ಮಾಜಶಾಸ್ತ್ರಜ್ಞರ ದೃಷ್ಟಿಕೋನದಿಂದ ವಿವಿಧ ಆಯಾಮಗಳ ಮೂಲಕ ಬಸವ ತತ್ವವನ್ನು ತನ್ಮೂಲಕವಾಗಿ ಭಾರತೀಯ ತತ್ವಮೀಮಾಂಸೆ ಹಾಗೂ ಪ್ರಸ್ತುತಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಆಯಾ ಕಾಲಘಟ್ಟದಲ್ಲಿ ಇಟ್ಟು ನೋಡುವಂತಹ ಒಂದು ವಿಚಾರ ಸಂಕಿರಣ ಮತ್ತು ಚಿಂತನ ಮಂಥನ ನಡೆದಿದೆ. ಅದರಲ್ಲಿ ಬೆಳಿಗ್ಗೆಯಿಂದ ನಾನು ಭಾಗವಹಿಸಿದ್ದೇನೆ. ಅದರಿಂದ ನಾವು ಹೆಚ್ಚು ಲಾಭವನ್ನು ಪಡೆದಿದ್ದೇವೆ. ನೋಡುವ ದೃಷ್ಟಿಯನ್ನು ವಿಶಾಲಗೊಳಿಸಿಕೊಳ್ಳುವಂತಹ ಒಂದು ಸಮಸ್ಯೆಗೆ ಎಷ್ಟು ಮಗ್ಗಲುಗಳು ಇರುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗುತ್ತದೆ. ಆ ದೃಷ್ಟಿಕೋನದಿಂದ ಇವತ್ತು ಸಮಾಜಶಾಸ್ತ್ರಜ್ಞರ ದೃಷ್ಟಿಕೋನ ಮತ್ತು ಅದಕ್ಕಿಂತ ಹೆಚ್ಚಾಗಿ ಒಬ್ಬ ಸಾಮಾನ್ಯ ಮನುಷ್ಯನ ದೃಷ್ಟಿಕೋನದಿಂದಲೂ ಕೂಡ ನಾವು ಒಂದು ಸಮಸ್ಯೆಯನ್ನು ಯಾವ ನಿಟ್ಟಿನಲ್ಲಿ ಅರ್ಥಮಾಡಿ ಕೊಳ್ಳಲಿಕ್ಕೆ ಅಥವಾ ಮನುಷ್ಯನ ವಿಕಸನದ ಹಾದಿಯಲ್ಲಿ ಬಂದಿರುವ ಇಂತಹ ತತ್ವ ಮೀಮಾಂಸೆಗಳೂ ಕೂಡ ಮನುಷ್ಯನ ಬದುಕಿನ ಮೂರ್ತ ಸ್ವರೂಪಕ್ಕೆ ಎಷ್ಟರಮಟ್ಟಿಗೆ ಸಹಕಾರಿಯಾಗುತ್ತವೆ ಎನ್ನುವುದು ಕೂಡ ಬಹಳ ಮುಖ್ಯವಾದ ವಿಷಯ ಆಗಿರುತ್ತದೆ. ಕನ್ನಡ ನಾಡಿಗೆ ವಿಶಿಷ್ಟ ಕೊಡುಗೆಯನ್ನು ಕೊಟ್ಟ ಕಾಯಕ ಜೀವಿಗಳ ಚಳುವಳಿಗೆ ಅಡಿಪಾಯ ಹಾಕಿದ ಪವಿತ್ರ ಕ್ಷೇತ್ರವಾದ ಕೂಡಲ ಸಂಗಮದಲ್ಲಿ ನಾವಿಂದು ನೆರೆದಿದ್ದೇವೆ. ಕೂಡಲಸಂಗಮ ಅಂದ ತಕ್ಷಣವೇ ಬಸವಣ್ಣನವರು ನೆನಪಾಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ಸಂಗಮ ಸ್ಥಾನಗಳೇನಿವೆಯೋ ಅವೆಲ್ಲವೂ ಕೂಡ ಮನುಕುಲದ ಸವಾಲುಗಳನ್ನು ಬಿಕ್ಕಟ್ಟುಗಳನ್ನು ಬಗೆಹರಿಸುವ ಸ್ಥಾನಗಳು ಅಂತಾನೆ ನಾವು ಭಾವಿಸಿಕೊಳ್ಳಬೇಕು. ನಮ್ಮ ಪೂರ್ವಜರು ಇಂತಹ ಸಂಗಮ ಕ್ಷೇತ್ರಗಳಿಗೆ ಪವಿತ್ರತೆಯ ಲೇಪವನ್ನು ಅಂಟಿಸಿದ್ದಾರೆ. ಆಧ್ಯಾತ್ಮಿಕ ಹಾಗೂ ಸಮಾನತೆಯ ಹಸಿವನ್ನು ಇಂತಹ ಕ್ಷೇತ್ರದಿಂದ ಬಗೆಹರಿಸುವ ಪ್ರಯತ್ನಗಳು ಇಲ್ಲಿ ನಡೆದವು, ಅಂದುಕೊಳ್ಳಬೇಕು. ಆ ದೃಷ್ಟಿಯಿಂದಲೇ ಪ್ರಾಯಶಃ ನಮ್ಮ ಸಂಸ್ಕೃತಿಯಲ್ಲಿ ಈ ಸಂಗಮಗಳು ಅಂದರೆ ದೊಡ್ಡದರಲ್ಲಿ ಸಣ್ಣದು ಸಂಗಮವಾಗಿ ಸೇರುವಂತಹದು. ಆ ರೀತಿ ಆದಂತಹ ಸಂಗಮ ಸ್ಥಾನಗಳಿಗೆ ಜಲಸಂಸ್ಕೃತಿಯ ಒಂದು ದೊಡ್ಡ ಪರಿಪಾಠವಿದೆ. ಅಗ್ನಿ ಸಂಸ್ಕೃತಿಯನ್ನು ವಿರೋಧಿಸುವ ರೀತಿಯ ಜಲಸಂಸ್ಕೃತಿ ಮುಖಾಮುಖಿಯಾಗಿ ನಿಲ್ಲುತ್ತದೆ. ತಲಸ್ಪರ್ಶಿ, ತಳಸ್ತರ ಅಥವಾ ಕೆಳಸ್ತರದ ಅಧೋಮುಖಿ ಸಂಸ್ಕೃತಿ ಊರ್ಧ್ವಮುಖಿ ಸಂಸ್ಕೃತಿಯನ್ನು ವಿರೋಧಿ ಸುತ್ತದೆ. ನೋಡುವ ದೃಷ್ಟಿ ಬೇರೆ ಬೇರೆ ಯಾದರೂ ಇಲ್ಲಿ ಸೌಹಾರ್ದದ ಸಾಧ್ಯತೆಗಳಿವೆ. ಕೆಳವರ್ಗದ ಆಶಯಗಳನ್ನು ಅವು ನಡೆದು ಬಂದ ಬಗೆಯನ್ನು ದೇವಿಪ್ರಸಾದ ಚಟ್ಟೋ ಪಾಧ್ಯಾಯರು ಅದ್ಭುತ ರೀತಿಯಲ್ಲಿ ಗುರುತಿಸಿದ್ದಾರೆ. ಮಾನವನ ವಿಕಸನದ ಹಾದಿಯಲ್ಲಿ ೨ ಲಕ್ಷ ೪೦ ಸಾವಿರ ವರ್ಷಗಳು ಗತಿಸಿವೆ. ಈ ಅವಧಿಯನ್ನು ೧ ತಾಸಿಗೆ ೨೦ ಸಾವಿರ ವರ್ಷಗಳಂತೆ ಹಂಚಿದರೆ ಕೇವಲ ಅರ್ಧ ಗಂಟೆಯ ಕಾಲದಲ್ಲಿ ಅಂದರೆ ಹನ್ನೆರಡು ತಾಸುಗಳಲ್ಲಿ ಸಾವಿರ ವರ್ಷಗಳಿಂದೀಚೆಗೆ ಅದ್ಭುತ ಬದಲಾವಣೆಗಳಾಗಿವೆ. ಅರ್ಧಗಂಟೆಯೀಚೆಗೆ ಬೆಂಕಿ ಯನ್ನು ಕಂಡು ಹಿಡಿದ ಕಾಲ, ಬೇಟೆಯಿಂದ ಕೃಷಿಯನ್ನು ಕಂಡು ಹಿಡಿದ ಕಾಲ, ಮೃಗೀಯ ಬದುಕು ಕಳೆದು ಆಹಾರ ಹುಡುಕುವ ಪ್ರಯತ್ನ, ಪ್ರಕೃತಿ ಇಲ್ಲದ ಜಾಗದಲ್ಲಿ ಕೃಷಿ ಮೂಲಕ ಆಹಾರವನ್ನು ಉತ್ಪಾದಿಸುವ ಪ್ರಯತ್ನ ಕಳೆದ ೫೦ ವರ್ಷಗಳಲ್ಲಿ ನಡೆದಿದೆ. ಬದುಕು ಗಣಕೀಕೃತ Electronic ಯುಗದ ಜಗತ್ತನ್ನು ಸಣ್ಣ ಗ್ರಾಮವಾಗಿಸಿದೆ. ಈ ೫೦ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನದ ವೇಗದ ಬೆಳವಣಿಗೆ ೫೦ ವರ್ಷಗಳಿಗೆ ಮೀರಿದ ಪ್ರಗತಿ ಮಾಡಿದೆ. ವಿಶ್ವವನ್ನು ಮನೆಯ ಪಡಸಾಲೆಗೆ ಸೇರಿಸಿದೆ. ಜಗತ್ತು ಹತ್ತಿರವಾಗಿದೆ. ಆದರೆ, ಮನುಷ್ಯ ಹತ್ತಿರವಾದನೇ? ಮಾನವನ ಈ ಪ್ರವೃತ್ತಿಗೆ ಚಿಂತನೆಗಳು, ಆಂದೋಲನ ಗಳು ನಡೆದಿವೆ. ತಾನು ನಡೆದ ಜಾಡಿನಲ್ಲೇ ತನ್ನತನ ಉಳಿಸಿಕೊಳ್ಳುವ ಯತ್ನಗಳು ಸಾಗಿವೆ. ಆಧುನಿಕ ಮನುಷ್ಯ ಭಕ್ತನಾಗಲಾರ. ಭಕ್ತನಿಗೆ ಪ್ರಶ್ನಾತೀತವಾದ ನಂಬಿಕೆ ಬೇಕು. ಈಗ ಇಲ್ಲಿ ನಂಬಿಕೆಗಳ ಪ್ರಶ್ನೆ ಇದೆ. ಅನುಮಾನ ಸಂಶಯದ ಮನಸ್ಸಲ್ಲಿ, ನಿರಂತರ ಸತ್ಯಾನ್ವೇಷಣೆ ನಡೆದಿದೆ. ಚಲನಶೀಲತೆ ಅದರ ಗುಣ. ಹರಿಯುವ ನದಿಗೆ ಮೈಯೆಲ್ಲ ಕಾಲುಯೆಂದು ಶರಣರ ವಚನವಿದೆ. ಚರಿತ್ರೆ ನಿಂತ ನೀರಲ್ಲ. ಬುದ್ಧ, ಬಸವ ಮಾಡಿದ ಆಂದೋಲನದ ಪರಿಣಾಮಗಳು ಆಯಾ ಕಾಲಘಟ್ಟ ದಲ್ಲಿ ಸ್ಥಗಿತಗೊಂಡಂತೆ ಕಂಡರೂ ಮತ್ತೆ ಮತ್ತೆ ಚಿಗುರೊಡೆದಿವೆ. ಚರಿತ್ರೆಗೆ ಗತಿಶೀಲತೆ ಇದೆ. ಚಲನಶೀಲ ಗುಣವಿದೆ. ಓಟ ಗುರುತ್ವವನ್ನು ಕಾಪಾಡಿಕೊಳ್ಳುತ್ತದೆ. ಬೈಸಿಕಲ್ ಗಾಲಿಗಳ ಮೇಲೆ ನಿಂತಿರಬೇಕಾದರೆ ಓಡುತ್ತಲೇ ಇರಬೇಕು.

ಕೃಷ್ಣ, ಮಲಪ್ರಭೆಯರಂತೆ ಚಲನಶೀಲತೆ ಸಹಜಗುಣವಾಗಿ ಹರಿಯುತ್ತಲೇ ಇರುತ್ತದೆ.  ಬುದ್ಧನಿಗೂ ಆ ಕಾಲದಲ್ಲಿ ಸಮಾಜದಲ್ಲಿ ಹೆಣ್ಣು ಗಂಡುಗಳಲ್ಲಿ ಹಾಗೂ ಜಾತಿಗಳ ನಡುವೆ ಸಮಾನತೆ ತರಲಾಗಲಿಲ್ಲ. ತನ್ನ ಸಂಘ ಜೀವನದಲ್ಲಿ ಮಾತ್ರ ಆಮ್ರಪಾಲಿಕೆಯಂತಹ ಗಣಿಕೆಯನ್ನು ಮತ್ತು ಅಂತಹ ಅನೇಕ ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳುವ ಮೂಲಕ ಜಾತಿ ಅಂತರವನ್ನು ತೆಗೆದು ಹಾಕಿ ಸಮಾನತೆ ತಂದ. ಆದರ್ಶದ ಬೆನ್ನು ಹತ್ತುವ ಕುತೂಹಲ ರೋಚಕವಾದದ್ದು. ಅದು ಕ್ರಿಯಾತ್ಮಕ ತೃಪ್ತಿಯನ್ನು ಕೊಡುತ್ತದೆ. ಬುದ್ಧನ ತತ್ವವನ್ನು ಯಾರೂ ಭ್ರಷ್ಟಗೊಳಿಸ ಲಾರರು. ಬುದ್ಧನ ಪ್ರಾಮಾಣಿಕತೆ ವಾಂಛೆಯನ್ನು ಮೀರಿದ್ದು. ವಿಷಯಾಸಕ್ತಿಯನ್ನು ಮೀರಿದ ಬದುಕು ಬುದ್ಧನದು. ಬುದ್ಧನ ಕಾರ್ಯ ವಿಫಲವಾಗಲಿಲ್ಲ.

ಗಂಡು ಹೆಣ್ಣನ್ನು ಕಂಡೊಡನೆ ವಿಷಯಾಸಕ್ತಿಯ ಪುರುಷ ಪ್ರಧಾನದ ಒತ್ತಡ, ಹೆಣ್ಣಿನ ದೇಹದ ರಚನೆ ಅವಳಲ್ಲಿ ದೈಹಿತ ಅಶಕ್ತತೆಯನ್ನು ತಂದಿದೆಯೆಂದು ಪ್ರಖ್ಯಾತ ಮನೋ ಶಾಸ್ತ್ರಜ್ಞ ಸಿಗ್ಮಂಡ ಫ್ರಾಡ ಹೇಳುತ್ತಾನೆ. ಆ ದೈಹಿಕ ಅಶಕ್ತತೆಯನ್ನು ಪುರುಷಪ್ರಧಾನ ಸಮಾಜ, ದುರುಪಯೋಗಪಡಿಸಿಕೊಂಡು, ಶೋಷಣೆಗೆ ಎಡೆಮಾಡಿದೆ. ಪ್ರಾದೇಶಿಕ ದೇಹದಾರ್ಢ್ಯತೆಗಳು ಬುಡಕಟ್ಟು ಜನಾಂಗಗಳ ಈ ಶಾರೀರಿಕ ರಚನೆಯಲ್ಲಿ ಒಂದೊಂದು ತೆರನಾಗಿರುತ್ತದೆ, ಅನು ಕೂಲತೆ ಹಾಗೂ ಅನಾನುಕೂಲತೆಗಳನ್ನು ಕಲ್ಪಿಸಿಕೊಡುತ್ತದೆ. ಸಾಪೇಕ್ಷ ಹಾಗೂ ವೈರುಧ್ಯಗಳ ಹೋರಾಟದ ಪ್ರಕ್ರಿಯೆ ನಡೆಯುತ್ತದೆ.

ಬಂಧ ಮುಕ್ತತೆ – Emancipation ಇಂದು ಬಹು ಚರ್ಚಿತ ವಿಷಯ. ಜಾತಿ, ಬಡತನ, ಅಂಧ ಶ್ರದ್ಧೆಗಳ ಕಾರಣಕ್ಕಾಗಿ ಭಾರತೀಯ ಗೃಹಿಣಿಯರು ಬಂಧನಕ್ಕೆ ಒಳಗಾಗಿದ್ದಾರೆ. ಇದನ್ನು ಪಾಶ್ಚಾತ್ಯ ಪ್ರಪಂಚದಲ್ಲಿ ಕಾಣಲಿಕ್ಕಾಗದು. ಮಹಿಳಾ ನಾಯಕಿಯರ ಸೃಷ್ಟಿಯಾಗಿದೆ. ಇಸ್ರೇಲ್ ೨ನೇ ಪ್ರಧಾನಿ  ಗೋಲ್ಡಾಮೆಯಿರ್, ಇಂಗ್ಲೆಂಡಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಮಹಿಳಾ ನಾಯಕತ್ವ ವಹಿಸಿದರೆ, ಮಹಿಳಾ ಶೋಷಣೆ ನಡೆಯುತ್ತಿರುವ ಸಮುದಾಯದಲ್ಲಿ ಭಾರತದ ಇಂದಿರಾಗಾಂಧಿ, ಶ್ರೀಲಂಕಾದ ಸಿರಿಮಾವೊ ಬಂಡಾರ ನಾಯಕೆ, ಚಂದ್ರಿಕಾ ಕುಮಾರ ತುಂಗೆ, ಪಾಕಿಸ್ತಾನದ ಬೇನಜಿರ್ ಭುಟ್ಟೋ, ಇಂಡೋನೇಶಿಯಾದ ಮೇಘಾವತಿ ಸುಕರ್ಣೊ, ಬಂಗ್ಲಾ ದೇಶದ ಬೇಗಂ ಹಸೀನಾ, ಖಲೀದಾ ಜಿಯಾ ಇವರುಗಳು ಲಿಂಗಭೇದ ಮರೆತು ಸಮುದಾಯದ ನಾಯಕತ್ವವನ್ನು ವಹಿಸಿಕೊಂಡ ಮಹಿಳೆಯರು. ಅಂದರೆ ಇಡೀ ಸ್ತ್ರೀ ಸಮುದಾಯ ಶೋಷಣೆ ಯಿಂದ ಹೊರಬಂತೇ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಗೋಚರಿಸುವ ವೈರುಧ್ಯಗಳು ಸಹಜ ಪ್ರಕ್ರಿಯೆಗಳು. ಇವುಗಳಲ್ಲಿ ಮುಖ್ಯ ಯಾವುವು? ಅಮುಖ್ಯ ಯಾವುವು? ಎನ್ನುವುದನ್ನು ಗುರುತಿಸಬೇಕಾಗುತ್ತದೆ. ಸಮಾನತೆಯ ಆಶಯ ವೈದಿಕ ಅಂಗಳದಿಂದ ಹೊರಬರಲಾಗಲಿಲ್ಲ. ಚರ್ಚೆಗಳು ಸೌಹಾರ್ದಯುತವಾಗಿ ಚಾರಿತ್ರ ಸಂದರ್ಭದ ಎಲ್ಲೆ ಮೀರಿ ನಡೆಯಬೇಕು.

ಈ ಹಿನ್ನೆಲೆಯಲ್ಲಿ ಬಸವಣ್ಣನವರನ್ನು ಗಮನಿಸಬೇಕು. ವಚನಗಳು ಸಾಹಿತ್ಯಿಕ ಸೃಷ್ಟಿ ಯಾಗಿ ಬರಲಿಲ್ಲ. ಉಪ ಉತ್ಪನ್ನಗಳಾಗಿ By  products ಆಗಿ ಬಂದವು. ಕೊಂಡಗುಳಿ ಕೇಶಿರಾಜ, ಜೇಡರ ದಾಸಿಮಯ್ಯನಿಂದ ಹಿಡಿದು ಕೆಂಭಾವಿ ಭೋಗಯ್ಯನವರೆಗೆ ವಚನ ಪರಿಭಾಷೆ ತಯಾ ರಾಗಿತ್ತು. ಲೆನಿನ್ ಅಭಿಪ್ರಾಯದಂತೆ ಹೋರಾಟಕ್ಕೆ ಒಂದು Strategy ತಂತ್ರ ಇರುತ್ತದೆ. ಸಂಘಟನೆಯ ಗರ್ಭದಲ್ಲಿ ಚಳುವಳಿಗಳು ಇರುತ್ತವೆ. ಚಳುವಳಿಯ ಗರ್ಭದಲ್ಲಿ ಹೋರಾಟ ವಿರುತ್ತದೆ.

ಬಸವಣ್ಣ ೧೨ನೇ ಶತಮಾನದ ಚಳುವಳಿಯ ನೇತಾರ. ಆತನಿಗೆ ಭಕ್ತಿ ಭಂಡಾರಿ ಯಾಗಿರುವುದರ ಜೊತೆಗೆ ಸಂಘಟಿಸುವ ಜವಾಬ್ದಾರಿ ಇತ್ತು. ಎಲ್ಲರನ್ನು ಕಟ್ಟಿಕೊಂಡು ಹೋಗುವ ಹೊಣೆಗಾರಿಕೆ ಇತ್ತು. ಆ  Grace-Nobility  ಘನತೆ ಜವಾಬ್ದಾರಿಗಳಿಂದ ಸಮಾಜಮುಖಿಯಾಗಿ ೮೦೦ ವರ್ಷಗಳ ಹಿಂದಿನ ಕಾಲಘಟ್ಟದ ಚಿಂತನೆ ಈಗ ಸ್ತ್ರೀವಾದಕ್ಕೆ ಕಾರಣವಾಯಿತು. ಇಲ್ಲಿ ಹೋರಾಟಗಾರರ ಸಂಕಷ್ಟಗಳನ್ನು ಅರ್ಥೈಸಿಕೊಳ್ಳಬೇಕು. ಡಾ. ರಾಮ ಮನೋಹರ ಲೋಹಿಯಾ ಪ್ರಕಾರ ದಲಿತರೆಂದರೆ ತುಳಿತಕ್ಕೊಳಗಾದವರು. ಹೆಣ್ಣು ಮಕ್ಕಳು ಬ್ರಾಹ್ಮಣರೇ ಆಗಿರಲಿ, ಅನ್ಯಜಾತಿ ಆಗಿರಲಿ, ಹಿಂದುಳಿದ ಜನಾಂಗದವರೆಲ್ಲ ಶೋಷಣೆಗೆ, ಅನ್ಯಾಯಕ್ಕೆ ಒಳಗಾದವರು.

ಸೌಂದರ್ಯ ಮತ್ತು ಮೈ ಬಣ್ಣ ಎನ್ನುವ ಲೇಖನದಲ್ಲಿ ಕಪ್ಪೇ ಸುಂದರ ಎಂದು ಭಾರತೀಯ ಮನಸ್ಸು ನಂಬಿದೆ. ಕೃಷ್ಣ ಕಪ್ಪು ಆದರೂ ಆತ ಸುಂದರ ಪುರುಷೋತ್ತಮ. ಮಹಿಳೆಯರೆಲ್ಲರೂ ಸುಂದರಿಯರೆ ಅದರಲ್ಲೆ ಸ್ಪಲ್ಪ ಜನ ಹೆಚ್ಚು ಸುಂದರಿಯರು. ಹಾಗೆಯೇ Magna Cartaದ ನಂತರ USAದಲ್ಲಿ ೧೩ ರಾಜ್ಯಗಳ ಒಕ್ಕೂಟ ಸ್ಥಾಪನೆಯಾದಾಗ George Washington, Stevenson ಹಾಗೂ Thomas Jafferson ತಂದ Bill of rightsನಲ್ಲಿ All are born equal, some are more equal ಎಲ್ಲರೂ ಸಮಾನರಾಗಿ ಜನಿಸಿದ್ದಾರೆ. ಕೆಲವರು ಮಾತ್ರ ಹೆಚ್ಚು ಸಮಾನರೆಂದು ಗೇಲಿ ಮಾಡಿದರು. ಇವರೆಲ್ಲರಿಗೂ ನಿಗ್ರೋ ಗುಲಾಮರಿದ್ದರು. ನಾನು ಮತ್ತೊಬ್ಬನ ಗುಲಾಮನಾಗಿಲು ಹೇಗೆ ಇಚ್ಛೆ ಪಡುವುದಿಲ್ಲವೋ ಹಾಗೆ ಇನ್ನೊಬ್ಬರಿಗೆ ಯಜಮಾನನಾಗಲೂ ಇಚ್ಛೆ ಪಡುವುದಿಲ್ಲ ಎಂದು ಅಬ್ರಹಾಂ ಲಿಂಕನ್ ಪ್ರತಿಪಾದಿಸಿದ. ಯಜಮಾನಿಕೆಯ ಇಚ್ಛೆ ಅನೇಕರನ್ನು ಗುಲಾಮರನ್ನಾಗಿಸಿದೆ, ಹೊಸ ಶ್ರೀಮಂತಿಕೆ ದೌರ್ಜನ್ಯಗಳಿ ಗೆಡೆ ಮಾಡಿಕೊಟ್ಟಿದೆ. ಈ ಕಾರಣಕ್ಕಾಗಿ ಬಸವಣ್ಣ ಬೇರೆ ಹೆಜ್ಜೆ ಇಟ್ಟ. “ಸಕಲ ಜೀವಾತ್ಮರಿಗೆ ಲೇಸನೆ ಬಯಸುವವ ಕುಲಜನೆಂದು.”

ಮಹಿಳಾ ಮೀಸಲಾತಿಯಲ್ಲಿ ಶೇ. ೩೩ರಷ್ಟು ಒಳಮೀಸಲಾತಿಯನ್ನು ರಾಮಕೃಷ್ಣ ಹೆಗಡೆ ಮತ್ತು ನಜೀರಸಾಬ್‌ರ ಕಾಲದಲ್ಲಿ ಕರ್ನಾಟಕ ಸರಕಾರ ಆಗ ಕೊಟ್ಟಿತ್ತು. ಉತ್ತರದ ಲಾಲೂ ಪ್ರಸಾದ ಯಾದವ, ಮುಲಾಯಂ ಸಿಂಗ್ ಮತ್ತು ಶರದ್ ಯಾದವರು ಕೇಂದ್ರ ಸರಕಾರದಲ್ಲಿ ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಒಳಮೀಸಲಾತಿ ಕೊಡದಿದ್ದರೆ ಮೇಲ್ಜಾತಿಯ ಹಣವಂತ ಹಾಗೂ ವಿದ್ಯಾವಂತ ಮಹಿಳೆಯರೇ ವಿಧಾನಸಭೆಗಳನ್ನು ತುಂಬುತ್ತಾರೆ ಎಂದು ಸಹಜ ಆತಂಕ ಅವರನ್ನು ಕಾಡುತ್ತಿದೆ. ಮಹಿಳಾ ಮೀಸಲಾತಿಗೆ ಅವರ ವಿರೋಧವಿಲ್ಲ. ಮೀಸಲಾತಿಯ ಪರಿಕಲ್ಪನೆ ಬಂದದ್ದರಿಂದಲೇ ಒಳಮೀಸಲಾತಿಯ ಪರಿಕಲ್ಪನೆ ಬಂದಿದೆ.

ಮಧ್ಯಾಹ್ನದ ಗೋಷ್ಠಿಯಲ್ಲಿ ಬಸವಣ್ಣನಿಗೆ ಇಬ್ಬರ ಹೆಂಡಿರ ಪ್ರಸ್ತಾಪ ಬಂತು. ಬಹುಪತ್ನಿತ್ವದ ಹಾಗೆ ಬಹುಪತಿತ್ವದ ಕಾಲ ಒಂದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಮಾಜಿ ಸಚಿವರ ತಾಯಿಗೆ ಮೂರು ಜನ ಗಂಡಂದಿರಿದ್ದರು. ಇದು ಅಳಿಯ ಸಂತತಿಯ ಪ್ರಭಾವ. ವರದಕ್ಷಿಣೆಯನ್ನು ಕುರಿತಾದ ಒಂದು ಲೇಖನದಲ್ಲಿ ವರದಕ್ಷಿಣೆಯನ್ನು ಸಮರ್ಥಿಸಿ ಕೊಂಡು ಬರೆಯಲಾಗಿತ್ತು. ಅಂದರೆ ನಾವು ಅವರ ವಾದವನ್ನು ಒಪ್ಪಬೇಕೆಂದೇನಿಲ್ಲ. ಶೂದ್ರ ಹಾಗೂ ಕೆಳಸ್ತರದ ದುಡಿಯುವ ವರ್ಗದ ವಧುವಿನ ಮನೆಯವರಿಗೆ ತೆರ ಕೊಟ್ಟು ಮದುವೆ ಮಾಡಿಕೊಳ್ಳುವ ಪದ್ಧತಿ ಇತ್ತು. ಈ ಪದ್ಧತಿ ಲಿಂಗಾಯತರಲ್ಲೂ ಸಹ ಇತ್ತೀಚಿನವರೆಗೆ ಇತ್ತು. ಮದುವೆಯಾಗಿ ಮನೆಗೆ ಬರುವ ಮಹಿಳೆ ಉತ್ಪಾದನಾ ಕ್ರಿಯೆಯಲ್ಲಿ ತೊಡಗಿ ಗಂಡನ ಮನೆಯ ಸಂಪತ್ತನ್ನು ಹೆಚ್ಚಿಸಬಲ್ಲವಳಾಗಿದ್ದರಿಂದ ಆಕೆಯ ತವರು ಮನೆಯವರಿಗೆ ‘ತೆರ’  ಕೊಡುವುದು ಸಮಂಜಸವೆಂದು ಭಾವಿಸಲಾಗುತ್ತಿತ್ತು. ಇತ್ತೀಚೆಗೆ ಮಹಿಳೆ ಹಡೆಯುವ ಯಂತ್ರ ಹಾಗೂ ಸೌಂದರ್ಯ ಪ್ರದರ್ಶನದ ಗೊಂಬೆಯಾಗಿ ಹೊರಗೆ ದುಡಿಯದೇ ಇರುವುದರಿಂದ ಅವಳ ಜೀವಿತ ಕಾಲವಿಡೀ ಅವಳನ್ನು ಸಾಕಿ ಸಲಹುವ ಆರ್ಥಿಕ ಭಾರವನ್ನು ಸರಿದೂಗಿಸಲು ಪರಿಹಾರವಾಗಿ ಹೆತ್ತವರು ಸ್ಪಲ್ಪ ವರದಕ್ಷಿಣೆಯನ್ನು ಕೊಟ್ಟರೂ ತಪ್ಪಿಲ್ಲ, ಎನ್ನುವ ಧಾಟಿಯ ಲೇಖನವದು. ಅಂದರೆ ಒಂದು ಸಮಸ್ಯೆಯನ್ನು ವಿವಿಧ ಆಯಾಮಗಳಿಂದ ನೋಡುವ ಸಾಧ್ಯತೆ ಇದೆ ಎನ್ನುವುದನ್ನು ಅರ್ಥೈಸಿಕೊಳ್ಳಲು ಈ ಲೇಖನದಲ್ಲಿ ಪ್ರಸ್ತಾಪ ಮಾಡಿದ್ದೇನೆ.

ಬಿಜ್ಜನಳ ಸಾಕು ತಂಗಿಯಾದ ನೀಲಾಂಬಿಕೆ, ‘ನಾನವರಿಗೆ ವಿಚಾರ ಪತ್ನಿ, ಅವ ನನಗೆ ಪುರುಷನಲ್ಲ. ನಾನು ಬಸವಣ್ಣನ ವಿಚಾರ ಸಂಗಾತಿ’ಯಾಗಿ ಬದುಕುತ್ತಿದ್ದೇನೆಂದು ಪ್ರಥಮ ಬಾರಿಗೆ ಹೇಳಿದ ಮಹಿಳೆ. ಹಾಗಾಗಿ ಆಯಾ ಕಾಲಘಟ್ಟದಲ್ಲಿಯ ವ್ಯತ್ಯಾಸಗಳನ್ನು ಗುರುತಿಸಿ ಕೊಂಡು ಅರ್ಥೈಸಬೇಕು.

ಕಿನ್ನರಿ ಬೊಮ್ಮಯ್ಯನ ಪ್ರಕರಣ ಶರಣ ಚರಿತ್ರೆಯಲ್ಲಿ ಒಂದು ವಿಕ್ಷಿಪ್ತ ಸೇರಿಕೆ. ಭಕ್ತಿಯ ತುಟಾಗ್ರತೆ, ಉತ್ಕಟಾವಸ್ಥೆಯನ್ನು ತಲುಪಿದಾಗ ಸೇರಿಸಿದ ಅದನ್ನು ಉಪೇಕ್ಷಿಸಬೇಕು. ನಗ್ನಳಾದ ಸ್ತ್ರೀಯನ್ನು ಪ್ರಶ್ನೆ ಕೇಳಿ ಜಗತ್ತಿಗೆ ಆಕೆಯ ಬಗ್ಗೆ ಸೈದ್ಧಾಂತಿಕ ನಿಲುವು, ವೈಚಾರಿಕ ಪ್ರಖರತೆ ಮತ್ತು ಬದ್ಧತೆಯನ್ನು ಪರಿಚಯಿಸುವುದೇ ಆ ಪ್ರಸಂಗದ ಉದ್ದೇಶ, ಇಂತಹದೇ ಒಂದು ಪ್ರಸಂಗ ವಡ್ಡಾರಾಧನೆಯಲ್ಲಿಯೂ ಬರುತ್ತದೆ. ವಿಟನಾಗಿ ಬಂದ ಶಿವ ದುಡ್ಡು ಪಡೆದು ಸಂಗ ಸುಖ ನೀಡಿದ್ದ ಗಣಿಕೆಯ ಕಾಯಕ ನಿಷ್ಠೆಯನ್ನು ಮೆಚ್ಚಿ ಕೈಲಾಸಕ್ಕೆ ಒಯ್ದ ಎನ್ನುವುದು. ನಾಟಕದಲ್ಲಿ Prompt ಮಾಡುವಂತೆ ಹಾಗೂ ರಾಜಕೀಯದಲ್ಲಿ Prompting conference ನಡೆಯುವಂತೆ, ನೇರವಾಗಿ ಪ್ರಶ್ನೆಗೆ ಉತ್ತರ ಹೇಳದೆ ಗೆಳೆಯರಿಂದ ಸ್ಪಷ್ಟೀಕರಣ ಕೊಡಿಸಿದಂತೆ. ಹಿಂದಿನ ಗೋಷ್ಠಿಯಲ್ಲಿ ಬಂದ ಶಿವರುದ್ರರ ಕಲ್ಲೋಳಿಕರ ಅವರ ಮಾತು, ಮೇಲ್ಜಾತಿಯವರಿಗೆ ಅಗಮ್ಯವಾದುದು. ಅವರ ಊರಲ್ಲಿ ಬಸವಣ್ಣನ ದೇವಸ್ಥಾನ ಇರದಿದ್ದರೆ ಅವರ ತಂದೆ ವಿದ್ಯಾವಂತನಾಗುತ್ತಿದ್ದ ಎನ್ನುತ್ತಿದ್ದರಂತೆ. ಅಕ್ಷರ ಸಂಸ್ಕೃತಿಯ ಪ್ರತಿಪಾದಕ ಬಸವಣ್ಣನ ಗುಡಿಯೆ ಶೂದ್ರನಿಗೆ ಪ್ರವೇಶ ನಿರಾಕರಣೆ ಮಾಡಿ ವಿದ್ಯೆಯಿಂದ ಆತನನ್ನು ದೂರ ಮಾಡಿತು. ಈ ಮಾತು ಆತ್ಮಾಭಿಮಾನಿಯ ಅನಿಸಿಕೆ. ಸಂವೇದನೆ ಸೂಕ್ಷ್ಮತೆಗಳು ಸಂವಾದಕ್ಕೆ ಮಾರ್ಗ ಮಾಡಿಕೊಡುತ್ತದೆ. ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುವುದು ಮೂಲಭೂತವಾದಿಗಳು, ಭಯೋತ್ಪಾದಕರು. ತಮ್ಮದಲ್ಲದ್ದು ಅವರಿಗೆ ಸ್ವೀಕಾರಾರ್ಹವಲ್ಲ. ತಾವು ಒಪ್ಪದ್ದನ್ನು ನಾಶಮಾಡಲು, ಭಯೋತ್ಪಾದನೆ ಪರ ವಿರೋಧಗಳನ್ನು ಬದಿಗೆ ಸರಿಸಿ ಪರಸ್ಪರ ಅರ್ಥ ಮಾಡಿಕೊಂಡು ಸಮನ್ವಯದ ದಾರಿಯನ್ನು ಹುಡುಕಿಕೊಳ್ಳಬೇಕು. ಇದು ಈ ಕ್ಷಣದ ಅಗತ್ಯ ಕೂಡ.

ಗಾಂಧೀಜಿ ಕರನಿರಾಕರಣೆ ಮಾಡಿ ಪ್ರತಿಭಟಿಸಿದರು. ಸೆರೆಮನೆಗೆ ಹಾಕಿದರು. ಅಲ್ಲಿಯ ನಿಯಮಾವಳಿಗಳಿಗೆ ಬದ್ಧತೆಯನ್ನು ತೋರಿಸಿದರು. ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿ ಸುವುದು ಅದೇ ಸರಕಾರಕ್ಕೆ ಸವಿನಯ ಪ್ರಾರ್ಥನೆ ಹಾಗೂ ನಿಯಮಪಾಲನೆ ಎಷ್ಟು ಅಪೇಕ್ಷಣೀಯ ಹಾಗೂ ಸಮಂಜಸ, ನೆಹರೂ Tryst with destiny ಪಠಿಸುತ್ತಿರುವಾಗ ೨೦೦೦ ಮೈಲು ದೂರದ ನೌಖಾಲಿಯಲ್ಲಿ ರಾತ್ರಿ ಕಂದೀಲಿನ ಬೆಳಕಿನಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಶ್ರಮಿಸುತ್ತ ಗಾಂಧೀಜಿ ಉಪವಾಸ ವ್ರತ ಕೈಗೊಂಡರು. ಜಾತಿ, ಹುಟ್ಟು, ದೇವರ, ಧರ್ಮದ ಕಾರಣಕ್ಕೆ ೧೦ ಲಕ್ಷ ಜನ ವಲಸೆ ಹೋಗುವುದು ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಪ್ರಯತ್ನಗಳೂ ಕೂಡ ವೈರುಧ್ಯಗಳೇ.

ಸುಧೀರ ಘೋಷ ಪುಸ್ತಕದಲ್ಲಿ ಬರುವಂತೆ ಗಾಂಧೀಜಿ ತನ್ನ ಬ್ರಹ್ಮಚರ್ಯ ಪರಿಪಾಲನೆಯ ಪರೀಕ್ಷೆಯ ಪ್ರಯೋಗಕ್ಕೆ ತನ್ನ ಮೊಮ್ಮಕ್ಕಳಾದ ಮನು ಮತ್ತು ಆಭಾ ಇವರನ್ನು ಒಂದೇ ಚಾದರದಲ್ಲಿ ತನ್ನ ಜೊತೆ ಮಲಗಿಸಿಕೊಳ್ಳುತ್ತಿದ್ದರು. ಆಗ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಆಚಾರ್ಯ ಕೃಪಲಾನಿಯವರು ಗಾಂಧೀಜಿಯವರನ್ನು ಈ ಪ್ರಯೋಗದ ಬಗ್ಗೆ ಪ್ರಶ್ನಿಸಿದರು. ನಿಮ್ಮ ಬ್ರಹ್ಮಚರ್ಯ ಪರೀಕ್ಷೆಯ ಪರಿಣಾಮ ಹದಿಹರಿ ಯದ ಹೆಣ್ಣು ಮಕ್ಕಳ ಮೇಲೆ ಯಾವ ಪರಿಣಾಮ ಬೀರಬಹುದೆಂಬ ಬಗ್ಗೆ ಆಲೋಚಿಸಿ ಎಂದು ಎಚ್ಚರಿಸಿದರು. ಅಂತಹ ವೈಚಾರಿಕ ಪರಿಸರ ಅಂದಿನ ಕಾಲದಲ್ಲಿತ್ತು. ಮಹಾತ್ಮರನ್ನು ಪ್ರಶ್ನಿಸುವ ಅನುಯಾ ಯಿಗಳಿದ್ದ ರೆಂಬುದು ಮಹತ್ವದ ಸಂಗತಿ.

ಸಮಸ್ಯೆಗಳ ಬೇರೆ ಬೇರೆ ಮುಖಗಳ ಚರ್ಚೆಯ ಮೂಲಕ ಸಂಘರ್ಷದ ಗೊತ್ತು ಗುರಿಗಳು ನಿರ್ಧಾರವಾಗಬೇಕು. ವಿಶಾಲ ತಳಹದಿಯ ರಚನೆಗಾಗಿ ಬಸವ, ಬುದ್ಧ, ಗಾಂಧೀಜಿ ಮೊದ ಲಾದವರು ಶ್ರಮಿಸಿದರು. ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಗಾಂಧೀಜಿ, ಸಂಸ್ಥಾನಿಕ ಪ್ರತಿನಿಧಿಯಾಗಿ ಅಂಬೇಡ್ಕರ್ ದುಂಡು ಮೇಜಿನ ಪರಿಷತ್ತಿನ ಚರ್ಚೆಗೆ ಸೇರಿದಾಗ ಗಾಂಧೀಜಿ ಅಂಬೇಡ್ಕರ್‌ಗೆ Young man you are in a hurry  ಎಂದು ಹೇಳಿದರೆ, ಅಂಬೇಡ್ಕರ್ ಹೇಳಿದರು Many mahatmas have come and many mahatmas have gone, They  succeded in raising the dust  but not themselves  ಎಂದು ಉದ್ಗರಿಸಿದರು. ಅಂಬೇಡ್ಕರ್ ದಲಿತರನ್ನು depressed Class ಎನ್ನುತ್ತಿದ್ದರೆ, ರಾಜ್ಯಾಂಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎನ್ನುತ್ತದೆ. ಆದರೂ ಅಸ್ಪೃಶ್ಯರಲ್ಲಿ ಎಡಗೈ ಬಲಗೈ ಎನ್ನುವ ಪ್ರಭೇದಗಳು ಉಳಿದುಕೊಂಡೇ ಬಂದಿವೆ.

ನಮ್ಮ ಒಳ್ಳೆಯ ಕವಿ ಕೆ.ಹೆಚ್. ಶ್ರೀನಿವಾಸ ಪ್ರಕಾರ ವೀರಶೈವ ಧರ್ಮ Wonderful Religion. ಆದರೆ ಆಚರಣೆಯಲ್ಲಿ ಇಲ್ಲ ಎನ್ನುತ್ತಾರೆ. ಅವರ ಒಂದು ಕವನ ಸಾಲುಗಳು ಹೀಗಿವೆ.

ಮನುಕುಲದ ಇತಿಹಾಸದಲ್ಲಿ ಅರ್ಧ ಪುಟ
ಕೆದಕಿದರು ಇದನು, ಇದು ಬದುಕು,
ಉಸಿರು ಬಿಗಿ ಹಿಡಿದಷ್ಟೆ ಬದುಕು

ಎಷ್ಟನ್ನು ಅರಗಿಸಿಕೊಳ್ಳಬಹುದೋ ಅಷ್ಟು ಶಕ್ತಿ ಎಂದು ಸಂಯಮದ ಮಾತನಾಡುತ್ತಾರೆ. ಧಾರಣಶಕ್ತಿ ಮೂಲಕ ಬಸವಾದಿ ಪ್ರಮಥರ ವಿಚಾರಗಳನ್ನು ವಿಶ್ವಮಾನ್ಯ ಮಾಡುವ ಸಹ ಚಿಂತನೆಯ, ಮನುಕುಲವನ್ನು ಪ್ರೀತಿಸುವ ಚಿಂತನ ಮಂಥನ ನಡೆಯಬೇಕಾಗಿದೆ. ಆದಿ ಕವಿ ಪಂಪನ ಪ್ರಕಾರ ಹಿಂಸೆ, ಯುದ್ಧ ಮನುಷ್ಯನಲ್ಲಿಯ ಸಹಜ ಪ್ರವೃತ್ತಿಗಳು. ಅದನ್ನು ನಿಯಂತ್ರಿ ಸುವಲ್ಲಿಯೆ ಬದುಕಿನ ಸಾರ್ಥಕತೆ ಇದೆ.

ಕೂಡಲಸಂಗಮದ ಸಾಂಸ್ಕೃತಿಕ ಕ್ಷೇತ್ರ ಒಬ್ಬ ಜಾಮದಾರನಿಗೆ ಕಾಯುತ್ತಿತ್ತು. ಕಾಯ್ದದ್ದು ಸಾರ್ಥಕವಾಯಿತು ಎನ್ನುವುದು ಕಣ್ಣಿದ್ದ ಎಲ್ಲರಿಗೂ ಕಾಣುತ್ತದೆ. ಈ ಕ್ಷೇತ್ರದ ಅಭಿವೃದ್ದಿಗೆ ನೆರವು ನೀಡಿದ ಅಂದಿನ ಮುಖ್ಯಮಂತ್ರಿ ದಿ.ಜೆ.ಹೆಚ್. ಪಟೇಲ್, ಲಿಂಗಾಯತ ಅಧಿಕಾರಿ ಗಳನ್ನು ತಮ್ಮ ಸುತ್ತ ಕಟ್ಟಿಕೊಂಡ ಆಪಾದನೆಗೆ ಗುರಿಯಾದಾಗ ಅವರು ತಮ್ಮ ತಿಳಿಹಾಸ್ಯದ ಮೂಲಕ ಈ ರೀತಿ ಪ್ರತಿಕ್ರಿಯಿಸಿದ್ದರು. ಕಾಶ್ಮೀರದಲ್ಲಿ ನಾನು ಮುಖ್ಯಮಂತ್ರಿಯಾಗಿ ಲಿಂಗಾಯತರನ್ನು ನೇಮಕ ಮಾಡಿಕೊಂಡಿದ್ದರೆ ನಿಮ್ಮ ಆಪಾದನೆ ಸರಿಯಾಗಿರುತ್ತಿತ್ತು ಎಂದು ಹೇಳುತ್ತ ಬಸವ ಪ್ರಶಸ್ತಿಗೆ ನೆಲ್ಸನ್ ಮಂಡೇಲಾರನ್ನು ಆಹ್ವಾನಿಸಿದ್ದರು. ನಮ್ಮವರಲ್ಲ ಎಂದರೆ  ನಿಮ್ಮವರು ಎನ್ನುವ ಕಾರ್ಯದಲ್ಲಿ ವೈರುಧ್ಯತೆ ಇದೆ. ಮನುಷ್ಯ ಪೂರ್ತಿ ಪ್ರಾಮಾಣಿಕ ನಿದ್ದರೆ ಒಂಟಿ ಬದುಕನ್ನು ಬದುಕಬೇಕಾಗುತ್ತದೆ. ಇಂತಹ ಚಿಂತನ ಮಂಥನಗಳಿಂದ ಮನುಷ್ಯ ಕಡಿಮೆ ಭ್ರಷ್ಟ, ಕಡಿಮೆ ಅಪ್ರಾಮಾಣಿಕ, ಕಡಿಮೆ ಅವಕಾಶವಾದಿ ಹಾಗೂ ಕಡಿಮೆ ಕ್ರೂರಿ ಯಾಗುತ್ತಾನೆ. ಈ ಹಿನ್ನೆಲೆಯಲ್ಲಿ ಈ ವಿಚಾರ ಸಂಕಿರಣ ಸಾರ್ಥಕ, ಚರ್ಚೆಗಳ ಮೂಲಕ, ಸಹ ಚಿಂತನೆಯ ಮೂಲಕ ಪರಿಣಾಮ ಕಾರಿಯಾದ ಗುಂಪುಗಳು ಮತಾಂಧತೆಗೆ, ಭಯೋ ತ್ಪಾದನೆಯ ಸಿಡಿಮದ್ದಿಗೆ ಕಿಡಿ ಇಡುವ ಪ್ರಕ್ರಿಯೆ ನಡೆಯುತ್ತದೆ. ಎಲ್ಲ ಹೋರಾಟಗಳು ಈ ರೀತಿಯಾಗಿಯೇ ರೂಪಗೊಂಡಿರುವುದು.