ಬಸವಣ್ಣನವರ ತತ್ವಾದರ್ಶಗಳನ್ನು ಬದುಕುತ್ತಲಿರುವ ಪೂಜ್ಯರಾದ ಶ್ರೀ ಮಹಾಂತ ಸ್ವಾಮಿಗಳವರಲ್ಲಿ ವಂದಿಸಿ, ಕೂಡಲಸಂಗಮದಲ್ಲಿ ಮಹಾಮನೆಯನ್ನು ಸಜ್ಜುಗೊಳಿಸುತ್ತ ಲಿರುವ ಆತ್ಮೀಯರಾದ ಶ್ರೀ ಜಾಮದಾರ ಅವರೇ, ಸ್ನೇಹಿತರೇ-ಬಂಧುಗಳೇ-ಭಗಿನಿಯರೆ,

ಬಸವಣ್ಣನವರ ಸಾಮಾಜಿಕ ಸಿದ್ಧಾಂತದ ಚರ್ಚೆಗಾಗಿ ನಾವೆಲ್ಲ ಇಂದು ಕೂಡಲ ಸಂಗಮ ದಲ್ಲಿ ಸೇರಿರುವುದು ಅರ್ಥಪೂರ್ಣ ಘಟನೆಯೆಂದು ಭಾವಿಸುತ್ತೇನೆ. ಏಕೆಂದರೆ ವೈದಿಕ ಬಸವಣ್ಣ ಹುಟ್ಟಿದ್ದು ಬಾಗೆವಾಡಿಯಲ್ಲಿ, ಲಿಂಗಾಯತ ಬಸವಣ್ಣ ಹುಟ್ಟಿದ್ದು ಕೂಡಲ ಸಂಗಮದಲ್ಲಿ. ಹಿಂದೆ ಬಾಗೆವಾಡಿಯಲ್ಲಿ ಕರ್ಮದಿಂದ ಧರ್ಮಕ್ಕೆ ಸಾಗಿಬಂದಿದ್ದ ಅವನನ್ನು ಅಂಗದಿಂದ ಲಿಂಗಕ್ಕೆ ಪರಿವರ್ತಿಸಿದ್ದು ಈ ಕೂಡಲಸಂಗಮ. ಇಲ್ಲಿ ಸಂಗ್ರಹಿಸಿದ್ದ ತತ್ತ್ವಬೀಜಗಳನ್ನು ಅವನು ಕಲ್ಯಾಣದಲ್ಲಿ ಕ್ರಾಂತಿಗಾಗಿ ಬಳಸಿದ.

ಬಸವಣ್ಣನದು ಸಮಾಜೋಧಾರ್ಮಿಕ ಕ್ರಾಂತಿ. ಭಾಷಿಕ, ಸಾಹಿತ್ಯಿಕ, ರಾಜಕೀಯ, ಆರ್ಥಿಕ-ಹೀಗೆ ಬದುಕಿನ ಎಲ್ಲ ಕ್ಷೇತ್ರಗಳು ಹುಟ್ಟುವದು, ಬೆಳೆಯುವದು ಸಮಾಜದಲ್ಲಿ. ಹೀಗಾಗಿ ಬಸವಣ್ಣನ ಕ್ರಾಂತಿಯ ಯಾವುದೇ ಕ್ಷೇತ್ರವನ್ನು ಅರ್ಥಮಾಡಿಕೊಳ್ಳುವ ಮೊದಲು ಅವನು ಕಟ್ಟಿದ್ದ ಸಮಾಜದ ಸ್ವರೂಪವನ್ನು ತಿಳಿದುಕೊಳ್ಳುವದು ಮುಖ್ಯವೆನಿಸುತ್ತದೆ. ಇಷ್ಟು ಮಹತ್ವದ ಸಾಮಾಜಿಕ ಅಧ್ಯಯನಕ್ಕೋಸುಗ ಇಲ್ಲಿ ಸಾಹಿತ್ಯ ಮತ್ತು ಸಮಾಜಶಾಸ್ತ್ರಗಳ ಅಧ್ಯಾಪಕರು ಸಮಾವೇಶಗೊಂಡಿರುವಿರೆಂದು ಭಾವಿಸುತ್ತೇನೆ  ಮತ್ತು ವಚನ ಸಾಹಿತ್ಯಾಭ್ಯಾಸಿಗಳಿಗೆ  ಸಮಾಜ ಶಾಸ್ತ್ರದ ಅಭ್ಯಾಸ, ಸಮಾಜಶಾಸ್ತ್ರಜ್ಞರಿಗೆ ವಚನಸಾಹಿತ್ಯದ ಅಭ್ಯಾಸ ತೀರ ಅಗತ್ಯವೆಂದೂ ಸೂಚಿಸುತ್ತೇನೆ. ಇನ್ನೊಂದು ಸೂಚನೆಯೆಂದರೆ, ಚಾಣಕ್ಯನ ಅರ್ಥಶಾಸ್ತ್ರ ಇತ್ಯಾದಿ ಗ್ರಂಥಗಳಲ್ಲಿ ದಾಖಲಾಗಿರುವ ಆರ್ಯ ಸಮಾಜಪದ್ಧತಿ, ಇಲ್ಲವೆ ಇಂದು ನಮ್ಮ ಬದುಕಿನ ಭಾಗವಾಗಿರುವ ಆಂಗ್ಲ ಸಮಾಜಪದ್ಧತಿಯ ಬೆಳಕಿನಲ್ಲಿ ಶರಣ ಸಮಾಜವನ್ನು ಅರ್ಥೈಸುವುದನ್ನು ಬಿಟ್ಟು, ನಮ್ಮ ಆಕರಗಳು ವ್ಯಕ್ತಪಡಿಸುವ ಅಂಶಗಳನ್ನು ಮಾತ್ರ ಸಂಗ್ರಹಿ ಸುವುದೇ ಸರಿಯಾದ ಅಧ್ಯಯನ ವಿಧಾನವಾಗಿದೆ.

ಬಸವಣ್ಣ ಕಟ್ಟಬಯಸಿದ್ದ ಸಮಾಜದ ಲಕ್ಷಣಗಳ ಪಟ್ಟಿ ಹೋಗಲಿ, ಅಲ್ಲಿ ನಿಮಗೆ ಕಂಡುಬಂದ ಕೊರತೆಗಳ ಪಟ್ಟಿಯನ್ನು ಮಾಡಿದರೂ ಅದು ಈ ವಿಚಾರ ಸಂಕಿರಣದ ಒಂದು ಸಾಧನೆಯೆಂದೇ ಭಾವಿಸುತ್ತೇನೆ. ಮುಂದೆ ಆ ಕೊರತೆಗಳ ಸತ್ಯಾಸತ್ಯತೆಯ ಚರ್ಚೆಗಾಗಿ ನಾವು  ಇನ್ನೊಂದು ವಿಚಾರ ಸಂಕಿರಣವನ್ನು ಜರುಗಿಸಬಹುದಾಗಿದೆ. ಹೀಗೆ ಹೇಳಲು ಕಾರಣ, ಕೆಲವರು ಶರಣ ಸಿದ್ಧಾಂತವನ್ನು ಅಪಾರ್ಥ ಮಾಡಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಉದಾ: ವೈದಿಕರು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರವೆಂದು ಸಮಾಜವನ್ನು ವರ್ಗೀಕರಿಸಿದರೆ, ಭಕ್ತ-ಭವಿಯೆಂದು ವರ್ಗೀಕರಿಸಿದ ದೋಷ ಶರಣರಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಇದು ತತ್ವದ ನಿಜ ಸ್ವರೂಪ  ಅರ್ಥಮಾಡಿಕೊಳ್ಳದೆ ನೀಡಿದ ಅಭಿಪ್ರಾಯವಾಗಿದೆ. ವೈದಿಕ ವರ್ಗೀ ಕರಣ ಜನನನಿಷ್ಠವಾಗಿದ್ದು, ಒಂದು ವರ್ಣದಲ್ಲಿ ಹುಟ್ಟಿದವನು ಇನ್ನೊಂದು ಮೇಲುವರ್ಣಕ್ಕೆ ಹೋಗಲು ಅಲ್ಲಿ ಅವಕಾಶವಿಲ್ಲ. ಅದೇ ವರ್ಣದಲ್ಲಿ ಮುಂದುವರಿದು, ಪುಣ್ಯಮಾಡಿದ್ದರೆ ಮಾತ್ರ ಮುಂದಿನ ಜನ್ಮದಲ್ಲಿ ಮೇಲುವರ್ಣದವನಾಗಿ ಹುಟ್ಟಬಹುದು. ಶರಣಧರ್ಮದಲ್ಲಿ ಹೀಗಿಲ್ಲ. ಇಲ್ಲಿಯ ವರ್ಗೀಕರಣ ಗುಣನಿಷ್ಠವಾಗಿದೆ. ಯಾವುದೇ ವರ್ಣದಲ್ಲಿ ಹುಟ್ಟಿದವನು ಇದೇ ಜನ್ಮದಲ್ಲಿ ಸದಾಚಾರದಿಂದ ‘ಭಕ್ತ’ನೆನಿಸಿಕೊಳ್ಳುತ್ತಾನೆ, ಅನಾಚಾರದಾರದಿಂದ ‘ಭವಿಯೆನಿಸಿಕೊಳ್ಳುತ್ತಾನೆ. ನೀವು  ಇಂದು ಸಿದ್ಧಪಡಿಸಬಹುದಾದ ಕೊರತೆಗಳ ಪಟ್ಟಿಗೆ ಮುಂದಿನ ವಿಚಾರಸಂಕಿರಣದಲ್ಲಿ ಈ ರೀತಿ ಸಮಾಧಾನ ಹೇಳಬಹುದಾಗಿದೆ.

ವೀರಶೈವಕ್ಕೆ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ-ಹೀಗೆ ಆರು ಸ್ಥಲಗಳ ಸಿದ್ಧಾಂತವಿದೆ. ನಿಜವಾದ ಲಿಂಗಾಯತನ ಅಂತಿಮ ಗುರಿ ಆರನೆಯ ಸ್ಥಲವಾದ ಐಕ್ಯ. ಹೀಗಿದ್ದೂ ಇವರನ್ನು ಐಕ್ಯರೆಂದು ಕರೆಯುವುದಿಲ್ಲ. ನಾಲ್ಕನೆಯ ಸ್ಥಲವನ್ನಾಧರಿಸಿ ಪ್ರಾಣಲಿಂಗಿಗಳೆಂದೂ ಕರೆಯುವುದಿಲ್ಲ.  ಇವೆರಡರ ನಡುವಿನ ಐದನೆಯ ಸ್ಥಲವನ್ನಾಧರಿಸಿ ಶರಣರೆಂದು ಕರೆಯುತ್ತಾರೆ. ಇದನ್ನು ಅರ್ಥಮಾಡಿಕೊಂಡರೆ ಮಾತ್ರ ವೀರಶೈವದ ಕೇಂದ್ರತತ್ವ ಗೊತ್ತಾಗುತ್ತದೆ. ಐಕ್ಯಸ್ಥಲ ಲೌಕಿಕ ಪ್ರಜ್ಞೆಯ ಆಚೆಗಿನ ಸ್ಥಿತಿ. ಇಂತಹ ವ್ಯಕ್ತಿತ್ವ ಸಮಾಜಕ್ಕೆ ಆದರ್ಶವೇ ಹೊರತು ವಾಸ್ತ ವವಲ್ಲ. ನಾಲ್ಕನೆಯ ಪ್ರಾಣಲಿಂಗಿ ಸ್ಥಲ “ಅಹಂ ಬ್ರಹ್ಮಾಸ್ಮಿ” ಸ್ವರೂಪದ್ದು, ನಾನು ದೇವರಾಗುವದು. ಶರಣ ಸ್ಥಲವು “ನಾನು” ದೇವರಾಗಿ, ನೀವೂ ದೇವರಾಗುವುದನ್ನು ಅಂದರೆ “ನಾವು” ದೇವರಾಗುವುದನ್ನು ಪ್ರತಿಪಾದಿಸುತ್ತದೆ. ಹೀಗಾಗಿ ಶರಣಸ್ಥಲದ ವ್ಯಕ್ತಿಯಾಗಿ ಉಳಿಯುವುದಿಲ್ಲ, ಸಮಾಜವಾಗಿ ಬೆಳೆಯುತ್ತಾನೆ. ಆದುದರಿಂದ ಶರಣಸ್ಥಲದ ಅಭ್ಯಾಸವೇ ಸಮಾಜಶಾಸ್ತ್ರೀಯ ಅಭ್ಯಾಸವೆನಿಸುತ್ತದೆ.

ಪ್ರಾಚೀನ ಭಾರತದಲ್ಲಿ ತತ್ವಜ್ಞಾನ, ಶಂಕರಾಚಾರ್ಯರು ಹೇಳುವ “ಅಹಂ ಬ್ರಹ್ಮಾಸ್ಮಿ” ಹಂತಕ್ಕೆ ಬಂದು ನಿಂತಿದ್ದಿತು. ಶರಣರು ಹೇಳುವ ಪ್ರಾಣಲಿಂಗಿ ಸ್ಥಲವಾಗಿರುವ ಇದು ಪ್ರಾಣ ವನ್ನು ಲಿಂಗವನ್ನಾಗಿಸಿಕೊಳ್ಳುವ ಪ್ರಕ್ರಿಯೆ ಆಗಿದೆ. ಅಲ್ಲಮಪ್ರಭು ಈ ಸ್ಥಲದವರನ್ನು “ಲಿಂಗ ಸಾಧಕರೆಲ್ಲ ಭೂಭಾರಕರಾದರು” ಎಂದು ಟೀಕಿಸುತ್ತಾನೆ. ಅಂಗವು ಲಿಂಗವಾಗಿ ದೂರ  ಉಳಿದರೆ ಸಮಾಜಕ್ಕೆ ಏನು ಪ್ರಯೋಜನ? ಅದು ಮುಂದುವರಿದು ಸಮಾಜದಲ್ಲಿ/ಜಂಗಮದಲ್ಲಿ ಏಕವಾಗಬೇಕು. ಆಗ ಮಾತ್ರ ಪ್ರಯೋಜನ. ಈ ಹಿನ್ನೆಲೆಯಲ್ಲಿ ಹೇಳುವು ದಾದರೆ ಅರವಿಂದ ಘೋಷರು ಅಂಗವನ್ನು ಲಿಂಗವಾಗಿಸಿಕೊಂಡಿದ್ದವರು. ಗಾಂಧೀಜಿಯವರು ಅಲ್ಲಿಗೆ ನಿಲ್ಲದೆ, ಅದನ್ನು ಸಮಾಜಮುಖಿಯಾಗಿ ವಿಸ್ತರಿಸಿಕೊಂಡಿದ್ದವರು. ಬಸವಣ್ಣ ಹೇಳುವುದು ಅರವಿಂದ ಘೋಷರಾಗುವುದನ್ನಲ್ಲ, ಗಾಂಧೀಜಿಯಾಗುವುದನ್ನು. ಒಟ್ಟಾರೆ, ಪ್ರಾಣಲಿಂಗಿಸ್ಥಲದ ಸಾಮಾಜೀ ಕರಣವೇ ಶರಣಸ್ಥಲ. ಈ ಸ್ಥಲದ ಅಭ್ಯಾಸವೇ ಶರಣ ಸಮಾಜದ ಅಭ್ಯಾಸ.

ಬಸವಣ್ಣನವರು “ಲಿಂಗ ವ್ಯಸನಿ, ಜಂಗಮ ಪ್ರೇಮಿ” ಎಂಬ ಮಾತನ್ನು ಹೇಳುತ್ತಾರೆ. ಆತ್ಮೋದ್ಧಾರವನ್ನು ಸಾಧಿಸುತ್ತ ಸಮಾಜೋದ್ಧಾರವನ್ನೂ ಸಾಧಿಸಬೇಕೆಂಬುದು ಇದರ ಅರ್ಥ. ಲಿಂಗ, ಜಂಗಮ ಎರಡೂ ಮುಖ್ಯವಾದರೂ ಇವುಗಳಲ್ಲಿ ಜಂಗಮವೇ ಅತಿಮುಖ್ಯವೆಂದು ಶರಣರ ಅಭಿಪ್ರಾಯ. ಮನೆಗೆ ಬಂದ ಅಲ್ಲಮನನ್ನು ಉಪೇಕ್ಷಿಸಿ, ಲಿಂಗಪೂಜೆಯಲ್ಲಿ ನಿರತರಾಗಿದ್ದ ಬಸವಣ್ಣನನ್ನು “ಜಂಗಮ ಮುಂದಿರಲು ಲಿಂಗಪೂಜೆ ಏತಕ್ಕಯ್ಯ” ಎಂದು ಆತ ಪ್ರಶ್ನಿಸುವುದನ್ನು ಇಲ್ಲಿ ನೆನೆಯಬಹುದು.

ವೀರಶೈವ ಪುರಾಣಗಳಲ್ಲಿ ಒಂದು ಕಥೆ ಬರುತ್ತದೆ. ಬಸವಣ್ಣ ಒಂದು ದಿನ ಕಪ್ಪಡಿಯಲ್ಲಿ ಸಂಗಮೇಶ್ವರನ ಪೂಜೆ ಪೂರೈಸಿ, ನೈವೇದ್ಯ ತಟ್ಟಿಯನ್ನು ಮುಂದಿಟ್ಟ ಶಿವಲಿಂಗ ನೈವೇದ್ಯ ಸ್ವೀಕರಿಸಲಿಲ್ಲ. ಸಂಕೋಚಪಡುತ್ತಿರಬಹುದೆಂದು ಭಾವಿಸಿ ಮರೆಗೆ ಹೋಗಿ ನಿಂತ. ನೈವೇದ್ಯ ಹಾಗೆಯೇ ಇತ್ತು. ಇದರ ಬಾಯಿ ಈ ಕಡೆ ಇರಬಹುದು. ಆ ಕಡೆ ಇರಬಹುದೆಂದು ಊಹಿಸಿ ತಟ್ಟೆಯನ್ನು ಅತ್ತ-ಇತ್ತ ಸರಿಸಿದ. ನೈವೇದ್ಯ ಸ್ವೀಕರಿಸಲಿಲ್ಲ. ಲಿಂಗದ ಬಾಯಿ ಎಲ್ಲಿ? ದಿಗಿಲು ಗೊಂಡ ಬಸವಣ್ಣ “ಮೇಲೆ ಸುರುವಿದರೆ, ಬಾಯಿ ಇದ್ದಲ್ಲಿ ಸ್ವೀಕರಿಸೀತು” ಎಂದು ಭಾವಿಸಿ ಹಾಗೆಯೇ ಮಾಡಿದ. ಶಿವ ಪ್ರತ್ಯಕ್ಷನಾಗಿ, “ಲಿಂಗದ ಬಾಯಿ ಜಂಗಮ/ಸಮಾಜ” ಎಂದು ಹೇಳಿದ. ಈ ಕಥೆ ಸಮಾಜದ ತೃಪ್ತಿಯೇ ಶಿವ ತೃಪ್ತಿ ಎಂಬುದನ್ನು ಸೂಚಿಸುತ್ತದೆ.

ಒಂದು ಮಾತು, ಶರಣರಲ್ಲಿ ನಮ್ಮ ಎಲ್ಲ ಸಂದೇಹಗಳಿಗೆ, ಸಮಸ್ಯೆಗಳಿಗೆ ಉತ್ತರಗಳಿವೆ. ಕೆಲವು ವರ್ಷಗಳ ಹಿಂದೆ ಬಸವಜಯಂತಿ ಕಾರ್ಯಕ್ರಮಕ್ಕಾಗಿ ಗುಲಬರ್ಗಾಕ್ಕೆ ಹೋಗಿದ್ದೆ. ಐದಾರು ಸಾವಿರ ಜನ ಸೇರಿದ್ದರು. ಮಾತನಾಡುತ್ತ “ಬಸವಣ್ಣನವರಲ್ಲಿ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ” ಎಂದು ಹೇಳಿದೆ. ಆಗ ಸಭಿಕರಲ್ಲಿ ಒಬ್ಬ ಎದ್ದುನಿಂತು “ಇದು ಅಂಗವಿಕಲರ ವರ್ಷ. ಬಸವಣ್ಣ ಅಂಗವಿಕಲರ ಬಗ್ಗೆ ಏನು ಹೇಳಿದ್ದಾನೆ?” ಎಂದು ಕೇಳಿದ. ನನಗೆ ತಕ್ಷಣ ಉತ್ತರ ಹೊಳೆಯಲಿಲ್ಲ. “ಅಂಗವಿಕಲತೆ ಒಂದು ಸಾರ್ವಕಾಲೀನ ಸಮಸ್ಯೆ. ಬಸವಣ್ಣ ಈ ಸಮಸ್ಯೆಗೆ ಉತ್ತರ ಹೇಳಿರಬಹುದು. ನನಗೆ ಕೆಲವು ದಿವಸ ಸಮಯ ಕೊಡಿ” ಎಂದು ಕೇಳಿದೆ. ನಂತರ ಬಸವಣ್ಣನವರ ವಚನಗಳನ್ನು ಹುಡುಕಿದೆ. ಈ ವಚನ ಸಿಕ್ಕಿತು.

ಹಾಲ ಕಂದಲು, ತುಪ್ಪದ ಮಡಕೆಯ
ಬೋಡು, ಮುಕ್ಕೆನಬೇಡ.
ಹಾಲು ಸಿಹಿ, ತುಪ್ಪ ಕಮ್ಮನೆ, ಲಿಂಗಕ್ಕೆ ಬೋನ.
ಕೂಡಲಸಂಗನ ಶರಣರ ಅಂಗಹೀನರೆಂದರೆ ನಾಯಕ ನರಕ.

ನಾಲ್ಕಾರು ವರ್ಷಗಳ ಬಳಿಕ ಬಸವಜಯಂತಿ ಕಾರ್ಯಕ್ರಮಕ್ಕಾಗಿ ಗುಲಬರ್ಗಾಕ್ಕೆ ಮತ್ತೆ ಹೋಗುವ ಪ್ರಸಂಗ ಒದಗಿತು. ಅದೇ ವೇದಿಕೆ. ಹಿಂದೆ ಪ್ರಶ್ನೆ ಕೇಳಿದ ಸಂದರ್ಭ ನೆನಪಾಗಿ “ಬಸವಣ್ಣ ಅಂಗವಿಕಲರ ಬಗ್ಗೆ ಏನು ಹೇಳಿದ? ಎಂದು ನಿಮ್ಮಲ್ಲಿ ಒಬ್ಬರು ಕೇಳಿದ್ದಿರಿ” ಎನ್ನುತ್ತಲೇ “ನಾನೇ ಕೇಳಿದವ” ಎಂದು ಒಬ್ಬ ಎದ್ದುನಿಂತ. ಮೇಲಿನ ವಚನ ಹೇಳಿದೆ, ವಿವರಿಸಿದೆ. ಸಭೆ ಹರ್ಷದಿಂದ ಚಪ್ಪಾಳೆ ತಟ್ಟಿತು. ಹೀಗೆ ಸೂಕ್ಷ್ಮವಾಗಿ ಅವಲೋಕಿಸಿದರೆ, ಶರಣರಲ್ಲಿ ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದೆಂದು ತಿಳಿದಿದ್ದೇನೆ.

* * *

ಇದು ಶರಣರ ಸಾಮಾಜಿಕ ಅಧ್ಯಯನ ಸಮಾವೇಶ. ಎಲ್ಲ ಮಾನವಿಕ ಶಾಸ್ತ್ರದ ತಾಯಿ ಸಮಾಜಶಾಸ್ತ್ರವೆಂದು ಹೇಳಲಾಗುತ್ತದೆ. ಆದುದರಿಂದ ಮಾನವಿಕ ಅಧ್ಯಯನಗಳೆಲ್ಲ ಸಮಾಜೋ ರಾಜ್ಯಶಾಸ್ತ್ರ, ಸಮಾಜೋತತ್ವಶಾಸ್ತ್ರ, ಸಮಾಜೋಭಾಷಾಶಾಸ್ತ್ರಗಳೇ ಆಗಿವೆ. ಬಸವಣ್ಣನವರ ಪರಿಕಲ್ಪನೆಯ ಸಮಾಜವನ್ನು ಹೀಗೆಯೇ ಬಿಡಿಸಿ ನೋಡಬೇಕಾಗುತ್ತದೆ.

ಬಸವ ಸಿದ್ಧಾಂತವೆನ್ನುವುದು ಶಂಕರ, ಮಧ್ವ, ರಾಮಾನುಜ ಸಿದ್ಧಾಂತಗಳಂತೆ ವೇದ ಸಾಹಿತ್ಯಕ್ಕೆ ಬರೆದ ವ್ಯಾಖ್ಯಾನವಲ್ಲ. ಸಾಮಾಜಿಕ, ಮಾನವಿಕಗಳನ್ನು ತೀಕ್ಷ್ಣವಾಗಿ ವಿಮರ್ಶಿಸಿ ಬರೆದ ಸಿದ್ಧಾಂತ. ಆಧುನಿಕ ಸಮಾಜಶಾಸ್ತ್ರಜ್ಞರು ಬೇರೆ ಧರ್ಮಗಳಿಗಿಂತ ಬಸವಧರ್ಮದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವುದು, ಈ ಕಾರಣಕ್ಕಾಗಿ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಶರಣಸಮಾಜದ ಅಭ್ಯಾಸ ಮಾಡುವವರಿಗೆ ವಚನಸಾಹಿತ್ಯವೇ ಆಕರಸಾಮಗ್ರಿ. ಇದು ಪಂಪಭಾರತದಂತೆ ಸಾಮಾನ್ಯ (General) ಸಾಹಿತ್ಯಲ್ಲ, ಆದಿಪುರಾಣದಂತೆ ಸಿದ್ಧಾಂತಸಾಹಿತ್ಯ. ಶರಣಸಿದ್ಧಾಂತ ಅರ್ಥ ಮಾಡಿಕೊಳ್ಳದೆ ಮಾರ್ಕ್ಸ್ ಸಾಹಿತ್ಯ ಅರ್ಥವಾಗದಿರುವಂತೆ. ಆದುದರಿಂದ ಶರಣಸಿದ್ಧಾಂತದ ಪೂರ್ವಸಿದ್ಧತೆಯೊಂದಿಗೆ ವಚನವೆಂಬ ಆಕರವನ್ನು ಬಳಸಬೇಕೆಂದು ಹೇಳಬಯಸುತ್ತೇನೆ.

ಬಸವಣ್ಣ ಹುಟ್ಟುವ ಮೊದಲು ಭಾರತದಲ್ಲಿ ವ್ಯಕ್ತಿಗಳಿದ್ದರು, ಸಮಾಜವಿರಲಿಲ್ಲ ಅಥವಾ ವೈದಿಕರ ವರ್ಗೀಕೃತ ಸಮಾಜವಿದ್ದಿತು, ಬೌದ್ಧರ ಏಕೀಕೃತ-ಅಭಿವೃದ್ದಿರಹಿತ ಸಮಾಜವಿದ್ದಿತು. ಈಗ ಬಸವಣ್ಣ ಏಕೀಕೃತ ಮತ್ತು ಅಭಿವೃದ್ದಿಶೀಲ ಸಮಾಜದ ಪರಿಕಲ್ಪನೆಯನ್ನು ಮಂಡಿಸಿದ. ಈತನ ಏಕೀಕೃತ ಸಮಾಜದಲ್ಲಿ ಎಲ್ಲರೂ ಸ್ವತಂತ್ರರು, ಎಲ್ಲರೂ ಸಮಾನರು. ಎಲ್ಲರೂ ಸೋದರರು.

ಅಭಿವೃದ್ದಿಶೀಲ ಸಮಾಜ ಬಸವಣ್ಣನ ಹೊಚ್ಚ ಹೊಸ ಪರಿಕಲ್ಪನೆಯಾಗಿದೆ. ವೈದಿಕರ ವರ್ಣನಿಷ್ಠ ಸಮಾಜದಲ್ಲಿ ಬ್ರಾಹ್ಮಣ-ಕ್ಷತ್ರಿಯರದು ದುಡಿಯದ ವರ್ಗ, ವೈಶ್ಯ-ಶೂದ್ರರದು ದುಡಿಯುವ ವರ್ಗ. ಬಸವಣ್ಣ ಶ್ರಮಜೀವಿಗಳಾದ ವೈಶ್ಯ ಶೂದ್ರರನ್ನೂ ಸಂಘಟಿಸಿದ, ಪ್ರೋತ್ಸಾಹಿಸಿದ.

ಬುದ್ಧನ ಭಿಕ್ಕುಗಳು ಶ್ರಮಜೀವಿಗಳಾಗಿರಲಿಲ್ಲ. ಕಾಯಕವು ಸಿದ್ಧಾಂತದ ಭಾಗವಾಗುವಲ್ಲಿ ಬಸವಣ್ಣನ ಶರಣರು ಮಾತ್ರ ಶ್ರಮಜೀವಿಗಳಾದರು. “ಕೃತ್ಯ-ಕಾಯಕವಿಲ್ಲದವರು ಭಕ್ತರಲ್ಲ. ಸತ್ಯ-ಶುದ್ಧವಿಲ್ಲದುದು ಕಾಯಕವಲ್ಲ.” ಅಂದರೆ ಭಕ್ತನ ಲಕ್ಷಣ ಕಾಯಕ. ಕಾಯಕದ ಲಕ್ಷಣ ಸತ್ಯಶುದ್ಧತೆಯೆಂದೂ ಸಾರಿದರು. ಕಾಯಕದ ಸತ್ಯಶುದ್ಧತೆಯ ಸ್ವರೂಪವನ್ನು “ಹಾಗವೆಂಬ ಸಣ್ಣ ನಾಣ್ಯದಷ್ಟು ಕಾಯಕಮಾಡಿ, ಹಣ-ಅಡ್ಡವೆಂಬ ದೊಡ್ಡ ನಾಣ್ಯದಷ್ಟು ಕೂಲಿ ಬೇಡದಿ ರುವುದು.” “ಶ್ರಮದಷ್ಟು ಕೆಲಸಮಾಡಿ, ಅಗತ್ಯವಿರುವಷ್ಟು ಪ್ರತಿಫಲ ಪಡೆಯುವದು” ಎಂದು ಸ್ಪಷ್ಟಪಡಿಸಿದರು. ಈ ಕಾಯಕವು ಶಾರೀರಿಕ ಇಲ್ಲವೆ ಬೌದ್ದಿಕವಾಗಿರಬಹುದು. ಅದರಲ್ಲಿ ತಾರತಮ್ಯವಿಲ್ಲವೆಂಬುದನ್ನು “ಕಾಸಿ ಕಮ್ಮಾರನಾದ….. ವೇದವನೋದಿ ಹಾರುವನಾದ” ಎಂಬ ವಚನದ ಮೂಲಕ ಸಾರಿದರು.

ಈ ಕಾಯಕ ಸಾರ್ಥಕವಾಗುವುದು ದಾಸೋಹದಲ್ಲಿ. ಹಿಂದೆ ಹೇಳಿದ “ಅಹಂ ಬ್ರಹ್ಮಾಸ್ಮಿ” ಅಥವಾ “ಸೋಹಂ” ಎಂಬುದರ ಸಮಾಜೀಕರಣವೇ “ದಾಸೋಹಂ”. ಹೀಗಾಗಿ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂಬುದನ್ನೇ ಶರಣರು ಅಂತಿಮ ಸಿದ್ಧಾಂತ ವನ್ನಾಗಿಸಿಕೊಂಡರು.

* * *

ಶರಣರ ಸಾಮಾಜಿಕ ಸಿದ್ಧಾಂತವನ್ನು ಈ ದಾರಿಗಳಲ್ಲಿ ನೋಡಬೇಕು. ಆಧುನಿಕರಿಗೆ ಇದು ಇನ್ನೂ ಸ್ಪಷ್ಟವಾಗಬೇಕಾದರೆ ಗುರು, ಲಿಂಗ, ಜಂಗಮ, ವಿಭೂತಿ, ಪ್ರಸಾದ ಇತ್ಯಾದಿ ಹಳೆಯ ಪರಿಭಾಷೆಗಳನ್ನು ಕಡಿಮೆ ಬಳಸಿ, ಆಧುನಿಕ ಸಮಾಜಶಾಸ್ತ್ರೀಯ ಪರಿಭಾಷೆಗಳನ್ನು ಹೆಚ್ಚು ಬಳಸಬೇಕು ಮತ್ತು ಶ್ರಮ, ಆಹಾರ, ಅರ್ಥ, ಸಮಯ, ಕುಟುಂಬ, ಮಹಿಳಾ ಸಬಲೀಕರಣ ಇತ್ಯಾದಿ ಆಧುನಿಕ ಶೀರ್ಷಿಕೆಗಳಡಿಯಲ್ಲಿ ಅವರ ತತ್ವ-ಸಾಹಿತ್ಯಗಳನ್ನು ಚರ್ಚಿಸ ಬೇಕು. ಆಗ ಶರಣಸಮಾಜದ ಸ್ವರೂಪ ಕಾಲದೃಷ್ಟಿಯಿಂದ ಪ್ರಾಚೀನವಾದರೂ ಮೌಲ್ಯದೃಷ್ಟಿಯಿಂದ ಆಧುನಿಕವೆಂದು ಸ್ಪಷ್ಟವಾಗುತ್ತದೆ.