ಒಂದು ಕಾಲ ಇರುತ್ತದೆ. ಅದರಲ್ಲಿ ರಾಜನಿರುತ್ತಾನೆ. ಆತನೊಂದಿಗೆ ಸಾಕಿದ ನಾಯಿ ಗಳಂತೆ ದೊಣ್ಣೆನಾಯಕರಿರುತ್ತಾರೆ. ಮಂತ್ರಿಗಳಿರುತ್ತಾರೆ; ಪುರೋಹಿತರಿರುತ್ತಾರೆ; ಹೆಂಡತಿ ಯರೂ ಸೂಳೆ ಯರೂ ಇರುತ್ತಾರೆ. ಹೀಗೆ ಅಧಿಕಾರ, ನ್ಯಾಯ ಮತ್ತು ವ್ಯವಸ್ಥೆಯ ಹೆಸರಲ್ಲಿ ಸ್ನಾಯು ಬಲವೂ ಬುದ್ದಿಬಲವೂ ಒಂದೆಡೆ ಕೇಂದ್ರೀಕೃತವಾಗಿರುತ್ತದೆ. ಈ ಕೇಂದ್ರದ ಸುತ್ತಲೂ ಬೆನ್ನುಮೂಳೆ ಮುರಿದ ಜನ ಇರುತ್ತಾರೆ. ಇವರು ಮೈಮುರಿದು ದುಡಿಯುತ್ತಾರೆ. ಅಧಿಕಾರಿ ಗಳು, ಸೈನಿಕರು, ಶ್ರೀಮಂತರು ಬಡಿದಾಗ ಪೆಟ್ಟು ತಿನ್ನುತ್ತಾರೆ. ಇವರ ರಟ್ಟೆ ಬಲವು ತಿರುಗಿ ಹೊಡೆಯಲಾಗದಷ್ಟು ಜಡವಾಗಿರುತ್ತದೆ. ತಾವು ಭೂಮಿಯಲ್ಲಿ ಬಿತ್ತಿ ಬೆಳೆದದ್ದನ್ನು ಸಂಗ್ರಹಿಸಿ ಡುತ್ತಾರೆ. ಬಲಾಢ್ಯರು ಬಂದು ಅದನ್ನು ಸೂರೆ ಮಾಡುವಾಗ ಮೂಕ ಪ್ರೇಕ್ಷಕರಾಗುತ್ತಾರೆ. ಎಷ್ಟು ಉಳಿಯಿತೊ ಅಷ್ಟೇ ತಮ್ಮ ಭಾಗ್ಯವೆಂದು ಹಣೆ ಚಚ್ಚಿಕೊಂಡು ಅಳುತ್ತಾರೆ. ಈ ಕಷ್ಟ ಕೋಟಲೆಗಳಿಂದ ಬಿಡುಗಡೆಗಾಗಿ ಹಪಹಪಿಸುತ್ತಾರೆ. ಆಗ ಯಾವುದೇ ಪರಿಹಾರವನ್ನು ಹೇಳಿದರೂ ನಂಬುತ್ತಾರೆ. ಅಷ್ಟೂ ಮಾನಸಿಕ ಸ್ಥೈರ್ಯವನ್ನು ಕಳಕೊಂಡಿರುತ್ತಾರೆ. ಆಗ ಬುದ್ದಿವಂತರು ಪ್ರವೇಶಿಸುತ್ತಾರೆ. ಒಂದೊಂದು ಕಷ್ಟ ಪರಿಹಾರಕ್ಕೂ ಒಂದೊಂದು ದೈವ ದೇವರನ್ನು ಸೃಜಿಸುತ್ತಾರೆ. ದೇವತೆಗಳಲ್ಲಿಯೂ ವರ್ಗಭೇದವನ್ನು ಪ್ರತಿಪಾದಿಸುತ್ತಾರೆ. ದೈವ ಭೀರುಗಳಾದ ಜನರಲ್ಲೂ ಸ್ತರಭೇದ ಮತ್ತು ವೈಷಮ್ಯಗಳನ್ನು ಬಿತ್ತುತ್ತಾರೆ. ಮೂಢ ನಂಬಿಕೆಗಳನ್ನು ಹುಟ್ಟು ಹಾಕುತ್ತಾರೆ; ದೈವ ಪ್ರೀತ್ಯರ್ಥವಾಗಿ ಖರ್ಚು ಮಾಡಿಸುತ್ತಾರೆ. ಜನರು ಖರ್ಚಿಗಿಲ್ಲದ್ದಕ್ಕಾಗಿ ಸಾಲದ ಬಲೆಯೊಳಗೆ ಬೀಳುತ್ತಾರೆ. ಹೆಂಡತಿ ಮಕ್ಕಳನ್ನು ಅಡವಿಟ್ಟು ಗುಲಾಮಗಿರಿಗೆ ತಳ್ಳುತ್ತಾರೆ. ತಾವೂ ಗುಲಾಮರಾಗುತ್ತಾರೆ. ಅಂತೂ ಬದುಕಿನ ಅರ್ಥ ಉದ್ದೇಶಗಳನ್ನು ಕಂಡುಕೊಳ್ಳದೆ ಸಾಯುತ್ತಾರೆ. ಹೀಗೆ ಅನೇಕ ತಲೆಮಾರುಗಳೇ ದಾಟುತ್ತವೆ. ಏಕೆಂದರೆ ಜನಜೀವನ ಚಲನೆಯನ್ನು ಕಳಕೊಂಡಿರುತ್ತದೆ; ಕಾಲ ನಿಂತಿರುತ್ತದೆ.

ನಮ್ಮ ಕರ್ನಾಟಕದಲ್ಲೂ ಕಾಲ ಹೀಗೇ ನಿಂತಿತ್ತು. ಬಹುಕಾಲ ಈ ಸ್ಥಗಿತತೆ ಇತ್ತು. ರಾಜ್ಯಾಡಳಿತಗಾರರು ಬದಲಾಗುತ್ತಿದ್ದರು. ಆದರೆ ಆಳ್ವಿಕೆಯ ಗುಣಮಟ್ಟ ಒಂದೇ ಇತ್ತು. ಧಾಳಿಗಳಾಗುತ್ತಿದ್ದುವು. ಯುದ್ಧದಲ್ಲಿ ಸೋಲು ಗೆಲುವುಗಳಾಗುತ್ತಿದ್ದುವು. ಅದರ ವೆಚ್ಚವೆಲ್ಲಾ ಜನರ ಮೇಲೆ ಬೀಳುತ್ತಿತ್ತು. ಗೆದ್ದವರೆಲ್ಲಾ ಹೀರೋ ಅನ್ನಿಸಿಕೊಳ್ಳುತ್ತಿದ್ದರು. ಅವರ ಗುಣ ಗಾನ, ಪಾನಗೋಷ್ಠಿ ನಡೆಯುತ್ತಿತ್ತು. ‘ಪುಣ್ಯವಂತರಿ’ಗೆ ಅದರಲ್ಲಿ ಅವಕಾಶವಿರುತ್ತಿತ್ತು. ‘ಪಾಪಾತ್ಮರಿ’ಗೆ ವೆಚ್ಚ ಭರಿಸುವುದಷ್ಟೇ ಕೆಲಸವಾಗಿತ್ತು. ಇಂತಹ ಪರಿಸ್ಥಿತಿ ಕನ್ನಡ ನಾಡಿನಲ್ಲಿ ಕಳೆದ ಹನ್ನೆರಡನೇ ಶತಮಾನದವರೆಗೂ ಇತ್ತು. ಕಾಲದ ಈ ಸ್ಥಗಿತತೆಯನ್ನು ಬದಲಿಸಲು ಬೇಕಾಗಿದ್ದುದು ಸ್ನಾಯು ಬಲವಲ್ಲ, ಜಾಥಾ ಮೆರವಣಿಗೆಗಳಲ್ಲ, ಹೋರಾಟವಲ್ಲ. ಬದಲಿಗೆ ಜನರಲ್ಲಿ ಆತ್ಮಬಲದ ಜಾಗೃತಿಯಾಗಬೇಕಿತ್ತು. ಪ್ರತಿಯೊಬ್ಬನೂ ಈವರೆಗಿನ ‘ತನ್ನನ್ನು’ ಪ್ರತಿಭಟಿಸಿ ಹೊಸದಾದ ‘ತನ್ನನ್ನು’ ರೂಪಿಸಿಕೊಳ್ಳುವ ಅಗತ್ಯವಿತ್ತು. ಅಜ್ಞಾನದ ಧೂಳಿನ ಹೊದಿಕೆಯೊಳಗಿಂದ ಮೈ ಕೊಡವಿ ಎದ್ದು ಜ್ಞಾನದ ಬೆಳಕಲ್ಲಿ ವಿಹರಿಸುವ ಶಕ್ತಿಯನ್ನು ಪಡೆಯ ಬೇಕಾಗಿತ್ತು. ಮಡಿ-ಮೈಲಿಗೆ, ಹಾರುವ-ಹೊಲೆಯ ಎನ್ನುವಂತಹ ಮಾನವ ನಿರ್ಮಿತ ಅನರ್ಹತೆಗಳನ್ನೂ, ಅಸಮಾನತೆಗಳನ್ನೂ ತೊಡೆದು ಹಾಕಬೇಕಾಗಿತ್ತು. ಮಾರಿ ದೈವಗಳ ಮೂಢನಂಬಿಕೆ ಗಳಿಂದ ಹೊರಬರಬೇಕಿತ್ತು. ಈ ಅನೇಕ ಬೇಕುಗಳನ್ನು ಇತ್ತವರು ಭಕ್ತಿ ಭಂಡಾರಿ ಬಸವಣ್ಣ ನವರು. ಜನರಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿ ಭೇದ ಭಾವಗಳನ್ನು ಸುಟ್ಟು ಸಮಾನತೆಯ ಮತ್ತು ಬಿಡುಗಡೆಯ ಹೊಸ್ತಿಲಿಗೆ ತಂದು ನಿಲ್ಲಿಸಿದವರು ಅವರು. ನಿಜ ಅರ್ಥದಲ್ಲಿ ಸಾಮಾಜಿಕ ಸುಧಾರಣೆಯ ಯತ್ನದಲ್ಲಿ ಪ್ರತಿಭಟನಾತ್ಮಕ ಕ್ರಾಂತಿಗೆ ಪೀಠಿಕೆ ಹಾಕಿದವರು.

* * *

ಭಾರತೀಯ ವೈದಿಕ ಪರಂಪರೆಯ ತತ್ವಗಳ ವ್ಯಾಖ್ಯಾನವು ಆಳುವವರ ಮತ್ತು ಹೇಳುವವರ (ಬ್ರಾಹ್ಮಣರ) ಅನುಕೂಲ ಸಿಂಧುವಾಗಿ, ಅರ್ಥಕ್ಕಿಂತ ಅಪಾರ್ಥವೇ ಹೆಚ್ಚಾಗಿ, ಬಿಡುಗಡೆಗಿಂತ ಬಂಧನದ ಮಾರ್ಗದರ್ಶನವೇ ಅತಿಯಾಗಿ ಜನಸಾಮಾನ್ಯರ ಸೌಲಭ್ಯಕ್ಕಿಂತ ಶೋಷಣೆಯೇ ಗುರಿಯಾಗಿದ್ದ ಸಾಮಾಜಿಕ-ರಾಜಕೀಯ-ಆರ್ಥಿಕ ಸಂದರ್ಭಗಳು ನಮ್ಮ ಇತಿಹಾಸದಲ್ಲಿ ಆಗಾಗ ಕಂಡುಬಂದಿವೆ. ಇಂತಹ ಸಂದರ್ಭದಲ್ಲಿ ಭಾರತೀಯ ಆಧ್ಯಾತ್ಮದ ‘ಮೂಲ ದರ್ಶನ’ಕ್ಕೆ ಜನರನ್ನು ಹಚ್ಚುವ ಪ್ರಯತ್ನಕ್ಕೆ ಹೊರಟವರು ಪ್ರತಿಭಟನೆಯ ಮಾರ್ಗ ವನ್ನೇ ಹಿಡಿಯ ಬೇಕಾಗಿತ್ತು. ಈ ಪ್ರತಿಭಟನೆಯ ದಾರಿಯು ಪ್ರತಿಬಾರಿಯೂ ಹೊಸ ಧರ್ಮದ ಉದಯಕ್ಕೆ ಹೇತುವಾಯಿತು. ಹೀಗೆ ಸನಾತನ ಧರ್ಮದ ಗರ್ಭದಿಂದಲೇ ಉದಿಸಿಬಂದ ಜೈನ ಮತ್ತು ಬೌದ್ಧ ಧರ್ಮಗಳು ಸುಮಾರು ಕ್ರಿ.ಪೂ. ಆರನೇ ಶತಮಾನದ ಸಾಮಾಜಿಕ ಧಾರ್ಮಿಕ ಕ್ರಾಂತಿಗಳಾಗಿ ಉತ್ತರ ಭಾರತದಲ್ಲಿ ಗೋಚರಿಸಿದುವು. ವೈದಿಕ ಕರ್ಮಕಾಂಡ ಮತ್ತು ಯಜ್ಞ ಯಾಗಾದಿಗಳೇ ಮೋಕ್ಷಕ್ಕೆ ದಾರಿ ಎಂಬ ಮೂಢನಂಬಿಕೆಗಳಿಂದ ಜನರನ್ನು ಹೊರಗೆಳೆದು ಅಹಿಂಸೆ, ಸಮಾನತೆ, ಚಾರಿತ್ರ್ಯ ಶುದ್ದಿ ಮುಂತಾದ ಗುಣಗಳ ಮಹತ್ವವನ್ನು ತಿಳಿಸಿ ಸಾಕಷ್ಟು ಜನರ ಬೆಂಬಲ ಪಡೆದು ಸಾಮಾಜಿಕ ಸುಧಾರಣೆಗಳನ್ನು ಮಾಡಿದರು. ಈ ಮತಸ್ಥಾಪಕರಾದ ಮಹಾವೀರ ಮತ್ತು ಬುದ್ಧರು ಯುಗ ಪುರುಷರೆನ್ನಿಸಿದರು.

* * *

ಉತ್ತರ ಭಾರತದಲ್ಲಿ ಕಂಡು ಬಂದ ಈ ಬಗೆಯ ಪ್ರಗತಿಶೀಲ ಕ್ರಾಂತಿಗಳಿಗೆ ಸಂವಾದಿ ಯಾಗಿ ದಕ್ಷಿಣ ಭಾರತದಲ್ಲಿ ಮೂಡಿಬಂದದ್ದು ಬಸವಯುಗ. ಭಕ್ತಿ ಭಂಡಾರಿ ಬಸವಣ್ಣನವರು ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ವರ್ಗೋನ್ನತ ಸ್ಥಾನದಲ್ಲಿದ್ದು ಕ್ರಾಂತಿಗೆ ಕಾರಣರಾದದ್ದು ವಿಶೇಷವೇ ಸರಿ. ಅನೇಕ ಸಂದರ್ಭಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಕ್ರಾಂತಿ ಯೊಂದಷ್ಟೇ ವಿಶ್ಲೇಷಿಸಲ್ಪಟ್ಟಿರುವ ಬಸವಣ್ಣನವರ ಅಭಿಮಾನವು ನಿಜ ಅರ್ಥದಲ್ಲಿ ಸಾಮಾಜಿಕ-ರಾಜಕೀಯ ಪ್ರತಿಭಟನೆಯ ಮಾರ್ಗವಾಗಿತ್ತೆನ್ನುವುದರಲ್ಲಿ ಅನುಮಾನವಿಲ್ಲ. ಅವರಿಗೆ ಸರ್ವ ಸಮಾನತೆಯ ಹೊಸ ಸಮಾಜವನ್ನು ಕಟ್ಟುವ ಗುರಿ ಇತ್ತು. ಇದರ ಸಾಧನೆಗಾಗಿ ಚಳವಳಿಯ ಮಾರ್ಗ ಹಿಡಿಯುವುದು ಅನಿರ್ವಾಯವಾಗಿತ್ತು. ಅದಕ್ಕಾಗಿ ಜನರಲ್ಲಿ ಎಚ್ಚರ ಮೂಡಿಸಿ ಸಂಘಟಿಸುವುದು ಅಗತ್ಯವಿತ್ತು. ಅದು ಎಷ್ಟರಮಟ್ಟಿಗೆ ಪ್ರತಿಭಟನಾತ್ಮಕ ಚಳುವಳಿ ಯಾಗಿತ್ತೆನ್ನು ವುದನ್ನು ಅನ್ವೇಷಿಸುವುದು ಪ್ರಸ್ತುತ ಪ್ರಬಂಧದ ಉದ್ದೇಶವಾಗಿದೆ.

ಪ್ರತಿಭಟನಾತ್ಮಕ ಚಳವಳಿಗಳು

ಪ್ರತಿಕಾರ ಮತ್ತು ರಾಜತ್ವದ ಪತನದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಸಾಕಷ್ಟಿವೆ. ಇವು ಸಾಮಂತರು, ಸೈನಿಕರು ಅಥವಾ ರಾಜಕುಮಾರರೇ ನಡೆಸಿದ ಬಂಡಾಯ ಗಳಾಗಿರಬಹುದು. ಆದರೆ ಇವುಗಳಲ್ಲಿ ಚಳುವಳಿಯ ಮಾರ್ಗವಿರಲಿಲ್ಲ. ಬದಲಾಗಿ ದಂಗೆಯ ತತ್ವವೇ ಪ್ರಧಾನವಾಗಿತ್ತು. ಹೀಗಾದಾಗ ಅರಸೊತ್ತಿಗೆ ಬದಲಾಗುತ್ತದಷ್ಟೇ ಹೊರತು ಜನಜೀವನ ವಿಧಾನದಲ್ಲಿ ಸುಧಾರಣೆ ಆಗುತ್ತಿರಲಿಲ್ಲ. ಆದರೆ ಚಳುವಳಿಯ ಗುರಿ ಅದಲ್ಲ. ಅದು ಬದುಕಿನ ಸಮಷ್ಟಿ ಸುಧಾರಣೆಯ ಮೌಲ್ಯವನ್ನು ಹೊಂದಿರುತ್ತದೆ. ಆಧುನಿಕ ಯುಗದ ಕಾರ್ಮಿಕ ಚಳುವಳಿಗಳು, ಸ್ವಾತಂತ್ರ್ಯ ಚಳುವಳಿಗಳು ಹಾಗೂ ರೈತ ಚಳುವಳಿಗಳಲ್ಲಿ ಆಳುವ ವರ್ಗವನ್ನು ವಿರೋಧಿಸುವುದರೊಂದಿಗೆ ಬಾಳುವ ಮಾರ್ಗವನ್ನು ಸುಂದರಗೊಳಿಸುವ ಯೋಜನೆಯೂ ಇರುತ್ತದೆ. ಹಾಗಾಗಿ ನಾವು ಪ್ರತಿಭಟನಾತ್ಮಕ ಚಳುವಳಿಯ ಪರಿಕಲ್ಪನೆಯನ್ನು ಅದರ ಈ ಕೆಳಗಿನ ಲಕ್ಷಣಗಳಿಂದ ಸ್ಪಷ್ಟಪಡಿಸಿಕೊಳ್ಳಬಹುದು.

. ಐತಿಹಾಸಿಕ ಸಂದರ್ಭ : ಯಾವುದೇ ಪ್ರತಿಭಟನಾತ್ಮಕ ಚಳುವಳಿಗೆ ತಳಹದಿಯಾಗಿ ಒಂದು ರಾಜಕೀಯ-ಆರ್ಥಿಕ-ಸಾಮಾಜಿಕ ಸಂದರ್ಭ ಒದಗಿಬರುತ್ತದೆ. ಈ ಸಂದರ್ಭದಲ್ಲಿ ಶೋಷಿತರ ಪಾಲಿಗೆ ಸುಧಾರಣೆಯ ಎಲ್ಲ ದಾರಿಗಳೂ ಮುಚ್ಚಿದ್ದು ಅವರು ಮೇಲೇಳಲಾಗದ ದುಃಸ್ಥಿತಿಗೆ ತಳ್ಳಲ್ಪಟ್ಟು ಪ್ರತಿಭಟನೆಯನ್ನೇ ಬಿಡುಗಡೆಯ ಅಸ್ತ್ರವಾಗಿ ಸ್ವೀಕರಿಸಿರುತ್ತಾರೆ.

. ರಾಜಕೀಯ ಶಕ್ತಿಗಳ ಧ್ರುವೀಕರಣ : ಶೋಷಿತರಲ್ಲಿ ಪ್ರತಿಭಟನೆಯ ಸಾಧ್ಯತೆಯನ್ನು ನಿರ್ಲಕ್ಷಿಸಿದ ಆಡಳಿತ ವರ್ಗವು ಬಲಪ್ರಯೋಗವನ್ನೇ ತಮ್ಮ ಅಸ್ತಿತ್ವದ ಸಾಧನವಾಗಿ ಬಳಸು ತ್ತಾರೆ. ಪ್ರತಿಭಟನೆಯ ಸೂಚನೆಗಳು ಸಿಗುತ್ತಲೇ ರಾಜಕೀಯ ಶಕ್ತಿಗಳ ಧ್ರುವೀಕರಣವಾಗಿ ಚಳುವಳಿಯ ನಾಯಕರ ಹುಟ್ಟಡಗಿಸುವ ಯತ್ನ ನಡೆಯುತ್ತದೆ.

. ನಾಯಕತ್ವ : ಮೇಲೆ ಹೇಳಿದ ಐತಿಹಾಸಿಕ ಸಂದರ್ಭದಲ್ಲಿ ಬಹುಜನ ಹಿತಾಯ-ಸುಖಾಯದ ಉದ್ದೇಶವುಳ್ಳ ನಾಯಕನೊಬ್ಬ ಒದಗಿಬರುತ್ತಾನೆ. ಈತ ಸಮುದಾಯದೊಳಗಿ ನಿಂದಲೂ ಬರಬಹುದು ಅಥವಾ ಹೊರಗಿನಿಂದಲೂ ಬರಬಹುದು. ಹೊರಗಿನ ನಾಯಕತ್ವ ಲಭಿಸಿದರೂ ಸಾಕಷ್ಟು ಶ್ರೀಘ್ರವಾಗಿ ಒಳಗಿನ ನಾಯಕರೂ ಬೆಳೆದು ಬರುತ್ತಾರೆ.

. ಪರಿಣಾಮ : ಶೋಷಣೆಗೊಳಗಾದವರ ಪೂರ್ಣ ಸಮುದಾಯವು ಚಳವಳಿಯಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಅದರಲ್ಲಿ ಪಾಲ್ಗೊಂಡವರಿಂದಾಗಿ ಇನ್ನುಳಿದವರ ಬದುಕು ಕೂಡಾ ಗುಣಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನೆದುರಿಸಬೇಕಾಗುತ್ತದೆ.

. ಪರಿವರ್ತನೆ : ಪ್ರತಿಯೊಂದು ಪ್ರತಿಭಟನಾತ್ಮಕ ಚಳುವಳಿಯೂ ತತ್‌ಕಾಲೀನ ಮತ್ತು ತತ್‌ಪ್ರದೇಶದ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ನಾಂದಿ ಹಾಡುತ್ತದೆ. ಇದು ರಾಜಕೀಯದ ಮೇಲೂ ಪರಿಣಾಮಗಳನ್ನುಂಟು ಮಾಡಿ ಹೊಸ ಆಡಳಿತ ವ್ಯವಸ್ಥೆ ರೂಪು ಗೊಳ್ಳುತ್ತದೆ. ಉದಾಹರಣೆಗೆ ಎಲ್ಲಾ ಪ್ರಜಾಪ್ರಭುತ್ವದ ಸರಕಾರಗಳ ಸ್ಥಾಪನೆಯ ಹಿಂದೆ ಪ್ರತಿಭಟನಾತ್ಮಕ ಕ್ರಾಂತಿ ನಡೆದ ಇತಿಹಾಸವಿದೆ.

. ಹೊಸ ಮೌಲ್ಯಗಳ ಪ್ರತಿಷ್ಠಾಪನೆ : ಪ್ರತಿಭಟನಾತ್ಮಕ ಚಳುವಳಿಯ ಒಂದು ಉದ್ದೇಶವು ಇನ್ನೊಂದು ಪ್ರತಿಭಟನೆಗೆ ಎಡೆ ಮಾಡಿ ಕೊಡದಿರುವುದು. ಅಂದರೆ ಸಮಾಜದಲ್ಲಿ ಶೋಷಣೆಗೆ ಪೋಷಣೆ ನೀಡುವ ಎಲ್ಲಾ ಮೌಲ್ಯಗಳನ್ನು ನಿವಾರಿಸಿ ಸಮಾನತೆಯ ಮೌಲ್ಯಗಳನ್ನು ಅಂಗೀಕರಿ ಸುವುದು.

ಪ್ರತಿಭಟನಾತ್ಮಕ ಚಳುವಳಿಯ ಲಕ್ಷಣಗಳೆಂದು ಮೇಲೆ ಹೇಳಲಾದ ಅಂಶಗಳ ಆಧಾರದಲ್ಲಿ ನಾವು ಯಾವುದೇ ಕ್ರಾಂತಿಯ ಸ್ವರೂಪವನ್ನು ಅಭ್ಯಸಿಸಲು ಸಾಧ್ಯವಿದೆ. ಹನ್ನೆರಡನೇ ಶತಮಾನ ದಲ್ಲಿ ಬಸವಣ್ಣನವರು ನಡೆಸಿರುವ ಕ್ರಾಂತಿಯನ್ನು ಕೂಡಾ ನಾವು ಈ ದೃಷ್ಟಿಯಿಂದಲೇ ವಿವೇಚಿಸಬಹುದಾಗಿದೆ.

ಬಸವ ಚಳುವಳಿಯ ಆಯಾಮಗಳು : ಬಸವಣ್ಣನವರ ಬದುಕು ಹಾಗೂ ಕಾರ್ಯಗಳ ಕುರಿತಾದ ಅಧ್ಯಯನಗಳನ್ನು ಅಭ್ಯಸಿಸಿದಾಗ ನಾವು ಅವರ ಚಳುವಳಿಯ ಆಯಾಮಗಳನ್ನು ಈ ಕೆಳಗಿನಂತೆ ಗುರುತಿಸಬಹುದಾಗಿದೆ.

. ವೈದಿಕ ವಿರೋಧ

ಬ್ರಾಹ್ಮಣ ದಂಪತಿಗಳ ಪುತ್ರನಾಗಿದ್ದ ಬಸವಣ್ಣನಿಗೆ ಉಪನಯನವಾಯಿತೇ ಎಂಬುದು ಮುಖ್ಯವಲ್ಲ. “ಕರ್ಮಲತೆಯಂತಿದ್ದ ಜನಿವಾರವಂ ಕಳೆದು ಬಿಸುಟು” ಎಂಬುದು ಅವರ ಬದುಕಿನಲ್ಲಿ ಮುಖ್ಯ. ಅಂದರೆ ತೀರಾ ಎಳೆತನದಲ್ಲೇ ಅವರು ಕರ್ಮಕಾಂಡಕ್ಕೆ ಪಕ್ಕಾಗಿದ್ದ ಬ್ರಾಹ್ಮಣ್ಯವನ್ನು ವಿರೋಧಿಸಿದರು. ಉಪನಿಷತ್ತಿನ ಮೂಲತತ್ವಗಳನ್ನು ಅರಗಿಸಿಕೊಳ್ಳದೆ ಕೇವಲ ಬಾಹ್ಯಾಡಂಬರದ ಪೂಜೆ ಪುನಸ್ಕಾರ, ಮಡಿ ಮೈಲಿಗೆ, ಯಾಗ-ಯಜ್ಞಗಳ ಮೂಲಕ ಸಮಾಜದಲ್ಲಿ ಮೇಲ್ಮೈಯನ್ನು ಸಾಧಿಸಿ ಅಜ್ಞಾನಿ ಜನರನ್ನು ಶೋಷಿಸುವುದನ್ನು ಅವರು ಸಹಿಸಲಿಲ್ಲ. ಶಿವನು ನಾದ ಪ್ರಿಯ, ವೇದ ಪ್ರಿಯನೆಂದು ಹೇಳಿ ಪೂಜೆಯ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದವರನ್ನು ಟೀಕಿಸಿದ ಬಸವಣ್ಣನವರು ತಮ್ಮ ವಚನದಲ್ಲಿ “ವೇದವನೋದಿದ ಬ್ರಾಹ್ಮಣನ ಶಿರ ಹೋಯಿತು” ಎಂದಿದ್ದಾರೆ. ಇಲ್ಲಿ ನಾವು ಗುರುತಿಸಬೇಕಾದ್ದೇನೆಂದರೆ ಬಸವಣ್ಣನವರು ವಿರೋಧಿ ಸಿರುವುದು ಡಂಭಾಚಾರದ ಮತ್ತು ಮೋಸದ ಬ್ರಾಹ್ಮಣ್ಯವನ್ನಷ್ಟೇ ಹೊರತು ಬ್ರಹ್ಮತತ್ವವನ್ನರಿತ ಬ್ರಾಹ್ಮಣರನ್ನಲ್ಲ. ಈ ವಿಚಾರವನ್ನು ಬಸವಣ್ಣರ ಪ್ರಭಾವಕ್ಕೊಳಗಾಗಿದ್ದ ಸಿದ್ಧರಾಮನ ವಚನವು ಸ್ಪಷ್ಟಪಡಿಸುತ್ತದೆ. ಅದು ಹೀಗಿದೆ –

ವೇದವನೋದಿ ವೇದಾಧ್ಯಯನ ಮಾಡಿಸಿದರೇನು ?
ಬ್ರಹ್ಮವೇತ್ತುಗಳ ಶುಕ್ಲ ಶೋಣಿತದಿಂದ ಜನಿಸಿದರೇನು ?
ಯಜನಾದ್ಯಷ್ಟ ಷಡ್ಕರ್ಮಂಗಳ ಮಾಡಿದರೇನು
ಆತ ಬ್ರಾಹ್ಮಣನಾಗಬಲ್ಲನೇ ?

ಬ್ರಹ್ಮಜಾನಾತಿ ಬ್ರಾಹ್ಮಣ ಎಂಬ ವೇದವಾಕ್ಯವನರಿತು ಬ್ರಹ್ಮೀ ಭೂತನಾದವನೇ

ಬ್ರಾಹ್ಮಣ.

. ಅರಸು ವಿರೋಧ 

ದೊರೆ ಬಿಜ್ಜಳನ ಬಳಿಯಲ್ಲಿ ಭಂಡಾರದ ಉಸ್ತುವಾರಿಯನ್ನು ವಹಿಸಿದವರಾಗಿಯೂ, ಸಚಿವರಾಗಿಯೂ ಇದ್ದ ಬಸವಣ್ಣನವರು ಆಂತರ್ಯದಲ್ಲಿ ಅರಸೊತ್ತಿಗೆಯ ವಿರೋಧಿ ಯಾಗಿದ್ದ ರೆಂಬುದನ್ನು ಅವರ ವಚನಗಳಲ್ಲಿರುವ ಈ ಮಾತುಗಳು ಸ್ಪಷ್ಟ ಪಡಿಸುತ್ತವೆ. ೧. “ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಲೇಸಯ್ಯ”. ೨. “ಮೇಲಾಗಲೊಲ್ಲೆನು ಕೀಳಾಗಲಲ್ಲದೆ, ಮೇಲಾಗಿ ನರಕದೊಳೋಲಾಡ ಲಾರೆನು, ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು”. ಹೀಗೆ ಬಸವಣ್ಣ ಸಮಾಜದಲ್ಲಿ ಕನಿಷ್ಠ ತಮ್ಮ ಸ್ಥಾನದಲ್ಲೇ ತಮ್ಮ ವೈಯಕ್ತಿಕ ನೆಲೆಯನ್ನು ಗುರುತಿಸಿಕೊಂಡಿದ್ದರು. ಇದು ಅವರ ಅನುಯಾಯಿಗಳಿಗೆ ಸರ್ವಸಮಾನತೆಯ ಮೌಲ್ಯವನ್ನು ಅಂಗೀಕರಿಸಲು ಪ್ರಧಾನ ಪ್ರೇರಣೆ ಯಾಗಿತ್ತು. ದೊಡ್ಡ ಮನುಷ್ಯರನ್ನು ಹಿತವಾಗಿ ಲೇವಡಿ ಮಾಡಿದ ಬಸವಣ್ಣ ಹೀಗೆ ಹೇಳುತ್ತಾರೆ-

“ಅಡ್ಡ ದೊಡ್ಡ ನಾನಲ್ಲಯ್ಯ,
ದೊಡ್ಡ ಬಸುರು (ಹೊಟ್ಟೆ) ನನಗಿಲ್ಲಯ್ಯ”.

ಬಸವಣ್ಣನವರ ಅರಸು ವಿರೋಧವು ತಾತ್ವಿಕ ನೆಲೆಗಟ್ಟನ್ನು ಹೊಂದಿತ್ತೇ ಹೊರತು ಹಿಂಸಾತ್ಮಾಕ ದಂಗೆಯನ್ನು ಬಯಸಿರಲಿಲ್ಲ. ಹಾಗಿದ್ದರೂ ಬಿಜ್ಜಳನ ಕೊಲೆಯ ಹಿಂದೆ ಬಸವಣ್ಣನವರ ಆದೇಶವಿತ್ತೆಂದು ಪುರಾಣಗಳು ಹೇಳಿವೆ. ಆದರೆ ಪ್ರೊ. ತಿಪ್ಪೇರುದ್ರಸ್ವಾಮಿ ಯವರ ಪ್ರಕಾರ ವಿದ್ವಾಂಸರೆಲ್ಲ ಇದನ್ನು ಒಪ್ಪಿಲ್ಲ. (ನೋಡಿ : ಕನ್ನಡ ಸಾಹಿತ್ಯ ಚರಿತ್ರೆ ಸಂ.೪. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ. ಪುಟ ೪೭೨) ಅಂತೂ ಬಸವಣ್ಣ ರಾಜತ್ವ ವಿರೋಧಿ ದೃಷ್ಟಿಯನ್ನು ಹೊಂದಿದ್ದರೆಂಬುದನ್ನು ಒಪ್ಪಬಹುದಾಗಿದೆ. ಅಂದರೆ ರಾಜನ ಆಳ್ವಿಕೆಯ ಅನರ್ಥಗಳಿಗೆ ಯಾವತ್ತೂ ಅವರು ಬೆಂಬಲವಾಗಿ ನಿಲ್ಲಲಿಲ್ಲ. ಅಧಿಕಾರ ದುರುಪಯೋಗ ಮತ್ತು ಬಡಜನರ ದಮನವನ್ನು ಅವರು ಸಹಿಸಲಿಲ್ಲ.

. ಜಾತಿ ವಿರೋಧ

ಜಾತಿಯಾಧಾರಿತ ಅಸಮಾನತೆಯನ್ನು ಗಂಭೀರವಾಗಿ ಪರಿಗಣಿಸಿದ ಬಸವಣ್ಣ ಅಸ್ಪೃಶ್ಯತೆಯ ವಿರುದ್ಧ ಸಮರವನ್ನೇ ಸಾರಿದರು. ಈ ದೃಷ್ಟಿಕೋನ ಹೊಂದಿದ ಅವರ ವಚನಗಳು ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿವೆ. ಕುಲದ ನೆಲೆಯಲ್ಲಿ ಅಸಮಾನತೆಯನ್ನು ಆಚರಿಸುವವರಿಗೆ ಅವರು ತಿಳಿ ಹೇಳುತ್ತಾರೆ –

“ಕೊಲ್ಲುವವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ,
ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಕುಲಜ”.

ಬಹಳ ಮಾರ್ಮಿಕವಾಗಿ ಅವರು ಹೇಳುತ್ತಾರೆ – “ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ? ಕುಲವುಂಟೆ ಜಂಗಮವಿದ್ದೆಡೆಯಲ್ಲಾ? ಶ್ವಪಚನಾದರೇನು ಲಿಂಗಭಕ್ತನೇ ಕುಲಜನು. ಬಸವಣ್ಣ ನವರ ಪ್ರಕಾರ ದಾಸೀಪುತ್ರನಾಗಲೀ ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಆತನನ್ನು ಸಾಕ್ಷಾತ್ ಶಿವನೆಂದು ವಂದಿಸಬೇಕು. ಲಿಂಗವಂತರಾದ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ ಮುಂತಾದವರನ್ನು ತನ್ನ ಬಂಧುಗಳೆಂದೇ ಕರೆದರು.

ಭಾರತೀಯ ಸಮಾಜದ ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ಪ್ರತಿಭಟನಾತ್ಮಕ ಸ್ಥೈರ್ಯ ಬಸವಣ್ಣನವರದ್ದಾಗಿತ್ತು. ಪಂಚಮವರ್ಣದಲ್ಲಿ ಗುರುತಿಸಲಾದ ಅಸ್ಪೃಶ್ಯರನ್ನು ನೇರವಾಗಿ ಮೇಲೆತ್ತಿ ಸರ್ವಸಮಾನತೆಯ ಮಟ್ಟಕ್ಕೆ ತಂದು ನಿಲ್ಲಿಸುವಲ್ಲಿ ಅವರು ಗುಣವನ್ನೇ ಮಾಪಕವಾಗಿ ಬಳಸಿದರು. ಹಾಗಾಗಿಯೇ ಕೊಲ್ಲದವ ಮಾದಿಗನಲ್ಲ; ಹೊಲಸು ತಿನ್ನದವ ಹೊಲೆಯನಲ್ಲ. ಇದೆರಡನ್ನು ಮೇಲ್ಜಾತಿಯವ ಮಾಡಿದರೆ ಅವನೂ ಮಾದಿಗನೇ, ಹೊಲೆಯನೇ. ಹೊಲೆತನ ವಿರುವುದು ನಮ್ಮ ಕೆಲಸದಲ್ಲಿ ಮತ್ತು ವ್ಯಕ್ತಿತ್ವದಲ್ಲಿಯೇ ಹೊರತು ಜನ್ಮದಲ್ಲಿ ಅಲ್ಲ. ಹಾಗಾಗಿ ಉತ್ತಮ ಕೆಲಸವೆಂದರೆ ಸಕಲ ಜೀವಾತ್ಮರಿಗೆ ಲೇಸ ಬಯ ಸುವುದೇ ಆಗಿದೆ ಎಂದು ಅವರು ಸಾರಿದರು.

. ಲಿಂಗಭೇದ ವಿರೋಧ

‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂಬ ಸ್ಮೃತಿ ವಾಕ್ಯವನ್ನೇ ಪ್ರಧಾನ ಮೌಲ್ಯವಾಗಿ ನಂಬಿ ಕೊಂಡು ಪುರುಷ ಪ್ರಧಾನವಾಗಿಯೇ ಸ್ಥಿರತೆ ಪಡೆದ ಸಮಾಜದಲ್ಲಿ ಸ್ತ್ರೀ ಪುರುಷ ಸಮಾನತೆಯ ಘೋಷಣೆಯನ್ನು ಮೊಳಗಿಸಿದುದು ಬಸವಣ್ಣನವರ ಕ್ರಾಂತಿಕಾರಿ ಪ್ರಯತ್ನ ವಾಗಿತ್ತು. ಲಿಂಗ ತಾರತಮ್ಯದ ಬಗ್ಗೆ ತೀವ್ರ ವಿರೋಧ ಹೊಂದಿದ್ದ ಬಸವಣ್ಣ ಸ್ತ್ರೀಯರಿಗೂ ಧಾರ್ಮಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯಬೇಕೆಂದು ಪ್ರತಿಪಾದಿಸಿದ್ದರು. ಅವರು ಪುರುಷರಂತೆ ಸ್ತ್ರೀಯರಿಗೂ ಲಿಂಗಧಾರಣೆ ಮತ್ತು ಶಿವಾರಾಧನೆ ಮಾಡುವ ಹಕ್ಕು ನೀಡಿದರು. ತಮ್ಮ ಅನುಭವ ಮಂಟಪ ದಲ್ಲಿ ಸ್ತ್ರೀಯರೂ ಪುರುಷರೊಂದಿಗೆ ಸಮಾನ ನೆಲೆಯಲ್ಲಿ ಕುಳಿತು ಧಾರ್ಮಿಕ ವಿಚಾರಗಳಲ್ಲಿ ಮುಕ್ತ ಚರ್ಚೆ ನಡೆಸಲು ಅವಕಾಶ ನೀಡಿದರು. ಶಿವತ್ವ ಸಾಧನೆಗೆ, ಕಾಯಕ ಕೈಗೊಳ್ಳುವುದಕ್ಕೆ, ಲಿಂಗದೀಕ್ಷೆಗೆ, ಜಂಗಮ ದಾಸೋಹಕ್ಕೆ ಹೆಣ್ಣಾದರೇನು, ಗಂಡಾದರೇನು ಎಂಬುದು ಅವರ ನಿಲುವಾಗಿತ್ತು. ಇದರಿಂದಾಗಿ ನಾಲ್ಕು ಗೋಡೆಗಳ ಮಧ್ಯೆ ಹೀನ ಬದುಕನ್ನು ಸವೆಯಿಸುತ್ತಿದ್ದ ಸ್ತ್ರೀಯರೂ ಶಿಕ್ಷಣ ಮತ್ತು ಕಾಯಕಗಳ ಸ್ವಾತಂತ್ರ್ಯದ ಮೂಲಕ ಸಾಮಾಜಿಕ ಮರ್ಯಾದೆ ಪಡೆದರು. ಬಸವಣ್ಣನವರ ಧೋರಣೆ ಎಷ್ಟು ವಿಶಾಲವಾಗಿತ್ತೆಂದರೆ ಜೈವಿಕ ಪ್ರಕ್ರಿಯೆಗಳಾದ ಪ್ರಸವ, ಋತುಸ್ರಾವಗಳಿಗಾಗಿ ಸ್ತ್ರೀಯರ ಮೇಲೆ ಹೊರಿಸಲಾಗಿದ್ದ ಹೊಲೆ, ಸೂತಕ, ಮೈಲಿಗೆಗಳ ನಿರ್ಬಂಧಗಳನ್ನು ನಿವಾರಿಸಿದರು. ಅಂತೆಯೇ ತಮ್ಮದಲ್ಲದ ತಪ್ಪಿಗಾಗಿ ನರಳುತ್ತಿದ್ದ ವಿಧವೆಯರು, ಪರಿತ್ಯಕ್ತ ಸ್ತ್ರೀಯರು, ದಾಸಿಯರು, ವೇಶ್ಯೆಯರಿಗೆ ಸಮಾಜದಲ್ಲಿ ಸಮಾನ ಗೌರವಕ್ಕೆ ಹಾಗೂ ಪುನರ್ವಿವಾಹಕ್ಕೆ ಅವಕಾಶ ಕಲ್ಪಿಸಿದರು. ಅಂದಿನ ದಿನಗಳಲ್ಲಿ ತೀರಾ ಕ್ರಾಂತಿಕಾರಿ ಎನ್ನಿಸುವ ಈ ಚಿಂತನೆ ಸಮಾಜದ ಚಲನಶೀಲತೆಗೆ ವೇಗವರ್ಧಕವಾಗಿ ದೊರಕಿದ್ದರಲ್ಲಿ ಸಂಶಯವಿಲ್ಲ.

. ಬಹುದೇವತಾರಾಧನೆಯ ವಿರೋಧ

ವಿವಿಧ ಉದ್ದೇಶಗಳಿಗಾಗಿ ಬೇರೆ ಬೇರೆ ದೇವರನ್ನು ಪೂಜಿಸುತ್ತ ಮಾಟ, ಮಂತ್ರ ಮತ್ತು ತಂತ್ರಗಳ ಮೂಢನಂಬಿಕೆಗಳನ್ನು ಬೆಳೆಸಿಕೊಂಡು ಜನಮೋಸ ಹೋಗುವುದನ್ನು ಬಸವಣ್ಣನವರು ವಿರೋಧಿಸಿದರು. ಹೀಗೆ ಹುಟ್ಟಿಕೊಂಡ ಬಹುದೇವತಾರಾಧನೆಯೊಂದು ಸಮಸ್ಯೆಯೆಂಬುದನ್ನು ಅವರು ಅರಿತಿದ್ದರು. ಇದು ಸಮಾಜದೊಳಗಿನ ಕಚ್ಚಾಟಕ್ಕೆ ಹಾಗೂ ಮೇಲು ಕೀಳಿನ ಭಾವನೆಗಳಿಗೆ ಪುಷ್ಟಿ ನೀಡುತ್ತದೆಂಬುದನ್ನು ಕಂಡುಕೊಂಡ ಅವರು ಮಾರಿ ಮಸಣಿ ಇತ್ಯಾದಿ ನೂರಾರು ದೈವಶಕ್ತಿಗಳನ್ನು ಆರಾಧಿಸುವುದರ ನಿಷ್ಫಲತೆಯನ್ನು ಮನಗಾಣಿಸಿದರು. ಜನರ ಅಂಧಶ್ರದ್ಧೆಯನ್ನು ತೊಲಗಿಸಿ ಆಧ್ಯಾತ್ಮದೆಡೆಗೆ ಅವರನ್ನು ಒಯ್ಯುವ ಬಸವಣ್ಣನವರ ಪ್ರಯತ್ನವಿದೆಂದು ಗುರುತಿಸಲಾಗಿದೆ. ಆದರೆ ವಾಸ್ತವದಲ್ಲಿ ಇದು ಸಮಾನತೆಯ ನೆಲೆಯಲ್ಲಿ ಸಾಮಾಜಿಕ ಸಂಘಟನೆಗೆ ಸಹಾಯಕವಾದ ಕಾರ್ಯಕ್ರಮ ವಾಗಿತ್ತು. ಕೂಡಲಸಂಗಮೇಶ್ವರನಲ್ಲಿ ಭಕ್ತಿ ನೆಲೆಗೊಳಿಸುವವರಿಗೆ ಅನ್ಯದೇವರ ಅಗತ್ಯವಿಲ್ಲ ವೆಂದು ಹೇಳಿ ತನ್ನ ಪ್ರಭಾವದ ತೆಕ್ಕೆಗೆ ಬಂದವರ ಮಧ್ಯೆ ಸಮಾನತೆ ಹಾಗೂ ಒಗ್ಗಟ್ಟನ್ನು ಸಾಧಿಸಲು ಶಕ್ತರಾದರು. ಇದರ ಮುಂದುವರಿದ ತತ್ವವಾಗಿ ಸ್ಥಾವರವಾಗಿ ಲಿಂಗಗಳನ್ನು ಪೂಜಿಸುವುದನ್ನು ಮೆಚ್ಚದೆ ಇಷ್ಟ ಲಿಂಗವೊಂದೇ ಉಪಾಸನೆಯ ದೈವವಾಗ ಬೇಕೆಂದು ಹೇಳಿ ಭಕ್ತಿಯನ್ನು ಅಂತರ್ಮುಖವಾದ ಅನುಸಂಧಾನದ ಕಡೆಗೆ ತಿರುಗಿಸಿದರು. ಇದು ಸಾಮಾನ್ಯ ಜನರ ಪಾಲಿಗೆ ಎಷ್ಟು ಪಥ್ಯವಾಯಿತೋ ತಿಳಿಯದು.

ಬಸವಣ್ಣ ಮೂಢನಂಬಿಕೆಗಳ ಕಟು ಟೀಕಾಕಾರರಾಗಿದ್ದರು. ಜ್ಯೋತಿಷ್ಯ, ಶಕುನ, ತಿಥಿ, ವಾರ, ರಾಹುಕಾಲ, ಗುಳಿಕ ಕಾಲ ಎಂದು ಮುಂತಾಗಿ ಹೆಜ್ಜೆ ಹೆಜ್ಜೆಗೂ ದೈವಕೃಪೆಗಾಗಿ ಹಾತೊರೆಯುವ ಜನರ ದುರ್ಬಲ ಮನಸ್ಸನ್ನು ಸಬಲಗೊಳಿಸಿದ ಸಾಧನೆ ಅವರದ್ದು. “ಘಿಶ್ಞ ವಾರವೆಂದರಿಯೆ, ಲಗ್ನ ವಿಲಗ್ನವೆಂದರಿಯೆ; ಇರುಳೊಂದು ವಾರ, ಹಗಲೊಂದು ವಾರ; ಭವಿಯೊಂದು ಕುಲ, ಭಕ್ತನೊಂದು ಕುಲ”ವೆಂಬುದಾಗಿ ಹೇಳಿ ಶಿವನಲ್ಲಿ ಏಕೈಕ ನಿಷ್ಠೆಗಾಗಿ ಕರೆ ನೀಡಿದರು. ಹೀಗೆ ಏಕದೇವತಾರಾಧನೆಯನ್ನು ಪ್ರತಿಪಾದಿಸಿದ ಅವರು ಎಲ್ಲರೂ ದೇವರ ಮಕ್ಕಳೆಂದು ಸಾರಿದರು.

ಬಸವ ಪಥ

ಬಸವ ಚಳುವಳಿಯ ಆಯಾಮಗಳಿಗೆ ಪೂರಕವಾಗಿ ಅವರು ಜನರಿಗೆ ತೋರಿದ ಸುಧಾರಣಾ ಪಥ ಯಾವುದೆಂಬುದು ಕೂಡಾ ನಮಗೆ ಮುಖ್ಯವಾಗುತ್ತದೆ. ಏಕೆಂದರೆ ಬಸವಣ್ಣ ನವರು ಮತ ಸ್ಥಾಪಕರಲ್ಲ. ಅವರು ವೀರಶೈವ ಪಂಥದ ದೀಕ್ಷೆ ಪಡೆದು ಅದರ ತತ್ವಗಳ ನೆಲೆಯಲ್ಲಿ ಸಾಮಾಜಿಕ ಕ್ರಾಂತಿ ಮಾಡಿದವರು. ವೀರಶೈವರು ತತ್ವಜ್ಞಾನಕ್ಕಿಂತ ಮಿಗಿಲಾಗಿ ಧರ್ಮ ನೀತಿಯನ್ನು ಹೆಚ್ಚು ನೆಚ್ಚಿಕೊಂಡವರು. ಬಸವಣ್ಣನವರು ವೀರಶೈವ ಮತಕ್ಕೆ ಭದ್ರ ತಳಹದಿ ಒದಗಿಸಿದ್ದರಿಂದ ಅವರೇ ಈ ಮತಸ್ಥಾಪಕರೆಂದು ಕೂಡಾ ವ್ಯಾಖ್ಯಾನಿಸಲಾಗಿದೆ. ಏನಿದ್ದರೂ ವ್ಯಕ್ತಿ ವಿಕಾಸದ ಮೂಲಕ ಸಾಮಾಜಿಕ ಸುಧಾರಣೆಯನ್ನು ಸಾಧಿಸುವ ಯತ್ನದಲ್ಲಿ ಬಸವಣ್ಣ ಬೋಧಿಸಿದ ಬದುಕಿನ ಮಾರ್ಗಗಳನ್ನು ತಿಳಿಯೋಣ.

. ಭಕ್ತಿಪ್ರೇಮವಿನಯ

ಶುದ್ಧ ಭಕ್ತಿಯೇ ಭಗವಂತನ ಸಾಕ್ಷಾತ್ಕಾರಕ್ಕೆ ದಾರಿ ಎಂಬುದು ಬಸವಣ್ಣನವರ ಪ್ರತಿಪಾದನೆಯಾಗಿತ್ತು. ಅವರ ವಚನಗಳಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆ ಸಿಗುತ್ತದೆ.

೧. “ಭಕ್ತಿ ಎಂಬ ನಿಧಾನವ ಸಾಧಿಸುವರೆ ಶಿವ ಪ್ರೇಮವೆಂಬಂಜನವ ನೆಚ್ಚಿಕೊಂಬುದು”; ೨. “ಎನ್ನ ಕಾಯವ ದಂಡಿಗೆ ಮಾಡಯ್ಯ, ಶಿರವ ಸೋರೆಯ ಮಾಡಯ್ಯ”, ೩. “ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು. ಪದರ ಬಿಚ್ಚಿ ಒಳಗೊಳಗೆ ಹೋದಂತೆ ಹೆಚ್ಚು ಶುಭ್ರ, ಹೆಚ್ಚು ಸ್ವಚ್ಛ”. ೪. “ಭಕ್ತನ ಮುಖ ದರ್ಪಣದಲ್ಲಿ ಲಿಂಗವ ಕಾಣಬಹುದು”. ೫. ಭಕ್ತನು ಶಾಂತನಾಗಿರಬೇಕು. ೬. “ಶರಣಂಗೆ ಭಕ್ತಿ ಕಾಯವಿಲ್ಲದನ್ನಕ್ಕ ಕೂಡಲಸಂಗಯ್ಯನರಿವ ಪರಿಯೆಂತೊ” ೭. “ಭಕ್ತಿ ಹೀನನ ದಾಸೋಹನ ಸದ್ಭಕ್ತರು ಸವಿಯರು”. ಈ ರೀತಿ ಅನೇಕ ವಚನಗಳ ಮೂಲಕ ಭಕ್ತಿ ಮಾರ್ಗವನ್ನು ಅನುಸರಿಸುವಂತೆ ಶರಣರಿಗೆ ಕರೆಯುತ್ತಾರೆ. ಅವರ ಏಕದೇವೋಪಾಸನೆಯ ತತ್ವಕ್ಕೆ ಪೂರಕವಾಗಿ ಭಕ್ತಿ ಮಾರ್ಗದ ಬೋಧನೆ ಇದೆ.

. ಆಚಾರ ಮಾರ್ಗ

ಬಸವಣ್ಣನವರು ಜನಸಾಮಾನ್ಯರ ವೈಯಕ್ತಿಕ ನಡವಳಿಕೆಗಳ ಸುಧಾರಣೆಗೆ ಹೆಚ್ಚಿನ ಮಹತ್ವ ಕೊಟ್ಟರು. ಇದಕ್ಕಾಗಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಆದ್ದರಿಂದ ನಾವು ಅಂತರಂಗದ ಒಳದನಿಗೆ ಕಿವುಡಾಗಬಾರದೆಂದು ಎಚ್ಚರಿಸಿದರು. ಕೇವಲ ನಿದ್ರಾಹಾರ ಭಯ ಮೈಥುನಗಳಲ್ಲಿ ಬದುಕಿನ ಕೊನೆಗಾಣುವ ವ್ಯಕ್ತಿಗೂ ಪಶುಗಳಿಗೂ ವ್ಯತ್ಯಾಸವಿಲ್ಲವೆಂಬುದು ಅವರ ಬೋಧನೆಯಾಗಿತ್ತು. ಆದ್ದರಿಂದ ಅವರು ಆಚಾರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು. ಇದಕ್ಕೆ ಉದಾಹರಣೆಯನ್ನು ಅವರ ವಚನಗಳಲ್ಲೇ ಕಾಣಬಹುದು. ೧. ಆಚಾರವರಿಯದ ಅರೆ ಮರುಳುಗಳು ಸುಖವನೆತ್ತಬಲ್ಲರು? ೨. ಆಚಾರವೇ ಸ್ವರ್ಗ, ಅನಾಚಾರವೇ ನರಕ; ೩. ಅಯ್ಯ ಎಂದೊಡೆ ಸ್ವರ್ಗ, ಎಲವೊ ಎಂದರೆ ನರಕ; ೪. ಮೃದುವಚನದಲ್ಲಿಯೇ ಕೈಲಾಸವಿದೆ, ೫. ಕೊಡಲಿಲ್ಲದಿದ್ದರೊಂದು (ಸತ್ಕರಿಪ) ಗುಣವಿಲ್ಲದಿದ್ದರೆ ಏನು ಪ್ರಯೋಜನ, ೬. “ಛಲಬೇಕು ಶರಣಂಗೆ ಪರಧನವ ನೊಲ್ಲೆನೆಂಬ, ಪರಸತಿಯ ನೊಲ್ಲೆನೆಂಬ, ಪರದೈವವ ನೊಲ್ಲೆನೆಂಬ, ಲಿಂಗ-ಜಂಗಮ ಒಂದೇ ಎಂಬ”. ಹೀಗೆ ಭಕ್ತನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಶುದ್ಧ ಆಚಾರ-ವಿಚಾರಗಳನ್ನು ಬಸವಣ್ಣ ಸರಳ ವಚನಗಳಲ್ಲಿ ನಿರೂಪಿಸಿದ್ದಾರೆ.

. ಕಾಯಕ ಧರ್ಮ

ಬಸವಣ್ಣನ ದೃಷ್ಟಿಯಲ್ಲಿ ಕಾಯಕವೆಂಬುದು ಪ್ರತಿಯೊಬ್ಬನ ಬದುಕಿನ ಧರ್ಮವಾಗ ಬೇಕು. ದುಡಿದು ಗಳಿಸದ ಹೊರತು ಉಣ್ಣುವ ಹಕ್ಕಿಲ್ಲವೆಂಬುದು ಅವರ ನಿಲುವು. “ಕಾಯಕವೇ ಕೈಲಾಸ” ಇದು ಸತ್ಯ ಎಂದಿದ್ದಾರವರು. ಕಾಯಕ ಪ್ರತಿಯೊಬ್ಬನ ಆವಶ್ಯಕತೆ. ಅದರಲ್ಲಿ ಮೇಲು-ಕೀಳುಗಳಿಲ್ಲ. ಅದು ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಆದರೆ ಕಾಯಕ ದಲ್ಲಿರುವ ನಿಷ್ಠೆ ವ್ಯಕ್ತಿತ್ವದ ನಿರ್ಧಾರಕ. ನಿಷ್ಠೆ ಸರಿಯಾಗಿದ್ದರೆ ಮಾತ್ರ ಕಾಯಕವೇ ಕೈಲಾಸ. ಹೀಗೆ ಬಸವಣ್ಣನವರ ದೃಷ್ಠಿಯಲ್ಲಿ ಜೀವನ್ಮುಕ್ತಿಗೆ ಕಾಯಕವೇ ತಪಸ್ಸು. ಆದರೆ ದುಡಿಮೆ ‘ಕಾಯಕ’ ವಾಗುವುದು ಫಲವನ್ನು ಹಂಚಿ ತಿಂದಾಗ ಮಾತ್ರ. ಇದಕ್ಕೆ ಪೂರಕವಾಗಿ ನುಲಿಯ ಚಂದಯ್ಯ ಹೀಗೆ ಹೇಳಿದ್ದಾನೆ –

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ,
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು,
ಜಂಗಮವಾದರೂ ಕಾಯಕದಿಂದಲೇ ವೇಷದ ಪಾಶ ಹರಿವುದು.

ಯಾವುದೇ ಕೆಲಸ ಕೀಳಲ್ಲ, ಯಾವುದೂ ಮೇಲಲ್ಲ ಎಂಬ ಸಮದೃಷ್ಟಿಯನ್ನು ಬೆಳೆಸಿಕೊಳ್ಳ ಬೇಕೆಂಬುದು ಬಸವಣ್ಣನವರ ಚಿಂತನೆಯಾಗಿತ್ತು.

“ಕೃಷಿ ಕೃತ್ಯ ಕಾಯಕದಿಂದಾದಡೇನು? ತನು ಮನ ಬಳಲಿಸಿ ತಂದು
ದಾಸೋಹವ ಮಾಡುವ ಪರಮ ಸದ್ಭಕ್ತನ ಪಾದ ತೋರಯ್ಯ,
ಆತನ ತನುಶುದ್ಧ, ಮನಶುದ್ಧ, ನಡೆ ಶುದ್ಧ, ನುಡಿಯೆಲ್ಲ ಪಾವನವು”.

ಮನುಷ್ಯನ ನಡೆ-ನುಡಿಗಳು ಶುದ್ಧವಾಗಿರಬೇಕು, ತನುಮನಗಳು ಪಾವನವಾಗಿರ ಬೇಕೆಂಬುದು ಅವರ ಆಶಯವಾಗಿತ್ತು. ಹಾಗಾಗಿ ಕೃಷಿ ಕೂಲಿ ಮಾಡುವವನೂ ಆತ್ಮ ಗ್ಲಾನಿಯನ್ನು ಅನುಭವಿಸಬೇಕಾಗಿಲ್ಲ. “ವೇದವನೋದುವ ಹಾರುವ ತೊಗಲು ಹದ ಮಾಡುವ ಡೋಹರನಿ ಗಿಂತ ಮೇಲಲ್ಲ” ಎಂದಿದ್ದಾರೆ. “ಘ್ರಿವಿಧ ದಾಸೋಹಕ್ಕಾಗಿಯೂ ಆತ್ಮೋದ್ಧಾರಕ್ಕಾಗಿಯೂ ತಾವು ಹೊಲೆ ಹೊಲೆಯರ ಮನೆ ಹೊಕ್ಕು ನಲೆ ಕೈ ಕೂಲಿಯ ಮಾಡುವೆ”ನೆಂದು ಕಾಯಕದ ಮಹತ್ವವನ್ನು ಸ್ಪಷ್ಟಪಡಿಸಿದ್ದಾರೆ. ಹೀಗೆ ಎಲ್ಲ ಕೆಲಸಗಳ ಘನತೆಯನ್ನು ಸಮಾನ ನೆಲೆಗೆ ತಂದು ನಿಲ್ಲಿಸಿದ ಕಾಯಕ ತತ್ವವು ಸಮಾಜದಲ್ಲಿ ವೃತ್ತಿ ಚಲನೆಗೆ ಕಾರಣವಾಗಿ ಸ್ಥಗಿತತೆಯನ್ನು ಅಲ್ಲಾಡಿಸಿತೆನ್ನಬಹುದು.

. ಸಮಾನತೆಯ ಮಾರ್ಗ

ಸರ್ವಸಮಾನತೆಯ ನೆಲೆಯಲ್ಲಿ ಸಹಬಾಳ್ವೆಯ ಸಮಾಜವನ್ನು ಕಟ್ಟಬೇಕೆನ್ನುವುದು ಅವರ ಗುರಿಯಾಗಿತ್ತು. ಹೀಗಾಗಿ ಆಚಾರ ಶುದ್ದಿಯಿಂದ ಮತ್ತು ಲಿಂಗಧಾರಣೆಯಿಂದ ಶರಣರಾದವ ರೆಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿದರು. ಸದ್ಗುಣಗಳೇ ಯೋಗ್ಯತೆಯ ಮಾಪಕ ಹೊರತು ವೃತ್ತಿ ಪ್ರತಿಷ್ಠೆ ಅಲ್ಲವೆಂದು ಸಾರಿದರು. ಹೀಗಾಗಿಯೇ ಅವರ ಅನುಭವ ಮಂಟಪದಲ್ಲಿ ಸೆಟ್ಟಿ ಸಿರಿಯಾಳನಿಗೆ, ಮಡಿವಾಳ ಮಾಚಯ್ಯನಿಗೆ ಡೋಹರ ಕಕ್ಕಯ್ಯನಿಗೆ, ಮಾದರ ಚೆನ್ನಯ್ಯನಿಗೆ, ಅಂಬಿಗರ ಚೌಡಯ್ಯನಿಗೆ, ತುರುಗಾಹಿ ರಾಮಣ್ಣನಿಗೆ, ಸುಂಕದ ಬಂಕಣ್ಣನಿಗೆ ಮಂತ್ರಿಯೊಂದಿಗೆ ಸರಿಸಮನಾಗಿ ಕುಳಿತು ಆಧ್ಯಾತ್ಮಿಕ ಚಿಂತನೆಯಲ್ಲಿ ಪಾಲ್ಗೊಳ್ಳುವ ಸಮಾನ ಸ್ಥಾನ ಮತ್ತು ಅವಕಾಶ ಸಿಕ್ಕುತ್ತದೆ. ಅಂತೆಯೇ ಸ್ತ್ರೀಯರಿಗೂ ಸಮಾನತೆಯ ಮನ್ನಣೆಯನ್ನು ಅನುಭವಮಂಟಪದಲ್ಲಿ ನೀಡಲಾಯಿತು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಹಾದೇವಮ್ಮ ಮುಂತಾದವರು ಅಲ್ಲಮಪ್ರಭು, ಸಿದ್ಧರಾಮ ಮುಂತಾದ ಮಹಾನ್ ವ್ಯಕ್ತಿಗಳಿಗೆ ಸರಿಸಮವಾಗಿ ಪರಿಗಣಿಸಲ್ಪಟ್ಟರು. ಹೀಗೆ ಮತ, ಕುಲ, ವರ್ಣ, ಲಿಂಗ, ವಯಸ್ಸು, ಅಂತಸ್ತುಗಳ ಅಂತರವಿಲ್ಲದೆ ಸರ್ವಮಾನವ ಸಮಾವೇಶಕ್ಕೆ ವೇದಿಕೆಯಾಗಿ ಅನುಭವಮಂಟಪವು ನವಜಾಗೃತಿಗೆ ನಾಂದಿ ಹಾಡಿತು. ಜಾತ್ಯತೀತ ಸಮಾಜ ಸ್ಥಾಪನೆಗೆ ನೆಲೆಗಟ್ಟನ್ನು ಒದಗಿಸಿತು. ಇದರ ಮೂಲಕ ಮಾನವ ಜನಾಂಗದ ಒಂದು ಕುಟುಂಬ ಎಂಬ ವಿಶ್ವ ಸೋದರತ್ವದ ಸಂದೇಶವನ್ನು ಸಾರಿದರು.

. ಅಂತರಂಗಬಹಿರಂಗ ಶುದ್ದಿ

ಸದಾಚಾರ ಕೇವಲ ಸಾಮಾಜಿಕವಲ್ಲ, ಆಂತರಂಗಿಕವಾಗಿಯೂ ಇರಬೇಕೆಂದು ಬಸವಣ್ಣ ಪ್ರತಿಪಾದಿಸಿದರು. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ” ಎಂಬುದು ಬಸವಣ್ಣನವರ ಪ್ರಖ್ಯಾತ ನೀತಿ. ನೈತಿಕ ಆಚರಣೆಗಳಿಂದ ವೈಯಕ್ತಿಕ ಜೀವನ ದೊಡ್ಡದಾಗಬೇಕು. ಅದಾಗದ ಹೊರತು ವ್ಯಕ್ತಿ ಸಮಾಜವನ್ನು ದೊಡ್ಡದು ಮಾಡಲಾರ. ಹೀಗಾಗಿ “ನೀರ ಕಂಡಲ್ಲಿ ಮುಳುಗುವರಯ್ಯ, ಮರವ ಕಂಡಲ್ಲಿ ಸುತ್ತುವರಯ್ಯ, ಬತ್ತುವ ಜಲವ, ಒಣಗುವ ಮರನ ಮೆಚ್ಚಿದವರು ನಿಮ್ಮ ನೆತ್ತ ಬಲ್ಲರೇ ಎಂದು ಪ್ರಶ್ನಿ ಸುತ್ತಾರೆ. ಹಾಗಾಗಿದ್ದರೆ ದಾರಿಯಾವುದು? ಮೃದು ವಚನವೇ ಸಕಲ ಜಪತಪಂಗಳಯ್ಯ, ಸದುನಯವೇ ಸದಾಶಿವನ ಒಲುಮೆಯಯ್ಯ ಎನ್ನುತ್ತಾರೆ ಬಸವಣ್ಣ. ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕವೆಂದು ಸತ್ಯ ನಿಷ್ಠೆಯನ್ನು ಪ್ರತಿಪಾದಿ ಸಿದ್ದಾರೆ. ಹೀಗೆ ಸಂಸ್ಕೃತಿಯ ಉನ್ನತಿಗೆ ಪ್ರತಿಯೊಬ್ಬನ ಮನಸ್ಸಿನ ಶುದ್ಧತೆ ಅಗತ್ಯವೆಂದಿದ್ದಾರೆ.

. ಕನ್ನಡ ಭಾಷೆ

ಬಸವಣ್ಣನವರ ಚಳುವಳಿಯ ಪ್ರಧಾನ ಸಾಧನವೆಂದರೆ ಕನ್ನಡ ಭಾಷೆ. ಜನರಾಡುವ ಭಾಷೆಯಲ್ಲಿ ತೀರಾ ಸರಳವಾದ ವಚನಗಳ ಮೂಲಕ ಸಾಮಾನ್ಯ ಜನರ ಅರಿವಿನ ಪರಿಧಿಯನ್ನು ವಿಸ್ತರಿಸಿದರು. ತೀರಾ ಕೆಳವರ್ಗದ ಜನರನ್ನು ತಲುಪಲು ಅವರಿಗೆ ಸಾಧ್ಯವಾಯಿತು. ಅವರ ವಚನಗಳು ಜನಜೀವನದ ಕಷ್ಟ-ಸುಖಗಳನ್ನು ಅನಾವರಣಗೊಳಿಸುವಂತಹವು. ಮಾನವನ ಬದುಕಿಗೆ ಅರ್ಥವನ್ನೂ ಗುರಿಯನ್ನೂ ನೀಡಿದಂತಹವು. ಹಾಗಾಗಿಯೇ ಅವರಿಗೆ ದೀನ ದುಃಖಗಳಾಗಿದ್ದ ಮಾದಾರ ಧೂಳಯ್ಯ, ಹರಳಯ್ಯ, ಶಿವನಾಗಮಯ್ಯ ಮೊದಲಾದ ಅಸ್ಪೃಶ್ಯರನ್ನು ಅನುಭಾವಿಗಳನ್ನಾಗಿಸಲು ಸಾಧ್ಯವಾಯಿತು. ಅವರು ತನ್ನ ವಚನಗಳಲ್ಲಿ ನೀಡಿದ ದಲಿತರ ಬದುಕಿನ ಪ್ರತಿಮೆಗಳು ವಿಶಿಷ್ಟವಾದುವು.

“ಹಾವಿನ ಬಾಯಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಪಡುವಂ”,
“ಹರಕೆ ತಂದ ಕುರಿ ತೋರಣಕ್ಕೆ ಕಟ್ಟಿದ ತಳಿರ ಮೇಯಿತ್ತು”.

ಇಂತಹ ಪರಿಸ್ಥಿತಿಯಲ್ಲಿರುವ ಅಜ್ಞಾನಿ ಜನಸಮೂಹದ ಉದ್ಧಾರವೇ ಅವರ ಗುರಿಯಾಗಿತ್ತು. ಇದಕ್ಕಾಗಿ ಅವರು ಸಮಾಜದಲ್ಲಿ ಜಾತ್ಯತೀತ ಸಂಬಂಧಗಳನ್ನು ಬೆಳೆಸಲು ನೇತೃತ್ವ ವಹಿಸಿದರು. ಅವರ ಅನುಯಾಯಿಯಾಗಿದ್ದ ಮಾದರ ಚನ್ನಯ್ಯನ ಮಾತು ಗಮನೀಯ: ಸಾಂಖ್ಯ ಸ್ವಪಚ, ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ, ಕೌಂಡಿಲ್ಯ ನಾವಿಂದ ಎಂದುದನರಿಯದೆ ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ? ಹೀಗೆ ಸರಳ ಕನ್ನಡ ಭಾಷೆಯಲ್ಲಿ ವಚನ ರಚನೆ ಮಾಡಿ ಬಸವಣ್ಣನವರು ಜನಸಾಮಾನ್ಯರಲ್ಲಿ ಆತ್ಮಬಲ ಹೆಚ್ಚಿಸಿದರು.

ಬಸವಣ್ಣನವರ ಕರ್ಮಜಿಜ್ಞಾಸೆ

ಕರ್ಮ ಸಿದ್ದಾಂತದ ಅತಿ ವ್ಯಾಖ್ಯಾನದ ಮೂಲಕ ಹಿಂದೂ ಧರ್ಮವು ಉತ್ತಮ ವರ್ಗ ದವರತ್ತಲೇ ಗಮನಹರಿಸಿದೆಯೆಂಬುದಾಗಿ ಒಂದು ಟೀಕೆ ಇದೆ. ಇದಕ್ಕೆ ವಿರುದ್ಧವಾಗಿ ಬಸವಣ್ಣನವರು ದಲಿತರ ಕುರಿತಾಗಿ ದೃಷ್ಟಿ ಹರಿಸಿದ್ದರೆಂಬ ಪ್ರಶಂಸೆ ಇದೆ. ಅವರು ಕರ್ಮ ಸಿದ್ಧಾಂತವನ್ನು ಪ್ರಶ್ನಿಸಿದ್ದರೆಂದು ವ್ಯಾಖ್ಯಾನಿಸಲಾಗುತ್ತದೆ. ಅವರು “ಕರ್ಮಕ್ಕೆ ಕರ್ತವ್ಯವೇ ಕಾರಣವೆಂದು ನಂಬೆನು” ಎಂದಿದ್ದಾರೆ. ವಿಷಯ ಮೋಹವನ್ನು ಶಿವಸಾಧನೆಯಿಂದ ಸುಟ್ಟರೆ ಕರ್ಮಪಾಶ ಹರಿದು ಹೋಗುತ್ತದೆಂದು ಹೇಳಿದರು. “ಎಲವೊ ಎಲವೊ, ಪಾಪ ಕರ್ಮ ಮಾಡಿದವನೇ, ಬ್ರಹ್ಮ ಹತ್ಯೆಯ ಮಾಡಿದವನೇ, ಒಮ್ಮೆ ಶರಣೆಂದರೆ ಪಾಪ ಕರ್ಮ ಓಡುವುವು ಎಂದು ಕರೆ ನೀಡಿದ್ದಾರೆ. ಹೀಗೆ ಬದುಕನ್ನು ತಿರಸ್ಕರಿಸದೆ ಪುರಸ್ಕರಿಸುವ ಧೋರಣೆಯನ್ನು ಜನರಲ್ಲಿ ಬಿತ್ತಿದರು. ಆದರೆ ಕರ್ಮಫಲದ ಬಗ್ಗೆ ಬಸವಣ್ಣನವರ ಚಿಂತನೆಯಲ್ಲಿ ಅಸ್ಪಷ್ಟತೆ ಇದೆ. “ಸುಖ ಬಂದರೆ ಪುಣ್ಯದ ಫಲವೆನ್ನೆನು, ದುಃಖ ಬಂದರೆ ಪಾಪದ ಫಲವೆನ್ನೆನು” ಎಂದ ಅವರು ಇನ್ನೊಂದೆಡೆಯಲ್ಲಿ “ಮಸಿಯ ನೆಸುಕಾಲ ಬೆಳಗಿದರೆ ಬಿಳಿದಾಗ ಬಲ್ಲುದೇ? ಕರ್ಮ ಸ್ಥಿತಿ ಬೆನ್ನಬಿಡದು” ಎಂದಿದ್ದಾರೆ. ಹಾಗೆಯೇ ಇನ್ನೊಂದೆಡೆ “ಶಿವಭಕ್ತನಾದ ಮೇಲೆ ಸ್ವಾರ್ಥ ಮಾಡಿದರೆ ನುಗ್ಗು ಮಾಡುವ, ನುಸಿಯ ಮಾಡುವ, ಮಣ್ಣ ಮಾಡುವ, ಮಸಿಯ ಮಾಡುವ” ಎಂದು ಹೆದರಿಸಿದ್ದಾರೆ. “ಆಸೆಗೆ ಹುಟ್ಟಿದ ಪ್ರಾಣಿ ಆಸೆಯನೆ ಕಲಿತು, ಬೇಡಲು ಹುಟ್ಟಿದ ಪ್ರಾಣಿಗೆ ಬೇಡಲು ವಿಧಿಯೆ. ಸೂಳೆಗೆ ಹುಟ್ಟಿದ ಪ್ರಾಣಿ ನಿಜಗುಣ ಸಜ್ಜನವಪ್ಪುದೇ ಲಿಂಗ- ಶರಣ ವಿಸ್ತಾರಗಳು ಬಯಸಿದರೆ ಬಾರದು. ಅವುಗಳು ಪೂರ್ವಜನ್ಮದ ಪುಣ್ಯದಿಂದ ಬರಬೇಕು”. “ನಿಮ್ಮ ಶರಣರ ಸಂಗವಿದ್ದರೂ ಅಸಜ್ಜನನು ಸದ್ಭಕ್ತನಾಗಬಲ್ಲನೇ?” ಹೀಗೆ ಹೇಳುವ ಬಸವಣ್ಣನವರು ಒಂದು ರೀತಿಯಿಂದ ಕರ್ಮ ಸಿದ್ಧಾಂತವನ್ನೇ ಕೂಡಲಸಂಗಮನಲ್ಲಿ ಜನರ ನಿಷ್ಠೆಯನ್ನು ಬಲಗೊಳಿಸಲು ಉಪಯೋಗಿಸಿದ್ದಾರೆನ್ನಬಹುದು.

ಬಸವಣ್ಣನವರ ಈ ಸಾಮಾಜಿಕ ಪ್ರತಿಭಟನಾತ್ಮಕ ಚಳುವಳಿಯಲ್ಲಿಯೂ ಸಂಪ್ರದಾಯ ವಾದಿಗಳ ಮತ್ತು ಅರಸೊತ್ತಿಗೆಯ ದಾಷ್ಟ್ಯಕ್ಕೆ ಬಲಿಯಾದವರಿದ್ದಾರೆ. ಉದಾಹರಣೆಗೆ ಮಾದರ ಚನ್ನಯ್ಯನನ್ನು ತನಗಿಂತ ಹೆಚ್ಚಿನ ಭಕ್ತನೆಂದು ಬಸವಣ್ಣನವರು ಪುರಸ್ಕರಿಸಿದ್ದು ಅರಸನ ಕೋಪಕ್ಕೆ ಕಾರಣವಾಯಿತು. ಮಾದಿಗರ ಹರಳಯ್ಯನ ಮಗನಿಗೂ ಬ್ರಾಹ್ಮಣರ ಮಧುವಯ್ಯನ ಮಗಳಿಗೂ ವಿವಾಹ ಬಾಂಧವ್ಯ ಬೆಳೆಸಿದ್ದನ್ನು ವರ್ಣ ಸಂಕರ ವಾಯಿತೆಂಬ ದೂರನ್ನು ಸ್ವೀಕರಿಸಿದ ರಾಜ ಬಿಜ್ಜಳನು ಹರಳಯ್ಯ ಮತ್ತು ಮಧುವಯ್ಯರನ್ನು ಆನೆಯ ಕಾಲಿಗೆ ಕಟ್ಟಿ ಎಳೆಸುವ ಶಿಕ್ಷೆಯನ್ನು ವಿಧಿಸಿದ. ಇನ್ನು ಜಂಗಮ ದಾಸೋಹದ ಹೆಸರಿನಲ್ಲಿ ಬಸವಣ್ಣನವರು ಭಂಡಾರದ ಹಣವನ್ನು ಬರಿದುಗೊಳಿಸುತ್ತಿದ್ದಾರೆಂಬ ಆರೋಪ ವನ್ನು ಎದುರಿಸಬೇಕಾಯಿತು. ಬಿಜ್ಜಳನ ಹತ್ಯೆಯ ಆರೋಪವೂ ಶರಣರ ಮೇಲೆಯೇ ಬಂದು ಕಲ್ಯಾಣದಲ್ಲಿ ಶಿವಭಕ್ತರ ಹತ್ಯೆ ನಡೆಯಿತು. “ಕೊಲ್ಲೆನಯ್ಯ ಪ್ರಾಣಿಗಳ, ಮೆಲ್ಲೆನಯ್ಯ ಬಾಯಿಚ್ಛೆಗೆ” ಎಂದ ಅಹಿಂಸಾವಾದಿ ಚಳವಳಿಯ ನಾಯಕರಾಗಿದ್ದ ಬಸವಣ್ಣನವರು ರಕ್ತ ದೋಕುಳಿಯ ಹಿಂಸಾತ್ಮಕ ಪ್ರತೀಕಾರವನ್ನು ಕಾಣಬೇಕಾಯಿತು. ಇದರಿಂದಾಗಿ ಕಲ್ಯಾಣವನ್ನು ಬಿಟ್ಟು ಕೂಡಲಸಂಗಮ ದಲ್ಲಿದ್ದುಕೊಂಡೇ ಬಸವಣ್ಣನವರು ಸಾಮಾನ್ಯ ಜನರ ಆತ್ಮೋದ್ಧಾರದ  ಚಳುವಳಿಗೆ ನೇತೃತ್ವ ನೀಡಿದರು. ವೇದ, ಶಾಸ್ತ್ರ, ಸಿದ್ಧಾಂತ, ತರ್ಕಗಳನ್ನು ಬದಿಗೆ ಸರಿಸಿದಾಗ ಸತ್ಯ ಗೋಚರವಾಗುತ್ತ ದೆಂದು ತಿಳಿ ಹೇಳಿದರು. ಕರ್ಮಕಾಂಡ ಪ್ರಧಾನವಾದ ಮತ್ತು ಹಿಂಸಾ ಮೂಲವಾದ ಯಜ್ಞ ಯಾಗಾದಿಗಳನ್ನು ಖಂಡಿಸಿ ಜ್ಞಾನ ಕಾಂಡ ಮತ್ತು ಉಪನಿಷದ್ದರ್ಶನಕ್ಕೆ ಕರೆ ನೀಡಿದ ಬಸವಣ್ಣನವರು “ದಯವೇ ಧರ್ಮದ ಮೂಲವಯ್ಯ” ಎಂಬ ಸುಂದರವಾದ ಅನುಕರಣೀಯವಾದ ಸಾರ್ವಕಾಲಿಕ ಸೂತ್ರ ಎಲ್ಲರ ಬದುಕಿನ ಧ್ಯೇಯವಾಗಿರಬೇಕೆಂದು ಪ್ರತಿಪಾದಿಸಿದರು.

ವಿಶ್ಲೇಷಣೆ

ಬಸವಣ್ಣನವರದ್ದು ಪ್ರತಿಭಟನಾತ್ಮಕ ಚಳುವಳಿಯಾಗಿತ್ತೇ ಎಂಬ ಪ್ರಶ್ನೆಗೆ ನಾವು ಆರಂಭ ದಲ್ಲಿ ವ್ಯಾಖ್ಯಾನಿಸಿದ ಲಕ್ಷಣಗಳನ್ನು ಈಗ ಪರಿಶೀಲಿಸಬಹುದಾಗಿದೆ. ಬಸವಣ್ಣನವರು ಹುಟ್ಟಿ ಬೆಳೆದ ಕಾಲವು ನಾವು ಪೀಠಿಕೆಯಲ್ಲಿ ನೋಡಿದಂತಹ ಸ್ಥಗಿತತೆಯಲ್ಲಿ ಜಡ್ಡುಗಟ್ಟಿದ ಐತಿಹಾಸಿಕ ಸಂದರ್ಭವಾಗಿತ್ತು. ಜನರು ಆತ್ಮಗ್ಲಾನಿಯ ದೌರ್ಬಲ್ಯದಿಂದ ಬದುಕಿನ ಅರ್ಥವನ್ನು ತಿಳಿಯದೆ ನರಳುತ್ತಿದ್ದರು. ಅದೇ ಕಾಲದಲ್ಲಿ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು, ಸೇವುಣರು ಮುಂತಾದ ರಾಜವಂಶಗಳ ನಡುವಿನ ಯುದ್ಧಗಳಿಂದಾಗಿ ಜನಸಾಮಾನ್ಯರ  ಬದುಕು ದಾರುಣ ಸ್ಥಿತಿಗೆ ಮುಟ್ಟಿತ್ತು. ಉತ್ತರ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚಕ್ರವರ್ತಿತ್ವದ ಮಹತ್ವಾಕಾಂಕ್ಷಿಯಾಗಿದ್ದ ಬಿಜ್ಜಳನ ಕೈಯಲ್ಲಿ ರಾಜಕೀಯ ಶಕ್ತಿಯ ಧ್ರುವೀಕರಣ ಸಂಭವಿಸಿತ್ತು. ಈ ಸಂದರ್ಭದಲ್ಲಿ ಆತ್ಮಗ್ಲಾನಿಯನ್ನು ಕಳೆದು ಬಿಸುಟು ಜನಸಾಮಾನ್ಯರು ಎದ್ದು ನಿಲ್ಲುವಂತೆ ಮಾಡಬಲ್ಲ ನಾಯಕತ್ವವನ್ನು ಸಮುದಾಯದೊಳ ಗಿಂದಲೇ ಬೆಳೆದು ಬಂದ ಬಸವಣ್ಣನವರು ನೀಡಿದರು. ವೈಯಕ್ತಿಕ ಬದುಕಿನಲ್ಲಿ ಕಂದಾಚಾರ ಗಳನ್ನು ಪ್ರತಿಭಟಿಸಿ ಆದರ್ಶಪ್ರಾಯರಾಗಿ ಕಾಣಿಸಿಕೊಂಡ ಬಸವಣ್ಣನವರು ದೀನದಲಿತರ ಮಟ್ಟಕ್ಕಿಳಿದು ಅವರನ್ನು ಮೇಲೆತ್ತಲು ಯತ್ನಿಸಿದರು. ಒಂದು ರೀತಿಯಿಂದ ಇದು ಜಾತ್ಯಾಧಾರಿತ ಸಾಮಾಜಿಕ ರಚನೆಗೆ ಭಯಂಕರ ಭೂಕಂಪದಂತಹ ಅಲುಗಾಟವಾಗಿತ್ತು. ಇದರ ಪರಿಣಾಮವಾಗಿ ಬಸವಣ್ಣನವರ ನೆರಳಲ್ಲಿ ಅನೇಕಾನೇಕ ಮಂದಿ ತಮ್ಮ ಬದುಕಿನ ದಿಸೆಯನ್ನು ಬದಲಿಸಿಕೊಂಡರು. ಇನ್ನೂ ಅನೇಕಮಂದಿ ಆಂಶಿಕವಾಗಿ ಪರಿವರ್ತನೆಗೊಂಡರು. ಇದಕ್ಕೆ ಪ್ರತೀಕಾರವಾಗಿ ಅನಪೇಕ್ಷಿತವಾದ ರಕ್ತಕ್ರಾಂತಿಯೂ ನಡೆಯಿತು. ಹಾಗಿದ್ದರೂ ಬಸವ ಚಳುವಳಿಯಿಂದಾಗಿ ಜನರಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪರ್ಯಾಯ ಮೌಲ್ಯಗಳು ದೊರಕಿದುವು. ಮುಖ್ಯವಾಗಿ ಸಮಾನತೆಯ ಮೌಲ್ಯವು ಪ್ರಯೋಗ ಯೋಗ್ಯವೆಂಬುದು ಅನುಭವಕ್ಕೆ ಬಂದಿತು. ಇದಕ್ಕೆಲ್ಲ ಸಾಂಸ್ಥಿಕ ರೂಪವಾಗಿ ಅನುಭವ ಮಂಟಪವು ಅಸ್ತಿತ್ವಕ್ಕೆ ಬಂತು. ಹೀಗೆ ನಾವು ವ್ಯಾಖ್ಯಾನಿಸಿರುವ ಪ್ರತಿಭಟನಾತ್ಮಕ ಚಳುವಳಿಯ ಎಲ್ಲ ಲಕ್ಷಣಗಳೂ ಬಸವ ಚಳುವಳಿಯಲ್ಲಿದ್ದುದು ಕಂಡುಬರುತ್ತದೆ.

ಚಳವಳಿಯ ಯಶಸ್ಸು

ಇದು ಪ್ರಶ್ನೆಯಾಗಿಯೇ ಉಳಿದಿದೆ. ಚಳವಳಿ ನಡೆದ ತತ್ಕಾಲದಲ್ಲಿ ಬಸವಣ್ಣನವರಿಗೆ ಯಶಸ್ಸು ಸಿಕ್ಕಿದೆ. ಅವರ ಅನುಭವ ಮಂಟಪ ಒಂದು ಪ್ರಬಲ ವೇದಿಕೆಯಾಗಿ ಶರಣರ ಸಂಘಟನೆ ಮಾಡಿದೆ. ಕೆಳಸ್ತರದ ಜನರು ಮೇಲೆದ್ದು ಬಂದು ಸಮಾನ ನೆಲೆಯಲ್ಲಿ ಭಾಗವಹಿಸಿದ್ದಾರೆ. ಮೇಲ್ಜಾತಿಯವರು ಶರಣರಾದ ಬಳಿಕ ದಲಿತರ ಬಗ್ಗೆ ಸಹಾನುಭೂತಿಪರ ಮೃದು ಧೋರಣೆ ತಳೆದಿದ್ದಾರೆ. ಇದೆಲ್ಲ ಆಗಿದೆ ಹೌದು. ಆದರೆ ಮುಂದೇನಾಗಿದೆ? ಬಸವಣ್ಣನವರ ಬಳಿಕ ಏನು ನಡೆಯಿತು? ಹಾಗೂ ಇಂದಿನ ಪರಿಸ್ಥಿತಿ ಏನು ಎಂಬುದರ ಜಿಜ್ಞಾಸೆ ನಡೆಸಿದರೆ ಬಸವ ಚಳುವಳಿಗೆ ದೀರ್ಘಕಾಲಿಕ ಯಶಸ್ಸು ಸಿಕ್ಕಿದೆ ಎನ್ನುವಂತಿಲ್ಲ. ಅದರ ವಿಫಲತೆಯ ಕೆಲವೊಂದು ಕಾರಣಗಳನ್ನು ನಾವಿಲ್ಲಿ ಚಿಂತನೆಗೆ  ಹಚ್ಚಬಹುದು.

೧. ಬಸವಣ್ಣನವರು ಸಾಮಾಜಿಕವಾಗಿಯೂ ಆಡಳಿತಾತ್ಮಕವಾಗಿಯೂ ಮೇಲ್‌ಸ್ತರ ದಲ್ಲಿದ್ದರು. ಅವರು “ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯ, ನಾನು ಬಡವನಯ್ಯ” ಎಂದರೂ ಜನರು ಅವರನ್ನು ಹಾಗೆಯೇ ಸ್ವೀಕರಿಸಿರಲು ಸಾಧ್ಯವಿಲ್ಲ. ಅಂತಹ ಸ್ಥಾನದಲ್ಲಿದ್ದುಕೊಂಡು ಈ ಬಗೆಯ ಕ್ರಾಂತಿಯನ್ನು ಅವರು ಮಾಡಿದರೆಂಬುದು ಮಹತ್ವದ ವಿಚಾರವೇ ಸರಿ. ಆದರೆ ಜನರ ಕಣ್ಣಿನಲ್ಲಿ ಎತ್ತರದ ಮಟ್ಟದಲ್ಲಿದ್ದ ಅವರು ಬೋಧಿಸಿದ ಸಮಾನತೆ ಆದರ್ಶಪ್ರಾಯವಾಯಿತೇ ಹೊರತು ಪ್ರಾಯೋಗಿಕವಾಗಿರುವುದು ಕಷ್ಟ.

೨. ಬಸವಣ್ಣನವರು ಸಚಿವ ಸ್ಥಾನದಲ್ಲಿದ್ದೂ ಬಿಜ್ಜಳನನ್ನು ಶರಣನನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಸಾಮ್ರಾಟ್ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದಂತೆ ಧರ್ಮವು ರಾಜ ಧರ್ಮವೂ ಆಗಿ ಹೆಚ್ಚಿನ ಪ್ರಭಾವ ಮತ್ತು ಪರಿಣಾಮಗಳುಂಟಾಗುತ್ತಿತ್ತೆಂದು ಊಹಿಸಬಹುದಾಗಿದೆ. ಆದರೆ ಬಿಜ್ಜಳನು ಸಂಪ್ರದಾಯವಾದಿಗಳ ಮಾತಿಗೆ ಬೆಲೆಕೊಟ್ಟು  ಶರಣರನ್ನು ಶಿಕ್ಷಿಸುವಷ್ಟು ವಿರೋಧ ವ್ಯಕ್ತಪಡಿಸಿದ್ದರಿಂದ ಚಳವಳಿ ಹಿನ್ನಡೆ ಕಂಡಿತು.

೩. ಲಿಂಗಾಯತ ಧರ್ಮ ಬಹು ಬೇಗನೆ ಜಾತೀಯತೆಗೆ ಒಗ್ಗಿಕೊಂಡಿತು. ಹಿಂದೆ ಬೌದ್ಧ ಧರ್ಮವು ಜಾತೀಯತೆಗೆ ಪಕ್ಕಾಗಲು ಒಗ್ಗಿಕೊಳ್ಳದ ಕಾರಣ ಭಾರತದಿಂದಲೇ ಕಾಲು ಕೀಳ ಬೇಕಾಯಿತು. ಜೈನ ಧರ್ಮವು ಮಾತ್ರ ಒಂದು ಜಾತಿಯಾಗಿ ಉಳಿದುಕೊಂಡಿದೆ. ಅಂತೆಯೇ ವೀರಶೈವ ಧರ್ಮವು ಜಾತಿ ವಿರೋಧಿಯಾಗಿ ಉಗಮಿಸಿದ್ದರೂ ಈಗ ಒಂದು ಮತವಾಗಿ ಉಳಿದಿರುವುದಕ್ಕೆ ಅದು ಜಾತೀಯತೆಗೆ ಒಗ್ಗಿಕೊಂಡದ್ದೇ ಕಾರಣವಾಗಿದೆ. ಅರ್ಥಾತ್ ಲಿಂಗಾಯತರದ್ದೇ ಒಂದು ಜಾತಿಯಾಗಿ ಅದರಲ್ಲಿ ಸೇರಿಕೊಂಡವರ ಪೂರ್ವಾಶ್ರಮದ ಜಾತಿಗಳು ಪುನಃ ಜಾರಿಯಾಗಿ ಒಟ್ಟು ಜಾತಿವರ್ಗದ ಸ್ತರಗಳು ಮತ್ತೆ ಕಾಣಿಸಿಕೊಂಡಾಗ ಉಳಿದದ್ದು ವಚನಗಳು ಮಾತ್ರ. ಅವುಗಳಲ್ಲಿದ್ದ ಸಂದೇಶವು ನಿತ್ಯ ಬದುಕಿಗೆ ಪಥ್ಯವಾಗಲಿಲ್ಲ.

೪. ಕ್ರಿ.ಪೂ. ಆರನೇ ಶತಮಾನದಲ್ಲಿ ಕ್ರಾಂತಿ ಮಾಡಿದ ಬುದ್ಧ ಮತ್ತು ಮಹಾವೀರರು ಕಾಲಕ್ರಮೇಣ ಯುಗಪುರುಷರೆನಿಸಿದರು. ಎಲ್ಲಿಯವರೆಗೆಂದರೆ ಬುದ್ಧನನ್ನು ಮಹಾವಿಷ್ಣುವಿನ ಒಂಬತ್ತನೆಯ ಅವತಾರವೆಂಬುದಾಗಿ ಪರಿಗಣಿಸಿ ಪರಂಪರೆಯ ಕಥನ ಚೌಕಟ್ಟಿನೊಳಗೆ ಆತನನ್ನು ಎಳೆತಂದು ಆತ ಮಾಡಿದ ಕ್ರಾಂತಿಯನ್ನು ನಿಸ್ತೇಜಗೊಳಿಸಲಾಯಿತು. ಜೈನ ಧರ್ಮಾನುಯಾಯಿಗಳು ತಮ್ಮ ತೀರ್ಥಂಕರರ ಪರಂಪರೆಯನ್ನು ವ್ಯಾಖ್ಯಾನಿಸಿ ಮಹಾವೀರ ನೊಬ್ಬ ಅವತಾರಿ ಪುರುಷನೆನ್ನಿಸಿದ ಬಳಿಕ ಜೈನ ಧರ್ಮವೂ ನಮ್ಮ ಸನಾತನ ಧರ್ಮದ ಶಾಖೆಯೆನಿಸಿತು. ಅದೇ ರೀತಿ ಬಸವಣ್ಣನವರನ್ನೂ ಯುಗಪುರುಷನೆಂದೂ, ನಂದೀಶನ ಅವತಾರವೆಂದೂ, ಪವಾಡ ಪುರುಷರೆಂದೂ ಬಣ್ಣಿಸಿ ದೈವತ್ವಕ್ಕೇರಿಸಿಯಾಗಿದೆ. ಯಾವಾಗ ಮತಸ್ಥಾಪಕ ದೈವತ್ವಕ್ಕೇರುತ್ತಾನೋ ಆಗ ಮತ ತತ್ವಗಳು ಧರಾಶಾಯಿಯಾಗುತ್ತವೆ. ಅನುಯಾಯಿಗಳು ಕಾಲಕ್ರಮೇಣ ತಮ್ಮ ಮತ ಪ್ರವರ್ತಕರ ಚಿಂತನೆಗಳನ್ನು ಮರೆತು ಜಾತಿ ಪದ್ಧತಿ, ವರ್ಣಭೇದ, ಸ್ವರ್ಗ-ನರಕ, ಬಹುದೇವತಾರಾಧನೆ, ಅಜ್ಞಾನ ಮತ್ತು ಮೂಢನಂಬಿಕೆ ಗಳ ಅಂಧಕಾರದಲ್ಲಿ ಮುಳುಗಿ ಹೋಗುತ್ತಾರೆ.

೫. ಬಿಜ್ಜಳನ ಕೊಲೆ ಮತ್ತು ಪ್ರತಿಕಾರವಾಗಿ ಶಿವಶರಣರ ಹತ್ಯೆಯೊಂದಿಗೆ ಕಲ್ಯಾಣವು ರಕ್ತರಂಜಿತವಾದಾಗ ಬಸವಣ್ಣನವರು ನಿರ್ಣಾಯಕ ಪಾತ್ರ ವಹಿಸದಿದ್ದುದರಿಂದ ಸಂಪ್ರದಾಯವಾದಿಗಳ ಕೈ ಮೇಲಾಯಿತು. ಆಗ ಜನಸಾಮಾನ್ಯರು ಬಲಿಷ್ಠರಿಗೆ ನಿಷ್ಠರಾಗಿರುವುದನ್ನೇ ಕ್ಷೇಮವೆಂದು ತಿಳಿದಿರಬೇಕು.

೬. ಜಾತಿಭೇದ ಮತ್ತು ವರ್ಗಭೇದಗಳು ಸಂಯೋಗಗೊಂಡಿರುವ ಭಾರತದ ಸಮಾಜ ದಲ್ಲಿ ಈ ಸ್ತರವಿನ್ಯಾಸವನ್ನು ಸ್ಥಿರೀಕರಿಸುವ ಸಂಸ್ಥೆಗಳಲ್ಲಿ ಸರಕಾರದಂತೆಯೇ ಮಠಗಳೂ ಪ್ರಧಾನ ಪಾತ್ರ ವಹಿಸುತ್ತವೆ. ಹೀಗಾಗಿ ಅವುಗಳಿಂದ ಬಸವಣ್ಣನವರ ಆರಾಧನೆಯ ಪ್ರಚಾರದಲ್ಲಿ ವಹಿಸುವಷ್ಟು ಆಸಕ್ತಿಯನ್ನು ಬಸವಣ್ಣನವರ ತತ್ವಗಳ ಅನುಷ್ಠಾನದಲ್ಲಿ ವಹಿಸಿಲು ಸಾಧ್ಯ ವಾಗುವುದಿಲ್ಲ. ಸಮಾಜ ಕಲ್ಯಾಣಕ್ಕೆ ಅರಸನ ಅವಶ್ಯಕತೆ ಇದೆ ಎಂದು ನಂಬಿರುವವರ ದ್ವಂದ್ವ ಇದು.

ಇತಿಹಾಸವನ್ನು ಪರ್ಯಾಲೋಚಿಸಿದಾಗ ಬಸವ ಚಳುವಳಿ ವಿವಿಧ ಕಾರಣಗಳಿಂದಾಗಿ ಸೋತಿರುವುದು ವಿಧಿತವಾಗುತ್ತದೆ. ಆದರೆ ಆ ಹನ್ನೆರಡನೇ ಶತಮಾನದ ಜಡ್ಡುಗಟ್ಟಿದ್ದ ಸಮಾಜದಲ್ಲಿ ಇಂತಹ ಒಂದು ಚಳುವಳಿ ನಡೆಯಿತೆಂಬುದೇ ಒಂದು ಸೋಜಿಗ. ಹಾಗಾಗಿ ಬಸವಣ್ಣನವರು ಕರ್ನಾಟಕದಲ್ಲಿ ಪ್ರತಿಭಟನೆಯ ಪೀಠಿಕೆ ಹಾಕಿದರೆಂಬುದಾಗಿ ನಿಸ್ಸಂಕೋಚವಾಗಿ ಹೇಳಬಹುದು.

ಕೊನೆಯದಾಗಿ ಒಂದು ಅನಿಸಿಕೆ – ಬಸವಣ್ಣನವರು ತನ್ನ ಕಾಲಕ್ಕಿಂತ ಎಂಟು ನೂರು ವರ್ಷ ಮುಂದಿದ್ದರೆಂಬುದಾಗಿ ಅವರ ಬಗ್ಗೆ ಬರೆದ ಅನೇಕ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ. ಆದರೆ ನನಗನ್ನಿಸುತ್ತದೆ. ಈಗಲೂ ಜಾತಿ-ಮತ-ಧರ್ಮ-ಜನಾಂಗೀಯ ದ್ವೇಷ ಮತ್ತು ಸಂಘರ್ಷ ಗಳಲ್ಲಿ ಮುಳುಗಿರುವ ನಾವಿನ್ನೂ ಹನ್ನೆರಡನೇ ಶತಮಾನಕ್ಕಿಂತ ತುಂಬ ಮುಂದೆ ಬಂದಿಲ್ಲ. ಬಸವಣ್ಣನವರು ಮಾತ್ರ ನಮಗಿಂತ ಇನ್ನೂ ತುಂಬ ಮುಂದೆ ಇದ್ದಾರೆ.

 

ಆಕರ ಗ್ರಂಥಗಳು

೧. ಡಾ. ಆರ್.ಸಿ. ಹಿರೇಮಠ, (೧೯೬೮), ಬಸವಣ್ಣನವರ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

೨. ಕನ್ನಡ ಸಾಹಿತ್ಯ ಚರಿತ್ರೆ ೮ ನೇ ಸಂಪುಟ, (೧೯೭೭), ಲೇಖನಗಳು ೧. ಬಾ.ರಾ. ಗೋಪಾಲ್, “ಕರ್ನಾಟಕದ ರಾಜಕೀಯ ಚರಿತ್ರೆ” ಪುಟ ೧೨೩-೧೩೮;

೨. ಡಾ. ಎಸ್. ನಾಗರಾಜು “ವೀರಶೈವ ಧರ್ಮ” ಪುಟ ೧೪೭-೧೫೦; ೩. ಡಾ. ಎಚ್. ತಿಪ್ಪೇರುದ್ರ ಸ್ವಾಮಿ “ಬಸವಣ್ಣ” ಪುಟ ೪೫೫-೪೮೨

೩. ಡಾ. ಎಸ್.ಸಿ. ನಂದೀಮಠ (೧೯೮೪), ಕನ್ನಡ ನಾಡಿನ ಚರಿತ್ರೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಪುಟ ೪೧-೬೩

೪. ಡಾ. ಎಚ್. ತಿಪ್ಪೇರುದ್ರಸ್ವಾಮಿ (೧೯೮೨), ವಚನಗಳಲ್ಲಿ ವೀರಶೈವ ಧರ್ಮ, ಡಿ.ವಿ.ಕೆ. ಮೂರ್ತಿ, ಮೈಸೂರು

೫. ಡಾ. ಎಚ್. ತಿಪ್ಪೇರುದ್ರಸ್ವಾಮಿ (೧೯೯೭), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಡಿ.ವಿ.ಕೆ. ಮೂರ್ತಿ, ಪುಟ ೩೪೦-೩೫೪

೬. ಡಾ. ಸಿ.ವಿ. ಪ್ರಭುಸ್ವಾಮಿಠ (೧೯೯೬), ಬಸವಣ್ಣನವರ ವಚನಗಳ ಸಾಹಿತ್ಯಿಕ ಅಧ್ಯಯ ಅಕ್ಷರ ಪ್ರಕಾಶನ, ಹೆಗ್ಗೋಡು

೭. ಎಫ್.ಪಿ. ಲಕ್ಷ್ಮೇಶ್ವರ ಮಠ (ಸಂ). (೨೦೦೧), ಬಸವಣ್ಣನವರ ವಚನಗಳು, ಬಸವ ಪ್ರಕಾಶನ, ಗದಗ