ಬಸವತತ್ವ; ಹಾಗೆಂದರೇನು?

ಬಸವಣ್ಣನ ಕುರಿತು ಕರ್ನಾಟಕ ಸಮಾಜವು ಕಟ್ಟಿಕೊಂಡಿರುವ ಚಿತ್ರಗಳು ಎರಡು  ಸಂಗತಿಗಳನ್ನು ಆಧರಿಸಿವೆ. ಒಂದು-ಅವನ ವಚನಗಳನ್ನು; ಎರಡು-ಬಸವಣ್ಣನನ್ನು ಕುರಿತು ಇತರರು ಮಂಡಿಸಿರುವ ವ್ಯಾಖ್ಯಾನಗಳನ್ನು. ಈ ವ್ಯಾಖ್ಯಾನಗಳು ಅಲ್ಲಮಪ್ರಭು, ಹರಿಹರ ಶೂನ್ಯ ಸಂಪಾದನೆಕಾರರಿಂದ ಹಿಡಿದು ಮಂಟೇಸ್ವಾಮಿ ಕಾವ್ಯ, ಹಳಕಟ್ಟಿ, ಎ.ಕೆ. ರಾಮಾನು ಜನ್, ಲಂಕೇಶರವರೆಗೆ ಕಳೆದ ೮೦೦ ವರುಷಗಳಿಂದ ಸೃಷ್ಟಿಯಾದವು. ಎಲ್ಲರೂ ತಮ್ಮ ತಮ್ಮ ತಿಳಿವಿನ ಚಿತ್ರವನ್ನು ರಚಿಸಿದವರು. ಹೀಗಾಗಿ ಬಸವಣ್ಣ ಹಾಗೂ ಬಸವತತ್ವ ಎಂದರೆ ಏಕರೂಪಿ ಗ್ರಹಿಕೆ ಸಿಗುವುದಿಲ್ಲ. ಬಹುರೂಪಿ ಗ್ರಹಿಕೆ ಸಿಗುತ್ತವೆ.

ಇಂತಹ ಬಹುರೂಪಿ ಚಿತ್ರಗಳಿಗೆ ಮೊದಲ ಕಾರಣ ಸ್ವತಃ ಬಸವಣ್ಣನ ವಚನಗಳೆ. ಕಾರ್ಲ್‌ಮಾರ್ಕ್ಸ್ ಅಥವಾ ಯಾವುದೇ ತತ್ವಜ್ಞಾನಿಯಂತೆ ಬಸವಣ್ಣ ತನ್ನ ಚಿಂತನೆಯನ್ನು ತರ್ಕಬದ್ಧವಾಗಿ ವೈಜ್ಞಾನಿಕವಾಗಿ ಮಂಡಿಸಲಿಲ್ಲ. ತಾನೊಬ್ಬ ಸಾಮಾಜಿಕ ಧಾರ್ಮಿಕ ಚಳುವಳಿಗಾರನಾಗಿ, ಒಬ್ಬ ಕವಿಯಾಗಿ ವಚನಗಳನ್ನು ರಚಿಸಿದ. ಈ ವಚನಗಳು, ಕಲ್ಯಾಣದ ಅವನ ಬದುಕಿನ ವಿಭಿನ್ನ ಸಂದರ್ಭಗಳಲ್ಲಿ, ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ರಚನೆ ಯಾದವು. ತಪ್ಪು  ಮಾಡುತ್ತ ತನ್ನ ಸಂಗಾತಿಗಳಿಂದ ಕಲಿಯುತ್ತ ಬೆಳೆದ ವಿನಯವಂತಿಕೆ ಇರುವ ಬಸವಣ್ಣನ ಬೆಳವಣಿಗೆಯ ಭಾಗವಾಗಿ ಹುಟ್ಟಿದವು. ಹೀಗಾಗಿ ಅವುಗಳಲ್ಲಿ ಇರುವುದು ತತ್ವಶಾಸ್ತ್ರದ ಕೃತಿಯಲ್ಲ, ಆದಿಯಿಂದ ತುದಿತನಕ ಇರುವಂತಹ ಸುಸಂಬದ್ಧವಾದ ಚಿಂತನೆ ಯಲ್ಲ. ಅವುಗಳಲ್ಲಿ ಪರಸ್ಪರ ಭಿನ್ನದನಿಗಳಿವೆ. ವೈರುಧ್ಯಗಳಿವೆ.

ಬಸವಣ್ಣನ ಮೇಲೆ ಬಹುರೂಪಿ ಚಿತ್ರಗಳು ಸಿಗಲು ಇನ್ನೊಂದು ಕಾರಣ- ನಮ್ಮ ಜಾತಿ ಸಮಾಜದ ವಿಚಿತ್ರ ಪರಿಸ್ಥಿತಿ. ಬಸವಣ್ಣನನ್ನು ಕುರಿತು ನಮ್ಮ ತಿಳಿವಳಿಕೆಯು ಕೇವಲ ಅವನ ವಚನಗಳ ಶೈಕ್ಷಣಿಕ ಓದಿನಿಂದ ಬಂದಿದ್ದಲ್ಲ. ಸಮಾಜದೊಂದಿಗೆ ಸೆಣಸಾಡುತ್ತ, ಈ ಹೋರಾಟದಲ್ಲಿ ಬಸವಣ್ಣನನ್ನು ಬಳಸುತ್ತ ಪಡೆದುಕೊಂಡದ್ದು. ನಮ್ಮ ಸಮಾಜದಲ್ಲಿ ಜಾತಿಪದ್ಧತಿ ವೈದಿಕಶಾಹಿ ಅಸ್ಪೃಶ್ಯತೆ ಇವೆಲ್ಲ ಇರದಿದ್ದರೆ, ಬಸವಣ್ಣ ಈಗಿನಷ್ಟು ಮುಖ್ಯ ವಾಗುತ್ತಿದ್ದನೇ ಎಂಬ ಪ್ರಶ್ನೆ ಕೇಳಿಕೊಂಡರೆ, ಇದು ಗೊತ್ತಾಗುತ್ತದೆ. ಯಾವತ್ತೂ, ಚರಿತ್ರೆ ವರ್ತಮಾನಕ್ಕೆ ಮುಖ್ಯವಾಗುವುದು ಚರಿತ್ರೆಯಾಗಿ ಅಲ್ಲ. ವರ್ತಮಾನವನ್ನು ಅರ್ಥಮಾಡಿ ಕೊಳ್ಳಲು, ವರ್ತಮಾನವನ್ನು ನಮಗೆ ಬೇಕಾದಂತೆ ರೂಪಿಸಿಕೊಂಡು ಬದುಕಲು.

ಹೀಗಾಗಿ ಬಸವಣ್ಣ-ಬಸವತತ್ವ ಎಂಬ ಕುರಿತು ಏಕರೂಪಿಯಾದ ಚಿತ್ರವನ್ನು ಕಾಣಲು ಸಾಧ್ಯವಿಲ್ಲ. ಅದರಲ್ಲೂ ನಮ್ಮ ಸಮಾಜದ ಬೇರೆ ಬೇರೆ ಸ್ತರದವರು ಕಟ್ಟಿಕೊಳ್ಳುವ ಚಿತ್ರಗಳು ಸಹಜವಾಗಿ ಭಿನ್ನವಾಗಿವೆ. ಜತೆಗೆ ಬಸವತತ್ವ ಎಂಬ ಹೆಸರಲ್ಲಿ ನಾವು ಕಟ್ಟಿಕೊಳ್ಳುವ ತಿಳಿವಳಿಕೆ ಯಲ್ಲಿ ಕೇವಲ ಬಸವಣ್ಣ ಮಾತ್ರ ಇರುವುದಿಲ್ಲ. ೧೨ನೇ ಶತಮಾನದ ಅವನ ಸಂಗಾತಿಗಳ ಸಮೂಹವೇ ಇರುತ್ತದೆ. ಬಸವಣ್ಣ ತನ್ನ ತತ್ವವನ್ನು ಸಾಮೂಹಿಕ ಚಳುವಳಿಯಲ್ಲಿ ಪಡೆದು ಕೊಂಡವನು. ಅವನು ತನ್ನ ಅಕ್ಕಪಕ್ಕದ ಪರಿಸರದಿಂದ ಬೆಳೆದವನು ಎಂಬುದನ್ನು ಅವನ ವಚನಗಳು ಅವನ ಸಂಗಾತಿಗಳ ವಚನಗಳೂ ಅವನ ಮೇಲೆ ಬಂದ ಕೃತಿಗಳೂ ಸ್ಪಷ್ಟವಾಗಿ ಸೂಚಿಸುತ್ತವೆ. ಹೀಗಾಗಿ ವಚನಕಾರರಲ್ಲಿ ಬಸವಣ್ಣನನ್ನೇ ಬೇರೆಮಾಡಿ ‘ಇದು ಅವನ ತತ್ವ’ ಎಂದು ಕರೆಯುವುದೇ ಸರಳೀಕರಣ. ಕಳೆದ ಒಂದು ಸಾವಿರ ವರ್ಷಗಳ ಕನ್ನಡ ಸಾಹಿತ್ಯದಲ್ಲಿ ಬಸವಣ್ಣನೂ ೧೨ನೇ ಶತಮಾನವೂ ಯಾಕೆ ಇಷ್ಟು ಕಾಡುತ್ತಿದೆ. ಬಸವಣ್ಣ ಸಾಹಿತ್ಯಿಕವಾಗಿ ಪಂಪನಿಗಿಂತ, ಧಾರ್ಮಿಕವಾಗಿ ಮಧ್ವಾಚಾರ್ಯನಿಗಿಂತಲೂ ಯಾಕೆ ಹೆಚ್ಚು ಚರ್ಚೆಗೊಳ ಗಾಗುತ್ತಿದ್ದಾನೆ? ಇದಕ್ಕೆ ಉತ್ತರ ಸರಳವಾಗಿದೆ. ಬಸವಣ್ಣ ಕೇವಲ ಕವಿ ಅಥವಾ ಫಿಲಾಸಫರ್ ಆಗಿರಲಿಲ್ಲ. ನಮ್ಮ ಸಮಾಜದ ಮೂಲಭೂತ ಪ್ರಶ್ನೆಗಳಿಗೆ ಕೈಹಾಕಿದ ಚಳುವಳಿಗಾರ ನಾಗಿದ್ದವನು; ಸಮೂಹದಲ್ಲಿ ಬೆಳೆದ, ಸಂಗಾತಿಗಳ ಟೀಕೆ ವಿಮರ್ಶೆಗಳಿಂದ ರೂಪಿಸಲ್ಪಟ್ಟ ವ್ಯಕ್ತಿತ್ವದವನಾಗಿದ್ದವನು. ಅವನಿಗೆ ತನ್ನ ಮಿತಿಗಳನ್ನು ಒಪ್ಪಿಕೊಳ್ಳುವ ತನ್ನನ್ನು ತಿದ್ದಿಕೊಳ್ಳುವ ದೊಡ್ಡತನವಿತ್ತು. ಅವನಿಗೆ ಬ್ರಾಹ್ಮಣನಾಗಿ, ಗಂಡಸಾಗಿ, ಅಧಿಕಾರಸ್ಥನಾಗಿ ಅಹಂಕಾರಿ ಯಾಗುವ ಎಲ್ಲ ಅವಕಾಶಗಳಿದ್ದವು. ಆದರೆ ಅವುಗಳಿಂದ ತಪ್ಪಿಸಿಕೊಂಡು ದಲಿತನಾಗಲು, ಹೆಣ್ಣಾಗಲು, ಸಾಮಾನ್ಯನಾಗಲು ಅವನು ಪ್ರಾಮಾಣಿಕವಾಗಿ ಯತ್ನಿಸಿದ. ಬಸವಣ್ಣನನ್ನು ಏಕವಚನದಲ್ಲಿ ಕರೆಯುವುದು ಕೂಡ, ಅವನೊಬ್ಬ ನಮ್ಮಂತಹ ಮನುಷ್ಯನೆಂಬ ಪ್ರೀತಿ ಯಿಂದಲೆ ಇರಬೇಕು.

ಬಸವತತ್ವದ ಸ್ವರೂಪ ಈ ವಿವರಣೆಯಲ್ಲಿದೆ. ಆದರೂ ಸೂತ್ರರೂಪದಲ್ಲಿ ಬಸವತತ್ವ ಎಂದರೇನು ಎಂದು ಕೇಳಿದರೆ, “ಅಧಿಕಾರಸ್ಥ ಶಕ್ತಿಗಳ ವಿರುದ್ಧ, ಅಧಿಕಾರರಹಿತರ ಪರವಾಗಿ ಮಾಡಿದ ಚಿಂತನೆ ಮತ್ತು ಸಾಮೂಹಿಕ ಹೋರಾಟ” ಎಂದು ಸರಳವಾಗಿ ಹೇಳಬಹುದು. ಈ ಹೋರಾಟ ಮತ್ತು ಚಿಂತನೆ ಕರ್ನಾಟಕದ ಚಾರಿತ್ರಿಕ ಸಂದರ್ಭದಲ್ಲಿ ಅತ್ಯಂತ ಕ್ರಾಂತಿಕಾರಿ ಯಾಗಿತ್ತು. ಮಾನವೀಯವಾಗಿತ್ತು. ಅಭೂತಪೂರ್ವ ಪ್ರಯೋಗವಾಗಿತ್ತು. ತನ್ನ ಎಲ್ಲ ಮಿತಿ ಗಳೊಂದಿಗೆ ಅವರಲ್ಲಿ ಸಮಾಜವನ್ನು ಮುಂದಕ್ಕೆ ಒಯ್ಯುವ ಆದರ್ಶಗಳಿದ್ದವು. ಅದು ತನ್ನ ಕಾಲದಲ್ಲಿ ಸೋಲನ್ನೂ ದುರಂತವನ್ನೂ ಕಂಡಿರಬಹುದು. ಆದರೆ ತನ್ನ ಆದರ್ಶ ಹಾಗೂ ಪ್ರಯತ್ನಗಳಿಂದ ಮುಂದಿನ ಮತ್ತೆಮತ್ತೆ ಕಾಡುವ ಕೆರಳಿಸುವ ಪ್ರೇರಿಸುವ ಸಂಗತಿಯಾಗಿದೆ. ಈ ರಾಜಕೀಯವಾಗಿ ಸಾಮಾಜಿಕವಾಗಿ ಸಾಹಿತ್ಯಿಕವಾಗಿ ಚರ್ಚೆಯನ್ನು ಹುಟ್ಟಿಸುವ ಸಂಗತಿಯಾಗಿದೆ.

ಆದರೆ ಒಂದು ಮಾತನ್ನು ಹೇಳಬೇಕು. ಬಸವತತ್ವ ಎಂಬುದು ಎಷ್ಟೇ ಪ್ರಗತಿಪರ ವಾಗಿದ್ದರೂ ಅದು ವಿಮರ್ಶೆಗೆ ಅತೀತವಲ್ಲ. ಡಾಕ್ಟರು ಕೊಟ್ಟ ಗುಳಿಗೆಗಳನ್ನು ಕಣ್ಮುಚ್ಚಿ ನುಂಗುವಂತೆ ಸ್ವೀಕರಿಸುವುದಿಲ್ಲ. ಅದು ನಮ್ಮ ಟೀಕೆಯಿಂದಲೇ ಸ್ವೀಕಾರಗೊಳ್ಳುವಂತೆ ಮರುಜನ್ಮ ಪಡೆಯ ಬೇಕು. ನಮ್ಮ ತಲೆಮಾರಿನ ವಿಮರ್ಶೆಯಿಂದ ಭಿನ್ನಾಭಿಪ್ರಾಯಗಳಿಂದ ಬೆಳೆಯಬೇಕು. ನಿಜವಾದ ಮಾರ್ಕ್ಸ್‌ವಾದಿ ಮಾರ್ಕ್ಸ್‌ವಾದವನ್ನು ತನ್ನ ಕಾಲದ ಸಂದರ್ಭ ದಲ್ಲಿಟ್ಟು ಹೊಸ ತಿದ್ದುಪಡಿ ಮಾಡುತ್ತಾನೆ, ಆಗ ಮಾರ್ಕ್ಸ್‌ವಾದಕ್ಕೂ ಅವರಿಗೂ ಬೆಳವಣಿಗೆ, ಮಾವೋ ಮಾಡಿದ್ದು ಇದು, ಯಾವುದೇ ತತ್ವವನ್ನು ಅದು ಎಷ್ಟೇ ದೊಡ್ಡದಾಗಿರಲಿ ವಿಮರ್ಶೆಗೆ ಒಳಪಡಿಸದೆ ತಿದ್ದುಪಡಿಗೆ ಒಳಪಡಿಸದೆ ಕೇವಲ ನಂಬುವಂತಹ ಭಕ್ತಿಯಿಂದ ಸ್ವೀಕರಿಸುವುದು ಆ ಜನಾಂಗದ ಸ್ವಂತಿಕೆಯ ಕೊರತೆಯ ಸಂಕೇತ. ಕೇವಲ ಶ್ರದ್ಧಾ-ಭಕ್ತಿಗಳಿಂದ ಯಾವ ತತ್ವವೂ ಬೆಳೆಯುವುದಿಲ್ಲ. ತತ್ವವನ್ನು ಬದುಕುವವರೂ ಬೆಳೆಯುವುದಿಲ್ಲ. ವಿಮರ್ಶೆಯಿಲ್ಲದೆ ಪಡೆದು ಕೊಂಡ ತತ್ವ ಒಂದೋ ಗೊಡ್ಡಾಗಿರುತ್ತದೆ ಇಲ್ಲವೆ ಮೂಲಭೂತವಾದಿಯಾಗಿ ರುತ್ತದೆ. ಇದು ಗಾಂಧೀಜಿ ಲೋಹಿಯಾ ಮಾರ್ಕ್ಸ್ ಯಾರದಾದರೂ ಸರಿಯೇ, ಧರ್ಮ ಶಾಸ್ತ್ರಗಳು, ಗೊಡ್ಡು ಸಿದ್ಧಾಂತವಾದಿಗಳು ಗತಕಾಲದ ತತ್ವವನ್ನು ನೊಗದ ಹಾಗೆ ಹೇರುತ್ತಾರೆ. ಇದು ಮತ್ತೊಂದು ತಲೆಮಾರಿಗೆ ಕಾಲಸಂದರ್ಭಕ್ಕೆ ಸೇರಿದ ಜನರು ಸೃಜನಶೀಲತೆ ಸ್ವಂತಿಕೆಗಳನ್ನೇ ನಿರಾಕರಿಸುವಿಕೆ. ಸ್ವತಃ ಬಸವಣ್ಣ ಕೂಡ ದೊಡ್ಡ ಚಿಂತಕನಾಗಿದ್ದು, ಚಳುವಳಿಗಾರನಾಗಿದ್ದು, ಪರಂಪರೆಯ ಜತೆಗಿನ ಜಗಳದಿಂದಲೇ. ವಚನಕಾರರಲ್ಲಿ ಈಗ ಕ್ರಾಂತಿಕಾರಕವಾದುದು ಎಂದು ಗುರುತಿಸುವ ಅನೇಕ ಅಂಶಗಳು ಅವರು ತಮ್ಮ ಎದುರಿನ ವಾಸ್ತವವನ್ನು ಎದುರಿಸುತ್ತ ಪಡೆದರೆ, ಇನ್ನರ್ಧವನ್ನು ತಮ್ಮ ಹಿರೀಕರಾದ ಕಾಪಾಲಿಕರು ಕಾಳಾಮುಖರು ಶಾಕ್ತರು ನಾಥಪಂಥದವರು ಇವರ ಜತೆಗಿನ ಜಗಳದಿಂದ ಪಡೆದರು.

ಈ ಮಾತನ್ನು ಯಾಕೆ ಹೇಳಬೇಕಾಗಿದೆ ಎಂದರೆ, ವಚನಕಾರರಲ್ಲಿ ಬಸವಣ್ಣನನ್ನು ಕುರಿತು ಇರುವ ಹೆಚ್ಚಿನ ಬರಹಗಳು ಬಸವತತ್ವವು ಇಂದಿಗೂ ಪ್ರಸ್ತುತವಾಗಿದೆ ಎಂದು ಮುಗಿ ಯುತ್ತವೆ. ಹಾಗೆ ಜಗತ್ತಿನ ಯಾವುದೆ ತತ್ವವು ಯಥಾವತ್ತಾಗಿ ಇಡಿಯಾಗಿ ಚರಿತ್ರೆಯ ಇನ್ನೊಂದು ಕಾಲಕ್ಕೆ ಪ್ರಸ್ತುತವಾಗುವುದಿಲ್ಲ. ನಾವು ಒಪ್ಪದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಅನೇಕ ಸಂಗತಿಗಳಿರುತ್ತವೆ. ಹಾಗೆ ಭಿನ್ನಾಭಿಪ್ರಾಯವೆಂದರೆ ಅಗೌರವವಲ್ಲ. ಆ ತತ್ವದ ಜತೆಗೆ ಸಂವಾದ ಮತ್ತು ಅದನ್ನು ನಮ್ಮ ತಿದ್ದುಪಡಿಯೊಡನೆ ನಮ್ಮ ವರ್ತಮಾನವನ್ನು ಎದುರಿಸಲು ಪುನಾರಚಿಸಿಕೊಳ್ಳುವುದು. ಇದನ್ನು ಗತದ ಜತೆ, ಪರಂಪರೆಯ ಜತೆ ಅರ್ಥಪೂರ್ಣ ಅನುಸಂಧಾನ ಎಂದು ಕರೆಯುತ್ತೇನೆ.

[1] ಆದ್ದರಿಂದ ಯಾವಾಗಲೂ ಒಂದು ಐಡಿಯಾಲಜಿಯಲ್ಲೇ ಎಲ್ಲ ಶಕ್ತಿ ಇರುವುದಿಲ್ಲ. ಅದನ್ನು ಮುಂದಿನ ತಲೆಮಾರು  ತನ್ನ ಅಗತ್ಯಕ್ಕೆ ಅನುಗುಣವಾಗಿ ತನ್ನ ಸ್ವಂತಿಕೆಯ ಧಾರೆಯೆರೆದು ಮುರಿದುಕಟ್ಟಿಕೊಳ್ಳುವಲ್ಲಿ ಇರುತ್ತದೆ. ಎಂತಲೇ ಬಸವತತ್ವ ಎಂದರೆ ಅದು ಬಸವಣ್ಣನ ವಚನಗಳಲ್ಲಿ ಮಾತ್ರ ಇರುವುದಲ್ಲ, ಅದನ್ನು ಇವತ್ತಿನ ನಾವು ಕಟ್ಟಿಕೊಳ್ಳು ವುದರಲ್ಲಿ ಇದೆ. ೨೦ನೇ ಶತಮಾನದ ಕನ್ನಡ ಮನಸ್ಸು ಮಹಾ ವಿಮರ್ಶೆಯದು. ಅದು ಬಸವಣ್ಣನನ್ನೂ ಅವನ ತತ್ವವನ್ನೂ ತನ್ನ ಸಂಗಾತಿಯಾಗಿಸಿಕೊಂಡಿದ್ದರೆ ಪ್ರೀತಿ-ವಿಮರ್ಶೆಯಿಂದಲೇ.

ಬಸವತತ್ವದ ಇತ್ತೀಚಿನ ಒಲವುಗಳನ್ನು ಸಾಮಾಜಿಕ, ರಾಜಕೀಯ, ಧಾರ್ಮಿಕ ಸಾಹಿತ್ಯಕ ಎಂದು ನೋಡಲು ಇಲ್ಲಿ ಯತ್ನಿಸಿದೆ-ಇವೆಲ್ಲ ಪರಸ್ಪರ ಸಂಬಂಧವುಳ್ಳವು ಗೊತ್ತಿದ್ದರೂ.

ಬಸವತತ್ವ : ಸಾಮಾಜಿಕ ಒಲವುಗಳು

ಬಸವಣ್ಣನ ಸಾಹಿತ್ಯವು ಮೊಟ್ಟಮೊದಲು ಪ್ರಕಟವಾಗಿದ್ದೆ ಸಾಂಸ್ಕೃತಿಕ ಗುರುತನ್ನು ಪಡೆದುಕೊಳ್ಳುವ ಹೋರಾಟದ ಸಲುವಾಗಿ. ಬಸವಣ್ಣನವರ ಷಟ್ಸ್ಥಲದ ವಚನಗಳಿಗೆ ಹಳಕಟ್ಟಿ ಯವರು ಬರೆದ ಮುನ್ನುಡಿಯಲ್ಲಿ ಇದನ್ನು ಕಾಣಬಹುದು. ವಸಾಹತುಶಾಹಿ ಆಧುನಿಕತೆಯೊಳಗೆ ಲಿಂಗಾಯತ ಸಮುದಾಯವು ತನ್ನ ಐಡೆಂಟಿಟಿಯನ್ನು ಮರೆತು ಬ್ರಾಹ್ಮಣೀಕರಣಗೊಳ್ಳುವ ಅಪಾಯಗಳನ್ನು ಮನಗಂಡ ಹಳಕಟ್ಟಿ. ನಮಗೂ ನಮ್ಮದೇ ಆದ ಧರ್ಮ ಸಂಸ್ಕೃತಿ ತತ್ವ ಇದೆ ಎಂದು ವಚನಸಾಹಿತ್ಯವನ್ನು ಪರ್ಯಾಯವಾಗಿ ಮಂಡಿಸಿದರು. ಇದಕ್ಕಾಗಿ ಬಸವಣ್ಣ  ನವರ ವಚನಗಳನ್ನು ಹುಡುಕಿ ಸಂಪಾದಿಸಿ ಪ್ರಕಟಸಿದರು. ಹೀಗೆ ಬಸವಣ್ಣನ ವಚನಗಳು ಆಧುನಿಕ ಕಾಲದಲ್ಲಿ ಮೊದಲು ಬಳಕೆಗೆ ಬಂದಿದ್ದು ಸಾಹಿತ್ಯವಾಗಿ ಅಲ್ಲ. ಧಾರ್ಮಿಕ ಸಾಂಸ್ಕೃತಿಕವಾದ ಐಡಿಯಾಲಜಿಯಾಗಿ. ಮುಂದೆ ಲಿಂಗಾಯತ ಸಮಾಜವು ತನ್ನ ಅನೇಕ ಸಾಮಾಜಿಕ ಹೋರಾಟಗಳಲ್ಲಿ ಬಸವಣ್ಣನನ್ನು ಬಳಸಿತು. ಆದರೆ ಅವನ ಭಾವಚಿತ್ರ ಅಶ್ವಾರೂಢ ಪ್ರತಿಮೆ ಇತ್ಯಾದಿಗಳನ್ನು ಸಂಕೇತವಾಗಿ ಬಳಸಿದಷ್ಟು ಅವನ ವಚನಗಳನ್ನು ಅಂದರೆ ತತ್ವವನ್ನು ಬಳಸಿತೇ? ಇದು ಪ್ರಶ್ನೆ.

ಬಸವತತ್ವದಲ್ಲಿ ಎರಡು ಮುಖ್ಯ ದನಿಗಳಿವೆ. ಇವನ್ನು ವೈದಿಕ ಯಜಮಾನಿಕೆಯ ವಿರುದ್ಧದ ಬಂಡಾಯ ಹಾಗೂ ಕೆಳಜಾತಿ ಹಾಗೂ ಕಸುಬುಗಳ ಪರವಾದ ತಾಯ್ತನ ಎಂದು ಕರೆಯಬಹುದು. ೨೦ನೇ ಶತಮಾನದ ಲಿಂಗಾಯತ ಸಮಾಜ ಹೆಚ್ಚಾಗಿ ಬಳಸಿದ್ದು ಬಸವತತ್ವದ ಮೊದಲನೇ ಆಯಾಮವನ್ನು, ಹೀಗಾಗಿ ಕರ್ನಾಟಕದ ಹಳ್ಳಿಗಳಲ್ಲಿ ಲಿಂಗಾಯತ ಭೂಮಾಲಿಕ ಸಮುದಾಯದಿಂದ ದಲಿತರ ಮೇಲಿನ ಹಲ್ಲೆ ನಡೆದಾಗ, ದಲಿತರು ಅಂಬೇಡ್ಕರ್ ತತ್ವದ ಮೂಲಕ ಮುಖಾಮುಖಿ ಮಾಡುತ್ತಾರೆ. ಬಸವತತ್ವದ ಮೂಲಕ ಅಲ್ಲ. ಯಾಕೆಂದರೆ ಅವರಿಗೆ ಬಸವಣ್ಣ ಕಾಣುವುದು ವಚನರೂಪಿಯಾಗಿ ಅಲ್ಲ, ಈಗ ಕಾಣುವುದು ಅವರ ಕಣ್ಣೆದುರಿನ ಲಿಂಗಾಯತ ಸಮುದಾಯದ ಸಾಮಾಜಿಕ ವಾಸ್ತವದ ರೂಪದಲ್ಲೇ. ಈ ಹಿನ್ನೆಲೆಯಲ್ಲಿ ಕೆಳಜಾತಿಯ ಸಮುದಾಯಗಳನ್ನು ಸಂಘಟಿಸಿ ಅವರನ್ನು ಬಸವತತ್ವದ ಮೂಲಕ ತೆಕ್ಕೆಗೆ ತೆಗೆದುಕೊಳ್ಳುವ ಯತ್ನಗಳನ್ನು ಗಮನಿಸಬೇಕು. ಕೆಳಜಾತಿಗಳಿಗೆ ಅವರ ನಡುವಿಂದಲೇ ಗುರುವನ್ನು ನಿರ್ಮಿಸಿಕೊಡುವ ಅಥವಾ ಅವರನ್ನು ಲಿಂಗಾಯತ ಮಠದ ಗುರುವನ್ನಾಗಿ ಮಾಡಲು ಯತ್ನಗಳು ನಡೆದಿವೆ. ಇವೆಲ್ಲ ಬಸವಣ್ಣ ತನ್ನ ಕಾಲದಲ್ಲಿ ದಲಿತರಿಗೆ ಸಾಮಾಜಿಕ ಮೇಲುಚಲನೆ ಒದಗಿಸಲು ಮಾಡಿದ ಪ್ರಯತ್ನದ ಅನುಕರಣೆಗಳು. ಆದರೆ ೧೨ನೇ ಶತಮಾನದಲ್ಲಿ ಕಂಡ ಯಶಸ್ಸನ್ನು ೨೦ನೇ ಶತಮಾನದಲ್ಲಿ ಯಾಕೆ ಕಾಣುತ್ತಿಲ್ಲ? ಇದಕ್ಕೆ ಕಾರಣ ಚರಿತ್ರೆಯು ಅದೇ ರೂಪದಲ್ಲಿ ಪುನರಾವರ್ತನೆಯಾಗಲು ನಿರಾಕರಿಸುತ್ತದೆ. ಜತೆಗೆ, ಬಸವಣ್ಣ ಹಾಕಿಕೊಟ್ಟ ದಲಿತೋದ್ಧಾರದ ಹಾದಿಯು, ತನ್ನ ಕಾಲದಲ್ಲಿ ಎಷ್ಟೇ ಮಾನವೀಯವಾಗಿದ್ದರೂ, ಪ್ರಾಮಾಣಿಕವಾಗಿದ್ದರೂ, ಅದು ದಲಿತರ ಆಹಾರ ದೈವಗಳನ್ನೇ ಅಂದರೆ ಅವರ ಸಂಸ್ಕೃತಿಯನ್ನೇ ಕಳೆದುಹಾಕಿ ಸಂಸ್ಕೃತೀಕರಿಸುತ್ತದೆ. ಮುಖ್ಯವೆಂದರೆ, ದಲಿತರಿಗೆ ಈಗ ಅಂಬೇಡ್ಕರ್ ಮಾರ್ಕ್ಸ್ ಬುದ್ಧ ಸಿಕ್ಕಿ ಬಿಟ್ಟಿದ್ದಾರೆ.[2]

ಬಸವತತ್ವ : ರಾಜಕೀಯ ಒಲವುಗಳು

ಕರ್ನಾಟಕದ ರಾಜಕಾರಣದಲ್ಲಿ ನಡೆದಿರುವ ಬೆಳವಣಿಗೆಗಳು ಲಿಂಗಾಯತ ಸಮುದಾ ಯಕ್ಕೂ ಬಸವತತ್ವಕ್ಕೂ ಒಂದು ವೈರುಧ್ಯವನ್ನು ನಿರ್ಮಿಸಿಬಿಟ್ಟಿವೆ. ಅದೆಂದರೆ, ವೈದಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಬಲಪಂಥೀಯ ಪಕ್ಷಗಳಿಗೆ ಲಿಂಗಾಯತ ಸಮುದಾಯ ಒಲಿದಿರುವುದು. ಈಗಿರುವ ರಾಜ್ಯದ ಅಧ್ಯಕ್ಷರ ಹೆಸರಲ್ಲಿ ಬಸವಣ್ಣನಿದ್ದಾನೆ ಎಂಬುದು ಗಮನಾರ್ಹ. ಅದರಲ್ಲೂ ವೈದಿಕ ದೇವತೆಗೆ ಗುಡಿಕಟ್ಟುವ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮ ಮಾಡಿಕೊಂಡಾಗ ಚಾರಿತ್ರಿಕವಾಗಿ ಬಸವತತ್ವಕ್ಕೆ ಬಹುದೊಡ್ಡ ತಾತ್ವಿಕ ಸವಾಲು ಎದುರಾಯಿತು. ಆದರೆ ರಾಜಕೀಯ ಬೆಳವಣಿಗೆಗಳನ್ನು ಬಸವತತ್ವ ತಡೆಯಲು ಸಾಧ್ಯ ವಾಗಲಿಲ್ಲ. ಇಂತಹ ಓವರ್‌ಟೇಕುಗಳು ಬಸವಣ್ಣನಿಗೆ ಹಿಂದಿನಿಂದಲೂ ಬಹಳ ಆಗಿವೆ. ಅದರಲ್ಲಿ ಬಸವನ ಪ್ರತಿಮೆ ನಿಲ್ಲಿಸುವುದು, ಮಠಗಳಲ್ಲಿ ಸಂಸ್ಕೃತ ವೇದವಿದ್ಯೆ ಕಲಿಸುವುದು, ಗುಡಿಕಟ್ಟುವುದು ಮೊದಲಾದವು. ರಾಷ್ಟ್ರೀಯ ಬಸವದಳದ ಚಟುವಟಿಕೆಗಳೂ ಇಂತಹವು. ಶತಮಾನಗಳಿಂದಲೂ ಲಿಂಗಾಯತ ಸಮುದಾಯಕ್ಕೆ ವೈದಿಕ ಸಂಸ್ಕೃತಿಯು ಎದುರಾಳಿಯೂ ಹೌದು. ಅನುಸರಿಸುವ ಮಾದರಿಯೂ ಹೌದು. ಹೀಗಾಗಿ ಒಳಗೇ ನಡೆದಿದ್ದ ವೈದಿಕೀಕರಣವು ರಾಜಕೀಯದಲ್ಲಿ ಬಲಪಂಥೀಯ ಪಕ್ಷಕ್ಕೆ ಬೆನ್ನಿಗೆ ನಿಲ್ಲು ವುದನ್ನು ಸಮಸ್ಯೆ ಮಾಡಲಿಲ್ಲ. ಬಹುಶಃ ಒಂದು ಸಮುದಾಯ ತನ್ನ ಅಸ್ತಿತ್ವಕ್ಕಾಗಿ ಹಾಗೂ ಅಧಿಕಾರ ನೆಲೆಗಳನ್ನು ಪಡೆಯಲು ಮಾಡುವ ಪ್ರಯತ್ನಗಳನ್ನು ಯಾವಾಗಲೂ ಅದರ ಧರ್ಮದ ಮೂಲಭೂತ ತತ್ವಗಳಿಂದ ನಿಯಂತ್ರಣ ಮಾಡಲು ಅಸಾಧ್ಯ.

ಧಾರ್ಮಿಕತತ್ವ ಯಾವುದೇ ಇರಲಿ. ಅದು ಒಂದು ಸಮುದಾಯದ ಸಾಮಾಜಿಕ, ರಾಜಕೀಯ ಮುಂಚಲನೆಗೆ ಹೇಗೆ ಸಹಕರಿಸುತ್ತದೆ, ಬಳಕೆಯಾಗುತ್ತದೆ ಎಂಬುದರ ಮೇಲೆ ಅದರ ಉಳಿವಿಕೆ ಬದಲಾವಣೆ ಇದೆ. ಒಂದು ವೇಳೆ ಅದು ಈ ಮುಂಚಲನೆಯ ಕೆಲಸದಲ್ಲಿ ಅಡ್ಡಗಾಲಾದರೆ ಅದನ್ನು ಸರಳವಾಗಿ ಮೀರಲಾಗುತ್ತದೆ. ಇದು ಕೇವಲ ಬಸವತತ್ವಕ್ಕೋ, ಲಿಂಗಾಯತರಿಗೋ ಮಾತ್ರ ಸಂಬಂಧಿಸಿದ್ದಲ್ಲ. ಆಧುನಿಕ ರಾಜಕಾರಣದಲ್ಲಿ ಧರ್ಮವು ಬಳಕೆ ಯಾಗುತ್ತಿರುವ ಒಟ್ಟು ವಿಧಾನಕ್ಕೇ ಸಂಬಂಧಿಸಿದೆ. ಜಾರ್ಜ್‌ಬುಶ್ ಅಧಿಕಾರ ಸ್ವೀಕರಿಸುವಾಗ ಚರ್ಚಿನಿಂದ ಪಾದ್ರಿ ಬಂದು ಆಶೀರ್ವದಿಸಿದ್ದನ್ನು ಕಂಡೆ. ಹಾಗೆಂದು ಏಸುಕ್ರಿಸ್ತನ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಕೊಡು ಎಂಬ ಏಸುತತ್ವವನ್ನು ಅಮೇರಿಕ ಪಾಲಿಸುತ್ತಿದೆ ಎಂದು ಅರ್ಥವಲ್ಲ. ಪಾಲಿಸುವುದಾಗಿದ್ದರೆ ಅದು ತನ್ನ ಮೇಲೆ ಆಕ್ರಮಣ ಮಾಡಿದವರನ್ನು ದೇವರೇ ಅವರನ್ನು ಕ್ಷಮಿಸು ತಾವೇನು ಮಾಡುತ್ತಿದ್ದಾರೆಂದು ಅವರರಿಯರು ಎಂದು ಹೇಳಬೇಕಾಗಿತ್ತು. ಅದು ಮಾಡಲಿಲ್ಲ. ಅಮೆರಿಕವು ತನ್ನ ಚರಿತ್ರೆಯ ಉದ್ದಕ್ಕೂ ಮಾಡಿ ಕೊಂಡು ಬಂದಿರುವುದು ಅನ್‌ಕ್ರಿಶ್ಚಯನ್ ಆಡಳಿತವನ್ನೇ. ಇದೇ ಮಾತು ಅಫಘಾನಿಸ್ಥಾನ ವನ್ನು ಇಸ್ಲಾಮಿನ ಹೆಸರಲ್ಲಿ ಆಳಿದ ತಾಲಿಬಾನರಿಗೂ ಸಂಬಂಧಿಸುತ್ತದೆ. ಅಂದರೆ ಯಾವುದೇ ದೊಡ್ಡ ತತ್ವಗಳು ವರ್ತಮಾನದ ರಾಜಕೀಯ ಸಾಮಾಜಿಕ ಅಸ್ತಿತ್ವದ ಹೋರಾಟಗಳಲ್ಲಿ ಯಥಾವತ್ತಾಗಿ ಬಳಕೆಯಾಗುವುದಿಲ್ಲ. ಅವುಗಳ ಉಲ್ಲಂಘನೆ ನಡೆಯುತ್ತದೆ. ಇದು ರಾಜಕೀಯ ಸಾಮಾಜಿಕ ರಿಯಾಲಿಟಿ.

ಬಸವತತ್ವ : ಧಾರ್ಮಿಕ ಒಲವುಗಳು

ಬಸವಣ್ಣನ ವಚನಗಳಲ್ಲಿ ಜನಪದ ಧಾರ್ಮಿಕ ನಂಬಿಕೆಗಳ ಟೀಕೆಯಿದೆಯಷ್ಟೆ. ೭೦ರ ದಶಕದಲ್ಲಿ ನಾಸ್ತಿಕ ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಅಲೆ ಶುರುವಾದಾಗ ಬಸವಣ್ಣ ಮಾರಿ ಮಸಣಿಯರನ್ನು ಟೀಕಿಸುವ ವಚನಗಳು ಪ್ರಿಯವಾಗಿದ್ದವು. ೭೦ರ ದಶಕದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣದಲ್ಲಿ ಇದ್ದುದು ಬ್ರಾಹ್ಮಣ ಯಜಮಾನಿಕೆಯನ್ನು ಹಿಮ್ಮೆಟ್ಟಿಸುವ ಶೂದ್ರರ ಆಸಕ್ತಿಗಳು. ಕೆಳಜಾತಿಯ ಎಚ್ಚೆತ್ತ ತಲೆಮಾರು ವಿಗ್ರಹ ಭಂಜಕವಾದ ಆಕ್ರಮಣಶೀಲ ವೈಚಾರಿಕತೆಯ ಮೂಲಕವೇ ತನ್ನ ಪ್ರವೇಶ ಮಾಡಿಕೊಂಡಿತು. ಆದರೆ ೯೦ರ ದಶಕದ ಬಳಿಕ ಕೆಳಜಾತಿಯಿಂದ ಬಂದ ಚಿಂತಕರು ಲೇಖಕರು ಕೇವಲ ನಾಸ್ತಿಕ ವೈಚಾರಿಕತೆ ಯಿಂದ ಅವರ ತಂದೆ ತಾಯಿ ನೆಂಟರಿಷ್ಟರು ನಂಬಿರುವ ಇಡೀ ಸಾಂಸ್ಕೃತಿಕ ಲೋಕವೇ ನಿರಾಕರಣೆಗೆ ಒಳಗಾಗಿ ರುವುದನ್ನು ಮನಗಂಡರು. ಕೂಡಲೇ ಅವರಿಗೆ ಆ ಸಾಂಸ್ಕೃತಿಕ ಲೋಕವನ್ನು ತಾಳ್ಮೆಯಿಂದ ನೋಡಬೇಕು. ಅಲ್ಲಿನ ಜೀವಪರವಾದುದನ್ನು ಪಡೆಯಬೇಕು ಅನಿಸಿತು. ಕುಸುಮಬಾಲೆ ಹುಟ್ಟಿದ್ದು ಆಗ. ಅಲ್ಲಿಂದ ತಮ್ಮ ಸಮುದಾಯಗಳ ಸಂಸ್ಕೃತಿಯನ್ನು ಉಳಿಸಿಕೊಳ್ಳುವ, ಅದರೊಳಗಿನ ಸಾಂಸ್ಕೃತಿಕ ಲೋಕಗಳನ್ನು ಹೊಸ ಆಶಯಗಳಿಗಾಗಿ ಬಳಸಿ ಕೊಳ್ಳುವ ವಿವೇಕವನ್ನು ಲೇಖಕರು ತೋರಿಸಲಾರಂಭಿಸಿದರು. ಆಗ ಜನಪದ ಧರ್ಮಗಳನ್ನು ಟೀಕಿಸುವ ಬಸವಣ್ಣನವರ ವಚನಗಳು ಜನಪದ ವಿರೋಧಿಯಾಗಿ ತೋರತೊಡಗಿದವು. ಅವನ ಅಹಿಂಸೆಯ ಪರಿಕಲ್ಪನೆ, ಕೆಲವರ ಉಣ್ಣುವ ಹಕ್ಕನ್ನು ತಮಗೆ ಸರಿಯೆನಿಸಿದ ಧರ್ಮ ಗಳನ್ನು ನಂಬಿ ಅದನ್ನು ಪ್ರಚಾರ ಮಾಡುವ ಹಕ್ಕನ್ನು ಮನ್ನಿಸದೆ ತತ್ವವಾಗಿ ಕಾಣತೊಡಗಿತು. ಆಧುನಿಕ ಡೆಮಾಕ್ರಸಿ ನೀಡುವ ಧಾರ್ಮಿಕ ಸ್ವಾತಂತ್ರ್ಯ ಸೆಕ್ಯುಲರಿಸ್ಟ್ ಹಕ್ಕುಗಳ ಹಿನ್ನೆಲೆ ಕೂಡ ಇಂತಹ ವಚನಗಳ ವಿಮರ್ಶೆಗೆ ಪ್ರೇರಿಸಿತು. ಲಂಕೇಶರ ಸಂಕ್ರಾಂತಿ ನಾಟಕದ ಉಜ್ಜನ ಪ್ರಸಂಗ ಇಂತಹ ವಿಮರ್ಶೆಯಿಂದ ಹುಟ್ಟಿದ್ದು. ದಲಿತ ಸಂಸ್ಕೃತಿಯ ಚಿಂತಕರು[3] ೯೦ರ ದಶಕದಿಂದ ಈಚೆಗೆ ವಚನಕಾರರ ಈ ನಿಲುವನ್ನು ಕಟುವಿಮರ್ಶೆಗೆ ಒಳಪಡಿಸುತ್ತ ಬಂದಿರುವುದನ್ನು ಕಾಣಬಹುದು. ಒಂದೇ ವಚನವು ಸಂದರ್ಭ ಬದಲಾದ ಕೂಡಲೇ ಬೇರೆ ಅರ್ಥವನ್ನೇ ಪಡೆಯುವ ನಾಟಕೀಯ ಬದಲಾವಣೆ.

ಜನಪದ ಧರ್ಮಗಳನ್ನು ಟೀಕಿಸುವ ಬಸವತತ್ವದಲ್ಲಿ ಚಾರಿತ್ರಿಕ ಉದ್ದೇಶ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಅದು ನಾವು ನಂಬದಿದ್ದರೂ ಅನ್ಯರ ಧಾರ್ಮಿಕ ನಂಬಿಕೆ ಗಳನ್ನು ಗೌರವಿಸಬೇಕು ಎಂಬ ಸೆಕ್ಯುಲರಿಸಂ ಚಿಂತನೆಯ ಹಿನ್ನೆಲೆಯಲ್ಲಿ ಬಸವಣ್ಣನ ಈ ವಚನಗಳನ್ನು ವಿಶ್ಲೇಷಿಸುವುದು ಹೊಸ ಸವಾಲಾಗಿದೆ. ಯಾಕೆಂದರೆ ಮತ್ತೊಬ್ಬರನ್ನು ಶೋಷಣೆಗೆ ಅಧೀನಪಡಿಸಿಕೊಳ್ಳುವಿಕೆಗೆ ಈಡು ಮಾಡದ ಕೆಳವರ್ಗದ ನಂಬಿಕೆಯ ಜಗತ್ತುಗಳನ್ನು ಟೀಕಿ ಸುವುದು ಈಗ ಕಷ್ಟ. ಆದರೆ ಬಸವಣ್ಣನ ವೈದಿಕ ವಿರೋಧಿ ಚಿಂತನೆಗಳಿಗೆ ಇಂತಹ ಇಕ್ಕಟ್ಟು ಬಂದಿಲ್ಲ. ಯಾಕೆಂದರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನು ಈ ವೈದಿಕ ಸಮುದಾಯವು ಅಧಿಕಾರಸ್ಥ ನೆಲೆಗಳಲ್ಲಿ ಉಳಿದಿರುವುದು ಕಾರಣವಿರಬೇಕು. ಹೀಗಾಗಿ ಬ್ರಾಹ್ಮಣ ವಿರೋಧಿ ಸಂಸ್ಕೃತ ವಿರೋಧಿ ವೇದ ವಿರೋಧಿಯಾದ ನಿಲುವುಗಳಿಗಾಗಿ ಬಸವಣ್ಣನ ಚಿಂತನೆಯ ಬಳಕೆ ಇನ್ನೂ ತೀವ್ರವಾಗಿ ಮುಂದುವರೆದಿದೆ.[4] ಅದರಲ್ಲೂ ಜನಗಣತಿಯ ಸಂದರ್ಭದಲ್ಲಿ ಯಾವ ಧರ್ಮದ ಹೆಸರನ್ನು ಬರೆಯಿಸಬೇಕು ಎಂಬ ಪ್ರಶ್ನೆಯು, ವೀರಶೈವ ಧರ್ಮವು ಹಿಂದೂ ಧರ್ಮವೇ ಅಲ್ಲವೇ ಎಂಬ ಹಳೇ ವಿವಾದವನ್ನು ಮತ್ತೆ ಎಬ್ಬಿಸಿತು. ಆಗ ವೀರಶೈವ ಧರ್ಮದ ಸ್ವಂತಿಕೆಯನ್ನು ಸಾಬೀತುಪಡಿಸುವ ಚಿಂತಕರು ಹೆಚ್ಚಿಗೆ ಬಳಸಿದ್ದು ಬಸವಣ್ಣನ ವೈದಿಕ ವಿರೋಧಿ ವಚನಗಳನ್ನು ಎಂಬುದು ಗಮನಾರ್ಹ.

ಇದರ ಮುಂದುವರಿಕೆಯಾಗಿಯೇ ಪಂಚಾಚಾರ್ಯರ ಜತೆಗಿನ ಜಗಳವನ್ನು ಗಮನಿಸಬಹುದು. ಪಂಚಾಚಾರ್ಯರು ಬಸವಣ್ಣನ ಅಧಿಕೃತತೆಯನ್ನು ಪ್ರಶ್ನಿಸಿದಾಗೆಲ್ಲ, ಇದನ್ನು ಪ್ರತಿಭಟಿಸುವವರು ಬಸವಣ್ಣನನ್ನು ವೈದಿಕ ವಿರೋಧಿಯಾಗಿ ಮಂಡಿಸುತ್ತಾರೆ. ಈ ಜಗಳಗಳು ಹಿಂದೆ ಕೇಳಿದ ಬಸವಪುರಾಣವನ್ನು ಸುಡುವಂತಹ ಪ್ರಕರಣಗಳ ಅತಿರೇಕಗಳಿಗೆ ಹೋಗದೆ, ತೀಕ್ಷ್ಣ ಅಭಿಪ್ರಾಯಗಳ ವಿನಿಮಯದ ಮಟ್ಟದಲ್ಲಿದೆ.

ಬಸವತತ್ವ : ಸಾಹಿತ್ಯಕ ಒಲವುಗಳು

ಆಧುನಿಕ ಕನ್ನಡ ಸಾಹಿತ್ಯವು  ೧೨ನೇ ಶತಮಾನ ಮತ್ತು ಬಸವಣ್ಣನನ್ನು ಮುಖ್ಯವಾಗಿ ಎರಡು ಬಗೆಯಲ್ಲಿ ಮುಖಾಮುಖಿಯಾಗಿದೆ. ಒಂದು ಆರಾಧನೆಯ ಅನುಕರಣೆ. ಎರಡು ವಿಮರ್ಶಾತ್ಮಕ ಅನುಸಂಧಾನ. ವಚನ ಪ್ರಕಾರವನ್ನು ಭಕ್ತಿಯಿಂದ ಅನುಕರಣೆ ಮಾಡುವ, ಬಸವಣ್ಣನನ್ನು ಕುಂದಿಲ್ಲದ ಮಹಾಪುರುಷನಾಗಿ ಬಣ್ಣಿಸುವ ಯಾವ ಯತ್ನಗಳೂ ಅರ್ಥಪೂರ್ಣ ಸಾಹಿತ್ಯ ಹುಟ್ಟಿಸಲು ಸಾಧ್ಯವಾಗಿಲ್ಲ; ಆದರೆ ಬಸವನನ್ನು ಕ್ರಿಟಿಕಲ್ಲಾಗಿ ಅನುಸಂಧಾನ ಮಾಡುವ ಬರೆಹಗಳು, ವಚನ ಚಳುವಳಿಯನ್ನು ಆಧುನಿಕ ಮೌಲ್ಯಗಳ ತಳಮಳಗಳ ಹೋರಾಟಗಳ ಹಿನ್ನೆಲೆಯಲ್ಲಿ ಮರುಮೌಲ್ಯಮಾಪನ ಮಾಡುವ ಯತ್ನಗಳು ಮಾತ್ರ ಯಶಸ್ಸು ಕಂಡಿವೆ. ಇದಕ್ಕೆ ಕಾರಣ, ಹಿಂದೆ ಹೇಳಿದಂತೆ ಯಾವುದೇ ಮಾದರಿಗಳು ತಮ್ಮ ಚಾರಿತ್ರಿಕ ಸಂದರ್ಭದಲ್ಲಿ  ಆಡಿದ ಪಾತ್ರವನ್ನು ಇನ್ನೊಂದು ಅದೇ ಯಶಸ್ಸಿನೊಂದಿಗೆ ಪುನರಾವರ್ತನೆ ಮಾಡಲಾರವು. ಬಸವಣ್ಣನನ್ನು ಪಾತ್ರವಾಗಿಸಿಕೊಂಡು ಹುಟ್ಟಿರುವ ಕೇವಲ ಭಕ್ತಿಯಿಂದ ಹುಟ್ಟಿರುವ ತಿಪ್ಪೇರುದ್ರ ಸ್ವಾಮಿಯವರ ಕಾದಂಬರಿಗೂ ಇರುವ ವ್ಯತ್ಯಾಸ ಲಂಕೇಶರ ಸಂಕ್ರಾಂತಿ, ಗಿರೀಶ ಕಾರ್ನಾಡರ ತಲೆದಂಡ, ಶಿವಪ್ರಕಾಶರ ಮಹಾಚೈತ್ರ, ಮಂಟೇಸ್ವಾಮಿ ನಾಟಕಗಳಿಗೂ ಇರುವ ವ್ಯತ್ಯಾಸವನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಒಂದು ಇದೇ ತರ್ಕವು ವಿಮರ್ಶೆ ವಿಶ್ಲೇಷಣೆ ಸಂಶೋಧನೆಗಳಿಗೂ ಅನ್ವಯವಾಗುತ್ತದೆ. ಒಂದು ಬಸವಣ್ಣ ದೈವೀಕರಣವಾದರೆ ಇನ್ನೊಂದು ಬಸವನ ಮಾನವೀಕರಣ. ಸಂಗಾತೀಕರಣ.

ಸಂಕ್ರಾಂತಿ ಸಾಲಿಗೆ ತಲೆದಂಡ ಹಾಗೂ ಮಹಾಚೈತ್ರ ಮಂಟೇಸ್ವಾಮಿ ಪ್ರಸಂಗ ನಾಟಕಗಳೂ ಸೇರಿವೆ. ಇವುಗಳ ಮುಖ್ಯ ಒಲವು ಬಸವಣ್ಣನನ್ನು ಚಳುವಳಿಯ ದೃಷ್ಟಿಯಿಂದ ದಲಿತ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡುವುದು. ಇದಕ್ಕೆ ಈಚೆಗೆ ಚರ್ಚೆಗೆ ಒಳಗಾಗು ತ್ತಿರುವ ಮಂಟೇಸ್ವಾಮಿ ಕಾವ್ಯವೂ ಒಂದು ಪ್ರೇರಣೆ. ಮೈಸೂರು ಸೀಮೆಯಲ್ಲಿ ದಲಿತ ಗಾಯಕರು ಹಾಡುವ ಮಂಟೇಸ್ವಾಮಿ ಕಾವ್ಯವು, ಕಲ್ಯಾಣ ಪಟ್ಟಣವನ್ನು ಅಲ್ಲಿನ ಲಿಂಗಧಾರಿಗಳಾಗಿ ಢಾಂಬಿಕರಾಗಿರುವ  ಜಂಗಮರನ್ನು ಹಾಗೂ ಅವರ ಜತೆಯಿರುವ ಬಸವಣ್ಣನನ್ನು ಕಟುವಾದ ಟೀಕೆಗೆ ಒಳಪಡಿಸುತ್ತದೆ. ಈ ಪ್ರಸಂಗ ಶೂನ್ಯ ಸಂಪಾದನೆಯಲ್ಲೂ ಬರುತ್ತದೆ. ಕೆಟ್ಟು ಹೋಗಿರುವ ಕಲ್ಯಾಣವನ್ನು ಶೂನ್ಯಸಂಪಾದನೆಯಲ್ಲಿ ಪರೀಕ್ಷೆಗೊಳ ಪಡಿಸುವುದು ಅಲ್ಲಮನಾದರೆ, ಇಲ್ಲಿ ಮಂಟೇಸ್ವಾಮಿ. ಇದು ಲಿಂಗವಿರೋಧಿಯಾದ ಅನುಭಾವಿಗಳು ಹಾಗೂ ಇಷ್ಟಲಿಂಗವಾದ ಭಕ್ತರ ನಡುವಿನ ಸಂಘರ್ಷ. ಜತೆಗೆ ಇದನ್ನು ೧೨ನೇ ಶತಮಾನದ ನಂತರ ಜಡಗಟ್ಟಿದ ವಚನ ಚಳುವಳಿಗೆ ದಲಿತ ಸಂಸ್ಕೃತಿ ಮಾಡಿರುವ ವಿಮರ್ಶೆ ಎಂದು ನೋಡಲಾಗುತ್ತಿದೆ. ಆದರೆ ಬಹಳ ಮುಖ್ಯವಾದ ಸಂಗತಿಯೆಂದರೆ, ಮಂಟೇಸ್ವಾಮಿ ಕಾವ್ಯ, ಬಸವಣ್ಣನಲ್ಲಿ ಈ ಆಚರಣವಾದಿ ಧರ್ಮವನ್ನು ಬಿಟ್ಟು ಮೇಲಿನ ಹಂತಕ್ಕೆ ಬರುವ ಸಾಧ್ಯತೆಯನ್ನು ಕಾವ್ಯ ಉಳಿಸಿದೆ. ಇವು ನೋಡಲು ಬಸವಣ್ಣನನ್ನು ಕಟುವಾಗಿ ವಿಮರ್ಶಿಸುತ್ತಿರುವಂತೆ ಕಾಣುತ್ತವೆ. ಆದರೆ ಇವು ಒಳಗೆ ಲಿಂಗಾಯತ ಬಸವಣ್ಣನನ್ನು ಸೆಕ್ಯುಲರ್ ಹಾಗೂ ಚಳುವಳಿಗಾರ ಬಸವಣ್ಣನನ್ನಾಗಿ ಹುಟ್ಟಿಸಿಕೊಳ್ಳುವ ಯತ್ನಗಳು.

ಕನ್ನಡ ಸಾಹಿತ್ಯದಲ್ಲಿ ವಚನ ಚಳುವಳಿಯಿಂದ ಪ್ರೇರಣೆ ಪಡೆಯದೆ ಉಳಿಯುವುದು ತುಂಬ ಕಷ್ಟ. ಅಡಿಗರು ಹಾಗೆ ಉಳಿದರು. ಈಗಲೂ ಅನೇಕ ಲೇಖಕರು ಹಾಗೆ ಉಳಿದಿದ್ದಾರೆ. ಈ ಹಟ ಸೋಜಿಗ. ಕಾರಣ ಹುಡುಕಿದರೆ, ಬಸವಣ್ಣನ ಪ್ರಭಾವಕ್ಕೆ ಒಳಗಾಗುವುದು ಎಂದರೆ, ನಮ್ಮ ಸಮಾಜದ ವಿಕಾರಗಳನ್ನು ಮುಖಾಮುಖಿ ಮಾಡುವುದಕ್ಕೆ ಮತ್ತು ಆಕ್ಟಿವಿಸ್ಟ್ ಆಗುವುದಕ್ಕೆ ಸವಾಲು ಸ್ವೀಕರಿಸುವುದು ಎಂದೇ. ಹೀಗಾಗಿ ಅನೇಕರು ಹಿಂಜರಿದಿದ್ದಾರೆಯೇ? ಇದಕ್ಕಾಗಿ ಕೆಲವರು ಅಲ್ಲಮನನ್ನು ಅಪ್ಪಿಕೊಳ್ಳುತ್ತಿದ್ದಾರೆಯೇ ಎಂದು ನನಗೆ ಅನುಮಾನ. ಇಂತಹ ಹೊತ್ತಲ್ಲಿ ಅಮರೇಶ ನುಗಡೋಣಿ ಅವರ ‘ತಮಂಧದ ಕೇಡು’ ‘ನೀರು ತಂದವರು’ ಕತೆಗಳು, ಬಸವತತ್ವದ ಆಧುನಿಕ ಅನುಸಂಧಾನದಂತೆ ತೋರುತ್ತವೆ.

ಈಚೆಗೆ ಲಿಂಗಾಯತ ಸಮುದಾಯದಿಂದ ಎರಡು ಪ್ರತಿರೋಧಗಳು ಬಂದವು. ಒಂದು ಮಾತೆಮಹಾದೇವಿ ಅವರು ಬಸವಣ್ಣನವರ ವಚನ ಅಂಕಿತ ಬದಲಾಯಿಸಿದ್ದಕ್ಕೆ. ಇನ್ನೊಂದು ಧರ್ಮಕಾರಣ ಮಹಾಚೈತ್ರ ನಾಟಕಗಳಿಗೆ. ಮೊದಲನೆಯ ಘಟನೆಗೆ ಕರ್ನಾಟಕದ ಎಲ್ಲ ಪ್ರಜ್ಞಾವಂತರು ಖಂಡಿಸಿದರು. ಎರಡನೆ ಘಟನೆಗೆ ಲಿಂಗಾಯತ ಸಮುದಾಯದ ಪ್ರಜ್ಞಾವಂತರು ಲೇಖಕರೇ ಲೇಖಕರ ಪರವಾಗಿ ನಿಂತರು. ಇದು ಬಸವತತ್ವವು ಗೆದ್ದ ಯುದ್ಧ ಎಂದೇ ನಾನು ಭಾವಿಸುತ್ತೇನೆ. ಯಾಕೆಂದರೆ ತತ್ವ ಯಾವುದೇ ಆಗಲಿ ತನ್ನ ಧಾರ್ಮಿಕ ಅನುಯಾಯಿ ಗಳಿಂದಲೇ ಬದುಕುವ ಸ್ಥಿತಿ ಪಡೆಯುವುದು ದುರಂತ. ಬಸವಣ್ಣನಿಗೆ ಕರ್ನಾಟಕದ ಸಮಾಜ ದಲ್ಲಿ ಲಿಂಗಾಯತರಾಚೆ ಕೂಡ, ಅಥವಾ ನಿಜವಾಗಿ ಹೇಳುವುದಾದರೆ ಆಚೆಯೇ ನಿಜವಾದ ಸೃಜನಶೀಲ ಅಸ್ತಿತ್ವವಿದೆ. ಇದಕ್ಕೆ ಕಾರಣ ಬಸವಣ್ಣನನ್ನು ಎಲ್ಲ ಕಾಲಗಳು ಕೊಂದು ಮತ್ತೆ ಮತ್ತೆ ಹುಟ್ಟಿಸಿಕೊಳ್ಳುತ್ತಿರುವುದು. ಇದನ್ನು ಬಸವಣ್ಣನ ಸಾರ್ವಜನೀಕರಿಸುವುದು ಎಂದು ಕರೆಯಬಹುದು.

ಯಾವತ್ತೂ ಸಮಕಾಲೀನವಾದ ಸಮಸ್ಯೆಗಳನ್ನು ಎದುರಿಸಲು ಬೇಕಾದ ತತ್ವ ತಂತ್ರಗಾರಿಕೆಗಳು ಸಮಕಾಲೀನ ಸಮಾಜದಲ್ಲೇ ಹುಟ್ಟಿಕೊಳ್ಳುತ್ತವೆ. ಅದಕ್ಕೆ ತತ್ವಗಳು ಕೇವಲ ಪ್ರೇರಣೆ ಅಷ್ಟೆ. ಅದೂ ನಾವು ಅದರೊಡನೆ ವಿಮರ್ಶಾತ್ಮಕವಾಗಿ ಒಡನಾಡಲು ಶುರುಮಾಡಿದಾಗ, ಅದನ್ನು ಮುರಿದು ನಮ್ಮ ಅಗತ್ಯಕ್ಕೆ ತಕ್ಕಂತೆ ಕಟ್ಟಿಕೊಳ್ಳತೊಡಗಿದಾಗ. ಬಸವತತ್ವಕ್ಕೆ ಎಲ್ಲ ಕಾಲಕ್ಕೂ ಎಲ್ಲ ತಲೆಮಾರಿಗೂ ಕಾಡುವ ಚೈತನ್ಯವಿದೆ, ರಾಜಕೀಯ ಸಾಮಾಜಿಕ ನೈತಿಕತೆಯಿದೆ. ಇದು ಕರ್ನಾಟಕದ ೨೦ನೇ ಶತಮಾನದ ಬದುಕು ಸಾಬೀತು ಮಾಡಿದೆ.

 

Note:[1]       ಬಸವಣ್ಣನವರನ್ನು ಕುರಿತು ಶಂಕರ ಮೊಕಾಶಿ ಪುಣೇಕರ, ಕೆ ಜಿ ನಾಗರಾಜಪ್ಪ ಹಾಗೂ ಪಿ ಎಸ್ ಪಾಟೀಲ ಅವರ ಅಧ್ಯಯನಗಳು.

[2]       ಮಾರ್ಕ್ಸ್‌ವಾದಿ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾದ ಅಂಬೇಡ್ಕರನ್ನೂ ಒಪ್ಪುವುದಿಲ್ಲ. ಈಗ ಎಡಗೈ ದಲಿತರು ಬೇರೆ ಕಾರಣಕ್ಕೆ ಅಂಬೇಡ್ಕರ್ ಒಪ್ಪುತ್ತಿಲ್ಲ.

[3]       ಎಸ್ ಎಸ್ ಹಿರೇಮಠ ಹಾಗೂ ಕೆ ಜಿ ನಾಗರಾಜಪ್ಪ ಅವರ ಲೇಖನಗಳು.

[4]       ಚಂಪಾ, ನೀಲಗಂಗಯ್ಯ ಪೂಜಾರ, ಕಲ್ಲಿನಾಥ ಮಾಧವನವರ, ಬಸವರಾಜ ಕಲ್ಗುಡಿ, ಹಿರೇಮಲ್ಲೂರು ಈಶ್ವರನ್, ಮುಂತಾದವರ ಬರೆಹಗಳು ಇದಕ್ಕೆ ಸಾಕ್ಷಿ.