ನೀನಲ್ಲ ಏಕಾಂಗಿ ; ನೀನಲ್ಲ ಯಾವುದೋ ದೂರ
ಗುಹಾವಾಸದೇಕಾಂತದಲಿ ಬದುಕಿದ ಸಿದ್ಧ. ಉರ-
ದುದ್ದ ಶಿರದುದ್ದವಾದ ನಾನಾ ವರ್ಣಗಳ ಸಂಸಾರ-
ದಲೆಗಳ ನಡುವೆ ಹೋರಾಡುತ್ತಲೇ ನಿಂತ ಸಾಧಕ ವೀರ
ನೀನು. ಅಧಿಕಾರ – ಐಶ್ವರ್ಯಗಳ ನಾಯಿ ಕೂಗಿನ ನಡುವೆ,
ಅಜ್ಞಾನಿಗಳ ನಡುವೆ, ಪರಮ ಸುಜ್ಞಾನಿಗಳ ನಡುವೆ,
ಮತ-ಮೌಢ್ಯಗಳ ನಡುವೆ, ಸದ್ದಿರದೆ ಕೈಮುಗಿದು
ನಿಂತ ದೀಪದ ಕಂಬ. ನಿನ್ನ ಸುತ್ತಲೂ ಬಂದು
ಸಂಗಮವಾಯ್ತು ನೂರು ಬೆಳಕಿನ ಬಿಂಬ.
ತಮಂಧ ಘನವಾದಂದಿನಾವರಣಗಳ ತುಂಬ
ಕಿರಣ ಸಂಚಾರ. ಹೊತ್ತಿ ಕಲ್ಯಾಣವೆನ್ನುವ ಪ್ರಣತಿ
ತೊಳಗಿ ಬೆಳಗಿತ್ತು ಶಿವನ ಪ್ರತಾಪ. ಆ ಜ್ಯೋತಿ-
ಯಡಿಯಲ್ಲಿ ಕನ್ನಡಕೆ ಬಂತು ವಚನೋದಯ ಸ್ಫೂರ್ತಿ
ಈ ವಚನ ವಾಙ್ಮಯ ಗುಡಿಗೆ ನೀನೆ ಜಂಗಮ ಮೂರ್ತಿ.