ಬಸವತತ್ವ ಸಮಾಜ ಹಾಗೂ ಸಾಮಾಜಿಕ ಬದಲಾವಣೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯರಾದ ಶ್ರೀ.ಎಂ.ಪಿ. ಪ್ರಕಾಶರವರೆ, ಕೂಡಲಸಂಗಮ ಕ್ಷೇತ್ರದಲ್ಲಿ ಪವಾಡ ಸದೃಶ್ಯ ಬದಲಾವಣೆ ತಂದ ಡಾ. ಜಾಮದಾರರವರೆ, ಕೂಡಲಸಂಗಮ ಅಭಿವೃದ್ದಿ ಮಂಡಳಿಯ ಆಯುಕ್ತರಾದ ಕೆ.ಎಸ್.ಉಮಾಪತಿಯವರೆ, ಪ್ರಾಧ್ಯಾಪಕರೇ, ಈ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡ ಎಲ್ಲ ಸಭಿಕರಿಗೆ ಹಾಗೂ ತಾಯಂದಿರಿಗೆ ಶರಣಾರ್ಥಿ ಗಳು.

ಭೌತಿಕವಾಗಿ, ಸ್ಥಾವರವಾಗಿ ಬೆಳೆದ ಈ ಪವಿತ್ರ ಸ್ಥಳದಲ್ಲಿ ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳವಾದ ಕೂಡಲಸಂಗಮ ಕ್ಷೇತ್ರದಲ್ಲಿ ಬಸವತತ್ವ, ಸಮಾಜ ಹಾಗೂ ಸಾಮಾಜಿಕ ಬದಲಾವಣೆ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಂಡಿದ್ದಕ್ಕೆ, ವಿಶೇಷ ಅರ್ಥ ಇದೆ. ಡಾ. ಜಾಮದಾರ ಈ ದಿಸೆಯಲ್ಲಿ ಅಭಿನಂದನೆಗೆ ಅರ್ಹರಾಗಿದ್ದಾರೆ.

ಬಸವಣ್ಣ ಬದುಕನ್ನು ಎಲ್ಲ ದಾರ್ಶನಿಕರಿಗಿಂತ ಭಿನ್ನವಾಗಿ ನೋಡಿದ್ದಾನೆ. ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರು ಬದುಕನ್ನು ‘ಪರ’ದ ದೃಷ್ಟಿಯಲ್ಲಿ ನೋಡಿದರೆ, ಬದುಕಿಗೆ ‘ಇಹ’ದ ಅರ್ಥ ಹಚ್ಚಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಸತ್ಯ-ಸುಳ್ಳ, ಆಚಾರ-ವಿಚಾರ, ಸ್ವರ್ಗ-ನರಕಗಳ ಬಗ್ಗೆ ಜನರಾಡುವ ಸರಳ ಭಾಷೆಯಲ್ಲಿ ಬಸವಣ್ಣ ತತ್ವ ಪ್ರತಿಪಾದಿಸಿದ. “ಆಚಾರವೇ ಸ್ವರ್ಗ…..” “ಸತ್ಯ ನುಡಿವುದೇ ಸ್ವರ್ಗ….” ಎಂದು ಸರಳವಾಗಿ ಕಾಣದ ಸ್ವರ್ಗದ ಬಗ್ಗೆ ಕಾಣುವ ರೀತಿಯಲ್ಲಿ ಬಸವಣ್ಣ ಧರ್ಮ ಬೋಧಿಸಿದ. ಮನುಷ್ಯ ಜೀವಿಸುವ ಭೂಮಿಯನ್ನೇ ಸ್ವರ್ಗ ಸಮಾನವಾಗಿ ನಿರ್ಮಾಣ ಮಾಡುವ ಕನಸನ್ನು ಬಸವಣ್ಣ ಕಂಡಿದ್ದ. ಅದಕ್ಕೆ ಬೇಕಾಗುವ ಮಾನವನ ವರ್ತನೆಯ ನಮೂನೆಗಳನ್ನು, ಮೌಲ್ಯ ಗಳನ್ನು ಬಸವಣ್ಣ ರೂಪಿಸುವ ಯತ್ನ ಮಾಡಿದ. ಬಸವಣ್ಣನಿಗೆ ಬದುಕು ಮುಖ್ಯವಾಗಿತ್ತು.

ಬ್ರಹ್ಮಚಿಂತನೆಯ ಅಫೀಮಿನ ಅಮಲು ಜನಸಾಮಾನ್ಯರಿಗೆ ಹಿಡಿದಾಗ, “ಕನ್ನಡಿಯ ನೋಡುವ ಅಣ್ಣಗಳಿರಾ ಜಂಗಮವ ನೋಡಿ”. ಅಂದರೆ ಬ್ರಹ್ಮಜಿಜ್ಞಾಸೆ ಬಿಟ್ಟು, ಆತ್ಮ ಪರಮಾತ್ಮನ ಜಿಜ್ಞಾಸೆಯಲ್ಲಿ ಹೊತ್ತು ಕಳೆಯುವುದನ್ನು ಬಸವಣ್ಣ ನಿರಾಕರಿಸಿದ. ಜಂಗಮದಲ್ಲಿ ಜಗದೀಶನಿದ್ದಾನೆ ಎಂದು ಹೇಳುತ್ತ ಧರ್ಮವನ್ನು ಸಮಾಜಮುಖಿ ಮಾಡಿದ. ಆತ್ಮ-ಪರಮಾತ್ಮನ, ಬಿಂಬ-ಪ್ರತಿಬಿಂಬದ ಅಹಂ ಬ್ರಹ್ಮಾಸ್ಮಿ ಎಂಬ ತಾತ್ವಿಕ ಗೊಂದಲ ಗಳಿಂದ, ಬಸವಣ್ಣ ದೂರ ನಿಂತು ಮೂಲಭೂತವಾದಿಗಳಿಗೆ ‘ತತ್ವಮಸಿ’ ಅದೆಲ್ಲ ನೀನೇ ಇದ್ದಿ ಎಂದು ಹೇಳಿ ಮಾನವನ ಒಟ್ಟು ಚಿಂತನೆಯನ್ನು ಸಮಾಜಮುಖಿಗೊಳಿಸಿದ ಕೀರ್ತಿ ಬಸವಣ್ಣನಿಗಿದೆ.

ಬುದ್ಧನಂತೆ  ಬಸವಣ್ಣನಿಗೂ ಬದುಕಿನ ಗುರಿ ಮುಖ್ಯವಾಗಿತ್ತು. ಒಮ್ಮೆ ಪಕ್ಷಿಗೆ ಬಾಣ ಬಡಿದಾಗ ಬುದ್ಧನಿಗೆ ಆ ಪಕ್ಷಿಯ ಪ್ರಾಣ ಉಳಿಸುವುದು ಮುಖ್ಯ ಉದ್ದೇಶವಾಗಿತ್ತು. ಇಲ್ಲಿ ಬಾಣ ಯಾವ ದಿಕ್ಕಿನಿಂದ ಬಂದಿತು, ಅದರ ವಿಷ, ವಿಶೇಷತೆ ಏನು ಮುಂತಾದವುಗಳೆಲ್ಲ ಮುಖ್ಯವಾಗಿರಲಿಲ್ಲ. ಹಾಗೆಯೇ ಬಸವಣ್ಣನಿಗೆ ಬದುಕು ಮುಖ್ಯವಾಗಿತ್ತು. ಹುಟ್ಟು-ಸಾವುಗಳು ಮುಖ್ಯವಾಗಿರಲಿಲ್ಲ. ಹುಟ್ಟು-ಸಾವಿನ ಮಧ್ಯೆ ಇರುವ ಬದುಕಿನ ಚಿಂತನೆ ಬಸವಣ್ಣನ ಚಿಂತನೆಯ ಕೇಂದ್ರವಾಗಿತ್ತು. ಬಸವಣ್ಣನಿಗೆ ಬುದ್ಧನಷ್ಟು ದೇವರ ಬಗ್ಗೆ ನಿಷ್ಠುರವಾಗಲು ಧೈರ್ಯವಾಗಲಿಲ್ಲ ವೇನೊ? ಅದರೆ “ತನ್ನ ತಾನು ಅರಿದೊಡೆ ಸಾಕು” ಎಂದು ಪ್ರತಿಪಾದಿಸಿದ. ಆದ್ದರಿಂದಲೆ ಇಷ್ಟಲಿಂಗದ ಕಲ್ಪನೆಯನ್ನು ಸಾಂಕೇತಿಕವಾಗಿ ನೀಡಿರಬಹುದು.

ಪೈಗಂಬರ ಇಸ್ಲಾಂ ಧರ್ಮ ಸ್ಥಾಪಿಸುವ ಮೊದಲು ಅಲ್ಲಿಯೂ ಸುಮಾರು ಹನ್ನೆರಡು ನೂರು ದೇವರುಗಳು ಇದ್ದವೆಂದು ಹೇಳಲಾಗುತ್ತದೆ.  ಪೈಗಂಬರ ಅತ್ಯಂತ ಉಗ್ರವಾಗಿ ಮಾನವನ ನಡತೆಯನ್ನು ಖಂಡಿಸಿ ಏಕದೇವೊಪಾಸನೆಯನ್ನು ಪ್ರತಿಪಾದಿಸಿದರು. ಕಲ್ಲು ಮಣ್ಣಿನಿಂದ ಕಟ್ಟಿದ  ಕಾಶಿ, ರಾಮೇಶ್ವರ, ಅಯೋಧ್ಯೆ, ಮಸೀದಿ ಮುಂತಾದವುಗಳು ಪವಿತ್ರ ಸ್ಥಳ ಎಂಬ ಭ್ರಮೆ ಸುಳ್ಳು. ಬಸವಣ್ಣ ‘ತನ್ನ ತಾ ಅರಿದೊಡೆ ಶರಣ’ ಎಂದು ಪ್ರತಿಪಾದಿಸುತ್ತ ‘ಅರಿವೇ ಗುರು’ ಎಂದು ಜಗತ್ತಿಗೆ ಸಾರಿದ. ಇಸ್ಲಾಂ ಎಂದರೆ ಶಾಂತಿ ಶರಣಾಗತಿಯನ್ನು ಸೂಚಿಸುತ್ತದೆ. ಆದರೆ ಇಂದು ಧರ್ಮದ ಅಮಲು ಎಂತಹ ಹೀನ ಕೆಲಸ ಮಾಡಿಸುತ್ತದೆ ಎಂಬುದಕ್ಕೆ ಮೊನ್ನಿನ ಸೆಪ್ಟೆಂಬರ್ ಘಟನೆ ಸಾಕ್ಷಿಯಾಗಿದೆ. ಇಸ್ಲಾಂ ಇಂದು ರಾವಣರ, ಕೌರವರ, ಜರಾಸಂದರ ಕೇಂದ್ರವಾಗಿದೆ. ಅರವತ್ತು ಸಾವಿರ ಜನ ಧಾರ್ಮಿಕ ಮೂಲಭೂತ ವಾದಿಗಳ ಕೈಗೆ ಸಿಕ್ಕುಸತ್ತಿದ್ದಾರೆ ಎಂದರೆ ಧರ್ಮದ ಅನಾಹುತವನ್ನು ಊಹಿಸಿಕೊಳ್ಳಬಹುದು. ರಾಜಕೀಯ ರಕ್ಷಣೆ ಪಡೆದ ಬಿಂದ್ರನ್‌ವಾಲೆ ಹೇಗೆ ಭಾರತಕ್ಕೆ ತಲೆ ನೋವಾಗಿದ್ದ ಎಂಬ ವಿಷಯ ಎಲ್ಲರಿಗೂ ಗೊತ್ತು. ಅಖಾಲಿತಕ್ತ, ಖಲಿಸ್ಥಾನ ಬೇಡಿಕೆಗಳು ಧಾರ್ಮಿಕ ಮೂಲಭೂತ ವಾದಿಗಳಿಂದ ಬದುಕಿಗೆ ಅಪಾಯವಿದೆ. ಎಲ್ಲ ಧರ್ಮಗಳಲ್ಲಿ ಮೂಲಭೂತವಾದಿಗಳಿದ್ದಾರೆ. ಬಸವಣ್ಣ, ಜನರ ಬದುಕು ಮುಖ್ಯವೆ ಹೊರತು ನಿಯಮಗಳಲ್ಲ ಆದ್ದರಿಂದಲೆ ಕಂದಾಚಾರ, ಮೂಢನಂಬಿಕೆ ಡಂಬಾಚಾರದ ಕ್ರಿಯಾವಿಧಿಗಳನ್ನು ಬಸವಣ್ಣ ನಿರಾಕರಿಸಿ ಸರಳ ಧರ್ಮವನ್ನು ಜನರಿಗೆ ನೀಡಿದ.

ಹಾವನೂರ ಆಯೋಗದಿಂದ ಕರ್ನಾಟಕ ಉರಿದು ಬೆಂಕಿ ಆಗಬೇಕಾಗಿತ್ತು. ಆದರೆ ನಾವು ಅದನ್ನು ಸರಳವಾಗಿ ಸ್ವೀಕರಿಸಿದೆವು. ಅದಕ್ಕೆ ಕಾರಣ ಬಸವತತ್ವ. ಮಹಾರಾಷ್ಟ್ರ, ಆಂಧ್ರ, ಯು.ಪಿ, ಎಂ.ಪಿ, ಹಾಗೂ ಗುಜರಾತಗಳಲ್ಲಿ ಬಲಿಷ್ಠ ಕೋಮಿಗೆ ಸೇರಿದವರೆ ಮುಖ್ಯಮಂತ್ರಿ ಯಾಗುತ್ತಾರೆ. ಆದರೆ ಕರ್ನಾಟಕದಲ್ಲಿ ಇದು ಭಿನ್ನವಾಗಿದೆ. ಇಲ್ಲಿ ಹೆಗಡೆ, ಮೊಯಿಲಿ, ಗುಂಡುರಾವ್, ಬಂಗಾರಪ್ಪ ಮುಂತಾದವರು ಮುಖ್ಯಮಂತ್ರಿಗಳಾಗುವ ಸಾಧ್ಯತೆ ಇದೆ. ಬಹುಶಃ ಬಸವತತ್ವ ಇದಕ್ಕೆ ಮುಖ್ಯ ಕಾರಣ.

ಕರ್ನಾಟಕದಲ್ಲಿ ಅನೇಕ ಉಪಜಾತಿ ಉಪ ಪಂಗಡಗಳು ಬಸವತತ್ವದ ಪ್ರಭಾವಕ್ಕೆ ಒಳಗಾಗಿವೆ. ಹೆಸರು, ಆಹಾರ, ವಿಚಾರ, ವಿವಾಹ, ವರ್ತನೆ ಮುಂತಾದವುಗಳ ಮೇಲೆ ಬಸವತತ್ವದ ಮುದ್ರೆ ಇದೆ. ಸಿಂಧೆ, ಮಲ್ಲಪ್ಪನಂಥವರು ಹಾಗೂ ಅವರ ಪಂಗಡ ಬಸವತತ್ವದ ಪ್ರಭಾವಕ್ಕೆ ಒಳಗಾಗಿವೆ. ವೈಶ್ಯರ ಮನೆದೇವರು ಬಸವಣ್ಣನಾಗಿದ್ದಾನೆ. ಚಂದ್ರಶೇಖರ ಕಂಬಾರ ರಂಥವರು ಕರ್ನಾಟಕದಲ್ಲಿ ಲಿಂಗಾಯತ ಪ್ರಭಾವ ವ್ಯಾಪಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ‘ಕಾಯಕ’ ಗೌರವಿಸುವವರು ಹಾಗೂ ಸಸ್ಯಾಹಾರಿಗಳು ಲಿಂಗ ಸಮಾನತೆಯನ್ನು ಒಪ್ಪುವವರು ಅಂದರೆ ಅವರೆಲ್ಲ ಲಿಂಗಾಯತ ಪ್ರಭಾವಕ್ಕೆ ಒಳಗಾಗಿದ್ದಾರೆ.

ಪ್ರಸ್ಥಾನತ್ರಯ ಭಾಷೆ ಅರ್ಥವಾಗದ ಬ್ರಹ್ಮಸೂತ್ರದ ಭಾಷೆ, ಜೀವಾತ್ಮ ಪರಮಾತ್ಮನ ಜಿಜ್ಞಾಸೆ ವೀರಶೈವಕ್ಕೆ ಇಲ್ಲ. ಭಾರತದ ಸಂವಿಧಾನದ ಸೂತ್ರಗಳಲ್ಲಿ ಬಸವತತ್ವ ಅಡಕವಾಗಿದೆ. ಬಸವಣ್ಣ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದು ಹೇಳುತ್ತಲೇ ಅದಕ್ಕೆ ನಿಮ್ಮ ಪಾದ ಸಾಕ್ಷಿ ನಿಮ್ಮ ಮನಸಾಕ್ಷಿ ಎಂಬ ‘ಸಾಕ್ಷಿ’ ನೀಡಿದ. ಗ್ರಾಮೀಣರು ತೋಡಿದ ಬಾವಿಗೆ ‘ನೀರು ಸಾಕ್ಷಿ’ ಮಾಡಿದ ಪಾಪಕ್ಕೆ ‘ಮನಸಾಕ್ಷಿ’ ಎಂದು ಹೇಳುವಂತೆ ಜನಪದರ ಭಾಷೆಯಲ್ಲಿ ಅಮೂಲ್ಯ ತತ್ವ ಪ್ರತಿಪಾದಿಸಿದ. ಕಾಯಕದಲ್ಲಿ ನಿರತನಾದೊಡೆ, ದೇವರ ದರ್ಶನ ನಿರಾಕರಿಸಿದರೆ ಅದೇನು ಅಪರಾಧ ಅಲ್ಲ ಎಂದು ಬಸವಣ್ಣನ ಅನುಯಾಯಿ ಗಳು ಸಾರಿದರು. ಹೀಗೆ ಬಸವತತ್ವದ ವಿಚಾರಗಳು ಆಧುನಿಕ ಭಾರತದ ಸಂವಿಧಾನಕ್ಕೆ ಬುನಾದಿಯಾಗಿವೆ.

೧೯೬೪ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಲಾಲ್‌ಬಹದ್ದೂರ್ ಶಾಸ್ತ್ರಿಗಳು ಪ್ರಧಾನಮಂತ್ರಿಗಳಾಗಿದ್ದಾಗ, ಆಲಮಟ್ಟಿ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಆಗ ಇದರ ಒಟ್ಟು ವೆಚ್ಚ ಎರಡನೂರ ಅರವತ್ತನಾಲ್ಕು ಕೋಟಿ ರೂಪಾಯಿ ಮಾತ್ರ ಇತ್ತು. ಈಗ ಈ ಯೋಜನೆಗೆ ಏಳು ಸಾವಿರ ಕೋಟಿ ರೂಪಾಯಿಗಳ ವೆಚ್ಚ ತಗಲುತ್ತದೆ ಎಂದರೆ ಕನ್ನಡಿಗರ ಸೋಮಾರಿತನ ಊಹಿಸಿಕೊಳ್ಳಬಹುದು. ತುಂಬಿದ ಡ್ಯಾಮ್ ಇದೆ. ಬರಿದಾದ ಭೂಮಿ ಇದೆ. ಆದರೆ ಡ್ಯಾಮಿನಿಂದ ಹೊಲಕ್ಕೆ ನೀರು ಒಯ್ಯಲು ಕಾಲುವೆ ಇಲ್ಲ ಎಂದರೆ ನಮ್ಮ ರಾಜಕೀಯ ಪ್ರಜ್ಞೆಯ ಕೊರತೆಯನ್ನು ಊಹಿಸಿಕೊಳ್ಳಬಹುದು. ನಾವು ಕನ್ನಡಿಗರು ಕೈಕಟ್ಟಿ ಕುಳಿತಿದ್ದೇವೆ  ಎಂದರೆ ನಮ್ಮ ಸೋಮಾರಿತನ ಊಹಿಸಿಕೊಳ್ಳಬಹುದು. ನಮಗೆ ಆರೋಪ ಮಾಡುವುದು ಗೊತ್ತೆ ಹೊರತು ಕೆಲಸ ಮಾಡಿಗೊತ್ತಿಲ್ಲ. ತೊರಗಲ್ಲ ಗ್ರಾಮದ ಒಬ್ಬ ದನ ಕಾಯುವ ಬಾಲಕ ಐ.ಎ.ಎಸ್ ಪಾಸಾಗಿ ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಪಾಲಿಸಿ ಅಂತರರಾಷ್ಟ್ರೀಯ ಖ್ಯಾತಿ ಪಡೆದ ಎಂಬುದೆ ಹೆಮ್ಮೆಯ ವಿಷಯ. ಆ ವ್ಯಕ್ತಿಯಾರೆಂಬುದು ನಿಮೆಲ್ಲರಿಗೂ ಗೊತ್ತಿರುವಂತೆ ಯು.ಕೆ.ಪಿ. ಆಯುಕ್ತರಾದ ಡಾ. ಶಿವಾನಂದ ಜಾಮದಾರ. ಅವರು ಇಲ್ಲಿ ಆಯುಕ್ತರಾಗಿ ಕೆಲಸ ನಿರ್ವಹಿಸುವಾಗ ಗೂಂಡಾಗಿರಿ, ಆಕ್ರಮಣ, ದಾಳಿ, ಈ ಭಾಗದ ರಾಜಕೀಯಸ್ಥರಿಂದ ಜರುಗಿದವು. ಆದರೆ ಜಾಗತಿಕ ಬ್ಯಾಂಕ್ ಜಾಮದಾರ ಇದ್ದರೆ ಮಾತ್ರ ಯು.ಕೆ.ಪಿ.ಗೆ ನೆರವು ಎಂದು ಹೇಳಿದಾಗ ಅವರ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ. ಎಂ.ಪಿ. ಪ್ರಕಾಶರಂತಹ ಕ್ರಿಯಾಶೀಲ ವ್ಯಕ್ತಿಗಳು ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿರುವುದು ಸಾಂದರ್ಭಿಕ ಮೆರಗು ನೀಡಿದೆ. ಹಸಿರು ಬಸ್ ಕೃಷಿ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಲವು ಸಾಂಸ್ಕೃತಿಕ ಉತ್ಸವಗಳಿಗೆ ಬುನಾದಿ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ಎಲ್ಲರಿಗೂ ಶರಣಾರ್ಥಿಗಳು.