ಸಾವಯವ ತರಕಾರಿ ಬೇಸಾಯ

ತರಕಾರಿ ಬೆಳೆಗಳ ಉತ್ಪಾದನೆಯಲ್ಲಿ ಇಡೀ ಜಗತ್ತಿನಲ್ಲಿ ಭಾರತಕ್ಕೆ ಎರಡನೆಯ ಸ್ಥಾನವಿದೆ. ವರ್ಷಕ್ಕೆ ಸುಮಾರು ೩೮ ದಶಲಕ್ಷ ಟನ್ನುಗಳಷ್ಟು ತರಕಾರಿ ಉತ್ಪತ್ತಿ ಇದೆ. ಭಾರತ ಬಹುಮಟ್ಟಿಗೆ ಸಸ್ಯಾಹಾರಿ ದೇಶವಾಗಿದೆ. ನಮ್ಮ ದೇಶದ ಹವಾ ಮತ್ತು ಭೂಗುಣಗಳು ವಿವಿಧ ತರಕಾರಿ. ಬೆಳೆಗಳನ್ನು ವರ್ಷಾದ್ಯಂತ ಬೆಳೆಯಲು ಅನುಕೂಲವಾಗಿವೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಕೃಷಿ ಬೆಳೆಗಳನ್ನು ಬೆಳೆಯುವ ಕ್ಷೇತ್ರವನ್ನು ಕಡಿಮೆ ಮಾಡಿ ತರಕಾರಿ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದರೆ, ಅದಕ್ಕೆ ಅವುಗಳಿಂದ ಹೆಚ್ಚಿನ ಉತ್ಪಾದನೆ ಹಾಗೂ ಆದಾಯಗಳಿರುವುದೇ ಪ್ರಮುಖ ಕಾರಣ. ಈಗ ಅಧಿಕ ಇಳುವರಿ ಕೊಡುವ ಹಲವಾರು ತಳಿಗಳು ಹಾಗೂ ಮಿಶ್ರತಳಿಗಳು ಬೇಸಾಯದಲ್ಲಿವೆ. ಅತಿ ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ತರಕರಿ ಬೆಳೆಗಾರರು ರಾಸಾಯನಿಕ ಗೊಬ್ಬರಗಳನ್ನು ಮತ್ತು ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿವೇಚನೆಯಿಲ್ಲದೆ ಬಳಸುತ್ತಿದ್ದಾರೆ. ಅದೇ ರೀತಿ ಹಲವಾರು ಪ್ರಗತಿಪರ ರೈತರು ಕಳೆನಾಶಕಗಳನ್ನೂ ಸಹ ಬಳಸುತ್ತಿದ್ದಾರೆ. ಈ ರೀತಿಯ ವಿವೇಚನಾರಹಿತ ಬಳಕೆಗಳಿಂದ ಮನುಷ್ಯನ ಆರೋಗ್ಯಕ್ಕೇ ಅಲ್ಲದೆ ಮಣ್ಣಿನ ಆರೋಗ್ಯ ಸಹ ಕೆಡುವುದು ಸಾಧ್ಯ. ಅದರಿಂದ ಪ್ರಾಣಿಗಳ ಆರೋಗ್ಯಕ್ಕೂ ಸಹ ಅಪಾಯ ತಪ್ಪಿದ್ದಲ್ಲ; ಮಣ್ಣಲ್ಲಿನ ಸೂಕ್ಷ್ಮಜೀವಿಗಳೂ ಸಹ ನಾಶಗೊಳ್ಳುತ್ತವೆ. ಅದೇ ರೀತಿ ಉಪಯುಕ್ತ ಕೀಟ ಹಾಗೂ ಪರೋಪಜೀವಿ ಸಂಕುಲಗಳು ನಾಶಗೊಳ್ಳುತ್ತವೆ.

ರಾಸಾಯನಿಕ ಗೊಬ್ಬರಗಳನ್ನು ಸತತವಾಗಿ ಬಳಸಿದ್ದೇ ಆದರೆ ಮಣ್ಣಿನ ಗುಣಗಳು ಕೆಡುವುದೇ ಅಲ್ಲದೆ ಅಂತರ್ಜಲ ಸಹ ಮಲಿನಗೊಂಡು ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಬಳಸಲು ಸೂಕ್ತವಿರುವುದಿಲ್ಲ. ಮಣ್ಣಲ್ಲಿನ ಉಪಕೃತ ಸೂಕ್ಷ್ಮ ಜೀವಿಗಳು ಹಾಗೂ ಹುಳ ಹುಪ್ಪಟೆಗಳು ನಾಶಗೊಳ್ಳುತ್ತವೆ.

ಅದೇ ರೀತಿ ತರಕಾರಿ ಬೆಳೆಗಳ ಮೇಲೆ ವಿವೇಚನಾ ರಹಿತ ಕೀಟನಾಶಕಗಳ ಬಳಕೆಯಿಂದ ಸಾಕಷ್ಟು ಪ್ರಮಾಣದ ವಿಷ ಅವುಗಳಲ್ಲಿ ಉಳಿದು, ತಿನ್ನುವವರ ಶರೀರಕ್ಕೆ ಸೇರುತ್ತದೆ. ಆದರಿಂದ ಆರೋಗ್ಯ ಕೆಡುತ್ತದೆ.

ತರಕಾರಿ ಬೆಳೆಗಳ ಬೇಸಾಯದಲ್ಲಿ ಹೆಚ್ಚಿನ ಖರ್ಚು ಕೂಲಿಯಾಳುಗಳಿಗೆ ಹೋಗುತ್ತದೆ. ಕೆಲವೊಮ್ಮೆ ಸಾಕಷ್ಟು ಕೂಲಿಯಾಳುಗಳು ಸಮಯಕ್ಕೆ ಸಿಗುವುದಿಲ್ಲ ಅಥವಾ ಕೂಲಿ ಬಹಳಷ್ಟಿರುತ್ತದೆ. ಅದನ್ನು ನಿವಾರಿಸುವ ಸಲುವಾಗಿ ಕಳೆನಾಶಕಗಳನ್ನು ಬಳಸುವುದುಂಟು. ಈ ಕಳೆನಾಶಕಗಳು ಕಳೆಗಳನ್ನು ಹತೋಟಿ ಮಾಡುವುದೇನೋ ಸರಿಯೇ ಆದರೆ ಅದೇ ಸಮಯಕ್ಕೆ ಅವು ತರಕಾರಿಗಳಲ್ಲಿ ಹೊಕ್ಕು, ಅವುಗಳಲ್ಲಿಯೇ ಉಳಿಯುತ್ತವೆ. ಕಳೆನಾಶಕಗಳ ಬಳಕೆಯಿಂದ ಮಣ್ಣಲ್ಲಿನ ಸೂಕ್ಷ್ಮಜೀವಿಗಳು ಮುಂತಾಗಿ ನಾಶಗೊಳ್ಳುತ್ತವೆ.

ಈ ದುಷ್ಪರಿಣಾಮಗಳನ್ನು ಮನಗಂಡು ಪ್ರಪಂಚದ ಹಲವಾರು ದೇಶಗಳಲ್ಲಿ ಯಾವುದೇ ರಾಸಾಯನಿಕ ಗೊಬ್ಬರ, ಕಳೆನಾಶಕ ಹಾಗೂ ಸಸ್ಯ ಸಂರಕ್ಷಣಾ ಔಷಧಿಗಳನ್ನು ಬಳಸುವುದನ್ನು ಕೈಬಿಟ್ಟು ಸಾವಯವ ಬೇಸಾಯದತ್ತ ಗಮನ ಹರಿಸುತ್ತಿದ್ದಾರೆ.

ಸಸ್ಯ ಹಾಗೂ ಪ್ರಾಣಿಜನ್ಯ ಗೊಬ್ಬರಗಳನ್ನು ಬಳಸುವುದು, ಬೆಳೆಗಳ ಉಳಿಕೆ ಭಾಗಗಳನ್ನು ಮಣ್ಣಿಗೆ ಸೇರಿಸುವುದು, ನಿರೋಧಕ ತಳಿ ಹಾಗೂ ಮಿಶ್ರ ತಳಿಗಳನ್ನು ಬೆಳೆಸುವುದು, ಮಾಗಿ ಅಗೆತ ಅಥವಾ ಉಳುಮೆ ಮಾಡುವುದು, ಪರೋಪಜೀವಿಗಳನ್ನು ಬಳಸಿಕೊಂಡು ಕೀಟಗಳನ್ನು ಹತೋಟಿ ಮಾಡುವುದು, ಉಪಯುಕ್ತ ಪರೋಪಜೀವಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿ ಮಾಡಿ ಒದಗಿಸುವುದು, ಸೂಕ್ಷ್ಮ ಜೀವಿಗಳ ನೆರವಿನಿಂದ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡುವುದು, ಜೈವಿಕ ಗೊಬ್ಬರಗಳನ್ನು ಬಳಸುವುದು, ಹಸುರು ಗೊಬ್ಬರದ ಬೆಳೆಗಳನ್ನು ಬೆಳೆಸುವುದು, ಮಿಶ್ರ ಹಾಗೂ ಕೀಟಗಳನ್ನು ಆಕರ್ಷಣೆ ಮಾಡುವ ಬೆಳೆಗಳನ್ನು ಬೆಳೆಯುವುದು, ಬೆಳೆ ಪರಿವರ್ತನೆ ಅನುಸರಿಸುವುದು ಮುಂತಾದುವುಗಳ ಮೂಲಕ ಪರಿಸರ ಮಾಲಿನ್ಯ, ಜಲ ಮಾಲಿನ್ಯ ಮುಂತಾಗಿ ತಪ್ಪಿಸಬಹುದು. ಈ ರೀತಿಯ ಬೇಸಾಯ ಕ್ರಮಗಳಿಂದ ಆರೋಗ್ಯಕರ ತರಕಾರಿಗಳನ್ನು ಬೆಳೆದು ಗ್ರಾಹಕರಿಗೆ ಒದಗಿಸುವುದು ಔಚಿತ್ಯ.

ಇತ್ತೀಚಿನ ದಿನಗಳಲ್ಲಿ ಹಲವಾರು ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯಲ್ಲಿ ಬೆಳೆದ ತರಕಾರಿಗಳಿಗೆ ವಿಶೇಷ ಆದ್ಯತೆ ಮತ್ತು ಮನ್ನಣೆಗಳನ್ನು ಕೊಡಲಾಗುತ್ತಿದೆ. ಅವುಗಳಿಗಾಗಿಯೇ ವಿಶೇಷ ಮಾರುಕಟ್ಟೆಗಳು, ಬೆಲೆಗಳು ಮುಂತಾಗಿ ವ್ಯವಸ್ಥೆಗೊಂಡಿವೆ. ನಮ್ಮಲ್ಲಿಯೂ ಸಹ ಇಂತಹ ಮಾರ್ಪಾಟು ಈಗೀಗ ಕಾಣುತ್ತಿದೆ. ಈ ದಿಶೆಯಲ್ಲಿ ರೈತರು, ಖಾಸಗೀ ಸಂಸ್ಥೆಗಳು, ಸರ್ಕಾರ ಮುಂತಾಗಿ ಇನ್ನೂ ಹೆಚ್ಚಿನ ಆಸಕ್ತಿ ತಳೆಯಬೇಕು. ಉದಾಹರಣೆಗೆ ಬೇವು ಆಧಾರಿತ ವಸ್ತುಗಳನ್ನು ಬಳಸಿ ಕೀಟಗಳನ್ನು ಹತೋಟಿ ಮಾಡಲಾಗುತ್ತಿದೆ. ಅದೇ ರೀತಿ ಹಲವಾರು ಪರೋಪ ಜೀವಿಗಳನ್ನು ಬಳಸಿ ಕೀಟಗಳನ್ನು ಹತೋಟಿ ಮಾಡಲಾಗುತ್ತಿದೆ. ಇಂತಹ ಸಾವಯವ ಕೃಷಿಯಿಂದ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಸಹ ಆರೋಗ್ಯವಾಗಿ, ದೃಢಕಾಯರಾಗಿ ಮತ್ತು ಬುದ್ಧಿಜೀವಿಗಳಾಗಿ ಇರುವುದರ ಜೊತೆಗೆ ಗಾಳಿ, ನೀರು ಮತ್ತು ಮಣ್ಣು ಚೆನ್ನಾಗಿರಲು ಸಾಧ್ಯ.

* * *