ಜನನ : ೭-೭-೧೯೨೬ ರಂದು ಬೆಂಗಳೂರಿನಲ್ಲಿ

ಮನೆತನ : ತಂದೆ ವಿ. ಕೃಷ್ಣಸ್ವಾಮಿ, ತಾಯಿ ಅಂಬುಜಮ್ಮ.

ಶಿಕ್ಷಣ : ದೇಶ ಸಂಚಾರದಲ್ಲಿದ್ದಾಗ ನಾಗಪುರದಲ್ಲಿ ಸಂತೋಬಾ ಮಹಾರಾಜ್ ಹಾಗೂ ಮಲ್ಹಾರಿ ಮಹಾರಾಜ್ ಎಂಬ ಪ್ರಸಿದ್ಧ ಕೀರ್ತನಕಾರರ ಸಂಪರ್ಕವಾಗಿ ಅವರಿಂದ ಕೀರ್ತನ ಕಲೆಯ ಶಿಕ್ಷಣ. ಧಾರವಾಡದ ಎನ್. ಟಿ. ಪುರೋಹಿತ ಅವರಿಂದ ಸಂಗೀತ ಶಿಕ್ಷಣ, ತೆಲುಗು-ತಮಿಳು ಭಾಷಾ ಕಲಿಕೆ, ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳಿಂದ ಸಂಸ್ಕೃತ ಅಧ್ಯಯನ.

ಕ್ಷೇತ್ರ ಸಾಧನೆ : ೧೯೫೬ ರಲ್ಲಿ ಸೊಲ್ಲಾಪುರದಲ್ಲಿ ಒಂದು ತಿಂಗಳ ಕಾಲ ಸತತ ಬಸವೇಶ್ವರರ ಚರಿತ್ರೆಯನ್ನು ಕಥಾ ರೂಪದಲ್ಲಿ ನಡೆಸಿದ್ದಾರೆ. ಅಲ್ಲದೆ ಅಲ್ಲಿನ ಶಿವಯೋಗಿ ಸಿದ್ಧರಾಮೇಶ್ವರ ದೇವಾಲಯದಲ್ಲಿ ಸುಮಾರು ೬೩ ಶಿವಶರಣರ ಕುರಿತ ಕಥಾ ನಿರೂಪಣೆ. ಆಗ ಶರಣಮಠದ ಮಹಾಮಾತೆ ರುದ್ರಮ್ಮನವರಿಂದ ಇವರಿಗೆ ’ಬಸವಕುಮರ’ ಎಂಬ ಅಭಿಧಾನದೊಂದಿಗೆ ಬೆಳ್ಳಿ ಕಿರೀಟ ಸಮರ್ಪಣೆ. ಅಂದಿನಿಂದ ಬೆಂಗಳೂರಿನ ಸಂಪತ್ಕುಮಾರ ಬಸವಕುಮಾರ ಶಾಸ್ತ್ರಿಗಳಾಗಿ ಪರಿವರ್ತಿತರಾದರು. ಆಂಧ್ರ ಪ್ರದೇಶದ ಕೃಷ್ಣಾ ಊರಿನಲ್ಲಿ ಪಂಚಕೋಟಿ ಜಪಾನುಷ್ಠಾನ ಸಂದರ್ಭದಲ್ಲಿ ಒಂದು ತಿಂಗಳ ಕಾಲ ರಾಮಾಯಣ ಪ್ರವಚನ, ಸಾಂಗ್ಲಿಯ ಶಿವಾಜಿ ವಂಶಸ್ಥರ ಅರಮನೆಯಲ್ಲಿ ಮಹಾರಾಣಿಯವರ ಸಮ್ಮುಖದಲ್ಲಿ ೯ ದಿನಗಳ ರಾಮಾಯಣ ಕಥಾ ನಿರೂಪಣೆ ಮಾಡಿದ ಸಂದರ್ಭದಲ್ಲಿ ಬಂಗಾರದ ಕಡಗ. ವಜ್ರದುಂಗರದೊಂದಿಗೆ ಗೌರವ. ಬಿಜಾಪುರ, ಧಾರವಾಡ, ಗದಗ, ಇಂಡಿ, ಜಮಖಂಡಿ, ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಮಾತ್ರವಲ್ಲದೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಸಂಚರಿಸಿ ಕನ್ನಡ – ತಮಿಳು, ತೆಲುಗು ಭಾಷೆಗಳಲ್ಲಿ ಸತತವಾಗಿ ಕಥಾ ಕೀರ್ತನೆ ನಡೆಸಿ ದಾಖಲೆಯನ್ನೇ ನಿರ್ಮಿಸಿದ್ದಾರೆ. ಆಕಾಶವಾಣಿ ಧಾರವಾಡ ಕೇಂದ್ರದಿಂದ, ದೂರದರ್ಶನ ಕೇಂದ್ರಗಳಿಂದ ಇವರ ಕಥೆಗಳು ಪ್ರಸಾರವಾಗಿವೆ. ಕರ್ನಾಟಕ ಸರಕಾರದ ಕನ್ನಡ – ಸಂಸ್ಕೃತಿ ಇಲಾಖೆಯ ನಿಯೋಜಿತ ಕಲಾವಿದರು. ಕೀರ್ತನ ಕಲೆಯಲ್ಲಿ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಹಲವಾರು ಮಠ ಮಾನ್ಯಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ಕೀರ್ತನಾಚಾರ್ಯ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಕೀರ್ತನ ಕಲಾ ಪರಿಷತ್ತಿನ ವತಿಯಿಂದ ಸನ್ಮಾನಿತರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೫-೯೬ರ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.