ಸುಮಾರು ೪೫ ವರ್ಷಗಳಿಂದಲೂ ಸಂಗೀತ ಸೇವೆ ಮಾಡುತ್ತಿರುವ ಶ್ರೀ ಬಸವನಗುಡಿ ಜಿ. ನಟರಾಜ್ ಅವರು ತಮ್ಮ ಅದ್ಭುತ ಪಿಟೀಲು ವಾದನದಿಂದ ಸಂಗಿತ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದಾರೆ.

ವಿದ್ವಾನ್ ಎ. ವೀರಭದ್ರಯ್ಯ ಮತ್ತು ವಿದ್ವಾನ್ ಹೆಚ್.ವಿ.ಕೃಷ್ಣಮೂರ್ತಿಗಳ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ಮಾಡಿರುವ ನಟರಾಜ್ ಅವರು ಪಿಟೀಲು ವಾದನದಲ್ಲಿ ತನಿ ಕಾರ್ಯಕ್ರಮ ಹಾಗೂ ನೃತ್ಯಕ್ಕೆ ಪಕ್ಕವಾದ್ಯ ಕಲಾವಿದರಾಗಿಯೂ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವವರು. ಅನೇಕ ಸುಪ್ರಸಿದ್ಧ ಸಂಗೀತ ಕಲಾವಿದರಿಗೆ, ನೃತ್ಯ ಕಲಾವಿದರಿಗೆ ತಮ್ಮ ಸುಲಲಿತ ಪಿಟೀಲು ವಾದನದಿಂದ ಜೀವ ತುಂಬುವ ನಟರಾಜರ ವಾದನದ ಶೈಲಿಯೇ ವಿಶೇಷವಾದುದು.

ಸುಮಾರು ೨೫ ವರ್ಷಗಳಿಂದ ತಮ್ಮ ಶ್ರೀ ರಾಮಕೃಷ್ಣ ಸಂಗೀತ ವಿದ್ಯಾಲಯದಲ್ಲಿ ನೂರಾರು ಶಿಷ್ಯರನ್ನು ತಯಾರು ಮಾಡುತ್ತಿರುವ ಶ್ರೀಯುತರ ಶಿಷ್ಯರನೇಕರು ಪರೀಕ್ಷೆಗಳಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ. ಕೆಲವರು ವೇದಿಕೆಗಳಲ್ಲಿ ತನಿ ಮತ್ತು ಪಕ್ಕವಾದ್ಯಗಳನ್ನು ನುಡಿಸುತ್ತಿದ್ದಾರೆ.

ಆಕಾಶವಾಣಿ ಮತ್ತು ದೂರದರ್ಶನಗಳೂ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪಿಟೀಲು ಕಾರ್ಯಕ್ರಮ ನೀಡಿರುವ ಪ್ರತಿಬಾವಂತ ಹಿರಿಯ ನಟರಾಜ್ ಅವರಿಗೆ ವೈಯೋಲಿನ್ ವಾದನ ಚತುರ, ಧನುರ್ವೀಣಾ ಕಲಾರತ್ನ, ಧನುರ್ವೀಣಾ ಕೇಸರಿ, ಗಾನಕಲಾ ಶೇಖರ, ನಾದ ಚಿಂತಾಮಣಿ, ಪಿಟೀಲು ವಾದನ ಚತುರ, ತಂತಿವಾದ್ಯ ಸಾಮ್ರಾಟ್ ಮುಂತಾದ ಬಿರುದುಗಳು ಸಂದಿವೆ.

ಅನೇಕ ಸಂಗೀತ ಸಂಘ ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ನಟರಾಜ್ ಸಂಗೀತ ಕ್ಷೇತ್ರದಲ್ಲಿ ತಮ್ಮ ಸರಳ ಸಜ್ಜನಿಕೆಯಿಂದ ಎಲ್ಲರಿಗೂ ಪ್ರಿಯವಾದ ಕಲಾವಿದರಾದ ಇವರಿಗೆ ೧೯೯೯-೨೦೦೦ನೇ ಸಾಲಿನ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.