ಕೃಷಿ ಗ್ರಾಮೀಣ ಪ್ರದೇಶಗಳ ಜನರ ಜೀವನಾಡಿ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಸ್ವಾತಂತ್ರ್ಯಪೂರ್ವದಿಂದಲೂ ನಮ್ಮ ದೇಶದ ಆಹಾರ ಅಭಾವವನ್ನು ನೀಗಿಸಲು ಹೊರದೇಶಗಳಿಂದ ಗೋಧಿ, ಮೆಕ್ಕೆಜೋಳ ಮುಂತಾದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡು ಜನರ ಹೊಟ್ಟೆ ತುಂಬಿಸಬೇಕಾಗಿತ್ತು. ಈ ಪರಿಸ್ಥಿತಿಯನ್ನು ಎದುರಿಸಿ ಕಂಗೆಟ್ಟ ರೈತರು ಹಾಗೂ ವಿಜ್ಞಾನಿಗಳು ಕೃಷಿ ಉತ್ಪಾದಕತೆ ಹೆಚ್ಚಿಸಲು ವಿಜ್ಞಾನಿಗಳು ಜೈವಿಕ ವಿಜ್ಞಾನ ಹಾಗೂ ತಳಿಸಂವರ್ಧನೆಗೆ ಹೆಚ್ಚಿನ ಗಮನ ನೀಡುತ್ತಾ ಬಂದರು. ತತ್ಪಲವಾಗಿ ಅಧಿಕ ಇಳುವರಿ ಕೊಡಬಲ್ಲ ಮೆಕ್ಸಿಕನ್ ಗೋಧಿ ತಳಿಗಳು, ಹೈಬ್ರಿಡ್ ಮುಸುಕಿನಜೋಳ ಹಾಗು ಬತ್ತದ ತಳಿಗಳು ರೂಪತಾಳಿದವು. ಜೊತೆಗೆ  ರಾಸಾಯನಿಕ ಗೊಬ್ಬರಗಳ ಬಳಕೆ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಮೂಡಿ, ಈ ಎಲ್ಲ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ದೇಶ ದಿಟ್ಟ ಹೆಜ್ಜೆ ಇಟ್ಟಿತು. ಭಾರತ ಸರ್ಕಾರ ತಯಾರಿಸಿದ ಹಲವು ಗ್ರಾಮೀಣ ಯೋಜನೆಗಳಡಿಯಲ್ಲಿ ರೈತರಿಗೆ ನೀರಾವರಿ ಮತ್ತು ಆರ್ಥಿಕ ಸೌಲಭ್ಯ ಒದಗಿಸಿಕೊಡಲಾಯಿತು. ಈ ಪರಿಣಾಮವಾಗಿ ನಮ್ಮದೇಶದಲ್ಲಿ ೧೯೬೦ರ ದಶಕದಲ್ಲಿ ಹಸುರುಕ್ರಾಂತಿ ಸಂಭವಿಸಿತು. ಹಸುರು ಕ್ರಾಂತಿ ಮುಂದೆ ಹಳದಿಕ್ರಾಂತಿ (ಖಾದ್ಯತೈಲ ಉತ್ಪಾದನೆ) ಶ್ವೇತಕ್ರಾಂತಿ (ಹೈನುಗಾರಿಕೆ), ನೀಲಿಕ್ರಾಂತಿ (ಮತ್ಸ್ಯಗಾರಿಕೆ) ಇತ್ಯಾದಿ ಕ್ರಾಂತಿಗಳ ಶ್ರೇಣಿಗೆ ನಾಂದಿಯಾಯಿತು.

ಹಸುರುಕ್ರಾಂತಿಯಿಂದ ದೇಶದ ಕೃಷಿ ಉತ್ಪನ್ನದಲ್ಲಿ ಅತೀವ ಹೆಚ್ಚಳ ಕಂಡು ಬಂದಿತು. ಆದರೆ ಇದು ಕ್ಷಣಿಕವಾಗಿತ್ತು. ಹಸುರುಕ್ರಾಂತಿಯು ವಿಧಾನಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ರಾಸಾಯನಿಕ ಪೀಡೆನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳು ಪರಿಸರದ ಮೇಲೆ ತೀವ್ರ ಪರಿಣಾಮ ಬೀರತೊಡಗಿದವು ಹಾಗೂ ಪ್ರಾಕೃತಿಕ ಸಂಪನ್ಮೂಲಗಳು ಬರಿದಾಗತೊಡಗಿದವು. ಈ ಹಿನ್ನೆಲೆಯಲ್ಲಿ ಕೃಷಿ ಸಂಶೋಧನೆ ಪರಿಸರ ಸ್ನೇಹಿ ವಿಧಾನಗಳ ಮೂಲಕ ಕೃಷಿಯಲ್ಲಿ ಸುಸ್ಥಿರತೆ ಸಾಧಿಸುವತ್ತ ಮುನ್ನಡೆದಿದೆ. ಇಂದು ಕೃಷಿ ವಿಜ್ಞಾನದ ಎಲ್ಲ ರಂಗಗಳಲ್ಲಿ ಸಾಕಷ್ಟು ತಾಂತ್ರಿಕ ಜ್ಞಾನ ಲಭ್ಯವಿದೆ. ಈ ವಿಶಿಷ್ಟ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಬೋಧಿಸುವುದು ಹಾಗೂ ರೈತರಿಗೆ ಅದನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳಲು ನೆರವಾಗುವುದು ಕೃಷಿ ವಿಶ್ವವಿದ್ಯಾನಿಲಯದ ಆದ್ಯತಮ ಧ್ಯೇಯವಾಗಿದೆ. ಸಂಬಂಧಪಟ್ಟವರಿಗೆ ದೊರೆಯಬೇಕು. ಭಾರತ ಸರ್ಕಾರದ ನೆರವಿನಿಂದ ೧೯೬೯-೭೦ರಲ್ಲಿ ಪ್ರಾರಂಭವಾದ ಕನ್ನಡ ಅಧ್ಯಯನ ವಿಭಾಗ ಈ ದಿಶೆಯಲ್ಲಿ ಕಾರ್ಯನಿರತವಾಗಿದೆ. ಶಿಕ್ಷಣ ಮಾಧ್ಯಮ ಪ್ರಾದೇಶಿಕ ಭಾಷೆಗಳಲ್ಲಿ ನಡೆಯಬೇಕೆಂಬ ೧೯೬೪ರ ಸಂಸತ್ತಿನ ತೀರ್ಮಾನದಂತೆ, ಕೃಷಿಯಲ್ಲಿ ಕನ್ನಡ ಜಾರಿಗೆ ತರುವ ಪ್ರಥಮ ಹೆಜ್ಜೆಯಾಗಿ ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಕನ್ನಡ ಪಠ್ಯಪುಸ್ತಕಗಳ ಪ್ರಕಟಣಾಕಾರ್ಯ ನಡೆದಿದೆ. ಪಠ್ಯ ವಿಷಯವಾಗಿ ಅಲ್ಲದೆ ಈ ಪುಸ್ತಕಗಳು ಕೃಷಿ ವಿಜ್ಞಾನ ಪ್ರಸರಣೆಯ ಮಾಧ್ಯಮವೂ ಆಗಿವೆ. ವಿದ್ಯಾರ್ಥಿಗಳಿಗೆ, ರೈತರಿಗೆ, ಬೋಧಕರಿಗೆ ಹಾಗೂ ವಿಜ್ಞಾನಿಗಳಿಗೂ ಸಹ ಉಪಯುಕ್ತವಾಗುವಂತೆ ಈಗಾಗಲೇ ೨೫೦ಕ್ಕೂ ಹೆಚ್ಚು ಪಠ್ಯಪುಸ್ತಕಗಳು ಪ್ರಕಟವಾಗಿವೆ.

ಪಠ್ಯಪುಸ್ತಕ ಪ್ರಕಟಣಾಕಾರ್ಯದ ಜೊತೆಯಲ್ಲಿಯೇ ಕನ್ನಡದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಲೇಕರಿಗೆ ಹಾಗೂ ಬೋಧಕರಿಗೆ ಅನುವಾಗಲೆಂದು ಸಂಶೋಧನಾ ಕಾರ್ಯಕ್ರಮದ ಅಂಗವಾಗಿ ಕೃಷಿ ವಿಜ್ಞಾನದ ಆಧುನಿಕ ಆವಿಷ್ಕಾರ, ತಂತ್ರಜ್ಞಾನ ಹಾಗು ಆಲೋಚನೆಗಳನ್ನು ಕನ್ನಡ ನಾಡಿನ ಪ್ರತಿ ಮೂಲೆಗೂ ತಲುಪಿಸಲು ಸಹಕರಿಸಬೇಕಾಗಿದೆ. ಗ್ರಾಮಾಂತರ  ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ರೈತನ ಆಡುಭಾಷೆಯಾದ ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಕಟಣೆಗಳಿಗೆ ಮಹತ್ತರವಾದ ಸ್ಥಾನ ನೀಡಲಾಗಿದೆ.

೨೦೦೩ನೇ ವರ್ಷದಿಂದ ಕನ್ನಡ ಅಧ್ಯಯನ ವಿಭಾಗವು ಕೃಷಿ ಜ್ಞಾನ ಬಂಡಾರ ಎಂಬ ವಿನೂತನ ಜನಪ್ರಿಯ ಮಾಲಿಕೆಯನ್ನು ಪ್ರಾರಂಭಿಸಿದ್ದು ಇದರಲ್ಲಿ ಈಗಾಗಲೇ ೧೨ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ರೈತರ ಜನಮನವನ್ನು ತಲಪುವ ಉನ್ನತ ಉದ್ದೇಶದಿಂದ ಪ್ರಾರಂಭವಾದ ಈ ಮಾಲಿಕೆಯ ಪ್ರಕಟಣೆಗಳನ್ನು ರೈತರಿಗೆಂದೇ ವಿಶೇಷವಾಗಿ ವಿನ್ಯಾಸಿತಗೊಳಿಸಲಾಗಿದ್ದು ಸರಳ, ಸುಂದರ ರೂಪದಲ್ಲಿ ಹೊರತರಲಾಗಿದೆ. ಕೃಷಿ ಜ್ಞಾನ ಭಂಡಾರ ಮಾಲಿಕೆಯಲ್ಲಿ ಈಗ ೧೩ನೇ ಪುಸ್ತಕ ಹೊರಬರುತ್ತಿದೆ.

ಪುಸ್ತಕ ಪ್ರಕಟವಾಗುತ್ತಿರುವ ಬಳ್ಳಿ ಮತ್ತು ಸೊಪ್ಪು ತರಕಾರಿಗಳು ಪುಸ್ತಕವು ಎಲ್ಲ ರೈತರು, ವಿಜ್ಞಾನಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ. ಎಂ.ಎನ್. ಶೀಲವಂತರ್
ಕುಲಪತಿಗಳು
ಕೃಷಿ ವಿಶ್ವವಿದ್ಯಾನಿಲಯ
ಗಾಂಧಿ ಕೃಷಿ ವಿಜ್ಞಾನ ಕೇಂದ್ರ
ಬೆಂಗಳೂರು-೫೬೦೦೬೫