ಭಾರತವು ಅನೇಕ ಅಸಾಧಾರಣ ಪುರುಷರ ಜನ್ಮಸ್ಥಳವಾಗಿದೆ. ಈ ಪ್ರಾಚೀನ ದೇಶದಲ್ಲಿ ಹುಟ್ಟಿದ ಅನೇಕ ಸಂತರು, ತತ್ವಜ್ಞಾನಿಗಳು, ಚಕ್ರವರ್ತಿಗಳು, ಸಮಾಜ ಸುಧಾರಕರು ಹಾಗೂ ಕ್ರಾಂತಿಕಾರರು ತಮ್ಮ ಸಾಧನೆಯಿಂದ ಜಗತ್ಪ್ರಸಿದ್ದಿಯನ್ನು ಪಡೆದಿದ್ದಾರೆ. ಈ ಅನೇಕಾನೇಕ ಸಂತರ ಹಾಗೂ ಸಮಾಜ ಸುಧಾರಕರ ಆಕಾಶಗಂಗೆಯಲ್ಲಿ ಅತ್ಯಂತ ಉತ್ತುಂಗ ಶಿಖರವನ್ನಲಂಕರಿಸಿರುವ ಶ್ರೀ ಬಸವೇಶ್ವರರನ್ನು (೧೧೩೧-೧೧೬೭)

[1]  ಗುರುತಿಸುವುದು ಸುಲಭ ಸಾಧ್ಯ. ಸಾರ್ವತ್ರಿಕ ಭ್ರಾತೃತ್ವವನ್ನು ಬೋಧಿಸಲು ಪ್ರಯತ್ನಿಸಿದ ಈತನೊಬ್ಬ ದಿವ್ಯ ಸಂತನೂ, ಸಮಾಜ ಸುಧಾರಕನೂ, ಕವಿ-ತತ್ವಜ್ಞಾನಿಯೂ ಹಾಗೂ ಕ್ರಾಂತಿಕಾರಿ-ಧರ್ಮ ಗುರುವೂ ಹೌದು. ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುತ್ತಾ ಸ್ವತಃ ನುಡಿದಂತೆ ನಡೆದು ತೋರಿಸಿ ದುರ್ಬಲರ ಹಾಗೂ ದೀನ-ದಲಿತರ ಉದ್ಧಾರಕ್ಕಾಗಿ ಪಣ ತೊಟ್ಟರು. ಈ ಕಾರಣಗಳಿಂದಾಗಿಯೇ ಬಸವೇಶ್ವರರ ತತ್ವಗಳು ಜನ ಸಾಮಾನ್ಯರ ಮನವನ್ನು ಗೆದ್ದು, ಎಲ್ಲ ಸಾಮಾಜಿಕ ವರ್ಗಗಳನ್ನು ಮೀರಿ ನಿಂತು  ಜಗತ್ತಿನ ಉದ್ದಗಲಕ್ಕೂ ಪಸರಿಸಿವೆ. ಇಂದು, ದೂರ ದೂರದ ಪ್ರದೇಶಗಳಲ್ಲಿ ನೆಲೆಸಿರುವ ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿರುವ ಪ್ರಜ್ಞಾಶಾಲಿಗಳಲ್ಲಿ ವೀರಶೈವ ಧರ್ಮದ ಬಗೆಗೆ  ಆಸಕ್ತಿ  ಹೆಚ್ಚಾಗುತ್ತಿದೆ. ಇತ್ತೀಚೆಗೆ ಅಮೆರಿಕಾ ಹಾಗೂ ಯುರೋಪ್ ದೇಶಗಳಲ್ಲಿನ ಸಮಾಜ ವಿಜ್ಞಾನಿಗಳು ಬಸವೇಶ್ವರರ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ವಿಜ್ಞಾನಿಗಳು ಬಸವೇಶ್ವರರ ಧರ್ಮ-ತತ್ವಗಳ ಸಂದೇಶಗಳೊಂದಿಗೆ ತಮ್ಮ ತಮ್ಮ ತಾಯ್ನಡಿಗೆ ಮರಳಿದರು. ಈ ಹಿನ್ನೆಲೆಯಲ್ಲಿ ಬಸವೇಶ್ವರರು ಒಬ್ಬ ನಿಜವಾದ “ವಿಶ್ವಮಾನವ” ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಕ್ರಿ.ಶ. ೧೨ನೇ ಶತಮಾನದಲ್ಲಿ ಆದ ಬಸವೇಶ್ವರರ ಜನ್ಮವು ಭಾರತದ ಇತಿಹಾಸದಲ್ಲಿ ಒಂದು ಹೊಸ ಯುಗದ ಆರಂಭವನ್ನು ಘೋಷಿಸಿತು. ಕ್ರಿ.ಶ. ೧೫ನೇ ಶತಮಾನದಲ್ಲಿ ಯುರೋಪಿನ ಇತಿಹಾಸದಲ್ಲಿ ಹುಟ್ಟಿಕೊಂಡ ‘ಪ್ರೊಟೆಸ್ಟಂಟ್’ (ಪ್ರತಿಭಟನಾ ಧರ್ಮ) ಎಂಬ ಧರ್ಮವು ಹುಟ್ಟು ಹಾಕಿದ “ಸುಧಾರಣೆಯ ಯುಗ”ದಂತೆ, ನಾಲ್ಕು ಶತಮಾನಗಳ ಕೆಳಗೆ ಪ್ರತಿಪಾದಿಸಿದ ಬಸವೇಶ್ವರರ ಧರ್ಮ ತತ್ವಗಳನ್ನು ಕ್ರಾಂತಿಕಾರಿ ಎಂದಷ್ಟೇ ಅನ್ನದೇ ಅದೊಂದು ವೈದಿಕ ಗತಕಾಲದ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಭಾರತೀಯ ಸಮಾಜದ ಸಾಂಪ್ರದಾಯಿಕತೆಯ ಸುಧಾರಣೆಯ ಯುಗವೆಂದು ಕರೆಯಬಹುದು. ಬಸವೇಶ್ವರರ ತತ್ವ ಪ್ರಚಾರದ ಹೆಚ್ಚಿನ ಲಾಭವನ್ನು ಮುಖ್ಯವಾಗಿ ದಕ್ಷಿಣ ಭಾರತವು  ಪಡೆಯಿತು.

ತನ್ನ ಬಹುಮುಖ ವ್ಯಕ್ತಿತ್ವದೊಂದಿಗೆ ಬಸವೇಶ್ವರರು ಒಂದು ಹೊಸಯುಗದ ಪ್ರಾರಂಭಕ್ಕೆ ಕಾರಣೀಭೂತರಾದರು. ಪ್ರೊಫೆಸರ್ ಕೆ.ಎಸ್. ಶ್ರೀಕಂಠನ್ (ಶ್ರೀ ಎಸ್.ಎಸ್. ಒಡೆಯರ್ ಉಲ್ಲೇಖಿಸಿರುವಂತೆ, vii : ೧೯೬೭) ಅವರ ಅಭಿಪ್ರಾಯದಂತೆ “ಬಸವೇಶ್ವರರು ಗೌತಮ ಬುದ್ಧನಂತೆ ಮೃದು ಸ್ವಭಾವದವರೂ, ಮಹಾವೀರನಂತೆ ಸರಳ ಮನಸ್ಕರೂ, ಯೇಸು ಕ್ರಿಸ್ತನಂತೆ ಕೋಮಲ ಹೃದಯಿಯೂ, ಮಹಮ್ಮದ್ ಪೈಗಂಬರನಂತೆ ಧೈರ್ಯಶಾಲಿಯೂ ಹೀಗೆ ಬಸವೇಶ್ವರರನ್ನು ಯಾವ ಆಯಾಮದಿಂದ ನೋಡಿದರೂ ಅವರೊಬ್ಬ ಪ್ರಕೃತಿಯ ಅತ್ಯಂತ ವಿಸ್ಮಯಕರ ಪ್ರತಿಭಾ ಸೃಷ್ಟಿಯಾಗಿದ್ದಾರೆ”. ಆದ್ದರಿಂದ ಭಾರತದ ಸಾಮಾಜಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಕಂಡುಬರುವ ವ್ಯಕ್ತಿತ್ವಗಳಲ್ಲಿ ಬಸವೇಶ್ವರರು ಅತೀ ಪ್ರಮುಖರು. ಎಂಟು ಶತಮಾನಗಳಿಂದ ದಕ್ಷಿಣ ಭಾರತದ ತುಂಬೆಲ್ಲಾ ನೆಲೆಸಿರುವ ಮಾನವ ಕೋಟಿಗೆ ನೈತಿಕ ಹಾಗೂ ಧಾರ್ಮಿಕ ಸ್ಫೂರ್ತಿಯ ನೆಲೆಯಾಗಿದ್ದಾರೆ.

ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ನಡೆದು ಬಂದ ಧರ್ಮದ ಹೆಸರಿನಲ್ಲಿ ಪವಿತ್ರತೆಯನ್ನು ಪಡೆದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಬಸವೇಶ್ವರರ ತತ್ವಗಳು ಶ್ರಮಿಸಿದವು. ಅವರು ದೀನದಲಿತರ ಉದ್ಧಾರಕ್ಕಾಗಿ ಸಾಮಾಜಿಕ ಕ್ರಾಂತಿಯನ್ನು ತಂದರು, ಅವರು ಶ್ರೇಣೀಕೃತ ಜಾತಿ ಪದ್ಧತಿಯನ್ನು ವಿರೋಧಿಸಿದರು, ಧರ್ಮದ ಹೆಸರಿನಲ್ಲಿ ಮನುಷ್ಯನ ಶೋಷಣೆಯಾಗುವುದನ್ನು ಅವರು ವಿರೋಧಿಸಿದರು, ಅವರು ಪೊಳ್ಳು ಹಾಗೂ ಅರ್ಥವಿಲ್ಲದ ಸಂಸ್ಕಾರಗಳ ವಿರುದ್ಧ ಪ್ರತಿಭಟಿಸಿದರು, ಪಿತೃಪ್ರಧಾನ ಸಮಾಜದಲ್ಲಿ ಗುಲಾಮತನದಷ್ಟು ಕೀಳುಮಟ್ಟಕ್ಕಿಳಿದ ಮಹಿಳೆಯರ ಸ್ಥಿತಿಯನ್ನು ಸುಧಾರಿಸಲು ಹಾಗೂ ಅವರಿಗೆ ಸಿಗಬೇಕಾದ ಸ್ಥಾನಮಾನಗಳನ್ನು ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟರು, ಇದಕ್ಕಿಂತ ಹೆಚ್ಚಾಗಿ, ತಮ್ಮ ತತ್ವ-ವಿಚಾರದ ಬಹುಮುಖ್ಯವಾದ ಮೈಲಿಗಲ್ಲಾದ ‘ಪರಿಶ್ರಮದ ಘನತೆ’ಯ ಸಂದೇಶ ವನ್ನು ಎಲ್ಲೆಡೆ ಸಾರಲು ಪ್ರಯತ್ನಿಸಿದರು. ಆದ್ದರಿಂದ ಯಾವುದೇ ವ್ಯಕ್ತಿಗೆ ಬಸವೇಶ್ವರರ ತತ್ವಗಳ ಆಧಾರ ಸ್ತಂಭಗಳಾಗಿರುವ ಸಾಮಾಜಿಕ ಸಮಾನತೆ ಹಾಗೂ ಭ್ರಾತೃತ್ವವನ್ನು ಅರ್ಥ ಮಾಡಿಕೊಳ್ಳದೇ ಅವರ ಧರ್ಮತತ್ವಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರ ತತ್ವಗಳಿಗೆ ಮಾನವೀಯ ಸಮಾನತೆ, ವೃತ್ತಿಯಲ್ಲಿ ಸಮಾನತೆ, ಧಾರ್ಮಿಕ ಸಮಾನತೆ ಹಾಗೂ ಲಿಂಗ ಸಮಾನತೆಯೇ ಆಧಾರಗಳಾಗಿವೆ.[2]  ವಾಸ್ತವಿಕವಾಗಿ ಈ ತತ್ವ ವಿಚಾರವು ಸರಳ ಭಾಷೆಯಿಂದ ಕೂಡಿದ್ದು ಸಾರ್ವತ್ರಿಕವಾಗಿ ಜನತೆಗೆ ಹಿತವಾಗುವಂತಹ ಪ್ರಚಾರ ಶೈಲಿಗಳಿಂದಾಗಿ ಜನಪ್ರಿಯವಾಯಿತು.

ಧಾರ್ಮಿಕ ವಿಚಾರಗಳ ಕ್ಷೇತ್ರದಿಂದ ಹೊರಗಿರುವ ಒಬ್ಬ ಅನಕ್ಷರಸ್ಥ ಶ್ರೀ ಸಾಮಾನ್ಯನೂ ಸಹಿತ ಬಸವೇಶ್ವರರ ಧರ್ಮತತ್ವಗಳನ್ನು ಅರ್ಥೈಸಿಕೊಂಡು ಪ್ರಶಂಸಿಸುವಷ್ಟು ಸರಳವಾಗಿವೆ. ಇದು ಉತ್ತಮತಾವಾದದ ಸ್ವರೂಪದ್ದಾಗಿರಲಿಲ್ಲ. ದಿನದ ಹೆಚ್ಚು ಕಾಲ ಕಠಿಣ ಪರಿಶ್ರಮದಲ್ಲಿ ತೊಡಗಿರುವ ಶ್ರೀ ಸಾಮಾನ್ಯನಿಗೂ ಕೂಡ ಬಸವೇಶ್ವರರು ಪ್ರೇರೇಪಿಸಿದರು. ಜನರ ಆಡು ಭಾಷೆಯಲ್ಲಿಯೇ ತಮ್ಮ ವಿಚಾರಗಳನ್ನು ಬೋಧಿಸಿದರು. ಈ ಜನತೆಯಲ್ಲಿ ಸ್ವಾಭಿಮಾನ, ಸ್ಥೈರ್ಯ ಹಾಗೂ ದೇವರನ್ನು ಅರ್ಥೈಸಿಕೊಳ್ಳುವಂತಹ ಸ್ವಾತಂತ್ರ್ಯದ ಅರಿವನ್ನು ಮೂಡಿ ಸಿದರು. ಜನತೆ ಬಸವೇಶ್ವರರನ್ನು ಅರ್ಥ ಮಾಡಿಕೊಂಡು ಅವರನ್ನು ಅನುಸರಿಸಿದರು. ಅವರು ಜನತೆಯ ಜೀವನದಲ್ಲಿ ಹೊಸ ಆಯಾಮವನ್ನು ತೋರಿದರು.

ಬಸವೇಶ್ವರರ ವಿಚಾರಗಳು ಮೇಲಿನಿಂದ ಹೇರಲಾದ ವಿಚಾರಗಳಾಗಿರದೇ ಶ್ರೀಸಾಮಾನ್ಯನೂ ಸಹ ಒಪ್ಪಿಕೊಳ್ಳುವಷ್ಟು ಸರಳವಾಗಿದ್ದವು ಹಾಗೂ ಅವರ ತತ್ವ ವಿಚಾರವು ನಿಜವಾಗಿಯೂ ಜನಕ್ರಾಂತಿಯನ್ನೇ ಸಾರಿತು. ಪ್ರತಿಕ್ರಿಯಿಸುವ ಹಾಗೂ ಜ್ಞಾನ ವಿಕ್ರಯಿ ಸಂಸ್ಕಾರಗಳು ಸಮಾಜದಲ್ಲಿ ಮರೆಯುತ್ತಿದ್ದ ಆ ಕಾಲದಲ್ಲಿ ಬಸವೇಶ್ವರರ ದೂರ ದೃಷ್ಟಿಯು-ಉದಾರತೆ, ಪ್ರಜಾಸತ್ತಾತ್ಮಕ, ಹಾಗೂ ಮಾನವೀಯತೆಯಿಂದ ಕೂಡಿದ್ದಿತು. ಎಸ್.ಸಿ. ನಂದಿಮಠ (೧೦೮:೧೯೭೯) ಅವರು ಹೇಳುವಂತೆ :  “ವೀರಶೈವ ಧರ್ಮವು ಪ್ರತಿಯೊಬ್ಬ ವ್ಯಕ್ತಿಯ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಜಾತಿ, ಲಿಂಗಭೇದ, ಅಥವಾ ವೃತ್ತಿಯಿಂದ ಮೊಟುಕುಗೊಳಿಸದೇ ತನ್ನದೇ ಆದ ಪಥದಲ್ಲಿ ಸಾಗುತ್ತಾ ಧಾರ್ಮಿಕ ಹಾಗೂ ಸಮಾಜದ ಮತ್ತು ತನ್ನ ಸಂಸಾರದ ಪರವಾಗಿ ಶ್ರೀಸಾಮಾನ್ಯನ ಹೊಣೆಗಾರಿಕೆಯ ಮಧ್ಯೆ ಸಾಮರಸ್ಯವನ್ನು ತರುವಲ್ಲಿ ಸಾಕಷ್ಟು ಶ್ರಮವಹಿಸಿದೆ. ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಹೊಂದಿರುವುದರಿಂದ ವೀರಶೈವ ಧರ್ಮವು ಜನರಿಗೆ ಯೋಗ್ಯ ರೀತಿಯಲ್ಲಿ ಬದುಕುವ  ಕಲೆಯನ್ನು ಉಪದೇಶಿಸಿದೆ”.

ಇದೇ ಅಭಿಪ್ರಾಯವನ್ನು ಎತ್ತಿ ಹಿಡಿಯುತ್ತಾ ಎಂ. ಚಿದಾನಂದಮೂರ್ತಿಯವರು (೧೧೫:೧೯೬೭) ಹೀಗೆ ಹೇಳಿದ್ದಾರೆ. “ಬಸವೇಶ್ವರರ ವಿಚಾರಗಳು ಉದಾರತೆಯಿಂದ ಕೂಡಿದ, ಪ್ರಜಾಸತ್ತಾತ್ಮಕವಾದ ಹಾಗೂ ಅತ್ಯಂತ ಮಾನವೀಯತೆಯಿಂದ ಕೂಡಿವೆ. ಕನ್ನಡ ಸಾಹಿತ್ಯಕ್ಕೆ ಅವರು ಹೊಸ ಆಯಾಮಗಳನ್ನು ಹಾಗೂ ಸಮಾಜಕ್ಕೆ ಹೊಸ ಮೌಲ್ಯಗಳನ್ನು ತಂದು ಕೊಟ್ಟರು. ದೇವಾಲಯಗಳನ್ನು ಕಟ್ಟಲು ಹಣ ವ್ಯರ್ಥ ಮಾಡುವ ಬದಲು ತಮ್ಮ ಆತ್ಮ ದೊಳಗೆ ನೆಲೆಸಿರುವ ಭಗವಂತನನ್ನು ಕಾಣುವಂತೆ ಉಪದೇಶಿಸಿದರು. ಹೀಗೆ ಇನ್ನೂ ಅನೇಕ ವಿಷಯಗಳಲ್ಲಿ ಬಸವೇಶ್ವರರ ಜೀವನ ಹಾಗೂ ಬೋಧನೆಗಳನ್ನು ಆಧುನಿಕ ಮಾನವನಿಂದಲೂ ಪ್ರಶಂಸಿಸಲ್ಪಟ್ಟು ಅನುಸರಿಸಲಾಗುತ್ತಿದೆ”.

ಬಸವಣ್ಣನವರು ಪ್ರತಿಪಾದಿಸಿದ ಧರ್ಮತತ್ವವು ಮಾರ್ಟಿನ್ ಲೂಥರ್‌ನು ಪ್ರತಿಪಾದಿಸಿದ (ಪ್ರೊಟೆಸ್ಟಂಟ್) ಪ್ರತಿಭಟನಾ ಧರ್ಮಕ್ಕೆ ಸಂವಾದಿಯಾಗಿದೆ. ಲೂಥರನು ಇಹವನ್ನು ನಿರಾಕರಿ ಸುವ ದೃಷ್ಟಿಯನ್ನು ಬಿಟ್ಟು ಲೋಕದೃಷ್ಟಿಯನ್ನು ಪುರಸ್ಕರಿಸಿದಂತೆಯೇ ಬಸವೇಶ್ವರರು “ಇಲ್ಲಿಗೆ ಸಲ್ಲುವ” ಲೋಕದೃಷ್ಟಿಯನ್ನು ಪುರಸ್ಕರಿಸಿದರು. ಬಸವೇಶ್ವರರ ಹೆಚ್ಚುಗಾರಿಕೆಯೆಂದರೆ ಸಾಮಾಜಿಕ ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಈ ಹೊಸ ತತ್ವವು ಪ್ರೊಟೆಸ್ಟಂಟ್ ಧರ್ಮಕ್ಕಿಂತ ಸುಮಾರು ಮುನ್ನೂರು ವರ್ಷಗಳಷ್ಟು ಮೊದಲೇ ಹುಟ್ಟಿಕೊಂಡಿತ್ತು.

ಪ್ರಮುಖ ಕ್ರಾಂತಿಕಾರಿ ತತ್ವಗಳು :

ಬಸವೇಶ್ವರರ ಜೀವನ-ತತ್ವವು ನಿಜವಾಗಿಯೂ ಸಾಂಪ್ರದಾಯಿಕ ಸಮುದಾಯದ ಆಧುನಿಕತೆಯ ತಳಹದಿಯಾಗಿದೆ. ಅವರೊಬ್ಬ ಕ್ರಾಂತಿಕಾರಿಯಷ್ಟೇ ಅಲ್ಲದೆ ತಮ್ಮ ಸಮಯ ಕ್ಕಿಂತ ಎಷ್ಟೋ ಶತಮಾನಗಳಷ್ಟು ಮುಂದಿದ್ದುದು ಅವರ ವಿಚಾರಗಳಿಂದ ತಿಳಿದು ಬರುತ್ತದೆ. ಒಬ್ಬ ಆಧುನಿಕ, ವಿವೇಚನೆಯುಳ್ಳ, ವೈಜ್ಞಾನಿಕ ಶಿಕ್ಷಣವನ್ನು ಪಡೆದ ನಮ್ಮೀ ಸಮಕಾಲೀನನಲ್ಲಿ ಬರಬೇಕಾದ ವಿವೇಚನಾಯುಕ್ತ ವಿಚಾರಗಳನ್ನು ೧೨ನೇ ಶತಮಾನದಲ್ಲಿಯೇ ಅವರು ಉಪ ದೇಶಿಸಿದ್ದಾರೆ.

ಒಂದು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರೂ ಸಹಿತ ಬಸವೇಶ್ವರರು ಉಪನಯನ ಸಂಪ್ರದಾಯ ಅಥವಾ ಸಂಸ್ಕಾರವನ್ನು ವಿರೋಧಿಸಿದುದು ಅವರಿಟ್ಟ ಮೊದಲ ದಿಟ್ಟ ಹೆಜ್ಜೆ. ಇದನ್ನೇ ಎತ್ತಿ ಹೇಳುತ್ತಾ ಚಿದಾನಂದಮೂರ್ತಿಯವರು (೧೦೯:೧೯೬೭) ಹೀಗೆ ಹೇಳಿದ್ದಾರೆ: “ಆತ ಚಿಕ್ಕ ಬಾಲಕನಾಗಿದ್ದಾಗ್ಯೂ ಸಹಿತ ತನಗಿರುವ ಸ್ವತಂತ್ರ ಬುದ್ದಿಮತ್ತೆಯನ್ನು ನಿರೂಪಿಸಿದ್ದಾನೆ.” ಹೀಗೆ ಇತರರು ಅವರ ಪಥವನ್ನು ಅನುಸರಿಸಲು ಅವರೊಬ್ಬ ನಿದರ್ಶನ ವಾಗಿದ್ದಾರೆ. ಅವರು ಕುರುಡು ಸಂಪ್ರದಾಯಗಳ ವಿರೋಧಿಯಾಗಿದ್ದರು. ಬಸವೇಶ್ವರರ ಅಸಂಖ್ಯ ಸುಧಾರಣಾ ಪ್ರಯತ್ನಗಳಲ್ಲಿ ಅತೀ ಪ್ರಮುಖವಾದ ಕೊಡುಗೆಗಳೆಂದರೆ :

೧. ಕಾಯಕವೆಂಬ ಮೂಲತತ್ವವು ಪರಿಶ್ರಮದ ಘನತೆಯನ್ನು ಎತ್ತಿ ಹಿಡಿಯುತ್ತದೆ. ಇದೇ ಅವರು ಬೋಧಿಸಿದ ಸಾಮಾಜಿಕ-ಧಾರ್ಮಿಕ ತತ್ವದ ಕೇಂದ್ರಬಿಂದು. ಇದೇ “ಕಾಯಕವನ್ನು ಪೂಜಿಸು” ಎಂಬ ತತ್ವವನ್ನು ೧೫ನೇ ಶತಮಾನದಲ್ಲಿ ಮಾರ್ಟಿನ್ ಲೂಥರ್‌ನು ತನ್ನ ಪ್ರೊಟೆಸ್ಟಂಟ್ ಧರ್ಮತತ್ವದಲ್ಲಿ ಬೋಧಿಸಿದುದನ್ನು ಮ್ಯಾಕ್ಸ್‌ವೆಬರ್‌ನೆಂಬ ಪ್ರಸಿದ್ಧ ಸಮಾಜ ಶಾಸ್ತ್ರಜ್ಞನು ಜಗತ್ಪ್ರಸಿದ್ದಿಗೊಳಿಸಿದನು. ಆದರೆ ಬಸವೇಶ್ವರರ ವಿಚಾರತತ್ವವು ಪ್ರೊಟೆಸ್ಟಂಟ್ ಧರ್ಮತತ್ವಕ್ಕಿಂತ ಮೂನ್ನೂರು ವರ್ಷಗಳಷ್ಟು ಮೊದಲೇ ಉಪದೇಶಿಸಿ ಲಾಗಿತ್ತು. ಆದರೆ ಈ ವಿಷಯ ಮ್ಯಾಕ್ಸ್‌ವೆಬರ್‌ನ ಗಮನಕ್ಕೆ ಬಾರದ ಕಾರಣ ಇದನ್ನು ಆತ ಪ್ರಶಂಸಿಸಲಿಲ್ಲ.

ಬಸವಣ್ಣನವರು ಸಾಂಪ್ರದಾಯಿಕ ಹಿಂದೂ ಸಮಾಜದ ವಿರುದ್ಧ ಪ್ರತಿಭಟನೆಯ ಒಂದು ಸರಮಾಲೆಯನ್ನೇ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಕಾಯಕ ತತ್ವವೇ ಮೊದಲ ಹೆಜ್ಜೆ. ಕಾಯಕ-ತತ್ವವು ಜಾತಿಯಾಧಾರಿತ ಶ್ರೇಣೀಕೃತ ವೃತ್ತಿ ವ್ಯವಸ್ಥೆಯ ಬೇರಿಗೆ ಧಾಳಿಯಿಟ್ಟಿತು. ಜಡತ್ವದಿಂದ ಕೂಡಿದ ಶ್ರೇಣೀಕೃತ ಜಾತಿ ವ್ಯವಸ್ಥೆಯು ಒಬ್ಬ ವ್ಯಕ್ತಿಯ ವೃತ್ತಿಯನ್ನು ಮೊದಲೇ  ನಿರ್ಧರಿಸುತ್ತದೆ. ಎಷ್ಟೇ ಬುದ್ದಿವಂತನಿದ್ದರೂ ಯಾರಿಗೂ ತಮ್ಮಿಚ್ಚೆಯಂತೆ ವೃತ್ತಿಯನ್ನು ಆಯ್ದುಕೊಳ್ಳಲು ಸ್ವಾತಂತ್ರ್ಯವಿರಲಿಲ್ಲ. ಹುಟ್ಟು ಪ್ರತಿಯೊಬ್ಬನ ಸ್ಥಾನ ಹಾಗೂ ವೃತ್ತಿಯನ್ನು ನಿರ್ಧರಿಸುತ್ತಿತ್ತು. ಯೋಗ್ಯತೆಗನುಸಾರವಾಗಿ ವೃತ್ತಿಯನ್ನು ಆಯ್ದುಕೊಂಡು ಶ್ರಮವಹಿಸಿ ಕೆಲಸ ಮಾಡುವಲ್ಲಿ ಬಸವಣ್ಣನವರು ಒತ್ತುಕೊಟ್ಟರು. ಅವರ ದೃಷ್ಟಿಯಲ್ಲಿ ಯಾವುದೇ ವೃತ್ತಿಯಿರಲಿ ಅದರಲ್ಲಿ ಮೇಲು-ಕೀಳೆಂಬ ಭೇದ-ಭಾವವಿರಲಿಲ್ಲ. ಶ್ರೀ ವಿ.ಕೆ. ಜವಳಿಯವರು (೧೪೦:೧೯೬೭) ಟಿಪ್ಪಣಿಸುವಂತೆ : “ತಮಗಿಚ್ಚೆಯ ವೃತ್ತಿಯನ್ನು ಆಯ್ದುಕೊಳ್ಳುವ ಪ್ರಜಾಸತ್ತಾತ್ಮಕ ಮೂಲತತ್ವದ ಸ್ವಾತಂತ್ರ್ಯವು ಕಾಯಕ ತತ್ವದಲ್ಲಿ ಹುದುಗಿದೆ…… ಪ್ರತಿಯೊಬ್ಬ ಶ್ರಮಜೀವಿಯನ್ನು ಗೌರವ, ಘನತೆ ಮತ್ತು ಅಧ್ಯಾತ್ಮಿಕ ಮಹತ್ವದಿಂದ ಶರಣರು ನೋಡಿಕೊಳ್ಳಬೇಕು. ಸಂಪತ್ತಿನ ಶೇಖರಣೆ ಅಥವಾ ಹಣವನ್ನು ಕೂಡಿಡುವುದನ್ನು ಕಾಯಕ ತತ್ವವು ಪ್ರೇರೇಪಿಸುವುದಿಲ್ಲ. ಅದು ಲಾಭಗಳಿಕೆಯ ಉದ್ದೇಶವನ್ನು ಹೊಂದಿಲ್ಲ. ದಾಸೋಹದ ಉತ್ಸಾಹದಲ್ಲಿ ಕಾಯಕವನ್ನು ಪರಿಪಾಲಿಬೇಕು……ಕಾಯಕವೆಂಬುದು ತನ್ನ ಜೀವನವನ್ನು ಸಾಗಿಸಿಕೊಂಡು ಹೋಗುವ ಕರ್ತವ್ಯ ಹಾಗೂ ಸಮಾಜದ ಒಳಿತಿಗಾಗಿ ತನ್ನನ್ನು ಸಮರ್ಪಿಸಿಕೊಳ್ಳುವುದು.”

ಬಸವೇಶ್ವರರು ಭಾರತದ ಇತಿಹಾಸದ ಮಧ್ಯಯುಗದಲ್ಲಿ ಜೀವಿಸಿದ್ದರೂ ಅವರು ಪ್ರತಿಪಾದಿಸಿದ ಕಾಯಕ ತತ್ವವು ಆ ಕಾಲದ ದೃಷ್ಟಿಯಿಂದ ಆಧುನಿಕವೂ ಕ್ರಾಂತಿಕಾರಿಯೂ ಆಗಿತ್ತು. ಮುಂದಿನ ಅನೇಕ ಶತಮಾನಗಳವರೆಗೆ ಅದನ್ನು ಸರಿಗಟ್ಟುವ ವಿಚಾರಧಾರೆ ಹುಟ್ಟಿ ಬರಲಿಲ್ಲ. ಆಧುನಿಕ ಕಾಲದಲ್ಲಿ ಕಾಯಕ ಸಿದ್ಧಾಂತವನ್ನು ಹೋಲುವ ಅನೇಕ ವಿಚಾರಧಾರೆಗಳು ಕಾಣಿಸಿಕೊಂಡಿವೆ. ಇವುಗಳಲ್ಲಿ ಫ್ರೆಂಚ್ ಲೇಖಕ ತತ್ವಜ್ಞಾನಿ ವಾಲ್ತೇರ್, ಅಮೇರಿಕನ್ ಲೇಖಕ ತತ್ವಜ್ಞಾನಿ ಥೋರೋ, ಭಾರತದ ಗಾಂಧಿ ಮತ್ತು ವಿನೋಭಾ ಭಾವೆ, ರಷ್ಯದ ಟಾಲ್ ಸ್ಟಾಯ್ ಮೊದಲಾದವರು ಹೇಳಿದ ವಿಚಾರಗಳು ಸೇರಿವೆ. ಹೀಗಿದ್ದರೂ ಈ ವಿಷಯದಲ್ಲಿ ಅವರ ವಿಚಾರಗಳು ಬಸವೇಶ್ವರರ ಕಾಯಕದ ಕಲ್ಪನೆಗೆ ಸರಿಸಾಟಿಯಾಗಿಲ್ಲ. ಏಕೆಂದರೆ ಬಸವೇಶ್ವರರು ಕಾಯಕಕ್ಕೆ ಪರಿಮಾಧಿಕ ಮಹತ್ವವನ್ನು ಕೊಟ್ಟಿದ್ದಾರೆ. ‘ಕಾಯಕವೇ ಕೈಲಾಸ’ ಎಂದರೆ ಮೈಮುರಿದು ತನ್ನ ಕಾಯಕ ಮಾಡುವುದೇ ಕೈಲಾಸದ ದಾರಿ ಎಂದಿದ್ದಾರೆ. ಅಷ್ಟೇ ಅಲ್ಲ, ಅವರು ಆ ಕಾಲದ ಲಕ್ಷಾಂತರ ಜನರು ಕಾಯಕದ ತತ್ವವನ್ನು ಸ್ವೀಕರಿಸುವಂತೆ ಮಾಡಿದ್ದರು. ಇದು ಅವರ ದೊಡ್ಡ ಸಾಧನೆ. (ಸಾಮಾಜಿಕ ಚಿಂತನೆ : ಒಂದು ಅಧ್ಯಯನ, ಪು.೧೮೦, ೨೦೦೧).

೨. ಸಾಂಪ್ರದಾಯಿಕ ಲಿಂಗಬೇಧ ನೀತಿಯನ್ನು ವಿರೋಧಿಸುತ್ತಾ ಬಸವಣ್ಣನವರು ಲಿಂಗ-ಸಮಾನತೆಯನ್ನು ಬೋಧಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರು. ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ ದೌರ್ಬಲ್ಯಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಶ್ರಮಿಸಿ, ಆ ನ್ಯೂನತೆಗಳಿಂದ ಮಹಿಳೆಯರನ್ನು ವಿಮೋಚನೆಗೊಳಿಸಲು ಪ್ರಯತ್ನಿಸಿದರು. ವೇದ ಕಾಲದಲ್ಲಿನ ಮಹಿಳೆಯರು ಸಮಾಜದಲ್ಲಿ ಉತ್ತಮವಾದ ಸ್ಥಾನ-ಮಾನಗಳನ್ನು ಹೊಂದಿ ದ್ದರು, ಆದರೆ ಅದು ಕ್ರಮೇಣ ಕಡಿಮೆಯಾಗುತ್ತಾ ಅವರು ಯಾವುದೇ ಉಪಯುಕ್ತ ಸಾಮಾಜಿಕ ಪಾತ್ರವಹಿಸದಂತಹ ದುಸ್ಥಿತಿಗೆ ತಲುಪಿದ್ದರು. ಅವರ ಸ್ಥಿತಿ ನಿಜವಾಗಿಯೂ ಹೀನಾಯಸ್ಥಿತಿಗೆ ತಲುಪಿತ್ತು.

ಬಸವೇಶ್ವರರು ಯಾವತ್ತೂ  ಮಹಿಳೆಯರನ್ನು ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಪುರುಷರಿಗಿಂತ ಕೀಳೆಂದು ಭಾವಿಸಿರಲಿಲ್ಲ. ವಾಸ್ತವಿಕವಾಗಿ ಸುಮಾರು ಏಳಕ್ಕಿಂತ ಹೆಚ್ಚು ವಚನಗಳಲ್ಲಿ ಮಹಿಳೆಯರನ್ನು ಹೇಗೆ ಗೌರವಾದರಗಳಿಂದ ಕಾಣಬೇಕೆಂಬುದನ್ನು ಅವರು ವಿವರಿಸಿದ್ದಾರೆ. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಲಾಗಿತ್ತು. ಮಹಿಳೆಯರಿಗೆ ಲಿಂಗದೀಕ್ಷೆ ಯನ್ನು ಕೊಡಲಾಗಿತ್ತು. ಮಹಿಳೆಯರನ್ನು ಅಪವಿತ್ರವೆಂದು ಪರಿಗಣಿಸದೇ ದೇವರನ್ನು  ಪೂಜಿಸಲು ಹಾಗೂ ಸಮಾಜದಲ್ಲಿ ಸ್ವತಂತ್ರವಾಗಿ ಸಂಚರಿಸಲು ಅವಕಾಶ ಮಾಡಿಕೊಡ ಲಾಗಿತ್ತು. ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳಲು ಅವಕಾಶವಿತ್ತು. ಬಸವೇಶ್ವರರು ಸ್ವತಃ ತಾವೇ ಶಿವಶರಣರ ಸೈನ್ಯವನ್ನು ಕಟ್ಟಿ ವೀರಶೈವ ಧರ್ಮತತ್ವಗಳನ್ನು ಉಪದೇಶಿಸಲು ಹೇಳಿದರು. ಅದರಲ್ಲಿ ಪ್ರಸಿದ್ದಿಯನ್ನು ಪಡೆದ ಮಹಿಳಾ ಶರಣೆಯರು ಇದ್ದರು. ಹೀಗೆ ಮುಂದೆ ಬಸವೇಶ್ವರರನ್ನು ಅನುಸರಿಸಿದ ಭಾರತದ ಮಹಾನ್ ಸಮಾಜ ಸುಧಾರಕರಲ್ಲಿ ರಾಜಾರಾಮ್ ಮೋಹನರಾಯ್, ಪಂಡಿತ ವಿದ್ಯಾಸಾಗರ, ಮಲಬಾರಿ ಮುಂತಾದವರಿದ್ದಾರೆ. ಇವರೆಲ್ಲ ೧೯ನೇ ಶತಮಾನದಲ್ಲಿ ಬ್ರಿಟಿಷ್ ಸರ್ಕಾರದ ಸಹಾಯ ಹಾಗೂ ಸಹಕಾರದಿಂದ ಮಹಿಳೆಯರನ್ನು ವಿಮೋಚನೆಗೊಳಿಸಿ ಅವರ ಹಿಂದಿನ ಘನತೆಯನ್ನು ಪುನರ್‌ಸ್ಥಾಪಿಸಲು ಶ್ರಮಿಸಿದರು.

೩. ಸ್ತ್ರೀ-ಪುರುಷರಿಗಾಗಿ ಅಧ್ಯಾತ್ಮಿಕ ಸ್ವಾತಂತ್ರ್ಯದ ಅಗತ್ಯತೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಬಸವೇಶ್ವರರು ಅಧ್ಯಾತ್ಮಿಕ ಸಂಸತ್ತು ಎಂಬ ಪರಿಕಲ್ಪನೆಯನ್ನು ಅನುಭವ ಮಂಟಪದ ಮುಖಾಂತರ ಸೃಷ್ಟಿಸಿದರು. ಇದರಲ್ಲಿ ಸಮಾಜದ ಎಲ್ಲಾ ವರ್ಗಗಳ ಸ್ತ್ರೀ-ಪುರುಷರು ಭಾಗವಹಿಸಿ ಸ್ವತಂತ್ರವಾಗಿ ಚರ್ಚಿಸಿದರು. ಇಲ್ಲಿ ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯವನ್ನು ಮಂಡಿಸುವ ಹಕ್ಕಿತ್ತು. ಅನೇಕ ವಚನಗಳಿಗೆ ಈ ಚರ್ಚೆಗಳೇ ಆಧಾರ ಸ್ತಂಭಗಳಾಗಿವೆ. ವಾಸ್ತವಿಕವಾಗಿ ಈ ಸರಳ ಶೈಲಿಯ ವಚನಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಈ ಅನುಭವ ಮಂಟಪಕ್ಕೆ ಸಮಾನಾಂತರವಾದ ಆಧ್ಯಾತ್ಮಿಕವಾಗಿ ಹೋಲಿಕೆಯಾಗು ವಂತಹುದು ಭಾರತದಲ್ಲೇ ಮತ್ತೊಂದಿಲ್ಲ. ಅದು ಪ್ರಜಾಸತ್ತಾತ್ಮಕ ಪರಮಾಧಿಕಾರದ ಪರಿಕಲ್ಪನೆಯನ್ನು ಸ್ಥಾಪಿಸಿದೆ. ಬಡವ-ಬಲ್ಲಿದ, ಮೇಲು-ಕೀಳು, ಸ್ತ್ರೀ-ಪುರುಷರೆನ್ನದೇ ಪ್ರತಿಯೊಬ್ಬರಿಗೂ ಭಾಗವಹಿಸಲು ಪ್ರೇರೇಪಿಸಲಾಗಿತ್ತು. ಬಸವೇಶ್ವರರು ಸ್ವತಃ ತಮಗಾಗಿ ಅನುಭವಮಂಟಪದಲ್ಲಿ ಯಾವುದೇ ಉನ್ನತ ಸ್ಥಾನವನ್ನು ಮೀಸಲಾಗಿಟ್ಟುಕೊಳ್ಳದೇ ಉಳಿದವ ರೊಂದಿಗೆ ತಾವೂ ಒಬ್ಬರಾಗಿ ಚರ್ಚೆ ಯಲ್ಲಿ ಭಾಗವಹಿಸುತ್ತಿದ್ದರು.

೪. ಸಾಮಾಜಿಕ ದೂರದೃಷ್ಟಿಯುಳ್ಳ ಬಸವೇಶ್ವರರು ಸಮಾಜದ ಎಲ್ಲ ಹಂತಗಳಲ್ಲೂ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಬಹುವಾಗಿ ಶ್ರಮಿಸಿದರು. ವರ್ಣವ್ಯವಸ್ಥೆಯನ್ನು ವಿರೋಧಿಸಿದರು. ಕಾಯಕತತ್ವ ಹಾಗೂ ವಿವಿಧ ವೃತ್ತಿಗಳಲ್ಲಿನ ಸಮಾನತೆಯಲ್ಲಿ ಬಸವೇಶ್ವರರಿ ಗಿದ್ದ ನಂಬಿಕೆಯೂ ಹಳೆಯ ಜಾತಿಪದ್ಧತಿಯ ಪರಿಕಲ್ಪನೆಗೆ ವಿರೋಧವಾಗಿತ್ತು. ಅವರ ದೃಷ್ಟಿ ಯಲ್ಲಿ ಜಾತಿಪದ್ಧತಿಯನ್ನು ತೆಗೆದುಹಾಕದ ಹೊರತು ಸಾರ್ವತ್ರಿಕ ಭ್ರಾತೃತ್ವವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಮುಂದೆ ಈ ನಿಟ್ಟಿನಲ್ಲಿ ಅವರು ಅಂತರ್ಜಾತಿ ವಿವಾಹಗಳಿಗೂ ಪ್ರೇರೇಪಿಸಿದರು. ಒಬ್ಬ ಬ್ರಾಹ್ಮಣ ಕನ್ಯೆ ಹಾಗೂ ಒಬ್ಬ ಕೆಳಜಾತಿಯ ಯುವಕನ ಮಧ್ಯೆ ಜರುಗಿದ ಅಂತರ್ಜಾತಿ ವಿವಾಹದ ಪೌರೋಹಿತ್ಯವನ್ನು ಬಸವೇಶ್ವರರು ವಹಿಸಿದ್ದರು. ಅಂತರ್ಜಾತೀಯ ಭೋಜನ ಕೂಟಗಳಲ್ಲಿ ಯಾವುದಕ್ಕೂ ಹಿಂಜರಿಯದೆ ಸ್ವೇಚ್ಛಾ ಪ್ರೇಮ ದಿಂದ ಭಾಗವಹಿಸಿದರು.

೫. ದಾಸೋಹ ಪರಿಕಲ್ಪನೆಯೂ ಕೂಡ ಒಂದು ಕ್ರಾಂತಿಕಾರಿ ಗುಣ ಸ್ವರೂಪದ್ದಾಗಿದೆ. ಅದು ಭ್ರಾತೃತ್ವ ಹಾಗೂ ಸಮಾನತೆಯ ಅರಿವನ್ನು ಮೂಡಿಸಲು ದಾಪುಗಾಲಿಕ್ಕಿದೆ. ಅದು ಸಮಾಜದ ಒಳಿತಿಗಾಗಿ ಸೇವೆಯನ್ನು ಸಲ್ಲಿಸುವತ್ತ ಒತ್ತು ಕೊಟ್ಟಿದೆ. ಅದು ಅಂತರ್ಜಾತೀಯ ಭೋಜನಕೂಟದಲ್ಲಿ ಸಮಾನತೆಯಾಧಾರದ ಮೇಲೆ ಭಾಗವಹಿಸಲು ಉತ್ತೇಜಿಸಿದೆ. ದಾಸೋಹ ಪರಿಕಲ್ಪನೆಯು ‘ದಾನ’ದ ಪರಿಕಲ್ಪನೆಯ ಅರ್ಥವನ್ನು ಪುನಃ ನಿರೂಪಿಸಿದೆ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ದಾನವನ್ನು ಕೊಟ್ಟಾಗ ದಾನ ಕೊಟ್ಟ ವ್ಯಕ್ತಿಯೂ ಹಿರಿಮೆಯಿಂದಿದ್ದರೆ ದಾನ ತೆಗೆದುಕೊಂಡ ವ್ಯಕ್ತಿಯು ಆತನ ಋಣದಲ್ಲಿರಬೇಕಾಗುತ್ತದೆ. ಆದರೆ ದಾಸೋಹ ಪರಿಕಲ್ಪನೆಯು ಎಲ್ಲರೂ ಹಂಚಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಆದ್ದರಿಂದ ದಾಸೋಹದ ಪ್ರಕಾರ ದಾನವು ಒಂದು ದತ್ತಿ ಅಥವಾ ಕಾಣಿಕೆಯಾಗಿರದೇ ಅದೊಂದು ಸಮಾನತೆಯಾಧಾರದ ಮೇಲಿನ ಹಂಚಿಕೊಳ್ಳುವಿಕೆ. ಹೀಗೆ ದಾಸೋಹವು ನವೀನತಮ ಸ್ವರೂಪದ್ದಾಗಿದೆ.

ಸುಪ್ರಸಿದ್ಧ ಇತಿಹಾಸಕಾರರಾದ ಡಾ. ಪಿ.ಬಿ. ದೇಸಾಯಿಯವರು (೩೩೯ :೧೯೬೮) ಹೇಳುವಂತೆ ನಾವು ಬಸವೇಶ್ವರರನ್ನು ಹಾಗೂ ಅವರ ಕೊಡುಗೆಗಳನ್ನು ಒಂದು ದಂತಕಥೆ ಅಥವಾ ಒಂದು ಕಾಲ್ಪನಿಕ ಕಥೆಯೆಂದು ತಿಳಿದುಕೊಳ್ಳದೇ ಅವರನ್ನು ಐತಿಹಾಸಿಕ ಗಣ್ಯ ಪುರುಷರೆಂದು ಪರಿಗಣಿಸಬೇಕು. ಡಾ. ದೇಸಾಯಿಯವರ ಪ್ರಕಾರ ಬಸವೇಶ್ವರರ ಜೀವನದ ಗುರಿ ಕೇವಲ ದೇವರ ಸಂದೇಶಗಳನ್ನು ಪ್ರಚಾರ ಮಾಡಲು ಧಾರ್ಮಿಕ ಆಚರಣೆಗಳನ್ನು ಪಾಲಿಸುವುದಷ್ಟೇ ಅಲ್ಲ, ಜೊತೆಗೆ ಸ್ವತಃ ಅವರೊಬ್ಬ ತತ್ವಜ್ಞಾನಿಯಾಗಿದ್ದು ಸಮಾಜದ ಎಲ್ಲ ವರ್ಗಗಳ ಸೇವೆ ಹಾಗೂ ಉದ್ಧಾರಕ್ಕಾಗಿ ಶ್ರಮಿಸಿದರು. ತಮ್ಮ ಕ್ರಾಂತಿಕಾರಿ ವಿಚಾರ ಗಳನ್ನು ಆಚರಣೆಗೆ ತಂದ ಕ್ರಿಯಾಶೀಲ ನಾಯಕರಾಗಿದ್ದರು. ಬಸವೇಶ್ವರರೊಬ್ಬ ದೂರದೃಷ್ಟಿ ಯುಳ್ಳ ವ್ಯಕ್ತಿಯಷ್ಟೇ ಆಗಿರದೇ ತಮ್ಮ ಸಮಕಾಲೀನರಿಗಿಂತ ತಮ್ಮ ವಿಚಾರ ಹಾಗೂ ಧ್ಯೇಯಗಳಲ್ಲಿ ಎಷ್ಟೋ ಪಟ್ಟು ಮುಂದಿದ್ದರು. ಈ ನಿಟ್ಟಿನಲ್ಲಿ ಸಮಾಜದಲ್ಲಿ ಅವರು ಸಾಗಿದ ಮಾರ್ಗ ನಿಜವಾಗಿಯೂ ಆಧುನಿಕತೆಯಿಂದ ಕೂಡಿತ್ತು. ಈಗಿನ ಕೆಲವರು ಪ್ರಸ್ತುತ ದಲ್ಲಿರುವ ತಾಂತ್ರಿಕತೆಯಿಂದ ಕೂಡಿದ ಸಮಾಜವನ್ನು ‘ಆಧುನಿಕ’ ಅಥವಾ ‘ಆಧುನಿಕತೆಯ ಪ್ರಕ್ರಿಯೆ’ ಎಂದು ಕರೆಯುತ್ತಾರೆ. ಆದರೆ ಪ್ರಾಚೀನ ಸಾಂಪ್ರದಾಯಿಕತೆಯಿಂದ ಹೊರಬಂದಿ ರುವ ಪ್ರಕಿಯೆಯೇ ‘ಆಧುನಿಕ’ ಶಬ್ದದ ಅರ್ಥ. ಈ ಬದಲಾವಣಿಯ ಪ್ರಕ್ರಿಯೆಯು ಮಾನವೀಯ ತತ್ವಗಳ ಆಧಾರದ ಮೇಲೆ ವಿವೇಚನೆ ಯಿಂದ ಕೂಡಿದ ಉತ್ತಮ ಸಮಾಜ ವಾಗಿರಬೇಕು.

ಯೋಗೇಂದ್ರ ಸಿಂಗ್ (೧೦೧:೧೯೭೩) ಅವರು ಹೇಳುವಂತೆ ಆಧುನಿಕತೆ ಪ್ರಕ್ರಿಯೆಯು ಲೋಕಪ್ರಜ್ಞಾ ದೃಷ್ಟಿಕೋನವನ್ನು ಬೆಳೆಸುವತ್ತ ಪ್ರಯತ್ನಿಸುತ್ತಿದೆ. ಹಾಗೂ ಅದರ ಮುಖ್ಯವಾದ ಮೂಲ ತತ್ವಗಳು ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ಮಾನವೀಯತೆ ಹಾಗೂ ಮಠಾಧಿ ಕಾರದ ವಿಧಾಯಕವಾದ ತತ್ವ ಮತ್ತು ನಂಬಿಕೆಯನ್ನು ತಿರಸ್ಕರಿಸುತ್ತದೆ. ಆಧುನಿಕತೆಯು ಪುನರುಜ್ಜೀವನದ ಯುಗವನ್ನು ತರಲು ಪ್ರಯತ್ನಿಸುತ್ತಿದೆ. ಅದು ಸಾಮಾಜಿಕ ಅರಿವನ್ನು, ವಿವೇಕಯುತವಾದ ಸಾಮಾಜಿಕ ಸುಧಾರಣೆಯನ್ನು, ಮಹಿಳಾ ವಿಮೋಚನೆಯನ್ನು ಹಾಗೂ ಸಮಾಜದ ದುರ್ಬಲರ ಉದ್ಧಾರವನ್ನು ಮಾಡುವಂತಹುದನ್ನು ವಿಕಾಸಗೊಳಿಸುತ್ತದೆ. ಇವು ಗಳನ್ನೆಲ್ಲಾ ಬಸವೇಶ್ವರರ ಚಳುವಳಿಯು ಬೆಳೆಸಿ ವಿಕಾಸಗೊಳಿಸಿದೆ.

ಆಧುನಿಕತೆ ಪ್ರಕ್ರಿಯೆಯನ್ನು ಉಲ್ಲೇಖಿಸುತ್ತಾ ಡಾ.ಕೆ. ಈಶ್ವರನ್ (೧೧೬:೧೯೭೮) ಅವರು ಹೀಗೆ ಹೇಳಿದ್ದಾರೆ : ಭಾರತದಲ್ಲಿನ ಅನೇಕ ಸಮುದಾಯಗಳು ೧೯ನೇ ಶತಮಾನದ ಪಾಶ್ಚಿಮಾತ್ಯ ಶಿಕ್ಷಣದ ಮುಖಾಂತರ ಆಧುನಿಕತೆಗೆ ಕಾಲಿಟ್ಟವು. ಅದು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನು ಕರಣೆಯ ಫಲವಾಗಿತ್ತು. ಆದರೆ ಲಿಂಗಾಯತರ ಆಧುನಿಕತೆಯು ಬಸವೇಶ್ವರರ ತತ್ವಗಳಿಂದಾಗಿ ಅತ್ಯಂತ ಸ್ಥಳೀಯ ರೂಪದ್ದಾಗಿದೆ. ಇದನ್ನೇ ಮುಂದು ವರೆಸುತ್ತಾ ಅವರು ಹೀಗೆ ಹೇಳಿದ್ದಾರೆ. ಆಧುನಿಕತೆಯನ್ನು ಕೇವಲ ಗಾತ್ರ ಅಥವಾ ವಿಸ್ತಾರದಿಂದಷ್ಟೇ ನೋಡದೇ ಅದರ ಗುಣಮಟ್ಟ ವನ್ನೂ ಸಹ ಪರಿಗಣಿಸಬೇಕು. ಏಕೆಂದರೆ ಆಧುನಿಕತೆಗೆ ಒಂದು ಪ್ರಾಚೀನ ಹಾಗೂ ಸಾಂಪ್ರದಾಯಿಕ ಸಂಸ್ಕೃತಿಯೊಂದಿಗೆ ಹೊಂದಿಕೊಂಡು ಸಹಬಾಳ್ವೆಯನ್ನು ನಡೆಸಬೇಕಿದೆ. ಆಧುನಿಕತೆಯ ಪ್ರಕ್ರಿಯೆ ಯಿಂದುಂಟಾದ ಸಾಮಾಜಿಕ ಬದಲಾವಣೆಯ ವೇಗ ಅತ್ಯಂತ ನಿಧಾನ ವಾಗಿದ್ದು, ಬಸವೇಶ್ವರರ ಸಂದೇಶಗಳು ಎಲ್ಲೆಡೆ ಹರಡಲು ಸುಮಾರು ಎಂಟು ಶತಮಾನಗಳೇ ಬೇಕಾದವು. ಅಕಸ್ಮಾತ್, ಬಸವೇಶ್ವರರ ಕ್ರಾಂತಿಯೇನಾದರೂ ರಷ್ಯ, ಚೀನಾ, ಹಾಗೂ ಕ್ಯೂಬಾ ದೇಶಗಳಲ್ಲಿ ಹಠಾತ್ತಾಗಿ ಜರುಗಿದ ಕಮ್ಯುನಿಸ್ಟ್ ಕ್ರಾಂತಿಯ ಸ್ವರೂಪದ್ದಾಗಿದ್ದಿದ್ದರೆ ಇದೂ ಸಹ ಅಲ್ಲಿಯ ಹಾಗೆ ಅಸ್ತವ್ಯಸ್ತತೆ ಯನ್ನು ಹಾಗೂ ವಿನಾಶವನ್ನು ತರುತ್ತಿತ್ತು. ಡಾ. ಈಶ್ವರನ್‌ರ ಪ್ರಕಾರ ವೀರಶೈವ ಕ್ರಾಂತಿಯು ಒಂದು ‘ಸಮಷ್ಟಿ ಆಧುನಿಕತೆ’ಯ ಸ್ವರೂಪವಾಗಿದೆ.

‘ಸಮಷ್ಟಿ ಸಮುದಾಯ’ ಎಂದರೇನು? ಡಾ. ಈಶ್ವರನ್‌ರ ಪ್ರಕಾರ ಅದು ಈ ಕೆಳಗಿನ ಗುಣಗಳನ್ನು ಹೊಂದಿದ್ದ ಅಂಶವಾಗಿದೆ :

ಎ. ಸಮಷ್ಟಿ ಸಮುದಾಯವು  ಪ್ರಮುಖವಾಗಿ ರೈತ-ಬಾಂಧವರಿಂದ ಕೂಡಿದ್ದು ಕೃಷಿ ಯಾಧಾರಿತ ಆರ್ಥಿಕತೆಯಿಂದ ಕೂಡಿರುತ್ತದೆ. ಅಲ್ಲಿಯ ಸುತ್ತಮುತ್ತಲಿನ ಪರಿಸರ ದೊಂದಿಗೆ ಆಳವಾದ ಅನನ್ಯತೆಯನ್ನು ಸ್ಥಾಪಿಸಿರುತ್ತದೆ.

ಬಿ. ಈ ಸಮುದಾಯವು ರೂಢಿಯಾದ ಮಟ್ಟದ ವ್ಯವಸ್ಥೆಯ ಮೇಲೆ ಸಾಮಾಜಿಕವಾಗಿ ಐಕ್ಯತೆಯಿಂದಿದ್ದು, ವಿವಿಧ ಪಂಗಡಗಳ ಮಧ್ಯೆ ಸಹಕಾರದ ಸ್ಫೂರ್ತಿ ಇರುತ್ತದೆ.

ಸಿ. ಈ ಸಮುದಾಯದಲ್ಲಿ ಉತ್ತಮತಾವಾದವು ಇರುವುದಿಲ್ಲ.

ಡಿ. ಇಂತಹ ಒಂದು ಸಮುದಾಯವು ತನ್ನ ಏಕಾಂತವಾಸದಿಂದ ಹೊರಬಂದು ಇನ್ನಿತರ ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಬೆಳೆಸಲು ಪ್ರಯತ್ನಿಸುತ್ತದೆ. ಈ ಸಮುದಾಯಕ್ಕೆ ಲೋಕ ಪ್ರಜ್ಞೆಯ ದೃಷ್ಟಿಕೋನವಿರುವುದರಿಂದ ಇದು ತನ್ನಿಂದ ತಾನೇ ದೂರ ಸರಿಯುವುದಿಲ್ಲ ಹಾಗೂ ತನಗೆ ಎದುರಾದ ಯಾವುದೇ ಸವಾಲುಗಳನ್ನು ಎದುರಿಸಲು ಅಣಿಯಾಗುತ್ತದೆ. ಹೀಗೆ ವೀರಶೈವ ಧರ್ಮತತ್ವವು “ಸಮಷ್ಟಿ ಪ್ರಕಾರದ ಆಧುನಿಕತೆ’ಯ (೨.೪:೧೯೭೮) ಅನುಭವ-ಜ್ಞಾನವನ್ನು ಸಮುದಾಯಕ್ಕೆ ಲಭಿಸುವಂತೆ ಮಾಡಿದೆ.

ಸಾಂಪ್ರದಾಯಿಕ ಸಮಾಜದಲ್ಲಿ ಆಧುನಿಕತೆ ಪ್ರತಿಕ್ರಿಯೆಯು ಬಹಳ ನಿಧಾನವಾಗಿರುತ್ತದೆ       ಎಂಬ ಡಾ. ಈಶ್ವರನ್‌ರ ಅಭಿಪ್ರಾಯವನ್ನು ರುಡಾಲ್ಫ್ ಮತ್ತು ರುಡಾಲ್ಫ್ (೧೯೬೭) ಅವರು ಒಪ್ಪಿಕೊಳ್ಳುತ್ತಾರೆ. ಆಧುನಿಕತೆಯ ಹೊಸ ಗುಣಗಳನ್ನು ಹೀರಿಕೊಳ್ಳಲು ಯಾವುದೇ ಉದಯೋನ್ಮುಖ ಸಮುದಾಯಕ್ಕೆ ಕೆಲಸಮಯ ತೆಗೆದುಕೊಳ್ಳುತ್ತದೆ. ಜೊತೆಗೆ ಈ ಪ್ರಕ್ರಿಯೆ ನಡೆದಾಗ ಅದು ಯಾವುದೇ ಸ್ಪಷ್ಟ ತೋರಿಕೆ ಅಥವಾ ಒಂದು ಉದ್ರೇಕ-ನಾಟಕದಂತಹ ಲಕ್ಷಣಗಳನ್ನು ತೋರುವುದಿಲ್ಲ. ಈ ಲೀನವಾಗಿ ಹೋಗುವ ಪ್ರಕ್ರಿಯೆಯು ನಿಧಾನವಾಗಿದ್ದು ಸ್ವಲ್ಪ ಸಮಯದ ನಂತರ ಆ ಸಮುದಾಯವು ಸ್ವತಂತ್ರ ಸಮುದಾಯವೆಂದು ಕರೆಸಿಕೊಳ್ಳುತ್ತದೆ. ಈ ಪ್ರಕ್ರಿಯೆಗೆ ಅವರು ‘ಶಾಂತಿಯುತ ಕ್ರಾಂತಿ’ ಎಂದು ಕರೆದರು (೨೬೧:೧೯೮೯).

ಇನ್ನೊಂದು ಸಂದರ್ಭದಲ್ಲಿ ಈಶ್ವರನ್ (೧೪೧:೧೯೮೩) ಅವರು ಲಿಂಗಾಯತ ಆಧುನಿಕತೆಯು ತನ್ನ ಹುಟ್ಟಿನಿಂದಲೇ ಪ್ರಾರಂಭವಾಗಿದ್ದರೂ, ೧೯ನೇ ಶತಮಾನದಿಂದೀಚೆಗೆ ಅದರ ರಭಸವು ಎದ್ದು ಕಾಣುತ್ತಿದೆ. ಯುರೋಪ್‌ನಲ್ಲಿ ಪ್ರೊಟೆಸ್ಟಂಟ್ ಧರ್ಮವು ವಹಿಸಿದ ಪಾತ್ರವನ್ನೇ ದಕ್ಷಿಣ ಭಾರತದಲ್ಲಿ ಲಿಂಗಾಯತ ಧರ್ಮವು ವಹಿಸಿತು. ಈ ಧರ್ಮವು ತನ್ನ ಸಮುದಾಯದ ಸಾಂಸ್ಥಿಕ ಚೌಕಟ್ಟನ್ನು, ಸಮಾನತಾವಾದ, ಬಹುಸಂಖ್ಯಾ ಗುಂಪುಗಳವಾದ ಹಾಗೂ ಸಾಮಾಜಿಕ ಸಮಾನತೆಗಳನ್ನು ಪಾಲಿಸಲು ತನಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿ ಹೊಂದಿಸಿಕೊಂಡಿದೆ.

೧೯೬೦ರಲ್ಲಿ ಡಿ.ಎ. ಚೆಕ್ಕಿ (೯೭:೧೯೭೪) ಅವರು ಧಾರವಾಡದಲ್ಲಿ ನಡೆಸಿದ ತಮ್ಮ ಅಧ್ಯಯನದಲ್ಲಿ ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯಗಳ ನಡುವೆ ಇರುವ ಮೌಲ್ಯಗಳ, ಸಂಪ್ರದಾಯಗಳ, ಹಾಗೂ ಜೀವನ ಶೈಲಿಗಳಲ್ಲಿರುವ ವ್ಯತ್ಯಾಸವನ್ನು ತೋರಿ ಸಿದ್ದಾರೆ. ಬ್ರಾಹ್ಮಣ ಸಮುದಾಯವು ಸಾಂಪ್ರದಾಯಿಕತೆಯಿಂದ ಕೂಡಿದ್ದು, ಅದರ ಜೀವನ ಶೈಲಿಯ ಬೇರುಗಳು ವೈದಿಕ ನೀತಿ ಬೋಧೆಯಲ್ಲಿ ಹುದುಗಿದೆ. ಆದರೆ ಲಿಂಗಾಯತ ಸಮುದಾ ಯವು ಬೇರೆ ಬೇರೆ ವೃತ್ತಿಗಳನ್ನು ಕೈಗೆತ್ತಿಕೊಳ್ಳಲು ಒಲವು ತೋರಿದೆ, ಇವರಲ್ಲಿ ವರದಕ್ಷಿಣೆ ಪದ್ಧತಿ ಇಲ್ಲಾ, ಆಗಾಗ ವಿಧವಾ ಮರುವಿವಾಹವನ್ನು ಪ್ರೋಬದಲಾ ವಣಿಗೆ ತಕ್ಕಂತೆ  ಹೊಂದಿಕೊಳ್ಳುತ್ತದೆ ಹಾಗೂ ಲಿಂಗ ಸಮಾನತೆಯನ್ನು ಪ್ರದರ್ಶಿಸಿದೆ. ವೀರಶೈವ ಧರ್ಮದ ಆದರ್ಶಗಳು ಹಾಗೂ ಸಾಮಾಜಿಕ ನೀತಿಗಳು ಈ ಸಮುದಾಯವನ್ನು ಹೆಚ್ಚಿನ ಆಧುನಿಕತೆಯತ್ತ ಕೊಂಡೊಯ್ದಿದೆ.

ಲಿಂಗಾಯತರ ಆಧುನಿಕತೆಯ ಕ್ರಾಂತಿಯ ಸ್ವರೂಪವನ್ನು ಗುರುತಿಸುತ್ತಾ ಈಶ್ವರನ್ (೧೨೧:೧೯೮೩) ಅವರು ಆ ಸಮುದಾಯದ ಕೆಲವು ಸಾಧನೆಗಳನ್ನು ಹೀಗೆ ಬಣ್ಣಿಸಿದ್ದಾರೆ :

೧. ಅಖಿಲ ಭಾರತ ವೀರಶೈವ ಮಹಾಸಭೆಯ ಸ್ಥಾಪನೆಯಾಯಿತು.

೨. ಲಿಂಗಾಯತರಲ್ಲಿ ೧೯ನೇ ಶತಮಾನದಿಂದೀಚೆಗೆ ಆದ ಶೈಕ್ಷಣಿಕ ಅಭಿವೃದ್ದಿಯಿಂದಾಗಿ ಹೊಸ ಸಂಘಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಯಿಂದಾಗಿ ಸಮುದಾಯದ ಶೈಕ್ಷಣಿಕ ಮಟ್ಟ ಪ್ರವರ್ಧಿಸಿದೆ.

೩. ಕರ್ನಾಟಕದ ಲಿಂಗಾಯತರಲ್ಲಿ ರಾಜಕೀಯ ತಿಳುವಳಿಕೆಯನ್ನು ಮೂಡಿಸುವಲ್ಲಿ ಮಹತ್ವದ ಸಾಧನೆಯಾಗಿದೆ.

ಈ ಮೇಲಿನ ಬೆಳವಣಿಗೆಗಳು ಬಸವೇಶ್ವರರು ಪ್ರಾರಂಭಿಸಿದ ಕ್ರಾಂತಿಯನ್ನು ಆಧುನಿಕ ಶತಮಾನದಲ್ಲಿಯೂ ಜೀವಂತವಾಗಿರಿಸಿವೆ.

ರಾಘವೇಂದ್ರರಾವ್ (೨೮೦:೧೯೬೫) ಅವರು “ಹಳೇ ಮೈಸೂರು ರಾಜ್ಯದ ರಾಜಕೀಯ ಸಂಚಲನೆ” ಎಂಬ ಅಧ್ಯಯನದಲ್ಲಿ ಲಿಂಗಾಯತ ಸಮುದಾಯವು ರಾಜಕೀಯವಾಗಿ ಶಕ್ತ ರಾಗಲು ಸಹಾಯವಾದ ಮೂರು ಹಂತಗಳನ್ನು ಗುರುತಿಸಿದ್ದಾರೆ.

. ತುಣುಕುಗಳಾಗಿ ಹರಡಿಕೊಂಡ ಹಂತ : (೧೯ನೇ ಶತಮಾನ)

ಈ ಹಂತದಲ್ಲಿ ಸಾಮಾಜಿಕ ಸಂಚಲನೆಯೂ ಅತ್ಯಂತ ಕೆಳ ಮಟ್ಟದಲ್ಲಿತ್ತು. ಸಮುದಾಯವು ಅನೇಕ ಪಂಗಡ ಹಾಗೂ ಉಪಜಾತಿಗಳಲ್ಲಿ ಹರಿದು ಹಂಚಿ ಹೋಗಿತ್ತು. ಈ ಹಂತದಲ್ಲಿಯೂ ಕೆಲವು ರಾಜಕೀಯ ಧುರೀಣರು ಸಮುದಾಯವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದರು.

. ಏಕೀಕೃತ ಹಂತ (೧೯೩೦೧೯೫೦)

ಈ ಹಂತವು ಸಮುದಾಯದಲ್ಲಿ ಹೆಚ್ಚಿನ ರಾಜಕೀಯ ಅರಿವನ್ನು ಕಂಡಿತು. ಜೊತೆಗೆ ಇದೇ ಅವಧಿಯಲ್ಲಿ ಈ ಹಂತವು ಒಕ್ಕಲುತನದ ಹಿನ್ನೆಲೆಯನ್ನು ತ್ಯಜಿಸಿ ಪಟ್ಟಣಗಳಲ್ಲಿ ಉದ್ಯೋಗಗಳನ್ನು ಅರಸಿಕೊಂಡು ಬರುವ ಶಿಕ್ಷಿತ ಮಧ್ಯಮ ವರ್ಗವನ್ನೂ ಸಹ ಕಂಡಿತು. ರಾಜಕೀಯ ಒತ್ತಡ ಹೇರುವ ಗುಂಪುಗಳ ಬೆಳವಣಿಗೆಯನ್ನು ಈ ಹಂತವು ಕಂಡಿತು. ಈ ಗುಂಪುಗಳು ರಾಜಕೀಯ ಅಧಿಕಾರವನ್ನು ಕಬಳಿಸಲು ಪ್ರಯತ್ನಿಸಿದವು.

. ವೈಯಕ್ತಿಕ ಹಂತ (೧೯೫೦            )

ಈ ಹಂತವು ಕೇವಲ ಸಮುದಾಯದ ಅಂತರಿಕ ಮಹತ್ವಾಕಾಂಕ್ಷೆಗಳನ್ನಷ್ಟೇ ಅಲ್ಲದೇ, ಉದಾರ ದೃಷ್ಟಿಯ ಆಧುನಿಕ ರಾಜಕೀಯ ಬೆಳವಣಿಗೆಯನ್ನು ಕಂಡಿತು. ಭಾಷಾಧಾರಿತ ರಾಜ್ಯದ ಏಕೀಕರಣವು ಈ ಸಮುದಾಯವನ್ನು ಒಂದುಗೂಡಿಸುವಲ್ಲಿ ಸಹಾಯ ಮಾಡಿತು. ಹೀಗೆ ಅವರು ಪ್ರಬಲ ಸಮುದಾಯಗಳಿಂದ ಮುಂದಾಳತ್ವವನ್ನು ಸೆಳೆದುಕೊಳ್ಳುವಲ್ಲಿ ಸಫಲರಾದರು.

ಹಿರೇಮಲ್ಲೂರ ಈಶ್ವರನ್ (ಬಸವಣ್ಣ ಹಾಗೂ ಲಿಂಗಾಯತ ಧರ್ಮ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೮೯) ಅವರು ಹೇಳುವಂತೆ ಬಸವಣ್ಣನವರು ಸ್ಥಾಪಿಸಿದ ಧರ್ಮವು ಪ್ರತಿಭಟನಾ ಪಂಥವೂ ಅಲ್ಲ, ಪರಿಷ್ಕರಣ ಧರ್ಮವೂ ಅಲ್ಲ, ಅದೊಂದು ಸ್ವತಂತ್ರ ವಾದ ಕ್ರಾಂತಿಕಾರಿ ಧರ್ಮ ಎಂಬ ವಾದವನ್ನು ಮಂಡಿಸಿದ್ದಾರೆ.

ಹೀಗೆ ೧೨ನೇ ಶತಮಾನದಲ್ಲಿ ಪ್ರಾರಂಭವಾದ ಈ ಮೌನಕ್ರಾಂತಿಯೂ ಇಂದು ಮೌನ ವಾಗಿ ಉಳಿದಿಲ್ಲ. ಅದು ಗಟ್ಟಿಯಾಗಿ ಕೂಗಿ ಹೇಳುತ್ತಿದೆ. ಆಧುನಿಕ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಹಾಗೂ ರಾಜಕೀಯ ಸಾಮರ್ಥ್ಯವನ್ನು ಪಡೆದ ಲಿಂಗಾಯತ ಸಮುದಾಯವು ಈಗ ತನ್ನದೇ ಆದ ಹೆಗ್ಗುರುತನ್ನು ಸ್ಥಾಪಿಸಿದೆ. ಈ ನಿಟ್ಟಿನಲ್ಲಿ  ಈಶ್ವರನ್ (೨:೧೯೮೩) ಅವರು ಹೇಳುವಂತೆ “ಲಿಂಗಾಯತರು ತಮ್ಮನ್ನು ತಾವು ಹಿಂದೂಗಳೆಂದು ಗುರುತಿಸಿಕೊಳ್ಳು ವುದಿಲ್ಲ. ಅವರ ಧರ್ಮವು ಹೆಚ್ಚು ಪ್ರಜಾಸತ್ತಾತ್ಮಕ ಆಧಾರದ ಮೇಲಿರುವ ಒಂದು ಸಮಷ್ಟಿ ಸಮೂದಾಯವಾಗಿದೆ. ಅಷ್ಟಾವರ್ಣ ಸಿದ್ಧಾಂತವೇ ಈ ಧರ್ಮದ ಶರೀರ; ಪಂಚಾಚಾರವೆಂಬ ಭಾವನೆಯೇ ಅದರ ಉಸಿರು; ಹಾಗೂ ಷಟಸ್ಥಲ ಮಾರ್ಗವೇ ಅದರ ಆತ್ಮವು” ಹೀಗೆ ಲಿಂಗಾಯತರು ಹಿಂದೂ ಸಮೂದಾಯದವರಲ್ಲ, ವೀರಶೈವ ಧರ್ಮವು ತನ್ನದೇ ಆದ ಬೇರೆ ಗುರುತನ್ನು ಸ್ಥಾಪಿಸಿರುವ ಧರ್ಮವಾಗಿದೆಯೆಂದು ಅವರು ತಮ್ಮ ವಾದವನ್ನು ಮಂಡಿಸಿದ್ದಾರೆ.

ಈ ವಾದವನ್ನು ಅನೇಕ ಚಿಂತಕರು ಹಾಗೂ ಇತಿಹಾಸಕಾರರು ವಿರೋಧಿಸಿ ವಿವಾದಕ್ಕೆಡೆ ಮಾಡಿದ್ದಾರೆ. ಇತ್ತೀಚೆಗೆ ಡಾ. ಚಿದಾನಂದಮೂರ್ತಿ (ಇಂಡಿಯನ್ ಎಕ್ಸ್‌ಪ್ರೆಸ್, ೧೦.೧೦. ೨೦೦೧) ಅವರು ಹೇಳುವಂತೆ ವೀರಶೈವ ಧರ್ಮವನ್ನು ಪ್ರತ್ಯೇಕವಾದ ಧರ್ಮವೆನ್ನುವುದು ತಪ್ಪು. ಈ ನಿಟ್ಟಿನಲ್ಲಿ ತಮ್ಮ ಸಂಶೋಧನೆಯ ಆಧಾರದ ಮೇಲೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ವೀರಶೈವ ತತ್ವ ವಿಚಾರವು ಬಸವೇಶ್ವರರ ಜನ್ಮಕ್ಕಿಂತ ಮೊದಲೇ ಇತ್ತೆಂದು ತಿಳಿಸಿದ್ದಾರೆ. ಲಿಂಗಾಯತ ಸಮುದಾಯದ ಕೆಲವರು ಈ ವಾದವನ್ನು ಸಮ್ಮತಿಸಿದ್ದಾರೆ.

ಕೊನೆಯಲ್ಲಿ ಈ ವಿವಾದಾಸ್ಪದ ವಿಷಯವನ್ನು ಬದಿಗಿಡುತ್ತಾ, ಒಟ್ಟಿನಲ್ಲಿ ಹೇಳುವುದಾದರೆ ಬಸವೇಶ್ವರರದು ಒಂದು ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯನ್ನು ಹುಟ್ಟು ಹಾಕಿದ ಒಬ್ಬ ಮಹಾನ್ ಕ್ರಾಂತಿಕಾರಿ ವ್ಯಕ್ತಿತ್ವ. ಕೆಲವು ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳು ೧೨ನೇ ಶತಮಾನದಲ್ಲಿಯೇ ಪರಿಚಯಿಸಿದ್ದರೂ ಕೂಡ ಅವು ಇಂದಿಗೂ ಅತ್ಯಂತ ಆಧುನಿಕವೆನಿಸಿವೆ. ವಾಸ್ತವಿಕವಾಗಿ ಇದು ೧೨ನೇ ಶತಮಾನದಲ್ಲಿ ಪ್ರಾರಂಭವಾದ ಒಂದು ಆಧುನಿಕ ಕ್ರಾಂತಿಯಾಗಿದ್ದರೂ ಪ್ರಸ್ತುತ ಶತಮಾನದಲ್ಲಿ ಅದು ಸಂಪೂರ್ಣವಾಗಿ ಅರಳಿದೆ.

 

ಗ್ರಂಥಋಣ

೧. ನಾಗೇಶ, ಎಚ್.ವಿ. (೨೦೦೧) : ಸಾಮಾಜಿಕ ಚಿಂತನೆ  : ಒಂದು ಅಧ್ಯಯನ, ಪು.೧೮೯, ಭಾರತ ಪ್ರಕಾಶನ, ಧಾರವಾಡ.

೨. ಈಶ್ವರನ್, ಕೆ.  (೧೯೮೯) : ಬಸವಣ್ಣ ಹಾಗೂ ಲಿಂಗಾಯತ ಧರ್ಮ, ಶ್ರೀ ನಿ.ಪ್ರ. ಮರುಗೋಡ ಮಹಾಂತ ಶಿವಯೋಗೀಶ್ವರ ಶತಮಾನೋತ್ಸವ, ಕ.ವಿ.ವಿ., ಧಾರವಾಡ.

೩. ಈಶ್ವರನ್, ಕೆ. (೧೯೬೮) : ಎ ಪಾಪ್ಯುಲಿಸ್ಟಿಕ್ ಕಮ್ಯೂನಿಟಿ ಆ್ಯಂಡ್ ಮಾಡರ್ನೈಜೇಷನ್ ಇನ್ ಇಂಡಿಯಾ, ವಿಕಾಸ್ ಪಬ್ಲಿಕೇಶನ್ ಹೌಸ್, ನ್ಯೂ ಡೆಲ್ಲಿ, (ಇಂಗ್ಲೀಷ್ ಆವೃತ್ತಿ).

೪. ಈಶ್ವರನ್, ಕೆ. (೧೯೮೩) : ರಿಲಿಜನ್ ಆ್ಯಂಡ್ ಸೊಸೈಟಿ ಅಮಾಂಗ್ ದಿ ಲಿಂಗಾಯತ್ಸ್ ಆಫ್ ಸೌತ್ ಇಂಡಿಯಾ, ವಿಕಾಸ್ ಪಬ್ಲಿಕೇಶನ್ ಹೌಸ್, ನ್ಯೂಡೆಲ್ಲಿ, (ಇಂಗ್ಲೀಷ್ ಆವೃತ್ತಿ).

೫. ಶ್ರೀ ಬಸವೇಶ್ವರ (೧೯೬೭) : ಏಯ್ಟ ಸೆಂಚುರಿ ಕಮೆಮೊರೇಷನ್ ವಾಲ್ಯೂಮ್, ಗೌವರ್ನಮೆಂಟ್ ಆಫ್ ಮೈಸೂರು, ಬೆಂಗಳೂರು, (ಇಂಗ್ಲೀಷ್ ಅವೃತ್ತಿ).

ಎ. ದಿವಾಕರ, ಆರ್.ಆರ್. :  “ದಿ ಮೆಸ್ಸೇಜ್ ಆಫ್ ಶ್ರೀ ಬಸವೇಶ್ವರ” ಪಿಪಿ. ೭೭-೮೧. (ಇಂಗ್ಲೀಷ್ ಆವೃತ್ತಿ).

ಬಿ. ಚಿದಾನಂದಮೂರ್ತಿ, ಎಮ್ : “ಶ್ರೀ ಬಸವೇಶ್ವರ ಆ್ಯಂಡ್ ಹಿಸ್ ಮಾಡರ್ನ್ ಔಟ್‌ಲುಕ್ ಆನ್ ಲೈಫ್”, ಪಿಪಿ. ೧೦೯-೧೧೫, (ಇಂಗ್ಲೀಷ್ ಆವೃತ್ತಿ).

ಸಿ. ಜವಳಿ, ವಿ.ಕೆ : “ಕಾಯಕ ಆ್ಯಂಡ್ ದಿ ಡಿಗ್ನಿಟಿ ಆಫ್ ಲೇಬರ್” ಪಿಪಿ. ೧೩೯-೧೪೪, (ಇಂಗ್ಲೀಷ್ ಆವೃತ್ತಿ).

೬. ನಂದಿಮಠ, ಎಸ್.ಸಿ. (೧೯೭೯) :  ಎ ಹ್ಯಾಂಡ್‌ಬುಕ್ ಆಫ್ ವೀರಶೈವಿಸಂ, ಮೋತಿಲಾಲ್ ಬನಾರಸಿದಾಸ್, ಪಾಟ್ನಾ (ಇಂಗ್ಲೀಷ್ ಆವೃತ್ತಿ).

೭. ದೇಸಾಯಿ,ಪಿ.ಬಿ. (೧೯೬೯) : ಬಸವೇಶ್ವರ ಆ್ಯಂಡ್ ಹಿಸ್ ಟೈಮ್ಸ್, ಕನ್ನಡ ರಿಸರ್ಚ್ ಇನ್‌ಸ್ಟಿಟ್ಯೂಟ್, ಕರ್ನಾಟಕ ಯುನಿವರ್ಸಿಟಿ, ಧಾರವಾಡ, (ಇಂಗ್ಲೀಷ್ ಆವೃತ್ತಿ).

೮. ಸಿಂಗ್, ಯೋಗೇಂದ್ರ (೧೯೭೩) : ಮಾಡರ್ನೈಜೇಷನ್ ಆಫ್ ಇಂಡಿಯನ್ ಟ್ರೆಡಿಷನ್, ಥಾಮ್ಸನ್ ಪ್ರೆಸ್ (ಇಂಡಿಯಾ) ಲಿಮಿಟೆಡ್, ನ್ಯೂ ಡೆಲ್ಲಿ, (ಇಂಗ್ಲೀಷ್ ಆವೃತ್ತಿ).

೯. ರುಡಾಲ್ಫ್, ಎಲ್.ಪಿ. ಆ್ಯಂಡ್ ರುಡಾಲ್ಫ್, ಎಸ್. (೧೯೬೭)  : ದಿ ಮಾಡರ್ನೈಜೇಷನ್ ಆಫ್ ಟ್ರೆಡಿಷನ್, ಯುನಿವರ್ಸಿಟಿ ಆಫ್ ಚಿಕ್ಯಾಗೊ, (ಇಂಗ್ಲೀಷ್ ಆವೃತ್ತಿ).

೧೦. ರಾವ್, ರಾಘವೇಂದ್ರ (೧೯೬೫) : ಲಿಂಗ್ವಿಸ್ಟಿಕ್ ಪಾಲಿಟಿಕ್ಸ್ ಆ್ಯಂಡ್ ದಿ ಕಾಂಗ್ರೆಸ್ ಪಾರ್ಟಿ ಇನ್ ಮೈಸೂರು ಸ್ಟೇಟ್ (೧೯೪೭-೫೬), ಪಿ.ಎಚ್.ಡಿ., ಥಿಸಿಸ್ ಸಬ್‌ಮಿಟೆಡ್ ಟು ಯುನಿವರ್ಸಿಟಿ ಆಫ್ ಟೊರೆಂಟೊ, ಕೆನಡಾ. (ಇಂಗ್ಲೀಷ್ ಆವೃತ್ತಿ).

೧೧. ಚೆಕ್ಕಿ, ಡಿ.ಎ. (೧೯೭೧) : ಮಾಡರ್ನೈಜೇಷನ್ ಆ್ಯಂಡ್ ಕಿನ್ ನೆಟ್‌ವರ್ಕ್, ಇ.ಜೆ. ಬ್ರಿಲ್, ಲೈಡನ್, ನೆದರ್‌ಲ್ಯಾಂಡ್ಸ್,  (ಇಂಗ್ಲೀಷ್ ಆವೃತ್ತಿ).

೧೨. ಲರ್ನರ್, ಡಿ. (೧೯೬೮) : “ಮಾಡರ್ನೈಜೇಷನ್”, ಅಮೇರಿಕನ್ ಎನ್‌ಸೈಕ್ಲೊಪಿಡಿಯ ಆಫ್ ಸೊಸಿಯಲ್ ಸೈನ್ಸಸ್, ವಾಲ್ಯೂಮ್ ೧೦, (ಇಂಗ್ಲೀಷ್ ಆವೃತ್ತಿ).

೧೩. ಮೂರ್, ಡಬ್ಲೂ.ಇ. (೧೯೭೫) : ಸೊಸಿಯಲ್ ಚೇಂಜ್, ಪ್ರೆಂಟೀಸ್ ಹಾಲ್, ಡೆಲ್ಲಿ, (ಇಂಗ್ಲೀಷ್ ಆವೃತ್ತಿ)[1]      ಶ್ರೀ ಬಸವೇಶ್ವರರನ್ನು ‘ಬಸವಣ್ಣ’, ‘ಜಗಜ್ಯೋತಿ ಬಸವೇಶ್ವರ’ ಹೀಗೆ ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.

[2]       ವೀರಶೈವ ಧರ್ಮದಲ್ಲಿ ಆತ್ಮ ಸಾಧನೆಯ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಹಾಗೂ ಐಕ್ಯಗಳೆಂಬ ಆರು ಹಂತಗಳಿಗೆ ಷಟ್ಸ್ಥಲವೆನ್ನುವರು.