ಇಂದು ತರಕಾರಿ ಬೆಳೆಗಳ ಬೇಸಾಯ ಮತ್ತು ಉತ್ಪಾದನೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಅವುಗಳ ಪೌಷ್ಟಿಕ ಮೌಲ್ಯ ಮತ್ತುಬಳಕೆಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಅಗತ್ಯ, ವೈಜ್ಞಾನಿಕ ಬೇಸಾಯ ಪದ್ಧತಿಗಳು ಮತ್ತು ತರಕಾರಿ ಜೋಪಾಸನೆ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವನ್ನು ಮೂಡಿಸಬೇಕಾಗಿದೆ.

ನಮ್ಮ ದೇಶದಲ್ಲಿ ಸಾಗುವಳಿ ಪ್ರದೇಶದ ಶೇಕಡಾ ೧.೨ ರಷ್ಟು ಜಮೀನಿನಲ್ಲಿ ಮಾತ್ರ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅವುಗಳಿಂದ ಸಿಗುವ ವಾರ್ಷಿಕ ಉತ್ಪಾದನೆ ಕೇವಲ ೧೬ ದಶಲಕ್ಷ ಟನ್ನುಗಳಷ್ಟು. ಸಮತೋಲನ ಆಹಾರದಲ್ಲಿ ಒಬ್ಬರಿಗೆ ದಿನವೊಂದಕ್ಕೆ ಕಡೇಪಕ್ಷ ೩೦೦ ಗ್ರಾಂ ಗಳಷ್ಟಾದರೂ ತರಕಾರಿಗಳು ಇರಬೇಕಾದ್ದು ಅಗತ್ಯ. ಆದರೆ ಈಗ ಸೇವಿಸುತ್ತಿರುವ ಪ್ರಮಾಣ ಕೇವಲ ೪೫ ಗ್ರಾಂ ಗಳಷ್ಟು ಮಾತ್ರ.

ಶರೀರದ ಬೆಳವಣಿಗೆಗೆ ಅಗತ್ಯವಿರುವ ಶರ್ಕರಪಿಷ್ಟ, ಪ್ರೊಟೀನ್, ಖನಿಜ ಪದಾರ್ಥಗಳು, ಜೀವಸತ್ವಗಳು, ನಾರು ಇತ್ಯಾದಿಗಳು ತರಕಾರಿಗಳಲ್ಲಿ ಸಾಕಷ್ಟು ಪ್ರಮಾಣಲದ್ಲಿ ಇರುತ್ತವೆ. ನಾವು ದಿನನಿತ್ಯ  ಸೇವಿಸುವ ಆಹಾರದಲ್ಲಿ ಪ್ರಮುಖ ಕೊರತೆಯೆಂದರೆ ಕ್ಯಾಲೊರಿಗಳು, ’ಎ’ ಜೀವಸತ್ವ ಮತ್ತು ರೈಬೋಫ್ಲೇವಿನ್‌ಗಳು. ಕೆಲವು ತರಕಾರಿಗಳು ಅಧಿಕ ಪ್ರಮಾಣದ ಪ್ರೊಟೀನ್ ಹೊಂದಿರುತ್ತವೆ. ಹಾಗಾಗಿ ಅವು ಆಹಾರಧಾನ್ಯ ಮತ್ತು ಬೇಳೆಕಾಳುಗಳಲ್ಲಿನ ಪ್ರೊಟೀನ್ ಸತ್ವವನ್ನು ಸುಲಭವಾಗಿ ಪೂರೈಸಬಲ್ಲವು. ಅದೇ ರೀತಿ ಕೆಲವೊಂದು ತರಕಾರಿಗಳು ಹಾಗೂ ಸೊಪ್ಪುಗಳು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸಬಲ್ಲವು. ತಿಂಗಳ ಹುರುಳಿ, ಲೈಮಾ ಅವರೆ, ಬಟಾಣಿ ಮುಂತಾದುವು ಅಧಿಕ ಪ್ರೊಟೀನ್ ಅನ್ನು ಒದಗಿಸುತ್ತವೆ. ಕ್ಯಾರೆಟ್, ಬೀಟ್, ದಂಟು, ಹರಿವೆ, ಕುಂಬಳ, ಸಿಹಿಗೆಣಸು ಮುಂತಾದವು ’ಎ’ ಜೀವಸತ್ವದ ಒಳ್ಳೆಯ ಮೂಲವಾಗಿವೆ. ಟೊಮೊಟೊ, ಮೆಣಸಿನಕಾಯಿ, ಹಾಗಲ, ಮುಂತಾದವುಗಳಲ್ಲಿ ಅಧಿಕ ಪ್ರಮಾಣದ ’ಸಿ’ ಜೀವಸತ್ವ ಇರುತ್ತದೆ. ಸೊಪ್ಪು ತರಕಾರಿಗಳಲ್ಲಿ ಅಧಿಕ ಪ್ರಮಾಣದ ರೈಬೋಪ್ಲೇವಿನ್, ಖನಿಜ ವಸ್ತುಗಳು ಮತ್ತು ನಾರಿನ ಅಂಶ ಸಹ ಇರುತ್ತವೆ. ಸಿಹಿಗೆಣಸು, ಮರಗೆಣಸು, ಆಲೂಗೆಡ್ಡೆ ಮುಂತಾದುವುಗಳಲ್ಲಿ ಶರ್ಕರಪಿಷ್ಟಗಳು ಹೆಚ್ಚಿಗೆ  ದೊರೆಯುತ್ತವೆ. ಅವುಗಳ ಸೇವನೆಯಿಂದ ಇತರ ಆಹಾರ ಪದಾರ್ಥಗಳ ಅವಶ್ಯಕತೆ ಕಡಿಮೆಯಾಗುತ್ತದೆ. ತರಕಾರಿಗಳು ’ರಕ್ಷಣಾಹಾರ’ ಗಳು. ಅವುಗಳಲ್ಲಿ ಔಷಧೀಯ ಗುಣಗಳಿರುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಅಗತ್ಯವಾಗಿರುತ್ತವೆ.

ದಿನನಿತ್ಯ ತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಬೇಕು. ಅವು ಅಗತ್ಯ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಆಹಾರ ಪದಾರ್ಥಗಳಿಗೆ ಒಳ್ಳೆಯ ರುಚಿ ಮತ್ತು ವೈವಿಧ್ಯತೆಗಳನ್ನುಂಟುಮಾಡುತ್ತವೆ. ಈ ಬೆಳೆಗಳಿಂದ ಬಹುಬೇಗ ಫಲ ಸಿಗುವುರೊಂದಿಗೆ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ದೊರೆಯುತ್ತದೆ.

ತರಕಾರಿ ಬೇಸಾಯದಲ್ಲಿ ಕೂಲಿಯಾಳುಗಳ ಅಭಾವ ಅಥವಾ ದುಬಾರಿ ಕೂಲಿ, ಸರಿಯಾದ ಬಿತ್ತನೆ ಸಾಮಗ್ರಿ ಸಿಗದಿರುವುದು, ರಾಸಾಯನಿಕ ಗೊಬ್ಬರಗಳ ಹೆಚ್ಚಿನ ಬೆಲೆ, ಸರಕು ಸಾಗಾಣಿಕೆಯಲ್ಲಿ ಅವ್ಯವಸ್ಥೆ, ಸಂಗ್ರಹಣೆ ಸಮರ್ಪಕವಾಗಿಲ್ಲದಿರುವುದು, ಮಾರಾಟ ವ್ಯವಸ್ಥೆ ಮತ್ತು ಕೊಯ್ಲು ನಂತರದ ಸಂಸ್ಕರಣೆ ಸಾಕಷ್ಟು ಇಲ್ಲದಿರುವುದು ಮುಂತಾದ ಅನೇಕ ತೊಂದರೆಗಳು ಇರುತ್ತವೆ.

ಉತ್ತಮ ಬಿತ್ತನೆ ಬಳಸಿದರೆ ಅರ್ಧ ಬೆಳೆ ಕೈಗೆ ಬಂದಂತೆ. ಕೀಟ ಹಾಗೂ ರೋಗಗಳಿಂದ ಮುಕ್ತವಿರುವ ಬಿತ್ತನೆ ಬೀಜ ಹಾಗೂ ಸಾಮಗ್ರಿಗಳನ್ನು ಪ್ರಮಾಣಿಕೃತ ಮೂಲದಿಂದ ಪಡೆದು ಬಳಸಬೇಕು. ಅಗತ್ಯಕ್ಕೆ ತಕ್ಕಂತೆ ಗೊಬ್ಬರಗಳನ್ನು ಸೂಕ್ತ ಸಮಯದಲ್ಲಿ ಕೊಡಬೇಕು.

ಪ್ರಸ್ತುತ ಪುಸ್ತಕಲದಲ್ಲಿ ವಿವಿಧ ಬಳ್ಳಿ ಮತ್ತು ಸೊಪ್ಪು ತರಕಾರಿ ಬೆಳೆಗಳ ಬೇಸಾಯ ಕ್ರಮಗಳನ್ನು ಕುರಿತು ವಿವರಿಸಿದೆ.

ತರಕಾರಿ ಬೇಸಾಯದ ಲಾಭಗಳು

ತರಕಾರಿ ಬೆಳೆ ಬೆಳೆಯುವುದರಿಂದ ಪೌಷ್ಟಿಕ ಹಾಗೂ ಸಮತೋಲನ ಆಹಾರ ಲಭಿಸುತ್ತದೆ ನಿಗದಿ ಪಡಿಸಿದ ಕ್ಷೇತ್ರದಲ್ಲಿ ಹೆಚ್ಚಿನ ಉತ್ಪಾದನೆ ಸಾಧ್ಯ. ಈ ಬೆಳೆಗಳಿಂದ ಹೆಚ್ಚಿನ ಆದಾಯ ಸಹ ಪಡೆಯಬಹುದು. ಕ್ಷೇತ್ರ ವ್ಯಾಪ್ತಿ ಕಡಿಮೆ ಇರುವವರು ವರ್ಷದಲ್ಲಿ ಹಲವಾರು ಬೆಳೆಗಳನ್ನು ಬೆಳೆದು ಸರಿತೂಗಿಸಿಕೊಳ್ಳಬಹುದು. ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆದಾಗ ಫಲವತ್ತತೆ  ತನ್ನಷ್ಟಕ್ಕೆ ತಾನೇ ಸುಧಾರಿಸುತ್ತದೆ. ಅದರ ಜೊತೆಗೆ ಬೆಳೆ ಸೊಪ್ಪು ಸೆದೆ, ಕೂಳೆ ಮುಂತಾದುವು ಮಣ್ಣಿಗೆ ಸೇರಿ ಅದರ ಭೌತಿಕ, ರಾಸಾಯನಿಕ ಹಾಗು ಜೈವಿಕ ಗುಣಗಳು ಸುಧಾರಿಸುತ್ತವೆ. ಮುಖ್ಯ ಬೆಳೆಗಳ ಜೊತೆಗೆ ಕಡಿಮೆ ಅವಧಿಯ ಮಿಶ್ರ ಬೆಳೆಗಳನ್ನು ಬೆಳೆದು ಲಾಭ ಪಡೆಯಬಹುದು. ಉದಾಹರಣೆಗೆ ಆಲೂಗೆಡ್ಡೆಯಲ್ಲಿ ಈರುಳ್ಳಿ, ಕೊತ್ತಂಬರಿ ಇತ್ಯಾದಿಗಳನ್ನು ಹಲವಾರು ರೈತರು ಬೆಳೆಯುತ್ತಿರುತ್ತಾರೆ. ಪ್ರಸ್ತುತ ಆರ್ಥಿಕತೆಯಲ್ಲಿ ವಿದೇಶಿ ವಿನಿಮಯದ  ಗಳಿಕೆ ಬಹು ಮುಖ್ಯವಾದುದು. ವಿವಿಧ ತರಕಾರಿಗಳು, ಬಿತ್ತನೆ ಸಾಮಗ್ರಿ ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ರಫ್ತು ಮಾಡಿ ಹೆಚ್ಚಿನ ವಿದೇಶಿ ವಿನಿಮಯ ಗಳಿಸಬಹುದು.

ತರಕಾರಿ ಬೆಳೆ ಕ್ಷೇತ್ರ ಮತ್ತು ಉತ್ಪಾದನೆ ಹೆಚ್ಚಿಸಲು ಇರುವ ಅವಕಾಶಗಳು

ತರಕಾರಿಗಳಿಗೆ ಆಂತರಿಕ ಬೇಡಿಕೆ ಸಾಕಷ್ಟಿದ್ದು ಕೆಲವೊಮ್ಮೆ ಅದನ್ನು ನೀಗಿಸಲು ಸಾಧ್ಯವಾಗುತ್ತಿಲ್ಲ. ಅದರಂತೆಯೇ ಹೊರರಾಷ್ಟ್ರಗಳೂ ವಿವಿಧ ತರಕಾರಿಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಆದರೆ ಈ ಪ್ರಮಾಣ ಇನ್ನೂ ಅಧಿಕಗೊಳ್ಳಬೇಕು. ಕರ್ನಾಟಕ ರಾಜ್ಯದ ಹಾಗೂ ಭಾರತದ ಹವಾ ಮತ್ತು ಭೂಗುಣಗಳು ತರಕಾರಿ ಬೇಸಾಯಕ್ಕೆ ಹೇಳಿ ಮಾಡಿಸಿದಂತಿವೆ. ಹಾಗಾಗಿ ವರ್ಷಾದ್ಯಂತ ವಿವಿಧ ತರಕಾರಿಗಳನ್ನು ಬೆಳೆಸಬಹುದಾಗಿದೆ.

ಇತ್ತೀಚೆಗೆ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಖಾಸಗಿ ಸಂಸ್ಥೆಗಳು, ರಾಷ್ಟ್ರೀಯ ಬೀಜ ನಿಗಮ ಮತ್ತು ಆಗ್ರೋ ಕೇಂದ್ರಗಳು ಉತ್ತಮ ತರಕಾರಿ ಬೀಜ ಹಾಗು ಬಿತ್ತನೆ ಸಾಮಗ್ರಿಗಳನ್ನು ಉತ್ಪಾದಿಸಿ, ರೈತರಿಗೆ ಒದಗಿಸುತ್ತಿವೆ.

ಆಲೂಗೆಡ್ಡೆಯ ನೈಜ ಬೀಜೋತ್ಪಾದನೆ ಸಹ ಹೆಮ್ಮೆಯ ಸಾಧನೆಯೇ ಆಗಿದೆ. ಅವು ರೈತರಿಗೆ ಸಕಾಲ್ಕಕೆ ಸಿಗುವಂತೆ ಬೀಜೋತ್ಪಾದನಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು. ಕ್ಯಾರೆಟ್ ಬಟಾಣಿ, ಕೋಸು, ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಹುರುಳಿಕಾಯಿ, ಟೊಮೊಟೊ, ಆಲೂಗೆಡ್ಡೆ ಮುಂತಾದ ತರಕಾರಿಗಳಿಗೆ ಹೊರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಕಾರಣ ಈ ಬೆಳೆಗಳ ಕ್ಷೇತ್ರವನ್ನು ದ್ವಿಗುಣಗೊಳಿಸಬೇಕಲ್ಲದೆ ಅವುಗಳ ಬೀಜೋತ್ಪಾದನೆಗೂ ಹೆಚ್ಚಿನ ಆದ್ಯತೆ ಕೊಡಬೇಕು. ಈ ತರಕಾರಿಯ ರಫ್ತಿನ ಪ್ರಮಾಣವನ್ನು ಹೆಚ್ಚಿಸಿ ಅಮೂಲ್ಯವಾದ ವಿದೇಶಿ ವಿನಿಮಯ ಮತ್ತಷ್ಟು ಸಿಗುವಂತೆ ಮಾಡುವುದು ಅಗತ್ಯ.

ತರಕಾರಿಗಳು ಕೊಯ್ಲಿನ ನಂತರ ಬಹುಬೇಗ ಕೆಡುತ್ತವೆ. ಹಾಗಾಗಿ ಅವುಗಳನ್ನು ಅದಷ್ಟು ಬೇಗ ಸಾಗಿಸಿ ಮಾರಾಟ ಮಾಡಬೇಕು. ಸಾಗಾಣಿಕೆ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಉತ್ತಮವಾದರೂ ಇನ್ನೂ ಸುಧಾರಣೆ ಆಗಬೇಕು. ದೂರದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ತರಕಾರಿಗಳಿಗೆ ಶೈತ್ಯಾಗಾರ ಕೊಠಡಿಗಳಿದ್ದರೆ ಅಂತಹ ಸರಕು ಹೆಚ್ಚು ಕಾಲ ಕೆಡದಂತೆ ಇರುತ್ತದೆ. ಇದು ಇನ್ನೂ ಸುಧಾರಣೆ ಆಗಬೇಕು.

ಸಂಸ್ಕರಿಸಿದ ತರಕಾರಿಗಳಿಗೆ ವಿದೇಶಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಈರುಳ್ಳಿ, ಎಲೆಕೋಸು ಬಟಾಣಿ ಮುಂತಾದವುಗಳನ್ನು ಒಣಗಿಸಿ, ಜೋಪಾನಮಾಡಿ  ಹೊರದೇಶಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಅದೇ ರೀತಿ ವಿವಿಧ ಪದಾರ್ಥಗಳನ್ನು ತರಯಾರಿಸಿ ಸಹ ರಫ್ತು ಮಾಡಬಹುದು. ಉದಾಹರಣೆಗೆ ಟೊಮೊಟೊ ಹಣ್ಣುಗಳಿಂದ ತಯಾರಿಸಿದ ಕೆಚಪ್, ಜ್ಯೂಸ್, ಸಾಸ್ ಮುಂತಾದ ಪದಾರ್ಥಗಳಿಗೆ ಹೊರ ದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಅದೇ ರೀತಿ ಆಲೂಗೆಡ್ಡೆಯಿಂದ ಚಿಪ್ಸ್, ಪುಡಿಗಳನ್ನು ಸಹ ತಯಾರಿಸಿ ರಫ್ತು ಮಾಡಲಾಗುತ್ತಿದೆ. ಸಂಸ್ಕರಣಾ ಘಟಕಗಳು ಹೆಚ್ಚಾಗಬೇಕು ಹಾಗು ಪದಾರ್ಥಗಳ ರಫ್ತಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕು.

ತರಕಾರಿ ಬೆಳೆಗಳ ವರ್ಗೀಕರಣ

ತರಕಾರಿ ಬೆಳೆಗಳನ್ನು ಋತುಮಾನ, ಬೇಸಾಯ ಕ್ರಮಗಳು, ಆಹಾರವಾಗಿ ಬಳಸಲ್ಪಡುವ ಸಸ್ಯ ಭಾಗಗಳು, ಮೇಲ್ಮೈ ಲಕ್ಷಣಗಳು, ಸಸ್ಯ ಶಾಸ್ತ್ರೀಯ ಗುಣಗಳು, ಹವಾಗುಣ ಮುಂತಾದ ಅಂಶಗಳ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವರ್ಗೀಕರಿಸಿದೆ.

. ಋತುಮಾನವನ್ನು ಅನುಸರಿಸಿ

ಈ ವರ್ಗೀಕರಣ ಬೆಳೆಗಾರರಿಗೆ ಮತ್ತು ತೋಗಾರಿಕೆ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾದುದು. ಆಯಾಪ್ರದೇಶದಲ್ಲಿ ಲಭ್ಯವಿರುವ ನಿರ್ದಿಷ್ಟ ಋತುಮಾನಗಳ ಆಧಾರದ ಮೇಲೆ ತರಕಾರಿ ಬೆಳೆಗಳನ್ನು ಅವುಗಳ ಅತ್ಯುತ್ತಮ ಬೆಳವಣಿಗೆ ಮತ್ತು ಉತ್ಪಾದನೆಗಳು ಸಾಧ್ಯವಿರುವ ಕಾಲಗಳಿಗೆ ತಕ್ಕಂತೆ ವರ್ಗೀಕರಿಸಲಾಗಿದೆ. ಸೂಚಿಸಿದ ಋತುಮಾನಗಳಲ್ಲಿ ಬೆಳೆದಾಗಲೇ ಗರಿಷ್ಠ ಇಳುವರಿ ಮತ್ತು ಗುಣಮಟ್ಟಗಳು ಸಾಧ್ಯ. ವಿವಿಧ ಋತುಮಾನಗಳು ಹಾಗೂ ಅವುಗಳಿಗೆ ಸರಿಹೊಂದುವ ತರಕಾರಿ ಬೆಳೆಗಳು ಈ ಮುಂದಿನಂತಿರುತ್ತವೆ.

. ಬೇಸಿಗೆ ಕಾಲದ ತರಕಾರಿ ಬೆಳೆಗಳು: ಈ ವರ್ಗದಲ್ಲಿ ಸೋರೆ, ಹಾಗಲ, ಪಡವಲ, ಬೂದುಗುಂಬಳ, ಹೀರೆ, ತುಪ್ಪದ ಹೀರೆ, ಕುಂಬಳ, ಸೌತೆ, ಬೆಂಡೆ, ಟೊಮಾಟೊ, ಬದನೆ, ಖಾರದ ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ, ಗೋರಿಕಾಯಿ, ಅಲಸಂದೆ, ದಂಟು ಜಾತಿಗೆ ಸೇರಿದ ಸೊಪ್ಪು ತರಕಾರಿಗಳು, ಗೋಣಿಸೊಪ್ಪು, ತಿಂಗಳ ಹುರುಳಿಕಾಯಿ ಮುಂತಾದವು ಬರುತ್ತವೆ. ಸಾಮಾನ್ಯವಾಗಿ ಬೇಸಿಗೆ ಕಾಲ ದಕ್ಷಿಣದ ರಾಜ್ಯಗಳಲ್ಲಿ ಫೆಬ್ರುವರಿಯಿಂದ ಮೇ ವರೆಗೆ ಮತ್ತು ಉತ್ತರ ಭಾರತದಲ್ಲಿ ಫೆಬ್ರುವರಿಯಿಂದ ಜೂನ್‌ವರೆಗೆ ಇರುತ್ತದೆ.

. ಮಳೆಗಾಲದ ತರಕಾರಿ ಬೆಳೆಗಳು: ಈ ವರ್ಗದಲ್ಲಿ ಸೋರೆ, ಹಾಗಲ, ಪಡವಲ, ಬೂದುಗುಂಬಳ, ಹೀರೆ, ತುಪ್ಪದ ಹೀರೆ, ತೊಂಡೆ, ಕುಂಬಳ, ಬೆಂಡೆ, ಟೊಮಾಟೊ, ಬದನೆ, ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ, ಅಲಸಂದಿ, ಸೀಮೆಬದನೆ, ಗೋರಿಕಾಯಿ, ಅವರೆ, ತಿಂಗಳ ಹುರುಳಿ ಮುಂತಾದವು ಇರುತ್ತವೆ.

. ಚಳಿಗಾಲದ ತರಕಾರಿ ಬೆಳೆಗಳು: ಈ ವರ್ಗದಲ್ಲಿ ಎಲೆಕೋಸು, ಹೂಕೋಸು, ನವಿಲುಕೋಸು, ಟರ್ನಿಪ್, ಕ್ಯಾರೆಟ್, ಮೂಲಂಗಿ, ಬೀಟ್‌ರೂಟ್, ಚುಕ್ಕೆ ಸೊಪ್ಪು, ಲೆಟ್ಯೂಸ್, ಈರುಳ್ಳಿ, ಬೆಳ್ಳುಳ್ಳಿ, ತಿಂಗಳ ಹುರುಳಿ, ಬಟಾಣಿ, ಆಲೂಗೆಡ್ಡೆ, ಮೆಂತ್ಯ ಮುಂತಾದುವು ಸೇರುತ್ತವೆ.

ಟೊಮಾಟೊ, ಬದನೆ, ಮೆಣಸಿನಕಾಯಿ, ದೊಣ್ಣೆಮೆಣಸಿನಕಾಯಿ, ಬೆಂಡೆ, ಕುಂಬಳ ಜಾತಿಗೆ ಸೇರಿದ ತರಕಾರಿಗಳು ಮುಂತಾದುವನ್ನು ವರ್ಷಾದ್ಯಂತ ಬೆಳೆಯಬಹುದು.

. ಬೇಸಾಯ ಪದ್ಧತಿಗಳನ್ನನುಸರಿಸಿ

ಈ ವರ್ಗೀಕರಣವು ಬೆಳೆಗಾರರಿಗೆ ಹೆಚ್ಚು ಅನುಕೂಲಕರ. ಈ ಗುಂಪಿನಲ್ಲಿ ಬರುವ ತರಕಾರಿ ಬೆಳೆಗಳಿಗೆ ಒಂದೇ ರೀತಿಯ ಬೇಸಾಯ ಕ್ರಮಗಳು ಇರುತ್ತವೆ. ಹಾಗಾಗಿ ಅವುಗಳ ನಿರ್ವಹಣೆ ಸುಲಭವಿರುತ್ತದೆ.

. ಕೋಸು ಜಾತಿಗೆ ಸೇರಿದ ತರಕಾರಿಗಳು: ಇದರಲ್ಲಿ ಎಲೆಕೋಸು, ಹೂಕೋಸು, ನವಿಲುಕೋಸು, ಲೆಟ್ಯೂಸ್ ಮುಂತಾದುವು ಸೇರುತ್ತವೆ. ಬೇಸಾಯ ಕ್ರಮಗಳು ಸಾಮಾನ್ಯವಾಗಿ ಒಂದೇ ತೆರನಾಗಿರುತ್ತವೆ.

. ಸೊಪ್ಪು ತರಕಾರಿಗಳು: ಈ ಗುಂಪಿನಲ್ಲಿ ಬಸಳೆ, ಪಾಲಕ್, ಕೊತ್ತಂಬರಿ, ಮೆಂತ್ಯ, ದಂಟು ಜಾತಿಯ ಸೊಪ್ಪುಗಳು, ಸಾಸಿವೆ ಮುಂತಾದವು ಸೇರುತ್ತವೆ. ಅವುಗಳ ಬೀಜವನ್ನು ಸಿದ್ದಗೊಳಿಸಿದ ಮಡಿಗಳಲ್ಲಿ ನೇರವಾಗಿ ಬಿತ್ತಲಾಗುತ್ತದೆ.

. ಬೇರು ತರಕಾರಿಗಳು: ಈ ಗುಂಪಿನಲ್ಲಿ ಮೂಲಂಗಿ, ಟರ್ನಿಪ್, ಕ್ಯಾರೆಟ್, ಬೀಟ್‌ರೂಟ್ ಮುಂತಾದವು ಸೇರುತ್ತವೆ. ಇವುಗಳ ಬೀಜವನ್ನು ಮಡಿಗಳಲ್ಲಿ ನೇರವಾಗಿ ಬಿತ್ತಲಾಗುತ್ತದೆ. ಇವುಗಳಿಗೆ ಭೂಮಿಯನ್ನು ಆಳವಾಗಿ ಉಳುಮೆ ಮಾಡಿಇಲ್ಲವೇ ಅಗೆತ ಮಾಡಿ ಸಿದ್ದಗೊಳಿಸಬೇಕು.

. ಬದನೆ ಜಾತಿಗೆ ಸೇರಿದ ತರಕಾರಿಗಳು: ಈ ಗುಂಪಿನಲ್ಲಿ ಬದನೆ, ಮೆಣಸಿನಕಾಯಿ, ದೊಣ್ಣೆಮೆಣಸಿನಕಾಯಿ, ಟೊಮಾಟೊ, ಆಲೂಗೆಡ್ಡೆ ಮುಂತಾದವುಗಳಿದ್ದು ಮೊದಲು ಬೀಜವನ್ನು ಒಟ್ಲು ಎಬ್ಬಿಸಿ ಅನಂತರ ಸಸಿಗಳನ್ನು ಸಿದ್ಧಗೊಳಿಸಿದ ಭೂಮಿಗೆ ವರ್ಗಾಯಿಸಲಾಗುವುದು. ಆಲೂಗೆಡ್ಡೆಯಲ್ಲಿ ನೈಜ ಬೀಜ ಹಾಗೂ ಗೆಡ್ಡೆಗಳ ಮೂಲಕ ವೃದ್ಧಿ ಮಾಡುವುದುಂಟು.

. ಹುರುಳಿಕಾಯಿ ಜಾತಿಗೆ ಸೇರಿದ ತರಕಾರಿಗಳು: ಇದರಲ್ಲಿ ತಿಂಗಳ ಹುರುಳಿ, ಅವರೆ, ಲೈಮಾ ಅವರೆ, ಗೋರಿಕಾಯಿ, ಅಲಸಂದಿ, ಬಟಾಣಿ, ಮೆಂತ್ಯ, ಡಬ್ಬಲ್‌ಬೀನ್ಸ್, ರೆಕ್ಕೆ ಅವರೆ ಮುಂತಾದವುಗಳಿದ್ದು ಅವುಗಳ ಬೀಜವನ್ನು ನೇರವಾಗಿ ಬಿತ್ತಿ ಬೆಳೆಯಲಾಗುತ್ತದೆ.

. ಗೆಡ್ಡೆ (ಲಶುನ) ತರಕಾರಿಗಳು: ಇದರಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಸೀಮೆ ಈರುಳ್ಳಿ ಮುಂತಾದುವು ಸೇರುತ್ತವೆ. ಈರುಳ್ಳಿಯಲ್ಲಿ ಗೆಡ್ಡೆ ಹಾಗು ಬೀಜಗಳ ಮೂಲಕ ವೃದ್ಧಿಪಿಡಿದರೆ ಬೆಳ್ಳುಳ್ಳಿಯಲ್ಲಿ ಇಲಕುಗಳನ್ನು ಬೇರ್ಪಡಿಸಿ ಬಿತ್ತುವುದು ಸಾಮಾನ್ಯ.

. ಇತರೆ ಬೆಳೆಗಳು:  ಈ ಗುಂಪಿನಲ್ಲಿ ತೊಂಡೆ, ಸೀಮೆ ಬದನೆ, ನುಗ್ಗೆ, ಬೆಂಡೆ, ಚಕ್ರಮುನಿ ಮುಂತಾಗಿ ಸೇರುತ್ತವೆ. ತೊಂಡೆಯಲ್ಲಿ ಬಲಿತ ಹಂಬು ತುಂಡುಗಳು ಹಾಗೂ ಬೀಜ ಬಿತ್ತಿ ವೃದ್ಧಿ ಮಾಡಿದರೆ ಸೀಮೆ ಬದನೆಯಲ್ಲಿ ಪೂರ್ಣಬಲಿತು ಮೊಳಕೆಯೊಡೆದ ಕಾಯಿಗಳನ್ನು ಬಿತ್ತುತ್ತಾರೆ. ಚಕ್ರಮುನಿಯಲ್ಲಿ ಕಾಂಡದ ತುಂಡುಗಳು ಹಾಗೂ ಬೀಜ ಊರಿ ವೃದ್ಧಿಪಡಿಸುವುದು ಸಾಮಾನ್ಯ. ನುಗ್ಗೆಯಲ್ಲಿ ದೊಡ್ಡ ಗಾತ್ರದ ಕಾಂಡದ ತುಂಡುಗಳನ್ನು ನೆಟ್ಟು ಮತ್ತು ಬೀಜ ಊರಿ ವೃದ್ದಿಪಡಿಸುತ್ತಾರೆ. ಬೆಂಡೆಯಲ್ಲಿ ಬೀಜ ಬಿತ್ತಿ ಬೆಳೆಸುವುದೊಂದೇ ಮಾರ್ಗ.

. ತರಕಾರಿಯಾಗಿ ಬಳಸಲಾಗುವ ಸಸ್ಯಭಾಗದ ಆಧಾರದ ಮೇಲ

ಈ ವರ್ಗೀಕರಣದಲ್ಲಿ ಸಸ್ಯದ ಯಾವ ಭಾಗವನ್ನು ತರಕಾರಿಯಾಗಿ ಬಳಸುತ್ತೇವೆಯೋ ಅದನ್ನನುಸರಿಸಿ ವಿವಿಧ ಬೆಳೆಗಳನ್ನು ಒಂದೊಂದು ಗುಂಪಾಗಿ ವಿಂಗಡಿಸಿದೆ. ಇದು ಅಷ್ಟೊಂದು ಉಪಯುಕ್ತವಿರುವ ವರ್ಗೀಕರಣವಲ್ಲ. ಏಕೆಂದರೆ, ‌ಪ್ರತಿ ಬೆಳೆಯ ಬೇಸಾಯಕ್ರಮಗಳಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ.

. ಕಾಯಿ ಅಥವಾ ಹಣ್ಣು ತರಕಾರಿಗಳು: ಇದರಲ್ಲಿ ಕುಂಬಳಕಾಯಿ ಜಾತಿಗೆ ಸೇರಿದ ತರಕಾರಿಗಳು, ಟೊಮಾಟೊ, ಬದನೆ, ಮೆಣಸಿನಕಾಯಿ, ದೊಣ್ಣೆಮೆಣಸಿನಕಾಯಿ, ಬೆಂಡೆ, ನುಗ್ಗೆ, ಸೀಮೆಬದನೆ, ಸೀಮೆಹಲಸು, ತರಕಾರಿ ಬಾಳೆ ಮುಂತಾದುವು ಸೇರಿವೆ.

. ಹೂ ತರಕಾರಿಗಳು: ಹೂಕೋಸು

. ಎಲೆ ಅಥವಾ ಸೊಪ್ಪು ತರಕಾರಿಗಳು: ಎಲೆಕೋಸು, ಲೆಟ್ಯೂಸ್, ಬಸಳೆ, ಪಾಲಕ್, ಕೀರೆ, ಹರಿವೆ, ಮೆಂತ್ಯ, ದಂಟು, ಹೊನಗೊನೆ, ಚಕ್ಕೋತ, ಕೊತ್ತಂಬರಿ, ಪುದೀನ, ಕೆಸವು, ನುಗ್ಗೆ, ಚಕ್ರಮುನಿ, ಅಗಸೆ ಇತ್ಯಾದಿ.

. ಬೇರು ಹಾಗೂ ಗೆಡ್ಡೆಗಳು: ಮೂಲಂಗಿ, ಟರ್ನಿಪ್, ಕ್ಯಾರೆಟ್, ಬೀಟ್‌ರೂಟ್, ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ, ಸಿಹಿಗೆಣಸು, ಮರಗೆಣಸು, ಸುವರ್ಣಗೆಡ್ಡೆ, ಡಯಾಸ್ಕೋರಿಯಾ, ಕೆಸವಿನಗೆಡ್ಡೆ ಇತ್ಯಾದಿ.

. ಬೆಳೆ  ಅವಧಿಯ ಆಧಾರದ ಮೇಲೆ

ಈ ವರ್ಗೀಕರಣದಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಅವುಗಳ ಅವಧಿಯ ಆಧಾರದ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಿದೆ: ಅಲ್ಪಾವಧಿ ಬೆಳೆಗಳು (ತಿಂಗಳ ಹುರುಳಿ, ಬೀಟ್‌ರೂಟ್, ಮೂಲಂಗಿ, ಸೊಪ್ಪು ತರಕಾರಿಗಳು); ಮಧ್ಯಮಾವಧಿ ಬೆಳೆಗಳು (ಕುಂಬಳ ಜಾತಿಗೆ ಸೇರಿದ ತರಕಾರಿ ಬೆಳೆಗಳು, ಕೋಸು ಜಾತಿ ಬೆಳೆಗಳು); ದೀರ್ಘಾವಧಿ ಬೆಳೆಗಳು (ಸುವರ್ಣಗೆಡ್ಡೆ, ಮರಗೆಣಸು).

. ಸಸ್ಯ ಬೆಳವಣಿಗೆಯ ಸ್ವಭಾವದ ಆಧಾರದ ಮೇಲೆ

ಮೂಲಿಕೆ ಸಸ್ಯಗಳು (ಪುದೀನ, ಕೊತ್ತಂಬರಿ, ದಂಟು, ಆಸ್ಪರಾಗಸ್), ಪೊದೆಯಾಗಿ ಬೆಳೆಯುವ ಗಿಡಗಳು (ಚಕ್ರಮುನಿ, ಮರಗೆಣಸು), ಬಳ್ಳಿ ತರಕಾರಿಗಳು (ಕುಂಬಳದ ಜಾತಿಗೆ ಸೇರಿದ  ತರಕಾರಿಗಳು, ಸಿಹಿ ಗೆಣಸು, ಡಯಾಸ್ಕೋರಿಯ, ಬಳ್ಳಿ ಬಸಳೆ, ಚಿಕ್ಕಡವರೆ), ಮರತರಕಾರಿಗಳು (ಕರಿಬೇವು, ನುಗ್ಗೆ, ಅಗಸೆ).

. ಬೆಳಕಿನ ಅವಧಿಯ ಮೇಲೆ

ಕಡಿಮೆ ಅವಧಿಯ ಬೆಳಕನ್ನು ಬಯಸುವ ತರಕಾರಿ ಬೆಳೆಗಳು (ಸೋಯಾ ಅವರೆ, ಆಲೂಗೆಡ್ಡೆ), ಮಧ್ಯಮಾವಧಿಯ ಬೆಳಕನ್ನು ಬಯಸುವ ತರಕಾರಿ ಬೆಳೆಗಳು (ಟೊಮಾಟೊ, ಸೌತೆ, ಮೆಣಸಿನಕಾಯಿ), ದೀರ್ಘಾವಧಿಯ ಬೆಳಕನ್ನು ಬಯಸುವ ತರಕಾರಿ ಬೆಳೆಗಳು (ಮೂಲಂಗಿ, ಲೆಟ್ಯೂಸ್, ಬಸಳೆ).

. ಹವೆ ಅಥವಾ ಉಷ್ಣತೆಯ ಆಧಾರದ ಮೇಲೆ

ವಿವಿಧ ರೀತಿಯ ಹವೆ ಅಥವಾ ಉಷ್ಣತೆ ಇರುವ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆದು ಫಲಿಸಲು ಸೂಕ್ತವಿರುವ ತರಕಾರಿಗಳನ್ನು ಬೇರೆ ಬೇರೆಯಾಗಿ ವರ್ಗೀಕರಿಸಲಾಗಿದೆ.

ಅ.ಶೈತ್ಯ ಹವೆಯ ಅಥವಾ ಕಡಿಮೆ ಉಷ್ಣತೆಯಲ್ಲಿ ಫಲಿಸುವ ತರಕಾರಿಗಳು: ತೀವ್ರ ಚಳಿ ಇದ್ದರೆ ಮಾತ್ರ ಹೂ ಬಿಟ್ಟು ಕಾಯಿ ಕಚ್ಚಬಲ್ಲವು. ಒಂದು ವೇಳೆ ಅವುಗಳನ್ನು ತರಕಾರಿಯಾಗಿ ಬಳಸುವ ಉದ್ದೇಶವಿದ್ದರೆ ಸ್ವಲ್ಪ ಹೆಚ್ಚಿನ ಉಷ್ಣತೆ ಇದ್ದರೂ ಅಡ್ಡಿಯಿಲ್ಲ, ಆದರೆ ಅದರ ಗುಣಮಟ್ಟ ತೃಪ್ತಿಕರವಾಗಿರುವುದಿಲ್ಲ.

ಆ. ಸಮಶೀತೋಷ್ಣ ಹವೆಯ ಅಥವಾ ಬೆಚ್ಚಗಿನ ಉಷ್ಣತೆಯಲ್ಲಿ ಫಲಿಸುವ ತರಕಾರಿಗಳು.

ಇ. ಉಷ್ಣ ಹವೆ ಅಥವಾ ಹೆಚ್ಚು ಬಿಸಿಲಿದ್ದರೂ ಫಲಿಸುವ ತರಕಾರಿ ಬೆಳೆಗಳು.

ಶೀತ ಹವಾಗುಣ ಬಯಸುವ ಎಲೆಕೋಸು, ಹೂಕೋಸು ಮುಂತಾದುವುಗಳನ್ನು ಸಾಧಾರಣ ಹಾಗೂ ಬಿಸಿ ಹವೆಯಲ್ಲಿ ಬೆಳೆದಾಗ ಬೆಳೆ ಚೆನ್ನಾಗಿ ವೃದ್ಧಿಸುತ್ತದೆಯಾದರೂ ಹೂಬಿಟ್ಟು ಬೀಜ ಕಚ್ಚಲು ವಿಫಲಗೊಳ್ಳುತ್ತದೆ. ಅದಕ್ಕಾಗಿಯೇ ಅಂತಹ ಬೆಳೆಗಳ ಬೀಜೋತ್ಪಾದನಾ ಕೆಲಸವನ್ನು ಶೈತ್ಯಹವೆ ಇರುವ ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಕೈಗೊಳ್ಳುವುದು. ಅದೇ ರೀತಿ ಹೂಕೋಸಿನ ತಳಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದೆ. ಮೊದಲ ಮೂರು ಗುಂಪುಗಳ ತಳಿಗಳನ್ನು ಭಾರತದ ಹೂಕೋಸು ಬಗೆಗಳು ಎನ್ನುತ್ತಾರೆ. ಈ ಮೂರು ಗುಂಪುಗಳಿಗೆ ಸೇರಿದ  ತಳಿಗಳು ಮೈದಾನ ಪ್ರದೇಶಗಳಲ್ಲಿ ಬೀಜೋತ್ಪತ್ತಿ ಮಾಡಬಲ್ಲವು. ಆದರೆ ನಾಲ್ಕನೆಯ ಗುಂಪಿಗೆ ಸೇರಿದ ತಳಿಗಳು ಬೀಜೋತ್ಪಾದನೆ ಮಾಡಲು ಶೈತ್ಯಹವೆ ಇರಬೇಕು. ಉದಾಹರಣೆ: ಸ್ನೋಬಾಲ್ ಇತ್ಯಾದಿ. ಹೂಕೋಸಿನಲ್ಲಿದ್ದಂತೆಯೇ ಕ್ಯಾರೆಟ್, ಮೂಲಂಗಿ, ಟರ್ನಿಪ್ ಮುಂತಾದ ತರಕಾರಿಗಳಲ್ಲಿ ತಳಿಗಳು ಹೊಂದಾಣಿಕೆಗೆ ಬಹಳಷ್ಟು ವ್ಯತ್ಯಾಸ ತೋರುತ್ತವೆ. ಮುಖ್ಯವಾಗಿ ವಿದೇಶಗಳಿಂದ ಆಮದುಮಾಡಿಕೊಂಡ ತಳಿಗಳಿಗೆ ಬೀಜೋತ್ಪಾದನೆ ಮಾಡಲು ನಿರ್ದಿಷ್ಟ ಅವಧಿಯವರೆಗೆ ಶಯತ್ಯ ಹವೆ ಇರುವುದು ಅತ್ಯಗತ್ಯ. ಅವುಗಳನ್ನು ಶೈತ್ಯಹವೆ ತಳಿಗಳೆನ್ನುತ್ತಾರೆ. ಏಷ್ಯಾದ ತಳಿಗಳಿಗೆ ಉಷ್ಣವಲಯದ ತಳಿಗಳೆನ್ನುತ್ತಾರೆ. ಅವು ಮೈದಾನ ಪ್ರದೇಶಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಬೀಜೋತ್ಪತ್ತಿ ಮಾಡಬಲ್ಲವು.

. ಬೆಳೆ ಜೀವನಾವಧಿಯ ಆಧಾರದ ಮೇಲಿನ ವರ್ಗೀಕರಣ

ಇದರಲ್ಲಿ ವಾರ್ಷಿಕ, ದ್ವೈವಾಷಿರ್ಕ ಮತ್ತು ಬಹುವಾರ್ಷಿಕ ತರಕಾರಿಗಳೆಂದು ಮೂರು ಗುಂಪುಗಳಿವೆ.

. ವಾರ್ಷಿಕ ತರಕಾರಿಗಳು: ಈ ಬೆಳೆಗಳು ಒಂದು ಋತುವಿನಲ್ಲಿ ಅಥವಾ ಒಂದು ವರ್ಷದಲ್ಲಿ ಬೆಳೆದು ಹೂಬಿಟ್ಟು ತಮ್ಮ ಜೀವನ ಪರಿಧಿಯನ್ನು ಮುಗಿಸುತ್ತವೆ.

ಉದಾಹರಣೆಗೆ ದಂಟು, ಮೆಂತ್ಯ, ಕೊತ್ತಂಬರಿ, ಸಬ್ಬಸಿಗೆ, ಚಕ್ಕೋತ, ಬಟಾಣಿ, ಹುರುಳಿಕಾಯಿ, ಅವರೆ, ಗೋರಿಕಾಯಿ, ಕುಂಬಳ, ಸೋರೆ, ಸೌತೆ, ಪಡವಲ, ಹಾಗಲ, ಟೊಮಾಟೊ, ಬದನೆ, ಇತ್ಯಾದಿ.

. ದೈವಾರ್ಷಿಕ ತರಕಾರಿಗಳು: ಈ ಗುಂಪಿಗೆ ಸೇರಿದ ತರಕಾರಿಗಳು ಎರಡು ಋತುಗಳು ಅಥವಾ ಎರಡು ವರ್ಷಗಳಲ್ಲಿ ಪೂರ್ಣ ಬೆಳೆದು ಬೀಜೋತ್ಪತ್ತಿ ಮಾಡುತ್ತವೆ.

ಉದಾಹರಣೆಗೆ ಕೋಸು ಜಾತಿಗೆ ಸೇರಿದ ತರಕಾರಿಗಳು, ಈರುಳ್ಳಿ ಇತ್ಯಾದಿ.

. ಬಹುವಾರ್ಷಿಕ ತರಕಾರಿಗಳು: ಈ ಗುಂಪಿಗೆ ಸೇರಿದ ತರಕಾರಿಗಳು ಒಮ್ಮೆ ನೆಟ್ಟು ಬೆಳೆಸಿದರೆ ಬಹುಕಾಲ ಇದ್ದು ಫಸಲನ್ನು ಬಿಡುತ್ತಿರುತ್ತವೆ. ಇವುಗಳ ಬೇರು ಸಮೂಹ ಮಣ್ಣಿನಲ್ಲಿ ಆಳವಾಗಿ ಇಳಿದಿರುತ್ತದೆ. ಉದಾಹರಣೆಗೆ ತೊಂಡೆ, ನುಗ್ಗೆ, ಆಸ್ಪರಾಗಸ್, ಕರಿಬೇವು, ಅಗಸೆ, ಚಕ್ರಮುನಿ, ಚಪ್ಪರಬದನೆ, ಪುದೀನ ಇತ್ಯಾದಿ.