ಹುಟ್ಟಿಸಿದ ದೇವರು ಹುಲ್ಲು ಮೇಯಿಸುವದಿಲ್ಲಮಾತು ಕೇಳಿರಬಹುದು. ಪರಿಸ್ಥಿತಿ ಕೆಲವೊಮ್ಮೆ ನಮಗೆ ಹುಲ್ಲಿಗೆ ಬಾಯಿ ಹಾಕುವ ಸ್ಥಿತಿ ತರಬಹುದು. ಬೆಳಗಾವಿಗೆ ಕ್ರಿ.ಶ. ೧೮೭೬-೭೭ರಲ್ಲಿ ಭೀಕರ ಬರಗಾಲ ಬಂತು, ಆಗ  ಇಲ್ಲಿನ ಬಡ ಜನರು ಸೇವಿಸುತ್ತಿದ್ದ  ಆಹಾರ ದಾಖಲೆ ಗಮನಿಸಬೇಕು. ಗೋಧೀ ಬಾರ್ಮೊಂಡವೆಂಬ ಕಾಳು ಕಪ್ಪಾಗಿ ಉದ್ದಕ್ಕೆ ಇರುತ್ತದೆ. ಜವಳಾಯಿ ಮಳಮಂಡಿಎಂಬ ಕಾಳು ಖಸಖಸಿ ಕಾಳಿನಂತಿರುತ್ತದೆ. ಈ ಕಾಳುಗಳನ್ನು ಬೀಸಿ ರೊಟ್ಟಿ ಮಾಡುವರು.ಅಡವಿ ಸಬ್ಬಸಿಗೆಯನ್ನು ಕುದಿಸಿ ಸಬ್ಬಸಿಗೆ ಪಲ್ಯದಂತೆ ಪಲ್ಯ ಮಾಡುವರು. ಹುಣಸೆ ಕಾಳು ಹುರಿದು ಹುಡುಗರು ತಿನ್ನುವದು ಎಲ್ಲರಿಗೂ ತಿಳಿದಿದೆ.  ಇದರ ಹುರಿದ ಕಾಳು ಬೀಸಿ ರೊಟ್ಟಿ ಮಾಡುವರು, ಹುಣಸೆ ತೊಪ್ಪಲನ್ನು  ಕುದಿಸಿ ತಿನ್ನುವರು. ಜಾಲಿ ಬೀಜಗಳ ಸಿಪ್ಪೆ ತೆಗೆದು ಕುದಿಸಿ ತಿನ್ನುವರು. ಇದನ್ನು ಹುರಿದು ಬೀಸಿ ಜೋಳದ ಹಿಟ್ಟಿನ ಜತೆ ಸೇರಿಸಿ ಬಳಸಬಹುದು. ಹಾರಿವಾಳದ ಬೀಜಗಳನ್ನು ಕುದಿಸಿ ಅವರೆ ಉಸುಳಿಯ ಹಾಗೇ ತಿನ್ನುವರು. ಬಾಳೆ ಹಣ್ಣಿನ ಸಿಪ್ಪೆಯನ್ನು ಕುದಿಸಿ ಪಲ್ಯ ಮಾಡುವರು. ಆಲದ ಎಳೆ(ಕಸಕ) ಕಾಯಿುಗಳನ್ನು ಕುದಿಸಿ ತಿನ್ನುವರು, ಆದರೆ ಇದರಿಂದ ಅತಿಸಾರ ಹತ್ತುತ್ತದೆ. ಅತ್ತಿ ಎಲೆ ಹಾಗೂ ಬಸರಿ ಎಲೆಗಳನ್ನು ಕುದಿಸಿ ತಿನ್ನುವರು. ಕೋರೀ ಮರದ ಎಲೆಗಳನ್ನು ಕುದಿಸಿ ಪಲ್ಲೆ ಮಾಡಿ ತಿನ್ನುವರು. ಶ್ರೀಗಂಧದ ಎಲೆಗಳನ್ನು  ತಿನ್ನಬಹುದು. ಎಮ್ಮಿ ಹೊನ್ನವರಿಯ  ಎಲೆ ಚಟ್ನಿ ಮಾಡುವರು, ಎಲೆಯನ್ನು ಕುದಿಸಿ ಸಹ ತಿನ್ನುವರು. ಶೇಗುಣಿಶಿಯ ಎಲೆಯನ್ನು ಕುದಿಸಿ ತಿನ್ನುವರು. ಬಿಳೇ ಸಂಕೇಶ್ವರಿ ಎಲೆಗಳು ಆರೋಗ್ಯಕರವೆಂದು ಹೇಳುತ್ತಾರೆ. ಕಾಡುಬಾಳೆಯ ಗಡ್ಡೆಯಲ್ಲಿ ಸತ್ವಾಂಶವಿರುತ್ತದೆ. ಇದರ ಹಿಟ್ಟು ತಿನ್ನಬಹುದು. ಇದರ ದಿಂಡನ್ನು ಫಲ್ಯೆ ಮಾಡುವರು. ಮಳೆ ಇಲ್ಲದೇ ಕೃಷಿ ಜೀವನ ಹದಗೆಟ್ಟಾಗ ಜನ ಬದುಕಿದ ದಾರಿ ಹೇಳುವ ದಾಖಲೆ ನೋಡುವಾಗ ತಲೆಮಾರಿನ ಪರಿಸ್ಥಿತಿ ಅರಿವಿಗೆ ಬರುತ್ತದೆ. ಆ ಕಾಲಕ್ಕೆ ಪಟ್ಟಿ ಮಾಡಿದ ಬಹುತೇಕ ಆಹಾರಗಳು ಕಾಡು ಮೂಲದವು ಎಂಬುದು ಗಮನಾರ್ಹ! ನೀರಿಲ್ಲದೇ ರೋಗರುಜಿನೆಗಳ ಬಾಧೆ ಹೆಚ್ಚಾದಾಗ ಕಾಡು ಹಸುರು  ಊರಿಗೆ ನೆರವಾಯಿತು.

ಎಲೆ, ಬೇರು, ಗಡ್ಡೆ, ಚಿಗುರು, ಕಾಯಿ, ಹಣ್ಣು, ಬೀಜ, ತೊಗಟೆ, ಹೂವು, ಬೇರುಗಳು ಬರಗಾಲದ ಆಹಾರವಾಗುವಾಗ ಜನಪದರ ಅನುಭವ ಜ್ಞಾನ ಮುಖ್ಯವಾದುದು. ಯಾವುದನ್ನು ಹೇಗೆ ಬಳಸಬೇಕು? ಅರಿವು ಇದ್ದಕ್ಕಿದ್ದಂತೆ ನಮ್ಮ ಹೊಸರುಚಿ ಕಾರ್ಯಕ್ರಮದಂತೆ ಮೂಡಿಬಂದುದಲ್ಲ!. ಹೊಟ್ಟೆ ತುಂಬಿಸಿ ಹೇಗಾದರೂ ಬದುಕುವ ಅನಿವಾರ್ಯ ಸಂದರ್ಭಕ್ಕೆ ಯಾರೋ ಬಡವ ಬಳಸಿ ಬಲ್ಲವರಿಗೆ ನಿಧಾನಕ್ಕೆ ಮಾಹಿತಿ ಹಂಚುತ್ತಿದ್ದಂತೆ  ಆಹಾರ ಮಾರ್ಗ ತೆರೆದುಕೊಂಡಿದೆ. ಇಂದು ಜಾಹೀರಾತು, ಆರೋಗ್ಯ ಶಿಕ್ಷಣ, ಮಾಧ್ಯಮ ನಮಗೆ ಸಾಕಷ್ಟು ಮಾ”ತಿ ನೀಡುತ್ತಿದೆ. ಟೆಲಿವಿಷನ್ ಚಾನಲ್‌ಗಳು  ವಿವಿಧ ಕಂಪನಿಗಳ ಪ್ರಾಯೋಜಕತ್ವದಲ್ಲಿ  ಅಡುಗೆ ಪಾಠ ಹೇಳುತ್ತಿವೆ. ಆದರೆ ಶತಮಾನದ ಬರಗಾಲ ಆಹಾರ ಹುಡುಕಾಟಕ್ಕೆ ಮುಖ್ಯ ಕಾರಣವಾಗಿತ್ತು.   ಅಕ್ಷರದ ಅರಿವಿಲ್ಲದ ಕಾಲಕ್ಕೆ  ಕಾಡಿನ ಜತೆಗಿನ ಒಡನಾಟ ಕಲಿಕೆ  ಸಾಧ್ಯತೆಯಾುತು. ಹತ್ತರಿಕೆ, ಹಾಲಿ, ನುಗ್ಗೆಸೊಪ್ಪು, ನುಚಗೋಳಿ, ಅಡವಿ ರಾಜಗೀರ, ಚವಳಿ ತೊಪ್ಪಲು, ಕಾಶಿಜಾಲಿ ತೊಪ್ಪಲು, ಆನೆನೆಗ್ಗಿನ ತೊಪ್ಪಲು, ತುಂಬೆ ಎಲೆ, ದಾಗಡಿ ಹೀಗೆ ೩೩ ಗಿಡಗಳ ಎಲೆ, ಬೇರು ಬಳಕೆಯ ವಿಶೇಷ ಪಟ್ಟಿಗಳಿವೆ!. ಮುಂಬಯಿ ಇಲಾಖೆಗೆ ಸೇರಿದ ಕ್ರಿ.ಶ. ೧೮೯೩ರ ಗ್ಯಾಝೆಟೀಯರ್‌ನಲ್ಲಿ  ನೀಡಲಾದ ಬರಗಾಲ ಆಹಾರ ಪಟ್ಟಿಯಲ್ಲಿನ ಸಸ್ಯ ಪರಿಚಯ  ಇಂದು ಬಹುತೇಕ ಜನಕ್ಕೆ  ಇಲ್ಲ, ಬಳಸುವ ವಿಧಾನ ತಿಳಿದಿಲ್ಲ.

ಶಿಕ್ಷಣ, ಸಂಪರ್ಕ ಸಾಧನಗಳು ಒದಗಿದಂತೆ ಇಡೀ ನಮ್ಮ ಆಹಾರ, ಕೃಷಿ ಕ್ರಮಗಳು ಸಾಕಷ್ಟು ಬದಲಾಗಿವೆ. ವಿವಿಧ ಹವಾಮಾನ ಯೋಗ್ಯ ಬೆಳೆ ಪಡೆಯುವ ತಾಕತ್ತು ದೊರಕಿದೆ. ಇಷ್ಟಾಗಿಯೂ ಒಂದು ಅಬ್ಬರದ ಪ್ರವಾಹ ಬದುಕನ್ನು ಆವರಿಸಿದರೆ ಸರಕಾರ ಬರದಿದ್ದರೆ  ನಮಗೆ ಪರಿಹಾರದ ದಾರಿ ಗೋಚರಿಸದ ಸ್ಥಿತಿ ಬಂದಿದೆ !. ಸಂಪರ್ಕ ಕಡಿತವಾದರೆ ನಾವು ಹೇಗೆ ಬಚಾವಾಗಬೇಕೆಂಬ ಅರಿವು ನಮಗಿಲ್ಲ! ತುರ್ತು ಸಂದರ್ಭದ ಪ್ರಥಮ ಚಿಕಿತ್ಸೆ ಆರೋಗ್ಯ  ಪಾಠದ ಅರಿವಿನಷ್ಟೇ ಮುಖ್ಯವಾದುದು ಈ ಆಹಾರ ಮಾರ್ಗ. ಗೋಧಿ, ಅಕ್ಕಿ, ಜೋಳ, ರಾಗಿಯಂತಹ ಕೆಲವೇ ಕೆಲವು ಆಹಾರ ಧಾನ್ಯಗಳಿಲ್ಲದಿದ್ದರೆ  ಏನು ಮಾಡಬೇಕು ಎಂಬುದು ನಮಗೆ ಗೊತ್ತಿಲ್ಲ.  ಕಳೆದ ಅಕ್ಟೋಬರ್ ಪ್ರವಾಹ ಸಂದರ್ಭದಲ್ಲಿ  ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಂಪರ್ಕ ರಹಿತವಾಯಿತು. ರಸ್ತೆಗಳಲ್ಲಿ  ಭೂಕುಸಿತವಾಗಿ ವಾಹನ ಸಂಚಾರ ಸ್ಥಗಿತಗೊಂಡು ಹಾಲು, ಹಣ್ಣು, ಆಹಾರ ಪದಾರ್ಥಗಳಿಗೆ ಪರದಾಡಬೇಕಾಯಿತು. ದೂರವಾಣಿ, ಮೊಬೈಲ್ ಸಂಪರ್ಕ ಸಮಸ್ಯೆಯಾಯಿತು. ವಿದ್ಯುತ್ ಇರಲಿಲ್ಲಅಂಗಡಿಯಲ್ಲಿ ಮೇಣದಬತ್ತಿ ಸಹ ದೊರೆಯದೇ ರಾತ್ರಿ ಕಷ್ಟಪಟ್ಟವರ ಉದಾಹರಣೆಯಿದೆ. ನಾವು ನಂಬಿದ ವ್ಯವಸ್ಥೆಗಳು ಯಾವತ್ತೂ  ಸಿಕ್ಕೇ ಸಿಗುತ್ತವೆಂಬ ವಿಶ್ವಾಸಕ್ಕಿಂತ ಪರ್ಯಾಯ ದಾರಿಯ ಅರಿವೂ ಬೇಕು. ಸರಕಾರ ಇಂತಹ ಸಂದರ್ಭದಲ್ಲಿ ಸಹಾಯ ಮಾಡಬಹುದು, ಹೆಲಿಕ್ಯಾಪ್ಟರ್‌ನಲ್ಲಿ ಆಹಾರ ಬರಬಹುದು ಎಂದು ಹೇಳಬಹುದು. ಹವಾಮಾನ ಅನುಕೂಲತೆಗಳಿದ್ದಾಗ  ಇಂತಹ ವ್ಯವಸ್ಥೆ ನಿರೀಕ್ಷೆ ಸರಿ, ಆದರೆ ಅಬ್ಬರದ ಮಳೆ, ಚಂಡಮಾರುತಗಳಲ್ಲಿ  ೧೦-೨೦ಅಡಿ ಆಚೆಯ ದೃಶ್ಯ ಕಾಣದ ಸ್ಥಿತಿಯಲ್ಲಿ  ಬದುಕುವ ಅವಕಾಶ ಸುಲಭವಲ್ಲ!

ಬೆಳಗಾವಿಯ ಬಡವರು ಭೀಕರ ಬರದಲ್ಲಿ ಹುಡುಕಿದ ಆಹಾರ ಈಗ ದಾಖಲೆಯಷ್ಟೇ ಅಲ್ಲ, ಪರಿಸ್ಥಿತಿ ನಿಭಾಯಿಸುವ ಪಾಠವೂ ಆಗಿರಬಹುದು. ಪ್ರವಾಹ ಬಂದಾಗ ಗ್ರಾಮಗಳನ್ನು  ಸ್ಥಳಾಂತರಿಸಬೇಕು, ಪರಿಹಾರ ನೀಡಬೇಕು ಎಂಬುದು ತತ್‌ಕ್ಷಣದ  ಉತ್ತರವಲ್ಲ, ಅದಕ್ಕೆ ಕಾಲಾವಕಾಶ ಅಗತ್ಯ. ನಿಂತ ನೆಲದಲ್ಲಿ ಬದುಕಿಗೆ ಏನು ಮಾಡಬಹುದು? ಜಾಗೃತಿ ಮೂಡಿಸುವದು  ಅವಶ್ಯಕತೆ ಇದೆ.