ಹಂಗಾಮಿ ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೧೧.೦೨.೧೯೭೭ ರಿಂದ ೨೪.೦೭.೧೯೭೭

ಕರ್ನಾಟಕದ ಬಿಜಾಪುರ ಜಿಲ್ಲೆಯ ಒಂದು ಬಡ ಗ್ರಾಮೀಣ ಕುಟುಂಬದಲ್ಲಿ ಹುಟ್ಟಿದ ಬಸಪ್ಪ ದಾನಪ್ಪ ಜತ್ತಿಯವರು ಭಾರತದ ಉಪರಾಷ್ಟ್ರಪತಿಯಾಗಿಯೂ, ಕೆಲವು ಕಾಲ ರಾಷ್ಟ್ರಪತಿಯಾಗಿಯೂ ಕೆಲಸ ಮಾಡಿದ್ದು ಒಂದು ಅದ್ಭುತ ಯಶೋಗಾಥೆ. ಬಿ.ಡಿ.ಜತ್ತಿ ಎಂತಲೇ ಖ್ಯಾತರಾದ ಇವರು ೧೯೧೨ರ ಸೆಪ್ಟಂಬರ್ ೧೦ ರಂದು ಸಾವಳಗಿ ಗ್ರಾಮದಲ್ಲಿ ಜನಿಸಿದರು, ಆ ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು. ಬಸಪ್ಪ, ಹುಟ್ಟೂರಿನಲ್ಲಿ, ನಂತರ ಜಿಜಾಪುರದಲ್ಲಿ ಪ್ರೌಢಶಾಲೆಯವರೆಗೆ ಶಿಕ್ಷಣ ಮುಗಿಸಿ ೧೯೩೪ರಲ್ಲಿ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಪದವಿ ಪಡೆದು ಅದೇ ಊರಿನ ಕಾನೂನು ಕಾಲೇಜಿಗೆ ಸೇರಿದರು. ಬಸಪ್ಪನವರು ೧೦ ವರ್ಷದ ಬಾಲಕನಾಗಿದ್ದಾಗಲೇ ೫ ವರ್ಷದ ಬಾಲಕ ಸಂಗವ್ವಳೊಂದಿಗೆ ವಿವಾಹವಾಯಿತು. ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು.ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು.

ಅರ್ಧಕ್ಕೇ ಕೈಬಿಟ್ಟಿದ್ದ ಕಾನೂನು ಶಿಕ್ಷಣವನ್ನು ಮತ್ತೆ ಮುಂದುವರಿಸಿ, ೧೯೪೦ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ L.L.B. ಪದವಿ ಗಳಿಸಿ, ಜಮಖಂಡಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಆಗಲೂ ಬಡ ಕಕ್ಷಿದಾರರಿಂದ ಹಣ ಸ್ವೀಕರಿಸದೆ, ಅವರಿಗೆ ನ್ಯಾಯ ಒದಗಿಸುತ್ತಿದ್ದರು.

ಜತ್ತಿಯವರ ದಕ್ಷತೆ, ಬಡವರ ಬಗ್ಗೆ ಕಾಳಜಿ, ಸೇವಾ ಮನೋಧರ್ಮ ಇವುಗಳು ಸ್ವಾಭಾವಿಕವಾಗಿಯೇ ಅವರನ್ನು ಜನಪ್ರಿಯ ನೇತಾರರನ್ನಾಗಿ ರೂಪಿಸಿದವು. “ಭಾರತ ಬಿಟ್ಟು ತೊಲಗಿ” ಆಂದೋಳನದಲ್ಲಿ ಭಾಗವಹಿಸಿದರು. ಜಮಖಂಡಿ ಪುರಸಭೆಯ ಅಧ್ಯಕ್ಷರಾದರು.೧೯೪೫ರಲ್ಲಿ ಜಮಖಂಡಿ ಸಂಸ್ಥಾನದಲ್ಲಿ ಪ್ರಜಾ ಪರಿಷದ್ ಸದಸ್ಯರಾಗಿ ಆಯ್ಕೆಯಾಗಿ ಮಂತ್ರಿಯಾದರು. ಸಂಸ್ಥಾನದ ರಾಜನೊಡನೆ ನಿಕಟ ಸಂಪರ್ಕ ಬೆಳೆಸಿ, ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಗೆ ಕಾರಣರಾದರು. ಅಲ್ಲಿಯವರೆಗೆ ನಡೆದು ಬಂದಿದ್ದ “ದಿವಾನ” ಹುದ್ದೆಯ ಬದಲು, ಪ್ರಜಾಪ್ರತಿನಿಧಿಗಳಿಂದ ಆರಿಸಿ ಬಂದ ಮೂವರು ಮಂತ್ರಿಗಳಲ್ಲಿ ಒಬ್ಬರು “ಮುಖ್ಯಮಂತ್ರಿ” ಯಾಗಬೇಕೆಂದು ತೀರ್ಮಾನಿಸಲಾಯಿತು. ಜತ್ತಿಯವರೇ ಜಮಖಂಡಿ ಸಂಸ್ಥಾನದ ಮೊದಲ ಮುಖ್ಯ ಮಂತ್ರಿ ಆದರು. ಭಾರತ ಸ್ವತಂತ್ರವಾದಾಗ, ತಮ್ಮ ಮುಖ್ಯಮಂತ್ರಿ ಪದವಿಗೆ ಚ್ಯುತಿ ಬರುವುದೆಂದು ತಿಳಿದಿದ್ದರೂ, ದೇಶದ ಹಿತದೃಷ್ಟಿಯಿಂದ ಜಮಖಂಡಿ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಶ್ರಮಿಸಿದವರೂ ಜತ್ತಿಯವರೇ.

ಸಾರ್ವಜನಿಕ ರಂಗದಲ್ಲಿ ಜತ್ತಿಯವರು ನಿರ್ವಹಿಸಿದ ಹುದ್ದೆಗಳು ಅನೇಕ. ಸಾಂಗ್ಲಿಯ Development Secretary. ಮುಂಬೈ ಸಂಸತ್ ಕಾರ್ಯದರ್ಶಿ, ಮುಖ್ಯ ಸ್ಕೌಟ್ ಕಮೀಷನರ್-ಇವು ಅಂತಹ ಕೆಲವು ಹುದ್ದೆಗಳು. ಯುವಕರಾಗಿದ್ದಾಗಿನಿಂದಲೂ ಅವರ ಕಾರ್ಯಕ್ಷೇತ್ರವಾಗಿದ್ದ ಜಮಖಂಡಿ. ಪ್ರತಿ ಚುನಾವಣೆಯಲ್ಲೂ ಅವರನ್ನೇ ತನ್ನ ಪ್ರತಿನಿಧಿಯಾಗಿ ಆರಿಸುತ್ತಿತ್ತು. ೧೯೫೨ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ಜತ್ತಿಯವರು. ಮುಂಬೈ ಸರಕಾರದಲ್ಲಿ ಆರೋಗ್ಯ ಹಾಗೂ ಕಾರ್ಮಿಕ ಶಾಖೆಯ ಉಪಮಂತ್ರಿಯಾದರು. ೧೯೫೬ರ ನವೆಂಬರ್ ೧ರಂದು ಭಾಷಾವಾರು ರಾಜ್ಯಗಳ ರಚನೆಯಾದಾಗ ಜಮಖಂಡಿಯೂ ಸೇರಿದಂತೆ, ಮುಂಬೈಪ್ರಾಂತದ ವ್ಯಾಪ್ತಿಯಲ್ಲಿದ್ದ ಕನ್ನಡ ಭಾಷಾ ಪ್ರದೇಶಗಳು ಅಂದಿನ ಮೈಸೂರು ರಾಜ್ಯದಲ್ಲಿ(ಇಂದಿನ ಕರ್ನಾಟಕ) ವಿಲೀನಗೊಂಡವು.೧೯೫೭ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಧಾನ ಸಭೆಗೆ ಆಯ್ಕೆಯಾಧ ಜತ್ತಿಯವರು ಮೈಸೂರು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರಾದರು.೧೯೫೮ರಲ್ಲಿ ಮೈಸೂರಿನ ಮುಖ್ಯಮಂತ್ರಿಯಾದರು. ೧೯೬೨ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ವಿಧಾನ ಸಭೆಗೆ ಆಯ್ಕೆಯಾದರು. ಆಗ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾದರು. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ