ವಚನಗಳು ಕಾವ್ಯವೇ ಶಾಸ್ತ್ರವೇ ಎಂಬ ಪ್ರಶ್ನೆಗೆ ಅವುಗಳನ್ನು ಈ ಎರಡರಲ್ಲೊಂದು ವಿಭಾಗಕ್ಕೆ ಸೇರಿಸುವಂತೆ ಖಚಿತವಾಗಿ ಉತ್ತರ ಹೇಳುವುದು ಸಾಧ್ಯವಿಲ್ಲ. ಕೆಲವರು ಅವುಗಳನ್ನು ‘ಶಾಸ್ತ್ರ’ ಎಂದರೆ, ಕೆಲವರು ಅವು ‘ಕಾವ್ಯ’ ಎನ್ನುತ್ತಾರೆ. ಕೆಲವರು, ಈ ವಚನಗಳನ್ನು ಒಟ್ಟಾಗಿ ನೋಡಿದರೆ ಇದೊಂದು ಶಾಸ್ತ್ರ ಸಾಹಿತ್ಯವೇ, ಬಿಡಿಬಿಡಿಯಾಗಿ ನೋಡಿದಲ್ಲಿ ಇದರಲ್ಲಿ ಕಾವ್ಯಾಂಶಗಳಿವೆ ಎನ್ನುತ್ತಾರೆ. ವಚನಗಳ ರೂಪಾಂಶವನ್ನು ಗಮನಿಸಿದರೆ ಇದು ಗದ್ಯವೆ ಅಥವಾ ಪದ್ಯವೆ ಎಂದು ತಟಕ್ಕನೆ ಸಂಶಯ ಬರುವ ಹಾಗೆ ಒಳಗಿನ ತಿರುಳನ್ನು ನೋಡಿದಾಗಲೂ, ಇದು ಶಾಸ್ತ್ರವೇ ಕಾವ್ಯವೇ ಎಂಬ ಸಂಶಯ ಬರುವುದು ಸಹಜ. ಮತ ಧರ್ಮದ ದೃಷ್ಟಿಯಿಂದ ನೋಡುವವರಿಗೆ, ಸಿದ್ಧಾಂತವೊಂದನ್ನು ವ್ಯಾಖ್ಯಾನಿಸತಕ್ಕವರಿಗೆ ಇವು ಶಾಸ್ತ್ರದ ಹಾಗೆ ತೋರಿದರೆ, ಸಾಹಿತ್ಯ ಕಾವ್ಯಮೀಮಾಂಸೆಯ ದೃಷ್ಟಿಯಿಂದ ನೋಡತಕ್ಕವರಿಗೆ ಕಾವ್ಯದ ಹಾಗೆ ತೋರುತ್ತವೆ. ಆದರೆ ಈ ವಚನ ವಾಙ್ಮಯವನ್ನೆಲ್ಲ ಸಮಗ್ರವಾಗಿ ಇರಿಸಿಕೊಂಡು ನೋಡಿದಾಗ ಇದರಲ್ಲಿ ಶಾಸ್ತ್ರವೇ ಹೆಚ್ಚಾಗಿರುವಂತೆ ಕಂಡುಬಂದರೂ, ಬಸವಣ್ಣನವರ ವಚನಗಳನ್ನೇ ಪ್ರತ್ಯೇಕವಾಗಿ ನೋಡಿದರೆ, ಅವುಗಳಲ್ಲಿ ಕಾವ್ಯ ಸೌಂದರ್ಯವೇ ಮಿಗಿಲಾಗಿರುವುದು ಕಂಡುಬರುತ್ತದೆ.

ಈ ವಚನಸಾಹಿತ್ಯ ಎನ್ನುವುದು ಕನ್ನಡ ಕಾವ್ಯ ಪರಂಪರೆಯಲ್ಲಿ ಮಧ್ಯಂತರದಲ್ಲಿ ಮೂಡಿದ ಒಂದು ಅಪರೂಪದ ಅಭಿವ್ಯಕ್ತಿ ಪ್ರಕಾರ ಎನ್ನುವುದು ಸ್ಪಷ್ಟವಾಗಿದೆ. ವಚನ ಸಾಹಿತ್ಯವನ್ನೆ ಕೇಂದ್ರವಾಗಿರಿಸಿಕೊಂಡು ನೋಡಿದರೆ, ಅವುಗಳಿಗಿಂತ ಹಿಂದೆ ಇರುವುದು ಒಂದು ಚಂಪೂ ಪರಂಪರೆ; ಅವುಗಳ ಮುಂದೆ ಇರುವುದು ರಗಳೆ-ಷಟ್ಪದಿ-ಸಾಂಗತ್ಯಗಳ ಪರಂಪರೆ. ಆ ಕಡೆ ಮಾರ್ಗ, ಈ ಕಡೆ ದೇಸಿ. ಈ ಎರಡರ ನಡುವೆ ನಿಂತಿದೆ, ಈ ಎರಡೂ ಕಾವ್ಯ ಪ್ರಕಾರಗಳಿಂದ ಭಿನ್ನವಾದ, ತನಗೆ ತಾನೇ ಸ್ವತಂತ್ರವಾದ ಈ ಒಂದು ಅಭಿವ್ಯಕ್ತಿ ಪ್ರಕಾರ. ವಸ್ತು-ರೀತಿ-ದೃಷ್ಟಿ ಯಾವುದರಲ್ಲಿಯೂ ತನಗಿಂತ ಹಿಂದಿನ ಹಾಗೂ ಮುಂದಿನ ಕಾವ್ಯ ಪ್ರಕಾರಗಳನ್ನು ಹೋಲದೆ, ಕೆಲವಂಶಗಳಲ್ಲಿ ಮುಂದಿನ ಮಾರ್ಗದ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾ[1] ತಾನೇ ತಾನಾಗಿ ಒಂದು ಅಪರಿಚಿತ ವಿನೂತನ ಸಾಹಿತ್ಯ ಪ್ರಕಾರವಾಗಿ ನಿಂತಿರುವುದು ಸ್ವಾರಸ್ಯವಾಗಿದೆ. ಕಾವ್ಯ ಎಂದರೆ ಹೇಗಿರಬೇಕು, ಹೇಗಿರುತ್ತದೆ ಎಂದು ನಾವು ತಿಳಿದಿದ್ದೇವೆಯೋ ಆ ಸಾಮಾನ್ಯವಾದ ತಿಳುವಳಿಕೆಯನ್ನು ತಲೆಕೆಳಗು ಮಾಡುವಂತಿದೆ ಈ ವಚನ ಪ್ರಕಾರ. ಮೊದಲನೆಯದಾಗಿ ನಮಗೆ ಪರಿಚಿತವಾಗಿರುವ ಹಾಗೆ ಕಾವ್ಯ ಎಂದರೆ ಪದ್ಯರೂಪವಾದದ್ದು- ಅಲ್ಲಲ್ಲಿ ಗದ್ಯರೂಪದ ವಡ್ಡಾರಾಧನೆಯಂಥದು ಅಥವಾ ನಡುನಡುವೆ ಗದ್ಯಭಾಗಗಳನ್ನುಳ್ಳ ಚಂಪೂ ರೂಪವಾದದ್ದು ಇದ್ದರೂ -ಎಂದು ತಿಳಿವಳಿಕೆ. ಆದರೆ ವಚನ ಪದ್ಯರೂಪವಾದ್ದಲ್ಲ. ಗದ್ಯರೂಪದಲ್ಲಿದ್ದರೂ ಹಿಂದಿನ ಗದ್ಯರೂಪವನ್ನು ಉದ್ದೇಶ ಹಾಗೂ ವಿಸ್ತಾರಗಳಲ್ಲಿ ಹೋಲುವುದಿಲ್ಲ; ಅಲ್ಲದೆ ಇದನ್ನು ಕೇವಲ ಗದ್ಯ ಎನ್ನಲೂ ಬರುವಂತಿಲ್ಲ. ವಸ್ತುವಿನ ದೃಷ್ಟಿಯಿಂದ ನೋಡಿದರೆ ಇದರದ್ದು ಪುರಾಣೇತಿಹಾಸಗಳಿಂದ ಎತ್ತಿಕೊಂಡ ಸಿದ್ಧ-ಪ್ರಸಿದ್ಧವಾದದ್ದೋ, ಇಲ್ಲವೆ ಕವಿಕಲ್ಪಿತವಾದ ಕಥೆಯನ್ನುಳ್ಳದ್ದೋ ಅಲ್ಲ. ಕತೆಯಲ್ಲಿ ಬರುವಂತೆ ಘಟನೆಗಳಿಲ್ಲ; ಪಾತ್ರಗಳಿಲ್ಲ; ನಗರವರ್ಣನೆ, ಋತುವರ್ಣನೆ, ಸ್ತ್ರೀವರ್ಣನೆ ಇತ್ಯಾದಿಯಾದ ಯಾವ ವರ್ಣನೆಗಳೂ ಇಲ್ಲ; ಶೃಂಗಾರ ವೀರಾದಿರಸಗಳ ಪೋಷಣೆ ಇಲ್ಲ. ಹೀಗಾಗಿ ತನ್ನ ಹಿಂದಿನ ಮತ್ತು ತನ್ನ ಮುಂದಿನ ಸಾಹಿತ್ಯ ಪರಂಪರೆಯಲ್ಲಿ ಕಂಡು ಬರುವಂಥ ಯಾವ ಕಾವ್ಯ ಲಕ್ಷಣಗಳ ದೃಷ್ಟಿಯಿಂದ ನೋಡಿದರೂ ಇದನ್ನು ಕಾವ್ಯ ಎನ್ನಲು ಬರುವಂತಿಲ್ಲವಲ್ಲ!

ಹೋಗಲಿ; ಇವುಗಳನ್ನು ಬರೆದವರಾದರೂ ತಾವು ಹಿಂದಿನ ಕವಿಗಳ ಹಾಗೆ ಕಾವ್ಯವನ್ನೊ, ಸಾಹಿತ್ಯವನ್ನೊ ನಿರ್ಮಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆಯೆ? ಅಥವಾ ತಮ್ಮನ್ನು ಕವಿ ಎಂದು ಕರೆದುಕೊಂಡಿದ್ದಾರೆಯೆ? ಕಾವ್ಯದ ಉದ್ದೇಶ, ಸ್ವರೂಪ, ಪ್ರಯೋಜನ, ಪೂರ್ವ ಕವಿಸ್ತುತಿ, ಸ್ವಕಾವ್ಯ ಪ್ರಶಂಸೆ ಇತ್ಯಾದಿಗಳೇನಾದರೂ ಇಲ್ಲಿ ಉಂಟೆ? ಅದರ ಮಾತೇ ಇಲ್ಲ. ಬರೆದವರೇ ಇದು ಕಾವ್ಯ ಎಂದು ಹೇಳಿಕೊಳ್ಳದೆ ಹೋದ ಮೇಲೆ ಇದನ್ನು ಕಾವ್ಯ ಎಂದು ನಾವಾದರೂ ಹೇಳಬಹುದೆ?

ಇನ್ನು ಸೌಂದರ್ಯದ ಮಾತೆಲ್ಲಿ ಬಂತು? ಯಾವುದರ ಸೌಂದರ್ಯ ಪ್ರಜ್ಞೆ ಇಲ್ಲಿದೆ? ಕವಿಗಿರಬೇಕಾದ ಸೌಂದರ್ಯಪ್ರಜ್ಞೆಯ ಯಾವ ಅಂಶಗಳಿವೆ ಇದರಲ್ಲಿ? ಇಂದ್ರಿಯಗ್ರಾಹ್ಯವಾದ ರೂಪಲೋಕದ ಯಾವ ಚೆಲುವನ್ನಾದರೂ ಈ ವಚನಗಳಲ್ಲಿ ಕಾಣಬಹುದೆ? ಹೀಗಾಗಿ ಇದು ಕಾವ್ಯವೂ ಅಲ್ಲ; ಇದರಲ್ಲಿ ಸೌಂದರ್ಯವೂ ಇಲ್ಲ. ಇನ್ನು ವಚನಗಳಲ್ಲಿ ಕಾವ್ಯ ಸೌಂದರ್ಯ ಎಂಬ ಮಾತಿಗೆ ಅರ್ಥವೇನು?

ಹಾಗಾದರೆ ಇದು ಶಾಸ್ತ್ರವೇ? ಶಾಸ್ತ್ರದಲ್ಲಿ ಯಾವುದೋ ಒಂದು ಮತ-ಧರ್ಮ ಸಂಬಂಧಿಯಾದ ಅಥವಾ ವಸ್ತುನಿಷ್ಠವಾದ ಒಂದು ವಿಷಯದ ಶಾಸ್ತ್ರೀಯವಾದ ನಿರೂಪಣೆ ಇರಬೇಕು. ಶೈಲಿಯಲ್ಲಿ ಖಚಿತತೆ, ಪಾರಿಭಾಷಿಕತೆ, ನಿರಲಂಕಾರತೆ, ಇರಬೇಕು. ಶುದ್ಧ ಶಾಸ್ತ್ರಕ್ಕೆ ಅಗತ್ಯವಾದ ಈ ಲಕ್ಷಣಗಳಾದರೂ ಸಾರ್ವತ್ರಿಕವಾಗಿ ಈ ವಚನಗಳಲ್ಲಿವೆಯೇ ಎಂದರೆ, ಈ ವಚನಗಳು-ಅದರಲ್ಲಿಯೂ ಬಸವಣ್ಣನವರ ವಚನಗಳು-ಶಾಸ್ತ್ರ ಲಕ್ಷಣಗಳಿಗೂ ಹೊರತಾಗಿವೆ. ಹಾಗಾದರೆ ಇವು ಶಾಸ್ತ್ರವೂ ಅಲ್ಲ, ಕಾವ್ಯವೂ ಅಲ್ಲ! ಇನ್ನೇನು?

ಇಷ್ಟು ಸುಲಭವಾಗಿ ಇವುಗಳನ್ನು ನಿರಾಕರಿಸುವಂತಿಲ್ಲ; ಏಕೆಂದರೆ ಇವು ಕಾವ್ಯವಲ್ಲದಿದ್ದರೆ ಇನ್ನೇನು ತಾನೆ ಕಾವ್ಯವಾದೀತು ಎಂಬಷ್ಟರಮಟ್ಟಿಗೆ ಹೃದಯಸಂವಾದವನ್ನು ಪಡೆಯುವ ಸರಳತೆ, ಸಂಕ್ಷಿಪ್ತತೆ, ಧ್ವನಿಪ್ರಚುರತೆ ತುಂಬಿ ತುಳುಕುತ್ತಿದೆ. ರೀತಿಯಲ್ಲಿ ಹೊಸತನವಿದೆ. ಮಾತು ಆಡಿದ ಹಾಗಿದೆ; ಆದರೆ ಆಡುಮಾತಿನ ಸಾಮಾನ್ಯತೆಗೆ ಮೀರಿದ ಅಸಾಧಾರಣತೆ ಇದೆ. ಕಾವ್ಯದ ಯಾವ ಸಾಂಪ್ರದಾಯಿಕ ಲಕ್ಷಣಗಳಿಗೂ ಸಿಗದ ಇದರಲ್ಲಿ ಕಾವ್ಯದ ಅಂತರಂಗ ಲಕ್ಷಣಗಳು ತಾನೇ ತಾನಾಗಿವೆ.

ಹಿಂದೆ ಹೇಳಿದ ಒಂದೊಂದೇ ಅಂಶಗಳನ್ನು ಪರಿಶೀಲಿಸಿ ನೋಡೋಣ: ನಮಗೆ ಪರಿಚಿತವಾದ ಕಾವ್ಯದ ವಸ್ತು-ರೀತಿ-ದೃಷ್ಟಿಗಳನ್ನು ಇವು ಹೋಲುವುದಿಲ್ಲ ಎಂಬುದೇನೋ ನಿಜ. ಆದರೆ ಇವುಗಳಲ್ಲಿನ ವಸ್ತು-ರೀತಿ-ದೃಷ್ಟಿ ಇವುಗಳು ಇವಕ್ಕೆ ಹಿಂದಿನ ಅಥವಾ ಮುಂದಿನ ಕಾವ್ಯದ ವಸ್ತು-ರೀತಿ-ದೃಷ್ಟಿಗಳಿಗೆ ವಿರುದ್ಧವಾಗೇನೂ ಇಲ್ಲ, ಕೊಂಚ ವಿಭಿನ್ನವಾಗಿವೆ ಅಷ್ಟೆ. ಇವುಗಳಲ್ಲಿನ ವಸ್ತು ಬಹಿರಂಗದ್ದಲ್ಲ; ಅಂತರಂಗದ್ದು. ವಸ್ತುನಿಷ್ಠವಾದದ್ದಲ್ಲ, ವ್ಯಕ್ತಿನಿಷ್ಠವಾದದ್ದು. ಸಿದ್ಧ-ಪ್ರಸಿದ್ಧ ಅಥವಾ ಕಲ್ಪಿತವಾದದ್ದಲ್ಲ; ಲೋಕಕ್ಕೂ ವಚನಕಾರನಾಗಿರುವ ಕೇಂದ್ರ ವ್ಯಕ್ತಿಗೂ ಉಂಟಾದ ಆಕರ್ಷಣೆ, ವಿಕರ್ಷಣೆಗಳ ಪರಿಣಾಮದಿಂದ ನಿಷ್ಪನ್ನವಾದದ್ದು. ಬಸವಣ್ಣನವರ ಯಾವ ಒಂದು ವಚನವನ್ನು ತೆಗೆದುಕೊಂಡರೂ, ಬಸವಣ್ಣನವರು ತಮಗೂ ಕೂಡಲ ಸಂಗಮನಿಗೂ ನಡುವೆ ಹೆಡೆಯೆತ್ತಿ ಹರಡಿಕೊಂಡ ‘ನಾನಾ ವರ್ಣದ ಸಂಸಾರ’ದ ಅನುಭವಗಳನ್ನು  ‘ಉರದುದ್ದ ಶಿರದುದ್ದ’ ವಾದ ಸಂಸಾರ ಸಾಗರದ ತರಂಗತಾಡನದ ತೆರೆಯೊತ್ತಿನ ಗುರುತುಗಳನ್ನು, ವಿಷಯ ವೃಕ್ಷದ ಕೊಂಬೆಯಿಂದ ಕೊಂಬೆಗೆ ನೆಗೆದು ಹಾರುತ್ತಾ ಒಂದೆಡೆ ನಿಲ್ಲಲಾರದ ‘ಮನದ ಮರ್ಕಟ’ದ ಚಾಂಚಲ್ಯದ ವೇದನೆಗಳನ್ನು, ಬದುಕಿನ ಭೋಗೋಪಭೋಗಗಳ ಎಂಜಲಿನ ಕಡೆಗೆ ಹಾರಿ ಓಡುವ ‘ನಾಯಿತನ’ದ ವ್ಯಥೆಗಳನ್ನು, ಅಧಿಕಾರ-ಐಶ್ಚರ್ಯ-ಸಂಸಾರ ಈ ಮೂರರ ಬಲೆಯಲ್ಲಿ ಸಿಲುಕಿ ಪಟ್ಟ ಪಾಡುಗಳನ್ನು, ತಮ್ಮ ‘ವಚನಗಳ ವಸ್ತು’ವನ್ನಾಗಿ ಮಾಡಿಕೊಂಡಿದ್ದಾರೆ. ತನ್ನದಲ್ಲದ ಅಥವಾ ಯಾರೋ ಮಾಡಿರಿಸಿದ, ಅಥವಾ ತಾವೇ ಕಲ್ಪಿಸಿಕೊಂಡ ವಸ್ತು ಮಾಧ್ಯಮದ ಕೃತಕತೆಯನ್ನು ಅವರು ಅವಲಂಬಿಸದೆ, ತಮ್ಮ ವೈಯಕ್ತಿಕವಾದ, ಪ್ರಾಮಾಣಿಕವಾದ ಅನುಭವಗಳನ್ನು ಇಷ್ಟು ನೇರವಾಗಿ ತೋಡಿಕೊಂಡದ್ದೇ ಅವರ ವಚನಗಳ ವಸ್ತು ಸೌಂದರ್ಯದ ವಿಶಿಷ್ಟತೆಗೆ ಕಾರಣವಾಗಿದೆ. ತಮ್ಮ ಅಂತರಂಗದ ವ್ಯಥೆಯ ಕಥೆಯೆ ವಚನಗಳ ವಸ್ತು. ಇವುಗಳಲ್ಲಿ ಏಕಸೂತ್ರತೆ ಇದ್ದರೆ ಅದು ಇವುಗಳ ತುಂಬ ಅಭಿವ್ಯಕ್ತವಾಗಿರುವ ವ್ಯಕ್ತಿತ್ವದ್ದೆ ಹೊರತು ವಿಷಯದ್ದಲ್ಲ. ಒಂದೇ ವ್ಯಕ್ತಿತ್ವ, ಅನೇಕ ಸಂದರ್ಭಗಳಲ್ಲಿ ಬದುಕನ್ನು ತೀವ್ರವಾಗಿ ಅನುಭವಿಸಿದ್ದರ ವರ್ಣನೆ ಇವುಗಳ ತುಂಬ ಹರಡಿಕೊಂಡಿದೆ. ಹೀಗಾಗಿ ಉಳಿದ ಕಾವ್ಯಗಳಲ್ಲಿಯಂತೆ ಅನೇಕ ಪಾತ್ರಗಳ ಕಥೆಯಲ್ಲ ಇದು; ಒಂದೇ ಪಾತ್ರದ ಅನೇಕ ಮುಖದ ಅಭಿವ್ಯಕ್ತಿ. ಒಂದೆಡೆ ಬಸವಣ್ಣನವರ ಅಂತರಂಗ ಕೂಡಲಸಂಗಮನೆಂಬ ಪತಿಗಾಗಿ ಕಾಯುವ ಹೆಣ್ಣಾಗಿ ತನ್ನ ಪಾಡನ್ನು ಹೀಗೆ ತೋಡಿಕೊಂಡಿದೆ-

ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು
ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ       (೨೬೯)

ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆಱೆದು ಬತ್ತಿಯನಿಕ್ಕಿ
ಬರವ ಹಾರುತ್ತಿದ್ದೆನೆಲಗವ್ವಾ
ತಱಗೆಲೆ ಗಿಱುಕೆಂದೊಡೆ ಹೊಱಗನಾಲಿಸುವೆ
ಅಗಲಿದನೆಂದೆನ್ನ ಮನ ಧಿಗಿಲೆಂದಿತ್ತೆಲಗವ್ವಾ    (೩೭೪)
[2]

ಈ ಎರಡು ವಚನ ಭಾಗಗಳಲ್ಲಿ ಕಂಡುಬರುವ ವ್ಯಥೆ ಮತ್ತು ಉತ್ಕಟವಾದ ಹಾರೈಕೆಯಲ್ಲಿ ಎಂತಹ ಶೃಂಗಾರರಸದ ಅಭಿವ್ಯಕ್ತಿಯಿದೆ! ಸಿಂಗರಿಸಿಕೊಂಡು, ಶಯ್ಯಾಗೃಹದಲ್ಲಿ ನಲ್ಲನ ಬರವನ್ನು ಹಾರೈಸುತ್ತಾ ‘ತಱಗೆಲೆ ಗಿಱುಕೆಂದೊಡೆ ಹೊಱಗ’ನ್ನಾಲಿಸುತ್ತಾ ಕುಳಿತ ಈ ಜೀವಸತಿಯ ಕಾತರದ ವಿಭಾವದಲ್ಲಿ ಬಸವಣ್ಣನವರು ತಮ್ಮನ್ನು ತಾವು ಇರಿಸಿಕೊಂಡು ಚಿತ್ರಿಸಿರುವ ಈ ಭಗವದ್ ರತಿಭಾವದ ಪ್ರತಿಮೆ ಅತ್ಯಂತ ಸೊಗಸಾಗಿದೆ. ಇಲ್ಲಿಯೂ ಕಾವ್ಯಗಳಲ್ಲಿಯಂತೆ ಶೃಂಗಾರವಿದೆ; ಆದರೆ ಇದರ ನಿಲುವೇ ಬೇರೆ. ಇನ್ನೊಂದೆಡೆ ‘ವೀರಭಾವ’ದ ಅಭಿವ್ಯಕ್ತಿ ಇದೆ. ಭಗವಂತನಿಗಾಗಿ ಸನ್ನದ್ಧವಾದ ಭಕ್ತ ಚೇತನ ಈ ಲೋಕದ ಕಷ್ಟಕಾರ್ಪಣ್ಯಗಳ, ಲೋಭಮೋಹಗಳ ವಿರುದ್ಧವಾಗಿ ಪ್ರತಿಭಟಿಸಿ ನಿಂತ ಛಲದಲ್ಲಿ ವೀರವಿದೆ-

ಅಂಜಿದರಾಗದು ಅಳುಕಿದರಾಗದು
ವಜ್ರಪಂಜರದೊಳಗಿದ್ದರಾಗದು
ತಪ್ಪದುವೋ ಲಲಾಟ ಲಿಖಿತ    (೬೮೨)

ನಾಳೆ ಬಪ್ರುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗೀಗಲೇ ಬರಲಿ
ಇದಕಾರಂಜುವರು ಇದಕಾರಳುಕುವರು?            (೬೯೬)

……………………………………..
ಜೋಳವಾಳಿಯವನಲ್ಲ, ವೇಳೆವಾಳಿಯವ ನಾನಯ್ಯಾ;
ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ;
ಕೇಳು ಕೂಡಲಸಂಗಮ ದೇವಾ
ಮರಣವೆ ಮಹಾನವಮಿ (೬೯೮)

ಇದು ಇಲ್ಲಿನ ವ್ಯಕ್ತಿತ್ವದ ವೀರಭಾವ; ಇದು ಮೃತ್ಯುಂಜಯ ಮನೋಧರ್ಮ. ಬೇರೆ ಕಾವ್ಯಗಳಲ್ಲಿನ ಕಥಾನಾಯಕ ರಣವೀರ; ಅವನು ಹೋರಾಡುವುದು ಬಹಿರಂಗದ ಹಗೆಗಳ ಮೇಲೆ, ಚತುರಂಗಬಲ ಸಮೇತ. ಅದು ‘ವಿಜಯೋದ್ಯೋಗ ವರ್ಣನಂ’ ಎಂದು ಚಿತ್ರಿತವಾಗಿದೆ. ಆದರೆ ಬಸವಣ್ಣನವರ ವ್ಯಕ್ತಿತ್ವ ಹೋರಾಡುವುದು ಛಲದ ಆಯುಧ ಹಿಡಿದು, ತನ್ನ ಅಂತರಂಗದ ಶತ್ರುಗಳ ಮೇಲೆ; ಬಹಿರಂಗ ಸಮಾಜದ ದೌಷ್ಟ್ಯ ಡಂಭಾಚಾರಗಳೊಡನೆ. ಈ ನಿರಸ್ತ್ರವೀರತೆ ಅಪೂರ್ವವಾಗಿದೆ. ಇನ್ನು ಹಾಸ್ಯರಸ ವ್ಯಕ್ತವಾಗಿರುವುದು ಬಸವಣ್ಣನವರು ತಮ್ಮ ಅಂತರಂಗ- ಬಹಿರಂಗದ ದೋಷಗಳನ್ನು ತಾವೇ ನೋಡಿಕೊಂಡು ನಕ್ಕಾಗ; ತಮ್ಮನ್ನು ತಾವೇ ವಿಶ್ಲೇಷಣೆ ಮಾಡಿಕೊಂಡು ಟೀಕಿಸಿಕೊಂಡಾಗ. ತಮ್ಮ ಭಕ್ತಿಯ ಸತ್ವದ ಬಗ್ಗೆ ಬಂದ ಸಂದೇಹವನ್ನು ಕುರಿತು-

ಹೊಱಿಸಿಕೊಂಡು ಹೋದ ನಾಯಿ; ಮೊಲನೇನ
ಹಿಡಿಯುವುದಯ್ಯಾ?
ಇಱಿಯದ ವೀರ; ಇಲ್ಲದ ಸೊಬಗ ಹೇಳುವುದೇ ನಾಚಿಕೆ!
ಆನು ಭಕ್ತನೆಂತಪ್ಪೆನಯ್ಯಾ ಕೂಡಲ ಸಂಗಮದೇವಾ?     (೩೦೪)

ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ
ಕಾದಬೇಕು, ಕಾದುವರೆ ಮನವಿಲ್ಲ-
ಆಗಳೆ ಹೋಯಿತ್ತು ಬಿರುದು:
ಹಗರಣ ನಗೆಗೆಡೆಯಾಯಿತ್ತು    (೩೦೦)

ಹೀಗೆ ತಮ್ಮನ್ನು ತಾವು ಹಳಿದುಕೊಂಡಾಗ ಒಂದು ರೀತಿಯ ನಗುಬರುತ್ತದೆ. ಸಮಾಜದ, ವ್ಯಕ್ತಿಗಳ ಅಂಕು-ಡೊಂಕುಗಳನ್ನು ಕುರಿತು ವಿಡಂಬಿಸುವಾಗ ಚಿಮ್ಮುವ ಹಾಸ್ಯ ತಾನೇ ತಾನಾಗಿದೆ. ಭಕ್ತರ ನಡವಳಿಕೆಯನ್ನು ಕುರಿತು-

ಬರ ಬರ ಭಕ್ತಿಯರೆಯಾಯಿತ್ತು, ಕಾಣಿರಣ್ಣಾ;
ಮೊದಲ ದಿನ ಹಣೆ ಮುಟ್ಟಿ, ಮಱುದಿನ ಕೈಯ ಮುಟ್ಟಿ
ಮೂಱೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ!        (೨೨೦)

ಎಂದು ಭಕ್ತಿಯ ಆರಂಭಶೂರತ್ವದ ದುರ್ದೆಸೆಯನ್ನು ಹೇಳುವಲ್ಲಿ; ದೇವಸ್ಥಾನಕ್ಕೆ ಹೋದವರನ್ನು ಕುರಿತು-

ಹಾಗದ ಕೆರಹ ಹೊಱಗೆ ಕಳೆದು
ದೇಗುಲಕ್ಕೆ ಹೋಗಿ ದೇವರಿಗೆ ನಮಸ್ಕಾರವ ಮಾಡುವನಂತೆ-
ತನ್ನ ಕೆಱಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲಾ!       (೧೯೯)

ಎಂದು ಚಪ್ಪಲೀಚಿತ್ತರಾದ ಭಕ್ತರ ಯಥಾಸ್ಥಿತಿಯನ್ನು ಹೇಳುವಲ್ಲಿ-

ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದರೆ
ರಂಜನೆಯಲ್ಲದೆ ಅದಱ ಗಂಜಳ ಬಿಡದಣ್ಣಾ       (೯೩)

ಎಂದು ಅಳಿಮನದವರನ್ನು ವರ್ಣಿಸುವಲ್ಲಿ, ಬಸವಣ್ಣನವರ ಹಾಸ್ಯ ಮನೋಧರ್ಮ ಅನೇಕ ಸ್ತರಗಳಲ್ಲಿ ಮಿನುಗುತ್ತದೆ. ಹೀಗೆ ಶೃಂಗಾರ, ವೀರ, ಹಾಸ್ಯ ಇವುಗಳನ್ನು ಬಿಟ್ಟರೆ ವಿಶೇಷವಾಗಿ ಕಾಣಿಸುವುದು ‘ಕರುಣ’ -ಬಸವಣ್ಣನವರ ವಚನಗಳ ಸ್ಥಾಯಿಯೆ ಕರುಣ-‘ಕರುಣ ಏವ ಏಕೋ ರಸಃ’ ಎಂಬಂತೆ ವ್ಯಾಪಕವಾಗಿದೆ. ಕೂಡಲ ಸಂಗಮನಿಗಾಗಿ ಅವರು ತಮ್ಮ ಅಂತರಂಗದ ಪದರ ಪದರಗಳನ್ನು ತೆರೆದು ಪರಿಪರಿಯಾಗಿ ಮೊರೆಯಿಡುವ ನಿಟ್ಟುಸಿರು, ಕಂಬನಿ, ಆರ್ತಸ್ವರಗಳ ಒಂದು ಕರುಣ ವಾದ್ಯ ಸ್ವರಮೇಳದಂತಿದೆ ಅವರ ವಚನಗಳ ಒಟ್ಟು ಧ್ವನಿ. ಬಸವಣ್ಣನವರು ಏನನ್ನೂ ಮರೆಮಾಡಿದವರಲ್ಲ; ಏಕೆಂದರೆ ಅವರದು ಮುಚ್ಚಿಟ್ಟ ಬದುಕಲ್ಲ; ಬಿಚ್ಚಿಟ್ಟ ಬದುಕು. ಸ್ವಾತ್ಮ ಸಂಸ್ಕಾರ ಶ್ರದ್ಧೆಯಿಂದ ಪ್ರಚೋದಿತವಾದ ಈ ಒಂದು ಪ್ರಾಮಾಣಿಕತೆಯೇ ಅವರ ಅಭಿವ್ಯಕ್ತಿಯಲ್ಲಿನ ಕಾವ್ಯ ಸೌಂದರ್ಯದ ತೇಜಸ್ಸಾಗಿದೆ. ಹೀಗಾಗಿ ಅನೇಕ ನಿಲುವುಗಳಲ್ಲಿ ತಮ್ಮನ್ನು ತಾವು ಇರಿಸಿಕೊಂಡು, ತಮ್ಮನ್ನು ತಾವು ಅಭಿವ್ಯಕ್ತ ಪಡಿಸಿಕೊಂಡಿರುವ ಈ ಏಕಪಾತ್ರಾಭಿನಯ ರೂಪದ ಕರುಣ ಕಥೆ ಅತ್ಯಂತ ಹೃದಯ ಸ್ಪರ್ಶಿಯಾಗಿದೆ.

ಇಂದ್ರಿಯ ಗ್ರಾಹ್ಯವಾದ ರೂಪಲೋಕದ ಸೌಂದರ್ಯ, ಸುತ್ತಣ ನಿಸರ್ಗ ವೈಭವದಲ್ಲಿ ಮತ್ತು ಮಾನವ ರೂಪದಲ್ಲಿ ವ್ಯಕ್ತವಾಗಿದೆ. ಈ ಎರಡನ್ನೂ ಬಿಟ್ಟು ಸೌಂದರ್ಯವನ್ನು ಕಾಣಿಸಲು ಸಾಧ್ಯ ಎಂಬುದನ್ನು ಬಸವಣ್ಣನವರ ವಚನಗಳು ತೋರಿಸಿರುವ ರೀತಿ ಅಪೂರ್ವವಾಗಿದೆ. ಅವರ ವಚನಗಳಲ್ಲಿ ನಿಸರ್ಗ ವರ್ಣನೆ, ಇಲ್ಲವೇ ಇಲ್ಲ. ಇರುವುದೇನಿದ್ದರೂ ಅಂತರಂಗ  ನಿಸರ್ಗದ ವರ್ಣನೆ, ಮನುಷ್ಯ ಪ್ರಕೃತಿಯ ಚಿತ್ರಣ. ಅವರಲ್ಲಿ ಬಹಿರಂಗ ನಿಸರ್ಗದ ಸೌಂದರ್ಯ ಪ್ರಿಯತೆಯ ಸಂಕೇತಗಳು ವಿಶೇಷವಾಗಿಲ್ಲದಿರುವುದು ಉಳಿದ ಕವಿಗಳ ಸೌಂದರ್ಯ ಪ್ರಜ್ಞೆಯಿಂದ ಇವರ ಅಭಿವ್ಯಕ್ತಿಯನ್ನು ಬೇರ್ಪಡಿಸುತ್ತದೆ. ಕ್ವಚಿತ್ತಾಗಿ ನಿಸರ್ಗದಿಂದ ಸಂಕೇತಗಳನ್ನು ಇವರು ಬಳಸಿಕೊಂಡರೂ ಅವೂ ಸೌಂದರ್ಯ ದೃಷ್ಟಿಯಿಂದ ಹೊರತಾಗಿವೆ. ‘ಉದಯ’ ‘ಅಸ್ತಮಾನ’ಗಳ ಹೆಸರು ಬರುತ್ತದೆ ಅಷ್ಟೆ; ಆದರೆ ಕೇವಲ ಕಾಲಸೂಚಕವಾಗಿ ಮಾತ್ರ-

ಹೊತ್ತಾಱೆ ಎದ್ದು ಅಗ್ಘವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ     (೧೨೩)

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದರೆ
ತಪ್ಪುವುವು ಅಪಮೃತ್ಯು ಕಾಲಕರ್ಮಂಗಳಯ್ಯಾ  (೧೭೭)

ಹೀಗೆನ್ನುವಲ್ಲಿ ‘ಹೊತ್ತಾರೆ’ ‘ಸುಪ್ರಭಾತ’ಗಳು ಅಸ್ತಮಾನಗಳು ಬರುವುದು ಪೂಜಾ ಮುಹೂರ್ತಗಳ ನಿರ್ದೇಶನಕ್ಕೆ. ಬೆಳಗು-ಸಂಜೆಯ ನಡುವೆ ವ್ಯರ್ಥವಾಗಿ ಬದುಕು ಹೊರಳಿ  ಹೋಗುತ್ತಿದೆ ಎನ್ನುವುದಕ್ಕೆ ಸಂಕೇತಗಳಷ್ಟೆ. ಇನ್ನು ಕೆಲವೆಡೆ-

ಸೂರ್ಯನುದಯ ತಾವರೆಗೆ ಜೀವಾಳ
ಚಂದ್ರಮನುದಯ ನೆಯ್ದಿಲೆಗೆ ಜೀವಾಳ  (೩೬೬)

ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ       (೩೬೮)

ಎನ್ನುವಲ್ಲಿ ಈ ನಿಸರ್ಗದ ವ್ಯಾಪಾರಗಳ ರಮ್ಯತೆಯ ಕಡೆಗೆ ಅವರಿಗೆ ಕಣ್ಣಿಲ್ಲ. ಅದರ ಬದಲು ಅವು ತಮ್ಮ ಮನಃಸ್ಥಿತಿಯನ್ನೂ ಸೂಚಿಸುವ, ದೇವರ ವಿಚಾರದಲ್ಲಿರುವ ತಮ್ಮ ಸಂಬಂಧದ ಕಾತರತೆಯನ್ನು ಸ್ಫುಟಗೊಳಿಸುವ ಸಾಂಪ್ರದಾಯಿಕ ದೃಷ್ಟಾಂತ ವಿಧಾನವನ್ನು ಮಾತ್ರ ವ್ಯಕ್ತಗೊಳಿಸಲು ನಿಯುಕ್ತವಾಗಿವೆ. ಬಸವಣ್ಣನವರ ವಚನಗಳಲ್ಲಿ ಕಂಡುಬರುವ ನಿಸರ್ಗ ಸೌಂದರ್ಯದ ಬಗೆಗಿರುವ ಈ ನಿರ್ಲಕ್ಷ್ಯ ಗಮನಿಸತಕ್ಕದ್ದಾಗಿದೆ. ಭಕ್ತರಾದ ಬಸವಣ್ಣನವರಿಗೆ  ಸುತ್ತಣ ಪ್ರಕೃತಿಯ ಬಗೆಗೆ, ಭಗವಂತನ ಸೌಂದರ‍್ಯಾಭಿವ್ಯಕ್ತಿಯಾದ ನಿಸರ್ಗ ರಮಣೀಯತೆಯ ಕಡೆಗೆ ಕಣ್ಣು ಹೊರಳದೆ, ಕೇವಲ ಪೂಜಾಸೌಂದರ್ಯದ ಕಡೆಗೆ ಮಾತ್ರ ಕಣ್ಣು ಹೊರಳಿದ್ದು  ವಿಚಿತ್ರವಾಗಿದೆ. ಆದರೆ ಹರಿಹರನಂಥ ಭಕ್ತ ಕವಿ, ತಾನು ಅಪ್ಪಟ ಭಕ್ತನಾಗಿದ್ದರೂ, ನಿಸರ್ಗದ ಪ್ರೀತಿಯನ್ನು ಶ್ರೀಮಂತವಾಗಿ ವ್ಯಕ್ತಪಡಿಸಿದ್ದಾನೆ. ಬಸವಣ್ಣನವರು ಭಕ್ತರಾಗಿದ್ದೂ, ಅದೇಕೋ ಪ್ರಕೃತಿಯ ಚೆಲುವಿನ ಕಡೆ ಗಮನ ಕೊಡಲಾರದೆ ಹೋದರು. ಜೇಡರ ದಾಸಿಮಯ್ಯ, ಅಕ್ಕಮಹಾದೇವಿ ಇಂಥವರ ವಚನಗಳಲ್ಲಿ ಕಂಡುಬರುವ ವಿಸ್ಮಯ ಮೂಲವಾದ ನಿಸರ್ಗಪ್ರಿಯತೆ ಬಸವಣ್ಣನವರಲ್ಲಿ ಕಾಣದಾಗಿದೆ. ಅದರ ಬದಲು ಬೇರೆ ಯಾರಲ್ಲೂ ಈ ಒಂದು ಮಟ್ಟದಲ್ಲಿ ಕಾಣದ ಸಾಮಾಜಿಕ ಪ್ರಜ್ಞೆ ಮತ್ತು ಪ್ರಾಣಿ ಪ್ರಪಂಚಾನುಭವ ಬಸವಣ್ಣನವರ ವಚನಗಳಲ್ಲಿ  ಆಶ್ಚರ್ಯಕರವಾಗಿ ವ್ಯಕ್ತವಾಗಿದೆ. ಸಮಾಜದ ಬಹುಮುಖ ಜೀವನದ ಪ್ರಜ್ಞೆ ಅವರಿಗಿರಲು  ಕಾರಣ, ಅವರು ತಾವು ಪ್ರವರ್ತನಗೊಳಿಸಿದ ಹೊಸ ಧರ್ಮವನ್ನು ನೆಲೆಗೊಳಿಸಬೇಕಾದರೆ  ಮೊದಲು ತಮ್ಮ ಸಮಕಾಲೀನ ಸಮಾಜದ ಅಂತರಂಗ-ಬಹಿರಂಗಗಳನ್ನು ಕೂಲಂಕಷವಾಗಿ  ಪರಿಶೀಲಿಸುವ ಅಗತ್ಯವಿದ್ದುದೇ ಆಗಿದೆ. ಹೀಗಾಗಿ ಅಂದಿನ ಸಮಾಜದ ಸಹಜವಾದ ಚಿತ್ರಣ ಅವರ ವಚನಗಳಲ್ಲಿ ಬಿಂಬಿತವಾಗುತ್ತಾ, ಸಾಮಾಜಿಕ ಅಧ್ಯಯನ ನಡೆಸತಕ್ಕವರಿಗೆ ಘನವಾದ  ಆಕರವಾಗಿವೆ; ಅಲ್ಲದೆ ಅವರ ಸಾಮಾಜಿಕ ಪ್ರಜ್ಞೆಗೆ ಅವರ ವಚನಗಳು ಕಲಾತ್ಮಕವಾದ ಸಂಕೇತಗಳಾಗಿವೆ. ಮತ್ತೊಂದು ವಿಶೇಷವೆಂದರೆ ಅವರು ಬಳಸುವ ಪ್ರಾಣಿರೂಪಕಗಳು.[3] ಅವರು ತಮ್ಮ ಅಂತರಂಗದ ಅನೇಕ ಪ್ರವೃತ್ತಿಗಳನ್ನು ಎಷ್ಟೊಂದು ಪ್ರಾಣಿ ರೂಪಕಗಳಲ್ಲಿ ಹೇಳಿಕೊಂಡಿದ್ದಾರೆಂಬುದನ್ನು ನೋಡಿದರೆ ‘ನಿಸರ್ಗ’ದ ಒಂದು ಭಾಗವಾದ ಪ್ರಾಣಿಪ್ರಪಂಚದ ವ್ಯಾಪಾರಗಳು ಅವರ ಪ್ರತಿಮಾ ನಿರ್ಮಿತಿಯಲ್ಲಿ ಒದಗಿ ಬಂದಹಾಗೆ, ನಿಸರ್ಗದ ಇನ್ನುಳಿದ ಅಂಶಗಳು ಒದಗಿದ್ದು ತೀರ ವಿರಳವೆಂದೇ ಹೇಳಬೇಕು.

ಯಾವ ಸಾಹಿತ್ಯ ನಿರ್ಮಿತಿ ತಾನು ಎಷ್ಟೇ ಸ್ವತಂತ್ರವೆಂಬಂತೆ ತೋರಿದರೂ, ಪರಂಪರೆಯ ಕೆಲವು ಅಂಶಗಳನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡಿರುತ್ತದೆ. ಬಸವಣ್ಣನವರ ವಚನಗಳೂ  ಅಂತಹ ಕೆಲವು ಅಂಶಗಳನ್ನು ಒಳಗೊಂಡಿದೆ. ಉಳಿದ ಕವಿಗಳಲ್ಲಿ ಕಂಡುಬರುವ ಅಷ್ಟಾದಶ ವರ್ಣನೆಯ ಅಂಶಗಳನ್ನು, ಇವರು ಅಂಥ ವಸ್ತುಗಳನ್ನೆ ಕೈಬಿಟ್ಟಿದ್ದರಿಂದ ಕೊಡವಿಕೊಂಡು ನಿಂತರು. ಆದರೆ ಕವಿಸಮಯ, ಪುರಾಣ ಪ್ರಜ್ಞೆ ಇವುಗಳನ್ನು ಉಳಿಸಿಕೊಂಡರು. ‘ಚಕೋರ-ಚಂದ್ರ’ ‘ಸೂರ‍್ಯ-ತಾವರೆ’ ‘ಅಂಬುಧಿ-ಚಂದ್ರೋದಯ’ ‘ಚಂದ್ರ-ರಾಹು’ ಇತ್ಯಾದಿ ಕವಿಸಮಯ ಸಿದ್ಧವಾದ ಸಂಗತಿಗಳು ತಮ್ಮ ಅಂದಂದಿನ ಮನಃಸ್ಥಿತಿಯ ಪ್ರತಿಮಾ ನಿರ್ಮಿತಿಯಲ್ಲಿ ಒದಗಿ ಬಂದಿವೆ. ಇದರ ಜತೆಗೆ ವೈದಿಕ ಪುರಾಣಕಥೆಗಳಾದ ರಾಮಾಯಣ-ಮಹಾಭಾರತಗಳನ್ನು ಕುರಿತ ವಿಲಕ್ಷಣ ವ್ಯಾಖ್ಯಾನಗಳು, ಇವರಿಗಿಂತ ಹಿಂದಿನ ಜೈನಕವಿಗಳು ವೈದಿಕ ಪುರಾಣ ಕಥಾನಕಗಳ ಬಗೆಗೆ ತೋರಿದ ಪ್ರತಿಕ್ರಿಯೆಯನ್ನು ಹೋಲುತ್ತವೆ.[4] ಎರಡನೆಯದಾಗಿ ತಮಗಿಂತ ಹಿಂದಿನ ಶಿವಪುರಾಣದ ಪರಿಚಯವೂ ಅವರಿಗೆ ತಕ್ಕಮಟ್ಟಿಗೆ ಇದ್ದಂತೆ ತೋರುತ್ತದೆ. ‘ಸಿರಿಯಾಳ’ ‘ಚಂಗಳೆ’ ‘ಸಿಂಧುಬಲ್ಲಾಳ’ ‘ಚೀಲಾಳ’ ‘ನಂಬಿಯಣ್ಣ’- ಇತ್ಯಾದಿ ವ್ಯಕ್ತಿಗಳ ಉಲ್ಲೇಖವೂ, ಆಯಾ ಶಿವಶರಣರ ಬದುಕಿನ ಸಂದರ್ಭದ ನೆನಕೆಯೂ ಇದಕ್ಕೆ ಸಾಕ್ಷಿಯಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಬಸವಣ್ಣನವರಿಗೆ ವೇದೋಪನಿಷತ್ತುಗಳ, ಆಗಮ ಪುರಾಣಗಳ ಪರಿಚಯವೂ ಸಾಕಷ್ಟಿದ್ದಂತೆ ತೋರುತ್ತದೆ. ಅಲ್ಲಲ್ಲಿ ವೇದ ಪುರಾಣಾಗಮಗಳನ್ನು ಉದ್ಧರಿಸುವ ವಾಕ್ಯವೇಷ್ಟನಗಳು ಅವರಿಗಿದ್ದ ಈ ಸಂಸ್ಕೃತ ಸಾಹಿತ್ಯ ಪರಿಚಯಕ್ಕೆ ಸಾಕ್ಷಿಯಾಗಿವೆ. ಅಲ್ಲಲ್ಲಿ ವೇದೋಪನಿಷತ್ತುಗಳಲ್ಲಿನ  ಮಾತುಗಳನ್ನು ತಮ್ಮದೇ ಆದ ತಿಳಿಗನ್ನಡದಲ್ಲಿ ಅನುವಾದಿಸಿದಂತೆ ಹೇಳಿರುವ ‘ದೇವನೊಬ್ಬ ನಾಮ ಹಲವು’ ಎಂಬುದು, ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಎಂಬುದನ್ನೂ ‘ಹಿರಿದಕ್ಕೆ ಹಿರಿದು ಕಿಱಿದಕ್ಕೆ ಕಿಱಿದು ಎಂಬುದು.’ ‘ಅಣೋರಣೀಯಾನ್ ಮಹತೋಮಹೀಯಾನ್’ ಎಂಬುದನ್ನೂ,

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ;
ಸಕಲ ವಿಸ್ತಾರದ ರೂಹು ನೀನೇ ದೇವಾ;
ವಿಶ್ವತಸ್ ಚಕ್ಷು ನೀನೇ ದೇವಾ; ವಿಶ್ವತೋಮುಖ ನೀನೇ ದೇವಾ
ವಿಶ್ವತೋ ಬಾಹು ನೀನೇ ದೇವಾ;
ವಿಶ್ವತಃ ಪಾದ ನೀನೇ ದೇವಾ; ಕೂಡಲಸಂಗಮದೇವಾ  (೫೩೨)

ಎನ್ನುವ ವಚನವು ಪುರುಷಸೂಕ್ತದ ಯಥಾವತ್ತಾದ ವರ್ಣನೆಯೇ ಆಗಿರುವುದನ್ನು ನೋಡಿದರೆ, ಬಸವಣ್ಣನವರ ವಚನ ನಿರ್ಮಿತಿಗೆ ಎಂಥ ಪರಂಪರೆಯ ಹಿನ್ನೆಲೆಯಿದೆ ಎಂಬುದು ತಿಳಿಯುತ್ತದೆ. ಬಸವಣ್ಣನವರಿಗೆ ವೇದೋಪನಿಷತ್ತುಗಳ ಬಗ್ಗೆ ಗೌರವವಿದ್ದು, ಇಂಥ ಸಂಸ್ಕೃತದ ಪಾಂಡಿತ್ಯವಿದ್ದೂ, ಅದನ್ನು ತನ್ನ ಸುತ್ತಣ ಜನಕ್ಕೆ ತಿಳಿಯಾದ ಕನ್ನಡದಲ್ಲಿ ಮೂಲಾರ್ಥಕ್ಕೆ ಬಾಧೆ ಬಾರದ ಹಾಗೆ ಸಮರ್ಪಕವಾಗಿ ಅಭಿವ್ಯಕ್ತ ಪಡಿಸುವ ಸಾಮರ್ಥ್ಯವಿರುವುದು  ವಿಶೇಷದ ಸಂಗತಿಯಾಗಿದೆ.

ಬಸವಣ್ಣನವರ ವಚನಗಳಿಗೆ ಇಂಥ ಶಾಸ್ತ್ರ – ಪುರಾಣ – ಆಗಮ ಪರಂಪರೆಯ ಹಿನ್ನೆಲೆಯಿದ್ದರೂ, ಅವರು ತಮಗಿಂತ ಹಿಂದೆ ಹರಹಿರುವ ಕನ್ನಡ ಕಾವ್ಯ ಪರಂಪರೆಯ ಅರಿವೇ ಇಲ್ಲವೆಂಬಂತೆ ವರ್ತಿಸಿರುವುದು ಆಶ್ಚರ್ಯದ ವಿಚಾರವಾಗಿದೆ. ಏಕೆಂದರೆ ಸಾಹಿತ್ಯ ನಿರ್ಮಿತಿಯಲ್ಲಿ ತೊಡುಗುವ ಕವಿಗಳೆಲ್ಲರೂ, ತಮ್ಮ ಪ್ರಸ್ತಾವನೆಯಲ್ಲಿ ಪೂರ್ವ ಕವಿಗಳ ಸ್ತುತಿ ಮತ್ತು ಕೃತಿ ಪ್ರಶಂಸೆಯನ್ನೋ, ಸ್ವಕಾವ್ಯದ ಅಗ್ಗಳಿಕೆಯನ್ನೋ ಹೇಳಿಕೊಳ್ಳುವ ಪದ್ಧತಿಯಿಂದ, ತಮಗಿಂತ ಹಿಂದಿರುವ ಕಾವ್ಯ ಪರಂಪರೆಗೆ ತಾವು ಋಣಿಯಾಗಿರುವ ಮತ್ತು ತಮ್ಮ ಕೃತಿ ರಚನೆಯಿಂದ ಅದನ್ನು ಮುಂದುವರಿಸುತ್ತಿರುವ ಸಂಗತಿಯನ್ನು ಸೂಚಿಸಿದ್ದಾರೆ. ಆದರೆ ಬಸವಣ್ಣನವರು ಹೀಗೆ ಪೂರ್ವಕವಿ ಪರಂಪರೆಯೊಂದಿಗೆ ಯಾವ ಸಂಬಂಧವನ್ನೂ ಹೇಳಿಕೊಳ್ಳದೆ, ಯಾವ ಪ್ರತಿಕ್ರಿಯೆಯನ್ನೂ ಸೂಚಿಸದೆ ಇರುವುದನ್ನು ನೋಡಿದರೆ, ಅವರಿಗೆ ತಾವು ವಚನ ರಚನೆಯನ್ನು ಕೈಗೊಳ್ಳುವುದರ ಮೂಲಕ, ಯಾವುದೋ ಒಂದು ಕಾವ್ಯ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆ ಎಂದಾಗಲೀ ಅಥವಾ ಹಿಂದಿನ ಪರಂಪರೆಗೆ ಪ್ರತಿಕ್ರಿಯಾರೂಪವಾದ ಬೇರೊಂದು ಕಾವ್ಯ ಪ್ರಕಾರವನ್ನು ನಿರ್ಮಿಸುತ್ತಿದ್ದೇವೆ ಎಂದಾಗಲೀ ಭಾವಿಸಿಯೇ ಇರಲಿಲ್ಲವೆಂಬುದು ಸ್ಪಷ್ಟವಾಗಿದೆ. ಈ ದೃಷ್ಟಿಯಿಂದ ವಚನ ನಿರ್ಮಿತಿ ಕೇವಲ ಕಾವ್ಯೇತರ ಮನೋಧರ್ಮದಿಂದ ಮಾತ್ರ ರಚಿತವಾದಂತೆ ತೋರುವುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಹೊಸ ಸಂಗತಿಯಾಗಿದೆ. ಈ ಕಾವ್ಯೇತರ ಮನೋಧರ್ಮವನ್ನು ಧರ್ಮಶ್ರದ್ಧೆ ಎಂಬ ಹೆಸರಿನಿಂದ ಕರೆಯಬಹುದು. ಹಾಗೆ ನೋಡಿದರೆ ಬಸವಣ್ಣನವರಿಗಿಂತ ಹಿಂದಿನ ಹಾಗೂ ಮುಂದಿನ ಕವಿಗಳೂ  ಧರ್ಮಶ್ರದ್ಧೆಯಿಂದಲೇ ಕಾವ್ಯವನ್ನು ರಚಿಸಲಿಲ್ಲವೇ ಎನ್ನಬಹುದು. ಆದರೆ ಅವರಿಗೆ ತಾವು ಪ್ರಧಾನತಃ ಕವಿಗಳೆಂಬ ಅರಿವಿದ್ದು, ಅವರ ಸಾಹಿತ್ಯ ನಿರ್ಮಿತಿ ಕಾವ್ಯ ಪರಂಪರೆಯೊಂದನ್ನು ಮುಂದುವರಿಸುವ ಉದ್ದೇಶದ್ದಾಗಿತ್ತೆ ಹೊರತು ವಚನಕಾರರ ಹಾಗೆ ‘ಕಾವ್ಯೇತರ ಧಾರ್ಮಿಕ ಶ್ರದ್ಧೆ’ ಮಾತ್ರವಾಗಿರಲಿಲ್ಲ. ಆದುದರಿಂದಲೇ ಈ ವಚನ ಪ್ರಕಾರ ಹಿಂದಿನಿಂದ ಕಾವ್ಯವೆಂದು ಒಪ್ಪಿಕೊಂಡು ಬಂದ ಯಾವ ಲಕ್ಷಣಗಳ ಕಡೆಗೂ ಗಮನಕೊಡದೆ ತನಗೆ ತೋರಿದಂತೆ ಅಭಿವ್ಯಕ್ತಿಯನ್ನು ರೂಪಿಸಿಕೊಂಡಿತು. ಬಸವಣ್ಣನವರು ತಮಗರಿವಿಲ್ಲದೆಯೇ ಮಾಡಿಕೊಂಡ ಅಭಿವ್ಯಕ್ತಿಯನ್ನು ಕುರಿತು, ಅದನ್ನು ಸಮರ್ಥಿಸಿಕೊಳ್ಳುವ, ತನಗೆ ತಾನೇ ಅರ್ಥಮಾಡಿಕೊಳ್ಳುವ ಅಥವಾ ಮಾಡಿಕೊಡುವ ಪ್ರಯತ್ನದಲ್ಲಿ,

ತಾಳ ಮಾನ ಸರಿಸವನಱಿಯೆ, ಓಜೆಬಜಾವಣೆಯ ಲೆಕ್ಕವನಱಿಯೆ,
ಅಮೃತಗಣ ದೇವಗಣವನಱಿಯೆ
ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ      (೪೯೩)

ಎಂದು ವಿವರಿಸಿದ್ದಾರೆ. ತಮ್ಮ ಅಭಿವ್ಯಕ್ತಿಯನ್ನು ಕಂಡು ತಮಗೆ ಅನ್ನಿಸಿದ ಅಥವಾ ಯಾರೋ ಕೇಳಿದ ಪ್ರಶ್ನೆಗೆ ಉತ್ತರ ಕೊಡುವ ಧಾಟಿಯಲ್ಲಿ ಮಾಡಿಕೊಂಡ ‘ಕಾವ್ಯ ಸಮರ್ಥನೆ’ಯಂತಿದೆ ಮೇಲಿನ ವಚನ. ಈ ವಚನರಚನೆ ಎನ್ನುವುದು ವಿದ್ವತ್ತಿನ, ಸತತಾಭ್ಯಾಸ ಪ್ರಯತ್ನದ, ಕಾವ್ಯ ಪರಂಪರೆಯ ಪ್ರಜ್ಞೆಯನ್ನುಳ್ಳ ಮನಸ್ಸಿನಿಂದ ಬಂದುದಲ್ಲ; ಯಾವ ಪೂರ್ವಸಿದ್ಧತೆಯೂ ಇಲ್ಲದೆ, ಬಸವಣ್ಣನವರ ವ್ಯಕ್ತಿತ್ವ ತಾನು ಒಲಿದಂತೆ ಹಾಡುವೆ ಎಂಬ ವ್ಯಕ್ತಿನಿಷ್ಠವಾದ ಪ್ರಥಮ ಘೋಷಣೆಯೊಂದಿಗೆ ಬಂದ ಈ ಸಾಹಿತ್ಯ ಪ್ರಕಾರ, ಮುಂದೆ ಬಂದ ಸ್ವತಂತ್ರಯುಗವೊಂದರ ತುತ್ತೂರಿಯಂತೆ ಹೊಮ್ಮಿದ್ದು ಹರ್ಷದಾಯಕವಾಗಿದೆ.[5]

ಹೀಗಾಗಿ ವಚನಗಳು ಧರ್ಮಶ್ರದ್ಧೆಯಲ್ಲಿ ಬೇರೂರಿದ ವ್ಯಕ್ತಿಯೊಬ್ಬನ ಸ್ವಾತ್ಮನಿಷ್ಠಾನುಭವದ ಅಭಿವ್ಯಕ್ತಿಯಾಗಿ ಯಾವಾಗ ಹೊಮ್ಮಿದುವೋ, ತನ್ನನ್ನು ಮತ್ತು ತನ್ನ ಸುತ್ತಣ ಸಮಾಜವನ್ನು ಸುಧಾರಿಸುವ ಉದ್ದೇಶವುಳ್ಳದ್ದಾದುವೋ, ಆಗ ರಚನೆಯಲ್ಲಿ ವ್ಯಕ್ತಿ-ಸಮಾಜ-ಧರ್ಮ ಈ ಮೂರು ಅಂಶಗಳನ್ನು ಅವು ಅನಿವಾರ‍್ಯವಾಗಿ ಒಳಗೊಳ್ಳುವಂತಾಯಿತು. ಒಂದೊಂದು ವಚನದಲ್ಲಿಯೂ, ಒಂದು ಅಥವಾ ಎರಡು ಅಥವಾ ಮೂರು ಸ್ತರಗಳನ್ನು ಗುರುತಿಸಬಹುದು. ಕೆಲವು ವಚನಗಳಲ್ಲಿ ಬಸವಣ್ಣನವರು ತಮ್ಮ ವ್ಯಕ್ತಿತ್ವದ ಒಳತೋಟಿಯನ್ನಷ್ಟೇ ಹೇಳಿಕೊಂಡಿದ್ದರೆ, ಇನ್ನು ಕೆಲವು, ವಚನಗಳಲ್ಲಿ ತಮ್ಮ ಸುತ್ತಣ ಸಮಾಜದ ಅಂಕು-ಡೊಂಕುಗಳನ್ನು ವಿಡಂಬಿಸಿದ್ದಾರೆ. ಇನ್ನು ಕೆಲವರಲ್ಲಿ ಧರ್ಮದ, ಅಥವಾ ತಾವು ಸುಭದ್ರವಾಗಿ ನೆಲೆಗೊಳಿಸಬೇಕಾಗಿರುವ ಮತಧರ್ಮದ  ಮುಖ್ಯ ಲಕ್ಷಣಗಳನ್ನು ನಿರ್ದೇಶಿಸುತ್ತಾರೆ. ಇನ್ನು ಕೆಲವದರಲ್ಲಿ ಸಾರ್ವತ್ರಿಕವಾದ ಸತ್ಯಾನುಭವವೊಂದು ಸೊಗಸಾದ ಪ್ರತಿಮಾ ರೂಪವನ್ನು ತಾಳುತ್ತದೆ. ನಿದರ್ಶನಕ್ಕೆ ಈ ವಚನವನ್ನು ನೋಡಬಹುದು.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲುಹುಟ್ಟಿ, ಮನೆಯೊಳಗೆ ರಜತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲಾ-
ಕೂಡಲಸಂಗಮದೇವಾ!        (೯೭)

ಈ ವಚನದಲ್ಲಿ ನಾಲ್ಕನೆಯ ಸಾಲು ಇಲ್ಲದಿದ್ದಲ್ಲಿ ಇದು ಇನ್ನೂ ಧ್ವನಿಪೂರ್ಣ ಪ್ರತಿಮೆಯಾಗುತ್ತಿತ್ತು. ‘ಮನೆಯೊಳಗೆ ಮನೆಯೊಡೆಯನಿಲ್ಲ’ದ ಮನೆಯ ಚಿತ್ರ, ಬದುಕಿನ ರಿಕ್ತಾವಸ್ಥೆಯ ಒಂದು ಪ್ರತಿಮೆಯಾಗಿದೆ. ಮೂರನೆಯ ಪಂಕ್ತಿಯ ತನಕ ಬಂದು ನಿಲ್ಲುವ ಪ್ರಶ್ನಾರ್ಥಕ ಶೈಲಿಯ ಸಂಶಯ ಭಾವ, ‘ಮನೆಯೊಳಗೆ ಮನೆಯೊಡೆಯನಿಲ್ಲ’ ಎಂಬ ಇತ್ಯರ್ಥಕ ತೀರ್ಮಾನಕ್ಕೆ ಬರುವ ವೇಳೆಗೆ, ‘ತನುವಿನೊಳಗೆ ಹುಸಿತುಂಬಿ ಮನದೊಳಗೆ ವಿಷಯ ತುಂಬಿ’ ಎನ್ನುವ ವಾಚ್ಯವಿವರಣೆಗೆ ಬಂದದ್ದು, ತಟಕ್ಕನೆ ಸಾಮಾಜಿಕ ನೈತಿಕ ಪ್ರಜ್ಞೆಯಿಂದ ಪ್ರೇರಿತವಾದುದೆನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಕೇವಲ ‘ಮನೆ’ಯ ಪ್ರತಿಮೆಯಷ್ಟನ್ನೇ ಇರಿಸಿಕೊಂಡು, ‘ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜತುಂಬಿ’ ಎಂಬ ವರ್ಣನೆಯಿಂದಲೇ ವ್ಯಂಜಕವಾಗಬಹುದಾಗಿದ್ದ ಭಾವವನ್ನು, ತಟಕ್ಕನೆ ‘ತನುವಿನೊಳಗೆ ಹುಸಿತುಂಬಿ, ಮನದೊಳಗೆ ವಿಷಯ ತುಂಬಿ’ ಎನ್ನುವ ವಾಚ್ಯ ವಿವರಣೆಯಲ್ಲಿ ಇಳಿಸಿ, ಅನಂತರ ‘ಮನೆಯೊಳಗೆ ಮನೆಯೊಡೆಯನಿಲ್ಲ’ ಎಂಬ ಮುಖ್ಯ ತೀರ್ಮಾನಕ್ಕೆ ಒಯ್ದು ಮುಟ್ಟಿಸಿದ ಈ ಪ್ರತಿಮಾಶಿಲ್ಪ ಕವಿ-ಧಾರ್ಮಿಕ ಸುಧಾರಕ ಇವರಿಬ್ಬರ ದ್ವಂದ್ವವನ್ನು ಪ್ರತಿನಿಧಿಸುತ್ತದೆ. ಇಂಥದೇ ಇನ್ನೊಂದು ವಚನ-

ಆನೆಯನೇಱಿಕೊಂಡು ಹೋದಿರೆ ನೀವು
ಕುದುರೆಯನೇಱಿಕೊಂಡು ಹೋದಿರೆ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೆ ಅಣ್ಣಾ!
ಸತ್ಯದ ನಿಲವನಱಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತಿ ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಮದ ಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ!
ನಮ್ಮ ಕೂಡಲ ಸಂಗಮದೇವರನಱಿಯದೆ
ನರಕಕ್ಕೆ ಭಾಜನವಾದಿರಲ್ಲಾ     (೬೭೩)

ಇದು ಲೋಕದ ವ್ಯರ್ಥಜೀವನದ ಕಡೆಗೆ ಸಿದ್ಧನಾದವನು ಕನಿಕರದಿಂದ ಮರುಗುವ ರೀತಿಯನ್ನು ಚಿತ್ರಿಸುತ್ತದೆ. ಅಹಂಕಾರಮೂಲವಾದ ಲೋಕವ್ಯಾಪಾರ, ಅದರಿಂದ ಉಂಟಾದ ವ್ಯರ್ಥಜೀವನದ ವಿಷಯ ಇದರ ವಸ್ತು. ‘ಆನೆ’, ‘ಕುದುರೆ’ ‘ಕುಂಕುಮ ಕಸ್ತೂರಿ’ ಇವು ಅಹಂಕಾರ, ಅಧಿಕಾರ, ಭೋಗ ವಿಲಾಸ -ಇವುಗಳಿಗೆ ಸಂಕೇತವಾಗಿವೆ. ಆದರೆ ಮುಂದಿನ ಆರನೆಯ ಸಾಲಿನಲ್ಲಿ ‘ಆನೆ’ ಎಂದರೇನು ಎಂಬ ವಿವರಣೆ ಬಂದಿದೆ. ಇದರಿಂದ ಈ ವಚನದ ಕಾವ್ಯಗುಣ ತಟಕ್ಕನೆ ನಿಂತು, ನೀತಿ-ಧರ್ಮದ ಮಾತು ಮುಂದಾಗುತ್ತದೆ. ಆದರೆ, ಇದರಿಂದ ಹಾಗಾಯಿತು ಹೀಗಾಯಿತು ಎಂದು ಅಂದುಕೊಳ್ಳುವವರು ವಿಮರ್ಶಕರಷ್ಟೆ; ಆದರೆ ಬಸವಣ್ಣನವರಿಗೆ ಇದು  ಕಾವ್ಯವಾಗಬೇಕು ಇಂಥ ಕಡೆ ಧ್ವನಿಯಿದ್ದದ್ದು ಇಂಥಲ್ಲಿ ವಾಚ್ಯವಾಯಿತು, ಆದಕಾರಣ ಹೀಗೆ ಬರೆದು ಇದನ್ನು ಕಾವ್ಯವನ್ನಾಗಿಸಬೇಕು ಎಂಬ ಕಾವ್ಯ ಮೀಮಾಂಸೆಯ ಪರವಾದ ಯಾವ ಚಿಂತೆಯೂ ಅವರಿಗಿರಲಿಲ್ಲ. ಅವರಿಗಿದ್ದದ್ದು ಜೀವನ ಮೀಮಾಂಸೆ; ತಮ್ಮ ಅಂತರಂಗದ ಅನುಭವ ಮೀಮಾಂಸೆ. ಅವರಿಗಿದ್ದುದು ತಮ್ಮ ಅನುಭವಕ್ಕೆ ಪ್ರಾಮಾಣಿಕವಾದ ಅಭಿವ್ಯಕ್ತಿಯನ್ನು ಕೊಡಬೇಕೆಂಬ ತುಡಿತ; ಹಾಗೆ ಕೊಟ್ಟದ್ದು ಅದನ್ನು ಕೇಳಿದವನಿಗೆ ಅರ್ಥವಾಗಬೇಕೆಂಬ ಅನುಕಂಪ; ಅನಂತರ ಅದರಿಂದ ಸಮಾಜದ, ವ್ಯಕ್ತಿಯ, ಶ್ರೇಯಸ್ಸು ಸಾಧಿತವಾಗಬೇಕೆಂಬ ಉದ್ದೇಶ. ಇದೇ ಅವರ ವಚನಗಳ ಮೂಲಸಾಮಗ್ರಿ. ಹೀಗಾಗಿ ಅವರ ವಚನಗಳಲ್ಲಿ ಮೂರು ಸ್ತರಗಳನ್ನು ನಾವು ಗುರುತಿಸಬಹುದು. ಒಂದು, ಬಸವಣ್ಣನವರಿಗೆ ಆದಂಥ ಅನುಭವ; ಅದು ಅವರ ವ್ಯಕ್ತಿತ್ವದ ರಸಮಯತೆಯಿಂದ ಒಂದು ಮಟ್ಟದಲ್ಲಿ ಕಾವ್ಯವಾಗುತ್ತದೆ. ಅನಂತರ ಅದರಲ್ಲಿ ಬರುವ ವಿವರಣಾತ್ಮಕವಾದ ವಾಕ್ಯ, ತಮಗೆ ಏನು ಅನ್ನಿಸಿತೋ ಅದು ಉಳಿದ ಸಾಮಾನ್ಯರಿಗೂ ಅರ್ಥವಾಗಬೇಕು ಎನ್ನುವ ಅನುಕಂಪದಿಂದ ಮೂಡಿದ್ದು. ಮೂರನೆಯದು, ಈ ಒಂದು ತತ್ತ್ವವೋ, ನೀತಿಯೋ ಈ ಸಮಾಜ ಸುಧಾರಣೆಗೆ ಉಪಯೋಗವಾಗಬೇಕು ಎನ್ನುವುದು. ಹಾಗಾಗಬೇಕಾದರೆ ಈ ಅನುಭವವನ್ನು ಅಭಿವ್ಯಕ್ತಗೊಳಿಸುವ ಭಾಷಾಮಾಧ್ಯಮ ಹೇಗಿರಬೇಕು ಎಂಬ ವಿಚಾರದಲ್ಲಿ ಅವರು ತಾಳಿದ ವಿಶೇಷ ರೀತಿಯ ಎಚ್ಚರ -ಇವು ಬಸವಣ್ಣನವರ ವಚನಗಳ ಕಾವ್ಯ ಸೌಂದರ್ಯದ ಮುಖ್ಯ ಲಕ್ಷಣಗಳಾಗಿವೆ.

ತನ್ನ ಸುತ್ತಣ ಜನಭಾಷೆಯ ಬಗ್ಗೆ ಬಸವಣ್ಣನವರಿಗಿರುವ ಎಚ್ಚರ, ಉಳಿದ ಎಷ್ಟೋ ಕವಿಗಳಿಗಿಲ್ಲದ ಈ ಒಂದು ಗುಣದಿಂದ ಇವರನ್ನು ಬೇರ್ಪಡಿಸಿ, ಸಹಜ ಕವಿಗಿರಬೇಕಾದ ಲಕ್ಷಣ ಇವರಲ್ಲಿದೆ ಎಂಬುದನ್ನು ಸಮರ್ಥಿಸುತ್ತದೆ. ಯಾವ ಸಾಹಿತ್ಯ ಚಳುವಳಿಯನ್ನೇ ನಾವು ನೋಡಿದರೂ, ಆ ಚಳುವಳಿಯ ಕೇಂದ್ರವ್ಯಕ್ತಿಗಳ ಹಂಬಲ, ಕಾವ್ಯದ ಭಾಷೆಯನ್ನು ಆಡುಮಾತಿನ ಸಮೀಪಕ್ಕೆ ತರಬೇಕೆಂಬ, ಕಾವ್ಯವನ್ನು ಬದುಕಿಗೆ ಹತ್ತಿರವನ್ನಾಗಿಸಬೇಕೆಂಬ ಪ್ರಯತ್ನದಲ್ಲಿ ವ್ಯಕ್ತವಾಗಿರುತ್ತದೆ. ಬಸವಣ್ಣನವರು ಹಿಂದಿನ ಕಾವ್ಯ ಪರಂಪರೆಯೊಂದಿಗೆ ತಮ್ಮ ಸಂಬಂಧವನ್ನು  ಕಳಚಿಕೊಂಡಿದ್ದರಿಂದ, ಅವರ ಸ್ವತಂತ್ರವ್ಯಕ್ತಿತ್ವ ತನಗೆ ತೋರಿದ ಹಾಗೆ ವಿಪುಲಪ್ರತಿಮಾ ನಿರ್ಮಾಣವನ್ನು ವಚನಗಳಲ್ಲಿ ಮಾಡಿತೋರಿಸಿದ್ದು ಅನನ್ಯ ರೀತಿಯದಾಗಿರುವಂತೆ, ಅದೇ ಮನೋಧರ್ಮದಿಂದ ಅಭಿವ್ಯಕ್ತಿಯ ರೀತಿಯಲ್ಲಿ ತನ್ನ ಸುತ್ತಣ ಭಾಷೆಯ ಬಗ್ಗೆ ಪ್ರಕಟಿಸಿರುವ ತೀವ್ರ ಸಂವೇದನೆಯೂ ಅನನ್ಯ ರೀತಿಯದಾಗಿದೆ. ಬಹುಶಃ ಬುದ್ಧನ ಅನಂತರ, ಇಂಥ ಸಂತಸಾಹಿತ್ಯ, ಸ್ವಭಾಷಾ ಮಾಧ್ಯಮದಲ್ಲಿ ಅಭಿವ್ಯಕ್ತವಾದದ್ದು ಇಲ್ಲಿಯೆ. ಕನ್ನಡ ಸಾಹಿತ್ಯದಲ್ಲಿ.  ಕನ್ನಡ ಮಾಧ್ಯಮ-ಸಂಸ್ಕೃತದ ಹಂಗನ್ನು ಹರಿದುಕೊಂಡು-ಮೊಟ್ಟ ಮೊದಲು ಜಾರಿಗೆ ಬಂದಿದ್ದರೆ ಅದು ಬಸವಣ್ಣನವರ ಕಾಲದಲ್ಲಿಯೇ. ಕಾವ್ಯಾಭಿವ್ಯಕ್ತಿಗೆ ಹೀಗೆ ಗದ್ಯದ ಸತ್ವವನ್ನು ಕೂಡಿಸಿಕೊಂಡು, ಆಡುಮಾತುಗಳನ್ನು ಆಡುಮಾತನ್ನಾಗಿಯೆ ಉಳಿಸಿಕೊಂಡು, ಪದ್ಯದ ಸೊಗಸನ್ನು ತರಬೇಕಾದರೆ ಅವರಿಗೆ ಜನಭಾಷೆಯ ಬಗ್ಗೆ ಇದ್ದ ಎಚ್ಚರ ಎಷ್ಟರ ಮಟ್ಟಿನದೆಂಬುದು ತಿಳಿಯುತ್ತದೆ. ಅಂದು ಜನಜೀವನದಲ್ಲಿ ಪ್ರಚುರವಾಗಿದ್ದ ಗಾದೆ ಮಾತುಗಳನ್ನು ನಾಣ್ಣುಡಿ ಜಾಣ್ಣುಡಿಗಳನ್ನೂ, ಏರಿಳಿತಗಳನ್ನೂ ಎಷ್ಟೊಂದು ಸತ್ವಯುತವಾಗಿ ಬಳಸಿದ್ದಾರೆಂಬುದು ಇನ್ನೂ ವಿಸ್ತಾರವಾದ ಅಧ್ಯಯನದ ವಸ್ತುವಾಗಿದೆ.

‘ಅಧರಕ್ಕೆ ಕಹಿ, ಉದರಕ್ಕೆ ಸಿಹಿ’, ‘ಬಳ್ಳಿಗೆ ಕಾಯಿ ದಿಮ್ಮಿತ್ತೆ’, ‘ದಯವಿಲ್ಲದ ಧರ್ಮವಾವುದಯ್ಯಾ’, ‘ಆನೆಯ ಮೇಲೆ ಹೋಹನ ಶ್ವಾನ ಕಚ್ಚುಬಲ್ಲುದೆ’, ‘ನುಡಿದರೆ ಮುತ್ತಿನ ಹಾರದಂತಿರಬೇಕು’, ‘ಅರಿತರೆ ಶರಣ ಮರೆತರೆ ಮಾನವ’- ಎಂಬಂಥ ಸೂಕ್ತಿಸದೃಶವಾದ ಮಾತುಗಳು; ಉಪಮಾ ರೂಪಕಗಳು, ಪ್ರತಿಮಾ ಪರಂಪರೆಗಳು, ಮಾತಿನ ಹೊಂದಾಣಿಕೆಯಲ್ಲಿ ಕಂಡುಬರುವ ಒಳಪ್ರಾಸ-ಹೊರಪ್ರಾಸಗಳ ರಮ್ಯತೆ ಇವುಗಳಲ್ಲಿ ಅಂತರ್ಗತವಾಗಿರುವ ಅನೇಕ ಛಂದೋವೈವಿಧ್ಯಗಳು, ಬದುಕಿನ ಅನೇಕ ಮುಖಗಳಿಂದ ಚಿತ್ರಗಳನ್ನೆತ್ತಿಕೊಂಡು ತಮ್ಮ ಅಂತರಂಗದ ಬದುಕನ್ನು ವ್ಯಂಜಿಸುವ ವಿಸ್ಮಯ, ಈ ಎಲ್ಲ ಲಕ್ಷಣಗಳಿಂದ ಬಸವಣ್ಣನವರ ವಚನಗಳು ಸೊಗಸಾದ ಕಾವ್ಯವಾಗಿವೆ. ಈ ಭಾಷಾ ಸಾಮರ್ಥ್ಯದಿಂದ, ಈ ರಚನಾ ವಿಶೇಷತೆಗಳಿಂದ, ಸಮಕಾಲೀನ ಸಾಮಾಜಿಕ ಪ್ರಜ್ಞೆಯಿಂದ, ಧರ್ಮಶ್ರದ್ಧೆಯ ಅರಿವಿನಿಂದ, ಆತ್ಮವಿಮರ್ಶೆಯ ಪ್ರಾಮಾಣಿಕತೆಯಿಂದ ಬಸವಣ್ಣನವರ ಅಪೂರ್ವ ವ್ಯಕ್ತಿತ್ವದ  ಅಭಿವ್ಯಕ್ತಿಯಾಗಿರುವ ಈ ವಚನಗಳ ಕಾವ್ಯಸೌಂದರ್ಯ, ಪರಂಪರಾಗತವಾದ ಕಾವ್ಯ ಸೌಂದರ್ಯದಿಂದ ಬೇರೆಯಾಗಿ, ಜೀವನವೇ ಕಾವ್ಯವಾದಾಗ ಸಂಭವಿಸುವ ಸೌಂದರ್ಯದಿಂದ ಉಜ್ವಲವಾಗಿದೆ.

ಅನುರಣನ (೧೯೭೮)

* * *


[1] ಮುಂದಿನ ವೀರಶೈವ ಕವಿಗಳ ಭಾಷೆಯ ಮೇಲೆ, ಮತ್ತು ದಾಸ ಸಾಹಿತ್ಯದ ಮೇಲೆ ಈ ವಚನ ಸಾಹಿತ್ಯದ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು.

[2] ಈ ಲೇಖನದಲ್ಲಿ ಬಳಸಿಕೊಂಡಿರುವ ವಚನಗಳೆಲ್ಲಾ ಪ್ರೊ. ಶಿ.ಶಿ. ಬಸವನಾಳರ “ಬಸವಣ್ಣನವರ ಷಟ್‌ಸ್ಥಲದ ವಚನಗಳು” ಎಂಬುದರಿಂದ.

[3] ಸುಜನಾ ಅವರ ‘ಹೃದಯಸಂವಾದ’ದಲ್ಲಿ ‘ಬಸವಣ್ಣನವರ ವಚನಗಳಲ್ಲಿ ಪ್ರಾಣಿರೂಪಕಗಳು’- ನೋಡಿ.

[4] ನೋಡಿ : ವಚನ ೨೨೪; ೫೮೮; ೬೨೧; ೬೨೨, ಇತ್ಯಾದಿ

[5] ಪ್ರತಿಯೊಂದು ವಚನಗಳ ತುದಿಗೆ ತಮ್ಮ ಇಷ್ಟದೈವದ ಅಂಕಿತಗಳನ್ನಿಡುವ ವಚನಕಾರರ ಈ ಸಂಪ್ರದಾಯ ಭಾರತೀಯ ಸಂತಸಾಹಿತ್ಯ ಪರಂಪರೆಯಲ್ಲಿ ಇದೇ ಮೊದಲೋ ಹೇಗೊ ವಿಚಾರ ಮಾಡಬೇಕಾಗಿದೆ.