ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡ ತತ್ವರೂಪಿ ವಿಚಾರಧಾರೆ ಪ್ರಭುಸತ್ತೆ ಮತ್ತು ವೈದಿಕಸತ್ತೆ ಹೇಳಿಕೊಂಡು ಬಂದಿದ್ದ ಏಕನಾಯಕತ್ವದ ಸಿದ್ಧಾಂತ, ವಿಚಾರ, ಬದುಕು, ಸಮಾಜವನ್ನು ವಿರೋಧಿಸುತ್ತಲೇ ಹುಟ್ಟಿಕೊಂಡ ಬಹುನಾಯಕತ್ವದ ಚಳುವಳಿಯಾಗಿದೆ. ಅಂದು ವೈದಿಕ ಹಿತಾಸಕ್ತಿಯ ಹಿನ್ನಡೆಯಿಂದ ಶರಣ ಧರ್ಮ ಚರಿತ್ರೆಯಲ್ಲಿ ದಾಖಲಾದರೂ ವ್ಯವಸ್ಥೆಯ ಸಮಗ್ರ ಬದಲಾವಣೆಯ ಮಹತ್ವಾಕಾಂಕ್ಷೆ ಹಾಗೇ ಉಳಿಯಿತು. ಚರಿತ್ರೆ ಯುದ್ದಕ್ಕೂ ವೈದಿಕ ಮತಧರ್ಮ ಎಂದೂ ವ್ಯಕ್ತಿ, ಸಮಾಜ, ಸಿದ್ಧಾಂತಕ್ಕೆ ಸೆಡ್ಡು ಹೊಡೆದು ನಿಂತು ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ವೀರೋಚಿತ ಇತಿಹಾಸವೇನು ಅದಕ್ಕಿಲ್ಲ. ಆದರೂ ಅದು ಉಳಿದುಕೊಂಡಿದೆ ಮತ್ತು ಬೆಳೆಯುತ್ತಿದೆ. ಅದರ ಸ್ವಭಾವ ಹಾವಿನಂತಹದ್ದು. ಅದನ್ನು ವಿರೋಧಿಸಿದ ವ್ಯಕ್ತಿ ಸಿದ್ಧಾಂತ, ಸಮಾಜಗಳಾವವು ಅದರ ತಲೆಗೆ ಗುರಿಯಿಟ್ಟು ಹೊಡೆಯದೆ ಇರುವುದರಿಂದ ಅದು ಬಲಿಷ್ಠರ ಕೈಬಡಿಗೆ ನೋಡಿ ಸತ್ತಂತೆ ನೆಲಕಚ್ಚುವ, ಬಡಿಗೆ ಇಳಿಸಿದ ಮೇಲೆ ಹೆಡೆ ಎತ್ತುವ ಪ್ರವೃತ್ತಿ ಬಿಟ್ಟಿಲ್ಲ. ಚಾರ್ವಾಕ, ಜೈನ, ಬೌದ್ಧ, ವೀರಶೈವ, ಆಧುನಿಕ ಕಾಲದ ಪೆರಿಯಾರ್, ಜ್ಯೋತಿಭಾಪುಲೆ, ಅಂಬೇಡ್ಕರ್‌ರಂಥವರು ಎಷ್ಟೇ ಅದನ್ನು ವಿರೋಧಿಸಿ ಚರಿತ್ರೆಯನ್ನು ಬಿಚ್ಚುತ್ತ ಅದರ ಬೇರುಬಿಳಲುಗಳನ್ನು ಕಿತ್ತುವ ಪ್ರಯತ್ನ ನಡೆಸಿದರೂ ಅದು ಹಾಗೇ ಉಳಿದುಕೊಂಡಿದೆ. ಎದುರಾಳಿಯ ದೌರ್ಬಲ್ಯಗಳನ್ನು ಗುರುತಿಸುತ್ತಲೇ ಅದರ ಮೂಲಕವೇ ಒಳಹೊಕ್ಕು ನೆತ್ತಿ ಸವರುವ ಅದರ ತಂತ್ರಗಾರಿಕೆಯನ್ನು ಸೂಕ್ಷ್ಮವಾಗಿ ಅರಿಯಬೇಕಾಗಿದೆ.

ಆಧುನಿಕ ಕಾಲದಲ್ಲಿಯೂ ಸನಾತನ ಮತಸ್ಥ ಧರ್ಮ ಬಿತ್ತಿದ ಲಿಂಗನೆಲೆಯ ವೈರುಧ್ಯಗಳು ಯಂತ್ರ ನಾಗರೀಕತೆ-ನಾಚುವಂತೆ-ಸಾಮಾಜಿಕ ಮೌಲ್ಯವಾಗಿ ಉಳಿದಿರುವುದು ಆತಂಕದಾಯಕ ಸಂಗತಿ. ಬೌದ್ಧ ಧರ್ಮ, ಜೈನ ಧರ್ಮಗಳು ಹೆಣ್ಣಿನ ಬದುಕುವ ಹಕ್ಕಿನ  ಬಗ್ಗೆ ತಮ್ಮ ಕಾಲದ ಮಿತಿಯಲ್ಲಿಯೇ ಮಾತನಾಡಿವೆ. ಹೆಣ್ಣೊಂದು ಭೋಗ ಬದುಕಿನ ತೊತ್ತೆಂಬುದನ್ನು ವಿರೋಧಿಸಿದ  ಆಧುನಿಕ ವಿಚಾರವಾದಿಗಳ ನಡುವೆಯೂ ಹೆರುವಯಂತ್ರಕ್ಕಿಂತಲೂ ಭಿನ್ನವಾದ ಬದುಕೇನು ಆಕೆಗೆ ದಕ್ಕಿಲ್ಲ. ಬಸವಣ್ಣನ ಪೂರ್ವದಲ್ಲಿಯೇ ಸಾಮಾಜಿಕ ಅನಿಷ್ಠಗಳಾಗಿದ್ದ ಜಾತಿ, ವರ್ಗ, ಲಿಂಗ ನೆಲೆಯ ಬಗ್ಗೆ ಆದ್ಯ ವಚನಕಾರರು ವೈಚಾರಿಕ ನೆಲೆಯಲ್ಲಿ ಪ್ರಗತಿಪರ ವಾದ ವಿಚಾರಗಳ ಮೂಲಕ ಒಂದು ಪ್ರತಿಭಟನಾತ್ಮಕ ನೆಲೆಗಟ್ಟನ್ನು ಒದಗಿಸಿದ್ದರು. ಯಾವುದೇ ಸಿದ್ಧಾಂತ, ವಿಚಾರ ವ್ಯಕ್ತಿ-ವೈದಿಕ ಧರ್ಮವನ್ನು ವಿರೋಧಿಸುತ್ತ ತನ್ನ ಅನನ್ಯತೆ ಯನ್ನು ಉಳಿಸಿಕೊಳ್ಳುವ ಸಂದರ್ಭದಲ್ಲಿ ಅತ್ಯಂತ ಗಂಭೀರವಾಗಿ ಎತ್ತಿಕೊಳ್ಳುವ ಸಮಸ್ಯೆ ಗಳಲ್ಲಿ ಲಿಂಗ ಸಮಸ್ಯೆಯು ಒಂದು. ಭಾರತದ ನೆಲದಲ್ಲಿ ಹುಟ್ಟಿದ ಚಳುವಳಿಗಳಿಗೆಲ್ಲ ಧರ್ಮದ ಚೌಕಟ್ಟೊಂದು ಇರುವುದರಿಂದ ಅದರಾಚೆಗೆ ಚಳುವಳಿಯ ಚಾಚುವಿಕೆ ಆದಂತಿಲ್ಲ. ಧರ್ಮವೆಂಬುದು ಜಡಗಟ್ಟಿದ ಮೇಲೆ ಮತವಾಗಿ ಮನುಷ್ಯನನ್ನು ಕುಬ್ಜಗೊಳಿಸುವ ಕ್ರಿಯೆ ನಿರಂತರ ನಡೆಯುತ್ತಿದೆ. ಆ ಕಾರಣಕ್ಕಾಗಿಯೇ ಕಾರ್ಲ್‌ಮಾರ್ಕ್ಸ್ ಧರ್ಮವನ್ನು ಅಫೀಮು ಎಂದಿದ್ದು. ಇಂತಹ ಹೆಂಡವನ್ನು ಕುಡಿದವರು, ಕುಡಿಸುವವರು ರಚನಾತ್ಮಕವಾದದ್ದೇನನ್ನು ಮಾಡಲು ಸಾಧ್ಯವಿಲ್ಲ. ಜೀವ ವಿರೋಧಿತನ, ಹಟಮಾರಿತನವನ್ನು ವ್ಯಕ್ತಿತ್ವವಾಗಿ ಬೆಳೆಸುವ ಶಕ್ತಿ ಮತಕ್ಕೆ ಇರುವುದರಿಂದ ಅದು ವ್ಯಕ್ತಿಯನ್ನು ಧರ್ಮದ ನೆಲೆಯಿಂದ, ತನ್ನೆಡೆಗೆ ಎಳೆದು ಕೊಂಡು ಹಿಂಸಾತ್ಮಕ ಆನಂದವನ್ನು ಸಹಜವಾಗಿಸುತ್ತದೆ. ಹೆಣ್ಣಿನ ವಿಷಯದಲ್ಲಿಯೂ ವೈದಿಕಧರ್ಮ ಈ ಗುಣವನ್ನು ಉದಾರ ವಾಗಿಯೇ ತೋರುತ್ತ ಬಂದಿದೆ.

ಬಸವಾದಿ ಶರಣರ ಪೂರ್ವದಲ್ಲಿಯೇ ಆದ್ಯ ವಚನಕಾರರು ಸಾಮಾಜಿಕ ಬದುಕಿನ ಲ್ಲೊಂದು ಗಟ್ಟಿತನವನ್ನುಂಟು ಮಾಡಿದ್ದರು. ಅದರ ಮೇಲೆ ಹೊಲೆಯ ಹದಿನೆಂಟು ಜಾತಿಯ ಜನರು ಅನುಭಮಂಟಪದಲ್ಲಿ ಸಾಮಾಜಿಕ, ಧಾರ್ಮಿಕ ಚಿಂತನ ಮಂಥನವನ್ನು ನಡೆಸಿದರು. ಸ್ತ್ರೀ ಸಂಬಂಧಿ ವಿಷಯವಾಗಿ ಜೇಡರ ದಾಸಿಮಯ್ಯನಂತಹ ಹಿರಿಯ ಆದ್ಯ ವಚನಕಾರ ಚೈತನ್ಯವಾದದ ನೆಲೆಯಲ್ಲಿ ಹೆಣ್ಣು ಗಂಡಿನ ಸಮಸ್ಯೆಗೆ ಉತ್ತರ ರೂಪಿ ಮಾತುಗಳನ್ನು ಆಡಿದ್ದ. ಈ ಮಾತುಗಳ ಮೇಲಿಂದಲೇ ನಂತರ ಬಂದ ವಚನಕಾರರು ಹಿಗ್ಗಿಸಿ ಮಾತನಾಡಿದರು. ಪ್ರಶ್ನಿಸುವ, ಪ್ರತಿಭಟಿಸುವ ರೀತಿ, ಧೋರಣೆಯ ಮಾತುಗಳು ಬಸವಾದಿ ಶರಣರ ಮೂಲಕ ಹೊರಬರುವ ಪೂರ್ವದಲ್ಲೊಂದು ಹದ್ರಗೊಂಡ ನೆಲವಿತ್ತು. ನಿಸರ್ಗ ಸಹಜವಾಗಿ ಹೆಣ್ಣು ಜೀವ ಹುಟ್ಟುತ್ತದೆ. ನಂತರ ಆ ಹೆಣ್ಣು ಜೀವವನ್ನು ಹಿಚುಕಿ ಹಿಚುಕಿ ಹೆಂಗಸಾಗಿಸುವುದಲ್ಲಿ ನಡೆಯುತ್ತದೆ. ಹುಟ್ಟುವ ಹೆಣ್ಣು ಜೀವ ಹೆಂಗಸಾಗುವುದೆಲ್ಲ ಜೈವಿಕ, ನೈಸರ್ಗಿಕ ಕಾರಣಗಳಿ ಗಾಗಿಯಲ್ಲ. ಸಾಮಾಜಿಕ, ಸಾಂಸ್ಕೃತಿಕ ಒತ್ತಡಗಳಿಂದ ಹೆಂಗಸಾಗುವುದರಿಂದ ನಿರಂತರ ಅನ್ಯಾಶ್ರಯದಲ್ಲಿ ಬದುಕುವುದೇ ಸುರಕ್ಷಿತವೆಂದು ನಂಬಿಸುತ್ತಾರೆ ಮತ್ತು ನಂಬುತ್ತಾಳೆ. ಜೈವಿಕ ಕಾರಣಕ್ಕಾಗಿ ಹೆಣ್ಣು ಲಿಂಗಿಯಾಗಿ ಹುಟ್ಟುವ ಜೀವ ಸಮಾಜ ನಿರ್ದೇಶನ ನೀಡಿದ ಸ್ಥಾನದಲ್ಲಿಯೇ ಒಗ್ಗಿಕೊಂಡು ಬೆಳೆಯಬೇಕಾಗುತ್ತದೆ. ಇಂತಹ ಜೈವಿಕ ಸಂಗತಿಗಳನ್ನು ಜೇಡರದಾಸಿಮಯ್ಯ ಅರ್ಥ ಮಾಡಿಕೊಂಡಿದ್ದ. ಆ ಕಾರಣಕ್ಕಾಗಿ ಅತ್ಯಂತ ವೈಜ್ಞಾನಿಕವಾದ ವಿಚಾರವನ್ನು ಧಾರ್ಮಿಕ ಪರಿಭಾಷೆಯಲ್ಲಿ ವೈಚಾರಿಕತೆಯನ್ನು ಮೈ ಗೂಡಿಸಿಕೊಂಡು ಹೇಳು ಮಾತುಗಳು –

“ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲಿ ಗಂಡೂ ಅಲ್ಲಿ ಕಾಣಾ! ರಾಮನಾಥ!”

ಎನ್ನುವುದರಲ್ಲಿಯೇ ಹೆಣ್ಣು ಗಂಡಿನ ಅಸಮಾನತೆಗೆ ಕಾರಣ ಮತ್ತು ಅದನ್ನು ಮೆಟ್ಟುವ ಸ್ಫೋಟಕ ಶಕ್ತಿಯಿದೆ. ಬಾಹ್ಯದ ದೈಹಿಕ ಬೆಳವಣಿಗೆಯಿಂದ ಗುರುತಿಸಲ್ಪಡುವ ಹೆಣ್ಣು-ಗಂಡಿನ ಆಕಾರದ ಒಳಗಿರುವ ಆತ್ಮ, ಉಸಿರು, ಚೈತನ್ಯಕ್ಕೆ ಯಾವುದೇ ಸೋಂಕಿರುವುದಿಲ್ಲ. ಹೀಗೆ ಸೋಂಕಿಲ್ಲಿದ ಹೃದಯ, ಆತ್ಮದ ಕ್ರಿಯಾಶೀಲತೆಯ ಮೇಲಿಂದ ವ್ಯಕ್ತಿತ್ವ ವೃದ್ದಿಸ ಬೇಕಾಗಿತ್ತು. ಆದರೆ ವ್ಯಕ್ತಿತ್ವವನ್ನು ನೀಡುವ ಸಾಮಾಜಿಕ, ಧಾರ್ಮಿಕ ಸಂಗತಿಗಳೆಲ್ಲ ಗಂಡಿನ ಮುಖ ಬೆಳಗಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಿವೆ. ಇದರಿಂದ ಗಂಡಿನ ಮುಖ ಸೂರ್ಯನಂತೆ ನಿಗಿನಿಗಿಸಿದೆ. ತಿಕ್ಕಲಾರದ ತೊಳೆಯಲಾರದ ಹೆಣ್ಣಿನ ಮುಖ ಸೂರ್ಯ ಮರೆಯಾದ ಮೇಲೆ ಕತ್ತಲೆಯ ಲೋಕದಲ್ಲಿ ಕಾಣಿಸಿಕೊಳ್ಳಬೇಕಾದ ನಕ್ಷತ್ರ, ಚಂದ್ರೆಯರಾಗಿರು ವುದರಿಂದ ಚಂದ್ರಮುಖಿಯರು, ಸೂರ್ಯಕಾಂತೆಯರು ಸೂರ್ಯ ಹೊರಳಿದತ್ತೆ ಹೊರಳುತ್ತ, ತಿರುಗತ್ತ ತಿರುಗುಣಿ ಮಡುಗಳಾದರೆ ಹೊರತು ಹರಿಯುವ ಹೆದ್ದೊರೆ ಯಾಗಲಿಲ್ಲ.

ಜೇಡರ ದಾಸಿಮಯ್ಯನ ಧಾರ್ಮಿಕ ಆತ್ಮ ಪರಮಾತ್ಮದ ಒತ್ತಾಸೆಯಿಂದ ಹೇಳಲ್ಪಟ್ಟ ವಚನಕ್ಕಿಂತಲೂ ಅಂಬಿಗರ ಚೌಡಯ್ಯ ಜೈವಿಕ ನೆಲೆಯಲ್ಲಿಯೇ ಆಧ್ಯಾತ್ಮಿಕ ಪರಿಭಾಷೆಯನ್ನು  ಮುರಿದು ಮಾತನಾಡುವ ರೀತಿಯನ್ನು ಅರಗಿಸಿಕೊಳ್ಳುವ ವೈಜ್ಞಾನಿಕ ಮನಸ್ಸಿರಬೇಕು. ಇಲ್ಲದಿದ್ದರೆ ಮಡಿವಂತಿಕೆಯ ಮನಸ್ಸುಗಳಿಗೆ ಸಂಪ್ರದಾಯದ ಆತಂಕಗಳು ಕಾಡದೆ ಇರವು. ಶರಣರ ಸಮೂಹದಲ್ಲಿಯೇ ಅಂಬಿಗರ ಚೌಡಯ್ಯ ಉಗ್ರವಾದಿಯಂತೆ ಕಾಣಿಸಿಕೊಳ್ಳುವನು. ಲಿಂಗ ಪರಿಕಲ್ಪನೆಯನ್ನು ದೈವಿನೆಲೆಯಿಂದ ಕಿತ್ತು ಮಾತನಾಡುವ ರೀತಿ ಹೀಗಿದೆ –

“ಆರು ಲಿಂಗ ಮೂರು ಲಿಂಗವೆಂಬರು,
ನಮಗುಳ್ಳುದೊಂದೆ ಲಿಂಗ,
ಒಂದು ಲಿಂಗದಲ್ಲಿ ಒಂದು ಮನಸಿಕ್ಕಿದಡೆ
ಮರಳಿ ಒಂದು ಲಿಂಗವನ ನೆನೆಯಲಿಲ್ಲವೆಂದಾತ ನಂಬಿಗರ ಚೌಡಯ್ಯ”
(ವ.ಸಂ.೧, ವ.ಸಂ-೫೪. ಪು. ೨೧)

ಇದು ಬೆಡಗಿನ ವಚನದಂತೆ ತಕ್ಷಣಕ್ಕೆ ಕಾಣಿಸಬಹುದು. ಆದರೆ ಲೌಕಿಕ ನೆಲೆಯಲ್ಲಿ ಇದರ ಅರ್ಥವನ್ನು ಗ್ರಹಿಸಬೇಕಾಗಿದೆ. ಶರಣರ ವಿಚಾರಧಾರೆಯನ್ನು ನಂತರ ಬಂದವರು ವಾಸ್ತವದ ನೆಲೆಯಲ್ಲಿ ಅರ್ಥೈಸದೆ ಇರುವದರಿಂದಲೇ ಅವು ಬರೀ ವಚನಗಳಾಗಿ ಉಳಿದವು. ಪೂಜೆಪಾಠಾದಿಗಳಿಗೆ, ಭಕ್ತಿಪೂರಿತ ಹಾಡುಗಳಾಗಿ ಸುಗಮ ಸಂಗೀತದ ಪೆಟ್ಟಿಗೆಯಲ್ಲಿ ಅಡಗಿದವೇ ಹೊರತು ಮನುಷ್ಯನ ಬುದ್ದಿ ಮನಸ್ಸುಗಳನ್ನು ಎಚ್ಚರಿಸುವ ಗಂಟೆಗಳಾಗಲಿಲ್ಲ. ಮಠಮಾನ್ಯಗಳು ವಚನಕಾರರನ್ನು, ವಚನಗಳನ್ನು ತಮ್ಮ ತಮ್ಮ ಹಿತಾಹಿತಗಳ ಉಳಿಕೆಗಾಗಿ ಧಾರಾಳವಾಗಿ ಬಳಸಿಕೊಂಡವೇ ವಿನಃ ಸಾಮಾಜಿಕ ಬದಲಾವಣೆಯ ಯಂತ್ರಕ್ಕೆ ಉಪಯುಕ್ತ ವಾಗುವಂತೆ ಮಾಡಲಿಲ್ಲ.

ಜೇಡರ ದಾಸಿಮಯ್ಯ ಹೆಣ್ಣು ಗಂಡಿನ ಬಗ್ಗೆ ಹೇಳಿದ ವ್ಯಾಖ್ಯಾನದ ಮೇಲಿಂದಲೇ ಉಭಯ ಲಿಂಗಿ ಸಮಾಜ ಕಟ್ಟ ಬಂದ ಶರಣ ಸಮುದಾಯದಲ್ಲಿಯೇ ವೈದಿಕ ನೆಲೆಯ ವಿಚಾರಧಾರೆ ಸಂಪೂರ್ಣ ನಿರಸಗೊಂಡಿರಲಿಲ್ಲ. ವೈದಿಕ ಧರ್ಮದ ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಅಭೂತ ಪೂರ್ವವಾದ ಗೌರವ, ಪ್ರೀತಿ, ನಂಬಿಕೆ, ಭಯ ಭಕ್ತಿಗಳನ್ನು ಇಟ್ಟುಕೊಂಡವರು ಇದ್ದರು. ಅದಕ್ಕಾಗಿಯೇ ವಚನಕಾರರ ಮಧ್ಯ ವಿರೋಧಾಭಾಸದ ಹೇಳಿಕೆಗಳು, ವಚನಗಳು ಹುಟ್ಟಿಕೊಳ್ಳಲು ಕಾರಣವಾಗಿವೆ ಎಂದು ಹೆಣ್ಣು ಖಾಸಗಿ ಆಸ್ತಿಯಲ್ಲಿ ಸೇರಿದಳೋ ಅಂದೇ ತನ್ನ ಸ್ಥಾನವನ್ನು ಸಾಮಾಜಿಕವಾಗಿ ಕಳೆದುಕೊಂಡು ಕುಟುಂಬ ನೆಲೆಯಲ್ಲಿ ಸಂರಕ್ಷಿಸಲ್ಪಡುವ ಅಮೂಲ್ಯ ವಸ್ತುವಾದಳು. ಸತ್ತಾ ಆಧಾರಿತ ಹಿಂದೂ ಧರ್ಮ ಪ್ರಭುತ್ವದಿಂದ ಪ್ರಜಾಪ್ರಭುತ್ವ ದವರೆಗಿನ ಕಾನೂನು, ಸೈನ್ಯ, ಪೋಲೀಸ್, ನ್ಯಾಯಾಲಯಗಳನ್ನು ತನ್ನ ರಕ್ಷಣೆಗಾಗಿ ಬಳಸಿ ಕೊಂಡು ಬಂದಿರುವುದು. ಪ್ರಜಾಪ್ರಭುತ್ವದ ನೆಲೆಯಲ್ಲೊಂದು ಲಿಂಗ ಸಮಾನತೆಯನ್ನು ಸಂವಿಧಾನಾತ್ಮಕವಾಗಿಯೇ ಒಪ್ಪಿಕೊಂಡು ಬರಲಾಗಿದೆ. ಇಂದೂ ಸಮಾಜವನ್ನು, ಕುಟುಂಬ ವನ್ನು ಮುನ್ನಡೆಸುವ ಸಂವಿಧಾನ ಅಂಬೇಡ್ಕರ್ ಬರೆದಿರುವುದೆ ಆದರೂ ವಾಸ್ತವವಾಗಿ ಅಲಿಖಿತ ಹಿಂದೂತ್ವದ ಭದ್ರ ಬುನಾದಿಯಾದ ಮನುಸ್ಮೃತಿ ನಮ್ಮನ್ನಾಳುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ನೋಡಿದರೆ ತಿಳಿಯುವುದು. ಜನಮನವನ್ನು, ಸಮಾಜವನ್ನು ನಿಯಂತ್ರಿಸುವ ಶಕ್ತಿ ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳೆಂದು ಒಪ್ಪಿಕೊಂಡು, ಪಾಲಿಸಿಕೊಂಡು ಬಂದಿರುವ ಮನುಪ್ರಣೀತ ವಿಚಾರಧಾರೆ ಎಂಬುದರ ಬಗ್ಗೆ ಅನುಮಾನಪಡಬೇಕಾಗಿಲ್ಲ. ಹೀಗೆ ವ್ಯಕ್ತಿಯ ಬುದ್ದಿ ಭಾವಗಳನ್ನು ಆವರಿಸಿಕೊಂಡಿರುವ ಸ್ಮೃತಿಗಳ ವಿಚಾರಧಾರೆಯನ್ನು ವೈಜ್ಞಾನಿಕ ಬೆಳವಣಿಗೆಯಿಂದಲೂ ಅಳಿಸುವುದು ಆಗಿಲ್ಲ. ವಾಸ್ತವ ಇಷ್ಟೊಂದು ಕಟುವಾಗಿರುವಾಗ ಶರಣರ ಕಾಲದಲ್ಲಿ ದಿಢಿರನೆ ಕ್ರಾಂತಿಯಾಗಬೇಕಾಗಿತ್ತು ಎಂಬುದು ಸಹ ಈ ಕಾಲದಲ್ಲಿ ನಿಂತು ಹೇಳುವಲ್ಲಿ ಆರೋಪಿತ ಮಾತುಗಳಾಗುತ್ತವೆ ವಿನಃ ಚಾರಿತ್ರಿಕ ಗ್ರಹಿಕೆಯಿಂದ ಹೊರಹೊಮ್ಮಿದ ವಿಚಾರಪೂರಿತ ಹೇಳಿಕೆಗಳಾಗಲಾರವು. ಇಂತಹ ಸಂಕೀರ್ಣ ಸ್ಥಿತಿಯನ್ನು ಅಲ್ಲಮಪ್ರಭು ಎದುರಿಸಿದ ಹಾಗಿದೆ. ಜೇಡರ ದಾಸಿಮಯ್ಯ ಹೆಣ್ಣು-ಗಂಡಿನ ಮಧ್ಯದ ಕಂದಕವನ್ನು ತುಂಬುವ ಅರ್ಥಪೂರ್ಣ ಸಾಮಾಜಿಕ ಜವಾಬ್ದಾರಿಯ ವ್ಯಾಖ್ಯಾನವನ್ನು ಆಧ್ಯಾತ್ಮದ ಪರಿಭಾಷೆಯಲ್ಲಿ ಈಗಾಗಲೇ ಹೇಳಿ ಅದರ ಮೂಲಕ ಒಂದು ದಿಕ್ಕು ದೆಸೆಯನ್ನು ಉಭಯಲಿಂಗಿ ಸಮಾಜಕ್ಕೆ ತೋರಿಸಿದ್ದ. ಅದರಲ್ಲಿ ಮುನ್ನಡೆಯಲು ನಂತರ ಬಂದ ವಚನ ಕಾರರು ಬೇರೆ ಬೇರೆ ರೀತಿಯ ಧ್ವನಿಯನ್ನು ಹೊರಡಿಸಿದರು. ಇಂತಹ ಧ್ವನಿಯ ಹಿಂದಿನ ಒತ್ತಡಗಳನ್ನು ಗುರುತಿಸುವುದಾಗಬೇಕಾಗಿದೆ. ಅಲ್ಲಮಪ್ರಭುವಿನಲ್ಲಿಯು ಈ ಗೊಂದಲಗಳು ಇದ್ದ ಬಗ್ಗೆ ಆಶ್ಚರ್ಯವಾಗುತ್ತದೆ. ಪ್ರಭು ಸಹ ಹೆಣ್ಣನ್ನು ಖಾಸಗಿ ಆಸ್ತಿಯಿಂದ ಬಿಡುಗಡೆ ಗೊಳಿಸುವ ಪ್ರಯತ್ನಕ್ಕಿಂತಲೂ ಅದರೊಳಗಿಟ್ಟೆ ಅದನ್ನು ಹೊಂದುವ ಮನಸ್ಸಿನ ಬಗ್ಗೆ ವಿವೇಚಿಸಿದ ರೀತಿ ಹೀಗಿದೆ –

“ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರ”
(ಸ.ವ.ಸಂ-೨, ಸಂ. ಡಾ.ಬಿ.ವ್ಹಿ. ಮಲ್ಲಾಪುರ, ವ.ಸಂ-೭೨, ಪು. ೨೫)

ನಿರ್ಜೀವ ವಸ್ತುವಿನಲ್ಲಿ ಸೇರಿದ ಹೆಣ್ಣು ಜೀವಕ್ಕಿಂತಲೂ ಪ್ರಭುವಿಗೆ ಇವುಗಳನ್ನು ಹೊಂದುವ ಮನಸ್ಸೆ ಮುಖ್ಯವಾಗಿ ಕಾಡಿದೆ. ನೆಲ, ಬಂಗಾರಗಳಲ್ಲಿ ಕರಗಿ ಹೋಗಿರುವ ನಿಧಿಯಂತಿರುವ ಹೆಣ್ಣನ್ನು ವೈದಿಕ ಧರ್ಮ ನಿರಂತರ ಕಾಳಸರ್ಪದ ಹಾಗೇ ಕಾಯ್ದಿದೆ ಮತ್ತು ಕಾಯುತ್ತಲೇ ಇದೆ. ಈ ಕಾಯುವ ಕ್ರಿಯೆಯ ಮೂಲದಿಂದಲೇ ಯುದ್ಧಗಳು ಹುಟ್ಟಿರು ವುದನ್ನು ಇತಿಹಾಸದ ಮೂಲಕ ತಿಳಿಯುವುದು. ಇಂದಿಗೂ ಕಾದಾಡುವ ಮೂಲ ಹೆಣ್ಣು, ಮಣ್ಣು ಎಂಬುದನ್ನು ನೋಡಬಹುದು. ಈ ಆಸ್ತಿಯ ವ್ಯಾಪ್ತಿಯಲ್ಲಿರುವ ಹೆಣ್ಣನ್ನು ಕದ್ದು ಒಯ್ಯುವ, ಬಚ್ಚಿಡುವ, ಮಾರುವ, ಒತ್ತೆ ಇಡುವುದಲ್ಲಿ ಗಂಡಿನ ಪರಾಕ್ರಮದ ಸಂಗತಿಗಳಾಗಿವೆ. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುವಾಗ ಬಳಸುವ ಕತ್ತಿ ಗುರಾಣಿಯಂಥ ವಸ್ತು ಹೆಣ್ಣು ಎಂಬುದನ್ನು ಗಮನಿಸಬೇಕಾಗಿದೆ. ಪ್ರಭುವಿನಂತಹ ಮೇಧಾವಿ ಶರಣರಿಗೂ ಖಾಸಗಿ ಆಸ್ತಿಯ ಪರಿಧಿಯಿಂದ ಹೆಣ್ಣನ್ನು ಬಿಡುಗಡೆಗೊಳಿಸುವ ಅನಿವಾರ್ಯತೆ ಎದುರಾಗಿಲ್ಲ. ಶಿಷ್ಟ ಸಂಸ್ಕೃತಿಯಲ್ಲಿ ಬುದ್ದಿ ಭಾವಗಳನ್ನು ಮುಚ್ಚಿಕೊಂಡ ವರಿಗೆ ಬದಲಾವಣೆಗಿಂತಲೂ ಸುಧಾರಣೆ, ಮನಪರಿವರ್ತನೆಯ ಮೂಲಕವೇ ಏನಾದರೂ ಆಗಲಿ ಎಂಬ ಹಂಬಲವುಳ್ಳವರೇ ಪರಂತು ಸಂಘರ್ಷದಿಂದ ಹೊಸ ಹುಟ್ಟುಕಂಡವರಲ್ಲ.

ಖಾಸಗಿ ಆಸ್ತಿಯನ್ನು ಕಾಯುವ ಬಲವಿದ್ದ ಗಂಡಸು ಯಜಮಾನನೆಂದು ಕರೆಯಿಸಿಕೊಂಡ. ಈ ಯಜಮಾನ ಕುಟುಂಬವೊಂದನ್ನು ತನ್ನ ಹಿತಕ್ಕನುಗುಣವಾಗಿ ಒಗ್ಗಿಸಿಕೊಂಡು ತನ್ನ ಬದುಕಿನ ಪರಿಧಿಯನ್ನು ಹಿಗ್ಗಿಸಿಕೊಂಡ. ಕುಟುಂಬ ನೆಲೆಯಲ್ಲಿ ಗಂಡಸಿನ ಅಧೀನದಲ್ಲಿಯೇ ಹೆಣ್ಣು ಇರುವುದು ಸುರಕ್ಷಿತ ಮತ್ತು ಹಾಗಿರುವುದು ಮೌಲ್ಯವೆಂದು ತೀರ್ಮಾನಿಸಿದ. ಬಲಿಷ್ಠತೆಯ ಎದುರಿಗೆ ಹೆಣ್ಣು ತಲೆತಗ್ಗಿಸಿ ನೆಲಬರೆಯುವುದಕ್ಕೆ ಮಾತ್ರ ಸೀಮಿತಗೊಂಡಳು. ಪಾತಿವ್ರತ್ಯ, ಶೀಲದ ಹೆಸರಿನಲ್ಲಿ ಆತನದೆ ಸಂತಾನವನ್ನು ಹೆತ್ತುಕೊಡುವ, ಅದನ್ನು ಬೆಳೆಸುವ ಕೂಲಿ ರಹಿತ ಕೆಲಸವನ್ನು  ಹೆಣ್ಣಿನ ಜವಾಬ್ದಾರಿಯಾಗಿಸಿದೆ. ಹೀಗೆ ಒಮ್ಮುಖವಾಗಿ ಹುಟ್ಟಿ ಕೊಂಡ ಪುರುಷ ಸೃಷ್ಟಿಯ ಧೋರಣೆ ಹೆಣ್ಣಿನ ಬದುಕಿಗೆ ಬರೆದ ಭಾಷ್ಯಗಳಾದವು. ಕಾನೂನು ನೀತಿ, ನಿಯಮಗಳೆಂದು ಸಂಪ್ರದಾಯಗಳನ್ನು ಮುಂದಿಟ್ಟು ಹೆಣ್ಣಿನ ಆತ್ಮಬಲ ಕುಗ್ಗಿಸಿದೆ. ಗಂಡಿನ ಆಶ್ರಯ ಮತ್ತು ಹೆಸರಿನ ಬಲವಿಲ್ಲದೆ ಬದುಕುವುದು ಹೆಣ್ಣಿಗೆ ಅಪರಾಧವೆಂದು ಭಾವಿಸಲಾಯಿತು. ಅದನ್ನೇ ಪ್ರಭು, ಬಸವಣ್ಣ ಹಲವು ಸಂದರ್ಭದಲ್ಲಿ ಒಪ್ಪಿಕೊಂಡು ಮಾತನಾಡಿರುವುದನ್ನು ಕಂಡು ಆಶ್ಚರ್ಯವಾಗುವುದು.

ಶರಣರ ಚಳುವಳಿ ಜಗತ್ತೆಲ್ಲ ಬೆಚ್ಚುವಂತಹ ಒಂದು ಕಾರ್ಯ ಮಾಡಿದ್ದನ್ನು ಹೆಮ್ಮೆ ಯಿಂದ ಹೇಳಿಕೊಳ್ಳಬೇಕಾಗಿದೆ. ಮೊಟ್ಟ ಮೊದಲ ಬಾರಿ ಸಾಮೂಹಿಕವಾಗಿ ಹೆಣ್ಣು ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ಗಂಡಸಿನ ಸರಿದೊರೆಯಾಗಿ ಸಾಮೂಹಿಕವಾಗಿ ಕಾಣಿಸಿ ಕೊಳ್ಳುವ ಅವಕಾಶ ಕಲ್ಪಿಸಿದ್ದು, ಸ್ತ್ರೀ ಬದುಕಿನಲ್ಲಿ ಶರಣರು ಒತ್ತಾಸೆಯಾಗಿ ನಿಂತು ಇಂತಹ ಉದಾತ್ತ ಪರಿಸರವನ್ನು ನಿರ್ಮಿಸಿದರು. ಇದೊಂದು ಚಾರಿತ್ರಿಕ ಮಹತ್ವವನ್ನು ಪಡೆದುಕೊಂಡ ಸಂಗತಿ. ವೀರಶೈವ ಸಿದ್ಧಾಂತದ ಮೂಲದಲ್ಲಿಯೇ ‘ಶರಣಸತಿ, ಲಿಂಗಪತಿ’ ಎಂಬ ವೈದಿಕ ಪರಿಭಾಷೆಯನ್ನು ಬಳಸಿದ್ದರಲ್ಲಿಯೇ ಲಿಂಗನೆಲೆಯ ಸ್ಥಾಪಿತ ಹಿತ ಅಡಗಿದೆ. ಭಾರತೀಯ ಸಮಾಜದಲ್ಲಿ ‘ಪತಿ’ ಎಂಬ ಪದವೇ ಶ್ರೇಷ್ಠತೆ, ಯಜಮಾನ, ದೊರೆ, ಅರಸ ಎಂಬ ಧ್ವನಿ ಯನ್ನು ಒಳಗೊಂಡಿದೆ. ಭಾಷಿಕವಾಗಿ ಹಿಂದೂಧರ್ಮಲಿಂಗ ವಿರೋಧಿ ಗುಣವನ್ನು ಸಮಾಜೀಕರಣಗೊಳಿಸಿದೆ. ಅದನ್ನು ಪ್ರಜ್ಞಾವಂತಿಕೆಯಿಂದ ಮೀರುವುದಾಗಬೇಕಾಗಿದೆ. ಇಲ್ಲಿ ಪತಿ ಎಂಬುದು ದೇವರು, ಸತಿ ಎಂಬುದು ಭಕ್ತಿ ಎಂದು ಕರೆದಿರಬಹುದು. ಆದರೆ ಸಾಮಾನ್ಯ ವಾಗಿ ದೇವರು, ಗಂಡ, ಪತಿ, ದೊರೆ, ಅರಸು ಇವೆಲ್ಲವೂ ಆಳುವ ಹಕ್ಕನ್ನು ಪಡೆದುಕೊಂಡ ವ್ಯಕ್ತಿತ್ವದ ಭಿನ್ನ ಮುಖಗಳು. ಸತಿ, ಭಕ್ತ, ಆಳು ಎಂಬವುಗಳಲ್ಲಿ ಗುಲಾಮ, ಶ್ರದ್ಧೆಯಿಂದ, ನಿಷ್ಠೆಯಿಂದ ದುಡಿಯುವ ವ್ಯಕ್ತಿಗಳನ್ನು ನೆನಪಿಸುತ್ತೇವೆ. ದೇವರು, ಗಂಡ, ಪತಿ, ಲಿಂಗಗಳೆಲ್ಲ ಪೂಜೆಗೊಳ್ಳಲು; ಆಳಲು, ಹಕ್ಕು ಚಲಾಯಿಸಲು, ಹುಟ್ಟಿದವುಗಳು. ಹೆಣ್ಣು, ಸತಿ, ಭಕ್ತಿ, ಆಳು ಇವರಲ್ಲಿ ಈ ಬಲಿಷ್ಠರಿಗೆ ವಿನಯದಿಂದ ಸೇವೆಗೈಯುವ, ಪೂರ್ವಜನ್ಮದ ಪಾಪಕರ್ಮ ದಿಂದ ಹುಟ್ಟಿದವರು ಎಂಬುದನ್ನು ಹಿಂದೂ ಧರ್ಮ ಹೇಳುತ್ತಲೇ ಅದನ್ನು ಪ್ರಭುತ್ವದ ಸಹಾಯದಿಂದ ಸಮಾಜ ಒಪ್ಪುವಂತೆ ಮಾಡಿದೆ. ಇದನ್ನೇ ಬಸವಣ್ಣ ಸ್ವೀಕರಿಸಿ ತಾನು ಕಟ್ಟ ಬಯಸಿದ ಸಮಾಜದೊಳಗೆ ಪ್ರವೇಶ ಪಡೆಯುವ ವ್ಯಕ್ತಿಗಳನ್ನು ಅಳೆಯುವ ಮಾನದಂಡವಾಗಿ ಮಾಡಿಕೊಂಡ. ಭವಿ ಭಕ್ತನಾಗು ವುದಾದರೆ ಸತಿಯಾದಂತೆ. ಹೀಗೆ ವಿನಯ, ನಿಷ್ಠೆಯನ್ನು ಲಿಂಗಕ್ಕೆ ತೋರುವುದರ ಮೂಲಕ ಶರಣನೆಂದು ಕರೆಯಿಸಿಕೊಳ್ಳಬೇಕೆಂಬ ಹಂಬಲ ಬಸವಣ್ಣ ನಲ್ಲಿ ಮನೆಮಾಡಿಕೊಂಡಿತ್ತು. ಈ ಹಂಬಲದಿಂದ ಹೇಳುವ ಮಾತುಗಳು, ವಿಚಾರಗಳು ಹೀಗಿವೆ –

“ದೇವನೊಬ್ಬ, ನಾಮ ಹಲವು
ಪರಮಪತಿವ್ರತೆಗೆ ಗಂಡನೊಬ್ಬ
ಮತ್ತೊಂದಕ್ಕೆರಗಿದಡೆ-ಮೂಗಕೊಯ್ವನು
ಹಲವು ದೈವದ ಎಂಜಲ ತಿಂಬವರನೇನೆಂಬೆ
ಕೂಡಲ ಸಂಗಮದೇವಾ”
(ಸ.ವ.ಸಂ.೧, ಸಂ. ಡಾ. ಎಂ.ಎಂ.ಕಲಬುರ್ಗಿ, ವ.ಸಂ. ೬೧೪. ಪು. ೧೫೪)

ಹೆಸರು, ರೂಪ ಬೇರೆ ಬೇರೆಯಾಗಿದ್ದರು ದೇವರು ಎನ್ನುವ ಶಕ್ತಿ ಒಂದೇ ಎನ್ನುವ ಬಸವಣ್ಣ ಹೆಣ್ಣನ್ನು ಪಾತಿವ್ರತ್ಯದ ಕಂದಕಕ್ಕೆ ನೂಕಿದ. ಒಂದೇ ಗಂಡಿನ ಜೊತೆಯಲ್ಲಿ ನಿಷ್ಠೆಯಿಂದ ಇರಬೇಕೆಂದು ಬಯಸುವುದರಲ್ಲಿಯೇ ಹೆಣ್ಣಿನ ಬದುಕುವ ಮತ್ತು ಆಯ್ಕೆಯ ಹಕ್ಕನ್ನು ಕಿತ್ತು ಕೊಂಡಂತಾಗಿದೆ. ಹೆಣ್ಣಿನ ಕುರಿತು ಹಾಗೇ ಮಾತನಾಡುವಾಗ ಪರಮಪತಿವ್ರತೆಗೆ ಗಂಡನೊಬ್ಬನೆ ಎಂದು ಶಾಸನೋಪಾದಿಯಲ್ಲಿ ಮಾತನಾಡುವ ಬಸವಣ್ಣ ಗಂಡ ಸತಿವ್ರತ ನಾಗಿರಬೇಕು ಎನಿಸಲಿಲ್ಲ. ಸತಿವ್ರತನಿಗೆ ಹೆಂಡತಿಯೊಬ್ಬಳೆ ಎಂದು ಹೇಳುವುದಾಗಲಿ, ಹಾಗೇ ನಡೆದುಕೊಳ್ಳುವುದಾಗಲಿ ಬಸವಣ್ಣನಿಂದಲೇ ಆಗಲಿಲ್ಲವೆಂದು ಹೇಳಿದರೆ ಬಸವಣ್ಣನ ಗುತ್ತಿಗೆ ದಾರರು ಮೈಪರಚಿಕೊಳ್ಳಬೇಕಾಗಿಲ್ಲ. ಶರಣರ ಮಧ್ಯೆದಲ್ಲಿಯೇ ‘ಈ ಶರಣಸತಿ ಲಿಂಗಪತಿ’ ತತ್ವವನ್ನು ಪ್ರತಿಭಟಿಸುವ, ಪ್ರಶ್ನಿಸುವವರು ಇದ್ದರು ಎಂಬುದನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ಅಂಬಿಗರ ಚೌಡಯ್ಯ ವೈದಿಕ ನೆಲೆಯ ಹಿತ, ಜಾತಿ ನೆಲೆಯ ಸೂತಕ, ವರ್ಗ ನೆಲೆಯ ಕ್ರೌರ್ಯ ಗಳನ್ನು ಮುಖಾಮುಖಿಯಾಗಿಯೇ ಎದುರಿಸಿ ವೈಚಾರಿಕ, ವೈಜ್ಞಾನಿಕವಾಗಿ ಮಾತನಾಡುತ್ತಾನೆ. ಕೆಳವರ್ಗದ ವಚನಕಾರರ ಬಗ್ಗೆ ಮರುಚಿಂತನೆ ನಡೆಯಬೇಕಾಗಿದೆ. ಶರಣ ಚಳುವಳಿ, ಶರಣ ಚಿಂತನೆ, ಚಳುವಳಿ, ತತ್ವ ಎಂದಾಗ ಮಾತ್ರ ಎಲ್ಲರೂ ಒಳಗೊಂಡ ವಿಚಾರ ವಿಮರ್ಶೆ ಎನಿಸಿಕೊಳ್ಳುತ್ತದೆ. ಬಸವತತ್ವವೆಂದು ಕರೆಯುವುದರಿಂದ ಬಹುಸಂಖ್ಯಾತ ವಚನಕಾರರನ್ನು ನೇಪಥ್ಯಕ್ಕೆ ಸರಿಸಿದಂತಾಗುತ್ತದೆ ಎಂಬ ಎಚ್ಚರವೂ ನಮಗೆ ಇರಬೇಕಾದದ್ದೆ. ಅಂಬಿಗರ ಚೌಡಯ್ಯನಂಥ ವ್ಯಕ್ತಿ ಜಾತಿ, ವರ್ಗದ ನೆಲೆಯಲ್ಲಿ ಅನುಭವಿಸಿದ ನೋವುಗಳಿಂದ ಹೇಳುವುದು ಹೆಚ್ಚು ವಸ್ತುನಿಷ್ಠವಾಗಿರಲು ಸಾಧ್ಯ. ಇಂಥವರು ಹೇಳುವ ವಿಚಾರಗಳು, ಸಂಗತಿಗಳು ಪ್ರಮಾಣಿತ ಸಂಗತಿಯಾಗಿ ಸಾರ್ವಕಾಲಿಕ ಅರ್ಥದ ಮೌಲ್ಯಗಳನ್ನು ಬಿಂಬಿಸುವ ಸಾಮರ್ಥ್ಯವನ್ನು ಹೊಂದಿರಲು ಸಾಧ್ಯ. ಬಸವಣ್ಣ ಅಲ್ಲಮಪ್ರಭು, ಚೆನ್ನಬಸವಣ್ಣನಂತಹ ಬುದ್ದಿವಂತ, ವಿಚಾರವಂತರ ಮಾತುಗಳನ್ನು ಉಳಿದ ಶರಣರು ಭಕ್ತಿಯ ನೆಲೆಯಲ್ಲಿ ಮೊಗಂ ಆಗಿ ಒಪ್ಪಿಕೊಂಡವರಲ್ಲ. ಅದನ್ನು ಅಳೆದು ಸುರಿದು, ಪ್ರಶ್ನಿಸಿ, ಸಂದೇಹಿಸಿ ತಮ್ಮ ಮನಸ್ಸಿಗೆ ಒಪ್ಪಿಗೆಯಾದ ಮೇಲೆಯೇ ಅದನ್ನು ನಿತ್ಯ ಬದುಕಿನಲ್ಲಿ ಸ್ವೀಕರಿಸಿದವರು. ಸ್ತ್ರೀ ಸಂಬಂಧಿ ಸಂಗತಿಗಳನ್ನು ತಾತ್ತ್ವಿಕ ಚೌಕಟ್ಟಿ ನಲ್ಲಿಟ್ಟು ಚರ್ಚಿಸುವ ಸಂದರ್ಭದಲ್ಲಿಯ ಅವರು ಮುಕ್ತ ವಾಗಿ ತಮ್ಮ ವಿಚಾರಗಳನ್ನು ಹಂಚಿ ಕೊಂಡಿರುವರು. ಅಂಬಿಗರ ಚೌಡಯ್ಯನ ಒಂದು ವಚನ ಇಡೀ ಶರಣ ಸಿದ್ಧಾಂತ, ವ್ಯವಸ್ಥೆಯ ಬುನಾದಿಯನ್ನೇ ಪ್ರಶ್ನಿಸುವ ಹಾಗಿದೆ.

“ಶರಣ ಸತಿ ಲಿಂಗ ಪತಿ ಎಂಬರು
ಶರಣ ಹೆಣ್ಣಾದ ಪರಿಯಿನ್ನೆಂತು? ಲಿಂಗ ಗಂಡಾದ ಪರಿಯಿನ್ನೆಂತು?
ನೀರು ನೀರು ಕೂಡಿ ಬೆರೆದಲ್ಲಿ, ಭೇದಿಸಿ ಬೇರೆ ಮಾಡಬಹುದೆ?
ಗಂಡು ಹೆಣ್ಣು ಯೋಗವಾದಲ್ಲಿ ಆತುರಹಿಂಗಿ ಘಟ ಬೇರಾಯಿತ್ತು
ಇದು ಕಾರಣ

ಶರಣ ಸತಿ, ಲಿಂಗಪತಿ ಎಂಬ ಮಾತು ಮೊದಲಿಂಗೆ
ಮೋಸ, ಲಾಭಕ್ಕಧೀನವುಂಟೆ? ಎಂದ ನಂಬಿಗ ಚೌಡಯ್ಯ”
(ವ.ಸ.೬, ಸಂ. ಡಾ. ಎಂ.ಎಂ. ಕಲಬುರ್ಗಿ, ವ.ಸಂ. ೨೫೮. ಪು.೮೩)

ಹೀಗೆ ಹೆಣ್ಣು ಗಂಡು ಎನ್ನುವುದು ಸೃಷ್ಟಿ ಕ್ರಿಯೆಯ ಸಂದರ್ಭದಲ್ಲಿಯೇ ಅವುಗಳ ಸಹಜತೆ ರೂಪುಗೊಂಡಿದೆ. ಹೀಗಿರುವ ನಿಸರ್ಗ ಸಹಜ ಗುಣ ಸ್ವಭಾವವನ್ನು ಪ್ರಧಾನ ಹಿತಕ್ಕನು ಗುಣವಾಗಿ ಒಗ್ಗಿಸಿಕೊಳ್ಳುವ ಧೋರಣೆಯನ್ನು ನಿರಾಕರಿಸುತ್ತ ‘ಶರಣಸತಿ ಲಿಂಗಪತಿ’ ಎಂಬ ಮಾತು, ವಿಚಾರವೇ ಅರ್ಥಹೀನವಾದದು. ಇದು ಹೆಣ್ಣನ್ನು ವಂಚಿಸುವ, ಮೋಸ ಗೊಳಿಸುವ ಸ್ಥಾಪಿತಶಕ್ತಿಯ ಸಂಚು ಎಂದು ನಿರ್ಭಿಡೆಯಿಂದ ನುಡಿಯುವನು.

ಹೆಣ್ಣನ್ನು ಖಾಸಗಿ ಆಸ್ತಿಯ ಆಚೆಗೆ ಇಟ್ಟು ನೋಡಿದ ಚಾರಿತ್ರಿಕ ಬೆಳವಣಿಗೆಯ ಕಾಲ, ಹನ್ನೆರಡನೆಯ ಶತಮಾನವೆನ್ನಲಾಗದು. ಇಪ್ಪತ್ತೊಂದನೆಯ ಶತಮಾನದಲ್ಲಿಯೇ ಗಾಂಧೀಜಿ; ಪೆರಿಯಾರರಂಥವರಿಗೂ ಹೊನ್ನು ಕಟ್ಟಿ ಹಾಕಿದ ಗೃಹದಿಂದ ಬಿಡುಗಡೆಗೊಳಿಸುವಲ್ಲಿ ಕಾಡಿದ ಅಸಹಾಯತೆಯನ್ನು ನೆನಪುಮಾಡಿಕೊಳ್ಳಬೇಕಾಗಿದೆ. ಪರಿಸ್ಥಿತಿ ಹೀಗಿರುವಾಗ ಹನ್ನೆರಡನೆಯ ಶತಮಾನದ ಶರಣರಿಂದ ಹೆಚ್ಚಿಗೆ ಅಪೇಕ್ಷಿಸುವುದು ಸರಿಯಲ್ಲ. ಆದಾಗ್ಯೂ ಸಾಮಾಜಿಕ ಮುನ್ನಡೆಯ ಆಶಯವನ್ನು ಹೊಂದಿದ್ದ ಶರಣ ಸಮುದಾಯದ ವೈಚಾರಿಕ, ಸೈದ್ಧಾಂತಿಕ ಮನೋಭಾವದ ಬಸವಣ್ಣನಿಂದ ಹೆಚ್ಚಿಗೆ ಬಯಸುವುದರಲ್ಲಿ ಅರ್ಥವಿದೆ. ವೈದಿಕ ಧರ್ಮದ ಒಳಹೊರಗನ್ನೆಲ್ಲ ಅರ್ಥಮಾಡಿಕೊಂಡಿದ್ದ ಬಸವಣ್ಣ ಮೊಟ್ಟ ಮೊದಲಿಗೆ ಅರ್ಥ ಮೂಲಕ್ಕೆ ಕೈಹಾಕಿದ. ಅಥವಾ ವ್ಯವಸ್ಥೆಯಿಂದಲೇ ಹೆಣ್ಣಿಗೆ ಸಮಾನತೆ, ಸ್ವಾತಂತ್ರ್ಯ ದೊರೆತರೆ ಅದು ಸಾಂಸ್ಕೃತಿಕ, ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗಬಲ್ಲದು ಎಂಬ ಸ್ಪಷ್ಟ ನಂಬಿಕೆಯು ಬಸವಣ್ಣನಿಗಿತ್ತು. ಆ ಕಾರಣಕ್ಕಾಗಿಯೇ ‘ಕಾಯಕ ಮತ್ತು ದಾಸೋಹದ’ ಸಿದ್ಧಾಂತವನ್ನು ತನ್ನ ಬಯಕೆಯ ಸಮಾಜದ ಅಸ್ಥಿಭಾರವಾಗಿಸಿದ. ಇದರಿಂದ ದುಡಿಯುವ ವರ್ಗದಲ್ಲೊಂದು ಆತ್ಮಬಲದ ಗಟ್ಟಿ ಧ್ವನಿ ಹುಟ್ಟಿಕೊಂಡಿತು. ಸಾಮಾಜಿಕ, ನ್ಯಾಯ, ಸಮಾನತೆ, ಸ್ವಾತಂತ್ರ್ಯ ವೆಂಬುದು ಹೆಣ್ಣು-ಗಂಡಿನ ದುಡಿಮೆಯನ್ನಾಧರಿಸಿರುತ್ತದೆ. ಹೆಣ್ಣಿನ ಮತ್ತು ಕೆಳವರ್ಗ ಜಾತಿಯ ಗಂಡಿನ ದುಡಿಮೆಯನ್ನು ಸಮಾಜ, ಕುಟುಂಬ ಗೌರವಿಸಬೇಕು, ಮನ್ನಣೆ ನೀಡಬೇಕು. ಇದರಿಂದ ವ್ಯಕ್ತಿ ಕೌಟುಂಬಿಕ ನೆಲೆಯಲ್ಲಿ ಗಟ್ಟಿಗೊಂಡು ಸಾಮಾಜಿಕ ನೆಲೆಯಲ್ಲಿ ಆತ್ಮಗೌರವ, ವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಬಸವಣ್ಣ ನಂಬಿಕೊಂಡಿದ್ದ. ಆ ಕಾರಣ ಕ್ಕಾಗಿ ಮೊಟ್ಟ ಮೊದಲಿಗೆ ಹೆಣ್ಣಿನ ದುಡಿಮೆಗೆ ಸಾಮಾಜಿಕ, ಕೌಟುಂಬಿಕ ಗೌರವ ತಂದು ಕೊಡುವ ಕೆಲಸ ಮಾಡಿದರು. ಇಂದಿಗೂ ‘ಹೌಸ್ ವೈಫ್ ಸಿಂಡ್ರೋಮಾ’ದಿಂದ ಮಹಿಳೆಗೆ ಬಿಡುಗಡೆ ಹೊಂದಲು ಆಗಿಲ್ಲ. ಆಕೆಗೆ ಕೌಟುಂಬಿಕ ದುಡಿಮೆಯನ್ನು ಜವಾಬ್ದಾರಿ, ಕರ್ತವ್ಯ ವೆಂದು ಹೇಳಿ ಜಾರಿಕೊಂಡಿದ್ದೇವೆ. ಹೆಣ್ಣಿನ ದುಡಿಮೆ ಅದು ಆಧುನಿಕ ಸಮಾಜ ಭಾವಿಸು ವಂತೆಯೇ ಹೇಳುವುದಾದರೆ ಸರಕಾರಿ ಉದ್ಯೋಗದ ಮೂಲದಿಂದ ದೊರೆಯುವ ಸಂಬಳ ವನ್ನು ಸಮಾಜ ಕುಟುಂಬ ಗೌರವಿಸುವುದಾಗಲಿ, ಆಕೆಯ ದುಡಿಮೆಯನ್ನು ಆಕೆಯ ವಿವೇಚನೆಗೆ ಅನುಗುಣವಾಗಿ ಬಳಸುವುದಾಗಲಿ ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದ ಸಂಗತಿ ಗಳಾಗಿವೆ. ಇಂತಹ ಸ್ಥಿತಿಯಿಂದ ಹೆಣ್ಣನ್ನು ಬಿಡುಗಡೆಗೊಳಿಸಲು ಬಸವಣ್ಣನವರು ವಿಚಾರ ಮಾಡಿದರು. ಹೆಣ್ಣು ಕಳೆದುಕೊಂಡಿದ್ದೆ ಸಾಮಾಜಿಕ ಉತ್ಪಾದನಾ ಸಂಬಂಧದ ಕೊಂಡಿಯನ್ನು ಕೂಡಿಸುವ ಮಹತ್ತರ ಕಾರ್ಯಕ್ಕೆ ಕೈಹಾಕಿದರು. ಕುಟುಂಬ ಮೂಲದ ಕೆಲಸವನ್ನು ಕಾಯಕದ ಪರಿಭಾಷೆಗೆ ತರುತ್ತಲೇ ಅದಕ್ಕೆ ಬೆಲೆ, ಗೌರವ ಸಿಗುವಂತೆ ಮಾತನಾಡಿದರು. ಅಂತಹ ಒಂದು ವಚನ ಹೀಗಿದೆ –

“ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯರಾಯ ಕಂಪಣವ ಹೇರುವ
ಎಮೆಗೆ ಆರೂ ಇಲ್ಲವೆಂಬಿರಿ
………………………………
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ
ಕೂಡಲ ಸಂಗಮದೇವಾ”
(ವ.ಸಂ.೧, ಸಂ. ಡಾ. ಎಂ.ಎಂ.ಕಲಬುರ್ಗಿ, ಪು.೩೫೨)

ಹೆಣ್ಣಿನ ಕೌಟುಂಬಿಕ ದುಡಿಮೆಯನ್ನು ಬೆಲೆಕಟ್ಟಿ ಅದಕ್ಕೆ ಸಾಮಾಜಿಕ ಗೌರವ ತಂದು ಕೊಟ್ಟ ಬಸವಣ್ಣನ ಒಳಗನ್ನು ಯಜಮಾನ ಸಂಸ್ಕೃತಿ ನಿಯಂತ್ರಿಸುತ್ತಿತ್ತು. ತಾವು ಕಟ್ಟ ಬಯಸಿದ ಸಮಾಜದೊಳಗಿನ ಜನರನ್ನು ಕೂಡಿಸಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿಯಿಂದ ಬಸವಣ್ಣನವರು ಹೊಂದಾಣಿಕೆ, ರಾಜಿ ಗುಣವನ್ನು ಹೊಂದಿರಬಹುದು. ಪ್ರಭುಸತ್ತೆ ಎಷ್ಟೊಂದು ಕ್ರೂರ ಮತ್ತು ಆಕ್ರಮಣಶೀಲವಾದದ್ದು ಎಂಬುದನ್ನು ಕಂಡಿದ್ದರು. ಅದಕ್ಕಾಗಿಯೇ ಭಕ್ತ ಸಮುದಾಯಕ್ಕೆ ಸಹನೆ, ಸಜ್ಜನಿಕೆಯ ಬಗ್ಗೆ ಒತ್ತಿ ಒತ್ತಿ ಹೇಳುವರು. ಗಂಡ, ಅರಸು, ಯಜಮಾನ ರೆಂಬುವರು ಕುಟುಂಬ, ಸಮಾಜ, ನಾಡನ್ನು ಆಳುವ ಬಲಿಷ್ಠರು. ಇವರಿಚ್ಚೆಗೆ ಅನುಗುಣವಾಗಿಯೇ ಬಲಹೀನರು, ಮಹಿಳೆಯರು ಬದುಕಬೇಕಾಗಿತ್ತು. ಇವರು ಮೆಚ್ಚುವಂತೆ ಬದುಕುವುದೇ ಪ್ರಯಾಸದ ಕೆಲಸವಾಗಿತ್ತು ಜನಸಮಾನ್ಯರಿಗೆ. ಇಂತಹ ಸಮಾಜ ದಲ್ಲಿರುವ ಬಸವಣ್ಣ ತನ್ನ ಹೊಸಧರ್ಮ, ಸಮಾಜ ಕುರಿತು ಮಾತನಾಡುವಾಗಲೆಲ್ಲ ಆ ಸಮಾಜದ ಪರಿಭಾಷೆ, ನುಡಿಕಟ್ಟುಗಳನ್ನು ಬಳಸಿಕೊಂಡ ಕಾರಣ ಕೆಲವು ಪ್ರಸಂಗಗಳಲ್ಲಿ ವಿರೋಧಾಭಾಸದ ಹೇಳಿಕೆಗಳು ಕಾಣಿಸಿ ಕೊಂಡಿದೆ. ಇಂತಹ ದ್ವಂದ್ವಗಳ ಬಗ್ಗೆ ಚರ್ಚಿಸಿದರೆ ಬಸವಣ್ಣನನ್ನು ಗುತ್ತಿಗೆ ಹಿಡಿದ ಜಂಗಮದ ಮನಸ್ಸುಗಳು ಕೆರಳಬೇಕಾಗಿಲ್ಲ. ವಾಸ್ತವದ ಸಾಧ್ಯಾಸಾಧ್ಯತೆಯನ್ನು ಅರಗಿಸಿಕೊಳ್ಳುವ ವಿವೇಕ, ತಾಳ್ಮೆಯಿದ್ದಾಗ ವ್ಯಕ್ತಿಯನ್ನು ಒಳಗೊಂಡ ಹಾಗೇ ಸಾಮಾಜಿಕ ಮಿತಿಗಳನ್ನು ಗುರುತಿಸುವ, ಮೀರುವ ಪ್ರಯತ್ನಗಳು ನಡೆಯಬಹುದು. ಬಸವಣ್ಣನ ಕನಸಿನ ಸಮಾಜದ ಕಂಬಗಳಾದ   ‘ಗುರು, ಲಿಂಗ, ಜಂಗಮ, ಭಕ್ತ’ ಇವರು ಮಾನಸಿಕವಾಗಿ ಮತ್ತು ಬೌದ್ದಿಕವಾಗಿ ವೈದಿಕ ಹಿತಗಳಿಂದ ಬಿಡುಗಡೆ ಹೊಂದಿರಬೇಕು ಎಂಬುದು ಬಸವಣ್ಣನ ಆಶಯವಾಗಿತ್ತೆಂದು ಭಾವಿಸು ವುದಾದರೆ ಈ ನಾಲ್ಕು ಆಧಾರಗಳು ಕುಸಿಯದಂತೆ, ಅಲುಗದಂತೆ ನೋಡಿಕೊಳ್ಳುವ ಜವಾಬ್ದಾರಿ ವ್ಯಕ್ತಿಗಳದ್ದೋ, ಸಮಾಜದ್ದೋ ಎಂಬುದು ಮೊದಲು ಸ್ಪಷ್ಟಗೊಳ್ಳಬೇಕು. ನಂತರ ಅದನ್ನು ಉಳಿಸಿಕೊಳ್ಳುವ ವಿಧಾನದ ಬಗ್ಗೆ ಮಾತನಾಡಬಹುದು.

“ಅರಸು ಮುನಿದಡೆ ನಾಡೊಳಗಿರಬಾರದಯ್ಯ
ಗಂಡ ಮುನಿದಡೆ ಮನೆಯೊಳಗೆ ಇರಬಾರದಯ್ಯ
ಕೂಡಲ ಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ ?”
(ವ.ಸ.೧, ಸಂ. ಡಾ. ಎಂ.ಎಂ. ಕಲಬುರ್ಗಿ, ವ.ಸಂ.೮೨೫. ಪು. ೨೧೨)

ಭಕ್ತ, ಗುರು, ಲಿಂಗ, ಜಂಗಮ ಇವು ಮತ್ತು ಇವರು ವ್ಯಕ್ತಿ ಮೂಲದ ದೌರ್ಬಲ್ಯಗಳಿಂದ ಬಿಡುಗಡೆಗೊಂಡವರಾಗಿರಬೇಕು. ದಯೆ, ಕ್ಷಮೆಯಾದಿ ಗುಣಗಳು ಇವರಲ್ಲಿರಬೇಕು. ಜಂಗಮನೆಂಬವನಂತೂ ವೀರಶೈವ ಸಿದ್ಧಾಂತವನ್ನು  ಪ್ರಸಾರ ಮಾಡುವ ಮಹತ್ತರ ಕಾರ್ಯ ಮಾಡುವುದಕ್ಕಾಗಿ ಹುಟ್ಟಿಕೊಂಡವನು. ಬೇರೆ ಬೇರೆ ವ್ಯಕ್ತಿ ಸಮುದಾಯಗಳ ಜೊತೆಯಲ್ಲಿ ವ್ಯವಹರಿಸಬೇಕಾದ, ಹೇಳುವ ಕೇಳುವುದನ್ನು ಮಾಡಬೇಕಾದ ವ್ಯಕ್ತಿಯಲ್ಲಿ ಕೋಪ ತಾಪಗಳಲ್ಲಿ ಮನೆಮಾಡಿಕೊಂಡಿದ್ದರೆ ಕೇಳುಗನ ವಿಶ್ವಾಸ, ಪ್ರೀತಿ ಗಳಿಸಲು ಸಾಧ್ಯವೆ? ಸಿದ್ಧಾಂತ ರೂಪಿ, ನಿಷ್ಠಾವಂತ, ವಿಚಾರವಂತ ಬಸವಣ್ಣನಂಥವರ ಮೇಲೆ ಸಿಟ್ಟಿಗೇಳುವುದರಲ್ಲಿ ತರ್ಕ ವಿದೆ. ಆದರೆ ಹೊಲೆಯ ಹದಿನೆಂಟು ಜಾತಿಯಾದಿಯಾಗಿ ಹೆಣ್ಣಮಕ್ಕಳನ್ನು ಹೊಸ ವಿಚಾರ ಧಾರೆಗೆ ಕರೆತರುವಲ್ಲಿ ಕೋಪ, ಸಿಟ್ಟು ಸೆಡವುಗಳಿದ್ದ ವ್ಯಕ್ತಿಗೆ ಜಂಗಮನೆಂದು ಕರೆಯಿಸಿ ಕೊಳ್ಳುವುದು ಆಗದ ಮಾತು. ಆದರೆ ಬಸವಣ್ಣ ಜಂಗಮದ ಸಿಟ್ಟನ್ನು ಸ್ಥಾಪಿತ ಶಕ್ತಿಗಳಾದ ಅರಸು, ಗಂಡನ ಜೊತೆಗಿಟ್ಟು ನೋಡುವುದರ ಔಚಿತ್ಯದ ಪ್ರಶ್ನೆ ಕಾಡದಿರದು.

ಹೆಣ್ಣನ್ನು ಹಸ್ತಾಂತರಿಸಬಹುದಾದ, ಮಾರಬಹುದಾದ ವಸ್ತುವೆಂದು ಹೇಳಿದ ಸಮಾಜ ದಲ್ಲಿಯೇ ಬಸವಣ್ಣ ಹುಟ್ಟಿ ಬೆಳೆದವನು. ತನ್ನ ವಿಚಾರಧಾರೆ, ಸಿದ್ಧಾಂತ, ವ್ಯಕ್ತಿತ್ವವನ್ನು ಜನ ನಂಬಬೇಕು, ಸಮಾಜ ಒಪ್ಪಬೇಕು ಎಂಬ ಇಕ್ಕಟ್ಟು ಕಾಣಿಸಿಕೊಂಡಾಗಲೆಲ್ಲ ಬ್ರಾಹ್ಮಣದ ದಿವ್ಯಗಳನ್ನು ನೆರವಿಗೆ ತೆಗೆದುಕೊಳ್ಳುವನು. ತನ್ನ ಜಂಗಮ ಪ್ರೀತಿ ನಿಷ್ಠೆಯನ್ನು ಅನುಮಾನಿಸಿದ ಶರಣ ಸಮೂಹದಲ್ಲಿ ಬಸವಣ್ಣ ಜಂಗಮನನ್ನು ಸಾಕ್ಷಾತ್ ಸಂಗಮದೇವನೆಂದೆ ನಂಬಿರುವೆ ಎಂಬುದನ್ನು ಪ್ರಮಾಣೀಕರಿಸಬೇಕಾಗಿದೆ. ಇಂತಹ ಪ್ರಸಂಗದಲ್ಲಿ ಬಸವಣ್ಣ ಕೈಹಿಡಿದ ಹೆಂಡತಿಯನ್ನು ಜಂಗಮರು ಕೇಳಿದರೆ ಕೊಡಲು ಸಿದ್ದನಿರುವನು. ಈ ಪ್ರಸಂಗ ಮಹಾಭಾರತದ ಪಾಂಡವರನ್ನು ನೆನಪಿಸುವುದು. ಜೂಜಿನಲ್ಲಿ ಪಣ ಕೊಡುವ ವಸ್ತುವಾಗಿ ದ್ರೌಪದಿ ಕಾಣಿಸಿ ಕೊಂಡಿದ್ದರೆ ಶರಣರ ಕಾಲಕ್ಕೆ ತಮ್ಮ ನಿಷ್ಠೆಯನ್ನು ತೋರಿಸುವ ಸಲುವಾಗಿ ಕೈಹಿಡಿದ ಹೆಂಡತಿ ಯನ್ನು ಬೇಡಿದವರಿಗೆ ನೀಡುವ ಉದಾರಿಗಳಾಗಿ ಕಾಣಿಸುವವರು. ಸತ್ಯಕ್ಕಾಗಿ ಹರಿಶ್ಚಂದ್ರ ಹೆಂಡತಿಯನ್ನು ಮಾರಿದ್ದು, ಜೂಜಿನಲ್ಲಿ ಹೆಂಡತಿಯನ್ನು ಪಣಕ್ಕೊಡುವುದು, ಆಡಿದ ಮಾತಿಗೆ ನಡೆಯನ್ನು ಬಗ್ಗಿಸಿಕೊಳ್ಳಲು ಹೆಂಡತಿಯನ್ನು ಅನ್ಯರು ಭೋಗಿಸಲು ನೀಡುವ ಉದಾರತೆ ಎಲ್ಲವೂ ಗಂಡಸಿನ ಮೂಗಿನ ನೇರದಲ್ಲಿಯ ನ್ಯಾಯಗಳೇ. ಈ ಎಲ್ಲ ಪ್ರಸಂಗಗಳಲ್ಲಿ ತಮ್ಮ ಅಧೀನದಲ್ಲಿರುವ ಹೆಣ್ಣನ್ನು ತಮ್ಮ ಇಚ್ಛೆಗೆ ತಕ್ಕಂತೆ-ಕುಣಿಸುವ ಹಕ್ಕು ಪಡೆದ ಮಾಲೀಕರೆ. ಬಸವಣ್ಣ ಸಂಗಮದೇವನ ರೂಪವನ್ನು ಜಂಗಮನಲ್ಲಿ ಕಂಡ ಮಹಾಭಾವುಕ. ಭಾವುಕ ನೆಲೆಯಲ್ಲಿ ಕೈಹಿಡಿದ ಹೆಂಡತಿಯನ್ನು ತಾನೇ ಹೇಳುತ್ತ ಬಂದ ಸ್ತ್ರೀ ಸಮಾನತೆಯ ವ್ಯಾಪ್ತಿಯಲ್ಲಿಟ್ಟು ನೋಡಲು ಆಗಿಲ್ಲ. ಸಿದ್ಧಾಂತಗಳೆಲ್ಲವೂ ಕೌಟುಂಬಿಕ ಬದುಕಿನಾಚೆಗೆ ಅರ್ಥಪೂರ್ಣಗೊಳ್ಳುಬಹುದಾದ ಸತ್ಯವೆಂದು ಸಾರಿದ ಲೋಕವಿದು. ಕುಟುಂಬದೊಳಗೆ ಈ ಸಿದ್ಧಾಂತ ವಿಚಾರಗಳೆಲ್ಲ ಕ್ರಿಯಾಶೀಲಗೊಳ್ಳುವುದು ತುಂಬಾ ಕಷ್ಟದಾಯಕ. ಇಂತಹ ಇಕ್ಕಟ್ಟಿನ ಮಾತು, ಬಸವಣ್ಣನ ವಚನವೊಂದರಲ್ಲಿ ಹೀಗಿದೆ –

“ಕಾಮನೇಮವೆಂಬ ಸಿಂಧು ಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ
ಎನ್ನ ಸತಿ ನೀಲಲೋಚನೆ ಪೃಥ್ವಿಶಗ್ಗಳೆಯ ಚಲುವೆ,
ಆಕೆಯನು ಸಂಗಮದೇವಾ, ನೀನು ಜಂಗಮ ರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ”
(ವ.ಸಂ.೧, ಸಂ. ಡಾ. ಎಂ.ಎಂ. ಕಲಬುರ್ಗಿ, ವ.ಸಂ.೧೧೧೭. ಪು.ಸಂ.೩೦೮-೫)

ತನ್ನ ಜಂಗಮನಿಷ್ಠೆಯ ಕುರಿತ ಹಾಗೇ ಡಂಗೂರ ಸಾರಿಕೊಳ್ಳುವ ಈ ಮಾತುಗಳು ಹೆಣ್ಣಿನ ತಳಮಳದ ಮೂಲ. ಆ ಕಾಲದಲ್ಲಿಯೂ ಜಂಗಮ ರೂಪದ, ಸಂಗಯ್ಯನ ರೂಪದ ಡಾಂಭಿಕ ಕಾಮುಕ ಗಂಡಸರು ಇದ್ದರು. ಇಂತಹ ಡಾಂಭಿಕರ ಬಗ್ಗೆ ಬಸವಣ್ಣನೇ ಅಲವತ್ತು ಕೊಂಡು ಮಾತನಾಡಿದ್ದು ಇದೆ. ವಸ್ತುಸ್ಥಿತಿ ಹೀಗಿರುವಾಗ ಕೈಹಿಡಿದ ಚೆಂದುಳ್ಳಿ ಚೆಲುವೆಯನ್ನು ನೀಡುವೆ ಎನ್ನುವಾಗ ಬಸವಣ್ಣನಲ್ಲಿ ಹೆಂಡತಿ ಶರಣೆಯಾಗಿ ಕಾಣಿಸುವುದಿಲ್ಲ. ಬದಲಾಗಿ ತನ್ನ ಸೊತ್ತು, ತೊತ್ತು ಎಂಬ ಭಾವ ಹೆಪ್ಪುಗಟ್ಟಿದೆ. ನೀಲಾಂಬಿಕೆಯ ಮನಸ್ಥಿತಿ ಹೇಗಿರ ಬಹುದು ಇಂತಹ ಪ್ರಸಂಗದಲ್ಲಿ? ಭಕ್ತಿ ಪಂಥದ ಸಂದರ್ಭದಲ್ಲಿ ಹೊರ ಬಂದ ಮಹಿಳೆಯರು ವೇಷಧಾರಿ ಭಕ್ತರಿಂದಲೇ ಲೈಂಗಿಕ ಹಲ್ಲೆಗೆ ಒಳಗಾಗಿರುವ ಪ್ರಸಂಗಗಳು ಎಷ್ಟೋ ಇವೆ. ಅವುಗಳನ್ನು ಯಥಾವತ್ತಾಗಿ ಹೇಳಿದರೆ ಚಳುವಳಿಗೆ ಹೊಡೆತ ಬೀಳಬಹುದೆಂದು ಸುಂದರ ಕಥೆಯಾಗಿಸಿದ್ದೇವೆ. ಇಂತಹ ಕಥೆಗಳ ಒಳಗೆ ಹೆಣ್ಣಿನ ಅಳಲಿದೆ ಎಂಬುದನ್ನು ಕೇಳುವ ಕಿವಿ, ನೋಡುವ ಕಣ್ಣುಗಳ ಕಾಲಗರ್ಭದಲ್ಲಿ ಹೂತು ಹೋಗಿವೆ. ಬಸವಣ್ಣನ ಈ ಪ್ರಸಂಗವನ್ನು ಪುರಾಣಿಕರಿಗೆ, ಜಡಗೊಂಡ ಮನಸ್ಸುಗಳಿಗೇ ಸ್ವಘೋಷಿತ ಬಸವಣ್ಣನ ವಾರಸುದಾರರಿಗೆ, ಭ್ರಮೆಯಲ್ಲಿ ತೇಲಾಡುವ ಕವಿ ಹೃದಯಗಳಿಗೆ ಪವಾಡಸದೃಶ ಘಟನೆಯಾಗಿ ಹೆಮ್ಮೆಯಿಂದ ಹೇಳಿಕೊಂಡು ಬೀಗುವ ಸಂಗತಿಯಾದರೆ ನೀಲಲೋಚನೆಯಂತವರಿಗೆ ಆತಂಕದ, ಭಯದ, ಕರಗದ ನೋವಿನ ಹೆಬ್ಬಂಡೆಯೊಂದು ಎದೆಯೆ ಮೇಲೆ ಹೇರಿಕೊಂಡ ಭಾರದಿಂದ ಕುಸಿದು, ಉಸಿರುಗಟ್ಟಿ ಕ್ಷಣ ಕ್ಷಣವು ಸಾವಿನ ಸ್ವರ್ಶ ಮಾಡಿದಂತಾಗುತ್ತದೆ.

ಹೆಣ್ಣಿಗೆ ಸ್ವತಂತ್ರ ಅಸ್ತಿತ್ವವನ್ನು ನಿರಾಕರಿಸಿದ ವೈದಿಕ ನೀತಿ ಸಂಹಿತೆಯ ಸ್ಮೃತಿ, ಮನುವಿನ ಹೇಳಿಕೆಗಳು ಇಂದಿಗೂ ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಹುಟ್ಟಿಸುವ ಮತ್ತು ಅವುಗಳನ್ನು ಸಮಾಜ ಒಪ್ಪುವ ಹಾಗೇ ನೋಡಿಕೊಳ್ಳುವ ಕರಾಮತ್ತನ್ನೆಲ್ಲ ತುಂಬಾ ಸೂಕ್ಷ್ಮವಾಗಿಯೇ ಮುನ್ನಡೆಸಿಕೊಂಡು ಬಂದಿದೆ. ಇದರ ಸರಿಯಾದ ಗ್ರಹಿಕೆಯಿಲ್ಲದೆ ವಿಜ್ಞಾನ ಲೋಕದ ಮಹಾನುಭಾವರು, ಪೀಠಾಧಿಪತಿಗಳು ಹಾಡಿ ಹೊಗಳುವ, ಭವ್ಯದಿವ್ಯದ ಕನಸು ಕಂಡ ಸಂಭ್ರದಲ್ಲಿ ಮುಳುಗೇಳುವರು. ಹೆಣ್ಣನ್ನು ಗೌರವಿಸಿದ, ಪೂಜಿಸಿದ ನೆಲ, ಸಂಸ್ಕೃತಿ ಅಂತೆಕಂತೆ ಪುರಾಣಗಳನ್ನೆಲ್ಲ ಅರಬ್ಬಿ ಸಮುದ್ರದಲ್ಲಿ ನೆನೆಹಾಕಬೇಕಾಗಿದೆ. ಇಂದಿನ ಆಧುನಿಕ ಮನಸ್ಸುಗಳು ವೈದಿಕ ಪುನರುತ್ಥಾನವನ್ನು ಕಂಡು ಧನ್ಯತೆಯಿಂದ ಖಡ್ಗ ಝಳಪಿಸುವ, ಹರಿಯುತ್ತಿರುವ ನೆತ್ತರದಲ್ಲಿ ಬೆರಳದ್ದಿ ಹಣೆಗಿಟ್ಟುಕೊಳ್ಳುವ ಹಿಂಸಾನಂದ ಸಮೂಹಸನ್ನಿಗೆ ಒಳಗಾಗುವ ದುರಂತದಿಂದ ಉಳಿದುಕೊಳ್ಳುವುದಾಗುತ್ತಿಲ್ಲ. ನಮಗಿಂತಲೂ ಎಂಟನೂರು ವರ್ಷಗಳ ಹಿಂದೆ ಇದ್ದವರು ಅಹಿಂಸಾವಾದಿಗಳಾಗಿದ್ದರು, ಅಗ್ರಹಾರ ಸಂಸ್ಕೃತಿಯನ್ನು ಧಿಕ್ಕರಿಸಿದ್ದರು ಎಂದು ಹೇಳುವ ಹಟಮಾರಿತನದ ಬಗ್ಗೆಯು ನಾವು ಆಲೋಚಿಸಬೇಕು.

ಅನುಭವ ಮಂಟಪವನ್ನು ವಿಚಾರವಿನಿಮಯದ ಕೇಂದ್ರವಾಗಿ ಕಟ್ಟಿಕೊಂಡು, ಅದಕ್ಕೆ ಅಲ್ಲಮಪ್ರಭುವನ್ನು ಅಧ್ಯಕ್ಷನನ್ನಾಗಿಸಿ, ಪ್ರಭುವಿನ ಸನ್ನಿದಾನದಲ್ಲಿ ವೀರಶೈವ ಧರ್ಮ, ಸಮಾಜ, ವ್ಯಕ್ತಿಗಳ ಕುರಿತು ನಡೆದ ಗಂಭೀರ ಚಿಂತನ ಮಂಥನದ ಬಗ್ಗೆ ನಮಗೆ ಗೌರವವಿದೆ. ಆದರೆ ಹಲವು ಪ್ರಸಂಗದಲ್ಲಿ ನ್ಯಾಯ ನೀಡಬೇಕಾದ ಪ್ರಭು ಅಗ್ರಹಾರದ ಪುರೋಹಿತನಂತೆ ನಡೆದು ಕೊಳ್ಳುವದರ ಬಗ್ಗೆ ಪ್ರಶ್ನೆಗಳಿವೆ. ಅಕ್ಕಮಹಾದೇವಿ ಕುಟುಂಬ ಮೂಲದ ಗಂಡ, ಯಜಮಾನನ್ನ ಧಿಕ್ಕರಿಸಿ ಸಮಾಜಮುಖಿಯಾದ ಶರಣ ಸಮುದಾಯ ಅದರಲ್ಲಿಯೂ ಅಣ್ಣ, ಪ್ರಭುವಿನಂತಹ ಹಿರಿಯರ ಬಗ್ಗೆ ಭರವಸೆಯಿಟ್ಟು ಬಂದವಳು. ಕೌಟುಂಬಿಕ ಬದುಕಿನ ಆಶ್ರಯ ಕಳೆದುಕೊಂಡು ಸಾಮಾಜಿಕ ನಿಂದಾಪಮಾನವನ್ನು ಬೆನ್ನಿಗಿಟ್ಟುಕೊಂಡು ಬಂದವಳಿಗೆ ಶರಣರ ಸಮುದಾಯದಲ್ಲಿ ಸಿಕ್ಕ ಸ್ವಾಗತ ಕಂಡು ಹೇಗಾಗಿರಬಹುದು. ಶರಣರು ಆಕೆಯ ಮುಂದೆ ಅಗ್ನಿಕುಂಡವನ್ನು ತೋಡಿ ಹಾದು ಬರಲು ಹೇಳಿದ ಮಾತುಗಳು ಸೀತೆಯನ್ನು ನೆನಪಿಸುತ್ತವೆ. ಇಂತಹ ಘಟನೆಗಳಿಂದ ಅಕ್ಕ ಅಂತರ್‌ಮುಖಿ, ಅನಾಥ ಪ್ರಜ್ಞೆ ಭ್ರಮಿತ ಸ್ಥಿತಿಗೆ ಒಳಗಾಗ ಬೇಕಾಯಿತು. ಇದೆಲ್ಲ ಅಸಹಾಯಕ ಹೆಂಗಸಿಗೆ ಅರ್ಥವಾಗಬಹುದಾದ ಸಂಗತಿಗಳೇ ಹೊರತು ಉಪದೇಶ ನೀಡುವ ಯಜಮಾನರಗಳಿಗಲ್ಲ. ಪ್ರಭುವಿಗೆ ಅಕ್ಕನ ಪೂರ್ವಾಪರಗಳೆಲ್ಲ ಗೊತ್ತಿದೆ. ಅಕ್ಕನ ಬರುವಿಕೆ ಯನ್ನು ಶರಣ ಸಮುದಾಯ ನಿರಾಕರಿಸಿದ್ದರೆ, ಅನುಮಾನಿಸಿದ್ದರೆ ಪ್ರಭು ತಿಳಿ ಹೇಳಬೇಕಾಗಿತ್ತು. ಆದರೆ ಹಾಗೆ ಮಾಡುವುದಿಲ್ಲ. ತುಂಬಿದ ಅನುಭವ ಮಂಟಪದ  ಸಭೆಯಲ್ಲಿ ನಿಲ್ಲಿಸಿ ಅಕ್ಕನನ್ನು ಪ್ರಶ್ನಿಸುವ ರೀತಿ ಹೇಗಿದೆ ಎಂದರೆ

“ಉದಮದ ಯೌವನವನೊಳಕೊಂಡ ಸತಿ
ನೀನು ಇತ್ತಲೇಕೆ ಬಂದೆಯವ್ವಾ
ಸತಿ ಎಂದೆಡೆ ಮುನಿವರು ನಮ್ಮ ಶರಣರು
ನಿನ್ನ ಪತಿಯ ಕುರುಹು ಹೇಳಿದೆಡೆ ಬಂದು ಕುಳ್ಳಿರು
ಅಲ್ಲದಡೆ ತೊಲಗು ತಾಯೆ.
ನಮ್ಮ ಗುಹೇಶ್ವರನ ಶರಣರಲ್ಲಿ
ಸಂಗ ಸುಖ ಸನ್ನಿಹಿತವ ಬಯಸುವಡೆ
ನಿನ್ನ ಪತಿಯಾರೆಂಬುದು ಹೇಳಾ ಎಲೆ ಅವ್ವಾ?”
(ವ.ಸಂ.೨, ಸಂ. ಡಾ. ಬಿ.ವ್ಹಿ.ಮಲ್ಲಾಪುರ, ವ.ಸಂ. ೯೬೧.ಪು.೨೮೯)

ಅನುಭವ ಮಂಟಪದಲ್ಲಿ ಬಂದು ಸೇರುವವರೆಲ್ಲ ಅಣ್ಣನ ಪ್ರಕಾರ ಶರಣರೇ ಆಗಿದ್ದರು. ಈ ಶರಣರು ಸತಿ ಭಾವದುಂಬಿದವರೆ ಆಗಿರಬೇಕಿತ್ತು. ಇಂತಹ ಸತಿ ಸಮೂಹದಲ್ಲಿ ಸತಿಯಾಗಿ ಬಂದು ಸೇರುವ ಅಕ್ಕನಿಗೆ ಪ್ರಶ್ನೆಗಳೇಕೆ? ಆಕೆಯ ಸತಿತ್ವಕ್ಕೆ ಮುದ್ರೆ ಹಾಕಿದ ಪತಿಯ ಹೆಸರೇಕೆ ಮುಖ್ಯವಾಗಬೇಕು. ಪ್ರಭುವಿನಂತಹ ಹಿರಿಯ ಶರಣರಿಗೂ ಒಂಟಿ ಹೆಣ್ಣು ಅದು ಬೆತ್ತಲೆ ಯಾಗಿ ರಾಜಸತ್ತೆಯನ್ನು ಪ್ರಜಾಸತ್ತೆಯನ್ನು ಧಿಕ್ಕರಿಸಿ ಬಂದವಳನ್ನು ತಮ್ಮ ಶರಣ ಸಮೂಹ ದಲ್ಲಿ ಸೇರಿಸಿಕೊಳ್ಳಲು ಆತಂಕ, ಭಯ ಕಾಡಿದೆ. ಹೇಗಾದರೂ ಮಾಡಿ ಆಕೆ ಕೌಶಿಕನ ಹೆಂಡತಿ ಎಂಬುದನ್ನು ಆಕೆಯಿಂದಲೇ ಹೇಳಿಸುವುದರಿಂದ ವ್ಯವಸ್ಥೆಯೊಳಗಡೆಗೆ ಒಂದು ಸಂಧಾನ ನಡೆಯಬಹುದೆಂಬ ಕಾರಣವಿದ್ದರೂ ಇರಬಹುದು. ಅಥವಾ ಪ್ರಭುವಿನ ದೃಷ್ಟಿಯಲ್ಲಿ ಸತಿಪತಿಗಳು ಜೊತೆಗೆ ಬಂದು ಚಳುವಳಿ ಸೇರುವುದರಿಂದ ಸಾಮಾಜಿಕ ಭಯದಿಂದ ಮುಕ್ತವಾಗಬಹುದೆಂಬ ಆಶಯವು ಹುದಿಗಿರಬಹುದು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ಸಿದ್ಧಾಂತವನ್ನಿಟ್ಟುಕೊಂಡು ಮಾತನಾಡುವುದಾದರೆ ಚಳುವಳಿ ಯಲ್ಲಿ ಪಾಲ್ಗೊಂಡ ವರೆಲ್ಲ ಗೃಹಸ್ಥರಾಗಿರಬೇಕಾಗಿತ್ತು ಎಂಬುದು ಮೇಲ್‌ನೋಟಕ್ಕೆ ಕಾಣಿಸುವ ಸತ್ಯ. ಹಾಗಾದರೆ ಶರಣ ಚಳುವಳಿಯ ಕೇಂದ್ರ ವ್ಯಕ್ತಿಯಾದ, ಶೂನ್ಯಸಿಂಹಾಸನದ ಅಧಿಪತಿಯಾಗಿದ್ದ ಪ್ರಭುವನ್ನು ಏನೆಂದು ಭಾವಿಸಬೇಕು. ಪ್ರಭುವಿನ ಭಕ್ತಿಯನ್ನು ಹೇಗೆ ಗುರುತಿಸಬೇಕು. ಬ್ರಹ್ಮಚಾರಿ ಪ್ರಭು ಅಕ್ಕನ ಮದುವೆ, ಗಂಡು ಕುರಿತು ಕೇಳುವುದು ಎಷ್ಟು ಉಚಿತವೆಂಬ ಪ್ರಶ್ನೆಗೆ ಉತ್ತರವಿಲ್ಲ. ಒಂಟಿ ಹೆಣ್ಣು ಅದು ವಯಸ್ಸಿನ ಹೆಣ್ಣೊಂದು ಸಾಮಾಜಿಕ ಬಂಧನಗಳನ್ನು ಹರಿದೊಗೆದು ಬಂದದ್ದನ್ನು ಒಪ್ಪಿಕೊಳ್ಳುವ ಮಾನಸಿಕ ಸಿದ್ಧತೆಯು ಅವರಲ್ಲಿ ಆಗಿರಲಿಕ್ಕಿಲ್ಲ. ಕಾಯುವ, ಕಟ್ಟುವ ಪ್ರಾಣಿರೂಪಿ ಹೆಣ್ಣಿನ ಬಗ್ಗೆ ಮೂಲಭೂತವಾಗಿ ಭಯವು ಇರಬಹುದು. ಪತಿಯ ಕುರುಹು ಕೇಳಿದ ಪ್ರಭುವಿಗೆ ಅಕ್ಕ ಕೊಟ್ಟ ಉತ್ತರ ಹೆಣ್ಣು ಬಿಡುಗಡೆಯ ಕಡೆಗೆ ಮುನ್ನಡೆ ಯುವ ಆತ್ಮಬಲ ಮತ್ತು ಇಚ್ಛಾ ಶಕ್ತಿಯ ವ್ಯಾಖ್ಯಾನದಂತೆ ತೋರುವುದು. ತನ್ನ ವ್ಯಕ್ತಿಗತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತಲೇ ಆಯ್ಕೆಯ ಹಕ್ಕನ್ನು ಬಳಸಿಕೊಂಡು ಜಡಗೊಂಡ ಕೌಟುಂಬಿಕ ಮಾದರಿಯನ್ನು ಮುರಿದು ಪರ್ಯಾಯ ಹೆಣ್ಣಿನ ಬದುಕಿನ ರೂಪಗಳನ್ನು ಕಟ್ಟಿಕೊಡುವಳು. ಕಿನ್ನರಿ ಬೊಮ್ಮಯ್ಯನಂತಹ  ಹಿರಿಯ ಶರಣ ಕೂಡ ಅಕ್ಕನನ್ನು ಹೆಣ್ಣು ದೇಹದ ಮೂಲಕವೇ ಕಂಡು ಆಸೆಪಟ್ಟು ಆಕ್ರಮಣಕಾರಿ ರೀತಿಯಲ್ಲಿ ಮಾತನಾಡುವ ಮಾತುಗಳು ಅಸಹ್ಯ ಮತ್ತು ಹೇಸಿಗೆಯನ್ನುಂಟುಮಾಡುತ್ತವೆ. ಕಿನ್ನರಿ ಬೊಮ್ಮಯ್ಯ ಅಕ್ಕನನ್ನು ಕುರಿತು ಆಡಿದ ಮಾತು –

“ನಿನ್ನ ಸ್ವರೂಪ ಕಂಡೆನ್ನ ದೃಷ್ಟಿ ನೆಟ್ಟುದೆನಗೆ
ನಿನ್ನ ಲಾವಣ್ಯರಸವ ಕಂಡು ಮನ ಹಾರೈಸಿತ್ತೆನಗೆ
ನಿನ್ನ ಪ್ರವುಂಡಿಯಿಂದ ಕೂಡಿದೆನೆಂಬುದು ಭಾವದಲ್ಲಿ
ಬಚ್ಚೆ ಬರಿಯ ಹೆಂಗುಸಾಗಿ ತೋರಿತ್ತೆನಗೆ
ಮಹಾಲಿಂಗ ತ್ರಿಪುರಾಂತಕನೆನಗೊಡ್ಡಿದ ಮಾಯೆಯ
ನಿನ್ನ ಸಮಸುಖ ಕೂಟದೊಳಿರ್ದು ಶಿವಭಾವ ಭಕ್ತಿಯಿಂ
ಗೆಲುವೆನು ಮಹಾ ಹೆಣ್ಣು ಎಂದು ಕೈವಿಡಿದೆನು”
(ಜ.ವ.ಸಂ.೨, ಸಂ. ಡಾ. ಎಸ್. ವಿದ್ಯಾಶಂಕರ, ವ.ಸಂ.೫೭. ಪು. ೩೪)

ಹಾಡಹಗಲೇ ಗಂಡಸೊಬ್ಬ ಸಭ್ಯತೆಯ ಗಡಿದಾಟಿ ತುಂಬಿದ ಮಂದಿಯಲ್ಲಿ ಹೆಣ್ಣನ್ನು ಮಾತನಾಡಿಸುವ ರೀತಿಯೇ ಇದು! ಅಕ್ಕ ಸಾವಕೆಡುವ  ಲೋಕದ ಗಂಡರನ್ನೆಲ್ಲ ಒಲೆಯೊಳ ಗಿಟ್ಟು ಬಂದವಳಿಗೆ ಬೊಮ್ಮಯ್ಯ ದುತ್ತನೆ ಒಲೆಯೊಳಗಿನ ಉರಿಯುವ ಕೊಳ್ಳಿಯಂತೆ ಕಾಣಿಸಿರಬೇಕು. ಬೊಮ್ಮಯ್ಯನ ಮಾತುಕೇಳಿ ನಿಂತ ನೆಲ ಬಿರಿಯಬಾರದೇ ಎಂದು ಅಕ್ಕನ ಜೀವ ವಿಲವಿಲ ಒದ್ದಾಡಿರಬೇಕು. ಸಿಟ್ಟಿನಿಂದ ಸ್ಫೋಟಿಸುವ ಹಾಗಿಲ್ಲ. ಈಗಾಗಲೇ ಗಂಡ ಬಿಟ್ಟವಳೆಂದು ಲೋಕ ಬೆರಳು ಮಾಡಿ ತೋರಿಸುತ್ತಿದೆ. ಅದೇ ಕಾರಣಕ್ಕಾಗಿಯೆ ಒಳ ಹೊರಗನ್ನು ಬೆತ್ತಲೆಗೊಳಿಸಿಕೊಂಡ ಭಾವದಿಂದ ಕುಗ್ಗಿ ಹೋಗಿದೆ ಜೀವ. ತನ್ನ ಸದ್ಯದ ಸ್ಥಿತಿಗೆ ತಾನೇ ಹೇಸಿಕೊಳ್ಳುತ್ತಾಳೆ. ತನ್ನ ದೇಹ, ಮನಸ್ಸಿನ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಲೇ ಹೆಣ್ಣಿನ ಹುಟ್ಟಿನ ಬಗ್ಗೆಯೇ ಜಿಗುಪ್ಸೆಯಿಂದ ಆಡುವ ಮಾತುಗಳಲ್ಲಿ ಅಪಮಾನದಿಂದ ಕುದ್ದವಳ ನಿಡುಸುಯಿಲು ತುಂಬಿಕೊಂಡಿದೆ.

“ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ,
ಎಲುವಿನ ತಡಿಕೆ, ಕೀವಿನ ಹಡಿಕೆ –
ಸುಡಲಿ ದೇಹವ: ಒಡಲುವಿಡಿದು ಕೆಡದಿರು,
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ.
(ಜ.ವ.ಸಂ.೫, ಸಂ. ಡಾ. ವೀರಣ್ಣರಾಜೂರ, ವ.ಸಂ.೧೭.ಪುಟ.೬)

ತನ್ನ ದೇಹ, ಭಾವಗಳ ಬಗ್ಗೆ ಹೀಗೆ ಆಡಬೇಕಾದರೆ ಎಂತಹ ಯಾತನೆ ಆಕೆಯಲ್ಲುಂಟಾಗಿರ ಬಹುದು. ಅಕ್ಕ ಒಳ ಒಳಗೆ ಹಲವು ಸಲ ಸೋತು ಮನುಷ್ಯರ ಒಡನಾಟಕ್ಕಿಂತಲೂ ಪಶುಪಕ್ಷಿ ಗಳ ಒಡನಾಟವೇ ಮೇಲೆಂದುಕೊಂಡವಳು. ಸಂಕಟದ ಮಧ್ಯೆದಲ್ಲಿಯು ಲೋಕಕ್ಕೆ ಒಂದೊಂದು ಸಲ ತಿರುಗಿ ಬೀಳುವಳು. ಆತ್ಮಬಲದ ಮಾತುಗಳನ್ನು ಆಡುತ್ತಲೇ ಬದುಕುವ ಉತ್ಸಾಹವನ್ನು ತುಂಬಿಕೊಳ್ಳುವ ಪ್ರಯತ್ನವನ್ನು ಮೆಚ್ಚಬೇಕಾಗಿದೆ. ಇಬ್ಬಾಯಿ ಖಡ್ಗದ ಮೇಲೆ ನಡೆಯುತ್ತಿರುವ ಅಕ್ಕ ಲೋಕಕ್ಕೆ ಬೆಚ್ಚುವಂತೆ ಆಡುವ ಮಾತುಗಳು ಹೀಗಿವೆ.

“ಆರೂ ಇಲ್ಲದವಳೆಂದು ಆಳಿಗೊಳಲು ಬೇಡ ಕಂಡೆಯಾ
ಏನ ಮಾಡಿದಡೂ ಆನಂಜುವಳಲ್ಲ.
ತರಗೆಲೆಯ ಮೆಲಿದು ಆನಿಹೆನು,
ಸರಿಯ ಮೇಲೊರಗಿ ಆನಿಹೆನು,
ಚೆನ್ನಮಲ್ಲಿಕಾರ್ಜುನಯ್ಯ, ಕರಕೇಡನೊಡ್ಡಿದಡೆ
ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು
(ಜ.ವ.ಸ.೫, ಸಂ. ಡಾ. ವೀರಣ್ಣರಾಜೂರ, ವ.ಸಂ. ೫೩. ಪು. ೨೨)

ಹೀಗೆ ಹೆಣ್ಣು ತನ್ನನ್ನು ಉಳಿಸಿಕೊಳ್ಳುವ ಮತ್ತು ಜಗತ್ತು ತನ್ನನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಬದುಕಿನ ಕುಲುಮೆಯಲ್ಲಿ ಕುದ್ದು ಬರುವ ದುರ್ಗಮ ಹಾದಿ ಇಂದಿಗೂ ಸುಗಮ ವಾಗಿಲ್ಲ. ಶರಣರು ಮಹಿಳೆಯರ ಬಗ್ಗೆ ಆಲೋಚಿಸಿದ ರೀತಿಗಿಂತಲೂ ಶರಣೆಯರು ಅತ್ಯಂತ ವಾಸ್ತವದ ಅರಿವಿನಿಂದ ಪ್ರಗತಿಪರ ಮತ್ತು ವೈಚಾರಿಕವಾಗಿ ಮಾತನಾಡುವ, ಬದುಕುವ ಅದಮ್ಯ ಉತ್ಸಾಹ ವನ್ನು ವ್ಯಕ್ತಪಡಿಸುವರು. ವ್ಯವಸ್ಥೆಯ ಹುದುಲೊಳಗೆ ಹುಗಿದು ಹೋಗಿದ್ದ ಮಹಿಳೆ ಎದ್ದು ಬರುವ ಸರ್ವ ಪ್ರಯತ್ನವನ್ನು ಶರಣ ಸಮುದಾಯದೊಳಗಿದ್ದೆ ಪ್ರಶ್ನಿಸುವ ಪ್ರತಿಭಟಿಸುವ ಮೂಲಕ ಮಾಡಿದ್ದು ಹೆಚ್ಚು ಪ್ರಸ್ತುತವೆನಿಸುತ್ತದೆ. ವರ್ಗ, ಲಿಂಗ, ಜಾತಿಯ ಭೇದಗಳಲ್ಲಿ ಹರಿದು ಹಂಚಿಹೋಗಿದ್ದ ಮಹಿಳಾ ಸಮುದಾಯವನ್ನು ಒಂದು ಗೂಡಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಸಾಮಾಜಿಕ ಚಳುವಳಿಯಲ್ಲಿ ತೊಡಗ ಬೇಕಾಗಿತ್ತು ಮತ್ತು ಚಳುವಳಿಯ ಆಶಯದಂತೆ ಸ್ತ್ರೀ ಸ್ವಾತಂತ್ರ್ಯ, ಸಮಾನತೆಯನ್ನು ತಂದುಕೊಳ್ಳ ಬೇಕಾಗಿತ್ತು. ಸನಾತನ ಧಮದಲ್ಲಿಯೇ ಉಸಿರಾಡಿಸಿದ್ದ ಮಹಿಳೆ ದಿಡೀರನೆ ಹೊಸ ಗಾಳಿ ಬೆಳಕನ್ನು ಅರಗಿಕೊಳ್ಳುವುದು ಪ್ರಯಾಸದ ಕೆಲಸ. ಪಂಜರದ ಬದುಕಿನಲ್ಲಿ ಸ್ವಾತಂತ್ರ್ಯದ ಅರ್ಥ, ಹಂಬಲವನ್ನು ಕಳೆದು ಕೊಂಡಿರುವ ಹೆಣ್ಣಿಗೆ ಪಂಜರದ ಬಾಗಿಲು ತೆರೆದಾಕ್ಷಣ ಹಾರಿ ಹೊರಜಗತ್ತಿನಲ್ಲಿ ಬೆರೆಯುವಳೆಂಬುದು ಕೂಡ ಸಂದೇಹದ್ದೆ. ಒಳಗಿರುವ ಹಕ್ಕಿಗೂ ಹಾರುವ ಒತ್ತಾಸೆ, ಇಚ್ಛಾಶಕ್ತಿ ಇರಬೇಕು ಎಂಬ ಅರಿವನ್ನು ಆಮುಗೆ ರಾಯಮ್ಮ ವ್ಯಕ್ತ ಪಡಿಸುತ್ತಾಳೆ.

“ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರೆನಾರೆನೂ ಕಾಣೆ
ಎನ್ನ ಕಾಲೊಳಗಣ ಮುಳ್ಳು ತೆಗೆಯುವವರೆನಾರೆನೂ ಕಾಣೆ
ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವವರೆನಾರನೂ ಕಾಣೆ
………………………………………………………
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳು ನಾನೇ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯಾ ಪ್ರಪಂಚವ ನಾನೆ ಕಳೆಯಬೇಕು
ಅಮುಗೇಶ್ವರ ಲಿಂಗವ ನಾನೆ ಅರಿಯಬೇಕು”
(ಜ.ವ.ಸಂ.೫, ಸಂ. ಡಾ. ವೀರಣ್ಣರಾಜೂರ, ವ.ಸಂ. ೫೩೩. ಪು. ೧೭೩)

ಬಂಧಿತರು ಬಿಡುಗಡೆಗಾಗಿ ಪ್ರಯತ್ನಿಸಬೇಕು ಮತ್ತು ಬಂಧಿಸಿದವರು ಬಂದ ಮುಕ್ತ ಗೊಳಿಸಲು ಮುಂದಾಗಬೇಕು ಅಂದಾಗ ಸ್ವಾತಂತ್ರ್ಯವೆಂಬುದು ಕ್ರಿಯಾಶೀಲವಾಗಲು ಸಾಧ್ಯ. ಹೆಣ್ಣನ್ನು ಇಟ್ಟ ಸ್ಥಿತಿಯನ್ನು, ಹೆಣ್ಣೇ ಇರುವ ಸ್ಥಿತಿಯನ್ನು ಏಕಕಾಲಕ್ಕೆ ಮೀರುವ ಪ್ರಯತ್ನಗಳು ಕುಟುಂಬ, ಸಮಾಜಗಳ ಒತ್ತಾಸೆಯಿಂದ ಮೂಡಬೇಕು. ಹೆಣ್ಣಿನ ಸ್ವಬಿಡುಗಡೆಯ ಕಲ್ಪನೆ ಯನ್ನು ರಾಯಮ್ಮ ಅದ್ಭುತವಾದ ರೀತಿಯಲ್ಲಿ ವ್ಯಕ್ತಪಡಿಸುವಳು. ಒಳ ಹೊರಗಿನ ತೊಡಕು ಗಳನ್ನು ಬಿಡಿಸಿಕೊಳ್ಳುವ ಆತ್ಮಬಲ ಮತ್ತು ಇಚ್ಛಾ ಶಕ್ತಿ ಏಕಕಾಲದಲ್ಲಿ ಹುಟ್ಟಿಕೊಳ್ಳಬೇಕಾದ ಸತ್ಯಗಳು. ಈ ಸತ್ಯಗಳ ಬಲದಿಂದ ಮಾತ್ರ ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ-ಸ್ವಾತಂತ್ರ್ಯದ ಮೂಲಕ ಸಾಮಾಜಿಕವಾಗಿ ಲಿಂಗ ಸಮಾನತೆ ಬರಲು ಸಾಧ್ಯವೆಂಬುದನ್ನು ರಾಯಮ್ಮ ಒತ್ತಿ ಹೇಳುವಳು. ಗೊಗ್ಗವ್ವೆಯಂತಹ ಸಾಮಾನ್ಯ ಶರಣೆಗೆ ಹೆಣ್ಣಿನ ಚರಿತ್ರೆ ಅರ್ಥವಾಗಿದೆ. ಬಸವಾದಿ ಶರಣರ ಮಿತಿಗಳು ಇಂತಹ ವಚನಕಾರ್ತಿಯರಲ್ಲಿ ಇಲ್ಲ. ಅದಕ್ಕೆಂದೆ ಅವರು ಚಾರಿತ್ರಿಕ ನೆಲೆಯನ್ನು ಗ್ರಹಿಸಿಕೊಂಡು ಮಾತುನಾಡುತ್ತಲೇ ತಾವು ನಿಂತ ಸಮಾಜದ ಭಾಗವಾದ ರೀತಿಯನ್ನು ಮತ್ತು ತಾವು ಬಯಸುತ್ತಿರುವ ಸಮಾಜದಲ್ಲಿ ತಮಗೆಂತಹ ಸ್ಥಾನ ಬೇಕು ಎಂಬುದರ ಮುಂದಾ ಲೋಚನೆ, ದೂರದೃಷ್ಟಿಯು ಅವರಲ್ಲಿದೆ. ಗೊಗ್ಗವ್ವೆ ಅಗ್ರಹಾರದ ಸಂಸ್ಕೃತಿಯನ್ನು ಪ್ರಶ್ನಿಸು ವುದಷ್ಟೇ ಅಲ್ಲ ತನ್ನ ತರ್ಕದ ಉತ್ತರವನ್ನು ಎಗ್ಗಿಲ್ಲದೆ ಹೊರ ಹಾಕುವಳು. ಹೆಣ್ಣನ್ನು ಆಸ್ತಿ, ಒಡವೆ ಎಂಬ ನಂಬಿಕೆಯ ಬೇರಿಗೆ ಕೈಹಾಕುತ್ತ ಪ್ರಶ್ನಿಸುವ ರೀತಿ –

“ಗಂಡ ಮೋಹಿಸಿ ಹೆಣ್ಣ ಹಿಡಿದೆಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡ ಹಿಡಿದೆಡೆ
ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳೆದು ಸುಖಿತಾನಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ ”
(ಜ.ವ.ಸಂ.ಸಂ ಡಾ. ವೀರಣ್ಣರಾಜೂರ,  ವ.ಸಂ. ೬೧೭. ಪು. ೨೨೬)

ಯಾವ ವಚನಕಾರನು ಎತ್ತದ ತಾತ್ವಿಕ ಪ್ರಶ್ನೆಯನ್ನು ಗೊಗ್ಗವ್ವೆ ಎತ್ತುವುದರ ಮೂಲಕ ಊಳಿಗಮಾನ್ಯ ಯಜಮಾನರುಗಳಿಗೆ ಕಸಿವಿಸಿಯನ್ನುಂಟುಮಾಡುತ್ತಾಳೆ. ಹೆಣ್ಣು ಗಂಡಿನ ಆಸ್ತಿಯಾಗಿರುವುದಾಗಲಿ, ಗಂಡು ಹೆಣ್ಣಿನ ಆಸ್ತಿಯಾಗಬೇಕೆಂದಾಗಲಿ ಎಂಬುದು ಆರೋಗ್ಯ ವಂತ ಸಮಾಜ ಬಯಸುವ ಸಂಗತಿಯಲ್ಲ. ಏನಿದ್ದರೂ ಉಭಯಲಿಂಗಿ ಪ್ರಧಾನವಾಗುಳ್ಳ ಸಮಾಜದಿಂದ ಮಾತ್ರ ನೆಮ್ಮದಿ, ಸುಖ, ಸಮಾನತೆಯನ್ನು ಕಾಣಲು ಸಾಧ್ಯ.

ಬಹುಪತ್ನಿ ಪದ್ಧತಿಯಿಂದ ಹೆಣ್ಣಿನ ಬದುಕು ನರಕ ಸದೃಶವಾಗಿರುವುದನ್ನು ನೋಡ ಬಹುದು. ಊಳಿಗಮಾನ್ಯತೆಯನ್ನು ಸಾಂಸ್ಕೃತಿಕವಾಗಿ ಉಳಿಸಿಕೊಂಡು ಬಂದಿರುವ ಪುರುಷ ಸಮೂಹದಲ್ಲಿ ಬಹುಪತ್ನಿತ್ವವೊಂದು ಹೆಮ್ಮೆಯ ಸಂಗತಿ. ಇಂದಿಗೂ ಆಳುವವನಿಗೆ ಅರವತ್ತು ಸಾವಿರ ಹೆಂಡಿರು ಎಂಬ ಸವಲತ್ತನ್ನು ಸಾಮಾಜಿಕ ಶಾಸನವಾಗಿಸಿದ ಪುಣ್ಯ ನೆಲವಿದು. ಬಹುಪತ್ನಿ ಪದ್ಧತಿಯನ್ನು ಕಾನೂನಿಂದಲೂ ತಡೆಯಲು ಆಗುತ್ತಿಲ್ಲ. ಶಿವನು ಸಹ ಬಹುಪತ್ನಿ ಪ್ರಿಯ. ಹೀಗಾಗಿ ಬಹುಪತ್ನಿ ಪದ್ಧತಿಯನ್ನು ಈ ಸಮಾಜ ತಪ್ಪೆಂದು ಭಾವಿಸಿಲ್ಲ. ಬಹುವಲ್ಲಭ ರೆಂದು ಬಿರುದು ಬಾವಲಿ ಗಳನ್ನಿತ್ತು ರಾಜ ಮಹಾರಾಜರ ಕೀರ್ತಿಯನ್ನು ಹಾಡಿ ಹೊಗಳಿದ ನಾಲಿಗೆಗಳಿಗೆ ಇಂದಿಗೂ ದಣಿವಿಲ್ಲ. ಅದನ್ನೇ ಸತ್ಯಕ್ಕನಂತಹ ಸಾಮಾನ್ಯ ಹೆಣ್ಣು ಪ್ರಶ್ನಿಸುವಳು. ಏಕಪತ್ನಿ ಪದ್ಧತಿಯ ಸಮಾಜ ರೂಪಗೊಳ್ಳುತ್ತಿದ್ದ ಸಾಮಾಜಿಕ ಸಂಕ್ರಮಣ ಸ್ಥಿತಿಯಲ್ಲಿ ಇಂತಹ ಪ್ರಶ್ನೆಗಳು ಕಾಣಿಸಿಕೊಂಡಿವೆ. ಶಿವನನ್ನು ಒಳಗೊಂಡ ಹಾಗೇ ಬಸವಣ್ಣನಿಗೂ ಸತ್ಯಕ್ಕ ಪ್ರಶ್ನೆ ಹಾಕಿದಂತಿದೆ ಈ ವಚನದಲ್ಲಿ.

“ಹಿರಿಯತನಕ್ಕೆ  ಪಥವೆ,
ಬಾಣನ ಮನೆಯ ಬಾಗಿಲ ಕಾಯ್ವುದು?
…………………………………..
…………………………………..
ನಿಮ್ಮ ಗುರುತನಕ್ಕಿದು ಪಥವೆ,
ನಾರಿಯರಿಬ್ಬರೊಡನೆ ಇಪ್ಪುದು ?
ಶಿವಾ ಶಿವಾ ನಿಮ್ಮ ನಡವಳಿ
ಶಂಭುಜಕ್ಕೇಶ್ವರಾ, ಅಲ್ಲದಿರ್ದಡೇಕೆ
ಶ್ರುತಿಗಳ ಕೈಯಿಂದತ್ತೆತ್ತೆಲೆನಿಸಿಕೊಂಬೆ”
(ಜ.ವ. ಸಂ ೫, ವ.ಸಂ.೯೪೫)

ಈ ಸಮಾಜ ಹೆಣ್ಣನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುವ ಸಲುವಾಗಿ ಹಿಂಸೆಯ ಮಾರ್ಗ ದಲ್ಲಿ ಬೀಸುಗಾಲು ಹಾಕಿದೆ. ಕುಟುಂಬದೊಳಗೆ ಹೊರಗೆ ನಿತ್ಯನಿರಂತರ ಹೆಣ್ಣಿನ ಮೇಲೆ ಆಕ್ರಮಣ, ಹಿಂಸೆ, ನೋವು, ಅತ್ಯಾಚಾರಗಳು ನಡೆಯುವುದೆಲ್ಲ ಸಹಜ ಎನ್ನುವ ಸಾಮಾಜಿಕ ಉದಾಸೀನತೆ ಮನೆಮಾಡಿಕೊಂಡಿದೆ. ಇಂತಹ ಹಿಂಸೆಗೆ ಹೆದರಿ ಲಕ್ಷ್ಮಣ ಗೆರೆ ದಾಟದೆ ಬದುಕಿದ ಸಂಕಥನವೇ ನಮ್ಮದು. ಅಲ್ಲೊಬ್ಬಳು, ಇಲ್ಲೊಬ್ಬಳು ಕಾಲಚಕ್ರದ ಹಲ್ಲಿಗೆ ಸಿಲುಕದೆ ಎದ್ದುನಿಂತಾಗಲೆಲ್ಲ ಆಕೆಯನ್ನು ಕೆಂಗಣ್ಣಿನಿಂದ ನೋಡಲಾಗಿದೆ. ಅತಿರೇಕದ ಹೆಣ್ಣೆಂದು ಹುಯಿಲು ಎಬ್ಬಿಸಿ ಆಕೆಯ ಬುದ್ದಿ ಬಾವಗಳು ಕುಗ್ಗುವಂತೆ ಮಾಡುತ್ತೇವೆ. ಒಂದೊಂದು ಸಲ ಹೆಣ್ಣು ಗಂಡಿನ ಅಹಂಕಾರ ಭಂಜಕತೆಗೆ ಕಾರಣಕರ್ತಗಳಾಗಿಯು ಹೊಗಳಿಸಿ ಕೊಂಡ ಉದಾಹರಣೆಗಳಿವೆ. ಹೆಣ್ಣು ತನ್ನನ್ನು ಈ ಹಿಂಸೆಯಿಂದ ಉಳಿಸಿಕೊಳ್ಳುವ ಸಲುವಾಗಿ ಲೋಕ ಹೇಳಿದ ಆಸ್ತ್ರಗಳಾದ ಹುಚ್ಚು, ಬುದ್ದಿಭ್ರಮಣೆ, ದೆವ್ವ, ಗಾಳಿ, ದೇವರುಗಳನ್ನು ಆ ರೋಪಿಸಿಕೊಂಡು ಉಳಿದುಕೊಂಡ  ನಿದರ್ಶನಗಳಿಗೂ ಬರವಿಲ್ಲ. ಹೆಣ್ಣಿನ ಹತ್ತಿಕ್ಕಲ್ಪಟ್ಟ ಮನಸ್ಸಿನ ಸ್ಫೋಟಕತೆಯನ್ನು ಅರಗಿಸಿಕೊಳ್ಳುವ ಅಂತಃಶಕ್ತಿ ಈ ಸಮಾಜಕ್ಕೆ ಇಲ್ಲವೇ ಇಲ್ಲ. ಆ ಕಾರಣಕ್ಕಾಗಿ ಹೆಣ್ಣುದೆವ್ವ, ದೇವರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಕಮಹಾದೇವಿ ಕೌಶಿಕ ನಿಂದ ಮತ್ತು ಕಿನ್ನರಿಬೊಮ್ಮಯ್ಯನಿಂದ ದೇಹಕಾರಣವಾಗಿ ಅಪಮಾನಕ್ಕೆ ಒಳಗಾದವಳು, ಹಿಂಸೆಯನ್ನು ಅನುಭವಿಸಿದಳು. ಹೀಗಾಗಿ ಆಕೆಗೆ ದೇಹದ ಬಗ್ಗೆ ಜಿಗುಪ್ಸೆ ಹುಟ್ಟಿದೆ. ಜಮೀ ನ್ದಾರಿಕೆಯ ಕ್ರೌರ್ಯ ಅಂತಿಮವಾಗಿ ಹೆಣ್ಣಿನ ಮೇಲೆ ಜಯ ಗಳಿಸುವುದೆಂದರೆ ಆಕೆಯನ್ನು ಬೆತ್ತಲೆಗೊಳಿಸುವುದು. ಗಂಡಿನ ಆಕ್ರಮಣದ ಮೂಲಕ ಹೆಣ್ಣು ಸಾರ್ವಜನಿಕವಾಗಿ ಬೆತ್ತಲೆ ಗೊಳ್ಳುವಾಗ ಮತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಹಟ ಹುಟ್ಟಿದಾಗ ಆಕೆ ಸಮಾಜ ಕೊಟ್ಟ ಅಸ್ತ್ರಗಳನ್ನೆ ಮುಂದು ಮಾಡಿರುವುದು ಆಧುನಿಕ ಸಮಾಜಶಾಸ್ತ್ರಜ್ಞರು ಮತ್ತು ಮನಶಾಸ್ತ್ರಜ್ಞರು ಅಧ್ಯಯನ ಮಾಡಬೇಕಾಗಿದೆ. ಅಕ್ಕ ತುಂಬಾ ಎಚ್ಚರಿಕೆಯಿಂದಲೇ ಹೆಣ್ಣಿನ ಮಾನ ಮುಚ್ಚಲು ಗಂಡು ನೀಡಿದ್ದ ವಸ್ತ್ರವನ್ನು ಬಿಚ್ಚೆಸೆಯುತ್ತಲೇ ಬೆತ್ತಲೆಗೆ ಬಾಯಾಗುತ್ತಾಳೆ. ಬೊಬ್ಬೆ ಹೊಡೆಯುವ ಗಂಡಿನ ಬಾಯಿಗೆ ವಿವಸ್ತ್ರಳಾಗಿ ಬಿರಡೆ ಜಡಿಯು ತ್ತಾಳೆ. ಹೆಣ್ಣಿನ ದೇಹದ ಮೇಲೆ ಗಂಡು ಸಾಧಿಸಿದ ಜಯದ ಅಮಲನ್ನು ಅಕ್ಕ ಇಳಿಸುವ ರೀತಿ ಹೀಗಿದೆ –

“ಕೈಸಿರಿಯ ದಂಡವ ಕೊಳಬಹುದಲ್ಲದೆ
ಮೈಸಿರಿಯ ದಂಡವಕೊಳಲುಂಟೆ?
ಉಟ್ಟಂತಹ ಉಡಿಗೆ ತೊಡಿಗೆಯನ್ನೆಲ್ಲ ಸೆಳೆದುಕೊಳಬಹುದಲ್ಲದೆ?
ಮುಚ್ಚಿರ್ದ ಮುಸುರ್ಕಿರ್ದ ನಿರ್ವಾಣವ ಸೆಳೆದುಕೊಳಬಹುದೇ?
ಚೆನ್ನಮಲ್ಲಿಕಾರ್ಜುನ ದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ ಹಂಗೇಕೋ ಮರುಳೆ?”
(ವ.ಸಂ ೫, ಸಂ. ಡಾ. ವೀರಣ್ಣರಾಜೂರ, ವ.ಸಂ.೧೫೧. ಪು. ೪೭)

ಹೀಗೆ ಈ ಸಮಾಜದ, ಕುಟುಂಬದ ಆಶ್ರಯವನ್ನು ಧಿಕ್ಕರಿಸಿ ಬಂದವಳಿಗೆ ಮಾನಾಪ ಮಾನದ ಲೆಕ್ಕಕ್ಕಿಂತಲೂ ತನ್ನನ್ನು ತಾನು ಉಳಿಸಿಕೊಳ್ಳುವ, ತಾನು ತೆಗೆದುಕೊಂಡ ನಿರ್ಧಾರಕ್ಕೆ ಸಮರ್ಥನೆ ನೀಡುವ ಒತ್ತಡಗಳಿವೆ. ಅಂತಿಮವಾಗಿ ಹೆಣ್ಣಿನ ಮೇಲೆ ಸವಾರಿ ಮಾಡುತ್ತಿರುವ ಗಂಡಿನ ಕೈಯಲ್ಲಿಯ ಛಾಟಿ ಮತ್ತು ಥಡಿಯ ಅಂದಾಜಿದೆ. ಅವೆರಡನ್ನು ಕಿತ್ತುಕೊಳ್ಳುವುದರ ಮೂಲಕವೇ ಜಯದ ಒಂದು ಮೆಟ್ಟಿಲನ್ನು ಏರಲು ಸಾಧ್ಯವಾಗಿದೆ. ಇಂದಿಗೂ ಬೆಳಕಿನಲ್ಲಿ ಹೆಣ್ಣಿನ ಬೆತ್ತಲೆ ದೇಹ ನೋಡಿ ಅರಗಿಸಿಕೊಳ್ಳುವ ವೈಜ್ಞಾನಿಕ ಗಟ್ಟಿತನ ನಮಗಿಲ್ಲ. ಏನಿದ್ದರೂ ಕತ್ತಲೇ ಲೋಕ ದಲ್ಲಿಯೇ ಹೆಣ್ಣಿನ ಮೈ ಸಿರಿಯನ್ನು ಸೂರೆ ಮಾಡುವ ಶೂರರ ನಾಡಿದು. ಹೆಣ್ಣು-ಗಂಡಿನ ನೈಸರ್ಗಿಕ ಲೈಂಗಿಕ ಕ್ರಿಯೆಯ ಬಗ್ಗೆ ಇದ್ದ ಸಾಂಪ್ರದಾಯಕ ಧೋರಣೆಯನ್ನು ಕದಿರೆ ರೆಮ್ಮವ್ವೆಯು ಕೂಡ ಪ್ರಶ್ನಿಸುವಳು ಮತ್ತು ಅದಕ್ಕೆ ಪರ್ಯಾಯವನ್ನು ಸೂಚಿಸುವಳು. ಲೈಂಗಿಕ ನೆಲೆಯ ವಿಚಾರಗಳನ್ನು ಹೇಳುವ ಕೇಳುವುದೆಲ್ಲ ಗಂಡು ಮಾತ್ರದವನಿಗೆ ಸಾಧ್ಯ. ಹೆಣ್ಣಿಗೆ ಇದು ಲಜ್ಜೆಗೇಡಿ, ನೀತಿಗೆಟ್ಟ, ನಡತೆಗೆಡುವ ಸಂಗತಿಗಳನ್ನಾಗಿಸಿದ್ದೇವೆ.

“ಎಲ್ಲರ ಹೆಂಡಿರು ತೊಳಸಿಕ್ಕುವರು;
ಎನ್ನ ಗಂಡಂಗೆ ತೊಳಸುವುದಿಲ್ಲ
……………………………
……………………………
ಎಲ್ಲರ ಗಂಡಂದಿರು ಮೇಲೆ
ಎನ್ನ ಗಂಡ ಕೆಳಗೆ; ನಾ ಮೇಲೆ
ಕದಿರೆ ರೆಮ್ಮಿಯೊಡಯ  ಗುಮ್ಮೇಶ್ವರಾ”
(ಜ.ವ.ಸಂ.೫, ಸಂ.ಡಾ. ವೀರಣ್ಣರಾಜೂರ, ವ.ಸಂ. ೬೬೪. ಪು. ೨೧೧)

ಇದು ಸಹ ಬೆಡಗಿನ ವಚನದ ಅರ್ಥೈಸುವಿಕೆಗೆ ಒಗ್ಗಬಹುದಾದ ವಚನ ಅಥವಾ ಬೆಡಗಿನ ವಚನಗಳಲ್ಲಿ ಸೇರಿ ಹಿರಿದಾದ ಆಧ್ಯಾತ್ಮಿಕ ಅರ್ಥವನ್ನು ಇದರಲ್ಲಿ ಹುಡುಕಬಹುದು. ಆದಾಗ್ಯೂ ಸಾಂಪ್ರದಾಯಿಕ ಲೈಂಗಿಕ ಪರಿಭಾಷೆಯ ಕ್ರಿಯಾತ್ಮಕತೆಯಲ್ಲಿ ಗಂಡಿನ ಮೇಲುಗೈ ಯನನ್ನು ಕೆಳಗಿಳಿಸಿಯು ಹೊಂದಬಹುದಾದ ಹೆಣ್ಣಿನ ಸಂಯೋಗ ಸಾಧ್ಯತೆಯ ಇಂದಿಗೂ ಮುಜುಗರ ವುಂಟು ಮಾಡುವುದನ್ನು ಕಾಣಬಹುದು.

ನೀಲಮ್ಮ ಕೌಟುಂಬಿಕ ಬೆಚ್ಚನೆಯ ಆಶ್ರಯದಲ್ಲಿದ್ದೆ ಲಿಂಗನೆಲೆಯ ಶರಣರ ತಾತ್ವಿಕ ವಿಚಾರಗಳ ವೈರುಧ್ಯತೆಗಳನ್ನು ಪ್ರಶ್ನಿಸುವಳು. ತನ್ನದೇ ಆದ ವಿಚಾರಗಳ ಮೂಲಕ ಉಭಯ ಲಿಂಗಿ ಸಮಾಜ ಜೀವನದ ಚಿತ್ರಣವನ್ನು ಕಟ್ಟಿಕೊಡುವಳು. ಕುಟುಂಬವೆಂಬುದು ಮಹಿಳೆಯ ಬದುಕಿನಲ್ಲೊಂದು ಹಿನ್ನಡೆಯನ್ನುಂಟುಮಾಡಿದ ಸಂಗತಿ ಎಂಬುದು ಚಾರಿತ್ರಿಕ ಸತ್ಯ ಕೂಡಾ ಹೌದು. ಈ ಕುಟುಂಬವೆಂಬ ಸಂಸ್ಥೆಯ ಒಳಗೆ ಇದ್ದವರಿಗೆಲ್ಲ ಸಮಾನ ಹಕ್ಕುಬಾಧ್ಯತೆಗಳು  ಇರಬೇಕಾಗಿತ್ತು. ಇಲ್ಲವೆನ್ನುವ ಕಾರಣಕ್ಕಾಗಿಯೇ ಎಲ್ಲ ಕಾಲದಲ್ಲಿಯು ಪ್ರಶ್ನೆ ಪ್ರತಿಭಟನೆಗಳು ಕಾಣಿಸಿಕೊಂಡಿವೆ. ಬಸವಣ್ಣನ ಮಡದಿ ಎಂಬ ಕಾರಣಕ್ಕಾಗಿ ನೀಲಮ್ಮನಿಗೆ ಸಿಕ್ಕ ಗೌರವಾ ದರಗಳು ತನ್ನ ಸಮಕಾಲೀನ ಮಹಿಳೆಯರಿಗೆ ಇಲ್ಲವೆಂಬುದನ್ನು ಮನಗಂಡ ಕಾರಣವೇ ಒಟ್ಟು ಹೆಣ್ಣಿನ ಹುಟ್ಟನ್ನೆ ಹಳಿಯುವ ನೀಲಮ್ಮನ ವಚನದಲ್ಲಿ ಸಾರ್ವತ್ರಿಕತೆಯಿದೆ.

ಪ್ರಥಮ ಪುರುಷದಲ್ಲಿ ನಿಂತೆ ನೀಲಮ್ಮ ಮಹಿಳಾ ಕುಲದ ಒಳಹೊಕ್ಕು ಮಾತನಾಡುವ ರೀತಿ ಹೀಗಿದೆ –

“ಏಕೆನ್ನ ಪುಟ್ಟಿಸಿದೆಯಯ್ಯಿ ಹೆಣ್ಣು ಜನ್ಮದಲ್ಲಿ
ಪುಣ್ಯವಿಲ್ಲದ  ಪಾಪಿಯೆ? ಇಹಪರಕ್ಕೆ ದೂರಳಯ್ಯ?
ಎನ್ನ ನಾಮ ಹೆಣ್ಣು ನಾಮವಲ್ಲಯ್ಯ.
ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ,
ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ
ಎನಗೆ ಹೆಣ್ಣು ನಾಮವಿಲ್ಲವಯ್ಯ
(ವ.ಸಂ.೫, ಸಂ. ಡಾ. ವೀರಣ್ಣರಾಜೂರ, ವ.ಸಂ. ೭೬೫. ಪು. ಸಂ. ೨೪೮)

ಬಸವನ ಸತಿಯೆಂಬ ಬಲದಿಂದ ಕುಟುಂಬ ಮತ್ತು ಸಮಾಜ ಮೂಲದಲ್ಲಿ ವೈಯಕ್ತಿಕ ಸಂಕಷ್ಟಗಳಲ್ಲವೆನ್ನುವುದರಲ್ಲಿಯೆ ನೀಲಮ್ಮಳಿಗೆ ವ್ಯಕ್ತಿತ್ವದ ಪ್ರಶ್ನೆ ಕಾಡಿದೆ. ಅಷ್ಟೇ ಅಲ್ಲ ಮುಂದುವರಿದು ತಮ್ಮ ದಾಂಪತ್ಯದ ಬಗ್ಗೆ

“ಮಡದಿ ಎನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನೆಗೆ
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು
ಬಸವನೆನ್ನ ಶಿಶುವಾದನು”
(ವ.ಸಂ.೫, ಸಂ.ಡಾ. ವೀರಣ್ಣರಾಜೂರ, ವ.ಸಂ.೮೧೭ ಪು.೨೬೦)

ಹೊಸ ವ್ಯಾಖ್ಯಾನವನ್ನೇ ಮಾಡುವಳು. ಪತಿಪತ್ನಿ ಸಂಬಂಧ ಆಳು ಅರಸನ ಸಂಬಂಧವಲ್ಲ. ಮನುಷ್ಯನ ಎಲ್ಲ ಸಂಬಂಧಗಳನ್ನು ಪ್ರಸಂಗಾಧಾನದಿಂದ ಪತಿ ಪತ್ನಿಯರಲ್ಲಿ ಮೂಡಬೇಕು ಇದರಿಂದ ಕೌಟುಂಬಿಕ ಸಾಮರಸ್ಯ ಮೂಡಲು ಸಾಧ್ಯವೆಂಬುದನ್ನು ಇಷ್ಟೊಂದು ಸರಳವಾಗಿ ನೀಲಮ್ಮ ಹೇಳುವಳು.

ಮಹಿಳೆಯರ ಕುರಿತ ಹಾಗೇ ವಿಚಾರ ಮಾಡುವ ಸಂದರ್ಭದಲ್ಲಿ ಶರಣರು ತಾವು ಕಟ್ಟ ಬಯಸಿದ ಸಮಾಜದಲ್ಲಿ ಕಾಯಕಾಧಾರಿತ ಗೌರವಗಳು ಹೆಣ್ಣಿಗೂ ಸಲ್ಲಬೇಕೆಂಬ ಹಂಬಲಗಳನ್ನು ವ್ಯಕ್ತಪಡಿಸಿದರು. ಹೊಸ ಹೆಣ್ಣಿನ ಬದುಕಿನ ವಿನ್ಯಾಸಗಳನ್ನು ಸೃಷ್ಟಿಸುವ ಪ್ರಯತ್ನ ಅವರಿಂದ ಆಗಲಿಲ್ಲ. ಕೆಲವೇ ಕೆಲವು ಶರಣರು ಹೊಸ ಆಲೋಚನೆಯ ಸ್ತ್ರೀ ಬದುಕಿನ ಮಾತೃಕೆಗಳನ್ನು ಸಮಾಜದ ಮುಂದಿಟ್ಟರು. ವಚನಕಾರ್ತಿಯರಂತೂ ಉರಿಯುವ ವರ್ತುಲ ದೊಳಗಿದ್ದು ಉಳಿದು ಕೊಳ್ಳುವ, ಉಳಿಸುವ, ಬೆಳೆಸುವ ಹೊಸ ಸಾಧ್ಯತೆಗಳನ್ನು ವೈಯಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಯಲ್ಲಿ ಗುರುತಿಸಿದರು. ಹೀಗೆ ಶರಣರು ತತ್ವಾಧಾರಿತವಾಗಿ ಮಹಿಳೆಯನ್ನು ಕುರಿತು ಹಾಗೇ ಮಾತನಾಡಿದ್ದೊಂದು ಸ್ತ್ರೀ ಬದುಕಿನಲ್ಲೊಂದು ಬೆಳಕಿನ ಆಶಾಭಾವವನ್ನು ಮೂಡಿಸಿದ್ದರ ಬಗ್ಗೆ ಹೆಮ್ಮೆಪಡಬೇಕಾಗಿದೆ.