ಬಸವಣ್ಣನವರನ್ನು ಹನ್ನೆರಡನೆಯ ಶತಮಾನದ ಸಾಮಾಜಿಕ-ಧಾರ್ಮಿಕ ಆಂದೋಲನ- ವೊಂದರ ಮಂಚೂಣಿಯಲ್ಲಿದ್ದವರೆಂದು ಪರಿಗಣಿಸಲಾಗಿದೆ. ಸಾಮಾಜಿಕವಾಗಿ ಬಸವಣ್ಣನವರು, ಅಂದಿನ ಸಮಾಜದ ಪ್ರತಿಷ್ಠಿತ ಸ್ತರದಿಂದ ಬಂದವರು, ಮತ್ತು ಸಾಮಾಜಿಕವಾಗಿಯೂ ಅಂದಿನ ಆಳುವ ವರ್ಗದ ಪ್ರತಿಷ್ಠಿತ ಸ್ಥಾನದಲ್ಲಿದ್ದವರು ಅಂದರೆ ಬ್ರಾಹ್ಮಣ್ಯ ಮತ್ತು ರಾಜಶಾಹಿ-ಈ ಎರಡೂ ಲಕ್ಷಣಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಯೊಬ್ಬ ಅಂದಿನ ಸಾಮಾಜಿಕ-ಧಾರ್ಮಿಕ ಆಂದೋಲನದ ಮುಂದಾಳುವಾಗಿ ತನ್ನನ್ನು ತೊಡಗಿಸಿಕೊಂಡದ್ದು ನಿಜವಾಗಿಯೂ ಕಾಲಧರ್ಮದ ಆಶ್ಚರ್ಯಗಳಲ್ಲಿ ಒಂದು. ಯಾಕೆಂದರೆ ಬಸವಣ್ಣನವರು ತಮ್ಮನ್ನು ತೊಡಗಿಸಿಕೊಂಡ ಚಳುವಳಿ, ಅಂದಿನ ಸಮಾಜದ ಕೆಳಗಿನ ಸ್ತರದ ಬಹು ಸಂಖ್ಯೆಯ ಜನಸಾಮಾನ್ಯರನ್ನು ಒಳಗೊಂಡದ್ದು. ಸಾಮಾನ್ಯವಾಗಿ ಪುರೋಹಿತಷಾಹಿ ಹಾಗೂ ರಾಜಷಾಹಿ, ಇವು ಸದಾ ಚಾರಿತ್ರಿಕವಾಗಿ ಜನಸಾಮಾನ್ಯರ ಸ್ತರದಿಂದ ಮೇಲಿನ ನೆಲೆಗೆ ಸೇರಿದವುಗಳಾಗಿದ್ದು, ಈ ಆಳಿಸಿಕೊಳ್ಳುವ ವರ್ಗದವರನ್ನು ಹೆದರಿಸಿ, ಸುಲಿಗೆ ಮಾಡಿ, ಹತೋಟಿಯಲ್ಲಿಟ್ಟುಕೊಂಡವುಗಳು. ಆದರೆ ಪುರೋಹಿತಷಾಹಿ ಮತ್ತು ರಾಜಷಾಹಿಯ ಒಂದು ಭಾಗವಾಗಿದ್ದ ಬಸವಣ್ಣನವರು, ಕೆಳಗಿನ ಸ್ತರದ ಜನಸಾಮಾನ್ಯರೊಂದಿಗೆ ತಮ್ಮನ್ನು ಸಮೀಕರಿಸಿಕೊಂಡು, ಹೊಸತೊಂದು ಸಾಮಾಜಿಕ- ಧಾರ್ಮಿಕ ಆಂದೋಲನದ ಪ್ರವರ್ತಕರಾದದ್ದು ಅತ್ಯಂತ ಅಪೂರ್ವವಾದ ಸಂಗತಿಯಾಗಿದೆ.

ಹೀಗೆ ಮಾಡಬೇಕಾದರೆ ವ್ಯಕ್ತಿ ಒಂದನ್ನು ನಿರಾಕರಿಸದೆ ಮತ್ತೊಂದರೊಂದಿಗೆ ಬೆರೆಯಲು ಬರುವುದಿಲ್ಲ. ಬಸವಣ್ಣನವರು ಮಾಡಿದ ಮೊದಲ ಕೆಲಸವೆಂದರೆ ಅವರು ತಮ್ಮನ್ನು ತಾವು ಬ್ರಾಹ್ಮಣ್ಯದಿಂದ ಪಾರುಮಾಡಿಕೊಂಡದ್ದು. ಇದಂತೂ ಅವರು ತಮ್ಮ ಎಂಟನೆಯ ವರ್ಷದಲ್ಲಿ ಉಪನಯನದ ಸಂದರ್ಭದಲ್ಲಿ, ಜನಿವಾರವನ್ನು ಹಾಕಿಕೊಂಡು ತಾವೂ ಬ್ರಾಹ್ಮಣರಾಗಲು ನಿರಾಕರಿಸಿದರೆಂಬ ಸಂಗತಿಯಿಂದ ಸ್ಪಷ್ಟವಾಗುತ್ತದೆ. ಅಂದರೆ ಯಾವ ಒಂದು ಸಂಸ್ಕಾರದ ಮೂಲಕ, ತಾವು ಉಳಿದೆಲ್ಲರಿಗಿಂತ ಶ್ರೇಷ್ಠರೆಂದು ಭಾವಿಸಿಕೊಂಡು ಬದುಕುಬಹುದಾಗಿತ್ತೋ ಅಂಥ ಒಂದು ನಿಲುವನ್ನು ತಿರಸ್ಕರಿಸುವ ಕ್ರಾಂತಿಕಾರಕ ಕ್ರಿಯೆಯ ಮೂಲಕ, ಮುಂದೆ ತಾವು ಸಾಮಾನ್ಯ ಜನತೆಯೊಂದಿಗೆ ಬೆರೆತು ಆಂದೋಲನವೊಂದರ ನೇತಾರನಾಗಬಹುದೆಂಬ ಯಾವುದೇ ಪೂರ್ವ ಕಲ್ಪನೆಯೇ ಇಲ್ಲದ ಕಾಲದಲ್ಲಿ, ಬ್ರಾಹ್ಮಣ್ಯವನ್ನು ತಿರಸ್ಕರಿಸಿದರು; ಮುಂದೆ ಅವರು ವೀರಶೈವಧರ್ಮವನ್ನು ಒಪ್ಪಿಕೊಂಡು, ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವ ಭಕ್ತರೆಲ್ಲರನು ಒಂದೇ ಎಂಬೆ’ ಎಂಬ ಒಂದು ಮನಃಸ್ಥಿತಿಯನ್ನು ಸಾಧಿಸಿಕೊಳ್ಳಲು ಪ್ರಯತ್ನಿಸಿದರು. ಸಮಾಜದ ವಿವಿಧ ಸ್ತರಗಳ ಜನಗಳನ್ನು ಒಳಗೊಂಡ ಆಂದೋಲನದ ಕೇಂದ್ರದಲ್ಲಿ ನಿಂತು, ಹೆಜ್ಜೆ ಹೆಜ್ಜೆಗೂ ತಾನು ಉತ್ತಮ ಕುಲದಲ್ಲಿ ಹುಟ್ಟಿದವನೆಂಬ ಹಳೆಯ ನೆನಪನ್ನು ಅಳಿಸಿ ಹಾಕುವ ನಿರಂತರವಾದ ಹೋರಾಟದಲ್ಲಿ ತೊಡಗಿದರು.[1] ಸಮಾಜದ ಕನಿಷ್ಠ ಘಟಕವಾದ ಹೊಲೆಯರ ಹೊಟ್ಟೆಯಲ್ಲಿ, ತಾವು ಹಾದರಕ್ಕೆ ಹುಟ್ಟಿದವರೆಂದುಕೊಳ್ಳುವ ನೈಚ್ಯಾನುಸಂಧಾನದ ನಿಲುವುಗಳನ್ನು ತಾಳುತ್ತಾ, ತಮ್ಮನ್ನು ಬೆಂಬಿಡದ ಭೂತದಂತೆ ಕಾಡುವ ಬ್ರಾಹ್ಮಣ್ಯದ ಬೇರುಗಳನ್ನು ಮನಸ್ಸಿನಿಂದ ಕೀಳಲು ಪ್ರಯತ್ನಿಸಿದರು.[2] ಹೀಗೆ ಹುಟ್ಟಿನೊಡನೆ ಬಂದ ಬ್ರಾಹ್ಮಣ್ಯದ ಸಂಸ್ಕಾರವನ್ನು ಮೂಲೋತ್ಪಾಟನ ಮಾಡಿಕೊಳ್ಳುತ್ತ, ಸಮಾಜದ ಸಾಮಾನ್ಯ ವರ್ಗದವರೊಂದಿಗೆ, ಬಸವಣ್ಣನವರು ತಮ್ಮನ್ನು ಸಮೀಕರಿಸಿಕೊಂಡು ಬದುಕಿದ್ದು, ಅತ್ಯಂತ ಮಹತ್ವದ ಸಂಗತಿಯಾಗಿದೆ.

ಆದರೆ, ಅವರು ತಮ್ಮ ಬ್ರಾಹ್ಮಣ್ಯವನ್ನು ನಿರಾಕರಿಸಿದರೂ, ಅವರು ಅಂದಿನ ರಾಜಷಾಹಿಯೊಂದಿಗೆ ಹೊಂದಿಕೊಂಡು ಬದುಕಬೇಕಾಗಿ ಬಂದದ್ದರಿಂದ, ಬೇರೆ ಬಗೆಯ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತೆಂದು ತೋರುತ್ತದೆ. ಮೊದಲು ಸಾಮಂತನಾಗಿದ್ದು ಅನಂತರ ಚಕ್ರವರ್ತಿಯಾದ ಬಿಜ್ಜಳನಲ್ಲಿ ಅವರು ದಂಡಾಧಿಕಾರಿಯಾಗಿ ಉದ್ಯೋಗದಲ್ಲಿದ್ದವರು. ಪುರೋಹಿತಾಷಾಹಿಯನ್ನು ಧಿಕ್ಕರಿಸಿದ ಬಸವಣ್ಣನವರು, ವೀರಶೈವವೆಂಬ ಧರ್ಮವನ್ನೇನೋ ಒಪ್ಪಿಕೊಂಡರು; ಆದರೆ ಬ್ರಾಹ್ಮಣ್ಯವನ್ನು ನಿರಾಕರಿಸಿದ ರೀತಿಯಲ್ಲಿ ರಾಜಷಾಹಿಯನ್ನೂ ಧಿಕ್ಕರಿಸಿ, ಬೇರೊಂದು ಸ್ವತಂತ್ರ ಉದ್ಯೋಗದಲ್ಲಿ ನಿಂತು ಅವರು ಅಂದಿನ ಜನತೆಯ ಆಂದೋಲನದಲ್ಲಿ ಪಾಲುಗೊಳ್ಳಬಹುದಾಗಿತ್ತು ಎಂದು ಈ ದಿನ ನಾವು ನಿರೀಕ್ಷಿಸುವುದಾಗಲಿ, ಭಾವಿಸುವುದಾಗಲಿ  ಸರಿಯಾಗುವುದಿಲ್ಲ. ಯಾಕೆಂದರೆ ರಾಜತ್ವದ ಬಗೆಗೆ ಬಸವಣ್ಣನವರ ನಿಲುವುಗಳೇನೇ ಇರಲಿ, ಅವರ ಆಂದೋಲನ ಯಶಸ್ವಿಯಾದದ್ದಕ್ಕೆ ಅವರು ಅಂದಿನ ರಾಜತ್ವದ ಒಂದು ಅಂಗವಾಗಿ ಪಡೆದುಕೊಂಡಿದ್ದ ಅಧಿಕಾರಿಕ ಸ್ಥಾನ-ಮಾನಗಳೂ ಬಹುಮುಖ್ಯವಾದ ಕಾರಣಗಳಾಗಿರಬಹುದು ಎಂಬುದನ್ನು ತಳ್ಳಿಹಾಕಲು ಬರುವುದಿಲ್ಲ. ಯಾಕೆಂದರ ಅಂದಿನ ಆಂದೋಲನಕ್ಕೆ, ಅದರ ಸಂಘಟನೆಗೆ ಮತ್ತು ಅದರ ನಿರ್ವಹಣೆಗೆ ಸಾಕಷ್ಟು ಜನಬಲ ಮತ್ತು ಧನಬಲ ಹಾಗೂ ರಾಜಕೀಯ ಬಲ ಅಗತ್ಯವಾಗಿದ್ದು, ಬಸವಣ್ಣನವರ ಈ ‘ಅಧಿಕಾರ’ದಿಂದಲೂ ಆ ಬಗೆಯ ನೆರವು ಸಿಕ್ಕಿರಬೇಕು. ಹೀಗಲ್ಲದೆ, ಇದಾವುದೂ ಇಲ್ಲದ ಸರ್ವಸಂಗ ಪರಿತ್ಯಾಗಿಯೊಬ್ಬ ಇಂಥ ಸಂಘಟನೆಗಳನ್ನು ಮಾಡುವುದು ಸಾಧ್ಯವಿಲ್ಲ; ಮಿಗಿಲಾಗಿ, ಸರ್ವಸಂಗ ಪರಿತ್ಯಾಗಿಗಳಿಗೆ ಇದಾವುದೂ ಬೇಕಾಗುವುದಿಲ್ಲ. ಅದೃಷ್ಟವಶಾತ್ ಬಸವಣ್ಣನವರು ಇಂಥ ಸರ್ವಸಂಗ ಪರಿತ್ಯಾಗಿ ಅಲ್ಲ.

ಹೀಗೆ ರಾಜತ್ವದೊಂದಿಗೆ ಸಂಬಂಧವಿರಿಸಿಕೊಂಡವನೊಬ್ಬನನ್ನು, ರಾಜತ್ವದಿಂದ ಶೋಷಣೆಗೆ ಒಳಗಾಗುತ್ತ ಬಂದ ಜನಸಮೂಹ ತನ್ನ ನಾಯಕನೆಂದು ಒಪ್ಪಿಕೊಂಡದ್ದು ಹೇಗೆ? ಅದರಲ್ಲೂ ಸದಾ ಸಮಾನತೆಯ ಮಾತನಾಡುತ್ತಾ, ಈ ಲೋಕದ ಭೋಗ ವೈಭವಗಳ ಬಗ್ಗೆ ವಿರಕ್ತಿಯ ಮಾತನಾಡುತ್ತಾ ಇದ್ದ ವ್ಯಕ್ತಿಯೊಬ್ಬ, ತಮ್ಮ ಎದುರಿಗೇ ರಾಜ್ಯದ ದೊಡ್ಡ ಅಧಿಕಾರವನ್ನು ನಿರ್ವಹಿಸುತ್ತ, ರಾಜನೊಂದಿಗೆ ಅರಮನೆಯೊಳಗೆ ವ್ಯವಹರಿಸುತ್ತಿರುವುದರ ವೈಪರೀತ್ಯವನ್ನು, ಕಂಡೂ, ಅವನನ್ನು ನಾಯಕನೆಂದು ಒಪ್ಪಿಕೊಂಡ ಜನ ಹೇಗೆ ತಾಳಿಕೊಂಡರು? ಹೀಗೆ ಜನ ಅವರನ್ನು ಒಪ್ಪಿಕೊಂಡದ್ದಕ್ಕೆ ಕಾರಣ, ಬಸವಣ್ಣನವರ ಮುಚ್ಚುಮರೆಯಿಲ್ಲದ ವ್ಯಕ್ತಿತ್ವದ ನಿಲುವುಗಳೇ ಎಂದು ಹೇಳಬಹುದು. ಅವರು ‘ರಾಜ’ನೊಂದಿಗೆ, ‘ರಾಜತ್ವ’ದೊಂದಿಗೆ ತಮಗೆ ಇರುವ  ಸಂಬಂಧಗಳನ್ನೂ ತಮ್ಮ ನಿಲುವುಗಳನ್ನೂ ಅತ್ಯಂತ ಸ್ಪಷ್ಟವಾಗಿ ಬಿಚ್ಚಿಡುತ್ತಾ, ತಮ್ಮ ಸುತ್ತಣ ಜನ ಆಗಾಗ ಸಂಶಯಪಟ್ಟರೂ, ಒಟ್ಟಾರೆಯಾಗಿ ತಮ್ಮನ್ನು ‘ಇವನಾರವ ಇವನಾರವ’ ಎಂದುಕೊಳ್ಳದೆ ‘ಇವ ನಮ್ಮವ ಇವ ನಮ್ಮವ’ನೆಂದು ಒಪ್ಪಿಕೊಳ್ಳುವಂತೆ ನಡೆದುಕೊಂಡರು.

ಬಸವ ಬಿಜ್ಜಳ ಸಂಬಂಧವನ್ನು ಕುರಿತು, ಮುಂದಿನ ಕಾವ್ಯಗಳು ಅವರಿಬ್ಬರನ್ನು ಬಹುಮಟ್ಟಿಗೆ ನಾಯಕ-ಪ್ರತಿನಾಯಕರೆಂಬಂತೆ ಚಿತ್ರಿಸಿದರೂ, ಎಷ್ಟೋ ವೇಳೆ ಬಿಜ್ಜಳನಿಗಿಂತ ಬಸವಣ್ಣನೇ ‘ರಾಜ’ನೆಂಬಂತೆ ಕಾಣಿಸಿದರೂ, ಮೂಲತಃ ಅವರಿಬ್ಬರ ಸಂಬಂಧ ಒಂದು ಬಗೆಯ ವೈಯಕ್ತಿಕ ಒಡಂಬಡಿಕೆಯಾಗೇ ಇತ್ತೆಂದು ತೋರುತ್ತದೆ. ಅವರಿಬ್ಬರ ಸಂಬಂಧಗಳನ್ನು ಕೆಡಿಸಲು ‘ಕೊಂಡೆಯರು’ ಮತ್ತು ಇತರ ಉಚ್ಚವರ್ಗದವರು ಹೊಂಚುತ್ತಿದ್ದರೆಂಬುದು ಸಹಜವಾದ ಸಂಗತಿಯೇ. ಬಸವಣ್ಣನವರ ಸಾಮಾಜಿಕ-ಧಾರ್ಮಿಕ ನಿಲುವುಗಳಿಗೂ, ಬಿಜ್ಜಳನ ರಾಜಕೀಯ-ಧಾರ್ಮಿಕ ನಿಲುವುಗಳಿಗೂ ಘರ್ಷಣೆ ಬಂದದ್ದು ವಿರಳವೆಂದೇ ಹೇಳಬೇಕು. ಜತೆಗೆ ಅಧಿಕಾರದಲ್ಲಿದ್ದು, ಅದರ ಬಗ್ಗೆ ಸಾಕಷ್ಟು ಎಚ್ಚರವಾಗಿ ಹಾಗೂ ಅತ್ಯಂತ ಪ್ರಾಮಾಣಿಕನಾಗಿದ್ದ ಬಸವಣ್ಣನವರಂಥವರ ಬಗೆಗೆ, ಪ್ರಭುವಾದವನು ದುಡುಕಿ ನಡೆದುಕೊಳ್ಳುವುದಾಗಲಿ, ಅಥವಾ ಆತನ ಸಾಮಾಜಿಕ-ಧಾರ್ಮಿಕ ನಿಲುವುಗಳನ್ನು ಪ್ರಶ್ನಿಸುವುದಾಗಲಿ, ಬಹುಶಃ ಸಾಧ್ಯವಾಗಲಿಲ್ಲವೆಂದು ಊಹಿಸಬಹುದು. ಈ ಬಗ್ಗೆ ಕಾವ್ಯಗಳು ಹೇಳುವ ಸಂಗತಿಗಳನ್ನು ಬದಿಗೆ ಇರಿಸಿ, ಬಸವಣ್ಣನವರ ವಚನಗಳನ್ನು ನಾವು ಅವಲಂಬಿಸುವುದು ಒಳ್ಳೆಯದು.

ಬಸವಣ್ಣವರು ಮೂಲತಃ ಅನುಭಾವಿಕ ನಿಲುವಿನ ವ್ಯಕ್ತಿಯಾದದ್ದರಿಂದ, ಅವರ ಪಾಲಿಗೆ ಈ ಅಧಿಕಾರ ಇತ್ಯಾದಿಗಳ ಬಗ್ಗೆ ಅಂತಹ ಭ್ರಮೆಗಳೇನೂ ಇರಲಿಲ್ಲ. ಲೋಕದ ಭೋಗ ವೈಭವಗಳ ಬಗೆಗೇ ವಿರಕ್ತವಾಗುವಂತಹ ಚೇತನಕ್ಕೆ, ಇವು ಯಾವುವೂ ದೊಡ್ಡವೆಂದು ತೋರುವುದಿಲ್ಲ; ಅವರಿಗೆ ಲೋಕದ ಭೋಗ ವೈಭವಗಳಿಗಿಂತ ಸತ್ಯದ ನಿಲವನ್ನರಿಯುವುದು ಮುಖ್ಯವಾಗಿತ್ತು.

ಆನೆಯನೇಱಿಕೊಂಡು ಹೋದಿರೆ ನೀವು
ಕುದುರೆಯನೇಱಿಕೊಂಡು ಹೋದಿರೆ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ ಅಣ್ಣಾ,
ಸತ್ಯದ ನಿಲವನಱೆಯದೆ ಹೋದಿರಲ್ಲಾ……………
(ವ. ೬೩೭; ಪು. ೨೫೬)

ಎಂಬ ಮಾತಿನಲ್ಲಿ, ಈ ಲೋಕದ ಭೋಗ-ಭಾಗ್ಯಗಳ ಬೆನ್ನು ಹತ್ತಿ ಸತ್ಯದ ನಿಲವನ್ನರಿಯದೆ ವ್ಯರ್ಥವಾಗಿ ಹೋದ ಪದವಿಗಳ ಹಾಗೂ ಅಧಿಕಾರಗಳ ಬಗ್ಗೆ ತಾಳಿದ ಕನಿಕರ ಅಭಿವ್ಯಕ್ತವಾಗಿದೆ. ಜತೆಗೆ ರಾಜರ ದರ್ಪ, ಮುನಿಸು ಇತ್ಯಾದಿಗಳ ನಡುವೆ ಕೆಲಸ ಮಾಡುವುದು ಎಂತಹ ಕಷ್ಟದ ಪರಿಸ್ಥಿತಿ ಎಂಬುದನ್ನೂ ಅವರು ಬಲ್ಲವರಾಗಿದ್ದರು. “ಅರಸು ಮುನಿದಡೆ ನಾಡೊಳಗಿರಬಾರದಯ್ಯಾ” (ವ. ೮೨೪; ಪು. ೩೩೫) ಎಂಬ ಮಾತಿನಲ್ಲಿ, ರಾಜನ ಆಗ್ರಹಕ್ಕೊಳಗಾದರೆ ಅಂಥವನಿಗೆ ಉಳಿಗಾಲವೆ ಇಲ್ಲ ಎಂಬ ಕಟುಸತ್ಯವನ್ನರಿತವರಾಗಿದ್ದರು. ಇಂಥ ಪರಿಸ್ಥಿತಿಯಲ್ಲಿ ಅವರಿಗೆ ಬಹುಶಃ ‘ರಾಜ’ ‘ರಾಜತ್ವ’ ಇತ್ಯಾದಿಗಳ ಬಗ್ಗೆ ತಿರಸ್ಕಾರವೇ  ಇದ್ದಂತೆ ತೋರುತ್ತದೆ. ‘ರಾಜ’ ಕೂಡ ಎಲ್ಲರ ಹಾಗೆ ಒಬ್ಬ ಮನುಷ್ಯ; ಅವನಿಗೆ ಬೆಲೆ ಬರುವುದು ಅವನ ‘ರಾಜತ್ವ’ ಅಥವಾ ‘ರಾಜಪದವಿ’ಯಿಂದ. ಅವನೂ ಮೃತ್ಯುವಿಗೆ ಒಳಗಾಗುವ ಒಬ್ಬ ಮನುಷ್ಯ; ಇಂಥವನು ಸತ್ತರೆ, ಉಳಿದವರ ಶವಗಳಿಗೂ, ಇವನ ಶವಕ್ಕೂ ಏನು ವ್ಯತ್ಯಾಸ? ರಾಜನ ‘ಶವ’ ಎಂದರೆ ಅದಕ್ಕೆ ಅಂಥ ವಿಶೇಷವೇನೂ ಇಲ್ಲ;

ವ್ಯಾಧನೊಂದು ಮೊಲನ ತಂದರೆ ಸಲುವ ಹಾಗಕ್ಕೆ ಬಿಲಿವರಯ್ಯಾ
ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ
(ವ. ೧೫೮; ಪು. ೭೧)

ರಾಜನಾದವನ ಶವಕ್ಕೆ ಒಂದು ಮೊಲಕ್ಕಿರುವ ಬೆಲೆಯೂ ಇಲ್ಲ; ಅಂಥ ನಿಕೃಷ್ಟವಾದ  ಪದಾರ್ಥ ಅದು. ಎಲ್ಲ ಅನುಭಾವಿಗಳಂತೆ ‘ಮೃತ್ಯುತತ್ವ’ವನ್ನು ಕೇಂದ್ರದಲ್ಲಿರಿಸಿಕೊಂಡು ಲೋಕದ ಪದವಿ-ಐಶ್ವರ್ಯ ಇತ್ಯಾದಿಗಳನ್ನು ಒರೆಗೆ ಹಚ್ಚುವ ಬಸವಣ್ಣನವರಿಗೆ, ಅವರು ವಹಿಸಿಕೊಂಡ  ಪದವಿ ಕೂಡಾ ನಿಕೃಷ್ಟವಾದದ್ದೆ. ಅವರು ಬಹಿರಂಗದಲ್ಲಿ ಯಾವನೋ ಒಬ್ಬ ಒಡೆಯನ ಸೇವೆಗೆ ನಿಂತಂತೆ ಕಾಣಿಸಿದರೂ, ಅಂತರಂಗದಲ್ಲಿ ಅವರ ಒಡೆಯರು ಬೇರೆಯೇ. “ಎನಗೆ ಒಡೆಯರುಂಟು ಕೂಡಲಸಂಗನ ಶರಣರು” (ವ. ೩೨೩; ಪು. ೧೨೯) ಎಂದು ಹೇಳುವುದರ ಮೂಲಕ, ಮಾನಸಿಕವಾಗಿ ತಮ್ಮ ನಿಷ್ಠೆ ಯಾರಿಗೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಅಷ್ಟೇ ಅಲ್ಲ-

ಅರಸನ ಮನೆಯಲ್ಲಿ ಅರಸಿಯಾಗಿಪ್ಪುದಱಿಂದ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರಲೇಸಯ್ಯಾ
(ವ. ೩೩೫; ಪು. ೧೪೦)

ಎಂಬುದನ್ನು ಅವರು ಚೆನ್ನಾಗಿ ಬಲ್ಲರು. ಈ ನಿಲುವಿನ ಬಸವಣ್ಣನವರು, ರಾಜತ್ವ, ಅಧಿಕಾರ ಇತ್ಯಾದಿಗಳನ್ನು ಕುರಿತ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುತ್ತ, ಸುತ್ತಣ ಸಾಮಾನ್ಯ ಜನತೆಯೊಂದಿಗೆ ತಮ್ಮನ್ನು ಸಮೀಕರಿಸಿಕೊಂಡು, ಅವರ ವಿಶ್ವಾಸ-ಗೌರವಗಳನ್ನು ಗಳಿಸಿಕೊಳ್ಳಲು ಸಾಧ್ಯವಾಯಿತೆಂದು ತೋರುತ್ತದೆ.

ಆದರೂ, ಅವರು ಬಿಜ್ಜಳನ ಸೇವೆಯಲ್ಲಿ ನಿಂತದ್ದನ್ನು ಕಂಡು, ಅವರ ನಿಲುವುಗಳನ್ನು ಕುರಿತು ಸಂದೇಹಿಸಿದ ಪ್ರಶ್ನಿಸಿದ ಸಂದರ್ಭಗಳು ಇದ್ದೇ ಇದ್ದವು. ಹಾಗಿದ್ದುದು ತೀರಾ ಸಹಜವಾದದ್ದು. ಹೀಗೆ ಸಂದೇಹಿಸಿದ ಹಾಗೂ ಪ್ರಶ್ನಿಸಿದ ಜನ, ಅವರ ಆಂದೋಲನದಾಚೆ ನಿಂತವರು ಮಾತ್ರವಲ್ಲ, ಅವರ ಆಪ್ತರೇ ಈ ಬಗ್ಗೆ ಪ್ರಶ್ನಿಸಿರಬಹುದು. “ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು” (ವ : ೭೦೯ ಪು. ೨೮೩)- ಎಂಬ ಮಾತಿನಲ್ಲಿ, ಹೀಗೆ ಅವರನ್ನು ಕುರಿತು ಆಡಿಕೊಂಡವರಲ್ಲಿ ಅವರ ಆಪ್ತವರ್ಗಕ್ಕೆ ಸೇರಿದವರೇ ಇದ್ದರೆಂಬುದು ಸ್ಪಷ್ಟವಾಗಿದೆ. ಬಸವಣ್ಣನವರು, ಇಂಥ ಯಾವುದೇ ಪ್ರಶ್ನೆ-ಆಕ್ಷೇಪಣೆಗಳನ್ನು ತಳ್ಳಿ ಹಾಕದೆ ಉತ್ತರ ಕೊಟ್ಟಿರುವುದು ಅವರ ದೊಡ್ಡತನಕ್ಕೆ ಹಾಗೂ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಬಸವಣ್ಣನವರಿಗೆ ಗೊತ್ತು ತಾವು ಸೇವೆ ಮಾಡುತ್ತಿದ್ದೇವೆ ಎಂದು, ಆದರೆ ಅವರು ಈ ಹಂತದಲ್ಲಿ-

ನಾನು ಬೆವಹಾರವ ಮಾಡುವೆನಯ್ಯಾ
ಲಿಂಗಾರ್ಚನೆಗೆಂದು
ನಾನು ಪರ ಸೇವೆಯ ಮಾಡುವೆನಯ್ಯಾ
ಜಂಗಮದಾಸೋಹಕ್ಕೆಂದು      (ವ. ೭೦೮; ಪು. ೨೮೩)

ಎಂದು ಉತ್ತರ ಕೊಡುತ್ತಾರೆ. ಲೌಕಿಕವಾಗಿ, ಒಬ್ಬ ಮನುಷ್ಯನಾಗಿ ಬದುಕುವುದಕ್ಕೆ ಯಾವುದಾದರೂ ಒಂದು ಉದ್ಯೋಗವನ್ನು ಅವಲಂಬಿಸುವುದು ತಪ್ಪೇನಲ್ಲ. ಆದರೆ ತಮ್ಮ ಈ ವ್ಯವಹಾರ ಹಾಗೂ ಪರಸೇವೆ, ಲಿಂಗಾರ್ಚನೆ ಮತ್ತು ಜಂಗಮ ದಾಸೋಹಕ್ಕೆ. ಈ ಎರಡೂ ಮೂಲತಃ ಆಧ್ಯಾತ್ಮಿಕವಾದ ಕ್ರಿಯೆಗಳು, ಇದು ತಮ್ಮ ಸ್ವಾರ್ಥಕ್ಕಾಗಿ ಅಥವಾ ಕೇವಲ ಉದರ ಪೋಷಣೆಯ ಏಕೈಕ ಉದ್ದೇಶಕ್ಕಾಗಿ ಅಲ್ಲ. ಈ ಅಭಿಪ್ರಾಯವನ್ನು ಇನ್ನಷ್ಟು ಸಮರ್ಥಿಸುತ್ತಾ-

ಹೊತ್ತಾಱೆ ಎದ್ದು ಕಣ್ಣ ಹೊಸೆವುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆ, ಎನ್ನ ಮಡದಿ-ಮಕ್ಕಳಿಗೆಂದು
ಕುದಿದೆನಾದೊಡೆ ಎನ್ನ ಮನಕೆ ಮನವೇ ಸಾಕ್ಷಿ
………………………………………..
ಹೊಲೆ ಹೊಲೆಯರ ಮನೆಯ ಹೊಕ್ಕಾದಡೆಯೂ,
ಸಲೆ ಕೈ ಕೂಲಿಯ ಮಾಡಿಯಾದೆಡೆಯೂ
ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನೊಡಲವಸರಕ್ಕೆ ಕುದಿದೆನಾದೊಡೆ
ತಲೆದಂಡ! ಕೂಡಲ ಸಂಗಮದೇವಾ.
(ವ.೭೦೯; ಪು. ೨೮೩-೨೮೪)

ಎಂದು ಉದ್ಘೋಷಿಸುತ್ತಾರೆ. ಈ ಉದ್ಘೋಷ ಅತ್ಯಂತ ಪ್ರಾಮಾಣಿಕನಾದ ಮನುಷ್ಯನೊಬ್ಬನ ಕಳಕಳಿಯನ್ನು ಅತ್ಯಂತ ತೀವ್ರವಾಗಿ ಪ್ರಕಟಿಸುತ್ತದೆ. ಇಂಥ ಮಾತನ್ನು ಇಬ್ಬಂದಿತನದ ಬದುಕನ್ನು ನಡೆಸುವ ಮನುಷ್ಯ ಹೇಳಲಾರೆ. ತಮ್ಮ ಪದವಿ-ಅಧಿಕಾರಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸುತ್ತಿರುವುದಾಗಿ ಯಾರಾದರೂ ತೋರಿಸಿಕೊಟ್ಟರೆ, ತಮ್ಮ ತಲೆಯನ್ನೆ ದಂಡವಾಗಿ ಒಪ್ಪಿಸುವುದಾಗಿ ಸಾರುವ ಈ ಮಾತು, ಅತ್ಯಂತ ಪ್ರಾಮಾಣಿಕವಾದ ಹಾಗೂ ದಿಟ್ಟತನದ ಮಾತಾಗಿದೆ.

ಇಂಥ ವ್ಯಕ್ತಿತ್ವವನ್ನು ಕುರಿತು ಇನ್ನೂ ಕೆಲವು ಆಪಾದನೆಯ ಮಾತುಗಳು ಬಂದಿರಬೇಕು. ಬಿಜ್ಜಳನ ಭಂಡಾರದ ಹಣವನ್ನು ಬಸವಣ್ಣನವರು ಬಳಸಿಕೊಂಡಿರಬಹುದು ಎನ್ನುವುದು ಅವುಗಳಲ್ಲಿ ಒಂದು. ದಿನವೂ ಅವರು ನಡೆಸುತ್ತಿದ್ದ ಲಿಂಗಾರ್ಚನೆ, ಜಂಗಮ ದಾಸೋಹ ಇತ್ಯಾದಿಗಳನ್ನು ಕಂಡು, ಆಗದವರು ಅಂದರೆ ‘ಪರವಾದಿಗಳು’ ಈ ಆರೋಪವನ್ನು ಮಾಡಿರಬಹುದು. ಇಂಥ ಮಾತಿಗೆ ಬಸವಣ್ಣನವರು-

ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು
ಓಱೆಯಾವಿನ ಬೆನ್ನಲಿ ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವರುಳ್ಳನ್ನಕ್ಕ
ಬಿಜ್ಜಳನ ಭಾಂಡಾರವೆನಗೇಕಯ್ಯಾ?      (ವ. ೭೫೪; ಪು. ೩೦೧)

ಎಂದು ಉತ್ತರ ಕೊಟ್ಟಂತೆ ತೋರುತ್ತದೆ. ಇಲ್ಲಿ ‘ಊರ ಮುಂದೆ ಹಾಲಹಳ್ಳ ಹರಿಯುತ್ತಿರಲು ಓಱೆಯಾವಿನ ಬೆನ್ನಲಿ ಹರಿಯಲದೇಕಯ್ಯಾ’ -ಎಂಬ ಮಾತು, ತಾನೇ ತಾನಾಗಿ ಸಮೃದ್ಧವಾದ ನೆರವು ಲಭಿಸುತ್ತಿರುವಾಗ, ಬಿಜ್ಜಳನ ಹಣದ ಮೇಲೆ ಅವಲಂಬಿಸುವ ಅಗತ್ಯ ತಮಗಿಲ್ಲ ಎಂಬುದನ್ನು ಸೂಚಿಸುತ್ತದೆ. ಓಱೆಯಾವು ಎಂದರೆ, ಹಾಲನ್ನು ಜಿನುಗಿಸುವ ಅಥವಾ ಬಂಜೆಯಾದ ಅಥವಾ ಗೊಡ್ಡಾದ ಹಸು ಎಂಬ ಅರ್ಥವನ್ನು ವಿದ್ವಾಂಸರು ಕೊಡುತ್ತಾರೆ. ಊರೆದುರು ಹಾಲಿನ ಹಳ್ಳವೇ ಹರಿಯುವಾಗ ಇಂಥ ‘ಓಱೆಯಾವನ್ನು’ ಬೆನ್ನು ಹತ್ತುವುದು ಹೇಗೋ ಹಾಗೆ, ಬಿಜ್ಜಳನ ಭಂಡಾರದ ಕಡೆ ಕಣ್ಣು ಹಾಯಿಸುವುದು. ಈ ಬಗ್ಗೆ ನಾಚಿಕೆ ಪಟ್ಟುಕೊಳ್ಳುವಂಥದೇನಿದೆ. ತಮ್ಮ ಪರವಾಗಿ ‘ಕೂಡಲಸಂಗಮ ದೇವರು’ ಇರುವಾಗ ‘ಬಿಜ್ಜಳನ ಭಾಂಡಾರವೆನಗೇಕಯ್ಯಾ’ ಎಂಬ ಮುಂದಿನ ಮಾತು, ತಮಗೊದಗುವ ಧನಸಹಾಯ ‘ಊರ ಮುಂದಿನ ಹಾಲು ಹಳ್ಳ’ ದಂಥಾದ್ದು, ಅಷ್ಟೇ ಅಲ್ಲ ತಮ್ಮ ಈ ಕಾರ‍್ಯಭಾರದ ಹಿಂದೆ ಕೂಡಲಸಂಗನೇ ನಿಂತಿದ್ದಾನೆ. ಇದಿಷ್ಟೂ ಈ ವಚನದ ಅರ್ಥ.

ಈ ಒಂದು ವಚನವನ್ನು ಗಮನಿಸಿ, ಬಸವಣ್ಣನವರು ಬಿಜ್ಜಳನ ಭಂಡಾರದಿಂದ ಸ್ವಲ್ಪ ಹಣವನ್ನು ತಮ್ಮ ಜಂಗಮದಾಸೋಹಾದಿಗಳಿಗೆ ಬಳಸಿರಬಹುದೆಂದೂ, ಇಲ್ಲದಿದ್ದರೆ ಹಾಗೆ ಖರ್ಚು ಮಾಡಲು ಅವರಿಗೆ ಅಷ್ಟೊಂದು ಹಣ ಬಂದುದಾದರೂ ಹೇಗೆ ಎಂದು ತರ್ಕಿಸುತ್ತ ‘ಊರ ಮುಂದೆ ಹರಿಯುತ್ತಿದ್ದ “ಹಾಲಹಳ್ಳ” ಯಾವುದೋ ತಿಳಿಯದು’- ಎಂಬಂಥ ಅಭಿಪ್ರಾಯಗಳೂ ವ್ಯಕ್ತವಾಗಿವೆ. ನಮ್ಮ ಸಮಕಾಲೀನ ಅಧಿಕಾರಿಗಳ ನಡವಳಿಕೆಯನ್ನು  ನೋಡಿ, ಬಹುಶಃ ಬಸವಣ್ಣನವರೂ, ಬಿಜ್ಜಳನ ಭಂಡಾರದ ಹಣದ ಸ್ವಲ್ಪ ಭಾಗವನ್ನು ಬಳಸಿಕೊಂಡಿರಬಹುದು, ಆದುದರಿಂದ ಇಂಥ ಆಪಾದನೆಯ ಮಾತುಗಳಿಗೆ ಬಸವಣ್ಣನವರು ಉತ್ತರ ಕೊಡುವ ಸಂದರ್ಭ ಈ ವಚನದಿಂದ ಸ್ಪಷ್ಟವಾಗುತ್ತದೆ- ಎಂದು ತೀರ್ಮಾನಕ್ಕೆ ಬರುವುದು ತೀರಾ ಸಹಜ ಕೂಡ. ಆದರೆ ಈ ಬಗೆಯ ‘ಆಪಾದನೆ’ ಆ ಕಾಲದಲ್ಲಿ ಬಂದಿರುವುದು ಆಶ್ಚರ್ಯದ ಸಂಗತಿಯಲ್ಲವಾದರೂ, ಅದನ್ನು ಇಂದು ಪರಿಶೀಲಿಸುವ ನಾವು, ಯಾವುದರ ಮೇಲೆ ಹೆಚ್ಚು ಒತ್ತನ್ನು ಕೊಟ್ಟು ವಿಚಾರದಲ್ಲಿ ತೊಡಗುತ್ತೇವೆ ಎನ್ನುವುದು ಬಹು ಮುಖ್ಯವಾದದ್ದು. ಬಸವಣ್ಣನವರ ವಚನಗಳಷ್ಟನ್ನೂ ಸರಿಯಾಗಿ ನೋಡಿದವರಿಗೆ ಮುಖ್ಯವಾಗಿ ಎದ್ದು ಕಾಣಿಸುವುದು ಅವರ ನಿರಂತರ ಆತ್ಮನಿರೀಕ್ಷೆ ಮತ್ತು ಅದರಿಂದ ನಿಷ್ಪನ್ನವಾಗುವ ಪ್ರಾಮಾಣಿಕತೆ. ಇಷ್ಟರ ಮಟ್ಟಿಗೆ ತನ್ನನ್ನು ತಾನು ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟುಕೊಳ್ಳುವ ಈ ವ್ಯಕ್ತಿ ಬಿಜ್ಜಳನ ಭಂಡಾರದ ಹಣವನ್ನು ತಾನು ಬಳಸಿಕೊಳ್ಳಲಿಲ್ಲ (‘ಬಿಜ್ಜಳನ ಭಂಡಾರವೆನಗೇಕಯ್ಯಾ’; ‘ಎನ್ನೊಡಲವಸರಕ್ಕೆ ಕುದಿದೆನಾದೊಡೆ ತಲೆದಂಡ’) ಎಂದು ಹೇಳಿದ ಮಾತನ್ನು ನಂಬದೆ, ಅಥವಾ ಅದು ಪ್ರಾಮಾಣಿಕವಾದುದಲ್ಲ ಎಂದು ಶಂಕಿಸುತ್ತ, ಬಿಜ್ಜಳನ ಭಂಡಾರದ ಹಣವನ್ನು ಬಸವಣ್ಣನವರು  ಸ್ವಲ್ಪ ಮಟ್ಟಿಗಾದರೂ ಬಳಸಿಕೊಂಡಿರಬಹುದು ಎಂದು ಭಾವಿಸುವುದು ಆ ವ್ಯಕ್ತಿತ್ವಕ್ಕೆ ಮಾಡುವ ಅಪಚಾರವೇ ಸರಿ. ಹಾಗಾದರೆ ಓಱೆಯಾವಿನಂತಹ ಬಿಜ್ಜಳನ ಭಂಡಾರವನ್ನು ನೆಚ್ಚದೆ ಇರಬೇಕಾದರೆ ‘ಊರ ಮುಂದೆ ಹರಿಯುವ ಹಾಲಹಳ್ಳ ಯಾವುದು’ ಎಂಬ ಪ್ರಶ್ನೆ ಉಚಿತವಾದದ್ದೆ. ಬಸವಣ್ಣನವರು ತಮ್ಮನ್ನು ತೊಡಗಿಕೊಂಡ ಆಂದೋಲನದಲ್ಲಿ ಬಹುಸಂಖ್ಯಾತ ಸಾಮಾನ್ಯ ಜನರಿದ್ದರೆಂಬುದೇನೋ ನಿಜವೆ; ಹಾಗೆಂದರೆ, ಹಾಗೆ ಬಂದು ಕೂಡಿಕೊಂಡವರೆಲ್ಲಾ, ತೀರಾ ದಟ್ಟದರಿದ್ರರೆಂದೂ, ಬಸವಣ್ಣನವರ ಈ ಲಿಂಗಾರ್ಚನೆ ಜಂಗಮ ದಾಸೋಹ ಅಂಥವರಿಗೆ ಒಂದು ಜೀವನೋಪಾಯವಾಗಿತ್ತೆಂದು ಭಾವಿಸುವುದು ಸರಿಯಲ್ಲ. ಅಂದಿನ ಸಮಾಜದ ವಿವಿಧ ಸ್ತರಗಳಿಂದ ಬಂದು ಕೂಡಿಕೊಂಡವರಲ್ಲಿ ರಾಜ್ಯದ ಶ್ರೀಮಂತ ವರ್ಗದವರು, ವರ್ತಕರು ಮತ್ತು ತಕ್ಕಷ್ಟು ಅನುಕೂಲವಂತರೂ ಇದ್ದಿರಬಹುದು. ಮೋಳಿಗೆ ಮಾರಯ್ಯನಂಥವನು ಒಂದು ದೇಶದ ರಾಜನಾಗಿದ್ದವನು ಎಂಬುದನ್ನು ಗಮನಿಸಬೇಕು. ಇವರೆಲ್ಲ ತಮ್ಮ ತಮ್ಮ ಗಳಿಕೆಯ ಒಂದಷ್ಟು ಭಾಗವನ್ನು ಬಸವಣ್ಣನವರ ಈ ಕಾರ‍್ಯಕ್ಕೆ ಒದಗಿಸಿರಬಹುದು. ಈ ಸಾಮೂಹಿಕ ಸಂಪತ್ತಿನ ಸಂಚಯವೇ ಊರ ಮುಂದೆ ಹರಿಯುತ್ತಿದ್ದ ‘ಹಾಲಹಳ್ಳ.’ ಜತೆಗೆ ಕೂಡಲಸಂಗಮವನನ್ನೇ ನಂಬಿ (ಕೂಡಲ ಸಂಗಮದೇವರುಳ್ಳನ್ನಕ್ಕ) ಬಸವಣ್ಣನವರು ನಡೆಸುತ್ತಿದ್ದ ಅಭೂತಪೂರ್ವವಾದ ಕಾರ‍್ಯಕ್ಕೆ, ಹೇಗೋ ಅವರಿವರಿಂದ ಧನ-ಜನ ಸಹಾಯ ಒದಗಿರಬೇಕು. ಎಲ್ಲ ಕಾಲದಲ್ಲೂ ಈ ಬಗೆಯ ನಿಸ್ವಾರ್ಥವಾದ ಕಾರ್ಯಗಳಿಗೆ, ಅದು ಹೇಗೋ, ದೈವ ಸಹಾಯವೆಂಬಂತೆ ಹಲವು ಹತ್ತು ಕಡೆಗಳಿಂದ ನೆರವು ಒದಗಿ ಬರುತ್ತದೆಂಬುದು ತಿಳಿದ ಸಂಗತಿಯಾಗಿದೆ. ಆದುದರಿಂದ ಅತ್ಯಂತ ಪ್ರಾಮಾಣಿಕರಾದ ಬಸವಣ್ಣನವರು ಈ ಬಗೆಗೆ ಹೇಳಿದ ಮಾತುಗಳನ್ನು ನಾವು ಸಂಶಯದಿಂದ ನೋಡಬೇಕಾಗಿಲ್ಲ. ಯಾಕೆಂದರೆ-

ತಾಳಮರದ ಕೆಳಗೆ ಹಾಲ ಹರವಿಯಿದ್ದಡೆ
ಅದ ಹಾಲ ಹರವಿಯೆನ್ನರು; ಸುರೆಯ ಹರವಿ ಎಂಬರು.
(ವ. ೯೨; ಪು. ೪೪)

ಈ ಮಾತು ಭಂಡಾರಿಯಾಗಿ ಬಿಜ್ಜಳನಲ್ಲಿ ಕೆಲಸ ಮಾಡುತ್ತಿದ್ದ ಬಸವಣ್ಣನವರ ನಡವಳಿಕೆಯನ್ನು ಕುರಿತು, ತಿಳಿಯದ ಜನ ತಾಳುವ ನಿಲುವಿಗೆ ಒಡ್ಡಿದ ಒಂದು ಪ್ರತಿಮೆಯಾಗಿದೆ. ಬಸವಣ್ಣನವರು ಬಿಜ್ಜಳನ ಭಂಡಾರದ ದುರುಪಯೋಗಪಡಿಸಿಕೊಂಡಿರಬಹುದು ಎಂದು ತರ್ಕಿಸುವವರು, ತಾಳಮರದ ಕೆಳಗಣ ಹಾಲ ಹರವಿಯನ್ನು ಸುರೆಯ ಹರವಿ ಎಂದುಕೊಳ್ಳುವವರು. ಹಾಗೆಂದುಕೊಳ್ಳುವುದು ತಪ್ಪಲ್ಲವಾದರೂ, ಈ ವಸ್ತುಗಳ ಅಸ್ತಿತ್ವದ ಸಂದರ್ಭದ ಮಹಿಮೆ, ಯಾರನ್ನಾದರೂ ಆ ರೀತಿ ವಿಚಾರ ಮಾಡಲು ಅವಕಾಶ ಕೊಡುತ್ತದೆ.

ಒಟ್ಟಿನಲ್ಲಿ ಬಿಜ್ಜಳನಂಥ ರಾಜನ ಕೆಳಗೆ ಉದ್ಯೋಗವನ್ನು ಒಪ್ಪಿಕೊಳ್ಳಬೇಕಾಗಿದ್ದ ಬಸವಣ್ಣನವರ ಬದುಕು ಈ ಎಲ್ಲ ಅಪವಾದ ಹಾಗೂ ಸಂಘರ್ಷಗಳನ್ನು ಎದುರಿಸಬೇಕಾಗಿ ಬಂದದ್ದು ತೀರಾ ಸಹಜವಾಗಿದೆ. ಅವರನ್ನು ಕುರಿತು ಬಂದ ಅಪವಾದಗಳೇನೇ ಇರಲಿ, ಅವರಂತೂ ವ್ಯವಹಾರ ಹಾಗೂ ಆಧ್ಯಾತ್ಮಗಳನ್ನು ಬೆರಸದೆ, ತಮ್ಮ ವ್ಯಕ್ತಿತ್ವವನ್ನು ಎಲ್ಲ ಬಗೆಯ ಹೋರಾಟಗಳಿಗೂ ಒಡ್ಡಿಕೊಂಡು ದಿಟ್ಟತನದಿಂದ ನಿಂತವರು; ರಾಜನ ಅರಮನೆಯ ಅಧಿಕಾರದಲ್ಲಿದ್ದ ಮಾತ್ರಕ್ಕೆ ಅವರು ತಮ್ಮನ್ನು ಮಾರಿಕೊಂಡವರಲ್ಲ. ತಮ್ಮನ್ನು ಕುರಿತು-

ನ್ಯಾಯನಿಷ್ಠುರಿ ದಾಕ್ಷಿಣ್ಯಪರನು ನಾನಲ್ಲ,
ಲೋಕ ವಿರೋಧಿ ಶರಣನಾರಿಗಂಜುವನಲ್ಲ
ಕೂಡಲಸಂಗಮ ದೇವರ ರಾಜತೇಜದಲ್ಲಿಪ್ಪನಾಗಿ
(ವ. ೭೫೩; ಪು. ೩೦೧)

ಎಂದು ಹೇಳಿಕೊಳ್ಳುವುದರ ಮೂಲಕ ತಮ್ಮ ಸಮಸ್ತ ವ್ಯಕ್ತಿತ್ವವೂ ‘ಕೂಡಲ ಸಂಗಮದೇವರ ರಾಜತೇಜ’ದಲ್ಲಿರುವುದರಿಂದ ತಾವು ಯಾರಿಗೂ ಹೆದರ ಬೇಕಾಗಿಲ್ಲವೆಂಬುದನ್ನು ಸ್ಪಷ್ಟಪಡಿಸಿ ಕೊಂಡರು. ತಮ್ಮ ವ್ಯವಹಾರ ಭೂಮಿಕೆಯನ್ನೂ, ಆಧ್ಯಾತ್ಮಿಕ ಭೂಮಿಕೆಯನ್ನೂ ಅವರು ಒಂದರೊಳಗೊಂದು ಬೆರಸಿಕೊಂಡವರಲ್ಲ. ಇದೊಂದು ಅಪೂರ್ವವಾದ ಜಾಣ್ಮೆ ಅಥವಾ ವಿವೇಕ. ರಾಜನೊಬ್ಬನ ಆಸ್ಥಾನದಲ್ಲಿದ್ದುಕೊಂಡೂ, ಈ ಬಗೆಯ ದಿಟ್ಟತನದ ನಿಲುವುಗಳನ್ನು ತಾಳುತ್ತ, ಇತ್ತ ಅರಮನೆಯಿಂದಾಚೆಯ ಸಾಮಾಜಿಕ-ಧಾರ್ಮಿಕ ಚಳುವಳಿಯಲ್ಲಿ ತೊಡಗಿಸಿಕೊಳ್ಳುತ್ತ ಇದ್ದ ಬಸವಣ್ಣನವರು, ಎಲ್ಲಿನ ತನಕ ತಮ್ಮ ಹಾಗೂ ರಾಜ ಬಿಜ್ಜಳನ ನಡುವಣ ಸಂಬಂಧಗಳು ಒಡೆಯದೆ ಇದ್ದುವೋ ಅಷ್ಟು ಕಾಲ ರಾಜನೊಂದಿಗೆ ಪ್ರೀತಿ-ವಿಶ್ವಾಸಗಳಿಂದಲೇ ಇದ್ದಿರಬಹುದು. ರಾಜನಾದ ಬಿಜ್ಜಳ ಕೂಡಾ ಬಸವಣ್ಣನವರ ಪ್ರಾಮಾಣಿಕವಾದ ನಿಲುವುಗಳನ್ನು ತಕ್ಕಷ್ಟು ಚೆನ್ನಾಗಿಯೇ ಅರ್ಥಮಾಡಿಕೊಳ್ಳುತ್ತ, ಗೌರವದಿಂದ ನಡೆಯಿಸಿಕೊಂಡಿರಬಹುದು. ಅಥವಾ ಅಂದಿನ ಜನಸಮೂಹದ ಪ್ರೀತಿ-ಗೌರವಗಳನ್ನು ಗಳಿಸಿಕೊಂಡು ಒಂದು ರೀತಿಯಲ್ಲಿ ನಾಯಕನಾದ ಬಸವಣ್ಣನವರನ್ನು ಎದುರು ಹಾಕಿಕೊಳ್ಳುವ ಅಚಾತುರ್ಯಕ್ಕೆ ಕೈಹಾಕದೆ, ವ್ಯವಹಾರ ನಿಪುಣನಂತೆ ನಡೆದುಕೊಂಡಿರಬಹುದು. ಅನಂತರ ಅವರಿಬ್ಬರ ಸಂಬಂಧಗಳು ಏನಾಗಿರಬಹುದೋ, ಅದು ಇಲ್ಲಿ ಅಪ್ರಸ್ತುತ.

ಬಸವಣ್ಣನವರ ಹಾಗೂ ಒಟ್ಟಾರೆಯಾಗಿ ವಚನಕಾರರ ಈ ಜನಪರವಾದ ಮತ್ತು ಅನುಭಾವಿಕವಾದ ನಿಲುವುಗಳನ್ನು, ಹಲವರು ಇದು ಸ್ಪಷ್ಟವಾಗಿ ರಾಜವಿರೋಧೀ ಧೋರಣೆ ಎಂದು ಭಾವಿಸುವಂತೆ ತೋರುತ್ತದೆ. ಈ ಭಾವನೆ, ಬಸವಣ್ಣನವರ ಚಳುವಳಿಯ ಬಗೆಗೆ ಒಂದು ಆಕ್ಷೇಪಣೆಯನ್ನೂ ಮುಂದಿಡುತ್ತದೆ: ಅದೆಂದರೆ ಕೆಳವರ್ಗದ ಜನಸಮೂಹದಿಂದ ಸಂಘಟಿತವಾದ ಈ ಆಂದೋಲನ ಅಂದಿನ ಕರ್ನಾಟಕದ ರಾಜಕೀಯ ಚರಿತ್ರೆಯನ್ನೇ ಬದಲಿಸಬಹುದಾಗಿತ್ತು; ಆದರೆ ಬಸವಾದಿಗಳು ಕೇವಲ ಆಧ್ಯಾತ್ಮಿಕವಾದ ತಿರುವನ್ನು ಕೊಡುವುದರ ಮೂಲಕ ಈ ಜನತಾ ಕ್ರಾಂತಿಯನ್ನು ವಿಫಲವನ್ನಾಗಿ ಮಾಡಿದರು.

ಆದರೆ ಗಮನಿಸಬೇಕು, ಬಸವಾದಿಗಳು ಸಂಘಟಿಸಿದ ಈ ಆಂದೋಲನದ ಉದ್ದೇಶ ಖಂಡಿತ ರಾಜಕೀಯವಾದುದಲ್ಲ; ಅದೊಂದು ಸಾಮಾಜಿಕ-ಧಾರ್ಮಿಕ ಆಂದೋಲನ. ಅದರಲ್ಲಿ ಖಂಡಿತವಾಗಿಯೂ ಪ್ರತಿಭಟನೆಯ ಅಂಶಗಳಿವೆ. ಅದು ವರ್ಣಾಶ್ರಮ ಧರ್ಮದ ವಿರುದ್ಧವಾದದ್ದು; ಆದರೆ ಅದು ರಾಜವಿರೋಧಿ ಅಥವಾ ರಾಜಷಾಹೀ ವಿರೋಧೀ ನಿಲುವಂತೂ ಅಲ್ಲ. ರಾಜತ್ವ, ಅದರ ದರ್ಪ-ಭೋಗ-ವೈಭವಗಳು ಇತ್ಯಾದಿಗಳ ಬಗ್ಗೆ, ಅದನ್ನು ತೀರಾ ನಿಕೃಷ್ಟವಾಗಿ ಭಾವಿಸುವಂತಹ ಒಂದು ಆಧ್ಯಾತ್ಮಿಕ ದೃಷ್ಟಿಕೋನವನ್ನು ಈ ಆಂದೋಲನ ಗಟ್ಟಿಗೊಳಿಸಿತು. ರಾಜನನ್ನಾಗಲಿ, ರಾಜತ್ವವನ್ನಾಗಲೀ, ದೊಡ್ಡದೆಂದೂ, ಆ ಕಾರಣಕ್ಕಾಗಿ ಅದನ್ನು ತಾವು ಪ್ರತಿಭಟಿಸಬೇಕೆಂಬ ಅಥವಾ ತಾವು ಅದನ್ನು ಆಕ್ರಮಿಸಿಕೊಳ್ಳಬೇಕೆಂಬ ಯಾವ ಉದ್ದೇಶಗಳೂ ಈ ಸಂಘಟನೆಗೆ ಇರಲಿಲ್ಲ. ಜತೆಗೆ ಇದಕ್ಕೆ ಹಿಂದಿನ ಶತಮಾನಗಳಲ್ಲಿಯಂತೆ, ರಾಜನನ್ನು ಕುರಿತ ನಿಷ್ಠೆ, ರಾಜನಿಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಡಬೇಕೆಂಬ ಶ್ರದ್ಧೆ, ಜೋಳವಾಳಿ, ವೇಳೆವಾಳಿಗಳನ್ನು ಒಂದು ಮೌಲ್ಯವೆಂಬಂತೆ ಭಾವಿಸುವ ಪ್ರವೃತ್ತಿ,[3] ಈ ಕಾಲದ ಕರ್ನಾಟಕದ ಈ ಭಾಗದಲ್ಲಿ ತನ್ನ ಅರ್ಥವನ್ನು ಬಹುಶಃ ಕಳೆದುಕೊಳ್ಳತೊಡಗಿತ್ತು. ಇದಕ್ಕೆ ಅಂದಿನ ರಾಜಕೀಯ ಅಸ್ಥಿರತೆಯೂ ಒಂದು ಕಾರಣವಾದರೆ, ಬಸವಾದಿಗಳಿಂದ ಸಂಘಟಿತವಾದ ಭಕ್ತಿಮೂಲವಾದ ಈ ಚಳುವಳಿಯೂ ಮತ್ತೊಂದು ಕಾರಣವೆನ್ನಬಹುದು. ಈ ಚಳುವಳಿ, ವ್ಯಕ್ತಿಯಾದವನು ತನ್ನ ವಿಧೇಯತೆಯನ್ನು ರಾಜನ ಬದಲು ದೇವರ ಕಡೆ ಕೇಂದ್ರೀಕರಿಸುವ ದಿಕ್ಕಿನಲ್ಲಿ ಮನಸ್ಸನ್ನು ಸಿದ್ಧಗೊಳಿಸಿತು. ಹೀಗಾಗಿ ರಾಜ, ರಾಜತ್ವ ಇತ್ಯಾದಿಗಳನ್ನು ಮೀರಿದ ಆಧ್ಯಾತ್ಮಿಕ ಮನಃಸ್ಥಿತಿಯನ್ನು ಸಾಧಿಸುವುದು ಮುಖ್ಯವಾಯಿತು. ಹಾಗೆ ನೋಡಿದರೆ ನಿಜವಾದ ರಾಜ ವಿರೋಧೀ ಧೋರಣೆ ಭಾರತೀಯ ಪರಿಸರದಲ್ಲಿ ಸ್ಪಷ್ಟವಾಗಿ ಮೂಡಿದ್ದು ಆಧುನಿಕ ಕಾಲದಲ್ಲಿಯೇ. ಇದು ವಾಸ್ತವವಾಗಿ ಪ್ರಜಾಪ್ರಭುತ್ವವಾದೀ ನಿಲುವುಗಳ ಪರಿಣಾಮ. ಹಿಂದೆ ಭಾರತದ ಚರಿತ್ರೆಯಲ್ಲಿ ಈ ಬಗೆಯ ಪ್ರಜಾಪ್ರಭುತ್ವವಾದಿ ನಿಲುವುಗಳಿರಲೇ ಇಲ್ಲ. ಹಿಂದಿನ ಜನ ಒಂದೊಂದು ಸಲ ರಾಜನನ್ನು ಕುರಿತು, ಅಂದರೆ ನಿರ್ದಿಷ್ಟವಾದ ರಾಜರೆಂಬ ವ್ಯಕ್ತಿಗಳನ್ನು ಕುರಿತು ಆಗಾಗ ಬಂಡಾಯವೆದ್ದಿರಬಹುದು; ಆದರೆ ರಾಜತ್ವ ವಿರೋಧೀ ಧೋರಣೆಯೊಂದು ಯಾವ ಕಾಲದಲ್ಲೂ ರೂಪುಗೊಂಡಂತೆ ಕಾಣುವುದಿಲ್ಲ. ಈ ಧೋರಣೆ ಸಂಪೂರ್ಣವಾಗಿ ಆಧುನಿಕ ಕಾಲದ್ದು.

ಪ್ರತಿಕ್ರಿಯೆ (೧೯೮೨)

* * *


[1] ‘ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊಱೆಯ ಹೊಱಿಸದಿರಯ್ಯಾ’

(ವ. ೩೪೩; ಪು. ೧೩೬)

[2] ‘ಚೆನ್ನಯ್ಯನ ಮನೆಯ ದಾಸನ ಮಗನು;
ಕಕ್ಕಯ್ಯನ ಮನೆಯ ದಾಸಿಯ ಮಗಳು-
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿವರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲ ಸಂಗಮದೇವ ಸಾಕ್ಷಿಯಾಗಿ’
(ವ. ೩೪೫; ಪು.೧೩೭)

ವಿ.ಸೂ. ಉದ್ದಕ್ಕೂ ಉಲ್ಲೇಖಿತವಾಗಿರುವ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯವು ಪ್ರಕಟಿಸಿರುವ ‘ಬಸವಣ್ಣನವರ ವಚನಗಳು’ ಗ್ರಂಥದಿಂದ.

[3] ಜೋಳವಾಳಿಯಾನಲ್ಲ, ವೇಳೆಯಾಳಿಯವನಾನಲ್ಲಯ್ಯಾ
ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ.         (ವ. ೬೯೮ ; ಪು. ೨೭೮)