’ಕೃಷಿ ಜ್ಞಾನ ಭಂಡಾರ’ ರೈತರ ಜನಮನವನ್ನು ತಲುಪುವ ಉನ್ನತವಾದ ಉದ್ದೇಶದಿಂದ ಪ್ರಾರಂಭವಾದ ಒಂದು ಅಪೂರ್ವ ಜ್ಞಾನವಾಹಿನಿ. ’ಕೃಷಿತೋ ನಾಸ್ತಿ ದುರ್ಭಿಕ್ಷಂ’, ಇದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಲಾಂಛನದ ಹೊನ್ನುಡಿ. ವಿಜ್ಞಾನ ಪ್ರಗತಿಯಾದಂತೆ ಕೃಷಿ ಜ್ಞಾನ ಭಂಡಾರವು ತುಂಬಿ ಹರಿಯುತ್ತದೆ. ನಾಡಿನ ಸುಭಿಕ್ಷತೆಗೆ ನಾಂದಿಯಾಗುತ್ತದೆ. ರೈತ ಸಂಸ್ಕೃತಿ ಸಮೃದ್ಧಿಯಾಗುತ್ತದೆ. ಇದರಲ್ಲಿ ಕೃಷಿ ವಿಜ್ಞಾನಿಗಳ, ಚಿಂತಕರ ಪಾತ್ರ ಅಪಾರ. ವಿಶ್ವಗಾಮಿನಿಯಾದ ವಿಚಾರ, ಚಿಂತನೆಗಳು ಮಾನವನ ಪ್ರಗತಿ, ಮುನ್ನಡೆಯ ದ್ಯೋತಕ ಇದಕ್ಕೆ ಪೂರಕವಾದ ವೈಜ್ಞಾನಿಕ ಕಿರು ಪುಸ್ತಕಗಳನ್ನು ಸರಳ, ಸುಂದರ, ವಿಚಾರಪೂರ್ಣ ಶೈಲಿಯಲ್ಲಿ ರೈತರಿಗೆ ಒದಗಿಸಿಕೊಡುವ ವಿಶಿಷ್ಟ ಕಾರ್ಯವನ್ನು ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಕೈಗೊಳ್ಳಲಾಗಿದೆ.

ಮಾನವನ ಆಹಾರದಲ್ಲಿ ತರಕಾರಿಗಳ ಬಳಕೆ ಬಹಳ ಮುಖ್ಯವಾದ ಅಂಶವಾಗಿದೆ. ಇವು ಶರೀರದ ಪೋಷಣೆಗೆ ಅವಶ್ಯಕವಾದ ಖನಿಜವಸ್ತುಗಳು, ಜೀವಸತ್ವಗಳು ಹಾಗೂ ಇತರ ಪೋಷಕಾಂಶಗಳನ್ನು ಹೇರಳವಾಗಿ ಒದಗಿಸುತ್ತವೆ. ಧಾರಾಳವಾದ ತರಕಾರಿಗಳ ಸೇವನೆಯಿಂದ ದೇಹಕ್ಕೆ ರೋಗನಿರೋಧಕ ಸಾಮರ್ಥ್ಯ ಉಂಟಾಗುತ್ತದೆ.

ನಮ್ಮ ದೇಶದಲ್ಲಿ ತರಕಾರಿ ಬೆಳೆಯುವ ಪ್ರದೇಶ ಬಹಳ ಕಡಿಮೆ. ಸಾಗುವಳಿ ಪ್ರದೇಶದ ಶೇ.೧ರಿಂದ ೨ರಷ್ಟು ಜಮೀನಿನಲ್ಲಿ ಮಾತ್ರ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ತರಕಾರಿ ಬೇಸಾಯ ಹೆಚ್ಚಾಗಿ ಪಟ್ಟಣ ಮತ್ತು ನಗರಪ್ರದೇಶಗಳ ಸುತ್ತಮುತ್ತ ಕಂಡುಬರುತ್ತದೆ. ಏಕೆಂದರೆ ಬೆಳೆದ ತರಕಾರಿಗಳ ಮಾರಾಟ ಇಲ್ಲಿ ಬಹಳ ಸುಲಭ. ಸಮತೋಲನ ಆಹಾರ ಒದಗಿಸುವ ಉದ್ದೇಶದಿಂದ ತರಕಾರಿ ಬೇಸಾಯ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚಾಗಿ ಆಗಬೇಕಾಗಿದೆ.

ತರಕಾರಿಗಳನ್ನು ಹಲವು ಬೆಳಗುಂಪುಗಳಾಗಿ ವರ್ಗೀಕರಣ ಮಾಡಬಹುದು. ಬೆಳೆಯುವ ಋತುಮಾನವನ್ನನುಸರಿಸಿ ಮಳೆಗಾಲದ, ಚಳಿಗಾಲದ ಹಾಗೂ ಬೇಸಿಗೆಕಾಲದ ತರಕಾರಿಗಳು, ತರಕಾರಿಯಾಗಿ ಬಳಸುವ ಸಸ್ಯಭಾಗದ ಆಧಾರದ ಮೇಲೆ ಗೆಡ್ಡೆ, ಎಲೆ, ಕಾಯಿ ಹಾಗೂ ಹೂ ತರಕಾರಿಗಳು ಹಾಗೂ ಬೆಳೆ ಅವಧಿ ಆಧಾರದ ಮೇಲೆ ವಾರ್ಷಿಕ, ದ್ವೈವಾರ್ಷಿಕ ಮತ್ತು ಬಹುವಾರ್ಷಿಕ ತರಕಾರಿಗಳು ಎಂದು ವರ್ಗೀಕರಿಸಲಾಗಿದೆ.

ಕೃಷಿ ಜ್ಞಾನ ಭಂಡಾರ ಮಾಲಿಕೆಯಲ್ಲಿ ೧೩ನೇ ಪ್ರಕಟಣೆಯಾಗಿ ಹಾಗೂ ತರಕಾರಿ ಬೇಸಾಯದ ಬಗ್ಗೆ ೨ನೇ ಪ್ರಕಟಣೆಯಾಗಿ ಹೊರಬರುತ್ತಿರುವ ಈ ಪುಸ್ತಕದಲ್ಲಿ ಬಳ್ಳಿ ಹಾಗೂ ಸೊಪ್ಪು ತರಕಾರಿಗಳನ್ನು ಕುರಿತಂತೆ ತಾಂತ್ರಿಕ ಮಾಹಿತಿ ಕೊಡಲಾಗಿದೆ. ಇದರಲ್ಲಿ ಪಡವಲ, ಹೀರೆ, ಕುಂಬಳ, ಬೂದುಗುಂಬಳ, ಚಪ್ಪರದವರೆ ಮುಂತಾದ ಬಳ್ಳಿ ತರಕಾರಿಗಳು ಹಾಗೂ ದಂಟು, ಹರಿವೆ, ಮೆಂತೆ, ಚಕ್ಕೋತ, ಪಾಲಕ್ ಮುಂತಾದ ಸೊಪ್ಪು ತರಕಾರಿಗಳ ಬಗ್ಗೆ ಸುಧಾರಿತ ತಳಿಗಳು, ಬೇಸಾಯ ಪದ್ಧತಿಗಳು ಹಾಗೂ ಸಸ್ಯಸಂರಕ್ಷಣೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ. ಈ ಪುಸ್ತಕವನ್ನು ನಿವೃತ್ತ ತೋಟಗಾರಿಕೆ ಪ್ರಾಧ್ಯಾಪಕ ಡಾ|| ಎಂ.ಎ.ನಾರಾಯಣ ರೆಡ್ಡಿಯವರು ಬರೆದಿರುತ್ತಾರೆ ಹಾಗೂ ಇದರ ತಾಂತ್ರಿಕ ಪರಿಶೀಲನೆಯನ್ನು ಡಾ|| ಕೆ.ಪಿ. ವಸಂತಶೆಟ್ಟಿಯವರು ಮಾಡಿಕೊಟ್ಟಿದ್ದಾರೆ. ಈ ಪುಸ್ತಕದ ಕರಡೋದುವಿಕೆಯಲ್ಲಿ ಕರಡೋದುಗಾರರಾದ ಶ್ರೀ ಎಂ. ರಮೇಶ್ ನೆರವಾಗಿದ್ದಾರೆ.

ಈ ಪುಸ್ತಕ ಎಲ್ಲಾ ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ಕೃಷಿಯಲ್ಲಿ ಆಸಕ್ತಿ ಹೊಂದಿದ ಇತರರಿಗೆ ಹೆಚ್ಚಿನ ಮಾಹಿತಿ ಒದಗಿಸುವುದೆಂದು ಆಶಿಸಲಾಗಿದೆ.

ಡಾ|| ಬಿ.ಎಸ್. ಸಿದ್ದರಾಮಯ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಹಾಗೂ
ಕನ್ನಡ ಅಭಿವೃದ್ಧಿ ಸಮಿತಿ ಕಾರ್ಯದರ್ಶಿಗಳು
ಕನ್ನಡ ಅಧ್ಯಯನ ವಿಭಾಗ
ಕೃಷಿ ವಿಶ್ವವಿದ್ಯಾನಿಲಯ
ಹೆಬ್ಬಾಳ, ಬೆಂಗಳೂರು-೫೬೦ ೦೨೪