ಕರ್ನಾಟಕಕ್ಕೆ ಸೀಮಿತವಾದ ಸಾಮಾಜಿಕ ಚಳುವಳಿಗಳಲ್ಲಿ ಬಸವ ಕೇಂದ್ರಿತ ವಚನ ಚಳುವಳಿ ಮಹತ್ವಪೂರ್ಣವಾದ ಘಟ್ಟ. ಜಾತಿ, ವರ್ಗ ಮತ್ತು ಲಿಂಗ ಬೇಧಗಳನ್ನಳಿಸಿ ಸಮಾನತಾತತ್ವದ ಆಧಾರದ ಮೇಲೆ ಸಮಾಜವನ್ನು ಪುನರ್ ರೂಪಿಸಲು ಪ್ರಯತ್ನಿಸಿದ್ದು ಅಸಾಮಾನ್ಯವಾದುದು. ಇದು ಸಾಮಾಜಿಕ ಚಳುವಳಿಯಾಗಿ ಗುರುತಿಸಿಕೊಂಡಿರುವಂತೆಯೇ ಕನ್ನಡದ ಮಹತ್ವಪೂರ್ಣ ಸಾಹಿತ್ಯಿಕ ಅಂದೋಲನವಾಗಿಯೂ ಗಮನ ಸೆಳೆಯುತ್ತದೆ. ಕರ್ನಾಟಕ ತನ್ಮೂಲಕ ಭಾರತೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ವೈಚಾರಿಕವಾಗಿ ಗುರುತಿಸಿಕೊಂಡಿರುವಂತೆ ಜಾಗತಿಕ ಮನ್ನಣೆಯನ್ನೂ ಪಡೆದುಕೊಂಡಿದೆ ಎಂಬುದನ್ನು  ಗಮನಿಸಿದಾಗ ಈ ಚಳುವಳಿಯ ತಾತ್ವಿಕತೆ ಮತ್ತು ಸಾಮಾಜಿಕ  ಒತ್ತಾಸೆಯ ಅರಿವುಂಟಾಗುತ್ತದೆ.

ಈ ಚಳುವಳಿಯ ಮತ್ತೊಂದು ವಿಶೇಷವೆಂದರೆ ಇದು ಕೆಳವರ್ಗದವರಿಂದಲೇ ಪ್ರಾರಂಭ ವಾದುದು ಮತ್ತು ಅವರಿಂದಲೇ ತುಂಬಿಕೊಂಡಿರುವುದು. ಹಾಗೂ ಅದರ ತಾತ್ವಿಕ ನಿಷ್ಕರ್ಷೆ ಗಳು, ಸಿದ್ಧಾಂತಗಳು, ಚರ್ಚೆಗಳು, ಖಂಡನೆ-ಮಂಡನೆಗಳೆಲ್ಲ ಅವರಾಡುವ ಮತ್ತು ಅವರ ಕುಲಕಸುಬಿನ ಪರಿಭಾಷೆಯಲ್ಲೇ ರಚನೆಗೊಂಡಿರುವುದು ತೀರಾ ಕುತೂಹಲವನ್ನುಂಟು ಮಾಡುತ್ತದೆ. ಅದಕ್ಕಾಗಿ ಬಸವತತ್ವವನ್ನು ಅರಿತುಕೊಳ್ಳಲು ಮತ್ತು ಕೆಳವರ್ಗದ ವಚನಕಾರರ ಆಲೋಚನೆಗಳಲ್ಲಿ ಅದು ಪ್ರತಿಬಿಂಬತವಾಗಿರುವುದನ್ನು ಪರೀಶೀಲಿಸಬೇಕೆನ್ನಿಸುತ್ತದೆ. ಇದು ಸಹಜವೂ ಆಗಿದೆ.

ಬಸವತತ್ವ ಎನ್ನುವುದು ಬಸವಣ್ಣನವರ ವಿಚಾರಧಾರೆ ಮಾತ್ರವಾಗಿರದೇ ಇಡೀ ಚಳುವಳಿಯ ತಾತ್ವಿಕತೆಯೇ ಆಗಿದೆ. ಒಟ್ಟು ಚಳುವಳಿಯ ಫಲಿತವೇ ಬಸವತತ್ವವೆನಿಸುತ್ತದೆ. ಅಂದರೆ ಮೂಢನಂಬಿಕೆಗಳಿರದ, ಎಲ್ಲ ಜನಾಂಗಗಳೂ ಸ್ವೀಕರಿಸಲು ಯೋಗ್ಯವಾದ ಸಮಾನತಾ ಧರ್ಮ; ಎಲ್ಲರಿಗೂ ನಿಲುಕುವ ಕ್ಲಿಷ್ಟವಲ್ಲದ ಪೂಜಾಪದ್ಧತಿಯಿಂದ ಕೂಡಿದ ಏಕದೇವತಾರಾಧನೆ; ಜಾತಿ, ವರ್ಗ ಮತ್ತು ಲಿಂಗಭೇದವಿಲ್ಲದ ಸಾಮರಸ್ಯ ಸಾಂಘಿಕ ಜೀವನ; ಆರ್ಥಿಕ ಸಮಾನತೆ ಯನ್ನು ಪ್ರತಿಪಾದಿಸಲು ಕಾಯಕ ಪ್ರಜ್ಞೆ; ಸಾಮೂಹಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯ; ಮೇಲಾಗಿ – “ಎನಗಿಂತ ಕಿರಿಯರಿಲ್ಲ” ಎನ್ನುವ ವಿಶಾಲ ಮನೋಭಾವದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅದು ಚಲನಶೀಲಗೊಂಡಿರುವಿಕೆಯೇ ಅದರ ಒಟ್ಟು ಸ್ವರೂಪವಾಗಿದೆ.

ಇಂಥದೊಂದು ಮನೋಭೂಮಿಕೆ ೧೨ನೇ ಶತಮಾನದಲ್ಲಿ ಬಿಜ್ಜಳನ ರಾಜ್ಯಾಧಿಕಾರದ ಸಂದರ್ಭದಲ್ಲಿ ಅರ್ಥಮಂತ್ರಿ (ಬಂಡಾರಿ) ಬಸವಣ್ಣನವರ ನೇತೃತ್ವದಲ್ಲಿ ನಡೆದಿರುವುದು, ಅದಕ್ಕೆ ತಳವರ್ಗದ ನೆಲೆಗಟ್ಟಾಗಿರುವುದನ್ನು ಅರ್ಥೈಸಿಕೊಳ್ಳಬಹುದೆನಿಸುತ್ತದೆ.

ಬಸವ ದೃಷ್ಟಿ ತಳವರ್ಗದ ಸಂವೇದನೆ

ಇಲ್ಲಿ ಡಾ. ಎಲ್. ಬಸವರಾಜು ಅವರ ಮಾತನ್ನು ಉಲ್ಲೇಖಿಸಬಹುದೆನಿಸುತ್ತದೆ.

“ಗೋತ್ರನಾಮ ಬೆಸಗೊಂಡಡೆ ಮಾತು ನೂಂಕದೆ ಸುಮ್ಮನಿದ್ದಿರೇನಯ್ಯ? ತಲೆಯ ಕುತ್ತಿ ನೆಲನ ಬರೆಯುತ್ತಿದ್ದಿರೇನಯ್ಯಿ? ಗೋತ್ರಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ ನೆಂಬು ದೇನು-ಕೂಡಲಸಂಗಯ್ಯ?” (ಬಸವ-೭೪೨) ಎಂಬಲ್ಲಿ ಕೆಳವರ್ಗದವರಾದ ಚೆನ್ಯಯ್ಯ, ಕಕ್ಕಯ್ಯರನ್ನು ತಮಗೆ ಮತ್ತು ತಮ್ಮ ಅನುಯಾಯಿಗಳಿಗೆ ಮಾತ್ರವಲ್ಲ ಶಿವನಿಗೂ ಗೋತ್ರ ಪುರುಷರೆಂದು ಬಸವಣ್ಣನವರು ಹೆಮ್ಮೆಯಿಂದ ಘೋಷಿಸಿರುವುದನ್ನು ಇಲ್ಲಿ ಎಲ್ಲರೂ ಗಮನಿಸಬೇಕಾಗಿದೆ. ಆದ್ದರಿಂದ ವಚನಕಾರರು ನಡೆಸಿದರೆಂಬ ಚಳುವಳಿಯ ಮುಂಚೂಣಿಯಲ್ಲಿದ್ದವರು ಹಿಂದುಳಿದ ವರ್ಗದವರೆಂಬುದನ್ನು ಎಲ್ಲರೂ ಗಮನಿಸಬೇಕಾಗಿದೆ.”

ಸಾಮಾಜಿಕ ಜಡತೆಯನ್ನು ಅಸಮಾನತೆಯನ್ನು ಹೋಗಲಾಡಿಸಲು ಬಸವಣ್ಣ ಸುಸಂಬದ್ಧ ಸಂಘಟನೆಯನ್ನು ಕಟ್ಟಿ ಚಳುವಳಿ ರೂಪಿಸಲು, ಜಾತಿಯಿಂದ ಅಪಮಾನಿತರಾದ ಕೆಳವರ್ಗದ ಶೋಷಿತರನ್ನೇ ಮುಂಚೂಣಿಗೆ ತಂದು ನಿಲ್ಲಿಸಬೇಕಾಯಿತು. ಅವರಲ್ಲಿರುವ ಕೀಳರಿಮೆಯನ್ನು ಕಿತ್ತೊಗೆಯಬೇಕಾಯಿತು ಅಷ್ಟೆ ಸಂಪ್ರದಾಯಸ್ಥರ ಮತ್ತು ಮೇಲ್ಜಾತಿಗಳ ವಿರೋಧಗಳನ್ನೂ ಕಟ್ಟಿಕೊಳ್ಳಬೇಕಾಯಿತು. ಇದ್ಯಾವುದಕ್ಕೂ ಬಸವಣ್ಣ ಹಿಂಜರಿಯಲಿಲ್ಲ ಅದಕ್ಕಾಗಿ ಕೆಳಜಾತಿಗಳಿಗೆ ಆತ್ಮಾಭಿಮಾನ ತುಂಬಲು ಮುಂದಾದರು ಅವರಲ್ಲಿರುವ ಕೀಳರಿಮೆಯನ್ನು ಕಂಡು.

ಸೆಟ್ಟಿಯೆಂಬೆನೆ ಸಿರಿಯಾಳನ ?
ಮಡಿವಾಳೆಂಬೆನೆ ಮಾಚಯ್ಯನ ?
ಡೋಹರೆಂಬೆನೆ ಕಕ್ಕಯ್ಯನ ?
ಮಾದಾರನೆಂಬೆನೆ ಚೆನ್ನಯ್ಯನ ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯ

ಎಂದು ಕೆಳಜಾತಿಗಳು ಕೀಳಲ್ಲ ಕೆಳವರ್ಗದಲ್ಲಿ ಜನಿಸಿದ ಆ ಜನ ಬ್ರಾಹ್ಮಣರಿಗಿಂತಲೂ ಸುಜ್ಞಾನಿಗಳೂ ಮಹನೀಯರೂ ಆಗಿದ್ದಾರೆಂಬುದು ಅವರ ಅಭಿಪ್ರಾಯ. ತನ್ನ ಬ್ರಾಹ್ಮಣ ಸ್ಥಾನವನ್ನು ಕನಿಷ್ಠಕ್ಕೆ ತಂದು ನಿಲ್ಲಿಸಿ ಸಚ್ಯಾರಿತ್ರ್ಯದ ಕೆಳಜಾತಿಗಳನ್ನು ಉನ್ನತಕ್ಕೇರಿಸುವುದರಿಂದ ಮೈ ಚಳಿಬಿಟ್ಟು ಚಳುವಳಿಯಲ್ಲಿ ಪಾಲ್ಗೊಳ್ಳಲು ಮಾನಸಿಕ ಸ್ಥೈರ್ಯವನ್ನು ಬಸವಣ್ಣ ತುಂಬಿದರು.

ಅಷ್ಟಕ್ಕೂ ನಿಲ್ಲದ ಬಸವಣ್ಣ ತನ್ನ ಬ್ರಾಹ್ಮಣತ್ವವನ್ನೇ ಲೇವಡಿಗೊಳಪಡಿಸಿ ತಾನು ಕೆಳಜಾತಿಗಳಿಗಿಂತ ಕೀಳೆಂದು ಅವರನ್ನು ಎತ್ತಿ ಹಿಡಿದುದು ಉತ್ಕೃಷ್ಟವಾದುದಾಗಿದೆ. ತನ್ನ ಹುಟ್ಟೇ ಅಪವಿತ್ರವಾದುದೆಂದು ಬಸವಣ್ಣ ಸಾರುತ್ತಾನೆ.

ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲ ಸಂಗಮದೇವನ ಸಾಕ್ಷಿಯಾಗಿ.

ತನ್ನ ಹುಟ್ಟೇ ಮದುವೆಯಾಗಿರದ ಇಬ್ಬರು ಸ್ತ್ರೀ ಪುರುಷರ ಮಿಲನದ ಪರಿಣಾಮವಾಗಿ, ಅವರಿಬ್ಬರೂ ಸಹ ಕೀಳು ಜಾತಿಯವರ ಮನೆಗಳಲ್ಲಿ ದಾಸಿಯರಾಗಿದ್ದವರ ಮಕ್ಕಳು. ಹೀಗಾಗಿ ಹುಟ್ಟಿನ ಶ್ರೇಷ್ಠತೆ ಮತ್ತು ಶುದ್ಧತೆಯು ಸಿದ್ಧಾಂತಗಳನ್ನು ಬಸವಣ್ಣ ಇಲ್ಲಿ ಗೇಲಿ ಮಾಡಿದ್ದಾನೆ. ಆದ್ದರಿಂದ ಹುಟ್ಟಿಗೂ ವೃತ್ತಿಗೂ ಸಂಬಂಧವಿಲ್ಲ ಎನ್ನುತ್ತ ಹುಟ್ಟಿನಿಂದ ಎಲ್ಲರೂ ಸಮಾನ ರೆಂದೂ, ಹುಟ್ಟಿನಿಂದಲೇ ಉತ್ತಮಿಕೆಯು ಬರುವುದಿಲ್ಲವೆಂದೂ, ಎಲ್ಲರಿಗೂ ಏಕ ಪ್ರಕಾರದ ಪಂಚೇಂದ್ರಿಯಗಳಿವೆಯೆಂದೂ ಸಾರಿದನು.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲಾ
ಜಲ-ಬಿಂದುವಿನ ವ್ಯವಹಾರದ ಒಂದೇ;
ಆಸೆಯಾಮೀಷರೋಷ ಹರುಷ ವಿಷಯಾದಿಗಳೆಲ್ಲಾ ಒಂದೇ.

ಏನನೋದಿ, ಏನಕೇಳಿ, ಏನು ಫಲ ?
ಕುಲಜನೆಂಬುದಕ್ಕೆ ಆವುದು ದೃಷ್ಟ ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುದ್ಭವಂ
ಆತ್ಮ ಜೀವನ ಸಮಾಯುಕ್ತಂ ವರ್ಣನಾಂ ಕಿಂ ಪ್ರಯೋಜನಂ
ಎಂದುದಾಗಿ

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ
ಲಿಂಗಸ್ಥಲವನರಿದವನೇ ಕುಲಜನು.

ಎಂದೆನ್ನುತ್ತ “ಸಕಲ ಜೀವಾತ್ಮರಿಗೆ ಲೇಸನೆ ಬಯಸುವ, ನಮ್ಮ ಕೂಡಲ ಸಂಗನ ಶರಣರೆ ಕುಲಜರು” ಎಂದು ಕೆಳವರ್ಗಗಳನ್ನು ತಮ್ಮೊಟ್ಟಿಗೆ ಕರೆದುಕೊಂಡು ಅವರನ್ನೇ ಚಳುವಳಿಯ ಮುಂಚೂಣಿಯಲ್ಲಿ ನಿಲ್ಲಿಸಿದರು.

ವೈದಿಕ ಧರ್ಮದ ಚಾತುರ್ವರ್ಣದಲ್ಲಿ ಹುಟ್ಟಿನಿಂದಲೇ ಜಾತಿ ನಿರ್ಧಾರವಾಗಿ ಬಿಡುತ್ತಿತ್ತು. ಆ ವರ್ಣದಲ್ಲಿ ಹುಟ್ಟಿದವನು ಆ ವರ್ಣದ ಕುಲಕಸುಬುಗಳನ್ನೇ ಮಾಡಬೇಕು ಅದನ್ನು ಮೀರುವಂತಿಲ್ಲ. ತನ್ನ ಆಸಕ್ತಿಯ ಕೆಲಸವನ್ನು ಮಾಡುವಂತಿಲ್ಲ. ತನ್ನ ಜಾತಿಯನ್ನು ಧರ್ಮ ವನ್ನು ಬದಲಿಸಿಕೊಳ್ಳುವಂತಿಲ್ಲ. ಆದರೆ ಬಸವ ಚಳುವಳಿ ಅದನ್ನು ನೇರವಾಗಿ ತಿರಸ್ಕರಿಸಿ ತಲ್ಲದೆ, ವೈದಿಕ ಮತದಿಂದ ಬಹಿಷ್ಕರಿಸಲ್ಪಟ್ಟ ಕೆಳವರ್ಗ-ಜಾತಿಗಳಿಗೆ ತಮ್ಮ ಧರ್ಮ ದಲ್ಲಿ ಸಮಾನತೆಯ ಆಧಾರದ ಮೇಲೆ ಸೇರಿಸಿಕೊಂಡರು. ವೈದಿಕ ಧರ್ಮವನ್ನೂ ಅದರ ಆರಾಧಕ ರನ್ನೂ ಛೇಡಿಸಿದರು.

ಹೊಲೆಯೊಳಗೆ ಹುಟ್ಟಿ ಕುಲವನರಸುವೆ
ಎಲವೋ, ಮಾತಂಗಿಯ ಮಗ ನೀನು!
ಸತ್ತು ದನವನೆಳೆವನೆತ್ತಣ ಹೊಲೆಯ?
ಹೊತ್ತು ತಂದು ನೀವು ಕೊಲುವಿರಿ
ಶಾಸ್ತ್ರವೆಂಬುದು ಹೋತಿಂಗೆ ಮಾರಿ
ವೇದವೆಂಬುದು ನಿಮಗೆ ತಿಳಿಯದು.

ದಾಸಿ ಪುತ್ರನಾಗಲಿ,. ವೇಶ್ಯಾ ಪುತ್ರನಾಗಲಿ
ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ
ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ
ಹೀಗಲ್ಲದೆ ಉದಾಸೀನವ ಮಾಡಿಬಿಡುವವರಿಗೆ
ಪಂಚಮಹಾಪಾತಕ ನರಕ ಕಾಣಾ
ಕೂಡಲಸಂಗಮದೇವಾ.

ಈ ರೀತಿಯಾಗಿ ಬಸವ ಚಳವಳಿ ಕೆಳವರ್ಗದವರಿಗೆ ತನ್ನ ಧರ್ಮದಲ್ಲಿ ಅವಕಾಶಕೊಟ್ಟು, ಹುಟ್ಟಿನಿಂದ ಬರುವ ಜಾತೀಯತೆಯನ್ನು ಮತ್ತು ಶ್ರೇಷ್ಠ-ಕನಿಷ್ಠತೆಯನ್ನು ಅಲ್ಲಗಳೆದು; ವೃತ್ತಿಗೂ-ಜಾತಿಗೂ ಸಂಬಂಧವಿಲ್ಲವೆಂದು ಸಾರಿತು. ಅಲ್ಲದೆ ಯಾವ ಕಾಯಕವಾದರೂ ಒಂದೇ, ಕಾಯಕದಲ್ಲಿ ಮೇಲು ಕೀಳಿಲ್ಲವೆಂದು ಈ ಮುಂಚಿನ ಕಾಯಕವೇ ಜಾತಿಯಾಗಿ ಮಾರ್ಪಟ್ಟಿರುವುದರ ಸಿದ್ಧಾಂತವನ್ನೇ ತಿರಸ್ಕರಿಸಿ, ಕೆಳವರ್ಗದರಿಗೆ ಆತ್ಮಸ್ಥೈರ್ಯ ತುಂಬಿತು.

ಇಷ್ಟಲ್ಲದೆ ಕೆಳವರ್ಗದ ವಚನಕಾರರನ್ನು ವೇದ ಮತ್ತು ಉಪನಿಷತ್ ಕಾಲಿನ ಋಷಿಗಳ ಸಾಲಿನಲ್ಲಿಟ್ಟು ಅವರ ಹಿರಿಮೆಯನ್ನು ಕೊಂಡಾಡಿದರು. ಹಿಂದೂ ಧರ್ಮ ತೊರೆದ ಬಾಬಾಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿ ದಲಿತ ಪರಂಪರೆಯನ್ನು ಬುದ್ಧನೊಂದಿಗೆ ಗುರುತಿಸಿಕೊಂಡಂತೆ, ಬಸವ ಚಳುವಳಿ ಕೆಳವರ್ಗದವರನ್ನು ತನ್ನ ಒಡಲೊಳ ಗಿಟ್ಟಿಕೊಂಡು ತನ್ನ ಪರಂಪರೆಯನ್ನು ವೇದ-ಉಪನಿಷತ್ ಕಾಲಿನ ಆಗಸ್ತ್ಯ, ದುರ್ವಾಸ, ಕಶ್ಯಪ, ಕೌಂಡಿನ್ಯ ಋಷಿಗಳೊಂದಿಗೆ ಗುರುತಿಸಿಕೊಂಡು ತನ್ನ ವೀರಶೈವ ಧರ್ಮಕ್ಕೊಂದು ಬಹು ಹಿಂದಿನ ಪರಂಪರೆಯಿದೆಯೆಂದು ಹೇಳಿಕೊಂಡಿರುವುದನ್ನು ಗಮನಿಸಬೇಕು.

ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿಯ ಕಪ್ಪೆಯ ಮಗಳು !
ಕುಲವನರಸದಿರೆಂಬೋ ಕುಲದಿಂದ ಮುನ್ನೇನಾದಿರೆಂಬೋ
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ, ಕಶ್ಯಪ ಕಮ್ಮಾರ,
ಕೌಂಡಿನ್ಯನೆಂಬ ಋಷಿ ಮೂರು ಭುವನವನರಿಯೆ ನಾವಿದ ಕಾಣಿ ಬೋ !
ನಮ್ಮ ಕೂಡಲ ಸಂಗನ ವಚನವಿಂತೆಂದುದು
“ಶ್ವಪಚೋಪಿಯಾದೊಡೇನು,. ಶಿವ ಭಕ್ತನೆ ಕುಲಜಂ ಬೋ”

ಈ ಕಾರಣದಿಂದಾಗಿಯೇ ಅಸಂಖ್ಯಾತ ತಳವರ್ಗದ ಜನ ಈ ಚಳುವಳಿಯಲ್ಲಿ ಪಾಲ್ಗೊಂಡ ರಲ್ಲದೆ, ತಾವಿರುವ ಜಾತಿಯಾಗಲೀ, ತಾವು ಕೈಗೊಂಡಿರುವ ವೃತ್ತಿಯಾಗಲಿ ಕೀಳೆಂದು ಪರಿಗಣಿಸಲೆ ಇಲ್ಲಾ. ಎಲ್ಲ ಶಿವಶರಣೆಯರ ಜೊತೆಗೆ ಮುಕ್ತವಾಗಿ ಚರ್ಚೆ-ಸಂವಾದಕ್ಕಿಳಿದರು, ವಚನ ರಚಿಸಿದರು. ಮೂಲಭೂತವಾಗಿ ವಚನ ಚಳುವಳಿಗೊಂದು ಧೀಮಂತ ಜೀವಂತಿಕೆ ತಂದುಕೊಟ್ಟರು.

ಕೆಳವರ್ಗದ ತತ್ವ ಪ್ರತಿಪಾದನೆ

ಈಗ ಇಲ್ಲಿ ಕೆಳವರ್ಗದವರು ಎಂದರೆ ಯಾರೆಂಬುದನ್ನು ಮೊದಲಿಗೆ ಕಂಡುಕೊಳ್ಳ ಬೇಕಾಗುತ್ತದೆ. ಮತ್ತೆ ಎಲ್. ಬಸವರಾಜು ಅವರ ಮಾತುಗಳನ್ನು ಉಲ್ಲೇಖಿಸಬೇಕೆನಿಸುತ್ತದೆ.

“ಕೆಳವರ್ಗದ ವಚನಕಾರರೆಂದರೆ – ಆ ವಚನಕಾರರು ಸಾಮಾಜಿಕವಾಗಿ ಅತ್ಯಂತ ಕಡಿಮೆ ಸ್ತರದಲ್ಲಿ ಜನಿಸಿದವರಾಗಿರಬೇಕೆಂಬುದನ್ನು ನಾವೆಲ್ಲರೂ ಒಪ್ಪಲೇಬೇಕಾಗುತ್ತದೆ. ಇಲ್ಲದಿದ್ದರೆ ಬ್ರಾಹ್ಮಣನೊಬ್ಬನನ್ನು ಬಿಟ್ಟು ಮಿಕ್ಕಿದ ಜಾತಿಯವರೆಲ್ಲ ಕೆಳವರ್ಗದ ಜನರೆಂದೇ ತೀರ್ಮಾನಿಸ ಬೇಕಾದ ಪ್ರಸಂಗ ಪ್ರಮೆಯ ಬಂದೀತು.

ಅಥವಾ ದ್ವಿಜರೆನಿಸುವ ಬ್ರಾಹ್ಮಣ-ಕ್ಷತ್ರಿಯ-ವೈಶ್ಯರನ್ನು ಮೇಲ್ವರ್ಗವಾಗಿ ವಿಂಗಡಿಸಿ ಕೊಂಡು ಉಳಿದ ಶೂದ್ರರನ್ನು ಕೆಳವರ್ಗದವರೆಂದು ಗಣನೆ ಮಾಡುವುದು ಆ ಮಟ್ಟಿಗೆ ಸರಿಯೇ ಆದರೂ ಶೂದ್ರರಿಗಿರುವಷ್ಟು ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯವಿಲ್ಲದೆ ಊರಿಂದ ಹೊರಗೋ, ಬೆಟ್ಟ ಗುಡ್ಡಗಳಲ್ಲೋ ಮುಖ್ಯ ಜನವಾಹಿನಿಯಿಂದ ದೂರವಾಗಿರುವ ಅಸ್ಪೃಶ್ಯ ಜಾತಿ ಮತ್ತು ವರ್ಗದವರು ಶತಾಂಶ ಕೆಳವರ್ಗಕ್ಕೆ ಸೇರಿದವರೆಂಬುದರಲ್ಲಿ ವಾದ-ವಿವಾದವೇನೂ ಇಲ್ಲ. ಇವರನ್ನೆಲ್ಲಾ ಈಗ ನಾವು ನಡೆಸುವ ವಿಚಾರ ಸೌಲಭ್ಯಕ್ಕಾಗಿ ಶೂದ್ರರು ಮತ್ತು ಅತೀಶೂದ್ರರು ಎಂದು ಗುರುತಿಸಿಕೊಳ್ಳಬಹುದಾಗಿದೆ.” ಇದನ್ನು ಈಗಿನ ದಲಿತ ಚಳುವಳಿಯ ನೆಲೆಯಲ್ಲಿ ಹೇಳುವುದಾದರೆ ಕಡೆಗಣಿಸಲ್ಪಟ್ಟ ಅಸ್ಪಶ್ಯರು ಮತ್ತು ಅವರಂತೆಯೇ ಜಾತೀಯತೆಯ ಅವಮಾನದ ಕೀಳರಿಮೆಗೆ ಒಳಗಾದ ಎಲ್ಲರೂ ಕೆಳವರ್ಗದವರೆಂದು ಪರಿಗಣಿ ಸಲ್ಪಡಬಹುದಾಗಿದೆ.

ಈ ವಚನ ಚಳುವಳಿಯಲ್ಲಿ ಬಹುಸಂಖ್ಯಾತರಾಗಿರುವ ಕೆಳವರ್ಗದವರೆಲ್ಲ ವಿಶೇಷವಾಗಿ ತಮ್ಮ ಕುಲ ವೃತ್ತಿಯಾಧಾರಿತ ವಚನಾಂಕಿತವನ್ನು ಬಳಸಿಕೊಂಡಿದ್ದಾರೆ. ಇಲ್ಲದಿದ್ದರೆ ತಮ್ಮ ಹೆಸರಿನ ಹಿಂದೆ ಜಾತಿ ಉಪನಾಮವನ್ನು ಸೇರಿಸಿಕೊಂಡಿದ್ದಾರೆ.

ಜೇಡರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಡಕ್ಕೆಯ ಬೊಮ್ಮಣ್ಣ, ನೂಲಿಯ ಚಂದಯ್ಯ, ನಗೆಯ ಮಾರಿತಂದೆ, ಕನ್ನಡಿ ಕಾಯಕದ ಅಮ್ಮಿದೇವ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಹಡಪದ ರೇಚಣ್ಣ, ಹೆಂಡದ ಮಾರಯ್ಯ, ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ, ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಸೂಳೆ ಸಂಕವ್ವೆ-ಇತ್ಯಾದಿಯಾಗಿ ಹೆಸರಿಸಬಹುದು ಅಲ್ಲದೆ ಅಲ್ಲಮಪ್ರಭು ಮತ್ತು ಸಿದ್ಧರಾಮ ಕೂಡ ಕೆಳವರ್ಗದವರೇ ಆಗಿದ್ದಾರೆ.

ನನ್ನ ವಿಶ್ಲೇಷಣೆಗೆ ಇಲ್ಲಿ ಕೆಲವೇ ಜನ ವಚನಕಾರರ ಕೆಲವು ವಚನಗಳನ್ನು ಮಾತ್ರ ಆಧಾರವಾಗಿಟ್ಟುಕೊಂಡು ಕೆಳವರ್ಗದವರ ತತ್ವ ಪ್ರತಿಪಾದನೆಯನ್ನು ಗುರುತಿಸಬಯಸುತ್ತೇನೆ. ಈ ಎಲ್ಲ ಕೆಳಜಾತಿಗಳು ವೈದಿಕ ವ್ಯವಸ್ಥೆ ಮತ್ತು ಅದರ ವೇದ-ಶಾಸ್ತ್ರ ಪುರಾಣ ಇತ್ಯಾದಿಗಳ ವಿರುದ್ಧ ಬಂಡೆದ್ದರು. ಅವರ ನಂಬುಗೆ ಆಚಾರ – ವಿಚಾರಗಳ ವಿರುದ್ಧವೂ ಬಂಡೆದ್ದರು. ಆದರೆ ಇಲ್ಲಿ ಕೆಲವು ವಿಶಿಷ್ಟತೆಗಳನ್ನು ಗುರುತಿಸುವುದಕ್ಕೋಸ್ಕರ ಅವರ ಸಮಸ್ಯೆಗಳ ಕುರಿತು ಅವರು ಪ್ರತಿಕ್ರಿಯಿಸಿದ ರೀತಿಯನ್ನು ಗಮನಿಸಲಾಗಿದೆ.

ಮಾದಾರ ಚೆನ್ನಯ್ಯ

ಜಾತಿಯಿಂದ ಅಸ್ಪೃಶ್ಯನಾದ ಚೆನ್ನಯ್ಯನಿಗೆ ಈ ಚಳುವಳಿಯ ವೈಚಾರಿಕ ದೃಷ್ಟಿಕೋನದ ಫಲವಾಗಿ ಇದುವರೆಗೂ ತನ್ನನ್ನು ಜಾತಿಯತೆಯ ಹೆಸರಲ್ಲಿ ಅವಮಾನಿತಗೊಳಿಸಿದ ವ್ಯವಸ್ಥೆ ಯನ್ನು ಧಿಕ್ಕರಿಸುತ್ತಾನೆ. ಚೆನ್ನಯ್ಯನಿಗೆ ಶೂದ್ರ ಇತ್ಯಾದಿ ಜನಗಳಿಗಿಂತ ಕಾಡಿದ ಸಮಸ್ಯೆ ಯೆಂದರೆ ಜಾತಿಯದು. ಇಲ್ಲಿ ಜಾತಿ ಹುಟ್ಟಿನಿಂದಲೇ ನಿರ್ಧರಿಸಲ್ಪಡುತ್ತಾದ್ದರಿಂದ ಆ ಹುಟ್ಟೇ ಅವನ ಯೋಗ್ಯ-ಅಯೋಗ್ಯತೆಯನ್ನು ಮೊದಲೇ ನಿರ್ಧರಿಸುತ್ತದೆ. ಅದಕ್ಕಾಗಿ ಇದರ ವಿರುದ್ಧ ಸೆಟೆದು ನಿಲ್ಲುವ ಚೆನ್ನಯ್ಯ “ನಡೆ ನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ, ನುಡಿ ಲೇಸು ನಡೆಯುವ ಧರ್ಮವಾದಲ್ಲಿ, ಅದೇ ಬಿಡುಗಡೆಯಿಲ್ಲದ ಹೊಲೆ” ಆದ್ದರಿಂದ “ಆಚಾರವೇ ಕುಲ, ಅನಾಚಾರವೇ ಹೊಲೆ” ಎಂದೆನ್ನುತ್ತ ಚಾತುರ್ವರ್ಣ ಸಿದ್ಧಾಂತವನ್ನು ತಿರಸ್ಕರಿಸುತ್ತಾನೆ.

ವೇದ ಶಾಸ್ತ್ರಕ್ಕೆ ಹಾರುವನಾಗಿ
ವೀರ ವಿತರಣಕ್ಕೆ ಕ್ಷತ್ರಿಯನಾಗಿ,
ಸರ್ವವನಾರೈದು ನೋಡುವಲ್ಲಿ
ವೈಶ್ಯನಾಗಿ ವ್ಯಾಪಾರದೊಳಗಾಗಿ,
ಕೃಷಿಯ ಮಾಡುವದಕ್ಕಾಗಿ ಶೂದ್ರನಾಗಿ
ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ
ಎರಡು ಕುಲವಲ್ಲದೆ
ಹೊಲೆ ಹದಿನೆಂಟು ಜಾತಿಯೆಂಬ ಕುಲವಿಲ್ಲ.

ಇಲ್ಲಿ ಕೆಲವು ಅಂದರೆ ಹಾರುವ, ಕ್ಷತ್ರಿಯ, ವೈಶ್ಯ, ಶೂದ್ರ ಇವು ವೃತ್ತಿಗಳೇ ಹೊರತು ಕುಲ ಅಥವಾ ಜಾತಿಗಳಲ್ಲ. ಹಾಗಾಗಿ ವೃತ್ತಿಗಳಂತೂ ಮೇಲು ಕಡಿಮೆಯಿಲ್ಲ. ಆದುದರಿಂದ ಕೆಳಜಾತಿಗಳನ್ನೆಲ್ಲ ಹದಿನೆಂಟು ಕುಲಗಳನ್ನಾಗಿ ವಿಂಗಡಿಸುವ ಈ ಸಿದ್ಧಾಂತವನ್ನು ಒಪ್ಪದೆ ಚೆನ್ನಯ್ಯ ನಡತೆಯನ್ನಾಧರಿಸಿ ಎರಡೆ ಕುಲವೆನ್ನುತ್ತಾನೆ. ಅದುವೇ “ಆಚಾರವೇ ಕುಲ, ಅನಾಚಾರವೇ ಹೊಲೆ”! ಎಂದು ವಿವರಿಸುತ್ತಾನೆ. ಇದನ್ನು ಬಸವಣ್ಣನವರು “ಆಚಾರವೇ ಸ್ವರ್ಗ ಅನಾಚಾರವೆ ನರಕ” ಎಂದು ಅನುವಾದಿಸಿದ್ದಾರೆ ಎಂದು ಬಸವರಾಜು ಅಭಿಪ್ರಾಯಪಡುತ್ತಾರೆ.

ಜಾತಿಗೆ ಅಸ್ಪೃಶ್ಯತೆಯೇ ಕಾರಣವಾಗಿದ್ದು ಈ ಅಸ್ಪೃಶ್ಯತೆಗೆ ಮಾಂಸಾಹಾರವೇ ಕಾರಣವಾಗಿರುವ ವ್ಯವಹಾರಿಕ ಸತ್ಯವು ಚೆನ್ನಯ್ಯನಿಗಿಂತ ಕಾಳವ್ವೆಯಲ್ಲಿ ನಿಗಿನಿಗಿ ಕೆಂಡವಾಗಿ ಉರಿಯುತ್ತ ಬೆಳಕು ಚೆಲ್ಲುತ್ತದೆ.

ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

ಅಸ್ಪೃಶ್ಯ ವಚನಕಾರ್ತಿಯಾಗಿರುವ ಕಾಳವ್ವೆ ಬಹುಶಃ ಒಂದೆಡೆ ಬಸವಣ್ಣನವರು “ಹೊಲಸು ತಿಂಬುವನೆ ಹೊಲೆಯ ಕೊಲುವನೇ ಮಾದಿಗ” ಎಂಬ ಸಾಂಪ್ರದಾಯಿಕ ಹೇಳಿಕೆ ಯನ್ನು ಖಂಡಿಸುವಂತೆ ತನ್ನ ವಚನದಲ್ಲಿ ಹೀಗೆ ಹೇಳಿಕೊಂಡಿದ್ದಾಳೆ.

ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತ ಕರೆವ ಪಶುವ ತಿಂಬ ಮಾದಿಗ
ಕೀಳು ಜಾತಿಯೆಂಬರು
ಅವರೆಂತು ಕೀಳು ಜಾತಿಯಾದರು, ಜಾತಿಗಳು ನೀವೇಕೆ ಕೀಳಾಗಿರೋ?

ಎಂದು ನೇರವಾಗಿ ಬ್ರಾಹ್ಮಣರನ್ನೆ ಪ್ರಶ್ನಿಸಿದ್ದರೂ ಕೂಡ, ತನ್ನ ಪರಿಸರದಲ್ಲಿಯೇ ಕುರಿ, ಕೋಳಿ, ಮೀನುಗಳನ್ನು ತಿನ್ನುವವರನ್ನು ಸ್ಪೃಶ್ಯರೆಂದೂ ಪಶುವನ್ನು ತಿನ್ನುವವರನ್ನು ಅಸ್ಪೃಶ್ಯ ರೆಂದೂ ವಿಭಾಗಿಸುವ ಅವೈಚಾರಿಕ ವಾದಿಗಳಿಗೂ ನೇರ ಸವಾಲಾಗಿದ್ದಾಳೆ. ತಾನು ತಿನ್ನುವ ಪಶುವಿನ ಆಹಾರ (ದನದ ಮಾಂಸ) ಕುರಿತು ಆಕೆಗೆ ಕಿಂಚಿತ್ತೂ ಕೀಳರಿಮೆ ಇಲ್ಲ. ಬದಲಿಗೆ ದಲಿತ ಸಂಸ್ಕೃತಿಯ ಪ್ರತಿಪಾದಕಳಂತೆ ಸಮರ್ಥಿಸಿಕೊಂಡಿದ್ದಾಳೆ. ಅದೇಗೆಂದರೆ ಶಿವನ ಪಂಚಾಮೃತಕ್ಕೆ ಸಲ್ಲುವುದು ಪಶುವಿನ ಹಾಲು, ಆ ಹಾಲು ಶಿವನ ಪಂಚಾಮೃತಕ್ಕೆ ಸಲ್ಲುತ್ತದೆ ಎಂದ ಮೇಲೆ ಆ ಹಾಲನ್ನು ಕೊಡುವ ಪಶು ಶ್ರೇಷ್ಠವೆಂದಂತಾಯಿತು. ಆ ಶ್ರೇಷ್ಠ ಪ್ರಾಣಿಯನ್ನು ತಿನ್ನುವವರು ಹೇಗೆ ಕೀಳಾಗುತ್ತಾರೆ? ಎಂಬ ಪ್ರಶ್ನೆಗೆ ಈಗಲೂ ವೈಜ್ಞಾನಿಕ ಆಧಾರಗಳಿಲ್ಲ. ಡಾ. ಅಂಬೇಡ್ಕರ್‌ರೂ ಕೂಡಾ ಗೋಮಾಂಸ ಭಕ್ಷಣೆಯೇ ಅಸ್ಪೃಶ್ಯತೆಗೆ ಕಾರಣವಾಯಿತೆಂದು ಹೇಳುತ್ತಾರೆ. ವಚನ ಚಳುವಳಿಯಲ್ಲೇ “ಹೊಲಸು ತಿಂಬುವನೇ ಹೊಲೆಯ” ಎನ್ನುತ್ತಿದ್ದವರ ಮಾತಿನಿಂದಾಗಿ ದಲಿತ ಆಹಾರ ಪದ್ಧತಿಯ ಮೇಲೆ ದಬ್ಬಾಳಿಕೆಯಾಗುತ್ತಿತ್ತು. ಅದನ್ನು ಪ್ರತಿಭಟಿಸಿ ತನ್ನ ಆಹಾರ ಪದ್ಧತಿಯನ್ನು ಎತ್ತಿ ಹಿಡಿಯುವ ಕಾಳವ್ವೆ ಸ್ವಾಭಿಮಾನಿಯಾಗಿ ಕಾಣುತ್ತಾಳೆ.

ಜೇಡರ ದಾಸಿಮಯ್ಯ

ಕೆಳವರ್ಗದ ಶೂದ್ರ ಜಾತಿಗೆ ಸೇರಿದ ಜೇಡರ ವೃತ್ತಿಯ ದಾಸಿಮಯ್ಯ-ಇಡೀ ಕೆಳವರ್ಗ ವನ್ನು ಕಾಪಾಡುವ ಹಸಿವಿನ ಸಮಸ್ಯೆಯನ್ನು ಬಹುವಿಸ್ತಾರವಾಗಿ ಪ್ರತಿಪಾದಿಸುತ್ತಾನೆ. ಇಡೀ ಜೀವ ಜಗತ್ತಿನ ಸಮಸ್ಯೆಯಾಗಿರುವ ಹಸಿವನ್ನು ಈ ಕೆಳಗಿನ ವಚನದಲ್ಲಿ ದಾಖಲಿಸಲಾಗಿದೆ.

ಹಸಿವೆಂಬ ಹೆಬ್ಬಾವು ಬಸಿರ ಹಿಡಿದೆಡೆ
ವಿಷವೇರಿತ್ತಯ್ಯ ಆಪಾದ ಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ
ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ.

ಹಸಿವಿನ ತೀವ್ರತೆಯನ್ನು ಹೆಬ್ಬಾವಿನ ಪ್ರತಿಮೆಯ ಮೂಲಕ ಗುರುತಿಸಿದ್ದಾನೆ. ಹೆಬ್ಬಾವು ಯಾವೆಲ್ಲಾ ಪ್ರಾಣಿಯನ್ನು ಅಖಂಡವಾಗಿ ನುಂಗಿ ಜೀರ್ಣಿಸಿಕೊಳ್ಳುವ ರೀತಿಯಂತೆಯೇ ಹಸಿವು ಎಲ್ಲ ಕೆಡಕು-ದುಃಖ ಮತ್ತು ಸುಖ-ಸಂತೋಷಗಳಿಗೆ ಮೂಲವಾಗಿದೆ. ರಾಜ, ಗುರು, ಜ್ಞಾನಿ, ರೈತ, ಮಂತ್ರಿ-ಎಲ್ಲರೂ ಹಸಿವಿಗಾಗಿಯೇ ಹಸಿವಿನ ಮೂಲದ ಅನ್ನದ ಗಳಿಕೆಗಾಗಿಯೇ ಸೃಷ್ಟಿ ಯಾಗಿದ್ದಾರೆ. ಆದರೆ ಈ ಹಸಿವಿಗೆ ಅನ್ನ ಹಾಕುವವನೇ ನಿಜವಾದ ಮನುಷ್ಯ, ಅವನೇ ಭೂಮಿಯ ಮೇಲಿನ ಎಲ್ಲ ರೋಗಗಳಿಗೆ ಮಂತ್ರವಾದಿ-ಎಂಬ ಸತ್ಯವನ್ನು ದಾಸಿಮಯ್ಯನಲ್ಲಿ ಕಾಣಬಹುದು. ಅಸ್ಪೃಶ್ಯರಿಗೆ ಜಾತಿ ಸಮಸ್ಯೆಯಾಗಿ ಕಾಡಿದರೆ, ಅಸ್ಪೃಶ್ಯನಲ್ಲದ ಕೆಳವರ್ಗ ದವನಿಗೆ ಜಗದ ಸತ್ಯವಾದ ಹಸಿವಿನ ಸತ್ಯ ಕಾಡಿದೆ. ಈ ತೀವ್ರತೆಯ ಕಾವು ಎಂಥದೆಂದರೆ ದಾಸಿಮಯ್ಯ ಶಿವನನ್ನೇ ನಿಲ್ಲಿಸಿ ಸವಾಲೆಸಗುತ್ತಾನೆ.

ಒಡಲುಗೊಂಡವ ಹಸಿವ
ಒಡಲುಗೊಂಡ ಹುಸಿವ
ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರಾ!
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾ!

ಈ ಹಸಿವ ತೀವ್ರತೆಯ ಬಿಸಿ ತಟ್ಟಬೇಕಾದುದು ಮನುಷ್ಯನಿಗೆ ಮಾತ್ರವಲ್ಲ ತಾವು ನಂಬಿರುವ ಶಿವನಿಗೂ ಕೂಡ. ಅದಕ್ಕಾಗಿ ಶಿವನನ್ನು ಮನುಷ್ಯನಾಗಿ ಹುಟ್ಟೆಂದು “ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ” ಎಂದು ಆಹ್ವಾನ ನೀಡುವಲ್ಲಿ ಹಸಿವಿನ ಸಮಸ್ಯೆಯ ಸ್ವರೂಪ ವನ್ನು ಮನಗಾಣಬಹುದು.

ಮೇಲ್ಜಾತಿಯ ಬಸವಣ್ಣ-ಚನ್ನಬಸವಣ್ಣನವರಂತೆ ಗುರು ಲಿಂಗ ಜಂಗಮದ ಅತಿಯಾದ ಭಾವತೀವ್ರತೆಯಾಗಲಿ, ಪಂಚಾಚಾರ, ಷಟ್‌ಸ್ಥಲ, ತ್ರಿವಿಧ ದಾಸೋಹದ ಆಕಾಂಕ್ಷೆಯಾಗಲಿ ಕೆಳವರ್ಗದವರಿಗೆ ಅಷ್ಟಾಗಿ ಕಾಡಿಸಿದಂತೆ ಕಾಣುವುದಿಲ್ಲ. ಬದಲಿಗೆ ಅವರ ನಡುವೆ ಕೆಲವು ವೈರುಧ್ಯಗಳು ಕಾಣುತ್ತವೆ. ಅಲ್ಲಮಪ್ರಭು ಮತ್ತು ಅಂಬಿಗರ ಚೌಡಯ್ಯನವರ ಒಂದೆರಡು ವಚನಗಳನ್ನು ಇಲ್ಲಿ ಪರಿಶೀಲಿಸಬಹುದು.

ಅಲ್ಲಮಪ್ರಭು

ಬೆಸ್ತರ ಕುಲದ ಅಲ್ಲಮಪ್ರಭು ಅನುಭವದ ಮಂಟಪದ ಅಧ್ಯಕ್ಷನಾಗಿ ವೈಚಾರಿಕತೆಯನ್ನು ಪ್ರತಿಪಾದಿಸಿದ ದಿಟ್ಟ ಶರಣ. ಒಂದೆಡೆ ಬಸವಣ್ಣ “ಹೊನ್ನು-ಹೆಣ್ಣು-ಮಣ್ಣು ಮಾಯೆ” ಎಂದರೆ ಅದನ್ನು ಅಲ್ಲಗಳೆದ ಅಲ್ಲಮ “ಮನದ ಮುಂದಣ ಆಸೆಯೇ ಮಾಯೆ” ಎಂದು ಕಾರಣ ಗುರುತಿಸಿದ್ದಾನೆ. ಮಹಾ ಮಾನವತಾವಾದಿ ಬುದ್ಧನ ಅಂತಿಮ ಸಂದೇಶವೂ ಇದೆ  ಆಗಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಉಚಿತವೆನಿಸುತ್ತದೆ.

ಲಿಂಗದ ವಿಷಯದಲ್ಲಿ ಅಲ್ಲಮ ನಿಷ್ಠುರವಾದಿಯೇ ಆಗಿದ್ದಾನೆನಿಸುತ್ತದೆ. ಅಂಗದ ಮೇಲಿನ ಲಿಂಗವನ್ನು ಅಲ್ಲಮ ಒಪ್ಪುವುದಿಲ್ಲ. “ಅಂಗದ ಮೇಲೆ ಲಿಂಗ ಸ್ವಾಯತವಾದರೇನು? ಭಕ್ತನಾಗ ಬಲ್ಲನೇ” ಎಂದೆನ್ನುತ್ತಲೇ ಲಿಂಗಪ್ರತಿಷ್ಠೆಯನ್ನು ಕುರಿತು

ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ
ಲಿಂಗ ಪ್ರತಿಷ್ಠೆಯ ಮಾಡಿದವಂಗೆ
ನಾಯಕ ನರಕ ಗುಹೇಶ್ವರ

ಎನ್ನುತ್ತಲೇ ಅಲ್ಲಮನ ಆಲೋಚನೆಗಳು ಪ್ರಶ್ನೆಗಳ ರೂಪದಲ್ಲಿ ಮುಂದುವರೆಯುತ್ತವೆ. ಅಲ್ಲಮ ಈಗ ಗುಹೇಶ್ವರನನ್ನೇ ಕೇಳುತ್ತಾನೆ.

ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆ ಮಾಡುವರಿಗೆ
ಏನ ಹೇಳುವೆನಯ್ಯ?
ಗುಹೇಶ್ವರ, ನೀ ಕಲ್ಲಾದದೆಡೆ ನಾನೊಪ್ಪೇನು?!

ಮನುಷ್ಯರನ್ನು ದೇವರು ಕಾಪಾಡುತ್ತಾನೆನ್ನುವರು ಜನ! ಇನ್ನು ಕಾಪಾಡುವ ದೇವರೆ ಕಲ್ಲಾದರೆ ಆರಾಧಿಸುವ ಭಕ್ತನೇನಾದಾನು? ಇದೊಂದು ತಾರ್ಕಿಕವಾದ ಪ್ರಶ್ನೆಯಂದೇ ನಾನು ಭಾವಿಸುತ್ತೇನೆ. ಈ ಮುಂದಿನ ವಚನವನ್ನು ಗಮನಿಸಿ, ಆಧುನಿಕ ಕಾಲದ ದಿವಂಗತರಾದ ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಬಿ. ಬಸವಲಿಂಗಪ್ಪ ಕೂಡಾ ಈ ರೀತಿಯಾಗಿ ಹೇಳಿರ ಲಾರರು –

ನಾ ದೇವರನಲ್ಲದೆ ನೀ ದೇವನೆ ?
ನೀ ದೇವನಾದರೆ ಎನ್ನನೇಕೆ ಸಲುಹೆ ?
ಆರೈದು ಒಂದು ಕುಡಿತೆ ಉದಕವ ನೆರೆವೆ
ಹಸಿದಾಗ ಒಂದು ತುತ್ತು ಓಗರವನ್ನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ !

ಈ ಲಿಂಗ ಮತ್ತು ದೇವರು ಕುರಿತು ಅಲ್ಲಮ ತಾಳಿದ ನಿಲುವು ಕೊನೆಯಲ್ಲಿ ಮೈತೆಳೆಯು ವುದು ಈ ರೀತಿಯಾಗಿ ­-

ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು
ತೃಷೆಯ ಪ್ರೇಮಕ್ಕೆ ಮಜ್ಜನ ಕರೆವರು
ದೇವರಿಲ್ಲ! ಭಕ್ತರಿಲ್ಲ!
ನಾನೂ ಇಲ್ಲ! ನೀನೂ ಇಲ್ಲ.

ಎಂದು ಹೇಳುವಲ್ಲಿ ಅಲ್ಲಮನ ಧೈರ್ಯವನ್ನು ಮೆಚ್ಚಬೇಕು. ಏನೇ ಮಾಡಿದರೂ ಏನೇ ಸಂಭವಿಸಿದರೆ ದೇವರೇ ಎಂದು ಹೇಳುವ “ಜಗದಗಲ ಮುಗಿಲಗಲ”ದಲ್ಲಿ ಶಿವನನ್ನೇ ಕಾಣುವ ವಚನಕಾರರ ನಡುವೆ ಅಲ್ಲಮ ಈ ರೀತಿಯಾಗಿ ಹೇಳುವುದು ಕ್ರಾಂತಿಕಾರಕ ಆಗಿದೆ. ಬಹುಶಃ ಈಗಿನ ವೈಜ್ಞಾನಿಕ ಯುಗದಲ್ಲಿ ಮಠಾಧಿಪತಿಗಳಿಗೂ ಇಂಥ ನಿಲುವು ಅಸಾಧ್ಯ ಎನಿಸುತ್ತದೆ.

ಇನ್ನು ಇದೇ ರೀತಿಯ ಬಂಡಾಯ ಗುಣದ ಅಂಬಿಗರ ಚೌಡಯ್ಯನಂತೂ ಸರಿಯನಿಸ ಲಾರದ್ದನ್ನು ಪಾದರಕ್ಷೆಯಿಂದ ಹೊಡೆಯೆನ್ನುತ್ತಲೇ ಸಂವಾದಕ್ಕಿಳಿಯುವ ಪರಿಯಂತೂ ಶ್ಲಾಘನೀಯವಾದುದು.

ಅಂಬಿಗರ ಚೌಡಯ್ಯ

ವೈಚಾರಿಕತೆಯಿಲ್ಲದ, ಆಡಂಬರದಿಂದ ಕೂಡಿದ ನಡೆಗಿಂತ ನುಡಿಯೇ ಅಧಿಕವಾಗಿರುವ ನಡವಳಿಕೆಯನ್ನು ಅಂಬಿಗರ ಚೌಡಯ್ಯ ತೀರಾ ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾನೆ. ಕಟ್ಟಿ ಕೊಳ್ಳುವ ಲಿಂಗದ ಪ್ರತಿಷ್ಠೆ ಹೆಚ್ಚಿ ಅದನ್ನು ಕಟ್ಟಿಸಿಕೊಂಡ ಕೆಳಜಾತಿಯ ಜನರು ಮತ್ತೆ ಶೋಷಣೆಗೆ ಒಳಗಾತೊಡಗಿದಾಗ ಸಿಡಿದೇಳುತ್ತಾನೆ. ಏಕೆಂದರೆ ಲಿಂಗದಿಕ್ಷೆ ಕೊಡುವು ದೊಂದನ್ನೇ ಕಾಯಕವನ್ನಾಗಿ ಮಾಡಿಕೊಂಡ ಗುರು-ಜಂಗಮ ವರ್ಗ ವೈದಿಕ ಪುರೋಹಿತರಂತೆ ಕಂಡಾಗ ಚೌಡಯ್ಯ ಕೆರಳುವದನ್ನು ಗಮನಿಸಬಹುದು.

ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ
ಘಿರುಗಿ ಅವನ ಮನೆಯಲ್ಲಿ ಉಣಬಾರದೆಂದು
ಅಕ್ಕಿ ಕಣಕವ ತೆಗೆದುಕೊಂಡು ಹೋಗುವ ಗುರುವಿನ ಕಂಡರೆ
ಕೆಡವಿ ಹಾಕಿ, ಮೂಗನೇ ಕೊಯ್ದು
ಇಟ್ಟಂಗಿಯ ಕಲ್ಲಲೆ ಸಾಸಿವೆಯ ತಿಕ್ಕಿ
ಹಿಟ್ಟನೆ ತಳಿದು, ಮೇಲೆ ಲಿಂಬಿಯ ಹುಳಿಯನೆ ಹಿಂಡಿ
ಪಡುವಣ ಗಾಳಿಗೆ ಹಿಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.

ಗುರು ಎಂದು ಹೇಳಿಕೊಳ್ಳುವ ಈ ಜನ ಕೆಳವರ್ಗದವರನ್ನು ಉದ್ಧರಿಸುತ್ತವೆಯೆಂದು ಮನದಲ್ಲಿ ಆಳವಾಗಿ ಜಾತಿಯತೆಯನ್ನು ಪೋಷಿಸಿಕೊಂಡು ಬರುವುದನ್ನು ಕಂಡು ಸಹಜ ವಾಗಿಯೇ ಕೋಪಗೊಂಡು ಚೌಡಯ್ಯ ಅಂಥವರಿಗೆ ಮುಖವೇ ಇಲ್ಲದಂತಹ ಶಿಕ್ಷೆ ಕೊಡ ಬೇಕೆನ್ನುತ್ತಾನೆ. ಇಂಥವರು ಕಟ್ಟಿದ ಲಿಂಗವನ್ನೇ ಅಪಹಾಸ್ಯಕ್ಕೀಡುಮಾಡುತ್ತಾನೆ. “ಎರಡೂರು ಗ್ರಾಮದ ನಡುವೆ ಕಟ್ಟಿದ ಸೀಮೆಯ ಕಲ್ಲು”  “ಲಿಂಗದವೆಂದಂಬೆನೆ? ಕಲ್ಲುಕುಟಿಗನ ಮಗ” ಎಂದು ವಿಡಂಬಿಸುತ್ತಲೇ ಶರಣ ಸತಿ-ಲಿಂಗ ಪತಿ ಎನ್ನುವ ನಿಷ್ಠೆಯನ್ನು ಎಲ್ಲರೂ ಒಪ್ಪಿಕೊಂಡಿ ರುವುದನ್ನು ವಸ್ತುನಿಷ್ಠವಾಗಿ ವಿರೋಧಿಸುತ್ತಾನೆ.

ಶರಣ ಸತಿ ಲಿಂಗ ಪತಿ ಎಂಬರು
ಶರಣ ಹೆಣ್ಣಾದ ಪರಿ ಇನ್ನೆಂತು
ಲಿಂಗ ಗಂಡಾದ ಪರಿ ಇನ್ನೆಂತು
ನೀರು ನೀರ ಕೂಡಿ ಬೆರೆದಲ್ಲಿ ಭೇದಿಸಿ ಬೇರೆ ಮಾಡಬಹುದೋ?

ಎಂದು ಅದನ್ನು ಮೊದಲಿಗೆ ಮೋಸ ಎನ್ನುವುದನ್ನು ಗಮನಿಸಬೇಕು. ವಿಶೇಷವಾಗಿ ಶರಣರೆಲ್ಲ ಸತಿಯನ್ನುಳ್ಳುವರು. ಅವರೇಕೆ ಲಿಂಗಕ್ಕೆ ಸತಿಯಾಗುತ್ತಾರೆ ಎಂದು ಭೌತಿಕ ಪ್ರಶ್ನೆ ಎತ್ತು ವುದರಲ್ಲಿ ಜನಪರ ಚಿಂತನೆಯಿದೆ ಎನ್ನಿಸುತ್ತದೆ.

ಬಹುತೇಕ ಶರಣರು ಮಾಡುವ ಲಿಂಗ ಪೂಜೆಯ ಪದ್ಧತಿಯನ್ನು ವಿರೋಧಿಸುವ ಚೌಡಯ್ಯ ಅದನ್ನು ತನ್ನದೇ ಆದ ಹೊಸ ಸಿದ್ಧಾಂತದಿಂದ ಮಂಡಿಸುತ್ತಾನೆ. ಲಿಂಗದ ಮೇಲೆ  ಮೊಟ್ಟೆ ಮೊಟ್ಟೆ ಪತ್ರೆಯ ಹರಿದು ತಂದೊಟ್ಟುವವರನ್ನು “ನೀವು ಗಿಡದ ವೈರಿಗಳೋ? ಗಿಡದ ದಾಯಾದ್ಯಾರೋ”! ಎಂದು ಅಂಥವರಿಗೆ ನೀಡುವ ಸಂದೇಶವು ಹೀಗಿದೆ.

ಹಸಿರು ತಪ್ಪಲನೆ ತಂದು ಪಶುಪತಿ ಎಂಬ ಲಿಂಗದ
ಮಸ್ತಕದ ಮೇಲೆ ಏರಿಸಿದೆಡೆ
ಆ ಲಿಂಗದ ಹಸಿವು ಹೋಯಿತ್ತೆ! ಇಲ್ಲ;
ಹಸಿರು ತೊಪ್ಪಲನೆ ತಂದು ಬಿಸಿಮಾಡಿ ಪಶುಪತಿ ಎಂಬ ಜಂಗಮಕ್ಕೆ
ನೀಡಿದೆಡೆ-ಜಂಗಮದ ಹಸಿವು ಹಿಂಗಿತ್ತು;
ಜಂಗಮದ ಬಸಿರು ತುಂಬಿದಾಗಲೇ
ಲಿಂಗದ ಹಸಿವು ಹೋಯಿತ್ತೆಂದನಂಬಿಗರ ಚೌಡಯ್ಯ.

ವಿಶೇಷವಾಗಿ ಕೆಳವರ್ಗದ ವಚನಕಾರರಿಗೆ ಕಾಡಿರುವ ಹಲವು ಸಮಸ್ಯೆಗಳಲ್ಲಿ ಹಸಿವಿನದೇ ಪ್ರಮುಖ ಸಮಸ್ಯೆಯಾಗಿರುವುದನ್ನು ಕಾಣುತ್ತೇವೆ. ಹಸಿವಿನಿಂದ ಕಂಗಾಲಾದ ಇಡೀ ಜಗತ್ತಿನ ಬಡಜನತೆಯ ಸಮಸ್ಯೆಯೇ ಇವರನ್ನು ಕಾಡಿರುವುದು ಮಾನವತ್ವದ ಸಂವೇದನೆಯೇ ಆಗಿದೆ.

ಗೊಗ್ಗವ್ವೆ

ಗೊಗ್ಗವ್ವೆಯ ವಚನಗಳೆರಡನ್ನು ಪರಿಶೀಲಿಸಿ ಈ ಉಪನ್ಯಾಸವನ್ನು ಮುಗಿಸಬಯ ಸುತ್ತೇನೆ. ವೈದಿಕ ಸಂಸ್ಕೃತಿಯಲ್ಲಿ ಶೂದ್ರನಿಗಿಂತ ಅತೀ ಕೀಳಾಗಿ ಪರಿಗಣಿಸಲ್ಪಟ್ಟಿದ್ದ ಹೆಣ್ಣು ವಚನ ಚಳುವಳಿಯ ಫಲವಾಗಿ ಸೈದ್ಧಾಂತಿಕ ವಿವೇಚನೆಗಿಳಿದಳು. ಅಷ್ಟೇ ಅಲ್ಲ ಪ್ರತಿಭಟ ನಾತ್ಮಕ ಪ್ರಶ್ನೆಗಳೆನ್ನೆತ್ತುವುದನ್ನೂ ರೂಢಿಸಿಕೊಂಡಳು. ಇದನ್ನು ವಚನ ಚಳುವಳಿಯ ಸಾಧನೆಯ ಫಲವೆಂದೇ ಹೇಳಬೇಕು.

ಹೆಣ್ಣು ಪುರುಷನಿಗಿಂತ ಕೀಳೆನ್ನುವುದಕ್ಕೆ ದೈಹಿಕ ಆಧಾರವೊಂದನ್ನು ಬಿಟ್ಟರೆ ಯಾವ ಆಧಾರಗಳು ವೈಜ್ಞಾನಿಕವಲ್ಲವೆಂದು ಗೊಗ್ಗವ್ವೆ ಕೇಳುವ ಪರಿ ಹೀಗಿದೆ.

ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು
ಮೀಸೆ ಕಾಸೆ ಬಂದೆಡೆ ಗಂಡೆಂಬರು
ಈ ಉಭಯದ ಜ್ಞಾನ
ಹೆಣ್ಣೊ ಗಂಡೊ ನಾಸ್ತಿನಾಥಾ?

ಇಲ್ಲಿಯ ಮೇಲಿನ ಪ್ರಶ್ನೆಗಿಂತ ಗೊಗ್ಗವ್ವೆ ಪುರುಷ ವರ್ಗಕ್ಕೆ ಕೇಳುವ ಪ್ರಶ್ನೆ ಮೂಲಭೂತ ವಾದದ್ದು ಈ ಕೆಳಗಿನ ವಚನದಲ್ಲಿದೆ.

ಗಂಡು ಮೋಹಿಸಿ ಹೆಣ್ಣು ಹಿಡಿದೆಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡು ಹಿಡಿದೆಡೆ
ಉತ್ತರವಾವುದೆಂದರಿಯಬೇಕು?

ಕಾಲಾನುಕಾಲದಿಂದ ಹೆಣ್ಣು ಪುರುಷನ ಅಡಿಯಾಳಾಗಿ, ಆಸ್ತಿಯಾಗಿ, ಹೆರುವ ಪ್ರಾಣಿ ಯಾಗಿ ರೂಪಿತಗೊಂಡಿರುವಳೇ ವಿನಃ ಸಮಾನವಾಗಿ ಪರಿಗಣಿಸಲ್ಪಡಲಿಲ್ಲ. ಈಗ ಪ್ರಜ್ಞೆ ನಿಚ್ಚಳವಾದಾಗ ಅದೇ ಗಂಡು ಹೆಣ್ಣಿನ ಒಡವೆಯಾಗಲು ಸಿದ್ಧವೆ? ಇಲ್ಲಿ ಗೊಗ್ಗವ್ವೆ ಹೇಳುತ್ತಾಳೆ ಯಾರಿಗೆ ಯಾರು ಅಡಿಯಾಳಾಗದೇ “ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿ ನಾಥನು ಪರಿಪೂರ್ಣ” ಎಂದೆನ್ನುತ್ತಾಳೆ.

ಹೀಗೆ ಅಸಮಾನತೆಯ ಸಮಾಜವನ್ನು ವ್ಯವಸ್ಥಿತವಾಗಿ ಕಟ್ಟುವ ಸದುದ್ಧೇಶದಿಂದ ಹುಟ್ಟಿ ಕೊಂಡ ಚಳುವಳಿಯಲ್ಲಿ ಉಳಿದುಕೊಂಡ ಪ್ರತಿಗಾಮಿ ಮೌಲ್ಯಗಳನ್ನು ಕೆಳವರ್ಗದ ವಚನಕಾರರು ತಮ್ಮವರನ್ನೇ ಪ್ರತಿಭಟಿಸಿ ಕೇಳುವ, ಪ್ರಶ್ನಿಸಿ ನಿಲ್ಲಿಸುವ ಪರಿ ಈ ಚಳುವಳಿಗೆ ಹೊಸ ಕಸುವು ತಂದುಕೊಟ್ಟಿರುವುದು ನಿಚ್ಚಳ ಸತ್ಯವಾಗಿದೆ. ಇದೊಂದು ಪ್ರಾತಿನಿಧಿಕ ಅಲೋಚನೆಯಾಗಿದ್ದು ಪರಿಪೂರ್ಣ ಪರಿಶೀಲನೆಗೆ ಇಳಿದಿಲ್ಲವೆಂಬುದನ್ನು ಹೇಳಬಯ ಸುತ್ತೇನೆ.

ಉಪಸಂಹಾರ

ಶರಣ ಚಳುವಳಿಯಲ್ಲಿಯ ಗಮನಾರ್ಹ ಅಂಶಗಳೇನೆಂದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆ. ಈ ಮೂರು ಅಂಶಗಳು ಬೌದ್ಧ ಧರ್ಮದಲ್ಲಿ ಪ್ರಧಾನವಾಗಿ ಕಾಣಿಸಿ ಕೊಂಡಿದ್ದರೂ ಕ್ರಮೇಣ ಬೌದ್ಧ ಧರ್ಮ ನಶಿಸಿದಂತೆ ಈ ಅಂಶಗಳು ಕೂಡಾ ಜನಮನದ ಸ್ಮೃತಿಪಟಲದಿಂದ ಅಳಿಸಿ ಹೋದವು. ಹೀಗೆ ಅಳಿಸಿಹೋದ ಇವು ಮತ್ತೇ ಪುನರುಜ್ಜೀವನ ಪಡೆದುಕೊಂಡದ್ದು ಬಸವಣ್ಣನವರ ಕಾಲದಲ್ಲಿ ಎಂದು ನಿಸ್ಸಂದೇಹವಾಗಿ ಹೇಳಬಹುದು. ಈ ಸಾಧ್ಯತೆ ಸಾಕಾರಗೊಂಡದ್ದು ತಳವರ್ಗದಿಂದ ಬಂದಂತಹ ಬಹುತೇಕ ಶಿವಶರಣರಿಂದ ಎಂಬುದನ್ನು ನಾವು ಮರೆಯಬಾರದು. ತಳವರ್ಗದಿಂದ ಬಂದಿರುವ ಅನೇಕ ಶಿವಶರಣರು ಮೇಲುಜಾತಿಯ ಶರಣರ ಅನೇಕ ಸಾಂಪ್ರದಾಯಿಕ ವಿಚಾರಗಳನ್ನು ತಿದ್ದಿದಂತೆ ತೋರುತ್ತದೆ. ಈ ನಿಟ್ಟಿನಲ್ಲಿ ಕೆಳವರ್ಗದ ಶರಣರು ಯಾವುದೇ ಮುಲಾಜಿಗೆ ಒಳಗಾದಂತೆ ತೋರುವುದಿಲ್ಲ. ಏಕೆಂದರೆ ಅವರು ತಮ್ಮ ಕುಲವೃತ್ತಿ ಮತ್ತು ಜಾತಿಯನ್ನು ಕೀಳೆಂದು ಪರಿಗಣಿಸಿಕೊಂಡಿಲ್ಲ ಬದಲಾಗಿ ಜಾತಿ ಅಂಕಿತವನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡು ಸ್ವಾಭಿಮಾನವನ್ನು ಮೆರೆದ್ದಾರೆ.

ತಮ್ಮ ಆಹಾರ ಕ್ರಮವನ್ನು ಬಸವಣ್ಣಾದಿಯಾಗಿ ಮೇಲ್ಜಾತಿಯ ಕೆಲ ಶಿವಶರಣರು ಆಕ್ಷೇಪಿಸಿದಾಗಲೂ ಅಸ್ಪೃಶ್ಯ ವರ್ಗದ ಶಿವಶರಣರು ನೇರವಾಗಿ ಬಸವಣ್ಣನವರ ಸಾಂಪ್ರದಾಯಿಕ ದೃಷ್ಟಿಕೋನವನ್ನು “ಶಿವಗೆ ಪಂಚಾಮೃತ ಕರೆವ ಪಶುವ ತಿಂಬ ಮಾದಿಗ ಅದ್ಹೇಗೆ ಕೀಳಾದವನು?” ಎಂದು ಪ್ರಶ್ನಿಸಿದ್ದಾರೆ.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ಹೇಳಿದ ಬಸವಣ್ಣ ಮತ್ತು ಮೇಲ್ಜಾತಿ ಶಿವಶರಣರು ಕೇವಲ ಲಿಂಗದೀಕ್ಷೆಗೆ ಗಂಟುಬಿದ್ದಾಗ ಮಡಿವಾಳ ಮಾಚಯ್ಯ “ಹೊಲೆ ಮಾದಿಗ ಭಕ್ತರಾದೊಡೆ ಕಂಡು ಗಣಂಗಳು ಹಿಗ್ಗುವರಲ್ಲದೇ ಅವರ ಮನೆಯಲ್ಲಿ ಲಿಂಗಾರ್ಚನೆ ಮಾಡರು” ಎಂದು ಕಟುವಾಗಿ ಖಂಡಿಸಿದ್ದನ್ನು ಕಂಡರೆ ವೀರಶೈವ ಜಂಗಮರು ಬಸವಣ್ಣನಂತೆ “ವಿಪ್ರಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೊಂದೇ ಎಂಬೆ” ದೃಷ್ಟಿಕೋನದಿಂದ ನೋಡಲಿಲ್ಲ. ತಳವರ್ಗದ ಶಿವಶರಣರ ಅನನ್ಯ ಕೊಡುಗೆಯ ನಡುವೆಯು ಲಿಂಗಾಯಿತ ಧರ್ಮವು ನಂತರದಲ್ಲಿ ಅನೇಕ ಅನಾಹುತಗಳನ್ನು ಸೃಷ್ಟಿಸಿಕೊಂಡಿದೆ. ಇದನ್ನೇ ಪ್ರೊ. ಮಹೇಶ ತಿಪ್ಪಶೆಟ್ಟಿ ಅವರ ಮಾತಿನಲ್ಲಿ ಹೇಳುವುದಾದರೆ……“ವೀರಶೈವರು ಇಂದು ದಲಿತ ಶಬ್ದದ ಬಗ್ಗೆ ಮಡಿಮನೋಭಾವ ಬೆಳೆಸಿಕೊಂಡಿದ್ದಾರೆ. ಬಂಡಾಯ ಸ್ಥಿರೀಕರಣಗೊಂಡಾಗ ಎಂತಹ ದುರಂತ ಜರಗುತ್ತದೆ ಎಂಬುದನ್ನು ವೀರಶೈವ ಮಠಗಳ ಕ್ರಿಯಾಚರಣೆಯ ಹಿನ್ನೆಲೆಯಲ್ಲಿ ಅವಲೋಕಿಸಬಹುದು. ಬಸವೋತ್ತರ ಯುಗದ ಈ ಎಂಟು ಶತಮಾನದಲ್ಲಿ ವೀರಶೈವರು ಸಾಕಷ್ಟು ಸಂಸ್ಕೃತೀಕರಣಗೊಂಡಿದ್ದಾರೆ. ಬಸವತತ್ವದ ವಿರುದ್ಧವೇ ಈ ಮತ ರೂಪಗೊಂಡದ್ದು ಚರಿತ್ರೆಯ ದುರಂತವಾಗಿದೆ.”

ಹೀಗಾಗಿ ಮೇಲ್ಜಾತಿ ವೀರಶೈವರು ಬಸವಣ್ಣನವರು ಪ್ರಾರಂಭಿಸಿದ ಬಹು ಜನ ಸಮಾಜ ಚಳುವಳಿಯ ಬೆಳವಣಿಗೆಗೆ ಸಹಕರಿಸಲಿಲ್ಲವೆಂದೇ ಹೇಳಬೇಕಾಗುತ್ತದೆ. ಹೀಗಾಗಿ ಆ ಪ್ರಗತಿಪರ ಚಳುವಳಿ ಆಧುನಿಕ ಕಾಲದಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಬರುವವರೆಗೆ ಕಾಯಬೇಕಾಯಿತು.

 

ಗ್ರಂಥ ಋಣ

೧. ಪ್ರೊ. ಬಸವನಾಳ ಎಸ್.ಎಸ್., ಶ್ರೀ ಬಸವಣ್ಣನವರ ಹೆಚ್ಚಿಗೆ ದೊರೆತ ವಚನಗಳು, ಲಿಂಗಾಯಿತ ಅಭಿವೃದ್ದಿ ಸಂಸ್ಥೆ, ಧಾರವಾಡ-೧೯೬೭.

೨. ಡಾ.ಎಚ್. ತಿಪ್ಪೆರುದ್ರಸ್ವಾಮಿ, ಶರಣರ ಅನುಭಾವ ಸಾಹಿತ್ಯ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು-೧೯೬೩.

೩. ಡಾ.ಮ.ನ. ಜವರಯ್ಯ, ದಲಿತ ವರ್ಗದ ಶಿವಶರಣರುಒಂದು ಅಧ್ಯಯನ, ಸಿದ್ಧಾರ್ಥ ಗ್ರಂಥಮಾಲೆ, ಮೈಸೂರು-೧೯೯೦.

೪. ಡಾ.ಎಂ.ಎಂ. ಕಲಬುರ್ಗಿ (ಸಂ)ಬಸವಣ್ಣನವರ ವಚನ ಸಂಪುಟ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು-೧೯೯೫.

೫. ಡಾ. ಎಂ.ಬಿ. ಹೂಗಾರ, ಶರಣರ ಅಂದೋಲನ ಹಾಗೂ ಹೊಸ ಸಮಾಜದ ರಚನೆ ವಿಮೋಚನಾ, ಅಥಣಿ-೧೯೯೫.

೬. ಡಾ.ಪಿ.ವಿ. ನಾರಾಯಣ, ವಚನ ನಿರ್ವಚನ. ಪುಸ್ತಕಾಲಯ ಪ್ರಕಾಶರು, ಮೈಸೂರು- ೧೯೯೦.

೭. ವಿವಿಧ ಲೇಖಕರು, ಬಸವಣ್ಣನವರ ವ್ಯಕ್ತಿತ್ವ ಮತ್ತು ಜೀವನ ಸಿದ್ದಿ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೧೯೬೭

೮. ವಿವಿಧ ಲೇಖಕರು, ಕನ್ನಡ ಸಾಹಿತ್ಯದಲ್ಲಿ ಅಸ್ಪೃಶ್ಯತೆಯ ಪರಿಕಲ್ಪನೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು-೧೯೯೩.

೯. ಡಾ. ಆರ್.ಸಿ. ಹಿರೇಮಠ, ಇಪ್ಪತ್ತೇಳು ಶಿವಗಶರಣೆಯರ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೧೯೬೮.

೧೦. ಡಾ. ಹಿರೆಮಲ್ಲೂರು ಈಶ್ವರನ್, ಬಸವಣ್ಣ ಹಾಗೂ ಲಿಂಗಾಯತ ಧರ್ಮ, ಪ್ರಿಯದರ್ಶನಿ ಪ್ರಕಾಶನ, ಬೆಂಗಳೂರು-೧೯೯೭

೧೧. ಪ್ರೊ. ವೈ.ಬಿ. ಹಿಮ್ಮಡಿ, ಚನ್ನಬಸವಣ್ಣ ಮತ್ತು ಬಂಡಾಯ ಪ್ರಜ್ಞೆ, ಸಂಘರ್ಷ ಸಾಹಿತ್ಯ ಕೂಟ, ರಾಯಭಾಗ-೧೯೯೩.

೧೨. ಬಿ.ಎಂ. ಪುಟ್ಟಯ್ಯ, ಕಾಲ್ನಡಿಗೆ. ಕನ್ನಡ ಸಂಘ, ಕ್ರೈಸ್ಟ ಕಾಲೇಜು, ಬೆಂಗಳೂರು- ೧೯೯೭.

೧೩. ಡಾ. ಬಸವರಾಜ ಸಬರದ, ಬಸವೇಶ್ವರ ಮತ್ತು ಪುರಂದದಾಸರು, ತರಳುಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ-೧೯೯೩.

೧೪. Prof. Basavnal. S.S.& K.R. Shrinivas lyengar Musings of  Basava Lingayat Education Association Dharwad-೧೯೪೦.

೧೫. Dr.K.R. Basavaj, Basveshwar-His Life, Vision and Work Someshwar Publication, Dharwad-೨೦೦೧.

೧೬. Dr. P.B. Desai , Basaveshwar and His Times. K.R.I. Dharwad ೧೯೬೮.

೧೭. Dr.B.R. Kamble, Caste and Philosophy in Pre Buddhist India, Parimal Prakashana, Delhi-೧೯೭೬.

೧೮. S.C. Nandimath , A Hand Book of Veershaivism Mothilal Banarasi Das New Delhi-೧೯೭೯.

೧೯. Dr. C.R. Yaravinatelimath, The Caste Eradication Vachanas of  Shri Basaveshwar, Institute of Kannada Studies, K.U. Dharwad.

 

ಲೇಖನಗಳು

೧. ಮಹೇಶ ತಿಪ್ಪಶೆಟ್ಟಿ, ದಲಿತ ಹಾಗೂ ವೀರಶೈವ-ಒಂದು ವಿಶ್ಲೇಷಣೆ, ಕರ್ನಾಟಕ ಭಾರತಿ-೧೯೯೫.

೨. ಬಿ. ರಾಜಶೇಖರ, ಬಸವಣ್ಣನವರ ಒಂದು ವಚನ-ಪುನರ್ ಪರಿಶೀಲನೆ, ಸಂಕ್ರಮಣ, ಮಾರ್ಚ್-೧೯೯೬.

೩. ಡಾ. ಬಸವಲಿಂಗಪ್ಪ ಸೊಪ್ಪಿಮಠ, ವಚನಗಳ ದೂರ್ವಾನಯ ಸಂಕ್ರಮಣ, ಎಪ್ರಿಲ್ ೧೯೯೬.

೪. ಡಾ. ಎಸ್.ಎಸ್. ಹಿರೇಮಠ, ಶರಣ ಚಳುವಳಿಯ ನಿಜಸ್ವರೂಪ, ಸಂಕ್ರಮಣ, ಮಾರ್ಚ್-೧೯೯೩.

೫. ನೀಲಗಂಗಯ್ಯ ಪೂಜಾರ್, ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಭಿನ್ನವಾದ ಪ್ರತ್ಯೇಕ ಧರ್ಮವೇ?, ಸಂಕ್ರಮಣ, ಎಪ್ರಿಲ್-೧೯೯೪.