ಬಸಪ್ಪ ಶಾಸ್ತ್ರಿಗಳು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಮಹದೇವಶಾಸ್ತ್ರಿಗಳ ಮಗ. ಇವರು ೧೮೪೩ ರಲ್ಲಿ ಜನಿಸಿದರು. ಆದರೆ ಇವರು ಅಲ್ಪಾಯುವಾಗಿದ್ದರು. ಇವರು ತಮ್ಮ ೪೮ ನೇ ವಯಸ್ಸಿನಲ್ಲಿ ಅಂದರೆ ೧೮೯೧ ರಲ್ಲಿ ಅಪಘಾತಕ್ಕೆ ತುತ್ತಾಗಿ ತಮ್ಮ ಕೊನೆಯುಸಿರೆಳೆದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬಸಪ್ಪ ಶಾಸ್ತ್ರಿಗಳಿಗೆ ಕೃಷ್ಣರಾಜ ಒಡೆಯರು ಆಶ್ರಯ ಕೊಟ್ಟರು. ಬಸಪ್ಪ ಶಾಸ್ತ್ರಿಗಳು ಸಂಸ್ಕೃತ, ಕನ್ನಡಗಳೆರಡರಲ್ಲೂ ಪಾಂಡಿತ್ಯವನ್ನು ಪಡೆದುಕೊಂಡು ತಮ್ಮ ೧೮ನೇ ವಯಸ್ಸಿನಲ್ಲೇ ಒಡೆಯರ ಆಸ್ಥಾನದ ಕವಿಗಳಾಗಿ ನೇಮಕಗೊಂಡರು.

ಹೊಸಗನ್ನಡ ಕಾಲದ ನವೋದಯ ಕಾಲದಲ್ಲಿ ಬಸಪ್ಪಶಾಸ್ತ್ರಿಗಳು ದೊರೆ ಮತ್ತು ಮಂತ್ರಿಗಳಿಂದ ಪ್ರೋತ್ಸಾಹಗೊಂಡು ಕಾಳಿದಾಸನ ಶಾಕುಂತಳ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ‘ಅಬಿನವ ಕಾಳಿದಾಸ, ನೆಂಬ ಬಿರುದನ್ನು ಪಡೆದರು. ಕನ್ನಡದಲ್ಲಿ ಇಲ್ಲಿಯವರೆಗೆ ಬಂದಿರುವ ಶಾಕುಂತಳ ನಾಟಕದ ಅನುವಾದಗಳಲ್ಲಿ ಶಾಸ್ತ್ರಿಗಳದೇ ಶ್ರೇಷ್ಟವಾದದೆಂದು ಕೆಲವು ವಿದ್ವಾಂಸರ ಅಬಿಪ್ರಾಯವಾಗಿದೆ. ಕಾರಣ ಅವರು ಬಳಸಿರುವ ಭಾಷೆಯು ಸರಳ ರೀತಿಯದು.

ಪದಗಳ ಸಂಯೋಜನೆ ಸಹೃದಯರ ಮನ ಮಟ್ಟುವ ರೀತಿಯಲ್ಲಿದೆ. ಅವರು ಈ ನಾಟಕದ ಮಧ್ಯೆ ಮಧ್ಯೆ ಬಳಸಿರುವ ಕಂದಪದ್ಯ ನಾಟಕಕ್ಕೆ ಒಂದು ವಿಶಿಷ್ಟ ಮೆರುಗನ್ನು ತಂದು ಕೊಟ್ಟಿದೆ. ಬಸಪ್ಪಶಾಸ್ತ್ರಿಗಳು ತಮ್ಮ ನಾಟಕದ ಆರಂಭದಲ್ಲಿ ಕಾಳಿದಾಸನಿಗಿಂತ ಬಿನ್ನವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಅವರು ಸೂತ್ರಧಾರನೆಂಬುದನ್ನು ನಾಟಕದ ಆರಂಭದಲ್ಲಿ ಪರಿಚಯಿಸುವುದರ ಮೂಲಕ ವೀಕ್ಷಕರ ಮನವನ್ನು ವಿಶಿಷ್ಟರೀತಿಯಲ್ಲಿ ಸೂರೆಗೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಬಸಪ್ಪಶಾಸ್ತ್ರಿಗಳ ಸ್ಥಾನ ವಿಶಿಷ್ಟವಾದದ್ದು. ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಕೊಡುಗೆ ಅಪಾರವಾದದ್ದು.

ಬಸಪ್ಪಶಾಸ್ತ್ರಿಗಳು ಶಾಕುಂತಳ ನಾಟಕವನ್ನಷ್ಟೇ ಅಲ್ಲದೆ ಕಾಳಿದಾಸನ ‘ವಿಕ್ರಮೋರ್ವಶೀಯ, ಶ್ರೀಹರ್ಷರ ‘ರತ್ನಾವಳಿ, ಕ್ಷೇಮೀಶ್ವರನ ‘ಚಂಡ ಕೌಶಿಕ,(ಅಳಿಸಿಂಗಾ ಚಾರ್ಯರು ಇದನ್ನು ಪೂರ್ಣಗೊಳಿಸಿದರು) ನಾಟಕಗಳನ್ನೂ, ಭರ್ತೃಹರಿಯ ಶತಕತ್ರಯ ಗಳನ್ನೂ ಅನುವಾದ ಮಾಡಿದ್ದಾರೆ. ಇವರು ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಅನುವಾದಕ್ಕಷ್ಟೇ ಸೀಮಿತಗೊಳಿಸಲಿಲ್ಲ, ಬದಲಿಗೆ ಚಂಪೂಕಾವ್ಯವಾದ ‘ದಮಯಂತಿಯ ಚರಿತ್ರೆ, ಎಂಬ ಕೃತಿಯನ್ನು ರಚಿದರು. ಇದು ಇವರ ಸ್ವಂತ ಕೃತಿಯಾಗಿದೆ. ಇವರು ಸಂಸ್ಕೃತದಲ್ಲಿಯೂ ಕೃತಿ ರಚನೆ ಮಾಡಿದ್ದಾರೆ. ಇವೆಲ್ಲಕಿಂತ ಹೆಚ್ಚಿನದಾಗಿ ಅವರು ಇಂಗ್ಲಿಷ್ ವಿದ್ವಾಂಸನ ಸಹಾಯದಿಂದ ಶೇಕ್ಸ್ ಪಿಯರ್ ಮಹಾಕವಿಯ ‘ಒಥೆಲೊ, ನಾಟಕವನ್ನು ‘ಶೂರಸೇನ ಚರಿತ್ರೆ, ಎಂಬ ಹೆಸರಿನಿಂದ ರೂಪಾಂತರಿಸಿದ್ದಾರೆ. ಶಾಸ್ತ್ರಿಗಳು ಸರಸ ಕವಿತೆಯನ್ನು ರಚಿಸಿ, ಸ್ವಂತ ಕೃತಿಗಳಿಂದ, ಅನುವಾದಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದರು. ಶಾಸ್ತ್ರಿಗಳು ಕನ್ನಡವನ್ನುದ್ದರಿಸಿದ ಪುಣ್ಯ ಪುರುಷರಲ್ಲಿ ಒಬ್ಬರು.