ಇರಬಹುದು ನಿನಗಿಂತ ದೊಡ್ಡವರು, ಅನುಭಾವ
ದಲ್ಲಿ ಮೇಲೇರಿ ಬಯಲಾದವರು ; ಇರಬಹುದು
ನಿನಗಿಂತಲೂ ದೊಡ್ಡ ತ್ಯಾಗಿಗಳು, ವಿರಾಗಿಗಳು.
ಇರಲಾರರೆಂದೇ ತೋರುತಿದೆ ನಿನ್ನಂತೆ ನಿನ್ನೊಳಗಿ-
ನಂಕು ಡೊಂಕುಗಳನ್ನು ಕಂಡುಕೊಂಡವರು ; ಇರ-
ಲಾರರೆಂದೇ ತೋರುತಿದೆ ನಿನ್ನಂತೆ ಒಳಗು ಹೊರಗು
ಗಳನ್ನು ಮುಚ್ಚುಮರೆಯಿಲ್ಲದೆಯೆ ದಿನವೂ ಬಿಚ್ಚಿಟ್ಟು
ಒಗೆದು ಮಡಿಮಾಡಿ, ಇಷ್ಟದೈವದ ಗುಡಿಗೆ ನಡೆ
ಮಡಿಯಾಗಿ ಹಾಸಿದವರು ; ಕರ್ತಾರನೀ ಕಮ್ಮಟದ
ಅಡಿಗಲ್ಲು. ಸುತ್ತಿಗೆ ನಡುವೆ ಕಡಿಹಕ್ಕೆ ಬಡಿಹಕ್ಕೆ ಸಿಕ್ಕಿ
ಮೃಡನ ಶರಣರ ಕಾಲ ಕಡೆಯಾಣಿಯಾದವರು.
ಹೀಗಾಗಿ ಮಾತೆಲ್ಲ ಮುತ್ತಿನ ಹಾರ ; ನಡೆಯೆಲ್ಲ ಲಿಂಗವೆ
ಮೆಚ್ಚಿ ಅಹುದೆಂಬ ಪರಿ. ಇಲ್ಲಿ ಸಂದದ್ದು ಅಲ್ಲಿಯೂ ಸಲುವಂತೆ
ಬದುಕಿದವ ನೀನು – ಸಂಗನ ಮುಂದೆ ಕರ್ಪೂರ ಉರಿದಂತೆ.