ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ
ಮುನಿಯಬೇಡ
, ಅನ್ಯರಿಗೆ ಅಸಹ್ಯಪಡಬೇಡ
ತನ್ನ
ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ
ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ
ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಈ ವಚನವನ್ನು ನೀವು ಕೇಳಿರಬೇಕಲ್ಲವೇ? ಇದರಲ್ಲಿಯ ಮಾತುಗಳು ಸರಳವಾಗಿವೆ. ಆದರೆ ಅವುಗಳಲ್ಲಿ ಜಗತ್ತಿನ ನೀತಿ, ಮಾನವಧರ್ಮದ ಸಾರವಿದೆ. ನಮ್ಮ ಬಾಳು ಒಳಗೂ ಹೊರಗೂ ಹಸನಾಗಿರಬೇಕು. ಅದೇ ಪರಮಾತ್ಮನನ್ನು ಒಲಿಸುವ ಹಾದಿ. ಪರಮಾತ್ಮನು ಒಲಿದರೆ ನಮ್ಮ ಬಾಳೆಲ್ಲ ಆನಂದಮಯವಾಗುವುದು.

ಈ ವಚನವನ್ನು ಬರೆದವರು ಬಸವಣ್ಣ. ಅವರ ಇಷ್ಟದೇವರು ಕೂಡಲಸಂಗಮದೇವ. ಈ ಹೆಸರು ವಚನದ ಕೊನೆಯಲ್ಲಿ ಅಂಕಿತವಾಗಿ ಬಂದಿದೆ. ಈ ಅಂಕಿತದಿಂದ ಬಸವಣ್ಣನವರು ಅನೇಕ ವಚನಗಳನ್ನು ಬರೆದಿದ್ದಾರೆ.

ಬಸವಣ್ಣನವರ ಪೂರ್ವದಲ್ಲಿ ಧರ್ಮದ, ನೀತಿಯ ಮಾತುಗಳನ್ನು ಸಂಸ್ಕೃತ ಭಾಷೆಯಲ್ಲಿ ಬರೆಯುವುದು ವಾಡಿಕೆಯಾಗಿತ್ತು. ಆದರೆ ಬಸವಣ್ಣನವರು ಅವುಗಳನ್ನು ಕನ್ನಡದಲ್ಲಿ ಬರೆಯ ತೊಡಗಿದರು. ಇದರಿಂದ ಕನ್ನಡ ಭಾಷೆಯ ಸಿರಿವಂತಿಕೆಯು ಹೆಚ್ಚಿತು. ಅದುವರೆಗೆ ಕನ್ನಡದಲ್ಲಿ ಪದ್ಯ ರಚಿಸುವ ಸಂಪ್ರದಾಯವಿರಲಿಲ್ಲ. ಬಸವನ್ಣನವರು ವಚನಗಳನ್ನು ಬರೆದರು. ಇದರಿಂದ ಹೊಸನ್ನಡ ಗದ್ಯವು ಬೆಳೆದುಬಂದಿತು, ಕನ್ನಡ ಭಾಷೆಯು ಜನಪ್ರಿಯತೆ ಪಡೆಯಿತು. ಜನರಿಗೂ ಉತ್ತಮ ತಿಳುವಳಿಕೆ ಸುಲಭವಾದ ಭಾಷೆಯಲ್ಲಿ ಲಭ್ಯವಾಯಿತು.

ಬಸವಣ್ಣನವರನ್ನು ಅನುಸರಿಸಿ ಆಗ ಅನೇಕ ಶಿವಶರಣರು ವಚನಗಳನ್ನು ಬರೆದರು. ಈ ವಚನಗಳು ಜನರಲ್ಲಿ ಪ್ರಚಾರವಾದವು. ಅವುಗಳಲ್ಲಿ ಧರ್ಮ, ನೀತಿ, ಸಮಾಜ ರಚನೆಗಳನ್ನು ಕುರಿತ ವಿಚಾರಗಳಿಂದ ಜನಜಾಗೃತಿಯಾಯಿತು. ನೀತಿಯ ಮಾತುಗಳು ಜನರಿಗೆ ಸುಲಭವಾಗಿ ತಿಳಿಯುವಂತಾಯಿತು. ಹೊಸ ಬಗೆಯ ಸಾಮಾಜಿಕ ವ್ಯವಸ್ಥೆ ತಲೆದೋರಿತು. ಪ್ರತಿಯೊಬ್ಬರೂ ತಮ್ಮ ತಮ್ಮ ಉದ್ಯೋಗ ಮಾಡುತ್ತಲೆ ಧಾರ್ಮಿಕ ಆಚರಣೆಯಲ್ಲಿ ತೊಡಗಬೇಕೆಂದು ಬಸವಣ್ಣನವರು ಬೋಧಿಸಿದರು. ಧಾರ್ಮಿಕ ದೃಷ್ಟಿಯಿಂದ ಕೈಗೋಳ್ಳುವ ಉದ್ಯೋಗವನ್ನು ಅವರು ಕಾಯಕ ಎಂದು ಕರೆದರು. ಎಲ್ಲರೂ ಕಾಯಕ ಕೈಗೊಳಬೇಕಾದುದರಿಂದ ಸಮಾಜದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿತು. ಹೀಗೆ ಬಸವಣ್ಣನವರಿಂದ ಧರ್ಮ, ನೀತಿ, ಸಮಾಜವ್ಯವಸ್ಥೆ, ಭಾಷೆ, ಸಾಹಿತ್ಯ, ಆರ್ಥಿಕ ಪರಿಸ್ಥಿತಿಗಳಲ್ಲಿ ದೊಡ್ಡ ಸುಧಾರಣೆಯುಂಟಾಯಿತು. ಏಕಕಾಲದಲ್ಲಿ ಇಷ್ಟು ಬಗೆಯ ಸುಧಾರಣೆಗಳನ್ನು ಕೈಗೊಂಡ ಮಹಾಪುರುಷ ಬಸವಣ್ಣ.

“ಎನಗಿಂತ ಕಿರಿಯಲಿಲ್ಲ” ಎಂದು ಹೇಳಿ ಅವರು ವಿನಯ ತೋರುತ್ತಿದ್ದರು. ತಮಗೆ ಹೊಗಳಿಕೆ ಬೇಡವೆಂದು ಅವರು ಹೇಳುತ್ತಿದ್ದರು. ಜನರನ್ನು “ಅಪ್ಪಾ”, “ಅಣ್ಣಾ” ಎಂದು ಸಂಬೋಧಿಸಿ ಅವರೊಂದಿಗೆ ಒಂದಾಗಿ ಕೆಲಸ ಮಾಡುತ್ತಿದ್ದರು. ಅವರು ನಮ್ಮ ನಾಡಿಗೆ ಮಾತ್ರವಲ್ಲ, ಜಗತ್ತಿಗೇ ಬೆಳಕು ಬೀರುವ ಜ್ಯೋತಿಯಾದರು.

ಬಸವಣ್ಣನವರು ಯಾರು?

ಎಂಟು ನೂರ ವರ್ಷಗಳ ಹಿಂದೆ, ಬಿಜಾಪುರ ಜಿಲ್ಲೆಯ ಬಾಗೇವಾಡಿ ಗ್ರಾಮ. ಅಲ್ಲಿ ಮಾದರಸ ಮಾದಲಾಂಬಿಕೆಯರೆಂಬ ದಂಪತಿಗಳಿದ್ದರು. ಅವರು ಬಹಳ ಧಾರ್ಮಿಕರಾಗಿದ್ದರು. ಬಾಗೇವಾಡಿಯಲ್ಲಿ ನಂದೀಶ್ವರ ದೇವಾಲಯವಿತ್ತು. ಈ ದಂಪತಿಗಳು ನಂದೀಶ್ವರನ ಭಕ್ತರಾಗಿದ್ದರು. ಮಾದಲಾಂಬಿಕೆಗೆ ಗಂಡು ಮಗನು ಬೇಕೆಂಬ ಆಶೆ ಬಹಳವಾಗಿತ್ತು. ಅದಕ್ಕಾಗಿ ಆಕೆಯು ಶಿವನಿಗೆ ಬೇಡಿಕೊಳ್ಳುತ್ತಿದ್ದಳು. ಒಂದು ದಿನ ಪೂಜೆ ಮುಗಿಸಿ ಧ್ಯಾನ ಮಾಡುತ್ತ ಕುಳಿತಿದ್ದಳು. ದೇವರಿಗೆ ಏರಿಸಿದ ಒಂದು ಮಲ್ಲಿಗೆ ಹೋವು ಆಕೆಯ ಉಡಿಯಲ್ಲಿ ಬಿದ್ದಿತು. ಆಕೆ ಅದನ್ನು ಭಕ್ತಿಯಿಂದ ತೆಗೆದುಕೊಂಡು ಹಣೆಗೆ ಒತ್ತಿಕೊಂಡಳು. ತಲೆಯಲ್ಲಿ ಮುಡಿದಳು.

ಆ ದಿನ ಮಾದಲಾಂಬಿಕೆಗೆ ಸಂತೋಷವೇ ಸಂತೋಷ. ರಾತ್ರಿ ಆಕೆಗೊಂದು ಕನಸು: ಕೈಲಾಸದಿಂದ ಶಿವನು ತನ್ನ ವಾಹನವಾದ ನಂದಿಯನ್ನು ಭೂಲೋಕಕ್ಕೆ ಕಳಿಸುತ್ತಾನೆ. ಆತ ಮಾದರಸ- ಮಾದಲಾಂಬಿಕೆಯರ ಮನೆಗೆ ಬರುತ್ತಾನೆ. ಆಗ ಎಲ್ಲ ಕಡೆ ಬೆಳಕು ಹರಡುತ್ತದೆ.

ಮರುದಿನ ಮಾದಲಾಂಬಿಕೆಯು ಈ ಸಮಾಚಾರವನ್ನು ಮಾದರಸನಿಗೆ ತಿಳಿಸುತ್ತಾಳೆ. ಅವನು ಅದನ್ನು ತಮ್ಮ ಊರಿನ ಗುರುಗಳಿಗೆ ತಿಳಿಸಿದ. ಗುರುಗಳು ಅದೊಂದು ಶುಭ ಸೂಚನೆಯೆಂದು ಹೇಳಿದರು. ಆ ದಂಪತಿಗಳಿಗೆ ವಂಶೋದ್ಧಾರಕನಾದ ಮಗನು ಹುಟ್ಟುತ್ತಾನೆ, ಆತನು ಲೋಕೋದ್ಧಾರಕನೂ ಆಗಿ ಎಲ್ಲ ಕಡೆಗೆ ಬೆಳಕನ್ನು ಬೀರುತ್ತಾನೆ. ಹೀಗೆಂದು ಗುರುಗಳು ತಿಳಿಸಿದರು. ಇದನ್ನು ಕೇಳಿ ಆ ದಂಪತಿಗಳಿಗೆ ಬಹಳ ಹರ್ಷವಾಯಿತು.

ಬಾಗೇವಾಡಿಯು ಒಂದು ಅಗ್ರಹಾರವಾಗಿತ್ತು. ಮಾದರಸನು ಆ ಅಗ್ರಹಾರದ ಮುಖ್ಯಸ್ಥನಾಗಿದ್ದ. ಮಾದಲಾಂಬಿಕೆಯ ಕನಸಿನ ಸಮಾಚಾರವು ಅಗ್ರಹಾರದ ಜನರಲ್ಲಿ ಹರಡಿತು.

ಮಾದಲಾಂಬಿಕೆ ಗರ್ಭವತಿಯಾದಳು. ಒಂಬತ್ತು ತಿಂಗಳಿಗೆ ಗಂಡು ಮಗನನ್ನು ಹಡೆದಳು. ಕೂಸು ಮುದ್ದಾಗಿತ್ತು. ಅಲೌಕಿಕ ಕಳೆಯಿಂದ ಕೂಡಿತ್ತು. ಆದರೆ ಹುಟ್ಟಿದ ಕೂಡಲೆ ಉಳಿದ ಕೂಸುಗಳಂತೆ ಅದು ಅಳಲಿಲ್ಲ. ಅಲುಗಾಡಲಿಲ್ಲ. ಕಣ್ಣು ಪಿಳಿಕಿಸಲಿಲ್ಲ. ಧ್ಯಾನಮಾಡುವ ಯೋಗಿಯಂತೆ ಮೌನವಾಗಿತ್ತು. ಇದರಿಂದ ತಾಯಿಗೆ ಗಾಬರಿಯೆನಿಸಿತು. ಕೂಡಲಸಂಗಮದಲ್ಲಿರುವ ತಮ್ಮ ಮನೆತನದ ಹಿರಿಯ ಗುರುಗಳಿಗೆ ಈ ಕೂಸಿನ ಸಮಾಚಾರ ತಿಳಿಸಬೇಕೆಂದು ಮಾದರಸ ನಿರ್ಧರಿಸಿದ.

ಮಲಾಪಹಾರಿ ಮತ್ತು ಕೃಷ್ಣಾ ನದಿಗಳು ಸೇರುವ ಸ್ಥಳದಲ್ಲಿ ಕೂಡಲಸಂಗಮ ಕ್ಷೇತ್ರವಿದೆ. ಅಲ್ಲಿ ಸಂಗಮೇಶ್ವರ ದೇವಾಲಯವಿದೆ. ಮಾದರಸನ ಮನೆತನದ ಹಿರಿಯ ಗುರುಗಳು ಆ ಸಂಗಮೇಶ್ವರ ದೇವಾಲಯದ ಮುಖ್ಯಸ್ಥರಾಗಿದ್ದರು. ಅವರು ಅಲ್ಲಿ ಒಂದು ವಿದ್ಯಾಲಯ ನಡೆಸುತ್ತಿದ್ದರು. ಅವರು ತಮ್ಮ ತಪಸ್ಸು, ಪಾಂಡಿತ್ಯಗಳಿಂದ ಬಹಳ ಪ್ರಭಾವಶಾಲಿಯಾಗಿದ್ದರು. ತಮಗೆ ಹುಟ್ಟಿದ ಕೂಸು ವಿಚಿತ್ರವಾಗಿರುವ ಸಮಾಚಾರವನ್ನು ಮಾದರಸನು ಈ ಸಂಗಮೇಶ್ವರ ಗುರುಗಳಿಗೆ ತಿಳಿಸಿದನು. ಕೂಡಲೆ ಗುರುಗಳು ಬಾಗೇವಾಡಿಗೆ ಬಂದರು.

ಮಾದಲಾಂಬಿಕೆಯು ಹಡೆದ ಕೂಸು ಸಾಮಾನ್ಯವಾದುದು ಅಲ್ಲವೆಂಬುದನ್ನು ಸಂಗಮೇಶ್ವರ ಗುರುಗಳು ಕಂಡುಕೊಂಡರು. ತಾವು ಸಂಗಮ ಕ್ಷೇತ್ರದಿಂದ ತಂದ ವಿಭೂತಿಯನ್ನು ಕೂಸಿನ ಹಣೆಗೆ ಹಚ್ಚಿದರು. ಆಗ ಕೂಸು ಕಣ್ಣು ತೆರೆಯಿತು. ಗುರುಗಳು ಕೂಸಿನ ಕೊರಳಿಗೆ ಲಿಂಗ ಕಟ್ಟಿದರು. ಆಗ ಕೂಸು ನಗತೊಡಗಿತು. ಹುಟ್ಟಿದ ಕೂಸಿಗೆ ಹೀಗೆ ಲಿಂಗಧಾರಣೆಯ ದೀಕ್ಷೆ ಮಾಡಿದುದು ಮಾದರಸ- ಮಾದಲಾಂಬಿಕೆಯರಿಗೆ ಹೊಸದೆನಿಸಿತು. ಆಗ ಗುರುಗಳು ಹೇಳಿದರು;

“ಶಿವನ ಕೃಪೆಯಿಂದ ನಂದಿಯೇ (ವೃಷಭ) ನಿಮ್ಮ ಮಗನಾಗಿ ಹುಟ್ಟಿದ್ದಾನೆ. ಈತನು ಮುಂದೆ ಮಹಾಪುರಷನಾಗುತ್ತಾನೆ. ಈ ಜಗತ್ತಿನಲ್ಲಿ ಧರ್ಮವನ್ನು ಬೆಳೆಸುತ್ತಾನೆ. ಸಕಲ ಮಾನವರ ಹಿತವನ್ನು ಸಾಧಿಸುತ್ತಾನೆ. ಇದು ನಿಮ್ಮ ಭಾಗ್ಯ, ಈ ನಾಡಿನ ಭಾಗ್ಯ. ಈತನಿಗೆ “ಬಸವ” ಎಂದು ನಾಮಕರಣ ಮಾಡಿರಿ.”

“ವೃಷಭ” ಪದವು ಕನ್ನಡದಲ್ಲಿ “ಬಸವ” ಎಂದಾಗುತ್ತದೆ. ಗುರುಗಳ ಆಜ್ಞೆಯಂತೆ ಕೂಸಿಗೆ “ಬಸವ” ಎಂಬ ಹೆಸರನ್ನಿಡಲಾಯಿತು. ದೊಡ್ಡವನಾದಾಗ ಜನರು ಗೌರವದಿಂದ ಆತನನ್ನು “ಬಸವೇಶ್ವರ” ಎಂದು ಕರೆದರು. ಆತನು ಎಲ್ಲರ ಹಿತ ಸಾಧಿಸುತ್ತ ಎಲ್ಲರೊಂದಿಗೆ ಸಲಿಗೆ ಪ್ರೀತಿಗಳಿಂದ ವರ್ತಿಸುತ್ತಿದ್ದನು. ಅಂತೆಯೇ ಜನರು ಆತನನ್ನು ಪ್ರೀತಿಯಿಂದ “ಬಸವಣ್ಣ” ಎಂದು ಕರೆಯತೊಡಗಿದರು.

ಬಸವಣ್ಣ ಜನ್ಮ ತಳೆದುದ ೧೧೩೧ ಎಂದು ತಿಳಿದು ಬರುತ್ತದೆ. ಭಾರತದ ಪಂಚಾಂಗದ ಪ್ರಕಾರ ಅವರ ಜನ್ಮ ದಿನವು ವೈಶಾಖ ಶುದ್ಧ ಅಕ್ಷಯ ತೃತೀಯ ದಿನದಂದು. ಆ ದಿನವನ್ನು “ಬಸವ ಜಯಂತಿ” ಎಂದು ಆಚರಿಸಲಾಗುತ್ತಿದೆ.

ಕೂಡಲಸಂಗಮಕ್ಕೆ

ಬಾಲಕ ಬಸವಣ್ಣ ಮುದ್ದಾಗಿ ಬೆಳೆಯುತ್ತಿದ್ದ. ತಾಯಿ- ತಂದೆಯರ ಮತ್ತು ಬಾಗೇವಾಡಿ ಅಗ್ರಹಾರದ ಜನರ ಕಣ್ಣಿಗೆ, ಮನಕ್ಕೆ ಹಬ್ಬವನ್ನು ತರುತ್ತಿದ್ದ. ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಜಾಣ ವಿದ್ಯಾರ್ಥಿಯೆಂದು ಹೆಸರು ಗಳಿಸಿದ. ವಯಸ್ಸಿಗೆ ಮೀರಿದ ಬುದ್ಧಿಶಕ್ತಿ ಆತನದ್ದಾಗಿತ್ತು. ಆತನು ಸದಾಚಾರಿಯಾಗಿದ್ದ. ಎಲ್ಲರೊಂದಿಗೆ ಪ್ರೀತಿಯಿಂದ ವ್ಯವಹರಿಸುತ್ತಿದ್ದ. ಆತನಲ್ಲಿ ಸ್ವತಂತ್ರ ವಿಚಾರಗಳಿದ್ದವು. ಶಾಲೆಯ ಪಾಠ್ಯಕ್ರಮದಲ್ಲಿ ಸಾಂಪ್ರದಾಯಿಕವಾದ ವಿಷಯಗಳನ್ನು ಶಿಕ್ಷಕರು ಕಲಿಸುತ್ತಿದ್ದರು. ಆದರೆ ಅದು ಹಾಗೇಕೆ? ಹೀಗೇಕೆ? ಎಂದು ಬಾಲಕ ಪ್ರಶ್ನೆ ಕೇಳುತ್ತಿದ್ದ. ಅವನ ದಿಟ್ಟತನವನ್ನು, ಸ್ವತಂತ್ರ ವಿಚಾರಮಾಡುವ ಶಕ್ತಿಯನ್ನು ಶಿಕ್ಷಕರು ಮೆಚ್ಚಿಕೊಂಡರು. ಆದರೆ ಆತನು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳುವುದು ಅವರಿಗೆ ಕಠಿಣವೆನಿಸುತ್ತಿತ್ತು.

ಅಗ್ರಹಾರದಲ್ಲಿ ಅನೇಕ ಧಾರ್ಮಿಕ ವಿಧಿಗಳು ನಡೆಯುತ್ತಿದ್ದವು. ಅವುಗಳ ಅರ್ಥವೇನೆಂದು ಬಸವಣ್ಣ ವಿಚಾರಿಸುತ್ತಿದ್ದ. ಅವನನ್ನು ಸಮಾಧಾನಗೊಳಿಸುವುದು ಹಿರಿಯರಿಗೆ ಸಾಧ್ಯವಾಗುತ್ತಿರಲಿಲ್ಲ. ಮನುಷ್ಯರಲ್ಲಿಯೆ ಕೆಲವರು ಮೇಲು ಇನ್ನು ಕೆಲವರು ಕೀಳು ಜಾತಿಯವರೆಂಬ ಸಂಪ್ರದಾಯ ಅಲ್ಲಿತ್ತು. ಇದು ಬಸವಣ್ಣನ ಮನಸ್ಸಿಗೆ ಸರಿತೋರಲಿಲ್ಲ.ಎಲ್ಲರೂ ಸಮಾನರಾಗಿರಬೇಕು, ಹಸನಾಗಿರಬೇಕು, ದುಡಿಯಬೇಕು, ಭಕ್ತಿಯಿಂದಿರಬೇಕು. ಈ ಬಗೆಯ ವಿಚಾರಗಳು ಬಸವಣ್ಣನಿಗೆ ಬಾಲ್ಯದಲ್ಲಿಯೇ ಮೂಡಿಬಂದವು. ಇದು ದೈವೀಕೃಪೆಯೇ ಅಹುದು.

ಬಸವಣ್ಣನಿಗೆ ಎಂಟು ವರ್ಷಗಳು ತುಂಬಿದವು. ಆಗ ಮನೆತನದ ಸಂಪ್ರದಾಯದಂತೆ ಆತನಿಗೆ ಉಪನಯನ ಮಾಡಬೇಕೆಂದು ಮಾದರಸ ನಿರ್ಧರಿಸಿದ. ಈ ಉಪನಯನ ಸಂಸ್ಕಾರದ ಅರ್ಥವೇನು? ಅದು ತನಗೇಕೆ ಬೇಕು? ಕೂಸಾಗಿರುವಾಗಲೆ ಸಂಗಮೇಶ್ವರ ಗುರುಗಳು ತನಗೆ ಲಿಂಗ ಕಟ್ಟಿದ್ದಾರೆ. ಹೀಗಿರುವಾಗ ಈಗ ಇನ್ನೊಂದು ಸಂಸ್ಕಾರ ತನಗೆ ಅವಶ್ಯವಿಲ್ಲ. ಹೀಗೆಂದು ಬಸವಣ್ಣನಿಗೆ ತೋರಿತು.

ಹಾಗೆ ಬಸವಣ್ಣ ತಂದೆಗೆ ತಿಳಿಸಿದ.  ಮಾದರಸನಿಗೆ ಅಚ್ಚಿರಿಯೆನಿಸಿತು. ಆತನ ಮನಸ್ಸಿಗೆ ನೋವು ಆಯಿತು. ಆದರೆ ಬಸವಣ್ಣನ ನಿರ್ಧಾರ ಸ್ಪಷ್ಟವಾಗಿತ್ತು. ತಮ್ಮ ಮನೆತನದ ಸಂಪ್ರದಾಯವನ್ನು ಮುರಿಯುವುದು ಹೇಗೆಂಬುದು ಮಾದರಸನಿಗೆ ದೊಡ್ಡ ಪ್ರಶ್ನೆಯಾಯಿತು. ಬಸವಣ್ಣನು ಈ ಬಗೆಗೆ ಬಹಳ ವಿಚಾರ ಮಾಡಿದ. ಕೊನೆಗೆ ತಂದೆಗೆ ಹೀಗೆ ತಿಳಿಸಿದ:

“ಮನೆತನದ ಸಂಪ್ರದಾಯವು ನಿಮಗೆ. ನನಗೆ ಇದು ಬೇಡ. ನನ್ನಿಂದ ನಿಮಗೆ ತೊಂದರೆಯಾಗಬೇಕಿಲ್ಲ. ಈಗ ನಾನು ಮನೆಯನ್ನೇ ಬಿಟ್ಟು ಹೋಗುತ್ತೇನೆ. ಸಂಗಮೇಶ್ವರ ಗುರುಗಳ ಬಳಿಯಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತೇನೆ.”

ತಾಯಿತಂದೆಯರು, ಆಪ್ತೇಷ್ಟರು ಎಷ್ಟು ಹೇಳಿದರೂ ಬಸವಣ್ಣ ತನ್ನ ಈ ನಿರ್ಧಾರವನ್ನು ಬಿಟ್ಟುಕೊಡಲಿಲ್ಲ. ಮನೆಯನ್ನು ತೊರೆದು ಕೂಡಲಸಂಗವಕ್ಕೆ ಹೊರಟೇಬಿಟ್ಟ. ಬಾಲಕನ ಇಂತಹ ದಿಟ್ಟ ನಿರ್ಣಯವು ಎಲ್ಲರನ್ನೂ ಬೆರಗುಗೊಳಿಸಿತು.

ಬಾಲ್ಯದಲ್ಲಿಯೇ ಬಸವಣ್ಣ ಕೈಗೊಂಡ ಈ ನಿರ್ಣಯವು ಮುಂಬರುವ ಆತನ ಧಾರ್ಮಿಕ ಕ್ರಾಂತಿಗೆ ಮುನ್ಸೂಚನೆಯಾಯಿತು.

ಬಾ, ಬಸವಣ್ಣ

ಆಗ ಧರ್ಮವು ಒಂದು ಸಂಪ್ರದಾಯವಾಗಿತ್ತು. ಧರ್ಮದ ಮೂಲ ತಿರುಳನ್ನು ಮರೆತು ಜನರು ಕೇವಲ ವ್ರತಾಚಾರಗಳಿಗೆ ಕಟ್ಟುಬಿದ್ದಿದ್ದರು. ದೇವರೊಬ್ಬನೇ ಎಂಬುದನ್ನು ಮರೆತು ಹಲವಾರು ದೇವತೆಗಳನ್ನು ಕಲ್ಪಿಸಿಕೊಂಡಿದ್ದರು. ಧರ್ಮದ ಹೆಸರಿನಲ್ಲಿ ಅನೇಕ ಜಾತಿಗಳು ಹುಟ್ಟಿಕೊಂಡಿದ್ದವು. ಮೂಢ ನಂಬಿಕೆಗಳು ಬೆಳೆದು ಬಂದಿದ್ದವು. ಹುಟ್ಟಿನಿಂದ, ಉದ್ಯೋಗದಿಂದ ಮೇಲು- ಕೀಳು ಭಾವನೆಗಳುಂಟಾಗಿದ್ದವು ಕ್ಷುದ್ರ ದೇವತೆಗಳ ಉಪಾಸನೆ ದೇವರಿಗೆ ಬಲಿಕೊಡುವುದು, ಕೀಳಾದ ಆಚಾರಗಳು ರೂಢಿಯಲ್ಲಿ ಬಂದಿದ್ದವು. ಸ್ವರ್ಗಲೋಕದ ಆಸೆಯಿಂದ ಈ ಲೋಕ ಬಾಳು ತಪ್ಪಾದ ಹಾದಿಯಲ್ಲಿ ಸಾಗಿತ್ತು.

ದೇವನೊಬ್ಬನೇ, ವನುಷ್ಯರೆಲ್ಲ ದೇವರ ಮಕ್ಕಳು. ಧರ್ಮದಲ್ಲಿ ಅವರೆಲ್ಲರಿಗೂ ಸಮಾನವಾದ ಅವಕಾಶವಿರಬೇಕು. ಎಲ್ಲರು ಪ್ರೀತಿಯಿಂದ ಬಾಳ ಬೇಕು. ದಯೆಯೇ ಧರ್ಮದ ಮೂಲ. ಇಂತಹ ವಿಚಾರಗಳನ್ನು ಜನರಲ್ಲಿ ರೂಢಿಸುವುದು ಆಗ ಅವಶ್ಯವಾಗಿತ್ತ. ಇಂತಹ ಕಾಲದಲ್ಲಿ ಬಸವಣ್ಣ ಹುಟ್ಟಿ ಬಂದ. ಬಾಲ್ಯದಲ್ಲಿಯೆ ದಿಟ್ಟತನದ ನಿರ್ಣಯ ಕೈಗೊಂಡ. ಬೆಳೆಯ ಸಿರಿಯು ಮೊಳಕೆಯಲ್ಲಿ ಕಂಡು ಬರುವಂತೆ ಆತನು ತನ್ನ ಮುಂದಿನ ಕಾರ್ಯದ ಹಿರಿಮೆಯನ್ನು ಬಾಲ್ಯದಲ್ಲಿಯೆ ತೋರಿದ. ಸ್ವತಂತ್ರ ವಿಚಾರದಿಂದ ಸಂಪ್ರದಾಯವನ್ನು ವಿರೋಧಿಸಿ ಬಸವಣ್ಣ ಬಾಗೇವಾಡಿಯನ್ನು ಬಿಟ್ಟು ಹೊರಟ.

ಸಂಗಮೇಶ್ವರ ಕ್ಷೇತ್ರಕ್ಕೆ ಬಸವಣ್ಣ ಬಂದ. ಆತನು ಬಂದಾಗ ಸಂಗಮೇಶ್ವರ ಗುರುಗಳು ಆತನನ್ನು ವಾತ್ಸಲ್ಯದಿಂದ ಸ್ವಾಗತಿಸಿದರು:

“ಬಾ, ಬಸವಣ್ಣ, ನೀನು ಇಲ್ಲಿಗೆ ಬರುವಿಯೆಂದು ನನಗೆ ಹೊಳೆದಿತ್ತು. ನಿನ್ನಂತಹ ಪ್ರತಿಭಾಶಾಲಿ ವಿದ್ಯಾರ್ಥಿಯಿಂದ ನಮ್ಮ ವಿದ್ಯಾಲಯದ ಕೀರ್ತಿಯು ಬೆಳೆಯುವುದು. ಸಂಗಮೇಶ್ವರನ ಸಾನ್ನಿಧ್ಯದಲ್ಲಿ ನಿನ್ನ ಅಲೌಕಿಕ ಚೇತನವು ಅರಳುವುದು. ಮುಂದೆ ನಿನ್ನಿಂದ ಜಗತ್ತಿನ ಕಲ್ಯಾಣಕ್ಕಾಗಿ ಮಹತ್ಕಾರ್ಯಗಳು ನೆರವೇರಲಿವೆ.”

 

ಸಂಗಮೇಶ್ವರ ಗುರುಗಳು ಬಸವಣ್ಣನನ್ನು ವಾತ್ಸಲ್ಯದಿಂದ ಸ್ವಾಗತಿಸಿದರು

ವಿದ್ಯಾಭ್ಯಾಸ

 

ಹೀಗೆಂದು ಗುರುಗಳು ಹೇಳಿದರು. ತಾಯಿ ತಂದೆಯರನ್ನು ತೊರೆದುಬಂದ ಬಸವಣ್ಣನಿಗೆ ಗುರುಗಳು ಸವಿನುಡಿ, ಹರಕೆಗಳಿಂದ ಸಂತಸವಾಯಿತು. ಗುರುಗಳ ಮಾರ್ಗದರ್ಶನದಲ್ಲಿ ತನ್ನ ವಿದ್ಯಾಭ್ಯಾಸವನ್ನು ಕೈಗೊಂಡ.

ಹೊಸ ದಿನಚರಿ ಆರಂಭವಾಯಿತು. ಬಸವಣ್ಣ ನಸುಕಿನಲ್ಲಿ ಬೇಗನೆ ಏಳುತ್ತಿದ್ದ. ದೇವರ ಧ್ಯಾನ ಮಾಡುತ್ತಿದ್ದ. ಸೂರ್ಯೋದಯಕ್ಕೆ ಮೊದಲೇ ಉದ್ಯಾನಕ್ಕೆ ಹೋಗುತ್ತಿದ್ದ. ಪೂಜೆಗಾಗಿ ಹೂವು ತರುವುದು ಆತನ ನಿತ್ಯದ ಕ್ರಮವಾಗಿತ್ತು. ಹೂವುಗಳ ಸೊಬಗನ್ನು ಕಂಡು ಆತನು ನಲಿಯುತ್ತದ್ದ. ಪ್ರತಿಯೊಂದು ಹೂವಿನಲ್ಲಿ ಪರಮಾತ್ಮನ ಚೇತನವಿದ್ದಂತೆ ಬಸವಣ್ಣನಿಗೆ ತೋರುತ್ತಿತ್ತು. ಸಂಗಮೇಶ್ವರ ದೇವಾಲಯದಲ್ಲಿ ಪೂಜೆಗೆ ಕುಳಿತಾಗ ತನ್ನನ್ನು ತಾನೇ ಮರೆಯುತ್ತಿದ್ದ. ತಾನು ಧರಿಸಿದ ಇಷ್ಟಲಿಂಗ, ದೇವಾಲಯದ ಸಂಗಮೇಶ್ವರ, ಇಡಿಯ ಪೃಥ್ವಿ- ಹೀಗೆ ಎಲ್ಲೆಲ್ಲಿಯೂ ಪರಮಾತ್ಮನು ಕಂಡುಬರುತ್ತಿರುವ ಭಾವವು ಬಸವಣ್ಣನದಾಗಿತ್ತು. ಆತನ ಭಕ್ತಿ ಭಾವ, ಪೂಜೆಗಳನ್ನು ಎಲ್ಲರೂ ಮೆಚ್ಚಿಕೊಂಡರು.

ಪೂಜೆಯ ನಂತರ ಅಭ್ಯಾಸ. ಅಂದಂದಿನ ಪಾಠಗಳ ಮನನ. ಆ ವಿಷಯಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳ ವಾಚನ. ಪೂಜೆಯ ಕಾಲದ ಏಕಾಗ್ರತೆಯು ಆತನ ಅಭ್ಯಾಸದಲ್ಲಿಯೂ ಇರುತ್ತಿತ್ತು. ವಾಚನ ಮುಗಿದ ಮೇಲೆ ಅಧ್ಯಾಪಕರೊಂದಿಗೆ ಚರ್ಚೆ. ಮುಂದೆ ವಿದ್ಯಾಲಯದಲ್ಲಿ ಪಾಠ- ಪ್ರವಚನ, ಸಾಮೂಹಿಕ ಚಟುವಟಿಕೆಗಳು. ಸಂಜೆಗೆ ನದೀತೀರದಲ್ಲಿ ಸಂಚಾರ.

ತನ್ನ ವಿದ್ಯೆ, ವಿನಯ, ಭಕ್ತಿ, ಸದಾಚಾರಗಳಿಂದ ಬಸವಣ್ಣ ಎಲ್ಲರಿಗೂ ಅಚ್ಚುಮೆಚ್ಚಾದ. ಸದಾ ಲವಲವಿಕೆ, ನಗುಮೊಗ, ಸರಳ ವರ್ತನೆ, ಆಲೋಚನಾಪರತೆ. ಅದ್ಭುತವಾಗಿ ರೂಪುಗೊಳ್ಳುತ್ತಿರುವ ಆತನ ವ್ಯಕ್ತಿತ್ವದ ಬಗೆಗೆ ಗುರುಗಳು ಅಭಿಮಾನಪಟ್ಟುಕೊಂಡರು.

ಆ ವಿದ್ಯಾಲಯದಲ್ಲಿ ಧರ್ಮನಿಷ್ಠರೂ ಘನಪಂಡಿತರೂ ಆದ ಅಧ್ಯಾಪಕರಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ದೊರೆಯುತ್ತಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೌಕರಿ ಮಾಡುವ ಉದ್ದೇಶವಿರುವ ಶಿಕ್ಷಣವು ಅದಾಗಿರಲಿಲ್ಲ. ವಿದ್ಯಾರ್ಥಿಗಳ ಆಂತರಿಕ ಚೇತನವನ್ನು ಹೊರಹೊಮ್ಮಿಸುವುದು, ಅವರನ್ನು ಜೀವನದಲ್ಲಿ ಘನವಾದ ಕಾರ್ಯಗಳಿಗೆ ಅಣಿಗೊಳಿಸುವುದು. ಈ ಬಗೆಯ ಉದ್ದೇಶ ಅಲ್ಲಿಯ ಶಿಕ್ಷಣದ್ದಾಗಿತ್ತು. ಈ ವಿದ್ಯಾಲಯದ ಸರಿಯಾದ ಪ್ರಯೋಜನವನ್ನು ಬಸವಣ್ಣ ಪಡೆದುಕೊಂಡ.

ವರ್ಷಗಳು ಉರುಳಿದವು. ಬಸವಣ್ಣ ಸಕಲ ಶಾಸ್ತ್ರಗಳನ್ನು ವ್ಯಾಸಂಗ ಮಾಡಿದ. ಐಹಿಕ ಜೀವನಕ್ಕೆ ಬೇಕಾಗುವ ವಿದ್ಯೆಯೊಂದಿಗೆ ಪಾರಮಾರ್ಥಿಕ ವಿದ್ಯೆಯನ್ನೂ ಪಡೆದ. ದೇಹದ ಮತ್ತು ಮನಸ್ಸಿನ ಆರೋಗ್ಯಗಳನ್ನು ಬೆಳೆಸಿಕೊಂಡ. ಮಾನವ ಜೀವನದ ಅರ್ಥವೇನು? ಉದ್ದೇಶವೇನು? ತನ್ನ ಪಾಲಿನ ಕರ್ತವ್ಯವೇನು? ಈ ಪ್ರಶ್ನೆಗಳನ್ನು ಕುರಿತು ಬಸವಣ್ಣ ಗಂಭೀರವಾಗಿ ಆಲೋಚಿಸಿದ.

ಕಲ್ಯಾಣನಗರವು ಚಾಲುಕ್ಯರ ರಾಜಧಾನಿ. ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ಅದು ಬಹು ಪ್ರಖ್ಯಾತವಾಗಿತ್ತು. ಸಂಪತ್ತು, ವಿದ್ಯೆಗಳಲ್ಲಿ ಆ ನಗರವು ಬಹಳ ಮುಂದುವರಿದಿತ್ತು. ಬಸವಣ್ಣನವರ ಕಾಲದಲ್ಲಿ ಕಲಚೂರ್ಯ ವಂಶದ ಬಿಜ್ಜಳನು ಅರಸನಾಗಿದ್ದನು. ಬಲದೇವನು ಅಲ್ಲಿ ಮಂತ್ರಿಯಾಗಿದ್ದ. ಬಲದೇವನಿಗ ಸಂಗಮ ಕ್ಷೇತ್ರದ ಬಗೆಗೆ, ಅಲ್ಲಿಯ ಗುರುಗಳ ಬಗೆಗೆ ಪೂಜ್ಯಭಾವನೆಯಿತ್ತು. ಬಸವಣ್ಣನ ಸಮಾಚಾರ ಕೇಳಿದ ಆತನು ಕೂಡಲಸಂಗಮದ ಪಯಣ ಕೈಗೊಂಡ. ಅಲ್ಲಿಗೆ ಬಂದು ಬಸವಣ್ಣನನ್ನು ಕಂಡು ಸಂತೋಷಪಟ್ಟುಕೊಂಡ. ಸಂಗಮೇಶ್ವರ ಗುರುಗಳೂ ಬಸವಣ್ಣನ ವ್ಯಕ್ತಿತ್ವವನ್ನು ಬಹಳ ಕೊಂಡಾಡಿದರು.

ಬಸವಣ್ಣನಂತಹ ವರ್ಚಸ್ವಿಯಾದ ವ್ಯಕ್ತಿಯು ಬಿಜ್ಜಳನ ಆಸ್ಥಾನದಲ್ಲಿ ಅಧಿಕಾರಿಯಾದರೆ ಬಹಳ ಒಳ್ಳೆಯದು. ಅದರಿಂದ ರಾಜ್ಯದ ಹಿತ, ಕೀರ್ತಿಗಳು ಬೆಳೆಯುವುವು. ಹೀಗೆಂದು ಬಲದೇವ ಮಂತ್ರಿಯು ಯೋಚಿಸಿದನು. ಅಲ್ಲದೆ ಬಸವಣ್ಣ ತನ್ನ ಮಗಳಿಗೆ ಯೋಗ್ಯವರನೆಂದೂ ಆತನಿಗೆ ತೋರಿತು. ಈ ವಿಚಾರ ಗುರುಗಳಿಗೂ ಒಪ್ಪಿಗೆಯಾಯಿತು.

ತನ್ನ ಜೀವನದ ಗುರಿಯನ್ನು ಕುರಿತು ಬಸವಣ್ಣ ಈಗಾಗಲೆ ವಿಚಾರ ಮಾಡಿದ್ದ. ಆಸ್ಥಾನದಲ್ಲಿ ಸೇವೆ ಕೈಗೊಳ್ಳುವ, ಇಲ್ಲವೆ ಮದುವೆ ಮಾಡಿಕೊಂಡು ಸಂಸಾರಿಯಾಗುವ ವಿಚಾರ ಆತನಿಗಿರಲಿಲ್ಲ. ಇದು ತನ್ನ ಧ್ಯೇಯ ಸಾಧನೆಗೆ ಸರಿಯಾಗುವುದಿಲ್ಲವೆಂದು ಆತನು ಭಾವಿಸಿದ್ದ. ಆದರೆ ಗುರುಗಳು ಬಲದೇವನ ಸೂಚನೆಯನ್ನು ಒಪ್ಪಿಕೊಳ್ಳಬೇಕೆಂದು ಬಸವಣ್ಣನಿಗೆ ಹೇಳಿದರು. ಆದರಿಂದ ಮುಂದೆ ಅವನು ಕೈಗೊಳ್ಳಲಿರುವ ಲೋಕೋದ್ಧಾರದ ಮಹಾಕಾರ್ಯಕ್ಕೆ ಅನುಕೂಲವಾಗುವುದೆಂದು ಅವರು ಸಲಹೆ ಕೊಟ್ಟರು. ಗುರುಗಳ ಆಜ್ಞೆಯನ್ನು ಬಸವಣ್ಣ ಮೀರುವಂತಿರಲಿಲ್ಲ. ಅದು ಪರಮಾತ್ಮನ ಸಂಕಲ್ಪವಾಗಿರಗಬೇಕೆಂದು ಭಾವಿಸಿ ಬಸವಣ್ಣ ಅದನ್ನು ಒಪ್ಪಿಕೊಂಡ. ಬಲದೇವ ಹಿಗ್ಗಿದ.

ಮುಂದೆ ಕೆಲವು ದಿನಗಳಲ್ಲಿ ಸಂಗಮೇಶ್ವರ ದೇವರ ಕೃಪೆ, ಗುರುಗಳ ಆಶೀರ್ವಾದ, ಇತರರ ಶುಭಾಶಯಗಳನ್ನು ಹೊತ್ತುಕೊಂಡು ಬಸವಣ್ಣ ಕಲ್ಯಾಣನಗರದ ಪಯಣ ಕೈಗೊಂಡ. ಇದು ಸುಮಾರು ೧೧೫೫ ರಲ್ಲಿ.

ಹಿರಿಯ ಸ್ಥಾನ

ಕಲ್ಯಾಣಕ್ಕೆ ಬಸವಣ್ಣ ಬಂದುದು ಮಾನವಕಲ್ಯಾಣಕ್ಕಾಗಿ ಹೊಸ ಹಾದಿಯೊಂದನ್ನು ತೆರೆದಂತಾಯಿತು. ಆರಂಭಕ್ಕೆ ಬಿಜ್ಜಳನ ಭಂಡಾರದಲ್ಲಿ ಬಸವಣ್ಣನವರು ಒಂದು ಕಿರಿಯ ಅಧಿಕಾರಸ್ಥಾನ ವಹಿಸಿಕೊಂಡರು. ಭಂಡಾರದ ಕಚೇರಿಯಲ್ಲಿ ಕಂಡುಬಂದ ಅವ್ಯವಸ್ಥೆ, ಆಲಸ್ಯಗಳನ್ನು ಕಿತ್ತುಹಾಕಲು ಅವರು ಶ್ರಮಿಸಿದರು. ಅವರು ತೋರಿದ ಬುದ್ಧಿಶಕ್ತಿ, ಕಾರ್ಯ ಕುಶಲತೆಗಳನ್ನು ಬಿಜ್ಜಳ ದೊರೆಯೂ ಮೆಚ್ಚಿಕೊಂಡ.

ಒಮ್ಮೆ ಅರಮನೆಯಲ್ಲಿ ಹಳೆಯಕಾಲದ ತಾಮ್ರಪಟವೊಂದು ದೊರೆಯಿತು. ಅದರ ಲಿಪಿಯು ಸಾಂಕೇತಿಕವಾಗಿತ್ತು. ಅದನ್ನು ಓದುವುದು ಆಸ್ಥಾನದ ಯಾವ ಪಂಡಿತರಿಗೂ ಸಾಧ್ಯವಾಗಲಿಲ್ಲ. ಆದರೆ ಬಸವಣ್ಣನವರು ತಮ್ಮ ವಿಶೇಷ ಬುದ್ಧಿಶಕ್ತಿಯಿಂದ ಅದರಲ್ಲಿಯ ವಿವರಗಳನ್ನು ಅರಿತುಕೊಂಡರು. ಅವುಗಳನ್ನು ಅರಸನಿಗೆ ತಿಳಿಸಿದರು. ಅದರಿಂದಾಗಿ ಹಿಂದಿನ ಅರಸರು ಹೂಳಿಟ್ಟಿದ್ದ ಅಪಾರ ಸಂಪತ್ತು ಅರಸನ ಭಂಡಾರಕ್ಕೆ ದೊರೆಯುವಂತಾಯಿತು. ಈ ಸಂಪತ್ತನ್ನು ಪ್ರಜೆಗಳ ಹಿತಕ್ಕಾಗಿ ಬಳಸುವಂತೆ ಬಸವಣ್ಣನವರು ಒಳ್ಳೆಯ ಯೋಜನೆಗಳನ್ನು ಸೂಚಿಸಿದರು. ಇದರಿಂದ ಸಂತೋಷಪಟ್ಟ ಬಿಜ್ಜಳನು ಬಸವಣ್ಣನವರನ್ನು ಭಂಡಾರದ ಮುಖ್ಯಸ್ಥರನ್ನಾಗಿ ನೇಮಿಸಿದನು.

ಕೂಡಲಸಂಗಮದಲ್ಲಿ ಬಸವಣ್ಣನವರು

ಮುಂದೆ ಬಲದೇವ ಮಂತ್ರಿಯ ಮಗಳು ಗಂಗಾಂಬಿಕೆ, ಬಿಜ್ಜಳನ ಸಾಕುತಂಗಿ ನೀಲಾಂಬಿಕೆಯರೊಂದಿಗೆ ಬಸವಣ್ಣನವರ ವಿವಾಹ ನಡೆಯಿತು. ಹೊಸ ಸಂಸಾರ ಮತ್ತು ಹೊಸ ಅಧಿಕಾರಸ್ಥಾನಗಳಿಂದ ಅವರ ಹೊಣೆಯು ಹೆಚ್ಚಿತು. ಕಾರ್ಯಕ್ಷೇತ್ರವು ಬೆಳೆಯಿತು. ಕಿರಿಯ ವಯಸ್ಸಿಗೇ ಅವರಿಗೆ ಹಿರಿಯ ಸ್ಥಾನ ದೊರೆತದ್ದರಿಂದ ಆಸ್ಥಾನದ ಕೆಲವರು ಅಸೂಯೆಪಟ್ಟುಕೊಂಡರು.

ಅನುಭವ ಮಂಟಪ

ಕಲ್ಯಾಣಕ್ಕೆ ಬಂದಾಗಲೆ ಬಸವಣ್ಣನವರು ಧಾರ್ಮಿಕ ಜಾಗೃತಿಯ ತಮ್ಮ ಕಾರ್ಯದ ಹೊಳಹು ಹಾಕಿದ್ದರು. ಮಾನವರಲ್ಲಿಯ ಮೇಲು- ಕೀಳು ಭಾವನೆಯಿಂದ ಸಮಾಜವು ಹೋಳು ಹೋಳಾಗಿತ್ತು. ಧರ್ಮದ ತಿರುಳು ಹಿಂದೆ ಉಳಿದಿತ್ತು. ಅರ್ಥವಿಲ್ಲದ ವ್ರತಾಚರಣೆಗಳು ಮುಂದೆ ಬಂದಿದ್ದವು. ನಿಜವಾದ ಭಕ್ತಿ, ಸದಾಚಾರಗಳು ಮರೆಯಾಗಿದ್ದವು. ಧಾರ್ಮಿಕ ವಿದ್ಯೆ, ಪೂಜೆಗಳಿಗೆ ಎಲ್ಲರಿಗೂ ಅಧಿಕಾರವಿಲ್ಲದಂತಾಗಿತ್ತು. “ಸರ್ವರಿಗೂ ಸಮಬಾಳು” ಎಂಬ ಸೂತ್ರದಂತೆ ಅವರು ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ಕೈಗೊಂಡರು.

ಅವರು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಒಂದು ಹೊಸ ವೇದಿಕೆಯನ್ನು ಆರಂಭಿಸಿದರು. ಅದು “ಅನುಭವ ಮಂಟಪ”. ಹುಟ್ಟಿನಿಂದ ಯಾವ ಜಾತಿಯವರಾದರೂ ಆ ಸಂಸ್ಥೆಗೆ ಸೇರಬಹುದಾಗಿತ್ತು. ಸ್ತ್ರೀಯರಿಗೂ ಅಲ್ಲಿ ಪ್ರವೇಶವಿತ್ತು. ಅನುಭವ ಮಂಟಪಕ್ಕೆ ಬರುವವರು ಭಕ್ತಿಯುಳ್ಳವರೂ ಸದಾಚಾರಿಗಳೂ ಆಗಬೇಕಾಗಿತ್ತು. ಪ್ರತಿಯೊಬ್ಬರೂ ಯಾವುದಾದರೊಂದು ದುಡಿಮೆಯನ್ನು ಕೈಗೊಳ್ಳುವುದು, ಜಾತಿ ಭೇದ, ಅಸ್ಪೃಶ್ಯತಾ ಭಾವನೆಗಳನ್ನು ಇಟ್ಟುಕೊಳ್ಳದೆ ಇರುವುದು, ಹೀಗೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತಿತ್ತು.

ಅನುಭವ ಮಂಟಪವು ಬೇಗನೆ ಜನಪ್ರಿಯತೆ ಪಡಿಯಿತು. ಕರ್ನಾಟಕದ ಮತ್ತು ಭಾರತ ದೇಶದ ಹಲವಾರು ಪ್ರದೇಶಗಳ ಅನೇಕ ಭಕ್ತರು ಕಲ್ಯಾಣನಗರಕ್ಕೆ ಬಂದು ಅನುಭವ ಮಂಟಪದಲ್ಲಿ ಪಾಲುಗೊಳ್ಳಲು ಬರುತ್ತಿದ್ದವರ ಉಟೋಪಚಾರದ ವ್ಯವಸ್ಥೆಯನ್ನು ಬಸವಣ್ಣನವರ “ಮಹಾಮನೆ” ಯಲ್ಲಿ ಮಾಡಲಾಗುತ್ತಿತ್ತು. ಬಸವಣ್ಣನವರ ಪತ್ನಿಯರು, ಅವರ ಸೋದರಿ ಅಕ್ಕನಾಗಮ್ಮ, ಅವರ ಸೋದರಳಿಯ ಚನ್ನಬಸವಣ್ಣ, ಬೇರೆ ಕೆಲವರು ಶಿವಶರಣರು ಶಿಶರಣೆಯರು ಮಹಾಮನೆ, ಅನುಭವ ಮಂಟಪಗಳ ವ್ಯವಸ್ಥೆಯನ್ನು ಕೈಗೊಂಡಿದ್ದರು. ಅನುಭವ ಮಂಟಪದಲ್ಲಿ ಧಾರ್ಮಿಕ ವಿಚಾರವಿನಿಮಯ ನಡೆಯುತ್ತಿತ್ತು. ಮಹಾಮನೆಯಲ್ಲಿ ಪೂಜೆ, ಊಟೋಪಚಾರ ನಡೆಯುತ್ತಿದ್ದವು. ಅಲ್ಲಿ ಸೇರುವವರ ಸಂಖ್ಯೆಯು ದಿನದಿನಕ್ಕೂ ದೊಡ್ಡದಾಗುತ್ತ ನಡೆಯಿತು.

ಬಸವಣ್ಣನವರ ಬಗೆಗೆ ಅಸೂಯೆಯಿದ್ದ ಕೆಲವು ಜನರು ಆಸ್ಥಾನದಲ್ಲಿ ಇದ್ದೇ ಇದ್ದರು. ಅವರಿಗೆ ಈಗ ಒಂದು ವಿಚಾರ ಹೊಳೆಯತು. “ಮಹಾಮನೆಯಲ್ಲಿ ಸೇರುವ ದೊಡ್ಡ ಸಂಖ್ಯೆಯ ಶಿವಭಕ್ತರ ಊಟೋಪಚಾರಕ್ಕಾಗಿ ಬಸವಣ್ಣನವರು ಅರಸನ ಭಂಡಾರದ ಹಣವನ್ನು ವೆಚ್ಚ ಮಾಡುತ್ತಾರೆ” ಎಂದು ಅಸುಯಾಪರರು ಬಿಜ್ಜಳನಿಗೆ ಚಾಡಿ ಹೇಳಿದರು. ಈ ಬಗೆಗೆ ಬಿಜ್ಜಳನು ಬಸವಣ್ಣನವರನ್ನು ಕೇಳಿದನು. ಆಗ ಬಸವಣ್ಣನವರು ಸ್ಪಷ್ಟವಾಗಿ ಹೇಳಿದರು:

“ಮಹಾಮನೆ ವೆಚ್ಚವು ಶಿವಶರಣರ ಕಾಯಕದಿಂದ ನಡೆಯುತ್ತದೆ. ಶಿವಭಕ್ತನಾದ ನಾನು ಪರರ ಹಣಕ್ಕಾಗಿ ಆಸೆಪಡುವವನಲ್ಲ. ನಿಮಗೆ ಇಂತಹ ಸಂಶಯ ಬರುವುದಾದರೆ ನಾನು ಭಂಡಾರಿಯ ಅಧಿಕಾರಸ್ಥಾನವನ್ನು ಈಗಲೆ ಬಿಟ್ಟಕೊಡುತ್ತೇನೆ. ಅದಕ್ಕೆ ಮೊದಲು ಈ ಆರೋಪದ ಬಗೆಗೆ ವಿಚಾರಣೆ ನಡೆಯಲಿ. ಭಂಡಾರದ ಹಣವನ್ನು ಲೆಕ್ಕಪತ್ರಗಳನ್ನು ಈಗಲೇ ಪರಿಶೀಲಿಸುವುದಾಗಲಿ.”

ಬಿಜ್ಜಳನು ಭಂಡಾರದ ಹಣವನ್ನೂ, ಸಂಬಂಧಿಸಿದ ಕಾಗದ ಪತ್ರಗಳನ್ನೂ ಪರಿಶೀಲಿಸಿದ. ಎಲ್ಲವೂ ಸರಿಯಾಗಿತ್ತು. ಬಿಜ್ಜಳನು ಬಸವಣ್ಣವರು ಕ್ಷಮೆ ಕೇಳಿದ. ಅಧಿಕಾರದಲ್ಲಿ ಮುಂದುವರಿಯುವಂತೆ ಅವರನ್ನು ಪ್ರಾರ್ಥಿಸಿದ. ಅಸೂಯಾಪರರ ಅಪವಾದದಿಂದ ಬಸವಣ್ಣನವರ ಕೀರ್ತಿಯು ಇನ್ನಷ್ಟು ಹೆಚ್ಚಿತು.

 

"ಭಂಡಾರದ ಹಣವನ್ನು ಲೆಕ್ಕ ಪತ್ರಗಳನ್ನು ಈಗಲೇ ಪರಿಶೀಲಿಸುವುದಾಗಲಿ"

ಬಲದೇವ ಮಂತ್ರಿಯ ಮರಣನಂತರ ಬಿಜ್ಜಳನು ಬಸವಣ್ಣನವರನ್ನು ಮಂತ್ರಿಯಾಗಿ ನೇಮಿಸಿದ. ಈ ಹೊಸ ಹೊಣೆಯನ್ನು ಬಸವಣ್ಣನವರು ಸಮರ್ಥವಾಗಿ ಸಮರ್ಪಕವಾಗಿ ನಿರ್ವಹಿಸಿದರು. ಅವರು ಎಂದಿನಂತ ಸಾದಾ ರೀತಿಯ ಜೀವನ ಸಾಗಿಸಿದರು. ಆದರೆ ಅವರ ವಿಚಾರಗಳು ಉನ್ನತವಾಗಿದ್ದವು. ಅವರು ಭಾವ ಶುದ್ಧಿಯುಳವರು. ಅವರ ನುಡಿ ಮುತ್ತಿನ ಹಾರದಂತೆ. ಜನರೊಂದಿಗೆ ವರ್ತಿಸುವಾಗ “ಮುಗಿದ ಕೈ, ಬಾಗಿದ ತಲೆ” ಯವರಾಗಿರುತ್ತಿದ್ದರು. ಆದರೆ ಅವರು ನ್ಯಾಯನಿಷ್ಠರರಾಗಿದ್ದರು; ದಾಕ್ಷಿಣ್ಯಪರರಾಗಿದ್ದಿಲ್ಲ. ಎಂತಹ ತೊಂದರೆಗೂ ಹೆದರದ ಕೆಚ್ಚು ಅವರದ್ದಾಗಿತ್ತು.

ತತ್ವಗಳು

ಬಸವಣ್ಣನವರು ಅನುಭವ ಮಂಟಪದ ಮೂಲಕ ಹೊಸ ಸಮಾಜ ರಚನೆಯ ಕಾರ್ಯವನ್ನು ಮುಂದುವರಿಸಿದರು. ಕೆಲವು ಉನ್ನತ ತತ್ವಗಳನ್ನು ಅನುಸರಿಸಿ ಈ ಕಾರ್ಯವು ಸಾಗಿತ್ತು. ಅಂತಹ ತತ್ವಗಳಲ್ಲಿ ಕೆಲವು ಹೀಗಿವೆ:

ದೇವನೊಬ್ಬ, ನಾಮ ಹಲವು. ಒಬ್ಬ ಪರಮಾತ್ಮನಲ್ಲಿ ಭಕ್ತಿಯಿಟ್ಟು ಆತನಿಗ ಎಲ್ಲವನ್ನೂ ಸಮರ್ಪಿಸಬೇಕು.

ದಯೆಯೇ ಧರ್ಮದ ಮೂಲ. ಸಕಲ ಪ್ರಾಣಿಗಳಲ್ಲಿ ದಯಯಿಂದ ವರ್ತಿಸಬೇಕು. ಸಕಲ ಕಲ್ಯಾಣಕ್ಕಾಗಿ ಬಾಳಬೇಕು. ವ್ಯಕ್ತಿಯ ಸ್ವಾರ್ಥಕ್ಕಾಗಿ ಅಲ್ಲ.

ಇಲ್ಲಿ ಸಲ್ಲುವವರೇ ಅಲ್ಲಿಯೂ ಸಲ್ಲುವರು. ಸಂಸಾರದಲ್ಲಿ ಸರಿಯಾಗಿ ಬಾಳಬಲ್ಲವರೇ ಪಾರಮಾರ್ಥಿಕ ಜೀವನಕ್ಕೆ ಯೊಗ್ಯರಾಗುವರು. ಸಂಸಾರವನ್ನು ಬಿಟ್ಟು ಸನ್ಯಾಸ ಕೈಗೊಳ್ಳಬೇಕಾಗಿಲ್ಲ.

“ಮಾಡುವೆ, ನೀಡುವೆ” ಎಂಬ ಅಹಂಕಾರವಿರಬಾರದು. ಮಾಡುವುದು ಅಂತರಂಗ ಭಕ್ತಿಯಾಗಿರಬೇಕು. ಹೊರಗಿನ ಪ್ರದರ್ಶನ, ಪ್ರಚಾರ, ಹೊಗಳಿಕೆಗಾಗಿದ ಇರಬಾರದು.

ಹೊರಗಿನ ವ್ರತಾಚಾರಗಳಿಗಿಂತ ಸದಾಚಾರ ಸದ್ಭಕ್ತಿಗಳಿಗೆ ಹೆಚ್ಚಿನ ಮಹತ್ವ ದೊಡಬೇಕು. ಹೊರಗೆ ಒಳಗೆ ಹಸನಾದ ಬಾಳುವೆ ಸಾಗಿಸಬೇಕು.

ಧರ್ಮಗ್ರಂಥ ಮತ್ತು ಸಂಪ್ರದಾಯಗಳಿಗಿಂತ ಶುದ್ಧ ಅಂತಃಕರಣಕ್ಕೆ ಹೆಚ್ಚಿನ ಮಹತ್ವವಿರಬೇಕು.

ಜನ್ಮ, ಉದ್ಯೋಗ, ಸಂಪತ್ತ, ಅಂತಸ್ತು, ಸ್ತ್ರೀ- ಪುರುಷ ಇಂತಹ ಯಾವ ಭೇದಭಾವವೂ ಇರಬಾರದು. ಧಾರ್ಮಿಕ ಜೀವನದಲ್ಲಿ ಎಲ್ಲರಿಗು ಸಮಾನವಾದ ಅವಕಾಶವಿರಬೇಕು.

ನಾಲಿಗೆಯ ಇಚ್ಛೆಗಾಗಿ ತಿನ್ನಬಾರದು, ಕುಡಿಯಬಾರದು ಅನ್ನ ಪಾನೀಯಗಳನ್ನು ಶಿವನ ಪ್ರಸಾದವೆಂದು ಸ್ವೀಕರಿಸಬೇಕು.

ಸದ್ವಿನಯವೇ ಸದಾಶಿವನ ಒಲುಮೆ. ದರ್ಪ, ಅಹಂಕಾರಗಳನ್ನು ತೋರಬಾರದು.

ಪ್ರತಿಯೊಬ್ಬರು ಸತ್ಯಶುದ್ಧ ಕಾಯಕ ಕೈಗೊಳ್ಳಬೇಕು. ಯಾರೂ ಭಿಕ್ಷೆ ಬೇಡಬಾರದು. ಉಪಜೀವನಕ್ಕೆ ಬೇಕಾದಷ್ಟನ್ನು ಮಾತ್ರ ಬಳಸಿ ಉಳಿದುದನ್ನು ಪರಮಾತ್ಮನ ಕಾರ್ಯಕ್ಕಾಗಿ ಅರ್ಪಿಸಬೇಕು.

ಮನಸ್ಸಿನ ಕೊಂಕನ್ನು ತಿದ್ದಿಕೊಂಡು ಪ್ರತಿಯೊಬ್ಬರೂ ಪೂಜೆ, ಧ್ಯಾನಗಳಲ್ಲಿ ತೊಡಗಿ ದೇವತ್ವದ ಹಂತಕ್ಕೆ ಏರುವುದು ಬಾಳಿನ ಗುರಿ.

ಈ ತತ್ವಗಳು ಬರಿಯ ಮಾತಿನಲ್ಲಿ ಇಲ್ಲವೆ ಪುಸ್ತಕಗಳಲ್ಲಿ ಉಳಿಯಲಿಲ್ಲ. ಅನುಭವ ಮಂಟಪಕ್ಕೆ ಸೇರಿದವರೆಲ್ಲರು ಇವುಗಳನ್ನು ತಮ್ಮ ನಿತ್ಯದ ಬಾಳಿನಲ್ಲಿ ಆಚರಿಸುತ್ತಿದ್ದರು. ಅನುಭವ ಮಂಟಪದಲ್ಲಿ ಹಲವಾರು ಉದ್ಯೋಗ, ಅಂತಸ್ತುಗಳ ಸ್ತ್ರೀ -ಪುರುಷರು ಸೇರಿದ್ದರು. ಮಂತ್ರಿ ಬಸವಣ್ಣ, ಮಹಾತೇಜಸ್ವಿ ಗುರು ಪ್ರಭುದೇವ, ಕರ್ಮಯೋಗಿ ಸಿದ್ಧರಾಮ, ಜ್ಞಾನಯೋಗಿ ಚೆನ್ನಬಸವಣ್ಣ, ವೀರವಿರಕ್ತೆ ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ನುಲಿಯ ಚಂದಯ್ಯ, ತುರುಗಾಹಿ ರಾಮಣ್ಣ, ಸುಂಕದ ಬಂಕಣ್ಣ, ಒಕ್ಕಲು ಮುದ್ದಯ್ಯ, ಕದಿರೆ ರೆಮ್ಮವ್ವೆ, ದೋಸೆಯ ಪಿಟ್ಟವ್ವೆ, ತಳವಾರ ರಾಮಿದೇವ, ಗಾಣದ ಕನ್ನಯ್ಯ, ವೈದ್ಯ ಸಂಗಣ್ಣ, ಬಡಿಗ ಬಸಪ್ಪ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಇಂತಹವರೆಲ್ಲ ಅಲ್ಲಿ ಇದ್ದರು. ಅವರೆಲ್ಲರಲ್ಲಿ ಬಂಧುಭಾವವಿತ್ತು.

ಆಚರಣೆ

ಅನುಭವ ಮಂಟಪದ ತತ್ವಗಳನ್ನು ಮಂತ್ರಿಯಾದ ಬಸವಣ್ಣನವರೇ ಸ್ವತಃ ಆಚರಿಸಿ ಉಳಿದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಒಂದು ನಡುರಾತ್ರಿ. ಮಲಗಿ ನಿದ್ರಿಸುತ್ತಿದ್ದ ಬಸವಣ್ಣನವರಿಗೆ ಏನೋ ಶಬ್ದವಾಗಿ ಎಚ್ಚರಿಕೆಯಾಯಿತು. ಕಣ್ಣು ಬಿಟ್ಟು ನೋಡುತ್ತಾರೆ. ಕಳ್ಳನೊಬ್ಬ ಬಸವಣ್ಣನವರ ಹೆಂಡತಿಯ ಮೈಮೇಲಿನ ಒಡವೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ!

ಆಗ ಅವನ ಕೈಗೆ ನೋವಾಗಬಾರದೆಂದು ಬಸವಣ್ಣನವರು ಸ್ವತಃ ಆ ಆಭರಣಗಳನ್ನು ತೆಗೆದುಕೊಟ್ಟರು. ಬಂದವನು ಕಳ್ಳನಾದರೂ ಅವನಲ್ಲಿಯೂ ಪರಮಾತ್ಮನಿರುವನೆಂಬ ಭಾವನೆ ಬಸವಣ್ಣನವರದು.

ಇನ್ನೊಮ್ಮೆ ಕಳ್ಳರು ಬಸವಣ್ಣನವರ ಹಸುಗಳನ್ನು ಕದ್ದೊಯ್ದರು. ಹಸುಗಳ ಕರುಗಳು ಮಾತ್ರ ಇವರಲ್ಲಿಯೇ ಉಳಿದಿದ್ದವು. ಅವುಗಳು ಹಸಿವೆಯಿಂದ “ಅಂಬಾ….” “ಅಂಬಾ….” ಎಂದು ಕೂಗತೊಡಗಿದವು. ಅವುಗಳಿಗೆ ಹಿಂಸೆಯಾಗಬಾರದೆಂದು, ಹಸುಗಳನ್ನು ಕರುಗಳನ್ನು ಅಗಲಿಸಬಾರದೆಂದು ಬಸವಣ್ಣನವರು ಭಾವಿಸಿದರು. ಕೂಡಲೆ ಕರುಗಳನ್ನು ಕಳ್ಳರ ಕಡೆಗೆ ತಾವಾಗಿಯೇ ಕಳಿಸಿಕೊಟ್ಟರು.

ಬಸವಣ್ಣನವರ ಈ ಬಗೆಯ ವರ್ತನೆಯಿಂದ ಕಳ್ಳಕಾಕರು ಪಶ್ಚಾತ್ತಾಪಪಟ್ಟರು. ಮುಂದೆ ಅವರು ಸದಾಚಾರಿಗಳಾಗಿ ಬಾಳಿದರು.

ಹೀಗೆಯೇ ಬಸವಣ್ಣನವರು ಹಲವು ಮೋಸಗಾರರನ್ನು, ಕಪಟಿಗಳನ್ನು ಸದಾಚಾರಿಗಳನ್ನಾಗಿ ಮಾರ್ಪಡಿಸಿದರು. ಅನೇಕ ಅದ್ಭುತ ಕಾರ್ಯಗಳನ್ನು ಸಾಧಿಸಿದರು.

ಬಸವಣ್ಣನವರು ರೂಪಿಸಿದ ಶರಣ ಸಮಾಜ ಮತ್ತು ಅದರ ಉನ್ನತ ತತ್ವಗಳು ಜನತೆಯಲ್ಲಿ ಮಿಂಚಿನ ಸಂಚಾರವನ್ನು ತಂದವು. ಬಸವಣ್ಣನವರ ಕೀರ್ತಿಯು ಎಲ್ಲ ಕಡೆಗೂ ಪಸರಿಸಿತು.

ಸಂಗಮೇಶ್ವರದಲ್ಲಿ

ಆದರೆ ಅವರು ಕೈಗೊಂಡ ಹೊಸ ಸಮಾಜ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ಕೆಲವರು ಸಂಪ್ರದಾಯವಾದಿಗಳೂ ಇದ್ದರು. ಅವರು ಬಸವಣ್ಣನವರನ್ನು ವಿರೋಧಿಸುತ್ತಿದ್ದರು. ಅವರಿಗೆ ಕೇಡನ್ನುಂಟುಮಾಡುವ ಸಮಯಕ್ಕಾಗಿ ವಿರೋಧಿಗಳು ಕಾಯುತ್ತಿದ್ದರು. ಅಂತಹ ಒಂದು ಅವಕಾಶವೂ ಅವರಿಗೆ ಒದಗಿಬಂದಿತು.

ಮೊದಲು ದ್ವಿಜನಾಗಿದ್ದ ಮಧುವರಸ ಮತ್ತು ಸಮಗಾರ ಹರಳಯ್ಯ ಇವರಿಬ್ಬರೂ ಇಷ್ಟಲಿಂಗಧಾರಣೆ ಮಾಡಿಕೊಂಡು ಅನುಭವ ಮಂಟಪ ಸೇರಿದರು. ಆಗ ಅವರಿಬ್ಬರೂ ಸಮಾನರಾದರು. ಹರಳಯ್ಯನ ಮಗನು ಮಧುವರಸನ ಮಗಳನ್ನು ಮದುವೆಯಾದನು. ಇದು ಅಂದಿನ ಸಮಾಜದಲ್ಲಿ ಕ್ರಾಂತಿಕಾರಕ ಘಟನೆಯನಿಸಿತು. ಈ ಮದುವೆಗೆ ಅನುಭವ ಮಂಟಪದ, ಬಸವಣ್ಣನವರ ಸಮ್ಮತಿಯಿತ್ತು.

ಸಂಪ್ರದಾಯವಾದಿಗಳು ಈ ಮದುವೆಯಿಂದ ಸಿಡಿದೆದ್ದರು. ಬಸವಣ್ಣನವರಿಂದಾಗಿ ಧರ್ಮವು ಹಾಳಾಯಿತೆಂದು ಕೂಗಾಡಿದರು. ಧಾರ್ಮಿಕ ಸಂಪ್ರದಾಯವನ್ನು ಪಾಲಿಸುವ ಕರ್ತವ್ಯ ಅರಸನದು. ಆದಕಾರಣ ಬಿಜ್ಜಳನು ಹರಳಯ್ಯ, ವಧುವರಸರನ್ನು ಶಿಕ್ಷಿಸಬೇಕೆಂದು ಹಟ ಹಿಡಿದರು. ಬಿಜ್ಜಳನು ಒತ್ತಾಯಕ್ಕೆ ಮಣಿದು ಆ ಶರಣರಿಗೆ ಕ್ರೂರವಾದ ಶಿಕ್ಷೆಯನ್ನು ವಿಧಿಸಿದನು. ಹೀಗೆ ಕಲ್ಯಾಣದಲ್ಲಿ ದೊಡ್ಡ ಅನ್ಯಾಯ ನಡೆಯಿತು. ಅಂತಹ ಅನ್ಯಾಯ ನಡೆದ ಸ್ಥಳದಲ್ಲಿ ತಾವು ಇರಬಾರದೆಂದು ಬಸವಣ್ಣನವರು ನಿರ್ಧರಿಸಿದರು. ಮಂತ್ರಿ ಪದವಿಯನ್ನು ಬಿಟ್ಟುಕೊಟ್ಟು ಪ್ರಶಾಂತವಾದ ಸಂಗಮ ಕ್ಷೇತ್ರಕ್ಕೆ ಮರಳಿ ಬಂದರು. ಅಲ್ಲಿ ಧ್ಯಾನ ಪೂಜೆಗಳಲ್ಲಿ ಕಾಲ ಕಳೆಯತೊಡಗಿದರು. ಮುಂದೆ ಸಂಗಮೇಶ್ವರ ದೇವರಲ್ಲಿ ಒಂದಾದರು. ಇದು ನಡೆದುದ ೧೧೬೭ರ ಸುಮಾರಿಗೆ.

ಹರಳಯ್ಯ, ಮಧುವರಸರಿಗೆ ಕ್ರೂರವಾದ ಶಿಕ್ಷೆಯಾದುದರಿಂದ ಕಲ್ಯಾಣದ ಜನತೆಯಲ್ಲಿ ಕೋಲಾಹಲವೆದ್ದಿತು. ಶರಣರಿಬ್ಬರು ಅನ್ಯಾಯಕ್ಕೆ ಬಲಿಯಾದರು. ಆದರೆ ಬಲಿದಾನದಿಂದ ಅನ್ಯಾಯಕ್ಕೆ ಬಲಿಯಾದರು. ಆದರೆ ಅವರ ಬಲಿದಾನದಿಂದ ಬಸವಣ್ಣನವರ ತತ್ವಗಳ ಹಿರಿಮೆಯನ್ನು ಜಗತ್ತಿಗೆ ಸಾರಿಹೇಳಿದಂತಾಯಿತು. ಕಲ್ಯಾಣ ನಗರವನ್ನು ಬಿಟ್ಟು ಹೊರಟ ಶರಣರು ದೇಶದ ಬೇರೆಬೇರೆ ಭಾಗಗಳಲ್ಲಿ ನೆಲೆಸಿದರು. ಎಲ್ಲ ಕಡೆಗೆ ಬಸವ ತತ್ವಗಳನ್ನು ಪಸರಿಸಿದರು. ಆ ತತ್ವಗಳು ಈಗಲೂ ಜನತೆಗೆ ಸ್ಫೂರ್ತಿಯನ್ನು ಒದಗಿಸುತ್ತಿವೆ.

ಬಸವಣ್ಣನವರ ವಚನಾಮೃತ

ಈ ಪುಸ್ತಕದ ಆರಂಭದಲ್ಲಿ ನೀವು “ಕಳಬೇಡ ಕೊಲಬೇಡ…” ಎಂಬ ಸರಳ, ಸುಂದರ, ಅರ್ಥಪೂರ್ಣ ವಚನವನ್ನು ಓದಿದಿರಿ. ಸಾವಿರಕ್ಕೆ ಮೇಲ್ಪಟ್ಟ ಇಂತಹ ವಚನಗಳನ್ನು ಬಸವಣ್ಣನವರು ಬರೆದಿದ್ದಾರ. ದೊಡ್ಡ ತತ್ವಗಳನ್ನು ಸರಳ ಮಾತುಗಳಲ್ಲಿ ಹೇಳುವುದು ಮಹಾತ್ಮರ ಲಕ್ಷಣವಾಗಿದೆ.

“ಕಳಬೇಡ ಕೊಲಬೇಡ…” ಎಂಬ ವಚನದಲ್ಲಿ “ಮುನಿಯಬೇಡ” ಎಂಬ ಮಾತು ಬಂದಿದೆ. ಸಿಟ್ಟಿಗೇಳುವುದು ಒಳ್ಳೆಯದಲ್ಲ. ಮತ್ತೊಂದು ವಚನದಲ್ಲಿ ಬಸವಣ್ಣನವರು ಹೇಳುತ್ತಾರೆ.

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ?
ತನಗಾದ
ಆಗೇನು? ಅವರಿಗಾದ ಚೇಗೇನು?
ತನುವಿನ
ಕೋಪ ತನ್ನ ಹಿರಿತನದ ಕೇಡು
ಮನದ
ಕೋಪ ತನ್ನ ಅರುಹಿನ ಕೇಡು
ಮನೆಯೊಳಗಿನ
ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ
ಸುಡದು ಕೂಡಲಸಂಗಮದೇವಾ.

ಯಾರಾದರೂ ನಮಗೆ ಮುನಿದರೆ ಪ್ರತಿಯಾಗಿ ನಾವೇಕೆ ಕೋಪಿಸಿಕೊಳ್ಳಬೇಕು? ಕೋಪದಿಂದ ನಮಗೆ ಲಾಭವಿಲ್ಲ. ಇತರರಿಗೂ ಹಿತವಿಲ್ಲ. ನಮ್ಮ ಕೋಪವು ನಮ್ಮ ಹಿರಿತನದ ಕೇಡು. ನಮ್ಮ ಬುದ್ಧಿಗೂ ಕೇಡನ್ನು ತರುತ್ತದೆ. ತಮ್ಮ ಮನಸ್ಸಿನೊಳಗಿನ ಕೋಪ ಬೆಂಕಿಯಿದ್ದಂತೆ. ನಮ್ಮ ಮನೆಯೊಳಗೆ ಹುಟ್ಟಿದ ಬೆಂಕಿ ಮೊದಲು ನಮ್ಮ ಮನೆಯನ್ನು ಸುಡುತ್ತದೆ. ಅನಂತರ ನೆರೆಮನೆಯನ್ನು ಸುಡುತ್ತದೆ. ಹಾಗೆಯೇ ನಮ್ಮ ಮನದೊಳಗಿನ ಕೋಪ ಮೊದಲು ನಮಗೆ, ಅನಂತರ ಇತರರಿಗೆ ಕೇಡನ್ನು ತರುತ್ತದೆ. ಮನೆಯ ಬೆಂಕಿಯ ಉದಾಹರಣೆಯಿಂದ ಮನದ ಕೋಪದ ಕೇಡನ್ನು ಈ ವಚನ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ.

ಬಸವಣ್ಣನವರ ಹಸುಗಳನ್ನು ಕಳ್ಳರು ಕೊಂಡೊಯ್ದ ಪ್ರಸಂಗದ ಬಗೆಗೆ ನೀವು ಓದಿದ್ದೀರಿ. ಆ ಸಂಧರ್ಭದಲ್ಲಿ ಬಸವಣ್ಣನವರು ನುಡಿದ ವಚನವಿದು:

ಆಕಳ ಕಳ್ಳರು ಕೊಂಡೊಯ್ದರು, ಎನ್ನದಿರಿಂ ಭೋ,
ನಿಮ್ಮ
ಧರ್ಮ ಬೊಬ್ಬಿಡಿದಿರಿಂ ಭೋ,
ನಿಮ್ಮ
ಧರ್ಮ ಆಡದಿರಿಂ ಭೋ,
ನಿಮ್ಮ
ಧರ್ಮ ಅಲ್ಲಿ ಉಂಬರೆ ಸಂಗ,
ಇಲ್ಲಿ
ಉಂಬರೆ ಸಂಗ
ಕೂಡಲಸಂಗಮದೇವ
ಏಕೋಭಾವ.

ಆಕಳನ್ನು ಕಳ್ಳರು ಕೊಂಡೊಯ್ದರು ಎಂದು ಹೇಳಬೇಡಿರಿ. ಜನರೇ, ಇದು ನಿಮ್ಮ ಧರ್ಮ. ಕೂಗಾಡಬೇಡಿರಿ, ಇದು ನಿಮ್ಮ ಕರ್ತವ್ಯ. ನೋವಿನಿಂದ ಮಾತನಾಡಬೇಡಿರಿ, ಇದು ನಿಮ್ಮ ಒಳೆಯ ನಡವಳಿಕೆ ಹಸು ಇಲ್ಲಿದ್ದರೆ ನಾವು ಹಾಲು ಕುಡಿದು ಸಂತೋಷಪಡುತ್ತಿದ್ದೆವು. ಅಲ್ಲಿ ಕಳ್ಳರು ಹಾಲು ಕುಡಿದು ಸಂತೋಷಪಡುತ್ತಾರೆ. ನಮ್ಮ ಅಂತರಂಗದಲ್ಲಿ ಮತ್ತು ಕಳ್ಳರ ಅಂತರಂಗದಲ್ಲಿ ಒಬ್ಬ ಪರಮಾತ್ಮನೇ ವಾಸಿಸುತ್ತಾನೆ. ಇಲ್ಲಿ ಉಣ್ಣುವವನೂ ಸಂಗಮೇಶ್ವರ. ಅಲ್ಲಿ ಉಣ್ಣುವವನೂ ಸಂಗಮೇಶ್ವರನೇ. ಈ ಬಗೆಯ ಏಕೊಭಾವವು ಈ ವಚನದಲ್ಲಿ ಮಾರ್ಮಿಕವಾಗಿ ಮೂಡಿಬಂದಿದೆ.

ಏಕೋಭಾವವು ನಾವು ಮಾಡುವ ಪೂಜೆಯಲ್ಲಿ, ಇತರ ಕೃತಿಗಳಲ್ಲಿ ಇರಬೇಕು. ಹಾಗಿಲ್ಲವಾದರೆ ನಮ್ಮ ಪೂಜೆ, ಕೃತಿ ವ್ಯರ್ಥ. ಅಂತಹ ಪೂಜೆ ಚಿತ್ರದ ಆಕೃತಿ (ರೂಪ), ಅಂತಹ ಮಾಟ ಚಿತ್ರದ ಕಟ್ಟು ಇದ್ದಂತೆ. ಹೀಗೆ ನಿಜವಿಲ್ಲದವರ ಭಕ್ತಿ, ಆಚಾರಗಳು ನಿರುಪಯೋಗಿ. ಹೋಲಿಕೆ, ದೃಷ್ಟಾಂತಗಳ ಮೂಲಕ ಉಪದೇಶವು ಮನದಟ್ಟಾಗುವಂತೆ ಮಾಡುವುದು ಬಸವಣ್ಣನವರ ವಚನಗಳ ವೈಶಿಷ್ಟ್ಯವಾಗಿದೆ.

ಕೆಲವರು ಗುಡಿ ಕಟ್ಟಿಸುವುದು, ದೊಡ್ಡ ಸಮಾರಂಭ ಮಾಡುವುದು ಧರ್ಮವೆಂದು ಭಾವಿಸುತ್ತಾರೆ. ಆದರೆ ಬಸವಣ್ಣ ಹೇಳುತ್ತಾರೆ.

ಉಳ್ಳವರು ಶಿವಾಲಯವ ಮಾಡುವರು
ನಾನೇನು
ಮಾಡಲಯ್ಯ, ಬಡವನು!
ಎನ್ನ
ಕಾಲೇ ಕಂಬ, ದೇಹವೇ ದೇಗುಲ
ಶಿರವೇ
ಹೊನ್ನ ಕಲಶವಯ್ಯಾ
ಕುಡಲಸಂಗಮದೇವ
ಕೇಳಯ್ಯಾ
ಸ್ಥಾವರಕ್ಕೆ
ಅಳಿವುಂಟು ಜಂಗಮಕ್ಕಳಿವಿಲ್ಲ

ಸಿರವಂತರು ಶಿವಾಲಯ ಕಟ್ಟಿಸುತ್ತಾರೆ. ಬಡವನಾದ ನಾನೇನು ಮಾಡಬಲ್ಲೆ? ನಾನು ಬೇರೊಂದು ರೀತಿಯ ಗುಡಿ ಕಟ್ಟಿಸುತ್ತೇನೆ. ನನ್ನ ಕಾಲುಗಳೇ ಕಂಬ. ನನ್ನ ದೇಹವೇ ದೇವಾಲಯ. ನನ್ನ ಶಿರವೇ ಹೊನ್ನ ಕಲಶ. ಕಟ್ಟಿಸಿದ ದೇವಾಲಯ ಒಂದೇ ಕಡೆಗೆ ಇರುತ್ತದೆ. ನನ್ನ ದೇಹ ಚಲಿಸುವಂಥಹದು. ನನ್ನೊಂದಿಗೆ ನನ್ನ ದೇವಾಲಯವು ಎಲ್ಲ ಕಡೆಗೂ ಇರುತ್ತದೆ. ಅಂತೆಯೇ ಇದಕ್ಕೆ ಅಳಿವು ಇಲ್ಲ. ಭೌತಿಕ ವಸ್ತು ಅಳಿಯಬಹುದು. ಆದರೆ ಚೇತನಕ್ಕೆ ಅಳಿವೇ ಇಲ್ಲ.

ನಮ್ಮ ದೇಹವನ್ನೇ ದೇವಾಲಯ ಮಾಡಬೇಕೆಂಬ ಬೆಲೆಯುಳ್ಳ ಬೋಧೆಯಿದು. ನಮ್ಮ ದೇಹವೆಂಬ ದೇವಾಲಯದಲ್ಲಿ ಪರಮಾತ್ಮನ ಮೂರ್ತಿಯನ್ನು ನಾವು ಕಾಣಬೇಕು. ಹೊರಗಿನ ಪೂಜೆ, ವಿಧಿ, ಆಚಾರಗಳು ಮಹತ್ವದವಲ್ಲವೆಂಬುದೇ ಬಸವಣ್ಣನವರ ದೃಷ್ಟಿಯಾಗಿದೆ. ಪ್ರದರ್ಶನ ಪ್ರಿಯತೆಯು ಅವರಿಗೆ ಒಪ್ಪಿಗೆಯಾಗಿರಲಿಲ್ಲ. ಲೋಕೋಪಚಾರಕ್ಕಾಗಿ ಮಾಡುವ ಪೂಜೆ, ದಾನಗಳ ಬಗೆಗೆ ಅವರು,

ಮಾಡಿಮಾಡಿ ಕೆಟ್ಟರು ಮನವಿಲ್ಲದೆ
ನೀಡಿ
ನೀಡಿ ಕೆಟ್ಟರು ನಿಜವಿಲ್ಲದೆ

ಎಂದು ಹೇಳಿದ್ದಾರೆ. ದೇವರ ಕೃಪೆ ದೊರೆಯಬೇಕಾದರೆ “ಮಾಡುವ ನೀಡುವ ನಿಜಗುಣವಿರಬೇಕು.” ಅರೆ-ಮನದಿಂದ ಮಾಡುವುದನ್ನು ಕುರಿತು ಅವರು.

ದೇಗುಲಕ್ಕೆ ಹೋಗಿ ನಮಸ್ಕಾರ ಮಾಡುವನಂತೆ
ತನ್ನ
ಕರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ

ಎಂಬ ದೃಷ್ಟಾಂತವನ್ನು ಕೊಟ್ಟಿದ್ದಾರೆ. ದೇವಾಲಯದ ಒಳಗೆ ಹೋಗುವಾಗ ನಮ್ಮ ಪಾದರಕ್ಷೆಗಳನ್ನು ಹೊರಗೆ ಬಿಟ್ಟಿರುತ್ತೇವೆ. ಒಳಗೆ ದೇವರ ಧ್ಯಾನ ಮಾಡುವಾಗ ಹೊರಗಿನ ಮನ್ನ ಪಾದರಕ್ಷೆಗಳು ಸುರಕ್ಷಿತವಾಗಿವೆಯೇ ಎಂಬ ಯೋಚನೆಯಲ್ಲಿ ಇರುತ್ತೇವೆ. ಇದು ಎಲ್ಲರ ಅನುಭವವಾಗಿದೆ. ಇಂತಹ ಅನುಭವವು ಎಲ್ಲ ವಚನಗಳಲ್ಲಿ ತುಂಬಿದೆ.

ಸಾಮಾನ್ಯ ಮಾನವರಿಗೆ ಹೊಗಳಿಸಿಕೊಳ್ಳುವ ಹಂಬಲವಿರುತ್ತದೆ. ಆದರೆ ಬಸವಣ್ಣನವರು ಹೊಗಳಿಕೆಯನ್ನು “ಹೊನ್ನಶೂಲ” ಎಂದು ಕರೆದಿದ್ದಾರೆ ಶೂಲವು ಒಂದು ಆಯುಧ. ಅದು ಬಂಗಾರದ್ದಾದರೂ ಅದು ನಮ್ಮನ್ನು ಇರುದು ಗಾಯಗೊಳಿಸಬಲ್ಲುದು. ಜನರು ತಮ್ಮನ್ನು ಹೊಗಳಬಾರದೆಂದು ಬಸವಣ್ಣನವರು ಹೇಳಿದರು. ಹಾಗೆ ಪರಮಾತ್ಮನನ್ನೂ ಬೇಡಿಕೊಂಡರು.

“ನೀನು ಎನಗೆ ಒಳ್ಳಿದನಾದರೆ ಎನ್ನ ಹೊಗಳತೆಗೆ ಅಡ್ಡಬಾರಾ” ನೀನು ನನಗೆ ಒಳ್ಳೆಯದನ್ನು ಮಾಡುವುದ? ಆದರೆ ನನಗೆ ಬರುವ ಹೊಗಳಿಕೆಯನ್ನು ತಡೆ- ಎಂದು ಪ್ರಾರ್ಥಿಸಿದರು. ಇದು ನಿಜವಾದ ಹಿರಿಯರ ಲಕ್ಷಣ.

ಸಾಮಾನ್ಯ ಜನರಿಗೂ ಸುಭವಾಗಿ ಅರ್ಥವಾಗುವಂತೆ ಬಸವಣ್ಣನವರು ಧರ್ಮದ ಕಲ್ಪನೆಯನ್ನು ಸುಗಮಗೊಳಿಸಿದರು.

ಈ ಬಗೆಗೆ ಬಸವ ವಾಣಿಯನ್ನು ಕೇಳಿ:

ದೇವಲೋಕ, ಮರ್ತ್ಯಲೋಕವೆಂಬುದು
ಬೇರಿಲ್ಲ
ಕಾಣಿಭೋ! (ರೋ)
ಸತ್ಯವ
ನುಡಿವುದೇ ದೇವಲೋಕ.
ಮಿಥ್ಯವ
ನುಡಿವುದೇ ಮರ್ತ್ಯಲೋಕ!
ಆಚಾರವೇ
ಸ್ವರ್ಗ, ಅನಾಚಾರವೇ ನರಕ
ಅಯ್ಯಾ
ಎಂದೆಡೆ ಸ್ವರ್ಗ, ಎಲವೋ ಎಂದೆಡೆ ನರಕ

ಬಸವಣ್ಣನವರಿಗೆ ಪ್ರಪಂಚದ ಯಾವ ಅಸೆಗಳೂ ಇರಲಿಲ್ಲ:

ಹೊನ್ನಿನೊಳಗೊಂದೊರೆಯ,
ಸೀರೆಯಳಗೊಂದೆಳೆಯ
ಇಂದಿಗೆ
ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ
, ನಿಮ್ಮ ಪುರಾತನರಾಣೆ.

ಇಂದಿನ ಇಲ್ಲವೆ ನಾಳೆಯ ಉಪಯೋಗಕ್ಕೆಂದು, ಬಟ್ಟೆಯ ಇಲ್ಲವೆ ಬಂಗಾರದ ಒಂದು ಎಳೆಯೂ ಕೂಡ ಬೇಕೆಂದು ಆಪೇಕ್ಷಿಸುವುದಿಲ್ಲವೆಂದು ಅವರು ದೇವಭಕ್ತರ ಆಣೆ ಇಟ್ಟುಕೊಂಡರು.

ಅವರು ಯಾರಿಂದಲೂ ಏನನ್ನೂ ಬೇಡಲಿಲ್ಲ:

ಕಾಯದ ಕಳವಳಕ್ಕಂಜಿಕಾಯಯ್ಯಾಎನ್ನೆನು
ಜೇವನೋಪಾಯಕ್ಕಂಜಿ
ಈರಯ್ಯಾಎನ್ನೆನು
ಯದ್
ಭಾವಂತದ್ ಭವತಿ ಉರಿಬರಲಿ, ಸಿರಿಬರಲಿ
ನಿಮ್ಮ
ಹಾರೆನು, ಮಾನವರ ಬೇಡೆನು:
ಆಣೆ
, ನಿಮ್ಮಾಣೆ ಕೂಡಲಸಂಗಮದೇವಾ.

ನನ್ನ ದೇಹವನ್ನು ರಕ್ಷಿಸಬೇಕೆಂದು ನಾನು ಯಾರನ್ನೂ ಬೇಡುವುದಿಲ್ಲ. ನನ್ನ ಜೀವನ ನಡೆಸಲು ನನಗೆ ಏನಾದರೂ ಕೊಡಿರಿ ಎಂದು ನಾನು ಯಾರಿಗೂ ಕೇಳುವುದಿಲ್ಲ. ಏನು ಆಗುವುದಿದೆಯೋ ಅದು ಆಗುತ್ತದೆ. ಉರಿಬಂದರೂ ಸಿರಿಬಂದರೂ ಬೇಕು-ಬೇಡ ಎಂದು ನಾನು ಹೇಳುವುದಿಲ್ಲ. ದೇವಾ, ನಿಮ್ಮಿಂದಲೂ ಕೇಳುವುದಿಲ್ಲ. ಮನವರನ್ನಂತೂ ನಾನು ಎಂದೂ ಬೇಡಲಾರೆ.

ಅವರಿಗೆ ಯಾವ ಅಂಜಿಕೆಯೂ ಇರಲಿಲ್ಲ:

ನಾಳೆ ಬಪ್ಪುದು ನಮಗಿಂದೆ ಬರಲಿ:
ಇಂದು
ಬಪ್ಪುದು ನಮಗೀಗಲೇ ಬರಲಿ
ಇದಕಾರಂಜುವರು
, ಇದಕಾರಂಜುವರು?

ಪರಮಾತ್ಮನೊಬ್ಬನನ್ನೇ ಅವರು ಆಶ್ರಯಿಸಿದ್ದರಿಮದ ಈ ಬಗೆಯ ನಿರ್ಭಯತೆ ಅವಿಗೆ ಸಾಧ್ಯವಾಗಿತ್ತು.

ತಂದೆ ನೀನು, ತಾಯಿನೀನು,
ಬಂಧು
ನೀನು ಬಳಗ ನೀನು
ನೀನಿಲ್ಲದೆ
ಮತ್ತಾರೂ ಇಲ್ಲವಯ್ಯಾ
ಕೂಡಲಸಂಗಮದೇವಾ
.

ಹಾಲಲ್ಲಿ ಅದ್ದು, ನೀರಲ್ಲಿ ಅದ್ದು, ದೇವರು ಮಾಡಿದಂತೆ ಆಗಲಿ ಎಂಬುದು ಅವರ ನಿಲುಮೆಯಾಗಿತ್ತು. ಅವರು ಎಲ್ಲ ಕಡೆಯಲ್ಲೂ ಪರಮಾತ್ಮನನ್ನು ಕಂಡರು. ವಿಶ್ವವನ್ನೆಲ್ಲ ತುಂಬಿದ ಪರಮಾತ್ಮನು ತಮ್ಮ ಒಳಗೂ ತುಂಬಿದ್ದಾನೆಂಬ ಅನುಭವ ಅವರದಾಗಿತ್ತು.

ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ
ನಿಮ್ಮ ಮೂರುತಿ ತುಂಬಿ
ಮನದಲ್ಲಿ
ನಿಮ್ಮನೆನಹು ತುಂಬಿ,
ಕಿವಿಯಲ್ಲಿ
ನಿಮ್ಮ ಕೀರುತಿ ತುಂಬಿ,
ಕೂಡಲಸಂಗಮದೇವಾ
,
ನಿಮ್ಮ
ಚರಣಕಮಲದಲ್ಲಿ ಆನು ತುಂಬಿ.

ನನ್ನ ನುಡಿಯಲ್ಲಿ ಪರಮಾತ್ಮನ ನಾಮವು, ಕಣ್ಣಿನಲ್ಲಿ ಆತನ ಮೂರ್ತಿಯು, ಮನದಲ್ಲಿ ಆತನ ಸ್ಮರಣೆಯು, ಕಿವಿಯಲ್ಲಿ ಆತನ ಕೀರ್ತಿಯು ತುಂಬಿದೆ. “ತುಂಬಿ” ಎಂಬ ಪದವನ್ನು ಇಲ್ಲಿ ಸುಂದರವಾಗಿ ಬಳಸಲಾಗಿದೆ. ಕೊನೆಯಲ್ಲಿ ಬರುವ “ತುಂಬಿ” ಪದಕ್ಕೆ ಶ್ಲೇಷಾರ್ಥವೂ ಇದೆ. ಪರಮಾತ್ಮನ ಚರಣದಲ್ಲಿ ನಾನು ತುಂಬಿದ್ದೇನೆ ಎಂಬ ಅರ್ಥವೊಂದು. ಪರಮಾತ್ಮನ ಚರಣವೆಂಬ ಕಮಲದಲ್ಲಿ ನಾನು ತುಂಬಿ ಎಂದರೆ ಭ್ರಮರ ಎಂಬುದು ಇನ್ನೊಂದರ್ಥವಾಗಿದೆ.

ಬಸವಣ್ಣನವರು ದೇವಮಾನವರಾಗಿ ಬಾಳಿದರು. ಎಲ್ಲರಿಗೂ ದೇವಮಾನವರಾಗುವ ಹಾದಿಯನ್ನು ತೋರಿಸಿಕೊಟ್ಟರು. ಎಂಟು ನೂರು ವರ್ಷಗಳು ಉರುಳಿದ್ದರೂ ಅವರು ಬಿಟ್ಟ ಬೆಳಕು ಪ್ರಕಾಶಮಾನವಾಗಿಯೇ ಉಳಿದಿದೆ. ಅಂತಹ ಜೀವಜ್ಯೋತಿಯಾಗಿದ್ದಾರೆ, ಬಸವಣ್ಣನರು.