ಸವ’ ಎಂದೊಡನೆ ನೆನಪಾಗುವುದು ನಮ್ಮ ೧೨ನೇ ಶತಮಾನದ ಕ್ರಾಂತಿ. ಕ್ರಾಂತಿಕಾರಿ, ಮಾನವತಾವಾದಿ, ಸಮಾಜಸುಧಾರಕ ಬಸವಣ್ಣನವರು ಕಳೆದ ೮೦೦ ವರ್ಷಗಳ ಹಿಂದೆ ಸಾಂಪ್ರದಾಯಿಕ ಕೋಟೆಯನ್ನು ಭೇದಿಸಿ ಸ್ವಾತಂತ್ರ್ಯ ಹಾಗೂ ಸಮಾನತೆ ಆರೋಗ್ಯಕರ ಸಾಮಾಜಿಕ ವಾತಾವರಣದಲ್ಲಿ ತನ್ನ ವ್ಯಕ್ತಿತ್ವವನ್ನು ವಿಕಾಸಗೊಳಿಸುವಂತೆ ಸ್ತ್ರೀ ಜೀವನವನ್ನು ಮೇಲೆತ್ತಿದ ಕಾರ್ಯ ಭಾರತೀಯ ಚರಿತ್ರೆಯಲ್ಲಿಯೇ ಪ್ರಪ್ರಥಮ ಮತ್ತು ಅವಿಸ್ಮರಣೀಯ ಘಟನೆ ಎನ್ನಬಹುದು.

ಅಂದಿನ ನಮ್ಮ ಭಕ್ತಿ ಭಂಡಾರಿ ಬಸವಣ್ಣವರ ನಡೆ-ನುಡಿ, ಆಚಾರ-ವಿಚಾರ ಅಂದು-ಇಂದು-ಎಂದೆಂದಿಗೂ ಅವು ಸಾರ್ವತ್ರಿಕ ತತ್ವಗಳಾಗಿವೆ. ಅದರಲ್ಲಿಯೇ ಮಹಿಳೆಯರ ಪಾಲಿ ಗಂತೂ ಪವಿತ್ರ ಪಾವನವಾಗಿವೆ. ಇತಿಹಾಸದಲ್ಲೇ ಪ್ರಥಮವಾಗಿ ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಡುಗೆ, ಮುಕ್ತಿ ಮಾರ್ಗ ತೋರಿಸಿ, ತನ್ನತನವನ್ನು ತಿಳಿದುಕೊಂಡು ಕಾಯಕದಲ್ಲಿ ಆತ್ಮ ಶಕ್ತಿಯನ್ನು ಬೆಳೆಸಿಕೊಳ್ಳಲು ಕರೆಯಿತ್ತರು. ಪುರುಷಸಮಾನ ಸ್ಥಾನ-ಮಾನ ಕೊಟ್ಟು ಗೌರವಿಸಿದ್ದಾರೆ, ನಮ್ಮ ಬಸವಣ್ಣನವರು.

ಎಲ್ಲ ಸಮಾಜಗಳು ಲಿಂಗದ ಆಧಾರದ ಮೇಲಿಂದ ಸ್ತ್ರೀಯರು ಹಾಗೂ ಪುರುಷರು ಎಂಬ ಎರಡು ವರ್ಗಗಳಾಗಿದ್ದನ್ನು ನಾವು ಕಾಣುತ್ತೇವೆ. ಅದರಂತೆ ಸಮಾಜದಲ್ಲಿ  ಸ್ತ್ರೀಯರು ಪುರುಷರು ನಿರ್ವಹಿಸುವ ಪಾತ್ರಗಳಿಗೆ ಅನುಗುಣವಾಗಿ ಅವರ ಅಧಿಕಾರ, ಸೌಲಭ್ಯ, ಸ್ಥಾನಮಾನಗಳಲ್ಲಿ ಹಲವಾರು ಭೇದಭಾವ, ತಾರತಮ್ಯ ಬೆಳೆದು ಬರುವುದು ಜೈವಿಕವಾಗಿ ಸ್ವಾಭಾವಿಕವಾಗಿವೆ. ಕೆಲವು ಸಮಾಜಗಳ ಸ್ತ್ರೀ-ಪುರುಷರಲ್ಲಿ ಏರ್ಪಟ್ಟ ಅಂತರ ಅಥವಾ ತಾರತಮ್ಯ ಹೆಚ್ಚಿನ ಪ್ರಮಾಣದಲ್ಲಿರಬಹುದು, ಉದಾಹರಣೆ ನಮ್ಮ ಭಾರತೀಯ ನಾರಿ. ಭಾರತೀಯ ನಾರಿ (ಮಹಿಳಾ) ಪರಂಪರೆಯನ್ನು ಅಧ್ಯಯನಿಸಿದಾಗ ನಮಗೆ ತಿಳಿದು ಬರುವ ಒಂದು ಮುಖ್ಯ ಅಂಶ ಅಂದರೆ ವೇದ ಕಾಲವನ್ನು ಹೊರತುಪಡಿಸಿ ಮತ್ತೆ ಯಾವ ಕಾಲ ದಲ್ಲಿಯೂ ಸ್ತ್ರೀಯರಿಗೆ ಯೋಗ್ಯವಾದ ಸ್ಥಾನ-ಮಾನಗಳಿರಲ್ಲಿಲ್ಲ. ಪುರುಷ ಪ್ರಧಾನ ಸಂಸ್ಕೃತಿ ರೂಪಗೊಂಡು ಸ್ತ್ರೀ ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಪಾಪಯೋನಿಜೆ ಎನಿಸಿ ಕೊಂಡು ಸಮಾಜದ ತಿರಸ್ಕಾರಕ್ಕೆ ಪಾತ್ರಳಾಗಿದ್ದಳು.

ಬಸವಣ್ಣನವರು ಬರುವುದಕ್ಕೆ ಮುಂಚೆ ಇಡೀ ಭಾರತೀಯ ಸಮಾಜ ಜಾತಿ, ಮತ, ಪಂಥ, ಧರ್ಮ, ವರ್ಗ, ಮೇಲು-ಕೀಳು, ಉಚ್ಚ, ನೀಚ ಹಾಗೂ ವೈದಿಕ ಸಂಸ್ಕಾರಗಳ ತಳಹದಿಯ ಮೇಲೆ ತುಂಡು-ತುಂಡಾಗಿ ಹೋಗಿತ್ತು. ಬ್ರಾಹ್ಮಣರೇ ಇಡೀ ಸಮಾಜವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಆಡಳಿತ ಸೂತ್ರ ನಡೆಸುತ್ತಿದ್ದರು. ಅವರ ಪುರೋಹಿತ ಶಾಹಿ ಮತ್ತು ವರ್ಣಾಶ್ರಮ ಧರ್ಮದ ಪ್ರಭಾವದಿಂದ ಸಮಾಜದ ಬಹುಸಂಖ್ಯಾತ ಜನರಿಗೆ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯಗಳು ನಿರಾಕರಿಸಲ್ಪಟ್ಟಿದ್ದವು. ಹೀಗಾಗಿ ಭಾರತ ಅನೇಕ ಸಮಸ್ಯೆಗಳ ಆಗರವಾಗಿತ್ತು. ಅನೇಕ ದೇವರುಗಳ ಹಾಗೂ ಧರ್ಮದ ಹೆಸರಿನಲ್ಲಿ ಪ್ರಾಣಿಹತ್ಯೆ, ಶಿಶುಹತ್ಯೆ, ಗೋಹತ್ಯೆ, ಮುಂತಾದವುಗಳು ನಿರಂತರವಾಗಿ ನಡೆಯು ತ್ತಿದ್ದವು. ಜಾತೀಯತೆ, ಅಸ್ಪೃಶ್ಯತೆ, ಬಾಲ್ಯವಿವಾಹ, ವಿಧವಾ ಸಮಸ್ಯೆ, ವೇಶ್ಯಾವಾಟಿಕೆ; ದೇವದಾಸಿಪದ್ಧತಿ, ಸತಿ-ಸಹಗಮನ, ಮದ್ಯಪಾನ ಇತ್ಯಾದಿಗಳು ಸಮಾಜವನ್ನು ಧೃತಿಗೆಡ ಸಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಬಸವಣ್ಣನವರು ಅವತರಿಸಿ ೧೨ನೆಯ ಶತಮಾನದ ಭಾರತೀಯ ಸಮಾಜವನ್ನು ಉದ್ಧರಿಸುವಲ್ಲಿ ಅದರಲ್ಲಿಯೇ ಕೆಸರಿನಲ್ಲಿಯ ಕಮಲವನ್ನು ಎತ್ತುವಂತೆ ಭಾರತೀಯ ಮಹಿಳೆಯನ್ನು ಪುರುಷ ಸಮಾಂತರಕ್ಕೆ ಎತ್ತಿ ಅವಳು ಒಬ್ಬ ಜೀವಿ ಎಂದು ಅವಳಿಗೆ ಪುರುಷಸಮಾನ ಸ್ಥಾನ-ಮಾನ ನೀಡಿ, ಸಮಾಜದಲ್ಲಿ ಅವಳ ಗೌರವಾದರಗಳನ್ನು ಹೆಚ್ಚಿಸಿ, ತನ್ನ ವ್ಯಕ್ತಿತ್ವವನ್ನು ತಾನು ಬೆಳೆಸಿಕೊಳ್ಳು ವಂತಹ ವಾತಾವರಣ ನಿರ್ಮಿಸಿ ಸ್ತ್ರೀ-ಉದ್ಧಾರಕರಾದರು ನಮ್ಮ ಬಸವಣ್ಣನವರು.

ಬಸವ ಪೂರ್ವಯುಗದ ಮಹಿಳೆ

ಪ್ರಪಂಚದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರ ಇತಿಹಾಸದಲ್ಲಿ ಕಣ್ಣಾಡಿ ಸಿದಾಗ ಮಹಿಳೆ ಹೊಗಳಿಕೆಗಿಂತ, ಹೆಚ್ಚು ತೆಗಳಿಸಿಕೊಂಡಿದ್ದು ತಿಳಿದು ಬರುತ್ತದೆ.

ಮಹಿಳೆ ಜಾಯ (ಪತಿಗೆ ಪ್ರೀತಿಗೆ ಪಾತ್ರಳಾದವಳು), ಜನಿ (ಮಕ್ಕಳ ತಾಯಿ), ಮತ್ತು ಪತ್ನಿ (ಅವನೊಂದಿಗೆ ಯಜ್ಞಗಳಲ್ಲಿ ಸಹಜವಾಗಿ)-ಅಂದಿದ್ದು ಒಂದು ಕಾಲ.

ಹೋಮರನು ಹೆಲೆನ್ನಳಿಗೆ ತನ್ನ ಮಹಾಕಾವ್ಯದಲ್ಲಿ ಆಕೆಯ ಸೌಂದರ್ಯವನ್ನು ವರ್ಣಿ ಸುತ್ತಾ  “ಸಾವಿರ ಹಡಗುಗಳ ಬೃಹತ್ ಪಯಣಕ್ಕೆ ಕಾರಣವಾದ ಈಕೆಯ ಮುಖ” ಎಂದು ಉಲ್ಲೇಖಿಸಿದ್ದಾನೆ.

ಚೀನಾದ ಪ್ರಸಿದ್ಧ ಚಿಂತನಕಾರ ಕನ್‌ಪೂಷಿಯಸ್ ವಿಚಾರದಲ್ಲಿ “ಸ್ತ್ರೀ ಪರಾವಲಂಬಿ ಆಕೆ ಸದಾ ಮಾವ ಮತ್ತು ಗಂಡನಿಗೆ ಸೇವೆಯನ್ನು ಸಲ್ಲಿಸಬೇಕು” ಎನ್ನುತ್ತಾನೆ.

ಮಹಾನ್ ತತ್ವಜ್ಞಾನಿ ಸಾಕ್ರೆಟಿಸ್‌ನ ದೃಷ್ಟಿಯಲ್ಲಿ-ಸ್ತ್ರೀಯನ್ನು ಕುರಿತಾಗಿ ಪ್ರಶ್ನೆ ಹಾಕಿದಾಗ “ನನ್ನ ಗೋರಿಯನ್ನು ತೆಗೆಯಿರಿ ಹೆಣ್ಣು ಏನಿದ್ದಾಳೆಂಬುದನ್ನು ಹೇಳಿದೊಡನೆಯೇ ನಾನು ಅದರಲ್ಲಿ ಜಿಗಿದು ಬಿಡುವೆ” ಎಂದು ಹೇಳುತ್ತಾನೆ.

ಇನ್ನೊಬ್ಬ ಪ್ರಸಿದ್ಧ ತತ್ವಜ್ವಾನಿ ಪ್ಲೇಟೊ “ಗ್ರೀಕರು ತಮ್ಮ ಸ್ತ್ರೀಯರನ್ನು ತಿರಸ್ಕರಿಸಿ ದ್ದಲ್ಲದೇ ಅವರನ್ನು ಮಕ್ಕಳು ಮತ್ತು ಜೀತದಾಳುಗಳಂತೆ ಕಂಡುಕೊಳ್ಳುತ್ತಿದ್ದರು” ಎಂದು ಹೇಳುತ್ತಾನೆ.

ಮೇಲಿನ ವಾಕ್ಯಗಳನ್ನು ಅವಲೋಕಿಸಿದರೆ ಇತರೆ ಅನೇಕ ರಾಷ್ಟ್ರಗಳಲ್ಲಿಯೂ ಮಹಿಳೆಗೆ ಸ್ಥಾನ-ಮಾನ ಸಿಕ್ಕಿಲ್ಲವೆನ್ನುವುದು ತಿಳಿದು ಬರುತ್ತದೆ.

ದೊರೆತ ವಿವರಗಳ ಆಧಾರದ ಮೇಲೆ ವೇದ ಕಾಲದಲ್ಲಿ (ಕ್ರಿ.ಶ. ೨೫೦೦ ರಿಂದ ಕ್ರಿ.ಪೂ. ೧೫೦೦) ಸ್ತ್ರೀಯರ ಸ್ಥಾನಮಾನ ಗೌರವಯುತವಾಗಿದ್ದುದು ಕಂಡುಬರುತ್ತದೆ. ಸಭೆ-ಸಮಾರಂಭಗಳಲ್ಲಿ ಬೌದ್ದಿಕ ಚಟುವಟಿಕೆಗಳಲ್ಲಿ ಸ್ತ್ರೀಯರು ಭಾಗವಹಿಸುತ್ತಿದ್ದರೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರಕುತ್ತವೆ. ವಿಶ್ವವರಾ, ಅಪಲಾ, ಲೋಪಮುದ್ರಾ, ಘೋಷಾ, ಇಂದ್ರಾಣಿ, ಶಚಿ, ಮುಂತಾದವರು ಅನೇಕ ಶ್ಲೋಕಗಳನ್ನು ರಚಿಸಿದ್ದಾರೆ. ಆ ಕಾಲದಲ್ಲಿ ವಿವಾಹ ಕಡ್ಡಾಯವಾಗಿರಲ್ಲಿಲ್ಲ. ಸತಿ-ಸಹಗಮನ ಪದ್ಧತಿ ಇರಲಿಲ್ಲ. ವೇದ ಕಾಲದ ಸ್ತ್ರೀಯರು ಸಂಗೀತ, ನೃತ್ಯ, ವಾದ್ಯಸಂಗೀತ, ಚಿತ್ರಕಲೆ, ಕಾವ್ಯ ಮೊದಲಾದ ಅರವತ್ನಾಲ್ಕು ಕಲೆಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದಿದ್ದರು ಎಂಬ ಮಾತನ್ನು ವಾತ್ಸಾಯನನ “ಕಾಮಸೂತ್ರ”ದಿಂದ ತಿಳಿದುಕೊಳ್ಳಬಹುದು. ಹೀಗೆ ವೇದಕಾಲದಲ್ಲಿ ಮಹಿಳೆಗೆ ಅನುಕೂಲಕರ ವಾತಾವರಣ ಸಮಾನ ಶಿಕ್ಷಣ ಮತ್ತು ಗೌರವಾದರಗಳು ಇದ್ದುದು ತಿಳಿದು ಬರುತ್ತದೆ.

ಆದರೆ ಬ್ರಾಹ್ಮಣ ಉಪನಿಷತ್ತುಗಳ ಕಾಲದಲ್ಲಿ (ಕ್ರಿ.ಪೂ. ೧೫೦೦ ರಿಂದ ಕ್ರಿ.ಪೂ. ೫೦೦) ಸ್ತ್ರೀಯರ ಸ್ಥಾನಮಾನದಲ್ಲಿ ಇಳಿಮುಖವಾಯಿತು. ಕೇವಲ ಉಚ್ಚ ವರ್ಗದಲ್ಲಿ ಹೆಣ್ಣು ಮಕ್ಕಳಿಗೆ ಉಪನಯನ ಸಂಸ್ಕಾರವಿದ್ದರೂ, ಮನೆಯಲ್ಲಿಯೇ ಶಿಕ್ಷಣ ಕೊಡುವ ವ್ಯವಸ್ಥೆ ಯಿತ್ತು. ಹೀಗಾಗಿ ಸ್ವಾಭಾವಿಕವಾಗಿ ವೇದಾಧ್ಯಯನ ಮಾಡುವ ಹೆಣ್ಣುಮಗಳು ಧಾರ್ಮಿಕ ಕಾರ್ಯಕ್ಕೆ  ಅನರ್ಹಳಾದಳು. ಮೋಕ್ಷ ಸಾಧನೆಗಾಗಿ ಅವಳಿಗೆ ವಿವಾಹವನ್ನು ಕಡ್ಡಾಯ ಗೊಳಿಸಿದರು. ಬಾಲ್ಯವಿವಾಹ ಮತ್ತು ವರದಕ್ಷಿಣಿ ಪದ್ಧತಿಗಳು ಪ್ರಾರಂಭವಾದವು.

ಇನ್ನು ಸೂತ್ರ, ಮಹಾಕಾವ್ಯ ಕೃತಿಗಳ (ಕಿ.ಪೂ. ೫೦೦ ರಿಂದ ಕ್ರಿ.ಶ. ೫೦೦) ಅವಧಿಯಲ್ಲಿ ಸ್ತ್ರೀಯರು ಗೌರವಯುತ ಸ್ಥಾನಕ್ಕೆ ಅಳಿಗಾಲ ಬಂತು. ನಮ್ಮ ದೇಶದ ಮಹಾಕಾವ್ಯಗಳು ರಾಮಾಯಣ ಮತ್ತು ಮಹಾಭಾರತ ಇವತ್ತಿಗೂ ಮಾಸಲಾರದ ಮಹತ್ವ ಪಡೆದಂತಹ ಮಹಾನ್ ಗ್ರಂಥಗಳು. ಈ ಕಾವ್ಯಗಳಲ್ಲಿ ಚಿತ್ರಿತಗೊಂಡಿರುವ ಮಹಿಳೆ ಶಿಕ್ಷಣವನ್ನೂ ಪಡೆದು ತನ್ನದೇ ಆದ ವ್ಯಕ್ತಿತ್ವವನ್ನೂ ಹೊಂದಿದ್ದಳು ಅನ್ನುವುದು ತಿಳಿದು ಬರುತ್ತದೆ. ಅವಳಿಗೆ ಅಧ್ಯಯನ, ಮಂತ್ರ ಪಠಣ ಇತ್ಯಾದಿಗಳ ಅನುಕೂಲತೆ ಇತ್ತು. ಉಪನಯನ ಮತ್ತು ದೀಕ್ಷೆಯನ್ನು ಸ್ವೀಕರಿಸಿ ಬ್ರಹ್ಮಚಾರಿಣಿಯಾಗಿ ಉಳಿಯುವ ಸ್ವತಂತ್ರ ನಿರ್ಣಯ ತೆಗೆದು ಕೊಳ್ಳುವ ಅಧಿಕಾರವು ಇತ್ತು. ಈ ಅವಧಿಯಲ್ಲಿ ಸತಿಗೆ ಮತ್ತು ತಾಯಿಗೆ ಅತೀ ಗೌರವಾದರ ಗಳಿದ್ದವು. ಸೀತಾ, ಕೌಸಲ್ಯೆ, ಮಂಡೋದರಿ, ಶಬರಿಯಂತವರು ರಾಮಾಯಣದಲ್ಲಿ, ಕುಂತಿ, ದ್ರೌಪದಿ ದಮಯಂತಿ ಸಾವಿತ್ರಿಯಂತವರು ಮಹಾಭಾರತದಲ್ಲಿ ಮಹಾನ್ ಮಣಿಗಳು ಪ್ರಸಿದ್ದಿಯನ್ನು ಪಡೆದಿದ್ದಾರೆ. ಆದರೆ ಕಾಲಾಂತರದಲ್ಲಿಯ ಬದಲಾವಣೆಗೆ ಕಾರಣವಿರ ಬಹುದೇನೋ ಸೀತೆ, ದ್ರೌಪದಿಯರು ಎದುರಿಸಿದ ಕಷ್ಟ ಕಾರ್ಪಣ್ಯಗಳನ್ನು ನೋಡಿದರೆ ಅವೇ ಸ್ತ್ರೀ ಕುಲದ ಅವನತಿಯ ಮುನ್ಸೂಚೆನೆಳಾಗಿದ್ದವು ಅನ್ನಿಸುತ್ತಿದೆ.

ಸಮಾಜದಲ್ಲಿ ಅನೇಕ ಬದಲಾವಣೆಗಳ ಪರಿಣಾಮವಾಗಿ ಪುರುಷ ಶ್ರೇಷ್ಠಭಾವ ಪ್ರಬಲವಾದಾಗ, ಸ್ತ್ರೀಗೆ ತಕ್ಕ ಸ್ಥಾನ-ಮಾನ ರಕ್ಷಣೆಗಳ ಕೊರತೆ ಉಂಟಾದಾಗ ಬಾಲ್ಯ ವಿವಾಹ ಸಮಸ್ಯೆ, ಸತಿ-ಸಹಗಮನ ಪದ್ಧತಿಗಳು, ಸಮಾಜದಲ್ಲಿ ಇನ್ನೂ ಅನೇಕ ಸಮಸ್ಯೆಗಳು ಶಾಂತಿ ಯನ್ನು ಕದಲಿಸಿದಾಗ ಜೈನ ಮತ್ತು ಬೌದ್ಧ ಧರ್ಮಗಳು ಹುಟ್ಟಿಕೊಂಡವು.

ಜೈನ ಧರ್ಮ ಸ್ತ್ರೀಯರಿಗೆ ಗೌರವ ಕೊಟ್ಟು ಶಿಕ್ಷಣ ಪಡೆಯುವ ಪೂರ್ಣ ಸ್ವಾತಂತ್ರ್ಯವನ್ನು ದಯಪಾಲಿಸಿತು. ತತ್‌ಫಲವಾಗಿ ಪುರುಷಸಮನಾಗಿ ಕಾಯಕ ಮಾಡುವಷ್ಟೇ ಪ್ರಬಲ ಶಕ್ತಿಯನ್ನು ಪಡೆದರು ಸ್ತ್ರೀಯರು, ಇದರಿಂದಾಗಿ ಸ್ತ್ರೀ ಸಮಾಜದಲ್ಲಿ ಸ್ವಂತಿಕೆಯನ್ನು ಪಡೆಯು ವಂತಾಯಿತು. ಈ ನಡುವೆ ಜೈನ ಧರ್ಮ ಎರಡು ಹೋಳಾಯಿತು. ಒಂದು ದಿಗಂಬರ ಪಂಥ ಮತ್ತೊಂದು ಶ್ವೇತಾಂಬರ ಪಂಥ. ದಿಗಂಬರ ಪಂಥ ತನ್ನ ದೃಷ್ಟಿಕೋನ ಬದಲಾಯಿಸಿ “ಸ್ತ್ರೀ”ಯು ಮೋಕ್ಷ ಪಡೆಯಬೇಕಾದರೆ ಪುರುಷ ಜನ್ಮ ಪಡೆಯಬೇಕೆಂದಾಗ ಸ್ತ್ರೀ ಜನ್ಮ ವ್ಯರ್ಥವೆನಿಸಿತು. ಆದರೆ ಶ್ವೇತಾಂಬರ ಪಂಥ ಸ್ತ್ರೀಯನ್ನು ಕೀಳಾಗಿ ನೋಡದೆ ಧಾರ್ಮಿಕ ಆಚರಣೆಯಲ್ಲಿ ಸಮಾನತೆಯಿತ್ತು ಅವಳ ವ್ಯಕ್ತಿತ್ವ ವಿಕಾಸವಾಗುವಂತಹ ಪರಿಸರ ಒದಗಿಸಿ ಕೊಟ್ಟಿತು.

ಬೌದ್ಧ ಧರ್ಮ ಪ್ರಾರಂಭದಲ್ಲಿ ಸ್ತ್ರೀಯರಿಗೆ ಅಷ್ಟೊಂದು ಪ್ರೋಕೊಡಲಿಲ್ಲ, ನಂತರ ಬುದ್ಧದೇವ ತನ್ನ ನಿರ್ಧಾರವನ್ನು ಬದಲಿಸಿ ಸ್ತ್ರೀಯರನ್ನು ಸಂಘಕ್ಕೆ ಬರಮಾಡಿಕೊಂಡು ಅವರಿಗೆ ದೀಕ್ಷಾ ವಿಧಿಗಳನ್ನು ದಯಪಾಲಿಸಿದ. ಇದರಿಂದಾಗಿ ಮಹಿಳೆಗೆ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಸಮಾನಾಧಿಕಾರ, ಆಸ್ತಿಯಲ್ಲಿ ಪಾಲು, ದತ್ತು ಸ್ವೀಕಾರ ಮೊದಲಾದ ಸೌಲಭ್ಯಗಳು ಲಭಿಸಿದವು. ಸ್ತ್ರೀಯರ ಆತ್ಮೋನ್ನತಿಯ ಬಾಗಿಲು ತೆರೆಯಿತು. ಆದರೆ ಈ ಬೆಳವಣಿಗೆ ಬಹಳ ಕಾಲ ಉಳಿಯಲಿಲ್ಲ ಮತ್ತೇ ಸ್ತ್ರೀ ಸ್ವಾತಂತ್ರ್ಯ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿದಳು. ಜೈನ ಕವಿಯಾದ ಹೇಮಚಂದ್ರನ ಶಬ್ದಗಳನ್ನು ಓದಿದರೆ ಸ್ತ್ರೀಯು ಯಾವ ಮಟ್ಟದಲ್ಲಿದ್ದಾಳೆಂಬುದು ತಿಳಿದು ಬರುವದು “ಸ್ತ್ರೀಯರು ನರಕದ ದಾರಿಗೊಯ್ಯುವ ದೀಪದ ಕಂಬದಂತಿದ್ದಾರೆ”.

ಉಚ್ಚ ಪರಂಪರೆಯನ್ನು ಹೊಂದಿದ ಭಾರತೀಯ ಸಮಾಜ ಕಾಲಾಂತರದಲ್ಲಿ ಧರ್ಮದ ಹೆಸರಿನಲ್ಲಿ ತನ್ನ ಸ್ತ್ರೀ ವರ್ಗವನ್ನು ಅಧೋಗತಿಗೆ  ನೂಕಿತು.

“ಯತ್ರನಾರ್ಯಸ್ತು ಪೂಜ್ಯತೇ ರಮಂತೇ ತತ್ರ ದೇವತಾ” ಎಂದು ಹೇಳಿದ ಮಹಾನ್ ಮನು ಮಹರ್ಷಿಯೇ “ನ ಸ್ತ್ರೀ ಸ್ವಾತಂತ್ರ್ಯಂರ್ಹತಿ” ಎಂದು ಉದ್ಧರಿಸಿದ. ಹೆಣ್ಣು ಜೀವನ ವನ್ನೆಲ್ಲ ಪುರುಷನ ನಿಯಂತ್ರಣದಲ್ಲಿರುವಂತೆ ಅನೇಕ ನಿರ್ಭಂದನೆಗಳನ್ನು ಹಾಕಲಾಯಿತು. ಉದಾ :

“ಪತಿ ರಕ್ಷತಿ ಕೌಮಾರ್ಯೆ, ಭರ್ತಾ ರಕ್ಷತಿ ಯೌವನೇ
ರಕ್ಷಂತಿ ಸ್ಥವಿರೇ ಪುತ್ರಃ
ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ” ಎಂದು ಮನು ಹೇಳಿದ.

ಹೀಗೆ, ನಮ್ಮ ಸಮಾಜದಲ್ಲಿ ದ್ವಂದ್ವ ಅರ್ಥವನ್ನು ಒಳಗೊಂಡ ಸ್ತ್ರೀಗೊಂದು ಸಿದ್ಧಾಂತ ವಾದರೆ ಪುರುಷನಿಗೆ ಮತ್ತೊಂದು ಸಿದ್ದಾಂತ. ಒಂದು ಕಡೆ ಸ್ತ್ರೀಯನ್ನು ಹೊಗಳಿದಂತೆ ಕಂಡರೂ ಇನ್ನೊಂದು ಕಡೆಯಿಂದ ಅನೇಕ ನಾಜೂಕು ಸಂಕೋಲೆಗಳಿಂದ ಬಿಗಿ ಬಂದೋಬಸ್ತಿ ಮಾಡಿರು ವುದನ್ನು ನಾವು ಕಂಡುಕೊಳ್ಳಬಹುದು.

ಅನೇಕ ಏರಿಳಿತಗಳನ್ನು ಕಂಡ ನಮ್ಮ ಭಾರತದ ಪರಕೀಯರ ದಾಳಿಗಳಿಂದಾಗಿ ರಾಜಕೀಯ ಅಸ್ಥಿರತೆ, ಕಾಯ್ದೆ ಮತ್ತು ಸುವ್ಯವಸ್ಥೆಗಳ ಅಭಾವ (ವಿಶೇಷವಾಗಿ ಭಾರತೀಯ ಸಂಸ್ಕೃತಿ ಸ್ತ್ರೀಯನ್ನು ನೋಡುವ ದೃಷ್ಟಿ, ಬೆಳೆಸಿದ ರೀತಿ ಮತ್ತು ಕೊಡುವ ಗೌರವ ಭಿನ್ನವಾಗಿರು ವುದರಿಂದ)ದಿಂದ ಮೊದಲು ಸ್ತ್ರೀಯರನ್ನು ಸುರಕ್ಷತೆಗೆಂದು ಮನೆಯೊಳಗೆ ತಳ್ಳಿ ಹಾಕಲ್ಪಟ್ಟಳು. ಕಾಲಾಂತರದಲ್ಲಿ  ಹೊರಗೆ ಬರಲು ಆಕೆ ಯೋಗ್ಯಳೆ ಅಲ್ಲವೆಂಬ ಭಾವನೆ ಬೇರೂರಿತು. ನಾಲ್ಕು ಗೋಡೆಗಳ ಮಧ್ಯೆ ಇದ್ದು ಮನೆ, ಪತಿ ಮತ್ತು ಮಕ್ಕಳ ಸೇವೆಯನ್ನು ಮಾಡುವು ದರಲ್ಲಿಯೇ ನಿನಗೆ ಮುಕ್ತಿಯಿದೆ ಎಂದು ಸಾರಿದರು.

ಎಂಟನೆಯ ವರ್ಷಕ್ಕೆ ಹೆಣ್ಣು ಮಕ್ಕಳ ವಿವಾಹ ಮಾಡಿದರೆ ಆಕೆಯ ತಂದೆಗೆ ಸ್ವರ್ಗದಲ್ಲಿ ಹೆಚ್ಚಿನಸ್ಥಾನ ದೊರೆಯುತ್ತದೆ ಎಂದಾಗ ಬಾಲ್ಯ ವಿವಾಹ ಪದ್ಧತಿ ಅತೀ ಭರದಿಂದ ಜಾರಿಯಲ್ಲಿ ಬಂದಿತು. ಇತ್ತ ಹುಡುಗಿಯ ತಂದೆ ತಾಯಿ ಸ್ವರ್ಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನೆಪದಲ್ಲಿ ಕನ್ಯಾದಾನ ಸೆರೆಯನ್ನು ಬಿಡಿಸಿಕೊಳ್ಳುವಲ್ಲಿ ತೊಟ್ಟಿಲಿಗೂ ತಾಳಿ ಕಟ್ಟಿಸಿದರು. ತತ್‌ಪರಿಣಾಮ ವಾಗಿ ಬಾಲ್ಯವಿಧವೆಯರ ಸಮಸ್ಯೆಯುಂಟಾಯಿತು. ಆಗ ವಿಧವಾ ಮರುವಿವಾಹವಿರಲಿಲ್ಲ; ಅದರ ನಿವಾರಣೆಯೇನೋ ಎಂಬಂತೆ ಸತಿ ಸಹಗಮನ ಪದ್ಧತಿಯನ್ನು ಪ್ರೇರೇಪಿಸಿದರು. ಇದಕ್ಕೂ ವಿರೋಧ ಉಂಟಾದಾಗ ವಿಧವಾ ಹೆಣ್ಣು ಮಕ್ಕಳನ್ನು ವಿರೂಪಗೊಳಿಸಿ(ತಲೆ ಗೂದಲು ತೆಗೆಯುವುದು, ಬಳೆ-ಕುಂಕುಮ ತೆಗೆಯುವುದು ಇತ್ಯಾದಿ) ಇದ್ದೂ ಸತ್ತಂತೆ ಕಾಣುವ ಪರಿಸ್ಥಿತಿ ಸ್ತ್ರೀಗೆ ಒದಗಿ ಬಂತು.

ಇಂತಹ ಏಳು-ಬೀಳುಗಳ ಮಧ್ಯೆ ಮಹಿಳೆಯ ಸ್ಥಿತಿ ಅತೀ ಹೀನಾಯಮಯವಾಗಿತ್ತು. ಅನ್ಯಾಯ ಅಧರ್ಮ ಅತೀ ಆದಾಗ ಒಬ್ಬ ಯುಗ ಪುರುಷ ಜನ್ಮ ತಳೆದಂತೆ ಹನ್ನೆರಡನೆಯ ಶತಮಾನದಲ್ಲಿ ಅದು ನಮ್ಮ ಕರ್ನಾಟಕದಲ್ಲಿಯೇ ಮಾನವ ಉದ್ಧಾರಕ್ಕಾಗಿ ಅದರಲ್ಲಿಯೇ ಸ್ತ್ರೀ ವರ್ಗದ ಉದ್ಧಾರಕ್ಕಾಗಿ ಮಹಾನ್ ಚೇತನ ಬಸವಣ್ಣನವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಎಂಬ ಗ್ರಾಮದ ಶೈವ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬಕ್ಕೆ ಸಂಬಂಧಿಸಿದ ಮಾದರಸ ಹಾಗೂ ಮಾದಲಾಂಬಿಕೆ ಉದರದಿಂದ ಜನಿಸಿದರು.

ಬಸವಣ್ಣನವರ ನೇತೃತ್ವದಲ್ಲಿ ನಮ್ಮ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಮಹತ್ತರ ಬದಲಾವಣೆಗಳು. ಇವೆಲ್ಲ ಬಸವಣ್ಣ ಮತ್ತು ಶರಣರ ಒಳ್ಳೆಯ ಪ್ರಗತಿಪರ ವಿಚಾರಗಳ ಫಲಸ್ವರೂಪಿಯಾಗಿ “ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲ ಒಂದೇ” ಎಂದು ಸಾಮಾಜಿಕ ಅಸಮಾನತೆಯನ್ನು ವಿಮರ್ಶಿಸುತ್ತಾ ಜಿಡ್ಡು ಗಟ್ಟಿದ ಭಾರತೀಯ ಸಾಮಾಜಿಕ ಸಂದರ್ಭವನ್ನು ಟೀಕಿಸುವುದರೊಂದಿಗೆ ಪರಿಹಾರೋಪಾ ಯಗಳನ್ನು ತಮ್ಮ ವಚನಗಳ ಮೂಲಕ ಹೊರಹಾಕಿದರು.

ಬಸವಯುಗದ ಮಹಿಳೆ

೧೨ನೆಯ ಶತಮಾನದ ಭಾರತೀಯ ಸ್ತ್ರೀಯು ಅದರಲ್ಲೂ ಕರ್ನಾಟಕದ ಸ್ತ್ರೀಯರ ಇತಿಹಾಸದಲ್ಲಿ ಸುವರ್ಣ ಅಕ್ಷರಲ್ಲಿ ಬರೆದಿಡುವ ಘಟನೆ ಎಂದರೆ ಬಸವಯುಗದ ಕಲ್ಯಾಣ ಕ್ರಾಂತಿ. ಮಹಾನ್ ಮಾನವತಾವಾದಿ ಬಸವಣ್ಣನವರು ಮಹಿಳೆಗೆ ಕೊಟ್ಟ ಮೊದಲ ಶ್ರೇಷ್ಠ ಕಾಣಿಕೆ ಏನೆಂದರೆ ಸಮಾಜದಲ್ಲಿ ಅರ್ಧದಷ್ಟು ಇರುವ ಮಹಿಳೆಯರು ಮನುಷ್ಯರೆಂದು ಪರಿಗಣಿಸಿದ್ದು. ಆದ್ದರಿಂದ ಬಸವಣ್ಣನವರು ಇತಿಹಾಸದಲ್ಲೇ ಪ್ರಪ್ರಥಮ ಸ್ತ್ರೀ ವಿಮೋಚನಾ ಚಳುವಳಿಗಾರರೆಂದು ತಿಳಿದು ಬರುತ್ತಿದೆ. ಅವರು ಸ್ತ್ರೀಯರಿಗೆ ಸಮಾನ ಸ್ಥಾನ ನೀಡಿ ಪುರುಷರೆತ್ತರಕ್ಕೆ ಏರುವಂತಹ ವಾತಾವರಣ ಕಲ್ಪಿಸಿ, ಅವಳ ಮುಕ್ತಿಗೆ ಮಾರ್ಗದರ್ಶಿಯಾದರು. ಆದ್ದರಿಂದ ಬಸವಣ್ಣನವರನ್ನು “ಸ್ತ್ರೀ ಉದ್ಧಾರಕ” ನೆಂದು ಹೊಗಳಿದ್ದಾರೆ.

“ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು” ಎಂಬಂತೆ ಬಸವಣ್ಣನವರು ಚಿಕ್ಕಂದಿನಿಂದಲೇ ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಘಟನೆಯಿಂದ ಯಾವಾಗ ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ, ಬಸವ “ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ” ಎಂದು ಅದನ್ನು ಹರಿದೊಗೆದು ಪುರೋಹಿತಶಾಹಿಯನ್ನು ವಿರೋಧಿ ಸಿದರು. ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂತಹ ಆದರ್ಶ ಸಹೋದರ. ಅದರಂತೆ ಬಸವಣ್ಣ ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ “ಬಸವನಿಲ್ಲದ ಮನೆಯಲ್ಲಿ ನಾನೂ ಇರಲಾರೆ” ಅನ್ನುವಲ್ಲಿ ಸಹೋದರಿ ಪ್ರೀತಿ ಮಿಂಚುತ್ತಿದೆ.

ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಕಾರ್ಯಗಳನ್ನು ಸ್ತ್ರೀಯರಿಗೆ ಮಾಡುವ ಅಧಿಕಾರ ವಿರಲಿಲ್ಲ. ಆದರೆ ಬಸವಣ್ಣನವರು ದೇವನಾಗುವ ಅಂಶ ಕೇವಲ ಪುರುಷನಿಗೆ ಸೀಮಿತವಲ್ಲ, ಸ್ತ್ರೀಗೂ ಕೂಡ ಇದೆ, ಈ ಸಿದ್ದಿಗೆ ಅವಶ್ಯವಾದ ಲಿಂಗದೀಕ್ಷೆ, ವಿಭೂತಿಧಾರಣ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿಗಳಲ್ಲಿ ಪುರುಷನಷ್ಟೇ ಅಧಿಕಾರವನ್ನು ಅವಳಿಗೂ ಕೊಟ್ಟರು.

ಮಹಿಳೆಯನ್ನು ಕೀಳು ಮನೋಭಾವನೆಗಳಿಂದ ಕಾಣುವ ಸಾಂಪ್ರದಾಯಿಕ ಸಮಾಜದಲ್ಲಿ ಬಸವಣ್ಣನವರು ಆಕೆಗೆ ಲಿಂಗದೀಕ್ಷೆಯನ್ನು ಕೊಟ್ಟರು. ಆಧ್ಯಾತ್ಮಿಕವಾಗಿ ಪುರುಷನಷ್ಟೇ ಉನ್ನತ ನಿಲುವಿಗೆ ಏರಬಲ್ಲರು ಎಂಬುದನ್ನು ದೃಢಪಡಿಸಿದರು. ಸ್ತ್ರೀಯರಿಗೂ ಇಂತಹ ಪೂರ್ಣವಾದ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿದ್ದೂ ಇತಿಹಾಸದಲ್ಲೇ ಒಂದು ಅಪೂರ್ವ ಘಟನೆ. ಬಸವಣ್ಣನವರು ಪ್ರಾರಂಭಿಸಿದ್ದ ಧಾರ್ಮಿಕ ಆಂದೋಲನದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದು ಕೂಡ ಪ್ರಥಮ ಘಟನೆ. ಧಾರ್ಮಿಕ ಸ್ವಾತಂತ್ರ್ಯದಿಂದ ತನ್ನತನವನ್ನು ಕಂಡುಕೊಂಡು ಅನೇಕ ಮೂಢನಂಬಿಕೆಗಳನ್ನು ದೂರೀಕರಿಸಿ, ತನ್ನಲ್ಲಿರುವ “ಹೆಣ್ಣು” ಅನ್ನುವ ಕೀಳರಿಮೆಯಿಂದ ಹೊರಬರಲು ಪ್ರಯತ್ನಿಸಿದಳು. ವಚನಕಾರರು ಮತ್ತು ಶರಣರು ಹೆಣ್ಣು-ಗಂಡುಗಳಲ್ಲಿ ಭೇದವನ್ನು ತಿರಸ್ಕರಿಸಿದರು. ಮತ್ತು ಹೀಗೆಂದರು :

ಮೊಲೆ-ಮುಡಿ ಬಂದೆಡೆ ಹೆಣ್ಣೆಂಬರು
ಗಡ್ಡ-ಮೀಸೆ ಬಂದೊಡೆ ಗಂಡೆಂಬರು
ನಡುವೆ ಸುಳಿದಾಡುವಾತ್ಮನು ಹೆಣ್ಣು ಅಲ್ಲ
ಗಂಡೂ ಅಲ್ಲ ಕಾಣಾ ರಾಮಾನಾಥಾ :

ಬಸವಣ್ಣನವರು ಮಾಡಿದ ಇನ್ನೊಂದು ಮಹಾನ್ ಕಾರ್ಯವೇನೆಂದರೆ ಮಹಿಳೆಯನ್ನು ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಬದುಕನ್ನು ಸಾಗಿಸಲು ಕಾಯಕವನ್ನು ತನ್ನದಾಗಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಸ್ತ್ರೀ ಅವಲಂಬಿತಳಲ್ಲ. ಅವಳೂ ಕೂಡಾ ವಿಶಿಷ್ಟ ಕಾಯಕದಲ್ಲಿ ತೊಡಗಬೇಕು ಎಂದರು. “ಕಾಯಕವೇ ಕೈಲಾಸ”ವೆಂದು ಸಾರಿದ ಬಸವಣ್ಣ ಸ್ತ್ರೀಯರು ಇದಕ್ಕೆ ಹೊರತಲ್ಲ. ಕಾಯಕದಲ್ಲಿ ಮೇಲಿಲ್ಲ-ಕೀಳಿಲ್ಲ. ಕಾಯಕದ ಮಹತ್ವವನ್ನು ತಿಳಿದುಕೊಂಡ ಶರಣೆ ಕಾಳವ್ವೆಯ ವಚನದಲ್ಲಿ ನೋಡಿ –

“ಕೃತ್ಯ ಕಾಯವಿಲ್ಲದವರು ಭಕ್ತರಲ್ಲ,
ನಿಂದಿಸಿಕೊಂಬ ಪ್ರಸಾದ ಕುನ್ನಿಯ ಪ್ರಸಾದ
ಅವರು ತ್ರಿವಿಧಕ್ಕೆ ಇಚ್ಚಿಸರು
ಅಲ್ಲಿ ನಿಂದಿಸಿ ಅವರ ಬಿಟ್ಟಿಲ್ಲ,
ಅವರ ಹಿಂದೆ ಕೊಂಡುದು ಅವರ ಮಲ ಮೂತ್ರ
ತೂಬುರದ ಕೊಳ್ಳಿಯಂತೆ ಊರಿವಾತ ಭಕ್ತನೆ ?

ಬಸವಣ್ಣನವರ ಕಾಯಕ ತತ್ವದ ಪ್ರೇರಣೆಯಿಂದ ಶರಣೆಯರು ಅನೇಕ ಕಾಯಕಗಳನ್ನು ಕೈಗೆತ್ತಿಕೊಂಡರು, ಉದಾಹರಣೆಗೆ: ಲಕ್ಕಮ್ಮ ಬಿದ್ದ ಅಕ್ಕಿಗಳನ್ನು ಆಯ್ದು ತರುವ, ಮೋಳಿಗೆ ಮಹಾದೇವಿ ಕಟ್ಟಿಗೆ ಹೊತ್ತು ತರುವ, ರಾಯಮ್ಮ ಅಮುಗೆ ಕಾಯಕ, ರೇಮವ್ವೆ ಕದಿರಿನಿಂದ ನೂಲು ತೆಗೆಯುವುದು, ನಿಂಬವ್ವೆ ನೀರು ಹೊರುವ ಮೊದಲಾದ ಕಾಯಕಗಳನ್ನು ಮಾಡಿ ತಮ್ಮ ಬಾಳನ್ನು ಸಾರ್ಥಕ ಮಾಡಿಕೊಂಡು, ಸ್ತ್ರೀ ಅವಲಂಬಿತಳಲ್ಲ ಅನ್ನುವುದನ್ನು ತೋರಿಸಿ ಕೊಟ್ಟರು.

ಮಹಾನುಭಾವಿ ಬಸವೇಶ್ವರರು ಜಗತ್ತಿಗೆ ಕೊಟ್ಟ ಅನೇಕ ಕಾಣಿಕೆಗಳಲ್ಲಿ “ಅನುಭವ ಮಂಟಪ”ವು ಒಂದು. ಇದು ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್ ಎಂದು ಕರೆಯಿಸಿ ಕೊಂಡಿದೆ. ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಹೊಸ ಧರ್ಮದ ಸ್ಥಾಪನೆಗಾಗಿ ಮೂಡಿ ಬಂದ ಸಂಕೇತ “ಅನುಭವ ಮಂಟಪ”. ಇಲ್ಲಿ ಯಾವುದೇ ವರ್ಣ, ವರ್ಗ, ಜಾತಿ, ಲಿಂಗ, ಬಡವ-ಬಲ್ಲಿದ, ಉಚ್ಚ-ನೀಚ, ವಿವಾಹಿತ-ಅವಿವಾಹಿತರೆನ್ನದೇ ಶಿವಭಕ್ತರೆಲ್ಲ ಇದರ ಸದಸ್ಯರು. ವಿಶೇಷವೇನೆಂದರೆ ಸ್ತ್ರೀಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದಸ್ಯ ರಾಗಿದ್ದರು. ಅನುಭವಮಂಟಪದಲ್ಲಿ ನಡೆಯುವ ಎಲ್ಲ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿ ಸುವುದಲ್ಲದೇ ವಚನಗಳ ಮುಖಾಂತರ ತಮ್ಮೆಲ್ಲ ಅನುಭವಗಳನ್ನು ಹೇಳುತ್ತಿದ್ದರು. ಅತೀ ಶ್ರೇಷ್ಠ ಮತ್ತು ಜ್ಞಾನ ಅನುಭವಗಳಲ್ಲಿ ಅತೀ ಎತ್ತರಕ್ಕೆ ಬೆಳೆದ ವ್ಯಕ್ತಿ ಅಕ್ಕಮಹಾದೇವಿ ಅನ್ನುವುದನ್ನು ಕೆಳಗಿನ ವಚನ ಸ್ಪಷ್ಟಪಡಿಸುತ್ತದೆ.

ಅಜ ಕೋಟಿ ಕೋಟಿ ವರುಷದವರೆಲ್ಲರೂ ಹಿರಿಯರೇ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ನಡು ಮರಿದು ಗುಡುನೂರಿ ತಲೆನಡುಗಿದವರಲ್ಲೆರೂ ಹಿರಿಯರೇ
ನೆರತರೆ ಹೆಚ್ಚಿ ಒಂದೂಡಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲ ಹಿರಿಯರೇ
ಅರಿವರಿತು ಘನವ ಬೆರೆಸಿ ಹಿರಿದು ಕಿರಿದೆಂಬ ಭೇದವ ಮರೆತು
ಕೂಡಲಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲಪ್ಪ ಹಿರಿಯತನ  ನಮ್ಮ
ಮಹಾದೇವಿಯಕ್ಕಂಗಾಯಿತು.

ಇನ್ನು ಮುಂದೆ ಹೋಗಿ ಬಸವಣ್ಣನವರು ಅಕ್ಕನನ್ನು ತಾಯಿ ಎಂದು ಕರೆಯುತ್ತಾರೆ; ಅಲ್ಲಮ್ಲನಿಗೆ ಬಸವಣ್ಣ ಅಕ್ಕನನ್ನು ಪರಿಚಯಿಸುತ್ತಾ,

ಕಾಯಕ ಲಜ್ಜೆಯ ಕಳೆದು
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನೆನಹ ಸುಟ್ಟು
ಭಾವದ ಕೂಡ ಬತ್ತಲೆಯೆಂದುದು
ತರ್ವದ ಸ್ನೇಹ ವ್ಯವಹಾರಕ್ಕೆ ಹುಗದು
ಕೂಡಲ ಸಂಗಮದೇವಯ್ಯ,

ಎನ್ನ ಹೆತ್ತ ತಾಯಿ ಮಹಾದೇವಿಯಕ್ಕನ ನಿಲವು  ನೋಡಯ್ಯ ಪ್ರಭುವೇ. ಬಸವಣ್ಣನವರು ಮಹಾನ್ ವ್ಯಕ್ತಿಗಳಾಗಿದ್ದರೂ ಕೂಡ ಚಿಕ್ಕವಳಾದ ಮಹಾದೇವಿಯನ್ನು “ಅಕ್ಕ” ಮತ್ತು “ತಾಯಿ” ಸಂಬೋಧಿಸಿ ಇಡೀ ಸ್ತ್ರೀ ಕುಲವನ್ನೇ ಗೌರವಿಸುವಂತಹ ಘನ ಕಾರ್ಯ ಎಂದಾ ಗಿದ್ದಾರೆ. ನೀಲಾಂಬಿಕಾ, ಗಂಗಾಬಿಕಾ, ನಾಗಮ್ಮ, ಲಿಂಗಮ್ಮಾ, ಲಕ್ಕಮ್ಮಾ, ಮುಕ್ತಾಯಕ್ಕ, ಗೊಗ್ಗವ್ವೆ ಇನ್ನೂ ಅಸಂಖ್ಯಾತ ಸ್ತ್ರೀಯರು ಶ್ರೇಷ್ಠ ಆಧ್ಯಾತ್ಮಿಕರೂ ಮತ್ತು ವಚನ ಕಾರ್ತಿಯರೂ ಹೌದು. ಅದಕ್ಕೆಲ್ಲ ಕಾರಣ ಅವರಿಗೆ ದೊರೆತ ಸ್ತ್ರೀ ಸ್ವಾತಂತ್ರ್ಯ. ಇವರಿಷ್ಟು ಎತ್ತರಕ್ಕೂ ಬೆಳೆಯಲಿಕ್ಕೆ ಕಾರಣ ಪುರುಷ ಬಸವಣ್ಣ.

ಹೆಣ್ಣು-ಹೊನ್ನು-ಮಣ್ಣು ಮಾಯೆ ಎಂದಾಗ ಬಸವಣ್ಣನವರು ನೊಂದು ಹೀಗೆನ್ನುತ್ತಾರೆ; ಒಲವಿನ ವಾತ್ಸಲ್ಯ ಮೂರ್ತಿ ಮಾದಲಾಂಬಿಕೆ ಮಾಯೆಯೇ? ತನ್ನ ಅಭ್ಯುದಯದ ಮೇಲೆ ಪ್ರಾಣವಿರಿಸಿಕೊಂಡ ಸದಾ ತನ್ನ ಹಿತ ಚಿಂತನೆಯನ್ನು ಬಯಸುವ ಪ್ರೇಮಮಯಿ ಸೋದರಿ ಅಕ್ಕನಾಗಮ್ಮ ಮಾಯೆಯೇ ?

ಛೇ ಹಾಗೆ ನೆನೆಯುವುದು ಪಾಪ ಎಂಬ ಬಸವಣ್ಣನ ಧ್ವನಿಯಲ್ಲಿ ಮಹಿಳೆಯ ಬಗೆಗೆ ಇರುವ ಗೌರವ ಎದ್ದು ಕಾಣಿಸುತ್ತದೆ. ಆದ್ದರಿಂದ ಅವರು ವರವಧುವನು ಮಹಾದೇವಿ ಯೆಂಬನು ಎಂದು, ಶರಣರಿಗೆ ಪರಸತಿಯವಲ್ಲೆನೆಂಬ ಛಲಬೇಕು ಎನ್ನುತ್ತಾರೆ. ನುಡಿದಂತೆ ನಡೆದವರು ನಮ್ಮ ಅಣ್ಣ ಬಸವಣ್ಣ.

ಯಾವಾಗ ಬಸವಣ್ಣನವರು ಹಡಪದ ಅಪ್ಪಣ್ಣನ ಮೂಲಕ ನೀಲಾಂಬಿಕೆಗೆ ಕೂಡಲ ಸಂಗಮಕ್ಕೆ ಬರಬೇಕೆಂಬ ಸಂದೇಶ ಕಳುಹಿಸಿದಾಗ, ನೀಲಾಂಬಿಕೆ ಆಡಿದ ಮಾತುಗಳನ್ನು ಕೇಳಿದರೆ, ಬಸವಣ್ಣನವರು ತಮ್ಮ ಹೆಂಡತಿಗೆ ಕೊಟ್ಟ ಸ್ವಾತಂತ್ರ್ಯ ಎಷ್ಟು ಎತ್ತರಕ್ಕೆ ಬೆಳೆದಿತ್ತು ಅನ್ನುವುದನ್ನು ಕಂಡುಬರುತ್ತದೆ. ಹೀಗೆ,

ಅಲ್ಲಿ ಇರುವ ಸಂಗಯ್ಯ ಇಲ್ಲಿಯೂ ಇಲ್ಲವೇ ?
ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯ ?
ನಾನಾರ ಹೊದ್ದುವೆನೆಂದು ಭ್ರಮೆಗೆಡಲೇತಕ್ಕಯ್ಯ ?
ನಾನಾರ ಇರುವನರಿವೆನೆಂದು ಪ್ರಲಾಪಿಸಲೇತಕ್ಕಯ್ಯ ?

ಪರಿಣಾಮ ಮೂರ್ತಿ ಬಸವನ ರೂಪ ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯ?, ತನ್ನಂಗಯ್ಯ ಲಿಂಗವೇ ಸಂಗಮನಾಥನೆಂದು ದೃಢ ವಿಶ್ವಾಸ ಹೊಂದಿದ ಆಕೆ ಅದರಲ್ಲಿಯೇ ಐಕ್ಯಳಾಗುತ್ತಾಳೆೆ ಸತಿ ಮಹಾನ್ ಸತಿಯಾದ ಪರಿಯಿದು.

ಒಂದು ಸಲ ಮೋಳಿಗೆಯ ಮಾರಯ್ಯ ಕಾಯಕ ಸಾಕಾಗಿ ಲಿಂಗೈಕ್ಯನಾಗಲು ಬಯಸಿದಾಗ ಅವನ ಪತ್ನಿ ಮಹಾಶರಣೆ ಮಹಾದೇವಮ್ಮ ನುಡಿದ ನುಡಿ “ಸದ್ಭಾವ ನಿಜವಾದರೆ ಈ ಲಿಂಗವೇ ಕೈಲಾಸವಾಗಿ ಪರಿಣಮಿಸುತ್ತದೆ. ಕಾಯಕವನ್ನು ಮಾಡುತ್ತಲೇ ಲಿಂಗದಲ್ಲಿ ಸಮರಸ ವಾಗಿರಲು ಸಾಧ್ಯವಿಲ್ಲವೇ? ಹೀಗೆಯೇ ಇನ್ನೊಬ್ಬ ಮಹಾಶರಣೆ ಲಕ್ಕಮ್ಮನ ಗಂಡ ಒಂದು ದಿವಸಬೇಕಾದುದಕ್ಕಿಂತ ಹೆಚ್ಚು ಅಕ್ಕಿ ತಂದಾಗ ಸಂತೋಷಗೊಳ್ಳದೇ ವ್ಯಥೆಪಟ್ಟು ಈ ಕೆಳಗಿನಂತೆ ಹೇಳುತ್ತಾಳೆ.

ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ
ಇದು ನಿಮ್ಮ ಮನವೋ ?
ಬಸವಣ್ಣನ ಅನುಮಾನದ ಚಿತ್ತವೋ?

ಈ ಮಾತು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ಸಲ್ಲದ ಬೋನ, ಅಲ್ಲಿಯೇ ಸುರಿಸು ಬನ್ನಿ ಮಾರಯ್ಯ

ಆಶೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ, ಈ ಅಕ್ಕಿಯ ಆಸೆ ನಿಮಗೇಕೇ? ಈಶ್ವರನೊಪ್ಪ

ಆಹಾ ಎಂತಹ ಮಾತು, ಸತಿಯೆಂದರೆ ಪತಿ ಹೇಳಿದ್ದಕ್ಕೆ ಗೋಣು ಹಾಕುವ ಸಾಕು ಪ್ರಾಣಿಯದಂತಿದ್ದ ಸ್ತ್ರೀ ಇಂದು ಪತಿಗೆ ಬುದ್ದಿವಾದ ಹೇಳುವಷ್ಟು ಎತ್ತರಕ್ಕೆರಿದ ಮೇಲಿನ ಮಹಾನ್ ಶರಣೆಯರನ್ನು ನೋಡಿದರೆ, ಸ್ತ್ರೀಯರಿಗೆ ಸ್ವಾತಂತ್ರ್ಯ ಮತ್ತು ಸರಿಯಾದ ಮಾರ್ಗ ದರ್ಶನ ಸಿಕ್ಕರೆ ಏನ್ನೆಲ್ಲ ಸಾಧಿಸಬಹುದು ಅನ್ನುವ ಮಾತು ತಿಳಿದು ಬರುತ್ತಿದೆ. ಬಸವಣ್ಣನವರ ಮಾರ್ಗದರ್ಶದಲ್ಲಿ ಅಸಂಖ್ಯ ಶಿವಶರಣೆಯರು ಅತೀ ಎತ್ತರ ಮಟ್ಟದ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ. ಅತೀ ಶ್ರೇಷ್ಠ ವಚನಕಾರಳು ಮಹಾದೇವಿಯಕ್ಕ ಅನ್ನುವಾಗ ಹೀಗೆ ಹೇಳುತ್ತಾರೆ;

ಅದ್ಯರ ಅರವತ್ತು ವಚನಕ್ಕೆ ಡಣ್ಣಾಯಕರ ಇಪ್ಪತ್ತು ವಚನ
ಡಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭು ದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕನ ಒಂದು ವಚನ ನಿರ್ವಚನ ಕಾಣಾ ಚನ್ನಬಸವಣ್ಣ.

ಹೀಗೆ ೧೨ನೇ ಶತಮಾನದಲ್ಲಿ ಬಸವಣ್ಣನವರು ಕೈಗೊಂಡ ಮಾನವ ಉದ್ಧಾರದ ಅನೇಕ ಘನ ಕಾರ್ಯಗಳಲ್ಲಿ ಸ್ತ್ರೀ ಉದ್ಧಾರದ ಕಾರ್ಯ ಅತಿ ಶ್ರೇಷ್ಠವಾಗಿದೆ. ಯಾವುದೇ ವ್ಯಕ್ತಿ ಸ್ವಾತಂತ್ರ್ಯವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಮನುಷ್ಯನನ್ನು ಮನುಷ್ಯನಂತೆ ಬಾಳಲು ಬಿಟ್ಟಾಗ ಮಾತ್ರ ಅವನು ಸುಖಿ-ಅವನ ಸಮಾಜವು ಸುಖಿಯಾಗಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ.

ಆದರೆ ದುರ್ದೈವದ ಸಂಗತಿ ಏನೆಂದರೆ ಬಸವಣ್ಣನವರ ಕನಸಿನ ಸಮಾಜ ಕಟ್ಟುವ ಮೊದಲೇ ಮುರಿದು ಬಿದ್ದದ್ದು. ಆದರೆ ಸ್ತ್ರೀಯ ಸ್ಥಾನ-ಮಾನ ಸುಧಾರಿಸುವಲ್ಲಿ ಬಸವಣ್ಣ ನವರು ಬಹುಮಟ್ಟಿನ ಯಶಸ್ಸು ಕಂಡಿದ್ದಾರೆ ಎನ್ನುತ್ತಾರೆ ಡಾ. ಎಚ್.ಬಿ. ಮಾಳಿ.

ಡಾ. ಸರೋಜಿನಿ ಶಿಂತ್ರಿಯವರು “ಕಲ್ಯಾಣ ಕ್ರಾಂತಿ ೧೨ ನೇಯ ಶತಮಾನದಲ್ಲಿ ಆಗಿ ಹೋದ ಬಸವಣ್ಣನವರ ವಿಚಾರ ಸರಣಿಯನ್ನು ನೋಡಿದರೆ ಈಗಿನ ಕಾಲದ ಮಹಾ ಪ್ರಗತಿವಾದಿಗಳೆಂದು ಕರೆದುಕೊಳ್ಳುವವರೂ ತಲೆಬಾಗಿಸಬೇಕು. ಪ್ರತಿಗಾಮಿ ವೈದಿಕ ಸಾಮಾಜ ವನ್ನು ಎದುರಿಸಿ ತಮ್ಮ ಕ್ರಾಂತಿಕಾರಿ ವಿಚಾರಗಳನ್ನು ಪ್ರಚೋದಿಸಿ ಕೆಲವೇ ಧರ್ಮ  ಪ್ರವರ್ತ ಕರಲ್ಲಿ ಬಸವಣ್ಣನವರು ಒಬ್ಬರು” ಅನ್ನುತ್ತಾರೆ.

ಇನ್ನೂ ಮುಂದೆ ಹೋಗಿ ಶ್ರೀ ಚಂದ್ರಶೇಖರ ವಸ್ತ್ರದ ಹೀಗೆ ಬರೆಯುತ್ತಾರೆ. “ಒಂದು ವೇಳೆ ಬಸವಾದಿ ಪ್ರಮಥರು ರೂಪಿಸಿದ ಆರ್ಥಿಕ ಸಿದ್ಧಾಂತ ಜಾರಿಯಲ್ಲಿ ಬಂದಿದ್ದರೆ ಈ ಜಗತ್ತಿನ ಬಡತನ ಮರೆಯಾಗಿ ೮೦೦ ವರ್ಷಗಳಾಗಿರುತ್ತಿತ್ತು.”

ಹೀಗೆ ನಮ್ಮ ಮಹಾನ್ ಚಿಂತಕ, ಸಮಾಜ ಸುಧಾರಕ, ಕ್ರಾಂತಿಕಾರಿ, ತತ್ವಜ್ಞಾನಿ, ಕಾಯಕ ಯೋಗಿ, ಸ್ತ್ರೀಕುಲ  ಉದ್ಧಾರಕ ಶರಣ ಬಸವಣ್ಣನವರು ಮತ್ತು ಅವರ ತತ್ವಗಳು ಸರ್ವ ಕಾಲಕ್ಕೂ ಮಾನ್ಯ ಅನ್ನುವುದು ನನ್ನ ಅನಿಸಿಕೆ. ಏನೆಂದರೆ ಅಂದಿನ ಅವರ ತತ್ವಗಳು ಇವತ್ತಿನ ಈ ಆಧುನಿಕ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಶಕ್ತಿಯನ್ನು ಹೊಂದಿದೆ.

 

ಆಧಾರ ಗ್ರಂಥಗಳು

೧. ಡಾ. ಬಿ.ಬಿ. ಹೆಂಡಿ, “ಬಸವೇಶ್ವರ”.

೨. ಬಸವ ಪಥ, ಸಂಪುಟ ೧೯, ಸಂಚಿಕೆ ೭, ಅಕ್ಟೋಬರ್ ೧೯೯೭.

೩. ಪ್ರೊ. ಬಸವನಾಳ ಶಿವಲಿಂಗಪ್ಪನವರು, “ಬಸವಣ್ಣನವರ ಷಟಸ್ಥಲದ ವಚನಗಳು.

೪. ಬಿ.ಪಿ. ಚಂದ್ರಾಬಾಯಿ,  “ಭಾರತೀಯ ಮಹಿಳಾ ಪರಂಪರೆ”.

೫. ಸರೋಜಿನಿ ಶಿಂತ್ರಿ, “ಸ್ತ್ರೀ ನಡೆದು ಬಂದ ದಾರಿ”.

೬. ಶ್ರೀಮತಿ ವನಮಾಲಾ ಆಚಾರ, “ಸ್ತ್ರೀ ಮತ್ತು ಶಿಕ್ಷಣ”.

೭. ಚಂದ್ರಶೇಖರ ವಸ್ತ್ರದ, “ಮಾನವತಾವಾದಿ ಬಸವಣ್ಣನವರು”.

೮. ಬಸವಪಥ, ಸಂಪುಟ ೧೭, ಸಂಚಿಕೆ ೧೦, ಜನವರಿ ೧೯೯೬.

೯. ಮಾತೆ ಮಹಾದೇವಿ, “ವಿಶ್ವ ವಿಭೂತಿ ಬಸವಣ್ಣನವರು”.

೧೦. ಡಾ. ಗುರುದೇವಿ ಹುಲ್ಲೇಪ್ಪನವರ ಮಠ, “ಶರಣ ಧರ್ಮ ಹಾಗೂ ಮಹಿಳೆ”.

೧೧. ಶೈಲಜಾ ಉಡಚಣ, “ವಚನ ಸಾಹಿತ್ಯ ಮತ್ತು ಮಹಿಳೆ”.

೧೨. ಕೆ. ಈಶ್ವರನ್, “ಲಿಂಗಾಯತ ಧರ್ಮ”.

೧೩. ಡಾ. ಎಂ.ಎಂ. ಕಲಬುರ್ಗಿಯವರ ಲೇಖನ, “ಶರಣರು ಕಟ್ಟ ಬಯಸಿದ ಸ್ತ್ರೀ ಸಮಾಜ”.

೧೪. ಡಾ. ಗಂಗಮ್ಮ ಸತ್ಯಂಪೇಟೆ ಲೇಖನ, “ವಚನಗಳಲ್ಲಿ ಸ್ತ್ರೀ ಸಂವೇದನೆ”.

೧೫. ಡಾ. ಚೆನ್ನಕ್ಕ ಎಲಿಗಾರ ಲೇಖನ, “ಸ್ತ್ರೀ ಕುಲೋದ್ಧಾರಕ ಬಸವಣ್ಣನವರು”.

೧೬. ಪ್ರೊ. ಎಚ್. ವೈ. ಹಂಚಿ ಲೇಖನ, “ಶಿವಶರಣರ ದೃಷ್ಟಿಯಲ್ಲಿ ಸ್ತ್ರೀ”.

೧೭. ಡಾ. ಎಚ್.ಬಿ. ಮಾಳಿ, “ಸಾಮಾಜಿಕ ಚಿಂತನೆ”.

೧೮. ಬಿ.ವಿ. ಜಯಾ ರಾಜಶೇಖರ ಲೇಖನ, “ಶಿವ ಶರಣೆಯರು”.