ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು  ಹೊಂದಿರುವ  ಕರ್ನಾಟಕದ  ಆಧುನಿಕ  ಇತಿಹಾಸದಲ್ಲಿ  ಕರ್ನಾಟಕದ  ಏಕೀಕರಣ  ಒಂದು  ಐತಿಹಾಸಿಕವೂ  ಮತ್ತು  ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ.  ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ  ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗನ್ನೊಗೊಂಡ  ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ  ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ  ವಿಶ್ವಮಾನವ ನಾಗಿ  ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು  ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ 600ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕನ್ನಡದ ವಚನ ಸಾಹಿತ್ಯ ಭಾರತೀಯ ಸಾಹಿತ್ಯದಲ್ಲಿ ಮಾತ್ರವಲ್ಲ, ವಿಶ್ವ ಸಾಹಿತ್ಯದಲ್ಲೇ ಅತ್ಯಂತ ವಿಶಿಷ್ಟವಾದ ಸಾಹಿತ್ಯ ಸ್ವರೂಪ. ‘Imitations of Christ’ ಎಂಬ ಬರಹಗಳು ಮಾತ್ರ ಸ್ವಲ್ಪಮಟ್ಟಿಗೆ ಈ ಸ್ವರೂಪವನ್ನು ಹೊಂದಿವೆ. ಇಡೀ ಒಂದು ಸಹಸ್ರಮಾನದ ಸಾಹಿತ್ಯವನ್ನು, ವಿಚಾರಶೀಲತೆಯನ್ನು, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಹಾಗೂ ಸಂಕೀರ್ಣ ಆಧ್ಯಾತ್ಮಿಕ ಚಿಂತನ ಧಾರೆಯನ್ನು ಧಾರಣ ಮಾಡಿಕೊಂಡು ಇನ್ನುಳಿದ ಸಾಹಿತ್ಯಕ್ಕಿಂತ ಹೆಚ್ಚಿಗೆ ಪಂಡಿತರಿಂದ ಪಾಮರರ ಬದುಕಿನವರೆಗೂ ಅನನ್ಯ ಪ್ರಭಾವವನ್ನು ಬೀರಿದ ಪ್ರಕಾರ ಇದು. ಅದರ ಬಾಹ್ಯ ಸ್ವರೂಪ ತನ್ನ ಸರಳತೆಯಿಂದ, ಸಹಜತೆಯಿಂದ ಬದುಕಿನ ನಿಕಟಾತಿನಿಕಟ ಸಂಪರ್ಕದಿಂದ ನಮ್ಮ ಮನಸ್ಸನ್ನು ಸೆಳೆಯುವಂತೆ ಎಲ್ಲ ಕಾಲಕ್ಕೂ, ಎಲ್ಲ ಜನಾಂಗಕ್ಕೂ, ಎಲ್ಲ ಧರ್ಮಕ್ಕೂ ಪ್ರಸ್ತುತ ಎನಿಸುವ ಜೀವಂತ ಚಿಂತನಶೀಲತೆಯನ್ನು ಮತ್ತು ಅದರ ಪದರ ಪದರಗಳನ್ನು ಬಿಡಿಸಿ ತೆರೆದು ತೋರುವ ಮೂಲಕ ನಮ್ಮ ಮನಸ್ಸಿನ ಆಳದಲ್ಲಿ ಬೇರೂರುವ ಸಾಹಿತ್ಯ ಇದು. ಸಾಹಿತ್ಯ ಎಂದರೆ ಸಾಹಿತ್ಯವಾಗಿ, ಧಾರ್ಮಿಕ ಎಂದರೆ ಧಾರ್ಮಿಕವಾಗಿ, ನೀತ್ಯಾತ್ಮಕ ಎಂದರೆ ನೀತ್ಯಾತ್ಮಕವಾಗಿ, ಸಾಮಾಜಿಕ ಚಲನಶೀಲತೆಯ ಪರಿಣಾಮಕಾರಿ ದಾಖಲೆ ಎಂದರೆ ಅಂಥ ದಾಖಲೆಯಾಗಿ, ಆರ್ಥಿಕ ವೃತ್ತಾತ್ಮಕ ಹಾಗೂ ಸುಭದ್ರ ಬದುಕಿನ ಬೆಳಕಿನ ಬೀಜಮಂತ್ರವಾಗಿ ಈ ವಚನಗಳು ಪರಿಣಮಿಸಿವೆ. ಜೀವನದ ಅತ್ಯಂತ ತಳ ಸ್ತರದ ಜೀವಗಳ ಆಳದ ಅನಿಸಿಕೆಗಳಿಂದ ಹಿಡಿದು ದೈವತ್ವದ ನೆಲೆಗೆ ಏರಿದ ತಾತ್ವಿಕ ಜೀವಗಳ ಅಂತರಂಗದ ನಿನಾದದವರೆಗೆ ಇವುಗಳ ಹರವು ಹಬ್ಬಿದೆ. ಈ ಕಾರಣದಿಂದಲೇ ಆಧುನಿಕ ಕನ್ನಡ ಸಾಹಿತ್ಯದಲ್ಲೂ ಕೂಡ ಸಾಕಷ್ಟು ದಟ್ಟವಾದ ಪ್ರಮಾಣದಲ್ಲಿ ವಚನಗಳು ಆವಿರ್ಭವಿಸುತ್ತಿವೆ. ನಮ್ಮ ನಮ್ಮ ಆತ್ಮಗಳೇ ನಮ್ಮೊಡನೆ ಪಿಸುನುಡಿ ಆಡಿದಂತೆ ಅನುಭವಗಮ್ಯವಾಗುವ ಈ ವಚನಗಳು ನಿತ್ಯ ಜೀವನದ ಸಂಗಾತಿಯಾಗುತ್ತ ಆಯಾ ಕಾಲಘಟ್ಟದ ಇತಿಹಾಸ, ಸಂಸ್ಕೃತಿ, ವೈಚಾರಿಕತೆ ಹಾಗೂ ಮನಸ್ಸಿನೊಳಗಿನ ಅನಿಸಿಕೆಗಳನ್ನು ಸಹಜ ಸಾಹಿತ್ಯ ಗುಣದಿಂದ ಪೋಷಿಸಿ ಅಭಿವ್ಯಕ್ತಿಸುತ್ತಿರುವ ಪ್ರಕಾರವಾಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಆರಂಭಿಸಿದ ಅಪೂರ್ವ ಮತ್ತು ಸಮಗ್ರ ಜೀವನ ಕ್ರಾಂತಿಯ ಹಿನ್ನೆಲೆಯಲ್ಲಿ ಮೂಡಿಬಂದ ಈ ವಚನಗಳು ತಮ್ಮ ಉದ್ದೇಶವನ್ನು ಹಾಗೂ ಕಾಲ ದೇಶಗಳನ್ನು ಮೀರಿ ನಿತ್ಯ ಪ್ರಸ್ತುತವಾಗುತ್ತವೆ. ವಿವಿಧ ವೃತ್ತಿಯ, ವಿವಿಧ ವಯೋಧರ್ಮದ, ವಿವಿಧ ಮನೋಧರ್ಮದ, ವಿವಿಧ ಅನುಭವಗಳ, ವಿವಿಧ ಧೀಃಶಕ್ತಿಯ ರೇಶ್ಮೆ ಎಳೆಗಳ ಹಾಸುಹೊಕ್ಕುಗಳನ್ನು ಪಡೆದಿರುವ ಈ ವಚನಗಳ ಅಧ್ಯಯನ, ವರ್ಗೀಕರಣ, ವಿಶ್ಲೇಷಣೆ, ವ್ಯಾಖ್ಯಾನ, ಚಿಂತನೆಗಳು ಒಂಬೈನೂರು ವರ್ಷಗಳಿಂದ ನಿರಂತರವಾಗಿ ನಡೆದು ಬಂದಿವೆ. ನಮ್ಮ ಸಾಹಿತ್ಯದ ಎಷ್ಟೋ ಮಹಾಕೃತಿಗಳು ಓದಿನ ವಲಯದಿಂದ, ಅನುಸಂಧಾನದ ವಲಯದಿಂದ ದೂರ ಸರಿದಿದ್ದರೂ ಈ ವಚನಗಳು ಕಾಲ ಸರಿದಂತೆ ಹೆಚ್ಚು ಹೆಚ್ಚು ಅಧ್ಯಯನ ಮತ್ತು ಅನುಸಂಧಾನಗಳಿಗೆ ಒಳಗಾಗಿವೆ. ಅವುಗಳ ನಿರಂತರ ಜೀವಧಾತುವಿಗೆ ಸಾಕ್ಷಿಯಾಗಿವೆ. ಎಷ್ಟೋ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಹಿತ್ಯಕ ಚಳುವಳಿಗಳು ಈ ಎಂಟು ನೂರು ವರ್ಷಗಳಲ್ಲಿ ಬಂದು ಹೋಗಿದ್ದರೂ ಅವುಗಳೆಲ್ಲ ತಮ್ಮ ಮೂಲ ಬೇರುಗಳನ್ನು ತನ್ನಲ್ಲಿ ಸುಪ್ತವಾಗಿ ಗರ್ಭೀಕರಿಸಿಕೊಂಡು ಮತ್ತೆಮತ್ತೆ ವರ್ತಮಾನಕ್ಕೆ ಮಿಡಿಯುವ ಅಪರೂಪದ ಸಾತತ್ಯವನ್ನು ಹೊಂದಿವೆ. ಹೀಗಾಗಿ ಭಾರತೀಯ ಚಿಂತನ ಮನೋಧರ್ಮದಿಂದ, ಸಹೃದಯಶೀಲತೆಯಿಂದ ವಚನಾಭ್ಯಾಸವನ್ನು ಪ್ರವೇಶಿಸುವವರಿಗೆ ಮಾತ್ರವಲ್ಲದೆ ಪೌರಾತ್ಯ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಲ್ಲಿನ ಚಿಂತಕರಿಂದ ಕಾಲಕಾಲಕ್ಕೆ ಸ್ಫೋಟಗೊಂಡ ವಿನೂತನ ಹಾಗೂ ಕ್ರಾಂತಿಕಾರಕ ವೈಚಾರಿಕತೆಗಳನ್ನು ಅದು ಶಕ್ತವಾಗಿ ಹಿಡಿದಿಡುವಷ್ಟರ ಮತ್ತು ಪ್ರೇರೇಪಿಸುವಷ್ಟರ ಮಟ್ಟಿಗೆ ಸಮೃದ್ಧವೂ ಸಶಕ್ತವೂ ನಿತ್ಯದ ಬೆಳಕಿನ ಆಗರವೂ ಆಗಿಬಿಟ್ಟಿದೆ. ಈ ಕಾರಣದಿಂದ ವಚನ ಸಾಹಿತ್ಯದ ಮೇಲೆ ಇದುವರೆಗೆ ಬಂದ ಮತ್ತು ಬರುತ್ತಿರುವ ಅಧ್ಯಯನ ಮತ್ತು ಸಂಶೋಧನಗಳ ಗಾತ್ರ ಮತ್ತು ಪಾತ್ರಗಳು ಬೆರಗುಗೊಳಿಸುವಂತಿವೆ. ಎಷ್ಟೇ ಹಿಂಡಿದರೂ, ಹಿಂಜಿದರೂ, ಮತ್ತೂ ಮತ್ತೂ ತನ್ನ ಒಳಸತ್ವವನ್ನು ಅವಿಚ್ಛಿನ್ನವಾಗಿ ಉಳಿಸಿಕೊಂಡಿರುವ ಈ ಸಾಹಿತ್ಯ ಅಕ್ಷರ ಲೋಕದಲ್ಲಿ ಅನನ್ಯ ಪವಾಡವನ್ನು ಸೃಷ್ಟಿಸಿಬಿಟ್ಟಿದೆ.

ಬಸವಣ್ಣನವರ ಸ್ಫೂರ್ತಿದಾಯಕವಾದ ಬಹುಮುಖಿ ವ್ಯಕ್ತಿತ್ವದ ಅನನ್ಯ ಪ್ರಭಾವದ ಆಳದಿಂದ ಹೊಮ್ಮಿ ಬಂದ ಈ ವಚನಗಳು ಸುಸೂಕ್ಷ್ಮ ಎಳೆಗಳ ಸಂಪೂರ್ಣ ವಿಶ್ಲೇಷಣೆ ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಬಸವತತ್ವ ಸಮಕಾಲೀನ, ಸಾಮಾಜಿಕ ಬದಲಾವಣೆಗೆ ಎಷ್ಟು ಪರಿಣಾಮಕಾರಿಯಾಗಿ ಮಿಡಿಯುತ್ತಿದೆ, ತುಡಿಯುತ್ತಿದೆ ಎಂಬುದನ್ನು ವಿವಿಧ ದೃಷ್ಟಿಕೋನಗಳಿಂದ ವಿವರಿಸಿಕೊಳ್ಳಲು ಮಾಡಿದ ಒಂದು ಪ್ರಯತ್ನ ಈ “ಬಸವತತ್ವ : ಸಾಮಾಜಿಕ ಬದಲಾವಣೆ” ಎಂಬ ಕೃತಿ. ಕೃಷ್ಣಾ ಮುಳುಗಡೆ ಯೋಜನೆಯ ಪುನರ್‌ವಸತಿ ಮತ್ತು ಅಭಿವೃದ್ದಿ ಯೋಜನೆ ಆಯುಕ್ತರು, ಸದಾ ಹೊಸಹೊಸ ವಿಚಾರಗಳಿಗೆ ತುಡಿಯುವ ಕ್ರಿಯಾಶೀಲ, ಡಾ. ಎಸ್.ಎಂ. ಜಾಮದಾರ ಅವರ ನೆರವು ಮತ್ತು ಪ್ರೋಕೂಡಲಸಂಗಮದಲ್ಲಿ  ನಡೆದ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಹದಿಮೂರು ಪ್ರಬಂಧಗಳ ಒಂದು ಸಂಪುಟ ಈ ಕೃತಿ. ಸಂಚಾಲಕರಾದ ಶ್ರೀ ಮಹೇಶ ತಿಪ್ಪಶೆಟ್ಟಿ ಅವರಿಂದ ಹಿಡಿದು ಪ್ರಸಿದ್ಧ ವಿದ್ವಾಂಸರಾದ ಡಾ.ಎಂ.ಎಂ. ಕಲಬುರ್ಗಿ ಅವರನ್ನೊಳಗೊಂಡು ಶ್ರೀ ಎಂ.ಪಿ. ಪ್ರಕಾಶ್ ಅವರವರೆಗೆ, ಹದಿನಾಲ್ಕು ಜನ ವಿವಿಧ ಸ್ವರೂಪದ ವಿದ್ವಾಂಸರು, ಚಿಂತಕರು, ಈ ನೆಲೆಯಲ್ಲಿ ಹಿಂದೆ ಬಂದ ಚಿಂತನಾಂಶಗಳಿಗೆ ಪೂರಕವಾಗಿ ಮತ್ತು ಪ್ರಶ್ನಕವಾಗಿ ತಮ್ಮ ಸೋಪಜ್ಞಶೀಲ ಹಾಗೂ ಸೂಕ್ಷ್ಮ ಸಂವೇದನಾಶೀಲ ಅಧ್ಯಯನದ ಫಲಿತಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಧರ್ಮದ ಬಗ್ಗೆ, ತಳವರ್ಗದ ಜನಮನಸ್ಸಿನ ಅನಿಸಿಕೆಗಳ ಬಗ್ಗೆ, ಮಹಿಳೆ ಮತ್ತು ತಳವರ್ಗದವರಿಗೆ ಬಸವತತ್ವ ತನ್ನ ಆಂತರ್ಯದಲ್ಲಿ ಇಂಬುಗೊಟ್ಟಿರುವ ವಿಧಾನಗಳ ಬಗ್ಗೆ, ಸಮಾಜ ವಿರುದ್ಧವಾದ ಹಾಗೂ ಜೀವನ ವಿರುದ್ಧವಾದ ಪ್ರವೃತ್ತಿಗಳನ್ನು ಪ್ರಥಮ ಬಾರಿಗೆ ಅತ್ಯಂತ ತೀವ್ರವಾಗಿ ವಿರೋಧಿಸಿದ ಬಗ್ಗೆ, ಸಮಾಜಶಾಸ್ತ್ರೀಯವಾದ ಪರಿಕಲ್ಪನೆಗಳ ಬಗ್ಗೆ ಈ ಬಸವ ವಚನ ಸಾಗರ ಅಳವಡಿಸಿಕೊಂಡಿರುವ ತೀಕ್ಷ್ಣ ಹಾಗೂ ಸೂಕ್ಷ್ಮ ಪ್ರತಿಕ್ರಿಯೆಗಳ ಬಗ್ಗೆ ಇಲ್ಲಿ ಮುಕ್ತ ಚಿಂತನೆ ನಡೆದಿದೆ. ಸಮಾಜ ವಿಜ್ಞಾನಿಗಳು, ಇತಿಹಾಸಕಾರರು, ತತ್ವಶಾಸ್ತ್ರವಿಧರು, ಅರ್ಥಶಾಸ್ತ್ರಜ್ಞರು, ಮಹಿಳಾ ಸಂವೇದನೆಯ ತೀಕ್ಷ್ಣ ವಿಚಾರವಂತರು, ಧರ್ಮ ಗುರುಗಳು, ಆಡಳಿತಗಾರರು, ರಾಜಕೀಯ ಚಿಂತಕರು ಹಾಗೂ ಸಾಹಿತ್ಯದ ಶ್ರೇಷ್ಠ ಮನಸ್ಸುಗಳು ಇಲ್ಲಿ ಸಮಾವೇಶಗೊಂಡಿರುವುದರಿಂದ ಈ ವಚನಗಳ ವಿಶ್ಲೇಷಣೆಗೆ ಒಂದು ಹೊಸತನ, ಹೊಸದಾರಿ ಪ್ರಾಪ್ತವಾಗಿದೆ. ಇಲ್ಲಿನ ಪ್ರತಿಯೊಂದು ಲೇಖನವೂ ಆಳವಾದ ಅಧ್ಯಯನ, ನಿಶಿತವಾದ ಚಿಂತನೆ ಹಾಗೂ ಅಭಿವ್ಯಕ್ತಿಯ ನಿಖರತೆ ಮತ್ತು ಸೂಕ್ಷ್ಮತೆಗಳಿಂದ ಮನಸೆಳೆಯುತ್ತವೆ. ವಚನಗಳ ಅಂತರಂಗ ವಿಸ್ತಾರ ಎಷ್ಟು ದೂರದವರೆಗೆ ಚಾಚಿಕೊಳ್ಳಬಹುದು ಎಂಬುದಕ್ಕೆ ಹಾಗೂ ನಮ್ಮ ವೈಚಾರಿಕತೆಯನ್ನು, ವಿಶ್ಲೇಷಣಾ ಶಕ್ತಿಯನ್ನು ನಿರಂತರವಾಗಿ ಪ್ರೇರಿಸುವ ಮತ್ತು ಬಹುಶಿಸ್ತೀಯ ನೆಲೆಯಲ್ಲಿ ಹೊಸ ಹೊಸ ಶೋಧಗಳಿಗೆ ಒಡ್ಡಿಕೊಳ್ಳುವ ಅಂತಃಶಕ್ತಿಯನ್ನು ಪಡೆದಿವೆ ಎಂಬುದಕ್ಕೆ ಇಲ್ಲಿನ ಲೇಖನಗಳು ಜೀವಂತ ಸಾಕ್ಷಿಯಾಗಿವೆ. ಇವುಗಳ ಓದು ವಚನ ಸಾಹಿತ್ಯ ಚಿಂತಕರಿಗೆ ಕೆಲವು ಹೊಸ ಹೊಳವುಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ.

ಇಂಥದೊಂದು ಸಮಾವೇಶವನ್ನು ಸಂಘಟಿಸಿದ ಸಂಚಾಲಕರಿಗೆ, ಇದಕ್ಕೆ ತಮ್ಮ ಕರ್ತೃತ್ವ ಶಕ್ತಿಯ ಆಶ್ರಯವನ್ನು ನೀಡಿದ ಡಾ.ಎಸ್.ಎಂ. ಜಾಮದಾರ ಅವರಿಗೆ, ಭಾಗವಹಿಸಿದ ಹೊಸ ಹುಡುಕಾಟದ ನಿರಂತರ ಪ್ರಜ್ಞೆಯಲ್ಲಿ ತಮ್ಮನ್ನು ಒಳಗು ಮಾಡಿಕೊಂಡಿರುವ ಲೇಖಕರಿಗೆ ಹಾಗೂ ಸಂಪಾದಕರಿಗೆ ಅಭಿನಂದನೆಗಳು.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಯವರು