ಂಶೋಧನೆಗೆ ತಮ್ಮನ್ನು ಅರ್ಪಿಸಿಕೊಂಡ, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಹಾಗೂ ಈ ಸಮಾರಂಭದ ಉದ್ಘಾಟನೆ ಮಾಡಲು ಬಂದ ಎಂ.ಎಂ. ಕಲಬುರ್ಗಿಯವರೆ, ಕೂಡಲಸಂಗಮವನ್ನು ಒಂದು ಅಂತರರಾಷ್ಟ್ರೀಯ ಕೇಂದ್ರವನ್ನಾಗಿ ರೂಪಿಸಿದ ಆಯುಕ್ತ ಡಾ. ಜಾಮದಾರರವರೆ, ವೇದಿಕೆ ಮೇಲಿನ ಇತರ ಶರಣರೆ, ಸಮಾಜ ಶಾಸ್ತ್ರದ ಪ್ರಾಧ್ಯಾಪಕರೆ, ತಾಯಂದಿರೆ, ಎಲ್ಲರಿಗೂ ಶರಣಾರ್ಥಿಗಳು.

ಲಿಂಗಾಯತರ ಇತಿಹಾಸದಲ್ಲಿ ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಏಕೆಂದರೆ ಪಂಡಿತ ವರ್ಗದವರು ಸಮಾಜಶಾಸ್ತ್ರೀಯವಾಗಿ ವೀರಶೈವ ತತ್ವಗಳನ್ನು ಅಭ್ಯಾಸ ಮಾಡಲು ಸಿದ್ಧರಾಗಿದ್ದೀರಿ.

ನಾನು ಈ ಸಂದರ್ಭದಲ್ಲಿ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಡಾ. ಎಂ.ಎಂ. ಕಲಬುರ್ಗಿಯವರು, ಡಾ. ಶಿವಾನಂದ ಜಾಮದಾರ ಅವರು ಬಸವತತ್ವ, ಸಮಾಜ ಹಾಗೂ ಸಾಮಾಜಿಕ ಬದಲಾವಣೆ ಬಗ್ಗೆ ಈಗಾಗಲೇ ಹೆಚ್ಚು ವಿವರವಾಗಿ ಮಾತನಾಡಿದ್ದಾರೆ. ಈಗಾಗಲೇ ಡಾ. ಎಂ.ಎಂ. ಕಲಬುರ್ಗಿಯವರು ಹೇಳಿದಂತೆ ವೀರಶೈವದ ವಾರಸುದಾರರು ಎಂದು ಹೇಳಿಕೊಳ್ಳುವ ಕೆಲವರು ಹೊಟ್ಟೆಪಾಡಿಗಾಗಿ ಲಿಂಗಾಯತರಾಗಿದ್ದಾರೆ.

ಬಸವಣ್ಣ ಯಾರು ಬೇಕಾದರೂ ಇಷ್ಟಲಿಂಗವನ್ನು ಧರಿಸುವ ಅವಕಾಶವನ್ನು ನೀಡಿದ, ಇಷ್ಟಲಿಂಗವನ್ನು ಸಾರ್ವತ್ರೀಕರಣಗೊಳಿಸಿದ. ದೇವಾಲಯದಲ್ಲಿ ಕೇಂದ್ರೀಕೃತವಾದ ಧರ್ಮ ಬಸವಣ್ಣನಿಂದ ವಿಕೇಂದ್ರೀಕರಣಗೊಂಡಿತು. ಗುಡಿ-ಗುಂಡಾರಗಳಲ್ಲಿ ಪ್ರವೇಶ ಪಡೆಯಲಾರ ದವರಿಗೆ ಬಸವಣ್ಣ ಇಷ್ಟಲಿಂಗವನ್ನು ನೀಡಿದ. ಇದರಿಂದ ಧರ್ಮ ಜನಸಾಮಾನ್ಯರ ಆಸ್ತಿ ಯಾಯಿತು.

ಈ ಸಂದರ್ಭದಲ್ಲಿ ಒಂದು ಮಾತು ನನ್ನ ನೆನಪಿಗೆ ಬರುತ್ತದೆ. ಹನ್ನೆರಡನೆ ಶತಮಾನ ಕನ್ನಡಿಗರ ಇತಿಹಾಸದಲ್ಲಿ ದೊಡ್ಡ ಬದಲಾವಣೆ ತಂದಿತು. ಈ ೨೧ನೇ ಶತಮಾನದಲ್ಲಿ ಲಿಂಗವಂತ ಎಂದು ಮುದ್ರೆ ಹಾಕಿಕೊಂಡವರು. ೧೨ನೇ ಶತಮಾದಲ್ಲಿ ಬಹುಶಃ ಶೂದ್ರರಾಗಿದ್ದರು ಎಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ. ಗುಡಿ-ಗುಂಡಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇವರಿಗೆ ಪ್ರವೇಶ ಇರಲಿಲ್ಲ. ವರ್ಣಾಶ್ರಮ ಧರ್ಮ ನಮ್ಮನ್ನು ಆಳುತಿತ್ತು. ಕಾಯಕ ಜೀವಿಗಳಿಗೆ ಯಾವುದೇ ಬೆಲೆ ಇರಲಿಲ್ಲ. ಸಂಸ್ಕೃತ ಓದಿಕೊಂಡವರೆ ಮಹಾ ಪಂಡಿತರು ಎಂದು ಹೇಳಿಕೊಳ್ಳುವ ಕಾಲ ಇತ್ತು. ಸಂಸ್ಕೃತ ಓದಿದವರಿಗೆ ಮಾತ್ರ ಸಂಸ್ಕೃತಿ ಇದೆ ಎಂದು ನಂಬಿದ ಕಾಲ ಅದಾಗಿತ್ತು. ಆದರೆ ಅಪ್ಪ ಬಸವಣ್ಣ ಜನರಾಡುವ ಭಾಷೆಯಲ್ಲಿ ಉದಾತ್ತ ತತ್ವಗಳನ್ನು ಬೋಧಿಸಿದ. ಎಲ್ಲ ಕಾಯಕ ಜೀವಿಗಳನ್ನು ಗೌರವಿಸಿ ಅವರೂ ಕೂಡ ಗೌರವ ಯುತವಾಗಿ ಬದುಕಲು ಮಾರ್ಗ ಮಾಡಿಕೊಟ್ಟ. ಆದ್ದರಿಂದ ೧೨ನೇ ಶತಮಾನ ಕಾಯಕ ಜೀವಿಗಳನ್ನು, ದಲಿತರನ್ನು, ಬಡವರನ್ನು ಗೌರವಿಸಿದ ಕಾಲ.

ನಮ್ಮ ಸಂವಿಧಾನ ನಮಗೆ ಸಮಾನತೆ ನೀಡಿದೆ. ಆದರೆ ಇಂದಿಗೂ ಇಂದಿರಾಗಾಂಧಿ, ಬಾಬು ಜಗಜೀವನರಾಂ ಇಂತಹವರಿಗೆ ದೇವಸ್ಥಾನದಲ್ಲಿ ಪ್ರವೇಶಿಸಲು ಅವಕಾಶ ಇರಲಿಲ್ಲ ಎಂದರೆ ಉಳಿದವರ ಪಾಡನ್ನು ಊಹಿಸಿಕೊಳ್ಳಬಹುದು. ಇಂದಿರಾಗಾಂಧಿಯವರಿಗೆ ಪುರಿ ಜಗನ್ನಾಥ ದೇವಾಲಯದಲ್ಲಿ ಪ್ರವೇಶ ನೀಡಲು ನಿರಾಕರಿಸಲಾಗಿತ್ತು. ಜಗಜೀವನರಾಂ ಇವರಿಗೆ ಇಂತಹ ಕಹಿ ಅನುಭವವಾಗಿದ್ದವು. ದೇವಸ್ಥಾನ ಆಧಾರಿತ ಧರ್ಮ ಪೊಳ್ಳು ಪುರೋಹಿತಶಾಹಿತ್ವ ಬೆಳಸುತ್ತದೆ. ಆದ್ದರಿಂದಲೇ ಬಸವಣ್ಣನವರು ‘ದೇಹವೆ ದೇವಾಲಯ’ ಎಂದು ವರ್ಣಿಸಿದರು.

ಬಸವಣ್ಣನವರು ಇಂತಹ ಗುಡಿ ಗುಂಡಾರ, ದೇವಾಲಯಗಳನ್ನು ತಿರಸ್ಕರಿಸಿ ಹೊಸ ಧರ್ಮಕ್ಕೆ ಹುಟ್ಟು ಹಾಕಿದರು. ಎಲ್ಲರಿಗೂ ಇಷ್ಟಲಿಂಗವನ್ನು ಕೊಟ್ಟು ಕಾಯಕ ಜೀವಿಗಳನ್ನು ಗೌರವಿಸಿದರು. ಲಿಂಗಾಯತರಲ್ಲಿ ಆಧ್ಯಾತ್ಮದ ದಾಹ ಕಡಿಮೆ. ಇಲ್ಲಿ ಅನುಭಾವ ಇದೆ. ಇಲ್ಲಿ ‘ಅರಿವೇ ಗುರು’ ಆಗಿರುತ್ತದೆ. ತನ್ನ ತಾ ಅರಿದೊಡೆ ಶರಣ ಎಂದು ಬಸವಣ್ಣ ಹೇಳಿದ.

ಎಂ.ಎಂ. ಕಲಬುರ್ಗಿಯವರು ಹೇಳಿದಂತೆ ವೀರಶೈವದಲ್ಲಿ ದಾಸೋಹಕ್ಕೆ ಮಹತ್ವ ಇದೆ. ದಾಸೋಹ ಎಂದರೆ ದುಡಿಯಲಾರದೆ ಹೊಟ್ಟೆ ಹೊರೆಯುವ ಪುರೋಹಿತರಿಗೆ ಊಟ ಹಾಕುವುದಲ್ಲ. ವೀರಶೈವರಲ್ಲಿ ಜಂಗಮ ಎಂದರೆ ಸಮಾಜ ಹಾಗೂ ಸಾಮಾಜಿಕ ಬದಲಾವಣೆ. ಇಲ್ಲಿ ವ್ಯಕ್ತಿಯ ಅಂಗ, ಲಿಂಗ, ಜಂಗಮನಾಗುತ್ತಾನೆ. ಅಂದರೆ ವ್ಯಕ್ತಿ ಕ್ರಮೇಣವಾಗಿ ಸಾಮಾಜಿಕವಾಗಿ ವಿಸ್ತಾರ ಹೊಂದುವ ಅವಕಾಶ ಇದೆ.

ಇಂದು ಲಿಂಗಾಯತರು ಬಹಳ ಸಂಕುಚಿತ ಭಾವನೆ ಹೊಂದಿದ್ದಾರೆ. ಅನೇಕ ಜಾತಿ ಉಪಜಾತಿಗಳಲ್ಲಿ ಒಡೆದು ಹೋಗಿ ಮೂಲತತ್ವ ಮರೆತ್ತಿದ್ದಾರೆ. ಜಂಗಮ, ಬಣಜಿಗ, ಪಂಚಮ ಸಾಲಿ, ಗಾಣಿಗ ಇಂತಹ ಉಪಜಾತಿಗಳಲ್ಲದೆ ಹೊಸ ಬೇಡ ಜಂಗಮ ಜಾತಿ ಹುಟ್ಟಿಕೊಂಡಿದೆ. ಅಂದರೆ ಇದು ಲಿಂಗಾಯತರ ಅವನತಿಯ ಸಂಕೇತ ಎಂದು ಹೇಳಬಹುದು. ಲಿಂಗಾಯತರು ಸಂಕುಚಿತ ಮನೋಭಾವ ಬಿಟ್ಟು, ಮೇಲು ಕೀಳು ಎಂಬ ಭೇದ ಮರೆತು ಸಮಾನರಾಗಬೇಕಾಗಿದೆ. ಬಸವಣ್ಣನವರು ಹೇಳಿದಂತೆ – ‘ನಾನೊಬ್ಬನೇ ಭಕ್ತ ಉಳಿದವರೆಲ್ಲ ಲಿಂಗ ಜಂಗಮರು’ ಎಂದು ತಿಳಿದಂತೆ, ‘ಎನಗಿಂತ ಕಿರಿಯರಿಲ್ಲ’ ಎಂದು ತಿಳಿದರೆ ಎಂತಹ ಕಷ್ಟದಿಂದಲೂ ನಾವು ಪಾರಾಗಬಹುದು. ‘ಅಹಂ’ ನಮ್ಮನ್ನು ನಿರಂತರವಾಗಿ ಕಾಡುತ್ತಿದೆ. ಈ ‘ಅಹಂ’ ಭಾವದಿಂದ ದೂರ ಸರಿಯಬೇಕು. ಕಲಬುರ್ಗಿಯವರು ಹೇಳಿದಂತೆ ಭಕ್ತ, ಭವಿ ಎಂಬ ಅಂತರ ಅಳಿಯ ಬೇಕು. ಉಪಜಾತಿಗಳು ನಮ್ಮ ನಾಶಕ್ಕೆ ಕಾರಣವಾಗಬಾರದು. ನನಗೆ ಹೋದಲ್ಲೆಲ್ಲಾ ಒಂದು ಪ್ರಶ್ನೆ ಕೇಳುತ್ತಾರೆ. ಸಮಾನತೆಯ ಬಗ್ಗೆ ಮಾತನಾಡುವ ನೀವು ಮಹಿಳೆಯರಿಗೆ ಏಕೆ ನಿರಂಜನ ದೀಕ್ಷೆ ಕೊಟ್ಟಿಲ್ಲ ಎಂದು ಕೇಳುತ್ತಾರೆ. ಸೂಕ್ತ ಮಹಿಳೆ ದೊರೆತೆರೆ ಅವಳಿಗೆ ಲಿಂಗದೀಕ್ಷೆ ನೀಡಿ, ನಿರಂಜನ ಸ್ಥಾನ ನೀಡಿ ಆ ಮಹಾತಾಯಿಯ ಪಾದಕ್ಕೆ ವಂದಿಸುತ್ತೇವೆ, ಹಾಗೂ  ಮಠಾಧೀಶರನ್ನಾಗಿ ಮಾಡುತ್ತೇವೆ. ಈಗಾಗಲೇ ಸಮಯ ಸಾಕಷ್ಟು ಆಗಿದೆ. ಇನ್ನೂ ಹಲವು ಗೋಷ್ಠಿಗಳು ಜರುಗಬೇಕಾಗಿದೆ. ಡಾ. ಜಾಮದಾರರವರು ಇಂತಹ ವಿಚಾರ ಗೋಷ್ಠಿಗಳನ್ನು ಹೆಚ್ಚು ಜರುಗಿಸಲಿ ಎಂದು ಹಾರೈಸುವೆ. ಅವರ ಕಾಯಕತತ್ವ ನಿಮ್ಮೆಲ್ಲರಿಗೆ ಹೊಸ ಪ್ರೇರಣೆ ನೀಡಲಿ ಎಂದು ಹಾರೈಸುವೆ. ಎಲ್ಲರಿಗೂ ಶರಣಾರ್ಥಿಗಳು.