ಹನ್ನೆರಡನೆಯ ಶತಮಾನ ಕರ್ನಾಟಕದಲ್ಲಿ ಸಂಕ್ರಮಣ ಕಾಲ. ಸ್ಥಾವರವಾದ ಸಮಾಜ ಪಲ್ಲಟಗೊಂಡು ಜಂಗಮವಾಗಿ ರೂಪಗೊಂಡ ಹಂತ ಇದಾಗಿದೆ. ವಿಶಾಲ ಅರ್ಥದಲ್ಲಿ ಇದನ್ನು ಭಕ್ತಿ ಚಳುವಳಿಯ ಕಾಲ ಎಂದು ಹೇಳುವವರಿದ್ದಾರೆ. ಆದರೆ ಕೇವಲ ಮೋಕ್ಷಕ್ಕಾಗಿ ಬದುಕನ್ನು ‘ಒಡ್ಡಿದ’, ‘ಅರ್ಪಿಸಿದ’ ಕಾಲ ಇದಾಗಿರಲಿಲ್ಲ. ವ್ಯಷ್ಟಿ-ಸಮಷ್ಟಿಯ ಬದುಕಿನ ಸ್ವರೂಪ ಇಲ್ಲಿ ಹೊಸ ರೂಪ ಪಡೆಯಿತು. ವ್ಯಕ್ತಿ ಹಾಗೂ ಸಮಾಜದ ಕಲ್ಪನೆಯ ಚಿತ್ರ ರೂಪಾಂತರ ಹೊಂದಿತು. ಆದ್ದರಿಂದ ಹನ್ನೆರಡನೆಯ ಶತಮಾನದ ಶರಣರ ಚಳುವಳಿಯಲ್ಲಿ ದಲಿತ ಚಳುವಳಿಗಳ ಬೇರುಗಳನ್ನು ‘ಬಂಡಾಯ’ದವರು ಗುರುತಿಸಿದರೆ, ಸಾಹಿತ್ಯದ ವಿದ್ಯಾರ್ಥಿಗಳು ಭಾಷೆ ಈ ಹಂತದಲ್ಲಿ ಹೊಸ ಆಯಾಮ ಪಡೆದುದನ್ನು ಗುರುತಿಸುತ್ತಾರೆ. ಸಮಾಜಶಾಸ್ತ್ರಜ್ಞರು ಧರ್ಮ ಹಾಗೂ ಆರ್ಥಿಕತೆಯ ನಡುವೆ ಇರುವ ಸಂಬಂಧದ ಎಳೆಗಳನ್ನು ಜೋಡಿಸುವ ಯತ್ನ ಮಾಡುತ್ತಾರೆ. ಇದನ್ನು ಕಾಯಕ ಜೀವಿಗಳ (ಶ್ರಮಿಕರ) ಹೋರಾಟ ಎಂದೂ ವರ್ಣಿಸುತ್ತಾರೆ. ಒಟ್ಟಿಗೆ ಹನ್ನೆರಡನೆಯ ಶತಮಾನ ಕನ್ನಡಿಗರ ಬದುಕಿನಲ್ಲಿ ಬಹುರೂಪಿ ಪ್ರಭಾವ ಬೀರಿದೆ.

ವಚನ ಚಳುವಳಿಯನ್ನು ಅರ್ಥೈಸಲು ನಮಗೆ ಆ ಕಾಲದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಹಿತ್ಯಿಕ ಹಾಗೂ ವಿವಿಧ ಮುಖಗಳ ಪರಿಚಯ ಅವಶ್ಯವಾಗಿಬೇಕು. ರಾಜಕೀಯ ವಾಗಿ ಆಗ ಯುದ್ಧ ಸಾಮಾನ್ಯವಾಗಿ ಇದ್ದ ಕಾಲ. ಯುದ್ಧ ಎಂದರೆ ‘ನಾಗರಿಕ’ ಬದುಕಿನ ಮೇಲೆ ನಡೆಸುವ ಹಿಂಸಾಚಾರ. ಸಾಮಂತನಾಗಿದ್ದ ಬಿಜ್ಜಳ ಸಾರ್ವಭೌಮನಾಗಲು ಮಾಡಿದ ತಂತ್ರ, ಆಡಿದ ಆಟಗಳನ್ನು ವಿವರಿಸುವ ಅಗತ್ಯ ಇಲ್ಲಿ ಇಲ್ಲ. ಸಾಮಾನ್ಯರ ಬದುಕಿನ ಬಗ್ಗೆ ಗಮನ ಹರಿಸುವ ವ್ಯವಧಾನ ಅವರಿಗಿರಲಿಲ್ಲ. ಹೀಗಾಗಿ ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಆಸ್ಥಾನ ಪಂಡಿತರ ಆಸೆಬುರುಕ ನಾಲಿಗೆಯಿಂದ ವರ್ಣನೆಯಾದ ರಾಜ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಗಮನಹರಿಸುವ ಅಗತ್ಯ ಇರಲಿಲ್ಲ. ಅಂದರೆ ರಾಜಸತ್ತೆಗೆ ಧರ್ಮಸತ್ತೆ ಕೈ ಜೋಡಿಸಿತ್ತು. ಬೌದ್ಧ, ಜೈನ, ಶೈವ ಹಾಗೂ ವೈಷ್ಣವ ಪ್ರಭೇದಗಳು ತಮ್ಮ ಸಂಪ್ರದಾಯದ ಬಿಳಲುಗಳಿಂದ ಸಾಮಾನ್ಯರ ಬದುಕನ್ನು ಬಂಧಿಸಿದ್ದವು.

‘ವಚನ’ ಎಂಬ ಶಬ್ದ ಹಲವು ತೆರನಾದ ನಿರ್ವಚನದ ಸಾಧ್ಯತೆ ಹೊಂದಿದೆ. ಇದರ ಮೂಲವನ್ನು ‘ತಮಿಳಿನ ತೇವಾರಂ, ಸಂಸ್ಕೃತದ ಬ್ರಾಹ್ಮಣಕ, ಕನ್ನಡದ ತ್ರಿಪದಿ’ಗಳಲ್ಲಿ ಹುಡುಕುವ ಯತ್ನ ಇದೆ. ಇವುಗಳನ್ನು ವರ್ಗೀಕರಿಸುವ ಪ್ರಯತ್ನ ಹಿಡಿದು ಇಂದಿನವರೆಗೂ ಸಾಗಿದೆ. ವಚನಕಾರರು ‘ಸಂಸ್ಕೃತದ ಆಚಾರ್ಯರಲ್ಲ, ಕನ್ನಡದ ಬೇಸಾಯಗಾರರು’. ಜೇಡರ ದಾಸಿಮಯ್ಯನಿಂದ ಇಂದಿಗೂ ವಚನಗಳ ರಚನೆ ನಿರಂತರವಾಗಿ ಸಾಗಿ ಬಂದಿದೆ. ವಚನಗಳು ಹಲವು ಭಾವಗಳ ‘ಗಪದ್ಯ’ ರೂಪಗಳಾಗಿವೆ. ವಚನ ವಾಙ್ಮಯ, ವಚನ ಶಾಸ್ತ್ರ ಎಂಬ ಅಂಕಿತಗಳೊಡನೆ ಇದು ತನ್ನ ಒಡಲನ್ನು ಓದುಗರಿಗೆ ಭಿನ್ನ ರೀತಿಯಲ್ಲಿ ತೆರೆದು ತೋರಿದೆ. ವಚನ ಸಾಹಿತ್ಯ ಹಿಂದಿನ ಸಾಹಿತ್ಯದ ರೂಪ ಮುರಿದು ಹೊಸ ಸ್ವರೂಪ ಪಡೆಯಿತು. ಯಾವುದೇ ಖಚಿತ ಉದ್ದೇಶಗಳಿರದಿದ್ದರೂ ‘ವೈಯಕ್ತಿಕ ಅನುಭವ’ ಸಾಮಾಜಿಕ ಸ್ವರೂಪ ಪಡೆದು ವೀರಶೈವ ಅಂತರಂಗಕ್ಕೆ ಒಳಹೂರಣವನ್ನು ಹಾಗೂ ಬಹಿರಂಗಕ್ಕೆ ಹೊಸ ರೂಪವನ್ನು ಕೊಟ್ಟು ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ.

ಹನ್ನೆರಡನೆಯ ಶತಮಾನದ ಭಕ್ತಿ ಚಳುವಳಿ ಕಾಲದ ಅಗತ್ಯವಾಗಿತ್ತು ಎಂಬ ವಾದವೂ ಇದೆ. ಅಂದರೆ ಹನ್ನೊಂದನೇ ಶತಮಾನದ ಕೊನೆ ಹಾಗೂ ಹನ್ನೆರಡನೆಯ ಶತಮಾನದ ಇತಿಹಾಸ ಅವಲೋಕಿಸಿದಾಗ ಭಾರತದಲ್ಲಿ ಭಕ್ತಿ ಚಳುವಳಿಯ ಮಹಾಪೂರ ಕಾಣಬಹುದು. ಆದರೆ ಈ ಎಲ್ಲ ಚಳುವಳಿಗಳಲ್ಲಿ ಏಕರೂಪತೆ ಗುರುತಿಸುವುದು ಕಠಿಣ. ಅಲ್ಲದೆ ಭಾರತದಂತಹ ದೇಶದಲ್ಲಿ ಮೋಕ್ಷದ ಕಲ್ಪನೆ ಹಾಗೂ ಭಕ್ತಿಯ ಕಲ್ಪನೆ ವಿಭಿನ್ನ ಅರ್ಥ ಪಡೆದಿದೆ. ಬೇಡರ ಕಣ್ಣಪ್ಪನ ಭಕ್ತಿಯ ಸ್ವರೂಪ ಹಾಗೂ ಮೀರಾಬಾಯಿಯ ಭಕ್ತಿಯ ಪರಿಕಲ್ಪನೆಗಳೇ ಭಿನ್ನವಾಗಿವೆ. ಅಂದರೆ ‘ಭಕ್ತಿ’ ಕೇವಲ ವೈಯಕ್ತಿಕ ಸಾಧನೆಯ ಮಾರ್ಗವಾಗಿ ಕೆಲವೊಮ್ಮ ಕಂಡರೆ ಒಮ್ಮೊಮ್ಮೆ ಇದು ಸಾಮಾಜಿಕ ಬದುಕಿನ ಬುನಾದಿಯಾಗಿದೆ. ಅದು ಸಾಮಾಜಿಕ ಸ್ವರೂಪ ಪಡೆದಾಗ ಅಸಾಮಾನ್ಯ ಚಿಂತನಾಶಕ್ತಿಯನ್ನು ಪಡೆದುಕೊಂಡುದ್ದನ್ನು ಕಾಣಬಹುದು. ಹಾಗೂ ಕೆಲವು ದಾರ್ಶನಿಕ ಪರಿಕಲ್ಪನೆಗಳು ರೂಪಗೊಂಡದ್ದನ್ನು ಕಾಣಬಹುದು. ‘ಶಕ್ತಿ ವಿಶಿಷ್ಟಾದ್ವೈತ’ ಎಂದು ವರ್ಣನೆಗೊಂಡ ವೀರಶೈವ ಬಸವಣ್ಣನನ್ನು ಚತುರ್ಥ ಆಚಾರ್ಯ ಸ್ಥಾನದಲ್ಲಿ ಇರಿಸಲು ಹವಣಿ ಸುತ್ತದೆ. ಇದಕ್ಕೆ ಕೆಲವು ‘ಮಾತೆ’ಯರು, ಮಠಾಧೀಶರು ಸ್ವಾರ್ಥದ ಚಾಳೀಸಿನಿಂದ ಹನ್ನೆರಡನೆಯ ಶತಮಾನವನ್ನು ವ್ಯಾಖ್ಯಾನಿಸಲು ಮಾಡಿದ ಪ್ರಯತ್ನ ಇದಾಗಿದೆ.

ಕೂಡಲಸಂಗಮ ಅಪರೂಪದ ಹೆಸರು. ಕೂಡಲ ಹಾಗೂ ಸಂಗಮ ಎರಡೂ ಒಂದೇ ಅರ್ಥ ನೀಡುತ್ತವೆ. ‘ಕೂಡಲ’ಕ್ಕೆ ಕನ್ನಡ ಹಿನ್ನೆಲೆ ಇದ್ದರೆ, ‘ಸಂಗಮ’ಕ್ಕೆ ವೈದಿಕದ ಹಿನ್ನೆಲೆ ಇದೆ. ಎರಡು ನದಿಗಳು ಕೂಡುವ ಸ್ಥಳ ಸಂಗಮವಾಗಿದೆ. ಇಂತಹ ನೆಲೆಗಳು ಭಾರತದಲ್ಲಿ ಪವಿತ್ರ ಸ್ಥಳಗಳಾಗಿವೆ. ಬಾಗಲಕೋಟ ಜಿಲ್ಲೆಯ ಕೂಡಲಸಂಗಮ ಎರಡು ದೃಷ್ಟಿಯಿಂದ ವಿಶಿಷ್ಟವಾಗಿದೆ. ವಿಶ್ವದ ಪ್ರಥಮ ಸಮಾಜವಾದಿ ಚಿಂತಕ ಇಲ್ಲಿ ಶಿಕ್ಷಣವನ್ನು ಪಡೆದ ಹಾಗೂ ತನ್ನ ಬದುಕಿನ ಅಂತ್ಯವನ್ನು ಇಲ್ಲಿಯೆ ಕಂಡ ಎಂದ ಹೇಳಲಾಗುತ್ತದೆ. ಇತಿಹಾಸ ಹಾಗೂ ವರ್ತಮಾನದ ಹಲವು ಒತ್ತಡಗಳ ಹಿನ್ನೆಲೆಯಲ್ಲಿ ಅವನತಿ ಅಂಚಿನಲ್ಲಿದ್ದ ಕೂಡಲಸಂಗಮ ಈಗ ಪುನರುಜ್ಜೀವನ ಪಡೆದಿದೆ. ಇಲ್ಲಿ ಭೌತಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಹೊಸ ರೂಪದಲ್ಲಿ ಜರುಗಬೇಕೆಂಬುದು ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತರಾದ ಡಾ. ಶಿವಾನಂದ ಜಾಮದಾರರ ಸದಿಚ್ಛೆಯಾಗಿದೆ. ಈ ಹಿನ್ನೆಲೆಯಲ್ಲಿ ‘ಬಸವತತ್ವ, ಸಮಾಜ ಹಾಗೂ ಸಾಮಾಜಿಕ ಬದಲಾವಣೆ’ ಎಂಬ ವಿಚಾರ ಸಂಕಿರಣವನ್ನು ೨೯, ೩೦ ಅಕ್ಟೋಬರ್ ೨೦೦೧ರಂದು ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಬಸವತತ್ವದ ಚಿಂತನೆ ಭಾಷೆ ಹಾಗೂ ಸಾಹಿತ್ಯದ ಹಿನ್ನೆಲೆಯಲ್ಲಿ ಸಾಕಷ್ಟು ಜರುಗಿದೆ. ಆದರೆ ಶರಣ ಚಳುವಳಿಯನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜ್ಯಶಾಸ್ತ್ರಗಳ ನೆಲೆಯಲ್ಲಿ ನೋಡಿದ್ದು ಕಡಿಮೆ ಎಂದು ಹೇಳಬಹುದು. ಈ ಕೊರತೆಯನ್ನು ತುಂಬಿಕೊಡುವ ಮೊದಲ ಯತ್ನ ಈ ವಿಚಾರಣ ಸಂಕಿರಣ ಎಂದು ಹೇಳಬಹುದು. ಇದೊಂದು ಅಂತರಶಿಸ್ತೀಯ ಅಧ್ಯಯನ ಎಂದು ಹೇಳಬಹುದು.

ವೀರಶೈವ ಮತಾಂತರವನ್ನು ಒಪ್ಪಿದ ಒಂದು ವಿಶಿಷ್ಟ ಧರ್ಮ. ಒಂದು ಧರ್ಮಕ್ಕೆ ಬೇಕಾಗುವ ಎಲ್ಲ ರಾಚನಿಕ ಅಂಶಗಳನ್ನು ಇದು ಹೊಂದಿದೆ. ಹಿಂದುತ್ವದ ಚಾಳೀಸಿನಿಂದ ನೋಡುವವರಿಗೆ ಇದೊಂದು ಜಾತಿ ಮಾತ್ರ. ಹಿಂದೂವಾದಿಗಳಿಗೆ ಬುದ್ಧನಿಂದ ರಾಜಾರಾಮ ಮೋಹನರಾಯರವರೆಗೆ ಎಲ್ಲರೂ ಜಾತಿವಾದಿಗಳಾಗಿ ಕಾಣುತ್ತಾರೆ. ಕ್ರಿಸ್ತ, ಬುದ್ಧ, ಮಹಾವೀರ, ನಾರಾಯಣ ಗುರು, ನಾನಕ, ಬಸವ ಮುಂತಾದವರನ್ನು ಜಾತಿ ಸ್ಥಾಪಕರು ಎಂದು ಹೇಳುವುದಕ್ಕೆ ಯಾವ ಸಕಾರಣವು ಇಲ್ಲ. ಆದರೆ ಹಿಂದೂವಾದಿಗಳು ಬಸವಣ್ಣನನ್ನು ಪವಾಡ ಪುರುಷನನ್ನಾಗಿ ಮಾಡಿ ಆತನಿಗೊಂದು ಆಚಾರ್ಯ ಸ್ಥಾನ ನೀಡುವ ಯತ್ನ ಮಾಡಿದರು. ಇದು ಮತಾಂತರವನ್ನು ಒಪ್ಪಿದ್ದ ರಿಂದ ಮೊದಲ ಮತಾಂತರಿಗಳು ಮೇಲಿನ ಸ್ಥಾನ ಹೊಂದಿರಬಹುದು. ಹಲವು ವೃತ್ತಿ ಗುಂಪುಗಳು ತಮ್ಮ ಲಾಂಛನದಲ್ಲಿ ಮಾತ್ರ ತೋರಿಕೆಯ ಹೊರ ಬದಲಾವಣೆ ಮಾಡಿಕೊಂಡಿರ ಬಹುದು. ಪ್ರಾದೇಶಿಕವಾಗಿ ಸೀಮಿತ ವಲಯ ಹೊಂದಿದ ಲಿಂಗಾಯತರು, ಲಿಂಗಾಯತೇತರರಿಗೆ ವೃತ್ತಿ ನೆರವಿನ ಸಹಾಯ ಮಾಡಿದುದು ಹಲವು ಉಪಜಾತಿಗಳ ಸೃಷ್ಟಿಗೆ ಕಾರಣವಾಗಿರಬಹುದು. ಆದ್ದರಿಂದ ವೀರಶೈವ ಹಲವು ಉಪಜಾತಿ ಗಳನ್ನು ಹೊಂದಿದ ಒಂದು ವಿಶಾಲ ಜಾತಿ ಎಂದು ಕೆಲವರು ವಾದಿಸುತ್ತಾರೆ.

ಬಸವಣ್ಣನನ್ನು Protestant ಮತದ ಸ್ಥಾಪಕರಾದ ಲೂಥರ್, ಕ್ಯಾಲವಿನ್ ಮುಂತಾದ ವರಿಗೆ ಹೋಲಿಸಲಾಗುತ್ತದೆ. Protestant ಮತ ೧೬ನೇ ಶತಮಾನದ ಕೊಡುಗೆಯಾದರೆ, ವೀರಶೈವ ೧೨ನೇ ಶತಮಾನದ ಕೊಡುಗೆಯಾಗಿದೆ. Protestant ನೀತಿಯನ್ನು ಸಮಾಜಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ ಮ್ಯಾಕ್ಸ್‌ವೆಬರ್ ಮುಂತಾದವರು ಯುರೋಪಿನ ಹಲವು ದೇಶಗಳಲ್ಲಿ ಬಂಡವಾಳಶಾಹಿತ್ವ ಬೆಳೆಯಲು Protestant ನೀತಿಯೆ ಕಾರಣ ಎಂದು ಪ್ರತಿಪಾದಿಸಿದ್ದಾರೆ. ಇಲ್ಲಿ ಪುರೋಹಿತಶಾಹಿ ವ್ಯವಸ್ಥೆಯನ್ನು ನಿರಾಕರಿಸಿ ವೃತ್ತಿನಿಷ್ಠೆಯನ್ನು ಎತ್ತಿ ಹಿಡಿಯಲಾಯಿತು. ಹನ್ನೆರಡನೇ ಶತಮಾನದ ಕಾಯಕ ಜೀವಿಗಳ ಹೋರಾಟದಲ್ಲಿ ‘ಕಾಯಕವೇ ಕೈಲಾಸ’ ಎಂದು ಘೋಷಿಸಲಾಯಿತು. ಆದರೆ ಇಲ್ಲಿ ಬಂಡವಾಳಶಾಹಿತ್ವ ಬೆಳೆದ ಬಗ್ಗೆ ಸಾಕ್ಷಿಗಳು ಕಡಿಮೆ. ಬಸವಣ್ಣ ಹಾಗೂ ಆತನ ಅನುಯಾಯಿಗಳ ಚಿಂತನೆಯನ್ನು ವೆಬರ್ ಒಂದು ಸಾಲಿನ ವಿವರಣೆ ಯಲ್ಲಿ ಪೂರೈಸಿಬಿಟ್ಟಿದ್ದಾನೆ. ಕಾಯಕದ ಪರಿಕಲ್ಪನೆ ಇದು ‘ದಾಸೋಹ’ದೊಂದಿಗೆ ಹೊಂದಿದ ಸಂಬಂಧ ಇನ್ನೂ ಹೆಚ್ಚು ಚರ್ಚೆಗೆ ಒಳಪಡಬೇಕಾಗಿದೆ.

ಕೆಲವು ಹೋಲಿಕೆಗಳನ್ನು ಬಸವ ಹಾಗೂ ಲೂಥರ್ ಚಳುವಳಿಯಲ್ಲಿ ಕಾಣಬಹುದು. ಮೊದಲನೆಯದಾಗಿ ಕ್ಯಾಥೋಲಿಕ್‌ರು ಹಾಗೂ ಬ್ರಾಹ್ಮಣರು ಕರ್ಮಠ ಸಂಪ್ರದಾಯವಾದಿ ಗಳಾಗಿದ್ದರು. ಎರಡನೆಯದಾಗಿ ಆ ಬಸವಣ್ಣ ತನ್ನ ಪೂರ್ವಾಶ್ರಮದಲ್ಲಿ ಬ್ರಾಹ್ಮಣನಾಗಿದ್ದಂತೆ ಲೂಥರ್ ಕ್ಯಾಥೋಲಿಕ್‌ನಾಗಿದ್ದ. ಚರ್ಚ್ ಹಾಗೂ ಪೋಪ್ ವ್ಯವಸ್ಥೆಯನ್ನು ಲೂಥರ್ ವಿರೋಧಿಸಿದಂತೆ ಬಸವಣ್ಣನು ಗುಡಿ ಸಂಸ್ಕೃತಿ ಹಾಗೂ ಪುರೋಹಿತಶಾಹಿಯನ್ನು ವಿರೋಧಿ ಸಿದನು. ಜನರಾಡುವ ಕನ್ನಡ ಭಾಷೆಯಲ್ಲಿ ವೀರಶೈವ ತತ್ವ ಪ್ರತಿಪಾದಿಸಿದಂತೆ ಕಬ್ಬಿಣದ ಕಡಲೆಯಾಗಿದ್ದ ಬೈಬಲನ್ನು ಜನರಾಡುವ ಭಾಷೆಯಲ್ಲಿ ಪ್ರಚಾರಗೊಳಿಸಲಾಯಿತು. ಆದರೆ ಈ ಎರಡೂ ಚಳುವಳಿಗಳು ಧರ್ಮ ವಿರೋಧಿಗಳಾಗಿರಲಿಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗಿದೆ.

ಕರ್ನಾಟಕದ ರಾಜಕೀಯ ಸ್ಥಿತ್ಯಂತರಗಳು ವೀರಶೈವದ ಸಂಘಟನೆಯ ಮೇಲೆ ವಿಭಿನ್ನ ಪರಿಣಾಮ ಬೀರಿವೆ ಎಂದು ಹೇಳಬಹುದು. ಲಿಂಗಾಯತೀಕರಣ ಪ್ರಕ್ರಿಯೆ ಮೂಲಕ ಸಾಮಾಜಿಕ ಅಂತಸ್ತು ಹೆಚ್ಚಿಸಿಕೊಳ್ಳುವ ಆಸೆ ಒಂದು ಕಡೆ ಇದ್ದರೆ, ಹಿಂದುಳಿದ ಆಯೋಗದ ವರದಿಯ ಹಿನ್ನೆಲೆಯಲ್ಲಿ ಸರಕಾರಿ ಸೌಲಭ್ಯಗಳನ್ನು ಪಡೆಯುವ ಪ್ರಯತ್ನ ಇನ್ನೊಂದು ಕಡೆಗಿದೆ. ಹೀಗಾಗಿ ಲಿಂಗಾಯತರಲ್ಲಿ ಒಂದು ತೆರನಾದ ದ್ವಂದ್ವ ಪ್ರಾರಂಭವಾಯಿತು. ಲಿಂಗಾಯತ ಎಂಬ ಪದವನ್ನು ಬಿಟ್ಟು ಹಲವು ಉಪಜಾತಿಗಳು ಸಂಘಟನೆ ಹೊಂದ ತೊಡಗಿದವು. ಹನ್ನೆರಡನೇ ಶತಮಾನದ ಚಳುವಳಿ ಮೇಲ್‌ನೋಟಕ್ಕೆ ಧಾರ್ಮಿಕ ಚಳುವಳಿ ಯಾಗಿ ಕಂಡರೂ ಇದು ಶೂದ್ರರ ಹಾಗೂ ದಲಿತರ ಹೋರಾಟವಾಗಿತ್ತು. ಕೆಳವರ್ಗದವರು ತಮ್ಮ ಉನ್ನತಿಗಾಗಿ ತಾವೇ ಕೈಕೊಂಡ ಆಂದೋಲನವಾಗಿತ್ತು. ಆದರೆ ಹಿಂದೂಕರಣಗೊಳ್ಳುವ ಭ್ರಮೆಯಲ್ಲಿ ಅದು ತನ್ನ ಜೀವ ಸೆಲೆಯನ್ನು ಕಳೆದುಕೊಂಡಿತು ಎಂದು ಹೇಳಲಾಗುತ್ತದೆ.

ದಲಿತ ಹಿನ್ನೆಲೆ ಹೊಂದಿದ ವೀರಶೈವ ಆಧುನೀಕರಣಗೊಂಡ ಮೇಲೆ ಅದರ ಸಾಮಾಜಿಕ ಗ್ರಹಿಕೆಯಲ್ಲಿ ಉಂಟಾದ ಬದಲಾವಣೆಗಳನ್ನು ಭಿನ್ನ ರೀತಿಯಲ್ಲಿ ಹಲವರು ಗ್ರಹಿಸಿದ್ದಾರೆ. ಇಂದು ವೀರಶೈವ ದಲಿತ ಶಬ್ದದ ಬಗ್ಗೆ ಮಡಿ ಮನೋಭಾವ ರೂಪಿಸಿಕೊಂಡಿದೆ. ಬಸವೋತ್ತರ ಯುಗದ ಎಂಟು ಶತಮಾನಗಳಲ್ಲಿ ಲಿಂಗಾಯತರು ಸಾಕಷ್ಟು ಸಂಸ್ಕೃತಾನುಕರಣ ಹೊಂದಿದ್ದಾರೆ. ಗುಡಿ ಸಂಸ್ಕೃತಿ ಹಾಗೂ ಪುರೋಹಿತಶಾಹಿ ವಿರುದ್ಧ, ಜಾತಿಯ ನಿರಾಕರಣೆ, ವೃತ್ತಿ ಸಮಾನತೆ, ಅಂತರಜಾತಿಯ ವಿವಾಹ, ಮತಾಂತರ, ಸ್ತ್ರೀ ಸಮಾನತೆ, ಜನಪರ ಸರಳ ಮತಾಚರಣೆ, ಮಾತೃಭಾಷೆಗೆ ಪ್ರಾಮುಖ್ಯತೆ ಮುಂತಾದವುಗಳು ಬಸವಧರ್ಮದ ಹೆಗ್ಗಳಿಕೆ ಗಳಾಗಿವೆ. ವೀರಶೈವ ಮಠಗಳಿಗೆ ಜಂಗಮೇತರರು ಮಠಾಧಿಪತಿಗಳಾಗುವ ಅವಕಾಶ ಇದೆ. ಆದ್ದರಿಂದ ವ್ಯಕ್ತಿಯ ಮೇಲ್ಮುಖಚಲನೆಗೆ ಇಲ್ಲಿ ಅವಕಾಶ ಇದೆ ಎಂದು ಹೇಳಬಹುದು. ಆದರೆ ವೀರಶೈವ ಹಲವು ಆಂತರಿಕವಾದ ಗೊಂದಲಗಳನ್ನು ಸೃಷ್ಟಿಸಿಕೊಂಡಿದೆ. ಉದಾಹರಣೆ ಯಾಗಿ-ಲಿಂಗಾಯತರಲ್ಲಿಯೆ ವೀರಶೈವರು ಹಾಗೂ ಲಿಂಗಾಯತರು ಎಂಬ ಅನೌಪಚಾರಿಕ ವಿಂಗಡನೆ ಪ್ರಾರಂಭವಾಗಿದೆ. ವೀರಶೈವ ಎಂಬುದು ಹಿಂದೂಗಳ ಮುಖವಾಣಿಯಾದರೆ, ಲಿಂಗಾಯತವು ಬಸವಧರ್ಮಕ್ಕೆ ತನ್ನನ್ನು ಅರ್ಪಿಸಿಕೊಂಡಿದೆ ಎಂದು ಹೇಳಲಾಗುತ್ತದೆ.

ವಚನ ಸಾಹಿತ್ಯದ ಏಳುಬೀಳುಗಳನ್ನು ಅವಲೋಕಿಸಿದ ತಜ್ಞರು ಬಸವತತ್ವದ ಇತ್ತೀಚಿನ ಒಲವುಗಳನ್ನು ಭಿನ್ನ ರೀತಿಯಲ್ಲಿ ಗ್ರಹಿಸಿದ್ದಾರೆ. ಬಸವತತ್ವ ಎಂದರೆ ಅದು ಕೇವಲ ಮೇಲ್ವರ್ಗದವರ ವಚನಗಳನ್ನು ಮಾತ್ರ ಒಳಗೊಂಡಿಲ್ಲ, ಅಲ್ಲಿ ಹಲವು ದಲಿತ ವಚನಕಾರರ ವಿಶ್ಲೇಷಣೆಯು ಅಗತ್ಯವಾಗಿ ಬೇಕು. ಏಕೆಂದರೆ ದಲಿತರಿಗೆ ದನಿ ಕೊಟ್ಟ ಸಂದರ್ಭ ಇದಾಗಿದೆ. ಆದ್ದರಿಂದ ಬಸವತತ್ವ ಎಂಬುದು ರೂಪಗೊಂಡ ತತ್ವ ಅಲ್ಲ. ಇದು ರೂಪಗೊಳ್ಳುತ್ತಿರುವ ಸಿದ್ಧಾಂತ ಎಂದು ಕೆಲವರ ವಾದವಾಗಿದೆ. ‘ವಚನ ನಿರ್ವಚನ’, ‘ಮಹಾಚೈತ್ರ’,  ವಚನಗಳ ‘ಅಂಕಿತ’ ಬದಲಾವಣೆಗೆ ಉಂಟಾದ ವಿರೋಧ ಈ ಸಮಾಜದ ಜೀವಂತಿಕೆಯನ್ನು ಸೂಚಿಸುತ್ತದೆ ಎಂದು ಕೆಲವು ತಜ್ಞರ ವಾದವಾಗಿದೆ. ಬಂಡಾಯ ಸಾಹಿತಿಗಳು ‘ಎತ್ತಿನ ಮಿತ್’ ದಿಂದ ಬಸವಣ್ಣನ್ನು ಬಿಡುಗಡೆಗೊಳಿಸಿ ಹನ್ನೆರಡನೇ ಶತಮಾನವನ್ನು ವೈಚಾರಿಕ ನೆಲೆಗಟ್ಟಿನ ಹಿನ್ನೆಲೆ ಯಲ್ಲಿ ವಿವರಿಸುವ ಯತ್ನ ಮಾಡಿದ್ದಾರೆ. ಆದರೆ ವೀರಶೈವ ದಲಿತ ಮೂಲವನ್ನು ಮರೆತಿದೆ. ವೀರಶೈವದ ಹಲವು ಮೇಲಿನ ಉಪಜಾತಿಗಳು ದಲಿತ ವಿರೋಧಿಗಳಾಗಿವೆ. ಬಂಡಾಯದ ಮೂಲಕ ರೂಪಗೊಂಡ ಲಿಂಗಾಯತರು ಬ್ರಾಹ್ಮಣೀಕರಣಗೊಂಡು ಬಂಡಾಯ ಸ್ಥಗಿತಗೊಳ್ಳಲು ಕಾರಣರಾಗಿದ್ದಾರೆ. ಬೇಡ ಜಂಗಮ ಹಣೆಪಟ್ಟಿ ಬೇಡುವ ಲಿಂಗಾಯತ ಜಂಗಮರಿಗೆ ಮಠಗಳಿಗೆ ದಲಿತ ಉತ್ತರಾಧಿಕಾರಿ ಬೇಕಾಗಿಲ್ಲ.

ಮಹಿಳೆಯರ ಬಗ್ಗೆ ಹನ್ನೆರಡನೇ ಶತಮಾನ ವಿಭಿನ್ನ ದೃಷ್ಟಿಕೋನ ಹೊಂದಿದೆ. ಆಧುನಿಕ ಸ್ತ್ರೀವಾದಿ ನೆಲೆಯಲ್ಲಿ ಮಹಿಳೆಯರ ಗತಿ ಸ್ಥಿತಿಗಳನ್ನು ಅವಲೋಕಿಸುವುದಕ್ಕಿಂತ ಇದು ಸ್ತ್ರೀಯರಿಗೆ ನೀಡಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಅವಲೋಕನ ಮಾಡಬೇಕಾಗಿದೆ. ಮನುಪ್ರಣೀತ ಮೌಲ್ಯಗಳಿಗಿಂತ ಭಿನ್ನವಾದ ಹೊಸ ದೃಷ್ಟಿಕೋನ ಇಲ್ಲಿ ರೂಪಗೊಂಡಿತು. ಮಹಿಳೆ ಮಾಯೆ, ಚಂಚಲೆ, ಭೋಗದ ವಸ್ತು ಎಂಬ ನಂಬಿಕೆಗಳು ಮಾಯವಾಗಿ ಹೊಸ ಮೌಲ್ಯಗಳು ರೂಪಗೊಂಡವು. ‘ಹೆಣ್ಣು ಮಾಯೆ ಅಲ್ಲ’ ಮನದ ಮುಂದಣ ಆಸೆಯೆ ಮಾಯೆ ಎಂದು ಹೇಳಲಾಯಿತು. ಹೆಣ್ಣು ರಾಕ್ಷಸಿಯಲ್ಲ, ಪ್ರತ್ಯಕ್ಷ ಕಪಿಲ ಸಿದ್ಧ ಮಲ್ಲಿಕಾರ್ಜುನ ಎಂದು ಹೇಳಲಾಯಿತು. ‘ಸತಿ ಭಕ್ತೆಯಾದೊಡೆ ಹೊಲೆಗಂಜಲಾಗದು’ ಎಂದು ಅಲ್ಲಮಪ್ರಭು ಘೋಷಿಸಿದ. ‘ಒಳಗಿರುವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂದು ಲಿಂಗ ಭೇದವನ್ನು ನಿರಾಕರಿಸಲಾಯಿತು. ಅಕ್ಕಮಹಾದೇವಿ ಹಾಗೂ ಇತರ ಮಹಿಳೆಯರ ಒಂದು ಆಂದೋಲನ ಇಲ್ಲಿ ರೂಪಗೊಂಡಿತ್ತು. ಮಹಿಳೆ ಜಾತಿ, ಜನನ ಹಾಗೂ ರಜದ ಸೂತಕದಿಂದ ಮುಕ್ತವಾಗಿದ್ದಳು. ಒಟ್ಟಿಗೆ ಹನ್ನೆರಡನೆಯ ಶತಮಾನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿತು.

ಈಗ ಕರ್ನಾಟಕ ವಿಶ್ವವಿದ್ಯಾಲಯದ ಮಹಾವಿದ್ಯಾಲಯಗಳ ಸಮಾಜಶಾಸ್ತ್ರ ಪ್ರಾಧ್ಯಾಪಕರ ಸಂಘದ ಆಶ್ರಯದಲ್ಲಿ ಈ ವಿಚಾರ ಸಂಕಿರಣ ಜರಗುತ್ತಿದೆ. ಈ ಕಾರ್ಯಕ್ರಮ ರೂಪಿಸುವಲ್ಲಿ ಡಾ. ಶಿವಾನಂದ ಜಾಮದಾರ, ಡಾ.ಎ.ಇ. ಪುನೀತ, ಡಾ. ಶಂಕರ ಜೋಗನ್, ಗುರುಮೂರ್ತಿ, ಎನ್.ಹೆಚ್. ಹಿರೇಮಠ, ಎಸ್ಕೆ. ಕೊನೆಸಾಗರ ಹಾಗೂ ಸಂಘದ ಪದಾಧಿಕಾರಿ ಗಳು ವಿಶೇಷ ಆಸಕ್ತಿವಹಿಸಿ ಸಲಹೆ, ಸೂಚನೆ ಮಾರ್ಗದರ್ಶನ ನೀಡಿದ್ದಾರೆ. ಅವರ ಸಹಕಾರಕ್ಕೆ ಕೃತಜ್ಞ ನಾಗಿದ್ದೇನೆ.

ಬಸವಚಿಂತನೆ ಧರ್ಮ, ಕಾವ್ಯ, ಭಾಷೆ ಹಾಗೂ ಸಾಹಿತ್ಯದ ನೆಲೆಯಲ್ಲಿ ಅಪಾರವಾದ ಚರ್ಚೆಗೆ ಒಳಪಟ್ಟಿದೆ. ೧೨ನೇ ಶತಮಾನದ ಕರ್ನಾಟಕದ ಈ ಸಂಕ್ರಮಣ ಕಾಲದ ಬಗ್ಗೆ ಸಮಾಜಶಾಸ್ತ್ರೀಯ ಒಳನೋಟಗಳು ಕಡಿಮೆ. ಭಾರತದಲ್ಲಿ ಇತಿಹಾಸವನ್ನು ಪುರಾಣ ಮಾಡುವ ಹಾಗೂ ಪುರಾಣವನ್ನು ಇತಿಹಾಸ ಮಾಡುವ ಕ್ರಿಯೆ ಸಾಮಾನ್ಯ. ಇದಕ್ಕೆ ಬಸವಣ್ಣನವರ ಚರಿತ್ರೆ ಹೊರತಾದುದಲ್ಲ, ಇನ್ನೂ ಹೆಚ್ಚು ವಸ್ತುನಿಷ್ಠ ವಿಶ್ಲೇಷಣೆಗೆ ಈ ಸಂದರ್ಭ ಒಳಪಡ ಬೇಕಾಗಿದೆ. ಅಂತರಶಿಸ್ತೀಯ ಅಧ್ಯಯನ ಮಾದರಿಯಲ್ಲಿ ಗೋಷ್ಠಿಗಳನ್ನು ರೂಪಿಸುವ ಯತ್ನ ಮಾಡಿದ್ದೇವೆ. ಪ್ರಬಂಧ ಮಂಡಿಸುವವರಲ್ಲಿ ವಿವಿಧ ಮಾನವಿಕ ವಿಜ್ಞಾನಗಳಿಗೆ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸೇರಿದವರಿದ್ದಾರೆ. ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಒಳನೋಟ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಇತರ ಮಾನವಿಕ ವಿಜ್ಞಾನಗಳ ಪ್ರಾಥಮಿಕ ಪರಿಚಯ ಅಗತ್ಯವಾಗಿ ಇರಬೇಕು ಎಂಬುದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ ಶುದ್ಧ ಸಮಾಜಶಾಸ್ತ್ರದ ಮಡಿವಂತಿಕೆ ಯಿಂದ ದೂರ ಸರಿದಿದ್ದೇವೆ. ಈ ವಿಚಾರ ಸಂಕಿರಣದ ವಿನಂತಿ ಪತ್ರ ಕಳಿಸಿದ ಮೇಲೆ ಅನೇಕ ಆಸಕ್ತ ಗೆಳೆಯರು ವಿವಿಧ ವಿಷಯಗಳ ಮೇಲೆ ತಮ್ಮ ವಿಚಾರ ಮಂಡಿಸುವ ಅಭಿಪ್ರಾಯ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ಬೇರೆ ಕಡೆ ನಾನು ನೋಡಿದಂತೆ ಚರ್ಚೆಗೆ ಸಂಪೂರ್ಣ ಅವಕಾಶ ದೊರಕುವುದಿಲ್ಲ, ಹಾಗೂ ಸಮೂಹ ಚರ್ಚೆ ಇರುವುದರಿಂದ ಎಲ್ಲರೂ ಪಾಲ್ಗೊಳ್ಳು ವುದು ಕಠಿಣವಾಗುತ್ತದೆ. ಆದ್ದರಿಂದ ಕಾರ್ಯಕ್ರಮದ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ. ಪ್ರಬಂಧ ಮಂಡನೆಯ ನಂತರ ವಿಸ್ತೃತವಾದ ಚರ್ಚೆಗೆ ಅವಕಾಶ ಇದೆ.

ಬಾಗಲಕೋಟ ಜಿಲ್ಲೆ ಇತ್ತೀಚೆಗೆ ತೀವ್ರವಾದ ಬದಲಾವಣೆಗೆ ಒಳಪಟ್ಟಿದೆ. ಆಲಮಟ್ಟಿ ಜಲಾಶಯ, ಮುಳುಗಡೆಯ ಸಮಸ್ಯೆ, ಗ್ರಾನೈಟ್ ಉದ್ಯಮ, ತೋಟಗಾರಿಕೆ ಇಲ್ಲಿ ಹತ್ತು ಹಲವು ಬದಲಾವಣೆ ತಂದಿವೆ. ಇವೆಲ್ಲವುಗಳನ್ನು ದಾಖಲಿಸುವುದು ಸಮಾಜಶಾಸ್ತ್ರ ಹಾಗೂ ಇತರ ಶಾಸ್ತ್ರಗಳ ಹೊಣೆಯಾಗಬೇಕು. ಇಂತಹ ವಿಚಾರ ಸಂಕಿರಣಗಳಿಂದ ತಮಗೆ ಪ್ರೇರಣೆ ದೊರಕಲಿ ಎಂಬುದು ನಮ್ಮ ಹಲವು ಆಶಯಗಳಲ್ಲೊಂದು.

ಹಿಂದುತ್ವ ಹಲವು ಗೊಂದಲಗಳ ಬೀಡು. ಬಸವತತ್ವದ ಗೊಂದಲವನ್ನಂತೂ ಹೇಳುವುದೇ ಬೇಡ. ಈ ಎಲ್ಲ ಗೊಂದಲಗಳ ನಡುವೆ ಅರ್ಥಪೂರ್ಣ ಚರ್ಚೆ ಜರುಗಿ ಒಂದು ಬೆಳ್ಳಿ ರೇಖೆ ಹೊರಹೊಮ್ಮಬೇಕಾಗಿದೆ. ಇಲ್ಲಿ ಮಂಡಿಸುವ ಪ್ರಬಂಧಗಳು ಹಾಗೂ ಚರ್ಚೆ ಪುಸ್ತಕ ರೂಪದಲ್ಲಿ ಹೊರಬರುತ್ತಲಿದೆ. ಆದ್ದರಿಂದ ವಸ್ತುನಿಷ್ಠತೆ ಚರ್ಚೆಯ ಬುನಾದಿಯಾಗಬೇಕು. ಇದೊಂದು ಅತ್ಯುತ್ತಮ ಆಕರ ಗ್ರಂಥ ಆಗಬೇಕಾಗಿದೆ. ಭಾವಾವೇಶವನ್ನು ಬದಿಗಿಟ್ಟು ಚರ್ಚೆಯಲ್ಲಿ ಅರ್ಥ ಪೂರ್ಣವಾಗಿ ಪಾಲ್ಗೊಳ್ಳಬೇಕೆಂದು ಈ ವೇದಿಕೆಯ ಮೂಲಕ ವಿನಂತಿಸಿಕೊಳ್ಳುತ್ತೇನೆ. ಈ ವೇದಿಕೆಗೆ, ‘ಕೆ. ಈಶ್ವರನ್ ವೇದಿಕೆ’ ಎಂದು ಕರೆದಿದ್ದೇವೆ. ಅಂತರರಾಷ್ಟ್ರೀಯ ಖ್ಯಾತಿಯ ಈ ಸಮಾಜಶಾಸ್ತ್ರಜ್ಞ ಕರ್ನಾಟಕದವರು ಎಂಬುದು ಹೆಮ್ಮೆಯ ವಿಷಯ. ಬಸವಧರ್ಮವನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಮ್ಮ ಖರ್ಚು ವೆಚ್ಚದ ಲೆಕ್ಕ ಮುಗಿದ ಮೇಲೆ ಕೆ. ಈಶ್ವರನ್ ಹೆಸರಿನಿಂದ ಒಂದು ದತ್ತಿ ನಿಧಿ ಸ್ಥಾಪಿಸುವ ವಿಚಾರವನ್ನು ಸಂಘ ಹೊಂದಿದೆ.

ಈ ವಿಚಾರ ಸಂಕಿರಣಕ್ಕೆ ಹಲವು ಸಂಸ್ಥೆಗಳು ಉದಾರ ನೆರವು ನೀಡಿ ಸಹಕರಿಸಿವೆ. ಅವರಿಗೆ ಕೃತಜ್ಞರಾಗಿದ್ದೇವೆ.

ಈ ವಿಚಾರಣ ಸಂಕಿರಣ ಏಕೆ ಅಂದರೆ ಅದಕ್ಕೆ ಹತ್ತು ಹಲವು ಕಾರಣಗಳನ್ನು ಕೊಡಬಹುದು.  ಕೆಲವು ವರ್ಷಗಳ ಹಿಂದೆ ಕೂಡಲಸಂಗಮ ಕ್ಷೇತ್ರ ನೋಡಿದವರಿಗೆ ಈಗ ಇದು ಗುರುತು ಸಿಗಲಾರದಷ್ಟು ಬದಲಾವಣೆ ಹೊಂದಿದೆ. ಈ ಕ್ಷೇತ್ರ ಕೇವಲ ತೀರ್ಥಯಾತ್ರೆ ಕ್ಷೇತ್ರವಾಗದೆ ಬೌದ್ದಿಕ ವಾಗ್ವಾದಗಳು ಇಲ್ಲಿ ಜರುಗಬೇಕೆಂಬುದು ಈ ಕ್ಷೇತ್ರ ರೂಪಗೊಳಿಸಿದ ಡಾ. ಶಿವಾನಂದ ಜಾಮದಾರ ಅವರ ಹಲವು ಕನಸುಗಳಲ್ಲಿ ಒಂದಾಗಿದೆ. ನಿಮ್ಮ ಎರಡು ದಿನದ ಇಲ್ಲಿಯ ವಾಸ್ತವ್ಯ ಚೈತನ್ಯ ಹಾಗೂ ಸಂತೋಷದಿಂದ ಕೂಡಿರಲಿ. ಅರ್ಥಪೂರ್ಣವಾಗಿ ಎರಡು ದಿನ ನಾವೆಲ್ಲ ಇಲ್ಲಿ ಕಳೆಯಬೇಕಾಗಿದೆ. ಡಾ. ಶಿವಾನಂದ ಜಾಮದಾರ ಒದಗಿಸಿದ ಒಂದು ‘ಅರ್ಥಕ್ಕೆ’ ಇನ್ನೊಂದು ಅರ್ಥವನ್ನು ಅವರಿಗೆ ನೀಡಬೇಕಾಗಿದೆ. ಆ ಹೊಣೆಯನ್ನು ನಾವು ನೀವೆಲ್ಲ ನಿಭಾಯಿಸೋಣ. ಮತ್ತೊಮ್ಮೆ ತಮ್ಮೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ.

* * *

ಈ ಎರಡು ದಿನ ನಡೆದ ವಿಚಾರ ಸಂಕಿರಣದಲ್ಲಿ ಪ್ರಾಜ್ಞರು ಹಲವು  ವಿಷಯಗಳ ಮೇಲೆ ಸಂಪ್ರಬಂಧ ಮಂಡಿಸಿದ್ದಾರೆ. ಅವರ ವಿಚಾರ ಸರಣಿ ಹೊಸ ನೋಟವೊಂದನ್ನು ಓದಿಗೆ ನೀಡಬಹುದೆಂಬ ಆಶಯ ಇದೆ.

ಡಾ. ಚಂದ್ರಶೇಖರ ದಾಮ್ಲೆ ಹಾಗೂ  ಡಾ.ಎ.ಜಿ. ಮುಡಬಿದ್ರಿ ‘ಬಸವತತ್ವ ಒಂದು ಪ್ರತಿಭಟನಾ ಚಳುವಳಿಯಾಗಿ’ ಎಂಬ ವಿಷಯದ ಬಗ್ಗೆ ವಿಭಿನ್ನ ನೆಲೆಗಳಲ್ಲಿ ಪ್ರಬಂಧ ಮಂಡಿಸಿದರು.

ಕರ್ನಾಟಕದ ಸಾಮಾಜಿಕ ಹಿನ್ನೆಲೆಯನ್ನು ವಿವರಿಸುತ್ತ ಪ್ರಭುತ್ವ, ಬುದ್ದಿಬಲ ಒಂದೆಡೆ ಕೂಡಿ ಸ್ಥಗಿತ ಸಮಾಜದ ರಚನೆ ಹೇಗೆ ಉಂಟಾಯಿತು ಎಂಬುದನ್ನು ವಿವರಿಸುತ್ತ, ಸ್ಥಾವರವಾದ ಸಮಾಜ ಜಂಗಮವಾಗಿ ರೂಪಾಂತರ ಹೊಂದಿದ ಬಗೆಯನ್ನು ದಾಮ್ಲೆಯವರ ಪ್ರಬಂಧ ವರ್ಣಿಸುತ್ತದೆ. ದಂಗೆ, ಚಳುವಳಿ, ಕ್ರಾಂತಿ ಮುಂತಾದವುಗಳ ಅರ್ಥ ವಿವರಿಸುತ್ತ ಬಸವಯುಗದ ಸಂದರ್ಭವನ್ನು ಲೇಖಕರು ಚಳುವಳಿ ಎಂದೆ ಗುರುತಿಸಿದ್ದಾರೆ. ಬಸವಣ್ಣ ಬ್ರಹ್ಮತತ್ವವನ್ನು ವಿರೋಧಿಸದೆ, ಹುಸಿ ಬ್ರಾಹ್ಮಣ್ಯದ ಮಹಾವಿರೋಧಿಯಾಗಿದ್ದ. ಪ್ರಭುತ್ವದ ವಿರೋಧಿಯಾದ ಬಸವಣ್ಣ ‘ಭಕ್ತರ ಮನೆಯ ತೊತ್ತಾಗಿರಲು ಶರಣರ ಪಾದಕ್ಕಿಂತ ಕೀಳಾಗಿರಲು’ ಬಯಸಿದ. ಅಧಿಕಾರದ ದುರುಪಯೋಗ ಮಾಡಿಕೊಳ್ಳದ ಬಸವಣ್ಣ, ಹಿಂಸೆ ಯನ್ನು ಎಂದೆಂದೂ ಸಹಿಸಲಿಲ್ಲ. ಜಾತಿಯನ್ನು ವಿರೋಧಿಸುತ್ತ ‘ಕೊಲ್ಲುವವನೆ ಮಾದಿಗ, ಹೊಲಸು ತಿಂಬುವವನೆ ಹೊಲೆಯ’ ಎಂದು ಸಾರಲಾಯಿತು. ಲಿಂಗಾಯತದಲ್ಲಿ ಹೊಲೆ ಇಲ್ಲ. ಲಿಂಗಭಕ್ತರೆಲ್ಲರೂ ಕುಲಜರು. ದಾಸಿ ಅಥವಾ ವೇಶ್ಯಾ ಪುತ್ರನಾದರೂ ದೀಕ್ಷೆಯಾದರೆ ಅವನೆ ಶಿವನ ಸಮಾನನಾಗುತ್ತಾನೆ. ಹೊಲೆತನ ವೃತ್ತಿಗಳಲ್ಲಿ ಇಲ್ಲ, ಮನಸ್ಸಿನಲ್ಲಿದ್ದರೂ ಕೂಡ ಅದು ಹೊಲೆತನ. ಆದ್ದರಿಂದಲೆ ಬಸವಣ್ಣ ಅಂತರಂಗ ಶುದ್ದಿ, ಬಹಿರಂಗ ಶುದ್ದಿಗಾಗಿ ಹೋರಾಟ ಮಾಡಿದ.

ತಮ್ಮದಲ್ಲದ ತಪ್ಪಿಗೆ ಹೆಣ್ಣಾಗಿ ಹುಟ್ಟಿದವರನ್ನು ಹನ್ನೆರಡನೇ ಶತಮಾನ ಅವರನ್ನು ಯಾತನೆಯಿಂದ ಬಿಡುಗಡೆ ಮಾಡಲು ಹವಣಿಸಿತು. ಮಹಿಳೆಯರಿಗೂ ಇಷ್ಟಲಿಂಗವನ್ನು ನೀಡಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಯಿತು. ಅನುಭವ ಮಂಟಪ ಇದಕ್ಕೆ ಸೂಕ್ತ ಉದಾಹರಣೆಯಾಗಿದೆ.

ಬಹು ದೇವತಾರಾಧನೆಯನ್ನು ಹನ್ನೆರಡನೇ ಶತಮಾದಲ್ಲಿ ವಿರೋಧಿಸಲಾಯಿತು. ‘ಬತ್ತುವ ಜಲವ, ಒಣಗುವ ಮರವ ಮೆಚ್ಚಿದ’ವರನ್ನು ಪ್ರಶ್ನಿಸುತ್ತಲೆ ಸಂಕೀರ್ಣವಾಗಿದ್ದ ಬದುಕಿನ ಅರ್ಥವನ್ನು ಸರಳ ರೀತಿಯಲ್ಲಿ ನಿರೂಪಿಸಲಾಯಿತು. ದುರ್ಬಲ ಮನಸ್ಸು ಮೂಢನಂಬಿಕೆಗಳ ಬೀಡಾಗಿರುತ್ತದೆ. ಹನ್ನೆರಡನೇ ಶತಮಾನದಲ್ಲಿ ಧರ್ಮದ ಹೆಸರಿನಲ್ಲಿ ಆಚರಿಸಲಾಗುತ್ತಿದ್ದ ಮೂಢನಂಬಿಕೆಗಳನ್ನು ನಿರಾಕರಿಸಲಾಯಿತು. ವ್ಯಷ್ಟಿ ಸಮಷ್ಟಿಯ ಸಂಬಂಧವನ್ನು ಆಧ್ಯಾತ್ಮಿಕವಾಗಿ ವಿವರಿಸಲಾಯಿತು. ‘ಆಚಾರವೆ ಸ್ವರ್ಗ’ ಎಂದು ಹೇಳುತ್ತಾ, ‘ಎಲವೋ’ ಎಂದರೆ ನರಕ ಎಂದು ಹೇಳಲಾಯಿತು. ಪರದೈವವನ್ನು ತಿರಸ್ಕರಿಸುತ್ತ ಇಹ ಪರಗಳನ್ನು ಒಂದೇ ಎಂದು ಘೋಷಿಸ ಲಾಯಿತು. ಕಾಯಕ ಮೇಲ್ಮೆಯನ್ನು ಘೋಷಿಸಿ ವೃತ್ತಿಯಲ್ಲಿ ಸಮಾನತೆ ತರಲು ಯತ್ನಿಸಲಾಯಿತು. ಇವೆಲ್ಲವುಗಳಿಗಿಂತ ಮುಖ್ಯವಾಗಿ ಜನರಾಡುವ ಕನ್ನಡ ಭಾಷೆಯಲ್ಲಿ ಧಾರ್ಮಿಕ ತತ್ವಗಳನ್ನು ಬೋಧಿಸಲಾಯಿತು.

ಭಾರತದಲ್ಲಿ ಇರುವ ಅಸಂಖ್ಯಾತ ಜಾತಿಗಳಲ್ಲಿ ವೀರಶೈವ ಒಂದು ಜಾತಿ ಎಂದು ಕರೆಯುವುದು ತಪ್ಪಾಗಬಹುದು. ಇಲ್ಲಿ ಕಲ್ಯಾಣ ಕ್ರಾಂತಿಯ ಸೋಲು ಗೆಲುವುಗಳ ಚರ್ಚೆ ಯಾಗಬೇಕು.

ಪ್ರೊ. ಮುಡಬಿದ್ರಿಯವರು ಬಸವತತ್ವದ ಚಿಂತನೆಗೆ ಹೊಸ ವಿವರಣೆ ನೀಡಿದರು. ಇದು ಪ್ರಜಾಸತ್ತಾತ್ಮಕವಾದ ಮಾನವೀಯ ಮೌಲ್ಯಗಳನ್ನೊಳಗೊಂಡ ಧರ್ಮವಾಗಿದೆ ಎಂದು ಹಲವು ಉದಾಹರಣೆಗಳ ಹಿನ್ನೆಲೆಯಲ್ಲಿ ವಿವರಿಸಿದರು. ಯುರೋಪಿನಲ್ಲಿ ಜರುಗಿದ ಪ್ರೊಟೆಸ್ಟಂಟ್ ಚಳುವಳಿ ಕರ್ನಾಟಕದಲ್ಲಿ ಮೂರನೂರು ವರ್ಷ ಮೊದಲೆ ಜರುಗಿರುವುದನ್ನು ವಿವರಿಸಿದರು. ಎರಡೂ ಚಳುವಳಿಗಳ ನಡುವೆ ಇರುವ ಹಲವು ಹೋಲಿಕೆ ವ್ಯತ್ಯಾಸಗಳನ್ನು ವಿವರಿಸಿದರು. ಈ ಎಲ್ಲಾ ವಿಚಾರಗಳು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದವು.

ಕಾಯಕ, ದಾಸೋಹಗಳ ಸಂಬಂಧ ಲಿಂಗಾಯತ ಧರ್ಮದ ವಿಶೇಷತೆಯಾಗಿದೆ. ಶ್ರಮ ಸಂಸ್ಕೃತಿಗೆ ಇಲ್ಲಿ ಹೆಚ್ಚು ಪ್ರಾಧ್ಯಾನ್ಯತೆ ನೀಡಲಾಯಿತು. ಎಡಪಂಥೀಯರು ಇದನ್ನು ಕಾಯಕ ಜೀವಿಗಳ ಹೋರಾಟ ಎಂದೂ ಕರೆಯುತ್ತಾರೆ. ಅಂದರೆ ಒಂದು ರೀತಿಯಿಂದ ಈ ಹೋರಾಟ ಬಡವರಿಂದ ಬಡವರಿಗಾಗಿ, ಬಡತನದ ನಿವಾರಣೆಗಾಗಿ ನಡೆದ ಹೋರಾಟವಾಗಿತ್ತು. ಲಿಂಗ ಭೇದ ನಿರಾಕರಿಸಿ ಸಮಾಜದ ಎಲ್ಲ ವರ್ಗದ ಜನರಿಗೆ ಪ್ರಾಧಾನ್ಯತೆ ನೀಡಲಾಯಿತು. ಆಧ್ಯಾತ್ಮಿಕ ಚರ್ಚೆಯ ಅನುಭವ ಮಂಟಪ ಎಲ್ಲ ರೀತಿಯ ಅಭಿವ್ಯಕ್ತಿಗೆ ತಾಣವಾಗಿತ್ತು.

ಇಪ್ಪತ್ತನೆಯ ಶತಮಾನದ ಪ್ರಾರಂಭದಿಂದ ಲಿಂಗಾಯತ ಹೆಚ್ಚು ಆಧುನಿಕತೆ ಪಡೆಯ ತೊಡಗಿತು. ಸ್ವತಂತ್ರಪೂರ್ವ ಭಾರತದಲ್ಲಿ ಮೌನವಾಗಿದ್ದ ಲಿಂಗಾಯತ ಈಗ ಮಾತನಾಡ ತೊಡಗಿದೆ. ಹಿರೇಮಲ್ಲೂರ ಈಶ್ವರನ್ ಹೇಳಿದಂತೆ ವೀರಶೈವ ಒಂದು ಸಮಷ್ಟಿ ಸಮುದಾಯ ವಾಗಿದೆ.

ಈ ಮೊದಲನೆ ಗೋಷ್ಠಿಯ ಪ್ರಬಂಧಗಳು ಚರ್ಚೆಗೆ ಹಲವು ಪ್ರೇರಣೆ ನೀಡಿದವು. ವಿಶೇಷವಾಗಿ ಕಲ್ಯಾಣ ಕ್ರಾಂತಿಯ ಸೋಲು ಗೆಲವುಗಳು, ಪ್ರೊಟೆಸ್ಟಂಟ್ ಮತ ಹಾಗೂ ವೀರಶೈವ ಚಳುವಳಿಗಳ ಹೋಲಿಕೆ ವೀರಶೈವರಿಗೆ ಪ್ರೊಟೆಸ್ಟಂಟ್ ಎಥಿಕ್ ‘ಕಾಯಕವೇ ಕೈಲಾಸ’ ಏಕೆ  ಸಾಧ್ಯವಾಗಲಿಲ್ಲ? ಮೌನವಾಗಿದ್ದ ಲಿಂಗಾಯತ ಸ್ವತಂತ್ರ ಭಾರತದಲ್ಲಿ ಮಾತನಾಡುವ ರೀತಿಗಳು ಚರ್ಚೆಗೆ ಗ್ರಾಸವಾಗಿದ್ದವು.

ವೀರಶೈವರ ಧಾರ್ಮಿಕ ಕೇಂದ್ರಗಳಾದ ಮಠಗಳು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿಯೂ ಮುಖ್ಯ ಪಾತ್ರವಹಿಸಿವೆ. ಇವುಗಳ ವಿವಿಧ ಆಯಾಮಗಳನ್ನು ಡಾ. ಎಂ.ಪಿ. ಶಂಕರಪ್ಪ ವಿವರಿಸುತ್ತ ಗಂಭೀರ ಚರ್ಚೆಗೆ ಅನುವು ಮಾಡಿದರು.

ಮಠಗಳ ಉಗಮ ಚರಿತ್ರೆಯಲ್ಲಿ ಅಡಗಿ ಹೋದ ಘಟನೆ. ಸಮಾಜೋ-ಧಾರ್ಮಿಕ ಅಗತ್ಯಗಳಿಗೆ ಅನುಗುಣವಾಗಿ ಮಠಗಳ ವ್ಯವಸ್ಥೆ ಹಿಂದೂ ಪರಂಪರೆಯಲ್ಲಿ ರೂಪಗೊಂಡಿರು ವದನ್ನು ಕೆಲವರು ಗುರುತಿಸಿದ್ದಾರೆ. ಬೌದ್ಧ ಹಾಗೂ ಹಿಂದೂ ಧರ್ಮದ ಘರ್ಷಣೆಯಲ್ಲಿ ಮಠಗಳ ವ್ಯವಸ್ಥೆ ಉಗಮವಾಯಿತು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಹಿಂದೂ ಧರ್ಮದಲ್ಲಿ ಮಠಗಳನ್ನು ಆದಿಶಂಕರಾಚಾರ್ಯರು ಹುಟ್ಟು ಹಾಕಿದರು ಎಂದು ಹೇಳಲಾ ಗುತ್ತದೆ.

ಹಿಂದೂ ಧರ್ಮದ ಗೊಂದಲ ಏನೇ ಇರಲಿ. ಮಠಗಳ ಕಾರ್ಯಾಚರಣೆಯ ಬಗ್ಗೆ ವೀರಶೈವರಲ್ಲಿ ಹಲವು ಸಂಕೀರ್ಣ ಸಮಸ್ಯೆಗಳಿವೆ. ಮಠಗಳು ಶಿಕ್ಷಣ ಹಾಗೂ ಸೈನಿಕರಿಗೆ ತರಬೇತಿ ನೀಡಿದ ಉದಾಹರಣೆಗಳೂ ಇವೆ. ಹಾಗೂ ಹಲವಾರು  ಮಠಗಳು ರಾಜಾಶ್ರಯ ವನ್ನು ಸಾಂದರ್ಭಿಕವಾಗಿ ಪಡೆದ ನಿದರ್ಶನಗಳಿವೆ. ಆದರೆ ಈ ಅಂಶ ಪ್ರಾಚೀನ ಶೈವ ಮಠಗಳಿಗೆ ಹೆಚ್ಚು ಅನ್ವಯವಾಗಬಹುದೆಂದು ಹೇಳಬಹುದು.

ವೀರಶೈವರಲ್ಲಿರುವ ಮಠಗಳನ್ನು ವಿಶಾಲವಾಗಿ ಎರಡು ವಿಭಾಗದಲ್ಲಿ ವಿಂಗಡಿಸಬಹುದು. ವೀರಶೈವರಲ್ಲಿ ಮಠಗಳು ಹೆಚ್ಚು ಸಹಜ ಹಾಗೂ ಸಾರ್ವತ್ರಿಕವಾಗಿವೆ. ಕೊನೆಯ ಪಕ್ಷ ಊರಿಗೆ ಒಂದು ‘ಹಿರೇಮಠಸ್ಥ’ರ ಮನೆ ಇರಬೇಕು ಎಂಬುದು ಒಂದು ನಂಬಿಕೆ ಆಗಿದೆ. ಐತಿಹಾಸಿಕವಾಗಿ ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ ಮಠಗಳು ವಿಭಿನ್ನ ಕಾರ್ಯ ನಿರ್ವಹಿಸುತ್ತ ಬಂದಿವೆ. ಪಂಚಪೀಠಗಳ ಮಠಗಳು ಪೌರಾಣಿಕ ಹಿನ್ನೆಲೆಯಲ್ಲಿ ತಮ್ಮ ಹುಟ್ಟನ್ನು ಸಾಬೀತು ಮಾಡುವ ಯತ್ನ ಮಾಡುತ್ತಿವೆ. ಆದರೆ ವಿರಕ್ತ ಮಠಗಳು ಕಲ್ಯಾಣಕ್ರಾಂತಿ ಹಾಗೂ ಅನುಭಾವಿ ಅಲ್ಲಮನ  ಹಿನ್ನೆಲೆಯಲ್ಲಿ ತಮ್ಮ ಮೂಲವನ್ನು ಗುರುತಿಸಿಕೊಳ್ಳುತ್ತವೆ. ಎರಡೂ ಪ್ರಕಾರದ ಮಠಗಳಲ್ಲಿ ಹಲವು ವಿಭಜನೆಗಳು ಇವೆ. ಪಂಚಪೀಠದ ಮಠಗಳು ಕ್ಯಾಥೋಲಿಕ್ ಪರಂಪರೆಗೆ ಸೇರಿದರೆ, ವಿರಕ್ತ ಮಠಗಳು ಪ್ರೊಟೆಸ್ಟಂಟ್ ಧರ್ಮವನ್ನು ಹೋಲ ಬಹುದು. ಈ ಹೋಲಿಕೆ ಮೇಲು ನೋಟಕ್ಕೆ ಸರಿ ಎನಿಸಲಿಕ್ಕಿಲ್ಲ. ಏಕೆಂದರೆ ಕಲ್ಯಾಣ ಕ್ರಾಂತಿ ಪ್ರೊಟೆಸ್ಟಂಟ್ ಕ್ರಾಂತಿಗಿಂತ ಮೊದಲೇ ಜರುಗಿದೆ.

ಧರ್ಮ ಬೋಧನೆ, ಜ್ಞಾನ ಪ್ರಸಾರ, ದಾಸೋಹ ಹಾಗೂ ನ್ಯಾಯದಾನ ಮುಂತಾದವುಗಳು ಮಠಗಳ ಸಂಪ್ರದಾಯಕ ಕರ್ತವ್ಯಗಳಾಗಿದ್ದವು. ಪಂಚಪೀಠದ ಮಠಗಳು ತಮ್ಮ ಶಾಖಾ ಮಠದ ಮೂಲಕ ವೀರಶೈವರಲ್ಲಿ ಧಾರ್ಮಿಕ ಕ್ರಿಯಾ ವಿಧಿ ಜರುಗಿಸುತ್ತಿದ್ದವು. ಇವು ಸಮಾಜ ದಲ್ಲಿ ಶಿಸ್ತು ಕಾಯ್ದುಕೊಳ್ಳುವ ಹೊಣೆಯನ್ನು ನಿರ್ವಹಿಸುತ್ತಿದ್ದವು. ಆದರೆ ವಿರಕ್ತ ಮಠಗಳು ಅಲೌಕಿಕ ಬದುಕಿನ ಬಗ್ಗೆ ಹೆಚ್ಚು ವಾಲಿದ  ನಿದರ್ಶನ ಇದೆ. ಮಠಗಳ ರಚನೆ, ಸಂಘಟನೆ, ನಂಬಿಕೆ ಹಾಗೂ ನಿವೇದಿತ ನಡುವಳಿಕೆಯಲ್ಲಿ ಹೊಸತನ ತರುವುದು ಆಧುನೀಕರಣದ ಸೂಚನೆಯಾಗಬಹುದು. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿರಕ್ತ ಮಠಗಳು ಜನರ ಬೇಡಿಕೆಗೆ ಸ್ಪಂದಿಸಿವೆ. ಒಂದು ರೀತಿಯಿಂದ ವೀರಶೈವರನ್ನು ಆಧುನೀಕರಣಗೊಳಿಸುವಲ್ಲಿ ವಿರಕ್ತಮಠಗಳ ಸಿಂಹ ಪಾಲು ಇದೆ.

‘ಬಸವತತ್ವ’ದ ತಲೆ ಬರಹವನ್ನೆ ಪ್ರಶ್ನಿಸುತ್ತ ಟಿ.ಆರ್.ಚಂದ್ರಶೇಖರ ಹಾಗೂ ರಹಮತ್ ತರೀಕೆರೆ ಅವರು ಇತರ ತಳವರ್ಗದ ವಚನಕಾರರ ಅಧ್ಯಯನದ ಅಗತ್ಯ ಪ್ರತಿಪಾದಿಸಿದರು.

ರಹಮತ್ ತರೀಕೆರೆಯವರು ಬಸವಣ್ಣನ ವಿಚಾರಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದಾರೆ. ಬಸವನ ವಿಚಾರಗಳು ಬಹುರೂಪಿಯಾಗಿವೆ. ಇದರಿಂದಾಗಿ ವಚನ ಸಾಹಿತ್ಯದಲ್ಲಿ ಹಲವು ವೈರುಧ್ಯಗಳು ಕಾಣಿಸಿಕೊಂಡಿವೆ. ಬಸವಣ್ಣ ಹಾಗೂ ಇತರ ಚಳುವಳಿಗಾರರು ತಪ್ಪು ಮಾಡುತ್ತ, ಕಲಿಯುತ್ತ ರೂಪಗೊಂಡ ಜನ. ಈ ಚಳುವಳಿಯ ಉಪ ಉತ್ಪಾದನೆ ವಚನಗಳಾಗಿವೆ. ಬಸವಣ್ಣ ಬಹುಶಃ ಎಲ್ಲವೂ ಆಗಿದ್ದ. ಆತ ಸಾಹಿತಿ, ಚಳುವಳಿಗಾರ, ಸುಧಾರಕ, ಬಂಡಾಯಗಾರ ಇನ್ನೂ ಏನೇನೊ ಆಗಿ ಕಂಡಿದ್ದಾನೆ.

ಬಸವತತ್ವ ಎಂದರೆ ಆತನ ಬಹುರೂಪಿ ವಿಚಾರಗಳನ್ನು ಕಟ್ಟಿ ಹಾಕಿದಂತಾಗಬಹುದು. ಬಸವ ಎಂದರೆ ಅವೈದಿಕತ್ವ, ಜಾತಿ, ಅಸ್ಪೃಶ್ಯತೆಯ ವಿರುದ್ಧ ಹೋರಾಟ. ಇತಿಹಾಸವನ್ನು ವರ್ತಮಾನಕ್ಕೆ ಸಿದ್ಧಗೊಳಿಸುವಲ್ಲಿ ವಚನಗಳ ಮೇಲೆ ಇದೆ. ಈ ಹೋರಾಟದಲ್ಲಿ ಮಾರ್ಕ್ಸ್, ಲೆನಿನ್‌ರಂತೆ ಒಂದು ಗುರಿ ಹಾಗೂ ಗುರಿ ತಲುಪಲು ಪೂರಕ ಮಾರ್ಗಗಳನ್ನು ಅನ್ವೇಷಿಸಲಿಲ್ಲ.

ಸೂತ್ರಬದ್ಧವಾಗಿ ಬಸವತತ್ವ ಎಂದರೆ ಅಧಿಕಾರಸ್ಥ ಶಕ್ತಿಗಳ ವಿರುದ್ಧ ಅಧಿಕಾರರಹಿತರ ಪರವಾಗಿ ಮಾಡಿದ ಚಿಂತನೆ ಮತ್ತು ಹೋರಾಟ. ಇವುಗಳ ಸೋಲು ಗೆಲವುಗಳು ಏನೇ ಇರಲಿ, ಇಂದಿಗೂ ಇದು ಚರ್ಚೆಯ ವಿಷಯವಾಗಿರುವುದು ಇದರ ಜೀವಂತಿಕೆಯ ಲಕ್ಷಣ ವಾಗಿದೆ. ಒಂದು ಕಾಲ ಘಟ್ಟದಲ್ಲಿ ರೂಪಿತ ಮೌಲ್ಯಗಳು ಮರು ವಿಮರ್ಶೆಗೆ ಒಳಪಡುವ ದೆಂದರೆ ಅದನ್ನು ‘ಅಪಮಾನ’ ಎಂದು ಭಾವಿಸಕೂಡದು.

ಬಸವತತ್ವದ ಇತ್ತೀಚಿನ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಸಾಹಿತ್ಯಿಕ ಒಲವುಗಳನ್ನು ರಹಮತ್ ತರೀಕೆರೆಯವರು ವರ್ತಮಾನದ ಚಾಳೀಸಿನಿಂದ ನೋಡಲು ಪ್ರಯತ್ನಿಸಿದ್ದಾರೆ. ಬಸವತತ್ವಕ್ಕೆ ಎಲ್ಲ ಕಾಲಕ್ಕೂ, ಎಲ್ಲ ತಲೆಮಾರಿಗೂ ಕಾಡುವ ಚೈತನ್ಯ ಇದೆ. ‘ಧರ್ಮಕಾರಣ’, ‘ಮಹಾಚೈತ್ರ’ದಂತಹ ಕೃತಿಗಳಿಗೆ ಪ್ರಜ್ಞಾವಂತರು ಬೆಂಬಲವಾಗಿ ನಿಂತಿದ್ದು, ವಚನಾಂಕಿತಗಳನ್ನು ಬದಲಿಸಿದಾಗ ವಿರೋಧಿಸಿದ್ದು ಈ ತತ್ವದ ಜೀವಂತಿಕೆಗೆ ಸಾಕ್ಷಿಯಾಗಿದೆ.

ಟಿ.ಆರ್. ಚಂದ್ರಶೇಖರವರು ರಾಜಕೀಯ ಹಾಗೂ ಸಾಂಸ್ಕೃತಿಕ ಕಾರಣಗಳಿಂದ ಬಸವಣ್ಣ ‘ದೈತ್ಯ’ ಸ್ಥಾನ ಹೊಂದಿದ್ದ. ಆದ್ದರಿಂದಲೇ ವಚನ ಸಾಹಿತ್ಯದಲ್ಲಿ ಆತನಿಗೆ ಅಗ್ರ ಪಟ್ಟ ದೊರೆತಿದೆ. ಬಸವತತ್ವವನ್ನು ಸಮೂಹವಾದಿ ನೆಲೆಯಲ್ಲಿ ಗುರುತಿಸುವ ಯತ್ನ ಇತ್ತೀಚಿನದು. ವಚನ ವಿಶ್ಲೇಷಣೆ ‘ಬಸವ’ನಿಂದ ಪ್ರಾರಂಭವಾಗಿ ‘ಅಕ್ಕ’ನಿಗೆ ನಿಲ್ಲುವುದು ತಪ್ಪು ಮಾಡಿದಂತಾಗುತ್ತದೆ ಎಂದು ವಾದಿಸಿದ್ದಾರೆ.

ಪ್ರಬಂಧ ಮಂಡನೆಕಾರರು ಹಲವು ದೃಷ್ಟಿಕೋನದಿಂದ ಲೇಖನದ ಉದ್ದೇಶಗಳನ್ನು ಗುರುತಿಸಿದ್ದಾರೆ. ಮೊದಲನೆಯದಾಗಿ ಸಾಮುದಾಯಿಕವಾದ ವಚನ ಸಂಸ್ಕೃತಿಯನ್ನು ‘ಬಸವತತ್ವ’ ಎಂದು ಹೇಳಿ ಅದರ ಅರ್ಥ ವ್ಯಾಪ್ತಿಯನ್ನು ಸಂಕುಚಿತಗೊಳಿಸಬಾರದು. ವಚನ ಸಂಸ್ಕೃತಿಯ ಒಂದು ಭಾಗ ಬಸವಣ್ಣನಾಗಿದ್ದಾನೆ. ಆದ್ದರಿಂದ ವಚನ ಸಂಸ್ಕೃತಿಯನ್ನು ವ್ಯಕ್ತಿ, ಪ್ರದೇಶ ಅಥವಾ ಸಮುದಾಯಕ್ಕೆ ಸೀಮಿತಗೊಳಿಸಕೂಡದು.

ಎರಡನೆಯದಾಗಿ ವಚನಕಾರರಲ್ಲಿ ಕೇಂದ್ರ ವ್ಯಕ್ತಿಗಳು ಅಂಚಿನಲ್ಲಿರುವವರು ಎಂಬ ವಿಂಗಡನೆ ಅವೈಜ್ಞಾನಿಕವಾದುದು. ವಚನಕಾರರಲ್ಲಿ ‘ಶಿಷ್ಟ’, ‘ಪರಿಶಿಷ್ಟ’ ಎಂಬ ವಿಂಗಡನೆ ಸಲ್ಲದು. ಅಂಚಿನಲ್ಲಿರುವ ವಚನಕಾರರು ಪರಿಶಿಷ್ಟರು, ಹಾಗೂ ಆ ವರ್ಗದ ವಿಶ್ಲೇಷಣೆಗೆ ಗಮನಹರಿಸಬೇಕಾಗಿದೆ. ಬಂಧನವಾದಿ ಸಿದ್ಧಾಂತದ ತಿರಸ್ಕಾರವಾಗಬೇಕಾಗಿದೆ. ವಚನ ಸಂಸ್ಕೃತಿಯನ್ನು ಒಂದು ಸಮುದಾಯದ ಸಿದ್ಧಾಂತದ ಚಾಳಿಸಿನಿಂದ ನೋಡುವುದು ತಪ್ಪ ಬೇಕಾಗಿದೆ. ವೀರಶೈವ ಪ್ರಣಾಳಿಕೆಗಳಾದ ಷಟ್ಸ್ಥಲ, ಪಂಚಾಚಾರ, ಲಿಂಗಧಾರಣೆ ಮುಂತಾದವು ಗಳಿಗೆ ವೀರಶೈವವನ್ನು ಕಟ್ಟಿ ಹಾಕಿದರೆ ವಚನಗಳ ಕಾವ್ಯದ ಹಾಗೂ ಮಾನವೀಯ ಗುಣಗಳನ್ನು ನಿರಾಕರಿಸದಂತಾಗುತ್ತದೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, …..’ ಎಂಬ ನುಡಿಗಟ್ಟುಗಳಿಗೆ ಯಾವ ಧರ್ಮದ ಕವಚವು ಬೇಕಿಲ್ಲ. ಇಡೀ ವಚನ ಸಾಹಿತ್ಯ ಇಂತಹ ಸಾರ್ವತ್ರಿಕ ಮೌಲ್ಯಗಳನ್ನು ಒಳಗೊಂಡಿದೆ. ವೈದಿಕ ಹಿನ್ನೆಲೆಯಿಂದ ವಚನಗಳನ್ನು ಬಿಡುಗಡೆ ಮಾಡಬೇಕಾಗಿದೆ. ವಚನಗಳು ಲಿಂಗ, ವರ್ಗ, ಜಾತಿಯ ಎಲ್ಲೆ ಮೀರಿ ಅರ್ಥ ಪಡೆದಿವೆ ಎಂದು ವಾದಿಸಿದರು.

ಮೂರನೆಯದಾಗಿ ಲಿಂಗಸಂಬಂಧಿ ಅಧ್ಯಯನಗಳು ಜರುಗಬೇಕಾಗಿದೆ. ಶರಣರ ಕಾಯಕದ ವಿಶ್ಲೇಷಣೆ ಇದೆ. ಶರಣೆಯರ ವಿವರಣೆ ಕಡಿಮೆ. “ಭಕ್ತಿ ಇಲ್ಲದ ಕಾಯಕ, ಕಾಯಕವಿರಲಾರದ ಭಕ್ತಿ” ಲಕ್ಕಮ್ಮನಿಗೆ ಅನೂರ್ಜಿತ. ವಚನ ಸಂಸ್ಕೃತಿಯಲ್ಲಿ ಮಹಿಳೆ ಸಾಮಾಜಿಕ ಸಂಗತಿಯಾಗಿದ್ದಾಳೆಯೆ ಹೊರತು ಜೈವಿಕ ಘಟಕ ಮಾತ್ರವಲ್ಲ.

ನಾಲ್ಕನೆಯದಾಗಿ ಪರಿಶಿಷ್ಟವಾದಿ ನಿಲುವು ಬೇಕಾಗಿದೆ. ಪರಿಶಿಷ್ಟರು ತಮ್ಮತನ ಕಳೆದು ಕೊಳ್ಳದೆ ಉನ್ನತ ಸ್ಥಾನ ಆಧ್ಯಾತ್ಮದಲ್ಲಿ ಪಡೆದರು. ಕೊನೆಯದಾಗಿ ವಚನ ಸಂಸ್ಕೃತಿಯ ಸಾಮಾಜಿಕ ಹಾಗೂ ರಾಜಕೀಯ ಮುಖಗಳ ಚರ್ಚೆ ಆಗಬೇಕಾಗಿದೆ. ಪ್ರಭುತ್ವ ಹಾಗೂ ಪುರೋಹಿತಶಾಹಿಯ ವಿರೋಧ, ಜನ ಭಾಷೆಯ ಬಳಕೆ, ವಚನ ಸಂಸ್ಕೃತಿಗೆ ಸಾಹಿತ್ಯದ ಮೆರಗು, ಮುಂತಾದವುಗಳು ಚರ್ಚೆಗೆ ಒಳಪಡಬೇಕು.

ಬಸವಣ್ಣ ಕೇವಲ ಮೇಲ್ಜಾತಿಗಳ ಬದುಕಿನ ಶೈಲಿ ಮಾತ್ರವಲ್ಲ, ತಳವರ್ಗದ ಜನರ ಚಿಂತನಾಶೈಲಿಯ ಸ್ವರೂಪದಲ್ಲಿ ಬದಲಾವಣೆ ತಂದ ಎಂದು ಡಾ. ಕಲ್ಲೋಳಿಕರ ಹಾಗೂ ಡಾ. ಜೋಗನ್‌ಶಂಕರ್ ಪ್ರತಿಪಾದಿಸಿದರು. ಈ ಪ್ರಬಂಧಗಳು ಹೆಚ್ಚು ಚರ್ಚೆಗೆ ಒಳಗಾಗಿ ದ್ದುದು ಇದರ ವಿಶೇಷತೆಯಾಗಿದೆ.

ಬಸವತತ್ವ ಕೇವಲ ಬಸವಣ್ಣನವರ ವಿಚಾರಧಾರೆಗಳು ಮಾತ್ರ ಅಲ್ಲ. ಅದು ಒಟ್ಟು ಚಳುವಳಿಯ ಚಿಂತನೆಯಾಗಿದೆ. ತಳವರ್ಗದ ಜನರಲ್ಲಿ ಆತ್ಮ ಸ್ಥೈರ್ಯ ತುಂಬಲು ‘….. ಆನು ಹಾರವನೆಂದೊಡೆ ಕೂಡಲಸಂಗ ನಗುವನಯ್ಯ,’ ಎಂದು ಹೇಳಿ ಕೆಳಜಾತಿಯ ಜನರಲ್ಲಿ ಆತ್ಮಸ್ಥೈರ್ಯ ತುಂಬಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ. ಜನನದಿಂದ ಉತ್ತಮಿಕೆ ಬರು ವುದಿಲ್ಲ ಎಂದು ಹೇಳುತ್ತಲೇ ಜನನದಿಂದಲೆ ಜಾತಿ ಹಾಗೂ ಸ್ಥಾನ ನಿರ್ಧಾರ ಆಗುವುದನ್ನು ಬಸವ ಚಳುವಳಿ ನಿರಾಕರಿಸಿತು. ತಳವರ್ಗದ ಜನ ಚಳುವಳಿಗೆ ಗಾಂಭೀರ್ಯ, ಧೀಮಂತಿಕೆ ತಂದರು.

ಅಲ್ಲಮನಿಂದ ಸೂಳೆ ಸಂಕವ್ವೆಯವರೆಗೆ ಕೆಳಜಾತಿಯವರು ಇದ್ದಾರೆ. ಇವರು ತಮ್ಮ ಜನನ ಸೂತಕದಿಂದ ಮುಕ್ತವಾಗಿ ಹೊಸ ದಿಗಂತ ಹುಡುಕುವ ಆಸೆ ಹೊಂದಿದ್ದಾರೆ. ಪ್ರಬಂಧಕಾರರು ತಳವರ್ಗದ ಕೆಲವು ವಚನಕಾರರು ‘ವೈದಿಕ ಮೌಲ್ಯಗಳಿಗೆ’ ನೀಡಿದ ಆಹ್ವಾನವನ್ನು ಕುರಿತು ಅರ್ಥಪೂರ್ಣವಾದ ವಿವರಣೆ ನೀಡಿದ್ದಾರೆ. ಮಾದಾರ ಚೆನ್ನಯ್ಯ ‘ಆಚಾರವೇ ಕುಲ, ಅನಾಚಾರವ ಹೊಲೆ’ ಎಂದು ಹೇಳಿದ್ದಾನೆ. ಅದನ್ನೇ ಬಸವಣ್ಣ ‘ಆಚಾರವೇ ಸ್ವರ್ಗ ಅನಾಚರವೇ ನರಕ’ ಎಂದು ನುಡಿದಿದ್ದಾನೆ.

ಪುಣ್ಯ ಸ್ತ್ರೀ ಕಾಳವ್ವೆ ಗೋಮಾಂಸ ತಿನ್ನುವುದು ಕೀಳು ಎನ್ನುವ ಕಲ್ಪನೆಯನ್ನೇ ಪ್ರಶ್ನಿಸುತ್ತಾಳೆ. ಹಿಂದೂ ಪರಂಪರೆಯಲ್ಲಿ ಯಾವದೋ ಒಂದು ಕಾಲಕ್ಕೆ ಸಸ್ಯಾಹಾರ ಶ್ರೇಷ್ಠ ಎಂದು ಕಂಡಿತು ಹಾಗೂ ಅದು ಕಾಲಾಂತರದಲ್ಲಿ ಸ್ವೀಕೃತ ಕ್ರಮವಾಯಿತು. ಅಂಬೇಡ್ಕರ್ ವಾದ ಆಹಾರ ವಿಷಯದಲ್ಲಿ ಇಲ್ಲಿ ಸೋಲುತ್ತದೆ. ಹಾಗೂ ಸಂಸ್ಕೃತೀಕರಣದ ನಿರಾಕರಣೆ ಇಲ್ಲಿ ಇರುವದನ್ನು ಕಾಣಬಹುದು.

ಹಸಿವಿನ ಸುತ್ತ ಹುಟ್ಟುವ ಸಮಸ್ಯೆಗಳನ್ನು  ವಿವರಿಸುವ ಜೇಡರ ದಾಸಿಮಯ್ಯ ಶಿವನಿಗೆ ‘ನೀ ನೆನಂತೊಮ್ಮೆ ಒಡಲಗೊಂಡು ನೋಡಾ’ ಎಂದು ಕೇಳುತ್ತಾನೆ. ಮೇಲಿನ ಜಾತಿಯ ವಚನಕಾರರಲ್ಲಿ ಕಾಡುವ ಪ್ರಶ್ನೆ ಹಾಗೂ ತಳವರ್ಗದವರಿಗೆ ಕಾಡುವ ಪ್ರಶ್ನೆ ಭಿನ್ನವಾಗಿವೆ. ದೇವರ ಅಸ್ತಿತ್ವವನ್ನೆ ಅಲ್ಲಮನು ಪ್ರಶ್ನಿಸುವ ರೀತಿ ದಿಗಿಲು ಹುಟ್ಟಿಸುತ್ತದೆ. ಹಾಗೂ ಕೆಲವೊಮ್ಮೆ ನಾಸ್ತಿಕವಾದದ ಸಮೀಪಕ್ಕೆ ಈ ಚಳುವಳಿ ವಾಲುತ್ತದೆ. ಅಂಬಿಗರ ಚೌಡಯ್ಯ, ಗೊಗ್ಗವ್ವೆಯಂತವರ ವಚನಗಳು ಇಂದಿಗೂ ನಮ್ಮ ವೈಚಾರಿಕತೆಯನ್ನು ಕೆಣಕುತ್ತವೆ. ಈ ಪ್ರಬಂಧಗಳು ಹೆಚ್ಚು ವಾಗ್ವಾದಗಳನ್ನು ಸೃಷ್ಟಿಸಿದವು. ಆದ್ದರಿಂದ ಮೇಲ್ಜಾತಿ ವೀರಶೈವರು ಬಸವಣ್ಣನವರು ಪ್ರಾರಂಭಿಸಿದ ಬಹುಜನ  ಸಮಾಜ ಚಳುವಳಿಗೆ ಹೆಚ್ಚು ಸ್ಪಂದಿಸಲಿಲ್ಲ. ಜ್ಯೋತಿ ಬಾ ಪುಲೆ, ಅಂಬೇಡ್ಕರ್ ಕಾಲ ಘಟ್ಟದವರೆಗೆ ತಳವರ್ಗದ ಜನ ಕಾಯಬೇಕಾಯಿತು ಎಂದು ಪ್ರಬಂಧಕಾರರು ವಿಚಾರ ಮಂಡಿಸಿದರು.

ಶಾಮಲಾ ದಾಸೋಗ ಬಸವತತ್ವ; ಮಹಿಳೆ ಬಗ್ಗೆ ಹೊಂದಿದ ನಿಲುವುಗಳನ್ನು ಸಾಂಪ್ರದಾಯಿಕ ರೂಪದಲ್ಲಿ ವಿವರಿಸಿದರು. ಮಲ್ಲಿಕಾ ಘಂಟಿ ಅನುಭವ ಮಂಟಪದಲ್ಲಿ ‘ಅಕ್ಕ’ನಿಗಾದ ಹಾಗೂ ಕಲ್ಯಾಣ ಕ್ರಾಂತಿಯ ನಂತರ ನೀಲಾಂಬಿಕೆಗಾದ ಮಾನಸಿಕ ಒಳತೋಟಿ ಗಳನ್ನು ಬಿಚ್ಚಿಟ್ಟರು.

ಮಹಿಳೆ ಜಾಗತಿಕವಾಗಿ ಲಿಂಗಸಂಬಂಧಿ ಅನ್ಯಾಯಕ್ಕೆ ಒಳಪಟ್ಟಿದ್ದಾಳೆ ಎಂದು ಶ್ಯಾಮಲಾ ದಾಸೋಗ ಅವರು ಪ್ರತಿಪಾದಿಸುತ್ತ ಬಸವ ಪೂರ್ವ ಯುಗದ ಸಾಮಾಜಿಕ ಬದುಕಿನ ಬಗ್ಗೆ ವಿಶ್ಲೇಷಣೆ ಮಾಡಿದರು. ವೇದ ಕಾಲದಲ್ಲಿ ಗೌರವಾನ್ವಿತ ಸ್ಥಾನ ಹೊಂದಿದ ಮಹಿಳೆ ಬ್ರಾಹ್ಮಣ, ಉಪನಿಷತ್ತುಗಳ ಕಾಲದಲ್ಲಿ ತನ್ನ ಅಂತಸ್ತಿನಲ್ಲಿ ಹಲವು  ಪರಿವರ್ತನೆ  ಅನುಭವಿಸ ಬೇಕಾಯಿತು ಎಂದು ಉದಾಹರಣೆಯ ಮೂಲಕ ವಿವರಣೆ ನೀಡಿದರು. ಮಹಾಕಾವ್ಯ ಹಾಗೂ ಸ್ಮೃತಿಗಳ ಕಾಲದಿಂದ ಮಹಿಳೆಯರ ಬದುಕಿನಲ್ಲಿ ಬದಲಾವಣೆ ಉಂಟಾದ ಚಿತ್ರಣವನ್ನು ನಿರೂಪಿಸಿದರು.

ಬಾಲ್ಯವಿವಾಹ, ಸತಿಪದ್ಧತಿಯಂತಹ ಅನಿಷ್ಟಗಳು ಕಾಣಿಸಿಕೊಂಡವು. ಬೌದ್ಧ, ಜೈನ ಧರ್ಮಗಳು ಮಹಿಳೆಯರ ಬಗ್ಗೆ ವಿಶೇಷ ಗಮನಹರಿಸಿದಂತೆ ಕಾಣುವುದಿಲ್ಲ. ಪರಕೀಯರ ದಾಳಿ, ರಾಜಕೀಯ ಸ್ಥಿತ್ಯಂತರ ಮಧ್ಯೆ ಮಹಿಳೆಯ ಏಕಾಂಗಿತನ ಅನುಭವಿಸಬೇಕಾಯಿತು.

ಬಸವಯುಗ ಮಹಿಳೆಯರ ಬದುಕಿನಲ್ಲಿ ವಿಭಿನ್ನ ಬದಲಾವಣೆ ತಂದಿತು. ಬಸವಣ್ಣ ತನ್ನ ಹುಟ್ಟಿದ ಮನೆ ತ್ಯಜಿಸುವುದೇ ಸಹೋದರಿ ಅಕ್ಕ ನಾಗಮ್ಮನಿಗಾಗಿ. ಹೆಣ್ಣು ಗಂಡಿನ ಸಮಾನತೆ, ಆತ್ಮೋದ್ಧಾರ, ಕಾಯಕದ ಕಲ್ಪನೆ ಮುಂತಾದ ಮೌಲ್ಯಗಳು ಜನಪ್ರಿಯಗೊಂಡವು. ಅನುಭವ ಮಂಟಪದಲ್ಲಿ ಮಹಿಳೆ ಸಕ್ರಿಯವಾಗಿ ಪಾಲ್ಗೊಂಡಳು. ಅಕ್ಕಮಹಾದೇವಿ ಹಾಗೂ ಇತರ ಶರಣರಲ್ಲಿ ನಡೆದ ಸಂಭಾಷಣೆ ಆಧ್ಯಾತ್ಮದ ಪರಾಕಾಷ್ಠತೆ ಮುಟ್ಟಿದೆ.

ಭಾರತದಂತಹ ಸಮಾಜದಲ್ಲಿ ‘ಮನುವಿನ’ ಅಲಿಖಿತ ಸಂವಿಧಾನ ಇನ್ನೂ ಹೇಗೆ ಆಳುತ್ತಿದೆ ಎಂಬುದನ್ನು ಮಲ್ಲಿಕಾ ಘಂಟಿಯವರು ವೈಚಾರಿಕ ನೆಲೆಗಟ್ಟಿನಲ್ಲಿ ವಿವರಿಸಿದರು. ಹನ್ನೆರಡನೇ ಶತಮಾನದ ಶರಣ ಚಳುವಳಿ ಹೊಂದಿದ ಸಾಮೂಹಿಕ ನೆಲೆಯನ್ನು ಪ್ರಬಂಧ ಕಾರರು ತರ್ಕ ಬದ್ಧವಾಗಿ ವಿವರಿಸಿದರು. ಜೈವಿಕ ನೆಲೆಯ ಆಚರಣೆಗಳು ಹೇಗೆ ಮಹಿಳೆಯ ಒಟ್ಟು ಬದುಕನ್ನು ಕುಬ್ಜಗೊಳಿಸಿದವು ಎಂಬುದನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಚರ್ಚಿಸಿದರು.

ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಅಲ್ಲಮಪ್ರಭು ಮುಂತಾದವರ ವಚನಗಳ ಹಿನ್ನೆಲೆಯಲ್ಲಿ ಹನ್ನೆರಡನೇ ಶತಮಾನದ ಚಳುವಳಿಗೆ ‘ಕ್ಷ’ ಕಿರಣ ಬೀರಿದರು. ಹೆಣ್ಣು ಖಾಸಗಿ ಆಸ್ತಿ, ಭೋಗದ ವಸ್ತು ಎಂಬ ಕಲ್ಪನೆಗಳನ್ನು ಹನ್ನೆರಡನೇ ಶತಮಾನದಲ್ಲಿ ನಿರಾಕರಿಸ ಲಾಯಿತು. ಆದರೆ ಅತ್ಯಂತ ಸೂಕ್ಷ್ಮ ನೆಲೆಯಲ್ಲಿ ಅಂಬಿಗರ ಚೌಡಯ್ಯ, ಅಲ್ಲಮಪ್ರಭು, ಬಸವಣ್ಣ ಮುಂತಾದವರ ವಚನಗಳನ್ನು ಮನೋಸಾಮಾಜಿಕ ಹಿನ್ನೆಲೆಯಲ್ಲಿ ಚರ್ಚಿಸುವ ಸಾಧ್ಯತೆಯನ್ನು ವಿವರಿಸಿದರು. ಮಹಿಳೆಯರ ಸಾಮಾಜಿಕ ಅಂತಸ್ತಿನಲ್ಲಿ ಉಂಟಾದ ಪಲ್ಲಟಗಳನ್ನು ಪ್ರಬಂಧಕಾರರು ‘ಬಂಡಾಯ’ ದೃಷ್ಟಿಕೋನದಲ್ಲಿ ಚರ್ಚಿಸಿದರು. ತುಂಬಿದ ಅನುಭವಮಂಟಪದಲ್ಲಿ ‘ಅಕ್ಕ’ನನ್ನು ಪ್ರಶ್ನಿಸುವ ವಿಧಾನ ಹಲವು ಗೊಂದಲಗಳನ್ನು ಹುಟ್ಟಿಸುತ್ತದೆ. ಅಲ್ಲದೆ ವಚನಕಾರರು ಮಹಿಳೆ ಯರನ್ನು ನೋಡುವ ದೃಷ್ಟಿಯಲ್ಲಿ ತಾತ್ವಿಕ ಬದಲಾವಣೆಗಳಾಗಿವೆಯೆ ಹೊರತು ವಾಸ್ತವಿಕ ಪರಿವರ್ತನೆ ಆಗಲಿಲ್ಲ. ಮಲ್ಲಿಕಾ ಘಂಟಿಯವರ ಪ್ರಬಂಧ ಆಕರ್ಷಕ ಶೈಲಿಯಲ್ಲಿ, ಕೇಳುಗರನ್ನು ಮೋಡಿ ಮಾಡಿತು. ಆದರೆ ಇಪ್ಪತ್ತೊಂದನೇ ಶತಮಾನದ ಚಾಳೀಸಿನಿಂದ ‘ಸ್ತ್ರೀವಾದಿ ಸಾಹಿತ್ಯ ವಿಶ್ಲೇಷಿಸಿದಂತೆ ಹನ್ನೆರಡನೇ ಶತಮಾನದ ಶರಣರ ಚಳುವಳಿಯನ್ನು ನೋಡುವುದು ಹಲವರಿಗೆ ಸರಿ ಕಾಣಲಿಲ್ಲ. ಇದು ಹಲವು ವಾಗ್ವಾದ ಚರ್ಚೆಗೆ ಕಾರಣವಾಯಿತು.