ಮೀ. ಅಗಲ ಇರುತ್ತವೆ. ಎಲೆಯ ತುದಿ ಚೂಪಾಗಿರುತ್ತದೆ. ಪ್ರತಿ ಎಲೆಗೆ ತೊಟ್ಟು ಇರುವುದು. ಎಲೆಗಳ ಸಂಯೋಗ ಪ್ರತ್ಯೇಕವಾಗಿ ವ್ಯವಸ್ಥಿತಗೊಂಡಿರುತ್ತವೆ; ನರಬಲೆಕಟ್ಟು ಸ್ಫುಟ.

ಹೂವು ಸಣ್ಣ ತೆನೆಗಳಲ್ಲಿ ಮೂಡಿರುತ್ತವೆ. ಹೂತೆನೆಗಳು ಎಲೆಗಳ ಕಂಕುಳಲ್ಲಿ ಬಿಟ್ಟಿರುತ್ತವೆ. ಹೂಗಳಿಗೆ ತೊಟ್ಟು ಇರುವುದಿಲ್ಲ. ಹೂದಳ ಸಂಖ್ಯೆ ನಾಲ್ಕು. ಅವು ಬೆಳ್ಳಗೆ ಇಲ್ಲವೆ ಕೆನ್ನೀಲಿ ಛಾಯೆಯಿಂದ ಕೂಡಿರುತ್ತವೆ. ಹೂದಳಗಳು ಮಂದವಿದ್ದು ರಸಮಯವಿರುತ್ತವೆ. ಹಣ್ಣು ಮೊಟ್ಟೆಯಾಕಾರ; ಸುಮಾರು ೮ ಮಿ.ಮೀ. ಅಡ್ಡಳತೆ ಹೊಂದಿದ್ದು ರಸವತ್ತಾಗಿರುತ್ತವೆ. ಕಾಯಿಗಳು ಹಸುರು ಬಣ್ಣವಿದ್ದು ಪಕ್ವಗೊಂಡಾಗ ಕೆಂಪು ಬಣ್ಣಕ್ಕೆ ತಿರುಗಿ ಅನಂತರ ಕಪ್ಪು ಬಣ್ಣಕ್ಕೆ ಮಾರ್ಪಡುತ್ತವೆ. ಹಿಚುಕಿದರೆ ನೇರಳೆ ಬಣ್ಣ ಹೊರಬಂದು ಬೆರಳುಗಳಿಗೆ ಅಂಟುತ್ತದೆ. ಒಂದು ಹಣ್ಣಿಗೆ ಒಂದೇ ಬೀಜ, ಬೀಜ ಹಗುರ. ಒಂದು ಬಳ್ಳಿಗೆ ಒಂದು ಸಾವಿರ ಬೀಜ ಸಿಗುತ್ತವೆ. ಅವುಗಳ ತೂಕ ಕೇವಲ ೪೦ ಗ್ರಾಂ ಅಷ್ಟೇ.

ಹವಾಗುಣ : ಇದು ಉಷ್ಣವಲಯದ ಸೊಪ್ಪು ತರಕಾರಿ. ಹಿಮವನ್ನು ತಡೆದುಕೊಳ್ಳಲಾರದು. ಎತ್ತರದ ಪ್ರದೇಶಗಳಲ್ಲಿ ಚಳಿಗಾಲ ಮುಗಿದ ನಂತರ ಇಲ್ಲವೇ ಬೇಸಿಗೆಯ ಪ್ರಾರಂಭದಲ್ಲಿ ಬೆಳೆಯಬಹುದು. ದಕ್ಷಿಣ ಭಾರತದಲ್ಲಿ ವರ್ಷಾದ್ಯಂತ ಬೆಳೆಸಬಹುದು. ದಿನದಲ್ಲಿ ೧೩ ತಾಸುಗಳಿಗಿಂತ ಹೆಚ್ಚು ಬಿಸಿಲಿದ್ದಲ್ಲಿ ಹೂವು ಬಿಡುತ್ತವೆ. ಸಮುದ್ರಮಟ್ಟದಿಂದ ೧೧೦೦ ಮೀಟರ್ ಎತ್ತರದವರೆಗೆ ಚೆನ್ನಾಗಿ ಫಲಿಸುತ್ತದೆ.

ಭೂಗುಣ : ಫಲವತ್ತಾದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ನೀರು ಬಸಿಯುವುದು ಬಹುಮುಖ್ಯ. ಇದಕ್ಕೆ ಮರಳುಮಿಶ್ರಿತ ಗೋಡು ಅಥವಾ ಕೆಂಪುಮಣ್ಣಿನ ಭೂಮಿ ಹೆಚ್ಚು ಸೂಕ್ತ.

ತಳಿಗಳು : ಈ ಬೆಳೆಯಲ್ಲಿ ತಳಿ ಅಭಿವೃದ್ಧಿಗೆ ಅಷ್ಟೊಂದು ಗಮನ ಹರಿಸಿಲ್ಲ. ಇದರ ಎಲೆಗಳಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಮತ್ತು ಸುಣ್ಣಾಂಶಗಳಿರುವ ಕಾರಣ, ಇದರ ಸುಧಾರಣೆಗೆ ತಕ್ಕ ಪ್ರಯತ್ನಗಳನ್ನು ಮಾಡಬೇಕು. ಇದು ಬೇರು ದುಂಡು ಜಂತುಗಳಿಗೆ ಸುಲಭವಾಗಿ ತುತ್ತಾಗುವ ಕಾರಣ ನಿರೋಧಕ ತಳಿಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ.

ಇದರಲ್ಲಿ ಹೆಸರಿಸುವಂತಹ ತಳಿಗಳಾವುವೂ ಇಲ್ಲ. ಎಲೆಗಳ ಆಕಾರ ಮತ್ತು ಬಣ್ಣಗಳ ಆಧಾರದ ಮೇಲೆ ಇದನ್ನು ಮೂರು ಬಗೆಗಳಾಗಿ ವಿಂಗಡಿಸಬಹುದು. (ಅ) ಅಂಡಾಕಾರದ ಇಲ್ಲವೇ ಬಹುಮಟ್ಟಿಗೆ ಗುಂಡಗಿರುವ ಮತ್ತು ದಟ್ಟ ಹಸುರೆಲೆಗಳ ಬಗೆ; (ಆ) ಅಂಡಾಕಾರದ ಇಲ್ಲವೇ ಬಹುಮಟ್ಟಿಗೆ ಗುಂಡಗಿರುವ, ದಟ್ಟ ಕೆಂಪು ಬಣ್ಣದ ಕಾಂಡ ಹಾಗೂ ಎಲೆಗಳಿಂದ ಕೂಡಿದ ಬಗೆ; ಮತ್ತು (ಇ) ಹೃದಯಾಕಾರದ ದಟ್ಟ ಹಸುರೆಲೆಗಳ ಬಗೆ ಇವುಗಳ ಪೈಕಿ ಕಡೆಯದು ಅಷ್ಟೊಂದು ಜನಪ್ರಿಯವಾಗಿಲ್ಲ.

ಕೆಂಪು ಎಲೆಯ ಬಗೆಯನ್ನು ಅಸ್ಸಾಂ, ಬಂಗಾಳ ಮತ್ತು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಬೆಳೆಸಿ ಬಳಸುತ್ತಾರೆ. ಬಿಳಿ ಅಥವಾ ಹಸುರೆಲೆಯ ಬಗೆಯನ್ನು ಹೆಚ್ಚಾಗಿ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಬೆಳೆಯುತ್ತಾರೆ.

ಸಸ್ಯಾಭಿವೃದ್ಧಿ ಬಳ್ಳಿ ಬಸಳೆಯನ್ನು ಬೀಜ ಹಾಗೂ ಕಾಂಡದ ತುಂಡುಗಳ ಮೂಲಕ ವೃದ್ಧಿ ಮಾಡಬಹುದು. ಆಫ್ರಿಕಾದಲ್ಲಿ ಬೀಜ ಪದ್ಧತಿ ಹೆಚ್ಚು ಬಳಕೆಯಲ್ಲಿದೆ ಮತ್ತು ಏಷ್ಯಾದಲ್ಲಿ ಕಾಂಡದ ತುಂಡುಗಳನ್ನು ನೆಟ್ಟು ವೃದ್ಧಿಪಡಿಸುವುದು ಸಾಮಾನ್ಯ. ಉತ್ತರಭಾರತದಲ್ಲಿ ಚಳಿಗಾಲದ ಕಡೆಯ ಹೊತ್ತಿಗೆ ಸಾಕಷ್ಟು ಬೀಜ ಸಿಗುತವೆ. ನಿರ್ಲಿಂಗ ವಿಧಾನ ಸುಲಭ. ಅವು ಬೇಗ ಬೇರು ಬಿಟ್ಟು ಬೆಳೆಯುತ್ತವೆ. ಈ ಉದ್ದೇಶಕ್ಕೆ ಬೇರು ತುಂಡುಗಳನ್ನೂ ಸಹ ಬಳಸಬಹುದು.

ಬೀಜ ಪದ್ಧತಿಯಲ್ಲಿ ಬೀಜವನ್ನು ಎತ್ತರಿಸಿದ ಸಸಿಮಡಿಗಳಲ್ಲಿ ತೆಳ್ಳಗೆ ಬಿತ್ತಬೇಕು. ಹೆಕ್ಟೇರಿಗೆ ೧೦-೧೨ ಕಿ.ಗ್ರಾಂ. ಬೀಜ ಸಾಕು. ಉತ್ತರ ಭಾರತದಲ್ಲಿ ಮಾರ್ಚ್–ಏಪ್ರಿಲ್ ಹಾಗೂ ಜೂನ್-ಜುಲೈ ಸೂಕ್ತವಿದ್ದರೆ ದಕ್ಷಿಣ ಭಾರತದಲ್ಲಿ ಅಕ್ಟೋಬರ್-ನವೆಂಬರ್ ಉತ್ತಮ ಕಾಲ. ಸಸಿಗಳು ಸಾಕಷ್ಟು ಎತ್ತರಕ್ಕೆ ಬೆಳೆದಾಗ ಅವುಗಳನ್ನು ಕಿತ್ತು, ಗುಂಡಿಗಳಿಗೆ ವರ್ಗಾಯಿಸಬೇಕು. ಕಾಂಡದ ತುಂಡುಗಳಿಗೆ ಮಳೆಗಾಲ ಉತ್ತಮ.

ಭೂಮಿ ಸಿದ್ಧತೆ ಮತ್ತು ಸಸಿ ನಾಟಿ : ೧.೫ ಮೀಟರ್ ಅಂತರದಲ್ಲಿ ೪೫ ಸೆಂ.ಮೀ. ಗಾತ್ರದ ಗುಂಡಿಗಳಿಗೆ ಸಮಪ್ರಮಾಣದ ತಿಪ್ಪೆಗೊಬ್ಬರ ಮತ್ತು ಮೇಲ್ಮಣ್ಣುಗಳ ಮಿಶ್ರಣ ತುಂಬಿ ನೀರು ಹಾಯಿಸಿದಲ್ಲಿ ಅದು ಚೆನ್ನಾಗಿ ಕುಳಿತುಕೊಳ್ಳುತ್ತದೆ. ಸಸಿಗಳ ನಡುವೆ ೬೦ ಸೆಂಮೀ. ಅಂತರ ಇದ್ದರೆ ಸಾಕು. ಪ್ರತಿ ಗುಂಡಿನಲ್ಲಿ ಒಂದು ಸಸಿಯನ್ನು ನೆಟ್ಟು, ಆಸರೆ ಒದಗಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದಿದ್ದರೆ ೨ ಮೀಟರ್ ಎತ್ತರದಲ್ಲಿ ತಂತಿಯ ಜಾಲರಿಯನ್ನು ನಿರ್ಮಿಸಿ ಅದರ ಮೇಲೆ ಬಳ್ಳಿಯ ಹಂಬುಗಳು ಹರಡುವಂತೆ ಮಾಡಬೇಕು. ಪೊದೆಯಾಗಿ ಬೆಳೆಸುವುದಿದ್ದಲ್ಲಿ ಸುಳಿಭಾಗ ಚಿವುಟಿ ಹಾಕಬೇಕು.

ಗೊಬ್ಬರ : ಪ್ರತಿ ಬಳ್ಳಿಗೆ ವರ್ಷಕ್ಕೆ ೧೦ ಕಿ.ಗ್ರಾಂ. ತಿಪ್ಪೆಗೊಬ್ಬರ ಕೊಡಬೇಕು. ಇದನ್ನು ಎರಡು ಸಮಕಂತುಗಳಲ್ಲಿ ಜೂನ್-ಜುಲೈನಲ್ಲಿ ಮತ್ತು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಕೊಡಬೇಕು. ಇದಕ್ಕೆ ರಾಸಾಯನಿಕ ಗೊಬ್ಬರಗಳನ್ನು ಕೊಡುವ ರೂಢಿ ಇಲ್ಲ. ಗೊಬ್ಬರವನ್ನು ಮಣ್ಣು ಸಾಕಷ್ಟು ಹಸಿಯಿದ್ದಾಗ ಮಾತ್ರವೇ ಹಾಕಬೇಕು ಹಾಗೂ ಬಳ್ಳಿಗಳ ಬುಡದಿಂದ ೩೦ ಸೆಂ.ಮೀ. ದೂರದಲ್ಲಿ ಉಂಗುರಾಕಾರದ ತಗ್ಗು ತೆಗೆದು, ಅದರಲ್ಲಿ ಸಮನಾಗಿ ಹರಡಿ ಮಣ್ಣು ಮುಚ್ಚಬೇಕು.

ನೀರಾವರಿ : ಇದಕ್ಕೆ ನೀರಿನ ಅಗತ್ಯ ಹೆಚ್ಚು. ಹದವರಿತು ನೀರು ಕೊಡುತ್ತಿದ್ದಲ್ಲಿ ಬಳ್ಳಿಗಳು ಬಲು ಹುಲುಸಾಗಿ ಬೆಳೆದು ಜಾಲರಿ ಚಪ್ಪರದ ಮೇಲೆ ಬಹುಬೇಗ ಹರಡುತ್ತವೆ. ಮಳೆಗಾಲದಲ್ಲಿ ಅಷ್ಟೊಂದು ನೀರಿನ ಅವಶ್ಯಕತೆ ಇರುವುದಿಲ್ಲ. ನೀರು ಪೂರೈಕೆ ಕಡಿಮೆ ಇದ್ದರೆ ಹೂವು ಬಹುಬೇಗ ಕಾಣಿಸಿಕೊಳ್ಳುತ್ತವೆ. ಇತರ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಕೊಟ್ಟರೆ ಸಾಕು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಪ್ರಾರಂಭದ ದಿನಗಳಲ್ಲಿ ಕಳೆಗಳು ಮೊಳೆಯುವುದು ಸಹಜ. ಪ್ರತಿ ಮೂರು ನಾಲ್ಕು ನೀರಾವರಿಗೊಮ್ಮೆ ಪಾತಿಗಳಲ್ಲಿನ ಮಣ್ಣನ್ನು ಹಗುರವಾಗಿ ಕೆದಕಿ ಸಡಲಿಸುವುದು ಅಗತ್ಯ. ಬಳ್ಳಿಗಳು ಚಪ್ಪರದ ಮೇಲೆ ಹರಡಿ ಬೆಳೆದ ನಂತರ ನೆರಳಿನಿಂದಾಗಿ ಕಳೆಗಳು ಅಷ್ಟಾಗಿ ಪೀಡಿಸಲಾರವು.

ಕೊಯ್ಲು ಮತ್ತು ಇಳುವರಿ : ಬೀಜ ಸಸಿಗಳಾದರೆ ಸುಮಾರು ೧೦-೧೨ ವಾರಗಳ ನಂತರ ಸೊಪ್ಪನ್ನು ಕೊಯ್ಲು ಮಾಡಬಹುದು. ಹಂಬು ತುಂಡುಗಳನ್ನು ನೆಟ್ಟು ಬೆಳೆಸಿದಾಗ ಸುಮಾರು ೬ ವಾರಗಳ ನಂತರ ಸೊಪ್ಪನ್ನು ಕೊಯ್ಲು ಮಾಡಬಹುದು. ದಕ್ಷಿಣ ಭಾರತದ ಹವಾ ಮತ್ತು ಭೂಗುಣಗಳಲ್ಲಿ ನೆಟ್ಟ ೪೫ ದಿನಗಳಲ್ಲಿ ಮೊದಲ ಕೊಯ್ಲು ಸಾಧ್ಯ. ಅಲ್ಲಿಂದಾಚೆಗೆ ಪ್ರತಿವಾರ ಸೊಪ್ಪನ್ನು ಕೊಯ್ಲು ಮಾಡಬಹುದು. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಇಳುವರಿ ಜಾಸ್ತಿ. ಹೆಕ್ಟೇರಿಗೆ ೨೦ ಟನ್ನುಗಳಿಗೂ ಮೇಲ್ಪಟ್ಟು ಇಳುವರಿ ಸಿಗುತ್ತದೆ. ಇತರ ದೇಶಗಳಲ್ಲಿ ಹೆಕ್ಟೇರಿಗೆ ೫೦ ರಿಂದ ೮೦ ಟನ್ ಇಳುವರಿ ಸಿಕ್ಕಿದ ಉದಾಹರಣೆಗಳುಂಟು. ಹೀಗೆ ಹಲವಾರು ವರ್ಷಗಳವರೆಗೆ ಸೊಪ್ಪು ಸಿಗು‌ತ್ತಲೇ ಇರುತ್ತದೆ.

ಕೀಟ ಮತ್ತು ರೋಗಗಳು : ಈ ಬೆಳೆಗೆ ಹಾನಿಯನ್ನುಂಟು ಮಾಡುವ ಕೀಟ ಮತ್ತು ರೋಗಗಳು ಕಡಿಮೆ. ಕೆಲವೊಮ್ಮೆ ದುಂಡುಜಂತುಗಳ ಹಾವಳಿ ಇರುವುದುಂಟು. ಅವುಗಳ ಹತೋಟಿಗೆ ಪ್ರತಿ ಬಳ್ಳಿಗೆ ೧೦ ಗ್ರಾಂ ಫ್ಯೂರಡಾನ್ ಕೀಟನಾಶಕವನ್ನು ಮಣ್ಣಿಗೆ ಸೇರಿಸಬೇಕು. ಆಗಾಗ್ಗೆ ಎಲೆಗಳ ಮೇಲೆ ಕೆಂಪು ಚುಕ್ಕೆಗಳು ಕಾಣಿಸಿಕೊಳ್ಳುವುದುಂಟು. ಇದು ಶಿಲೀಂಧ್ರರೋಗ. ಸರ್ಕೊಸ್ಪೋರ ಮತ್ತು ಇತರ ಪ್ರಭೇದಗಳ ಶಿಲೀಂಧ್ರಗಳಿಂದ ಈ ರೋಗ ಸಂಭವಿಸುತ್ತದೆ. ಅಂತಹ ಎಲೆಗಳ ವೃದ್ಧಿ ಕುಸಿಯುತ್ತದೆ ಹಾಗೂ ಅವು ನೋಡಲು ಆಕರ್ಷಕವಾಗಿರುವುದಿಲ್ಲ. ಯಾವುದಾದರೂ ತಾಮ್ರಯುಕ್ತ ಶಿಲೀಂಧ್ರನಾಶಕ ಸಿಂಪಡಿಸಿ ಇದನ್ನು ಹತೋಟಿ ಮಾಡಬಹುದು.

* * *