ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸಮಾನತೆಗಾಗಿ ಬಸವಣ್ಣನವರು ಕಲ್ಯಾಣದಲ್ಲಿ ನಡೆಸಿದ ಕ್ರಾಂತಿ-ಕರ್ನಾಟಕದ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲು. ಹದಿನಾರನೆ ಶತಮಾನದಲ್ಲಿ ಮಾರ್ಟಿನ್‌ಲೂಥರ್‌ನಿಂದ ಜರ್ಮನಿಯ ಮೂಲಕ ಯುರೋಪಿನುದ್ದಕ್ಕೂ ಹರಡಿದ ಪ್ರೊಟೆಸ್ಟಂಟ್ ಧರ್ಮಕ್ರಾಂತಿಗಿಂತ ಶ್ರೇಷ್ಠ ತತ್ವಗಳಿಗಾಗಿ ಕಲ್ಯಾಣದಲ್ಲಿ ಕ್ರಾಂತಿ ನಡೆಯಿತು. ಫ್ರೆಂಚ್ ಹಾಗೂ ಅಮೇರಿಕೆಯ ಕ್ರಾಂತಿಗಳಲ್ಲಿ ಮೂಡಿಬಂದ ಸ್ವಾತಂತ್ರ್ಯ, ಸಮಾನತೆ, ವಿಶ್ವಬಾಂಧವ್ಯದ ಆದರ್ಶಗಳೂ ಬಸವಣ್ಣನವರ ತತ್ವಗಳಲ್ಲಿ ಅಡಕ ವಾಗಿದ್ದವು. ಸ್ವರ್ಗ ನರಕಗಳನ್ನು ಅಲ್ಲಗಳೆದು, ಬಹುದೈವತ್ವ ಹಾಗೂ ಮೂರ್ತಿ ಪೂಜೆಯನ್ನು ತಿರಸ್ಕರಿಸಿ, ಆಚಾರಕ್ಕೆ ಪ್ರಾಧಾನ್ಯತೆ ನೀಡಿ, ಕಾಯಕವೇ ಕೈಲಾಸವೆಂದು ಸಾರಿ, ಲಿಂಗಭೇದ, ವರ್ಗಬೇದ, ಜಾತಿಭೇದಗಳನ್ನು ತಿರಸ್ಕರಿಸಿದ ಬಸವಣ್ಣ ಧಾರ್ಮಿಕ-ಸಾಮಾಜಿಕ ಸಮಾನತೆಯ ಮೇಲೆ ಹೊಸ ಸಮಾಜವನ್ನು ಕಟ್ಟಬಯಸಿದ. ಆದರೆ ಶ್ರೇಷ್ಠ ಬಸವತತ್ವಗಳು ಮಾರ್ಟಿನ್ ಲೂಥರ್‌ನ ವಿಚಾರಗಳಂತೆ, ಅಥವಾ ಫ್ರೆಂಚ್ ಕ್ರಾಂತಿಯ ತತ್ವಗಳಂತೆ ವಿಶ್ವವ್ಯಾಪ್ತಿಯಾಗಿ ಹರಡಲೇ ಇಲ್ಲ. ಅವರ ವಿಶ್ವಮಾನವ ಪರಿಕಲ್ಪನೆ ಗಳು ಕಿರಿದಾದ ಪ್ರಾದೇಶಿಕ ಗಡಿಯನ್ನು ದಾಟಲೇ ಇಲ್ಲ, ಕರ್ನಾಟಕಕ್ಕೇ ಸೀಮಿತಗೊಂಡಿವೆ-ಹೆಚ್ಚೆಂದರೆ ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದ ಗಡಿ ಪ್ರದೇಶದಲ್ಲಿಯ ಕೆಲವರಿಗೆ ತಿಳಿದಿರಬಹುದು. ಕನ್ನಡ ಭಾಷಿಕರನ್ನು ಬಿಟ್ಟು ಕರ್ನಾಟಕದಾಚೆಗಿನ ಜನರು “ಬಸವಣ್ಣ” ಎಂದರೆ ಯಾರು? ಎಂದು ಪ್ರಶ್ನಿಸಿದರೆ ಸೋಜಿಗ ವಲ್ಲ! ಅದಕ್ಕೆ ಕಾರಣಗಳು ಅನೇಕ-ಕೆಲವು ಅವ್ಯಕ್ತ, ಹಲವು ಅಪಥ್ಯ, ಇನ್ನೂ ಕೆಲವು ಅಗೋಚರ!!

ಕರ್ನಾಟಕದಲ್ಲಿ ಬಸವ ಸಾಹಿತ್ಯ ವಿಫುಲವಾಗಿ ಬೆಳೆದಿದೆ ಎನ್ನುವವರಿದ್ದಾರೆ. ಸ್ವಲ್ಪಮಟ್ಟಿಗೆ ಮೇಲ್ನೊಟಕ್ಕೆ ಅದು ಸತ್ಯವೆಂದು ತೋರಲೂಬಹುದು. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಒಂದು ಮಹತ್ವದ ಭಾಗವಾಗಿದೆ. ನೂರಾರು ವಚನಕಾರರು ಸಾವಿರಾರು ಅನುಭಾವಪೂರ್ಣ ವಚನಗಳನ್ನು ರಚಿಸಿದ್ದಾರೆ. ಸುಮಾರು ೨೨,೦೦೦ ವಚನಗಳನ್ನು ಕರ್ನಾಟಕ ಸರಕಾರ ೧೫ ಸಂಪುಟಗಳಲ್ಲಿ ೨೦೦೧ರಲ್ಲಿ ಪುನಃ ಪ್ರಕಟಿಸಿದೆ. ಕಬೀರರ “ದೋಹೆಗಳು”, ಮೀರಾಬಾಯಿಯ “ಗೀತೆಗಳು”, ದಾಸರ “ಹಾಡುಗಳು”, ಉಮರನ “ರುಬೈಯತ”, ಕನ್‌ಫ್ಯೂಸಿಯಸ್‌ನ “ಗಾದೆ”ಗಳಂತೆ ವಚನಗಳು ಕನ್ನಡದಲ್ಲಿ ಪ್ರಸಿದ್ಧವಾಗಿವೆ. ಕನ್ನಡಿಗರಿಗೆ ಕಬೀರರ “ದೋಹೆಗಳು”, ಮೀರಾಬಾಯಿಯ “ಗೀತೆಗಳು”, “ದಾಸರ ಹಾಡುಗಳು”, ಉಮರನ “ರುಬೈಯತಗಳು” ತಿಳಿದಿರುವಂತೆ ಕನ್ನಡೇತರರಿಗೆ “ವಚನಗಳು”  ಗೊತ್ತಿವೆಯೇ? ಇಲ್ಲವೆಂದೇ ಹೇಳಬೇಕಾದುದು ಅನಿವಾರ್ಯ! ಏಕೆಂದರೆ ಬೇರೆ ಭಾಷೆಗಳಿಗೆ ವಚನ ಸಾಹಿತ್ಯ ವ್ಯಾಪಕವಾಗಿ ಭಾಷಾಂತರವಾಗಲೇ ಇಲ್ಲ. ಎ.ಕೆ. ರಾಮಾನುಜನ್‌ರವರ “Speaking of Shiva”, ಶ್ರೀನಿವಾಸ ಅಯ್ಯಂಗಾರ ಹಾಗೂ ಶಿ.ಶಿ. ಬಸವನಾಳರ  “Musings of   Basava”, ಪಿ.ಶ್ಯಾಮರಾವ್ ಅವರ “Veera-shaiv Vachanas and Vachanakaras”, ಇ.ಪಿ. ರೈಸ್ ಹಾಗೂ ಊರ್ಥ ಅವರು ಇಂಗ್ಲಿಷಿನಲ್ಲಿ ಸಾರಾಂಶಗೊಳಿಸಿದ “ಬಸವ ಪುರಾಣ”, ಮೆನೆಝಿಸ್ ಅವರು ಇಂಗ್ಲಿಷಿಗೆ ಭಾಷಾಂತರಿಸಿದ “ಶೂನ್ಯ ಸಂಪಾದನೆ”, ಡಾ. ಪಿ.ಬಿ. ದೇಸಾಯಿ ಅವರ Basaveshwara and His Times ಮಾಸ್ತಿ ವೆಂಕಟೇಶ ಅಯ್ಯಂಗಾರರ Sayings of Basava, ಮತ್ತೆ ನಾಲ್ಕಾರು ವಿದ್ವಾಂಸರ ಕೃತಿಗಳು ಇಂಗ್ಲೀಷಿನಲ್ಲಿ ಭಾಷಾಂತರಗೊಂಡ ವಿರಳ ಕೃತಿಗಳಾಗಿವೆ. ಹಿಂದೆ, ಮರಾಠಿ, ತೆಲುಗು, ತಮಿಳು ಭಾಷೆಗಳಲ್ಲಿ ಲಭ್ಯವಿರುವ ವಚನ ಸಾಹಿತ್ಯ ಕೇವಲ ಹತ್ತಿಪ್ಪತ್ತು ಗ್ರಂಥಗಳಿಗೆ ಸೀಮಿತವಾಗಿದೆ. ಅದರಲ್ಲೂ ಬಸವ ಪುರಾಣದ ಭಾಷಾಂತರಗಳೇ ಹೆಚ್ಚು!

ಇತ್ತೀಚೆಗೆ ಕ್ರೋಡೀಕರಿಸಿದ ಒಂದು ಪಟ್ಟಿಯಂತೆ ಈ ವರೆಗೆ ಪ್ರಕಟಗೊಂಡ ಶರಣ ಸಾಹಿತ್ಯದ ಒಟ್ಟು ಪುಸ್ತಕಗಳು ೬೦೦ಕ್ಕೂ ಕಡಿಮೆಯೆಂದೂ, ನಿಯತಕಾಲಿಕಗಳಲ್ಲಿ ಮೂಡಿಬಂದ ಲೇಖನಗಳ ಸಂಖ್ಯೆ ೧೨೦೦ ಮೀರಿಲ್ಲವೆಂದು ತಿಳಿದಿದೆ. ಈ ಪಟ್ಟಿಯಲ್ಲಿ ಇಂಗ್ಲೀಷ್ ಹಾಗೂ ಭಾರತದ ಅನೇಕ ಭಾಷೆಗಳಲ್ಲಿ ಪ್ರಕಟಗೊಂಡ ಶರಣ ಸಾಹಿತ್ಯದ ಎಲ್ಲ ಗ್ರಂಥಗಳೂ ಸೇರಿವೆ. ಇವುಗಳಲ್ಲಿ ಪ್ರತಿಶತ ೯೫ರಷ್ಟು ಪ್ರಕಟಣೆಗಳು ಕನ್ನಡದಲ್ಲಿವೆ. ತೆಲಗಿನಲ್ಲಿ ೨೮, ತಮಿಳಿನಲ್ಲಿ ೨೦ ಪುಸ್ತಕಗಳನ್ನು ಬಿಟ್ಟರೆ ಮರಾಠಿ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲೀಷಿನಲ್ಲಿ ಅತಿ ವಿರಳವಾಗಿ ಭಾಷಾಂತರ ಕಾರ್ಯ ನಡೆದಿದೆ. ಪ್ರತಿಶತ ೯೬ರಷ್ಟು ಪ್ರಕಟಗೊಂಡ ಶರಣ ಸಾಹಿತ್ಯದ ಗ್ರಂಥಗಳು ಸಾಹಿತಿಗಳಿಂದ ರಚಿಸಲ್ಪಟ್ಟಿವೆ, ೨ ಪ್ರತಿಶತ ಕೃತಿಗಳು ಇತಿಹಾಸಕಾರರಿಂದ ಹಾಗೂ ಉಳಿದ ೨ ಪ್ರತಿಶತ ಪುಸ್ತಕಗಳು ತತ್ವಜ್ಞಾನಿ ಹಾಗೂ ಇತರರಿಂದ ಬರೆಯಲ್ಪಟ್ಟಿವೆ. ಸಮಾಜ ವಿಜ್ಞಾನಿಗಳು, ಮನೋವಿಜ್ಞಾನಿಗಳು, ಮಾನವ ವಿಜ್ಞಾನಿಗಳು, ವಚನ ಸಾಹಿತ್ಯ ಹಾಗೂ ಬಸವ ತತ್ವಗಳನ್ನು ನಿರ್ಲಕ್ಷಿಸಿದ್ದಾರೆಂದರೆ ಅತೀಶ ಯೋಕ್ತಿಯಾಗಲಾರದು.

ಬಸವ ಸಾಹಿತ್ಯ, ಶರಣ ಸಾಹಿತ್ಯದ ಒಂದು ಭಾಗವಾದರೆ ವಚನ ಸಾಹಿತ್ಯ ಅದಕ್ಕಿಂತ ದೊಡ್ಡದು. ಆದರೆ ಇವೆಲ್ಲ ಕೇವಲ ವಿಚಾರಗಳ ಒಂದು ಸಂಗ್ರಹವಲ್ಲ. ಸ್ತುತ್ಯವಾದ ವಿಚಾರಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅಳವಡಿಸುವ ಮಹಾನ್ ಪ್ರಯತ್ನವನ್ನು ಶರಣರು ವಿಶೇಷವಾಗಿ ಅವರಲ್ಲಿ ಅಗ್ರಗಣ್ಯರಾದ ಬಸವಣ್ಣವರು ಮಾಡಿದರು. ಒಂದು ಪ್ರದೇಶದ ಅಥವಾ ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ಬಸವಣ್ಣ ತನಗೆ ಲಭ್ಯವಿದ್ದ ಪ್ರತಿಷ್ಠೆ, ಹೇರಳ ಧನ ಹಾಗೂ ಅಧಿಕಾರಗಳನ್ನೂ ಕೂಡ ತನಗೆ ಶ್ರೇಷ್ಠವೆನಿಸಿದ ತತ್ವಗಳನ್ನು ಆಚರಣೆಯಲ್ಲಿ ತರಲು ಬಳಸಿದರು. ಅದರಿಂದ ಆ ಕಾಲದ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವ್ಯವಸ್ಥೆಗಳಲ್ಲಿ ಮಹತ್ತರವಾದ ಬದಲಾವಣೆಗಳು ಬರಲಾರಂಭಿಸಿದವು. ದೂರ ದೂರದಿಂದ ಸಹಸ್ರಾರು ಜನ ಅನುಯಾಯಿಗಳು ಆ ಪ್ರದೇಶಕ್ಕೆ ಬಂದು ಸೇರಿದರು. ಸ್ಥಳೀಯ ಬಹುಪಾಲು ಜನರು ಬಸವಣ್ಣನವರ ಕ್ರಾಂತಿಕಾರಿ ವಿಚಾರಗಳನ್ನು ಒಪ್ಪಿ ಕೊಂಡು ಆಚರಣೆಯಲ್ಲಿ ತರಲಾರಂಭಿಸಿದರು. ಉಚ್ಚ ನೀಚ ಜಾತಿಗಳಲ್ಲಿ ವರ್ಗೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯ ಗಾಳಿ ಬೀಸ ತೊಡಗಿತು. ಶತಮಾನಗಳಿಂದ ತುಳಿಯಲ್ಪಟ್ಟ ಕೆಳವರ್ಗದ ಕೆಳಜಾತಿಯ ಜನ ವಿಚಾರ ಸ್ವಾತಂತ್ರ್ಯದೊಂದಿಗೆ ಮುಕ್ತ ಸಮಾಜದ ಕನಸು ಕಾಣತೊಡಗಿದರು. ಅವರು ಬಹು ಸಂಖ್ಯೆ ಯಲ್ಲಿ ಬಸವಣ್ಣನವರೊಂದಿಗೆ ಪಾಲ್ಗೊಂಡರು. ಜಾತಿಗಳ ವಿನಾಶದೊಂದಿಗೆ ಲಿಂಗಭೇದ ಕಡಿಮೆಯಾಗಿ ಸ್ತ್ರೀಯರು ಪುರುಷರೊಂದಿಗೆ ಆಚಾರ ವಿಚಾರಗಳಲ್ಲಿ ಸಮಪಾಲು ಪಡೆಯ ಲಾರಂಭಿಸಿದರು. ಮೇಲ್ಜಾತಿಯವರಿಗೆ ಕಸಿವಿಸಿಯಾಯಿತು. ಪಟ್ಟಭದ್ರ ಹಿತಾಸಕ್ತಿಗಳು ಕುಪಿತ ಗೊಂಡವು. ಬಸವಣ್ಣನವರ ಸಮಾಜ ಪರಿವರ್ತನೆಯ ಕಾರ್ಯಕ್ಕೆ ವಿರೋಧ ಉಂಟಾಯಿತು. ಈ ಘರ್ಷಣೆ ವಿಕೋಪಕ್ಕೆ ಹೋದಾಗ ರಕ್ತಕ್ರಾಂತಿಯಾ ಯಿತು. ರಾಜನ ಕೊಲೆಯಾಯಿತು. ಶರಣ ಸಮುದಾಯದ ಬೇಟೆಯಲ್ಲಿ ಸಹಸ್ರಾರು ಜನರು ಅಸುನೀಗಿದರು. ಬದುಕುಳಿದವರು ಪಲಾಯನಗೈಯ್ದರು. ಬಸವಣ್ಣನವರು ಕಲ್ಯಾಣದಿಂದ ಕೂಡಲಸಂಗಮಕ್ಕೆ ಹಿಂದಿರುಗಿ ದರಲ್ಲದೆ ಕೆಲ ದಿನಗಳಲ್ಲಿ  ಸ್ವರ್ಗಸ್ಥರಾದರು. ಕ್ರಾಂತಿಕಾರಿಗಳಿಗೆ ಹಿನ್ನಡೆ ಉಂಟಾಯಿತು. ಅವರು ತಕ್ಷಣ ವಿಫಲರಾದರು. ಆದರೆ ಅವರು ಬಿತ್ತಿದ ಕ್ರಾಂತಿಯ ಬೀಜಗಳು ನಾಡಿನಾದ್ಯಂತ ಹಬ್ಬಿದವು. ಇದೊಂದು ಅತ್ಯಂತ ಮಹತ್ವದ  ಸಾಮಾಜಿಕ ಪ್ರಯೋಗ.

ಈ ಪ್ರಯೋಗವನ್ನು ಸಮಾಜ ವಿಜ್ಞಾನ ಯಾವ ದೃಷ್ಟಿಯಿಂದ ನೋಡುತ್ತದೆ? ಈ ಪ್ರಯೋಗದ ಐತಿಹಾಸಕ, ಸಾಮಾಜಿಕ ಮಹತ್ವವೇನು? ಅದು ವಿಫಲವಾಯಿತೆ? ಸಫಲ ವಾಯಿತೆ? ಇಂದು ಆ ಪ್ರಯೋಗ ಎಷ್ಟರ ಮಟ್ಟಿಗೆ ಸಮಂಸಜ? ಬಸವಣ್ಣನವರ ತತ್ವಗಳು ಆದರ್ಶವಾದದ ಭಾವನಾಲೋಕದ ಪ್ರತಿಬಿಂಬಗಳೇ ಅಥವಾ ಅವುಗಳನ್ನು ವಾಸ್ತವಿಕ ಜಗತ್ತಿ ನಲ್ಲಿ ನಿತ್ಯ ಜೀವನ ದಲ್ಲಿ ಸಾಮಾಜಿಕ ರಚನೆಯಲ್ಲಿ ಅಳವಡಿಸಬಹುದೆ? ಬಸವಣ್ಣನವರು ಧರ್ಮ ಸಂಸ್ಥಾಪಕರೇ? ಸಮಾಜ ಸುಧಾರಕರೆ? ಸಾಹಿತಿಗಳೆ? ವಿಶ್ವಮಾನವರೆ? ದೇವ ಮಾನವರೆ? ಅಥವಾ ಕೇವಲ ವಿಚಾರವಾದಿಗಳೆ? ಅವರು ಕಟ್ಟಬಯಸಿದ ಸಮಾಜದ ವೈಜ್ಞಾನಿಕ ವಿಶ್ಲೇಷಣೆ ಸಾಧ್ಯವೆ? ಅವರ ವೈಫಲತೆಯನ್ನು ಸಮಾಜ ವಿಜ್ಞಾನ ಹೇಗೆ ವಿಶ್ಲೇಷಿಸುತ್ತದೆ. ಜಾಗತಿಕ ವೈಚಾರಿಕರಲ್ಲಿ ಬಸವಣ್ಣನವರ ಸ್ಥಾನವೇನು? ಜಾಗತಿಕ ಮಟ್ಟದಲ್ಲಿ ಸಾಮಾಜಿಕ ವಿಕಾಸವಾದದ ಪ್ರತಿಪಾದಕರಲ್ಲಿ ಬಸವಣ್ಣನವರ ಸ್ಥಾನವೇನು? ಜಾಗತಿಕ ಮಟ್ಟದಲ್ಲಿ ಸಾಮಾಜಿಕ ವಿಕಾಸವಾದದ ಪ್ರತಿ ಪಾದಕರಲ್ಲಿ ಬಸವಣ್ಣನವರು ಒಬ್ಬರಾಗಬಹುದೆ? ಸಮಾಜ ವಿಜ್ಞಾನಿಗಳು ವಿಶ್ಲೇಷಿಸಬೇಕಾದ ಕೆಲವು ಅಂಶಗಳಿವು.

ತಾಯಿಬೇರನ್ನು ಕಳೆದುಕೊಂಡು ಭಾರತದಲ್ಲಿ ನಿರ್ನಾಮವಾದ ಬೌದ್ಧಧರ್ಮ ಕೊಂಬೆ ಬೇರುಗಳೊಂದಿಗೆ ಅನೇಕ ದೇಶಗಳಲ್ಲಿ ಹರಡಿ ಇಂದು ಒಂದು ಅತೀ ದೊಡ್ಡ ಜಾಗತಿಕ ಧರ್ಮವಾಗಿ ಬೆಳೆದು ನಿಂತಿದೆ. ಅದು ಪರದೇಶ ಪರಭಾಷೆಗೆ ಹರಡಿ ಬೆಳೆಯಿತು. ಹಾಗೆ ಹರಡದೇ ಬಸವಧರ್ಮ ಸ್ವಸ್ಥಳದಲ್ಲಿ ಬೌದ್ಧ ಧರ್ಮದಂತೆ ವಿನಾಶದ ಹಾದಿ ಹಿಡಿಯಿತು. “ಹಿಂದೂ” ಮಹಾಸಾಗರದಲ್ಲಿ ಒಂದು ಬಿಂದುವಾಯಿತು. ಈ ಪ್ರಕ್ರಿಯೆಯಲ್ಲಿ “ಹಿಂದೂ” ಸಾಮಾಜಿಕ ಶಕ್ತಿಗಳ ಪಾತ್ರವೇನು? ಅದರ ಸಮಾಜ ವೈಜ್ಞಾನಿಕ ವಿಮರ್ಶೆ ಇಂದಿನ ಅವಶ್ಯಕತೆ ಎನ್ನಬಹುದು.

ಬಸವ ತತ್ವವೇ ತಮ್ಮ ಸ್ವತ್ತು ಎಂಬಂತೆ ಕೆಲ ಮೂಲ ಜಾತಿಗಳು ವರ್ತಿಸಿವೆ. ಇತ್ತ ಪೂರ್ಣ ಹಿಂದೂ ಆಗದೇ ಅತ್ತ ಪರಿಪೂರ್ಣ ಬಸವವಾದಿಯಾಗದೇ ಎರಡರ ನಡುವಿನ ಸಂಘರ್ಷದಲ್ಲಿ ಅರೆಬೆಂದ ಅರೆಜೀವದ “ಹಿಂದೂ-ಬಸವವಾದಿ” “ಹಿಂದೂ ಲಿಂಗವಂತ” “ವೀರಶೈವ-ಲಿಂಗವಂತ” ಜಾತಿಗಳ ನಕಾರಾತ್ಮಕ ಪ್ರಭಾವ ಬಸವಣ್ಣನವರ ತತ್ವಗಳು ಇಂದಿಗೂ ಶಕ್ತಿಶಾಲಿಯಾಗದಿರಲು ಎಷ್ಟರ ಮಟ್ಟಿಗೆ ಕಾರಣ? ಇದರ ಸಮಾಜ-ವೈಜ್ಞಾನಿಕ ವಿಶ್ಲೇಷಣೆ ಅಷ್ಟೆ ಮುಖ್ಯ.

ಕರ್ನಾಟಕದ ಸಾಮಾಜಿಕ ಜೀವನದ ಮೇಲೆ ಬಸವಣ್ಣನವರ ಪ್ರಭಾವವೇನು? ಕೆಳ ಜಾತಿಗಳ, ಕೆಳವರ್ಗಗಳ ಪರಸ್ಪರ ಹಾಗೂ ಮೇಲ್ಜಾತಿಗಳೊಂದಿಗಿನ ಸಂಬಂಧ ಪರರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಭಿನ್ನವಾಗಿದೆಯೆ? ಕಾಯಕತತ್ವದ ಪ್ರಭಾವ ಕರ್ನಾಟಕದ ಪ್ರಗತಿಗೆ ಏನಾದರೂ ಸಂಬಂಧಿಸಿದೆಯೆ? ಸ್ತ್ರೀವಾದಿ ಬಸವಣ್ಣನವರ ವಿಚಾರಗಳು ಇಂದಿನ ಸ್ತ್ರೀಪರ ಚಳುವಳಿಗಳಿಗೆ ಎಷ್ಟು ಸಮಂಜಸ? ಇವೆಲ್ಲ ಪ್ರಶ್ನೆಗಳನ್ನು ವೈಜ್ಞಾನಿಕವಾಗಿ ಸಮಾಜ ವಿಜ್ಞಾನಿ ಗಳು ವಿಶ್ಲೇಷಿಸಬಹುದಲ್ಲವೆ?

ಕೆಲವೇ ಕೆಲವು ಇತಿಹಾಸ ತಜ್ಞರು ಬಸವಣ್ಣನವರ ಜೀವನ, ವಿಚಾರ, ಸಮಯ ಹಾಗೂ ಇತರ ಅಂಶಗಳ ಬಗ್ಗೆ ಮಹತ್ವದ ಅಧ್ಯಯನ ಕೈಗೊಂಡಿದ್ದಾರೆ. ಕೆಲವು ದಾರ್ಶನಿಕರು ಅವರ ತತ್ವಗಳ ದಾರ್ಶನಿಕ ಅಧ್ಯಯನ ಕೈಕೊಂಡಿದ್ದಾರೆ. ಆದರೆ ನಮಗೆ ಈಗ ಲಭ್ಯವಿರುವ ವಿಫುಲ ಬಸವಸಾಹಿತ್ಯ ಮುಖ್ಯವಾಗಿ ಸಾಹಿತಿಗಳಿಂದ ಹಾಗೂ ಪೌರಾಣಿಕ ಮೂಲಗಳಿಂದ ಬಂದಿದೆ. ಸಾಹಿತ್ಯಿಕ ಬರಹಗಳು ನಿರುಪಯೋಗವಲ್ಲದಿದ್ದರೂ ವೈಜ್ಞಾನಿಕವಾಗಿ ಅನೇಕ ಲೋಪದೋಷಗಳಿಂದ ಕೂಡಿರುತ್ತವೆ. ವಸ್ತುನಿಷ್ಠ ದೃಷ್ಟಿಕೋನದಿಂದ ಅನೇಕ ಸಲ ಬೇರ್ಪಟ್ಟು ಭಾವನಾತ್ಮಕ, ಸೃಜನಾತ್ಮಕ ಕಲ್ಪನೆಗಳಿಗೆ ಅವಕಾಶವಿತ್ತು ವಾಸ್ತವಾಂಶಗಳಿಗೆ ಕುಂದು ಬರುವ ಸಂಭವವೇ ಹೆಚ್ಚು. ಅದರಂತೆ ಪೌರಾಣಿಕ ಸಾಹಿತ್ಯ ಮಿಥ್ಯ ಹಾಗೂ ಅದ್ಭುತ ಪವಾಡಗಳ ಸರಮಾಲೆಗಳನ್ನು, ಕಟ್ಟುಕತೆಗಳನ್ನು ನಿರ್ಮಿಸಿ ದೇವಲೀಲೆ ದೇವಾಂಶಗಳಿಗೆ ಅತಿ ರಂಜಿತ ಅವಕಾಶ ನೀಡಿ ಸತ್ಯವನ್ನು, ಮಾನವೀಯ ಅಂಶಗಳನ್ನು ಮರೆಮಾಡುತ್ತವೆ. ಅದರಿಂದ ಐತಿಹಾಸಿಕ ಸತ್ಯಾಂಶಗಳಿಗೆ ವಂಚನೆಯಾಗುತ್ತದೆ.

ಕಳೆದ ಶತಮಾನದ ಪೂರ್ವಾರ್ಧದವರೆಗೆ ಬಸವಣ್ಣ ಜನರಿಗೆ ಪರಿಚಯವಿದ್ದುದ್ದು ಪೌರಾಣಿಕ ಮೂಲಗಳಿಂದಲೇ ಹೆಚ್ಚು. ಇಂದಿಗೂ ಕೂಡ ಅವರ ಜೀವನದ ಮುಖ್ಯಾಂಶಗಳು ನಮ್ಮ ಜ್ಞಾನ ಪುರಾಣಗಳಿಂದಲೇ ಬಂದದ್ದು. ಗೊತ್ತಿರುವ ಐದು ಪುರಾಣಗಳೆಂದರೆ ಪಾಲ್ಕುರಿಕೆ ಸೋಮನಾಥನ ತೆಲುಗು ಮೂಲದ ಬಸವ ಪುರಾಣ (೧೧೮೦), ಭೀಮಕವಿಯ ಕನ್ನಡ ಬಸವ ಪುರಾಣ (೧೩೬೯), ಹರಿಹರನ ಬಸವರಾಜ ದೇವರ ರಗಳೆ, ಸಿಂಗಿರಾಜನ ಸಿಂಗಿರಾಜ ಪುರಾಣ ಲಕ್ಕಣ ದಂಡೇಶನ ಶಿವತತ್ವ ಚಿಂತಾಮಣಿ. ಅನೇಕ ಐತಿಹಾಸಿಕ ಅಂಶಗಳ ಮೇಲೆ ಈ ಐದು ಪುರಾಣಗಳಲ್ಲಿ ಭಿನ್ನತೆಗಳಿವೆ. ಆದರೆ, ಶಾಸನಗಳ ಮೂಲಗಳಿಂದ ಖಚಿತವಾದ ಪುರಾವೆ, ಅಂಕಿ-ಅಂಶ, ದಿನಾಂಕ, ಕಾಲಮಾನ, ವ್ಯಕ್ತಿಗತ ಮಾಹಿತಿಗಳಿಂದ ಪೌರಾಣಿಕ ವಿಷಯಗಳನ್ನು ಐತಿಹಾಸಿಕವಾಗಿ ವಿಶ್ಲೇಷಿಸಲು ಸಾಧ್ಯವಾಗಿದೆ. ಕಳೆದ ಸುಮಾರು ೮೦ ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳು ಬಸವಣ್ಣನವರ ವಚನಗಳನ್ನು ಕ್ರೋಡೀಕರಿಸುವ ಮೂಲಕ ಕರ್ನಾಟಕದ ಜನಜೀವನದಲ್ಲಿ ಅವರ ಪ್ರಭಾವವನ್ನು ಅರಿತು ಕೊಳ್ಳಲು ಸಹಾಯಕವಾಗಿದೆ. ಆಡುಭಾಷೆಯಲ್ಲಿ ನಾಡಜನರ ನೆನಪಿನಲ್ಲಿ ೮೦೦ ವರ್ಷಗಳ ನಂತರವೂ ನಿರಂತರವಾಗಿ ಬದುಕಿ ಬರುತ್ತಿರುವ ಭಜನೆಗಳಲ್ಲಿ, ಪಡೆನುಡಿಗಳಲ್ಲಿ, ಒಡಪು ಗಳಲ್ಲಿ, ವೀರಗಾಸೆಗಳಲ್ಲಿ, ಪುರವಂತರ ಸ್ಮೃತಿಗಳಲ್ಲಿ ಬಸವಣ್ಣನವರು ಬದುಕಿದ್ದಾರೆ. ಇವುಗಳ ಸಾಮಾಜಿಕ, ವೈಜ್ಞಾನಿಕ ಅರ್ಥವೇನು? ಮಹತ್ವವೇನು? ಬಸವಣ್ಣನವರ ವಚನಗಳು ಜನರಾಡುವ ಸರಳ ದೇಶಿ ಭಾಷೆಯಲ್ಲಿವೆ. ಅವರು ಸಂಸ್ಕೃತದಲ್ಲಿ ವಚನ ಬರೆಯಲಿಲ್ಲ. ಬುದ್ಧ ಪಾಲಿ ಭಾಷೆಯನ್ನು ಉಪಯೋಗಿಸಿದ. ಆದ್ದರಿಂದ ಧಾರ್ಮಿಕ ವಿಚಾರಗಳು ಪಂಡಿತರಿ ಗಲ್ಲದೇ ಪಾಮರರಿಗೂ ಲಭ್ಯವಾದವು. ಪ್ರೊಟೆ ಸ್ಟಂಟ್ ಧರ್ಮ ಸಂಸ್ಥಾಪಕನಾದ ಲೂಥರ್ ಬೈಬಲ್‌ನ್ನು ಜನರಾಡುವ ಜರ್ಮನ್ ಭಾಷೆಗೆ ತರ್ಜುಮೆ ಮಾಡಿದ.

ಇವೆಲ್ಲ ಅಂಶಗಳನ್ನು ಬದಲಾದ ಇಂದಿನ ಆಧುನಿಕ ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸುವ ಅವಶ್ಯಕತೆ ಇದೆ. ಕೂಡಲಸಂಗಮ ಅಭಿವೃದ್ದಿ ಪ್ರಾಧಿಕಾರದ ಮೂಲಕ ಬಸವ ತತ್ವಗಳ ಪ್ರಚಾರ, ಸಂಶೋಧನೆ ಹಾಗೂ ಅಧ್ಯಯನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರ ಅಂಗವಾಗಿಯೇ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಸಮಾಜಶಾಸ್ತ್ರ ಪ್ರಾಧ್ಯಾಪಕರ ಸಂಘ ಹಮ್ಮಿಕೊಂಡಿರುವ ಎರಡು ದಿನಗಳ “ಬಸವತತ್ವ, ಸಮಾಜ ಹಾಗೂ ಸಾಮಾಜಿಕ ಬದಲಾವಣೆ” ಬಗ್ಗೆ ನಡೆದ ವಿಚಾರಗೋಷ್ಠಿಯನ್ನು ಪ್ರಾಧಿಕಾರವು ಸ್ವಾಗತಿಸಿದೆ. ಬಸವ ತತ್ವಗಳನ್ನು ವಿವಿಧ ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸುವ ಪ್ರಯತ್ನಗಳಲ್ಲಿ ಈ ವಿಚಾರಗೋಷ್ಠಿ ಮೊದಲನೆಯದಾಗಿದೆ. ಮುಂಬರುವ ದಿನಗಳಲ್ಲಿ ಮನೋವಿಜ್ಞಾನ, ಮಾನವ ವಿಜ್ಞಾನ, ರಾಜ್ಯಶಾಸ್ತ್ರ, ಇತಿಹಾಸ, ಸಾಹಿತ್ಯ, ಸಂಗೀತ ಇತ್ಯಾದಿ ವಿಷಯ ಪರಿಣತರಿಂದ ವಿಶೇಷ ವಾದ ಗೋಷ್ಠಿಗಳನ್ನು ಬಸವತತ್ವದ ಬಗ್ಗೆ ನಡೆಸುವ ಉದ್ದೇಶವಿದೆ. ಗೋಷ್ಠಿಗಳ ಸಾರಾಂಶಗಳನ್ನು ಗ್ರಂಥರೂಪದಲ್ಲಿ ಹೊರತರಲಾಗುವದು.

ಸಮಾಜ ವಿಜ್ಞಾನದಲ್ಲಿ ಧಾರ್ಮಿಕ ಸಂಗತಿಗಳ ಅಧ್ಯಯನ ಹೊಸದಲ್ಲ. ಸಮಾಜ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಡುವ ಆಗಸ್ಟ್ ಕೋಮ್ಟ್ (೧೭೯೮-೧೮೫೭) ಅವರು ಬಾಹ್ಯವಾಗಿ ನಮ್ಮ ಗಮನ ಸೆಳೆಯುವ ಸಾಮಾಜಿಕ ಘಟನೆಗಳಿಗೆ ಇತಿಮಿತಿಗಳಿವೆ ಎಂದು ಅರಿತಿದ್ದರು. ಅವುಗಳ ಆಧ್ಯಾತ್ಮಿಕ, ದೈವಾತ್ಮಿಕ ಹಾಗೂ ಧಾರ್ಮಿಕ ಆಧಾರಗಳನ್ನು ತಿಳಿಯಲೆತ್ನಿಸಿದ್ದರು. ಅದರಂತೆ ಎಮಿಲಿ ಡುರಖೈಮ (೧೮೫೮-೧೯೧೭) ಮತ್ತೊಬ್ಬ ಅತಿ ಶೇಷ್ಠ ಸಮಾಜ ವಿಜ್ಞಾನಿ ಆಧ್ಯಾತ್ಮಿಕ ಸತ್ಯ, ನೈತಿಕತೆ, ಧರ್ಮ, ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮದ ಮಹತ್ವ, ಎಂಬೆಲ್ಲ ಅಂಶಗಳ ಮೇಲೆ ಹೆಚ್ಚಿನ ವಿಷಯಗಳನ್ನು ವೈಜ್ಞಾನಿಕವಾಗಿ ಬೆಳಕಿಗೆ ತಂದವನು. ಕಾರ್ಲ್‌ಮಾರ್ಕ್ಸ್ (೧೮೧೮-೧೧೮೩) ಅವರು ಧರ್ಮದ ವಿರೋಧಿ ಯಾಗಿದ್ದರೂ ಅದರ ವಾಸ್ತವಿಕತೆಯ ಮಹತ್ವ ಹಾಗೂ ಸಾಮಾಜಿಕ ಜೀವನದಲ್ಲಿ ಧರ್ಮ ಬೀರುವ ಪ್ರಭಾವಗಳನ್ನು ಮಾರ್ಮಿಕವಾಗಿ ವಿವರಿಸಿದರು. ಮ್ಯಾಕ್ಸ್ ವೇಬರ್ (೧೮೬೪-೧೯೨೦) ಅವರು ಅತ್ಯಂತ ಪ್ರಭಾವಿ ಜರ್ಮನ್ ಸಮಾಜಶಾಸ್ತ್ರಜ್ಞರು. “ಆದರ್ಶ ಪ್ರಕಾರಗಳು” ಎಂಬ ಪರಿಕಲ್ಪನೆಯ ಮುಖಾಂತರ ಸಾಮಾಜಿಕ ಪ್ರಕ್ರಿಯೆಗಳನ್ನು ವಿಶ್ಲೇಷಿಸಿದವರು. ಪ್ರೊಟೆಸ್ಟಂಟ್ ಧರ್ಮದಿಂದ ಯುರೋಪ್ ದೇಶಗಳಲ್ಲಿ ಆದ ಮೂಲಭೂತ ಪ್ರಗತಿಯನ್ನು ವೈಜ್ಞಾನಿಕವಾಗಿ ವಿವರಿಸಿದವರು. ಇವೆಲ್ಲವುಗಳ ಪರಿಣಾಮ ದಿಂದ ಇಂದು ಧಾರ್ಮಿಕ ಸಮಾಜ ವಿಜ್ಞಾನ ಒಂದು ವಿಶೇಷ ಕ್ಷೇತ್ರವಾಗಿ ಬೆಳೆದು ನಿಂತಿದೆ. ಜಗತ್ತಿನಲ್ಲಿ ಇತ್ತೀಚೆಗೆ ತಲೆ ಎತ್ತಿರುವ ಮೂಲಭೂತವಾದ, ಸಂಸ್ಕೃತಿ ಸಂಘರ್ಷಗಳಡಿ ಯಲ್ಲಿ ಅಡಗಿರುವ ಧರ್ಮಗಳ ಮಹತ್ವವನ್ನು ಧಾರ್ಮಿಕ ಸಮಾಜವಿಜ್ಞಾನ ವಿಶ್ಲೇಷಿಸಬಲ್ಲದು.

ಧರ್ಮ ಜಾತಿಗಳೆ ಅತಿಯಾದ ಈ ದೇಶದಲ್ಲಿ ಧಾರ್ಮಿಕ ಸಮಾಜವಿಜ್ಞಾನ ವಿಫುಲವಾಗಿ ಬೆಳೆದಿಲ್ಲ. ಅವಕಾಶಗಳು ವಿಫುಲವಾಗಿವೆ. ಭಾರತದಲ್ಲಿ ಸಮಾಜವಿಜ್ಞಾನಿಗಳ ಸಂಖ್ಯೆಯೂ ದೊಡ್ಡದೇ. ಪ್ರತಿಯೊಂದು ಕಲಾ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಮಾಜವಿಜ್ಞಾನ ವಿಭಾಗವಿದೆ. ಸಮಾಜಶಾಸ್ತ್ರಜ್ಞರಿದ್ದಾರೆ. ಈವರೆಗೆ ಅವರು ಮಾಡಿರುವ ಧರ್ಮದ ಬಗೆಗಿನ ಸಂಶೋಧನೆಗಳು, ಚಿಂತನೆಗಳು ಬಹು ವಿರಳ, ಈ ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳೆ ಅವರಿಗೆಲ್ಲ ಒಂದು ರೀತಿಯ ಆಹ್ವಾನ.