‘ವಚನ ಸಂಸ್ಕೃತಿ’ ಸಾಹಿತ್ಯ ಹಾಗೂ ಚಳುವಳಿಯ ರೂಪದಲ್ಲಿ ಭಾರತೀಯ ಪರಂಪರೆಯ ಮೇಲೆ ತನ್ನದೆ ಆದ ಮುದ್ರೆ ಹಾಕಿದೆ. “ನಡೆ ಹಾಗೂ ನುಡಿ”ಯನ್ನು ಒಂದಾಗಿಸಲು ಶರಣ ಪರಂಪರೆಯಲ್ಲಿ ವಿಶೇಷ ಕಾಳಜಿವಹಿಸಲಾಗಿತ್ತು. ಇದರ ಬಹುಮುಖಿ ಸಂವೇದನೆಗಳು ಸಮಾಜದ ಬದಲಾವಣೆಗೆ ಹಂಬಲಿಸಿದ ಕಾಲವಾಗಿತ್ತು. ಈ ಹಿನ್ನೆಲೆಯಲ್ಲಿ ಬಸವತತ್ವ ಹಾಗೂ ಸಾಮಾಜಿಕ ಬದಲಾವಣೆಗೆ ಇರುವ ಸಂಬಂಧದ ಕ್ರಿಯಾತ್ಮಕ ಅಂಶಗಳನ್ನು ಗುರುತಿಸಬೇಕಾಗಿದೆ. ಈ ಒಟ್ಟು ಸಂದರ್ಭದ ಮಿತಿ ಎಂದರೆ ಎಲ್ಲ ಸಾಮಾಜಿಕ ಸಂವೇದನೆಗಳು ಜಾತಿಯ ಮೂಲಕ್ಕೆ ನಿಂತು ಬಹುಮುಖತ್ವ ದೊರಕದೇ ಹೋದದ್ದು.

ಕರ್ನಾಟಕ ವಿಶ್ವವಿದ್ಯಾಲಯದ ಮಹಾವಿದ್ಯಾಲಯಗಳ ಸಮಾಜಶಾಸ್ತ್ರ ಅಧ್ಯಾಪಕರ ಸಂಘ, ಕೂಡಲಸಂಗಮ ಅಭಿವೃದ್ದಿ ಮಂಡಳಿಯ ನೆರವಿನೊಂದಿಗೆ ಅಕ್ಟೋಬರ್ ೨೯ ಹಾಗೂ ೩೦, ೨೦೦೧ಸರಂದು ಕೂಡಲಸಂಗಮದಲ್ಲಿ ‘ಬಸವತತ್ವ : ಸಮಾಜ ಹಾಗೂ ಸಾಮಾಜಿಕ ಬದಲಾವಣೆ’ ಎಂಬ ಅಂತರಶಿಸ್ತೀಯ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು.                      ಡಾ. ಶಿವಾನಂದ ಜಾಮದಾರ ಅವರು ಈ ಕ್ರಿಯೆಗೆ ಆಸರೆಯಾಗಿ ನಿಂತರು. ಡಾ. ಎ.ಇ. ಪುನೀತ, ಡಾ. ಜೋಗನ್ ಶಂಕರ ಮುಂತಾದವರು ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮಾನವಿಕ ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸೇರಿದ ತಜ್ಞರು ಪ್ರಬಂಧ ಮಂಡಿಸಿದ್ದಾರೆ. ಸಮಾಜಶಾಸ್ತ್ರದ ಪ್ರಾಧ್ಯಾಪಕರಲ್ಲದೆ ನಾಡಿನ ಖ್ಯಾತ ಸಂಶೋಧಕರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಎಸ್.ಬಿ. ಹಿರೇಶಿಂಗನಗುತ್ತಿ, ಎನ್. ಹೆಚ್. ಹಿರೇಮಠ, ಎಂ.ಎಸ್. ಹಳಪೇಟಿ, ಶಿವನಾಗಪ್ಪ ದರಗಾದ, ಎಸ್ಕೆ, ಶರಣು ಕೋಟಿ, ಕೂಡಲ ಸಂಗಮ ಅಭಿವೃದ್ದಿ ಮಂಡಳಿ ಹಾಗೂ ಭೂಸೇನಾ ನಿಗಮದ ಸಿಬ್ಬಂದಿ ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಾಯ ಮಾಡಿದ್ದಾರೆ. ಸಮಾಜಶಾಸ್ತ್ರ ಪ್ರಾಧ್ಯಾಪಕರ ಸಂಘದ ಎಲ್ಲ ಪದಾಧಿಕಾರಿಗಳ ನೆರವನ್ನು ಸ್ಮರಿಸುವೆ.

ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟ, ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಬಾಗಲಕೋಟ, ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಹುನಗುಂದ, ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಹುನಗುಂದ, ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಇಲಕಲ್ಲ, ವೆಂಕಟೇಶ ಸಾಕಾ ಹಾಗೂ ಹೊಸಮನಿ ಸಹೋದರರು ವಿಶೇಷ ಆರ್ಥಿಕ ನೆರವು ನೀಡಿದ್ದಾರೆ. ಇವರೆಲ್ಲರಿಗೂ ಕರ್ನಾಟಕ ವಿಶ್ವವಿದ್ಯಾಲಯದ ಮಹಾವಿದ್ಯಾಲಯಗಳ ಸಮಾಜಶಾಸ್ತ್ರ ಅಧ್ಯಾಪಕರ ಸಂಘ ಕೃತಜ್ಞತೆ ಸೂಚಿಸುತ್ತದೆ.

ಈ ವಿಚಾರ ಸಂಕಿರಣದಲ್ಲಿ ಮಂಡಿಸಿದ ಸಂಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಹೊರತರಲು ಮಾನ್ಯ ಕುಲಪತಿಯವರಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು ಅನುಮತಿ ನೀಡಿ ಮುನ್ನುಡಿ ಬರೆದು ಸಹಕರಿಸಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಜತಗೆ ಕುಲಸಚಿವರಾದ ಡಾ. ಕೆ.ವಿ. ನಾರಾಯಣ ಅವರು ಈ ಪ್ರಕಟಣೆಯು ಹೊರಬರುವಲ್ಲಿ ಆಡಳಿತಾತ್ಮಕವಾಗಿ ಸಹಕರಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು.

ಪುಸ್ತಕವನ್ನು ಸೊಗಸಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೂ, ಮುದ್ರಣಪೂರ್ವ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೂ, ಮುಖಪುಟವನ್ನು ರಚಿಸಿರುವ ಶ್ರೀ ಕೆ.ಕೆ. ಮಕಾಳಿ ಅವರಿಗೂ ನನ್ನ ಕೃತಜ್ಞತೆಗಳು.

ಮಹೇಶ ತಿಪ್ಪಶೆಟ್ಟಿ
ಸಂಪಾದಕ
ಮಹಾಂತ ನಗರ
ಹುನಗುಂದ ೫೮೭೧೧೮